ಉತ್ತರ ಕರ್ನಾಟಕದ ಬಯಲಾಟಗಳನ್ನು ವಾದ್ಯಗಳ ದೃಷ್ಟಿಯಿಂದ ಜಾಗಟೆ-ಆಟ, ತಾಳದ ಆಟ, ದಪ್ಪಿನ ಆಟ, ದಿಮ್ಮದಾಟ ಎಂದು ವಿಭಾಗಿಸಲಿಕ್ಕಂತೂ ಬರುವುದಿಲ್ಲ. ಹಿಂದಿನ ಕಾಲಕ್ಕೆ ಈ ಭೇದ ಸ್ಪಷ್ಟವಾಗಿದ್ದಿತೇನೋ; ಈಗ ಮಾತ್ರ ಆಯಾ ವಾದ್ಯಗಳ ಸರಿಬೆರಕೆ ಸಾಕಷ್ಟಾಗಿದೆ. ಹಿಂದಿನ ಎಷ್ಟೋ ವಾದ್ಯಗಳೀಗ ಕಳಚಿಕೊಂಡಿವೆ. ಜಾಗಟೆ ಈಗ ಬಳಕೆಯಲ್ಲಿಲ್ಲ. ದಪ್ಪು ಕೇವಲ ಸಣ್ಣಾಟಗಳಲ್ಲಿ ಮಾತ್ರ ಉಪಯೋಗಿಸಲ್ಪಡುತ್ತದೆ. ತಾಳ ಎಲ್ಲಾ ಆಟಗಳಿಗೆ ಸಾಮಾನ್ಯವಾಗಿದೆ. ಆದ್ದರಿಂದ ಅವುಗಳಲ್ಲಿದಾಸರಾಟ, ಸಣ್ಣಾಟ, ಪಾರಿಜಾತ, ದೊಡ್ಡಾಟ, ಗೊಂಬೆಯಾಟ-ಎಂದೇ ಪ್ರಕಾರಗಳನ್ನು ಕಲ್ಪಿಸಬಹುದಾಗಿದೆ. ರಂಗಭೂಮಿ, ರಂಗಪದ್ಧತಿ ಇವುಗಳನ್ನು ಮುಖ್ಯವಾಗಿ ದೃಷ್ಟಿಯಲ್ಲಿಟ್ಟುಕೊಂಡು ಇಂಥ ಭೇದಗಳನ್ನು ಮಾಡಿಯಾಗಿದೆ. ಇವುಗಳನ್ನು ಚಾಚೂ ತಪ್ಪದೆ ಆಚರಿಸಲೇಬೇಕೆಂಬ ನಿಯಮವನ್ನೂ ಹಳ್ಳಿಗರು ಇಟ್ಟುಕೊಂಡಿಲ್ಲ. ಚಂದ ಕಂಡದ್ದೆಲ್ಲ ಗ್ರಾಹ್ಯವೆಂಬ ಅವರ ಮನೋಧರ್ಮ ಎಷ್ಟೆಷ್ಟೋ ಅಲ್ಲದ ಸಲ್ಲದ ಬದಲಾವಣೆಗಳನ್ನು ಕೂಡ ಸ್ವೀಕರಿಸುವಂತೆ ಮಾಡಿದೆ. ದೊಡ್ಡಾಟವನ್ನು ಸಣ್ಣಾಟದ ರಂಗಭೂಮಿಯ ಮೇಲೆ ಆಡಬಹುದು. ಅಜ್ಞಾನದಿಂದ, ಸಿನೆಮಾ ನಾಟಕಗಳ ಪ್ರಭಾವದಿಂದ ರಂಗಪದ್ಧತಿಗಳ ಪರಿವಿಡಿಯನ್ನು ತಿರುವುಮುರುವಾಗಿಸಿದ ಉದಾಹರಣೆಗಳೂ ಇವೆ. ಹಾರ್ಮೋನಿಯಂ, ಧ್ವನಿವರ್ಧಕ ಯಂತ್ರ, ವಿದ್ಯುದ್ದೀಪದಂಥ ಪೀಡೆಗಳು ಜಾನಪದದಲ್ಲಿ ಹೊಕ್ಕಾಗಲೆಲ್ಲ ರಂಗಪದ್ಧತಿಗಳಲ್ಲಿ ಸಡಿಲತೆ ತಲೆದೋರಿ, ಈಗಂತೂ ಅವುಗಳನ್ನು ಸಂಪೂರ್ಣ ಮರೆಯುವ ಅವಸರದಲ್ಲಿಯೂ ಇದ್ದಾರೆ.

ದೊಡ್ಡಾಟ, ಪಾರಿಜಾತಗಳನ್ನುಳಿದರೆ ಉಳಿದೆಲ್ಲ ಪ್ರಕಾರಗಳಲ್ಲಿಯೂ ‘ಅಡ್ಡ ಸೋಗು’ ಬರುತ್ತದೆ. ಗೊಂಬೆಯಾಟ ತೊಗಲು ಗೊಂಬೆಯಾಟಗಳನ್ನುಳಿದರೆ ಉಳಿದುವಕ್ಕೆ ಅಟ್ಟದಾಟ, ಬಯಲಾಟಗಳೆಂದು ಕರೆಯುತ್ತಾರೆ. ಇವಿಷ್ಟು ಸಾಮಾನ್ಯ ಲಕ್ಷಣಗಳನ್ನು ಬಿಟ್ಟರೆ ಪ್ರತಿಯೊಂದು ಪ್ರಕಾರವೂ ತನ್ನ ಗುಣವೈಶಿಷ್ಟ್ಯಗಳನ್ನು ಈಗಲೂ ಕಾಯ್ದುಕೊಂಡು ಬರುತ್ತಿದೆ. ಅವುಗಳನ್ನು ಇನ್ನಮೇಲೆ ನೋಡಬಹುದಾಗಿದೆ.

ದಾಸರಾಟ

ದಶರೂಪ ತೋರುವ ದಾಸರು ೧೨ನೆಯ ಶತಮಾನದಿಂದಲೇ ಕರ್ನಾಟಕದಲ್ಲಿ ಇದ್ದರೆಂದು ಹೇಳಿಯಾಗಿದೆ. ಈ ದಾಸರಲ್ಲಿಯೇ ದಂಡಿಗಿ-ದಾಸರು, ಕಮರು-ದಾಸರು, ಗೋಪಾಲಬುಟ್ಟಿ-ದಾಸರು ಎಂದು ಭೇದಗಳಿವೆ. ಆಳ್ವಾರರ ಕಾಲದಿಂದಲೇ ವೈಷ್ಣವದೇವಾಲಯಗಳಲ್ಲಿ ಒಂದೊಂದು ಬಗೆಯ ಸೇವೆ ಮಾಡುತ್ತಿದ್ದ ಈ ಜನಾಂಗದವರು ಧರ್ಮಪ್ರಸಾರ ಕಾರ್ಯದಲ್ಲಿ ತೊಡಗಿ ನಟರಾಗಿರಬೇಕು. ಮುಂದೆ ತಂದೆಯಿಂದ ಮಗನಿಗೆ ಅದೇ ಕಸಬಾದಂತೆಯೂ ತಿಳಿಯುತ್ತದೆ. ಇವರು ಮೈಸೂರ ಭಾಗದಲ್ಲಾಗಲಿ, ದಕ್ಷಿಣ ಕರ್ನಾಟಕದಲ್ಲಾಗಲಿ ಇಲ್ಲ.

ಸಾಮಾನ್ಯವಾಗಿ ಜಾತ್ರೆ ಉತ್ಸವಗಳ ಕಾಲಕ್ಕೆ ಇವರು ಆಟಗಳನ್ನು ಆಡುತ್ತಾರೆ. ದಾಸರಾಟದ ಒಂದು ವೈಶಿಷ್ಟ್ಯವೆಂದರೆ ಗಂಡುದಾಸರು, ಹೆಣ್ಣುದಾಸರು ಇಬ್ಬರೂ ಆಟದಲ್ಲಿ ಭಾಗವಹಿಸುತ್ತಾರೆ. ಮೊದಲೊಂದು ಗಣ್ಣಪದವಾದನಂತರ ಹಾಲು ಮೊಸರು ಮಾರುವ ಗೊಲ್ಲತಿ ಬಂದು ನರ್ತಿಸುತ್ತಾಳೆ. ‘ಸುಂಕ’ ಕೊಡೆಂದು ಕೃಷ್ಣ ಬಂದು ಅವಳನ್ನು ಕುಣಿಯುತ್ತ ತರುಬುತ್ತಾನೆ. ಗಂಡುಳ್ಳ ಬಾಲೆಯರನ್ನು ಈ ರೀತಿ ಪೀಡಿಸಬಾರದೆಂದು ಅವಳು, ಬಂದವರನ್ನು ಬಿಟ್ಟು ಗೊತ್ತಿಲ್ಲವೆಂದು ಇವನು ವಾದಿಸಿ ಕೊನೆಗೆ ಅವಳೊಪ್ಪಿ ಇಬ್ಬರೂ ಒಳಗೆ ಹೋಗುತ್ತಾರೆ. ಇದಿಷ್ಟು ಪೂರ್ವರಂಗ. ಈ ಪೂರ್ವರಂಗವನ್ನು ಸಾಮಾನ್ಯವಾಗಿ ಎಷ್ಟೇ ಕಡಿಮೆ ಅವಧಿ ಆಗಲೊಲ್ಲದೇಕೆ ಆಚರಿಸುತ್ತಾರೆ. ಮುಂದೆ ಚಿಮಣಾಬಾಯಿ-ಇವಳೇ ನಾಯಕಿ-ಹಿಮ್ಮೇಳ ಮುಮ್ಮೇಳದ ವೈಭವದ ಹಾಡುಗಳೊಂದಿಗೆ ಪ್ರವೇಶಿಸುತ್ತಾಳೆ. ಬಂದು ಒಂದು ಸುತ್ತು ಕುಣಿದು ಕುಳಿತ ನಂತರ ಗೊಡ್ಡಿ ಭೀಮಣ್ಣ-ಇವನೇ ನಾಯಕ-ಬಂದು ಇವಳ ಅಂಗಾಂಗವರ್ಣನೆ ಮಾಡಿ ತನಗೊಲಿಯಬೇಕೆಂದು ಕೇಳುತ್ತಾನೆ. ಇವಳು ನಿರಾಕರಿಸಿ ವಾಗ್ವಾದ ಆರಂಭವಾಗಿ, ಮುಂದೆ ಇದು ‘ಕಲ್ಗಿ-ತುರಾ’ ಕ್ಕೆ ತಿರುವನ್ನು ತೆಗೆದುಕೊಳ್ಳುತ್ತದೆ. ಪುರುಷಜಾತಿಯನ್ನು ಹೀನೈಸಿ ಮಾತನಾಡಿ ಪುರಾಣದೇವತೆಗಳ ಗಂಡಸುತನವನ್ನೆಲ್ಲ ಚಿಮಣಾಬಾಯಿ ತೆಗೆಯುತ್ತಾಳೆ. ಇವನು ಸ್ತ್ರೀಜಾತಿಯ ತಳಬುಡವನ್ನೆಲ್ಲ ಸೋಸುತ್ತಾನೆ. ಇಬ್ಬರೂ ತಂತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಅನೇಕ ಚಾವಡಿ, ದಾಸರಪದ, ಶರಣರ ವಚನ, ಕಲ್ಗಿತುರಾ-ಲಾವಣಿ, ‘ತೋಮ್ರಿ’ ಹಾಡುಗಳ ಮೂಲಕ ಸಮರ್ಥಿಸಿಕೊಳ್ಳುತ್ತಾರೆ. ಮಧ್ಯೆ ಜವಾರಿ-ಇವನೇ ವಿದೂಷಕ-ಇವರಿಬ್ಬರ ವಾದ-ಪ್ರತಿವಾದಗಳಿಗೆ ಅಡ್ಡ ಅರ್ಥ ಹಚ್ಚಿ ಕೆಲಸದ ಅಶ್ಲೀಲ ಸ್ಪರ್ಶ ಕೊಟ್ಟು ನಗಿಸುತ್ತಿರುತ್ತಾನೆ. ಹೀಗೆ ಐದಾರು ತಾಸಿನ ತನಕ ವಾದಮಾಡಿದರೂ ನಾಯಕನಾಗಲಿ, ನಾಯಕಿಯಾಗಲಿ ಸೋಲನ್ನೊಪ್ಪದೆಯೇ ಆಟ ಕೊನೆಗೊಳ್ಳುತ್ತದೆ.

