ಜಾನಪದ ಕತೆಗಳ ಅಧ್ಯಯನದಿಂದ ನಮ್ಮ ಸಂಸ್ಕೃತಿಯ ಕೆಲವು ಮಹತ್ವದ ಸೂಕ್ಷ್ಮಗಳು ತಿಳಿಯುತ್ತವೆ ಎಂದು ಅನಿಸುತ್ತದೆ. ಕರ್ನಾಟಕದಲ್ಲಿ ಸಿಕ್ಕುವ ಜನಪದ ಕತೆಗಳಷ್ಟನ್ನೇ ಗಮನಿಸಿದರೆ-ತುಳು ಪಾಡ್ದನದ ಭೂತಗಳು ಹೆಚ್ಚು ಕ್ರೂರವಾದವು. ಅವು ಭಕ್ತರಿಗೆ ಸಲಿಗೆ ಕೊಡುವುದಿಲ್ಲ; ಕ್ಷಮಿಸುವುದಿಲ್ಲ. ಒಂದು ಸಲ ಹರಕೆ ಹೊತ್ತರಾಯಿತು; ಅದನ್ನು ಈಡೇರಿಸಬೇಕು; ಇಲ್ಲ ಶಿಕ್ಷೆಗೆ ಗುರಿಯಾಗಬೇಕು. ಈ ಮಧ್ಯೆ ಯಾವುದೇ ಸವಲತ್ತುಗಳಿಗೆ ಅವಕಾಶವಿಲ್ಲ. ಒಬ್ಬ ಭಕ್ತನ ಹೆಂಡತಿ ಗಂಡನೊಂದಿಗೆ ಸಿಟ್ಟು ಮಾಡಿ ತವರಿಗೆ ಹೋಗುತ್ತಾಳೆ. ಅವಳು ವಾಪಸ್ಸು ಬಂದರೆ ಬಲಿ ಕೊಡುವುದಾಗಿ ಭೂತರಾಯನಿಗೆ ಭಕ್ತ ಹರಕೆ ಹೊರುತ್ತಾನೆ. ಅವಳು ವಾಪಸ್ಸು ಬಂದಾಗ ಸಂತೋಷದ ಭರದಲ್ಲಿ ಭಕ್ತ ಹೊತ್ತ ಹರಕೆಯನ್ನು ಮರೆತು ಹೆಂಡತಿಯನ್ನು ಮುಟ್ಟಿದರೆ-ಅಲ್ಲೇ ಆ ಕ್ಷಣವೇ ಸತ್ತು ಬೀಳುತ್ತಾನೆ! ಭೂತರಾಯನ ಕೋಪ ಇಂಥಾದ್ದು ಸಾಮಾನ್ಯವಾಗಿ ಪಾಡ್ದನದ ಬಹಳಷ್ಟು ಕತೆಗಳು ಇಂಥದೇ ಬಂಧವನ್ನು ಅನುಸರಿಸಿವೆ. (ತಮಿಳಿನ ಶಿಲಪ್ಪದಿಗಾರಂ ಕಾವ್ಯವನ್ನು ಗಮನಿಸಬೇಕು) ಜೊತೆಗೇ ಸ್ಥಳಿಕ ದೇವತೆಗಳ ಉದಾ: ಮಾರಮ್ಮ ದುರಗವ್ವ ಬಂಡೆವ್ವ, ಕರ್ರೆವ್ವ, ಇವರುಗಳ ಚರಿತ್ರೆಯನ್ನೂ ಗಮನಿಸಿ.

ದೈವಿಕತೆಯ ಅನುಗ್ರಹ ಇಲ್ಲೆಲ್ಲ ಬಹಳ ನಿಷ್ಠುರವಾದ ನಿಯಮಗಳನ್ನು ಪಾಲಿಸುತ್ತದೆ. ಮನುಷ್ಯನೇ ಆಮಂತ್ರಿಸುವ ತನಕ ಅವನ ಜೀವನದಲ್ಲಿ ಪ್ರವೇಶಿಸುವುದಿಲ್ಲ. ಒಮ್ಮೆ ಪ್ರವೇಶಿಸಿದರೆ ಲೆಕ್ಕ ಸರಿಯಾಗಿರಬೇಕು. ಇಲ್ಲಿ ಭಕ್ತ ಮತ್ತು ಭೂತ ಇಬ್ಬರೂ ಬದ್ಧರು. ಭಕ್ತನ ಆಸೆ ಈಡೇರಿಸುವುದಕ್ಕೆ ಭೂತ ಬದ್ಧವಾದರೆ, ತೀರಿಸಬೇಕಾದ ಹರಕೆಗೆ ಭಕ್ತ ಬದ್ಧನಾಗಿರಬೇಕು. ಮನುಷ್ಯ ಮರೆತು ಮಾಡುವ ತಪ್ಪಿಗೆ ಅವನೇ ಹೊಣೆ; ಭೂತರಾಯನಲ್ಲ. ಅಲ್ಲದೆ ಭೂತರಾಯ ನಾಮಸ್ಮರಣೆಯಿಂದ ಪ್ರೀತನಾಗುವುದಿಲ್ಲ. ಮುಖಸ್ತುತಿಗೆ ಒಲಿಯುವುದಿಲ್ಲ. ಅವನನ್ನು ಸ್ತುತಿಸುವ ನೂರಾ ಎಂಟು ನಾಮಾವಳಿಗಳಿಲ್ಲ. ವರ ಕೊಡಲು ತಾನಾಗಿ ಮುಂದೆ ಬರುವುದಿಲ್ಲ. ಮಂಗಳಾರತಿಯ ಕಲ್ಪನೆಯಿಲ್ಲ, ಇಷ್ಟೇ; ಅವನನ್ನು ಮರೆಯಬಾರದು; ಆಗಾಗ ಬಲಿ ಕೊಡಬೇಕು.

