ಈ ಶಿಬಿರದ ಮುಖ್ಯ ವಿಷಯ ‘ದೇವ ದೇವಿಯರು’ಗಳ ಬಗ್ಗೆ. ನಿನ್ನೆಯಿಂದ ಇಲ್ಲಿ ನಡೆಯುತ್ತಿರುವ ಉಪನ್ಯಾಸ ಹಾಗೂ ಚರ್ಚೆಗಳನ್ನು ನಾನು ತುಂಬ ಗಮನಕೊಟ್ಟು ಕೇಳಿಸಿಕೊಂಡಿದ್ದೇನೆ. ಆಶೀಶ್ ನಂದಿ, ಅನಂತಮೂರ್ತಿ, ಡಿ.ಆರ್.ನಾಗರಾಜ ಮುಂತಾದವರು ವಿಷಯದ ಬಗ್ಗೆ ಅಸಾಧಾರಣ ವೈಚಾರಿಕ ಶಕ್ತಿಯ-ವಾದ-ಸಂವಾದಗಳನ್ನು ಇಲ್ಲಿ ನಡೆಸಿಕೊಟ್ಟಿದ್ದಾರೆ. ಅವರ ಆ ರೀತಿಯ ಸಾಮರ್ಥ್ಯ ನನಗಿಲ್ಲ ಮತ್ತು ದೇವ-ದೇವಿಯರ ಜೊತೆಗಿನ ನನ್ನ ಒಡನಾಟವೇ ಸಂಪೂರ್ಣ ಬೇರೆ ರೀತಿಯದು. ಆದ್ದರಿಂದ ನಾನಿಲ್ಲಿ ವೈಚಾರಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ನಾನು ಕಂಡ ನಮ್ಮ ಶಿವಾಪುರದ ದೇವತೆಗಳ ಬಗೆಗಿನ ಕೆಲವೊಂದು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನಷ್ಟೆ.

ಇಲ್ಲಿ ನಾನು ಹಳೆಯ ಶಿವಾಪುರದ ದೇವತೆಗಳ ಕುರಿತಾಗಿ ಮಾತ್ರ ಮಾತನಾಡುತ್ತೇನೆ. ಕಾರಣ ಇಷ್ಟೇ: ಇಡೀ ಶಿವಾಪುರದ ದೇವತೆಗಳ ಬಗ್ಗೆ ನಮಗೆ ಲಭ್ಯವಿರುವ ಅಧಿಕೃತ ದಾಖಲೆಗಳೆಂದರೆ ಕುರುಬರ ಹಾಡುಗಳು, ಜೋಗತಿಯರ ಹಾಡುಗಳು ಇತ್ಯಾದಿ ಜನಪದ ಸಾಹಿತ್ಯ ರೂಪಗಳು ಹಾಗೂ ನಮ್ಮ ಊರ ಜನರ ನೆನಪುಗಳು. ಆದರೆ ಕಾಲಮಾನ ಬದಲಾದಂತೆ ನಮ್ಮ ಊರು ಜನರೂ, ಅವರ ಜೀವನವೂ, ಅವರ ನೆನಪುಗಳೂ ಬದಲಾಗುತ್ತ ಬಂದಿವೆ. ಬೆಂಗಳೂರಿನಲ್ಲಿ ಇಷ್ಟು ವರ್ಷ ಕಳೆದಿರುವ ನನಗೆಯೇ ತಿಳಿಯದ ಅನೇಕ ರಸ್ತೆಗಳೂ, ಭಾಗಗಳೂ ಇಂದಿನ ನಮ್ಮೂರಿನ ಅನೇಕ ಕಿರಿಯರಿಗೆ ತಿಳಿದಿರುವುದುಂಟು. ಹೀಗೆ ಬೆಳೆದುಬಂದ ಅವರು ನಮ್ಮ ಎಳೆವಯಸ್ಸಿನಲ್ಲಿ ಅಲ್ಲಿದ್ದ ದೇವ-ದೇವಿಯರನ್ನು ಇಂದು ತಮ್ಮಲ್ಲಿ ಎಷ್ಟು ಉಳಿಸಿಕೊಂಡಿರಬಹುದು ಎಂಬುದರ ಬಗ್ಗೆಯೇ ನನಗೆ ಅನುಮಾನವಿದೆ. ಆದರೂ ಆ ದೇವತೆಗಳು ಬಹಳ ಮಂದಿ ಇಂದಿಗೂ ಉಳಿದುಬಂದಿರುವುದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ. ಕಾರಣಿಕಗಳನ್ನೂ ಕೇಳಿದ್ದೇನೆ. ಮಾನವರು ಬದಲಾದಂತೆ ದೇವರು ಬದಲಾಗುವುದೂ ಉಂಟು.

ಉದಾಹರಣೆಗೆ, ಬೆಂಗಳೂರಿನಲ್ಲಿ ಕೆಲವು ದೇವತೆಗಳು ಕಾರಣಿಕೆ ಹೇಳುವಾಗ ಇಂಗ್ಲೀಷನ್ನು ಬಳಸುತ್ತವೆ: ಬೆಂಗಳೂರಿನಲ್ಲಿ ಕೆಲವೊಮ್ಮೆ ಒಂದೇ ದೇವರು ಇಬ್ಬಿಬ್ಬರ ಮೈಯಲ್ಲಿ ತುಂಬಿಕೊಂಡು ಅವರಿಬ್ಬರೂ ಪರಸ್ಪರ ಬೈದಾಡಿಕೊಳ್ಳುತ್ತ ಒಬ್ಬ ‘ನಿನ್ನನ್ನು ಪೀಸ್ ಪೀಸ್ ಮಾಡುತ್ತೇನೆ’ ಎಂದೂ ಇನ್ನೊಬ್ಬ ‘ನಿನ್ನನ್ನ ಕಟ್ ಕಟ್ ಮಾಡಿಬಿಡುತ್ತೇನೆ’ ಎಂದೂ ಹೇಳುವುದುಂಟು. ಸದ್ಯ ನಮ್ಮ ಶಿವಾಪುರದ ದೇವತೆಗಳು ಮಾತ್ರ ಆ ಸ್ಥಿತಿಗೆ ಬಂದಿಲ್ಲ. ಅವರಿನ್ನೂ ಇಂಗ್ಲಿಷ್ ಕಲಿತಿಲ್ಲ, ನನ್ನ ಹಾಗೆಯೇ.

ಶಿವಾಪುರ ಅನ್ನುವುದೊಂದು ಬ್ರಹ್ಮಾಂಡ. ಬೇರೆಬೇರೆಡೆಗಳ ಬೇರೆ ದೇಶಗಳ ಕಾಲಗಳ ಜನಸಮುದಾಯಗಳೆಲ್ಲ ತಮ್ಮ ತಮ್ಮ ಕಥೆಗಳಲ್ಲಿ ಪುರಾಣಗಳಲ್ಲಿ ತಮ್ಮದೇ ಬ್ರಹ್ಮಾಂಡದ ಕಲ್ಪನೆಯೊಂದನ್ನು ಕಟ್ಟಿಕೊಳ್ಳುವ ರೀತಿಯಲ್ಲಿಯೇ ನಮ್ಮ ಶಿವಾಪುರದವರೂ ತಮ್ಮದೊಂದು ಕಲ್ಪನೆಯನ್ನು ಕಟ್ಟಿಕೊಂಡಿದ್ದಾರೆ. ಸಾಮಾನ್ಯವಾಗಿ ನಮ್ಮ ಪ್ರಾಂತ್ಯದ ಕುರುಬರ ಹಾಡುಗಳಲ್ಲಿ ಈ ನಮ್ಮ ಬ್ರಹ್ಮಾಂಡದ ಪುರಾಣಗಳು ದೊರಕುತ್ತವೆ. ಅವುಗಳ ಪ್ರಕಾರ, ಈ ಬ್ರಹ್ಮಾಂಡ ಮೊದಲು ಅಖಂಡವಾಗಿತ್ತು. ಆ ಅಖಂಡ ಬ್ರಹ್ಮಾಂಡದಲ್ಲಿ ಶಿವದೇವರು ಜಪತಪ ಮಾಡಿಕೊಂಡಿರುತ್ತಿದ್ದರು. ತಮ್ಮ ಸೊಂಟದಲ್ಲಿ ಅಮೃತದ ಗಿಂಡಿಯೊಂದನ್ನು ಅವರು ಕಟ್ಟಿಕೊಂಡಿದ್ದರು. ಒಂದು ದಿನ ಹೀಗೆ ಜಪತಪ ಮಾಡಿ ಬೇಸರವಾದಾಗ ಆ ಗಿಂಡಿಯನ್ನು ತೆರೆದು ಅದರಲ್ಲಿ ತಮ್ಮ ಸ್ವರೂಪವನ್ನು ನೋಡಿ ಸಂತೋಷವಾಗಿ ಅವರು ತಮ್ಮ ವಾಮಾಂಗವನ್ನು ಕಿತ್ತು ಅದೇ ಮಾದರಿಯಲ್ಲಿ ಒಂದು ಮಾಯೆಯನ್ನು ಸೃಷ್ಟಿಸಿದರು. ಅದನ್ನು ನಮ್ಮ ಜನ ಇದಿಮಾಯೆ (ಬಹುಶಃ ‘ವಿಧಿಮಾಯೆ’ಯ ಅಪಭ್ರಂಶ ರೂಪ) ಅಥವಾ ಮಾಯೆ ಎಂದು ಕರೆಯುತ್ತಾರೆ.

ಹೀಗೆ ವಾಮಾಂಗವನ್ನು ಕಿತ್ತ ಜಾಗದ ಗಾಯವನ್ನು ಶಿವದೇವರು ಅಮೃತವನ್ನು ಸುರಿದುಕೊಂಡು ಮಾಯಿಸಿಕೊಂಡರು. ತರುವಾಯ ಮಾಯೆಯೂ ತನ್ನ ಗಾಯವನ್ನು ಗುಣಪಡಿಸಿಕೊಳ್ಳಲೆಂದು ಆಕೆಗೆ ಅಮೃತವನ್ನು ಕೊಟ್ಟಾಗ ಆಕೆ ಅದನ್ನು ಚೆಲ್ಲಿಕೊಂಡುಬಿಟ್ಟಳು. “ಸರಿ, ನಿನಗಿನ್ನೂ ಅಮೃತವನ್ನು ಉಪಯೋಗಿಸಿಕೊಳ್ಳುವಂತಹ ಬುದ್ಧಿ ಬಂದಿಲ್ಲ” ಎಂದು ಹೇಳಿ ಶಿವದೇವರು ಆಮೃತವನ್ನು ಒಂದು ಕೋಣೆಯಲ್ಲಿಟ್ಟು ‘ನೀನು ಎಲ್ಲೇ ಆಡಬಹುದು, ಏನೇ ಮಾಡಬಹುದು. ಆದರೆ ಈ ಕೋಣೆಯಲ್ಲಿ ಮಾತ್ರ ಹಣಿಕಿಕ್ಕಬಾರದು’ ಎಂದು ಮಾಯೆಗೆ ತಾಕೀತು ಮಾಡಿ ಶಿವದೇವರು ಮತ್ತೆ ತಪಸ್ಸಿಗೆ ತೊಡಗಿದರು. ಎಷ್ಟು ಪ್ರಯತ್ನಿಸಿದರೂ ಕುತೂಹಲ ತಾಳಲಾರದೆ ಮಾಯೆ ಆ ಕೋಣೆಯ ಬಾಗಿಲು ತೆರೆದಳು. ಅಲ್ಲಿ ಕೇವಲ ಅಂಧತಮಸ್ಸು ಕತ್ತಲು ತುಂಬಿಕೊಂಡಿತ್ತು. ಅಲ್ಲಿ ಎಷ್ಟು ಕತ್ತಲಿತ್ತೆಂದರೆ ಈಕೆ ಬಾಗಿಲು ತೆರೆದಾಕ್ಷಣ ಅದೆಲ್ಲ ಹೊರಗೆ ಬರಲು ಪ್ರಾರಂಭವಾಯಿತು. ವಿಷಯ ಶಿವದೇವರಿಗೆ ತಿಳಿದು ಅವರು ತಪಸ್ಸನ್ನು ಬಿಟ್ಟುಬಂದರು. ಎಷ್ಟು ಕತ್ತಲು ಆವರಿಸಿಕೊಂಡಿತ್ತೊ ಪ್ರಪಂಚದ ಅಷ್ಟೂ ಭಾಗವನ್ನು ತಕ್ಷಣ ಕಿತ್ತು ಕೆಳಗೆ ಎಸೆದರು. ಕತ್ತಲೆಯ ಜೊತೆಗೆ ಮಾಯೆಯೂ ಕೆಳಗೆ ಬಂದಳು. ನಂತರ ಮಾಯೆಯೂ, ಕತ್ತಲು ಕವಿದ ಆ ಮಾಯಾಲೋಕವೂ ಎಷ್ಟು ಕೆಳಗೆ ಹೋದವೆಂದರೆ ಶಿವದೇವರು ಕೊನೆಗೆ ಎಷ್ಟು ಹುಡುಕಾಡಿದರೂ ಅವರಿಬ್ಬರೂ ಸಿಗಲಿಲ್ಲ. ಆಗ ಶಿವದೇವರು ತಮ್ಮ ಹಣೆಗಣ್ಣಿನಿಂದ ಒಂದು ಕಿಡಿಯನ್ನು ಕರೆದು ಹುಡುಕಿಕೊಂಡು ಬರಲೆಂದು ಅದನ್ನು ಕಳಿಸಿದರು. ಆ ಕಿಡಿಯೆ ಸೂರ್ಯದೇವರಾಯಿತು. ಆದರೆ ಸೂರ್ಯ ದೇವರು ಎಷ್ಟು ಹುಡುಕಿದರೂ ಏನೂ ಕಾಣಿಸಲಿಲ್ಲ. ಯಾಕೆಂದರೆ, ಅವನು ನೋಡಿದ್ದೆಲ್ಲವೂ ಕಣ್ಣಿಗೆ ಕಾಣುವ ಮೊದಲೇ ಸುಟ್ಟುಹೋಗುತ್ತಿತ್ತು. ಹೀಗಾಗಿ ಆ ಸೂರ್ಯದೇವ ಹುಡುಕಿ ಹುಡುಕಿ ಬಳಲಿ ಮಲಗುತ್ತಿದ್ದ. ಮತ್ತೇ ಎದ್ದು ಹುಡುಕುತ್ತಿದ್ದ, ಮತ್ತೆ ಬಸವಳಿದು ಮಲಗುತ್ತಿದ್ದ. ಹೀಗೆ ಆತ ಎಚ್ಚರವಿದ್ದ ಅವಧಿ ಹಗಲೆಂದಾಯಿತು, ಆತ ಮಲಗಿದ್ದ ಅವಧಿ ರಾತ್ರಿಯೆಂದಾಯಿತು.

