ಹಂಪಿಯ ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವ ಒಂದು ಸಂಸ್ಥೆಯೇ ಹೊರತು ಅದು ವಿದ್ಯೆಯನ್ನು ಕಲಿಸುವ ಸಂಸ್ಥೆಯಲ್ಲ. ಒಂದು ದೃಷ್ಟಿಯಿಂದ ಇದು ವಿದ್ಯೆಯನ್ನು ನಿರ್ಮಿಸುವ ಸಂಸ್ಥೆಯಾಗಿದೆ. ನಮ್ಮ ದೇಶದಲ್ಲಿ ಹಳೆಯ ಕಾಲದ ತಿಳುವಳಿಕೆಯೊಂದಿದೆ. ಅಲ್ಲದೆ ಪಶ್ಚಿಮದಿಂದ ಹರಿದು ಬರುತ್ತಿರುವ ಜ್ಞಾನ ಪ್ರವಾಹವೂ ಇದೆ. ಈ ಎರಡೂ ತಿಳುವಳಿಕೆಗಳು ಒಂದಕ್ಕೊಂಡು ಸಂಧಿಸಿ ಬೆಳಕನ್ನು ಉಂಟುಮಾಡಿವೆ, ಜೊತೆಗೆ ದಿಗ್ಭ್ರಮೆಯನ್ನೂ ತಂದಿವೆ. ಈ ತಿಳುವಳಿಕೆಗಳ ವಿವೇಕದ ವಿನಿಯೋಗ ಇಂದು ಅಗತ್ಯವಾಗಿದೆ. ಇಂಥ ವಿನಿಯೋಗಕ್ಕಾಗಿ ಹೊಸ ಬಗೆಯ ಶಾಸ್ತ್ರವಿಧಾನಗಳು ನಮಗಿಂದು ಬೇಕಾಗಿವೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಯ ಗುರಿಯೆಂದರೆ ಈ ಶಾಸ್ತ್ರ ವಿಧಾನಗಳ ನಿರ್ಮಾಣ. ಈ ಬಗೆಯ ಶಾಸ್ತ್ರ ಸಾಹಿತ್ಯವನ್ನು ಹುಟ್ಟಿಸುವುದು ನಮ್ಮ ವಿಶ್ವವಿದ್ಯಾಲಯದ ಕರ್ತವ್ಯವಾಗಿದೆ. ಶಾಸ್ತ್ರ-ಕಲೆ, ಅಭಿಜಾತ-ಜಾನಪದ, ಮಾರ್ಗ-ದೇಸಿ, ಸ್ವಕೀಯ-ಪರಕೀಯ, ಪೌರ್ವಾತ್ಯ-ಪಾಶ್ಚಾತ್ಯ ಈ ಬಗೆಯ ದ್ವಂದ್ವಗಳ ಸಾಮರಸ್ಯ ಮತ್ತು ಸಂಘರ್ಷಗಳ ಒಡಲಿನಲ್ಲಿ ಹುಟ್ಟಿ ಬರುವ ತಿಳುವಳಿಕೆಯನ್ನು ಹಿಡಿದುಕೊಂಡು ಕನ್ನಡದಲ್ಲಿ ಅದಕ್ಕೆ ಅಭಿವ್ಯಕ್ತಿಯನ್ನು ಕೊಡಬೇಕಾಗಿದೆ. ಭಾಷೆಯಲ್ಲಿ ಮೂಡಿಬರುವ ತಿಳುವಳಿಕೆ ಮಾತ್ರ ಉಪಯುಕ್ತವಾಗಬಲ್ಲದು. ಅನುವಾದ, ವಿವರಣೆ, ಟೀಕೆ, ವಿಮರ್ಶೆ ಇಂಥ ವಿಧಾನಗಳನ್ನು ಅನುಸರಿಸುತ್ತ ತಿಳುವಳಿಕೆಯ ಹೊಸ ಸಾಹಿತ್ಯ ನಿರ್ಮಾಣವಾಗಬೇಕು. ಅಂಥ ಎಲ್ಲ ಬಗೆಯ ಸಂಶೋಧನಕ್ಕೂ ಕನ್ನಡ ವಿಶ್ವವಿದ್ಯಾಲಯದಲ್ಲಿ ಅನುಕೂಲವಿದೆ, ಅವಕಾಶವೂ ಇದೆ.