ನಡುನಡುವೆ ಅನೇಕ ಸೋಗುಗಳೂ ಬರುತ್ತವೆ. ಇವೆಲ್ಲದರ ಕೇಂದ್ರ ವ್ಯಕ್ತಿ-ಚಿಮಣಾ. ಯಾವ ದೃಶ್ಯದಲ್ಲಿಯೂ ಅವಳೇ ಪ್ರಮುಖ ಆಕರ್ಷಣೆ. ಹಾಡು ಕುಣಿಯುವುದರಲ್ಲಿ ತುಂಬ ನಿಪುಣಳಾಗಿದ್ದ ಇವಳು ಸಂದರ್ಭ ಬಂದರೆ ಹೋಳಿಹುಣ್ಣಿಮೆ ಹಾಡಿಗೂ ಇಳಿಯುತ್ತಾಳೆ. ಜವಾರಿಯ ಪಾತ್ರ ಇಲ್ಲಿ ಗಮನಾರ್ಹವಾಗಿರುತ್ತದೆ. ಅವನು ಗಳಿಗೆಗೊಂದು ತರಹ ರುಮಾಲು ಸುತ್ತಿ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸುತ್ತಾನೆ. ಒಂದೊಂದು ಸಲ ಎತ್ತು, ಕುದುರೆ, ನಾಯಿ ಮುಂತಾದ ಅನೇಕ ಆಕಾರಗಳನ್ನು ರುಮಾಲು ಸುತ್ತಿ ತೆಗೆಯುತ್ತಾನೆ. ಆದರೂ ದಾಸರಾಟಕ್ಕೆ ಆಡಲು ನಿಶ್ಚಿತವಾದ ವಸ್ತುವೆಂಬುದಿಲ್ಲ. ಕುಳಿತ ರಸಿಕರು ಯಾವ ಹಾಡು ಬಯಸಿದರೆ ಅದನ್ನು ಹಾಡುತ್ತ, ಯಾವ ನರ್ತನ ಹೇಳಿದರೆ ಅದನ್ನು ಕುಣಿಯುತ್ತ ಹೇಗೋ ಬೆಳಗು ಮಾಡುತ್ತಾರೆ. ಆದ್ದರಿಂದಲೇ “ದಾಸರಾಟ ಆಟವಲ್ಲ ದೋಸೆ ಆಟ ಊಟವಲ್ಲ” ಎಂಬ ಗಾದೆ-ಮಾತು ಪ್ರಚಾರದಲ್ಲಿದೆ.

ಆದರೂ ಜಾನಪದದ ಮೇಲಿನ ಈ ಆಟದ ಪ್ರಭಾವವೇನೂ ಕಡಿಮೆಯದಾಗಿರಲಿಲ್ಲ. ಎಲೆ-ಅಡಿಕೆ ಕೊಟ್ಟು ಕೂಡ ದಾಸರಾಟಗಳನ್ನು ಜನ ತರಿಸಿ ನೋಡುತ್ತಿದ್ದರು. ಮುಂದೆ ಇದೇ ಮಹಾರಾಷ್ಟ್ರಕ್ಕೆ ಹೋದಾಗ ಅಲ್ಲಿನವರು ಈ ಹೊಸ ಬಗೆಯ ‘ತಮಾಶೆ’ಯನ್ನು ಬಹುಬೇಗ ಒಪ್ಪಿಕೊಂಡರು. ಇಂಥವೇ ಪಾತ್ರ-ತಂತ್ರಗಳುಳ್ಳ ‘ತಮಾಶಾ’ ನಿರ್ಮಾಣಗೊಂಡಿತು. ಈ ತಮಾಶಾ. ಮಹಾರಾಷ್ಟ್ರದ ತುಂಬ ಜನಪ್ರಿಯವಾಗಿ ರಾಜಕೀಯ, ಸಾಂಸ್ಕೃತಿಕ ತತ್ವಗಳ ಪ್ರಚಾರಕ್ಕೆ ಮಾಧ್ಯಮವೂ ಆಯಿತು. ಮಹಾರಾಷ್ಟ್ರದ ತಮಾಷೆಯಲ್ಲಿ ದಾಸರಾಟದ ಗೊಡ್ಡಿಭೀಮಣ್ಣ ಗಲಪೋಜಿಯಾಗಿಯೂ, ಇಲ್ಲನ ಚಿಮಣಾ ‘ರಾಧಾ’ ಆಗಿಯೂ, ಜವಾರಿ ‘ಸಕಾರಾಮ್‌ ತಾತ್ಯಾ’ ಆಗಿಯೂ ಹೊಸ ಹೆಸರು ತಾಳಿದರು. ಈ ಹೊಸ ತಮಾಷೆ ಮಹಾರಾಷ್ಟ್ರದ ತುಂಬ ಹಬ್ಬಿ ಇಂಥ ಅನೇಕ ಮೇಳಗಳು ಹುಟ್ಟಿ ಉತ್ತರಕರ್ನಾಟಕಕ್ಕೂ ಭೆಟ್ಟಿ ಕೊಟ್ಟವು. ಇದನ್ನೇ ಉತ್ತರಕರ್ನಾಟಕದವರು ‘ರಾಧಾನ ಆಟ’ವೆಂಬ ಹೆಸರಿನಿಂದ ಮತ್ತೆ ಸ್ವೀಕಾರಮಾಡಿದರು. ಆದರೆ ರಾಧಾನ ಆಟಕ್ಕೂ ದಾಸರಾಟಕ್ಕೂ ಸಾಕಷ್ಟು ವ್ಯತ್ಯಾಸವಿದೆಯೆಂಬುದನ್ನು ಮರೆಯಬಾರದು. ಆಮೇಲೆ ಬಂದ ಪ್ರಭಾವಗಳು ಇದನ್ನು ಹೇಗೇ ರೂಪಿಸಿರಲಿ ದಾಸರಾಟ ದ್ರಾವಿಡ ಬಯಲಾಟದ ಮುಂದುವರಿದ ರೂಪವಾಗಿರಬಹುದೇನೋ ಎಂದು ಅನ್ನಿಸುತ್ತದೆ. ದಾಸರಾಟದಂತೆಯೇ ಮುಖ್ಯ ನಟಿಯೊಬ್ಬಳನ್ನು ಮುಂದೆ ಮಾಡಿಕೊಂಡು ಅಡ್ಡಾಡುವ ಕೂಟಗಳು ಪ್ರಾಚೀನಕಾಲದಿಂದಲೇ ದ್ರಾವಿಡರಲ್ಲಿದ್ದವೆಂಬ ಮಾತು ಈ ಊಹೆಗೆ ಅವಕಾಶ ಮಾಡಿಕೊಡುತ್ತದೆ.

ಸಣ್ಣಾಟ

ದೊಡ್ಡಾಟದಿಂದ ಬೇರ್ಪಡಿಸಿ ಹೇಳುವುದಕ್ಕಾಗಿ ಇದಕ್ಕೆ ಈ ಹೆಸರು ಬಂದಿದೆ. ಅಲ್ಲದೆ ದೊಡ್ಡಾಟದ ವಿಸ್ತಾರ, ರಂಗಭೂಮಿ, ಪಾತ್ರವರ್ಗ, ವೇಷಭೂಷಣಗಳೆಲ್ಲ ಹೆಸರಿಗೆ ತಕ್ಕಂತೆ ಇದರಲ್ಲಿ ಕಡಿಮೆಯಾಗಿಯೇ ಇರುವುದುಂಟು. ಈ ಸಣ್ಣಾಟಗಳಲ್ಲಿಯೇ ಬೇಕಾದರೆ ಶೈವ, ವೈಷ್ಣವ ಸಣ್ಣಾಟಗಳೆಂಬ ಒಳಭೇದ ಮಾಡಬಹುದು. ಹೀಗೆ ಭೇದ ಮಾಡಿದ ಮಾತ್ರಕ್ಕೆ ಅದು ಶುದ್ಧವಾಗಿ ಶೈವ ಅಥವಾ ವೈಷ್ಣವ ಕಥೆಯನ್ನೇ ಆಧರಿಸುತ್ತದೆಂದಲ್ಲ. ಮೂಲದಲ್ಲಿ ಅವು ಹಾಗಿದ್ದುದು ನಿಜ. ಅವು ಪ್ರಕಾರಗಳಾಗಿ ಒಪ್ಪಿತವಾದ ನಂತರ ಅವುಗಳ ಪಡಿಯಚ್ಚಿನಲ್ಲಿ ಅದೆಷ್ಟೋ ಬಯಲಾಟಗಳು ಹುಟ್ಟಿವೆ. ವೈಷ್ಣವ ಸಣ್ಣಾಟಗಳಲ್ಲಿ ಸಾಮಾನ್ಯವಾಗಿ ಪೂರ್ವರಂಗದಲ್ಲಿ ಗೋಪಾಲ-ಗೊಲ್ಲತಿಯರ ನರ್ತನ, ವಾಗ್ವಾದ, ಒಪ್ಪಂದಗಳಿರುತ್ತವೆ. ಕೆಲವು ಆಟಗಳಲ್ಲಿ ಕಥೆಗೂ ಈ ನರ್ತನಕ್ಕೂ ಯಾವ ನೇರ ಸಂಬಂಧವೂ ಇರುವುದಿಲ್ಲ. ಇವು ಗೀತನಾಟಕಗಳಾಗಿದ್ದು ಬರೆದಿಡುವ ಪರಿಪಾಠವಿಲ್ಲ. ಗದ್ಯ ಇರುವುದೇ ಇಲ್ಲ; ಹಾಡನ್ನೇ ಸಾಮಾನ್ಯರ ಅನುಕೂಲಕ್ಕಾಗಿ ಗದ್ಯದಲ್ಲಿ ವಿವರಿಸುತ್ತಾರೆ. ಹೀಗೆ ಪದ್ಯವನ್ನು ಗದ್ಯವಾಗಿಸುವಾಗ ನಟ ತನ್ನ ಸ್ವಂತ ಮಾತುಗಳನ್ನು ಸೇರಿಸಬಹುದು. ರಾಧಾನ ಆಟ, ತಳೇವಾಡಿ ನಬಿ-ಆಟ ಮುಂತಾದವುಗಳು ಇಂಥ ಬಯಲಾಟಗಳಾಗಿವೆ. ಇವಲ್ಲದೆ ಗೋರಾಕುಂಬಾರ, ಭಕ್ತಪ್ರಹ್ಲಾದ, ರುಕ್ಮಿಣಿ ಸ್ವಯಂವರದಂಥ ಪುರಾಣಕಥೆಗಳೂ ಇವೆ. ದೂತೆ, ತಾತ್ಯಾ ಮುಂತಾದ ಹೆಸರುಗಳಲ್ಲಿ ಭಾಗವತನಿರುತ್ತಾನೆ. ಅವನೇ ಮುಮ್ಮೇಳದಲ್ಲಿ ಮೇಟಿತಾಳ. ಚಕ್ಕದ, ಕವಾಲಿ, ಲಾವಣಿ ಧಾಟಿಗಳಲ್ಲಿ ಇಲ್ಲಿನ ಬಹುಪಾಲು ಹಾಡುಗಳಿರುತ್ತವೆ. ದಾಸರಾಟದ ‘ವೈವೊಲಿನ್’ ತಬ್ಲಾಗಳನ್ನು ಕಳಚಿ ತಮಾಷಾದ ಸಾರಂಗಿ ದಪ್ಪುಗಳನ್ನು ಉಪಯೋಗಿಸುತ್ತಾರೆ. ಒಂದೇ ಕಥೆಯನ್ನು ಬೇರೆ ಬೇರೆ ಕವಿಗಳು ಬೇರೆ ಧಾಟಿ-ಧೋರಣೆಗಳೊಂದಿಗೆ ಬರೆದು ಆಡಿದ್ದೂ ಉಂಟು. ರಾಧಾನ ಆಟದಲ್ಲಿಯೇ ‘ಹರದೇಶಿ’ಯನ್ನು ಸಮರ್ಥಿಸುವ ಆಟವೊಂದು ಚಿಕ್ಕೋಡಿ, ಹುಕ್ಕೇರಿ ನಾಡುಗಳಲ್ಲಿ ಬಳಕೆಯಲ್ಲಿದ್ದರೆ ನಾಗೇಶಿಯನ್ನು ಸಮರ್ಥಿಸುವ ಆಟ ಕುಂದರನಾಡಿನಲ್ಲಿದೆ. ಇವುಗಳಲ್ಲಿ ಸಾಮಾನ್ಯವಾಗಿ ವಿದೂಷಕನಿರುವುದಿಲ್ಲ. ಹಾಸ್ಯಕ್ಕಾಗಿ ಮೇಳದವರೇ ಏನಾದರೊಂದು ‘ಅಡ್ಡಸೋಗು’ ತಂದು ರಂಜನೆಮಾಡುತ್ತಾರೆ. ಈ ಸಣ್ಣಾಟಕ್ಕೆ ಬೇಕಾದ ಸಲಕರಣೆಗಳು ತೀರ ಕಡಿಮೆ; ಬಣ್ಣ ಬಳಿಯುವ ಅವಶ್ಯಕತೆ ಕೂಡ ಇಲ್ಲದಿರುವುದರಿಂದ ಹಳ್ಳಿಗೊಂದೊಂದು ಇಂಥ ಆಟ ಇದ್ದೇ ಇರುತ್ತವೆ.

