ನಾನು ಸಂಗೀತ ಶಾಸ್ತ್ರ ಬಲ್ಲವನಲ್ಲ. ಆ ಶಾಸ್ತ್ರದ ಪರಿಭಾಷೆ ಕೂಡ ಗೊತ್ತಿಲ್ಲ. ಇರುವ ಒಂದೇ ಒಂದು ಧೈರ್ಯವೆಂದರೆ ಬಯಲಾಟಗಳ ಸಂಗೀತಗಾರರೂ ನನ್ನ ಹಾಗೆ ಶಾಸ್ತ್ರ ತಿಳಿದವರಲ್ಲ. ಬಯಲಾಟಗಳ ಪ್ರಯೋಗಗಳನ್ನು ಇಡಿಯಾಗಿ ನೋಡಿದಾಗ ಒಟ್ಟು ಪರಿಣಾಮಕ್ಕೆ ಸಂಗೀತ ಎಷ್ಟು ಮತ್ತು ಹೇಗೆ ಪ್ರಯೋಜನ ನೀಡುತ್ತದೆ ಎಂದು ಹುಡುಕುವುದೇ ನನ್ನ ಉದ್ದೇಶ.

ನನ್ನ ಎಣಿಕೆಯ ಪ್ರಕಾರ ನಮ್ಮಲ್ಲಿ ಏಳು ಪ್ರಕಾರದ ಬಯಲಾಟಗಳಿವೆ:

೧) ದಾಸರಾಟ, ೨) ಸಣ್ಣಾಟ-ಇದರಲ್ಲೇ ವೈಷ್ಣವ ಸಣ್ಣಾಟ, ಶೈವ ಸಣ್ಣಾಟ ಹಾಗೂ ಸಾಮಾಜಿಕ ಸಣ್ಣಾಟಗಳೆಂದು ಮೂರು ವಿಧಗಳಿವೆ. ೩) ಪಾರಿಜಾತ, ೪) ದೊಡ್ಡಾಟ, ೫) ಯಕ್ಷಗಾನ, ೬) ತೊಗಲು ಬೊಂಬೆಯಾಟ, ೭) ಸೂತ್ರದ ಬೊಂಬೆಯಾಟ.

ಈ ಎಲ್ಲ ಪ್ರಕಾರಗಳಲ್ಲಿ ಬರುವ ಶಿಷ್ಟತೆಯನ್ನು ಗಮನಿಸಿ ತೊಗಲು ಗೊಂಬೆಯಾಟದ ಸಂಗೀತವನ್ನು ದಾಸರಾಟದ ಸಂಗೀತದೊಂದಿಗೇ ಅಧ್ಯಯನ ಮಾಡಬಹುದು.

ಈ ಏಳು ಪ್ರಕಾರಗಳ ಸಂಗೀತಕ್ಕೆ ಕೆಲವು ಸಾಮಾನ್ಯ ಲಕ್ಷಣಗಳಿವೆ; ಉದ್ದೇಶಗಳಿವೆ;

೧) ಸಂಗೀತ ಹಾಗೂ ಸಾಹಿತ್ಯಗಳು ಬೇರ್ಪಡದಷ್ಟು ಭದ್ರವಾಗಿ ಪರಸ್ಪರ ಬೆಸೆದುಕೊಂಡಿರುತ್ತವೆ. ಕಲಿಯುವಾಗ ಸಾಹಿತ್ಯವನ್ನು ಮೊದಲು ಕಂಠಪಾಠ ಮಾಡಿ ಆಮೇಲೆ ಯಾರೂ ಸಂಗೀತ ರೂಢಿಸಿಕೊಳ್ಳುವುದಿಲ್ಲ. ಬರೆಯುವವರು ಕೂಡ ಮೊದಲು ಛಂದಸ್ಸಿನಲ್ಲಿ ಬರೆದು ಧಾಟಿ ಸೇರಿಸುವ ಅವಕಾಶವನ್ನು ಇನ್ನೊಬ್ಬರಿಗೆ ಬಿಡುವುದಿಲ್ಲ. ಶಬ್ದ ಹಾಗೂ ಸಂಗೀತ ಎರಡರಲ್ಲೂ ಏಕಕಾಲಕ್ಕೆ ಯೋಚಿಸುತ್ತ ರಚಿಸಿರುತ್ತಾರೆ. ಬಯಲಾಟಗಳ ಬಹುತೇಕ ಕವಿಗಳು ನಿರ್ದೇಶಕರೂ (ಸೂತ್ರಧಾರ) ಆಗಿರುವುದರಿಂದ ಸಾಹಿತ್ಯ ಸಂಗೀತಗಳು ಒಟ್ಟುಗೂಡಿ ರಸಾಸ್ವಾದನೆಗೆ ಒದಗುವ ಹಾಗೆ ನಿಯೋಜಿಸಲ್ಪಟ್ಟಿರುತ್ತವೆ.

