ಸಮಾಜದಲ್ಲಿ ಸಾಹಿತ್ಯದ ಔಚಿತ್ಯ ಏನು ಎಂಬ ಪ್ರಶ್ನೆಯು ಈ ಶತಮಾನದಲ್ಲಿ ಮಾತ್ರವೇ ಕೇಳಿ ಬರುತ್ತಿದೆ. ಸಾಹಿತ್ಯವನ್ನು ಭಾರತೀಯ ಸಂದರ್ಭದಲ್ಲಿ, ಮನರಂಜನೆಯ ಒಂದು ರೂಪವಾಗಿ ಮಾತ್ರವಲ್ಲ, ಜ್ಞಾನ ಮತ್ತು ಅಧಿಕಾರದ ರೂಪವಾಗಿ ಕೂಡ ಪರಿಗಣಿಸಲಾಗುತ್ತಿದೆ. ರಾಮಾಯಣ ಮತ್ತು ಮಹಾಭಾರತಗಳಂಥ ಮಹಾಕಾವ್ಯಗಳು ಜ್ಞಾನದ ಮತ್ತು ರಾಜಕೀಯ ಶಕ್ತಿಯ ಬತ್ತದ ಮೂಲಗಳಾಗಿವೆ. ನಮ್ಮ ಶತಮಾನದಲ್ಲಿ ಮಾತ್ರವೇ, ಪಾಶ್ಚಾತ್ಯ ಮಾದರಿಯ ಶಿಕ್ಷಣದ ಪ್ರಭಾವದಿಂದಾಗಿ, ನಾವು ಜ್ಞಾನಕ್ಕಾಗಿ ಭೌತ ಹಾಗೂ ಮಾನವ ವಿಜ್ಞಾನಗಳನ್ನು ಅವಲಂಬಿಸತೊಡಗಿದ್ದೇವೆ. ಈಗ ಸಾಹಿತ್ಯದ ಕಾರ್ಯ ಮತ್ತು ವ್ಯಾಪ್ತಿ ಅನುದಿನದ ಬದುಕಿನ ಚಟುಟಿಕೆಗಳಲ್ಲಿ ಅರ್ಥಪೂರ್ಣ ಆಸಕ್ತಿಯನ್ನು ಸೃಷ್ಟಿಸುವಷ್ಟಕ್ಕೆ ಮಾತ್ರ ಸೀಮಿತಗೊಂಡಿದೆ. ಹಾಗಾಗಿ ಬದುಕಿನಲ್ಲಿ ಸಾಹಿತ್ಯದ ಔಚಿತ್ಯದ ಸಮಸ್ಯೆ ಉಂಟಾಗಿದೆ. ಈ ಶತಮಾನದ ಸಾಹಿತ್ಯಕ ಸಿದ್ಧಿಗಳು ಬಹು ಮಹತ್ವಪೂರ್ಣವಾದವು ಎಂಬುವುದನ್ನು ಅಲ್ಲಗಳೆಯುಂವತಿಲ್ಲ. ಸೃಜನಶೀಲ ಬರವಣಿಗೆಯ ಕ್ಷೇತ್ರದಲ್ಲಿ ಕೆಲವು ಮಹತ್ವದ ಪ್ರಯೋಗಗಳನ್ನು ಮಾಡಿದ್ದೇವೆಂದು ನ್ಯಾಯವಾಗಿಯೇ ನಾವು ಹೆಮ್ಮೆಪಡಬಹುದು. ನಮ್ಮಸೃಜನಶೀಲ ಲೇಖಕರು ಸಾಹಿತ್ಯಕ್ಕೆ ಹೊಸ ಆಕಾರವನ್ನು ಕೊಡಲು ಸಮರ್ಥರಾಗಿದ್ದಾರೆ. ಕಾದಂಬರಿ, ಜೀವನ ಚರಿತ್ರೆ ಮತ್ತು ಪ್ರವಾಸ ಕಥನಗಳಂತಹ ನೂತನ ಸೃಜನಶೀಲ ರೂಪಗಳನ್ನು ಎರವಲು ಪಡೆದುಕೊಂಡಿದ್ದೇವೆ. ನಮ್ಮ ಸಾಹಿತ್ಯ ವಿಮರ್ಶೆಯು ಹೆಚ್ಚುಕಡಿಮೆ ನೂತನ ಬರವಣಿಗೆಯ ಪರವಾಗಿಯೇ ನಿಲ್ಲುತ್ತದೆ. ಸಾಹಿತ್ಯವು ಆಧುನಿಕ ಸಮಾಜದ ಮಾನಸಿಕ ಹಾಗೂ ರಾಜಕೀಯ ಅತ್ಯಗಳನ್ನು ಪೂರೈಸಲು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕೆಂದೇ ಅದು ಅಭಿಪ್ರಾಯಪಡುತ್ತದೆ.

