ಜಾನಪದ ರಂಗಭೂಮಿಯನ್ನು ಕುರಿತು ನನ್ನ ಅಭಿಪ್ರಾಯವೇನು, ಅದಕ್ಕೂ ನನಗೂ ನನ್ನ ಕಾಲಕ್ಕೂ ನನ್ನ ಜನಕ್ಕೂ ಸುಸಂಬದ್ಧತೆ ಏನು ಇವುಗಳನ್ನು ಕುರಿತು ನನ್ನನ್ನು ಆಗಾಗ ಕೇಳಲಾಗಿದೆ. ಆಧುನಿಕ ಭಾರತೀಯ ನಾಟಕಕಾರನಿಗಿರುವ ಸಮಸ್ಯೆಯೆಂದರೆ, ಅವನು/ಅವಳು ವಿದ್ಯಾವಂತ ಜನರಿಗಾಗಿ ಬರೆಯುವುದು. ಆದರೆ ನಾಟಕಕಾರ ಮತ್ತು ನಿರ್ದೇಶಕರ ಕರ್ತವ್ಯ ಎಲ್ಲ ಜನರ‍ನ್ನೂ ಮುಟ್ಟುವುದು, ಅವರಲ್ಲಿ ನೂತನ ಜಾಗೃತಿಯನ್ನು ಮೂಡಿಸುವುದು.

ಈ ಅತಿ ‘ವಿದ್ಯಾವಂತ’ರ ಕಷ್ಟವೇನೆಂದರೆ, ಅವರಲ್ಲಿ ಅನೇಕರಿಗೆ ಇಂದಿಗೂ ಒಂದು ನಾಟಕವನ್ನು ಓದುವುದಕ್ಕೂ ರಂಗಸ್ಥಳದ ಮೇಲೆ ಅದನ್ನು ನೋಡುವುದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಕೆಲವೊಮ್ಮೆ ಅವರು ರಂಗಮಂಚದ ಮೇಲೆ ನಾಟಕ ಪ್ರದರ್ಶನವನ್ನು ನೋಡುವುದಕ್ಕಿಂತ ನಾಟಕವೊಂದನ್ನು ಓದುವುದು ನಾಟಕಾನುಭವವನ್ನು ಪಡೆಯುವ ಹೆಚ್ಚು ವಿಶ್ವಸನೀಯ ವಿಧಾನ ಎಂದು ಭಾವಿಸುತ್ತಾರೆ. ನಾಟಕವು ರಂಗಭೂಮಿಯಿಂದ ಪ್ರತ್ಯೇಕ್ಷಗೊಂಡು ಒಂದು ಸಾಂಸ್ಕೃತಿಕ ಬಿಕ್ಕಟ್ಟು ಉಂಟಾಗುತ್ತದೆ. ನಾವಿನ್ನೂ ಅದನ್ನು ಅರ್ಥಮಾಡಿಕೊಂಡು ಅದರ ಮೌಲ್ಯಮಾಪನ ಮಾಡಬೇಕಿದೆ. ಆದರೆ ಜಾನಪದ ರಂಗಭೂಮಿಯು ಕೇವಲ ಒಂದು ಮಾಧ್ಯಮವಲ್ಲ, ಅದೊಂದು ಜೀವಂತ ಸಂದರ್ಭ. ಅಲ್ಲಿ ರಂಗಸ್ಥಳ, ಪಾತ್ರಧಾರಿಗಳು ಮತ್ತು ಪ್ರೇಕ್ಷಕರು ಎಲ್ಲರೂ ಒಂದು ಅನುಭವವನ್ನು ಹಂಚಿಕೊಳ್ಳುತ್ತಾರೆ. ಅಕ್ಷರಸ್ಥರ ರಂಗಭೂಮಿಯು ಇನ್ನೂ ಇದನ್ನು ಸಾಧಿಸಲು ಸಮರ್ಥವಾಗಿಲ್ಲ. ವಿದ್ಯಾವಂತರಿಗೆ ರಂಗಭೂಮಿಯು ಕೇವಲ ಒಂದು ಮಾಧ್ಯಮ. ಒಂದು ನಾಟಕವನ್ನು ಓದುವಾಗ ನಮಗೆ ಯಾವ ಅನುಭವ ದೊರಕುವುದೋ ಅದರ ಪ್ರತಿಕೃತಿಯನ್ನಷ್ಟೇ ನಿರೀಕ್ಷಿಸುವುದಾದ ಪಕ್ಷದಲ್ಲಿ ನಮಗೆ ರಂಗಭೂಮಿಯ ಅವಶ್ಯಕತೆಯೇನಿದೆ? ರಂಗಭೂಮಿಯು ‘ವಾಚನಾನುಭವ’ದ ಪುನರುತ್ಪಾದನೆಯಾಗಲಿ ವ್ಯಾಖ್ಯಾನವಾಗಲೀ ಅಲ್ಲ, ಆಗಿರಕೂಡದು. ಆದರೆ ದುರದೃಷ್ಟವಶಾತ್ ನಮ್ಮ ವಿದ್ಯಾವಂತ ಜನರು ಅನೇಕ ವೇಳೆ ನಾಟಕವನ್ನು ಓದಿಯಾದ ಮೇಲೆ, ಅಂಥದೇ ಅನುಭವವನ್ನು ರಂಗ ಪ್ರದರ್ಶನದಿಂದ ನಿರೀಕ್ಷಿಸುತ್ತಾ, ಅದನ್ನು ಬಯಸುತ್ತಾ, ನೋಡಲು ಬರುತ್ತಾರೆ. ವ್ಯಕ್ತಿಯು ತನ್ನಲ್ಲೆ ನಾಟಕವನ್ನು ಓದಿಕೊಳ್ಳುವುದೇ ಒಂದು ವೈರುಧ್ಯ. ಅದೊಂದು ವಿಶಿಷ್ಟವಾದ ಅನುಭವ, ಅದನ್ನು ರಂಗಸ್ಥಳದ ಮೇಲಿನ ಪ್ರದರ್ಶನವಾಗಿಯೇ ಪಡೆಯಬೇಕು. ಚಾಕ್ಷುಷ ಅನುಭವವು ವಾಚನಾನುಭವವನ್ನು ಮುಳುಗಿಸಬೇಕು. ಆದರೆ ಸುಶಿಕ್ಷಿತ ನಾಟಕವನ್ನು ತಿಳಿದುಕೊಳ್ಳಲು ಬಯಸುತ್ತಾರೆಯೇ ಹೊರತು ಅದನ್ನು ಅನುಭವಿಸುವುದಕ್ಕಲ್ಲ. ಅದು ಫಲದಲ್ಲಿನ ಸ್ವಾರಸ್ಯವೇ ಹೊರತು ಅನುಭವ ಪ್ರಕ್ರಿಯೆಯಲ್ಲಿ ಅಲ್ಲ.

