ದ್ರಾವಿಡರ ನಾಟಕದ ಕಲ್ಪನೆ

ಕನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸ ಒಂಭತ್ತನೇ ಶತಮಾನದಿಂದಲೇ ಸುರುವಾದರೂ ಅಂದಿನಿಂದ ಇಪ್ಪತ್ತನೇ ಶತಮಾನದವರೆಗೆ ಒಂದೇ ಒಂದು ಲಿಖಿತ, ಸ್ವತಂತ್ರ ನಾಟಕ ಸಿಕ್ಕುವುದಿಲ್ಲ. ಆದರೆ, ಚರಿತ್ರೆಯ ಉದ್ದಕ್ಕೂ ನಾಟಕಗಳಿದ್ದ ಬಗೆಗೆ ದಾಖಲೆಗಳಿವೆ. ನಮ್ಮ ಕವಿಗಳನೇಕರು ಕಾಳಿದಾಸ, ಭಾಸ, ಭವಭೂತಿಗಳನ್ನು ಬಲ್ಲವರು. ಅವರ ನಾಟಕಗಳ ಪದ್ಯಗಳನ್ನು ತಮ್ಮ ಕಾವ್ಯಗಳಲ್ಲಿ, ಅಲ್ಲಲ್ಲಿ ಭಾಷಾಂತರಿಸಿಕೊಂಡರು, ತಾವು ಅವರಿಗಿಂತ ಇನ್ನೂರು, ನಾನ್ನೂರ್ಮಡಿ ಹೆಚ್ಚಿನವರೆಂದು ಜಂಬಕೊಚ್ಚಿಕೊಂಡವರು. ಅಲ್ಲದೆ ಒಂದೆರಡು ಕಡೆ ನಾಟಕ ಶಾಲೆಗಳಿದ್ದ ಬಗ್ಗೆ ಶಾಸನಾಧಾರಗಳಿವೆ. ಪಗರಣ, ಬಹುರೂಪದ ಮಾತಿವೆ. ನಾಟ್ಯ ನಾಟಕ ಪ್ರಯೋಗದ ವರ್ಣನೆಗಳಿವೆ. ಹೀಗಿದ್ದೂ ಕನ್ನಡದಲ್ಲಿ ಒಂದೇ ಒಂದು ಲಿಖಿತ ನಾಟಕ ಇಲ್ಲವೆಂದರೇನರ್ಥ?