ಆಮೇಲೆ, ಹೋದ ಸೂರ್ಯ ಮರಳಿ ಬರಲೇ ಇಲ್ಲವಲ್ಲ ಎಂದು ಶಿವದೇವರು ಇನ್ನೊಬ್ಬ ದೇವರು ಚಂದ್ರನನ್ನು ಕಳಿಸಿದರು. ಸೂರ್ಯದೇವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ರಾತ್ರಿಯ ಹೊತ್ತಿನಲ್ಲಿ ಚಂದ್ರದೇವರು ಕೆಳಗೆ ಬಂದು ಮಾಯೆ ಚೆಲ್ಲಿದ್ದ ಅಮೃತವನ್ನು ತುಂಬಿಕೊಳ್ಳಲು ಪ್ರಾರಂಭಿಸಿದರು. ದಿನಕ್ಕೊಂದು ಸೇರಿನಂತೆ ಹದಿನೈದು ದಿನಗಳ ಅವಧಿಯಲ್ಲಿ ಒಟ್ಟು ಹದಿನೈದು ಸೇರು ಅಮೃತವನ್ನು ಚಂದ್ರದೇವರು ಸಂಗ್ರಹಿಸಿಕೊಳ್ಳುತ್ತಿದ್ದರು. ಹೀಗೆ ಅಮೃತವನ್ನು ತುಂಬಿಕೊಳ್ಳುತ್ತ ಅವರು ಬೆಳೆಯುತ್ತ ಬರುತ್ತಿದ್ದರು. ಮೊದಲು ಹದಿನೈದು ದಿನಗಳಾಗುತ್ತಲೇ ಶಿವದೇವರು ಬಂದು ದಿನಕ್ಕೊಂದು ಸೇರಿನಂತೆ ಅಮೃತವನ್ನು ಕುಡಿಯುತ್ತಿದ್ದರು. ಹೀಗಾಗಿ ಮುಂದಿನ ಹದಿನೈದು ದಿನಗಳುದ್ದಕ್ಕೂ ಚಂದ್ರದೇವರು ಖಾಲಿಯಾಗುತ್ತ ಕ್ಷೀಣಿಸುತ್ತಿದ್ದರು. ಈ ರೀತಿ ಚಂದ್ರದೇವರು ವರ್ಧನ ಕ್ಷಯಗಳ ನಿರಂತರ ಚಕ್ರ ಪ್ರಾರಂಭವಾಯಿತು. ಈ ಎರಡು ಪ್ರಕ್ರಿಯೆಗಳ ಒಂದು ಅವಧಿಯನ್ನು ನಮ್ಮ ಜನ ಚಂದ್ರನ ತಿಂಗಳು, ಒಂದು ಚಂದ್ರ ಎಂದು ಕರೆದರು. ಇಂದಿಗೂ ನಮ್ಮಲ್ಲಿ ಕಾಲದ ಚಲನೆಯನ್ನು ಅಳೆಯಲು ಚಂದ್ರನ ಲೆಕ್ಕವನ್ನೇ ಬಳಸುತ್ತಾರೆ – ಒಂದು ಚಂದ್ರನೆಂದರೆ ಒಂದು ತಿಂಗಳು, ಐದು ಚಂದ್ರರೆಂದರೆ ಐದು ತಿಂಗಳು, ಹತ್ತು ಚಂದ್ರರೆಂದರೆ ಹತ್ತು ತಿಂಗಳು, ಇತ್ಯಾದಿಯಾಗಿ.

ಈ ನಡುವೆ ಶಿವದೇವರಿಂದ ಅಗಲಿದ ಇದಿಮಾಯೆ ಅವರಿಗಾಗಿ ತೀವ್ರವಾಗಿ ಪರಿತಪಿಸತೊಡಗಿದಳು. ಆಕೆ ಎಷ್ಟು ಆರ್ತವಾಗಿ ಕರೆದರೂ ಶಿವದೇವರಿಗೆ ಕರುಣೆ ಬರಲಿಲ್ಲವಾಗಿ, ಅಮೃತವನ್ನು ಕುಡಿಯದಿದ್ದಂತಹ ಆಕೆ ನಲುಗಿ ನಲುಗಿಬಿಟ್ಟಳು. ಆಕೆಯ ಸಾವಿನ ನಂತರ ಉಸಿರೇ ಗಾಳಿಯಾಯಿತು. ಆಕೆಯ ದೇಹದ ಬೇರೆಬೇರೆ ಭಾಗಗಳು ಬೇರೆಬೇರೆ ಭೌಗೋಳಿಕ ಅಂಶಗಳಾದುವು. ಇಲ್ಲಿಗೆ ಇದಿಮಾಯೆ ಮೊದಲನೆಯ ಅವತಾರ ಕಳೆಯಿತು. ಎರಡನೆಯ ಅವತಾರದಲ್ಲಿ ಆಕೆ ಕರಡಿಯ ರೂಪತಾಳಿ ಬಂದಳು. ಗವಿಯೊಂದರಲ್ಲಿ ಅಡಗಿ ಕುಳಿತು ಕಾಯುತ್ತ ಕಾಯುತ್ತ ಆಕೆ ಕೊನೆಗೆ ಸುಣ್ಣದಲ್ಲಿ ಶಿವನ ಚಿತ್ರವನ್ನು ರಚಿಸಿದಳು. ಬೆಟ್ಟದಷ್ಟು ಎತ್ತದ ಹೋರಿ, ಸೊಂಟದಲ್ಲಿ ಗಿಂಡಿಯನ್ನು ಧರಿಸಿ ಆ ಹೋರಿಯ ಮೇಲೆ ಕುಳಿತ ಶಿವದೇವರು – ಹೀಗೆ ಬರೆದು ಮಾಯೆ ಆ ಚಿತ್ರವನ್ನು ಪೂಜಿಸತೊಡಗಿದಳು. ಅನತಿ ಕಾಲದಲ್ಲೇ ಶಿವದೇವರು ಆ ಚಿತ್ರದೊಳಗಿನಿಂದ ಸಾಕ್ಷಾತ್ ಆವೇಶ ಅವತಾರವಾಗಿ ಕೆಳಗಿಳಿದು ಬಂದರು. ಬಂದು ಕರಡಿಯ ಮೈತುಂಬ ಅಮೃತವನ್ನು ಚೆಲ್ಲಿ ಹೋದರು. ಆ ಅಮೃತವನ್ನು ಒಂದು ಗಡಿಗೆಯಲ್ಲಿ ಕೂಡಿಟ್ಟ ಮಾಯೆ ಹೆಪ್ಪು ಹಾಕಿದಳು. ನಂತರ ಆ ತಾಯಿ ಸುತ್ತಮುತ್ತಲೂ ಹಸಿದು ಧರ್ಮವನ್ನು ಹಬ್ಬಿಸಿದಳು. ಚಿಲಿಪಿಲಿ ಪ್ರಪಂಚವನ್ನು ಕಟ್ಟಿದಳು. ನಂತರ ಶಿವಾಪುರವೆಂಬ ಘನವಾದ ಹಟ್ಟಿಯ ಕಟ್ಟಿ ಅದರಲ್ಲಿ ಮಾನವ ಪ್ರಪಂಚವನ್ನು ಪ್ರಾರಂಭಿಸಿದಳು, ನಮ್ಮನ್ನು ನಿಮ್ಮನ್ನು ಹೆತ್ತಳು. ಅಂದರೆ ಇಡೀ ಪ್ರಪಂಚದ ಮೊಟ್ಟ ಮೊದಲ ಊರು ಶಿವಾಪುರ ! (ತಾವು ದಯವಿಟ್ಟು ಇದನ್ನು ಗಮನಿಸಬೇಕು) ನಾವು ನೀವುಗಳೆಲ್ಲ ಇಲ್ಲಿರುವುದು ಆ ತಾಯಿಯ ದಯೆಯಿಂದ. ಇದು ನಮ್ಮ ಶಿವಾಪುರದ ಪುರಾಣದ ಎರಡನೆಯ ಭಾಗ.

ಮುಂದೆ ಈ ತಾಯಿ ಪುಣ್ಯಕೋಟಿ ಎಂಬ ಹಸುವಾಗಿ (ಕೆಲವರ ಪ್ರಕಾರ ಆಕೆ ಕುರಿಯಾಗುತ್ತಾಳೆ) ನಾಲ್ಕು ಮೊಲೆಗಳಿಂದ ಹಾಲನ್ನು ಕರೆದು ಈ ನರಮಾನವ ತಿರ್ಯಕ್ ಜಂತು ಮೊದಲಾದ ಚೌರ‍್ಯಾಂಶಿಲಕ್ಷ – ಎಂಬತ್ತ ನಾಲ್ಕುಲಕ್ಷ -ಜೀವರಾಶಿ ಹಸಿವೆ ಹಸಿವೆ ಎಂದು ಕೂಗಾಡುತ್ತಿರುವಾಗ ತನ್ನ ಹಾಲನ್ನು ಉಣಿಸಿ ಸರ್ವರನ್ನೂ ಸಂರಕ್ಷಿಸಿದಳು. ಇದು ನಮ್ಮ ಕತೆಯ ಮೂರನೆಯ ಭಾಗ.

ಈ ನಡುವೆ ಶಿವದೇವರಿಗೆ ಮಾಯೆಯ ಸಹವಾಸ ಸಾಕಾಗಿ ಅವರು ಮೇಲೆಯೇ ಉಳಿದುಕೊಂಡಳು. ಮಾತ್ರವಲ್ಲ, ಅವರು ಭೂಮಿಯ ಮೇಲೆ ಆಕಾಶವನ್ನು ಬೊಗುಣಿಯಂತೆ ಡಬ್ಬು ಹಾಕಿ ತಾವೂ ಆ ಆಕಾಶದ ಮೇಲೆ ಕುಳಿತುಬಿಟ್ಟರು. ಹೀಗಾಗಿ ನಮ್ಮ ಕೆಳಗಿನ ಭೂಲೋಕ ಹಾಗೂ ಮೇಲಿನ ದೇವರ ಲೋಕ ಎರಡೂ ಬೇರೆಬೇರೆಯಾದವು. ಸದಾಕಾಲ ತಮ್ಮ ಲೋಕದಲ್ಲಿಯೆ ಇರುವ ಶಿವದೇವರು ಶಿವರಾತ್ರಿಯಂದು ಮಾತ್ರ ಒಂದು ದಿನದ ಮಟ್ಟಿಗೆ ಭೂಲೋಕಕ್ಕೆ ಬರುತ್ತಾರೆ, ಎರಡೂ ಲೋಕಗಳನ್ನು ಒಂದು ಮಾಡುತ್ತಾರೆ.  ದರ್ಶನಭಾಗ್ಯ ಕರುಣಿಸುತ್ತಾರೆ, ಅದೂ ಕೂಡ ಖಚಿತವೆಂದು ಹೇಳಲು ಬರುವುದಿಲ್ಲ. ಕೆಲವೊಮ್ಮೆ ಶಿವರಾತ್ರಿಯ ಕಗ್ಗತ್ತಲಲ್ಲಿ ದರ್ಶನ ನೀಡಿ ಹೋಗುವ ಶಿವದೇವರು ಇನ್ನು ಕೆಲವೊಮ್ಮೆ ಆ ಭಾಗ್ಯವನ್ನೂ ನಮಗೆ ನಿರಾಕರಿಸಬಹುದು. ಹಾಗೆ ಅವರು ಎಲ್ಲಿ ಯಾವಾಗ ಯಾವ ರೀತಿಯಲ್ಲಿ ದರ್ಶನ ನೀಡುತ್ತಾರೆಂಬುವುದರ ಬಗ್ಗೆ ಇನ್ನೂ ಅನೇಕ ಸ್ಥಳೀಯ ಪುರಾಣಗಳು ಹುಟ್ಟಿರುವುದುಂಟು. ಹಾಗೆಯೇ, ಶಿವಲೋಕಕ್ಕೂ ಸಂಪರ್ಕವನ್ನು ಕಟ್ಟಿಕೊಡುವಂತಹ ಮಂದಾರ ಮರದ ಕಲ್ಪನೆಯೂ ನಮ್ಮ ಪುರಾಣಗಳಲ್ಲಿದೆ. ಆ ಮಂದಾರ ಮರ ಭೂಲೋಕದಲ್ಲಿ ಬೇರು ಬಿಟ್ಟು ಹುಟ್ಟಿದ್ದು ಬೆಳೆದು ಮೇಲೇರಿ ಶಿವಲೋಕದಲ್ಲಿ ಹೂವು ಅರಳಿಸುತ್ತದೆ. ಈ ಮರವನ್ನು ಹತ್ತಿ ಶಿವಲೋಕವನ್ನು ತಲುಪಲು ಪ್ರಯತ್ನಿಸಿದವರು ಹಲವರುಂಟು. ಆದರೆ ಸಫಲರಾದವರು ಮಾತ್ರ ಯಾರು ಇಲ್ಲ.

ಇನ್ನು, ನಮ್ಮ ಬ್ರಹ್ಮಾಂಡದಲ್ಲಿ ಯಕ್ಷಿಯರೂ ಮತ್ತು ಸೇಡುಮಾರಿಯರೂ ಇದ್ದಾರೆ. ಯಕ್ಷಿಯರು ಆಕಾಶದಲ್ಲಿ ಸಂಚರಿಸಿಕೊಂಡಿರುವಂಥವರು, ಸೇಡುಮಾರಿಯರು ನೆಲಕ್ಕಂಟಿಕೊಂಡೇ ಸಂಚರಿಸುವಂಥವರು. ಈ ನಡುವೆ, ಹರಿಣಿ ಎನ್ನುವ ಯಕ್ಷಿಯೋರ್ವಳು ಎರಡೂ ಲೋಕಕಗಳ ನಡುವೆ ರಸ್ತೆಯೊಂದನ್ನು ರಚಿಸಿ ಎರಡನ್ನೂ ಒಂದಾಗಿಸುವ ಪ್ರಯತ್ನ ಮಾಡಿದಳು. ನಂತರ ಆಕೆ ಚಂದ್ರನಲ್ಲಿ ಐಕ್ಯಳಾದಳು. ಚಂದ್ರನಲ್ಲಿ ಇಂದಿಗೂ ಕಾಣುವಂತಹ ಜಿಂಕೆಯೇ ಆ ಹರಿಣಿ ಎಂದು ಹೇಳುವ ಒಂದು ಉಪಕಥೆಯೂ ನಮ್ಮಲ್ಲುಂಟು. ಈ ಪ್ರಸಂಗ ನಮ್ಮ ಜೋಗತಿಯರ ಹಾಡುಗಳಲ್ಲಿ ಮಾತ್ರ ಕಂಡುಬರುತ್ತದೆ: ಕುರುಬರ ಹಾಡುಗಳಲ್ಲಿ ಅದು ಇಲ್ಲ.