ಹೀಗೆ ಮೂಡಿಬರುವ ಸಾಹಿತ್ಯ ಪ್ರಕಟವಾಗಬೇಕು; ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಇಂಥ ಗುರುತರವಾದ ಜವಾಬ್ದಾರಿಯಿದೆ. ವಿದ್ಯೆಯ ಸೃಷ್ಟಿಯಾಗುವುದು ಈ ಪ್ರಸಾರಾಂಗದಲ್ಲಿ. ನಾಡಿನ ತಜ್ಞರಿಂದ ಗ್ರಂಥಗಳನ್ನು ಬರೆಯಿಸಿ ಪ್ರಕಟಿಸುವುದರ ಜತೆಗೆ ವಿಶ್ವವಿದ್ಯಾಲಯ ಸೃಷ್ಟಿಸುತ್ತಿರುವ ಸಾಹಿತ್ಯವನ್ನೂ ಅದು ಪ್ರಕಟಿಸಬೇಕು. ಇದು ತಿಳುವಳಿಕೆಗೆ ಪರಿಪ್ರೇಕ್ಷ್ಯವನ್ನು ಕಟ್ಟುವ ಕೆಲಸ. ನಾಡಿನ ಪ್ರಕೃತಿಯಂತೆ ನಾಡಿನ ಸಂಸ್ಕೃತಿ ಕೂಡ ಈ ಪರಿಪ್ರೇಕ್ಷವಿಲ್ಲದೆ ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಕಲ್ಲಿನಲ್ಲಿರುವ ಶಾಸನಗಳನ್ನು ಕಣ್ಣೆತ್ತಿ ನೋಡದಿರುವ ಜನ ಅವೇ ಪುಸ್ತಕದಲ್ಲಿ ಪ್ರಕಟಗೊಂಡರೆ ಓದುತ್ತಾರೆ, ಅರ್ಥಮಾಡಿಕೊಳ್ಳುತ್ತಾರೆ. ಜನರಾಡುವ ಶಬ್ದಗಳನ್ನೇ ಕೋಶದಲ್ಲಿ ಸಂಗ್ರಹಿಸಿದರೆ ಆ ಶಬ್ದಗಳಿಗೆ ತಿಳುವಳಿಕೆಯ ಬೆಲೆ ಬರುತ್ತದೆ. ನಮ್ಮ ಪ್ರಸಾರಾಂಗ ಇದಕ್ಕಿಂತ ವಿಶಾಲವಾದ, ಹೆಚ್ಚು ಪರಿಣಾಮಕಾರಿಯಾದ ಪರಿಪ್ರೇಕ್ಷ್ಯವನ್ನು ಕಟ್ಟುವುದರಲ್ಲಿ ತೊಡಗಿದೆ. ಪ್ರಸಾರಾಂಗದ ಪ್ರಕಟನೆಗಳಿಗೆ ಇಂಥ ಒಂದು ಸಾರ್ಥಕವಾಗಬಲ್ಲ ಉದ್ದೇಶವಿದೆ. ಲೋಕದಲ್ಲಿಯ ತಿಳುವಳಿಕೆಯನ್ನು ಸಂಗ್ರಹಿಸಿ ತಿರುಗಿ ಲೋಕಕ್ಕೇ ದಾನ ಮಾಡು ಒಂದು ಪ್ರಕ್ರಿಯೆ ಪ್ರಸಾರಾಂಗದಲ್ಲಿ ನಡೆಯುತ್ತಿದೆ. ಸಂಗ್ರಹವಾದ ತಿಳುವಳಿಕೆಗೆ ಗ್ರಂಥಗಳ ರೂಪವನ್ನು ಕೊಡುವ ಹೊಣೆಗಾರಿಕೆ ಈ ಪ್ರಸಾರಾಂಗದ್ದಾಗಿದೆ. ಈ ರೂಪಾಂತರದ ಪ್ರಕ್ರಿಯೆ ನಮ್ಮ ವಿಶ್ವವಿದ್ಯಾಲಯದ ವೈಶಿಷ್ಟ್ಯವಾಗಿದೆಯೆಂದರೂ ತಪ್ಪಿಲ್ಲ. ಈ ದೃಷ್ಟಿಯಿಂದ ಈ ವರ್ಷ ಕೆಲವು ಪುಸ್ತಕಗಳನ್ನು ನಾವು ಪ್ರಕಟಿಸುತ್ತಿದ್ದೇವೆ.

* * *


* ಪ್ರಸಾರಾಂಗದ ಪುಸ್ತಕಗಳಿಗೆ ಬರೆದ ಮುನ್ನುಡಿ.