ಆಟದ ಈ ಪ್ರಕಾರ ಇನ್ನೆಷ್ಟೋ ಬಯಲಾಟಗಳಿಗೆ ಜನ್ಮವಿತ್ತಿದೆ. ಬರೀ ಪುರಾಣ ಕಥೆಗಳನ್ನೇ ತೀಡಬೇಕೆಂಬ ಕಟ್ಟುನಿಟ್ಟು ಇಟ್ಟುಕೊಳ್ಳದೆ ಸಾಮಾಜಿಕ ವಸ್ತುಗಳನ್ನೂ ಆಡಿದ್ದಾರೆ. ಇಂಥ ಬಯಲಾಟಗಳಲ್ಲಿ ಮೇಲೆ ಹೇಳಿದ ಪೂರ್ವರಂಗವಿರುವುದಿಲ್ಲ. ಗಣ್ಣಪದ ಹಾಡಿವರೇ ನೇರವಾಗಿ ಕಥೆ ಪ್ರಾರಂಭಿಸಿಬಿಡುತ್ತಾರೆ. ಸಂಗ್ಯಾಬಾಳ್ಯಾ, ರೂಪಸೇನ, ಬಡವನಾಟ, ಸತ್ವವಿಜಯ, ಪತಿವ್ರತಾ, ಚಂದ್ರಚೂಡಾಮಣಿ ಮುಂತಾದುವು ಇಂಥವು. ಇವುಗಳಿಗೆಲ್ಲ ಉತ್ತರ ಕರ್ನಾಟಕದ ಕೃಷ್ಣಾತೀರವೇ ಜನ್ಮಭೂಮಿ. ಅಲ್ಲಿಂದಲೇ ಈ ಆಟಗಳು ಎಲ್ಲ ಕಡೆ ಪ್ರಚಾರಕ್ಕೆ ಬಂದಿವೆ.

ಶೈವರದೆನ್ನಬಹುದಾದ ಸಣ್ಣಾಟ ಸಲಕರಣೆ, ವೇಷಭೂಷಣ, ಮಾತುಗಾರಿಕೆಯಲ್ಲಿ ಮೇಲಿನ ಸಣ್ಣಾಟದಿಂದ ಬೇರ್ಪಡುತ್ತದೆ. ತತ್ವಜ್ಞಾನದ ವೈಖರಿ, ಗ್ರಾಂಥಿಕ ಸಂಭಾಷಣೆಗಳಿಂದ ಆಗಲೇ ಇದು ಜಾನಪದದ ಮಟ್ಟಕ್ಕಿಂತ ಮೇಲೇರಿದ ಪ್ರಕಾರವಾಗಿದೆ. ಕಂಪನಿ-ನಾಟಕಗಳ ಬಹುಮಟ್ಟಿನ ಪ್ರಭಾವವನ್ನು ಸ್ವೀಕರಿಸಿ ಅವುಗಳ ಉದಾಹರಣೆಯಿಂದ ರಂಗಭೂಮಿ-ಪದ್ಧತಿಗಳಲ್ಲಿ ಸುಧಾರಣೆ ಮಾಡಿಕೊಂಡಿದೆ.

ಆಗಲೇ ಹೇಳಿದಂತೆ ಬಹುರೂಪಗಾರರ ಆಟವೇ ಬೆಳೆದು ಈ ಸಣ್ಣಾಟ ನಿರ್ಮಾಣಗೊಂಡಿದೆ. ಪ್ರಾರಂಭದಲ್ಲಿ ಗಣೇಶ, ಈಶ್ವರ, ಸರಸ್ವತಿಯರ ಸ್ತೋತ್ರದ ಹಾಡುಗಳಾಗುತ್ತವೆ. ಹಿಮ್ಮೇಳ ಮುಮ್ಮೇಳಗಳಿದ್ದರೂ ಕೆಲವು ಆಟಗಳಲ್ಲಿ, ನಾಟಕದ ಪ್ರಭಾವದಿಂದಾಗಿ ಆಯಾ ಪಾತ್ರವೊಂದೇ ಮುಮ್ಮೇಳವಾಗುತ್ತದೆ. ಇಲ್ಲಿನ ಮೇಟಿತಾಳ ವೈಷ್ಣವ ಸಣ್ಣಾಟಗಳ ಮೇಟಿತಾಳಿನಂತೆ ಕ್ರಿಯಾಶೀಲವಾಗಿರುವುದಿಲ್ಲ. ತಾತ್ಯಾ ದೂತೆಯರು ಪಾತ್ರ ಪಾತ್ರಗಳ ಸಂಬಂಧ ಬೆಳೆಸಿ ಪರಿಚಯಿಸುತ್ತಾರೆ. ಇಲ್ಲಿ ಮೇಟಿತಾಳಿಗೆ ಪಾತ್ರದ ಜೊತೆ ಹಾಡುವುದನ್ನುಳಿದರೆ ಬೇರೇನೂ ಕೆಲಸವಿರುವುದಿಲ್ಲ. ಕೆಲವು ಆಟಗಳಲ್ಲಿ ‘ಲಾಲೂ’ ಎಂಬ ವಿದೂಷಕನಿರುತ್ತಾನೆ. ಅವನೇ ರಂಗದ ಮೇಲೆ ಬಂದು ಪಾತ್ರಗಳನ್ನು ಪರಿಚಯಿಸುತ್ತಾನೆ. ಆದರಿದು ಅನಿವಾರ್ಯವೆಂದೇನೂ ಅಲ್ಲ. ನಿಜಗುಣಶಿವಯೋಗಿ, ನೀಲಕಂಠ ಆಟದಲ್ಲಿ ನಾಯಕನಿಗೆ ಸಂಬಂಧಪಟ್ಟ ದೃಶ್ಯಗಳಲ್ಲಿ ಮಾತ್ರ ಈ ಲಾಲೂ ಬರುತ್ತಾನೆ. ಪಾತ್ರಗಳು ತಮ್ಮನ್ನು ತಾವೇ ಪರಿಚಯಿಸಿಕೊಡುತ್ತವೆ. ಅಥವಾ ದೂತೆ ಬರುತ್ತಾಳೆ.

ಈ ಆಟದಲ್ಲಿ ತಾಳ, ತಬಲಾ, ಹಾರ್ಮೋನಿಯಂ ಉಪಯೋಗಿಸುತ್ತಾರೆ, ಔತ್ತರೇಯ ಸಂಗೀತದ ಭೈರವಿ, ಮುಲ್ತಾನಿ ರಾಗಗಳ ಅನೇಕ ನೆರಳುಗಳನ್ನಿಲ್ಲಿ ಕೇಳಬಹುದು. ಈ ಆಟಗಳನ್ನು ಬರೆದಿಡುವ ಪದ್ಧತಿಯಿದ್ದು ನಟರು ಪಠ್ಯವನ್ನು ತಿಂಗಳಾನುಗಟ್ಟಲೆ ತಾಲೂವು, ಕಂಠಪಾಠ ಮಾಡಿಯೇ ಆಡುತ್ತಾರೆ. ನಡುವೆ ತನ್ನದೇನನ್ನಾದರೂ ಸೇರಿಸುವ ಅಧಿಕಾರ ನಟನಿಗಿರುವುದಿಲ್ಲ. ಅಂಗಾಭಿನಯ ಅಧಿಕವಾಗಿರುತ್ತದೆ. ಅಲ್ಲಮಪ್ರಭು, ನಾಯಿ-ಆಟ, ಕಬೀರದಾಸ, ಜೋದಬಾಯಿ, ಮುಂತಾದುವು ಇಂಥ ಆಟಗಳು. ಇಷ್ಟೆಲ್ಲ ಇದ್ದರೂ ಅಂಧಾನುಕರಣದಿಂದ ಇದು ನಾಟಕದ ತದ್ಭವವಾಗುತ್ತಿದೆಯೆಂದು ಹೇಳದೆ ಗತ್ಯಂತರವಿಲ್ಲ. ಕೆಲವುಮ ಸಲ ಹಾಡು ನರ್ತನಗಳನ್ನು ಸೇರಿಸಿ ಕಂಪನಿ-ನಾಟಕಗಳನ್ನೇ ಇಂಥ ಸಣ್ಣಾಟಗಳಾಗಿ ಪರಿವರ್ತಿಸಿ ಆಡಿದ್ದೂ ಉಂಟು. ಭಾಗ್ಯಲಕ್ಷ್ಮ, ಮಲ್ಲಮ್ಮ ಇಂಥವು.

ಪಾರಿಜಾತ

ಇದನ್ನು ಬಹಳಷ್ಟು ಪ್ರಚಾರಕ್ಕೆ ತಂದ ಶ್ರೇಯಸ್ಸು ಗೋಕಾಕ ತಾಲೂಕಿನ ಕುಲಿಗೋಡ ತಿಮ್ಮಣ್ಣನದು. ಸದ್ಯಕ್ಕೆ ಆಡುವ ಪಾರಿಜಾತದಲ್ಲಿ ಕುಲಿಗೋಡ ತಿಮ್ಮಣ್ಣನ ಹೆಸರಿದ್ದರೂ ಅದು ಅವನು ಬರೆದಿದ್ದೇನೂ ಅಲ್ಲ. ೧೯ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿದ್ದ ಅಪರಾಳ ತಮ್ಮಣ್ಣನೆಂಬ* ರಾಯಚೂರಿನ ಕವಿ ಇದನ್ನು ಮೊದಲು ಬರೆದನು. ಇದರ ಮೇಲೆ ಆಂಧ್ರದ ಕೂಚಿಪುಡಿ ನೃತ್ಯವಾದ ‘ಭಾಮಾಕಲಾಪ’ ಮತ್ತು ಕನ್ನಡ ಯಕ್ಷಗಾನದ ಪ್ರಭಾವ ಅತ್ಯಂತ ಸ್ಪಷ್ಟವಾಗಿದೆ. ಮುಂದೆ ಇದು ಕುಲಿಗೋಡ ತಿಮ್ಮಣ್ಣನಿಗೆ ದೊರೆತಾಗ ಅವನು ಇದರಲ್ಲಿ ತನ್ನವೆಷ್ಟೋ ಹಾಡು ಸೇರಿಸಿ ಅವುಗಳಿಗೆ ಅತಿ ಪ್ರಚಾರದಲ್ಲಿದ್ದ ಮರಾಠಿ ಲಘು ಸಂಗೀತವನ್ನು ಸೇರಿಸಿದನು. ಸಂಪ್ರದಾಯದ ಹಿಮ್ಮೇಳ ಮುಮ್ಮೇಳಗಳನ್ನುಳಿಸಿಕೊಂಡರೂ ಆಯಾ ಪಾತ್ರಗಳೇ ತಂತಮ್ಮ ಹಾಡು ಹೇಳುವಂತೆ ಮಾಡಿದನು. ತಬಲಾ, ಹಾರ್ಮೋನಿಯಂ, ಸಾರಂಗಿಯಂಥ ಆಧುನಿಕ ವಾದ್ಯಗಳನ್ನು ಬಳಸಿದನು. ರಂಗಭೂಮಿ, ಆಟದ ಒಟ್ಟಂದ, ವೇಷಭೂಷಣಗಳ ಕಡೆಗೆ ಹೆಚ್ಚಿಗೆ ಲಕ್ಷ್ಯ ಪೂರೈಸಿದನು. ಇಷ್ಟೆಲ್ಲ ಮಾಡಿ ಕೌಜಲಗಿಯ ನಿಂಗಮ್ಮನೊಡನೆ ಮೇಳ ಕಟ್ಟಿ ಆಡತೊಡಗಿದನು. ಉತ್ತರಕರ್ನಾಟಕದಲ್ಲಿಯಂತೂ ಈ ಮೇಳ ಬಹು ಬೇಗ ಪ್ರಸಿದ್ಧಿ ಪಡೆಯಿತು. ಹಳ್ಳಿಹಳ್ಳಿಯವರೂ ಈ ಮೇಳವನ್ನು ವೀಳ್ಯಕೊಟ್ಟು ಕರೆಕಳಿಸುತ್ತಿದ್ದರು.