ನನ್ನ ವಿಷಯಕ್ಕೆ ಬರುತ್ತೇನೆ. ಭೌಗೋಲಿಕವಾಗಿ ನಾನೊಂದು ಹಳ್ಳಿಗೆ ಸೇರಿದವನು, ಸಾಮಾಜಿಕವಾಗಿ ಶೂದ್ರ, ಅಶಿಕ್ಷಿತ ಎಂದು ಪರಿಗಣಿಸಲಾಗಿದ್ದ ವರ್ಗಕ್ಕೆ ಸೇರಿದವನು. ಆದ್ದರಿಂದ ನಾನೊಬ್ಬ ಜನಪದ ವ್ಯಕ್ತಿ, ಏಕೆಂದರೆ ಇಷ್ಟೇ, ಅದಲ್ಲದೇ ಬೇರೇನೂ ಆಗಲು ಸಾಧ್ಯವಿರಲಿಲ್ಲ. (ಈ ಮಾತಿಗೆ ಏಕೆ ಒತ್ತು ಕೊಡುತ್ತಿದ್ದೇನೆ ಎಂದರೆ ಕಳೆದ ಹದಿನೈದು ವರ್ಷಗಳಲ್ಲಿ ನಾಗರಿಕ ವರ್ಗದ ವ್ಯಕ್ತಿಗಳಲ್ಲಿ ಒಂದು ಬಗೆಯ “ಜಾನಪದಿತ್ವ” ಅಂತರ್ಗತವಾಗಿರುತ್ತದೆ.) ನಾನು ಬರೆದ ಮೊದಲನೆಯ ನೀಳ್ಗವನ ‘ಹೇಳತೇನ ಕೇಳ’ ಸಂಪೂರ್ಣವಾಗಿ ನನ್ನ ಮಣ್ಣಿನಿಂದ ಮೂಡಿಬಂದದ್ದು. ಮೂವತ್ತು ವರ್ಷಗಳ ನಂತರ ನೋಡಿದಾಗ, ನನ್ನ ಬರವಣಿಗೆಯಲ್ಲಿ ಬಹುತೇಕ ಆ ನೀಳ್ಗವನದೊಂದಿಗೆ ವಸ್ತುದೃಷ್ಟಿಯಿಂದ ಸಂಬಂಧಪಟ್ಟಿದೆ ಎಂದು ಅನಿಸುತ್ತದೆ. ವಸ್ತು ನೈರಂತರ್ಯವನ್ನು ಕುರಿತ ಕಷ್ಟದಿಂದ ಹೇಳುವ ಹೇಳೀಕೆ ಇದಲ್ಲ; ಅಥವಾ ಸೃಜನಶೀಲತೆಯ ದಿವಾಳಿತನವನ್ನು ಅದು ಸೂಚಿಸುವುದಿಲ್ಲ. ಹೇಳತೇನ ಕೇಳದಲ್ಲಿ ರೂಪುಗೊಂಡ ಅನುಭವದ ಸಮಗ್ರತೆ ಮತ್ತು ಸಮೃದ್ಧತೆಗಳು ನನ್ನ ಜನದ ರಚನಶೀಲ ಒತ್ತಡಗಳಿಗೆ ಮಾತುಕೊಡುವ; ಮನುಷ್ಯನಾಗಿ, ಕಲಾವಿದನಾಗಿ ನನ್ನ ಅತ್ಯಂತ ವೈವಿಧ್ಯಪೂರ್ಣ ಅಗತ್ಯಗಳನ್ನು ಪೂರೈಸುವಷ್ಟು ವಿನ್ಯಾಸಗಳನ್ನು, ರಚನಾವಿಧಾನಗಳನ್ನೂ ನನಗೆ ಕೊಟ್ಟಿವೆ. ಯಾವ ಜಾನಪದ ಮಾಧ್ಯಮವು ಹೇಳತೇನ ಕೇಳವನ್ನು ಸಾಧ್ಯವಾಗಿಸಿತೋ ಅದೇ ನನ್ನ ಜೋಕುಮಾರಸ್ವಾಮಿ ಮತ್ತು ಇತರೆ ನಾಟಕಗಳನ್ನೂ ಸಾಧ್ಯವಾಗಿಸಿತು ಎಂದು ಧೈರ್ಯವಾಗಿ ಹೇಳಬಲ್ಲೆ. ನಾನು ಪೂರ್ಣ ಸ್ವರೂಪದ (Total) ಒಂದು ಕಲೆಯನ್ನು ನಿರ್ವಹಿಸುತ್ತಿದ್ದೇನೆ ಎಂಬ ಒಂದು ಭಾವನೆ ನನಗೆ ಈ ಹಲವು ವರ್ಷಗಳಲ್ಲಿ ಉಳಿದುಕೊಂಡು ಬಂದಿದೆ, ಮುಂದೆಯೂ ಇರುತ್ತದೆ.