ಇಷ್ಟೆಲ್ಲಾ ಇದ್ದರೂ ಸಮಾಜದಲ್ಲಿ ಸಾಹಿತ್ಯದ ಔಚಿತ್ಯ ಏನು ಎಂಬ ಬಗೆಗೆ, ಸಂದೇಹ ಹೆಡೆಯಾಡಿಸುತ್ತಲೇ ಇದೆ. ತಾತ್ವಿಕವಾಗಿ ಹೇಳುವುದಾದರೆ, ಸಾಹಿತ್ಯ ಮತ್ತು ವಿಜ್ಞಾನಗಳು ಧರ್ಮದೊಂದಿಗೆ ಸೇರಿ ಸಮಾಜದ ಪೂರ್ಣ ವಿಕಾಸಕ್ಕೆ ಅಗತ್ಯ ಎನ್ನುವುದು ಸರಿಯೇ. ಆದರೆ ನಮ್ಮ ದೇಶದ ವಾಸ್ತವ ಪರಿಸ್ಥಿತಿಗಳು ಬೇರೆ ದೇಶಗಳಿಗಿಂತ ಬಿನ್ನವಾದವು. ಉದಾಹರಣೆಗೆ, ಶಿಷ್ಟ ಸಮಾಜಗಳು ಮತ್ತು ಬುಡಕಟ್ಟುಗಳು ನಮ್ಮ ದೇಶದಲ್ಲಿ ಜೊತೆ ಜೊತೆಯಾಗಿ ಬದುಕಿವೆ. ಆದರೆ ಒಂದರ ಪ್ರಗತಿ ಇನ್ನೊಂದರ ಅವಸಾನವಾಗಿದೆ. ಆದರೂ ಬುಡಕಟ್ಟುಗಳು ತಮ್ಮದೇ ಆದ ಮೌಖಿಕ ಕಾವ್ಯಗಳನ್ನೂ ಹೊಂದಿವೆ. ಅವುಗಳ ಇತಿಹಾಸವನ್ನೂ ಯಾರೂ ಬರೆದಿಟ್ಟಿಲ್ಲ. ಶಿಷ್ಟ ಸಮಾಜಗಳಿಗಾದರೆ ಪರಂಪರೆಯ ಸುಧೀರ್ಘ ಇತಿಹಾಸವಿದೆ. ನಮ್ಮದೇಶಕ್ಕೆ ಇರುವುದು ಒಂದು ಇತಿಹಾಸವಲ್ಲ, ಹಲವಾರು ವಿವಿಧ ಪ್ರದೇಶಗಳು ಈಗಲೂ ಬೇರೆ ಬೇರೆ ಸ್ಥಳೀಯ ಪಂಚಾಂಗಗಳನ್ನು ಅನುಸರಿಸುತ್ತವೆ.