ಶಿಕ್ಷೆಗೊಂಡು ಸತ್ತ ಭಕ್ತ ಕೈಲಾಸ, ಸ್ವರ್ಗ, ವೈಕುಂಠದಂಥ ಭೂಲೋಕಕ್ಕೆ ಮೀರಿದ ಯಾವ ಲೋಕಕ್ಕೂ ಹೋಗುವುದಿಲ್ಲ. ಇದೇ ಲೋಕದಲ್ಲಿ ಅವನೂ ಭೂತವಾಗಿ ಭಕ್ತರಿಂದ ಪೂಜೆಗೊಳ್ಳುತ್ತಾನೆ. ಅವನ ಜನಪ್ರಿಯತೆ ಅವನ ಸಾವನ್ನವಲಂಬಿಸಿದೆ. ಅವನಿಗೆ ಬಂದ ಸಾವು ಎಷ್ಟೆಷ್ಟು ಭಯಂಕರವಾಗಿದ್ದರೆ ಅವನು ಅಷ್ಟಷ್ಟು ಜನಪ್ರಿಯ ಭೂತವಾಗುತ್ತಾನೆ. (W.T. ಎಲ್ಮೋರ್ ಅವರು ದ್ರಾವಿಡಿಯನ್ ಗಾಡ್, ಇನ್ ಮಾಡರ್ನ್‌ ಹಿಂದೂಯಿಸಂ-ಲಿಂಕನ್ ೧೯೧೫. ಈ ಗ್ರಂಥವನ್ನು ನೋಡಿ).

ಇದಕ್ಕೆ ಪ್ರತಿಯಾಗಿ ಮಿಕ್ಕ ಕತೆಗಳನ್ನು ಗಮನಿಸಬೇಕು. ಇವು ಸಂಸ್ಕೃತ ಪುರಾಣಗಳಿಂದ ಪ್ರಭಾವಿತವಾದವು. ದೈವಿಕತೆಗೆ ಇಲ್ಲಿ ಬದ್ಧತೆಯೆನ್ನುವುದೇ ಇಲ್ಲ. ಅಷ್ಟಾಗಿ ಗಾಂಭೀರ್ಯವಿಲ್ಲ. ಅದೊಂದು ಸವಲತ್ತುಗಳ ಮೊತ್ತ. ದೇವರಂತೂ ಸರಿಯೆ-ಅವನಿಗೆ ಪೂರಕವಾದ ಆಶಯಗಳೇ ಎಷ್ಟೋ ಡಜನ್ನಿವೆ-ಚಿಂತಾಮಣಿ. ಕಾಮಧೇನು, ಕಲ್ಪವೃಕ್ಷ, ಮಂತ್ರಿಸಿದ ಹರಳು, ಬೇಕಾದಲ್ಲಿಗೊಯ್ಯುವ ಚಾಪೆ, ಏನನ್ನೂ ತೋರಬಲ್ಲ ಕನ್ನಡಿ, ಅದೃಶ್ಯವಾಗಿಸಬಲ್ಲ ಟೊಪ್ಪಿಗೆ ಇತ್ಯಾದಿ. ಸತ್ತವನನ್ನು ಬದುಕಿಸಲಿಕ್ಕೆ ಸಂಜೀವಿನಿ ಕಡ್ಡಿಯಿದೆ, ಅಮೃತವಿದೆ, ದೇವರಂತೂ ಕಾಪಾಡಲು ಸದಾ ಸಿದ್ಧನಾಗಿಯೇ ಇದ್ದಾನೆ. ನಾಮಸ್ಮರಣೆ, ಮುಖಸ್ತುತಿಯೆಂದರೆ ದೇವರಿಗೆ ವಿಪರೀತ ಪ್ರೀತಿ. ದೇವಭಕ್ತರ ಸಂಬಂಧದಲ್ಲಿ ಅತ್ಯಂತ ಮಹತ್ವದ ಬದ್ಧತೆ (Commitment) ಯ ಕಲ್ಪನೆಯೇ ಇಲ್ಲ. ಭಕ್ತನ ತಪ್ಪಿಗೆ, ಮರೆವಿಗೆ, ಅಪರಾಧಕ್ಕೆ ಕೂಡ ಕ್ಷಮೆಯಿದೆ ಸವಲತ್ತುಗಳಿವೆ. ಭಕ್ತ ಸತ್ತ ಮೇಲೆ ವೈಕುಂಠ, ಕೈಲಾಸ, ಸ್ವರ್ಗದಂಥ ಅಲೌಕಿಕಕ್ಕೆ ಹೋಗುತ್ತಾನೆ. ಇಲ್ಲಾ ಭೂಲೋಕದಲ್ಲೇ ಸುಖದಿಂದ ಇರುತ್ತಾನೆ.