ಮೊದಲನೆಯ ನಾಟಕ ‘ಋಷ್ಯಶೃಂಗ’ವನ್ನು ನಾನು ಬರೆದಾಗ ಕೈಲಾಸಂ ಮತ್ತು ಶ್ರೀರಂಗ (ಆದ್ಯ ರಂಗಾಚಾರ್ಯ)ರು ಸಾಮಾಜಿಕ ವಾಸ್ತವತೆಯ ಒಂದು ನಾಟಕ ಪ್ರಕಾರವನ್ನು ಜನಪ್ರಿಯಗೊಳಿಸಿದ್ದರು. ಅದು ರಂಗಭೂಮಿಯು ನಿರ್ವಹಿಸಬೇಕಾದ ಸೂಕ್ತ ಕರ್ತವ್ಯ ಎಂದು ಅವರು ಭಾವಿಸಿದ್ದರು. ಅವರಿಗಿದ್ದ ಆದರ್ಶಗಳು ಷಾ ಮತ್ತು ಇಬ್ಸೆನ್ ಇಬ್ಬರೇ. ವಾಸ್ತವತಾವಾದವು ಹೊಸದಾಗಿದ್ದುದರಿಂದ ಆಕರ್ಷಕವಾಗಿತ್ತು, ಮಹತ್ವವನ್ನು ಪಡೆಯಿತು ಎಂಬುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೆ ಶುಷ್ಕ ಗದ್ಯದಲ್ಲಿ ಬರೆದ ಈ ನಾಟಕ ಬಹುಬೇಗ ಮಹತ್ವ ಕಳೆದುಕೊಳ್ಳಲೇಬೇಕಾಗಿತ್ತು. ಏಕೆಂದರೆ ಅದು ವಿದ್ಯಾವಂತ ಮಧ್ಯಮವರ್ಗದ ಜನರ ವಾಸ್ತವತೆ, ಅವರ ಸಮಸ್ಯೆಗಳು, ಅವರ ದೋಷಗಳು ಅಸಮಾಧಾನ- ಇವುಗಳನ್ನು ಮಾತ್ರವೇ ಪ್ರತಿಬಿಂಬಿಸಿತ್ತು. ಮುಂದಿನ ನಾಟಕಕಾರರಾದ ಲಂಕೇಶ್, ಕೀರ್ತಿನಾಥ ಕುರ್ತುಕೋಟಿ, ಗಿರೀಶ್ ಕಾರ್ನಾಡ್ ಮೊದಲಾದವರು ನಾಟಕ ರಚನೆಯ ಹೊಸ ರೂಪಗಳನ್ನು ಸೃಷ್ಟಿಸುವ ಪ್ರಯತ್ನಗಳನ್ನು ಮಾಡಿದರು. ನನ್ನ ಆದರ್ಶ ಕರ್ನಾಟಕದ ಜನಪದ ರಂಗಭೂಮಿ. ಅದಕ್ಕೆ ಅವರದೇ ವಾಸ್ತವತೆಯೂ ಮೋಡಿಯೂ ಇವೆ. ನನ್ನ ಮೊದಲನೆಯ ನಾಟಕದಲ್ಲಿ ನಮ್ಮ ರಂಗಭೂಮಿಯಿಂದ ಬಹಿಷ್ಕೃತವಾಗಿಬಿಟ್ಟಿದ್ದ ಕಾವ್ಯವನ್ನು ಪ್ರವೇಶಗೊಳಿಸಿದೆ; ತುರ್ತು ಅಗತ್ಯವೂ, ಅರ್ಥಪೂರ್ಣವೂ ಆಗಿದ್ದ ಒಂದು ನಾಟಕಲಯವನ್ನು ತರಲು ಪ್ರಯತ್ನಿಸಿದೆ.

ಮುಂದಕ್ಕೂ ಹಿಂದಕ್ಕೂ ಚಲಿಸುತ್ತಾ ಕತೆಯನ್ನು ನಿರೂಪಿಸುತ್ತಾ ಯಾವುದೇ ಐತಿಹಾಸಿಕ ಸಂಬಂಧವಿಲ್ಲದೆ, ಪಾತ್ರಗಳ ಕ್ರಿಯೆ ಪ್ರತಿಕ್ರಿಯೆಗಳ ಮೂಲಕ ಭಾವಗಳ ಒಂದು ವಿನ್ಯಾಸವನ್ನು ಸೃಷ್ಟಿಸುತ್ತಾ ಸಾಗುವ ಬ್ಯಾಲೆಯ ಪಡಿರೂಪ ನನ್ನ ನಾಟಕ. ನನ್ನ ಪಾತ್ರಗಳು ಶುದ್ಧ ಮಾನವರು. ದೃಢರು ಅಥವಾ ದುರ್ಬಲರು, ಭಾವಾವೇಶ ತುಂಬಿದವರು ಅಥವಾ ಅದು ಇಲ್ಲದವರು, ಬುದ್ಧಿವಂತರು ಅಥವಾ ದಡ್ಡರು, ಆದರೆ ಯಾವಾಗಲೂ ನಾಟಕದ ವಸ್ತುವನ್ನು ಸಂವಹಿಸಲು ಸೂಕ್ತವಾದ ಮಾಧ್ಯಮವಾದವರು. ಅವರ ವೈಶಿಷ್ಟ್ಯರಾಹಿತ್ಯವನ್ನು ನಾನು ದೊಡ್ಡದು ಮಾಡುವುದಿಲ್ಲ. ಆದರೆ ನಾನಾಗಲೆ ಹೇಳಿದಂತೆ ಸಂಪೂರ್ಣವಾಗಿ ಕಲಾಕೃತಿಗಳಾದ ಜಾನಪದ ರೂಪಗಳಲ್ಲಿ ಜಗತ್ತನ್ನು ಕುರಿತು ನನ್ನ ಅರ್ಥವನ್ನು ಸಂವಹಿಸಲು ಅವರನ್ನು ನಾನು ಬಳಸುತ್ತೇನೆ.

