ಇಂದು ನಮ್ಮಗೆಲ್ಲ ಬಹಳ ಸಂತೋಷದ ದಿನ. ವಿಜಯನಗರ ಸಾಮ್ರಾಜ್ಯ ಅಸ್ತಂಗತವಾದ ಮೇಲೆ ಈ ಪ್ರದೇಶವೆಲ್ಲ ಹಾಳಾಗಿ ಒಂದು ಪುಣ್ಯೋದಯದ ಮುಹೂರ್ತಕ್ಕಾಗಿ ಕಾಯುತ್ತಿತ್ತು. ಕರ್ನಾಟಕದ ಏಕೀಕರಣವಾದಮೇಲೆ ಅನೇಕ ಸಾಹಿತಿಗಳು, ಕಲಾವಿದರು ಇಲ್ಲಿಯವರೆಗೆ ಬಂದು ಪ್ರದೇಶ ಮತ್ತೊಮ್ಮೆ ಉದ್ಧಾರವಾಗಬೇಕೆಂಬ ಕನಸನ್ನು ಕಂಡಿದ್ದರು. ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗುವವರೆಗೆ ಆ ಕನಸು ನನಸಾಗಲು ಕಾಯಬೇಕಾಯಿತು. ನಮ್ಮ ವಿಶ್ವವಿದ್ಯಾಲಯ ಕೆಲವು ಕಾಲ ವಿರೂಪಾಕ್ಷ ದೇವಾಲಯದ ಮುಂದಿನ ನಾಲ್ಕು ಕಲ್ಲು ಮಂಟಪಗಳಲ್ಲಿ ತನ್ನ ಕಚೇರಿಯನ್ನು, ಗ್ರಂಥಾಲಯವನ್ನು ನಡೆಸಿಕೊಂಡು ಬಂದಿತು. ತನ್ನ ಸ್ವಂತದ ಪ್ರದೇಶದಲ್ಲಿ ಈಗ ನೆಲೆ ನಿಂತಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ಈಗ ನಾಲ್ಕಾರು ಕಟ್ಟಡಗಳು ತಲೆಯೆತ್ತಿವೆ. ಬೇರೆ ಬೇರೆ ವಿಭಾಗಗಳು ಅಲ್ಲಿ ಕೆಲಸವನ್ನು ಪ್ರಾರಂಭಿಸಿವೆ. ಇಂದು ಕೇಂದ್ರ ಸರಕಾರದ ಮಂತ್ರಿಗಳಾದ ಸನ್ಮಾನ್ಯ ಶ್ರೀ ಅರ್ಜುನ್‌ಸಿಂಗ್ ಅವರು ‘ಅಕ್ಷರ’ ಎಂಬ ಅರ್ಥಪೂರ್ಣವಾದ ಹೆಸರನ್ನು ಹೊತ್ತಿರುವ ಗ್ರಂಥಾಲಯವನ್ನು ಸನ್ಮಾನ್ಯ ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದ್ದಾರೆ. ಜ್ಞಾನಕ್ಷೇತ್ರದ ಪ್ರಾರಂಭದ ಉತ್ಸವ ಇದಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಸ್ವರೂಪ ನಾಡಿನ ಉಳಿದ ವಿಶ್ವವಿದ್ಯಾಲಯಗಳಿಗಿಂತ ಬೇರೆಯಾದದ್ದು. ನಾಡಿನ ವಿಶ್ವವಿದ್ಯಾಲಯಗಳು ಬ್ರಿಟಿಷ್ ಆಳ್ವಿಕೆಯಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳಂತೆ ವಿದ್ಯಾಭ್ಯಾಸದ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿವೆ. ಅಲ್ಲಿ ವಿತರಣೆಗೊಳ್ಳುವ ವಿದ್ಯೆ ಕೂಡ ಹೆಚ್ಚು ಕಡಿಮೆ ನಿರ್ಧಾರಿತವಾದದ್ದು. ಆಧುನಿಕ ಶಾಸ್ತ್ರ ಮತ್ತು ಕಲೆಗಳನ್ನು ಈ ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುತ್ತಿದೆ. ಇದರ ಅಗತ್ಯವೇನೆಂಬುದು ತಮಗೆ ಗೊತ್ತೇ ಇದೆ. ಇಂದಿನ ದಿನಗಳಲ್ಲಿ ಮಾಹಿತಿಯೇ ಒಂದು ದೊಡ್ಡ ಶಕ್ತಿಯಾಗಿದೆ. ಪ್ರತಿಯೊಂದು ದೇಶವೂ ಮಾಹಿತಿಯನ್ನು ಹಣದಂತೆ ಸಂಗ್ರಹಿಸುತ್ತಿದೆ. ಅದರ ವಿನಿಯೋಗ ಆಯಾ ದೇಶಗಳ ಸರ್ಕಾರಗಳಿಗೆ ಸೇರಿದ್ದು. ಆದ್ದರಿಂದ ವಿಶ್ವವಿದ್ಯಾಲಯಗಳು ಆಧುನಿಕ ಜಗತ್ತಿನ ಮಾಹಿತಿಯನ್ನು ವಿದ್ಯೆಯ ರೂಪದಲ್ಲಿ ಕೊಡುತ್ತಿವೆ. ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿರುವ ಜಗತ್ತಿನಲ್ಲಿ ಇಂಥ ವಿದ್ಯೆಯ ಅವಶ್ಯಕತೆ ಬೇಕಾದಷ್ಟಿದೆ.