ಭಾಗವತನ ನಾಂದಿ-ಹಾಡಿನೊಂದಿಗೆ ಆಟ ಪ್ರಾರಂಭವಾಗುತ್ತದೆ. ಸಣ್ಣಾಟಗಳಲ್ಲಿ ಬರೀ ಗಣೇಶನ ಸ್ತುತಿ ಪದ್ಯಗಳಿದ್ದರೆ ಇಲ್ಲಿ ಗಣೇಶನ ಮುಖವಾಡ ಧರಿಸಿದ ಪಾತ್ರವೇ ರಂಗದ ಮೇಲೆ ಬಂದು ಕುಳಿತುಕೊಳ್ಳುತ್ತದೆ. (ಯಕ್ಷಗಾನದಲ್ಲಿನ ಸ್ತ್ರೀವೇಷದಂಥ) ಇಬ್ಬರು ಸ್ತ್ರೀಪಾತ್ರಗಳು ಬಂದು ಸ್ತುತಿ ಪದ್ಯ ಹಾಡುತ್ತಾರೆ. ಗಣೇಶನ ಆಶ್ವಾಸನೆಯೊಂದಿಗೆ ‘ಗಣ್ಣ’ ಮುಗಿದು ಗೊಲ್ಲತಿ-ಕೃಷ್ಣರು ಬರುತ್ತಾರೆ. ಕೃಷ್ಣ ಗೊಲ್ಲತಿಯನ್ನು ಒಲಿಸಿಕೊಂಡು ಹೋದಾದ ಮೇಲೆ ಪೂರ್ವರಂಗ ಮುಗಿಯಿತು. ಭಾಗವತವನ್ನು ಇತರ ಪಾತ್ರಗಳು ದೂತೆ ಎಂದು ಕರೆಯುತ್ತವೆ. ಇವನು ಬಂದ ಪಾತ್ರಗಳನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತ ಹಾಸ್ಯವನ್ನೂ ಪೂರೈಸುತ್ತಿರುತ್ತಾನೆ. ರಂಗದ ಮೇಲಿನ ಯಾವುದೇ ಎರಡು ಪಾತ್ರಗಳಿಗೆ ಸಂಬಂಧ ಜೋಡಿಸುವವನೂ ಇವನೇ. ಆದ್ದರಿಂದ ನಾಂದಿಯಿಂದ ಮಂಗಳಾರತಿಯವರೆಗೆ ಅನಿವಾರ್ಯವಾಗಿ ಇವನು ರಂಗದ ಮೇಲೆ ಇರಲೇಬೇಕು. ಹಾಸ್ಯಕ್ಕಾಗಿ ಭಾಗವತನೊಂದಿಗೆ ಹಿಮ್ಮೇಳದವನೊಬ್ಬ ಸಹಕರಿಸುತ್ತಾನೆ. ಆತನನ್ನು ‘ಹಿಮ್ಮ್ಯಾಳ್ಯಾ’ ಎಂದು ಸಂಬೋಧಿಸುತ್ತಾರೆ. ಇದೂ ಸಣ್ಣಾಟದಂತೆ ಗೀತನಾಟಕವೇ ಆಗಿದ್ದು ಹಾಡಿನ ತಾತ್ಪರ್ಯವನ್ನು ನಟನು ಮಾತಿನಲ್ಲಿ ವಿವರಿಸುತ್ತಾನೆ. ‘ತಾಳಮದ್ದಲೆ’ಯ ಅರ್ಥಧಾರಿಗಳಂತೆ ಈ ನಟರು ನಡುನಡುವೆ ತಮ್ಮ ನಿಶಿತಮತಿಯನ್ನೂ ಮಸೆಯುತ್ತಾರೆ. ಹೀಗಾಗಿ ಇವರಿಗೆ ಪುರಾಣಗಳ ದಟ್ಟ ಪರಿಚಯವೂ ವಾಕ್ಚಾಚುಯ್ಯವೂ ಇರಬೇಕು. ಪಠ್ಯವನ್ನು ಬಿಟ್ಟು ಬರೀ ಪಠ್ಯೇತರ ಪುರಾಣಗಳ ಮಾತುಗಳನ್ನೇ ಸೇರಿಸಿ ಚೆನ್ನಾಗಿ ಮಾತಾಡುವವನಿಗೆ ಈಗಲೂ ಹಳ್ಳಿಗರು ತುಂಬ ಗೌರವ ಕೊಡುತ್ತಾರೆ.

ತಬಲಾ, ಹಾರ್ಮೋನಿಯಂ, ತಾಳಗಳನ್ನು-ಕ್ವಚಿತ್ತಾಗಿ ಸಾರಂಗಿ ಶಹನಾಯಿಗಳನ್ನು- ಉಪಯೋಗಿಸುತ್ತಾರೆ. ಆದಿತಾಳ, ಆಟತಾಳ, ತ್ರಿಪುಟೆ, ಝಂಪೆ, ಕೆಲಸಲ ಮಠ್ಯ, ರೂಪಕ, ಏಕತಾಳಗಳ ಹಾಡುಗಳಿದ್ದು ಭೈರವಿ, ಕಾಂಬೋಧಿ, ಶಂಕರಾಭರಣ, ಕಾಪಿ, ಕಲ್ಯಾಣಿ, ಪೂರ್ವಿ, ನೀಲಾಂಬರಿ, ಸಾರಂಗ ರಾಗಗಳಲ್ಲಿ ಹಾಡುತ್ತಾರೆ. ಸೀಸಪದ್ಯ, ವಾರ್ಧಕಷಟ್ಪದಿ, ಕಂದ, ವಚನ, ದ್ವಿಪದಿ ಇತ್ಯಾದಿ ಛಂದಸ್ಸನ್ನು ಬಳಸುತ್ತಾರೆ.

ಹಾಗೆ ನೋಡಿದರೆ ಇದರದೇ ಒಂದು ಪ್ರಕಾರವಾಗುವಷ್ಟು ಆಟಗಳಿಲ್ಲ. ಶಿವ ಪಾರಿಜಾತ, ವೆಂಕಟೇಶಪಾರಿಜಾತ-ಎಂಬ ಇನ್ನೆರಡು ಆಟಗಳು ಸಿಕ್ಕಿದ್ದರೂ ಅವನ್ನು ಆಡುತ್ತಿದ್ದರೆಂದು ಗೊತ್ತಾಗುವುದಿಲ್ಲ. ಈ ಎರಡೂ ಪಾರಿತಾಗಳ ಪಠ್ಯ ಮಾತ್ರ ಕೃಷ್ಣ ಪಾರಿಜಾತದ ಪರಿಯಚ್ಚಿನಲ್ಲಿಯೇ ಇದ್ದು ಅವೇ ರಾಗ, ತಾಳಗಳ ನಿರ್ದೇಶನಗಳನ್ನು ಹೊಂದಿವೆ. ಗೋಕಾವಿ ಅನಂತಾಚಾರ್ಯಕೃತ ಶಿವಪಾರಿಜಾತ ತೀರ ಚಿಕ್ಕದಿದ್ದು ಮೂರು ಅಧ್ಯಾಯಗಳು ಮಾತ್ರ ಇವೆ. ವೆಂಕಟೇಶಪಾರಿಜಾತದಲ್ಲಿ* ಹತ್ತುಅಧ್ಯಾಯಗಳಿವೆ. ಇದರ ನಾಯಕನಾದ ವೆಂಕಟೇಶ, ಕೃಷ್ಣನಂತೆ ಕೊರವಂಜಿಯ ವೇಷ ಧರಿಸುತ್ತಾನೆ. ಕೃಷ್ಣ-ಪಾರಿಜಾತದ ಹೆಸರು ಒಪ್ಪುವಂತೆ ಇವುಗಳಿಗೆ ಈ ಹೆಸರು ಒಪ್ಪುವುದಿಲ್ಲ. ಪಾರಿಜಾತ ಪುಷ್ಪದ ವಿಷಯ ಇವುಗಳಲ್ಲಿ ಬರುವುದಿಲ್ಲ. ಆದರೆ ಪ್ರಕಾರವಾಗುವಷ್ಟು ಇದು ಪ್ರಭಾವಿಯಾಗಿದ್ದಿತೆನ್ನುವುದಕ್ಕೆ ಉಳಿದೆರಡು ಆಟಗಳೇ ಸಾಕ್ಷಿಯಾಗಿವೆ. ಬಹುಶಃ ಕೃಷ್ಣಪಾರಿಜಾತದ ಪ್ರಭಾವ ಅವುಗಳ ಪ್ರಚಾರವನ್ನು ಹುಟ್ಟಿನಲ್ಲಿಯೇ ಅಳಿಸಿರಬಹುದು.

ದೊಡ್ಡಾಟ

‘ಮೂಡಲಪಾಯಾ’ ಎಂಬ ಇದರ ಹೆಸರು ಇದು ಯಾವುದೋ ಪ್ರಕಾವೊಂದರ ಕವಲು ಎಂಬುದನ್ನು ಸೂಚಿಸುತ್ತದೆ. ಯಕ್ಷಗಾನವನ್ನು ಅನೇಕ ರೀತಿಯಲ್ಲಿ ಅನುಸರಿಸಿದರೂ ಬೆರಳಿಟ್ಟು ತೋರಬಹುದಾದ ವ್ಯತ್ಯಾಸಗಳನ್ನೂ ಹೊಂದಿದೆ. ಧಾರವಾಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಯಕ್ಷಗಾನ ದೊಡ್ಡಾಗಳೆರಡೂ ಪ್ರಚಾರದಲ್ಲಿವೆ. ಇನ್ನಿತರ ಬಯಲಾಟಗಳಂತೆ ಇದರಲ್ಲಿಯೂ ಹಿಮ್ಮೇಳಗಳಿರುತ್ತವೆ. ದೊಡ್ಡಾಟವೆಂಬ ಇದರ ಹೆಸರೇ ಸೂಚಿಸುವಂತೆ ಅಟ್ಟ, ಪಾತ್ರಗಳ ಸಂಖ್ಯೆ, ವೇಷಭೂಷಣಗಳ ವೈಭವ ಎಲ್ಲವೂ ದೊಡ್ಡದು.