ನನ್ನ ಈ ಹೇಳಿಕೆಯು ವಿವಾದಕ್ಕೆಡೆಗೊಡುತ್ತದೆಂದು ನಾನು ಬಲ್ಲೆ, ಅದರಲ್ಲಿಯೂ ಇಪ್ಪತ್ತನೆಯ ಶತಮಾನದ ಅಂತ್ಯದಲ್ಲಿ ನನ್ನಿಂದ ಬರುತ್ತಿರುವ ಈ ಮಾತು ಹಾಗಾಗುವುದು ಸಹಜ. ಆದ್ದರಿಂದ ಈ ಹೇಳೀಕೆಯನ್ನೇ ಚರ್ಚಿಸಿ, ವಿಸ್ತರಿಸಬಯಸುತ್ತೇನೆ. ಸರಳವಾಗಿ ಪ್ರಾರಂಭಿಸುವುದಾದರೆ, ದಿನಚರಿಯು ನನಗೆ ಸಂವೇದನೆಯ ವಿಷಯದಲ್ಲಿ ಆಗುವ ಬದಲಾವಣೆಗಳ ಗುರುತು ಮಾಡುವಿಕೆ ಅಲ್ಲ. ಜನರು ಅನುಭವದ ಸುಸಂಬಂಧತೆಯನ್ನು ಅಗತ್ಯಗಳಿಗಿನುಸಾರವಾಗಿ ಕಾಲ್ಪನಿಕವಾಗಿಯೋ, ಇನ್ನೂ ಹೆಚ್ಚು ಪರೋಕ್ಷವೂ ಸೂಕ್ಷ್ಮವೂ ಆದ ಭಾವನಾತ್ಮಕವಾಗಿಯೋ ಗ್ರಹಿಸುತ್ತಾರೆ. ಅನುಭವದ ತಾಳಿಕೆ ಮತ್ತು ಚಂಚಲತೆ ಹಾಗೂ ಅದು ಮೂಡಿಸುವ ಕಲೆ ಒಂದು ಜನದ ಸಾಮಾಜಿಕ ಸಾಂಸ್ಕೃತಿಕ ಅಗತ್ಯಗಳು, ಅವರ ಬೇಗುದಿಗಳು, ಉಲ್ಲಾಸಗಳು, ಭ್ರಾಂತಿಗಳು ಇವುಗಳ ಮೂಲಕ ಮೂಡಿಬರುತ್ತವೆ. ತನ್ನ ಸೃಜನಶೀಲತೆಯನ್ನು ತನ್ನ ಜನದಿಂದ ಸೆಳೆದುಕೊಳ್ಳುವ ಕಲಾವಿದನು ಆ ಸುಸಂಗತತೆಯ ಭಾವನೆಗೆ ಶಬ್ದ ರೂಪವನ್ನು ಕೊಡುತ್ತಾನೆ. ನನ್ನ ಜನರು, ಇಂದಿಗೂ ಫ್ಯೂಡಲ್ ಮೌಲ್ಯಗಳಿಗೆ ಒಳಪಟ್ಟಿದ್ದಾರೆ, ಹಿಂದಿನ ಕಾಲಕ್ಕೆ ಸೇರಿದಂಥದೇ ಜೀವನ ಶೈಲಿ ಮತ್ತು ವಿನ್ಯಾಸಗಳನ್ನು ಹೊಂದಿದ್ದಾರೆ ಎನ್ನುವುದು ವಾಸ್ತವ ಸಂಗತಿ. ಅದಕ್ಕಾಗಿ ನಾನು ವಿಷಾದಿಸುತ್ತಲೂ ಇಲ್ಲ, ಅದನ್ನು ವಿಮರ್ಶಿಸುತ್ತಲೂ ಇಲ್ಲ. ಕಲಾವಿದನು ವಾಸ್ತವ ಸಂಗತಿಯನ್ನು ಮೂಲ ಸಾಮಗ್ರಿಯಾಗಿ ಉಪಯೋಗಿಸಿಕೊಂಡು ಜನರಲ್ಲಿ, ತನ್ನಲ್ಲಿ ಮತ್ತು ಅವರ ಸಂಬಂಧಗಳಲ್ಲಿ ಅತ್ಯಲ್ಪವಾದ ಬದಲಾವಣೆಯನ್ನು ಉಂಟುಮಾಡಬಹುದು. ಕೆಲವೊಮ್ಮೆ ಅವನ ಅದೃಷ್ಟ ಚೆನ್ನಾಗಿದ್ದರೆ, ಮೂಲಭೂತವಾದ ಮತ್ತು ಆ ಕಾರಣದಿಂದಲೇ ಪ್ರಭಲವಾದ ವಿನ್ಯಾಸಗಳು, ಧ್ವನಿಗಳು, ಕಲ್ಪನೆಗಳು ಮತ್ತು ಸಂಕೇತಗಳನ್ನು ಪಡೆಯಬಹುದು. ಅವು ಸಮಕಾಲೀನ ಪರಿಸ್ಥಿತಿಗಳಾಗಿ ವ್ಯಕ್ತವಾಗುತ್ತವೆ. ನಿದರ್ಶನಕ್ಕೆ ಹೇಳುವುದಾದರೆ, ನಾನು ಹೇಳತೇನ ಕೇಳದಲ್ಲಿ ಫಲವಂತಿಕೆ, ಷಂಡತ್ವ ಮತ್ತು ಕ್ಷಾಮಗಳ ಒಂದು ಕತೆಯನ್ನು ಹೇಳಲು ತೊಡಗಿದೆ. ಅವೇ ವಸ್ತುಗಳನ್ನೇ ನನ್ನ ಮಿಕ್ಕ ಎಲ್ಲ ನಾಟಕಗಳಲ್ಲಿಯೂ ಇಟ್ಟುಕೊಂಡು ಕೆಲಸ ಮಾಡಿದ್ದೇನೆ. ಟಿ.ಎಸ್. ಎಲಿಯಟ್ ಮತ್ತು ವೈ.ಬಿ. ಯೇಟ್ಸ್ ಇಬ್ಬರೂ ಒಂದು ಪಾಶ್ಚಾತ್ಯ ಮತ್ತು ವಿಶೇಷವಾಗಿ ನಗರ ಸಂಸ್ಕೃತಿಯ ಫಲವಾದವರು, ಸಾಹಿತ್ಯಕ ಆಧುನಿಕತೆಯ ಪ್ರಮುಖ ವಕ್ತಾರರು, ಆದರೂ ತಮ್ಮ ಕೃತಿಗಳ ಕೇಂದ್ರದಲ್ಲಿ ಇಂಥವೇ ವಸ್ತುಗಳನ್ನು ಹೊಂದಿದ್ದರು. ನೀವು ನಂಬಿ ಅಥವಾ ಬಿಡಿ, ನನ್ನ ಕೃತಿಗಳಿಗೆ ವಸ್ತುವನ್ನು ನಾನು ನನ್ನ ಹಳ್ಳಿಯಿಂದ ಪಡೆದುಕೊಳ್ಳುತ್ತೇನೆಯೇ ಹೊರತು ಎಲಿಯೆಟ್ ಅಥವಾ ಯೇಟ್ಸರಿಂದ ಅಲ್ಲ. ನನ್ನ ಅರ್ಥ ಇಷ್ಟೇ, ಮಾನವನ ಸ್ಥಿತಿಗತಿಯ ಕೆಲವು ಅಂಶಗಳು ಇರುತ್ತವೆ, ಅವು ಮೂಲಭೂತವಾಗಿರುತ್ತವೆ, ಸದಾ ಪೀಡಿಸುತ್ತವೆ, ಸದಾ ಪ್ರಚೋದಿಸುತ್ತವೆ ಕಾಲ ಮತ್ತು ದೇಶವನ್ನು ಮೀರಿ ನಿಲ್ಲುತ್ತವೆ.

