ರೂಪದ ದೃಷ್ಟಿಯಿಂದ ಕನ್ನಡ ಜಾನಪದ ಕತೆಗಳಲ್ಲಿ ಆರಾಧನೆಯ ಕತೆ ಎಂದು ಒಂದು ವಿಭಾಗ ಕಲ್ಪಿಸುವುದು ಅಗತ್ಯವೆಂದು ಕಾಣುತ್ತದೆ. ‘ಸುಖಸಂಕಥಾ ವಿನೋದ’ದ ಮನರಂಜನೆಯ ಕತೆ ಒಂದು ಕಡೆಗಾದರೆ ‘ಪುಣ್ಯಕಥಾಶ್ರವಣ’ದ ಆರಾಧನೆಯ ಕತೆಗಳನ್ನು ಇನ್ನೊಂದು ವಿಭಾಗವಾಗಿ ಅಧ್ಯಯನ ಮಾಡಬಹುದು. ಎರಡು ರೀತಿಯ ಕತೆಗಾರಿಕೆಗೆ ವಿಶಿಷ್ಟವಾದ ಕೆಲವು ಲಕ್ಷಣಗಳು ಇವೆ. ಮನರಂಜನೆಯ ಕತೆಗಳಿಗೆ ಸಾಮಾನ್ಯವಾಗಿ ಸ್ಥಳ ಸಮಯಗಳ ನಿರ್ಬಂಧವಿಲ್ಲ; ಬೇಕಾದಲ್ಲಿ, ಬೇಕಾದಾಗ ತೆರೆಕೊಂಡ ಕಿವಿಗಳಿದ್ದರಾಯಿತು. ಮಕ್ಕಳಿಂದ ವೃದ್ಧರ ತನಕ, ಸ್ಕೂಲಿನಲ್ಲಿ, ಹೊಲದಲ್ಲಿ, ಗುಡಿಗುಂಡಾರಗಳಲ್ಲಿ; ಕೆಲಸ ಮಾಡುವಾಗ, ಮಾಡದಿರುವಾಗ, ಬೇಸರ ಬಂದಾಗ, ಬಾರದಿರುವಾಗ-ಹೀಗೆ ಬೇಕಾದಾಗ ಹೇಳಬಹುದು. ಒಂದಾನೊಂದು ಕಾಲದಲ್ಲಿ, ಹೀಂಗ ಒಂದೂರಾಗ, ಅರಸು ಪ್ರಧಾನಿ ಕೋಲಾಕಾರ ತಳವಾರ ಹಳವಾರ ಕುಂಟ ಕುರುಡ ಕತ್ತಲಿಕಡಿದಾಟ ಎತ್ತಿಲಿ ಇರಿದಾಟ- ಸೂರ್ಯಶೇಖರನೆಂಬ ರಾಜನಿದ್ದ. ಇತ್ಯಾದಿಯಾಗಿಯೋ-ಕೇಳುವವರು ಮಕ್ಕಳಾದರೆ ಅಗಟು ಚಿಗುಟು ಮೊಗಟು ಮಾಣಿಜ್ಯ ಬದನೆಕಾಯಿ ತೊಟ್ಟಿನ ಮುಳ್ಳಿನ ಮೇಲಿರುವ ಸೊಳ್ಳೆಯ ಹೊಳ್ಳೆಯ ಒಳಗೆ ಒಂದು ಪಟ್ಟಣವಿತ್ತಂತೆ-ಎಂದೊ. ಕತೆ ಕತೆ ಕಾರುಂಡ ದೀಪದ ಮೇಲೆ ನುಂಜುಂಡ, ಹಾಸಿಗೆ ಮೇಲೆ ಹೇತ್ಕೊಂಡ ಮೂಸಿಮೂಸಿ ನೋಡ್ಕಂಡ ಎಂದೋ, ಕತೆಕತೆ ಕಾರಣ ಮುದಕಿ ಹೂರಣ ಎಂದೋ ಕತೆ ಪ್ರಾರಂಭವಾಗುತ್ತದೆ. ಕೊನೆಯಲ್ಲಿ ಅವರಲ್ಲಿ ನಾವಿಲ್ಲಿ, ಕತೆ ಕಾಡಿಗೆ ಹೋಯ್ತು ನಾವು ಊರಿಗೆ ಬಂದ್ವಿ. ಇತ್ಯಾದಿಯಾಗಿ ಕತೆ-ಮುಗಿಯುತ್ತದೆ. ಇಲ್ಲಿಯ ಕಾಲ್ಪನಿಕತೆ ಸ್ವಚ್ಛಂದವಾಗಿದ್ದು ಲಂಗುಲಗಾಮಿಲ್ಲದೆ ಸ್ವರ್ಗ ಮರ್ತ್ಯ ಪಾತಾಳದವರೆಗೆ ಬೇಕಾದಲ್ಲಿ ಸಂಚರಿಸಬಹುದು. ಒಂದು ಕತೆ ಒಂದು ಸಲದಿಂದ ಇನ್ನೊಂದು ಸಲಕ್ಕೆ ಸಿಕ್ಕಾಪಟ್ಟೆ ಬೆಳೆಯಬಹುದು, ಸಂದರ್ಭಕ್ಕೆ ಅನುಗುಣವಾಗಿ: ಹೇಳಿಕೇಳಿ ಮನರಂಜನೆಯೇ ಉದ್ದೇಶವಾದ್ದರಿಂದ ಪಾತ್ರಗಳು ಸಾಮಾನ್ಯವಾಗಿ ಸಾರ್ವತ್ರಿಕವಾದವುಗಳು, ಮಾದರಿ (Typical) ಯಾದಂಥವು. ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ-ಎಂದರೆ ಅವನು ಯಾವುದೇ ದೇಶದ ಯಾವುದೇ ಕಾಲದ ರಾಜ ಆಗಬಹುದು. ಕತೆಗಳೆಲ್ಲಾ ಸಾಮಾನ್ಯವಾಗಿ ಸುಕಾಂತವಾದವುಗಳು.

ಆರಾಧನೆಯ ಕತೆಗಳಿಗೆ ನಿರ್ದಿಷ್ಟ ಸಮಯ ಸಂದರ್ಭಗಳಿವೆ. ಗಣೇಶ ಚತುರ್ಥಿಯಂದು, ಚಂದ್ರಗ್ರಹಣದಂದು, ಚಂದ್ರನನ್ನು ನೋಡಿದ ದೋಷ ಪರಿಹಾರಕ್ಕೆ ಹೇಳುವ ಕತೆ, ಸತ್ಯನಾರಾಯಣ ವ್ರತದ ಕತೆ, ಶನಿಮಹಾತ್ಮೆಯ ಕತೆ, ಕೆಲವು ಹರಕೆ ಕತೆಗಳು, ಅಲ್ಲದೆ ವೀರಶೈವರಲ್ಲಿ ಸೋಮವಾರದವರು ಸೋಮವಾರದಂದು ಹೇಳಿಸುವ ಕತೆ, ಶನಿವಾರದವರು ಶನಿವಾರದಂದು ಹೇಳಿಸುವ ಕತೆ ಮತ್ತು ಸಾರ್ವಜನಿಕವಾಗಿ ಹೇಳಿಸುವ ಹರಿಕಥಾ ಕಾಲಕ್ಷೇಪ ಇತ್ಯಾದಿ.

ನುರಿತ ವೃತ್ತಿಪರ ಕತೆಗಾರರೇ ಈ ಕತೆಗಳನ್ನು ಹೇಳಬೇಕು. ಅವರಿಗೆ ಪ್ರತಿಫಲ ಕೊಡಬೇಕು. ಕೇಳುವವರಿಗೆ ನಿರ್ದಿಷ್ಟವಾದ ಫಲಶ್ರುತಿ ಇರುತ್ತದೆ. ಈ ಕತೆಗಳು ಹಿಂದೆ ಘಟಿಸಿದಂಥವು ಎಂಬ ನಂಬಿಕೆ ಇರುತ್ತದೆ. ದೇವತಾಸ್ತುತಿಯಿಂದ ಪ್ರಾರಂಭವಾಗಿ ಮಂಗಳದಲ್ಲಿ ಮುಗಿಯುತ್ತವೆ. ಒಂದೊಂದು ಸಲ ಕತೆ ಮುಖ್ಯ ಹಂತ ಮುಟ್ಟಿದಾಗೆಲ್ಲ ಒಂದು ತೆಂಗಿನಕಾಯಿ ಒಡೆದು ಮತ್ತೆ ಮುಂದುವರಿಸಬೇಕಾಗುತ್ತದೆ. ಕತೆಗಾರಿಕೆಯ ಉದ್ದೇಶ ಧಾರ್ಮಿಕವಾದದ್ದು, ಆಚರಣೆಗಳ ಸಮರ್ಥನೆಗೆ, ಭಕ್ತಿ ಪ್ರಸಾರಕ್ಕೆ ಹೇಳುವಂಥಾದ್ದು. ಇಲ್ಲಿ ಬರುವ ಪಾತ್ರಗಳಿಗೆ ವೈಯಕ್ತಿಕತೆ ಇರುತ್ತದೆ. ಮೀರಾಬಾಯಿ, ಭಕ್ತಪ್ರಹ್ಲಾದ, ಕಬೀರ, ಬಸವಣ್ಣ ಇತ್ಯಾದಿ. ಪ್ರೇಕ್ಷಕರ ಭಾಗವಹಿಸುವಿಕೆ ಇಲ್ಲಿಯ ಆಕರ್ಷಕ ಅಂಶ. ಮಧ್ಯೆ ಮಧ್ಯೆ ಗೋವಿಂದಾ, ಗೋವಿಂದಾ ಎಂದೋ, ಪಾರ್ವತಿ ಪತಿ ಹರಹರ ಮಹಾದೇವ ಎಂದೋ ಕತೆಗಾರನೊಂದಿಗೆ ಪ್ರೇಕ್ಷಕರೂ ಕೂಗುತ್ತಾರೆ. ಕೆಲವು ಸಲ ಕತೆಯ ವಿವರಗಳನ್ನು ಆಚರಿಸುವುದೂ ಉಂಟು. ಕಥಾನಾಯಕ ಹುಟ್ಟಿದಾಗ ಅವನನ್ನು ತೊಟ್ಟಿಲಲ್ಲಿ ಹಾಕುವ ಸಂದರ್ಭ ಬರುತ್ತದಲ್ಲ, ಆವಾಗ ಕೂತ ನಾಲ್ಕೈದು ಜನ ಗರತಿಯರು ತೊಟ್ಟಿನಲ್ಲಿ ನಾಯಕನ ಮೂರ್ತಿಯನ್ನು ಇಟ್ಟು ಜೋಗುಳ ಹಾಡಬಹುದು. ಕೆಲವು ಸಲ ನಾಯಕನಿಗೆ ದೊಡ್ಡ ಕಷ್ಟ ಒದಗಿದರೆ ಅವನು ಸತ್ತರೆ, ಕತೆ ಮುಂದುವರಿಸುವುದನ್ನು ನಿಲ್ಲಿಸಿ ಕತೆಗಾರ ಧರ್ಮಸೆರೆ ಬಿಡಿಸಲು ಪ್ರೇಕ್ಷಕರನ್ನೇ ಕೇಳುತ್ತಾನೆ. ಆಗ ಪ್ರೇಕ್ಷಕರು ಒಂದಿಷ್ಟು ಹಣ ಕಾಣಿಕೆಯಾಗಿ ಕೊಟ್ಟರೆ ನಾಯಕ ಜೀವಂತವಾಗಿ ಎದ್ದು ಕತೆ ಮುಂದುವರಿಯುವುದು. ಅಲ್ಲೀತನಕ ಅವನು ಕತೆ ಹೇಳುವುದಿಲ್ಲ. ಕಥಾನಾಯಕ ಭಿಕ್ಷುಕನಾಗಿ ಹಾಡು ಹೇಳಿದರೆ ಕತೆಗಾರನ ಸುತ್ತ ದುಡ್ಡು ಬೀಳುತ್ತದೆ.

