ಆಚರಣೆಯೆಂದರೆ ಅಭಿನಯ ಅಥವಾ ಪುನರಭಿನಯ, ಧಾರ್ಮಿಕ ವ್ಯಕ್ತಿ ಅಥವಾ ಶಕ್ತಿಯೊಂದರ ನಡವಳಿಕೆಯ ಅಭಿನಯ. ನಡವಳಿಕೆಯಾದುದರಿಂದ ಅದಕ್ಕೊಂದು ಹಿಂದುಮುಂದು ಸೇರಿ, ಒಂದು ಸಂದರ್ಭ ಸೇರಿ ಪುರಾಣವಾಗುತ್ತದೆ. ಹಿಂದೆ ನಡೆದ ಪುರಾಣದ ಅಭಿನಯವಾದುದರಿಂದ ವೇಷಭೂಷಣ, ಹಾಡುಗಾರಿಕೆ, ಕುಣಿತ, ಹಿಮ್ಮೇಳವಾದ್ಯ-ಇವೆಲ್ಲ ಸೇರಿಕೊಳ್ಳುತ್ತವೆ. ಪುನರಭಿನಯ ಹಾಗೆಂದರೆ ನಿರ್ದಿಷ್ಟ ದಿನ, ಸಮಯ, ಸ್ಥಳಗಳಲ್ಲಿ ನಿರ್ದಿಷ್ಟ ಕುಲವ್ಯಕ್ತಿಗಳಿಂದ ಮತ್ತೆ ಮತ್ತೆ ಆಚರಿಸಲ್ಪಡುವುದರಿಂದ ಈ ಆಚರಣೆಯ ಯಾವೊಂದು ಅಂಗವನ್ನೂ ಇನ್ನೊಂದರಿಂದ ಬೇರ್ಪಡಿಸಲಿಕ್ಕಾಗದು. ಯಾಕೆಂದರೆ ನಡವಳಿಕೆ ಪುರಾಣವಾಗಿರುತ್ತದೆ. ಉದಾಹರಣೆಗೆ ಸವದತ್ತಿ ಎಲ್ಲಮ್ಮನ ಜೋಗಿತಿಯರು ಮುತ್ತೈದೆ ಹುಣ್ಣಿಮೆ ದಿನ ಆಚರಿಸುವ ಆಚರಣೆಯನ್ನು ಗಮನಿಸಬಹುದು. ಇದಕ್ಕಿಂದ ಹಿಂದಿನ ಹುಣ್ಣಿಮೆ ರಂಡಿ ಹುಣ್ಣಿಮೆ. ಆ ದಿನ ಕಾರ್ತವೀರ್ಯಾರ್ಜುನನೆಂಬ ರಾಜನು ಜಮದಗ್ನಿಯ ಕೊಲೆ ಮಾಡಿದ್ದರಿಂದ ರೇಣುಕೆಯು ವಿಧವೆಯಾಗುತ್ತಾಳೆ. ಜೋಗಿತಿಯರು ಆ ದಿನ ಬಳೆ ಒಡೆದುಕೊಂಡು ಕುಂಕುಮ ಅಳಿಸಿಕೊಂಡಿರುತ್ತಾರೆ. ಆ ಒಂದು ತಿಂಗಳು ಜೋಗಿತಿಯರು ಹಾಡುವುದಿಲ್ಲ, ಕುಣಿಯುವುದಿಲ್ಲ, ಜೋಗಾಡುವುದಿಲ್ಲ. ಮುಂದಿನ ಮುತ್ತೈದೆ ಹುಣ್ಣಿಮೆಗೆ ಜಮದಗ್ನಿಗೆ ಜೀವ ಬಂದು ರೇಣುಕೆ ಮತ್ತೆ ಮುತ್ತೈದೆಯಾಗುತ್ತಾಳೆ. ಅದರಂತೆ ಜೋಗಿತಿಯರೂ ಬಳೆ ತೊಟ್ಟು ಕುಂಕುಮ, ಭಂಡಾರ ಬಳಿದುಕೊಂಡು ತುಂಬಿದ ಕೊಡ ಹೊತ್ತು ಇಡೀ ರಾತ್ರಿ ಕುಣಿಯುತ್ತಾರೆ. ಈಗಿನ ಹಾಡುಗಳ ವಸ್ತು ರೇಣುಕೆಯ ಮಹಿಮೆಗಳನ್ನು ಕೊಂಡಾಡುವುದು. ಗಂಡು ಹೆಣ್ಣು ಜೋಗಿತಿಯರೆಲ್ಲ ಈ ಆಚರಣೆಯನ್ನು ವರ್ಷಂಪ್ರತಿ ಆಚರಿಸುತ್ತಾರೆ.