ಕಳೆದ ಶತಮಾನದಲ್ಲಿ ಬ್ರಿಟಿಷ್ ಆಡಳಿತವು ರಾಜಕೀಯ ಇತಿಹಾಸದ ಒಂದು ಮಾದರಿಯನ್ನು ನಮ್ಮ ಮೇಲೆ ಹೇರಿತು. ಅದು ನಮ್ಮ ದೇಶದ ರಾಜಕೀಯ ಮತ್ತು ಭೌಗೋಳಿಕ ಐಕ್ಯತೆಯನ್ನು ವ್ಯಕ್ತಪಡಿಸಿದ್ದು ನಿಜ. ಆದರೆ ನಮ್ಮ ದಾಸ್ಯದ ಸಂಕೇತವಾಗಿದ್ದ ಆ ಐಕ್ಯತೆಯ ವಿರುದ್ಧವಾಗಿ ಜನರು ಉಗ್ರ ಪ್ರತಿಕ್ರಿಯೆ ತೋರಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ನಾವು ಇತಿಹಾಸವನ್ನು ನಿರ್ಮಿಸಿದೆವು, ತತ್ಕಾಲಕ್ಕೆ ಪ್ರತಿಭಟನೆಯು ಏಕೀಕೃತವಾಯಿತು. ಆದರೆ ಸ್ವಾತಂತ್ರ್ಯಾನಂತರ ಐಕ್ಯತೆ ಪರಿಕಲ್ಪನೆ ಹೆಚ್ಚು ಹೆಚ್ಚು ಅಮೂರ್ತವಾಯಿತು. ಖಚಿತ ವಾಸ್ತವತೆಯೇ ಬೇರೆ ಆಯಿತು. ಈ ಶತಮಾನದ ಸಾಹಿತ್ಯವು ಪಾಶ್ಚಾತ್ಯ ಸಾಹಿತ್ಯದ ಸಾಹಿತ್ಯಕ ಆದರ್ಶದ ಆಳ್ವಿಕೆಗೆ ಒಳಪಟ್ಟಿತು. ಇಷ್ಟು ದೀರ್ಘಕಾಲ ನಾವು ಪ್ರಯೋಗ ಮಾಡುತ್ತಾ ಬಂದಿದ್ದೇವೆ, ಆದರೆ ನಮ್ಮ ಸಾಹಿತ್ಯಕ ಚಟುವಟಿಕೆಗಳ ಮಹತ್ವವನ್ನು ಕಂಡು ಹಿಡಿಯಲು ನಮಗಿನ್ನೂ ಸಾಧ್ಯವಾಗಿಲ್ಲ. ನಮ್ಮ ಇತಿಹಾಸವನ್ನು ಕುರಿತ ನಮ್ಮ ಅರಿವು, ನಮ್ಮ ಭಾಷೆಯನ್ನು ಕುರಿತ ನಮ್ಮ ಅರಿವು ಹೆಚ್ಚಾಗಿವೆ. ಪಶ್ಚಿಮದಿಂದ ನಾವು ಎರವಲಾಗಿ ಪಡೆದ ಹಲವು ಸಾಹಿತ್ಯ ಪ್ರಕಾರಗಳನ್ನು ನಿರ್ವಹಿಸುವ ಕಲೆಯನ್ನು ನಾವು ಗಳಿಸಿದ್ದೇವೆ. ಶ್ರೇಷ್ಠ ಕಾದಂಬರಿಗಳನ್ನೂ ನಾಟಕಗಳನ್ನೂ ರಚಿಸಿದ್ದೇವೆ. ಈ ಶತಮಾನದ ಕಾವ್ಯವು ಕಳೆದ ಶತಮಾನಗಳ ಕಾವ್ಯಕ್ಕಿಂತ ಯಾವ ರೀತಿಯಲ್ಲಿಯೂ ಕಡಿಮೆಯಾಗಿಲ್ಲ. ಪುಸ್ತಕ ಉತ್ಪಾದನೆ ಒಂದು ಉದ್ಯಮವಾಗಿ ಬೆಳೆದಿದೆ, ಪ್ರಗತಿಯ ಕಡೆಗೆ ಒತ್ತಡವಿದೆ. ಇಂದಿನ ಗ್ರಂಥಗಳು ನಿನ್ನೆಯ ಗ್ರಂಥಗಳಿಗಿಂತ ಖಂಡಿತವಾಗಿಯೂ ಹೆಚ್ಚು ಸಮರ್ಪಕವಾಗಿ ರಚಿತವಾಗುತ್ತಲ್ಲಿವೆ. ಈ ಸಮರ್ಪಕತೆಯ ಅಂಶವು ನಿಜವಾಗಿ ಒಂದು ಸಮಸ್ಯೆಯನ್ನು ಒಡ್ಡಿದೆ. ಏಕೆಂದರೆ ಪುಸ್ತಕಗಳು ಇನ್ನೂ ಹೆಚ್ಚು ಸಮರ್ಪಕವಾಗಿರಬೇಕೆಂದು ಓದುಗರು ಬಯಸುತ್ತಾರೆ.