ನೆಲಕ್ಕೆ ಅಂಟಿಕೊಂಡಿರುವ ದೇವತೆಗಳಲ್ಲಿ ಊರುಗಾರಿಕೆ ದೇವತೆಯರು ಎನ್ನುವ ಒಂದು ವರ್ಗವುಂಟು. ಊರೂಗಾರಿಕೆ ದೇವತೆಯರಲ್ಲಿ ಮತ್ತೆ ಗಂಡು ದೇವರು ಹಾಗೂ ಹೆಣ್ಣು ದೇವರು ಎನ್ನುವ ಎರಡು ಪ್ರಭೇದಗಳುಂಟು. ಬೀರಪ್ಪನೆಂಬುವನು ನಮ್ಮ ಕುರುಬರ ಕುಲದ ಊರುಗಾರಿಕೆಯ ಗಂಡು ದೇವರು, ಮಾರಿಯೆಂಬುವಳು ಹೆಣ್ಣು ದೇವರು. ಬೀರಪ್ಪನ ಬಗ್ಗೆ ಒಂದು ಕಥೆಯೇ ಇದೆ. ಅದರ ಪ್ರಕಾರ, ಶಿವದೇವರು ಮೊದಲು ಬೇರೆ ಬೇರೆ ರೂಪಗಳಲ್ಲಿ ಈ ಭೂಮಿಗೆ ಬಂದು ಹೋಗುತ್ತಿದ್ದರು. ಕೊನೆಗೊಮ್ಮೆ ಆವರು ಕುರುಬನ ರೂಪದಲ್ಲಿ ಬಂದು ಹಿಡಿಮಣ್ಣನ್ನು ಹಿಡಿದು ಹೀಗೆ ಚೆಲ್ಲಿದಾಗ ಆ ಮಣ್ಣಿನ ಧೂಳಿನಿಂದ ಏಳು ಸಾವಿರ ಕುರಿಗಳು ಹುಟ್ಟಿಬಂದವು. ಆ ಕುರಿಯ ಹಿಂಡನ್ನು ಕಾಯಲಿಕ್ಕೆಂದು ಶಿವದೇವರು ಒಬ್ಬಾತನನ್ನು ನೇಮಿಸಿದರು, ಅವನಿಗೆ ಬೀರಪ್ಪನೆಂದು ಹೆಸರಿಟ್ಟರು. ಆ ಬೀರಪ್ಪ ಶಿವನ ಅಂಶವೆ ಹೌದು ಎಂದು ಸಾಕ್ಷಾತ್ ಶಿವನೆ ಬಿರಪ್ಪನ ಅವತಾರ ತಾಳಿ ಭೂಮಿಗೆ ಬಂದು ತಮ್ಮ ಕುಲವನ್ನು ಕಾಪಾಡುತ್ತಿದ್ದಾನೆ ಎಂದೂ ನಮ್ಮ ಕುರುಬರ ನಂಬಿಕೆ. ಊರನ್ನು, ಜನರನ್ನು ರಕ್ಷಿಸುವುದು ಹಾಗೂ ಕುಲದ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವುದು ಇತ್ಯಾದಿ ಬೀರಪ್ಪನ ಕರ್ತವ್ಯಗಳು. ಜನರು ವರ್ಷಕ್ಕೊಂದು ಬಾರಿ ಆತನ ಹೆಸರಿನಲ್ಲಿ ವಿಶೇಷ ಹಬ್ಬವೊಂದನ್ನು ಆಚರಿಸುತ್ತಾರೆ. ಆತ ಖಡ್ಗದಿಂದ ತನ್ನ ಎದೆಯ ಮೇಲೆಲ್ಲ, ಹೊಟ್ಟೆಯ ಮೇಲೆಲ್ಲ ಕೊಯ್ದುಕೊಳ್ಳುತ್ತಾನೆ. ಬೆಂಕಿಯ ಆಟ ಆಡುತ್ತಾನೆ. ಈ ಮೂಲಕ ತನ್ನ ಸಾಮರ್ಥ್ಯ ಕುಂದದೆ ಉಳಿದಿದೆಯೆಂದೂ ತಾನು ಇಂದಿಗೂ ಜಾಗೃತದೇವರು ಎಂದೂ ನಮಗೆ ಸಾಧಿಸಿ ತೋರಿಸಿ ನಮ್ಮ ನಂಬಿಕೆಯನ್ನೂ, ಭಕ್ತಿಯನ್ನೂ ಪುನಶ್ಚೇತನಗೊಳಿಸುತ್ತಾನೆ. ಊರಿಗೆ ಏನಾದರೂ ದೊಡ್ಡ ಸಮಸ್ಯೆ ಬಂದ ಸಂದರ್ಭದಲ್ಲಿ ಆದಿತ್ಯವಾರದಂದು ಊರಿನ ಪಂಚರೆಲ್ಲ ಸೇರಿ ಡೊಳ್ಳು ಬಡಿದು ಬೀರಪ್ಪನನ್ನು ಕೆರಳಿಸುತ್ತಾರೆ ಅಥವಾ ಆವಾಹಿಸುತ್ತಾರೆ. ಆಗ ಬೀರಪ್ಪ ಪ್ರಕಟವಾಗಿ ಸಮಸ್ಯೆಗೆ ಪರಿಹಾರವನ್ನು ಸೂಚಿಸಿ ಹೋಗುತ್ತಾನೆ. ಈ ಪದ್ಧತಿಯ ಕಾರಣ ಆತನಿಗೆ ಅದಿತ್ಯವಾರದ ದೇವರು ಎನ್ನುವ ಹೆಸರೂ ಉಂಟು.

ಯಕ್ಷಿಯರ‍ನ್ನು ಹೊರತುಪಡಿಸಿ, ನಮ್ಮ ಬೇರೆ ಎಲ್ಲ ದೇವರುಗಳಿಗೂ ಆವಾಹನ ಹಾಗೂ ವಿಸರ್ಜನೆಯ ಕಡ್ಡಾಯ ಕ್ರಿಯಾವಿಧಿಗಳುಂಟು. ಆವಾಹಿಸಿದ ದೇವತೆಗಳು ತಕ್ಷಣ ಬಂದು ಕೊಡಬೇಕಾದುದನ್ನೆಲ್ಲ ಕೊಟ್ಟ ನಂತರ ಅವರನ್ನು ವಿಸರ್ಜಿಸಲೇಬೇಕು. ಕಾರಣವೆಂದರೆ ದೇವರ‍‌ ಪ್ರತ್ಯೇಕ್ಷ ಸಾನಿಧ್ಯವನ್ನುಬಹುದೀರ್ಘಾವಧಿಯ ಮಟ್ಟಿಗೆ ನಮ್ಮಲ್ಲಿ ಆವಾಹಿಸಿ ಇಟ್ಟುಕೊಳ್ಳುವಂತಹ ಸಾಮರ್ಥ್ಯ ನಮಗಿಲ್ಲ. ಹಾಗೆಯೇ ಅಂಥ ಅಗಾಧ ಸರ್ವಸೀಮಾತೀತ ಶಕ್ತಿಯ ಸಾಮೀಪ್ಯವನ್ನು ಬಹುಕಾಲ ಸಹಿಸಿಕೊಂಡಿರಲೂ ನಮಗೆ ಸಾಧ್ಯವಿಲ್ಲ. ಹಾಗಾಗಿ ಎಲ್ಲ ದೇವರುಗಳನ್ನು ಆದಷ್ಟು ಬೇಗನೆ ವಿಸರ್ಜಿಸಬೇಕು. ಏಳು ದಿನ ಉಳಿಯುವ ಗಣೇಶ, ಎಂಟು ದಿನ ಉಳಿಯುವ ಜೋಕುಮಾರ ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವ ದೇವರೂ ಅಷ್ಟು ದೀರ್ಘಕಾಲ ಆವಾಹಿತರಾಗಿರುವುದಿಲ್ಲ. ಈ ರೀತಿಯ ಧಾರ್ಮಿಕ ಆಚರಣೆಗಳನ್ನು ಬಿಟ್ಟರೆ, ಬಯಲಾಟ ಆಡುವಾಗ ನಮ್ಮ ಜನ ಆ ಬೀರಪ್ಪಸ್ವಾಮಿಯ ಸಾನ್ನಿಧ್ಯ ಅಲ್ಲಿ ಇದ್ದೇ ಇದೆ ಎಂದು ತಿಳಿದುಕೊಂಡು ಬಯಲಾಟದಲ್ಲಿ ತೊಡಗುತ್ತಾರೆ. ಆಟದ ಒಂದು ಇಡೀ ರಾತ್ರಿಯ ದೇವರು ಅಲ್ಲಿ ಜನಸಾಮಾನ್ಯರ ಜೊತೆಗಿರುತ್ತಾನೆ. ಅಲ್ಲಿಯೂ ಒಂದು ನಿಬಂಧನೆಯ ನಂಬಿಕೆಯುಂಟು- ಬಯಲಾಟವನ್ನು ಗಂಡುದೇವರು ಮಾತ್ರ ನೋಡಬಹುದು, ಹೆಣ್ಣು ದೇವತೆಗಳಿಗೆ ಆ ಅವಕಾಶವಿಲ್ಲ.

ನಮ್ಮ ದೇವರುಗಳು ಯಾರದೋ ಒಬ್ಬರ ಮೈಯಲ್ಲಿ ತುಂಬಿ ಬಂದು ನಮಗೆ ಸಂದೇಶಗಳನ್ನು ತಲುಪಿಸಿ ಹೋಗುತ್ತಾರೆ. ವಾರ್ಷಿಕ ಉತ್ಸವಗಳ ಸಂದರ್ಭಗಳಲ್ಲಿಯೂ ಅವರ ಮೈದುಂಬಿ ಬಂದ ಕಾರಣಿಕಗಳನ್ನು ಹೇಳುತ್ತಾರೆ. ಆ ಇಡೀ ವರ್ಷ ಊರಿನಲ್ಲಿ ಏನೇನು ನಡೆಯಲಿದೆ, ಮಳೆ ಬೆಳೆಗಳ ಸಾಧ್ಯತೆಗಳೇನು, ರೋಗರುಜಿನಗಳ ಅಪಾಯವೇನು – ಎಂಬೆಲ್ಲ ವಿಷಯಗಳ ಬಗ್ಗೆ ಸಂದೇಶ ನೀಡಿ ಹೋಗುತ್ತಾರೆ; ಅವರವರು ಸಂದೇಶ ನೀಡುವುದೂ ಮೂರೇ ಮೂರು ಮಾತುಗಳಲ್ಲಿ ಮಾತ್ರ. ಇಡೀ ಒಂದು ವರ್ಷದ ಭವಿಷ್ಯ ಆ ಮೂರು ಮಾತುಗಳಲ್ಲಿ ಅಡಕವಾಗಿರುತ್ತದೆ. ನಮ್ಮ ಜನ ಇಡೀ ವರ್ಷ ‘ಬೀರಪ್ಪ ಹೇಳಿದ್ದು ಹಾಗೆ, ಬೀರಪ್ಪ ಹೇಳಿದ್ದು ಹೀಗೆ’ ಎಂದು ಆ ಮೂರು ಮಾತುಗಳನ್ನು ಅರ್ಥೈಸುತ್ತಿರುತ್ತಾರೆ. ಕೆಲವೊಮ್ಮೆ ಮತ್ತೆ ಬೀರಪ್ಪನ ಬಳಿ ಹೋಗಿ ಆ ಮಾತುಗಳ ಬಗ್ಗೆ ಸ್ಪಷ್ಟೀಕರಣಗಳನ್ನು ಅವನಲ್ಲಿಯೆ ಕೇಳುತ್ತಾರೆ. ಬಹಳ ಸ್ವಾರಸ್ಯದ ಒಂದು ವಿಷಯವೆಂದರೆ ನಮ್ಮ ಊರಿನ ದೇವರು ನಮ್ಮ ಊರಿನ ವಿದ್ಯಮಾನಗಳ ಬಗ್ಗೆಯೆಷ್ಟೇ ಮಾತನಾಡುತ್ತಾರೆ; ಇನ್ನೊಂದು ಊರಿನ ಸಂಗತಿಯನ್ನು ಅವರು ಕೊಂಚವೂ ಹೇಳುವುದಿಲ್ಲ. ಅದೇ ಬೆಂಗಳೂರಿನ ಕೆಲವು ದೇವರುಗಳು ಬೆಂಗಳೂರಿನದು ಮಾತ್ರವಲ್ಲ ಇಡೀ ದೇಶದ, ವಿಶ್ವದ ವಿದ್ಯಮಾನಗಳನ್ನೆಲ್ಲ ಹೇಳುವುದುಂಟು. ನಮ್ಮ ಶಿವಾಪುರದ ದೇವರು, ಪಾಪ, ಶಿವಾಪುರದ ಕಥೆಯನ್ನಷ್ಟೇ ಹೇಳುತ್ತಾರೆ.

ಹೆಣ್ಣುದೇವರುಗಳಲ್ಲಿ ತುಂಬ ಮುಖ್ಯವಾದವಳು ಮಾರಿ. ಆಕೆಯನ್ನು ಕರ್ರೆವ್ವ ಎಂದೂ ಕರೆಯುವುದುಂಟು. ನಮ್ಮ ಊರಿನಲ್ಲಿ ಪಾರೆಂಬಿ ಕರ್ರೆವ್ವ ಬಹು ಪ್ರಸಿದ್ಧಳಾದಂತಹ ದೇವತೆ. (ನನ್ನ ‘ಕರಿಮಾಯಿ’ ಕಾದಂಬರಿಯಲ್ಲಿ ಆಕೆಯ ವಿಷಯ ಬರುತ್ತದೆ) ಕರ್ರೆವ್ವನ ಬಗ್ಗೆ ಎರಡು ಕಥೆಗಳಿವೆ. ಅವುಗಳಲ್ಲಿ ಒಂದು, ಎಲ್ಲಮ್ಮನ ಕಥೆ, ನಿಮಗೆಲ್ಲ ತಿಳಿದಿರುವಂಥದ್ದು. ಎಲ್ಲಮ್ಮ ಬ್ರಾಹ್ಮಣದೇವತೆ, ಆಕೆ ಸೇವಕಿ ಮಾತಂಗಿ, ಅವರಿಬ್ಬರೂ ಒಂದೆಡೆ ನಿಂತಿರುವಾಗ ಜಮದಗ್ನಿಯ ಆಜ್ಞೆಯನ್ನು ಪರಿಪಾಲಿಸಬಂದ ಪರಶುರಾಮ ಅವರಿಬ್ಬರ ತಲೆಗಳನ್ನೂ ಕಡಿದು ಹಾಕುತ್ತಾನೆ. ನಂತರ ತಂದೆಯ ಬಳಿ ಮರಳಿ ಹೋಗಿ ಅವರಿಬ್ಬರಿಗೂ ಜೀವವನ್ನು ಹಿಂತಿರುಗಿಸಿ ಕೊಡಲು ಕೇಳುತ್ತಾನೆ. ಆಗ ಜಮದಗ್ನಿ ‘ಆಯಿತು, ಅವರವರ ದೇಹದ ಮೇಲೆ ಅವರವರ ತಲೆಗಳನ್ನು ಇಡು’ ಎನ್ನುತ್ತಾನೆ. ಸಂತೋಷ ತುಂಬಿ ಬಂದ ಪರಶುರಾಮ ತಿಳಿಯದೆ ತಲೆಗಳನ್ನು ಅದಲು ಬದಲು ಮಾಡಿ ಆ ಮುಂಡಗಳಿಗೆ ಜೋಡಿಸುತ್ತಾನೆ. ಹಾಗಾಗಿ ಮರಳಿ ಜೀವ ಪಡೆದುಕೊಂಡಾಗ ಮಾತಂಗಿಯ ದೇಹ ಮತ್ತು ಎಲ್ಲಮ್ಮನ ತಲೆ ಸೇರಿ ಒಂದು ವ್ಯಕ್ತಿಯಾದರೆ ಮಾತಂಗಿಯ ತಲೆ ಮತ್ತು ಎಲ್ಲಮ್ಮನ ದೇಹ ಸೇರಿ ಮತ್ತೊಂದು ವ್ಯಕ್ತಿಯಾಗುತ್ತದೆ. ಪಾಶ್ಚಾತ್ಯರು ಈ ಕಥೆಯನ್ನು ತುಂಬ ಅಪವಾಖ್ಯಾನ ಮಾಡಿ ಬಿಟ್ಟರು. ಇದು ಆರ್ಯರು ಮತ್ತು ದ್ರಾವಿಡರು ಬೆರೆತದ್ದನ್ನು ಸೂಚಿಸುವ ಕಥೆ ಎಂದು ಬಿಟ್ಟರು. ಅದೇ ರೀತಿ, ಬ್ರಾಹ್ಮಣ ಹೆಂಗಸು ಶೂದ್ರನೊಬ್ಬನನ್ನು ಮದುವೆಯಾಗುವ ಪ್ರಸಂಗವಿರುವ ಮಾರಿಯ ಕಥೆಯನ್ನು ವರ್ಣಸಂಕರದ ಕಥೆಯೆಂದು ವ್ಯಾಖ್ಯಾನಿಸಿದರು ಅವರು. ಆದರೆ, ಇದಕ್ಕಿಂತಲೂ ಆಳವಾದ ವಿಷಯವನ್ನು ಈ ಕಥೆಗಳು ಹೇಳುತ್ತವೆ ಎಂದು ನನಗನಿಸುತ್ತದೆ. ಅಲ್ಲಿಯ ಹೆಣ್ಣುದೇವತೆಗಳು ಗಂಡು ದೇವತೆಗಳನ್ನು ಸೋಲಿಸಿ ತಮ್ಮ ಹಿರಿಮೆಯನ್ನೂ, ಸಾಮರ್ಥ್ಯವನ್ನೂ ಮೆರೆದಿದ್ದಾರೆ. ಆ ಮೂಲಕ ಮಾತೃಪ್ರದಾಧನ ಕುಟುಂಬವ್ಯವಸ್ಥೆಯ ಶ್ರೇಷ್ಠತೆಯನ್ನು ಸ್ಥಾಪಿಸಿದ್ದಾರೆ, ಎಂದು ತಿಳಿಯುವುದೆ ಕಥೆಗಳ ಮೂಲ ಅಶಯಕ್ಕೆ ಹೆಚ್ಚು ಹತ್ತಿರವಾದದ್ದು ಹಾಗೂ ನಮ್ಮ ಸಂಸ್ಕೃತಿಯನ್ನು ಅರಿಯುವಲ್ಲಿ ಹೆಚ್ಚು ಸಹಾಯಕಾರಿಯಾದದ್ದು ಎನ್ನುವುದು ನನ್ನ ಅನಿಸಿಕೆ.

