ಜಾನಪದ ಪ್ರಣಯ ಕಥೆಗಳು ಸಾಮಾನ್ಯವಾಗಿ ರಾಜಕುಮಾರಿಯರ ಸುತ್ತ ಹೆಣೆಯಲ್ಪಟ್ಟಿರುತ್ತವೆ. ನಾಯಕಿ ಸಾಮಾನ್ಯವಾಗಿ ಅದ್ವಿತೀಯ ಸುಂದರಿ. ಆಕೆಯನ್ನು ನೋಡಿದವರಿಗೆಲ್ಲ ಹುಚ್ಚು ಹತ್ತುತ್ತಿದ್ದಿತೆಂದೋ, ಆಕೆ ಒಂದರ ಮೇಲೊಂದು ಏಳು ಗಾದಿಗಳ ಮೇಲೆ ಮಲಗಿ ಅವುಗಳ ಮೇಲೊಂದು ಕೂದಲೆಳೆ ಬಿದ್ದಿದ್ದರೂ ಮಲಗಿ ಎದ್ದ ಮೇಲೆ ಅವಳ ಮೈ ಮೇಲೆ ಬರೆ ಮೂಡಿರುತ್ತಿತ್ತು ಎಂದೋ, ಎಷ್ಟೋ ರಾಜಕುಮಾರರು ಅವಳಿಗಾಗಿ ಬಾಯಿ ಬಾಯಿ ಬಿಡುತ್ತಿದ್ದರೆಂದೋ ವರ್ಣನೆ ಬರುತ್ತದೆ. ಆದರೆ ಈ ನಾಯಿಕೆಯರು ಸುಲಭರಲ್ಲ. ಇವರನ್ನು ಮದುವೆಯಾಗುವುದಕ್ಕೆ ಒಂದಿಲ್ಲೊಂದು ತೊಂದರೆಗಳಿರಲೇಬೇಕು. ಅದು ಬಿಡಿಸಲಾರದ ಒಗಟಾಗಿರಬಹುದು. ರಹಸ್ಯದ ಪತ್ತೆ ಹಚ್ಚುವಿಕೆಯಾಗಿರಬಹುದು. ಕೆಲವೊಮ್ಮೆ ರಾಜಕುಮಾರಿಯು ಯಾವನೋ ಒಬ್ಬ ಮಾಯಾವಿ ಇಲ್ಲವೆ ರಾಕ್ಷಸನಿಂದ ಅಪಹೃತಳಾಗಿರುತ್ತಾಳೆ. ಬಿಡಿಸಿಕೊಳ್ಳಲು ಯಾರೂ ಬಾರದಿರಲೆಂದು ತನ್ನ ಮಹಲಿನ ದಾರಿಯಲ್ಲಿ ಸ್ವಯಂಚಾಲಿತ ತೊಂದರೆಗಳನ್ನೊಡ್ಡಿರುತ್ತಾನೆ. ಇದನ್ನೆಲ್ಲ ದಾಟಿ ರಾಕ್ಷಸನನ್ನು ಗೆದ್ದು ರಾಜಕುಮಾರಿಯನ್ನು ಬಿಡಿಸಿಕೊಂಡು ಬರುವ ಬಂಟನೇ ನಾಯಕ. ಈತ ಸಾಮಾನ್ಯವಾಗಿ ರಾಜಕುಮಾರನಾಗಿರುತ್ತಾನೆ. ನಾಯಕಿಗಾದರೆ ಸೌಂದರ್ಯವೊಂದೇ ಗುಣ. ಹೆಚ್ಚಾದರೆ ರಾಕ್ಷಸನಿಗೆ ಒಲಿಯದಿರುವುದು ಇನ್ನೊಂದು ಗುಣ. ನಾಯಕನಿಗಾದರೆ ಶೌರ್ಯ, ಧೈರ್ಯಗಳ ಜೊತೆಗೆ ಚಾತುರ್ಯ ಬೇಕು. ರೂಪದಲ್ಲಿ ಕಾಮನಂತೇ ಇರಬೇಕು. ಕಥೆಯ ಅಂತ್ಯಕ್ಕೆ ಇವನೇ ರಾಜಕುಮಾರಿಯನ್ನು ಮದುವೆಯಾಗಬೇಕಾದುದರಿಂದ ಕುರೂಪಿ ಇದ್ದರೆ ಹೇಗೆ? ಜೊತೆಗೆ ಶಬ್ದಶ್ಲೇಷ, ಚಿತ್ರ ಕವಿತ್ವಗಳನ್ನು ಬಲ್ಲವನಿರಬೇಕು. ಯಾಕೆಂದರೆ ತಾನು ಕಂಡು ಹಿಡಿಯುವ ರಹಸ್ಯ ಒಮ್ಮೊಮ್ಮೆ ಇಂಥಲ್ಲಿ ಅಡಗಿರುವುದೂ ಉಂಟು. ಸಮಯವರಿತು ಮೋಸ ಮಾಡುವುದರಲ್ಲಿ ಪಳಗಿದವನಿರಬೇಕು.