ಇಂತಹ ಪರಿಸ್ಥಿತಿಯಲ್ಲಿ, ಮುಂದಿನ ಶತಮಾನದಲ್ಲಿ ಸಾಹಿತ್ಯದ ಔಚಿತ್ಯವನ್ನು ಊಹಿಸುವುದು ಸ್ವಲ್ಪ ಕಷ್ಟ. ಔಚಿತ್ಯದ ಸಮಸ್ಯೆ ನೈತಿಕವಾದದ್ದು. ಕಲೆಗಳೆಲ್ಲವೂ ಹುಟ್ಟುವುದು ಜನತೆಯ ಅಂತರಂಗದಾಳದ ಅಗತ್ಯಗಳಿಂದ. ಹಿಂದೆ ಸಾಹಿತ್ಯವು ಜ್ಞಾನದ ಒಂದು ರೂಪವಾಗಿತ್ತು, ಜನರು ಅದನ್ನು ಅವಲಂಬಿಸಿದ್ದರು. ಕಲಾಪ್ರಕಾರಗಳೆಲ್ಲವೂ ಜನರ ಸಾಂಸ್ಕೃತಿಕ ಅತ್ಯಗಳನ್ನು ತೃಪ್ತಿಪಡಿಸುತ್ತಿದ್ದುವು. ಆದರೆ ನಮ್ಮ ಸಂಸ್ಮೃತಿಯ ಹಿತಚಿಂತನೆಯನ್ನು ನಮ್ಮ ಬಹುಮಾಧ್ಯಮ (multimedia)ಗಳು ನೋಡಿಕೊಳ್ಳುತ್ತಿವೆ. ಈಗೀಗಂತೂ ಜನಸಾಮಾನ್ಯರು ಮತ್ತು ವಿದ್ಯಾವಂತರು ಸಂಸ್ಕೃತಿಗಾಗಿ ದೂರದರ್ಶನವನ್ನೇ ಅವಲಂಬಿಸುತ್ತಾರೆ. ದೂರದರ್ಶನಕ್ಕಾಗಲೀ ರೇಡಿಯೋಕ್ಕಾಗಲೀ ವರ್ಗಪ್ರಜ್ಞೆ ಇಲ್ಲ, ಹಾಗಾಗಿ ಅವು ವ್ಯಾಪಕವಾಗಿ ಜನರನ್ನು ತಲುಪುತ್ತವೆ. ವಿಡಿಯೋ ಕೆಸೆಟ್‌ಗಳು ನಮ್ಮ ಜಾನಪದ ಕಲೆಗಳನ್ನು ಕೊಂದು ಹಾಕಿವೆ; ಅವುಗಳ ಮೂಲಕ ಸಾಕ್ಷರತೆಯ ಪ್ರಸಾರವು, ಅಸಲಿ ಸಾಹಿತ್ಯದ ಉತ್ಪಾದನೆಗೆ ಮಾರಕವಾಗುತ್ತಿರುವುದು ಇದೀಗ ವಿಡಂಬನೆ.

ನಮ್ಮ ತಾಂತ್ರಿಕ ಉಪಕರಣಗಳು ಒಡ್ಡಿರುವ ಅಪಾಯ ಭೀತಿ ಏನೇ ಇರಲಿ, ಸಾಹಿತ್ಯವು ರಚಿತವಾಗುತ್ತಲೇ ಹೋಗುತ್ತದೆ ಎಂದು ನಾನು ನಂಬುತ್ತೇನೆ. ಪ್ರತಿಯೊಂದು ಆಳ್ವಿಕೆಗೂ ಅದರದೇ ಆದ ಒಂದು ಬರವಣಿಗೆಯ ರೂಪವಿರುತ್ತದೆ. ಏಕೆಂದರೆ “ಬರವಣಿಗೆ” ಮೂಲತಃ ಒಂದು ಬೌದ್ಧಿಕ ಕಸರತ್ತು. ಭಾಷಣದಂತಲ್ಲದೇ, ಬರವಣಿಗೆಯು