‘ಪೂರ್ಣ’ (Total) ಎಂಬ ಉಕ್ತಿಯ ಇನ್ನೊಂದು ಅರ್ಥವನ್ನು ನಾನು ಪರಿಶೀಲಿಸಬಯಸುತ್ತೇನೆ. ಮಾನವ ಸಮಾಜವು ಅನೇಕ ಹಂತಗಳನ್ನು ಹಾದು ಬಂದಿದೆ ಎಂದು ಹೇಳಬಹುದು ಅಥವಾ ಮಾನವ ಸಮಾಜವನ್ನು ವಿಧವಿಧವಾದ ಪರಿಸ್ಥಿತಿಗಳಲ್ಲಿ ನೋಡಬಹುದು ಎಂದೂ ಹೇಳಬಹುದು. ಒಂದು ಸಮಾಜವಿದೆ, ಅನೇಕ ಕಾರಣಗಳಿಂದ ಅಲ್ಲಿ ಜೀವನದ ಗುಣಮಟ್ಟವು ಹಿಂಜರಿಕೆಯ ಪ್ರವೃತ್ತಿಯುಟ್ಟುದಾಗಿದೆ. ಭಾವನಾತ್ಮಕ ಅಥವಾ ಲೈಂಗಿಕ ಮುಂದೊಡಗುಗಳು ನಿಗ್ರಹಿಸಲ್ಪಟ್ಟಿರುತ್ತವೆ. ಸಂಕೋಚ, ಹಿಂಜರಿಕೆಗಳನ್ನು ತೆಗೆದುಹಾಕಿದ ಒಂದು ಕ್ಷೇತ್ರವೆಂದರೆ, ಧರ್ಮಕ್ಕೆ ಸಂಬಂಧಪಟ್ಟದ್ದು. ಅಂಥಹ ಸಮಾಜದಲ್ಲಿ ಸಾಮಾನ್ಯವಾಗಿ ಸಂಯಮಿಯಾಗಿದ್ದ ಸದಸ್ಯನು ಧರ್ಮವು ಅನುಮತಿಸಿರುವ ಪರಿಸ್ಥಿತಿಯಲ್ಲಿ ಮಾತ್ರ ತಡೆಗಳನ್ನು ಮುರಿದು ಹೊರಬರಬಲ್ಲನು. ಇದರಿಂದಾಗಿಯೇ ಬೇರೆ ಸಂದರ್ಭದಲ್ಲಿ ನಿಗ್ರಹಿತವಾಗಿದ್ದ ಹುಚ್ಚು ಆವೇಶದ ವರ್ತನೆಗಳು ಧಾರ್ಮಿಕಾಚರಣೆಗಳ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಉನ್ಮಾದದಲ್ಲಿ ಅತಿಮಾನುಷ ಸಾಹಸಗಳೂ, ದೇಹದಂಡನೆ ಮತ್ತು ಲೈಂಗಿಕತೆಗಳೂ ಸೇರುತ್ತವೆ. ಸಂಕ್ಷೇಪವಾಗಿ ಹೇಳಬೇಕೆಂದರೆ, ಇವು ಸಮಾಜದ ಉಳಿವಿಗೆ, ಅವರ ವಿವೇಕವು ಉಳಿಯುವುದಕ್ಕೆ ಅತ್ಯಗತ್ಯವಾದ ಬಿಡುಗಂಡಿಗಳು. ಇನ್ನೂ ಮುಂದೆ ಹೋದರೆ, ಇನ್ನೂ ಒಂದು ಅಂಶವು ಸ್ಪಷ್ಟವಾಗುತ್ತದೆ: ಮನರಂಜನೆ ಹಾಗೂ ವಾಸ್ತವ ಬದುಕು ಈ ಎರಡೂ ಕ್ಷೇತ್ರಗಳ ನಡುವಣ ವ್ಯತ್ಯಾಸವು ಸಾಮಾನ್ಯಜೀವನ ಮತ್ತು ಧಾರ್ಮಿಕಚಾರಣೆಯಲ್ಲಿ ಭಾಗವಹಿಸುವುದು ಇವುಗಳ ನಡುವಣ ವ್ಯತ್ಯಾಸದಷ್ಟೇ ಸ್ಪಷ್ಟವಾಗಿದೆ. ಈ ಖಚಿತ ಪ್ರತ್ಯೇಕತೆಯಿಂದಲೇ ಅಂತಹ ಸಮಾಜದಲ್ಲಿ ಮನರಂಜನೆಯ ಕ್ಷೇತ್ರವು ಸಂಪೂರ್ಣವಾದ ಮತ್ತು ಅತೀಸೂಕ್ಷ್ಮ ಲಕ್ಷಣವನ್ನು ಪಡೆಯತ್ತದೆ. ಪಿಂಡಾಂಡ ಲಕ್ಷಣ ಯಾವ ಅರ್ಥದಲ್ಲಿ ಎಂದರೆ ಆಗ ಮನರಂಜನೆಯು ಹೊರಗಿನ ಪ್ರಪಂಚದ ಸಮಸ್ತ ರಚನಶೀಲ ಒತ್ತಡಗಳನ್ನೂ ಅಗತ್ಯಗಳನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ಅದು ಏಕಕಾಲದಲ್ಲಿ ಏಕಾಗ್ರತೆ ಮತ್ತು ಸಮಗ್ರತೆಗಳ ಒಂದು ಸಂಗತಿಯಾಗುತ್ತದೆ. ಆದ್ದರಿಂದ ಜಾನಪದ ರಂಗಭೂಮಿಯಲ್ಲಿ ನೃತ್ಯ, ನಾಟಕ, ಕಥನ, ಹಾಡು, ಲೈಂಗಿಕತೆ ಮರಣ ಮತ್ತು ಧರ್ಮ ಇವು ಸೇರಿರುತ್ತವೆ.