ಹೀಗೆ ಯಾಕಾಗಿರಬಹುದು? ಭಕ್ತಿ ಸಂಪ್ರದಾಯದ ಪ್ರಭಾವ ಇರಬಹುದೆ? ಭಕ್ತಿಯ ಕಲ್ಪನೆ ಹುಟ್ಟಿದ್ದು ಕರ್ಮತತ್ವಕ್ಕೆ ವಿರೋಧವಾಗಿ. ಕರ್ಮತತ್ವ ಬದುಕಿನ ನಿಷ್ಠುರ ಸತ್ಯಗಳನ್ನು (Action) ಗೆ ಪರಿಣಾಮ ಫಲ ಇದ್ದೇ ಇದೆ, ಇರಬೇಕು. ಕ್ರಿಯೆಯಲ್ಲಿ ತೊಡಗುವುದು ಬದ್ಧತೆ (commitment). ಮನುಷ್ಯ, ಈ ತೊಡಗುವಿಕೆಯಿಂದ ಪಾರಾಗಲಾರ. (ಮುಂದೆ ಇಲ್ಲಿಯೂ ಮೋಕ್ಷದಂಥ ಸವಲತ್ತುಗಳಿವೆ; ಇರಲಿ). ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಕ್ರಿಯೆಗೆ ಮಾತ್ರ ಪರಿಣಾಮ ಫಲ ಇದ್ದ ಸಂಗತಿಯನ್ನು. ಇದಕ್ಕೆ ವಿರುದ್ಧವಾದ ಕತೆ ಹೀಗಿವೆ:

೧) ಒಬ್ಬನು ಜೀವನ ಪರ್ಯಂತ ಕೆಟ್ಟ ಕೆಲಸಗಳನ್ನೇ ಮಾಡುತ್ತಿದ್ದ. ಇನ್ನೊಬ್ಬರನ್ನು ಹಿಂಸಿಸುವುದೆಂದರೆ ಅವನಿಗೆ ಬಾರಿ ಖುಶಿ. ಒಂದು ದಿನವೂ ದೇವರ ನಾಮಸ್ಮರಣೆ ಮಾಡಿದವನಲ್ಲ; ಗುಡಿಯ ಕತೆಗೆ ಮುಖ ಮಾಡಿ ಕೈ ಮುಗಿದವನಲ್ಲ. ಎಂಜಲು ಕೈಯಿಂದ ಕಾಗೆ ಓಡಿಸಿದವನೂ ಅಲ್ಲ. ಅವನಿಗೆ ನಾರಾಯಣ ಎಂಬೊಬ್ಬ ಮಗ ಇದ್ದ. ಒಂದು ವೇಳೆ ಈತ ಹಾಗೇ ಸತ್ತಿದ್ದರೆ ನರಕವೇ ಗತಿ. ಆದರೆ ಸಾಯುವಾಗ ತನ್ನ ಮಗನನ್ನು ‘ನಾರಾಯಣ’ ಎಂದು ಕರೆದು ಸತ್ತ. ಮುಂದೆ ಯಮದೂತರು ಅವನನ್ನು ಸ್ವರ್ಗಕ್ಕೆ ಒಯ್ದರು. ಯಾಕೆಂದರೆ ಸಾಯುವಾಗ ನಾರಾಯಣ ಎಂದು ದೇವರ ಹೆಸರು ಉಚ್ಚರಿಸಿದ್ದನಲ್ಲ ಅದಕ್ಕೆ!

೨) ಒಂದು ಅಡವಿಯಲ್ಲಿ ಒಬ್ಬ ಋಷಿ ಇದ್ದ ಅವನ ಆಶ್ರಮದಲ್ಲಿ ನೂರಾರು ಜನ ಶಿಷ್ಯರಿದ್ದರು. ಅದು ಧರ್ಮ ಕರ್ಮದ ಕಾಲ. ಜನ ಪಾಪಕ್ಕೆ ಹೆದರುತ್ತಿದ್ದರು. ಆದ್ದರಿಂದ ನೆರೆಹೊರೆಯ ಪಟ್ಟಣದವರು ಈ ಋಷಿಗಳಿಗೆಲ್ಲ ಸಾಕಾಗುವಷ್ಟು ದವಸ ಧಾನ್ಯ, ಆಕಳು ಕೊಟ್ಟು ಅವರ ತಪಸ್ಸು ನಿರಾತಂಕವಾಗಿ ಯಾವ ಕಾಳಜಿ ಇಲ್ಲದೇ ಸಾಗುವಂತೆ ವ್ಯವಸ್ಥೆ ಮಾಡಿದ್ದರು. ಭಕ್ತರು ಕೊಟ್ಟ ಆಕಳು ಕಾಯಲಿಕ್ಕೆ ಸಿದ್ಧ ಎಂಬ ಹುಡುಗನಿದ್ದ. ಕೆಲ ವರುಷ ಋಷಿಗಳು ಯಾವ ಅಡಷಣೆ ಇಲ್ಲದೆ ತಪಸ್ಸು ಮಾಡಿದರು. ಮುಂದೆ ಕಲಿಕಾಲ ಬಂತು. ಜನ ಪಾಪಕ್ಕೆ ಹೆದರದಾದರು. ಋಷಿಗಳೆಂದರೆ ಗುರುತು ಹಿಡಿಯದಾದರು. ಹೀಗಾಗಿ ಆಶ್ರಮಕ್ಕೆ ಬರುತ್ತಿದ್ದ ಕಾಣಿಕೆ ನಿಂತು ಹೋಯಿತು. ಋಷಿಗಳು ಆತ್ಮ ಪರಮಾತ್ಮ ಬಿಟ್ಟು ಹೊಟ್ಟೆಗೆ ನಾಳೆಗೆ ಹೇಗೆ, ನಾಡಿದ್ದು ಹೇಗೆ ಎಂದು ಜಪಸರ ಎಣಿಸುವಂತಾಯ್ತು. ಆಶ್ರಮದ ಆಕಳು ಕಾಯುವ ಸಿದ್ಧನಿಗೆ ಋಷಿಗಳ ಕಷ್ಟ ಗೊತ್ತಾಯಿತು. ಅವನು ಮರುಗುತ್ತಿದ್ದಾಗ ಒಂದು ಉಪಾಯ ಹೊಳೆದು ಗುರುಗಳ ಹತ್ತಿರ ಓಡಿ ಬಂದು ಹೇಳಿದ;