ಒಂದು ಸಾರ್ವಜನಿಕ ಚಟುವಟಿಕೆ. ಜನಪ್ರೀಯವಾದ ಮತ್ತು ಜನಪ್ರಿಯವಲ್ಲದ ಉದ್ದೇಶಗಳಿಗೆ ಅದನ್ನು ಬಳಸಲಾಗುತ್ತದೆ. ಭಾಷೆಯು ಎಲ್ಲಿಯವರೆಗೆ ಉಳಿದುಕೊಂಡಿರುತ್ತದೆಯೋ ಅಲ್ಲಿಯವರೆಗೆ ಸಾಹಿತ್ಯವು ರಚಿತವಾಗುತ್ತಲೇ ಹೋಗುತ್ತದೆ. ಸಾಹಿತ್ಯಕ ಚಟುವಟಿಕೆಯು ಭಾಷೆಯ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಹೆಚ್ಚು ಗಮನ ಕೊಡಬೇಕಾಗುತ್ತದೆ. ಇಂದಿನವರೆಗೂ ಭಾಷೆಯನ್ನು ಸಾಹಿತ್ಯಕ ಕಲೆಯ ಒಂದು ಮಾಧ್ಯಮವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಒಂದು ಮಾಧ್ಯಮವಾಗಿ ಕೂಡ ಭಾಷೆಯು ಶಬ್ದ ಅಥವಾ ಬಣ್ಣದಂತಹ ಇತರೆ ಮಾಧ್ಯಮಗಳಿಗಿಂತ ಮೂಲತಃ ಬೇರೆಯಾಗಿದೆ. ಒಂದು ಪದವು ಸೂಚಕವೂ ಹೌದು ಸೂಚಿತವೂ ಹೌದು. ಲೇಖಕನು ಒಂದು ಪದವನ್ನು ಕೇವಲ ಸೂಚಕವಾಗಿ ಉಪಯೋಗಿಸಿದಾಗ ಅದು ಭಾಷೆಯ ವಲಯದ ಹೊರಗಿರುವ ಏನೋ ಒಂದನ್ನು ಸೂಚಿಸುತ್ತದೆ. ಉದಾಹರಣೆಗೆ, ಎಲ್ಲಾ ರಾಜಕೀಯ ಬರವಣಿಗೆಯೂ ಭಾಷೆಯು ಒಂದು ಮುಗ್ದವಾದ ಮಾಧ್ಯಮ ಎಂಬ ನಂಬಿಕೆಯಿಂದಲೇ ಭಾಷೆಯನ್ನು ಬಳಸುತ್ತವೆ. ರಾಜಕೀಯ ಬರವಣಿಗೆಯ ವಿಷಯದಲ್ಲಿ ಹೆಸರಿಸುವುದಕ್ಕೂ ಮೌಲ್ಯನಿರ್ಧಾರಕ್ಕೂ ನಡುವೆ ವ್ಯತ್ಯಾಸವಿರುವುದಿಲ್ಲ. ವಿಮರ್ಶಕನು ಒಂದು ಕವಿತೆಯನ್ನು ‘ರೋಮ್ಯಾಂಟಿಕ್’ ಎಂದು ವರ್ಣಿಸಿದರೆ, ಅವನು ಆ ವರ್ಗವನ್ನು ಹೆಸರಿಸುತ್ತಿರುವುದರ ಜೊತೆಗೆ, ತನ್ನ ನಿರ್ಧಾರವನ್ನೂ ಕೊಡುತ್ತಾನೆ.