ಪ್ರತಿನಾಯಕ

ನಾಯಕನ ಸಹಾಯಕ್ಕಾಗಿ ಕೆಲವೊಮ್ಮೆ ಅತೀಂದ್ರಿಯ ಸಾಮರ್ಥ್ಯವನ್ನುಳ್ಳ ಪ್ರಾಣಿಗಳಿರುತ್ತವೆ. ಸಾಹಸಿಗಳಾಗಿರುವುದರ ಜೊತೆಗೆ ಅವು ಮನುಷ್ಯರಂತೆ ಮಾತಾಡಬಲ್ಲವು. ಇಂಥ ನಾಯಕನ ಮೇಲೆ ತಪಸ್ವಿಗಳಿಗಂತೂ ಅಪಾರ ಮಮತೆ. ತಮ್ಮ ಬಳಿಯ ಅಸಾಮಾನ್ಯ ಸಾಮರ್ಥ್ಯವನ್ನುಳ್ಳ ಮಾಂತ್ರಿಕ ವಸ್ತುಗಳನ್ನು ಧಾರೆಯೆರೆದು ಆಶೀರ್ವಾದ ಮಾಡುತ್ತಾರೆ. ಮಂತ್ರಿಸಿದ ಅಕ್ಷತೆ, ಹರಳು ಇತ್ಯಾದಿ ಅವನ್ನೆಸೆದರೆ ಸಮುದ್ರ ಇಬ್ಭಾಗವಾಗಿ ದಾರಿ ಮಾಡಿಕೊಡುತ್ತದೆ. ಪ್ರತಿನಾಯಕನ ಮಾಂತ್ರಿಕ ಶಕ್ತಿ ಪರಿಹಾರವಾಗುತ್ತದೆ. ಇವಲ್ಲದೆ ಎಲ್ಲಿಗೆಂದರೆ ಅಲ್ಲಿಗೊಯ್ಯುವ ಹಚ್ಚಡ, ಬೇಕಾದವರನ್ನು ಬಡಿದು ಹಾಕುವ ದಂಡ, ಬೇಡಿದ ಆಹಾರವನ್ನು ನೀಡುವ ಜೋಳಿಗೆ, ಕೂತಲ್ಲೇ ದೂರದಲ್ಲಿ ನಡೆಯುವ ಘಟನೆಯನ್ನು ತೋರಿಸುವ ಕನ್ನಡಿ ಇತ್ಯಾದಿಗಳಂತೂ ಹೇರಳವಾಗಿರುತ್ತವೆ. ಇವುಗಳ ಸಹಾಯದಿಂದ ನಾಯಕ ಸಪ್ತ ಸಮುದ್ರ ದಾಟಿ, ಬೆಂಕಿಯ ಬಾಗಿಲಲ್ಲಿ ಪಾರಾಗಿ ರಾಕ್ಷಸನ ಮಹಲಿಗೆ ಬರುತ್ತಾನೆ. ರಾಕ್ಷಸ ಅಥವಾ ಮಾಯಾವಿ ಇವನೇ ಪ್ರತಿನಾಯಕ-ಸಾಮಾನ್ಯವಾಗಿ ಭಯಂಕರ ಶೂರ. ಮಂತ್ರ ತಂತ್ರ ಬಲ್ಲವನು. ಆದರೆ ಅವುಗಳನ್ನು ಕೆಟ್ಟ ಕೆಲಸಕ್ಕೆ ಬಳಸುತ್ತಾನೆ. ಭಯಂಕರ ಆಕಾರವುಳ್ಳವನು ಬೇರೆ. ಆದರೆ ದಡ್ಡ. ರಾಜಕುಮಾರಿಯನ್ನು ಅಪಹರಿಸಿ ತಂದರೂ ಅವಳ ಮೇಲೆ ನಾಯಕ ಬರುವವರೆಗೆ ಬಲಾತ್ಕಾರ ಮಾಡುವುದಿಲ್ಲ. ಬಾಯಿ ಮಾತಿನಲ್ಲಿ ಒತ್ತಾಯ ಮಾಡಿ ಹೆದರಿಸುವುದೆಷ್ಟೋ ಅಷ್ಟೆ. ಅಂಥ ಸಂದರ್ಭದಲ್ಲಿ ನಾಯಕಿ ಯಾವುದೋ ವ್ರತ ಅಥವಾ ಪೂಜೆಯ ನೆವ ಹೇಳಿ ಕಾಲ ಮುಂದೂಡುತ್ತಾಳೆ. ಈ ಪ್ರತಿ ನಾಯಕ ತನ್ನ ಜೀವವನ್ನು ಯಾವುದೋ ರಹಸ್ಯದಲ್ಲಿ ಬಚ್ಚಿಟ್ಟುರುತ್ತಾನೆ. ನಾಯಕ ಅದನ್ನು ಪತ್ತೆ ಹಚ್ಚಿ ರಾಕ್ಷಸನನ್ನು ಕೊಂಡುಹಾಕಿ ರಾಜಕುಮಾರಿಯನ್ನು ಸೆರೆ ಬಿಡಿಸಿಕೊಂಡು ಬರುತ್ತಾನೆ. ಇನ್ನೇನು ಕಥೆ ಮುಗಿಯಿತೆಂದರೆ ಮಾಂತ್ರಿಕ ವಸ್ತುಗಳನ್ನು ಕೊಟ್ಟು ನೆರವು ಮಾಡಿದ ತಪಸ್ವಿಗಳೇ ಈಗ ರಾಜಕುಮಾರಿಯನ್ನು ನೋಡಿ ಅಪೇಕ್ಷಿಸಬಹುದು. ಕಥೆಗಾರ ಗಂಡಿರಲಿ, ಹೆಣ್ಣಿರಲಿ, ಇಂಥವರನ್ನು ನೋಡಿ ನಗುವುದೇ ಹೆಚ್ಚು. “ಅಪ್ಪನ (ತಪಸ್ವಿಯ) ಲಂಗೋಟಿ ಸಡಿಲಾಯಿತೆಂದೋ, ಜಪ ಮರೆತು ಬಾಯಿ ಜೊಲ್ಲು ಸುರಿಸಲಾರಂಭಿಸಿತೆಂದೋ” ವರ್ಣನೆ ಮಾಡುತ್ತಾರೆ. ಇವರನ್ನು ನಿವಾರಿಸುವುದು ನಾಯಕನಿಗೆ ತೊಂದರೆಯಲ್ಲ. ಅವರವೇ ವಸ್ತುಗಳಿಂದ ಉದಾ: ಬೇಕಾದವರನ್ನು ಬಡಿಯುವ ದಂಡದಿಂದ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಮುಂದುವರೆಯುತ್ತಾನೆ. ಕೆಲವು ಕಥೆಗಳಲ್ಲಿ ರಾಜಕುಮಾರಿಯನ್ನ ಅಪೇಕ್ಷಿಸಿದ ದುಷ್ಟನೊಬ್ಬ ಸಂಭಾವಿತನಾದ ನಾಯಕನ ಬೆನ್ನು ಹತ್ತಿರುತ್ತಾನೆ. ಅವನಿಗೆ ರಾಕ್ಷಸನನ್ನು ಎದುರಿಸುವ ಧೈರ್ಯವಿಲ್ಲ. ನಾಯಕ ಎಲ್ಲಾ ಸಂಕಟಗಳನ್ನೆದುರಿಸಿ ರಾಜಕುಮಾರಿಯನ್ನು ಇನ್ನೇನು ಗೆದ್ದನೆಂಬುವಷ್ಟದಲ್ಲಿ ಈ ದುಷ್ಟ ಅವಳನ್ನು ಅಪಹರಿಸಿ ಅವಳ ತಂದೆಯ ಎದುರಿಗೆ ನಾಯಕನಿಗಿಂತ ಮೊದಲೇ ಹಾಜರಾಗುತ್ತಾನೆ. ಇಂಥಲ್ಲಿ ರಾಜಕುಮಾರಿ ಸಾಕ್ಷಿ ಹೇಳುತ್ತಾಳೆ ಅಥವಾ ಇನ್ನೊಮ್ಮೆ ಪರೀಕ್ಷೆಯಾಗುತ್ತದೆ. ನಾಯಕನಿಗೆ ಇದನ್ನು ಗೆಲ್ಲುವುದು ಸುಲಭ. ಈವರೆಗಿನ ಯಾವ ಜಾನಪದ ಕಥೆಯಲ್ಲೂ ಇಂಥ ದುಷ್ಟನಿಗೆ ರಾಜಕುಮಾರಿ ಮಾಲೆ ಹಾಕಿದ ಉದಾಹರಣೆಗಳಿಲ್ಲ.