ಮೂರು ನಾಲ್ಕು ಜೋಗಿತಿಯ ಒಂದೊಂದು ತಂಡಕ್ಕೆ ಒಬ್ಬೊಬ್ಬ ಮುಖ್ಯ ಜೋಗಿತಿ ಕೊಡ ಹೊತ್ತವಳು- ಇರುತ್ತಾಳೆ. ಅವರು ಪರವೂರಿನವರಾಗಿದ್ದರೆ ಹುಣ್ಣಿಮೆ ದಿನ ಬೆಳಗಿನ ಸಮಯಕ್ಕೇ ಬಂದು ಗುಡ್ಡ ತಲುಪಿ ಬಳೆ ಇಟ್ಟು ಮುತ್ತೈದೆಯಾಗುವ ಕ್ರಿಯಾವಳಿಯನ್ನೆಲ್ಲ ಮುಗಿಸಿರುತ್ತಾರೆ. ಸಂಜೆ ಪೂಜೆ ಮುಗಿದೊಡನೆ ಆಯಾ ತಂಡದ ಜೋಗಿತಿಯರು ತಮ್ಮ ಕೊಡದ ಸುತ್ತ ಪ್ರದಕ್ಷಿಣೆ ಹಾಕುತ್ತಾ ವಾದ್ಯ ಬಾರಿಸತೊಡಗುತ್ತಾರೆ. ಈ ತನಕ ಸಾಮಾನ್ಯರಂತಿದ್ದ ಮುಖ್ಯ ಜೋಗಿತಿ ಈಗ ಗಂಭೀರಳಾಗಿ ಕೊಡಕ್ಕೆ ನಮಸ್ಕರಿಸಿ ಅದನ್ನು ತಲೆಯ ಮೇಲೆ ಹೊರುತ್ತಾಳೆ. ಹೊತ್ತ ಕೂಡಲೇ ನಡುಗಲಾರಂಭಿಸುತ್ತಾಳೆ. ಈಗ ದೇವಿ ಆಕೆಯ ಮೈತುಂಬಿದಳೆಂದು ಅರ್ಥ. ಉಳಿದ ಜೋಗಿತಿಯರು ತಾಳ, ತಂತುರ ಹಾಗೂ ಚೌಡಿಕೆ ಬಾರಿಸುತ್ತಿದ್ದರೆ ಮೈತುಂಬಿದ ಜೋಗಿತಿ ನಡುಗುತ್ತ ಮಂಡಲಾಕಾರದಲ್ಲಿ ಕುಣಿಯುತ್ತಾಳೆ. ಕೊಡ ಹೊತ್ತ ಜೋಗಿತಿ ಕುಣಿದು ಸಾಕಾದ ಮೇಲೆ ಹಿಂದೆ ಸರಿದು ಇನ್ನೊಂದು ತಂಡದ ಜೋಗಿತಿಗೆ ಅವಕಾಶ ಮಾಡಿಕೊಡಬಹುದು. ಹೀಗೆ ಅನೇಕ ಕೊಡ ಹೊತ್ತು ಜೋಗಿತಿಯರು ಬೆಳ್ಳಂಬೆಳಗು ಕುಣಿದು ಮಾರನೇ ದಿನ ತಮ್ಮ ಊರಿಗೆ ಹೊರಡುತ್ತಾರೆ. ಊರು ಮುಟ್ಟುವ ತನಕ ತಂಗಿದಲ್ಲೆಲ್ಲ ಕುಣಿಯುವ ಆಚರಣೆ ನಡೆಯುತ್ತಲೇ ಇರುತ್ತದೆ. ಊರು ಮುಟ್ಟಿದ ಮೇಲೆ ರಕ್ಷಣೆಗಾಗಿ ಅವರೊಂದಿಗೆ ಬಂದ ಪರಶುರಾಮನನ್ನು ತಿರುಗಿ ಕಳಿಸಿ ಹೊತ್ತ ಕೊಡವನ್ನು ಗದ್ದಿಗೆಗೊಳಿಸುತ್ತಾರೆ. ಈ ಆಚರಣೆಯ ಅಂತ್ಯಭಾಗ ಇದೇ. ಗುಡ್ಡದಲ್ಲಿ ಮುತ್ತೈದೆಯಾಗಿ ಕೊಡ ಹೊತ್ತಾಗಿನಿಂದ ಹಿಡಿದು ಇಲ್ಲಿನ ತನಕ ಆ ಜೋಗಿತಿಯನ್ನು ಸಾಕ್ಷಾತ್ ಎಲ್ಲಮ್ಮನೆಂದೇ ಭಕ್ತರು ಪರಿಗಣಿಸುತ್ತಾರೆ. ಈ ಸಮಯದಲ್ಲಿ ಆಕೆಯ ಬಾಯಿಂದ ಮಾತುಗಳೆಲ್ಲ ದೇವಿಯ ವಾಕ್ಯಗಳು. ಆಕೆಯ ನಡೆನುಡಿ ಆಚಾರ ವಿಚಾರಗಳು ದೇವಿಯವು. ಅವಳು ಊರಿಗೆ ಬಂದು ಕೊಡ ಇಳಿಸಿದಾಗ “ಮನುಷ್ಯರಲ್ಲಿ ಬಂದಳು” ಎನ್ನುತ್ತಾರೆ. ಅಂದರೆ ಈ ಆಚರಣೆಗೆ ಎಲ್ಲಾ ಆಚರಣೆಗಳಿರುವಂತೆ-ನಿರ್ದಿಷ್ಟ ಪ್ರಾರಂಭ, ಮಧ್ಯೆ, ಅಂತ್ಯಗಳಿವೆ. ದೇವಿಯನ್ನು ಮೈಮೇಳೆ ಆವಾಹನೆ ಮಾಡಿಕೊಳ್ಳುವುದು ಪ್ರಾರಂಭ. ಕುಣಿಯುವುದು ಮಧ್ಯ. ಆಮೇಲೆ ವಿಸರ್ಜನೆ ಮಾಡುವುದು ಅಂತ್ಯ.