ಗಣೇಶ, ಸರಸ್ವತಿ, ಈಶ್ವರ ಇವರಲ್ಲಿನ ಯಾರೊಬ್ಬರ ಅಥವಾ ಎಲ್ಲರ ಅಥವಾ ಇನ್ನು ಯಾವುದೋ ದೆವತೆಯ ಸ್ತುತಿಯೊಂದಿಗೆ ಆಟ ಪ್ರಾರಂಭವಾಗುತ್ತದೆ. ಸಾರಥಿ ಪ್ರಾರ್ಥನೆ ಮಾಡುತ್ತಿರುವಾಗಲೇ ಆ ದೇವತೆ ರಂಗದ ಮೇಲೆ ಪ್ರತ್ಯಕ್ಷವಾಗಿ ಆಟಕ್ಕೆ ಯಾವ ವಿಘ್ನಗಳೂ ಬಾರದಂತೆ ನೋಡಿಕೊಳ್ಳುವುದಾಗಿ ಆಶ್ವಾಸನೆ ಕೊಟ್ಟು ಅವಸರದಿಂದ ತನ್ನ ಅಂತಃಪುರ ಅಥವಾ ‘ಮಾಲಿ’ಗೆ ನಿರ್ಗಮಿಸುತ್ತದೆ. ಇದಿಷ್ಟು ಪೂರ್ವರಂಗವಾದ ನಂತರ ಒಮ್ಮೆಲೆ ಕಥೆಯೇ ಪ್ರಾರಂಭವಾಗುತ್ತದೆ. ಮುಮ್ಮೇಳದಲ್ಲಿ ಭಾಗವತನಿರುತ್ತಾನೆ. ಕೆಲವು ಆಟಗಳಲ್ಲಿ ಅವನನ್ನು ಸೂತ್ರಧಾರನೆಂದೂ ಕರೆಯುತ್ತಾರೆ. ಆದರೆ ಸಂಸ್ಕೃತ ನಾಟಕದ ಅರ್ಥದಲ್ಲಿ ಇಲ್ಲಿನ ಭಾಗವತನಿರುವುದಿಲ್ಲ. ನಾಂದಿ ಹಾಡುವಾಗ ದೇವತೆಯ ಪೂಜೆಯನ್ನಿವನು ಮಾಡುವುದಿಲ್ಲ. ಬಂದ ಪಾತ್ರಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿಕೊಡುವುದಿಲ್ಲ. ಇದನ್ನೆಲ್ಲ ಮಾಡುವವನು ಸಾರಥಿ, ಇವನು ‘ಬಂದಂಥವರನ್ನು’ ‘ಕೂತಂಥವರಿಗೆ’ ಪರಿಚಯ ಮಾಡಿಕೊಡುವಾಗ ಮಾತಿಗೊಮ್ಮೆ ವಿಚಿತ್ರ ಹೋಲಿಕೆಗಳ ಮೂಲಕ ಹಾಸ್ಯ ಪೂರೈಸುತ್ತಿರುತ್ತಾನೆ. ಪ್ರತಿಯೊಂದು ಪಾತ್ರವೂ ಸಂಭಾಷಣೆಗಾಗಿ ಸಾರಥಿಯನ್ನೇ ಆಶ್ರಯಿಸುತ್ತದೆ. ಒಂದು ಪಾತ್ರ ಹೋಗಿ ಇನ್ನೊಂದು ಪಾತ್ರ ಬರುವವರೆಗಿನ ಅವಕಾಶವನ್ನು ತನ್ನ ಚತುರೋಕ್ತಿಗಳ ಮೂಲಕ ತುಂಬುತ್ತಾನೆ.* ಸಾರಥಿಯ ನೆರವಿಗೆ ಕೆಲವು ಕಡೆಗೆ ‘ಕೋಡಂಗಿ’ ಎಂಬ ಇನ್ನೊಬ್ಬ ಬರುತ್ತಾನೆ. ಕೋಡಂಗಿಯಿಲ್ಲದ ಊರುಗಳಲ್ಲಿ ಈ ಸಾರಥಿಯೇ ಕೋಡಂಗಿ, ಕುಣಸು, ಅರಗೊಡ್ಡಿ.

ರಚನೆ, ನಾಟಕದಂತೆ ಗದ್ಯ-ಪದ್ಯಮಯವಾಗಿರುತ್ತದೆ. ಗದ್ಯವನ್ನು ಕಂಠಪಾಠ ಮಾಡಿಯೇ ಹೇಳಬೇಕು. ಮಾತು ಸಂಸ್ಕೃತಭೂಯಿಷ್ಠವಾಗಿದ್ದು ಪ್ರಾಸವ್ಯಾಮೋಹ ವಿಪರೀತವಾಗಿರುತ್ತದೆ.+ ಸ್ತ್ರೀಪಾತ್ರಗಳನ್ನುಳಿದು ಮಿಕ್ಕ ಪಾತ್ರಗಳೆಲ್ಲ ವೀರ ರೌದ್ರ ಸನ್ನಿವೇಶಗಳಲ್ಲಿ ನಿಮಿಷಕ್ಕೊಂದು ಸಲ ‘ಶಹಾಬ್ಬಾಶ್’ ಶಹಾಬ್ಬಾಶ್’ ಎಂದು ಕಿರುಚುತ್ತಾರೆ. ಹಾರಾಟ ಕೂಗಾಟಗಳಂತೂ ಹೇಳತೀರದು. ಕೆಲವು ಸಲ ಜಿಗಿಯುವುದರಲ್ಲಿ ಗಂಡಿಗೂ ಹೆಣ್ಣಿಗೂ (ರಾಕ್ಷಸಿಯರು) ಸ್ಪರ್ಧೆ ನಡೆಯುತ್ತದೆ.

ಸೂಕ್ಷ್ಮಭಾವಗಳನ್ನು ಅಭಿವ್ಯಕ್ತಿಸಲು ಯಕ್ಷಗಾನಕ್ಕಿದ್ದ ನೃತ್ಯಸೌಲಭ್ಯ ಇವಕ್ಕಿಲ್ಲ ಸ್ತ್ರೀಪುರುಷಪಾತ್ರಗಳಿಗೆ ಬೇರೆ ಬೇರೆ ಬಗೆಯ ಕುಣಿತವಿದ್ದು ಅದು ನೃತ್ಯಕ್ಕೆ ಸಮೀಪವಾದುದಾಗಿದೆ. ಪುರುಷಪಾತ್ರಗಳು ಕುಣಿಯುವಾಗ ಕೈ ಮುಖಗಳಿಗೇನೂ ಕೆಲಸವಿರುವುದಿಲ್ಲ. ಬರೀ ಕಾಲನ್ನು ಮಾತ್ರ ಒಂದಾದನಂತರ ಒಂದರಂತೆ ಎಡಬಲಗಳಲ್ಲಿ ಮೂರು ಪೆಟ್ಟು ಬೀಳುವಂತೆ ಕುಟ್ಟುತ್ತಾರೆ. ಸ್ತ್ರೀಪಾತ್ರಗಳು ಆಯಾ ಕಾಲಿಗನುಗುಣವಾಗುವಂತೆ ಅಂಗೈಗಳನ್ನು ಕಾಲಿನಂತೆಯೇ ಮೇಲೆ ಕೆಳಗೆ ಹೊರಳಿಸುತ್ತಾರೆ ಅಷ್ಟೆ. ಒಂದೇ ದೃಶ್ಯದಲ್ಲಿಯ ಕಾಲಕ್ರಿಯೆ, ಸನ್ನಿವೇಶಗಳ ವ್ಯತ್ಯಾಸವನ್ನು ಸೂಚಿಸುವಾಗ ಯಕ್ಷಗಾನ ನೃತ್ಯವನ್ನು ನಿಯೋಜಿಸಿಕೊಳ್ಳುತ್ತದೆ. ಅರ್ಜುನ ಧರ್ಮನಿಂದ ಬೀಳ್ಕೊಂಡು ಇಂದ್ರಕೀಲ ಪರ್ವತಕ್ಕೆ ಹೋಗುವಾಗ ಎರಡು ಮೂರು ಸುತ್ತು ನೃತ್ಯ ಮಾಡಿ ಇಂದ್ರಕೀಲ ಪರ್ವತಕ್ಕೆ ಬಂದನೆನ್ನುತ್ತಾನೆ. ಆದರೆ ದೊಡ್ಡಾಟದಲ್ಲಿ ಅದನ್ನು ಮಾತಿನಿಂದಲೇ ಸೂಚಿಸುತ್ತಾರೆ. ವಸ್ತು ಸಾಮಾನ್ಯವಾಗಿ ಪೌರಾಣಿಕವಾಗಿರುತ್ತದೆ. ಕಾಡು ನೃತ್ಯ, ಕೂಗಾಟಗಳಿಂದ ಯಕ್ಷಗಾನದಲ್ಲಿನಂತೆ ಇಲ್ಲಿಯೂ ವೀರ, ಅದ್ಭುತ ಸನ್ನಿವೇಶಗಳು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ.

‘ಮೂಡಲಪಾಯಾ’ ಯಕ್ಷಗಾನಕ್ಕಿಂತ ಪ್ರಾಚೀನವಾಗಿರಬೇಕೆಂದು ಕೆಲವರು ಸೂಚಿಸಿದ್ದಾರೆ. ದೃಶ್ಯಾವಳಿ, ಹಿಮ್ಮೇಳ ಮುಮ್ಮೇಳದ ಕಾರ್ಯೋದ್ದೇಶ, ವೀರರಸಪ್ರಧಾನ ಕಥೆ ಇವೆಲ್ಲ ಗ್ರೀಕ್ ನಾಟಕಪ್ರಕಾರಕ್ಕೆ ತೀರ ಸಮೀಪದವುಗಳಾಗಿವೆ. ದೊಡ್ಡಾಟದ ನೃತ್ಯ, ಹಾಡಿನ ವಿಶಿಷ್ಟ ಪದ್ಧತಿ-ಇವುಗಳನ್ನು ನೋಡಿದರೆ ಯಕ್ಷಗಾನದಿಂದ ಭಿನ್ನವಾದ ಯಾವುದೋ ಮೂಲ ಇದಕ್ಕಿದ್ದಿರಬಹುದೆಂದೂ ಅನ್ನಿಸುತ್ತದೆ. ಸಂಸ್ಕೃತನಾಟಕದ ವಿದೂಷಕ, ವಿಟ ಮುಂತಾದ ಪಾತ್ರಗಳ ಮೂಲರೂಪವಾಗಿರಬಹುದಾದ ಸೂತ್ರಧಾರ, ಪಾರಿಪಾರ್ಶ್ವಕ ಪಾತ್ರಗಳನ್ನೂ, ಕೆಲವು ರಂಗಪದ್ಧತಿಗಳನ್ನೂ ಸಂಸ್ಕೃತಕ್ಕೆ ಕೊಟ್ಟು ಪ್ರಭಾವಿಸಿದ ಪ್ರಾಕೃತರೂಪವೆ ‘ಮೂಡಲಪಾಯಾ’ ಆಗಿರಬಹುದೆಂದೂ ಕೆಲವರು ಹೇಳುತ್ತಾರೆ. ಇದರ ಪ್ರಾಚೀನತೆ ನಿಶ್ಚಿತವಾದರೆ ಸಂಸ್ಕೃತನಾಟಕದ ಮೇಲೆ ಇದು ಪ್ರಭಾವ ಬೀರಿದ್ದು ಅಸಂಭವವಾಗಿರಲಾರದು. ಈ ಪ್ರಾಕೃತದಿಂದ ಮಾರ್ಗ ಮೂಡಿರಬಾರದೇಕ? ಒಂದು ಪ್ರಕಾರ ಇನ್ನೊಂದು ಪ್ರಕಾರದಿಂದ ಜನಿಸುವಾಗ ಅದರ ಅಷ್ಟೂ ಅವಯವಗಳನ್ನು ಅಳವಡಿಸಿಕೊಳ್ಳಬೇಕೆಂದೇನೂ ಇಲ್ಲ. ವೇಷಭೂಷ ಮಾತುಗಾರಿಕೆಗಳಲ್ಲಿ ಇದರ ಮೇಲೆ ಯಕ್ಷಗಾನದ ಪ್ರಭಾವವೇನೋ ಸ್ಪಷ್ಟವಾಗಿದೆ. ಇದೆಲ್ಲಾ ಹೊರಗಡೆ ಮಾತ್ರ. ಇಷ್ಟಿದ್ದರೂ ಹಾಡು ನೃತ್ಯಗಳ ಮೇಲೇನೂ ಪ್ರಭಾವವಾಗಿಲ್ಲದಿರುವುದು ಕುತೂಹಲಾಸ್ಪದ ವಿಷಯವಾಗಿರುವಂತೆ ಇದು ಯಕ್ಷಗಾನ ಜನ್ಯವಲ್ಲವೆಂಬ ಮಾತನ್ನೂ ಸೂಚಿಸುವಂತಿದೆ. ಇದರ ಸಂಗೀತದ ಬಗೆಗೆ ವಿಶೇಷ ಸಂಶೋಧನೆಯಾಗದ ಹೊರತು ಈಗ ಹೆಚ್ಚಿನ ಮಾತುಗಳನ್ನಾಡಲು ಅವಕಾಶವಿಲ್ಲದಾಗಿದೆ.