ಕತೆಯ ರೂಪ ಸ್ವಚ್ಛಂದವಾಗಿದ್ದು ಗದ್ಯ, ಪದ್ಯ, ವಚನಗಳಿಂದ ಕೂಡಿರುತ್ತದೆ. ಕಲಿತವನಿದ್ದರೆ ಇಂಗ್ಲಿಷ್ ಕವಿ, ತಾತ್ವಿಕರ ಮಾತುಗಳನ್ನೂ ‘ಕೋಟ್’ ಮಾಡಬಹುದು.

ಕೊನೆಗೆ ಮಂಗಳಾರತಿಯಾದಾಗ ದಕ್ಷಿಣೆ ಕೊಟ್ಟರೆ ಕತೆ ಮುಗಿಯಿತು. ಪ್ರಾರಂಭದಲ್ಲಿ ಕೆಲವು ಪ್ರೇಕ್ಷಕರು ಹೂವು, ಅಕ್ಷತೆ ಹಿಡಕೊಂಡಿದ್ದು ಕತೆ ಮುಗಿದೊಡನೆ ದೇವರ ಮೇಲೆ ಹಾಕಿ ನಮಸ್ಕರಿಸುತ್ತಾರೆ. ಇಂಥ ಕಥೆ ಕೇಳುವುದು ಕೂಡ ದೇವರ ಸೇವೆ ಎಂಬ ಭಾವನೆ ಇರುತ್ತದೆ.

ಆರಾಧನೆಯ ಕತೆಗಳನ್ನು ಈ ರೀತಿ ಬೇರ್ಪಡಿಸುವುದಕ್ಕೆ ಮೇಲಿನ ವಿಶಿಷ್ಟ ಲಕ್ಷಣಗಳೇ ಅಲ್ಲದೆ- ಬಂಧದಲ್ಲಿರುವ ಕೆಲವು ವಿಲಕ್ಷಣಗಳೂ ಕಾರಣವಾಗಿವೆ. ಬಹುದೊಡ್ಡ ಪರಂಪರೆಯೊಂದಿಲ್ಲದೆ ಈ ಸುಧೀರ್ಘ ಕತೆಗಾರಿಕೆ-ಇಂಥ ಸಂಕೀರ್ಣ ರೂಪ ಪಡೆಯುವುದು ಸಾಧ್ಯವಿಲ್ಲ. ಈ ರೂಪ ಬಯಲಾಟಗಳ ಬಂಧದಲ್ಲಿ ಕೈಯಾಡಿಸಿರುವುದೂ ಸಾಧ್ಯ. ಯಾಕೆಂದರೆ ಬಯಲಾಟದ ಥಿಯರಿ ಬಹಳ ಸುಲಭದಿಂದ ಹುಟ್ಟಿರುವಂಥಾದ್ದು. ಇಂಥ ಕತೆಯ ಅಭಿನಯವೇ ಬಯಲಾಟವೆಂಬಷ್ಟು ಸರಳವಾಗಿರುವಂಥಾದ್ದು. ಪ್ರಸ್ತುತ ‘ಲಕ್ಷಾಪತಿ ರಾಜನ ಕಥೆ’ಯನ್ನು ಉದಾಹರಣೆಯಾಗಿ ಅಧ್ಯಯನ ಮಾಡಬಹುದು.

ಈ ಕತೆ ಹೇಳುವವರು ಊರೂರು ಕತೆ ಹೇಳುತ್ತಾ ಉಪಜೀವಿಸುವ ‘ಜೋಳಿಗೇರು’ ಎಂಬ ಜನ. ನಾಥ ಪಂಥಕ್ಕೆ ಸೇರಿದವರು. ಮೇಳದಲ್ಲಿ ನಾಲ್ಕು ಜನ ಇರುತ್ತಾರೆ. ಏಕತಾರಿ ಹಿಡಿದ ಕತೆಗಾರ ಮುಮ್ಮೇಳವಾದರೆ, ದಂಬಡಿ, ತಾಳ, ತಂಬೂರಿ, ಹಿಡಿದ ಇನ್ನೂ ಮೂರು ಮಂದಿ ಹಿಮ್ಮೇಳವಾಗುತ್ತಾರೆ. ಕತೆಗಾರಿಕೆ ರಾತ್ರಿ ಒಂಭತ್ತಕ್ಕೆ ಸುರುವಾಗಿ ಬೆಳಗಿನ ಆರೇಳು ಘಂಟೆಗೆ ಮುಗಿಯುತ್ತವೆ. ಅಲ್ಲಿಗೆ ಒಂದು ಕತೆ ಮುಗಿಸಬಹುದು. ಅವಕಾಶ ಕೊಟ್ಟರೆ ಒಂದೇ ಕತೆಯನ್ನು ಐದಾರು ರಾತ್ರಿಗಳೂ ಹೇಳಬಹುದು. ಪ್ರೇಕ್ಷಕರು ದುಡ್ಡು ಧಾನ್ಯಗಳನ್ನು ಪ್ರತಿಫಲವಾಗಿ ಕೊಡುತ್ತಾರೆ. ಮಗು ಹುಟ್ಟಿದಾಗ, ಮಳೆ ಬರದಿದ್ದಾಗ, ಸಂಕಟ ಪರಿಹಾರವಾದಾಗ, ಮದುವೆಗಳಲ್ಲಿಯೂ ಇವರನ್ನು ಕರೆಸುವುದುಂಟು. ಪ್ರಮುಖರಿಗೆ, ಕಣ್ಣಿಗೆ ಕಾಣುವಷ್ಟು ದುಡ್ಡು ಕೊಟ್ಟವರಿಗೆ ಮೇಳದವರು ಹಾಡಿನಲ್ಲಿ ಹರಸುವ ಪದ್ಧತಿಯೂ ಇದೆ.

ಕತೆ ಅಪರೂಪದ್ದೇನಲ್ಲ. ಧರ್ಮಶೇಖರನೆಂಬ ರಾಜ, ಕುಲವತಿಯೆಂಬ ರಾಣಿ. ಬಹಳ ದಿನ ಮಕ್ಕಳಾಗಲಿಲ್ಲ. ಬಂಜೆಯ ಮುಖ ನೋಡಬಾರದೆಂದು ರಾಜ ರಾಣಿಯನ್ನು ಊರ ಹೊರಗೆ ಗುಡಿಸಲಲ್ಲಿಡಲು ಮಂತ್ರಿಗೆ ಆಜ್ಞೆ ಮಾಡಿದ. ಮಂತ್ರಿ ಆ ಪ್ರಕಾರ ರಾಣಿಯನ್ನು ಊರ ಹೊರಗೆ ಮೂರು ಕಾಲಿನ ಜೋಪಡಿಯಲ್ಲಿಟ್ಟ. ಆವಾಗ ರಾಜರು ತನ್ನೊಂದಿಗೆ ಒಪ್ಪತ್ತು ಜಾಗರಣೆ ಮಾಡಿದ್ದರಿಂದ ಮೂರು ತಿಂಗಳು ಗರ್ಭಿಣಿಯಾಗಿದ್ದುದಾಗಿ ರಾಣಿ ಹೇಳಿದಳು. ಈ ಮಾತನ್ನು ಅರಮನೆಯಲ್ಲೇ ಯಾಕೆ ಹೇಳಲಿಲ್ಲ? ಇರಲಿ ತಾನು ದಿನಾಲೂ ಬಂದು ಯೋಗಕ್ಷೇಮ ಕೇಳಿಕೊಂಡು ಹೋಗುವುದಾಗಿ ತಿಳಿಸಿ ಮಂತ್ರಿ ಹೋದ, ರಾಣಿಗೆ ಲಕ್ಷಾಪತಿಯೆಂಬ ಮಗ ‘ಜನಿಸಿದನು’. ಅತ್ತ ರಾಜ ಇನ್ನೊಬ್ಬ ರಾಣಿಯಿಂದ ಸೂರ್ಯಸಿಂಗ್ಯ, ಚಂದ್ರಸಿಂಗ್ಯ, ಮೋತಿಸಿಂಗ್ಯ, ಲಾಲಸಿಂಗ್ಯ ಎಂಬ ನಾಲ್ಕು ಮಕ್ಕಳ ತಂದೆಯಾದ. ಎಲ್ಲರೂ ಬೆಳೆದು ದೊಡ್ಡವರಾದರು. ಲಕ್ಷಾಪತಿ ಊರ ಮಂದಿಯ ದನ ಕಾಯ್ದು ಹೊಟ್ಟೆ ಹೊರೆಯುತ್ತಿದ್ದ. ಹೀಗಿರುವಾಗ ರಾಜ ತನ್ನ ಬಳಿ ಬಂದು ಬೇಕಾದವರು ಬೇಕಾದ್ದನ್ನು ಬೇಡಬಹುದೆಂದು ಡಂಗುರ ಸಾರಿದ. ಯಾರೂ ಬೇಡಲಿಕ್ಕೆ ಹೋಗಲೇ ಇಲ್ಲ. ದೇವಲೋಕದ ಶಿವನಿಗೆ ಈ ಸುದ್ದಿ ತಿಳಿದುದುಂಟು. ಮರಿಗುದುರೆಯೊಂದನ್ನು ತೆಗೆದುಕೊಂಡು ಬಂದ. ನಗೋ ಎಲೆ, ಮಾತಾಡೋ ಅಡಕೆ, ಹರಿದಾಡೋ ಕಾಚು ಇತ್ಯಾದಿ ಆರು ವಸ್ತು ಕೇಳಿದ. ರಾಜ ಆರು ತಿಂಗಳ ಅವಧಿ ಕೇಳಿದ, ಶಿವ ಒಪ್ಪಿ ಕುದುರೆಯನ್ನಲ್ಲೇ ಬಿಟ್ಟು ಹೋದ.