ಆದರೆ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸದ ಮಾದರಿ ಬೇರೆಯಾಗಿದೆ. ಇಲ್ಲಿಯ ವಿದ್ಯೆಯ ಸ್ವರೂಪ ಹೆಚ್ಚು ನಿಖರವಾದದ್ದು. ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಇಲ್ಲಿ ವಿದ್ಯೆಯನ್ನು ಸೃಷ್ಟಿ ಮಾಡಲಾಗುತ್ತಿದೆ. ವಿದ್ಯೆಯ ದೃಷ್ಟಿಯಿಂದ ಈ ವಿಶ್ವವಿದ್ಯಾಲಯವೊಂದು ಕಮ್ಮಟ. ಕಮ್ಮಟದಲ್ಲಿ ವಿದ್ಯೆ ಹುಟ್ಟುವುದಷ್ಟೇ ಅಲ್ಲ; ಅದು ಅಧಿಕೃತವೂ ಆಗಿರುತ್ತದೆ. ಕನ್ನಡಕ್ಕೆ, ಕರ್ನಾಟಕಕ್ಕೆ ಸಂಬಂಧಿಸಿದ್ದೆಲ್ಲಾ ಇಲ್ಲಿಯ ವಿದ್ಯಾ ಸಾಮಗ್ರಿಯಾಗಿದೆ. ಕರ್ನಾಟಕದ ಇತಿಹಾಸ, ಸಾಹಿತ್ಯ, ಕಲೆ ಮತ್ತು ಶಾಸ್ತ್ರಗಳೆಲ್ಲಾ ಈ ವಿಶ್ವವಿದ್ಯಾಲಯದಿಂದ ಅಧಿಕೃತವಾಗಬೇಕು. ಈ ಮಹತ್ಕಾರ್ಯ ಈ ವಿಶ್ವವಿದ್ಯಾಲಯದ ದೊಡ್ಡ ಕನಸಾಗಿದೆ. ಈ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ ಎಂ. ವೀರಪ್ಪ ಮೊಯಿಲಿ ಅವರು ಕೂಡ ಕವಿಯಾದ್ದರಿಂದ ದೊಡ್ಡ ಕನಸುಗಾರರು. ಅವರ ಕನಸುಗಳನ್ನು ಕಾಲಕ್ರಮದಲ್ಲಿ ನನಸಾಗಿಸುವ ಜವಾಬ್ದಾರಿ ನಾಡಿನದಾಗಿದೆ.