ಕರ್ರೆವ್ವನಿಗೆ ಸಂಬಂಧಿಸಿದ ಇನ್ನೊಂದು ಕಥೆ ಹೀಗಿದೆ: ಒಮ್ಮೆ ಲೋಕದಲ್ಲಿ ಸಂಕಟಗಳು ಬಹಳ ಹೆಚ್ಚಾಗಿ ನಮ್ಮ ಶಿವಾಪುರದ ತಾಯಿ ಶಿವನ ಬಳಿ ಹೋಗಿ ಸಂಕಷ್ಟಗಳನ್ನು ನಿವೇದಿಸಿಕೊಂಡಳು. ಆಗ ಶಿವ ತನ್ನ ಬೆವರು ಸಿಡಿಸಿದಾಗ ಆ ಬೆವರಿನಲ್ಲಿ ಕರ್ರೆವ್ವ ಹುಟ್ಟಿ ಬಂದಳು. ಆ ಕರ್ರೆವ್ವ ಭೂಲೋಕಕ್ಕೆ ಇಳಿದುಬಂದಾಗ ದೇವತೆಗಳಿಗೂ, ದೈತ್ಯರಿಗೂ ನಡುವೆ ಭಯಂಕರ ಯುದ್ಧವೊಂದು ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಏನಾದರೂ ಮಾಡಿ ಯುದ್ಧವನ್ನು ತಡೆಯಬೇಕೆಂದು ಕರ್ರೆವ್ವ ಸಾಗುತ್ತಿರುವಾಗ ದಾರಿಯ ಪಕ್ಕದಲ್ಲಿದ್ದ ಬಾವಿಯೊಂದರಿಂದ ದನಿಯೊಂದು ಕೇಳಿಬಂತು. ‘ಗಂಡಸಾದರೆ ಶಿವನೆ ಅನ್ನುತ್ತೇನೆ, ಹೆಂಗಸಾದರೆ ಪಾರ್ವತಿ ಅನ್ನುತ್ತೇನೆ, ಯಾರಾದರೂ ಹೋಗುತ್ತಿರುವವರು ಬಂದು ಕಾಪಾಡಿರೋ’ ಎಂದು ಬಾವಿಯೊಳಗಿನಿಂದ ಯಾರೋ ಕೂಗುತ್ತಿದ್ದರು. ಕರ್ರೆವ್ವ ಹೋಗಿ ನೋಡಿದರೆ, ದೇವ ದಾನವರ ಯುದ್ಧದ ನಡುವೆ ಜಪತಪ ಮಾಡಿಕೊಂಡಿದ್ದ ಜಡೆಮುನಿ ಅಲ್ಲಿ ಬಿದ್ದದ್ದು ಕಂಡು ಬಂತು. ‘ಪಾಪ, ಒದ್ದಾಡುತ್ತಿದ್ದಾನಲ್ಲ, ಇವನನ್ನು ಹೊರಗೆ ಎಳೆದು ತೆಗೆಯಬೇಕು’, ಎಂದು ಆಕೆ ಅಂದುಕೊಂಡರೆ ಹಾಗೆ ಎಳೆದು ತೆಗೆಯಲು ಸಹಾಯ ಮಾಡುವಂಥದು ಆಕೆಯ ಬಳಿ ಏನೊಂದು ಇರಲಿಲ್ಲ. ಕೊನೆಗೆ ಆಕೆ ತಾನು ಉಟ್ಟಿದ್ದ ದಟ್ಟಿಯನ್ನೇ ಬಿಚ್ಚಿ ಕೆಳಗೆ ಬಿಟ್ಟಳು. ‘ನಾನು ಹೇಳುವವರೆಗೆ ಕಣ್ಣು ಮುಚ್ಚಿಕೊಂಡು ಈ ದಟ್ಟಿಯನ್ನು ಗಟ್ಟಿಯಾಗಿ ಹಿಡಿದು ಮೇಲೇರಿ ಬರಬೇಕು. ನಡುವೆ ಏನಾದರೂ ಕಣ್ಣು ತೆಗೆದರೆ ನಿನ್ನನ್ನು ಸಿಗಿದು ಹಾಕಿಬಿಡುತ್ತೇನೆ’ ಎಂದು ಎಚ್ಚರಿಕೆ ನೀಡಿದಳು. ಜಡೆಮುನಿ ಅದೇ ರೀತಿ ಮೇಲೇರಿ ಬಂದ. ಆದರೆ ಕೊನೆಗೆ ಮನಸ್ಸು ತಡೆಯಲಾರದೆ ಆತ ಕಣ್ಣು ತೆರೆದೇ ಬಿಟ್ಟ. ಆಕೆಯನ್ನು ಕಂಡು ಮೋಹಿತನಾದ. ತಕ್ಷಣ ಕರ್ರೆವ್ವ ತನ್ನ ಕಠಾರಿಯಿಂದ ನೆಲದ ಮೇಲೆ ಏಳು ಗೆರೆಗಳನ್ನು ಕೊರೆದು “ಇದನ್ನು ದಾಟಿ ಬಂದರೆ ನಿನ್ನನ್ನು ಉಳಿಸುವುದಿಲ್ಲ” ಎಂದಳು. ಆದರೆ ಜಡೆಮುನಿ ಛಲಬಿಡದೆ ಆ ಏಳೂ ಗೆರೆಗಳಲ್ಲಿ ತನ್ನ ದೇಹದ ರಕ್ತವನ್ನು ಹರಿಸಿ ಅದನ್ನು ದಾಟಿಬಂದ. ಆಗ ಆತನ ನೈಜ ಪ್ರೀತಿಯ ಬಗ್ಗೆ ಕರ್ರೆವ್ವನಿಗೆ ಮನವರಿಕೆಯಾಗಿ ಆಕೆ ಆತನನ್ನು ಮದುವೆಯಾದಳು.

ಈ ಮದುವೆ ದೇವ-ದಾನವರಿಬ್ಬರನ್ನೂ ಕೆರಳಿಸಿತು. ‘ನಮ್ಮ ಕುಲ ಕೆಡಿಸಿದೆ’ ಎಂದು ದೇವರುಗಳು ಜಡೆಮುನಿಯ ಮೇಲೂ, ದೈತ್ಯರು ಕರಿಮಾಯಿಯ ಮೇಲೂ ಸಿಟ್ಟಾದರು. ಅವರೆಲ್ಲರೂ ಇವರಿಬ್ಬರನ್ನೂ ಕೊಲ್ಲಬೇಕೆಂದು ಕಾಯತೊಡಗಿದರು. ಒಂದು ದಿನ ಕರಿಮಾಯಿ ಇಲ್ಲದಿದ್ದ ಸಮಯದಲ್ಲಿ ಜಡೆಮುನಿಯನ್ನು ಕೊಂದುಬಿಟ್ಟರು. ಅಂದಿಗೆ ಕರಿಮಾಯಿ ವಿಧವೆಯಾದಳು. (ಇಂದಿಗೂ ನಾವು ಆ ದಿನವನ್ನು ‘ರಂಡಿ ಹುಣ್ಣಿಮೆ’ ಎಂದು ಗುರುತಿಸುತ್ತೇವೆ. ಆ ದಿವಸ ಸಾಮಾನ್ಯವಾಗಿ ದೇವಸ್ಥಾನದಲ್ಲಿರುವ ಕರಿಮಾಯಿಯ ಮೂರ್ತಿಯ ಕೈಯ ಬಳೆಗಳನ್ನು ಒಡೆಯುವ ರೂಢಿಯಿದೆ) ಹಾಗೆ ವಿಧವೆಯಾದಾಗ ಕರಿಮಾಯಿ ತುಂಬು ಗರ್ಭಿಣಿ. ಗರ್ಭವನ್ನಾದರೂ ಕಾಪಾಡಿಕೊಳ್ಳೋಣವೆಂದು ಆಕೆ ದೂರ ಹೋದರೆ ದೇವ-ದಾನವರ ಅಲ್ಲಿಗೂ ಆಕೆಯನ್ನು ಬೆಂಬತ್ತಿ ಬಂದರು. ಆಕೆ ಮತ್ತೂ ತಪ್ಪಿಸಿಕೊಂಡು ಓಡಿ ಒಂದು ಮಾವಿನ ಮರದಡಿ ವಿಶ್ರಾಂತಿಗೆಂದು ಕುಳಿತಳು. ತುಂಬುಗರ್ಭಿಣಿಯಾದ ಆಕೆಗೆ ಆ ಮರದ ಮಾವಿನಕಾಯಿಗಳನ್ನು ಕಂಡಾಕ್ಷಣ ಸಹಜವಾಗಿಯೇ ಬಯಕೆ ಮೂಡಿತು. ಮರವನ್ನು ಹತ್ತುವುದು ಅಸಾಧ್ಯವಾದರಿಂದ ಕಲ್ಲಿನ ಮೇಲೆ ಕಲ್ಲಿಟ್ಟು ಕಲ್ಲಿನ ಮೇಲೆ ಕಲ್ಲಿಟ್ಟು ಆಕೆ ಕಾಯಿ ಕೈಗೆಟುಕುವಷ್ಟು ಮೇಲೇರಿದಳು. ಇನ್ನೇನು ಕಾಯಿ ಕೀಳಬೇಕು ಎನ್ನುವಷ್ಟರಲ್ಲಿ ಆ ಚಂಡಾಲರು-ದೇವರುಗಳು ಮತ್ತು ದಾನವರು- ಅಲ್ಲಿಗೂ ಬಂದು ಬಿಟ್ಟರು. ಆಕೆಯ ಗರ್ಭಕ್ಕೆ ಸರಿಯಾಗಿ ಬಾಣವನ್ನು ಗುರಿಯಿಟ್ಟು ಕೊಲ್ಲಲು ಸನ್ನದ್ಧರಾದರು. ಆಗ ಏನು ಮಾಡಬೇಕೆಂದೂ ತೋಚದೆ ಕರಿಮಾಯಿ ಕಿಟಾರನೆ ಕಿರುಚಿದಳು. ಆ ಆರ್ತ ಕೂಗನ್ನು ಕೇಳಿ ಶಿವ ತನ್ನ ನಂದಿಯನ್ನೂ, ಪಾರ್ವತಿ ತನ್ನ ಹುಲಿಯನ್ನೋ ಸಹಾಯಕ್ಕೆಂದು ಕಳಿಸಿದರು. ಜೊತೆಗೆ ಕರಿಮಾಯಿಗೆ ಅಸಾಮಾನ್ಯ ಸಾಮರ್ಥ್ಯವನ್ನೂ ಅನೇಕಾನೇಕ ಆಯುಧಗಳನ್ನು ನೀಡಿದರು. ಆದರೆ ಇಷ್ಟೇಲ್ಲ ಆಗುವಷ್ಟರಲ್ಲಿಯೇ ದೇವ ದಾನವರು ಗರ್ಭಕ್ಕೆ ಗುರಿಯಿಟ್ಟಿದ್ದ ತಮ್ಮ ಬಾಣಗಳನ್ನು ಪ್ರಯೋಗಿಸಿಬಿಟ್ಟರು. ಆಗ ಕರಿಮಾಯಿ ಆ ಗರ್ಭವನ್ನು ತನ್ನ ಉಡಿಯಲ್ಲಿಟ್ಟು ರಕ್ಷಿಸಿಕೊಂಡು ಕದನ ಮಾಡುತ್ತ ಆ ದೇವ-ದಾನವರನ್ನು ಸಂಹರಿಸಿದಳು. ನಂತರ ದುಃಖೋದ್ರಿಕ್ತಳಾಗಿ ‘ನನ್ನ ಗಂಡ ಮತ್ತು ಮಕ್ಕಳ ಜೀವಗಳನ್ನು ಮರಳಿ ಕೊಡಿವಿಯೋ ಇಲ್ಲ ನಿನ್ನನ್ನೇ ಸುಟ್ಟು ಬಿಡಲೋ?’ ಎಂದು ಆಕೆ ಶಿವನಿಗೇ ಬೆದರಿಕೆ ಹಾಕಿದಳು. ಹೆದರಿದ ಶಿವದೇವರು ಆಕೆಯ ಗಂಡ ಮತ್ತು ಮಕ್ಕಳಿಗೆ ಜೀವದಾನ ಮಾಡಿದರು. ಅಂದು ಆಕೆ ಮತ್ತೊಮ್ಮೆ ಮುತ್ತೈದೆಯಾದಳು. (ಇಂದಿಗೂ ನಾವು ಆ ದಿನವನ್ನು  ‘ಮುತೈದೆ ಹುಣ್ಣಿಮೆ’ ಎಂದು ಗುರುತಿಸುತ್ತೇವೆ. ಹಾಗೆಯೆ, ಮುಂದೆ ಆ ತಾಯಿ ಮಕ್ಕಳು ಹೇಗೆ ಬಾಳಿಕೊಂಡು ಬಂದರು, ಅವರ ಸಂಬಂಧ ಹೇಗಿತ್ತು ಎಂದು ಬೇರೆ ಅನೇಕ ಕಥೆಗಳು ಬೆಳೆದುಬಂದಿವೆ. ಸಮಯದ ಮಿತಿಯಿಂದಾಗಿ ಇಲ್ಲಿ ಅವೆಲ್ಲವನ್ನೂ ಹೇಳಲು ಸಾಧ್ಯವಾಗುತ್ತಿಲ್ಲ). ಹೀಗೆ ನಮ್ಮ ಹೆಣ್ಣುದೇವರುಗಳು ಗಂಡು ದೇವರುಗಳಿಗಿಂತ ಮಿಗಿಲಾದ ಶಕ್ತಿಯುಳ್ಳವರು. ಅವರು ಹೆಚ್ಚು ಹಸ್ತಗಳನ್ನುಳ್ಳವರು, ಹೆಚ್ಚು ಸಾಮರ್ಥ್ಯವುಳ್ಳವರು, ಹೆಚ್ಚಿನದನ್ನು ಕಾಣಬಲ್ಲಂಥವರು.