ಆದರೆ ಯಾವೊಂದು ದ್ರಾವಿಡ ಭಾಷೆಗಳಲ್ಲೂ ನಾಟಕ ಇಲ್ಲ. ಅವು ಇದ್ದ ಬಗ್ಗೆ ಮಾತ್ರ ಹೇರಳ ಆಧಾರಗಳಿವೆ. ಇದಕ್ಕೆ ಕಾರಣವೇನು? ಕಾರಣ ಹೀಗಿರಬಹುದು: ದ್ರಾವಿಡರ ನಾಟಕದ ಕಲ್ಪನೆ ಆರ್ಯರ ನಾಟಕದ ಕಲ್ಪನೆಗಿಂತ ಭಿನ್ನವಾಗಿತ್ತು. ಆರ್ಯರ ಕಲ್ಪನೆ ಹೇಗಿತ್ತು ಎನ್ನುವುದಕ್ಕೆ ಕಾಳಿದಾಸಾದಿಗಳ ನಾಟಕಗಳಿವೆ. ನಮ್ಮವರ ನಾಟಕವೆಂದರೆ ಬಯಲಾಟವೇ. ಬಯಲಾಟದ ಪಠ್ಯಗಳಲ್ಲಿ ಸಂಭಾಷಣೆಗಳಾಗಿ, ರಂಗನಿರ್ದೇಶನಗಳಾಗಿ ಇರುವುದಿಲ್ಲ. ಅದು ಗೀತೆಗಳ ರೂಪದಲ್ಲಿರುವ ಕಥೆ. ಇಂಥ ಕಥೆಯ ಅಭಿನಯವೇ ಬಯಲಾಟ. ಆದ್ದರಿಂದಲೇ ರಂಗದ ಮೇಲೆ ಬರುವ ಕೃಷ್ಣ “ಕೃಷ್ಣ ಬರುತ್ತಿದ್ದಾನೆ ನಮಿಸಿರೊ” ಎಂದು ಹಾಡಿಕೊಂಡು ಬರುತ್ತಾನೆ. ಇಲ್ಲಿಯ ನಟ ಕೇವಲ ಅಭಿನಯ ಚತುರನಾದರೆ ಸಾಲದು; ಅವನು ಅರ್ಥಧಾರಿ ಕೂಡ. “ಕೃಷ್ಣನ ಬಳಿಗೆ ಭೀಮ ಹೋದನೋ” ಎಂದು ಭಾಗವತ ಕಥೆ ಹಾಡಿದರೆ, ಕೃಷ್ಣ ಭೀಮರಾದವರು ಆಯಾ ಸಂದರ್ಭಕ್ಕೆ ಉಚಿತವಾದ ಸಂಭಾಷಣೆಗಳನ್ನು ಸ್ವಂತ ಹುಟ್ಟಿಸಿಕೊಂಡು ಹೇಳಬೇಕು. ಈ ಸಂಭಾಷಣೆ ಉರು ಹೊಡೆದದ್ದಲ್ಲ. ಅಲ್ಲಲ್ಲೇ ನಟ ಸೃಷ್ಟಿಸಿದ್ದು. ಸಂಭಾಷಣೆಗಳಲ್ಲಿ ಅವರು ಮೈಮರೆಯಬಹುದು. ಆದರೆ ಪ್ರೇಕ್ಷಕರ ರಸಾಸ್ವಾದವನ್ನೇ ಗಮನಿಸುತ್ತ ಕೂತ ಸೂತ್ರಧಾರ (ಇವನೇ ನಿರ್ದೇಶಕ) ಅನಗತ್ಯವೆನಿಸಿದಲ್ಲಿ ಅವರ ಸಂಭಾಷಣೆಯನ್ನು ಕತ್ತರಿಸಿ ಮುಂದಿನ ಕಥೆ ಹಾಡುತ್ತಾನೆ. ಸ್ಥೂಲವಾಗಿ ಇದು ಬಯಲಾಟದ ಪಠ್ಯವನ್ನು ನಾಟಕವಾಗಿಸುವ ರೀತಿ. ಇದು ಸಂಸ್ಕೃತದ ಕಲ್ಪನೆಗಿಂತ ಭಿನ್ನ. ಕಾಳಿದಾಸಾದಿಗಳ ಹಾಗೆ ಸಂಭಾಷಣೆ, ರಂಗನಿರ್ದೇಶನಗಳನ್ನುಳ್ಳ ನಾಟಕವಾದರೆ ಇವರಿಗೆ ಅದನ್ನು ರಂಗದ ಮೇಲೆ ಪ್ರಯೋಗಿಸುವುದು ಕಷ್ಟವಾಗುತ್ತಿತ್ತು. ಅದಕ್ಕೆ ೧೪ನೇ ಶತಮಾನದಲ್ಲಿ ಸಂಸ್ಕೃತದ ಶಾಕುಂತಲ ನಾಟಕವನ್ನು ಪ್ರಯೋಗ ಮಾಡುವುದಕ್ಕಾಗಿ ತೆಲುಗಿಗೆ ಭಾಷಾಂತರಿಸಿಕೊಂಡಾಗ-ಗೀತೆಗಳ ರೂಪದ ಕಥೆಯಾಗಿ ಮಾರ್ಪಡಿಸಿಕೊಂಡರು. ಹೀಗ್ಯಾಕೆ ಮಾಡಿದರೆಂದು ಇವರ ನಾಟಕದ ಕಲ್ಪನೆಯೇ ಕಾಳಿದಾಸಾದಿಗಳಿಗಿಂತ ಭಿನ್ನವಾದುದಾಗಿತ್ತು ಅದರಿಂದ.