೨) ಆ ಹಾಡಾಗಲಿ ಅಥವಾ ಆ ಸಂಗೀತವಾಗಲಿ ನಿರ್ದಿಷ್ಟ ಸಂದರ್ಭಕ್ಕಾಗಿಯೇ ಹುಟ್ಟಿಕೊಂಡಿರುತ್ತವೆ. ಆ ಸಂದರ್ಭದಿಂದ ಅವುಗಳನ್ನು ಹೊರತುಪಡಿಸಿದರೆ ಅದಕ್ಕೆ ಅರ್ಥವೇ ಇರುವುದಿಲ್ಲ.

೩) ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಜನಪದ ಸಾಹಿತ್ಯದಲ್ಲಿರುವಂತೆ ಸಂಗೀತದಲ್ಲಿಯೂ ಆಯಾ ಪ್ರಕಾರಕ್ಕೆ ವಿಶಿಷ್ಟವಾದ ಫಾರ್ಮುಲಾಗಳಿರುತ್ತವೆ. ದೊಡ್ಡಾಟ, ಯಕ್ಷಗಾನ ಹಾಗೂ ಸೂತ್ರದ ಗೊಂಬೆಯಾಟಗಳಂಥ ಶಿಷ್ಟ ಪ್ರಕಾರಗಳಲ್ಲಿ ಹೊಸ ಫಾರ್ಮುಲಾಗಳು ಸೇರಿಕೊಳ್ಳುವ ಅವಕಾಶ ಕಡಿಮೆ. ಯಾಕೆಂದರೆ ಇವುಗಳ ವಸ್ತು ರಾಮಾಯಣ, ಭಾರತ, ಭಾಗವತಗಳಿಗೆ ಸಂಬಂಧಪಟ್ಟದ್ದಿದ್ದು ಅಲ್ಲಿಯ ಭಾವಭಾವನೆಗಳು ನಿರ್ದಿಷ್ಟವಾಗಿರುತ್ತವೆ. ಹಿಟ್ಲರನ ಬಗ್ಗೆ ಒಂದು ದೊಡ್ಡಾಟವನ್ನೇನೋ ಆಡಿದರು. ಆದರೆ ಹಿಟ್ಲರನ ಕಾಳಗಕ್ಕೂ ರಾಮಾಯಣ ಭಾರತಗಳ ಕಾಳಗಕ್ಕೂ ವ್ಯತ್ಯಾಸವಿರಲಿಲ್ಲವಾದ್ದರಿಂದ ಎರಡರ ಅನುಭವಗಳನ್ನು ಒಂದೇ ಎಂಬಂತೆ ಪರಿಭಾವಿಸಿದ್ದರಿಂದ ಹೊಸ ಸಂಗೀತದ ಫಾರ್ಮುಲಾಗಳ ಅಗತ್ಯ ಅವನಿಗನ್ನಿಸಲಿಲ್ಲ. ಅಂದರೆ ಹಿಟ್ಲರ್ ರಾವಣನಂತೇ ಕುಣಿಯುತ್ತಿದ್ದನು, ಹಾಡುತ್ತಿದ್ದನು ಮತ್ತು ಮಾತನಾಡುತ್ತಿದ್ದನು.

