ಬೀದಿನಾಟಕವು ಇತ್ತೀಚಿನದು. ಜಾನಪದ ನಾಟಕದಂತೆಯೇ ಅದೂ ಪ್ರೇಕ್ಷಕರು ಭಾಗವಹಿಸಲು ಅವಕಾಶ ಕಲ್ಪಿಸುತ್ತದೆ. ರಸ್ತೆಪಕ್ಕದ ಕಾಲುದಾರಿಗಳಲ್ಲಿ ಕುಳಿತು ಪ್ರೇಕ್ಷಕರು ಆವೃತ ರಂಗಮಂಟಪದ ಪ್ರೇಕ್ಷಕರ ಹಾಗೆ ‘ನಾಲ್ಕನೆಯ ಗೋಡೆ’ ಅಲ್ಲ. ಅವರು ಸ್ಥಳದಿಂದ ಸ್ಥಳಕ್ಕೆ ಅನಿರ್ಭಾಧಿತವಾಗಿ ಓಡಾಡುತ್ತಾರೆ ಮತ್ತು ನಾಟಕವು ಅಭಿನಯಗೊಳ್ಳುತ್ತಾ ಹೋದಂತೆ ಅದಕ್ಕೆ ಸ್ಪಂದಿಸುತ್ತಾರೆ. ಪ್ರೇಕ್ಷಕರ ಹಾಗೆಯೇ ನಟರೂ ಮುಕ್ತರಾಗಿ ಓಡಾಡುತ್ತಾ ನೇರವಾಗಿ ಪ್ರೇಕ್ಷಕರನ್ನು ಸಂಬೋಧಿಸುತ್ತಾರೆ. ಬೀದಿಯಲ್ಲಿ ಪ್ರದರ್ಶಿತವಾದ ನಾಟಕವು ಆದಿ-ಅಂತ್ಯಗಳೆರಡೂ ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಬೇರುಬಿಟ್ಟ ಹಾಗಿರುತ್ತದೆ.

ಬೀದಿಯಲ್ಲಿ ಅಭಿನೀತವಾದಾಗ ಒಂದು ನಾಟಕಕ್ಕೆ ಏನಾಗುತ್ತದೆ? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಏಕೆಂದರೆ ಒಂದು ರಸ್ತೆಯಲ್ಲಿ ನಡೆಯುವ ಒಂದು ಘಟನೆಯನ್ನೂ ನಾಟಕವನ್ನೂ ಪ್ರತ್ಯೇಕಗೊಳಿಸುವುದು ಕಷ್ಟ. ಆದರೆ ಬೀದಿನಾಟಕಕ್ಕೆ ಆವೃತ್ತ ರಂಗಸ್ಥಳದ ನಾಟಕಕ್ಕಿಂತ ಒಂದು ಅನುಕೂಲತೆ ಹೆಚ್ಚು. ಹೊಚ್ಚ ಹೊಸದಾದ ದೃಶ್ಯಗಳನ್ನಾಗಲಿ ಮಾತುಗಳನ್ನಾಗಲಿ ಅದು ಒಗಗಿಸಬಲ್ಲದು. ಆವೃತ ರಂಗಭೂಮಿಯಲ್ಲಿ ಅದು ಅಸಾಧ್ಯ. ನಾಟಕದ ಅರ್ಥವು ನಾಟಕದ ಪಠ್ಯಕ್ಕೆ ಕಟ್ಟುಬಿದ್ದಿರುವುದಿಲ್ಲ. ಪ್ರದರ್ಶನದ ಕಾಲದಲ್ಲಿ ಅದು ಹೊಸ ಅರ್ಥವನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಒಂದು ಪ್ರದರ್ಶನದಿಂದ ಇನ್ನೊಂದಕ್ಕೆ ಈ ಅರ್ಥವು ಬದಲಾಗುತ್ತದೆ ಕೂಡ. ಪ್ರೇಕ್ಷಕರ ಅನಿಬರಬಂಧಿತ ಪ್ರತಿಕ್ರಿಯೆಯೂ ನಾಟಕಕ್ಕೆ ಏನನ್ನಾದರೂ ಕೂಡಿಸುತ್ತಲೇ ಇರುತ್ತದೆ. ಪ್ರದರ್ಶನದ ಆಟದಲ್ಲಿ ಸಿಕ್ಕಿಕೊಂಡ ಪ್ರೇಕ್ಷಕರೂ ಜವಾಬ್ದಾರಿಯಿಂದ ವರ್ತಿಸುತ್ತಾರೆ. ನಾಟಕದ ಕಾವು ನಿಧಾನವಾಗಿ ಮತ್ತು ಕ್ರಮವಾಗಿ ನಿರ್ಮಾಣಗೊಂಡು ರಸ್ತೆಯ ಮಧ್ಯ ನಾಟಕವು ಸೃಷ್ಟಿಗೊಳ್ಳುತ್ತದೆ. ನಾಟಕದ ಪಠ್ಯವು ಬಹುವಾಗಿ ಸಂವಾಹಕವಾಗಿರಬೇಕು ಮತ್ತು ಪ್ರೇಕ್ಷಕರು ಪ್ರತಿಕ್ರಿಯಿಸಲೇ ಬೇಕಾದಷ್ಟು ಪ್ರಚೋದಕವಾಗಿರಬೇಕು. ರಂಗಸ್ಥಳಕ್ಕೂ ಪ್ರೇಕ್ಷಕರಿಗೂ ನಡುವೆ ಇರುವ ದೂರವನ್ನು ಕಡಿಮೆಮಾಡಿ ಅವರ ಸಂಬಂಧವನ್ನು ತಲೆಕೆಳಗಾಗುವಂತೆ ಮಾಡುವುದೇ ಬೀದಿ ನಾಟಕದ ಮುಖ್ಯ ಉದ್ದೇಶ. ಒಂದು ನಾಟಕವನ್ನು ನೋಡಲು ಜನರು ರಂಗಮಂದಿರಕ್ಕೆ ಧಾವಿಸುವ ಬದಲು ರಂಗಮಂದಿರಕ್ಕೆ ತನ್ನ ಪ್ರೇಕ್ಷಕರ ಬಳಿಗೆ ಬರುತ್ತದೆ.

ಎಲ್ಲಾ ಬೀದಿನಾಟಕಗಳೂ ಒಂದು ಉದ್ದೇಶವನ್ನು ಹೊಂದಿರುತ್ತವೆ ಮತ್ತು ಅದಕ್ಕೆ ಬದ್ಧವಾಗಿರುತ್ತವೆ. ಜನರು ತಾವಾಗಿಯೇ ವಿಚಾರ ಮಾಡದ ಒಂದು ವಿಷಯವನ್ನು ಕುರಿತು ಅವರ ಮನವೊಪ್ಪಿಸಿ ಹೇಳುವ ಅತ್ಯಂತ ಪರಿಣಾಮಕಾರಿಯಾದ ವಿಧಾನ ಅದು. ಒಂದು ರೀತಿಯಲ್ಲಿ ಅವು ಪ್ರಚಾರದ ತುಣುಕುಗಳು, ಹೊಸ ವಿಚಾರಗಳ ಪ್ರಚಾರ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ, ಬೀದಿ ನಾಟಕವು ಪ್ರಚಾರದೊಂದಿಗೆ ಬೆರೆತ ಮನರಂಜನೆ. ಆದರೆ ನಾವು ಬೀದಿ ನಾಟಕವನ್ನು ಬಹುಮಟ್ಟಿಗೆ ನಮ್ಮ ರಾಜಕೀಯ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆಯಲು, ಅಥವಾ ಸಾಮಾಜಿಕ ಚರ್ಚೆಯ ಒಂದು ಸಂದರ್ಭವಾಗಿ ಉಪಯೋಗಿಸಿಕೊಂಡಿದ್ದೇವೆ. ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಿ, ರಾಜಕೀಯ ಪ್ರಕ್ರಿಯೆಯಲ್ಲಿ ಅವರ ಸಕ್ರಿಯವಾಗಿ ಭಾಗವಹಿಸುವಂತೆ ಅವರನ್ನು ಉತ್ತೇಜಿಸಲು ಉಪಯೋಗಿಸಿಕೊಂಡಿದ್ದೇನೆ.

ನಾವು ಸ್ವಾತಂತ್ರ್ಯವನ್ನು ಪಡೆದು ಒಂದು ಪ್ರಜಾಸತ್ತೆಯಾಗಿ ಅಗಲೇ ನಲವತ್ತು ವರ್ಷಗಳಾದವು, ಈ ನಾಲ್ಕು ದಶಕಗಳ  ಇತಿಹಾಸಕ್ಕೆ ನಾವು ಪ್ರತಿಯೊಬ್ಬರೂ ಹೊಣೆಗಾರರು. ನಮ್ಮ ರಂಗಭೂಮಿಯು ರಾಜಕೀಯದ ಸಂಸ್ಪರ್ಶವಿಲ್ಲದೆ ಇರುವುದು ಹೇಗೆ ಸಾಧ್ಯ? ನವೋದಯ ಸಾಹಿತ್ಯ, ನಮ್ಮ ರಾಷ್ಟ್ರೀಯ ಪುನರುಜ್ಜೀವನದ ಸಾಹಿತ್ಯ ನಮ್ಮ ಕನಸುಗಳ ಹಾಗೂ ರಾಜಕೀಯ ಹೊಣೆಗಾರಿಕೆಗಳನ್ನು ಕುರಿತು ನಮಗಿರುವ ಅರಿವಿನ ಅಭಿವ್ಯಕ್ತಿಯಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧಿಜಿಯವರೊಂದಿಗೆ ಇಡೀ ದೇಶವೇ ಭಾಗವಹಿಸಿತ್ತು. ಮುಂದಿನ ರಾಜಕೀಯವು ಜನತೆಯ ರಾಜಕೀಯವಾಗಿರುತ್ತದೆ ಎಂಬುದು ಆಗಲೇ ಸುಸ್ಪಷ್ಟವಾಗಿತ್ತು. ೧೯೪೭ರಿಂದ ಸ್ವತಂತ್ರ ಭಾರತದ ರಾಜಕಾರಣವು ‌ಪ್ರಾರಂಭವಾಯಿತು. ಆದರೆ ನಾವು ನಮ್ಮ ಆದರ್ಶಗಳನ್ನು ಬಿಟ್ಟಿರಲಿಲ್ಲ. ವಾಸ್ತವವಾಗಿ ಅಶೋಕ ಮತ್ತು ಬುದ್ಧರ ಯುಗದ ರಾಜಕೀಯ ವಾತಾವರಣವನ್ನು ಮರುಸೃಷ್ಟಿಗೈಯಲು ನಮಗೆ ನೆರವಾಗುವ ಹಲವು ರಾಜಕೀಯ ಕುರುಹುಗಳು ಈಗಲೂ ನಮ್ಮಲ್ಲಿವೆ.

ನೆಹರೂ ಯುಗವು ನಮ್ಮ ರಾಜಕೀಯ ಆದರ್ಶಗಳನ್ನು ಪೋಷಿಸಿತು. ಈ ಆದರ್ಶಗಳಲ್ಲಿ, ಎಷ್ಟು ವಾಸ್ತವತೆಗೆ ಪರಿವರ್ತನೆಗೊಂಡಿತು ಎನ್ನುವುದು ಬೇರೆ ಪ್ರಶ್ನೆ. ಅವುಗಳಲ್ಲಿ ಹಲವು ಹಾಗೆಯೇ ಉಳಿದು ಹೋದುವು ಎನ್ನುವುದೂ ನಿಜ. ನಾವು ಸ್ವಾತಂತ್ರ್ಯ, ಪ್ರಜಾಸತ್ತೆ, ರಾಷ್ಟ್ರೀಯ ಐಕ್ಯತೆ ಇಂತಹ ಪರಿಕಲ್ಪನೆಗಳನ್ನು ಪ್ರತಿದಿನವೂ ಬಳಸುತ್ತೇವೆ. ಆದರೆ ಅವುಗಳ ಅರ್ಥವನ್ನು ನಿರ್ಧರಿಸುವವರು ಯಾರು? ಇವುಗಳಂತಹ ರಾಜಕೀಯ ಪರಿಕಲ್ಪನೆಗಳು ಒಂದು