ಈ ಕುಣಿತದಲ್ಲಿ ಬರುವ ಕೆಲವು ಬಾಹ್ಯ ಅಂಶಗಳ ಬಗೆಗಿನ ನನ್ನ ಊಹೆಗಳನ್ನು ಹೇಳಿ ಮುಂದೆ ಕುಣಿತದ ವಿಷಯಕ್ಕೆ ಬರುತ್ತಾನೆ. ಈಗಿದ್ದಂತೆ ಎಲ್ಲಮ್ಮನನ್ನು ಕುರಿತ ಕತೆ, ಹಾಡು, ನಂಬಿಕೆ ಆಚರಣೆಗಳು ತುಂಬ ಕಲಬೆರಕೆಯಾಗಿವೆ. ಎಲ್ಲಮ್ಮ ಗಂಡನಿಲ್ಲದೆ ಒಬ್ಬ ಮಗನನ್ನು ಪಡೆದಳೆಂದೂ ಮುಂದೆ ಆ ಮಗ ದೊಡ್ಡವನಾಗಿ ತನ್ನ ತಂದೆ ಯಾರೆಂದು ಪೀಡಿಸಿದ್ದರಿಂದ ಅವನನ್ನು ಕೊಂಡು ಅವನ ಕರುಳಿನಿಂದ ತುಂತುರಿಯ ತಂತೀ ಮಾಡಿ, ತಲೆಬುರುಡೆಯಿಂದ ಆ ವಾದ್ಯದ ದೇಹ ಮಾಡಿ ಜೋಗಿತಿಯರಿಗೆ ಕೊಟ್ಟಳೆಂದೂ ಹಾಡುಗಳಿವೆ. ಹಾಗಾದರೆ ಜಮದಗ್ನಿ ಯಾರು? ಯಾವಾಗ ಬಂದು ಕಥೆಗೆ ಸೇರಿಕೊಂಡು ಆ ಅನಾಥ ಮಗನಿಗೆ ತಂದೆಯಾದ?- ಎಂದು ಪ್ರಶ್ನೆಯೇಳುತ್ತದೆ. ಮುಂದೆ ನದಿಯಲ್ಲಿ ಸ್ತ್ರೀಯರೊಂದಿಗೆ ಲಲ್ಲೆಯಾಡುತ್ತಿದ್ದ ರಾಜನನ್ನು ನೋಡಿ ಎಲ್ಲಮ್ಮನ ಮನಸ್ಸು ಚಂಚಲವಾಯಿತೆಂದೂ ಇದನ್ನು ಗುರುತಿಸಿ ಜಮದಗ್ನಿ ಮಗ ಪರಶುರಾಮನಿಂದ ಎಲ್ಲಮ್ಮನನ್ನು ಕೊಲ್ಲಿಸಿ ಮತ್ತೆ ಜೀವ ಪಡೆದರೆಂದೂ ಕಥೆಗಳಲ್ಲಿ ಬರುತ್ತದೆ. ಮಾತಂಗಿಯೆಂಬ ಎಲ್ಲಮ್ಮನ ಸೇವಕಿಯ ಪ್ರಸ್ತಾಪವೂ ಇದೇ ಕಥೆಗಳಲ್ಲಿ ಬರುತ್ತದೆ. ಈಗಿದ್ದಂತೆ ಎಲ್ಲಮ್ಮನ ದೇವಸ್ಥಾನದ ಪಕ್ಕದಲ್ಲಿ ಮಾತಂಗಿಯ ಸಣ್ಣಗುಡಿಯಿದೆ. ಇನ್ನಷ್ಟು ದೂರದಲ್ಲಿ ಜಮದಗ್ನಿಯ ಗುಡಿಯಿದೆ. ಒಳಗೊಂದು ಜನದಗ್ನಿಯ ಮೂರ್ತಿಯಿದೆ. ಆ ಗುಡಿ ಮತ್ತು ಮೂರ್ತಿಗಳು ತೀರ ಇತ್ತೀಚಿನವೆಂದು ಯಾರೂ ಹೇಳಬಹುದು. ಎಲ್ಲಮ್ಮನ ದೇವಸ್ಥಾನ ಕೂಡ ಇತ್ತೀಚಿನದು. ಆದರೆ ಗದ್ದಿಗೆ ಹಳೆಯದು. ಆದರೆ ಆಕೆಯ ಮೂಲ ಸ್ಥಳದ ಬಳಿಯೇ ಮಾತಂಗಿಯ ಗುಡಿ ಇದ್ದುದು ವಿಶೇಷ. ಅಲ್ಲದೆ ಎಲ್ಲಮ್ಮನಿಗೆ ಸಂಬಂಧಪಟ್ಟ ಆಚರಣೆಗಳು ಮಾತಂಗಿಯೊಂದಿಗೆ ನೇರ ಸಂಬಂಧ ಪಡೆದಂತೆ ಜನದಗ್ನಿ ಪರಶುರಾಮರ ಜೊತೆಗೆ ಪಡೆದಿಲ್ಲ. ಎಕ್ಕಯ್ಯ ಜೋಗಯ್ಯ ಮತ್ತು ಮಾತಂಗಿಯರ ವಿಷಯ ಬರುವುದೇ ಇಲ್ಲ. ಇವುಗಳನ್ನು ಮನಗಂಡರೆ ಮೂಲದ ಸಮೃದ್ಧಿ ದೇವತೆಯೊಂದು ಕಾಲಾಂತರದಲ್ಲಿ ಎಲ್ಲಮ್ಮನಾಗಿ, ನಂತರ ರೇಣುಕೆಯಾಗಿ ಮಾರ್ಪಾಟಾಗಿರಬೇಕೆಂದು ತೋರುತ್ತದೆ.