ಗೊಂಬೆಯಾಟ

ಜೀವಂತ ಮನುಷ್ಯರನ್ನುಳಿದು ಉಳಿದೆಲ್ಲ ಸಲಕರಣೆಗಳನ್ನೂ ಒಳಗೊಂಡ ಬಯಲಾಟದ ಪ್ರಕಾರವಿದು. ಕಟ್ಟಿಗೆಯ ಗೊಂಬೆಗಳಿಗೆ ವಿಶಿಷ್ಟ ರೀತಿಯಲ್ಲಿ ಬಣ್ಣ ಬಳಿದು ವೇಷಭೂಷಣ ತೊಡಿಸುತ್ತಾರೆ. ಅವುಗಳ ಕೈ, ಕಾಲು, ತಲೆ, ಬೆರಳು ಕೆಲವು ಸಲ ತುಟಿಯಂಥ ಸೂಕ್ಷ್ಮ ಅಂಗವೂ ಚಲನಶೀಲವಾಗಿದ್ದು ಅವುಗಳಿಗೆ ಪ್ರತ್ಯೇಕ ದಾರಗಳನ್ನು ಕಟ್ಟರುತ್ತಾರೆ. ದಾರ ಬಿಳಿದಾಗಿರಬಹುದು, ಕರಿದಾಗಿರಬಹುದು. ಈ ಎಲ್ಲ ದಾರಗಳ ಮೂಲಕ ಗೊಂಬೆಯ ಚಲನವಲನಗಳನ್ನು ನಿಯಂತ್ರಿಸುವವನೇ ಸೂತ್ರಧಾರ. ಈ ದಾರಗಳನ್ನವನು ಎರಡೂ ಮಂಗೈ, ಹಲ್ಲುಗಳಲ್ಲಿ ಹಿಡಿದು ಹಾಡು ಮಾತುಗಳಿಗೆ ಅನುಗುಣವಾಗಿ ಚಲಿಸುತ್ತಿರುತ್ತಾನೆ. ಅನೇಕ ಸಲ ಈ ಗೊಂಬೆಗಳು ನೃತ್ಯವನ್ನೂ ಮಾಡಬೇಕಾಗುತ್ತದೆ. ಅವನು ಆಯಾ ಪಾತ್ರಗಳಿಗುಚಿತವಾದ ಧ್ವನಿಯಿಂದ ಮಾತನಾಡುತ್ತಾನೆ. ಗೊಂಬೆಯ ಚಲನವಲನಕ್ಕೂ ಆಡುವ ಮಾತಿಗೂ ಮೇಳವಾಗುವುದಷ್ಟೇ ತಡ ಗೊಂಬೆಗಳಿಗೆ ಜೀವ ತುಂಬಿ ವಸ್ತುಸ್ಥಿತಿಯ ಪರಿಣಾಮಕಾರಿಯಾದ ಭ್ರಾಂತಿಯನ್ನು ಹುಟ್ಟಿಸುತ್ತವೆ.

ಇವುಗಳ ಮಾತಿನ ರೀತಿ, ಸಂಗೀತ, ನರ್ತನ, ಇತಿವೃತ್ತ, ಪ್ರದರ್ಶನಗಳ ಮೇಲೆ ಯಕ್ಷಗಾನ, ದೊಡ್ಡಾಟಗಳ ಪ್ರಭಾವ ಸ್ಪಷ್ಟವಾಗಿದೆ. ಪಠ್ಯ ಪದ್ಯದಲ್ಲಿದ್ದು ಆಟ ನಡೆದಾಗ ಮಾತಿನಲ್ಲಿ ಅರ್ಥೈಸಲ್ಪಡುತ್ತದೆ. ವತ್ಸಲಾಹರಣ, ಶ್ರೀ ಕೃಷ್ಣಸಂಧಾನ, ಕೃಷ್ಣಾರ್ಜುನ ಯುದ್ಧ, ಸುಭದ್ರಾಕಲ್ಯಾಣ, ರಾವಣಸಂಹಾರ ಮುಂತಾದುವು ಗೊಂಬೆಯಾಟದ ಜನಪ್ರಿಯ ಕಥೆಗಳಾಗಿವೆ. ಒಂದೊಂದು ದೃಶ್ಯದಲ್ಲಿ ಹತ್ತರ ತನಕ ಗೊಂಬೆಗಳು ಬರುತ್ತವೆ. ಅವುಗಳನ್ನು ನಾಲ್ಕೈದು ಜನ ನಿಯಂತ್ರಿಸುತ್ತಾರೆ. ಒಂದು ಆಟ ಮುಗಿಯಲು ಮೂರು ನಾಲ್ಕು ತಾಸಿನ ಅವಧಿಯಾದರೂ ಬೇಕು.

ಗೊಂಬೆಗಳು ಸಾಮಾನ್ಯವಾಗಿ ಎರಡು ಅಡಿ ಎತ್ತರವಾಗಿದ್ದು ಜೀವನದ ತದ್ರೂಪ ಭ್ರಾಂತಿಯನ್ನು ತರುವುದಕ್ಕಾಗಿ ಪ್ರದರ್ಶನ ಕಡಿಮೆ ಪ್ರಕಾಶದಲ್ಲಿ-ಹಿಲಾಲಿನ ಬೆಳಕಿನಲ್ಲಿ-ನಡೆಯುತ್ತದೆ. ಪರದೆಯ ಹಿಂದೆ ಅಥವಾ ಪಕ್ಕದಲ್ಲಿ ಭಾಗವತನು ಪುಂಗಿ ಅಥವಾ ಮುಖ ವೀಣೆ, ಮೃದಂಗ, ಡೋಲು ಮುಂತಾದ ಸಂಗೀತವಾದ್ಯಗಾರರೊಂದಿಗೆ ಕುಳಿತಿರುತ್ತಾನೆ. ಸೂತ್ರಧಾರನೇ ಆಯಾ ಪಾತ್ರಗಳ ಸಂಭಾಷಣೆ ಮಾಡಿ ಹಾಡುವಾಗ ಭಾಗವತನೊಂದಿಗೆ, ಗೊಂಬೆಗಳ ನಟನೆ ನರ್ತನಗಳಿಗೆ ತಕ್ಕಂತೆ ಮೇಳ ಕೊಡುತ್ತಾನೆ.*

ಬಯಲಾಟಗಳಂತೆ ಗೊಂಬೆಯಾಟವೂ ಕರ್ನಾಟಕದಲ್ಲಿ ಜನಪ್ರಿಯವಾದ ಪ್ರಕಾರವಾಗಿದೆ. ಹತ್ತು ವರ್ಷಗಳ ಹಿಂದೆ ಕೆಲವು ಕಡೆ ಈಗಲೂ, ಪ್ರತಿಯೊಂದು ಜಾತ್ರೆ ಉತ್ಸವಗಳಲ್ಲಿಯೂ ಇವುಗಳ ಪ್ರದರ್ಶನಗಳನ್ನು ಕಾಣಬಹುದಿತ್ತು. ಅನೇಕ ಬ್ರಾಹ್ಮಣ ಕುಟುಂಬಗಳ ಅನುವಂಶಿಕ ವಿದ್ಯೆಯಾಗಿದ್ದು ಗೊಂಬೆ ಕುಟುಂಬಗಳು ಈಗಲೂ ಇವೆ. ಬೆಳಗಾವಿಯ ಗೊಂಬೆ ಅನಂತಾಚಾರ್, ರಾಣೆಬೆನ್ನೂರಿನ ಬಾಪು ರಾಮಾಚಾರ್ ಪಾಂಡುರಂಗಿ ಮುಂತಾದವರು ಈ ಆಟದ ಪ್ರಸಿದ್ಧ ಹುದ್ದರಿಗಳು. ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ಹಳ್ಳಿಗಳಲ್ಲಿ ಕರ್ಜಗಿ, ಹಾನಗಲ್ಲ, ಆಲೂರ, ಕುರವತ್ತಿ, ರಾಣೆಬೆನ್ನೂರುಗಳಲ್ಲಿ ಈಗಲೂ ಗೊಂಬೆಯಾಟ ಪ್ರಚಾರದಲ್ಲಿದೆ.

ಗೊಂಬೆಯಾಟದ ಮೂಲ ಇದೇ ದೇಶವೆಂದು ನಿಶ್ಚಿತವಾಗಿ ಹೇಳಲಿಕ್ಕಾಗುವುದಿಲ್ಲ. ತೀರ ಪ್ರಾಚೀನ ಕಾಲದಿಂದಲೂ ಚೀನೀಯರ ಧಾರ್ಮಿಕ ವಿಧಿಗಳಲ್ಲಿ, ಭಾರತೀಯರ ಮಾಯಾವಿದ್ಯೆಯಲ್ಲಿ, ಇಜಿಪ್ತ ಗೋರಿಗಳಲ್ಲಿ ಗೊಂಬೆಗಳಿದ್ದುವೆಂದು ತಿಳಿಯುತ್ತದೆ. ‘ಸೂತ್ರದ ಗೊಂಬೆ’, ‘ಬೊಂಬೆಯಾಟ’ ಮುಂತಾಗಿ ರತ್ನಾಕರವರ್ಣಿ, ಕನಕದಾಸರಲ್ಲಿ ಉಲ್ಲೇಖಗಳು ದೊರೆಯುತ್ತವೆ. ಕ್ರಿ.ಶ. ೧೪೭೦, ೧೫೨೧ರ ಕೆಲವು ಶಾಸನಗಳಿಂದ ವಿಜಯನಗರದ ಕಾಲಕ್ಕೆ ಗೊಂಬೆಯಾಟ ತುಂಬ ಜನಪ್ರಿಯವಾಗಿದ್ದಿತೆಂದು ತಿಳಿಯುತ್ತದೆ. ಕೆಲವು ವಿದ್ವಾಂಸರು ಗೊಂಬೆಯಾಟ ತೀರ ಪ್ರಾಚೀನವಾದ ಪ್ರಕಾರವಾಗಿದ್ದು ಸಂಸ್ಕೃತ ನಾಟಕದ ಮೂಲ ಇದೇ ಆಗಿರಬೇಕೆಂದು ಊಹಿಸಿದ್ದಾರೆ. ಮಹಾಭಾರತ, ಕಥಾಸರಿತ್ಸಾಗರ, ಬೃಹತ್ಕಥಾ, ಬಲರಾಮಾಯಣಗಳಲ್ಲಿ ಇದರ ಉಲ್ಲೇಖಗಳು ಇವೆ. ಶಂಕರ ಪಾಂಡುರಂಗ ಪಂಡಿತನ ಪ್ರಕಾರ ಆಗಿನ ಕಾಲದಲ್ಲಿ ಮರಾಠಾ, ಕರ್ನಾಟಕ ಪ್ರದೇಶಗಳಲ್ಲಿ ಊರೂರು ಸಂಚರಿಸುವ ಗೊಂಬೆಯಾಟ ಮೇಳಗಳಿದ್ದುವೆಂದು, ಹಳ್ಳಿಗರಿಗೆ ಇದೊಂದೇ ಪರಿಚಯವಿದ್ದ ಪ್ರಕಾರವಾಗಿದ್ದಿತೆಂದೂ ಹೇಳುತ್ತಾನೆ. ಕಟ್ಟಿಗೆ ಅಥವಾ ಕಾಗದದಲ್ಲಿ ಮಾಡಿದ ಗೊಂಬೆಗಳನ್ನು ಉಪಯೋಗಿಸುತ್ತಿದ್ದು ನಿರ್ದೇಶಕನ-ಅವನೇ ಸೂತ್ರಧಾರ- ಇಚ್ಛೆಯಂತೆ ಅವು ನರ್ತಿಸಬಲ್ಲುವಾಗಿದ್ದುವೆಂದೂ, ಇಲ್ಲಿಂದಲೇ ಸೂತ್ರಧಾರ, ಸ್ಥಾಪಕ ಮುಂತಾದ ಹೆಸರುಗಳು-ವಿದೂಷಕನು ಕೂಡ-ಸಂಸ್ಕೃತ ನಾಟಕಕ್ಕೆ ಹೋಗಿರಬೇಕೆಂಬ ಅಭಿಪ್ರಾಯವಿದೆ. ನಾಟಕದ ವಸ್ತು, ಅನುಕರಣದ ಸ್ವಾಭಾವಿಕ ಪ್ರವೃತ್ತಿಗಳನ್ನು ಮನದಂದರೆ ನಾಟಕದಿಂದ ಇದು ಹುಟ್ಟಿತೆಂಬ ಮಾತೇ ಹೆಚ್ಚು ಗಟ್ಟಿಯಾಗಿರುವಂತೆ ತೊರುತ್ತದೆ.