ಊರದೇವರುಗಳು ಸಾಮಾನ್ಯವಾಗಿ ಎರಡು ಕೆಲಸಗಳನ್ನು ತಮ್ಮ ತಮ್ಮಲ್ಲಿ ಹಂಚಿಕೊಂಡಿರುತ್ತಾರೆ: ಊರಿನ ರಕ್ಷಣೆಯ ಕೆಲಸವನ್ನು, ಅಂದರೆ ಯಾರಾದರೂ ಪರವೂರಿನವರು ದಾಳಿ ಮಾಡಿದಾಗ ಊರನ್ನು ರಕ್ಷಿಸುವ ಕೆಲಸವನ್ನು ಗಂಡುದೇವತೆಗಳು ನಿರ್ವಹಿಸುತ್ತವೆ ಅದೇ ರೀತಿ ಊರವರನ್ನು ರೋಗರುಜಿನಗಳಿಂದ ರಕ್ಷಿಸುವ ಕೆಲಸವನ್ನು ಹೆಣ್ಣು ದೇವತೆಗಳು ನಿರ್ವಹಿಸುತ್ತವೆ. ನಮ್ಮಲ್ಲಿ ಹೆಣ್ಣು ದೇವತೆಗಳ ವಿಷಯದಲ್ಲಿ ಹೆಚ್ಚು ಮಡಿ-ಮೈಲಿಗೆಗಳನ್ನು ಆಚರಿಸುತ್ತೇವೆ: ಗಂಡು ದೇವರುಗಳ ವಿಷಯದಲ್ಲಿ ಇಂಥ ನಿರ್ಬಂಧಗಳಿಲ್ಲ. ಈ ಎಲ್ಲ ಊರದೇವರುಗಳ ವಿಷಯದಲ್ಲಿ ಆವಾಹನೆಯ ಹಾಗೂ ವಿಸರ್ಜನೆಯ ಸಂಬಂದದಲ್ಲಿ ಕಟ್ಟುನಿಟ್ಟಾದ ಕ್ರಿಯಾವಿಧಿಗಳಿವೆ. ಅಲ್ಲಿ ಬೇರೆ ದೇವರ ಕಥೆಯನ್ನೊ ಅಥವಾ ಕರಿಮಾಯಿಯ ಕಥೆಯನ್ನೊ ಅಭಿನಯಿಸುವುದೇ ಒಂದು ರಿಚುವಲ್ ಆಗಿರುತ್ತದೆ. ಈ ಊರದೇವತೆಗಳು ಕಾರಣಿಕವನ್ನೂ ಕೂಡ ಹೇಳುತ್ತವೆ. ಅಂಥಹ ಸಂದರ್ಭಗಳಲ್ಲೆಲ್ಲ ಪೂಜಾರಿಯ ಮೈಮೆಲೆ ಅವುಗಳ ಆವಾಹನೆಯೂ ಹಾಗೆಯೆ ಅಲ್ಲಿಂದ ಅವುಗಳ ವಿಸರ್ಜನೆಯೂ ವಿಧ್ಯುಕ್ತವಾಗಿ ನಡೆಯುತ್ತದೆ.

ಈ ದೇವರುಗಳು ಸಾಮಾನ್ಯವಾಗಿ ಕಾಡು ಮತ್ತು ನಾಡಿನ ನಡುವೆ ಅಂದರೆ ಊರಿನಿಂದ ಸ್ವಲ್ಪ ಆಚೆಗೆ ಹಾಗೂ ಕಾಡಿನಿಂದ ಸ್ವಲ್ಪ ಈಚೆಗೆ ಇರುತ್ತದೆ. ಕಾರಣಿಕ ಹೇಳುವಂತಹ ಪೂಜಾರಿ ಸಾಮಾನ್ಯವಾಗಿ ಕಾಡನ್ನು ಬಲ್ಲಂತಹ ವ್ಯಕ್ತಿಯಾಗಿರುತ್ತಾನೆ ಮತ್ತು ಊರಿನೊಳಗಡೆ ವಾಸಿಸುತ್ತಿರುತ್ತಾನೆ. ನಮ್ಮಲ್ಲಿ ಊರಿನ ಸಭೆಗಳಲ್ಲಿ ಪಾಲಿಸಬೇಕಾದ ಕೆಲವು ಕಡ್ಡಾಯ ನಿಯಮಗಳುಂಟು. ಒಂದು ನಿಯಮದ ಪ್ರಕಾರ ಇಂಥ ಸಭೆಗಳಲ್ಲಿ ಪೂಜಾರಿಗೂ ಮತ್ತು ನಟನಿಗೂ (ನಮ್ಮಲ್ಲಿ ಆಟಗಳಲ್ಲಿ ರಾಕ್ಷಸನ ಪಾತ್ರ ಮಾಡುವಂಥವನಿಗೆ ಮಾತ್ರ ‘ನಟ’ ಎಂದು ಕರೆಯುತ್ತೇವೆ) ಯಾವುದೇ ವ್ಯಕ್ತಿಗತ ಅಭಿಪ್ರಾಯ ಹೇಳುವ ಹಕ್ಕಿಲ್ಲ. ಇನ್ನುಳಿದವರು ಅಭಿಪ್ರಾಯ ಮಂಡಿಸಬಹುದು, ಮತ ಚಲಾಯಿಸಬಹುದು. ಆದರೆ ಮೈಮೇಲೆ ದೇವ ದೇವಿಯರನ್ನು ಆವಾಹಿಸಿಕೊಳ್ಳುವ ಪೂಜಾರಿಗಾಗಲಿ, ರಾಕ್ಷಸರನ್ನು ಆವಾಹಿಸಿಕೊಳ್ಳುವ ನಟನಿಗಾಗಲೀ ಯಾವುದೇ ಮತ ಚಲಾವಣೆಯ ಹಕ್ಕಿಲ್ಲ. ಅವರು ಸಭೆಗಳಿಗೆ ಬಂದು ಕುಳಿತಿರಬೇಕು, ಅಲ್ಲಿ ಅವರ ಉಪಸ್ಥಿತಿಯಿರಬೇಕು. ಆದರೆ ಅಲ್ಲಿ ಅವರನ್ನು ಅಭಿಪ್ರಾಯ ಕೇಳುವ ಹಾಗೂ ಇಲ್ಲ, ಅವರು ಹೇಳುವ ಹಾಗೂ ಇಲ್ಲ.

ಇನ್ನು, ನಮ್ಮ ಶಿವಾಪುರದಲ್ಲಿ ಲೋಕಕ್ಕಂಟಿಕೊಂಡಿರುವಂಥ ದೇವತೆಗಳು ಕೆಲವರುಂಟು. ಇವರಲ್ಲಿ ಮುಖ್ಯವಾದವರು ಲಗುಮವ್ವ, ನಿರ್ವಾಣಪ್ಪ, ಅಡಿವೆಪ್ಪ, ಹನುಮಪ್ಪ ಇತ್ಯಾದಿ. ಇವರು ಸಾಮಾನ್ಯವಾಗಿ ಕಾಡಿನಲ್ಲಿ, ಕಾಡಿನ ಸಹವಾಸದಲ್ಲಿ ಇರುವ ದೇವರುಗಳು. ಬೇರೆ ಯಾವ ದೇವರ ಜಾತ್ರೆಯಾದರೂ ಕೂಡ ಯಾವುದೇ ಜಾತಿ ಭೇಧವಿಲ್ಲದೆಯೇ ಈ ಎಲ್ಲ ದೇವರುಗಳೂ ಅಲ್ಲಿಗೆ ಹೋಗುವ ಪರಿಪಾಠವಿದೆ. ನಾವು ‘ಶಿಶು ಮಕ್ಕಳು’ ಅಲ್ಲಿ ಆ ಜಾತ್ರೆಗಳಲ್ಲಿ ದೇವರುಗಳನ್ನು “ನೆನೆಯುತ್ತೇವೆ”. ನಮ್ಮಲ್ಲಿ ‘ಭಕ್ತ’, ‘ಭಕ್ತಿ’, ‘ಭಕ್ತಿಸಮರ್ಪಣೆ’ ಎನ್ನುವ ಪದಗಳಿಲ್ಲ. ‘ಭಕ್ತ’ ಎನ್ನುವ ಪರಿಕಲ್ಪನೆಗೆ ಬದಲಾಗಿ ‘ಶಿಶುಮಕ್ಕಳು’ ಎನ್ನುವ ಪರಿಕಲ್ಪನೆಯನ್ನೂ, ‘ಭಕ್ತಿ ಸಮರ್ಪಣೆ’ ಎನ್ನವುದಕ್ಕೆ ಬದಲಾಗಿ ‘ನಿನ್ನನ್ನು ನೆನೆಯುತ್ತೇವೆ’ ಎಂಬ ಪದವನ್ನೂ ನಾವು ಬಳಸುತ್ತೇವೆ. ‘ಶಿಶುಮಕ್ಕಳು’ ಎನ್ನುವಾಗ ‘ಶಿಷ್ಯ ಮಕ್ಕಳು’ ಎಂದೂ ‘ಮಕ್ಕಳ ಮಕ್ಕಳು’ ಎಂದೊ ಅಥವಾ ಎರಡನ್ನೂ ಸೇರಿಸಿಯೂ ನಮ್ಮ ಜನ ಆ ಪರಿಕಲ್ಪನೆಯನ್ನು ಬಳಸುತ್ತಾರೆ ಎಂದು ತೋರುತ್ತದೆ. ‘ದೇವರೆ, ನಿನ್ನನ್ನು ನೆನೆಯುತ್ತೇವೆ’ ಎನ್ನುವಾಗ ಪ್ರತಿದಿನವೂ ಪ್ರತಿ ಕ್ಷಣವೂ ನಿನ್ನನ್ನು ನೆನೆಯುತ್ತೇವೆ’ ಎನ್ನುವ ಅರ್ಥವಿದೆಯೆಂದು ಕಾಣುತ್ತದೆ.

ಇನ್ನೆರಡು ವರ್ಗಗಳ ದೇವತೆಯರ ಬಗ್ಗೆ ನಾನು ಈ ಮೊದಲೇ ಪ್ರಸ್ತಾಪಿಸಿದ್ದೇ. ಇಲ್ಲಿ ಅವರುಗಳ ಬಗ್ಗೆ ಇನ್ನೂ ಕೆಲವು ವಿಷಯಗಳನ್ನು ಹೇಳುತ್ತೇನೆ. ಇವರು ಸೇಡುಮಾರಿಯರು ಮತ್ತು ಯಕ್ಷಿಯರು. ಸೇಡುಮಾರಿಯರು ಮಣ್ಣಿನ ದೇವರುಗಳು, ಮಣ್ಣಿನ ವಾಸನೆಯಿರುವ ದೇವರುಗಳು. ನಮ್ಮ ಮಣ್ಣಿನಲ್ಲಿಯೇ, ನಮ್ಮ ಶಿವಾಪುರದಲ್ಲಿಯೆ ಹುಟ್ಟಿದ ದೇವರುಗಳಾದ ಇವರು ಬಹುಶಃ ಬೇರೆ ಇನ್ನೆಲ್ಲಿಯೂ ಹುಟ್ಟಿರಲಾರರೆಂದೇ ನನ್ನ ಅನುಮಾನ. ಸೇಡುಮಾರಿಯರು ಅತ್ಯಂತ ಕೊಳಕಾಗಿರುತ್ತಾರೆ. ನಮ್ಮ ಪುರಾಣಗಳಲ್ಲಿಯ ವರ್ಣನೆಯ ಪ್ರಕಾರ ಅವರ ಮೈಮೇಲೆ ಗೇಣುದಪ್ಪ ಕೊಳೆ ಮೆತ್ತಿಕೊಂಡಿರುತ್ತದೆ. ಅವರ ಕಣ್ಣು ತುಂಬ ವಿಕಾರವಾಗಿರುತ್ತವೆ. ಅವರು ಸಣ್ಣಪುಟ್ಟ ಗಿಡಗಂಟಿಗಳಲ್ಲಿ ವಾಸಿಸುವಂಥವರು. ಅವರ ಬಲಗೈಯಲ್ಲಿ ಕಸಬರಿಗೆ ಹಾಗೂ ಎಡಗೈಯಲ್ಲಿ ಖಾಲಿ ಬುಟ್ಟಿಯಿರುತ್ತದೆ. ಮನಸ್ಸೇನಾದರೂ ಕೆರಳಿದರೆ ಮನುಷ್ಯರ ಹೆಣಗಳನ್ನು ಗುಡಿಸುತ್ತಾ ಬುಟ್ಟಿಗೆ ತುಂಬುತ್ತಾ ಇಡೀ ಊರನ್ನೇ ನಾಶಮಾಡಿಬಿಡುತ್ತಾರೆ ಇವರು. ಈ ಸೇಡುಮಾರಿಯರಿಗೆ ಶಾಪ ಹಾಕುವ ಅಧಿಕಾರವುಂಟು, ಶಕ್ತಿಯುಂಟು, ಇವರನ್ನು ‘ನೆನೆಯಬೇಕು’, ಇವರಿಗೆ ಭಕ್ತಿ ಸಲ್ಲಿಸಬೇಕು ಎಂದರೆ ಸೇಂದಿ ಮತ್ತು ಮಾಂಸವನ್ನು ನೀಡಬೇಕು. ಬಲಿ ಕೊಟ್ಟರಂತೂ ಅವರು ಬಹು ಬೇಗನೇ ಒಲಿಯುತ್ತಾರೆ. ಶಿಶು ಮಕ್ಕಳ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ. ಇವರಿಗೂ ಆವಾಹನೆ-ವಿಸರ್ಜನೆಗಳ ಕ್ರಿಯಾವಿಧಿಗಳಿದ್ದರೂ ಸಹ ಅದಕ್ಕಾಗಿ ನಾವು ಅವರನ್ನು ವಿಶೇಷವಾಗಿ ಕೇಳಬೇಕಾಗಿದ್ದಿಲ್ಲ. ಕೋಪ ಕೆರಳಿದರೆ ಸಾಕು, ಇಚ್ಛೆ ಬಂದರೆ ಸಾಕು, ಕೈಗೆ ಯಾರು ಸಿಗುತ್ತಾರೆ ಅವರ ಮೈಯಲ್ಲಿ ಇವರು ತುಂಬಿ ಬರುತ್ತಾರೆ. ಗುಡುಗುಡು ಶಬ್ದ ಮಾಡುತ್ತಾರೆ ಅಥವಾ ಕಿಟಾರನೆ ಕಿರುಚುತ್ತಾರೆ ಅಥವಾ ಬರೀ ಬಿಕ್ಕಳಿಸುತ್ತಿರುತ್ತಾರೆ, ಕೆಲವೊಮ್ಮೆ ನೋಡುವವರಿಗೆ ಭಯವಾಗುವಂತೆ ವಿಕಾರವಾಗಿ ಕೂಗುತ್ತಾರೆ, ಇಲ್ಲ ಹುಚ್ಚು ಹುಚ್ಚಾಗಿ ಆಡುತ್ತಾರೆ, ಇನ್ನೇನಾದರೂ ಸೋಗು ಮಾಡುತ್ತಾರೆ. ಇಂಥ ಯಾವುದೋ ಒಂದು ಹಾವಭಾವದ ಮೂಲಕ ತಾವು ಮೈದುಂಬಿ ಬಂದಿದ್ದೇವೆ ಎಂದು ಸುತ್ತಲಿದ್ದವರಿಗೆ ಸೂಚಿಸುತ್ತಾರೆ. ನಮ್ಮದು ಕೊಲೆಗಳಿಗೆ ಪ್ರಸಿದ್ಧವಾದಂತಹ ಊರು. ಅಂಥ ಕೊಲೆಗಳಿಗೆ ಹೇಳಿಮಾಡಿಸಿದಂತಹ ದೇವರುಗಳು ಈ ಸೇಡುಮಾರಿಯರು. ಎಷ್ಟರಮಟ್ಟಿಗೆಂದರೆ ಕೆಲವರು ಕೊಲೆಗಳ ವಿಷಯದಲ್ಲಿ ಇವರಿಗೆ ಹರಕೆ ಹೊರುವುದೂ ಉಂಟು. ಒಮ್ಮೊಮ್ಮೆ ಈ ದೇವತೆಗಳಿಗೂ ಶತ್ರುಗಳಿರುತ್ತಾರೆ. ಅಂಥಲ್ಲಿ ಈ ಸೇಡುಮಾರಿಯರು ತಮ್ಮ ಭಕ್ತರಲ್ಲಿ ಯಾರನ್ನಾದರೂ ಕರೆದು ‘ನನ್ನ ಆ ಶತ್ರುವನ್ನು ಮುಗಿಸಿ ಬಾ’ ಎಂದು ಆಜ್ಞಾಪಿಸುತ್ತವೆ. (ಇದು ಮಾತ್ರ ಸ್ವಲ್ಪ ಅತಿಯಾಯಿತೆಂದೆ ಹೇಳಬೇಕು!)