ಶಿಷ್ಟತೆಯಿಲ್ಲದ ಸಣ್ಣಾಟ ದಾಸರಾಟಗಳಲ್ಲಿ ಮಾತ್ರ ಹೊಸ ಫಾರ್ಮುಲಾಗಳಿಗೆ ಅವಕಾಶ ಹೆಚ್ಚು. ಜನಪ್ರಿಯ ಸಿನಿಮಾ ಹಾಡುಗಳನ್ನು ಸೇರಿಸಿದ ಉದಾಹರಣೆಗಳು ಇವೆ. ‘ಜಗನ್ಮೋಹಿನಿ’ ಚಿತ್ರದ ‘ಎಂದೋ ಎಂದೋ ನಿನ್ನ ದರುಶನ’, ಎಂಬ ಹಾಡನ್ನು ‘ಸಂಗ್ಯಾಬಾಳ್ಯ’ದಲ್ಲಿ ಗಂಗಿಯ ವಿರಹಗೀತೆಯನ್ನು ಬಳಸಿಕೊಂಡಿದ್ದುಂಟು. ಹಿಂದಿನ ಕವ್ವಾಲಿ ಹಾಡುಗಳನ್ನು ಪಾರಿಜಾತದಲ್ಲಿ ಬಳಸಿದ ಉದಾಹರಣೆಗಳೂ ಇವೆ.

೪) ಬಯಲಾಟಗಳ ಸಂಗೀತ ನೃತ್ಯಗತಿಗೆ ಅನುಕೂಲವಾಗಿಯೇ ಇರುತ್ತದೆ. ಅಥವಾ ನೃತ್ಯದ ಹೆಜ್ಜೆಯ ನಾದವನ್ನು ಮನಸ್ಸಿನಲ್ಲಿಟ್ಟುಕೊಂಡೇ ಹುಟ್ಟಿರುತ್ತದೆ. ಅಲ್ಲದೇ ನೃತ್ಯಕ್ಕಾಗಿಯೇ ಹಾಡಿನ ಕೆಲವು ಭಾಗಗಳನ್ನು ಆಲಾಪದ ಕೆಲವು ಭಾಗಗಳನ್ನು ಮೀಸಲಿಡುವುದುಂಟು. ರಿಪೀಟ್ ಮಾಡುವುದುಂಟು. ಉದಾಹರಣೆಗೆ ‘ಹೋಗಬ್ಯಾಡೋ ಗೋಪಾಲ ಗೋಪಿಯ ತೊರೆದೂ’ ಎಂಬ ಹಾಡನ್ನು ಮೇಳದವರು ಹತ್ತು ಸಲ ರಿಪೀಟ್ ಮಾಡಬಹುದು. ಮತ್ತು ‘ಹೋಗಬ್ಯಾಡೋ’ ಎಂದು ಹಾಡಿದರೆ ಪಾತ್ರಧಾರಿ ರಾಮಾವತಾರ ಅಭಿನಯಿಸಿ ‘ತೊರೆದಾ’ ಎನ್ನುವಲ್ಲಿಗೆ ಮುಗಿಸಬಹುದು ಅಂದರೆ ರಾಮಾವತಾರ ತಾಳಿದ ಕೇಷ್ಣನೇ ಹೋಗಬೇಡ- ಎಂದರ್ಥ. ಹೀಗೆ ಮೇಳದವರು ಹತ್ತು ಸಲ ಹಾಡಿದರೆ ಪಾತ್ರಧಾರಿ ಹತ್ತು ಅವತಾರಗಳನ್ನು ಅಭಿನಯಿಸಬಹುದು.