ನಾಯಕನಂತೆ ನಾಯಕಿಯೂ ಇಂಥ ಸಾಹಸ ಕಾರ್ಯ ಮಾಡಬಹುದು, ಅವಳು ಗಂಡನನ್ನು ದೇವಲೋಕದ ಕನ್ಯೆಯರು ಅಪಹರಿಸಿ, ಅವನು ತನ್ನ ನಾಯಕಿಯನ್ನು ಮರೆಯುವ ಹಾಗೆ ಮಾಡಿರಬಹುದು ಅಥವಾ ಕೆಲವು ಸ್ಥಳಿಕ ದುಷ್ಟರಿಂದಾಗಿ ಗಂಡ ಹೆಂಡಿರ ಸಮಾಗಮ ಸಾಧ್ಯವಾಗದೇ ಹೋಗಬಹುದು. ಅಂಥಲ್ಲಿ ಅವಳು ಪುರುಷರ ವೇಷ ಧರಿಸಬೇಕಾಗಬಹುದು. ಈ ನಕಲಿ ರಾಜಕುಮಾರನನ್ನು ವರಿಸುವ ರಾಜಕುಮಾರಿಯರಿಗೇನೂ ಕೊರತೆಯಿಲ್ಲ. ಆಗ ಇವಳು ಕೆಲವು ಸಮಯ ಕಾಯಲಿಕ್ಕೆ ಹೇಳಿ ತನ್ನ ಗಂಡ ಸಿಕ್ಕ ಮೇಲೆ ಅವನಿಗೇ ಮದುವೆ ಮಾಡಿಸುತ್ತಾಳೆ. ಈಗ ನಾಯಕಿಯ ಬದಲು ನಾಯಕ ಇನ್ನೊಬ್ಬರ ಬಲೆಯಲ್ಲಿ ಸುಮ್ಮನೇ ಕೂಡ್ರಬೇಕಾಗುತ್ತದೆ.

ಸೌಂದರ್ಯದ ಬಹುಮಾನ

ಇಂಥ ಪ್ರಣಯ ಕಥೆಗಳ ನೀತಿ ಸರಳವಾದುದು, ಸೌಂದರ್ಯದ ಬಹುಮಾನ ಸೇರಬೇಕಾದ್ದು ದುಷ್ಟನಿಗಲ್ಲ, ಸಾಹಸಿಗನಾದ ಶಿಷ್ಟನಿಗೆ. ಕಥೆ ಹೇಳುವವರು ಸಾಹಸಕಾರ್ಯದಲ್ಲಿ ತೊಡಗಿದ ನಾಯಕ ಅಥವಾ ನಾಯಕಿಯೊಂದಿಗೆ ತಾದಾತ್ಮ್ಯ ಹೊಂದುತ್ತಾರೆ. ನಾಯಕನ ಸಾಹಸವಾದರೆ ಕೇಳುವವರಿಗೆ ಹುರುಪು ಬರುವಾಗ ಹಾಗೆ, ಅವರ ಭಲಾ, ಭೇಷ್‌ಗಳೊಂದಿಗೆ ತಾವೂ ಹುರುಪುಗೊಂಡು ಹೇಳುತ್ತಾರೆ. ನಾಯಕಿಯ ಸಾಹಸವಾದರೆ ಕೇಳುವವರು ಕರುಣೆಗೊಳ್ಳಬೇಕು! ‘ಅಯ್ಯೋ ಪಾಪ, ಎಂಥವಳು ಏನೇನು ಮಾಡಬೇಕಾಯಿತಲ್ಲಾ!’ ಎಂದು ಹಳಹಳಿಸಬೇಕು. ಕಣ್ಣೀರು ಸುರಿಸಬೇಕು. ಇಷ್ಟಾದರೆ ಕಥೆಗಾರನ-ಳ ಅಭಿನಯ ಸುರುವಾಗುತ್ತದೆ. ಕೇಳುವವರು ಮಕ್ಕಳಾಗಿದ್ದರೆ ಅಭಿನಯದ ಸ್ವಾರಸ್ಯ ಇನ್ನೂ ಹೆಚ್ಚು.

ಈಗ ನಾವು ನೋಡುವ ಕತೆ ಮೇಲಿನ ಸಾಹಸದ ಕಥೆಗಿಂತ ಭಿನ್ನವಾದುದು. ಕಾಮದ ಸಂಕೀರ್ಣ ವಿಶ್ಲೇಷಣೆಯನ್ನು ಒಳಗೊಂಡಿರುವಂಥಾದ್ದು, ಆ ಕಥೆ ಹೀಗಿದೆ.

ರಾಜನಿಗೆ ಒಬ್ಬ ಮಗನಿದ್ದ. ಮಗ ವಯಸ್ಸಿಗೆ ಬಂದ, ಮದುವೆ ಮಾಡಬೇಕೆಂದು ತಂದೆ ಕೇಳಿದಾಗ ಮಗ ಒಲ್ಲೆನೆಂದ. ತಂದೆ ಬುದ್ದಿವಾದ ಹೇಳಿದ. ಹಿರಿಯರಿಂದ ಹೇಳಿಸಿದ. ಆದರೂ ಮಗ ಒಪ್ಪಲಿಲ್ಲ. ಕೊನೆಗೆ ರಾಜ “ನೀನು ಮದುವೆ ಆಗದಿದ್ದರೆ ನಾನು ಸಾಯುತ್ತೇನೆ” ಎಂದು ಬೆದರಿಕೆ ಹಾಕಿದ. ಮಗ ‘ಹಾಗಾದರೆ ನನ್ನ ದೇಹವನ್ನು ಸೀಳಿ ಎರಡು ಭಾಗ ಮಾಡಿ ಎಡಭಾಗವನ್ನು ಹೂವಿನ ರಾಶಿಯಲ್ಲಿ ಮುಚ್ಚಿದರೆ ಅದರಿಂದ ಒಂದು ಹೆಣ್ಣು ಹುಟ್ಟುತ್ತದೆ. ನಾನು ಅವಳನ್ನೇ ಮದುವೆಯಾಗುತ್ತೇನೆ’ ಎಂದು ಹಟ ಹಿಡಿದ. ಸೀಳುವಾಗ ಮಗ ಸತ್ತಾನೆಂದು ತಂದೆ ಅಳುಕಿದ. ಅದಕ್ಕೆ ಮಗನು ಬೇರೆ ಮದುವೆ ಆಗುವುದು ಸಾಧ್ಯವಿಲ್ಲವೆಂದೂ, ಬೇರೆ ಹುಡುಗಿಯರನ್ನು ಮದುವೆಯಾದರೆ ಅವರನ್ನು ಬಂದೋಬಸ್ತಿನಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದ.