ಬಯಲಾಟದ ಶಿಲ್ಪ

ಬಯಲಾಟದ ಹುಟ್ಟು ಆರಾಧನೆಯಲ್ಲಿದೆಯೆಂಬುದಕ್ಕೆ ಈಗ ಆಧಾರಗಳ ಅಗತ್ಯವಿಲ್ಲ. ಯಾವುದೇ ಆರಾಧನೆಯನ್ನು ನೋಡಿದರೂ ಈ ಮಾತು ಖಾತ್ರಿಯಾಗುತ್ತದೆ. ಆರಾಧನೆಯ ಸುರುವಿನಲ್ಲಿ ದೇವರ ಆವಾಹನೆ, ಅಂತ್ಯದಲ್ಲಿ ವಿಸರ್ಜನೆಯಿರುತ್ತದೆ. ಆವಾಹನೆ ಒಂದು ಪೂಜೆಯಾದರೆ, ವಿಸರ್ಜನೆ ಇನ್ನೊಂದು ಪೂಜೆ. ಈ ಎರಡು ಪೂಜೆಗಳ ನಡುವಿನ ಕ್ರಿಯಾ ಪರಂಪರೆಯೇ ಆರಾಧನೆ. ಈ ಶಿಲ್ಪ ಬಯಲಾಟಗಳಲ್ಲೂ ರಿಪೀಟಾಗುತ್ತದೆ. ಪ್ರಾರಂಭದಲ್ಲಿ ಗಣೇಶಸ್ತುತಿ, ಅಂತ್ಯದ ಮಂಗಳ ಈ ಎರಡು ಪೂಜೆಗಳ ನಡುವಿನ ಕ್ರಿಯಾಪರಂಪರೆಯೇ ಬಯಲಾಟ. ದಾಸರಾಟ ದಾಸ ಆಟದ ಆರಂಭದಲ್ಲಿ ಪ್ರೇಕ್ಷಕರ ಕಡೆ ಬೆನ್ನು ತಿರುಗಿಸಿ, ಸ್ತುತಿ ಮಾಡಿ, ದೇವರನ್ನು ರಂಗದ ಮೇಲೆ ಆವಾಹನೆ ಮಾಡುತ್ತಾನೆ. ಆಮೇಲೆ ಪ್ರೇಕ್ಷಕರ ಕಡೆಗೆ ತಿರುಗಿ ಆಟ ಸುರು ಮಾಡುತ್ತಾನೆ. ಮುಂದೆ ಆಟ ಮುಗಿದಾಗ ದೇವರನ್ನು ವಿಸರ್ಜಿಸುವ ಮಂಗಲ ಪದ್ಯ ಹಾಡುವುದಿದೆ. ಚೌಕಿಯಿಂದ ಬಾಲಗೋಪಾಲರ ಆಗಮನದಿಂದ ಸುರುವಾಗುವ ಯಕ್ಷಗಾನ ಮತ್ತೆ ಚೌಕಿಯಲ್ಲಿಯೇ ಬಾಲಗೋಪಾಲರ ಆಗಮನದಿಂದ ಸುರುವಾಗುವ ಯಕ್ಷಗಾನ ಮತ್ತೆ ಚೌಕಿಯಲ್ಲಿಯೇ ಬಾಲಗೋಪಾಲರ ವಿಸರ್ಜನದಿಂದ ಮುಕ್ತಾಯಗೊಳ್ಳುತ್ತದೆ. ಉಳಿದ ಬಯಲಾಟಗಳ ಶಿಲ್ಪವೂ ಹೀಗೆಯೇ ಇದೆ. (ಇದೇ ಶಿಲ್ಪ ಸಂಸ್ಕೃತ ನಾಟಕಗಳಲ್ಲೂ ಇದೆ. ಅಲ್ಲಿಯೂ ನಾಂದಿ, ಭರತ ವಾಕ್ಯಗಳ ನಡುವಿನ ಕ್ರಿಯೆಯೇ ನಾಟಕವಾದ್ದರಿಂದ, ಸಂಸ್ಕೃತ ನಾಟಕದ ಮೇಲೆ ಬಯಲಾಟ ಪ್ರಭಾವ ಮಾಡಿರಬಹುದೆಂದೂ ಊಹಿಸಲು ಅವಕಾಶವಿದೆ).

