ನಮ್ಮ ವಿಶ್ವವಿದ್ಯಾಲಯಕ್ಕೆ ಈಗ ಮೂರನೆಯ ವರ್ಷ ನಡೆಯುತ್ತಿದೆ. ಒಂದು ದೊಡ್ಡ ಸಾಮ್ರಾಜ್ಯ ಮೆರೆದ ನೆಲದಲ್ಲಿ ಈಗ ಒಂದು ವಿಶ್ವವಿದ್ಯಾಲಯ ತಲೆಯೆತ್ತಿದೆ. ಅದು ಇನ್ನೂ ಬೆಳೆಯಬೇಕಾದ ವಿಶ್ವವಿದ್ಯಾಲಯ. ರಥಬೀದಿಯ ನಾಲ್ಕು ಮಂಟಪಗಳಲ್ಲಿ ತಾತ್ಪೂರ್ತಿಕವಾಗಿ ಪ್ರಾರಂಭವಾದ ವಿಶ್ವವಿದ್ಯಾಲಯದ ಕಚೇರಿ ಈಗ ಸ್ವಂತ ಕಟ್ಟಡದಲ್ಲಿ ಬಂದು ನೆಲೆಸಿದೆ. ಬಯಲಿನಲ್ಲಿ ಕಟ್ಟಿರುವ ಈ ಆಲಯದಿಂದ ಬಯಲಿಗೂ ಒಂದು ಅರ್ಥ ಬರಬೇಕು, ಬರುತ್ತದೆ. ವಿಜಯನಗರದ ಸಾಮ್ರಾಟರು ದಂಡಯಾತ್ರೆಗಳ ಮೂಲಕವಾಗಿ ಕರ್ನಾಟಕ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದಾಗಲೇ ನಮ್ಮ ನೂರೊಂದು ವಿರಕ್ತರು, ಹರಿಹರ ರಾಘವಾಂಕರು, ವಿದ್ಯಾರಣ್ಯರ ತಮ್ಮ ಸಾಯಣಾಚಾರ್ಯರು, ಹರಿದಾಸರು ಸಂಸ್ಕೃತಿ ಪ್ರಸಾರದ ಮೂಲಕ ಬೇರೊಂದು ಮಹತ್ತರವಾದ ಕಾಯಕದಲ್ಲಿ ತೊಡಗಿದ್ದರು. ಅದೇ ಕಾಯಕ ಈಗ ಮುಂದುವರಿಯುತ್ತಿದೆ. ನಮ್ಮ ವಿಶ್ವವಿದ್ಯಾಲಯವನ್ನು ಉದ್ಘಾಟಿಸುತ್ತಾ ನಮ್ಯಾನ್ಯ ಶ್ರೀ ಮೊಯ್ಲಿ ಅವರೇ ಹಿಂದೆ ಹೇಳಿದ್ದರು: “ಕರ್ನಾಟಕ ಸಾಂಸ್ಕೃತಿ ಸಾಮ್ರಾಜ್ಯದ ಸಂಸ್ಥಾಪನೆ ಇಂದಿನಿಂದ ಆಗಿದೆ” ಎಂದು. ಆಗ ಮತ್ತು ಆಗಿನ ನಡುವಿನ ವ್ಯತ್ಯಾಸವೆಂದರೆ ಈಗ ಹೆಚ್ಚು ಸಂಘಟಿತವಾಗಿ ಆ ಕಾಯಕ ನಡೆಯುತ್ತಿದೆ.