ಮುಖ್ಯಜೋಗಿತಿ ತುಂಬಿದ ಕೊಡ ಹೊರುತ್ತಾಳೆ ಎಂದೆನಲ್ಲ, ಇದೇ ತುಂಬಿದ ಕೊಡ ಗೌರೀ ಪೂಜೆಯಲ್ಲಿದೆ, ಕರಗದಲ್ಲಿದೆ, ಇನ್ನೂ ಕೆಲವು ಸ್ತ್ರೀ ದೇವತೆಗಳನ್ನು ಈ ರೀತಿ ತುಂಬಿದ ಕೊಡದಿಂದ ಸಂಕೇತಿಸುವುದಿದೆ. ಇದು ತುಂಬ ಪ್ರಾಚೀನವಾದ ಸಂಕೇತವಾಗಿರಬೇಕು. ಸೃಷ್ಟಿ ಮತ್ತು ಸಮೃದ್ಧಿ ಸೂಚಕವಾದ ಪುರುಷಶಕ್ತಿಯನ್ನು ಲಿಂಗ, ಶಿಶ್ನ, ಕೋಲುಗಳ ಸಂಕೇತಗಳಿಂದ ಪೂಜಿಸಿದಂತೆ, ಸೃಷ್ಟಿ ಸಮೃದ್ಧಿಯ ಸ್ತ್ರೀಶಕ್ತಿಯನ್ನು ಯೋನಿಯಾಕಾರದಲ್ಲಿ, ತುಂಬಿದ ಪಾತ್ರಯಿಂದ ಸಂಕೇತಿಸಿರಬಹುದೆಂದು ತೋರುತ್ತದೆ ಮತ್ತು ಇಂಥ ಪೂಜೆಗಳು ಒಂದಿಲ್ಲೊಂದು ಬಗೆಯಲ್ಲಿ ಹೆಸರಿನೊಂದಿಗೆ ಸಂಬಂಧಿಸಲ್ಪಟ್ಟಿವೆ. ಅನೇಕ ಸಲ ತುಂಬಿದ ಪಾತ್ರೆಯಲ್ಲಿ ಹಸಿರೆಲೆ, ಗರಿಗಳನ್ನು ಸಿಕ್ಕಿಸಿರುವುದು ಉಂಟು. ಪ್ರಾರಂಭದಲ್ಲಿ ಸೃಷ್ಟಿ ಮತ್ತು ಸಮೃದ್ಧಿ ಸೂಚಕವಾಗಿದೆ, ಸ್ವಭಾವದಲ್ಲಿ ಅಮೂರ್ತವಾಗಿದ್ದ ಈ ಪೂಜೆಗೆ ಮುಂದೆ ಹೆಸರೊಡೆದು ಎಲ್ಲಮ್ಮ, ಗೌರಿ, ಗಂಗೆ, ದ್ರೌಪದಿ ಮುಂತಾದ ರೂಪ ಬಂದಿರಬಹುದು. ಇಲ್ಲದಿದ್ದರೆ ಒಂದೇ ಸಂಕೇತ ಅನೇಕ ದೇವತೆಗಳಿಗೆ ಅದೂ ಸ್ತ್ರೀ ದೇವತೆಗಳಿಗೆ ಮಾತ್ರ ಸಂಕೇತವಾಗಿರುವುದಕ್ಕೆ ಕಾರಣಗಳಿರಲಿಲ್ಲ.

ಮೇಲ್ಕಂಡ ಕುಣಿಯೋ ತಂಡದ ಇನ್ನೊಂದು ವಿಶೇಷವೆಂದರೆ ಮುಖ್ಯ ಜೋಗಿತಿ ಯಾವ ಜಾತಿಯವಳಾದರೂ ಆಗಿರಬಹುದು. ಆದರೆ ಉಳಿದ, ವಾದ್ಯ ಬಾರಿಸುವ ಜೋಗಿತಿಯರು ಮಾತ್ರ ದಲಿತರೇ ಆಗಿರುತ್ತಾರೆ. ನಾನು ಆಗಲೇ ಹೇಳಿದಂತೆ ಈ ದೇವತೆ ಈಗಿನ ರುಪ ಪಡೆಯುವುದಕ್ಕೆ ಮೂರು ಘಟ್ಟಗಳನ್ನು ದಾಟಿದೆಯೆಂದು ತೋರುತ್ತದೆ. ಮೊದಲನೇ ಘಟ್ಟ ನಾನು ಮೇಲೆ ಹೇಳಿದಂಥ ಸೃಷ್ಟಿ ಹಾಗೂ ಸಮೃದ್ಧಿ ಸೂಚಕವಾದ ಎಲ್ಲಮ್ಮನೆಂಬಾಕೆಯ ಕಥೆ. ಈ ಅವಧಿಯಲ್ಲೇ ಈ ದೇವತೆಯ ಸಂಸ್ಕೃತೀಕರಣ ಆರಂಭಗೊಂಡಿರಬೇಕು.