ಶಿವ ಕೇಳಿದ ಆರು ವಸ್ತು ಆಭರಣ ತಂದುಕೊಟ್ಟವರಿಗೆ ಪಟ್ಟಾಭಿಷೇಕ ಮಾಡುವುದಾಗಿ ರಾಜ ಡಂಗುರ ಸಾರಿದ. ರಾಜನ ನಾಲ್ಕು ಮಂದಿ ಮಕ್ಕಳು ತರಲು ಹೊರಟರು. ಲಕ್ಷಾಪತಿ ತಾನೂ ಹೋಗುವುದಾಗಿ ತಾಯಿಗೆ ಹೇಳಿ, ರಾಜನ ಹತ್ತಿರ ಹೋದ. ಇವನ ರೂಪಕ್ಕೆ ಮಾರು ಹೋದ ರಾಜ ನೀನು ಯಾರ ಮಗ ಎಂದಾಗ, ನಿನ್ನ ಮಗ ಎಂದ ಲಕ್ಷಾಪತಿ. ಯಾರಿಗೋ ಹುಟ್ಟಿ ನನ್ನ ಹೆಸರು ಹೇಳುತ್ತಿದ್ದಾನಲ್ಲಾ ಇವನನ್ನು ಹೊರದಬ್ಬಿರೆಂದು ರಾಜ ಆಜ್ಞೆ ಮಾಡಿದ. ಮಂತ್ರಿ ಲಕ್ಷಾಪತಿ ಹೇಗೆ ಹುಟ್ಟಿದನೆಂಬ ಬಗ್ಗೆ ಒಂದು ಓಲೆ ಬರಕೊಂಡು ಜೇಬಿನಲ್ಲಿಟ್ಟುಕೊಂಡಿದ್ದ. ತೆಗೆದು ರಾಜನಿಗೆ ಕೊಟ್ಟ. ಓದಿ ನೋಡಿದ. ಇವನು ತನ್ನ ಮಗನೇ ಎಂದು ರಾಜನಿಗೆ ಖಾತ್ರಿಯಾಯಿತು, ತಬ್ಬಿಕೊಂಡ. ಲಕ್ಷಾಪತಿಯು ತಂದೆಯ ಆಜ್ಞೆ ಪಡಕೊಂಡು ಆರು ವಸ್ತು ಆಭರಣ ತರಲಿಕ್ಕೆ ಹೊರಟ, ಶಿವ ಬಿಟ್ಟ ಮರಿಗುದುರೆಯನ್ನೇರಿ.

ದಾರಿಯಲ್ಲಿ ಸೂರ್ಯಸಿಂಗ್ಯ, ಚಂದ್ರಸಿಂಗ್ಯ, ಮೋತಿಸಿಂಗ್ಯ, ಲಾಲಸಿಂಗ್ಯ ಸಿಕ್ಕರು. ಅಣ್ಣಂದಿರು ಸಿಕ್ಕರೆಂದು ಲಕ್ಷಾಪತಿಗೆ ಸಂತೋಷವಾಯ್ತು. ಅಣ್ಣಂದಿರಿಗೆ ಇವನ ಮೇಲೆ ಮತ್ಸರವಾಯಿತು. ಆರು ವಸ್ತು ಆಭರಣ ಇವನೇ ತಂದರೆ ತಮಗೆ ಪಟ್ಟ ತಪ್ಪುತ್ತಲ್ಲಾ ಎಂದು ಲಕ್ಷಾಪತಿಯನ್ನು ಹೆಡಮುರಿ ಕಟ್ಟಿ, ಮುಂದೆ ಹೋದರು. (ಈಗ ಪ್ರೇಕ್ಷಕರು ಧರ್ಮಸೆರೆ ಬಿಡಿಸಬೇಕು, ಮುದೇನೂರು ಸಂಗಣ್ಣನವರು ಐರು ರೂಪಾಯಿ ಕೊಟ್ಟರು) ಆಗ ಕತೆ ಮುಂದುವರಿಸಿದ್ದು, ನಾಲ್ವರೂ ರಂಭಾವತಿ ಪಟ್ಟಣಕ್ಕೆ ಹೋದರು. ಅಲ್ಲಿ ಪಾತರ ರಂಗಸಾನಿ ಬಂದ ಶ್ರೀಮಂತರನ್ನೆಲ್ಲಾ ಪಗಡೆಯಾಟದಲ್ಲಿ ಸೋಲಿಸಿ ಅವರ ಶ್ರೀಮಂತಿಕೆಯನ್ನೆಲ್ಲಾ ದೋಚಿ ಜೀತದಾಳಾಗಿ ನೇಮಿಸಿಕೊಂಡಿದ್ದಳು. ಇವರೂ ಹೋದರೂ. ಪಗಡೆ ಆಡಿದರು. ಆಕೆ ಮೊದಲೇ ಇಲಿಗೂ ಬೆಕ್ಕಿಗೂ ಆಟದ ಮಧ್ಯೆ ದೀಪ ಕಳೆಯೋ ಹಾಗೆ ಕಲಿಸಿಕೊಟ್ಟಿದ್ದಳು. ಅವು ದೀಪ ಕಳೆದವು. ಪಗಡೆ ಸೋತರು. ಶ್ರೀಮಂತಿಕೆಯನ್ನೆಲ್ಲಾ ಒಪ್ಪಿಸಿ ಗಂಜ್ಯಾ, ಬಟ್ಯಾ, ಗಡಗುಡಿ, ದೇಗ್ಲಪೂರಿ ಮುಂತಾಗಿ ಹೊಸ ಹೆಸರಿಟ್ಟುಕೊಂಡು ಭಿಕ್ಷೆ ಬೇಡುತ್ತಾ ನಿಂತರು.

ಇತ್ತ ವ್ಯಾಪಾರಕ್ಕೆ ಹೋಗಿದ್ದ ಶೆಟ್ಟಿ ಸಾಹುಕಾರನೊಬ್ಬ ಬಂದು ಲಕ್ಷಾಪತಿಯ ಸೆರೆ ಬಿಡಿಸಿದ. ಅಣ್ಣಂದಿರೆಲ್ಲಿ ಹೋದರೋ ಎಂದು ಲಕ್ಷಾಪತಿ ಚಿಂತಿಸುವಾಗ ಮರಿಗುದರಿ ಭಾಗಾದಿಗಳನ್ನು ನಂಬಬಾರದೆಂದು ಬುದ್ಧಿವಾದ ಹೇಳಿ ಆರು ವಸ್ತು ಆಭರಣ ತರಲಿಕ್ಕೆ ಹೊರಡೋಣವೆಂದಿತು. ಸರಿ ಎಂದು ಹೊರಟ. ಮೊದಲು ಸೂರ್ಯಗಿರಿ ಬಾವಾ ಮತ್ತು ಚಂದ್ರಗಿರಿ ಬಾವಾ ಮಠಕ್ಕೆ ಹೋದರು. ಅವರು ಹೇಳಿದರು: ಏಳು ಸಮುದ್ರ, ಏಳು ವನಾಂತರ ದಾಟಿ, ಮರದಲ್ಲಿ ಲಾಲಾವತಿಯೆಂಬ ಹೆಣ್ಣು ಮಲಗಿರುತ್ತಾಳೆ. ಅವಳ ಉಡಿಯಲ್ಲಿ ಆರು ವಸ್ತು ಆಭರಣವುಂಟು. ತಪ್ಪಿಕೂಡ ಅವಳ ಮುಖ ನೋಡಬಾರದು. ನೋಡಿದರೆ ಜ್ವಾಲೆ ಬಂದು ಸುಡುತ್ತದೆ- ಎಂದು. ಲಕ್ಷಾಪತಿ ಹೋಗಿ ಆರು ವಸ್ತು ಆಭರಣ ತಕ್ಕೊಂಡು ಓಲೆ ಬರೆದಿಟ್ಟು, ಮುಖ ನೋಡಿದ, ಜ್ವಾಲೆ ಬಂದು ಸುಟ್ಟುಬಿದ್ದು. ಮರಿಗುದುರೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಾಗ ಶಿವ ಬಂದು ಲಕ್ಷಾಪತಿಯನ್ನು ಬದುಕಿಸಿದ.

ಕುದುರೆ ಏರಿ ವಾಪಸ್ಸು ಹೊರಟ. ಬರುವಾಗ ಇಬ್ಬರು ಬಾವಾಗಳನ್ನು ನೋಡಿ ರಂಭಾವತಿ ಪಟ್ಟಣಕ್ಕೆ ಬಂದ. ಅಣ್ಣಂದಿರ ಭೇಟಿಯಾಯಿತು. ರಂಗಸಾನಿಯೊಂದಿಗೆ ಪಗಡೆಯಾಡಿ ಅವರನ್ನು ಬಿಡಿಸಿಕೊಂಡು ಬರುವಾಗ ದೇವಿ ಮಂದಿರ ಬಂದಿತು. ವಸ್ತಿಮಾಡಿದರು. ನಾಲ್ವರೂ ಸೇರಿ ಲಕ್ಷಾಪತಿಯನ್ನು ಕೊಂದು ಆರು ವಸ್ತು ಆಭರಣ ತಗೊಂಡು ಊರಿಗೆ ಬಂದರು…. ತಂದೆಗೆ ಕೊಟ್ಟು ಪಟ್ಟಗಟ್ಟಬೇಕೆಂದಾಗ ಲಕ್ಷಾಪತಿ ಬರುವವರೆಗೆ ತಡೆಯಲೆಂದು ಹೇಳಿದ.