ಸೇಡುಮಾರಿಯರ ಮೇಲೆ ಸ್ವಲ್ಪ ವೀರಶೈವ ಪ್ರಭಾವವಾಗಿರುವುದೂ ಕಂಡುಬರುತ್ತದೆ. ನಮ್ಮೂರಿನಲ್ಲಿ ಪುರೋಹಿತರು ಎನ್ನುವಂಥವರು ಯಾರೂ ಇಲ್ಲ, ಜಂಗಮರು ಮಾತ್ರ ಇದ್ದಾರೆ. ನಮ್ಮ ಪ್ರತಿಯೊಂದು ದೈವ ಕೆಲಸಕ್ಕೂ ಜಂಗಮರು ಬೇಕು. ಯಾವುದೇ ಅಂತ್ಯ ಸಂಸ್ಕಾರ ಜಂಗಮರ ಮೂಲಕವೇ ಆಗಬೇಕು. ಹಾಗೆಯೇ ಸೇಡುಮಾರಿಯರು ಏನು ಮಾಡಿದರೂ ಕೂಡ ಅಂತ್ಯದಲ್ಲಿ ಅವರಿಗೆ ವೀರಶೈವ ಜಂಗಮನೊಬ್ಬನ ಅಶೀರ್ವಾದ ಬೇಕೇಬೇಕು. ಇಂಥದೊಂದು ಸಂಕರ ಯಾವ ರೀತಿಯಲ್ಲಾಯಿತೊ ಗೊತ್ತಿಲ್ಲ. ಇದು ಬಹುಶಃ ಆಗಿನ ಕಾಳಾಮುಖ ಶೈವರ ಪ್ರಭಾವದಿಂದ ಆಗಿರಲೂಬಹುದು.

ಇದಿಷ್ಟು ನಮ್ಮ ಶಿವಾಪುರದ ದೇವತೆಗಳನ್ನು ಕುರಿತದ್ದಾಯಿತು. ಇನ್ನೂ ಈ ದೇವತೆಗಳ ಮತ್ತು ನಮ್ಮೂರಿನ ಜನರ ನಡುವಿನ ಒಡನಾಟದ ಕೆಲವು ಸ್ವಾರಸ್ಯವಾದ ನಿದರ್ಶನಗಳನ್ನು ಹಾಗೂ ಮಾದರಿಗಳನ್ನು ಗಮನಿಸಬಹುದು.

ನಮ್ಮಲ್ಲಿ ಕೆಲವರು ಕೊಲೆಯ ವಿಷಯದಲ್ಲಿ ಸೇಡುಮಾರಿಯರಿಗೆ ಹರಕೆ ಹೊರುವ ಸಂಗತಿಯನ್ನು ಈ ಮೊದಲೇ ಪ್ರಸ್ತಾಪಿಸಿದ್ದೆ, ಇದಕ್ಕೆ ಸಂಬಂಧಿಸಿದಂತೆ, ಇನ್ನೊಂದು ನಂಬಿಕೆಯೂ ಉಂಟು. ಹಾಗೆ ಹರಕೆ ಹೊತ್ತವರು ಅದನ್ನು ತೀರಿಸಲೇಬೇಕು. ಇಲ್ಲದಿದ್ದ ಪಕ್ಷದಲ್ಲಿ, ಅಂಥ ಕೊಲೆಗಾರರೇನಾದರೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಲ್ಲಿ, ಅವರು ತಮ್ಮ ಹರಕೆಯನ್ನು ತೀರಿಸದೇ ಇದ್ದುದರಿಂದಲೇ ಹಾಗೆ ಪೊಲೀಸರ ಸೆರೆಯಾಗುವಂತೆ ಆ ಸೇಡು ಮಾರಿಯರು ಶಾಪ ಕೊಟ್ಟರೆಂದು ಜನರು ಆಡಿಕೊಳ್ಳುವದುಂಟು. ಹರಕೆಯನ್ನು ತೀರಿಸಿದ್ದೆ ಆದಲ್ಲಿ ಸೇಡುಮಾರಿಯರೇ ಇವರಿಗೆ ರಕ್ಷಣೆಯನ್ನು ನೀಡುತ್ತಿದ್ದರು, ತಪ್ಪಿಸಿಕೊಂಡು ಹೋಗುವ ಉಪಾಯಗಳನ್ನು ಹೇಳಿಕೊಡುತ್ತಿದ್ದರು ಎಂದೂ ಜನರು ನಂಬುವುದುಂಟು.

ನಮ್ಮೂರಿನಲ್ಲಿ ಗಡ್ಡದ ಸಿದ್ಧ ಅಂತ ಒಬ್ಬನಿದ್ದ. ಬಹಳ ಒಳ್ಳೆಯ ನಟನಾಗಿದ್ದ ಆತ. ಅಷ್ಟೇ ಒಳ್ಳೆಯ ಹಾಡುಗಾರ ಕೂಡ. ಆತ ಸಾಮಾನ್ಯವಾಗಿ ಸೀತೆಯ ಪಾತ್ರ ಮಾಡುತ್ತಿದ್ದ. ಒಮ್ಮೆ ಸೇಡುಮಾರಿಯೊಂದು ಈತನನ್ನು ಕರೆದು ಇಂಥವನೊಬ್ಬನನ್ನು ಮುಗಿಸಿ ಬಾಗ ಎಂದು ಆಜ್ಞೆ ಮಾಡಿತಂತೆ. ಒಪ್ಪಿಕೊಂಡ ಈತ ಆ ಶತ್ರುವಿಗಾಗಿ ಕಾಯುತ್ತಿದ್ದ. ಸೇಡುಮಾರಿ ಹೇಳಿದವನನ್ನು ಕೊಲ್ಲುವವರೆಗೂ ಆಕೆಯ ಹೆಸರಿನಲ್ಲಿ ಗಡ್ಡ ಬೆಳೆಸಿರುತ್ತೇನೆ ಎಂದು ಪ್ರತಿಜ್ಞೇ ಮಾಡಿ ಹಾಗೆಯೆ ಗಡ್ಡ ಬಿಟ್ಟಿದ್ದ. ಶತ್ರು ತಕ್ಷಣ ಕೈಗೆ ಸಿಗಲಿಲ್ಲವಾಗಿ ಇವನ ಗಡ್ಡ ಸಾಕಷ್ಟು ಉದ್ಧ ಬೆಳೆದು ನಿಂತಿದ್ದೂ ಆಯಿತು. ಈ ನಡುವೆ ಊರ ಜಾತ್ರೆಯ ದಿನ ಬಂದಿತು. ಜಾತ್ರಯಂದು ಆಟ ಆಡಬೇಕು. ಆಟದಲ್ಲಿ ಸೀತೆಯ ಪಾತ್ರ ಬರಬೇಕು. ಆ ಪಾತ್ರದ ನಟನಾದ ಈತ ನೋಡಿದರೆ ಉದ್ದ ಗಡ್ಡ ಬೆಳೆಸಿದ್ದಾನೆ. ಊರವರು ಬಂದು ಕೇಳೀದರೆ ಗಡ್ಡ ಬೋಳಿಸಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾನೆ. ಜನರೂ ಮೊದಲಿಗೆ ಬೇರೆ ಇನ್ಯಾರನ್ನಾದರೂ ಹುಡುಕಿ ಆ ಪಾತ್ರ ಮಾಡಿಸೋಣವೆಂದು ಪ್ರಯತ್ನಿಸಿದರು. ಆದರೆ ಅವರ ದುರಾದೃಷ್ಟಕ್ಕೆ ಯಾರೊಬ್ಬರೂ ಸಿಗಲಿಲ್ಲ. ಕೊನೆಗೆ ಅವರೆಲ್ಲ ಸೇರಿ ಮತ್ತೇ ಗಡ್ಡದ ಸಿದ್ಧನ ಬಳಿ ಹೋಗಿ ಗೋಗರೆದರು, ಪರಿಪರಿಯಾಗಿ ಬೇಡಿಕೊಂಡರು ‘ಅಪ್ಪಾ ಗಡ್ಡಾ ಬೋಳಿಸೋ. ಸೀತೆಯ ಪಾತ್ರ ನೀನೇ ಮಾಡಬೇಕು. ಇನ್ಯಾರು ದಿಕ್ಕಿಲ್ಲ’ ಎಂದೂ, ಆಗಲೂ ಆತ ಗಡ್ಡಬೋಳಿಸಲು ಒಪ್ಪಲಿಲ್ಲ. ಇವರೂ ಅವನನ್ನು ಬಿಡಲಿಲ್ಲ. ಕಡೆಗೊಂದು ಒಪ್ಪಂದದ ಮುಖಾಂತರ ಸಮಸ್ಯೆ ಪರಿಹಾರವಾಯಿತು. ಆತ ಗಡ್ಡವಿಟ್ಟುಕೊಂಡೇ ಸೀತೆಯ ಪಾತ್ರ ಮಾಡುವುದೆಂದಾಯಿತು. ಬೇರೆ ದಾರಿಯೇ ಇಲ್ಲ, ಸರಿ, ಜಾತ್ರೆ ಬಂದಿತು, ನಾಟಕವೂ ಪ್ರಾರಂಭವಾಯಿತು. ನಮಗಂತೂ ಸಿಟ್ಟು, ಇರಿಸು ಮುರಿಸು ಎಲ್ಲವೂ ಕಾಡುತ್ತಿದ್ದವು. ಇಷ್ಟುದ್ದ ಗಡ್ಡ ಬೆಳೆದಿರುವ ಸೀತೆಯನ್ನು ನೋಡಿ ಸಹಿಸಿಕೊಳ್ಳುವುದಾದರೂ ಹೇಗೆ? ಎಂದು. ಮೊದಲು ಅರ್ಧ ಗಂಟೆ ಹಾಗೆಯೇ ಆಯಿತು, ಮೈ ಪರಿಚಿಕೊಳ್ಳುವಂತಾಯಿತು. ಆದರೆ ಆಮೇಲಾದದ್ದೇ ಬೇರೆ. ನಾನು ಮೊದಲೇ ಹೇಳಿದಂತೆ ಆತ ಅಸಾಮಾನ್ಯ ನಟನಾಗಿದ್ದ. ಮೊದಲರ್ಧ ಗಂಟೆ ಕಳೆಯುತ್ತಿದ್ದಂತೆ ನಾವುಗಳ ಅವನ ಗಡ್ಡ ಗಿಡ್ಡ ಇತ್ಯಾದಿಯನ್ನೆಲ್ಲ ಮರೆತು ಬಿಟ್ಟೆವು. ಸತ್ಯವಾದ ಸೀತೆಯೆಂದು ಅವನನ್ನು ನೋಡತೊಡಗಿದೆವು. ಜೊತೆಗೆ ನಮ್ಮ ಸ್ವಂತದ ಕಲಾಪರಿಕಲ್ಪನೆಯೂ ಇಲ್ಲಿ ಕೊಂಚ ಕೆಲಸ ಮಾಡಿತು. ತಮ್ಮ ಮನದಲ್ಲಿ ಅವನ ಗಡ್ಡವನ್ನು ಕಿತ್ತುಹಾಕಿ ಅವರು ಆತನನ್ನು ನಿಜವಾದ ಸೀತೆಯೆಂದೆ ಪರಿಭಾವಿಸಿಕೊಂಡರು. ಮುಂದೆ ನಮ್ಮೂರಿನಲ್ಲೆಲ್ಲ ‘ಗಡ್ಡದ ಸೀತೆ’ ಎನ್ನುವ ಸುಪ್ರಸಿದ್ಧ ಮಾತು ಬಳಕೆಗೆ ಬಂತು.

ನಮ್ಮೂರಿನಲ್ಲಿ ಅಸಂಖ್ಯೆ ಕೊಲೆಗಳಾಗುತ್ತಿದ್ದವೇನೋ ಹೌದು. ಆದರೆ ಅಂಥಲ್ಲಿ ಕೊಲೆಗಾರರಿಗೂ ಕೆಲವು ಕಡ್ಡಾಯ ಕರ್ತವ್ಯಗಳಿರುತ್ತಿದ್ದವು. ಕೊಲೆ ಮಾಡಿದ ನಂತರ ಅವರು ತಪ್ಪಿಸಿಕೊಂಡು ಓಡಬಹುದಿತ್ತು. ತಲೆಮರೆಸಿಕೊಂಡಿರಬಹುದಿತ್ತು ಸರಿ. ಆದರೆ ಮೊತ್ತ ಮೊದಲಾಗಿ ಅವರು ತಾವು ಕೊಲೆಗೈದ ವ್ಯಕ್ತಿಯ ಹೆಣಕ್ಕೆ ಸ್ವಂತ ಕೈಯಾರೆ ಸಂಸ್ಕಾರ ಮಾಡಿ ಹೋಗಬೇಕಿತ್ತು. ಜಂಗಮನೊಬ್ಬನನ್ನು ಕರೆತಂದು ತಮ್ಮ ವೈರಿಯ ಅಂತ್ಯಕ್ರಿಯೆಗಳನ್ನು ತಾವೇ ನಡೆಸಬೇಕಿತ್ತು. ನಮ್ಮೂರಿನಲ್ಲಿ ಓಂಕಾರಪ್ಪನೆಂಬ ಜಂಗಮನಿದ್ದ. ಕೊಲೆಗಾರರು ಸಾಮಾನ್ಯವಾಗಿ ರಾತ್ರಿ ಹತ್ತು-ಹತ್ತೂವರೆಯ ನಂತರ ಬಂದು ಅವನ ಮನೆಯ ಬಾಗಿಲನ್ನು ತಟ್ಟುತ್ತಿದ್ದರು. ಬರುವಾಗ ಯಾರಿಗೂ ತಮ್ಮ ಸುಳಿವು ಸಿಕ್ಕದಿರಲೆಂದು ಅವರ ಮೀಸೆ ಗಡ್ಡ ಬೋಳಿಸಿಕೊಂಡು, ಮುಖಕ್ಕೆಲ್ಲ ಮಸಿ ಬಳಿದುಕೊಂಡು ಬರುತ್ತಿದ್ದರು. ಓಂಕಾರಪ್ಪ ಹೊರಗೆ ಬಂದ ತಕ್ಷಣ ಆತನ ಕಣ್ಣುಕಟ್ಟಿ, ಹೆಣ ಇರುವ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು.