ಮೇಳ

ತೊಗಲುಗೊಂಬೆಯಾಟ ಹಾಗೂ ಸೂತ್ರದ ಗೊಂಬೆಯಾಟಗಳನ್ನುಳಿದು ನಮ್ಮಲ್ಲಿ ಇನ್ನೂ ಐದು ಪ್ರಕಾರದ ಬಯಲಾಟಗಳಿವೆ: ದಾಸರಾಟ, ಸಣ್ಣಾಟ, ದೊಡ್ಡಾಟ, ಪಾರಿಜಾತ ಹಾಗೂ ಯಕ್ಷಗಾನ. ಸೂತ್ರಧಾರನ ದೃಷ್ಟಿಯಿಂದಲೂ ಇವುಗಳ ಶಿಲ್ಪದಲ್ಲಿ ವ್ಯತ್ಯಾಸವಾಗಿದೆ. ಪಾರಿಜಾತ ಮತ್ತು ಯಕ್ಷಗಾನಗಳಲ್ಲಿ ಒಬ್ಬನೇ ಭಾಗವತ ಆಟ ಮುಗಿಯುವ ತನಕ ಕಥೆಗಾರಿಕೆ ಮಾಡುವುದಿದೆ. ಕಥೆಯನ್ನು ಹಾಡುವವನು, ಪಾತ್ರವನ್ನು ಪ್ರೇಕ್ಷಕರಿಗೆ ಪರಿಚಯಿಸುವವನು, ರಂಗದ ಮೇಲೆ ತರಲು ಅಸಾಧ್ಯವಾದ, ಆದರೆ ಕಥೆಗೆ ಅನಿವಾರ್ಯವಾದ ಸಂಗತಿಗಳನ್ನು ಹೇಳಿ ಘಟನೆಗಳನ್ನು ಬೆಸೆಯುವವನೂ ಅವನೇ. ಅವನಿಗಿರುವ ಹಿಮ್ಮೇಳವೆಂದರೆ ಚಂಡೆ, ಮೃದಂಗ ಮುಂತಾದ ವಾದ್ಯದವರು. ಈ ವಾದ್ಯಗೋಷ್ಠಿಯ ನೆರವಿನಿಂದಲೇ ಪಾತ್ರಧಾರಿಗಳು ನೃತ್ಯದ ಮೂಲಕ ಆಯಾ ಪಾತ್ರದ ಆಯಾ ಸಂದರ್ಭದ ಮೂಡನ್ನು ಅಲಂಕರಿಸುತ್ತಾರೆ; ಇಲ್ಲವೆ ನೃತ್ಯದ ಮೂಲಕ ಅರ್ಥೈಸುತ್ತಾರೆ.

ಆದರೆ ದಾಸರಾಟ, ಸಣ್ಣಾಟ ಮತ್ತು ದೊಡ್ಡಾಟಗಳ ವಿಷಯ ಹಾಗಲ್ಲ. ಇಲ್ಲಿ ಐದಾರು ಜನಗಳ ಗುಂಪು ಸೇರಿ ಕಥೆಗಾರಿಕೆ ಮಾಡುತ್ತಾರೆ; ಇದೇ ಮೇಳ. ಈ ಮೇಳ ಹಿಮ್ಮೇಳ ಮುಮ್ಮೇಳವಾಗಿ ವಿಭಾಗಗೊಂಡಿರುತ್ತದೆ. ಹಿಮ್ಮೇಳದವರು ಪದರೆಯ ಹಿಂದೆ ನಿಂತಿದ್ದು ಅವರು ಪ್ರೇಕ್ಷಕರಿಗೆ ಕಾಣಿಸುವುದೇ ಇಲ್ಲ. ಮುಮ್ಮೇಳವೆಂದರೆ ಸೂತ್ರಧಾರ, (ಮೇಟಿತಾಳ) ಮತ್ತು ಪಾತ್ರಧಾರಿಗಳು. ಅವರು ಹಾಡಿದ್ದನ್ನು ಹುಮ್ಮೇಳದವರು ರಿಪೀಟ್‌ ಮಾಡುತ್ತಾರೆ, ಇಲ್ಲವೆ ಪದ್ಯಕ್ಕೊಮಮೆ ಪಲ್ಲವಿ ಹೇಳುತ್ತಾರೆ. ಹೀಗೆ ಹಿಮ್ಮೇಳದವರು ಹಾಡುತ್ತಿರುವಾಗ ಪಾತ್ರಧಾರಿಗಳು ನರ್ತಿಸುತ್ತ ಹಾಡಿನ ಮೂಡನ್ನು ಅಲಂಕರಿಸುತ್ತಾರೆ. ಸೂತ್ರಧಾರನಿಗೆ ನೇರವಾಗಿ ನಡೆಯುವ ಕ್ರಿಯೆಗೆ, ಮಾತುಗಳಿಗೆ ಸ್ಥಳೀಯ ಬಣ್ಣ ಕೊಡುವುದು, ವಿಷಯವನ್ನು ಪ್ರಸ್ತುತಗೊಳಿಸುವುದು ಮುಂತಾದ ವಿದೂಷಕನ ಕೆಲಸ ಮಾಡುವವನೂ ಹಿಮ್ಮೇಳದವನೇ. ಇನ್ನು ಕೆಲವು ಸಲ ವಿದೂಷಕ ಹಾಗೂ ಕಥೆಗಾರನ ಕೆಲಸವನ್ನು ಸೂತ್ರಧಾರನೇ ಮಾಡುವುದುಂಟು.