ತುಂಬಾ ಮುಖ್ಯವಾದ ಒಂದು ವಿಚಾರವಿದೆ. ಹೊರಪ್ರಪಂಚದಿಂದ ಬೇರೆಯಾಗಿರುವುದು ನಟರು ಮಾತ್ರವಲ್ಲ, ಪ್ರೇಕ್ಷಕರೂ ಕೂಡ. ಏಕೆಂದರೆ, ಜನಪದ ನಾಟಕದ ಪ್ರೇಕ್ಷಕರು ಅದರಲ್ಲಿ ಭಾಗವಹಿಸುತ್ತಾರೆ, ನಾಟಕರೂಪವ ಹಂಚಿಕೊಂಡ ಧಾರ್ಮಿಕಾಚರಣೆಯಲ್ಲಿ ನಟರೂ ಪ್ರೇಕ್ಷಕರೂ ಸಹಭಾಗಿಗಳಾಗಿರುತ್ತಾರೆ. ಬಯಲಾಟವೊಂದರ ಅತ್ಯಂತ ಕಳಪೆ ಪ್ರದರ್ಶನವೂ ಪ್ರಾರ್ಥನೆಯಿಂದ ಮೊದಲುಗೊಂಡು ಪ್ರೇಕ್ಷಕರೂ ಪಾತ್ರಧಾರಿಗಳೂ ಬೆಳಗಿನಜಾವ ಒಟ್ಟಿಗೆ ದೇವಾಲಯಕ್ಕೆ ಹೋಗುವುದರಿಂದ ಮುಕ್ತಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ನಾಟಕಗಳಲ್ಲಿ ಹಾಡು ಮತ್ತು ಕುಣಿತಗಳು ಸರಿಯಿಲ್ಲವೆಂದು ಹೇಳುವ ಸವಕಲು ಟೀಕೆಗಳು ಅಸಂಗತವಾಗಿವೆ. ಈ ಟೀಕೆಗಳು ಹುಟ್ಟುವುದು ನಾನು ವರ್ಣಿಸಿರುವುದಕ್ಕಿಂತ ಬೇರೆಯ ಬಗೆಯ ಸಮಾಜಗಳಲ್ಲಿ. ಮನರಂಜನೆಯನ್ನು ಕುರಿತ ಬೇರೆ ಅರಿವಿನಿಂದ ಆಧುನಿಕವೆಂದು ಕರೆಯಬಹುದಾದ ಸಮಾಜದಲ್ಲಿ ಪ್ರಜ್ಞಾಪೂರ್ವಕ ಹಾಗೂ ಅಪ್ರಜ್ಞಾಪೂರ್ವಕ ಜಾತ್ಯಾತೀತೆಯಿರುತ್ತದೆ. ಮನುಷ್ಯನ ಜೀವನದ ಮುಖ್ಯ ಘಟನೆಗಳು ಹೆಚ್ಚು ಹೆಚ್ಚಾಗಿ ಧಾರ್ಮಿಕ ಚೌಕಟ್ಟಿನಿಂದ ಕಳಚುತ್ತವೆ. ಅದೇ ಸಮಯಕ್ಕೆ ಧಾರ್ಮಿಕ ಪ್ರಭಾವದ ಪ್ರದೇಶವು ಕಿರಿದಾಗುತ್ತಾ ಹೋಗುತ್ತದೆ. ಧರ್ಮವು ಹೆಚ್ಚುಕಡಮೆ ಒಂದು ವೃತ್ತಿಯೇ ಆಗಿ, ಕೆಲವು ಸಾಮಾಜಿಕವಾಗಿ ಅನುಮತಿಸಿರುವ ಕೇಂದ್ರಗಳಲ್ಲಿ ಕೆಲಸಮಾಡುತ್ತದೆ. ಕಲೆ, ನೃತ್ಯ, ನಾಟಕ, ಹಾಡು ಇವು ಸಮಾಜದಲ್ಲಿ ಹರಡಿಕೊಳ್ಳುತ್ತಲೇ ಒಂದರಿಂದೊಂದು ಪ್ರತ್ಯೇಕಿತವಾಗುತ್ತವೆ. ಲಂಡನ್ನಿಗೆ ಸೇರಿದ ಒಬ್ಬನು ತನ್ನ ನರ್ತನ, ಗಾಯನ, ನಾಟಕ ಧರ್ಮಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ನೋಡುತ್ತಾನೆ. ನನ್ನ ಹಳ್ಳಿಯಿಂದ ಬಂದ ಒಬ್ಬನು ಅವೆಲ್ಲವನ್ನೂ ಒಂದೇ ಕಡೆ ನೋಡಲು ಬಯಸುತ್ತಾನೆ. ಸರಳವಾಗಿ ಹೇಳಬೇಕೆಂದರೆ, ಇಬ್ಸೆನ್ ನನ್ನ ಹಳ್ಳಿಯಲ್ಲಿ ಅಸಾಧ್ಯ; ಆದರೆ ಇನ್ನೊಂದು ಮಾತು ಸೇರಿಸುತ್ತೇನೆ, ಅವನು ಸಾಧ್ಯವಾಗಬಾರದು.