“ಗುರುಗಳೆ, ಗುರುಗಳೆ, ನಮ್ಮೆಲ್ಲರ ಹೊಟ್ಟೆ ತುಂಬಿ ತುಖುವಂಥಾದ್ದೊಂದು ವಿಚಾರವಿದೆ ಹೇಳಲೇ?”

“ಏನದು?”

“ನಾನು ಚಿಕ್ಕವನಿದ್ದಾಗ ನಮ್ಮಜ್ಜನ ಮನೆಯಲ್ಲಿದ್ದೆ. ನಮ್ಮಜ್ಜ ಅಮೃತದಂಥ ಒಂದು ರಸ ಮಾಡುತ್ತಿದ್ದ. ಅದನ್ನು ಮಾಡಿ ಮಾರಿದರೆ ನಮ್ಮ ಹೊಟ್ಟೆ ತುಂಬುತ್ತದೆ.”

“ಹೌದೆ? ಅದನ್ನು ಯಾವ ವಸ್ತುಗಳಿಂದ ಹೇಗೆ ಮಾಡುತ್ತಿದ್ದ?”

“ಅದನ್ನು ಮಾಡೋದೆಲ್ಲ ನನಗೆ ಗೊತ್ತು. ನಮ್ಮ ಆಶ್ರಮದ ಸುತ್ತ ಅಂಥಾ ಮರ, ಬಳ್ಳಿ ಸಾಕಷ್ಟಿವೆ. ಅದರ ತೊಗಟೆ, ಎಲೆ ತಂದು ಭಟ್ಟಿಗೆ ಹಾಗಿದರೆ ಆಯಿತು” ಎಂದ.

ಋಷಿಗಳೆಲ್ಲ ಕೂಡಿ ಆ ವಿಚಾರವನ್ನು ಒಪ್ಪಿದರು. ಸಿದ್ಧ ಆಕಳು ಕಾಯುವುದನ್ನು ಬಿಟ್ಟು ಮಾರನೇ ದಿನದಿಂದಲೇ ಪರಿಶ್ರಮದಿಂದ ಕೆಲವು ಗಿಡಗಳ ತೊಗಟೆ, ಎಲೆ, ಬೇರುಗಳನ್ನು ಹುಡುಕಿ ತಂದು ಕುದಿಸಿ, ಭಟ್ಟಿ ಹಾಕಿದ. ಅದು ರಸ ಬಿಟ್ಟು ಸಿದ್ಧವಾದ ಮೇಲೆ ಅದರ ರುಚಿ ನೋಡಿದ.

“ಗುರುಗಳೇ ಗೊಳಬಾರಸ ಸಿದ್ಧವಾಗಿದೆ” ಎಂದ.