ಇತ್ತ ಲಾಲಾವತಿ ಓಲೆ ಓದಿ ಲಕ್ಷಾಪತಿಯನ್ನು ಹುಡುಕಿಕೊಂಡು ಬಂದಳು. ದೇವಿ ಮಂದಿರಕ್ಕೆ ಬಂದಾಗ ಲಕ್ಷಾಪತಿ ಸತ್ತದ್ದು ಗೊತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಾಗ ದೇವಿ ಪ್ರತ್ಯಕ್ಷಳಾಗಿ ಲಕ್ಷಾಪತಿಗೆ ಜೀವದಾನ ಮಾಡಿದಳು. ಲಕ್ಷಾಪತಿ ಲಾಲಾವತಿಯೊಂದಿಗೆ ತಂದೆಗೆ ಆದುದನ್ನೆಲ್ಲಾ ತಿಳಿಸಿದ. ಶಿವ ಬಂದು ಆರು ವಸ್ತು ಆಭರಣ ತಕ್ಕೊಂಡ. ನಾಲ್ವರೂ ಅಣ್ಣಂದಿರನ್ನು ರಾಜ್ಯದ ಗಡಿಕಾಯುವ ಕೆಲಸಕ್ಕೆ ನೇಮಿಸಿ ಇವನು ರಾಜತ್ವ ಮಾಡುತ್ತಾ ಸುಖದಿಂದಿದ್ದ.

ಬರಿಗಣ್ಣಿಗೆ ಕಾಣುವ ಕೆಲವು ದೋಷಗಳೂ ಕತೆಯಲ್ಲಿವೆ. ಧರ್ಮಶೇಖರ ರಾಜ ಬಂಜೆಯ ಮುಖ ನೋಡಬಾರದಂದು ರಾಣಿಯನ್ನು ಊರ ಹೊರಗಟ್ಟಿದ್ದು ತಾನೆ? ಆಗಲೇ ಅವಳು ತಾನು ಮೂರು ತಿಂಗಳ ಗರ್ಭಿಣಿಯೆಂದು ಹೇಳಬೇಕಿತ್ತು. ರಾಜನೆದುರಿಗೆ ಹೇಳದ ಮಾತನ್ನು ಮಂತ್ರಿಗೆ ಹೇಳುತ್ತಾಳೆ. ಮಂತ್ರಿಯಾದರೂ ಕೂಡಲೇ ಹೋಗಿ ರಾಜನಿಗೆ ಹೇಳಬಹುದಿತ್ತಲ್ಲ. ಎಲ್ಲ ವಿವರಗಳನ್ನೂ ಒಂದು ಓಲೆಯಲ್ಲಿ ಬರೆದು ಜೇಬಿನಲ್ಲಿಟ್ಟುಕೊಂಡ. ರಾಜನ ಮಾತಿಗೆ ಎದುರುತ್ತರ ಕೊಡಬಾರದೆಂದು ರಾಣಿ ಹೀಗೆ ಮಾಡಿದ್ದರೆ ಅದು ಬಹಳ ಸಣ್ಣ ನೆವ. ಹೋಗಲಿ, ಮುಂದೆ ಲಕ್ಷಾಪತಿ ರಾಜನೆದುರಿಗೆ ನಾನು ನಿನ್ನ ಮಗ ಎಂದು ಹೇಳುತ್ತಾನೆ. ರಾಜನಿಗೆ ಸಿಟ್ಟು ಬರುತ್ತದೆ. ಆಗ ಮಂತ್ರಿ ಆ ಓಲೆಯನ್ನು ತೋರಿಸುತ್ತಾನೆ. ಕೇವಲ ಆ ಓಲೆ ಓದಿಯೇ ರಾಜನಿಗೆ ಖಾತ್ರಿಯಾಯಿತೆಂದು ಹೇಗೆ ನಂಬುವುದು? ಬೇರೆ ಕಥೆಗಳಲ್ಲಿ ಇಂಥ ಪ್ರಸಂಗ ಬಂದಾಗ ಸಂಶಯ ತಕ್ಕೊಂಡವರನ್ನು ನಂಬಿಸಲು ಕೆಲವು ಟಿಪಿಕಲ್ ಆದ ಪ್ರಮಾಣಗಳಿವೆ. (ತಾಯಿ ಮಗನನ್ನು ಗುರುತಿಸಬೇಕಾದರೆ ತಾಯಿ ಮೊಲೆ ಹಿಂಡಿದರೆ ಏಳು ಗೋಡೆಯಾಚೆ ನಿಂತ ಮಗನ ಬಾಯಲ್ಲಿ ಹಾಲು ಬೀಳುವುದು ಇತ್ಯಾದಿ) ಇಂಥ ಯಾವ ಪ್ರಮಾಣವಿಲ್ಲದೆ ರಾಜ ನಂಬಿದನಲ್ಲಾ ಹೇಗೆ? ಮೂಲದ ಪ್ರಮಾಣಗಳನ್ನು ಸಮರ್ಥನೆಗಳನ್ನು ಕಥೆಗಾರ ಮರೆತಿರಬಹುದೆ? ಕೇಳಿದರೆ ಇಲ್ಲವೆನ್ನುತ್ತಾನೆ. ಹಾಗಿದ್ದರೆ ರಾಣಿಯನ್ನು ಹೊರದೂಡಿದ ಅಂಶ ಬೇರೆ ಕತೆಗಳ ಪ್ರಭಾವದಿಂದ ಇದರಲ್ಲಿ ಸೇರಿಕೊಂಡಿದ್ದೇ? ಯಾಕೆಂದರೆ ರಾಣಿಯನ್ನು ಹೊರದೂಡದಿದ್ದರೂ ಕತೆಯು ಮುಂದುವರಿಯಬಹುದು; ಬೇರೆ ಕತೆಗಳಲ್ಲಿ ನಾಯಕನ (ಅವನೂ ನಿರ್ಲಕ್ಷಿತ ತಾಯಿಯ ಮಗನೇ) ಸಾಹಸಗಳಿಗೆ ಸಿಕ್ಕುವ ಬಹುಮಾನ, ರಾಜ ಇವನನ್ನೂ ಮಗನೆಂದು ಒಪ್ಪುವುದು, ಅಪರೂಪದ ಹೆಣ್ಣು ಸಿಕ್ಕುವುದು, ತಂದೆತಾಯಿಯರ ಮಿಲನವಾಗುವುದು ಇತ್ಯಾದಿ.

ಅದೂ ಹೋಗಲಿ ಲಕ್ಷಾಪತಿ ಉಳಿದ ನಾಲ್ವರಿಗಿಂತ ದೊಡ್ಡವನು. ನ್ಯಾಯವಾಗಿ ಅವನೇ ಅಣ್ಣನಲ್ಲವೇ? ಆದರೆ ಕತೆಯಿಡೀ ಇವನು ಅವರಿಗೆ ಅಣ್ಣಾ ಎನ್ನುತ್ತಾನೆ. ಅವರು ಇವನಿಗೆ ತಮ್ಮಾ ಎನ್ನುತ್ತಾರೆ. ನಾಲ್ವರೂ ಇವನನ್ನು ಹೆಡೆಮುರಿ ಕಟ್ಟಿಹೋದಾಗ ಲಕ್ಷಾಪತಿಯು ಕೂಸಿನಂತೆ, ನವಿಲಿನಂತೆ ನಲಿಯುತ್ತಿರುವನು (ಪು.೫೧) ಎಂದು ಕತೆಗಾರ ಹೇಳುತ್ತಾನೆ. ಬಹುಶಃ ಶಬ್ದಗಳ ಅರ್ಥ ತಿಳಿಯದೆಯೇ ಹೀಗೆ ಹೇಳಿರಬಹುದು. ಇಲ್ಲವೇ ಪ್ರಚಾರದ ಜನಪ್ರಿಯ ಅಂಶಗಳನ್ನೂ, ಮಾತುಗಳನ್ನೂ ಅಲಂಕಾರಗಳನ್ನೂ ಸಂದರ್ಭಗೊತ್ತಿಲ್ಲದೇ ಉಪಯೋಗಿಸಿರಬಹುದು. ಇಲ್ಲದೇ ಕತೆಗಾರಿಕೆಯ ಲಹರಿಯಲ್ಲಿ ಅನುಚಿತವಾಗಿ ಅಲಂಕರಣ ಮಾಡಿರಬಹುದು. ಮುಂದೆ ಲಕ್ಷಾಪತಿ ಬಾವಾನ ಹತ್ತಿರ ಹೋಗುತ್ತಾನಲ್ಲ ಅವರು ‘ಅರೆ ಬಾಂಚೋದ್ ನೀನು ಯಾರು’ ಎನ್ನುತ್ತಾರೆ. ‘ಬಾಂಚೋದ್‌’ ಬೈಗಳ ಪದ. ಮುಂದೆ ಅವರು ಸಹಾಯ ಮಾಡುತ್ತಾರೆ. ಒಳ್ಳೆಯವರು ಕೂಡ. ಬಹುಶಃ ಉತ್ತರ ಕರ್ನಾಟಕದ ಬಾವಾ (ಸೂಫಿ ಸನ್ಯಾಸಿಗಳ ವೈಶಿಷ್ಟ್ಯ (characteristic)ನ್ನು ಈ ರೀತಿ ಹಿಡಿದಿರಬಹುದು.