ಅಲ್ಲಿ ಆತ ಶಾಸ್ತ್ರವಿಧಿಗಳನ್ನೆಲ್ಲ ಪೂರೈಸಿದ ನಂತರ ಮತ್ತೇ ಆತನ ಕಣ್ಣುಕಟ್ಟಿ ಮನೆಗೆ ತಂದು ತಲುಪಿಸುತ್ತಿದ್ದರು. ಇದು ಇಬ್ಬರಿಗೂ ಕ್ಷೇಮವಾಗಿತ್ತು. ಅವರಿಗೆ ತಮ್ಮ ಗುರುತು ಬಿಟ್ಟುಕೊಟ್ಟು ಭಯವಿಲ್ಲ. ಹೀಗೇ ನಡೆದು ಕೊನೆಗೆ ರಾತ್ರಿಯ ವೇಳೆಯೇನಾದರೂ ಬಾಗಿಲ ಬಡಿದ ಸದ್ದು ಕೇಳಿ ಬಂದರೆ ಈ ಓಂಕಾರಪ್ಪ ಹೇಗೂ ಕಣ್ಣುಕಟ್ಟಿ ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯಲೆಂದೇ ಬಂದಿದ್ದಾರೆ. ಅವರ ಕೈಯಲ್ಲಿ ಕಣ್ಣುಕಟ್ಟಿಸಿಕೊಳ್ಳುತ್ತ ಸುಮ್ಮನೆ ಯಾಕೆ ಅವಸ್ಥೆ ಪಡುವುದು, ಸಮಯ ವ್ಯರ್ಥ ಮಾಡುವುದು ಎಂದುಕೊಂಡು ತನ್ನ ಕಣ್ಣು ತಾನೇ ಕಟ್ಟಿಕೊಂಡು ಪೂರ್ಣ ತಯಾರಾಗಿಯೆ ಬಾಗಿಲು ತೆರೆಯುತ್ತಿದ್ದ.

ಸೇಡುಮಾರಿಯರು ಇಷ್ಟಾರ್ಥಗಳನ್ನು ಪೂರೈಸಿದ ನಂತರ ಜನರು ಅವರಿಗೆ ನಾನಾ ಬಗೆಯ ಕಾಣಿಕೆಗಳನ್ನು ಒಪ್ಪಿಸುತ್ತಾರೆ: ಬೆಳ್ಳಿ ಕಣ್ಣುಗಳನ್ನು, ಬಂಗಾರದ ಮೀಸೆಗಳನ್ನು ನೀಡುತ್ತಾರೆ. ಆಶ್ಚರ್ಯವೆಂದರೆ ಸೇಡುಮಾರಿಯರು ಸ್ತ್ರೀಯರಾದರೂ ಅವರಿಗೆ ಮೀಸೆಗಳಿರುತ್ತವೆ. ಹಾಗೆಯೇ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಗೆಲ್ಲಬೇಕೆಂದರೆ ಅದು ಸೇಡುಮಾರಿಯರ ಆಶೀರ್ವಾದದಿಂದ ಮಾತ್ರ ಸಾಧ್ಯವೆಂಬ ನಂಬಿಕೆಯೂ ಇದೆ. ಇಂಥ ಸೇಡುಮಾರಿಯರು ಕೆಲವೊಮ್ಮೆ ನಮ್ಮ ಹರಕೆಗಳನ್ನೆಲ್ಲಾ ಪಡೆದ ಮೇಲೂ ಇಷ್ಟಾರ್ಥಗಳನ್ನು ಪೂರೈಸದೆ ಹೋಗಬಹುದು. ಆಗ ನಮಗೆ ಅವರನ್ನು ಅವಮಾನಿಸುವ ಅಧಿಕಾರವುಂಟು. ಒಂದು-ದೇವಸ್ಥಾನದ ಬಾಗಿಲಿಗೆ ಅವರ ಬೆನ್ನು ತಿರುಗಿಸಿ ಇಟ್ಟು ಯಾರೂ ದೇವಸ್ಥಾನದ ಒಳಗೆ ಹೋಗದಂತೆ ಬಾಗಿಲಲ್ಲಿ ಬೇಲಿ ಬಿಗಿಯಬಹುದು. ಎರಡು-ಅವರ ಮೇಲೆ ಸಗಣಿ ಮತ್ತು ಮೆಣಸು ಬೆರೆಸಿದ ನೀರನ್ನು ಹೊಡೆದು ಚೆಲ್ಲಬಹುದು. ಹೀಗೆ ಮಾಡಿದ ಮೇಲೆ ಎಂಟು ದಿನಗಳೊಳಗೆ ಅವರು ನಮ್ಮ ಆಸೆಗಳನ್ನು ಖಂಡಿತಾ ನೆರವೇರಿಸುತ್ತಾರೆ ಎನ್ನುವ ನಂಬಿಕೆಯಿಂದೆ. ಈ ರೀತಿ ನಮ್ಮಲ್ಲಿ ಸೇಡುಮಾರಿಯರ ಪ್ರಭಾವವೇ ಹೆಚ್ಚು.

ಒಮ್ಮೆ ಹೀಗಾಯಿತು; ನಮ್ಮ ಊರಿನ ಹತ್ತಿರ ಹಿಡಕಲ್ ಅಣೆಕಟ್ಟನ್ನು ಕಟ್ಟತೊಡಗಿದ್ದರು. ಆಗ ಒಬ್ಬನ ಮೈದುಂಬಿ ಬಂದ ಸೇಡುಮಾರಿಯೊಬ್ಬಳು ‘ಅವರು ಅಣೆಕಟ್ಟನ್ನು ಕಟ್ಟುತ್ತಿದ್ದ ಹಾಗೆ ಅವರ ಕಣ್ಣುಗಳನ್ನು ನಾನು ಕಳೆಯುತ್ತ ಹೋಗುತ್ತೇನೆ, ನೋಡುತ್ತೀರಿ’ ಎಂದು ಸಾರಿದಳು. ಕಟ್ಟೆಯನ್ನು ಕಟ್ಟಿ ಆಯಿತು. ಆದರೆ ಕಟ್ಟಿದವರ ಕಣ್ಣು ಹೋದದ್ದು ನನಗಂತೂ ಕಂಡಿಲ್ಲ. ಇನ್ನೂ, ಅಲ್ಲಿ ಆ ಕಾಲಕ್ಕೆ ಕೆಲಸ ನಡೆಸುತ್ತಿದ್ದ ಇಂಜಿನಿಯರುಗಳು ಕೆಲವು ಸಮಯದ ನಂತರ ವರ್ಗಾವಣೆಯಾಗಿ ಬೇರೆ ಊರುಗಳಿಗೆ ಹೋಗುತ್ತಿದ್ದರು. ಅಲ್ಲಿ ಅವರ ಕಣ್ಣಿನ ಗತಿ ಏನಾಯಿತೆಂಬುವುದು ನನಗೆ ತಿಳಿದಿಲ್ಲ. ಅದಿರಲಿ, ಆಣೆಕಟ್ಟು ಪೂರ್ತಿಯಾದ ಕೆಲವು ದಿನಗಳ ನಂತರ ಇದೇ ಸೇಡುಮಾರಿ ತಾನೇ ಅದನ್ನು ಕಟ್ಟಿರೆಂದು ಹೇಳಿದ್ದು ಎಂದು ಸಾರತೊಡಗಿದಳು. ಈಗಂತೂ ಕೆಲವು ಸೇಡುಮಾರಿಯರು ಇದೇ ಆಣೆಕಟ್ಟಿನ ನೆಪದಲ್ಲಿ ನಮ್ಮನ್ನು ಬೆದರಿಸಲೂ ತೊಡಗಿದ್ದಾರೆ. ನಾನು ಒಂದೇ ಒಂದು ಕಲ್ಲು ತೆಗೆದರೆ ಸಾಕು, ಇಡೀ ಅಣೆಕಟ್ಟೆ ಒಡೆದುಹೋಗುತ್ತದೆ, ‘ನೀವೆಲ್ಲ ನೀರುಪಾಲಾಗಿ ನಾಶವಾಗುತ್ತೀರಿ ಎಚ್ಚರಿಕೆ!’

ಸೇಡುಮಾರಿಯರಿಗಿಂತ ತೀರಾ ಭಿನ್ನವಾದ ವರ್ಗಕ್ಕೆ ಸೇರಿದ ಯಕ್ಷಿಣಿಯರು ಬಹು ಸುಂದರವಾದ ದೇವತೆಗಳು. ಇವರು ಹಸಿರು ಕಣ್ಣಿನವರು, ಕೆಂಪು ಬಾಯಿಯವರು, ಮುಗಿಲಿಗೆ ಮೂರು ಗೇಣು ಮಾತ್ರ ಕಮ್ಮಿಯಿರುವಷ್ಟು ಎತ್ತರದ ಆಲದ ಮರಗಳಲ್ಲಿರುವವರು. ಸಂಪೂರ್ಣ ಬಿಳಿಮೈಯ ಇವರು ತಮ್ಮ ಬಿಳಿರೆಕ್ಕೆಗಳನ್ನು ಬೀಸುತ್ತಾ ಆಗಸದಲ್ಲಿ ಸಂಚರಿಸಬಲ್ಲರು. ಅವರ ಹಸಿರುಕಣ್ಣಿನಿಂದ ಬೆಳದಿಂಗಳು ಮೂಡುತ್ತದೆ, ಅವರಿಗೆ ಸ್ವಂತ ಬೆಳದಿಂಗಳು, ಸ್ವಯಂಪ್ರಕಾಶ ಇದೆ ಎನ್ನುವ ಪ್ರತೀತಿಯುಂಟು. ಯಕ್ಷಿಯರಿಗೆ ಮಕ್ಕಳೆಂದರೆ ತುಂಬ ಪ್ರೀತಿಯಂತೆ. ಮಕ್ಕಳು ನಿದ್ದೆಯಲ್ಲಿದ್ದಾಗ ಯಕ್ಷಿಯರು ಬಂದು ಅವರೊಂದಿಗೆ ಆಟವಾಡುತ್ತಾರೆ, ಅವರನ್ನು ನಗಿಸುತ್ತಾರೆ. ಅದಕ್ಕಾಗಿ ಮಕ್ಕಳು ಕೆಲವೊಮ್ಮೆ ನಿದ್ದೆಯಲ್ಲಿ ನಗುತ್ತಿರುವುದು ಎಂಬ ನಂಬಿಕೆಯುಂಟು. ಇವರು ನಮ್ಮ ಕವಿ-ಕಲಾವಿದರ-ಲಾವಣಿಕಾರರಿಗೆಲ್ಲ ಬಹುಪ್ರಿಯವಾದವರು. ಸಾಮಾನ್ಯವಾಗಿ ಯಕ್ಷಿಯರು ಕನಸುಗಳಲ್ಲಿ ಕಾಣಿಸಿಕೊಂಡು ಕಲಾವಿದರಿಗೆ ಸ್ಪೂರ್ತಿಯನ್ನು ಕಲೆಯ ವಸ್ತುಗಳನ್ನೂ ನೀಡಿ ಹೋಗುತ್ತಾರೆ ಎಂದು ನಮ್ಮ ಜನ ಹೇಳುತ್ತಾರೆ. ಗೋಕಾಕದಲ್ಲಿ ಸಾತು ಕ್ಯಾಮಣ್ಣ ಎನ್ನುವ ಪ್ರಸಿದ್ಧ ಲಾವಣಿಕಾರನಿದ್ದ. ಅಷ್ಟು ಸುಂದರವಾದ ಲಾವಣಿಗಳನ್ನು ಬರೆಯುವಲ್ಲಿ ಆತನಿಗೆ ಯಕ್ಷಿಯೊಬ್ಬಳ ಅನುಗ್ರಹವಿತ್ತು ಎಂದೇ ಜನರು ತಿಳಿದಿದ್ದರು.