ಹೀಗೆ ರಿಪೀಟ್‌ ಮಾಡುವುದಕ್ಕೆ ಮುಖ್ಯ ಕಾರಣವೆಂದರೆ ಬಯಲಾಟದ ಪ್ರೇಕ್ಷಕರು ಅಟ್ಟದ ಮೂರು ಕಡೆ ಕೂತಿರುತ್ತಾರೆ. ಅಂದರೆ ರಂಗದ ಒಂದು ಮಗ್ಗಲಿಗೆ ಹಾಡಿನ ಹಾಡಿನ ತುಂಡನ್ನು, ಮಾಡಿದ ನೃತ್ಯದ ತುಂಡನ್ನು ಇನ್ನೊಂದು ಮಗ್ಗಲಿನ ಪ್ರೇಕ್ಷಕರಿಗೂ ತೋರಿಸಬೇಕಾಗುತ್ತದೆ.

೫) ಮೇಳದ ಕಲ್ಪನೆ ಉತ್ತರ ಕರ್ನಾಟಕದಲ್ಲಿರುವಂತೆ ಯಕ್ಷಗಾನ, ಸೂತ್ರದ ಗೊಂಬೆಯಾಟಗಳಲ್ಲಿ ಬೆಳವಣಿಗೆಗೊಂಡಿಲ್ಲ. ಉತ್ತರ ಕರ್ನಾಟಕದ ಬಯಲಾಟಗಳಲ್ಲಿ ಮೇಳ ಎರಡು ಭಾಗವಾಗಿದ್ದು ಸೂತ್ರಧಾರ (ಮೇಟಿ ತಾಳ) ಮತ್ತು ಹಾಡುತ್ತಿರುವ ಪಾತ್ರಧಾರಿ ಇವರು “ಮುಮ್ಮೇಳ”ವಾದರೆ ಇವರ ಹಿಂದೆ ನಿಂತು ಅದನ್ನೇ ರಿಪೀಟ್ ಮಾಡುವವರು “ಹಿಮ್ಮೇಳ” ವಾಗುತ್ತಾರೆ. ಈ ಹಿಮ್ಮೇಳ ದಾಸರಾಟವಾದರೆ ಮೂರು ಜನ, ಸಣ್ಣಾಟವಾದರೆ ಐದು ಜನ, ದೊಡ್ಡಾಟವಾದರೆ ಏಳು ಜನ ಗುಂಪಾಗಿ ನಿಂತಿರುತ್ತಾರೆ. ದೊಡ್ಡಾಟದ ಏಳು ಜನರು ಅನುಕ್ರಮವಾಗಿ ಸರಿಗಮಪದನಿಯ ಶೃತಿಯಲ್ಲಿಯೇ ಹಾಡುವದೊಂದು ವಿಶೇಷ. ಇವರು ರಿಪೀಟ್ ಮಾಡುತ್ತಿದ್ದಾಗ ಪಾತ್ರಧಾರಿ ನೃತ್ಯ ಮಾಡುತ್ತಾನೆ. ವಾದ್ಯಗಳ ಬದಲು (ಅಥವಾ ವಾದ್ಯಗಳೇ ಇಲ್ಲದಿದ್ದಾಗ) ಮನುಷ್ಯನ ಸ್ವರಗಳನ್ನೇ ನಿಯೋಜಿಸಿಕೊಂಡ ದೊಡ್ಡಾಟದ ಸಂಗೀತ ಕಲ್ಪನೆ ತುಂಬ ಅದ್ಭುತವಾದುದಾಗಿದೆ. ಅದರ ಪ್ರಾಚೀನತೆಗೂ ಸಾಕ್ಷಿಯಾಗಿದೆ.

೬) ಭಾರತೀಯ ಕಲೆಗಳಂತೆ ಬಯಲಾಟಗಳ ಗುರಿಯೂ ಆರಾಧನೆಯ ನೆಪದಲ್ಲಿಯ ನಿರುದ್ದಿಶ್ಯ ರಸಾಸ್ವಾದನೆಯಾಗಿದೆ. ಇದು ಸಾಧ್ಯವಾಗುವುದು ಲೋಕಚರಿತ ಹಾಗೂ ರಂಗದ ಮೇಲಿನ ಕ್ರಿಯೆಗಳ ಮಧ್ಯೆ ಅಂತರ (Distanciation ) ಸೃಷ್ಟಿಸುವುದರಿಂದ. ನೃತ್ಯದಂತೆ ಸಂಗೀತವೂ ಇಂಥ ಅಂತರ ಸೃಷ್ಟಿಸಿ ಪ್ರೇಕ್ಷಕರ ತೊಡಗುವಿಕೆಯನ್ನು ನಿವಾರಿಸುತ್ತದೆ. ದುಶ್ಶಾಸನ ದ್ರೌಪದಿಯ ಸೀರೆಯನ್ನು ಹಾಡುತ್ತಾ ಕಣಿಯುತ್ತ ಸೆಳೆಯುವದರಿಂದ ಅಲ್ಲಿ ಪ್ರೇಕ್ಷಕರಿಗೆ ಕರುಣರಸದ ಅನುಭವವಾಗುತ್ತದೆ. ಇಂಥ ದೃಶ್ಯ ರಸ್ತೆಯ ಮೇಲೆ ವಾಸ್ತವಿಕವಾಗಿ ನೈಜರೂಪದಲ್ಲಿ ನಡೆದರೆ ಪ್ರೇಕ್ಷಕರು ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಹಜ.

೭) ಘಟನೆಯ ಇಕ್ಕಟ್ಟಿನಲ್ಲಿ ಸಿಕ್ಕ ವ್ಯಕ್ತಿ ಹೇಗೆ ಸ್ಪಂದಿಸುತ್ತಾನೆ ಎಂಬುದರ ಮೂಲಕ ಆ ವ್ಯಕ್ತಿಯ ನಿಜದ ದರ್ಶನ ಮಾಡಿಸುವುದು ಶಿಷ್ಟ ನಾಟಕದ ಸ್ಥೂಲವಾದ ಗುರಿ. ಒಂದು ಜೀವಮಾನದ ಇಡೀ ಕಥೆಯೊಂದರ ಮೂಲಕ ರಸಾಸ್ವಾದನೆ ಮಾಡಿಸುವುದು ಬಯಲಾಟಗಳ ಗುರಿ. ರಂಗದ ಮೇಲೆ ಇಡೀ ಕಥೆಯನ್ನು ಗೊತ್ತುಪಡಿಸಿದ ಅವಧಿಯಲ್ಲಿ ತೋರಿಸುವುದು ಅಸಾಧ್ಯ. ಆದ್ದರಿಂದ ಕಥೆಗೆ ಪೋಷಕವಾದ ಕೆಲವು ಲಕ್ಷಣಗಳನ್ನು ಆಯ್ದು ಹೆಣೆಯಬೇಕಾಗುತ್ತದೆ. ಕಾರ್ಯಕಾರಣ ರೂಪದಲ್ಲಿ ಬಯಲಾಟದ ಕವಿ ಕಥೆ ಹೇಳುವಾಗ ಸಾಹಿತ್ಯದಂತೆ ನೃತ್ಯ, ಸಂಗೀತಗಳನ್ನು ನಿರೂಪಣೆಗಾಗಿ ಬಳಸುತ್ತಾನೆ. ಹಾಗೂ ನಿರೂಪಣೆಯಲ್ಲಿ ಬಳಸುವ ಹಾಡುಗಳು ಸಾಮಾನ್ಯವಾಗಿ Third Person ನಲ್ಲಿದ್ದರೆ ಸಂಗೀತ ನಿರ್ಲಿಪ್ತವಾಗಿರುತ್ತದೆ. ಇಂದ್ರಕಲ ಪರ್ವತಕ್ಕೆ ಅರ್ಜುನ ಹೊರಟರೆ ಬಯಲಾಟದ ನಿರ್ದೇಶಕ ಅವನು ಹೊರಟ ಹಾಗೂ ಇಂದ್ರಕೀಲ ಪರ್ವತಕ್ಕೆ ತಲುಪಿದ ಎರಡು ಕ್ಷಣಗಳನ್ನಾಯ್ದು ಬೆಸೆಯುತ್ತಾನೆ. ಬಯಲಾಟದ ಕಥೆ ದೃಶ್ಯಗಳಾಗಿ ವಿಭಜಿಸಲ್ಪಟ್ಟಿದ್ದು ಅಂಥ ಎರಡು ದೃಶ್ಯಗಳನ್ನು ಬೆಸೆಯುವದೂ ಸಂಗೀತವೇ.