ಎಲ್ಲಾ ಋಷಿಗಳೂ ಕೂಡಿ ಅದನ್ನು ಸಣ್ಣ ಸಣ್ಣ ಪಾತ್ರೆಗಳಲ್ಲಿ ತುಂಬಿದರು. ಪಟ್ಟಣದಲ್ಲಿ ಮಾರಲು ಕೆಲವು ಋಷಿಗಳನ್ನು ಕಳಿಸಿದರು, ಗೊಳಬಾರಸ ಪಟ್ಟಣಗಳಲ್ಲಿ ಬಹಳ ಪ್ರಸಿದ್ಧವಾಯಿತು. ಎಲ್ಲರ ಬಾಯೊಳಗೆಲ್ಲಾ ಅದೇ ಹೆಸರು. ಕೆಲವರಂತೂ ಋಷಿಗಳನ್ನು ಮನಸಾರೆ ಕೊಂಡಾಡಿದರು. ಮೊದಮೊದಲು ಶ್ರೀಮಂತರು ಮಾತ್ರ ಕುಡಿಯುತ್ತಿದ್ದರೆ, ಈಗ ಬಡವರೂ ಕುಡಿಯತೊಡಗಿದರು. ಹಬ್ಬ ಹರಿದಿನ, ಮದುವೆ ಮುಂಜಿಗಳಲ್ಲಿ ಗೊಳಬಾರಸದ ಸೇವನೆ ಅನಿವಾರ್ಯವಾಯಿತು. ಆಶ್ರಮದ ಮೇಲೆ ದುಡ್ಡಿನ ಮಳೆಯೇ ಬೀಳತೊಡಗಿತು. ಹುಲ್ಲಿರದ ಜೋಪಡಿಗಳು ದೊಡ್ಡ ದೊಡ್ಡ ಮಹಲುಗಳಾದುವು. ಚಂದ ಚಂದ ಹೂವಿನ ತೋಟಗಳಾದವು. ಋಷಿಗಳಿಗೆ ದಿನಾಲು ಮೃಷ್ಟಾನ್ನಭೋಜನ ಸಿಗತೊಡಗಿತು. ಯಾವ ಕಾಳಜಿಯೂ ಇಲ್ಲದ್ದರಿಂದ ಅವರ ತಪಸ್ಸು ಪ್ರವರ್ಧಮಾನವಾಯಿತು. ಗೊಳಬಾರಸ ಭಟ್ಟಿ ಇಳಿಸುವುದಕ್ಕೆಂದೇ ಒಂದು ದೊಡ್ಡ ಕಟ್ಟಡ ಕಟ್ಟಿದರು. ಸಿದ್ಧನಿಗೆ ಸಹಾಯ ಮಾಡಲಿಕ್ಕೆಂದು ಕೈಗೊಂದು ಆಳು, ಕಾಲಿಗೊಂದು ಆಳು ಕೊಟ್ಟರು. ಆ ದರೆ ಆ ಭಟ್ಟಿಯ ಹದ ಮಾತ್ರ ಸಿದ್ಧನನ್ನು ಬಿಟ್ಟು ಉಳಿದ ಯಾರಿಗೂ ತಿಳಿಯುವಂತಿರಲಿಲ್ಲ. ಆದ್ದರಿಂದ ಆಶ್ರಮದಲ್ಲಿ ಸಿದ್ಧನ ಮಾನ-ಸನ್ಮಾನಗಳು, ಆದರ ಗೌರವಗಳು ಹೆಚ್ಚಾದವು. ಪ್ರತಿಯೊಬ್ಬರೂ ಈಗ ಅವನಿಗೆ ಸಿದ್ಧಯ್ಯ ಮಹಾಸ್ವಾಮಿಗಳವರು ಎಂದು ಕರೆಯಲಾರಂಭಿಸಿದರು.

ದಿನಾಲು ಸಿದ್ಧಯ್ಯ ಮಹಾಸ್ವಾಮಿಗಳವರು ಭಟ್ಟಿ ಇಳಿಸಿದ ಕೂಡಲೆ ಗೊಳಬಾರಸದ ರುಚಿ ನೋಡುವುದು ವಾಡಿಕೆ. ಹಾಗೆ ನೋಡಿದಾಗಲೆಲ್ಲ ಅವರ ತಲೆ ತಿರುಗುತ್ತಿತ್ತು. ಅಸಹ್ಯ ಮಾತುಗಳು ಬಾಯಿಯಿಂದ ಬರುತ್ತಿದ್ದವು. ಒಂದು ದಿನ ಋಷಿಗಳು ಸಾಮೂಹಿಕವಾಗಿ ಆತ್ಮ-ಪರಮಾತ್ಮ ಚರ್ಚೆ ನಡೆಸುತ್ತಿದ್ದರು. ಮಧ್ಯದಲ್ಲಿ ಸಿದ್ಧಯ್ಯ ಸ್ವಾಮಿಗಳು ಬಂದು ಅಶ್ಲೀಲ ಹಾಡುಗಳನ್ನು ಎತ್ತರದ ಧ್ವನಿಯಿಂದ ಹಾಡಲಾರಂಭಿಸಿದರು. ಋಷಿಗಳು ಬಂದು ಅವರನ್ನು ಹಿಡಿದು ಅವರ ಕೋಣೆಗೆ ಸಾಗಹಾಕಬೇಕಾದರೆ ಸಾಕು ಬೇಕಾಯಿತು. ಮಾರನೇ ದಿನ ಬೆಳಗ್ಗೆ ಸಿದ್ಧಯ್ಯನವರು ಗುರುಗಳ ಬಳಿಗೆ ಬಂದು, “ಗುರುಗಳೆ, ನನಗೆ ಈ ಭಟ್ಟಿ ಇಳಿಸುವ ಕೆಲಸ ಸಾಕಾಗಿದೆ. ಮತ್ತೆ ನನ್ನನ್ನು ಹಸು ಮೇಯಿಸಲಿಕ್ಕೆ ಬಿಡಿ. ನಿನ್ನೆ ನಿಮ್ಮ ಸಭೆಯಲ್ಲಿ ಸಿಕ್ಕಸಿಕ್ಕಂತೆ ಒದರಾಡಿದೆ. ಈ ಗೊಳಬಾರಸ ನನ್ನನ್ನು ಅಡ್ಡದಾರಿಗೆಳೆಯುತ್ತಿದೆ. ನಿಮಗೆ ಕೈ ಮುಗಿಯುತ್ತೇನೆ, ನನಗೆ ಈ ಕೆಲಸ ಸಾಕು” ಎಂದರು.