ಇದೇ ಸಂದರ್ಭದಲ್ಲಿ ತೊಗಲುಗೊಂಬೆಯ ಆಟವನ್ನೂ ನೋಡಬಹುದಾಗಿದೆ. ಗೊಂಬೆಯಾಟ ಬ್ರಾಹ್ಮಣರನ್ನು ಸೇರಿ ಮಾರ್ಗ ಹಿಡಿದರೆ ತೀರ ಕೆಳಮಟ್ಟದ ಜಾನಪದಕ್ಕೆ ತೊಗಲುಗೊಂಬೆಯ ಆಟ ಆ ತೃಪ್ತಿಯನ್ನು ನೀಡಿದೆ. ಗೊಂಬೆಯಾಟದ ಗೊಂಬೆಗಳು ಕಟ್ಟಿಗೆಯವಾಗಿದ್ದು ಉದ್ದಲ ಎತ್ತರಗಳನ್ನೊಳಗೊಂಡಿದ್ದರೆ ಆ ಗೊಂಬೆಗಳು ತೊಗಲಿನ ಮೇಲೆ ಬರೆದ ಆಕೃತಿಯಾಗಿ ಕತ್ತರಿಸಿದವುಗಳಾಗಿರುತ್ತವೆ. ಅವಯವಗಳನ್ನು ಬೇರೆಯಾಗಿಯೇ ಮಾಡಿ ಚಲಿಸಬರುವಂತೆ ದೇಹಕ್ಕೆ ಅಂಟಿಸಿರುತ್ತಾರೆ. ಈ ಗೊಂಬೆಗಳಿಗೆ ಸಾಮಾನ್ಯವಾಗಿ ಕಾಡುತೋರಿಕೆಯಿರುತ್ತದೆ. ಎರಡೂ ಕಡೆಗೆ ಬಣ್ಣ ಬಳಿದಿದ್ದು ಹಗಲು ಹೊತ್ತಿನಲ್ಲಿ ಆ ಬಣ್ಣ ಕಾಣಿಸುವುದಿಲ್ಲ. ರಾತ್ರಿ ಬೆಳಕಿನ ಸ್ಪರ್ಶವಾಗುವುದಷ್ಟೇ ತಡ ಅವುಗಳ ಬಣ್ಣದ ನೆರಳು ಅರಿವೆಯ ಮೇಲೆ ಮೂಡುತ್ತದೆ. ಇದಕ್ಕಾಗಿ ತೊಗಲನ್ನು ಅತ್ಯಂತ ತೆಳುವಾಗಿಸಿ ಪಾರದರ್ಶಕ (transparent) ವಾಗಿಸುತ್ತಾರೆ.

ಕಿಳ್ಳಿಕೇತರೆಂಬ ಜನ ಈ ಆಟವನ್ನು ವಂಶಪರಂಪರೆಯಿಂದ ಆಡುತ್ತಾರೆ. ಆಟ ನಡೆದಾಗ ಇಡೀ ಕುಟುಂಬವೇ ಅದರಲ್ಲಿ ಪಾಲುಗೊಳ್ಳುತ್ತದೆ. ನಾಲ್ಕದಿಂದ ಐದು ಅಡಿ ಚೌರಸಾಕಾರದ ಸ್ಥಳದಲ್ಲಿ ಪ್ರೇಕ್ಷಕರತ್ತ ಒಂದು ಬಿಳಿ ಪರದೆಯನ್ನು ಕಟ್ಟುತ್ತಾರೆ. ಅದರೊಂದು ಪಕ್ಕದಲ್ಲಿ ಡೋಲಿನವನೂ ಇನ್ನೊಂದರಲ್ಲಿ ಸೂತ್ರಧಾರನೂ ಇರುತ್ತಾರೆ. ಹಿಂದೊಂದು ದೊಡ್ಡ ದೀಪವನ್ನಿಟ್ಟಿದ್ದು, ದೀಪ ಮತ್ತು ಪರದೆಗಳ ಮಧ್ಯದಲ್ಲಿ ಗೊಂಬೆಗಳು ಓಡಾಡುತ್ತವೆ. ಗೊಂಬೆಗಳ ಚಲನವಲನಗಳನ್ನು ನಿಯಂತ್ರಿಸಲು ಅವುಗಳಿಗೂ ಅಂಗಾಂಗಗಳಿಗೂ ದಾರ ಅಥವಾ ತೆಳುವಾದ ಕಟ್ಟಿಗೆಯನ್ನು ಕಟ್ಟಿ ಕೈಯಲ್ಲಿ ಹಿಡಿದಿರುತ್ತಾರೆ. ಅವುಗಳ ಬಣ್ಣಬಣ್ಣದ ನೆರಳು ಪರದೆಯ ಮೇಲೆ ಬೀಳುತ್ತಲೂ ಬಣ್ಣದ ಲೋಕ ತೆರೆದುಕೊಳ್ಳುತ್ತದೆ. ಹಾಡು ಮತ್ತು ಗಂಡುಪಾತ್ರಗಳ ಮಾತುಗಳನ್ನು ಕಿಳ್ಳಿಕೇತ ಆಡಿದರೆ, ಹೆಣ್ಣುಪಾತ್ರಗಳ ಮಾತನ್ನು ಆತನ ಹೆಂಗಸೇ ಹೇಳುತ್ತಾಳೆ. ಮೇಳಗೀತ, ಕಾಳಗದ ಕಿರುಚುವಿಕೆ, ದೊಡ್ಡಾಟದಂಥ ಒತ್ತಕ್ಷರದ ಉದ್ಗಾರ, ಸಂಗೀತಗಳು ಅತ್ಯಂತ ಉಚಿತವಾದ ಹಿನ್ನೆಲೆಯೊದಗಿಸುತ್ತವೆ. ಮಹಾಭಾರತದ ಸಂದರ್ಭಗಳೇ ಇದಕ್ಕೆ ಇತಿವೃತ್ತಗಳಾಗಿದ್ದು ನಾಲ್ಕರಿಂದ ಆರು ತಾಸಿನ ತನಕ ಪ್ರಯೋಗ ನಡೆಯುತ್ತದೆ. ದಾಸರಾಟದಂತೆ ಮೊದಲು ಗಣೇಶ, ಸರಸ್ವತಿಸ್ತೋತ್ರಗಳಾಗಿ ಆಮೇಲೆ ಕೃಷ್ಣ-ಗೊಲ್ಲತಿಯರ ಸರಸ ನಡೆಯುತ್ತದೆ. ಅವರಿಬ್ಬರೂ ಒಳಗೆ ಹೋದರೆ ಪೂರ್ವರಂಗ ಮುಗಿದಂತಾಯಿತು. ಹಿನ್ನೆಲೆಯ ಸಂಗೀತಕ್ಕಾಗಿ ಡೋಲು, ತಾಳಗಳನ್ನು ಉಪಯೋಗಿಸುತ್ತಾರೆ. ಯುದ್ಧ ನಡೆದಾಗ ಬಿದಿರು ಲಳಿಗೆಯ ವಿಶೇಷ ವಾದ್ಯವೊಂದನ್ನೂದುತ್ತಾರೆ. ಲಳಿಗೆಯ ಒಂದು ಬದಿಗೆ ಜೇಡನ ದಟ್ಟ ಬಲೆ ಅಂಟಿಸಿ ಮಧ್ಯದ ತೂತಿನಿಂದ ಊದುತ್ತಾರೆ. ಯುದ್ಧ ನಡೆದಾಗ ಅದು ತೀರ ಪರಿಣಾಮಕಾರಕ ಧ್ವನಿ ಕೂಡುತ್ತದೆ.

ಈಗಲೂ ಉತ್ರರ ಕರ್ನಾಟಕದ ಕೆಲ ಹಳ್ಳಿಗಳಲ್ಲಿ, ಕೋಲಾರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇದು ಜನಪ್ರಿಯವಾದ ಆಟವಾಗಿದೆ. ಕಾಲಕಾಲಕ್ಕೆ ಮಳೆ ಬರಬೇಕಾದರೆ ಈ ಆಟ ಅವಶ್ಯವೆಂದು ನಂಬಿದವರು ಈಗಲೂ ಇದ್ದಾರೆ. ಹನುಮಂತದೇವರ ಗುಡಿಯ್ಲಿ ಕಾರ್ತಿಕೋತ್ಸವದ ಕಾಲಕ್ಕೆ ತಪ್ಪದೆ ಆಡುವ ಪರಿಪಾಠ ಇನ್ನೂ ಕೆಲವು ಹಳ್ಳಿಗಳಲ್ಲಿದೆ. ಮಳೆಗೆ ಸಂಬಂಧಿಸಿ ಧಾರ್ಮಿಕ ವಿಧಿಯಾಗಿ ಆಡುವ ಈ ಆಟ ತೀರ ಪ್ರಾಚೀನವಾದುದೆಂದು ತಿಳಿಯುತ್ತದೆ. ಕೀಳುಕಥಾ ಎಂಬುದರಿಂದ ಬಂದ ಈ ಜನಾಂಗದ ಹೆಸರು ಇದರ ಪ್ರಾಚೀನತೆಯ ಜೊತೆಗೆ ಜಾನಪದ ಸಂಬಂಧವನ್ನೂ ಸೂಚಿಸುತ್ತದೆ.

ಸಂಸ್ಕೃತನಾಟಕಕ್ಕೆ ಕೆಲವರು ಹೇಳುವಂತೆ, ಬಹುಶಃ ಮೂಲವೆಂದ ನೆರಳು-ನಾಟಕ (shadow-play) ಕ್ಕೂ ಇವಕ್ಕೂ ಸಂಬಂಧವಿರಬಹುದೆ? ದೊರೆತ ಉಲ್ಲೇಖಗಳ ವರ್ಣನೆ ಈ ಕಿಳ್ಳೆಕೇತರಾಟದ ಪ್ರಯೋಗವನ್ನು ಬಹುಮಟ್ಟಿಗೆ ಹೋಲುತ್ತದೆ. ‘ಮಹಾಭಾಷ್ಯ’ ಶೌಭನಿಕರು ನೆರಳು-ಆಕೃತಿಯ ಚಲನವಲನಗಳನ್ನು ಕಥೆಯಾಗಿ ಪ್ರೇಕ್ಷಕರಿಗೆ ವಿವರಿಸುತ್ತಿದ್ದರೆಂದು ಅಭಿಪ್ರಾಯವಿದೆ. ಸೀತಾಬೆಂಗಾ ಗವಿಯಲ್ಲಿ ನೆರಳು-ನಾಟಕದ ಪರದೆಯನ್ನು ಸೂಚಿಸುವ ಗೀರುಗಳಿವೆ. ಪ್ರಾಚೀನ ಸಾಹಿತ್ಯದಲ್ಲಿ ಛಾಯಾನಾಟಕಗಳು (ನೆರಳು-ಸ್ವರೂಪದ ನಾಟಕ) ಉಲ್ಲೇಖಗಳಿದ್ದು ಅಂಥ ನಾಟಕಗಳೂ ಈಗ ಸಿಕ್ಕಿವೆ. ಮೇಘಪ್ರಭಾಚಾರ್ಯನ ‘ಧರ್ಮಾಭ್ಯುದಯ’ ಅಥವಾ ‘ಛಾಯಾನಾಟ್ಯಪ್ರಬಂಧ’ದ ನಿರ್ದೇಶನದಲ್ಲಿ ಅರಸನಿಗೆ ಸನ್ಯಾಸಿಯಾಗಬೇಕಾದಾಗ ತೆರೆಯ ಹಿಂದುಗಡೆ ಆ ಸ್ವರೂಪದ ಗೊಂಬೆಯನ್ನು ಇಡಬೇಕೆಂದಿದೆ. ಮಹಾನಾಟಕವೂ ಇದೇ ಜಾತಿಗೆ ಸೇರುತ್ತದೆ. ಸಂಸ್ಕೃತನಾಟಕಕ್ಕೆ ಕೆಲವರು ಅಭಿಪ್ರಾಯಪಡುವಂತೆ ಇವೇ ಮೂಲವಾಗಿರಲಿಕ್ಕಿಲ್ಲವಾದರೂ ಇಂಥ ಪ್ರಕಾರವೊಂದು ಪ್ರಾಚೀನಕಾಲದಿಂದ ಬಳಕೆಯಲ್ಲಿದ್ದಿತೆಂದು ಗೊತ್ತಾಗುತ್ತದೆ. ಇದು ಜಾನಪದ-ಕಲೆಯಾಗಿಯೇ ಬೆಳೆದು ಇನ್ನೂ ಜಾನಪದಕ್ಕೇ ಪರಿಮಿತವಾದ ಕಲೆಯಾಗಿದೆಯೆಂದು ಹೇಳಬಹುದು.