ರಾಜ ಮಗನ ಹೇಳಿಕೆಯ ಪ್ರಕಾರ, ಅವನ ದೇಹವನ್ನು ಸೀಳಿ, ಅದರ ಎಡಭಾಗವನ್ನು ಹೂವಿನಲ್ಲಿ ಹೂತಿಟ್ಟ. ಕೆಲವು ದಿವಸಗಳಲ್ಲಿಯೇ ಅಲ್ಲಿ ಒಬ್ಬ ಸ್ತ್ರೀ ಹುಟ್ಟಿದಳು. ರಾಜನು ಶಾಸ್ತ್ರದ ಪ್ರಾರ ಅವಳನ್ನು ತನ್ನ ಮಗನಿಗೆ ವಿವಾಹ ಮಾಡಿದ. ಮಗ ಆ ಕೂಡಲೇ ನಿರ್ಜನವಾದ ಪ್ರದೇಶದಲ್ಲಿ ಒಂದು ಮನೆ ಕಟ್ಟಿಸಿ ಅದರಲ್ಲಿ ತನ್ನ ಹೆಂಡತಿಯನ್ನಿಟ್ಟ. ಆಗಾಗ ಅವಳಲ್ಲಿಗೆ ಹೋಗಿ ಬರುತ್ತಿದ್ದ. ರಾಜನು ಸೊಸೆಯ ಮೇಲೆ ಅತ್ಯಂತ ವಾತ್ಸಲ್ಯ ಉಳ್ಳವನಾಗಿದ್ದು ಆಗಾಗ ಊರ ಹೊರಗಿದ್ದ ಅವಳ ಮನೆಗೆ ಹೋಗಿ ಅವಳ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಿದ್ದ. ಹೀಗಿರುವಾಗ ಅಲ್ಲಿಗೊಬ್ಬ ಮಾಯಾವಿ ಬಂದ. ಎಲ್ಲಿಯೋ ಹೊರಟಿದ್ದವನು ನಿರ್ಜನ ಪ್ರದೇಶದಲ್ಲಿದ್ದ ಈ ಮನೆ ನೋಡಿ ಅದರ ಸುತ್ತ ಅಡ್ಡಾಡುತ್ತ ನೋಡುತ್ತಿದ್ದ. ಅಷ್ಟರಲ್ಲಿ ಕಿಟಕಿಯಲ್ಲಿ ನಿಂತಿದ್ದ ರಾಜನ ಸೊಸೆ ಇವನನ್ನು ನೋಡಿ ನಕ್ಕಳು. ಆ ಮಾಯಾವಿ ಊರಿಗೆ ಬಂದು ಒಂದು ಮುದುಕಿಯ ಮನೆಯಲ್ಲಿ ಆಶ್ರಯ ತೆಗೆದುಕೊಂಡಿದ್ದ ಆ ಮುದುಕಿ ದಿನಾಲು ಹೂವಿನ ಮಾಲೆ ಕಟ್ಟಿಕೊಂಡು ರಾಜನ ಸೊಸೆಗೆ ಕೊಟ್ಟು ಬರುತ್ತಿದ್ದಳು. ಈ ಮಾಯಾವಿ ಆ ಮುದುಕಿಗೊಂದು ವಿಚಿತ್ರವಾದ ಮಾಲೆ ಕಟ್ಟಿಕೊಟ್ಟು, “ಇದನ್ನು ರಾಜನ ಸೊಸೆಗೆ ಕೊಟ್ಟು ಅವಳು ಹೇಳುವ ಉತ್ತರವನ್ನು ನನಗೆ ತಿಳಿಸು: ಎಂದು ಹೇಳಿದ, ಮುದುಕಿ ಮಾಲೆ ಒಯ್ದುಕೊಟ್ಟಳು. ರಾಜನ ಸೊಸೆಗೆ ಆ ಮಾಲೆಗಾರನ ಅಭಿಪ್ರಾಯ ತಿಳಿಯಿತು. ಸಂತೋಷವಾದರೂ ತೋರ್ಪಡಿಸದೆ ತನ್ನ ಕೈಯನ್ನು ಕುಂಕುಮದಲ್ಲದ್ದಿ ಮುದುಕಿಯ ಕೆನ್ನೆಗೊಂದು ಏಟು ಬಿಗಿದಳು. ಮುದುಕಿ ಬಂದು ತೋರಿಸಿದಳು. ಮಾಯಾವಿ “ಓಹೋ, ತಾನು ಹೊರಗಾಗಿರುವೆನೆಂದು ಸೂಚಿಸಿದ್ದಾಳೆ” ಎಂದು ತಿಳಿದುಕೊಂಡು ಸುಮ್ಮನಾದ. ಎಂಟು ದಿನಗಳಾದ ಮೇಲೆ ಇನ್ನೊಂದು ಮಾಲೆ ಕಟ್ಟಿಕೊಟ್ಟು ಮುದುಕಿಯನ್ನು ಕಳುಹಿಸಿದ. ಈ ಸಲ ರಾಜನ ಸೊಸೆ ಸುಣ್ಣದಲ್ಲಿ ಕೈವೂರಿ ಮುದುಕಿಯ ಎದೆಯ ಮೇಲೆ ಹೊಡೆದಳು. ಮುದುಕಿ ಬಂದು ತೋರಿಸಿದಾಗ “ಓಹೋ, ಇದು ಬೆಳದಿಂಗಳ ಕಾಲವಾದ್ದರಿಂದ ಅನುಕೂಲವಾಗಿಲ್ಲವೆಂದು ಸೂಚಿಸಿದ್ದಾಳೆ” ಎಂದುಕೊಂಡ. ಇನ್ನು ಎಂಟು ದಿನ ಬಿಟ್ಟು ಮುದುಕಿಯ ಕೈಯಲ್ಲಿ ಮಾಲೆ ಕೊಟ್ಟು ಮತ್ತೆ ಕಳಿಸಿದ. ಈ ಸಲ ರಾಜಕುಮಾರಿ ಮಸಿಯಲ್ಲಿ ಕೈಅದ್ದಿ ಮುದುಕಿಯ ಬೆನ್ನಿನ ಮೇಲೆ ಹೊಡೆದಳು. ಮುದುಕಿ ತೋರಿಸಿದಾಗ “ಓಹೋ, ಅಮಾವಾಸ್ಯೆಯ ದಿನ ಮಹಲಿನ ಹಿಂಭಾಗದಿಂದ ಬರಲಿಕ್ಕೆ ಸೂಚಿಸಿದ್ದಾಳೆ” ಎಂದುಕೊಂಡ. ಅಮಾವಾಸ್ಯೆಯ ದಿನ ಮಹಲಿನ ಹಿಂಭಾಗಕ್ಕೆ ಹೋದ. ಒಂದು ಹಗ್ಗ ತೂಗು ಬಿದ್ದಿತ್ತು. ಅದರ ಸಹಾಯದಿಂದ ಏರಿಹೋದ. ರಾಜನ ಸೊಸೆಯನ್ನು ಕೂಡಿದ. ಬೆಳಿಗ್ಗೆ ಅವನು ಹೊರಟು ಬರುವಾಗ “ನೀನು ಇದೇ ರೂಪದಿಂದ ಬಂದರೆ ಕಾವಲುಗಾರರು ಕಂಡಾರು ಬೇರೆ ವೇಷದಿಂದ ಬಂದು ಹೋಗುತ್ತಿರು” ಎಂದು ಹೇಳಿದಳು. ಅವನು ಆಗಲೆಂದು ಹೇಳಿ ಸರ್ಪ ರೂಪ ಧರಿಸಿ ಅವಳಲ್ಲಿಗೆ ತನಗೆ ಬೇಕಾದಾಗ ಬಂದು ಹೋಗುತ್ತಿದ್ದ. ಈ ರೀತಿ ಅನೇಕ ದಿನ ಕಳೆದುವು.