ಶಿವರಾಜನ ಬಳಿಗೆ ಆರು ವಸ್ತುಗಳನ್ನು ಕೇಳಲಿಕ್ಕೆ ಬರುತ್ತಾನಲ್ಲ. ಪ್ರಾರಂಭದಲ್ಲಿ ಆಗ ಕುಂತೀ ಮಕ್ಳು ಪಂಚಪಾಂಡವರು ಐದು ಮಂದಿಯನ್ನು ಕರೆದುಕೊಂಡು ಬರುತ್ತಾನಂತೆ (ಪುಟ. ೧೫) ಮುಂದೆ ಆರು ತಿಂಗಳಾದ ಮೇಲೆ ಅಂದರೆ ಕತೆ ಮುಗಿಯುವಾಗಲೂ ಅವರೊಂದಿಗೆ ಬರುತ್ತಾರೆ. ಆ ಪಂಚಪಾಂಡವರು ಒಂದೂ ಮಾತನಾಡುವುದಿಲ್ಲ. ಇವರು ಸಂಭಾಷಣೆಯಾಗುವಾಗ ಕುಳಿತಿದ್ದರೋ ನಿಂತಿದ್ದರೋ ತಿಳಿಯುವುದಿಲ್ಲ. ಅನಗತ್ಯವಾದ ಮಹಾಭಾರತದ ಅತಿಥಿಗಳು ಇಲ್ಲಿಗೆ ಹೇಗೆ ಬಂದರು? ಈ ಕತೆಗೂ ಮಹಾಭಾರತಕ್ಕೂ ಏನೇನೂ ಸಂಬಂಧವಿಲ್ಲ. ಕತೆಗಾರ ಇಲ್ಲಿ ಜನಪ್ರಿಯರಾದ ಪಂಚಪಾಂಡವರ ಹೆಸರು ಹೇಳಿ ತನ್ನ ಕತೆಗೆ ಮಹತ್ವವನ್ನು ಕಲ್ಪಿಸಿಕೊಳ್ಳುತ್ತಿದ್ದಾನೆಯೇ? ಅಥವಾ ಜನಪದ ಮಹಾಭಾರತದಲ್ಲಿ ಲಕ್ಷಾಪತಿ ರಾಜನ ಕತೆಯೊಂದು ಅಡ್ಡಕತೆ (Episode) ಯಾಗಿ ಬಳಕೆಯಾಗುತ್ತಿತ್ತೆ? ಕತೆಗಾರಿಕೆಯ ಪದ್ಧತಿಯೇನೋ ಜನಪದ ಮಹಾಕಾವ್ಯಕ್ಕೆ ಯೋಗ್ಯವಾದದ್ದು. ಇದೇ ಜೋಳಿಗೇರು ಮಹಾಭಾರತವನ್ನೂ ಹೇಳುತ್ತಾರೆ ಇದೇ ಶೈಲಿಯಲ್ಲಿ. ಬಹುಶಃ ಅನೇಕ ರಾತ್ರಿಗಳಾಗುವ ಮಹಾಭಾರತದಿಂದ ಇಂಥ ಕತೆಗಳನ್ನು ತೆಗೆದು ಒಂದೆರಡು ರಾತ್ರಿಗಳಲ್ಲಿ ಮುಗಿಯುವಂತೆ ಹೇಳುವ ಕ್ರಮವನ್ನು ಬೆಳೆಸಿಕೊಂಡಿರಬಹುದು.

ಇನ್ನು ಕೆಲವು ಸಂಗತಿಗಳಿವೆ. ಕುಲವತಿಯೊಬ್ಬಳನ್ನು ಬಿಟ್ಟು ಇಲ್ಲ ಬರುವ ಎಂಥ ಸರಳ ಸಾಮಾನ್ಯ ಪಾತ್ರಕ್ಕೂ ಅರಮನೆಗಳಿವೆ; ಸೂಲಗಿತ್ತಿ ಸಂಗಮ್ಮನಿಗೊಂದು ಅರಮನೆ. ಜ್ಯೋತಿಷ್ಯ ಹೇಳುವ ದ್ಯಾಸಪ್ಪನಿಗೊಂಡು ಅರಮನೆ, ಪಾತರದ ರಂಗಸಾನಿಯ ಮನೆಗೆ ಬಂಗಾರದ ಕಿಡಕಿಯಿದ್ದರೇನೂ ಆಶ್ಚರ್ಯವಿಲ್ಲ.

ಆದರೆ ಇವಿಷ್ಟೂ ದೋಷಗಳೇ ಅಲ್ಲ ತೋಂಡಿ ಸಂಪ್ರದಾಯದಲ್ಲಿ. ಕತೆಗಾರಿಕೆಯ ಒಟ್ಟಂದದ ಶಿಲ್ಪ ಇಂಥ ದೋಷಗಳನ್ನು ನುಂಗಿ ನೀರು ಕುಡಿಯಬಲ್ಲಷ್ಟು ಸಮರ್ಥವಾಗಿದೆ. ಕತೆಯುದ್ದಕ್ಕೂ ಲಕ್ಷಾಪತಿಗೆ ಸಂಬಂಧಪಟ್ಟವರೆಲ್ಲರ (ತಾಯಿ ತಂದೆಯರನ್ನು ಬಿಟ್ಟು) ನಿಷ್ಠೆ ಅಥವಾ ಸತ್ವದ ಪರೀಕ್ಷೆಯಾಗುತ್ತಾ ಹೋಗುತ್ತದೆ. ನಾಲ್ವರೂ ಅಣ್ಣಂದಿರು ಅವನನ್ನು ಹೆಡೆಮೂರಿ ಕಟ್ಟಿ ಹೋಗುತ್ತಾರೆ. ಲಾಲಾವತಿಯ ಮುಖ ನೋಡಿ ಲಕ್ಷಾಪತಿ ಉರಿದು ಬಿದ್ದಾಗ ಕುದುರೆ ಮರಿ ಆತ್ಮಹತ್ಯೆ ಮಾಡಿಕೊಳ್ಳಹೋಗುತ್ತದೆ. ಶಿವ ಬಂದು ಇಬ್ಬರನ್ನೂ ಉಳಿಸುತ್ತಾನೆ. ಮುಂದೆ ಆ ನಾಲ್ವರೂ ಇವನನ್ನು ಕೊಂದು ಆರು ವಸ್ತು ಆಭರಣಗಳನ್ನು ದೋಚಿಕೊಂಡು ಹೋದಾಗ ಲಾಲಾವತಿ ಆತ್ಮಹತ್ಯೆಗೆಳಸುತ್ತಾಳೆ. ದೇವಿ ಬಂದು ಉಳಿಸುತ್ತಾಳೆ. ಮರಿಗುದರಿ ಮತ್ತು ಲಾಲಾವತಿ ಇಲ್ಲದಿದ್ದರೆ ಕತೆಗೆ ಕೊನೆಯಿಲ್ಲ. ಇವರಿಬ್ಬರ ನಿಷ್ಠೆಯಿಂದಲೇ ಅವನು ಬದುಕಿದ್ದು, ಅವನ ಸಾಹಸಗಳಿಗೆ ಅಥ್ಥ ಮೂಡಿದ್ದು, ಕತೆ ಮುಂದೋಡಿದ್ದು. ಕತೆಗಾರ ಅವನ ಸಾಹಸಗಳನ್ನು ವೈಭವಿಸುವುದಿಲ್ಲ. ಅವನೊಬ್ಬ ವೀರಾಧಿವೀರನೆಂದು ಚಿತ್ರಿಸುವುದಿಲ್ಲ. ಎಷ್ಟೇ ತೊಂದರೆ ಕೊಟ್ಟರೂ ಅಣ್ಣಂದಿರನ್ನು ಪ್ರೀತಿಸಿದನೆಂಬುದೇ, ಅವನಿಗೆ ದೊಡ್ಡ ಸಂಗತಿ. ತಾಯಿ, ತಂದೆ ಆಮೇಲೆ ಮರಿಗುದರಿ ಹೀಗೆ ಒಬ್ಬರಾದ ಮೇಲೊಬ್ಬರಂತೆ ಬಾಗಾದಿಗಳನ್ನು ನಂಬದಿರಲು ಉಪದೇಶಿಸುತ್ತಾರೆ. ಅವರ ಮಾತುಗಳನ್ನು ನಿರ್ಲಕ್ಷಿಸಿ ಇವನು ಅವರನ್ನು ನಂಬುತ್ತಾನೆ, ಅವರಿಗಾಗಿ ಹಲುಬುತ್ತಾನೆ. ಕತೆಯ ಒಳ ಸತ್ವ ಇದರಲ್ಲೇ ಇದೆಯಂದು ಕತೆಗಾರ ನಂಬಿದ್ದನೇನೋ-ಈ ಭಾಗ ಹೇಳುವಾಗ ಅವನ ಅಭಿನಯ ಬಹಳ ಭಾವುಕವಾಗಿತ್ತು. ಕಣ್ಣಲ್ಲಿ ನೀರು ಬಂದು, ಕಂಠ ತುಂಬಿ ಬಂದಿತ್ತು. ಕತೆಗಾರ ವಯಸ್ಸಾಗಿ ಹಣ್ಣಾಗಿದ್ದ. ಇದೇ ಕತೆಯನ್ನು ಹೌದೆಂಬೋ ಹಂಗಾಮಿನ ವಯಸ್ಸಿನಲ್ಲಿ ಹೇಗೆ ಹೇಳುತ್ತಿದ್ದನೋ! ಯಾಕೆಂದರೆ ಶೃಂಗಾರಕ್ಕಿಲ್ಲಿ ಬೇಕಾದಷ್ಟು ಅವಕಾಶವಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಗಮನಿಸಬೇಕಾದ್ದು ಕತೆಗಾರಿಕೆಯ ತಂತ್ರವನ್ನು. ಕತೆ ಪ್ರಾರ್ಥನೆಯಲ್ಲಿ ಸುರುವಾಗಿ ಮಂಗಳದಲ್ಲಿ ಮುಗಿಯುತ್ತದೆ. ಪ್ರಾರ್ಥನೆ ಎರಡೇ ಸಾಲಿನದು. ಮುಂದೆ ನೇರವಾಗಿ ಕತೆಯೇ ಸುರುವಾಗುತ್ತದೆ. ನಡುನಡುವೆ ಅಡ್ಡ ಕತೆ ಬಂದಾಗ, ಸೆರೆ ಬಿಡಿಸಿದಾಗ ಮತ್ತೆ ಪ್ರಾರ್ಥನೆ ಹಾಡಿ ಕತೆ ಮುಂದುವರಿಸುತ್ತಾರೆ. ಕತೆ ಹೀಗೆ ಹರಿಗಡಿದು ಮುಂದುವರಿದಾಗೊಮ್ಮೆ ಒಂದೊಂದು ತೆಂಗಿನಕಾಯಿ ಒಡೆಯುತ್ತಾರಂತೆ. ನಾವು ಹೇಳಿಸಿದಾಗ ಹಾಗೆ ಮಾಡಲಿಲ್ಲ. ಶಿಷ್ಟಕಾವ್ಯದ ಅಧ್ಯಾಯದಂತೆ ಕತೆಯ ಒಂದೊಂದು ಭಾಗ ಮುಗಿದಾಗ ‘ಈ ಕಥಾ ಸಂಚಾರ ಭಾಗ’ ಎಂದು ಹೇಳುತ್ತಾರೆ. ಒಂದು ಭಾಗ ಮುಗಿದು ಮತ್ತೊಂದು ಭಾಗ ಸುರುವಾಗುವಾಗ ಮಧ್ಯದಲ್ಲಿ ಕಥೆ ನಿಲ್ಲಿಸುವುದಿಲ್ಲ. ಆದರೂ ಭಾಗ ಮುಗಿದಲ್ಲಿ ಸರಿಯಾಗಿ ಕಥಾ ಸಂಚಾರ ಭಾಗ ಎಂದು ಬರುತ್ತದಲ್ಲ-ಹೇಗಿರಬಹುದು? ಇದುವರೆಗೆ ಪಠ್ಯವಿಲ್ಲ. ಮನೆಯಲ್ಲಿದ್ದಿರಬಹುದಾದರೂ ಇವರು ಓದು ಬರಹ ಬಲ್ಲವರಲ್ಲ. ತೋಂಡಿಯಾಗಿಯೇ ಕಲಿತವರು, ಹಾಡುವವರು, ಅಷ್ಟಾಗಿ ಒಮ್ಮೆ ಹಾಡಿದಂತೆ ಇನ್ನೊಮ್ಮೆ ಹಾಡುತ್ತಾರೆಂದು ಗ್ಯಾರಂಟಿಯಿಲ್ಲ. ಇವರಿಗೆ ಕಲಿಸಿದ ಗುರು ಕೂಡ ಒಮ್ಮೆ ಹಾಡಿದಂತೆ ಇನ್ನೊಮ್ಮೆ ಹಾಡಿರುವುದು ಸಾಧ್ಯವಿಲ್ಲ. ಇದು ಹೇಗೆ ಬಂತು? ಯಾವುದಾದರೂ ಶಿಷ್ಟಸಾಹಿತ್ಯ ಸಂಪ್ರದಾಯದ ಪಳಯುಳಿಕೆ ಇಲ್ಲಿ ಸೇರಿರಬಹುದೇ? ಅಂದರೆ-ಹಳಗನ್ನಡದಲ್ಲಿ ಹೀಗೆ ಹೇಳಿ ಯಾವ ಕೃತಿಯಲ್ಲೂ ಅಧ್ಯಾಯ ಮುಗಿಸುವುದಿಲ್ಲ. ಇಷ್ಟಂತೂ ಖರೆ- ಈ ಕತೆಗಾರಿಕೆಗೆ ಬಹುದೊಡ್ಡ ಸಂಪ್ರದಾಯವೊಂದಿದೆ.