ಈ ಸಂದರ್ಭವನ್ನು ಸ್ವಲ್ಪ ಬೇರೆಯಾದ ಮಾತುಗಳಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ. ಅನೇಕ ವೇಳೆ ಒಂದು ಟೀಕೆ ಮಾಡಲಾಗುತ್ತದೆ, ಅದು ಪೂರ್ತಿಯಾಗಿ ಸಮರ್ಥನೀಯವಲ್ಲದಿಲ್ಲ, ನಮ್ಮ ನಾಟಕಗಳು ತುಂಬ ಕ್ರಿಯೆಯನ್ನು ತಡೆಯುವ ವಸ್ತುವನ್ನು ತೆಳುವುಗೊಳಿಸುವ ಹಾಡು ಮತ್ತೇ ಕುಣಿತಗಳು ತುಂಬಿರುತ್ತವೆ, ಕಾವ್ಯವು ಪಲಾಯನವಾದಿಯಾದದ್ದು ಎಂದೂ ಆ ಟೀಕೆ ಹೇಳುತ್ತದೆ. ಈ ಟೀಕೆಯಲ್ಲಿ ಸ್ವಲ್ಪ ಮಟ್ಟಿಗೆ ಸತ್ವವಿದೆ, ನಮ್ಮ ಧರ್ಮನಿರಪೇಕ್ಷ ನಾಟಕಗಳು ಮತ್ತು ಚಲನಚಿತ್ರಗಳಿಗೆ ಅನ್ವಯಿಸಿದಾಗ ಮಾತ್ರ, ನಮ್ಮ ಜನಪದ ರಂಗಭೂಮಿಗೆ ಅದು ಅನ್ವಯವಾಗುವುದಿಲ್ಲ. ಈ ವೇಳೆಗೆ ಸ್ಪಷ್ಟವಾಗಿರಬೇಕು; ಜನಪದ ರಂಗಭೂಮಿಯಲ್ಲಿ ಮನರಂಜನೆಯು ಸ್ವರೂಪತಹ ಮುಖ್ಯವಾಗಿ ಪರಿಹಾರ ರೂಪದ್ದು. ಅನೇಕ ರೀತಿಗಳಲ್ಲಿ ವಂಚಿತ ಬದುಕನ್ನು ಬಾಳುವ ಮನುಷ್ಯನು, ಸಾಮಾಜಿಕ- ಸಾಂಸ್ಕೃತಿಕ ನಿರ್ಬಂಧಗಳಿಗೆ ಒಳಪಟ್ಟವನು ಅಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಕಾಣುತ್ತಾನೆ. ತನ್ನ ವಂಚಿತ ಜೀವನದ ಸೀಮಿತಗಳಿಂದ ಮೇಲೆ ಏರುತ್ತಾನೆ. ಅತ್ಯಂತ ಮುಖ್ಯವಾದ ಈ ಬಿಡುಗಡೆ, ಸಂಪೂರ್ಣತೆ ಸಂಭವಿಸುವ ಧಾರ್ಮಿಕ ಚೌಕಟ್ಟು ಅವನ ಸೂಕ್ಷ್ಮ ಹಾಗೂ ಸ್ಥೂಲ ವಲಯಗಳನ್ನು ಆವರಿಸುವ ನಿರ್ಣಯವೊಂದನ್ನು ಸೂಚಿಸುತ್ತದೆ. ಇದು ಹೀಗಾದರೆ ನನ್ನ (ಲಂಡನ್ನಿನ) ನಾಗರಿಕ ಮನರಂಜನೆ ಮತ್ತು ಧರ್ಮಗಳ ನಡುವೆ ಆಯ್ಕೆಯ ಅವಕಾಶವಿದೆ. ಮನರಂಜನೆಯಲ್ಲೇ ಹಲವು ಬಗೆಯ ಮತ್ತು ಹಲವು ಹಂತಗಳ ಮಧ್ಯೆ ಆಯ್ಕೆ ಮಾಡಿಕೊಳ್ಳಬಹುದು. ಅವನು ಒಂದು ಗಾಯನ ಪ್ರದರ್ಶನವನ್ನೋ, ಸ್ಟ್ರೀಪ್ ಟೀಸ್ ಪ್ರದರ್ಶನವನ್ನೋ ನೋಡಲು ಹೋದರೆ ಅವನ ವರ್ತನೆ ಪಲಾಯನವಾದಿಯಾಗುತ್ತದೆ. ಆದರೆ ಒಂದು ಬಯಲಾಟದಲ್ಲಿ ಗಾಯನವಿದ್ದರೆ ಅಥವಾ ದ್ರೌಪದಿಯ ವಸ್ತ್ರಾಪಹರಣವಿದ್ದರೆ ಅದು ಸಂವಹಿಸುವ ಭಾವೇ ಬೇರೆಯಾಗುತ್ತದೆ. ಅಲ್ಲಿ ಅದು ಮೂಲಭೂತವಾಗಿ ಧಾರ್ಮಿಕ ಮತ್ತು ಪರಿಹಾರಾತ್ಮಕ. ಪಲಾಯನವಾದದ ಕುರುಹುಗಳೂ, ಜನಪದ ನಾಟಕವೊಂದರ ಸಂಕೇತಗಳೂ ಸಮಾನವಾಗಿ ಕಂಡುಬರುವುದು ಸಮಾನ ಸ್ವರೂಪದ ಆಕಸ್ಮಿಕ ಮಾತ್ರ. ಸಂವಹಿತವಾಗುವ ಭಾವದಲ್ಲಿ ಇರುವ ವ್ಯತ್ಯಾಸವನ್ನು ನೋಡಲು ವ್ಯಕ್ತಿಯು ಬಹುಜಾಗ್ರತನಾಗಿ ಆಲೋಚಿಸಬೇಕಾಗುತ್ತದೆ.