ವಿಶ್ವವಿದ್ಯಾಲಯದ ಸಂಸ್ಥೆ ಕೂಡ ಒಂದು ಸಂಘಟನೆಯೇ. ವಿಶ್ವವಿದ್ಯಾಲಯದ ಉದ್ದೇಶಕ್ಕೆ ತಕ್ಕಂತೆ ಈ ಸಂಘಟಿತ ಕಾರ್ಯ ನಡೆಯುತ್ತಿದೆ. ಉದ್ದೇಶವನ್ನು ಸದಾ ಕಣ್ಣೆದುರಿಗೆ ಇರುವಂತೆ ಮಾಡುವುದು ಈ ಸಂಘಟನೆ. ನಮ್ಮ ಉದ್ದೇಶವೆಂದರೆ, ಈ ಮೊದಲೇ ಸ್ಪಷ್ಟಪಡಿಸಿರುವಂತೆ ವಿದ್ಯೆಯ ಸೃಷ್ಟಿ. ಇದ್ದ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಹಂಚುವ ಕೆಲಸಕ್ಕಿಂತ ಹೆಚ್ಚು ಮಹತ್ವದ ಕೆಲಸವೆಂದರೆ ಈ ವಿದ್ಯೆಯನ್ನು ಸೃಷ್ಟಿ ಮಾಡುವುದು. ಇದು ಸೃಷ್ಟಿಯಾಗಬೇಕಾಗಿರುವುದು ಕನ್ನಡದಲ್ಲಿ. ವಿಶ್ವವಿದ್ಯಾಲಯದ ಧ್ಯೇಯವಾಕ್ಯವನ್ನು ಆರಿಸುವಾಗ ನಾವು ಹಲವಾರು ಅಂಥ ವಾಕ್ಯಗಳನ್ನು ಸಂಗ್ರಹಿಸಿದ್ದೆವು. ಅವುಗಳಲ್ಲಿ ಒಂದನ್ನು ಆಯ್ದುಕೊಂಡಿದ್ದೇವೆ. ಆದರೆ ಉಳಿದ ಧ್ಯೇಯವಾಕ್ಯಗಳನ್ನು ನಾವು ಮರೆತಿಲ್ಲ. ಅವುಗಳಲ್ಲಿ ಒಂದು ಇನ್ನೂ ನನ್ನ ನೆನಪಿನಲ್ಲಿದೆ. ಅದು ಬೇಂದ್ರೆಯವರ ಒಂದು ಕವಿತೆಯ ಸಾಲು. ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು’. ಇದು ಮರೆತು ಹೋಗುವ ಮಾತಲ್ಲ. ನಾವು ಕನ್ನಡವನ್ನು ಎಲ್ಲದಕ್ಕೂ ಉಪಯೋಗಿಸುತ್ತಿದ್ದೇವೆ ನಿಜ. ಆದರೆ ನಾವಾಡುವ ಕನ್ನಡ, ನಾವು ಬರೆಯುವ ಕನ್ನಡ, ಕನ್ನಡ, ಕನ್ನಡವನ್ನು ಧ್ವನಿಸುತ್ತಿದೆಯೇ? ನಮ್ಮ ವಿಚಾರಗಳೂ ಕನ್ನಡವಾಗಿವೆಯೆ? ಕನ್ನಡ ನಮ್ಮ ಮನಸ್ಸಿನಲ್ಲಿ ಪ್ರತಿಷ್ಠಿತವಾಗಬೇಕು, ಹಾಗೆ ಮನಸ್ಸಿನಲ್ಲಿ ಪ್ರತಿಷ್ಠಿತವಾದ ಕನ್ನಡ ನಮ್ಮ ಬಾಯಿಂದ ಹೊರಬರಬೇಕು, ಬರಹಕ್ಕೆ ಇಳಿಯಬೇಕು. ಇದು ತ್ರಿಕರಣಪೂರ್ವವಾಗಿ ನಡೆಯಬೇಕಾದ ಸಾಧನೆ. ವಿಚಾರಗಳು ಎಲ್ಲಿಂದಾದರೂ ಬರಬಹುದು, ಅವು ಕನ್ನಡದಲ್ಲಿ ಬಂದರೆ ಸಾಕು ಎಂಬ ಒಂದು ಉದಾರ ದೃಷ್ಟಿಯನ್ನಿಟ್ಟುಕೊಂಡು ಸುಮ್ಮನೆ ಕೊಡುವಂತಿಲ್ಲ. ಕನ್ನಡ ಕೇವಲ ಬೇರೆ ಕಡೆಯಿಂದ ಬಂದ ವಿಚಾರಗಳಿಗೆ ಮಾಧ್ಯಮವಾಗಬಾರದು. ಕನ್ನಡದ ವೈಚಾರಿಕತೆ ಕನ್ನಡದ ಅನುಭವದಂತೆ ಕನ್ನಡದ ಭಾಷೆಯಲ್ಲಿ ಮೈದಾಳಬೇಕು. ನಮ್ಮ ವಿಶ್ವವಿದ್ಯಾಲಯದ ಗುರಿ ಅದಾಗಿದೆ. ಈಗುರಿಯನ್ನು ನಾವೆಷ್ಟು ಸಾಧಿಸಿದ್ದೇವೆಂಬ ಮಾತು ಇಲ್ಲಿ ಬಹಳ ಮುಖ್ಯವಲ್ಲ, ಅದುಬೆಳಗಾದೊಡನೆ ನನಸಾಗುವ ಕನಸೂ ಅಲ್ಲ. ನಮ್ಮ ಸಂಶೋಧನೆ ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದಿಷ್ಟೇ ಈಗ ಹೇಳಬಲ್ಲೆ. ವಿಶ್ವವಿದ್ಯಾಲಯದ ಗಮನದಲ್ಲಿ ಯಾವಾಗಲೂ ಈ ಲಕ್ಷ್ಯ ಇದ್ದೇ ಇರುತ್ತದೆ. ಅನೇಕ ಕಡೆ ನಾವು ಎಡವಿ ಮುಂದುವರಿದದ್ದಿದೆ. ‘ನಡೆವರೆಡಹದೆ ಕುಳಿತವರು ಎಡಹುವರೇ’ ಎಂದು ಕವಿ ರಾಘವಾಂಕನೇ ಹೇಳಿದ್ದಾನೆ.

ಇಂದು ಇಲ್ಲಿ ಈ ಹೊಸ ಕಟ್ಟಡಗಳ ಉದ್ಘಾಟನೆ ನಡೆಯುತ್ತಿದೆ. ಈ ಕಟ್ಟಡಗಳ ಉದ್ಘಾಟನೆ ಎಂದರೆ ಕನ್ನಡದ ಈ ಕಾಯಕ್ಕೆ ಒಂದು ಸಾಕಾರರೂಪ ಬಂದಂತೆ. ನಾನು ಈ ಮೊದಲೇ ಹೇಳಿದಂತೆ ಈ ಬಯಲಿನಲ್ಲಿ ಆಲಯವೊಂದು ತಲೆಯೆತ್ತಿದೆ. ಈ ಆಲಯ ಬಯಲಿಗೆ ಅರ್ಥವನ್ನು ಕೊಡಬೇಕು, ಕೊಡುತ್ತದೆ. ವಿಶ್ವವಿದ್ಯಾಲಯ ಬಸವಣ್ಣನವರ ಮಹಾಮನೆಯಾಗಬೇಕು. ಮನೆಯನ್ನು ಕಟ್ಟುವಂಥ ಸೃಜನಶೀಲ ಕಾಯ್ಯ ಯಾವುದೂ ಇಲ್ಲ ಎಂದು ಜರ್ಮನ್ ತತ್ವಜ್ಞಾನಿ ಮಾರ್ಟಿನ್ ಹೆಡ್‌ಗರ್ ಹೇಳುತ್ತಾನೆ. ಒಂದು ಗ್ರಂಥ ರಚನೆಯಷ್ಟೇ ಸೃಜನಶೀಲವಾದ ಈ ಕಟ್ಟಡದ ನಿರ್ಮಾಣವಾದದ್ದು ನಮ್ಮ ಸರ್ಕಾರದ ಪರವಾಗಿ, ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ವೀರಪ್ಪ ಮೊಯಿಲಿ ಅವರ ಪರವಾಗಿ. ಈ ಕಟ್ಟಡ ನಮ್ಮ ಜನತೆಯ ಆಶೋತ್ತರಗಳ ಪ್ರತೀಕವಾಗಿ ನಿಂತಿದೆ. ವಿದ್ಯೆಯ ಪ್ರಸಾರಕ್ಕೆ ಕೊಟ್ಟ ಅಭಯವೆಂದರೆ ಇದು. ಹಿಂದೆ ವಿರೂಪಾಕ್ಷನ ದೇವಸ್ಥಾನದ ರಥಬೀದಿಯ ಮಂಟಪಗಳಲ್ಲಿ ನಾವು ಇದ್ದಾಗ ತುಂಗಭದ್ರೆಯ ಮಹಾಪೂರ ಬಂದು ಗ್ರಂಥಗಳೆಲ್ಲ ಹೊಳೆಯ ಪಾಲಾದವು. ಇಲ್ಲಿ ಆ ಭಯವೇನಿಲ್ಲ. ಇಂಥ ಕಟ್ಟಡದ ಉದ್ಘಾಟನೆಗಾಗಿ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿ ಬಂದಿದ್ದಾರೆ. ಅವರಿಗೆ ಹೃತ್ಪೂರ್ವಕವಾಗಿ ಸ್ವಾಗತ ಕೋರುತ್ತೇನೆ. ಅವರ ಜೊತೆಗೆ ಸಮಾಜ ಕಲ್ಯಾಣ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪನವರು ಇಂದು ಈ ಸಮಾರಂಭದ ಅಧ್ಯಕ್ಷರಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ನಿಮ್ಮೆಲ್ಲರಿಗೂ ಸ್ವಾಗತ. ಕಾರಣವಿಷ್ಟೇ ಇಲ್ಲಿ ಮನೆ ನಿಮ್ಮದೇ ಆಗಿದೆ. ಮನೆಯ ಕರ್ತವ್ಯವೆಂದರೆ ಅತಿಥಿಗಳಿಗೆ ಸ್ವಾಗತ ಬಯಸುವುದು, ಅತಿಥಿಗಳು ಬಂದರೆ ಮಾತ್ರ ಮನೆ, ಮನೆಯಾಗುತ್ತದೆ. ಎಲ್ಲರಿಗೂ ನಮಸ್ಕಾರ.

* * *


* ತ್ರಿಪದಿ, ತುಂಗಾ, ಭದ್ರಾ, ಕೂಡಲ ಸಂಗಮ ಮತ್ತು ಗಿರಿಸೀಮೆಗಳ ಉದ್ಘಾಟನೆಯ ಸಂದರ್ಭದಲ್ಲಿ ಮಾಡಿದ ಸ್ವಾಗತ ಭಾಷಣ.