೮) ರಿಪಿಟೇಶನ್ ಒಟ್ಟು ಜನಪದ ಸಾಹಿತ್ಯ ಸಂಗೀತಗಳ ಮುಖ್ಯ ಲಕ್ಷಣವೇನೋ ನಿಜ. ಬಯಲಾಟಗಳ ಹಾಡಿನಲ್ಲಿಯ ಇದರ ಉದ್ದೇಶ ಮಾತ್ರ ಸ್ಪಷ್ಟವಾಗಿದೆ. ಅಟ್ಟದ ಮೂರು ಬದಿಗೆ ಪ್ರೇಕ್ಷಕರು ಕೂತಿರುವುದರಿಂದ ನೃತ್ಯ ಸಂಗೀತದ ಯಾವ ಭಾಗವೂ ಕೊನೆಪಕ್ಷ ಎರಡು ಮೂರು ಸಲ ರಿಪೀಟ್ ಆಗುವುದು ಅನಿವಾರ್ಯವಾಗುತ್ತದೆ. ನೃತ್ಯ ಸಂಗೀತಗಳ ಬಂಧ ಈ ರಿಪಿಟೇಶನ್ ಅನ್ನು ಅವಲಂಬಿಸಿರುವುದೂ ಅನಿವಾರ್ಯವಾಗಿರುತ್ತದೆ.

ಸಂಗೀತ ಮುಖ್ಯವಾಗಿ ಕಥೆಯ ಭಾವಗಳ ಅಲಂಕರಣಕ್ಕಾಗಿ ಬರುತ್ತದೆ. ಅಂದರೆ ಕಥೆ ಹಾಡಿನ ಮುಖಾಂತರ ಮುಂದುವರಿಯುವುದಿಲ್ಲ ಮಾತಿನ ಮುಖಾಂತರ ಹಾಡನ್ನು ಹೇಳಿಯಾದ ಏಲೆ ಮಾತಿನಲ್ಲಿಅ ದರ ವಿವರಣೆಯಾಗುವುದರಿಂದ ಹಾಡಿಗೆ ಮುನ್ನ ಕಥೆ ಎಲ್ಲಿತ್ತೋ ಅಲ್ಲೇ ಇರುತ್ತದೆ. (ಯಕ್ಷಗಾನದಲ್ಲಿ ತದ್ವಿರುದ್ದ) ಅಂದರೆ ಹಾಡು ಮಾತುಗಳ ಭಾವವನ್ನು ಅಲಂಕರಿಸಲಿಕ್ಕೆ ಮಾತ್ರ ಸಂಗೀತ ಬರುತ್ತದೆ. ಪಕ್ಕವಾದ್ಯಗಳ ಬಳಕೆಯೂ ಇದೇ ಕಾರಣಕ್ಕಾಗಿ ಇದೆ. ಯಕ್ಷಗಾನದಲ್ಲಿ ಸಂಗೀತ, ಸಾಹಿತ್ಯಗಳಿಂದ ಕತೆ ಮುಂದುವರಿದು ಮಾತು ಸಂವಹನೆಗೋಸ್ಕರ, ಬಳಕೆಯಾಗುತ್ತದೆ.

ಬಯಲಾಟಗಳಲ್ಲಿ ಸಂಗೀತ ಮೇಲಿನ ಒಂಭತ್ತು ಕಾರಣಗಳಿಗಾಗಿ ಬಳಕೆಯಾಗುತ್ತದೆಂದು ಅನಿಸುತ್ತದೆ.