“ಹೀಗಾದರೆ ಹೇಗೆ? ನಿನ್ನಿಂದಾಗಿ ಋಷಿಗಳೆಲ್ಲ ತಪಸ್ಸು ಮಾಡುತ್ತಿದ್ದಾರೆ. ನೀನೇ ಈ ಕೆಲಸ ಬಿಟ್ಟರೆ ನಮಗಿನ್ನಾರು ದಿಕ್ಕು?”

“ಬೇರೆ ಯಾರನ್ನಾದರೂ ಈ ಕೆಲಸಕ್ಕೆ ಹಚ್ಚಿ. ಇದೇ ಕೆಲಸ ನಡೆಸಿದರೆ ನಾನು ನರಕಕ್ಕೆ ಹೋಗುವುದು ಖಂಡಿತ.”

“ನರಕದ ಬಗ್ಗೆ ನೀನು ಯಾಕೆ ಹೆದರಬೇಕು? ಇಷ್ಟೆಲ್ಲ ಋಷಿಗಳ ಸಲುವಾಗಿ ನೀನು ದುಡಿಯುತ್ತಿರುವೆ. ದೇವರಿಗೆ ಇದು ಗೊತ್ತಿಲ್ಲವೇ? ಇನ್ನು ಮುಂದೆ ನೀನು ರುಚಿ ನೋಡಬೇಕಾದಾಗ ಸ್ವಲ್ಪ ಸ್ವಲ್ಪ ನೋಡು, ಸಾಕು” ಅಂದರು.

ಮಾರನೆ ದಿನದಿಂದ ಸಿದ್ಧಯ್ಯನವರು ಸ್ವಲ್ಪ ಸ್ವಲ್ಪವೇ ರುಚಿ ನೋಡುತ್ತಿದ್ದರೂ ತಲೆಗೇರುತ್ತಿತ್ತು. ಹೀಗಾಗಿ ಇನ್ನೊಂದು ದಿನವೂ ಹೀಗೆಯೇ ಆಯಿತು. ಎಲ್ಲರೂ ಆತ್ಮ-ಪರಮಾತ್ಮ ಅನ್ನುತ್ತಿರುವಾಗ ಸಿದ್ಧಯ್ಯನವರು ಬಂದು ಅಸಹ್ಯ ಹಾಡು ಹೇಳಿ ಕುಣಿಯತೊಡಗಿದರು. ಋಷಿಗಳು ಅವರನ್ನು ಹಿಡಿದು ಸಾಗುಹಾಕಿದರು. ಮತ್ತೆ ಮಾರನೇ ದಿನ ಸಿದ್ಧಯ್ಯ ಗುರುಗಳ ಕಾಲು ಹಿಡಿದುಕೊಂಡರು.

“ಗುರುಗಳೇ, ಈ ಗೊಳಬಾರಸದಿಂದ ನನ್ನನ್ನು ಕಾಪಾಡಬೇಕು” ಅಂದರು.

“ಇದರ ಸಲುವಾಗಿ ನೀನು ಚಿಂತೆ ಮಾಡಬೇಡ. ಇಷ್ಟು ಋಷಿಗಳ ತಪಸ್ಸಿನ ಸಲುವಾಗಿ ನೀ ಸ್ವಲ್ಪ ರುಚಿ ನೋಡಿದರೇನೂ ತಪ್ಪಿಲ್ಲ” ಎಂದು ಸಮಾಧಾನ ಮಾಡಿದರು.

ಕಾಲಾನುಸಾರ ಋಷಿಗಳು ಸತ್ತರು, ಸಿದ್ಧಯ್ಯನವರೂ ಸತ್ತರು. ಗುರುಗಳನ್ನೂ, ಋಷಿಗಳನ್ನೂ ಯಮದೂತರು ನರಕಕ್ಕೆ ಒಯ್ಯುತ್ತಿರುವಾಗ ಹಾದಿಯಲ್ಲಿ ಕಲ್ಪವೃಕ್ಷದ ಕೆಳಗೆ ಸಿದ್ಧಯ್ಯ ಕೂತಿದ್ದು, ಅಪ್ಸರೆಯರು ಸೇವೆ ಮಾಡುತ್ತಿದ್ದರು. ಗುರುಗಳು ರೇಗಿ, “ಹೀಗೇಕೆ? ಆ ಪಾಪಿಗೆ ಇಂಥಾ ಪದವಿ, ತಪಸ್ಸು ಮಾಡಿದ ನಮಗೆ ನರಕ, ಯಾಕೆ?” ಎಂದು ಕೇಳಿದರು. ಆಗ ಯಮದೂತರು ಹೇಳಿದರು.

