ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಸೃಷ್ಟಿಸುವ ಸಂಸ್ಥೆ ಎಂಬ ನಮ್ಮ ಧ್ಯೇಯಕ್ಕೆ ಅನುಗುಣವಾಗಿ ಸಾಕಷ್ಟು ಉತ್ತಮ ಗ್ರಂಥಗಳು ಪ್ರಸಾರಾಂಗದಿಂದ ಪ್ರಕಟವಾಗಿವೆ. ನಿರ್ಲಕ್ಷ್ಯಕ್ಕೆ ಒಳಗಾದ ಜ್ಞಾನ ಪರಂಪರೆಗಳತ್ತ ಗಮನ ಹರಿಸಿ ಅವುಗಳ ಮಹತ್ವವನ್ನು ಮನಗಾಣಿಸುವ ನಮ್ಮ ಉದ್ದೇಶದ ಹಿನ್ನೆಲೆಯಲ್ಲಿ ಅನೇಕ ಯೋಜನೆಗಳನ್ನು ನಾವು ಹಾಕಿಕೊಂಡಿದ್ದೇವೆ. ಅದರಲ್ಲಿ ಅತ್ಯಂತ ಮಹತ್ವದ್ದು ಈ ಬುಡಕಟ್ಟು ಮಹಾಕಾವ್ಯಗಳ ಸಂಗ್ರಹ ಮತ್ತು ಪ್ರಕಟಣಾ ಯೋಜನೆ.

ನಮ್ಮ ನಾಡಿನ ಸಾಂಸ್ಕೃತಿಕ ಪುರಾಣ ಎಂದರೆ ಅದು ಕೇವಲ ರಾಮಾಯಣ ಮಹಾಭಾರತಗಳ ಪುರಾಣ ಎಂಬ ಸಾರ್ವತ್ರಿಕ ಅಭಿಪ್ರಾಯವಿರುವ ಈ ಸನ್ನಿವೇಶದಲ್ಲಿ, ಬುಡಕಟ್ಟು ಮಹಾಕಾವ್ಯಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಹುಡುಕುವ ಕಾರ್ಯಕ್ಕೆ ನಾವು ಕೈ ಹಾಕಿದ್ದೇವೆ. ಮಾತೆತ್ತಿದರೆ ‘ಭಾರತೀಯ ಸಂಸ್ಕೃತಿ’ ಎಂದು ಸಾರ್ವತ್ರೀಕರಿಸುವ ಭ್ರಮೆಯಿಂದ ಹೊರಬಂದು ಪ್ರತಿಯೊಂದು ಭಾಷೆಯ ನೆಲಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ, ತನ್ನದೇ ಆದ ಸಂಸ್ಕೃತಿ ಇದೆ ಎಂಬ ವಾಸ್ತವದ ನೆಲೆಯಲ್ಲಿ, ನೆಲದ ಗುಣ ಹುಡುಕುವ ಕಾರ್ಯಕ್ಕೆ ನಾವೀಗ ಮುಂದಾಗಬೇಕಿದೆ. ಅಖಿಲ ಭಾರತೀಯ ಮಟ್ಟದ ರಾಮ, ಕೃಷ್ಣ, ಶಿವ ಅಥವಾ ಇತರೆ ದಶಾವತಾರದ ದೈವಗಳಂತಲ್ಲದೆ ಒಂದು ವಿಶಿಷ್ಟ ಭೂ ಪ್ರದೇಶದ ಅಥವಾ ಒಂದು ಬುಡಕಟ್ಟಿನ ಪರಂಪರೆಯಲ್ಲಿ ಸೃಷ್ಟಿಯಾಇರುವ ದೈವ ಪುರುಷರು ಇವತ್ತಿನ ಸಂಸ್ಕೃತಿ ಚಿಂತಕರಿಗೆ ಮುಖ್ಯವಾಗಬೇಕಾಗಿದೆ. ಕಾಡು ಮತ್ತು ನಾಡಿನ ಹತ್ತಾರು ಜನ ವಗ್ಗಗಳು ಪೂಜಿಸುವ ದೈವಗಳು ಮತ್ತು ಆ ದೈವಗಳ ಬಗ್ಗೆ ಅವರು ಕಟ್ಟಿಕೊಂಡ ಕಥನಗಳು ನೂರಾರು. ಈ ಕಥನಗಳೇ ನಿಜವಾದ ಅರ್ಥದಲ್ಲಿ ನಮ್ಮ ಸಂಸ್ಕೃತಿಯ ಇತಿಹಾಸವನ್ನು ನಿರೂಪಿಸಬಲ್ಲ ಮುಖ್ಯ ಸಂಗತಿಗಳು. ಈ ಕಥನಗಳನ್ನು ಅಭ್ಯಸಿಸುವುದರಿಂದ ಭಾರತದ ಇರುವರೆಗಿನ ವ್ಯವಸ್ಥೆಯಲ್ಲಿ ನಿರ್ಲಕ್ಷಿಸಲ್ಪಟ್ಟ ಜನವರ್ಗಗಳಿಗೆ ಕೂಡ ಒಂದು ಶ್ರೀಮಂತ ಸಂಸ್ಕೃತಿ ಇದೆ ಎಂಬುದನ್ನೂ ಆ ಸಂಸ್ಕೃತಿಗೆ ಒಂದು ಪರಂಪರೆ ಇದೆ ಎಂಬುದನ್ನೂ ಆ ಪರಂಪರೆಯೇ ಒಂದು ನಾಡಿನ ವಿವೇಕ ಮತ್ತು ಜ್ಞಾನವನ್ನು ಕಾಪಾಡಿಕೊಂಡು ಬಂದಿದೆ ಎಂಬುದನ್ನೂ ನಾವು ತಿಳಿಯುತ್ತೇವೆ. ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪ ಇಂಥ ಸಾಂಸ್ಕೃತಿಕ ನಾಯಕರ ದೀರ್ಘ ಕಥಾನಕಗಳು ಮಹಾಕಾವ್ಯಗಳ ರೂಪದಲ್ಲಿ ಈಗ ಹೊರಬರುತ್ತಿದ್ದು ಅದ್ಯಯನಕಾರರಿಗೆ ಹೊಸ ಬೆಳಕನ್ನು ನೀಡುತ್ತವೆ ಎಂಬ ನಂಬಿಕೆ ನಮ್ಮದು.