ಉತ್ತರ ಕರ್ನಾಟಕದ ಅನೇಕ ಕುಣಿತಗಳಲ್ಲಿ ನಿಶ್ಚಿತವಾದ ಇತಿವೃತ್ತಗಳಿದ್ದು ಪ್ರಾರಂಭದಿಂದ ಕೊನೆಯವರೆಗೆ ಅಳೆದಿಟ್ಟಂಥ ವ್ಯವಸ್ಥೆಯಿರುತ್ತದೆ. ‘ಪರ್ವಂತರ (ಪ್ರಮಥರ) ಕುಣಿತ’ ಇಂಥದು. ಗೊಡಚಿ ವೀರಭದ್ರದೇವರು ಮೂಲದೇವತೆಯಾದ ಕುಟುಂಬಗಳ್ಲಿ ಮದುವೆ ನಡೆದಾಗ ಗುಗ್ಗಳ ಹಾಕಿದ ಐದು ಮಣ್ಣಿನ ಪಾತ್ರೆಗಳನ್ನು ಐವರು ಹಿಡಿದಿರುತ್ತಾರೆ. ಈ ಐವರೂ ತ್ರಿಶೂಲ ಹಿಡಿದ ಶಂಖದಯ್ಯನಂತೆ ಉಡುಪು ಧರಿಸಿ ಸಂಬಾಳದ ತಾಳಕ್ಕನುಗುಣವಾಗಿ ನರ್ತಿಸುತ್ತಾರೆ. ವೀರಭದ್ರದೇವರ ಸಾಹಸಗಳನ್ನು ಕುರಿತಾಗಿ ಬೆಡಗಿನಲ್ಲಿ ಪ್ರಶ್ನೋತ್ತರಿಸುತ್ತಾರೆ. ಅಲ್ಲಿಯೇ ವಿದೂಷಕನೂ ಇದ್ದು ಆಗೀಗ ಅವರ ಸಂಭಾಷಣೆಯನ್ನು ಹಾಸ್ಯಕ್ಕೆ ತಿರುಗಿಸುತ್ತಾನೆ. ಇಂಥದೇ ಇನ್ನೊಂದು ನೃತ್ಯ ‘ವೀರಮುಖ’. ಕ್ಷತ್ರಿಯರ ಮದುವೆ ನಡೆದಾಗ ಇದನ್ನು ಕುಣಿಯುತ್ತಾರೆ. ಯುದ್ಧಮಾಡಿ ಕನ್ಯಾಪಹರಣಮಾಡುವುದೇ ಇದರ ವಸ್ತು. ಈ ಕುಣಿತದಿಂದ ಶೃಂಗಾರ-ವೀರ-ರಸಗಳ ತತ್‌ಕ್ಷಣದ ಒರಟು ಸ್ಪರ್ಶವನ್ನು ಪಡೆಯಬಹುದು. ಇದಲ್ಲದೆ ಯಲ್ಲಮ್ಮನ ಕುಣಿತ, ಒಗ್ಗರ ಕುಣಿತ, ಬೀರದೇವರ ಕುಣಿತ ಅಥವಾ ದತ್ತಿ ಆಟ, ಗೊಂದಲಿಗರಾಟ, ಹಗಲು ವೇಷದ ಆಟ- ಇವುಗಳಲ್ಲೆಲ್ಲ ನಾಟಕದ ಬಹಳಷ್ಟು ಅಂಶಗಳನ್ನು ಕಂಡುಕೊಳ್ಳಬಹುದು. ಬಯಲಾಟದ ಶ್ರೀಮಂತಿಕೆಗೆ ಇವೂ ತಮ್ಮ ಕೊಡುಗೆಯನ್ನು ಕೊಟ್ಟಿರಬೇಕು. ಆದರಿವು ಬಯಲಾಟದ ಉದ್ದೇಶ, ಕಾರ್ಯಕಲಾಪಗಳನ್ನು ಹೊಂದಿಲ್ಲವಾದ್ದರಿಂದ ಪ್ರಮುಖ ಪ್ರಕಾರಗಳನ್ನಷ್ಟೇ ಕುರಿತು ಯೋಚಿಸಿದ್ದಾಗಿದೆ.

* * *

 


* ಇವನನ್ನು ಕಾರಣಾಂತರದಿಂದ ಬ್ರಿಟಿಷ್ ಸರ್ಕಾರದವರು ಸೆರೆಮನೆಯಲ್ಲಿ ಬೇಡಿ ಹಾಕಿ ಇಟ್ಟಿದ್ದರೆಂದೂ ಆಗ ಇವನು ಕೃಷ್ಣಭಕ್ತಿಯಿಂದ ಪ್ರೇರಿತನಾಗಿ ಪಾರಿಜಾತವನ್ನು ಹಾಡು-ಹಾಡುತ್ತಲೇ ರಚಿಸಿದನೆಂದೂ ಆಗ ಬೇಡಿಗಳೆಲ್ಲ ಕಳಚಿದುವೆಂದೂ ವದಂತಿಯಿದೆ.

* ಇದನ್ನು ಬರೆದವರ ಹೆಸರು ಗ್ರಂಥದಲ್ಲಿದೆ. ಶ್ರೀಸಹಿತ ವೆಂಕಟೇಶ ಕೊಲ್ಲಾಪುರ ದೇವಿ, ಕಲ್ಲೋಳ್ಳೀಶರಿಗೆ ಪ್ರಾರಂಭದಲ್ಲಿ ವಂದನೆಯಿರುವುದರಿಂದ ಗೋಕಾಕದ ಸಮಸಮೀಪದವರೇ-ಬಹುಶಃ ಅನಂತಾಚಾಯ್ಯರೇ-ಬರೆದಿರಬಹುದಾಗಿದೆ

* ಬರಬೇಕಿದ್ದ ಪಾತ್ರ ಬೇಗನೆ ಬರದಿದ್ದಲ್ಲಿ ಸಾರಥಿ ನೇರವಾಗಿ ಪ್ರೇಕ್ಷಕರೊಂದಿಗೇ ಸಂಭಾಷಣೆ ಪ್ರಾರಂಭಿಸುತ್ತಾನೆ. ಪ್ರೇಕ್ಷಕರಲ್ಲಿನ ಯಾರಾದರೂ ‘ಯಾಕೋ ಕಾಮಾ’ ಎಂದರೆ ‘ಏನೋ ಮಾಮಾ’ ಎನ್ನುತ್ತಾನೆ. ಕೆಲವು ಪಾತ್ರಗಳು ಇವನ ಕಟುಹಾಸ್ಯಕ್ಕೆ ಸಿಕ್ಕಾಗ ತಮ್ಮ ಪಾತ್ರದ ಗಾಂಭೀರ್ಯವನ್ನೂ ಮರೆತು ಅಗ್ಗವಾಗುತ್ತವೆ:

ಸಾರಥಿ: ಎಲೆ ಭೂಪ-ಸುಡುಗಾಡಗಟ್ಯಾಗಿನ ದೀಪ

ಬುದ್ಧಿ-ಅಟ್ಟದ ಕೆಳಗೆ ಬಿದ್ದಿಗಿದ್ದಿ

ರಾಜ: ಎಲೈ ಸಾರಥಿ ಹೊಲಸ ನಾರತಿ

ಬುಡಕ ಬೀಳತಿ ಏನ ಹೇಳತಿ |

+ ಬಬ್ರುವಾಹನ ಕಾಳಗದಲ್ಲಿ ಭೀಮ-ಸಾರಥಿಯರ ಸಂವಾದ:

ಸಾರಥಿ: ಅಯ್ಯಾ ನೀನು ಧಾರು?

ಭೀಮ: ಎಲೈ ರಂಗಧ್ವಜ್ರಮಣಿಯೇ, ಗಾಂಗೇಯಸಂಘಟಿತ ಶೃಂಗಾರಸಭಾಂಗಣ ಪ್ರಾಂಗಣದೊಳ್‌ಅಂಗಜಪಿತನ ಹಿಂಗದೆ ಧ್ಯಾನಿಸುವ ಮಂಗಳಾತ್ಮಕ ನೀನು ಧಾರು?

ಸಾರಥಿ: ಅಯ್ಯಾ ನೀನು ಧಾರು?

ಭೀಮ: ಧ್ರಮಗುಣಕಲಾಪ, ಭೂಪಕುಲದೀಪ, ಸತ್ಪ್ರಾತಾಪ, ಛಪ್ಪನ್ನಾರು ದೇಶದೊಳ್ ಕಪ್ಪುಕಾಣಿಕೆಯಂ ಮೆಪ್ಪುಗೊಂಡಿದ್ದ ರಾಯರ ತಲೆಚಿಪ್ಪುಗಳು ಗಪ್ಪನೆ ಉದುರುವಂತೆ ಚಪ್ಪಳಿಸಿ ಕೆಡಗಿದ ಕಡುಸೌರ್ಯಧೀರನಲ್ಲದೆ ಹೆಕ್ಕಳಿ ಬಲದಿ ಕದನಕ್ಕೆ ಬಂದ ಬಕ ಹಿಡಿಂಬ ರಕ್ಕಸರ ಕಕ್ಕಿಸಿ ಧಿಕ್ಕರಿಸಿ, ಒಕ್ಕಲಿಕ್ಕಿ ದಿಕ್ಕುಪಾಲ್ ಮಾಡಿಕ್ಕಿದ ಪ್ರಚಂಡ ಭಂಡನೋದ್ದಾಮ ಹರಿಬಲವಿರಾಮ ಭೀಮಶೇನನೆಂದು ಢಣ ಢಣಲ್ ಎಂದು ಜಯಭೇರಿಯಂ ಬಡಿಸಲೈ ಧೂತ-ಸೌಖ್ಯಪ್ರದಾತ.

* ರಾಜಸ್ತಾನದ ಗೊಂಬೆಯಾಟದಲ್ಲಿ ಸೂತ್ರಧಾರ, ಆತನ ಹೆಂಡತಿ ಇಬ್ಬರೇ ಇರುತ್ತಾರೆ. ಸೂತ್ರಧಾರ ಬಾಯಿಯಿಂದ ಪಕ್ಷಿಧ್ವನಿಯಂಥ ಶಬ್ದ ಹೊರಡಿಸಿದಾಗ ಆತನ ಹೆಂಡತಿ ಅದಕ್ಕೆ ಅರ್ಥ ಹಚ್ಚಿ ಸಂಭಾಷಣೆ ಹೆಣೆಯುತ್ತಾಳೆ. ಕರ್ನಾಟಕದಲ್ಲಿ ರಾಮಾಯಣ ಮಹಾಭಾರತದ ಅನೇಕ ಪ್ರಸಂಗಗಳನ್ನಾಡಿದರೆ ರಾಜಸ್ತಾನದಲ್ಲಿ ವೀರ ಶೂರರ ಕಥೆಗಳನ್ನೇ ಆಡುತ್ತಾರೆ. ಗೊಂಬೆಯಾಟದ ಈ ಜನರಿಗೆ ರಾಜಸ್ತಾನದಲ್ಲಿ ‘ಭಾಟ’ರೆಂದೆನ್ನುತ್ತಾರೆ.