ಕೊಲೆ

ಒಂದು ದಿನ ರಾಜ ಸೊಸೆಯನ್ನು ನೋಡಿಕೊಂಡು ಹೋಗಲು ಬಂದಾಗ ಬಚ್ಚಲದ ನಾಲೆಯಲ್ಲಿ ಈ ಹಾವು ಕಂಡಿತು. ಕೂಡಲೆ ಕಾವಲುಗಾರರನ್ನು ಕರೆಸಿ ಅದನ್ನು ಕೊಲ್ಲಿಸಿ ಅರಮನೆಯ ಹೊರಗೆ ಚೆಲ್ಲಿ ಬರುವಂತೆ ಹೇಳಿದ. ಒಳಗೆ ಬಂದು ಸೊಸೆಗೆ ನಡೆದ ಸಮಾಚಾರ ತಿಳಿಸಿದ. ಸೊಸೆ ‘ಅಯ್ಯೋ, ಘಾತವಾಯಿತೆಂದು ಮೂರ್ಛೆ ಹೋದಳು. ನನ್ನ ಗೆಣಿಕಾರನನ್ನು ಈ ಪಾಪಿ ಕೊಪ್ಪಿಸಿದನೆಂದು ಮನಸ್ಸಿನಲ್ಲಿ ಕೊರಗುತ್ತ ಹೊರಹೊರಗೆ ಆ ಸರ್ಪಕ್ಕೆ ಹೆದರಿದವಳಂತೆ ನಟಿಸಿದಳು. ರಾಜ ಅವಳನ್ನು ಸಮಾಧಾನ ಮಾಡಿ ಹೊರಟು ಹೋದ.

ಆಗ ಅಲ್ಲಿಗೊಬ್ಬ ದಾಸಯ್ಯ ಬಂದ. ಅವನನ್ನು ಕರೆದು ಒಂದು ರೂಪಾಯಿ ಕೊಟ್ಟು “ಅರಮನೆ ಹೊರಗೆ ಒಂದು ಸರ್ಪ ಬಿದ್ದಿದೆಯಂತೆ ಹೋಗಿ ನೋಡಿಕೊಂಡು ಬಾ” ಎಂದಳು. ದಾಸಯ್ಯ ಹೋಗಿ ನೋಡಿಕೊಂಡು ಬಂದ ಹೌದೆಂದು ಎರಡು ರೂಪಾಯಿ ಕೊಟ್ಟು “ಆ ಸರ್ಪವನ್ನು ಸುಟ್ಟು ಬೂದಿ ತಂದುಕೊಡು” ಎಂದಳು. ಅವನು ಹಾಗೆ ಮಾಡಿದ. ಮೂರು ರೂಪಾಯಿ ಕೊಟ್ಟು ಒಂದು ತಾಯಿತ ಮಾಡಿಸಿ ತರಿಸಿದಳು. ತಾಯಿತದಲ್ಲಿ ಆ ಬೂದಿ ಹಾಕಿಟ್ಟು ಅದನ್ನು ತೋಳಿನಲ್ಲಿ ಕಟ್ಟಿಕೊಂಡಳು.

ದಿನ ದಿನಕ್ಕೆ ನಿದ್ರೆ ಆಹಾರಗಳಿಲ್ಲದೆ ತನ್ನ ಸತ್ತುಹೋದ ಗೆಣೆಕಾರನ ಚಿಂತೆಯಲ್ಲಿಯೇ ಕೊರಗಲಾರಂಭಿಸಿದಳು. ಇದು ರಾಜನ ಮಗನಿಗೆ ತಿಳಿಯಿತು. ಬಂದು ಪರಿಪರಿಯಾಗಿ ಹೆಂಡತಿಯ ಕೊರಗಿಗೆ ಕಾರಣ ಕೇಳಿದ. ಅವಳನ್ನು ತನ್ನ ತೊಡೆಯ ಮೇಲೆ ಕೂಡ್ರಿಸಿಕೊಂಡ. ಆಗ ಅವಳು ಈಗ ನಾನು ಒಂದು ಒಗಟು ಹೇಳುತ್ತೇನೆ. ಅದನ್ನು ನೀ ಬಿಡಿಸಿದರೆ ನಾನು ಬೆಂಕಿಗೆ ಬಿದ್ದು ಸಾಯುತ್ತೇನೆ. ಬಿಡಿಸಲಿಕ್ಕೆ ಆಗಲಿದ್ದರೆ ನೀನೇ ಬೆಂಕಿಗೆ ಬಿದ್ದು ಸಾಯಬೇಕು. ಇಷ್ಟಾಗಿ ಹೀಗೇಕೆ ಅಂತ ಯಾರಾದರೂ ಕೇಳಿದಾಗ ಯಾರೂ ಬಾಯಿ ಬಿಡಬಾರದು. ಈ ಕರಾರಕ್ಕೆ ಒಪ್ಪಿದರೆ ಹೇಳುತ್ತೇನೆ. ಇಲ್ಲದಿದ್ದರಿಲ್ಲ ಎಂದಳು. ರಾಜಕುಮಾರ ಒಪ್ಪಿಕೊಂಡ. ಕೈಯಲ್ಲಿ ಕೈ ಹಾಕಿ ಮಾತುಕೊಟ್ಟ. ಆಗ ಅವಳು ಹೇಳಿದಳು.