ಈ ಯೋಜನೆಯ ಕಾರ್ಯಭಾರವನ್ನು ವಹಿಸಿಕೊಂಡಿರುವ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಹಿ. ಚಿ. ಬೋರಲಿಂಗಯ್ಯ ಗಿರಿಜನ ಸಂಸ್ಕೃತಿಯನ್ನು ಪ್ರೀತಿಸುವ ಕೆಲವೇ ವಿದ್ವಾಂಸರಲ್ಲಿ ಒಬ್ಬರು. ಕರ್ನಾಟಕದ ಅನೇಕ ಕಲಾವಿದರ ನಿಕಟ ಪರಿಚಯವಿರುವ ಇವರು, ಉತ್ತಮ ಗಾಯಕರನ್ನು ಆಯ್ಕೆಮಾಡಿ ಮಹತ್ವದ ಕಾವ್ಯಗಳನ್ನು ಸಂಗ್ರಹಿಸಿದ್ದಾರೆ. ಹಗಲಿರುಳು ದುಡಿದು ಈ ಬೃಹತ್ ಯೋಜನೆಯನ್ನು ಕಾರ್ಯಗತ ಗೊಳಿಸಿದ್ದಾರೆ. ಆ ಸ್ತುತ್ಯ ಕಾರ್ಯಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ. ಈ ಮಹಾಕಾವ್ಯಗಳು ಕನ್ನಡದ ಬಹುಮುಖ್ಯವಾದ ಜ್ಞಾನಪರಂಪರೆಯೊಂದನ್ನು ಪರಿಚಯಿಸುವುದರ ಜೊತೆಗೇ ಆಸಕ್ತರಿಗೆ, ಅಧ್ಯಯನಕಾರರಿಗೆ, ಸಂಸ್ಕೃತಿ ಚಿಂತಕರಿಗೆ ಉತ್ತಮ ಆಕರಗಳಾಗುತ್ತವೆಂದು ಆಶಿಸುತ್ತೇನೆ.

* * *


* ‘ಜನಪದ ಮಹಾಕಾವ್ಯ’ಗಳಿಗೆ ಬರೆದ ಮುನ್ನುಡಿ