ಎಲ್ಲಮ್ಮ ಎಂಬಾಕೆ ಗಂಡನಿಲ್ಲದೇ ಒಬ್ಬ ಮಗನನ್ನು ಹೆತ್ತು ಅವ ದೊಡ್ಡವನಾಗಿ ತಂದೆಯನ್ನು ತೋರಿಸೆಂದು ಪೀಡಿಸಿದಾಗ ಅವನನ್ನು ಶಪಿಸಿಕೊಂಡು ತೊನ್ನುರೋಗದಿಂದ ಪೀಡಿತಳಾಗಿ ಮುಂದೆ ಎಕ್ಕಯ್ಯ ಜೋಗಯ್ಯರೆಂಬ ಸಿದ್ಧರ ಸಹಾಯದಿಂದ ಆ ರೋಗದಿಂದ ಮುಕ್ತಳಾಗಿ ದೇವತೆಯಾದುದು. ಈಕೆಗೆ ಮಾತಂಗಿ ಎಂಬ ಹರಿಜನ ಹೆಂಗಸು ಸೇವಕಿಯಾಗಿದ್ದಳು. ಅಥವಾ ಮಾತಂಗಿ ಎಂಬಾಕಿ ಆಕೆಯ ಶುಶ್ರೂಷೆ ಮಾಡಿದ್ದಿರಬೇಕು. ಮುಂದೆ ಈ ಎಲ್ಲಮ್ಮನ ಕಥೆಗೆ ರೇಣುಕೆಯ ಕಥೆ ಸೇರಿಕೊಂಡಿತು. ಈ ಸಂಕ್ರಮಣಾವಸ್ಥೆಯ ಕಥೆ ಹೀಗಿದೆ: ಎಲ್ಲಮ್ಮ ಅಂದರೆ ರೇಣುಕೆ ತನ್ನ ಪಾತಿವ್ರತ್ಯದ ಮಹಿಮೆಯಿಂದ ಮಳಲಿನ ಕೊಡ, ಹಾವಿನ ಸಿಂಬಿ ಮಾಡಿ ಗಂಡನಾದ ಜಮದಗ್ನಿಯ ಪೂಜೆಗೆ ನದಿಯಿಂದ ದಿನಾ ನೀರು ತರುತ್ತಿದ್ದಳು. ಒಂದು ದಿನ ಕಾರ್ತವೀರ್ಯಾರ್ಜುನನೆಂಬ ರಾಜ ನಲ್ಲೆಯರೊಂದಿಗೆ ನೀರಾಟವಾಡುವುದನ್ನು ಕಂಡು ಅವಳ ಚಿತ್ತ ಚಂಚಲವಾಯಿತು. ಮಳಲಿನ ಕೊಡ ಒಡೆದು ಹಾವು ಹರಿದು ಹೋಯಿತು. ಈಗಲೂ ಅವಳ ಸೇವಕಿ ಮಾತಂಗಿಯಾಗಿದ್ದಳು. ಮಗದಗ್ನಿಗೆ ಇದು ಗೊತ್ತಾಗಿ ಅವಳನ್ನು ಕೊಲ್ಲುವಂತೆ ಪರಶುರಾಮನಿಗೆ ಆಜ್ಞೆ ಮಾಡಿದ. ಪರಶುರಾಮ ಒಂದೇ ಏಟಿಗೆ ಎಲ್ಲಮ್ಮನ ತಲೆ ಹಾರಿಸಿದ. ಆದರೆ ಅದರೊಂದಿಗೆ ಎಲ್ಲಮ್ಮನ ಪಕ್ಕದಲ್ಲಿದ್ದ ಮಾತಂಗಿಯ ತಲೆಯೂ ಹಾರಿಬಿಟ್ಟಿತು. ಇದರಿಂದ ಸಂತೋಷಗೊಂಡ ತಂದೆ ‘ವರ ಕೇಳಿಕೋ’ ಎಂದಾಗ ಪರಶುರಾಮ ‘ತಾಯಿಯ ಹಾಗು ಮಾತಂಗಿಯ ಜೀವ ಮರಳಿ ಬರಲಿ’ ಎಂದ. ಅವರ ತಲೆಗಳನ್ನು ಅವರವರ ದೇಹದ ಮೇಲಿಡು. ಜೀವಂತರಾಗುತ್ತಾರೆ ಎಂದು ಜಮದಗ್ನಿ ಹೇಳಿದ. ಆದರೆ ಪರಶುರಾಮ ಸಂತೋಷದ ಅತಿಶಯದಲ್ಲಿ ಎಲ್ಲಮ್ಮನ ದೇಹದ ಮೇಲೆ ಮಾತಂಗಿಯ ತಲೆಯನ್ನು, ಮಾತಂಗಿಯ ದೇಹದ ಮೇಲೆ ಎಲ್ಲಮ್ಮನ ತಲೆಯನ್ನೂ ಇಟ್ಟ. ಇಬ್ಬರಿಗೂ ಜೀವ ಬಂತು. ನೋಡಿದರೆ ಎಲ್ಲಮ್ಮನ ದೇಹದ ಮೇಲಿದ್ದ ಮಾತಂಗಿಯ ತಲೆ ನನಗೆ ಶಾಖಾಹಾರ ಬೇಕೆಂದೂ, ಮಾತಂಗಿಯ ದೇಹದ ಮೇಲಿದ್ದ ಎಲ್ಲಮ್ಮನ ತಲೆ ನನಗೆ ಶಾಖಾಹಾರ ಬೇಕೆಂದು ಕೇಳತೊಡಗಿದವಂತೆ. ಈ ಕತೆ ಆರ್ಯದ್ರಾವಿಡ ಬೆರಕೆಯನ್ನು, ಮಾತೃಪ್ರಧಾನ, ಪಿತೃಪ್ರಧಾನ ಕುಟುಂಬ ವ್ಯವಸ್ಥೆಗಳ ಬೆರಕೆಯನ್ನೂ ಹೇಳುವಂತೆ ತೋರುತ್ತದೆ. ಸಂಸ್ಕೃತೀಕರಣದ ಪ್ರೃಮ ಹಂತವನ್ನಂತೂ ಇದು ಖಂಡಿತ ಸೂಚಿಸುತ್ತದೆ. ದಲಿತರೇ ಯಾಕೆ ಜೋಗಿತಿಯರಾಗಬೇಕೆಂಬುದಕ್ಕೂ ಈ ಕಥೆ ಉತ್ತರ ಕೊಡುತ್ತದೆ. ಅವರು ಈ ಮಾತಂಗಿಯ ಕುಲದವರು.