ಸಪ್ತಸ್ವರ

ಹಿಮ್ಮೇಳದ ಹಾಡುಗಾರಿಕೆಯೂ ಇಲ್ಲಿ ತುಂಬ ವಿಶಿಷ್ಟವಾದುದು. ದಾಸರಾಟದಲ್ಲಿ ಇವರು ಮೂರು ಜನರಿದ್ದು ಸಣ್ಣಾಟಗಳಲ್ಲಿ ಐದು ಜನ, ದೊಡ್ಡಾಟಗಳಲ್ಲಿ ಮಾತ್ರ ಏಳು ಜನರಿರುತ್ತಾರೆ. ಇವರು ಹಾಡುವಾಗ ಸಪ್ತಸ್ವರಗಳಲ್ಲಿ, ಒಬ್ಬೊಬ್ಬ ಒಂದೊಂದು ಸ್ವರದಲ್ಲಿ ಹಾಡುತ್ತ ಕೊನೆಯವ ‘ನಿ’ ಸ್ವರದಲ್ಲಿ ಅಂದರೆ ಕಿರುಚಿ ಹಾಡುತ್ತಿರುತ್ತಾನೆ. ಪಾತ್ರಗಳ ಗುಣ, ಸ್ವಭಾವಗಳಿಗನುಗುಣವಾಗಿ ಅವುಗಳ ಆಗಮನ ನಿರ್ಗಮನದ ಕಾಲಕ್ಕೆ ಶಬ್ದಗಳೇ ಇಲ್ಲದ ಲಾಲಿಮ, ಲಾಲಿಮ ಮುಂತಾದ ಸೊಲ್ಲನ್ನು ಮೇಳವಾಗಿ ಹೇಳುವುದು, ಧಕದೋಂ ದಿತ್ತೋಂ-ಮುಂತಾಗಿ ವಾದ್ಯಗಳ ಅನುಕರಣೆ ಮಾಡುವುದಿದೆ. ಮಾನವ ದನಿಯನ್ನೇ ವಾದ್ಯಗಳಂತೆ ಬಳಸುವುದರಿಂದ ಇಲ್ಲಿ ವಾದ್ಯಗಳ ಅಗತ್ಯವೇ ಇಲ್ಲ. ಇಂಥ ಪ್ರಯೋಗಗಳನ್ನು ಹಾವ್ಯಾಸಿ ತಂಡದವರು ಕೂಡ ಇನ್ನೂ ಮಾಡಿಲ್ಲದಿರುವುದನ್ನು ಮುಖ್ಯವಾಗಿ ಗಮನಿಸಬೇಕು.