ಕತೆ ಗದ್ಯ, ಸಂಭಾಷಣೆ ಹಾಡುಗಳಲ್ಲಿ ಮುಂದುವರೆಯುತ್ತದೆ. ಗದ್ಯ ಪದ್ಯಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಮುಖ್ಯವಾಗಿ ಗದ್ಯ ಸಂಭಾಷಣೆಯಿಂದಲೇ ಕತೆ ಮುಂದುವರಿಯುತ್ತದೆ. ನಡು ನಡುವೆಹಾಡು ಹೇಳಿದರೂ ಹಾಡಿನ ಸಾರಾಂಶವನ್ನು ಇನ್ನೊಮ್ಮೆ ಮಾತಿನಲ್ಲಿ ಹೇಳಿಯೇ ಕತೆ ಮುಂದುವರಿಸುತ್ತಾರೆ. (ಬಯಲಾಟದ ಹಾಡು ಮಾತುಗಳ ಸಂಬಂಧವನ್ನು ಗಮನಿಸಿರಿ). ಆದ್ದರಿಂದ ಹಾಡುಗಳನ್ನೆಲ್ಲಾ ತೆಗೆದು ಹಾಕಿದರೂ ಕತೆ ಉಳಿಯುತ್ತದೆ. ಹೋಲಿಸಿ ನೋಡಿದರೆ ಹಾಡುಗಳಿಗಿಂತ ಗದ್ಯ ಹೆಚ್ಚು ಸತ್ವಶಾಲಿಯಾಗಿದೆ. ಅಪರೂಪಕ್ಕೆ ಬರುವ ಅಲಂಕಾರಗಳೂ ಕೂಡ ಗದ್ಯದಲ್ಲಿ ಬರುವುದೇ ಹೆಚ್ಚು. ಹಾಡುಗಳಲ್ಲಿ ಬರುವುದೇ ಇಲ್ಲ ಅಥವಾ ಕಡಿಮೆ, ಗದ್ಯ ಕತೆಗಾರನ ಮಾತುಗಾರಿಕೆ ಮತ್ತು ಹಿಮ್ಮೇಳದ ಸಂಭಾಷಣೆಯಿಂದ ಮಿಶ್ರಿತವಾಗಿದೆ. ಕತೆಗಾರದ ಹೇಳುವಿಕೆ ರಂಗದ ಮೇಲೆ ಒಂದೇ ಪಾತ್ರವಿದ್ದಾಗ, ಅಥವಾ ಆ ಪಾತ್ರ ಪ್ರಯಾಣದಲ್ಲಿದ್ದಾಗ, ಪಕ್ಷಪಾತ ವಹಿಸಿ ಸನ್ನಿವೇಶಗಳನ್ನು ಆರ್ದ್ರಗೊಳಿಸುವಾಗ, ಅಷ್ಟಿಷ್ಟು ವರ್ಣನೆ ವಿವರಗಳನ್ನು ಹೇಳುವಾಗ ಮಾತ್ರ ಬರುತ್ತದೆ. ಒಂದಕ್ಕಿಂತ ಹೆಚ್ಚು ಪಾತ್ರ ಬರುವುದೇ ತಡ ಹಿಮ್ಮೇಳದವರು ಮುಂದೆ ಬಂದು ಒಂದೊಂದು ಪಾತ್ರವನ್ನು ತಮ್ಮ ಮೇಲೆ ಆರೋಪಿಸಿಕೊಂಡು ಸಂಭಾಷಣೆಯ ಮೂಲಕ ಕತೆ ಮುಂದುವರಿಸುತ್ತಾರೆ. ಇದರಿಂದ ಕತೆಗಾರಿಕೆಯ ಕ್ರಿಯಾಶೀಲತೆಗೆ ಬಣ್ಣವೇರಿ ನಾಟಕೀಯತೆ ಸಹಜವಾಗಿ ಒದಗುತ್ತದೆ. ಒಂದು ಸಣ್ಣ ಉದಾಹರಣೆ ನೋಡಿ ಕುಲವತಿ ಗಂಡು ಹೆತ್ತಿದ್ದಾಳೆ. ಮಂತ್ರಿ ಎಂದಿನಂತೆ ಯೋಗಕ್ಷೇಮ ವಿಚಾರಿಸಲು ಮೂರು ಕಾಲಿನ ಜೋಪಡಿಗೆ ಬಂದಿದ್ದಾನೆ. ಮಗನ ಜಾತಕ ತೆಗೆಸಬೇಕಾಗಿದೆ.

ಕತೆಗಾರ: ಮಂತ್ರಿ ನಿಂತು ಕೇಳಿದ: ಅಮ್ಮ ನಿನ್ನ ಮಗ ಹುಟ್ಟಿದಂಥ ಫಾಲ್ಗುಣ ನಗಚಕ್ರ ನಾನೇ ಕೇಳಿಸಿ ನೋಡುತೀನಿ ಬಿಡವ್ವಾ.

ಹಿಮ್ಮೇಳ: ನೀವೇ ತೆಗೆಸಿ ನೋಡ್ತೀಯೆನಪ್ಪಾ ಮಂತ್ರಿ.

ಕತೆಗಾರ: ಓ ನಾನೇ ಕೇಳಿಸಿ ನೋಡುತೀನಿ ಮಗ್ಗೆ. ನೀನೇ ಕೇಳಿಸಿ ನೋಡಪಾ, ಅಂತ್ಹೇಳಿ ಕುಲವತಿ ಹೇಳಿದಳು. ಚಂದ್ರ ಬೀದಿ ಹಿಡಕೊಂಡು ಶಾಣೇ ಸದರ ಮಹಾರಾಜರು ಇದ್ದಂಥ ಅರಮನೆಗೆ ಹೋಗಿ ನಿಂತು ಕೂಗಿ ಕರೆದ-

ಹಿಮ್ಮೇಳ: ಏ, ದ್ಯಾಸಪ್ಪಾ-

ಕತೆಗಾರ: ಅಂತಂದು ನಿಂತು ಕೂಗಿ ಕರೆದ ಶಾಣೇಸದರ ಮಹಾರಾಜರು-‘ಕಗ್ಗ ರಂಡೇ ಗಂಡ, ದ್ಯಾಸಪ್ಪಾ, ದ್ಯಾಸಪ್ಪಾ ಅಂತ ಕೂಗ್ತಿದೆಲ್ಲೋ, ಕಾಡ ರಂಡೇ ಗಂಡ. ಎರಡೆಲಿ ಹಾಕೋಣ, ಮೂರೆಲಿ ತಿಂದ್ಹೋಗೋಣ. ನಿನ್ನ ನಾಮಾಂಕಿತವೇನು?

ಹಿಮ್ಮೇಳ: ನಮ್ಮ ಹೊಲದಾಗೆ ಉದ್ದು ಹಾಕೋಣ, ಮಳಿ ಇಲ್ದೆ ಎಲ್ಲಾ ಕಮರಿ ಹೋತು.

ಕತೆಗಾರ: ನಿನ್ನ ನಾಮಾಂಕಿತವೇನು?

ಹಿಮ್ಮೇಳ: ಹಾದಿ ಮನಿ ಬಂಟ ಹಳ್ಳ ಇಡಕೊಂಡ ಹೊಂಟಾ.

ಕತೆಗಾರ: ನಿನ್ನ ಮಾತೇ ಪ್ರಯೋಜನವಿಲ್ಲಾ. ಈಗೇನು ಕರೆಯೋದು ದ್ಯಾಸಪ್ಪಾ ದ್ಯಾಸಪ್ಪಾ ಅಂತ್ಹೇಳಿ, ಕಾಡರಂಡೇ ಗಂಡ, ಕಗ್ಗರಂಡೇ ಗಂಡ ಅಂತ್ಹೇಳಿ, ಶಾಣೇಸದರ ಮಹಾರಾಜರು ಅಂಗಿ ಮಕ್‌ಮಲ್ ತೊಟ್ಕೋಂಡ್ರು, ಮುತ್ತೀನ ಮುಂಜಾಲು ಸುತ್ಕೊಂಡ್ರು. ಕುಲವತಿ ವನವಾಸ ಪಟ್ಟದಲ್ಲಿ ಅದಾಳೆ. ವಸ್ತ್ರದಾನ ಇನ್ನೆಲ್ಲಿ ತರ್ತಾಳೆ. ದಕ್ಷಿಣೆ ದ್ಯಾವಲ್ಲಿಂದ ತರ್ತಾಳೆ! – ಅಂತ್ಹೇಳಿ ಅವರೇ ಒಂದು ಕಾಸಿನ ಧೂಪ ತಗೊಂಡ್ರು, ಪಂಚಾಂಗ ಬಗಲಲ್ಲಿ ಇಟ್ಗೊಂಡ್ರು, ಮೂರು ಕಾಲಿನ ಜೋಪಡಿಗೆ ಬಂದು ಪ್ರತ್ಯಕ್ಷವಾದರು.