ಮುಖ್ಯ ಜೋಗಿತಿ ಮಂಡಲಾಕಾರದಲ್ಲಿ ಕುಣಿಯುವಳೆಂಬುದನ್ನು ಹಿಂದೆ ಹೇಳಿದ್ದೇನೆ. ಆಕೆ ಮೂರು ರೀತಿಯ ಮಂಡಲಾಕಾರದಲ್ಲಿ ಕುಣಿಯಬಹುದು.

೧) ಕೇಂದ್ರದತ್ತ ಮುಖ ಮಾಡಿ ಮಂಡಲಾಕಾರವಾಗಿ ಕುಣಿಯುವುದು.

೨) ತನ್ನ ಸುತ್ತ ತಾನೇ ತಿರುಗುತ್ತ ಕುಣಿಯುವುದು.

೩) ತನ್ನ ಸುತ್ತ ತಾನೇ ತಿರುಗುತ್ತಲೂ ಮಂಡಲಾಕಾರವಾಗಿಯೂ ಕುಣಿಯುವುದು.

ಹಾಡಿನ ವಸ್ತು ರೇಣುಕೆಯ ವಿಜಯೋತ್ಸವ, ವೈಭವ, ಹಿರಿಮೆಗಳನ್ನು ಕುರಿತದ್ದು. ಎಲ್ಲ ಹಾಡುಗಳ ಹಿಂದೆ ಉತ್ಸಾಹ ಚಿಮ್ಮುತ್ತದೆ, ಆದ್ದರಿಂದ ನೃತ್ಯವು ಕೂಡ ಎರಡು ಮೂರು ಹೆಜ್ಜೆಗಳ ಅಥವಾ ಈ ಎರಡರ ಕಾಂಬಿನೇಷನ್ನಿಂದ ಆದದ್ದು. ನಾನು ಈ ತನಕ ಗಮನಿಸಿದ ಆರಾಧನಾ ಕುಣಿತಗಳೆಲ್ಲ ಮಂಡಲಾಕಾರದಲ್ಲಿಯೇ ಇದ್ದವು. ಮತ್ತು ನಾನು ಓದಿ ತಿಳಿದ ಅನೇಕ ಜನಪದ ಆಚರಣಾ ಕುಣಿತಗಳು ಮಂಡಲದ ಪೂಜೆಯೇ ಆಗಿವೆ. ಬಹುಶಃ ಆದಿಮಾನವ ತನ್ನ ಸುತ್ತಲಿನ ಜಗತ್ತು ಜೀವನಗಳನ್ನು ಮಂಡಲಾಕಾರದಲ್ಲಿಯೇ ಗ್ರಹಿಸಿದನೆಂದು ತೋರುತ್ತದೆ. ಸೂರ್ಯ ಹುಟ್ಟಿದಲ್ಲಿಯೇ ಹುಟ್ಟುವುದು, ಋತುಮಾನಗಳು ರಿಪೀಟಾಗುವುದು, ಮನುಷ್ಯನ ಹುಟ್ಟು ಸಾವು-ಇವೆಲ್ಲ ಅವನಿಗೆ ಮಂಡಲದ ಕಲ್ಪನೆಯನ್ನು ಪ್ರಚೋದಿಸಿರಬೇಕು. ತೀರ ಆದಿಮಕಾಲದ ಸಮೃದ್ಧಿಯ ಕುಣಿತಗಳು ಮಂಡಲಾಕಾರದಲ್ಲಿಯೇ ಇವೆ. ಕೊಡ ಹೊತ್ತು ಕುಣಿಯುವ ಜೋಗಿತಿಯರ ಕುಣಿತವೂ ಮಂಡಲಾಕಾರದಲ್ಲಿಯೇ ಇದೆ. ಇದಕ್ಕೆ ಪೂರಕವಾಗಬಹುದಾದ ಇನ್ನೊಂದು ಸಂಗತಿಯೆಂದರೆ ಜೀವನಾನುಭವದಂತೆ ಅವರ ಕಾಲಾನುಭವವೂ ಮಂಡಲಾಕಾರವಾಗಿಯೇ ಇರುವುದು. ಕಲೆ, ಕಲೆಗಾರಿಕೆ, ಕಲಾನುಭವಗಳನ್ನು ಸಂಕೇತಿಸುವಾಗ ತನ್ನ ಬಾಲ ತಾನೇ ನುಂಗುವ ಸರ್ಪದ ಚಿತ್ರದಿಂದ, ಇಲ್ಲವೆ ಸೊನ್ನೆಯಲ್ಲೊಂದು ವಕ್ರಗೆರೆ ಎಳೆದು ಅದರಲ್ಲುಂಟಾಗುವ ರೂಪಸದೃಶವಾದ ಎರಡು ಭಾಗಗಳಿಂದ ಇದನ್ನು ಸೂಚಿಸಿದ್ದುಂಟು. ಅಂದರೆ ಸರ್ಪದ ಪ್ರಾರಂಭದಲ್ಲಿ (ಬಾಯಿ)ಯೇ ಅದರ ಅಂತ್ಯ (ಬಾಲದ ತುದಿ) ಇರುತ್ತದೆ. ಇದೊಂದು ಮಂಡಲವಾಯಿತು; ಸೊನ್ನೆಯಲ್ಲಿ ಬರೆದ ವಕ್ರಗೆರೆಗಳಿಂದ ಎರಡು ಮೀನುಗಳಾಗಿ ಒಂದರ ಮುಖದಲ್ಲಿ ಇನ್ನೊಂದರ ಬಾಲವಿರುತ್ತವೆ. ಅವೆರಡೂ ಸೇರಿ ಒಂದು ಮಂಡಲವಾಗುತ್ತದೆ. ನಮ್ಮ ಕಾವ್ಯಗಳ ಪ್ರತಿ ಆಶ್ವಾಸದ ಪ್ರಾರಂಭದಲ್ಲಿ ಮುಂದಿನ ಕಥೆಯ ಸಾರಾಂಶವಿರುತ್ತದೆ. ಅಂದರೆ ಆ ಆಶ್ವಾಸ ಮುಗಿದಾಗ ನಾವು ಆಶ್ವಾಸ ಪ್ರಾರಂಭದ ಸಾರಾಂಶಕ್ಕೇ ಬರುತ್ತೇವೆ. ನಾಟಕದ ಆರಂಭದಲ್ಲಿ ಇಡೀ ನಾಟಕದ ಸಾರಾಂಶವನ್ನೊಳಗೊಂಡ ನಾಂದೀಪದ್ಯವಿದ್ದು ಭರತವಾಕ್ಯ ಮುಗಿದಾಗ ನಾಂದೀಪದ್ಯಕ್ಕೆ ಬಂದಿರುತ್ತೇವೆ. ಅಂದರೆ ನಾಂದೀ ಪದ್ಯದ ಅರ್ಥ ಪೂರ್ತಿಯಾಗುತ್ತದೆ. ಪದಗಳು ಪಲ್ಲವಿಯಿಂದ ಸುರುವಾಗಿ ಪಲ್ಲವಿಯಲ್ಲಿಯೇ ಮುಗಿಯುತ್ತವೆ. ಜನಪದ ಕಥೆ ಮುಗಿಯುವುದು ಸುರುವಾದಲ್ಲಿ.

ಈ ಆಚರಣೆಯಲ್ಲಿ ಬಯಲಾಟದ ಎಷ್ಟೊಂದು ಅಂಶಗಳಿವೆಯೆನ್ನುವುದನ್ನು ಗಮನಿಸಬೇಕು. ಮುಖ್ಯ ಜೋಗಿತಿ ಕೆಲವೊಮ್ಮೆ ಗಂಡಸಾಗಿದ್ದರೂ ಕಚ್ಚೆ ಹಾಕಿ ಸೀರೆ ಉಡಬೇಕು. ಜೊತೆಗೆ ಕುಂಕುಮ, ಭಂಡಾರ ಬಳಿಸುಕೊಳ್ಳುವುದಿದೆ. ಅಂದರೆ ಮೇಕಪ್ ಮತ್ತು ವೇಷಭೂಷಣವಿದೆ. ಹಾಡಿದೆ, ಕಥೆಯಿದೆ, ಕುಣಿತವಿದೆ, ಪಕ್ಕವಾದ್ಯವಿದೆ. ಮೇಳವಿದೆ, ರಂಗಭೂಮಿಯಿಲ್ಲ, ಆಚರಣೆಯ ಸ್ಥಳವಿದೆ, ಪ್ರೇಕ್ಷಕರಿಲ್ಲ, ಪರಿಸೆಯಿದೆ, ಇಡೀ ಆಚರಣೆ ಒಂದು ಹೆಜ್ಜೆ ಮುಂದಿಟ್ಟರೆ ಸಾಕು ಬಯಲಾಟ ಸಿಕ್ಕುತ್ತದೆ.

ಈಗಿದ್ದಂತೆ ನಾನು ಹೇಳಿದ ಆಚರಣೆಯಲ್ಲಿ ಮೂರು ಮುಖ್ಯ ಹಂತಗಳಿವೆ. ೧) ಮುಖ್ಯ ಜೋಗಿತಿ ಮೈಮೇಲೆ ದೇವಿಯನ್ನು ಆರೋಪಿಸಿಕೊಳ್ಳುವುದು, ದೇವಿಯನ್ನು ಆವಾಹನೆ ಮಾಡುವುದು, ಅಂದರೆ ತುಂಬಿದ ಕೊಡವನ್ನು ತಲೆಯ ಮೇಲೆ ಹೊತ್ತುಕೊಳ್ಳುವುದು. ೨) ಕಥೆಯನ್ನು ಕುಣಿಯುವುದು. ೩) ಆರೋಪಿಸಿಕೊಂಡ ದೇವತೆಯನ್ನು ವಿಸರ್ಜಿಸುವುದು. ಬಯಲಾಟದ ತೀರ ಒರಟು ರೂಪವಾದ ದಾಸರಾಟದಲ್ಲಿ ಇವೇ ಮೂರು ಹಂತಗಳು ರಿಪೀಟಾಗುತ್ತವೆ. ಪ್ರಾರಂಭದಲ್ಲಿ ಸೂತ್ರಧಾನ (ನಟುವಾನ) ಕೈಯಲ್ಲಿ ಉರಿಯುವ ದೀಪ ಹಿಡಿದುಕೊಂಡು ಪ್ರೇಕ್ಷಕರ ಕಡೆಗೆ ಬೆನ್ನು ತಿರುಗಿಸಿ ರಂಗಭೂಮಿಯ ಮೇಲೆ ದೇವರನ್ನು ಆವಾಹನೆ ಮಾಡುತ್ತಾ ಹಾಡುತ್ತಾನೆ. ಮುಗಿದೊಡನೆ ಪ್ರೇಕ್ಷಕರ ಕಡೆಗೆ ತಿರುಗಿ ಆಟ ಆರಂಭಿಸುತ್ತಾನೆ. ಆಟ ಮುಗಿದು ಮಂಗಳಾರತಿಯಾಗಿ ಆ ದೀಪ ಕೆಳಗಿಟ್ಟರೆ ಬಂದ ದೇವರು ವಿಸರ್ಜನೆಯಾಗಿ ಆಟ ಮುಗಿಯಿತೆಂದು ಅರ್ಥ. ಎರಡು ಪೂಜೆಗಳ ನಡುವಿನ ಕ್ರಿಯಾ ಪರಂಪರೆಯೇ ಬಯಲಾಟವೆಂದು ನಾನು ಹಿಂದೆ ಹೇಳಿದ್ದೇನೆ. ಈ ಶಿಲ್ಪ ಸಂಸ್ಕೃತ ನಾಟಕಗಳಲ್ಲೂ ರಿಪೀಟಾಗುತ್ತದೆ. ನಾಂದಿ ಮತ್ತು ಭರತ ವಾಕ್ಯಗಳ ನಡುವಿನ ಕ್ರಿಯಾ ಪರಂಪರೆ ಅಲ್ಲಿ ನಾಟಕವೆನಿಸುತ್ತದೆ. ಆಚರಣೆಯಲ್ಲಿ ಹಾಡುತ್ತಿದ್ದ ಜೋಗಿತಿಯರ ಸ್ಥಳದಲ್ಲಿ ಹಿಮ್ಮೇಳ ಮುಮ್ಮೇಳಗಳು ಹುಟ್ಟಿಕೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕುಣಿತಕ್ಕೊಂದು ನಿರ್ದಿಷ್ಟತೆ ಬಂದಿದೆ. ಮುಮ್ಮೇಳ ಅಂದರೆ ಪಾತ್ರಧಾರಿ ಮತ್ತು ಸೂತ್ರಧಾರ ಒಂದು ಇಲ್ಲವೇ ಎರಡು ಸಾಲು ಹಾಡಿದರೆ ಅದನ್ನು ಅಥವಾ ಪಲ್ಲವಿಯನ್ನು ಹಿಮ್ಮೇಳದವರು ರಿಪೀಟ್ ಮಾಡುತ್ತಾರೆ. ಅವರು ಹಾಗೆ ರಿಪೀಟ್ ಮಾಡುವಾಗ ಪಾತ್ರಧಾರಿಗಳು ಕುಣಿಯುತ್ತಾರೆ. ಅವನ ಕುಣಿತ ಈಗ ಮಂಡಲಾಕಾರವಾಗಿರುವುದಿಲ್ಲ. ಮಂಡಲವನ್ನು ಮುರಿದು ಅದರ ಕಂಸಗಳನ್ನು ಸುಂದರವಾಗಿ ಹಿಂದೆಮುಂದೆ ಅಥವಾ ಎದುರು ಬದುರಾಗಿ ಅಥವಾ ಹಾವಿನಂತೆ ವಕ್ರವಕ್ರವಾಗಿ ಜೋಡಿಸಿದಂತಿರುತ್ತದೆ.

ಆಚರಣೆಯ ಹಾಡು, ಕುಣಿತಗಳು ಸುತ್ತಲಿನವರ ತೊಡಗುವಿಕೆಗೆ ನೆರವಾಗುವಂತಿದ್ದವು. ಆದರೆ ಇಲ್ಲಿ ಅವು ರಂಗದ ಮೇಲೆ ನಡೆಯುವ ಕ್ರಿಯೆಗೂ ಮತ್ತು ಪ್ರೇಕ್ಷಕರಿಗೂ ಅಂತರ (Distancing) ನಿರ್ಮಿಸಲು ಸಹಾಯ ಮಾಡುತ್ತವೆ. ಆಚರಣೆಯಲ್ಲಿಯಂತೆ ಇಲ್ಲಿಯ ಕಣಿತಕ್ಕೂ ಪ್ರತ್ಯೇಕ ಭಾವ ಇಲ್ಲ. ಜೆಸ್ಟರ್‌ಗಳಿಗೆ ಅರ್ಥವಿಲ್ಲ, ಆದರೆ ಒಟ್ಟಾರೆ ಪಾತ್ರದ ಆಗಿನ ಭಾವಕ್ಕೆ, ಮೂಡಿಗೆ ಪೂರಕವಾಗಿರುತ್ತವೆ. ಆ ಭಾವಕ್ಕೆ ಪ್ರಚೋದಕವಾಗಿರುತ್ತವೆ. ಇಲ್ಲವೇ ಹಾಡಿನ ಭಾವವನ್ನು ಅಲಂಕರಿಸುತ್ತವೆ. ದಾಸರಾಟಕ್ಕಿಂತ ಸುಧಾರಿಸಿದ ರೂಪಗಳಾದ ಸಣ್ಣಾಟ, ದೊಡ್ಡಾಟಗಳಿಗೆ ಹೋದರೆ ಕುಣಿತದ ಕಲೆಗಾರಿಕೆ ಇನ್ನೂ ಸಂಕೀರ್ಣವಾಗುತ್ತದೆ. ಹಾವ, ಭಾವ, ಅಭಿನಯಗಳು ಇನ್ನೂ ಸುಂದರವಾಗುತ್ತವೆ. ಆದರೆ ಯಕ್ಷಗಾನ ಮಾತ್ರ ಕುಣಿತದ್ದೇ ಒಂದು ಭಾಷೆಯನ್ನು ಬೆಳೆಸಿಕೊಂಡಂತೆ ಕಂಡುಬರುತ್ತವೆ.