ವಸ್ತು

ಬಯಲಾಟಗಳ ವಸ್ತು ನಮ್ಮ ಪುರಾಣ, ಮಹಾಕಾವ್ಯಗಳೇ. ವೈಷ್ಣವ ಪಂಥದವರಿಗೆ ರಾಮಾಯಣ, ಮಹಾಭಾರತ, ಭಾಗವತಗಳು ಕಥಾವಸ್ತುವಿಗಾಗಿ ಆಕರವಾದರೆ, ಶೈವರಿಗೆ ಶಿವನ ಪಂಚವಿಂಶತಿಲೀಲೆಗಳು, ೬೩ ಪುರಾತನರು, ೧೨ನೇ ಶತಮಾನದ ಶರಣರು, ಸ್ಥಳಿಕ ಭಕ್ತರ ಚರಿತ್ರೆಗಳು ಆಕರಗಳಾಗಿವೆ. ಇದರಿಂದಾಗಿ ಅವುಗಳ ಶಿಲ್ಪದಲ್ಲಿ ಗಮನಾರ್ಹವಾದ ವ್ಯತ್ಯಾಸವಾಗುವುದನ್ನು ಗಮನಿಸಬೇಕು. ಯಕ್ಷಗಾನ, ಪಾರಿಜಾತ, ದಾಸರಾಟಗಳ ಪ್ರಾರಂಭದಲ್ಲಿ ಇಬ್ಬರು ಗೋಪಿಕಾಸ್ತ್ರೀಯರು ಬಂದು ನರ್ತಿಸುವುದಿದೆ. ಕೃಷ್ಣ, ಬಾಲಗೋಪಾಲರ ನೃತ್ಯವಿದೆ. ಇವು ಶೈವ ಪಂಥದ ಆಟಗಳು. ಕೆಲವು ಸಣ್ಣಾಟಗಳ ಆರಂಭದಲ್ಲಿ ಶಿವಪಾರ್ವತಿಯರು ಬರುವುದುಂಟು. ಇವು ಶೈವ ಪಂಥದ ಆಟಗಳು. ಸಾಮಾಜಿಕ ಸಣ್ಣಾಟಗಳಲ್ಲಿ ಮಾತ್ರ ಯಾವ ದೇವರ ಕಾಟವೂ ಇಲ್ಲ. ಅವು ರಮ್ಯ ಕಥಾನಕಗಳನ್ನೊಳಗೊಂಡಿದ್ದು ನೇರವಾಗಿ ಕಥೆಗೆ ತೊಡಗುತ್ತದೆ. ನಮ್ಮ ಜನರು ಜೀವನದ ತಿಳುವಲಿಕೆ, ಸಾಮಾಜಿಕ ಪರಿಸರಕ್ಕೆ ಅವರು ತೋರುವ ಪ್ರತಿಕ್ರಿಯೆ ಮುಂತಾದುವನ್ನು ಇಲ್ಲಿ ಕಾಣಬಹುದು.

ಜನಪದ ರಂಗಭೂಮಿಯಲ್ಲಿ ಬಣ್ಣದ ಚೌಕಿ, ರಂಗಭೂಮಿ ಮತ್ತು ಪ್ರೇಕ್ಷಕರು ಕೂರುವ ಸ್ಥಳ ಈ ಮೂರನ್ನೂ ನಿರ್ಲಕ್ಷಿಸುವಂತಿಲ್ಲ. ಅಥವ ಅವು ಮೂರೂ ಸೇರಿ ರಂಗಭೂಮಿಯಾಗುತ್ತದೆಂದು ಹೇಳಬಹುದು. ಆಟದ ನಿಜವಾದ ಆರಂಭ ಬಣ್ಣದ ಚೌಕಿಯಲ್ಲೇ ಆಗಿರುತ್ತದೆ. ರಂಗಭೂಮಿ ಮುಖ್ಯಕ್ರಿಯೆಯ ಸ್ಥಳ. ಮನುಷ್ಯರು ಮತ್ತು ದೇವತೆಗಳು ನೇಪಥ್ಯದಿಂದ ರಂಗಭೂಮಿಗೆ ಬರುತ್ತದೆ. ರಾಕ್ಷಸರು, ಭೂತಗಳು ಪ್ರೇಕ್ಷಕರ ಕೊನೆಯಿಂದ (ಶೂದ್ರ ಪ್ರೇಕ್ಷಕರ ಕಡೆಯಿಂದ) ರಂಗಪ್ರವೇಶ ಮಾಡಬೇಕು. ಬಂದ ದೇವತೆಗಾದರೆ ಪೂಜೆಯಿದೆ. ಆದರೆ ರಾಕ್ಷಸರು ತಾವೇ ಬಂದು ಶಿವನ ಪೂಜೆ ಮಾಡಬೇಕು.

* * *