‘ಒಂದು ಕೊಟ್ಟು ನೋಡಿಸಿ,
ಎರಡು ಕೊಟ್ಟು ಸುಡಿಸಿ,
ಮೂರು ಕೊಟ್ಟು ಮಾಡಿಸಿ ತೋಳಿಗೇರಿಸಿ,
ತೊಡೆಯೊಳಗ ಗಂಡಾ
ತೋಳಿನೊಳಗೆ ಮಿಂಡಾ’

“ಇದರ ಅರ್ಥವೇನು?” ಎಂದಳು. ರಾಜಕುಮಾರ ಎಷ್ಟು ಪ್ರಯತ್ನ ಮಾಡಿದರೂ ಬಗೆಹರಿಯಲಿಲ್ಲ. ಮಾತಿನ ಪ್ರಕಾರ ಅಗ್ನಿಕುಂಡದಲ್ಲಿ ಜಿಗಿದು ಸತ್ತುಹೋದ. ಅವಳು ಇನ್ನೊಬ್ಬ ಗೆಣೆಕಾರನನ್ನು ಮಾಡಿಕೊಂಡು ಸುಖದಿಂದ ಇದ್ದಳು. ಇದಕ್ಕೇ ಹಿರಿಯರು ಹೇಳುತ್ತಾರೆ. ಹೆಂಗಸು ಯಾರೇ ಇರಲಿ ಅವಳ ಚರಿತ್ರೆ ಶುದ್ಧವಾಗಿರುವುದು ಸಾಧ್ಯವೇ ಇಲ್ಲ. ಸ್ವತಃ ತನ್ನ ದೇಹದಿಂದ ಆದ ಹೆಂಡತಿಯಿದ್ದರೂ ಈ ಗತಿ ಬಂತು. ಇನ್ನು ಬೆಡಗು ಬೇರೆ ಆದ ಹೆಂಗಸರ ಮಾತೇನು?

ಈ ಕಥೆಯಲ್ಲಿ ಸಾಮಾನ್ಯವಾದ ಪ್ರಣಯ ಕಥೆಯಲ್ಲಿನಂತೆ ನಾಯಕನ ಸಾಹಸ ಕಾರ್ಯಗಳಿಲ್ಲ. ಮಾಯಾವಿ ಪ್ರತಿನಾಯಕ ಹೌದಾದರೆ ಆತನ ಮಾಯಾವಿತನದ ಉಪಯೋಗದಿಂದ ಅವನು ಸರ್ಪವಾಗಿ ಬೇರೆ ವೇಷ ಧರಿಸುವಷ್ಟಕ್ಕೆ ಮಾತ್ರ. ಮುಖ್ಯವಾಗಿ ಕಥೆಯ ತಾತ್ಪರ್ಯವನ್ನು ನೋಡಬೇಕು. ಹೆಂಗಸಿನ ಚರಿತ್ರೆ ಶುದ್ಧವಾಗಿರುವುದು ಸಾಧ್ಯವೇ ಇಲ್ಲ ಎಂಬ ಮಾತಿಗೆ ಉದಾಹರಣೆಯಾಗಿ ಈ ಕಥೆ ಹೇಳಿದ್ದು. ಕಥೆಯ ಪ್ರಾರಂಭದಲ್ಲಿ ರಾಜಕುಮಾರ ತನ್ನ ದೇಹವನ್ನೇ ಸೀಳಿ ಅರ್ಧವನ್ನು ಹೂವಿನಲ್ಲಿ ಹೂತಿಟ್ಟಿದ್ದು, ಅದು ಹೆಣ್ಣಾದದ್ದು, ಅವಳನ್ನೇ ರಾಜಕುಮಾರ ಮದುವೆಯಾದದ್ದು ಇದೆ. ಇದು ಗ್ರೀಕರ ಪ್ರಾಮದ ಬಗೆಗಿನ ಕಥೆಯಂತಿದೆ. ಈ ಆಶಯ (Motif) ವನ್ನು ಧಾರಾಳವಾಗಿ ಉಪಯೋಗಿಸಿದ “ಹಾದರದ ಕಥೆ”ಗಳಿವೆ. ಮುಂದೆ ಮಾಯಾವಿ ರಾಜನ ಸೊಸೆಯನ್ನು ವರಿಸಲು ಮಾಲೆಕಟ್ಟಿ ಮುದುಕೊಯೊಂದಿಗೆ ಕಳಿಸುವುದು, ಅವಳು ಸಂಕೇತಗಳ ಮೂಲಕ ಸರಿಯಾದ ಸಮಯ ಸೂಚಿಸುವ ಭಾಗವಿದೆ. ಇಂಥ ಆಶಯ ಅನೇಕ ಪ್ರಣಯ ಕಥೆಗಳಲ್ಲಿ ಬರುವುದರಿಂದ ಇದು ಮೂಲಕಥೆಯ ಅನಿವಾರ್ಯ ಭಾಗವೇನಲ್ಲ. ಬೇರೆ ಕಥೆಗಳ ಆಕರ್ಷಕ ಆಶಯಗಳನ್ನು ಸಂದಭಾನುಸಾರವಾಗಿ ಇತರ ಕಥೆಗಳಿಗೂ ಹೊಂದಿಸಿಕೊಳ್ಳುವುದು ಜಾತಿವಂತ ಕಥೆಗಾರರಿಗೆ ಸುಲಭ. ರಾಜನ ಮಗ ತನ್ನ ಹೆಂಡತಿಯನ್ನು ಬೇರೆ ಮನೆ ಕಟ್ಟಿ ಇಡುವುದು, ಮಾಯಾವಿ ಹಾವಿನ ರೂಪದಿಂದ ಬರುವುದಕ್ಕೂ ಮುಖ್ಯ ಕಥೆ ಪ್ರಾರಂಭವಾಗುತ್ತದೆ.