– (R. ಲ.ಕ.ಪು.೯-೧೦)

ಲಕ್ಷಾಪತಿ ರಾಜನ ಕತೆಯಲ್ಲಂತೂ ಸಂಭಾಷಣೆಯ ಸಾಧ್ಯತೆಗಳು ವಿಪರೀತ ಹೆಚ್ಚು. ಯಾಕೆಂದರೆ ಕತೆಯ ರಂಗದ ಮೇಲೆ ಯಾವಾಗಲೂ ಕೊನೇ ಪಕ್ಷ ಎರಡು ಪಾತ್ರಗಳಿರುತ್ತವೆ. ಒಂದೇ ಪಾತ್ರ ಒಂಟಿಯಾಗಿರುವುದೇ ಕಡಿಮೆ ಅಥವಾ ಒಂಟಿಯಾದರೂ ಒಂದೆರಡು ಸಾಲುಗಳಲ್ಲಾಗಲೇ ಇನ್ನೊಂದು ಪಾತ್ರ ಬಂದಿರುತ್ತದೆ. ಇದಕ್ಕಿಂತ ಹೆಚ್ಚಾಗಿ ಪಾತ್ರಗಳನ್ನು ಮೈಮೇಲೆ ಆರೋಪಿಸಿಕೊಂಡು ಅವರ ಪರವಾಗಿ ಹಾರ್ಯಾಡುವುದಕ್ಕೆ ಕತೆಗಾರ ಸದಾ ಸಿದ್ಧವಾಗಿರುತ್ತಾನೆ. ಸಂಭಾಸಣೆಯ ಸಣ್ಣ ಸಾಧ್ಯತೆಯನ್ನೂ ಮೇಳದವರು ಬಿಡುವುದಿಲ್ಲ. ಬಹುಶಃ ಹಿಂದಿನ ಮೂವರನ್ನೂ ತೊಡಗಿಸುವುದಕ್ಕಾಗಿ, ಕತೆಯನ್ನು ಕುತೂಹಲಕರ ಮಾಡುವುದಕ್ಕಾಗಿ ಬಳಸುತ್ತಾರೆಂದು ತೋರುತ್ತದೆ.

ಇನ್ನು ಸೋಜಿಗವೆಂದರೆ ಹಾಡುಗಳನ್ನು ಕತೆಗಾರಿಕೆಯ ಶಿಲ್ಪದಲ್ಲಿ ಹೊಂದಿಸಿರುವ ರೀತಿ. ನಾನಾಗಲೇ ಹೇಳಿದ ಹಾಗೆ ಹಾಡುಗಳು ಕತೆಯ ಮುಂದರಿಕೆಗೆ ಅನಿವಾರ್ಯವೆಂದೇನೂ ಅಲ್ಲ. ಸನ್ನಿವೇಶವನ್ನು ಆರ್ದ್ರಗೊಳಿಸಲಿಕ್ಕೆ, ಸಂಗೀತಮಯವಾಗಿಸಲಿಕ್ಕೆ ಬಳಸುತ್ತಾರಷ್ಟೆ. ಪ್ರತಿ ಹಾಡಿನ ಅಂತ್ಯದಲ್ಲಿ ಹಿಮ್ಮೇಳದವರು ಹೇಳುವ ಒಂದು ಸೊಲ್ಲಿರುತ್ತದೆ. ಇವು ಒಟ್ಟು ಹತ್ತೋ ಹನ್ನೊಂದೋ ಇವೆ. ಸುವ್ವೀ, ಆ ಈ, ಕಲ್ಯಾಣದವರೀ, ಸಖಿರಾಜ ಬಗರಿ, ಶಿವ ಅಂದ್ರೆ ಮಾದೇವೋ ಶಂಕರ, ಶಿವಹರನೇ ಎನ್ನದೇವಾ ಆ ಈ, ತನನು ನಂದಿನಿ ನಾನಿ, ಶಂಕರ ರಾಮಾ ಕಾಯೋ, ರೀರೀ ಜೀಜೀ, ರಾಮಾಕಾಯೋ ನೀ ಇತ್ಯಾದಿ. ಹಾಡುಗಳಲ್ಲಿ ಹೇಳಿಕೊಳ್ಳುವಂಥ ಕಾವ್ಯಾಶಕ್ತಿಯೇನೂ ಇಲ್ಲ. ಅಷ್ಟೇ ಯಾಕೆ ಗದ್ಯ ಪದ್ಯಗಳ ಅಂತರ ಬಹಳ ಕಮ್ಮಿ; ಹಾಡುತ್ತಾರಾದ್ದರಿಂದ ಇವು ಹಾಡಾಗಿವೆ, ಅಥವಾ ಪದ್ಯವನ್ನೇ ಮುರಿದು ಅಂತ್ಯದಲ್ಲಿ ಸೊಪ್ಪು ಸೇರಿಸಿ ಹಾಡಾಗಿಸಿದ್ದಾರೆಂದೂ ಹೇಳಬಹುದು. ಗದ್ಯದಲ್ಲಿ ಅಲ್ಲಲ್ಲಿ ಮಿಂಚುವಂಥ ಅಲಂಕಾರವೂ ಹಾಡಿನಲ್ಲಿಲ್ಲ. ಇರೋದೆಲ್ಲ ಸ್ವಭಾವೋಕ್ತಿ. ಅದನ್ನೂ ಅಲಂಕಾರವೆಂದು ಕರೆಯುವುದಾದರೆ ಆ ಮಾತು ಬೇರೆ. ಎಲ್ಲಾ ಹಾಡುಗಳನ್ನೂ ಮೇಲಿನಂತೆ ಕವಿತ್ವ ಮಾಡಬೇಕೆಂದಿಲ್ಲ. ಓದು ಬರಹ ಬಲ್ಲ ಕವಿಯಾದರೆ ಕಾವ್ಯವನ್ನು ಮಾಡಲು ಬೇಕಾದಷ್ಟು ಅವಧಿ ತಕ್ಕೊಂಡು ಕಾವ್ಯ ಮಾಡಬಲ್ಲ. ಕತೆಗಾರನಿಗೆ ಈ ಸೌಲಭ್ಯಗಳಿಲ್ಲ. ಎದುರಿಗೆ ಹಾಡಿಗಾಗಿ ಕಾಯುತ್ತಿರುವ ಪ್ರೇಕ್ಷಕರಿದ್ದಾರೆ. ವಿಚಾರ ಮಾಡುತ್ತ ಕೂಡುವುದಕ್ಕೆ ಅವಕಾಶವಿಲ್ಲ. ಹಾಡುತ್ತಿರಲೇಬೇಕು. ಹೀಗೆ ಹಾಡು ಹರಗಡಿಯದಂತೆ ಮುಂದುವರಿಸಿಕೊಂಡು ಹೋಗುವುದಕ್ಕೆ ಅವನಿಗಿರುವ ಸೌಲಭ್ಯ ಯಾವುದು? ಹಾಡಿನ ಪರಂಪರೆ ಅವನಿಗೆ ಸಹಾಯಕ್ಕೆ ಬರುತ್ತದೆ. ಆತ ಹಾಡಿದ ಪ್ರತಿಸಾಲಿನ ತುದಿಯನ್ನು ಅವನಿಗೆ ಹಿಮ್ಮೇಳ ಹಾಡುವ ಮೂವರು ಪುನಃ ಹೇಳಿ ಮುಂದಿನ ಸಾಲಿಗೆ ಪೂರ್ವ ತಯಾರಿ ಮಾಡುವಷ್ಟು ಹೊತ್ತು ವಾದ್ಯ ಬಾರಿಸುತ್ತಾ ಸೊಲ್ಲು ಹೇಳುತ್ತಾರೆ. ಈ ಸಣ್ಣ ಅವಧಿಯನ್ನು ಆತ ಮುಂದಿನ ಸಾಲಿನ ನಿರ್ಮಾಣಕ್ಕೆ ಬಳಸುತ್ತಾನೆ. ಇದಕ್ಕಿಂತ ಹೆಚ್ಚಾಗಿ ಅವನ ಸಹಾಯಕ್ಕೆ ಬರುವುದು ನಾದ ಸಮೀಕರಣ.

ಓದು ಬರಹ ಬಲ್ಲ ಕವಿಗೆ ಭಾಷೆಯ ಬಹು ಸಣ್ಣ ಭಾಗವೆಂದರೆ ಅರ್ಥಸಹಿತವಾದ ಶಬ್ದ. ಜನಪದ ಕವಿಗಾದರೆ ನಾದದ ಒಂದು ಸಣ್ಣ ಭಾಗವೇ ಶಬ್ದ. ಅರ್ಥಕ್ಕಿಂತ ಅದರ ನಾದಮಯತೆಗೆ ಮೊದಲ ಪ್ರಾಧಾನ್ಯ. ನುರಿತವರು ಹಾಡುವಾಗ ಸಹ ಇವನಿಗೆ ನಾದ ಪರಂಪರೆಯಿಂದಲೇ ಅರ್ಥಸಂವಹನೆಯಾಗುತ್ತದೆ. ಶಬ್ದಗಳ ಪ್ರಾಸಾನುಪ್ರಾಸ, ನಾದದ ಗುಂಗು ಅವುಗಳ ಕಡೆಗೇ ಹೆಚ್ಚಿನ ಒಲವು ಇರುತ್ತದೆ. ಈ ಶಬ್ದದ ಅರ್ಥವೇನೆಂದು ಆ ಹಾಡುಗಾರನನ್ನು ಕೇಳಿದರೆ ಆ ಶಬ್ದವುಳ್ಳ ಇಡೀ ಸಾಲನ್ನು ಮತ್ತೆ ಹಾಡಿ ಹೇಳಿಯೇ ಅರ್ಥ ಹೇಳಲು ಸಮರ್ಥನಾಗುತ್ತಾನೆ. ಜನಪದ ಕವಿಗಳಲ್ಲಿ ತಮ್ಮ ಜನಾಂಗದ ಜನಪ್ರಿಯ ಭಾವನೆಗಳು, ವಿಚಾರಗಳನ್ನು ನಾದ ಸಮೀಕರಣದಲ್ಲಿ ಹಿಡಿದಿಟ್ಟ (Formula) ಪದ, ಪದ-ಗುಂಪು, ವಾಕ್‌ಸರಣಿ ಅಥವಾ ಸಾಲು, ಅರ್ಥ ಸಾಲುಗಳು ಆಗಲೇ ತಯಾರಾಗಿ ಪ್ರಚಾರದಲ್ಲಿರುತ್ತದೆ.

