ಕನ್ನಡ ವಿಶ್ವವಿದ್ಯಾಲಯ ವಿಜಯನಗರ ಸಾಮ್ರಾಜ್ಯದ ಸ್ಥಳದಲ್ಲೆ ಈಗ ತಲೆಯೆತ್ತಿದೆ. ಅದೇ ಕಾರಣಕ್ಕಾಗಿ ಈ ವಿಶ್ವವಿದ್ಯಾಲಯದ ಒಂದು ಜವಾಬ್ದಾರಿಯೆಂದರೆ ಕರ್ನಾಟಕದ ಸಮಗ್ರ ಇತಿಹಾಸವನ್ನು ಬರೆಯಿಸುವುದು. ಈ ಬರವಣಿಗೆಯ ಜವಾಬ್ದಾರಿ ಹೆಚ್ಚಿನದು. ನಮ್ಮ ದೇಶದ ಇತಿಹಾಸ ದೀರ್ಘಕಾಲದ್ದು ಮತ್ತು ಸಮೃದ್ಧವಾದದ್ದು. ಆದರೆ ಇತಿಹಾಸದ ಬರವಣಿಗೆ ಮಾತ್ರ ಇತ್ತೀಚಿನದು. ಬ್ರಿಟಿಷರು ತಮಗೆ ಅನುಕೂಲವಾಗುವಂತೆ ಈ ದೇಶದ ಇತಿಹಾಸವನ್ನು ರಚಿಸಿದರು. ಇತಿಹಾಸವೆಂದರೆ ಒಂದು ಕಥನಮಾರ್ಗ, ಅದೂ ಕೂಡ ಕಥೆಯ ಒಂದು ರೂಪ. ವಾಸ್ತವ ಸತ್ಯವೇ ಕಥೆಯ ಸತ್ಯವಾಗಲಾರದು. ಉದಾಹರಣೆಗೆ ಟಿಪ್ಪೂ ಬ್ರಿಟಿಷರ ಕಡುವೈರಿಯಾಗಿದ್ದ. ಅಂದಮೇಲೆ ಟಿಪ್ಪೂನ ವ್ಯಕ್ತಿತ್ವ ಈ ವೈರದಿಂದ ರೂಪಿತವಾಗುವುದು ಅನಿವಾರ್ಯವಾದದ್ದು. ಬ್ರಿಟಿಷರು ನಮ್ಮ ದೇಶವನ್ನು ಗೆದ್ದವರು. ಗೆಲುವಿನ ಕಣ್ಣಿನಲ್ಲಿ ಸೋಲಿನ ನೋಟ ಹೇಗೆ ಇರಬೇಕೋ ಹಾಗೆ ಅವರು ಬರೆದರು. ಅದರ ಜೊತೆಗೆ ಇತಿಹಾಸವನ್ನು ಬರೆಯುವ ಶಾಸ್ತ್ರವನ್ನೂ ಕಲಿಸಿದರು. ಶಾಸ್ತ್ರೀಯ ಇತಿಹಾಸದಲ್ಲಿರುವುದು ಕಾರ್ಯಕಾರಣ ಸಂಬಂಧ. ಐತಿಹಾಸಿಕ ಕಾಲಕ್ರಮದಲ್ಲಿ ಕಾಯ್ಯಕಾರಣ ಸಂಬಂಧದ ಹುರಿ ತೊಡಕು ಹಾಕಿಕೊಂಡಿದೆ. ಹೊಸ ಸಂಬಂಧ ಹುಟ್ಟಬೇಕಾದರೆ ಇದ್ದ ಸಂಬಂಧವನ್ನು ಬಿಡಿಸಿ ನೋಡಬೇಕಾಗುತ್ತದೆ. ನಮ್ಮ ದೇಶದಲ್ಲಿ ಈ ಶತಮಾನದ ಪ್ರಾರಂಭಕ್ಕಿಂತ ಮೊದಲು ಗಾಂಧೀಜಿಯಂಥ ಮಹಾತ್ಮ ಹೇಗೆ ಹುಟ್ಟಿದ? ಇಂಥ ಪ್ರಶ್ನೆಗಳಿಗೆ ಉತ್ತರ ಇತಿಹಾಸದಲ್ಲಿ ದೊರೆಯುವುದಿಲ್ಲ.