“ನೀವು ತಪಸ್ಸು ತಪಸ್ಸು ಎಂದು ಜಪಿಸಿದರೂ ನಿಮ್ಮ ಮನಸೆಲ್ಲಾ ಸಿದ್ಧಯ್ಯನ ಗೊಳಬಾರಸ ಮಾರಿ ಬರುವ ದುಡ್ಡಿನ ಮೇಲಿತ್ತು. ಸಿದ್ಧಯ್ಯ ಗೊಳಬಾರಸ ತಯಾರಿಸಿದರೂ, ಅವನ ಮನಸ್ಸು ಯಾವಾಗಲೂ ನರಕಕ್ಕೆ ಹೆದರುತ್ತಿತ್ತು. ಆದ್ದರಿಂದ ಇಂಥ ವ್ಯವಸ್ಥೆ” ಎಂದರು. ಋಷಿಗಳು ಹೌದೆಂದು ನರಕಕ್ಕೆ ಹೋದರು.

ಈ ಮತ್ತು ಇಂಥ ಕತೆಗಳಲ್ಲಿ ಕಥಾನಾಯಕರು ಸ್ವರ್ಗಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಅವರಿಗೆ ಸ್ವರ್ಗಪ್ರಾಪ್ತಿಯಾದದ್ದು ಕರ್ಮ ಅಥವಾ ಕ್ರಿಯೆಯ ಪರಿಣಾಮದಿಂದಲ್ಲ-ಅವರ ಚಿಂತನೆಯ ಫಲದಿಂದ, ಅಂದರೆ ಇಲ್ಲಿ ಚಿಂತನೆಗೆ (ನಾಮಸ್ಮರಣೆಗೆ) ಪರಿಣಾಮ ಫಲವುಂಟು; ಕ್ರಿಯೆ ನಿಷ್ಫಲವಾಗಿದೆ. ಕರ್ಮವನ್ನು ನಿರ್ಲಕ್ಷಿಸಿ ಭಕ್ತಿಗೆ ಹೆಚ್ಚು ಪ್ರಾಧಾನ್ಯ ಕೊಟ್ಟುದರಿಂದ ಹೀಗಾದದ್ದು ಸ್ಪಷ್ಟವಾಗಿದೆ. ಮಾಡುವ ಕರ್ಮ ಎಂಥದೇ ಇರಲಿ, ಅದರ ಗುಂಟ ನೀವು ಹೇಗೆ ಏನನ್ನು ಯೋಚಿಸಿದಿರಿ. ಅನ್ನುವುದು ಮುಖ್ಯ. ಇಂಥ ಕತೆಗಳು ತಮಿಳಿನ ಆಳ್ವಾರ ನಾಯನಾರರ ಕಾಲದಿಂದಲೇ ಸಿಕ್ಕುತ್ತವೆ.

ಅದಕ್ಕೂ ಮುಂಚಿನ ಪುರಾಣಗಳಲ್ಲಿ ರಾಕ್ಷಸರು ದೇವರಿಗೆ ಎದುರಾಗಿ ನಿಲ್ಲುತ್ತಾರೆ- ಸಾವನ್ನಪ್ಪುತ್ತಾರೆ. ಆದರೆ ಸಾವಿನಿಂದ ಅವರಿಗೆ ಪಾರಾಗುವ ಹಾದಿಗಳಿಲ್ಲ. ಅವರು ಭಕ್ತರಾಗಿದ್ದರೂ ಅಮೃತ-ಸಂಜೀವಿನಿ, ಕಲ್ಪವೃಕ್ಷ ಕಾಮಧೇನುಗಳಂಥ ಆಶಯಗಳಿಂದ ವಂಚಿತರಾಗುತ್ತಾರೆ. ಅವರ ಸಾವುಗಳು ಕರ್ಮತತ್ವಕ್ಕೆ ಅನುಗುಣವಾಗಿವೆ.

ಕರ್ಮತತ್ವದ ನಿಷ್ಠುರವನ್ನು ಎದುರಿಸಲಾರದೇ ಅದನ್ನು ಮೀರಿ ಸವಲತ್ತುಗಳನ್ನು ಕೊಡುವ ಭಕ್ತಿ ಸಂಪ್ರದಾಯ ಜಾನಪದದಲ್ಲಿ ಹೆಚ್ಚು ಜನಪ್ರಿಯವಾಗಿರಬೇಕು. ಮುಂದೆ ಈ ಬೆಳಕಿನಲ್ಲಿ ದೇವ-ದಾನವರ ಸಂಬಂಧಗಳನ್ನು ಇನ್ನೊಮ್ಮೆ ನಿರ್ಧರಿಸಿದರೆಂದು ತೋರುತ್ತದೆ. ಈ ರಾಕ್ಷಸರೇ ಪರಮ ಭಕ್ತರೂ ಆಗಿ ಚಿತ್ರಿಸಲ್ಪಟ್ಟಿದ್ದಾರೆ. ಮಾತ್ರವಲ್ಲ ಭಕ್ತನಾಗಿ ಏಳು ಜನ್ಮಗಳಲ್ಲಿ ಸಿಕ್ಕುವ ಮುಕ್ತಿ ರಾಕ್ಷಸನಾಗಿ ಮೂರೇ ಜನ್ಮಗಳಲ್ಲಿ ಸಾಧ್ಯವಾಗುತ್ತದೆಂದೂ ಹೇಳುವ ಕತೆಗಳಿವೆ. ಅಂದರೆ ಈ ದೇವದಾನವ ಸಂಬಂಧ ಕೂಡ ದೇವ-ಭಕ್ತರ ಸಂಬಂಧವೇ. ಆದರೆ ದೇವದಾನವ ಸಂಬಂಧ ಹೆಚ್ಚು ತೀವ್ರವಾದುದು. ಹೀಗೆ ಪರಸ್ಪರ ವಿರುದ್ಧ ಶಕ್ತಿಗಳನ್ನು ಭಕ್ತಿ ಸಂಪ್ರದಾಯ ಲಘುವಾಗಿ ವಿವರಿಸುತ್ತದೆ. ಅಥವಾ ಪರಸ್ಪರ ವಿರೋಧಗಳಲ್ಲಿ ಒಪ್ಪಂದ ಸಾಧಿಸುತ್ತದೆ. ಭಕ್ತಿಯ ಭಾವಿಕತೆಗೆ ಎದುರಾಗುವ ಬಲವಾದ ವಿರೋಧವೇ ನಮ್ಮ ದೇಶದಲ್ಲಿ ಇಲ್ಲದ್ದಕ್ಕೆ ಇದೇ ಕಾರಣವೆಂದು ಅನಿಸುತ್ತದೆ. ಇದರಿಂದ ನಮ್ಮ ಸಾಹಿತ್ಯದ ಮೇಲಾದ ಪರಿಣಾಮವೆಂದರೆ ನಮ್ಮ ಕಾಲಪ್ರಜ್ಞೆಯಲ್ಲಿ ದುರಂತ ಪ್ರಜ್ಞೆಯೇ ಇಲ್ಲವಾಯಿತು. ನಮ್ಮಲ್ಲಿ ದುರಂತ ನಾಟಕ (ಬಯಲಾಟಗಳು) ಇಲ್ಲದ್ದಕ್ಕೂ ಇದೇ ಕಾರಣ.

ಇದಕ್ಕೆ ಅತ್ಯುತ್ತಮ ಉದಾಹರಣೆ ಹರಿಹರನ ರಗಳೆಗಳು. ಕೈಲಾಸದಲ್ಲಿ ಮಾಡಿದ ತಪ್ಪಿನಿಂದಾಗಿ ಅಲ್ಲಿನ ಗಣಗಳು ಶಪಿತರಾಗಿ ಭೂಮಿಗೆ ಬರುತ್ತಾರೆ. ಇಲ್ಲಿ ಕೆಲದಿನವಿದ್ದು ಅಂದರೆ ಮಾನವರಾಗಿ ಹುಟ್ಟಿ ಬೆಳೆದು ಆ ಕಾಳಿಕೆಯನ್ನು ಕಳೆದುಕೊಂಡು ಮತ್ತೆ ಕೈಲಾಸಕ್ಕೆ ಹೋಗುತ್ತಾರೆ. ಭೂಲೋಕದಲ್ಲಿ ಹುಟ್ಟಲು ಒಬ್ಬ ಗಣನೂ ಉತ್ಸಾಹ ತೋರಿಸುವುದಿಲ್ಲ. ಆದರೆ ಶಿವನ ಅಭಯದಿಂದ ಧೈರ್ಯಗೊಂಡು ಬರುತ್ತಾರೆ. ಶಿವ ಹೆಜ್ಜೆ ಹೆಜ್ಜೆಗೆ ಅವರ ಸಹಾಯಕ್ಕೆ ಬರುತ್ತಾನೆ. ಇದರಿಂದಾಗಿ ಮರ್ತ್ಯಲೋಕದ ಸಹಜ ತುಮುಲ ದ್ವಂದ್ವಗಳೆಲ್ಲ ಕೇವಲ ಕ್ರೀಡೆಯಾಗುತ್ತವೆ. ಬಿಜ್ಜಳ-ಬಸವೇಶ್ವರರ ಮನಸ್ತಾಪ ಸಹಜವಾಗಿಯೇ ವ್ಯಕ್ತಿ-ದೇಶ; ವ್ಯಕ್ತಿ-ಧರ್ಮ, ಧರ್ಮ-ಧರ್ಮಗಳ ಘರ್ಷಣೆಯಿಂದ ಜ್ವಲಂತ ದುರಂತವಾಗಬೇಕಿದ್ದ ಕತೆ, ಹರಿಹರನ ಕೈಯಲ್ಲಿ ಸಿಕ್ಕು ತೀರ ಸರಳವಾದ, ಭಾವುಕವಾದ ಕತೆಯಾಗುತ್ತದೆ.

ಹೀಗೆ ಭಕ್ತಿ-ಕರ್ಮಕ್ಕೆ ವಿರೋಧವಾಗಿ-ಬದುಕಿನ ಎಂಥ ವಿರೋಧಗಳನ್ನೂ ಸರಳಗೊಳಿಸುವ, ಯಾವುದೇ ತುಮುಲವನ್ನು ಭಾವುಕತನದಲ್ಲಿ ತೇಲಿಸುವ ಸಾಧನವಾಯಿತೆಂದು ಅನಿಸುತ್ತದೆ ಮತ್ತು ಭಕ್ತಿಯ ಈ ಪ್ರಭಾವವನ್ನು ಇಂಥ ಜನಪದ ಕತೆಗಳು ಚೆನ್ನಾಗಿ ಹೇಳುತ್ತವೆಂದೂ ತೋರುತ್ತದೆ.