ದುಷ್ಟನಿಗೆ ಶಿಕ್ಷೆ

ಜಾನಪದ ಪ್ರಣಯ ಕಥೆಗಳೆಲ್ಲ ಸಮಾನ್ಯವಾಗಿ ಸುಖಾಂತವಾಗಿ ನಾಯಕಿ, ನಾಯಕರ ಸಮಾಗಮದಲ್ಲಿ ಮುಗಿಯುತ್ತವೆ. ಅಲ್ಲಿ ಸಾಯುವವನು ಪ್ರತಿನಾಯಕ ಮಾತ್ರ. ಅದು ಅವನ ದುಷ್ಟತನಕ್ಕೆ ಶಿಕ್ಷೆ. ದುಷ್ಟವಾದುದು ಯಾವುದೇ ಇದ್ದರೂ ಬಹುಮಾನವಿಲ್ಲದೇ ಸಾಯಬೇಕಾದದ್ದು ನ್ಯಾಯ. ಅದಕ್ಕಾಗಿಯೇ ಕೈಯಲ್ಲಿದ್ದ ರಾಜಕುಮಾರಿಯೂ ಅವನ ವಶವರ್ತಿಯಾಗುವುದಿಲ್ಲ. ಅಲ್ಲದೆ ಆ ಪರಿಸರದಲ್ಲಿರುವ ಒಳ್ಳೆಯ ಶಕ್ತಿಗಳೆಲ್ಲ ನಾಯಕನಿಗೆ ಸಹಾಯ ಮಾಡುತ್ತವೆ. ಒಂದರ್ಥದಲ್ಲಿ ಸಾವು ಪ್ರತಿನಾಯಕನಿಗೆ ಸಿಕ್ಕುವ ಬಹುಮಾನ. ಅದಕ್ಕೂ ಅರ್ಹತೆ ಬೇಕು. ಸಾಹಸದ ಪ್ರಾರಂಭದಿಂದ ನಾಯಕನ ಬೆನ್ನು ಹತ್ತಿ ಕೊನೆಯ ಕ್ಷಣದಲ್ಲಿ ರಾಜಕುಮಾರಿಯನ್ನಪೇಕ್ಷಿಸುವ ಇನ್ನೊಬ್ಬ ಅಲ್ಪ ಮಟ್ಟದ ಪ್ರತಿ ನಾಯಕನಿಗಾಗಲಿ ಹಿಂದೆ ಸಹಾಯ ಮಾಡಿದ ಆದರೆ ಈಗ ರಾಜಕುಮಾರಿಯನ್ನು ಬಯಸುವ ಸನ್ಯಾಸಿಗಾಗಲೀ ಸಾವು ಕೊನೆಯಲ್ಲ. ಇಂಥವರನ್ನು ಕಥೆಗಾರರು ಅಪಹಾಸ್ಯ ಮಾಡಿ ಅವಮಾನಿಸಿ ಹಿಂದೆ ಸರಿಸುತ್ತಾರೆ.

ಆದರೆ ನಾವು ಮೇಲೆ ನೋಡಿದ ಕಥೆಯ ಜಾತಿ ಬೇರೆ. ಇಲ್ಲಿ ನಾಯಕನ ಸಾಹಸ ಕೃತ್ಯಗಳಿಲ್ಲ. ನಾಯಕ ಮತ್ತು ಪ್ರತಿನಾಯಕರುಸಂಧಿಸುವುದಿಲ್ಲ. ಕಥೆಯ ಅಂತ್ಯದಲ್ಲಿ ಇಬ್ಬರೂ ಸಾಯುತ್ತಾರೆ. ಸರ್ಪರೂಪದ ಮಾಯಾವಿಗೆ ತಕ್ಕ ಶಿಕ್ಷೆಯಾಯಿತೆಂಬ ಭಾವನೆ ಬರುವುದಿಲ್ಲ. ಅಲ್ಲದೆ ನಾಯಕನ ಯಾವ ತಪ್ಪಿಗಾಗಿ ಶಿಕ್ಷೆ ಸಿಗಬೇಕು? ಇಂಥದೇ ಇನ್ನೊಂದು ಕಥೆಯಲ್ಲಿ ಒಬ್ಬ ಹುಡುಗಿ ನಾಗನೊಂದಿಗೆ ಮದುವೆಯಾಗುತ್ತಾಳೆ. ಅವಳ ಅಣ್ಣಂದಿರು ಆ ಸಪ್ಪವನ್ನು ಮೋಸದಿಂದ ಸುಟ್ಟು ಹಾಕುತ್ತಾರೆ. ಆ ಹುಡುಗಿಯ ದುಃಖದಲ್ಲಿ ಕಥೆ ಕೊನೆಗೊಳ್ಳುತ್ತದೆ. ಇನ್ನೊಂದು ಕಥೆಯಲ್ಲಿ ಮದುವೆಯಾದ ರಾಜಕುಮಾರಿ ನಾಗನಿಂದ ಒಬ್ಬ ಮಗನನ್ನು ಪಡೆಯುತ್ತಾಳೆ. ಆಗ ಗಂಡನಿಗೆ ಅವಳ ಪಾವಿತ್ರ್ಯದ ಬಗೆಗೆ ಸಂದೇಹ ಬರುತ್ತದೆ. ಕೊನೆಗೆ ಅವಳು ನಾಗನ ಸಮ್ಮಿತಿಯಿಂದ ಒಂದು ದಿವ್ಯ ಏರ್ಪಡಿಸಿ ದೇವಾಲಯದಲ್ಲಿರುವ ಸರ್ಪವನ್ನು ಮೈ ಮೇಲೆ ಹಾಕಿಕೊಂಡರೂ ಬದುಕಿ ಬಂದು ತನ್ನ ಶೀಲವನ್ನು ತೋರ್ಪಡಿಸುತ್ತಾಳೆ. ಹಾಗೆ ಮೈ ಮೇಲೆ ಹಾಕಿಕೊಂಡ ಸರ್ಪ ಅವಳ ಪ್ರಿಯಕರನೇ ಆಗಿದ್ದುದು ಸ್ಪಷ್ಟವೆ. ಆಮೇಲೆ ಅವಳು ಗಂಡನೊಂದಿಗೆ ಸುಖದಿಂದಿದ್ದು ಸರ್ಪವನ್ನು ಮರೆಯುತ್ತಾಳೆ. ಸರ್ಪ ವಿರಹದಿಂದ ಸಾಯುತ್ತದೆ. ಅವಳು ತನ್ನ ಮಗನಿಂದ ಅದರ ಶವಕ್ಕೆ ಸಂಸ್ಕಾರಮಾಡಿಸಿ ದುಃಖದಿಂದ ಇರುತ್ತಾಳೆ.