ಅದೇ ರೀತಿ ಕೌಜಲಗಿ ನಿಂಗಮ್ಮ ಎನ್ನುವ ಸುವಿಖ್ಯಾತ ಪಾರಿಜಾತದ ಕಲಾವಿದೆಯೊಬ್ಬಳಿದ್ದಳು. ಆಕೆ ಎಷ್ಟು ದೊಡ್ಡ ಕಲಾವಿದೆಯೆಂದರೆ ಆಕೆಯನ್ನು ಪ್ರತ್ಯಕ್ಷ ನೋಡುವ ಮೊದಲೆ, ಆಕೆಯನ್ನು ನಮ್ಮ ಅಪ್ಪ ವರ್ಣಿಸುತ್ತಿದ್ದುದನ್ನು ಕೇಳಿಯೆ ನಾನು ಅವಳ ಬಗ್ಗೆ ಅದ್ಭುತವಾದೊಂದು ಚಿತ್ರವನ್ನು ಕಟ್ಟಿಕೊಂಡಿದ್ದೆ. ದೇಹದ ಮಟ್ಟಿಗೆ ಆಕೆ ತೀರಾ ಅನಾಕರ್ಷಕಳಾಗಿದ್ದಳು. ತೀರಾ ಕರ್ರಗಿನ ಆಕೆಯ ದೇಹದ ಕಣ್ಣು-ಕನ್ನೆಗಳೆಲ್ಲ ಬಾಡಿ ಹೋಗಿದ್ದವು. ಅಂಥಾ ಆಕೆ ಕೊಂಚವೂ ಬಣ್ಣ ಹಚ್ಚಿಕೊಳ್ಳದೇ, ಇದ್ದ ರೀತಿಯಲ್ಲೇ ಬಂದು ರಂಗದ ಮೇಲೆ ನಿಂತು ‘ಕೃಷ್ಣಾ…’ ಎಂದು ಹಾಡತೊಡಗಿದಾಗ ಮಾತ್ರ ಎದುರಿಗೆ ಕುಳಿತ್ತಿದ್ದವರಿಗೆಲ್ಲ ಆಕೆಯ ಆ ಎರೇಮಣ್ಣಿನ ಮೈ ಕರಗಿ ಅದರೊಳಗಿಂದ ಸಾಕ್ಷಾತ್ ಯಕ್ಷಿಯೊಬ್ಬಳು ಮೂಡಿನಿಂತು ಹಾಡತೊಡಗಿದಂತೆ ಅನಿಸುತ್ತಿತಂತೆ. ಕೊನೆಗೆ ಆಕೆ ಮನುಷ್ಯ ಮಾತ್ರೆಯಲ್ಲ, ಸಾಕ್ಷಾತ್ ಯಕ್ಷಿಯ ಅವತಾರವೆಂದು ಜನರು ನಂಬಿದ್ದರಂತೆ. ಒಮ್ಮೆ ಅವಳೊಳಗಿನ ಆ ಯಕ್ಷಿಯನ್ನು ಕಂಡು ಸಂಮೋಹಿತನಾದ ನಮ್ಮ ಊರಿನ ಒಬ್ಬಾತ ಥಟ್ಟನೆ ಎದ್ದು ಹೋಗಿ ಆಕೆಯ ಕೈ ಹಿಡಿದು ‘ಬಾ ನನ್ನ ಜೊತೆಗೆ, ನಿನ್ನ ಮಾಡಿಕೊಳ್ಳುತೀನಿ’ ಎಂದು ಬಡಬಡಿಸಿದನಂತೆ. ಆಕೆ ಕೈ ಬಿಡಿಸಿಕೊಳ್ಳುತ್ತ ‘ಹುಚ್ಚಾ, ಕೃಷ್ಣ ಮುಟ್ಟಿದ ಗಡಿಗೆ ಇದು. ಇದನ್ನು ಏನು ಪಡೀತಿಯೋ ನೀನು?’ ಅಂದಳಂತೆ. ಇವನೂ ದೊಡ್ಡ ಮನುಷ್ಯನೇ. ತಕ್ಷಣ ಆಕೆಯ ಮಾತುಗಳ ಮಹತ್ತಿಕೆಯ ಅರಿವಾಗಿ ಅಲ್ಲಿಯೇ ಕಾಲಿಗೆ ಬಿದ್ದು ‘ತಾಯೀ, ನನ್ನನ್ನು ಕ್ಷಮಿಸು’ ಎಂದನಂತೆ, ಅಂಥಾ ಯಕ್ಷಿಯ ಅವತಾರ ಆ ಕೌಜಲಗಿ ನಿಂಗಮ್ಮ.

ನಮ್ಮ ದೇವತೆಗಳಲ್ಲೆಲ್ಲ ಸೇಡುಮಾರಿಯರು ಮತ್ತು ಯ್ಷಕಿಯರು ಮನುಷ್ಯರೊಂದಿಗೆ ನೇರವಾದ ಸಂಬಂಧವನ್ನು ಇಟ್ಟುಕೊಂಡಿರುವಂಥವರು. ಇವರು ಕೆಲವರು ಮಾನವರೊಡನೆ ಮದುವೆಯೂ ಆಗುತ್ತಾರೆ. ಕೆಲವು ಸೇಡುಮಾರಿಯರು ತಮ್ಮ ಮಾನವ ಭಕ್ತರಿಗೆ ಸೇಂದಿ, ಮಾಂಸ, ಗಾಂಜಾ, ಇತ್ಯಾದಿಗಳನ್ನೆಲ್ಲ ನೀಡಿ ಅವರನ್ನು ಒಲಿಸಿಕೊಳ್ಳುವರು ಎನ್ನುವ ಕಲ್ಪನೆಗಳು ನಮ್ಮಲ್ಲುಂಟು. ಇನ್ನು ಕೆಲವು ಸೇಡುಮಾರಿಯರು ಮನುಷ್ಯರನ್ನು ಮದುವೆ ಮಡಿಕೊಳ್ಳುತ್ತಾರಂತೆ. ಅಂಥ ಒಂದು ಕಥೆಯ ಪ್ರಕಾರ ಸೇಡುಮಾರಿಯೊಬ್ಬಳು ಗೌಡನ ಮಗಳ ವೇಷ ಹಾಕಿ ಮಾನವನೋರ್ವನನ್ನು ಮದುವೆಯಾಗಿ ಮನೆಗೆ ಬಂದಳಂತೆ. ರಾತ್ರಿ ಎಲ್ಲರೂ ಮಲಗಿದ್ದಾಗ ಎದ್ದು ಬಂದು ಒಂದು ದನವನ್ನು ತಿಂದು ಹಾಕುತ್ತಿದ್ದಳಂತೆ. ಮನೆಯವರು ಬೆಳಿಗ್ಗೆ ಎದ್ದು ನೋಡಿದರೆ ದನವಿಲ್ಲ. ಅದರ ಎಲುಬು ಮಾತ್ರವಿದೆ. ಹೀಗೆಯೆ ನಿತ್ಯ ನಡೆದು ಕೊನೆಗೆ ಮನೆಯಲ್ಲಿ ದನವೊಂದೂ ಉಳಿಯಲಿಲ್ಲ. ಆಗ ಗಂಡ ಇನ್ನು ಈ ಅದೃಶ್ಯ ವೈರಿ ತಮ್ಮನ್ನೇ ತಿಂದು ಹಾಕಬಹುದು ಎಂದು ರಾತ್ರಿ ಸಿದ್ಧನಾಗಿ ಕಾದು ಕುಳಿತ. ಆಗ ನೋಡಿದರೆ ತನ್ನ ಮಡದಿಯೇ ಸೇಡುಮಾರಿಯಾಗಿ ಅಲ್ಲಿಗೆ ಬಂದಳು… ಇನ್ನೊಂದು ಕಥೆಯ ಪ್ರಕಾರ ರಾಜಕುಮಾರಿಯೊಬ್ಬಳ ಮೈಯಲ್ಲಿ ಸೇಡುಮಾರಿ ಬಂದು ಸೇರಿಕೊಂಡಿತು. ಆದರೆ ಬಾಹ್ಯದಲ್ಲೆಲ್ಲೂ ಅದರ ಲಕ್ಷಣ ಕಾಣುತ್ತಿರಲಿಲ್ಲ. ರಾಜಕುಮಾರಿಗೆ ಮದುವೆಯಾಯಿತು. ದುರಾದೃಷ್ಟಕ್ಕೆ ಮೊದಲನೆ ದಿನವೆ ಗಂಡ ತೀರಿಕೊಂಡ. ವಿಧವೆ ರಾಜಕುಮಾರಿ ಮತ್ತೆ ಮದುವೆಯಾದಳು. ಮತ್ತೆ ಎರಡನೆ ಗಂಡನೂ ಮೊದಲನೆಯ ದಿನವೇ ತೀರಿಕೊಂಡ. ಇದೇ ರೀತಿ ಹತ್ತೆಂಟು ಬಾರಿಯಾಯಿತು. ಕೊನೆಗೆ ಜನರಿಗೆ ತಿಳಿಯಿತು. ರಾಜಕುಮಾರಿ ಒಬ್ಬ ಸೇಡುಮಾರಿ. ನಿದ್ರೆ ಮಾಡುತ್ತಿದ್ದಾಗ ಅವಳ ಮೂಗಿನಿಂದ ಎರಡು ವಿಷಸರ್ಪಗಳು ಹೊರ ಬಂದು ಗಂಡನನ್ನು ಕಡಿದು ಸಾಯಿಸಿ ಮತ್ತೇ ಮೂಗಿನೊಳಕ್ಕೆ ಸೇರಿಕೊಳ್ಳುತ್ತಿದ್ದವು, ಇತ್ಯಾದಿಯಾಗಿ. ಹೀಗೆ, ಸೇಡುಮಾರಿಯರು ಮಾನವರ ಅಸೆಗಳನ್ನು ಪೂರೈಸುವರು, ಕೆಲವೊಮ್ಮೆ ಅವರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿರುವವರು, ಅವರನ್ನು ಮದುವೆಯಾಗಿ ಸಂಸಾರ ಸಾಗಿಸುವಂಥವರು-ಎಂದೆಲ್ಲ ನಮ್ಮ ಕಥೆಗಳಲ್ಲಿ ಚಿತ್ರಿತವಾಗಿದೆ. ಅಂದರೆ ಅಷ್ಟು ಆಳವಾಗಿ ಅವರು ಮನುಷ್ಯರ ಜೀವನದಲ್ಲಿ ಬೆರೆತುಹೋಗಿರುವಂಥದು.

ಯಕ್ಷಿಯರು ನಮ್ಮ ಕನಸುಗಳಲ್ಲಿ ಮಾತ್ರ ಬರುವಂಥವರು. ಇದರ ಬಗ್ಗೆ ಸುಂದರವಾದ ಜಾನಪದ ಕಥೆಯೊಂದಿದೆ. ಓರ್ವ ಗಾಡಿ ಕಟ್ಟಿಕೊಂಡು ಪರವೂರಿಗೆ ಹೋಗಿದ್ದ. ಮರಳಿ ಬರುವಾಗ ತುಂಬಾ ತಡವಾಯಿತು. ಸುಮಾರು ಮಧ್ಯರಾತ್ರಿಯೆ ಆಗಿಬಿಟ್ಟಿತು. ‘ಎತ್ತುಗಳು ಹೇಗೂ ದಾರಿ ತಿಳಿದಂಥವು ಮನೆಗೆ ಮರಳಿ ಹೋಗುತ್ತವೆ’ ಎಂದು ಈತ ಗಾಡಿಯಲ್ಲಿಯೇ ಹಾಯಾಗಿ ಮಲಗಿಬಿಟ್ಟ. ಕೊಂಚ ಹೊತ್ತು ಬಿಟ್ಟು ಎಚ್ಚೆತ್ತು ನೋಡಿದರೆ ಸುತ್ತೆಲ್ಲ ಜಾತ್ರೆ, ದೊಡ್ಡ ಜಾತ್ರೆ ಎದುರುಗಡೆ ಬಯಲಾಟ ನಡೆಯುತ್ತಿತ್ತು. ನೋಡಿಯೇ ಹೋಗೋಣವೆಂದು ಈತ ಜನರೊಡನೆ ಕುಳಿತುಬಿಟ್ಟ. ಹೀಗೆ ಆಟ ನೋಡುತ್ತಿರುವಾಗ ಅವನ ಹೆಂಡತಿ ಅಕಸ್ಮಾತ್ತಾಗಿ ಅಲ್ಲಿಗೆ ಬಂದುಬಿಟ್ಟಳು. ಇಬ್ಬರೂ ಕುಳಿತು ಬಯಲಾಟ ನೋಡಿದರು, ನಂತರ ಬಂಡಿಯಲ್ಲಿ ಮಲಗಿದರು. ಬೆಳಿಗ್ಗೆ ಆತ ಎದ್ದು ನೋಡಿದರೆ ಹೆಂಡತಿಯೂ ಇಲ್ಲ, ಬಯಲಾಟವೂ ಇಲ್ಲ ಜಾತ್ರೆಯೂ ಇಲ್ಲ. ರಾತ್ರೆ ಕಂಡದ್ದೆಲ್ಲ ಕನಸೆಂದೂ ಕನಸಿನಲ್ಲಿ ಬಂದವಳು ಯಕ್ಷಿಯೆಂದೂ ಅವನಿಗೆ ಆಮೇಲೆ ಅರಿವಾಯಿತು.

ಯಕ್ಷಿಯರ ಕನಸುಗಳಿಗೆ ಅವುಗಳದ್ದೇ ಆದ ಒಂದು ಭಾಷೆಯಿದೆ. ಬಸಿರಿಯರ ಕನಸಿನಲ್ಲಿ ಯಕ್ಷಿ ಬಂದು ಯಾವುದಾದರೂ ಕಾಯಿ ತೋರಿಸಿದರೆ ಗಂಡುಮಗುವಾಗುತ್ತದಂತೆ, ಹಣ್ಣು ತೋರಿಸಿದರೆ ಹೆಣ್ಣಾಗುತ್ತದಂತೆ. ಹೀಗೆಯೇ, ಗಿಣಿ ತೋರಿಸಿದರೆ ಒಂದು ಫಲ, ಹಾವು ತೋರಿಸಿದರೆ ಇನ್ನೊಂದು ಫಲ, ಹೊಸ ಬಟ್ಟೆಗೆ ಮತ್ತೊಂದು ರೀತಿಯ ಫಲಪ್ರಾಪ್ತಿಯಿದೆ. ಹೀಗೆ ಈ ಯಕ್ಷಿಯರು ಎಲ್ಲರಿಗೂ ಪ್ರೀತಿಪಾತ್ರರಾದಂಥ ದೇವತೆಯರು.

ಇನ್ನೂ ನಮ್ಮೂರಿನಲ್ಲಿ ಕೆಲವು ಕ್ರೈಸ್ತ ದೇವತೆಯರೂ ಇದ್ದಾರೆ. ಕ್ರೈಸ್ತ ಪಾದ್ರಿಗಳು ತಮ್ಮೊಡನೆ ಕರೆತಂದ ದೇವತೆಗಳಿವರು. ನಮ್ಮ ಚಿಕ್ಕಂದಿನಲ್ಲಿ ಪಾದ್ರಿಗಳನ್ನು ಕಂಡಾಗಲೆಲ್ಲ ವಿಪರೀತ ಕೋಪವೇರಿ ನಾವು ಅವರ ಮೇಲೆ ಏರಿಹೋಗುತ್ತಿದ್ದೆವು. ಪಾದ್ರಿಗಳು ಭಾರತದ ಎಲ್ಲೆಡೆ ಸರ್ವಸಾಮಾನ್ಯವಾಗಿ ಬಳಸುತ್ತಿದ್ದ ಕಥೆ ನಿಮಗೆಲ್ಲ ತಿಳಿದಿರಲೇಬೇಕು. ಬೆಕ್ಕೊಂದು ಇಲಿಯೊಂದನ್ನು ಅಟ್ಟಿಸಿಕೊಂಡು ಹೋಯಿತು. ಓಡೋಡಿ ದಣಿದ ಆ ಇಲಿ ಕೊನೆಗೊಮ್ಮೆ ನಿಮ್ಮ ಬ್ರಹ್ಮನ ಬಳಿ ಹೋಗಿ ಮೊರೆಯಿಟ್ಟಿತು. ನಿಮ್ಮ ಬ್ರಹ್ಮನು ಅದನ್ನು ಕಾಪಾಡಿದನೆ? ಇಲ್ಲ, ಇಲ್ಲ. ಇಲಿ ಆಗ ಶಿವನ ಬಳಿ ಹೋಯಿತು. ನಿಮ್ಮ ಶಿವನು ಅದನ್ನು ಕಾಪಾಡಿದನೆ? ಇಲ್ಲ, ಇಲ್ಲ. ಕೊನೆಗೆ ಇಲಿ ನಮ್ಮ ಕ್ರಿಸ್ತನ ಬಳಿ ಬಂದಿತು. ಆಗ ನಮ್ಮ ಕ್ರಿಸ್ತನು ಅದನ್ನು ಕಾಪಾಡಿದನು… ಎಂದು ಪಾದ್ರಿಗಳು ಕಥೆ ಮುಗಿಸುವ ಮೊದಲೆ ನಾವು ‘ನಿಮ್ಮ ಕ್ರಿಸ್ತನು’ ಇಲಿಯನ್ನು ಕೊಂದನು. ಬೆಕ್ಕನ್ನು ತಿಂದನು’ ಎಂದು ಬಾಯಿ ಹಾಕುತ್ತಿದ್ದೆವು.

* * *