ಆದರೆ ಇತಿಹಾಸ ಹುಟ್ಟಿಕೊಂಡಿದೆ. ಇತಿಹಾಸವೂ ಒಂದು ಭಾಷೆ. ಆದ್ದರಿಂದ ಅದರಿಂದ ಬಿಡುಗಡೆ ಇಲ್ಲ. ಕರ್ನಾಟಕದ ಅಸ್ಮಿತೆಗಾಗಿ ಕರ್ನಾಟಕದ ಇತಿಹಾಸ ಅಗತ್ಯವಾಗಿದೆ. ಕನ್ನಡ ಭಾಷೆಯಂತೆ ಅದು ಈ ಭೌಗೋಲಿಕ ಪ್ರದೇಶದ ಅಸ್ಮಿತೆಗೆ, ನಾಡಿನ ಚಹರೆಪಟ್ಟಿಗೆ ಕಾರಣವಾಗಿದೆ. ಅನೇಕ ರಾಜವಂಶಗಳು ಈ ಪ್ರದೇಶದಲ್ಲಿ ರಾಜ್ಯಗಳನ್ನು ಕಟ್ಟಿದ್ದವು. ಜನತೆಗೆ ಒಂದು ರಾಜಕೀಯ ಅಸ್ತಿತ್ವವನ್ನು ಕಲ್ಪಿಸಿಕೊಟ್ಟವು. ವಾಸ್ತು, ಶಿಲ್ಪ, ನೃತ್ಯ, ಸಂಗೀತ, ಸಾಹಿತ್ಯಗಳು, ಸಾಂಸ್ಕೃತಿಕ ಇತಿಹಾಸವನ್ನು ರೂಪಿಸಿದವು. ನಮ್ಮ ಜನಕ್ಕೆ ಐತಿಹಾಸಿಕ ತಿಳುವಳಿಕೆಯ ಅಗತ್ಯವಿದೆ.

ಇತಿಹಾಸವೆಂದರೆ ಕೇವಲ ಗತ ಸಂಗತಿಗಳ ದಾಖಲೆ ಮಾತ್ರ ಅಲ್ಲ. ಮನುಷ್ಯನ ಅನುಭವ ಮತ್ತು ತಿಳುವಳಿಕೆಗಳು ಒಂದರೊಳಗೊಂದು ಕೂಡಿ ಹೋಗುವುದೇ ಇತಿಹಾಸದಲ್ಲಿದೆ.

ಒಂದಾಗಿಹವೈದು ಭೂತ, ಚಂದ್ರಸೂರ್ಯ ನಂದಿವಾಹನ ನಿಮ್ಮ
ತನುವಲ್ಲವೇ? ನಿಂದು ನೋಡಲು ಜಗಭರಿತವಾಗಿಪ್ಪೆ
ಇನ್ನು ನೋಯಿಸುವೆನಾರನಯ್ಯ ರಾಮನಾಥಾ?

ದೇವರದಾಸಿಮಯ್ಯನ ಈ ವಚನದ ಅರ್ಥಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಪಂಚಭೂತಗಳು, ಸೂರ್ಯ ಚಂದ್ರರು ಶಿವನ ಪ್ರತ್ಯಕ್ಷ ಅವಯವಗಳೆಂದು ಕಾಳಿದಾನ ತನ್ನ ‘ಅಭಿಜ್ಞಾನ ಶಾಕುಂತಲ’ದ ನಾಂದೀಪದ್ಯದಲ್ಲಿ ಹೇಳಿದ್ದಾನೆ. ಈ ತಿಳುವಳಿಕೆಯನ್ನು ಉಪಯೋಗಿಸಿದ ದಾಸಿಮಯ್ಯ ಜಗತ್ತಿನ ತುಂಬ ಶಿವನ ಪ್ರತಿಮೆಯನ್ನು ಕಾಣುತ್ತಾನೆ. ವಿಶ್ವವನ್ನೆಲ್ಲಾ ದೇವರು ವ್ಯಾಪಿಸಿದ್ದರೆ ಯಾರನ್ನು ನೋಯಿಸುವುದು?

ಅಹಿಂಸೆ ಜೈವ, ಬೌದ್ಧಧರ್ಮಗಳ ಒಂದು ಧಾರ್ಮಿಕ ತತ್ವ. ಇದು ದಾಸಿಮಯ್ಯನ ಅನುಭವದ ಆಳಕ್ಕೆ ಇಳಿದು ಈ ವಚನಗಳನ್ನು ರೂಪಿಸಿದೆ. ಈ ವಚನವನ್ನು ಈಗ ಮತ್ತೊಂದು ದೃಷ್ಟಿಯಿಂದ ನೋಡಿ ಅರ್ಥವಿಸಬಹುದು. ಅನುಭವದ ತಿಳಿವು, ತಿಳಿವಳಿಕೆಯ ಅನುಭವ ನಡೆಯುವುದು ಇತಿಹಾಸದಲ್ಲಿಯೇ.

ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಸಮಗ್ರ ಇತಿಹಾಸವನ್ನು ಬರೆಯಿಸಬೇಕೆಂದು ಯೋಚಿಸಿದಾಗ ಈ ವಿಚಾರಗಳು ನಮ್ಮಲ್ಲಿ ಅಸ್ಪಷ್ಟವಾಗಿ ರೂಪುಗೊಂಡಿದ್ದವು. ಭಾರತದ ಇತಿಹಾಸ ಕೇವಲ ಉತ್ತರ ಭಾರತದ ಇತಿಹಾಸವಾಗಿ, ದಕ್ಷಿಣ ಭಾರತದ ಇತಿಹಾಸ ಅಡಿಟಿಪ್ಪಣಿಗಳಲ್ಲಿ ಒಡಮೂಡುವುದನ್ನು ತಪ್ಪಿಸಬೇಕಾಗಿತ್ತು. ಅದು ತಪ್ಪಬೇಕಾದರೆ ಕರ್ನಾಟಕದ ಇತಿಹಾಸ ಸ್ವತಂತ್ರವಾಗಿ ರಚನೆಗೊಳ್ಳಬೇಕು. ನಮ್ಮ ಇತಿಹಾಸ ಕೇವಲ ದಿಗ್ವಿಜಯಗಳ ಇತಿಹಾಸ ಅಷ್ಟೇ ಆಗಬಾರದು. ಅದು ಸಾಂಸ್ಕೃತಿಕ ಇತಿಹಾಸವೂ ಆಗಬೇಕು. ರಾಜಕೀಯಕ್ಕೂ ಇತಿಹಾಸಕ್ಕೂ ಇರುವ ಸಂಬಂಧ ಅವಿಭಾಜ್ಯವೆಂದು ಒಪ್ಪಿಕೊಂಡರೂ ಈ ಮಾತನ್ನು ಹೇಳಬೇಕಾಗಿದೆ. ಇತಿಹಾಸದ ಬರೆವಣಿಗೆಯೂ ಬೇರೆ ಸ್ವರೂಪವನ್ನು ತಾಳಬೇಕಾಗಿದೆ. ಅವೆಲ್ಲ ಒಮ್ಮೆಲೆ ಆಗುವ ಕೆಲಸಗಳಲ್ಲ. ಮೊದಲು ಕರ್ನಾಟಕದ ಸಮಗ್ರ ಇತಿಹಾಸದ ಸಾಮಗ್ರಿ ಒಂದು ಕಡೆಗೆ ದೊರೆಯುವಂತಾಗಬೇಕು. ಈಗ ಆ ಕೆಲಸ ಪ್ರಾರಂಭವಾಗಿದೆ. ಇತಿಹಾಸದ ಈ ಸಂಪುಟಗಳಲ್ಲಿ ಈ ಪ್ರದೇಶದ ಅದ್ಭುತವಾದ ಸಾಂಸ್ಕೃತಿಕ ಮತ್ತು ರಾಜಕೀಯ ವಿಕಾಸದ ಚಿತ್ರಗಳಿವೆ. ಕರ್ನಾಟಕದ ಏಕೀಕರಣ ರಾಜಕೀಯವಾಗಿ ನಡೆದು ಹಳೆ ಮಾತಾಯಿತು. ಕರ್ನಾಟಕದ ಸೀಮಾರೇಖೆಗಳು ಅಲ್ಲಲ್ಲಿ ವಾದಗ್ರಸ್ತವಾಗಿದ್ದರೂ ನೃಪತುಂಗನಂತೆ ನಾವು ಈಗ ನಮ್ಮ ಪ್ರದೇಶ ಯಾವುದೆಂದು ನಿಶ್ಚಯಿಸಿಕೊಂಡಿದ್ದೇವೆ. ನಮ್ಮ ಇತಿಹಾಸ ಈ ಪ್ರಾದೇಶಿಕತೆಯಲ್ಲಿ ಪುನಃ ಸೇಷ್ಟಿಯಾಗಬೇಕು. ಇತಿಹಾಸ ಪ್ರತ್ಯಭಿಜ್ಞಾನದ ಫಲವೆಂದು ಬೇರೆ ಹೇಳುವ ಕಾರಣವಿಲ್ಲ. ಪ್ರತ್ಯಭಿಜ್ಞಾನ ಭಿನ್ನ ಭಿನ್ನವಾದ ಅಂಶಗಳನ್ನು ಒಳಗೂಡಿಸಿ ಒಂದು ಸಂಬಂಧವನ್ನು ಏರ್ಪಡಿಸಿಕೊಳ್ಳುತ್ತದೆ. ಈ ಸಂಬಂಧದ ಸೂತ್ರವನ್ನು ಅನುಸರಿಸುತ್ತಲೇ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದೆ.


* ಕರ್ನಾಟಿಕ ಚರಿತ್ರೆ ಸಂಪುಟಗಳಿಗೆ ಬರೆದ ಮುನ್ನುಡಿ-೧೯೯೭