ಈ ಕವಿಗಳು ಸಂದರ್ಭ, ಛಂದಸ್ಸು, ಧಾಟಿಗಳಿಗೆ ಅನುಗುಣವಾಗಿ ಜ್ಞಾಪಿಸಿಕೊಳ್ಳುತ್ತಾ ಹೋಗುತ್ತಾರೆ. ಕೆಲವು ಸಲ ಅನುಗುಣವಾದ ಇಡೀ ಹಿಂದಿನ ಪದ್ಯವನ್ನು ತಾವು ಮಾಡಿದ್ದಿರಲಿ, ಬೇರೆಯವರು ಮಾಡಿದ್ದಿರಲಿ ತುರ್ತು ಪರಿಸ್ಥಿತಿಗನುಗುಣವಾಗಿ ಒಂದೆರಡು ಹೊಸ ಪದ ಸೇರಿಸಿ ರಿಪೇರಿ ಮಾಡಿ ಗರ್ಜಕ್ಕೆ ಬಳಸಿಕೊಳ್ಳುತ್ತಾರೆ.

ಆದ್ದರಿಂದಲೇ ಬೇರೆ ಬೇರೆ ಸಂದರ್ಭದ ಅನೇಕ ಹಾಡುಗಳನ್ನು ಅವುಗಳ ತುಣುಕುಗಳನ್ನು ಸ್ವಚ್ಛಂದವಾಗಿ ಬಳಸಿದ ಉದಾಹರಣೆಗಳಿವೆ. ಕುಲವತಿ ಗರ್ಭಿಣಿಯಾದಾಗ ಹೇಳುವ ಹಾಡು ಆಗಲೇ ಜನಪದದಲ್ಲಿ ಪ್ರಚಾರದಲ್ಲಿದ್ದು, ಅನೇಕ ಸಂಕಲನಗಳಲ್ಲೂ ಅಚ್ಚಾಗಿದೆ. ಅರ್ಥದ ದೃಷ್ಟಿಯಿಂದಂತೂ ಸಂದರ್ಭಕ್ಕೆ ಹೊಂದಿಕೆಯಾಗುವುದಿಲ್ಲ. ಕುಲವತಿ ತನ್ನ ತವರಿಗೆ ಗರ್ಭಿಣಿಯಾದ ಸುದ್ದಿ ಹೇಳಿಕಳಿಸುವುದಿಲ್ಲ. ಹೋಗಲಿ, ಹಾಡಿನಲ್ಲಿ ಹೇಳಿರುವ ಪದಾರ್ಥಗಳ ರುಚಿ ನೋಡುವ ಸೌಭಾಗ್ಯವೂ ಅವಳಿಗಿಲ್ಲ. ಮುಂದೆ ಹಡೆಯುವಾಗಿನ ಹಾಡಿನಲ್ಲಿ ಬರುವ ‘ತಾಸ ತಾಸಿನ ಬ್ಯಾನಿ ತಾಳ ಬಾರಿಸಿದಾಗ! ಜಾವ ಜಾವಿನ ಬ್ಯಾನಿ ಜೀವಾನ ಹೋದಂತೆ’ (ಪು. ೭-೮). ಈ ಸಾಲುಗಳೂ ಗರತಿಯರ ಹಾಡಿನಲ್ಲಿದ್ದಂಥವು. ಜೋಗುಳಪದ (ಪು.೧೧) ಜಾನಪದದಲ್ಲಾಗಲೇ ಚಲಾವಣೆಯಲ್ಲಿರುವಂಥಾದ್ದು. ಶಿವ ಬರುವಾಗಿನ ‘ಶಿವ ಬಂದ ದೇವ ಬಂದ’ (ಪು.೭೭) ಎನ್ನುವುದು ಭಜನೆ ಹಾಡಿನ ತುಂಡು. ದೇವಿಯ ಎದುರಿಗೆ ಲಾಲಾವತಿ ಜನಪ್ರಿಯ ಭಜನೆ ಹಾಡಾದ “ಜ್ಞಾನ ಪೂರ್ಣಂ ಜಗಜ್ಯೋತಿ” ಹಾಡು ಹೇಳುತ್ತಾಳೆ. ಅದು ಶಾಂಭವಿಯನ್ನು ಕುರಿತ ಹಾಡಂತೂ ಅಲ್ಲ. ಅಲ್ಲದೇ ಕತೆಗಾರ ಫಾರ್ಮುಲಾ ಥರದ ಕೆಲವು ಹಾಡು ಮಾತುಗಳನ್ನು ಉದ್ದಕ್ಕೂ ಬಳಸಿದ್ದಾನೆ. ಪುನರುಚ್ಛಾರ ಹೇರಳವಾಗಿದೆ. ಲಕ್ಷಾಪತಿಯ ತಾಯಿ ಮತ್ತು ತಂದೆ ಅವನನ್ನು ಬೀಳ್ಕೊಡುವಾಗ ಮಾಡುವ ದುಃಖ, ಉಪದೇಶ ಒಂದೇ ಥರ ಇದೆ. ಇದನ್ನೆಲ್ಲಾ ಗಮನಿಸಿದರೆ ಈ ಹಾಡುಗಾರಿಕೆ ಯಾಕೆ ಮತ್ತು ಹೇಗೆ ಪ್ರಯಾಸವಿಲ್ಲದೇ ಹೊರಹೊಮ್ಮುತ್ತದೆಂದು ಈಗ ಸ್ಪಷ್ಟವಾಗುತ್ತದೆ.

ಕಥೆಗಾರ ತನ್ನ ಪ್ರೇಕ್ಷಕರನ್ನು ಗಮನಿಸಿ ಮಧ್ಯೆ ಒಂದು ಅಡ್ಡಕತೆಯನ್ನೂ ಹೇಳಿದ್ದಾನೆ. ಮುಖ್ಯ ಕಥೆಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ಇದರಲ್ಲಿ ಒಂದೂ ಹಾಡಿಲ್ಲ. ಬರೀ ಮಾತಿದೆ. ಅದು ಮುಗಿದ ಕೂಡಲೇ ಮತ್ತೆ ಪ್ರಾರಂಭದ ಪ್ರಾರ್ಥನೆ ಹೇಳಿ ಕಥೆ ಮುಂದುವರಿಸುತ್ತಾನೆ. ವಿಚಾರಿಸಲಾಗಿ ಇಂಥ ಅಡ್ಡ ಕಥೆ ಬೇಕಾದಷ್ಟು ಹೇಳಬಹುದು, ಮುಖ್ಯಕತೆಯಲ್ಲೇ- ಎಂದು ಕಥೆಗಾರ ಹೇಳಿ. ಹಾಸ್ಯಕ್ಕಾಗಿ ಇಂಥ ಕಥೆ ಹೇಳುತ್ತಾರೆಂಬುದು ಸ್ಪಷ್ಟವಾಗಿಯೇ ಇದೆ.

ಈ ಪ್ರದರ್ಶನದ ಪ್ರೇಕ್ಷಕರೂ ವಿಶಿಷ್ಟ. ಕಥೆ ಆರೇಳು ಗಂಟೆ ಸಾಗುವುದರಿಂದ ಚಹ ಕುಡಿಯುವುದಕ್ಕೆ ಮಧ್ಯೆ ಮಧ್ಯೆ ಹೋಗುತ್ತಾರೆ. ಮತ್ತೆ ಬರುತ್ತಾರೆ. ಆಕಳಿಸುತ್ತಾರೆ, ಅಲ್ಲೇ ಬೀಡಿ ಸೇದುತ್ತಾರೆ, ತಂಬಾಕು ಜಗಿಯುತ್ತಾರೆ, ಮಲಗುತ್ತಾರೆ, ಏಳುತ್ತಾರೆ. ಕಥೆ ಭಾಗ ಮನಸ್ಸಿಗೆ ತಟ್ಟಿದರೆ ಒಂದೆರಡು ರೂಪಾಯಿ ಬಹುಮಾನ ಕೊಡುತ್ತಾರೆ. ಮಂಗಳವಾಗುವಾಗ ಬೇಕಾದರೆ ಕಥೆಗಾರನಿಗೆ ಅಷ್ಟಿಷ್ಟು ದುಡ್ಡುಕೊಟ್ಟು ತಮ್ಮ ಹೆಸರಿಗೆ ಹರಕೆ ಹಾಡಿಸಬಹುದು. ಸೆರೆ ಬಿಡಿಸುವುದು ಬಂದಾಗಂತೂ ಕಥೆಗಾರನೊಂದಿಗೆ ನೇರ ಸಂಭಾಷಣೆಯೇ ನಡೆಯುತ್ತದೆ. ಪ್ರೇಕ್ಷಕರ ಈ ಸ್ವಚ್ಛಂದ ಗುಣ ಕಥೆಗಾರಿಕೆಯ ಸ್ವಚ್ಛಂದ ರೂಪಕ್ಕೆ ಹೊಂದಿಕೆಯಾಗುವುದಿಲ್ಲ. ಮುಖ್ಯ ಮಾತೆಂದರೆ ಉಚಿತವಾದ ಯಾವ ಹೊರಗಿನ ಅಂಶವನ್ನೂ ಎಷ್ಟೆಷ್ಟೂ ಅನುಮಾನಕ್ಕೆ ಆಸ್ಪದವಿಲ್ಲದಂತೆ ಒಳಗು ಮಾಡಿಕೊಳ್ಳುವ, ಗದ್ಯ, ಪದ್ಯ, ಒಗಟು, ಗಾದೆ, ಜನಪ್ರಿಯ ಹಾಡು ಹೀಗೆ ದಿನಬಳಕೆಯ ಮಾತಿನ ಸರ್ವರೂಪಗಳನ್ನು ಸಂಕೋಚವಿಲ್ಲದೆ ಬಳಸುವ ಈ ರೂಪದ ವಿಲಾಸ ಅನನ್ಯವಾದುದು. ಇದರ ಶಿಷ್ಟರೂಪ ಹರಿಕಥಾ ಕಾಲಕ್ಷೇಪದಲ್ಲಿದೆ. ಅದಕ್ಕೂ ಮುಂಚೆ ಇದೆ. ತಮಿಳಿನ ಶಿಲಪ್ಪದಿಗಾರಂ ಇದೆ. ಇವುಗಳ ಪರಂಪರೆಯ ಅರ್ಥವಂತಿಕೆ ಈ ಮೂಲಕ ಸಿಕ್ಕಬಹುದೆ?