ನಮ್ಮ ದೇಶದಲ್ಲಿ ನಗರ ರಂಗಭೂಮಿಯು ಅಗಾಧವಾಗಿ ಪ್ರಗತಿ ಹೊಂದಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಈ ಪ್ರಗತಿ ವ್ಯಕ್ತವಾಗಿರುವುದು ತಾಂತ್ರಿಕ ಮತ್ತು ತಂತ್ರಜ್ಞಾನಗಳಲ್ಲಿ ಮಾತ್ರ. ಈಗ ನಮ್ಮ ಬಳಿ ಅತ್ಯಂತ ಸೂಕ್ಷ್ಮವಾದ ರಂಗಸಜ್ಜಿಕೆಗಳಿವೆ. ತರಬೇತಿ ಪಡೆದ ‘ಆಧುನಿಕ’ ನಟರಿದ್ದಾರೆ, ನಿರ್ದೆಶಕರ ಪ್ರತಿಭಾ ಕೌಶಲ್ಯವಿದೆ, ಇವೆಲ್ಲ ನಮ್ಮ ರಂಗಭೂಮಿಗೆ ಹೊಸ ಅಂಶಗಳೂ. ಆದರೆ ಈ ಪ್ರಗತಿ ಒಂದು ದಿಕ್ಕುದೆಸೆಯಿಲ್ಲದ್ದು. ಏಕೆಂದರೆ ರಂಗಭೂಮಿ ನಮ್ಮ ಜನರ ಮನದಾಳದ ಅಗತ್ಯಗಳನ್ನು ಪೂರೈಸುತ್ತಿಲ್ಲ. ನಮ್ಮ ಜನರಿಗೆ ನಿಜವಾಗಿ ಏನು ಬೇಕಾಗಿದೆ ಎಂಬುದನ್ನೇ ನಾವು ಈಗ ಸರಿಯಾಗಿ ತಿಳಿದುಕೊಂಡಿಲ್ಲ. ಅವರ ನಿರೀಕ್ಷೆಗಳನ್ನು ಪೂರೈಸುವುದಕ್ಕೆ ಬದಲಾಗಿ ನಾವು ನಮ್ಮವೇ ರಂಗಸಂಬಂಧಿ ವಿಚಾರಗಳನ್ನು ಅವರ ಮೇಲೆ ಹೇರುತ್ತಿದ್ದೇವೆ. ಇದರ ಫಲವಾಗಿ, ನಮ್ಮ ಜನರು ರಂಗಭೂಮಿಯನ್ನು ತೊರೆದು ಸಿನಿಮಾ ಮತ್ತು ಟೆಲಿವಿಷನ್‌ಗಳನ್ನು ಅಪೇಕ್ಷಿಸುತ್ತಿದ್ದಾರೆ. ರಂಗಭೂಮಿಯೇ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಅತ್ಯಂತ ಮುಖ್ಯವಾದ ಕೇಂದ್ರ ಎಂದು ಈಗಲೂ ನಾನು ನಂಬುತ್ತೇನೆ. ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ರಂಗಭೂಮಿಯ ಪರಿಹಾರಗಳನ್ನು ಕಾಣುವುದು ಸಾಧ್ಯ. ಏಕೆಂದರೆ ಒಂದು ಸಮಯದ ಪ್ರಜ್ಞೆಯು ರೂಪುಗೊಳ್ಳುವುದು ಅದರ ರಂಗಭೂಮಿಯಿಂದ, ದುರದೃಷ್ಟವಶಾತ್ ನಾವು ನಮ್ಮ ರಂಗಭೂಮಿಯನ್ನು ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ನಮ್ಮ ನಾಟಕಕಾರರ ಇನ್ನೂ ಪ್ರಯೋಗ ಮಾಡುತ್ತಲೇ ಇದ್ದಾರೆ. ಪ್ರಯೋಗ ಮಾಡುತ್ತಲೇ ಇರುವುದು ಅಪಾಯಕಾರಿಯಾದ ಹವ್ಯಾಸ. ರೀತಿನೀತಿಗಳು, ರೂಪಗಳು, ಭಾಷೆ ಇವೆಲ್ಲ ಧಿಡೀರನೆ ಫ್ಯಾಷನ್ ಆಗುತ್ತವೆ, ಹಾಗೆಯೇ ಅನಿರೀಕ್ಷಿತವಾದ ಫ್ಯಾಷನ್ ಕಳೆದುಕೊಳ್ಳುತ್ತವೆ. ರಂಗಭೂಮಿಯು ನಮ್ಮ ನಿರ್ದೇಶಕರ ಕೈಗೊಂಬೆಯಾಗಬಾರದು. ಹೊಸ ಆಟಿಕೆಗಳನ್ನು ಒಲಿದು ಹಳೆಯದನ್ನು ಹಾಳು ಮಾಡುವುದಕ್ಕೆ ಅವಕಾಶವಿರಬಾರದು.

ಜಾನಪದ ರಂಗಭೂಮಿಯ ಭವಿಷ್ಯತನ್ನು ಕುರಿತು ನನ್ನ ಅನಿಸಿಕೆ ಏನೆಂದು ಕೆಲವೊಮ್ಮೆ ನನ್ನನ್ನು ಕೇಳಲಾಗುತ್ತದೆ. ಕಂಪ್ಯೂಟರಗಳು ಮತ್ತು ತಾರಾಯುದ್ಧಗಳ ಜಗತ್ತಿನಲ್ಲಿ ಅದಕ್ಕೆ ಬೆಲೆ ಬರುತ್ತದೆಯೇ! ಈ ಮೊದಲು ಸೂಚಿಸಿದ್ದನ್ನೇ ಮತ್ತೇ ಹೇಳಬಯಸುತ್ತೇನೆ: ಯಾವುದೇ ಕಾಲ ಹಂತದಲ್ಲಿ, ಭಾಷೆಯಂತೆಯೇ ಜನಪದ ರಂಗಭೂಮಿಯೂ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ. ಉಪಯೋಗಿಸುವವರು ಎಲ್ಲಿಯವರೆಗೆ ಅದು ಇರಬೇಕೆಂದು ಬಯಸುವರೋ ಅಲ್ಲಿಯವರೆಗೆ ಊರ್ಜಿತವಾಗಿರುತ್ತದೆ. ಇತಿಹಾಸದ ಮಂದಗತಿಯಲ್ಲಿ ಬದಲಾವಣೇಯೇನಾದರೂ ಸಂಭವಿಸಿದರೂ ಅದು ಮುಂದಿನ ಕಾಲಗಳಲ್ಲಿ ಉಳಿದುಕೊಂಡಿರುತ್ತದೆ; ಕಾಲಜ್ಞಾನದಲ್ಲಿ ಹೇಳಿದ ಭಾರೀ ಬದಲಾವಣೆ ಸಂಭವಿಸಿದರೆ ಅದು ಉಳಿಯುವುದಿಲ್ಲ, ಆದರೆ ಆಗ ಗ್ರಾಹಕರೂ ಇರುವುದಿಲ್ಲ.

* * *