ಹೀಗೆ ಮಾಡಿಕೊಂಡ ಗಂಡನಿಗೆ ಪ್ರತಿಯಾಗಿ ಸರ್ಪದೊಂದಿಗೆ ಹೆಂಡತ ಸಂಪರ್ಕ ಹೊಂದಿರುವ ಕಥೆಗಳನ್ನು ಕಥೆಗಾರರು ಹಾದರದ ಕಥೆಗಳಂತೆ ಪರಿಗಣಿಸುವುದಿಲ್ಲ. ಯಾಕೆಂದರೆ ಹಾದರದ ಕತೆಗಳನ್ನೇ ಹೇಳುವ ವಿಶಿಷ್ಟ ಪದ್ಧತಿಯೊಂದು ಉತ್ತರ ಕರ್ನಾಟಕದಲ್ಲಿದೆ. ಅದರಲ್ಲಿ ಇಂಥ ಕಥೆಗಳನ್ನು ಉಪಯೋಗಿಸುವುದು ತೀರಾ ಕಡಿಮೆ. ಅವುಗಳಲ್ಲಿ ಗಂಡ, ಅತ್ತೆ ಮಾವಂದಿರಿಗೆ ಮೋಸ ಮಾಡಿ, ಗೆಣೆಕಾರನೊಂದಿಗೆ ಕೂಡುವ ಹೆಣ್ಣಿನ ಇಲ್ಲವೆ ಗಂಡಿನ ಸಾಹಸ ವರ್ಣನೆ ಇರುತ್ತದೆ. ಈ ಕಥೆ ಹಾಗಲ್ಲ.

ಜಾನಪದ ಕಥೆಗಳಲ್ಲಿ ಸರ್ಪ ಸಾಮಾನ್ಯವಾಗಿ ಕಾಮದ ಸಂಕೇತವಾಗಿ ಬರುತ್ತದೆ. ಇರುವೆ ಮುತ್ತಿರುವ ಹುತ್ತದಲ್ಲಿ ಹಾವುಪ್ರವೇಶ ಮಾಡುವ ಕಥೆಗಳಿವೆ. ಹಾವಿನ ಹುತ್ತಕ್ಕೆ ಮಲ್ಲಿಗೆ ಹೂವಿನ ಮಾಲೆ ಹಾಕುವ, ಆಶಯವನ್ನುಳ್ಳ ಕಥೆಗಳಿವೆ. ಇಂಥಲ್ಲೆಲ್ಲ ಇದು ಸಂಭೋಗದ ಸಂಕೇತವೆಂಬುದು ಸ್ಪಷ್ಟ. ಆಶ್ಚರ್ಯವೆಂದರೆ ಉಂಡಾಡಿ ಮಾತುಗಳಲ್ಲಿ ಇವೇ ಸಂಕೇತಗಳನ್ನು ಸಂಕೋಚವಿಲ್ಲದೆ ಬಳಸುವ ಜನ ಈ ಕಥೆಯಲ್ಲಿನ ಸಂಕೇತ ಇದೇ ಅಲ್ಲವೇ ಎಂದರೆ “ಛೇ, ಛೇ ನಾಗಪ್ಪ ದೇವರಲ್ಲವೇ? ಅದ್ಹೆಂಗಾದೀತು?” ಅನ್ನುತ್ತಾರೆ. ಇಂಥ ಕಥೆಗಳನ್ನು ಆರಾಧನೆಯ ಕಥೆಯಷ್ಟೇ ಗಂಭೀರವಾಗಿ ಹೇಳುತ್ತಾರೆ. ಬಹುಶಃ ನಾಗನಿಗೆ ಸಂಬಂಧಪಟ್ಟ ಆರಾಧನೆಯ ಅಂಗವಾಗಿ ಇಂಥ ಕಥೆಗಳು ಮೊದಲು ಹುಟ್ಟಿಕೊಂಡರಬೇಕೆಂದು ಅನ್ನಿಸುತ್ತದೆ. ಕಾಮಕ್ಕೆ ಸಂಕೇತವಾಗಿ ನಾಗಪೂಜೆ ಮಾಡುವ ವಿಧಾನ ಸರ್ವವಿದಿತ. ಈ ಮತ್ತು ಇಂಥ ಬೇರೆ ಕಥೆಗಳ ಅಧ್ಯಯನದಿಂದ ಇದು ಮನುಷ್ಯನ ದೇಹ ಮತ್ತು ಆತ್ಮಗಳು ಬೇರೆ ಬೇರೆಯಾದ ಅವಸ್ಥೆಯನ್ನು ವರ್ಣಿಸುವ ಕಥೆಯೆಂದು ಅನ್ನಿಸುತ್ತದೆ. ದೈಹಿಕ ಕಾಮ ನಾಗರೂಪದ ಪ್ರತ್ಯೇಕ ಅಸ್ತಿತ್ವದಿಂದ ದೇಹರೂಪದ ಹೆಣ್ಣಿನೊಂದಿಗೆ ಸಾಮರಸ್ಯದಲ್ಲಿದ್ದರೆ, ಆತ್ಮ ಇಲ್ಲವೆ ಪ್ರಜ್ಞೆ ಇಲ್ಲವೆ ಅರಿವು ಈ ಸಾಮರಸ್ಯ ಸಾಧನವಿಲ್ಲದೆ ಮಾನವ ರೂಪದಿಂದ ಬೇರೆಯಾಗಿಯೇ ಅಲೆದಾಡುತ್ತದೆ. ಇದು ಒಂದೇ ವ್ಯಕ್ತಿತ್ವದ ವಿಘಟನೆಯಿಂದಾದುದು. ಈ ಭಿನ್ನತೆಗೆ ಅಥವಾ ಪ್ರತ್ಯೇಕತೆಗೆ ದುರಂತವೇ ಕೊನೆಯೆಂಬುದನ್ನು ಈ ಕಥೆಯ ದರ್ಶನ ಸೂಚಿಸುವಂತಿದೆ. ಅದೇನೇ ಇರಲಿ, ಬೇರೆ ಪ್ರಣಯದ ಕಥೆಗಳ ರಚನೆ (Structure) ಯಿಂದ ಭಿನ್ನವಾದ ಈ ಕಥೆಗಳು ಸಮಾಜತಜ್ಞರಿಗೂ ಜಾನಪದ ತಜ್ಞರಿಗೂ ಒಂದು ಸವಾಲಾಗಿವೆ ಎಂಬುದರಲ್ಲಿ ಸಂದೇಹವಿಲ್ಲ. ಇವುಗಳ ಅಧ್ಯಯನದಿಂದ ಇನ್ನೂ ಹೆಚ್ಚಿನ ಉಪಯುಕ್ತ ವಿವರಗಲು ಗೊತ್ತಾಗುತ್ತವೆಂದು ತೋರುತ್ತದೆ.