ನಾವೀಗ ಭಾಷೆಯನ್ನು ಒಂದು ಮಾಧ್ಯಮವಾಗಿ ಮಾತ್ರವೇ ಬಳಸುವ ವಿಚಾರವನ್ನು ಪುನರ್ಪರಿಶೀಲಿಸಬೇಕಾದ ಪರಿಸ್ಥಿತಿ ಬಂದಿದೆ. ಭಾಷೆಯೋ, ಬಣ್ಣವೋ, ಶಬ್ದವೋ ಯಾವುದೋ ಒಂದು ಮಾಧ್ಯಮವನ್ನು ಹೊಂದಿರಬೇಕೆಂಬ ತತ್ವವು ಒಂದು ಬೌದ್ಧಿಕ ನೆಲೆಯನ್ನು ಸೂಚಿಸುತ್ತದೆ, ಏನನ್ನು ಹೇಳಲಾಗಿದೆಯೋ ಅದು, ಹೇಳಲಾದ ವಿಧಾನಕ್ಕಿಂತಲೂ ಹೆಚ್ಚು ಮುಖ್ಯವಾದದ್ದು. ಕೇವಲ ಸಂವಹನಕ್ಕಾಗಿ ಇರುವ ಭಾಷೆಯು ಏನನ್ನು ಸಂವಹನಗೊಳಿಸುತ್ತದೆಯೋ ಅದಕ್ಕಿಂತ ಕಡಿಮೆ ಗೌಣವಾಗುತ್ತದೆ. ಆದರೆ ಭಾಷೆಗೆ ನಾವಿನ್ನೂ ಬಳಸಿಕೊಂಡಿರದ ಇತರೆ ಆಯಾಮಗಳಿವೆ. ಭಾಷೆಯೆ ಜ್ಞಾನ, ಭಾಷೆಯೇ ಶಕ್ತಿ ಕೂಡ ಎಂದು ವಿವರಿಸುವ ಕೆಲವು ತತ್ವಜ್ಞರಿದ್ದಾರೆ. ಭಾರತೀಯ ತತ್ವಶಾಸ್ತ್ರದಲ್ಲಿ ಭಾಷೆಯಿಲ್ಲದೆ ಜ್ಞಾನವಿರಲು ಸಾಧ್ಯವಿಲ್ಲ. ಭರ್ತೃಹರಿಯು ಹೇಳುವಂತೆ “ಭಾಷೆಯು ಬೆಳಕನ್ನೇ ಬೆಳಗುವ ಜ್ಯೋತಿ”. ಹಾಗಿದ್ದರೆ, ಸಾಹಿತ್ಯವು ಈ ಭಾಷೆಯನ್ನು ಮಾಧ್ಯಮವಾಗಿ ಮಾತ್ರವಲ್ಲ, ತನಗೆ ತಾನೇ ಬೆಳಕಾಗಿಯೂ ವಿಕಾಸಗೊಳಿಸಬಹುದು.

ನಾವು ಈ ಶತಮಾನದ ಕೊನೆಯನ್ನು ಮುಟ್ಟುತ್ತಿದ್ದೇವೆ. ಮುಂದಿನ ಶತಮಾನದಲ್ಲಿ ಸಾಹಿತ್ಯದ ಭವಿಷ್ಯವೇನು ಎಂದು ಯೋಚಿಸುವುದೇ ಕಷ್ಟವಾಗುತ್ತದೆ. ಇದೇ ಪರಿಸ್ಥಿತಿ ಆಗಲೂ ಪ್ರಗತಿಯ ಹೆಸರಿನಲ್ಲಿ ಮುಂದುವರೆಯುತ್ತದೋ ಅಥವಾ ಇನ್ನೊಂದು ಕ್ರಾಂತಿಗಾಗಿ ಕಾಯುತ್ತೇವೆಯೋ ನಮಗೆ ತಿಳಿಯದು. ಜ್ಞಾನಸಂಪಾದನೆಯು ಬೇಟೆಯ ಸಾಹಸ ಕ್ರೀಡೆಯಾಗುತ್ತದೆಯೋ ಅಥವಾ ಲಲಿತವಾದ ಒಂದು ಪ್ರಕ್ರಿಯೆ ಆಗುತ್ತದೆಯೋ ಎನ್ನುವುದನ್ನು ಅದು ಅವಲಂಬಿಸಿದೆ. ಕೆಲವು ನೂರು ವರ್ಷಗಳ ಹಿಂದೆ ಅಚ್ಚರಿಯ ರಹಸ್ಯವಾಗಿದ್ದ ವಿಶ್ವವು ಕ್ರಮೇಣ ತನ್ನ ರಹಸ್ಯವನ್ನು ಕಳೆದುಕೊಳ್ಳುತ್ತಲ್ಲಿದೆ. ನಮ್ಮಲ್ಲಿ ಒಂದು ಬಗೆಯ ಖಾಲಿತನದ ಭಾವನೆ ತುಂಬುತ್ತಿದೆ. ಈ ಖಾಲಿಯನ್ನು ತುಂಬಲು ಸಾಹಿತ್ಯಕ್ಕೆ ಮಾತ್ರ ಸಾಧ್ಯ. ಸಾಹಿತ್ಯದ ಮುಂದಿನ ಔಚಿತ್ಯ ಇರುವುದು ಇಲ್ಲಿಯೇ ಎಂದು ನನ್ನ ನಂಬಿಕೆಯಾಗಿದೆ.

* * *