ಖಚಿತವಸ್ತುವನ್ನು ಸೂಚಿಸುವುದಿಲ್ಲ. ಉದಾಹರಣೆಗೆ ‘ಸ್ವಾತಂತ್ರ್ಯ’ ಎಂಬುವುದು ಯಾವ ಖಚಿತವಾದ ವಸ್ತುವನ್ನು ಸೂಚಿಸುತ್ತದೆ? ರಾಷ್ಟ್ರೀಯ ಪುನರಜ್ಜೀವನದ ನಮ್ಮ ಕವಿಗಳು ಮತ್ತು ಲೇಖಕರು ಈ ಪರಿಕಲ್ಪನೆಯನ್ನು ಸೃಷ್ಟಿಸಿದರು ಎನ್ನುವುದು ನಿಜ. ಆದರೆ ಇಂದು ಈ ಪದದ ಅರ್ಥವನ್ನೂ ಮಿತಿಯನ್ನೂ ರಾಜಕಾರಣಿಗಳು ನಿರ್ಧರಿಸುತ್ತಿದ್ದಾರೆ. ಯಾವಾಗಲೂ ಪದಗಳನ್ನೂ ಅವುಗಳ ಅರ್ಥಗಳನ್ನೂ ರಾಜಕೀಯ ಶಕ್ತಿಯು ನಿಯಂತ್ರಿಸಲು ಬಯಸುತ್ತದೆ. ನನ್ನ ವಿಚಾರವನ್ನು ಕನ್ನಡದಲ್ಲಿ ಜನಪ್ರಿಯವಾಗಿರುವ ಒಂದು ಬೀದಿನಾಟಕದಿಂದ ತೋರಿಸಿಕೊಡಲು ಪ್ರಯತ್ನಿಸುತ್ತೇನೆ.

ಕನ್ನಡ ಕವಿ ದ.ರಾ. ಬೇಂದ್ರೆಯವರು ‘ಜಾತ್ರೆ’ ಎಂಬ ನಾಟಕವನ್ನು ಬರೆದಿದ್ದಾರೆ. ಕತೆಯು ಸಣ್ಣ ರಾಜ್ಯವೊಂದರಲ್ಲಿ ನಡೆಯುತ್ತದೆ. ಅದು ಸ್ವಾತಂತ್ರ್ಯಪೂರ್ವ ಕಾಲದ ಒಂದು ಕತೆ. ನಗರದಲ್ಲಿ ಪ್ಲೇಗ್ ಹರಡಿದ್ದರೂ ರಾಜನು ಎಂದಿನಂತೆಯೇ ಜಾತ್ರೆಯು ನಡೆಯಬೇಕೆಂದು ಇಚ್ಛಿಸುತ್ತಾನೆ. ಫ್ಲೆಗು ಇಲ್ಲ ಎಂದು ಘೋಷಿಸುತ್ತಾನೆ. ರಾಜನಾದ್ದರಿಂದ ‘ಪ್ಲೇಗು’ ಎಂಬ ಪದದ ಅರ್ಥವನ್ನು ನಿರ್ಧರಿಸುವವನು ಅವನೇ. ತಾನು ಒಂದು ಪ್ರಕಟಣೆ ನೀಡುವುದರಿಂದ ಪ್ಲೇಗು ತನ್ನ ನಗರಕ್ಕೆ ಕಾಲಿಡದಂತೆ ನಿವಾರಿಸಬಹುದು. ಎಂದು ಅವನು ನಂಬುತ್ತಾನೆ. ಅವನಿಗೆ ಪ್ಲೇಗು ಸೋಂಕು ತಗಲುವವರೆಗೂ ಅವನು ಹಾಗೆಯೇ ನಂಬಿ ಕೊಂಡಿರುತ್ತಾನೆ. ಅವನಿಗೆ ವಿಪರೀತ ಜ್ವರ ಬಂದಿದೆ, ನಾಡಿಬಡಿತ ಜೋರಾಗಿದೆ. ಆದರೂ ಅವು ಪ್ಲೇಗ್ ಕಾಯಿಲೆಯ ಕುರುಹುಗಳೆಂದು ವೈದ್ಯರು ಹೇಳಲಾರರು. ಏಕೆಂದರೆ ರಾಜನು ಆ ಪದವನ್ನೇ ತನ್ನ ರಾಜ್ಯದಿಂದ ಹೊರಹಾಕಿ ಬಿಟ್ಟಿದ್ದಾನೆ. ಆ ಕುರುಹುಗಳು ರಾಜನ ವೈಭವವನ್ನು ಹೇಳುತ್ತವೆ ಎಂದಷ್ಟೇ ಹೇಳುತ್ತಾನೆ. ಆದರೆ ರಾಜನಿಗೆ ಈಗ ಸಾವಿನ ಹೆದರಿಕೆ ಬಂದುಬಿಟ್ಟಿದೆ. ಆಗ ರಾಜ್ಯದಲ್ಲಿ ಪ್ಲೇಗ್ ಮಾರಿಯಿದೆಯೆಂದೂ ಜಾತ್ರೆಯ ನಡೆಯಕೂಡದೆಂದೂ ಆಜ್ಞೆ ಮಾಡುತ್ತಾನೆ. ಈ ನಾಟಕದ ಐತಿಹಾಸಿಕ ಸಂದರ್ಭವೂ ಅರ್ಥಪೂರ್ಣವಾದದ್ದು. ಬ್ರಿಟಿಷ್ ಆಳಿಕೆಯ ಕಾಲದಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳು ಅಸಹಾಯಕತೆಯಿಂದ, ವೇಗವಾಗಿ ಸಾಯುತ್ತಿರುವ ಸಂಪ್ರದಾಯಗಳಿಗೆ ಮತ್ತು ಆಚಾರ ವಿಚಾರಗಳಿಗೆ ಜೋತು ಬಿದ್ದು ಇತಿಹಾಸದ ಪಳೆಯುಳಿಕೆಗಳಂತೆ ಕಾಣುತ್ತಿದ್ದುವು. ಈ ನಾಟಕದಲ್ಲಿ ಒಬ್ಬನೇ ಒಬ್ಬ ರಾಜ, ಮಿಕ್ಕವರೆಲ್ಲ ಅವನ ಪ್ರಜೆಗಳು. ತಾನು ಆಜ್ಞೆ ಮಾಡಿದರೆ ಪ್ಲೇಗು ಇರಲು ಸಾಧ್ಯವಿಲ್ಲ ಎಂದು ಹಟ ಹಿಡಿಯುವ ರಾಜನ ಸ್ಥಿತಿಯು ಸಾಂಕೇತಿಕವಾಗಿ ಪದಗಳು ಮತ್ತು ಅವುಗಳ ಅರ್ಥಗಳನ್ನು ನಿಯಂತ್ರಿಸುವ ಪ್ರಶ್ನೆಯನ್ನು ಎತ್ತುತ್ತದೆ. ರಾಜನು ತನ್ನ ಭ್ರಮಾಲೋಕದಲ್ಲಿ ಸುಖವಾಗಿರುವಾಗಲೇ ಅವನಿಗೆ ಪ್ಲೇಗಿನ ಸೋಂಕು ತಗಲುತ್ತದೆ, ಅರ್ಥಗಳ ನಿಯಂತ್ರಣದ ಶಕ್ತಿಯು ಜನರಿಗೆ ವರ್ಗಾವಣೆಗೊಳ್ಳುತ್ತದೆ. ಇತಿಹಾಸವೆನ್ನುವುದು ಸಂಪ್ರದಾಯಗಳ ಅಧಿಕಾರದ ಮುಂದುವರಿಕೆ ಮಾತ್ರವಲ್ಲ ಎಂಬುವುದನ್ನು ನಾಟಕವು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಮತ್ತೆ ನಾವು ಅಂಥದೇ ಪರಿಸ್ಥಿತಿಯಲ್ಲಿರುವುದನ್ನು ಅರಿಯುತ್ತೇವೆ. ಬೀದಿರಂಗಭೂಮಿಗೂ ರಾಜಕೀಯಕ್ಕೂ ಇರುವ ಸಂಬಂಧವನ್ನು ಈ ನಾಟಕವು ತಿಳಿಸಿಕೊಡುತ್ತದೆ.

* * *