ಇಲ್ಲಿಯವರೆಗೆ ಈ ವಿಶ್ವವಿದ್ಯಾಲಯ ಹಮ್ಮಿಕೊಂಡ ಕಾರ್ಯಕಲಾಪವೆಲ್ಲಾ ಈ ಕನಸಿನಿಂದ ಪ್ರೇರಿತವಾಗಿದೆ. ಈತನಕ ನಾವು ಮಾಡಿದ ಮುಖ್ಯ ಕಾರ್ಯವೆಂದರೆ ನಾವು ಹೊರತಂದಿರುವ ಗ್ರಂಥಗಳು. ಇತಿಹಾಸ, ಸಂಶೋಧನೆ, ಸಾಹಿತ್ಯ, ವಿಮರ್ಶೆ, ಜಾನಪದ, ಭಾಷಾಶಾಸ್ತ್ರ. ಮೊದಲಾದ ಕ್ಷೇತ್ರಗಳಲ್ಲಿ ಅನೇಕ ಅಮೂಲ್ಯವಾದ ಪುಸ್ತಕಗಳನ್ನು ವಿಶ್ವವಿದ್ಯಾಲಯ ಪ್ರಕಟ ಮಾಡಿದೆ. ಅವುಗಳಲ್ಲಿ ಕೆಲವು ಪುಸ್ತಕಗಳಂತೂ ಅಪೂರ್ವವಾಗಿವೆ. ಶಬ್ದಕೋಶಗಳ ನಿರ್ಮಾಣವೂ ಜೊತೆಜೊತೆಗೇ ಸಾಗುತ್ತಿದೆ. ಮುಖ್ಯವಾಗಿ ಕನ್ನಡದ ಮೂಲಕ ಈ ಶಾಸ್ತ್ರಗಳ ರಚನೆಯಾಗುತ್ತಿರುವುದು ಸಂತೋಷದ ವಿಷಯವಾಗಿದೆ. ಕನ್ನಡಭಾಷೆಗೆ ಸಾವಿರಾರು ವರ್ಷಗಳ ಸಂಸ್ಕಾರವಿದೆ. ಅಂಥ ಭಾಷೆಯಲ್ಲಿ ಹೊಸ ಶಾಸ್ತ್ರಗಳು ಆವಿಷ್ಕಾರವನ್ನು ಪಡೆಯಬೇಕಾಗಿದೆ. ಬೇರೆ ಭಾಷೆಗಳಲ್ಲಿಯ ತಿಳುವಳಿಕೆ ಕನ್ನಡದಲ್ಲಿ ಬರಬೇಕು. ಹಾಗೆಯೇ ಕನ್ನಡದಲ್ಲಿರುವ ತಿಳುವಳಿಕೆ ಬೇರೆ ಭಾಷೆಗಳಿಗೆ ಮುಟ್ಟಬೇಕು. ಒಟ್ಟಿನಲ್ಲಿ ಕನ್ನಡದ ಸರ್ವಾಂಗೀಣ ವಿಕಾಸಕ್ಕೆ ಇಲ್ಲಿ ಅನುವು ದೊರೆಬೇಕು.

ಕನ್ನಡ ವಿಶ್ವವಿದ್ಯಾಲಯ ಮೂಲಭೂತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಸಂಸ್ಥೆಯಲ್ಲ. ವಿದ್ಯಾರ್ಥಿಗಳು ಇಲ್ಲಿ ಬಂದರೆ ಉಚ್ಚ ಸಂಶೋಧನೆಗೆ ಬರಬೇಕು. ಈಗಾಗಲೇ ಪಿಎಚ್‌.ಡಿ.ಯ ಮಹಾಪ್ರಬಂಧಗಳು ಬಂದಿವೆ. ಸಂಶೋಧನೆಯ ಉದ್ದೇಶವೆಂದರೆ ಮರೆತು ಹೋದದ್ದನ್ನು ನೆನಪಿಗೆ ತಂದುಕೊಡುವುದು. ಅಡಗಿದ್ದನ್ನು ಬಯಲಿಗೆ ತರುವುದು. ನಮ್ಮ ಇತಿಹಾಸದಲ್ಲಿ ಮರೆತುಹೋದ ಸಂಗತಿಗಳೆಷ್ಟೋ ಇವೆ. ಯಾವುದೇ ಪ್ರಕ್ರಿಯೆಯ ಪರಿಣಾಮ ಏನಾಗುತ್ತದೋ ಗೊತ್ತಿಲ್ಲ. ಪರಿಣಾಮ ಗೊತ್ತಾದರೆ ಪ್ರಕ್ರಿಯೆ ಮರೆತು ಹೋದ ಎಳೆಗಳನ್ನು ಜೋಡಿಸಬೇಕಾಗುತ್ತದೆ. ಆ ಮಟ್ಟದ ಸಂಶೋಧನೆ ಈ ವಿಶ್ವವಿದ್ಯಾಲಯದ ಮೂಲಕ ನಡೆಯಬೇಕು. ಇಂಥ ಸಂಶೋಧನೆಯ ಅಗತ್ಯ ಇಂದು ಎಂದಿಗಿಂತ ಹೆಚ್ಚಾಗಿದೆ.

ನಮ್ಮ ಪ್ರಗತಿ ಇಂದು ಎರಡು ದಿಕ್ಕುಗಳಲ್ಲಿ ಸಾಗುತ್ತಿದೆ. ಒಂದು ದಿಕ್ಕಿನಲ್ಲಿ ಅದು ಐಕ್ಯದ ಕಡೆಗೆ ಸಾಗುತ್ತದೆ. ನಮ್ಮ ಐಕ್ಯದ ಕೇಂದ್ರವೆಂದರೆ ಭಾರತೀಯತೆ. ಆದರೆ ಇನ್ನೊಂದು ದಿಕ್ಕಿನಲ್ಲಿ ಪ್ರತಿಯೊಂದು ಸಂಸ್ಕೃತಿಯೂ ಪ್ರತ್ಯೇಕವಾಗಿ ಸ್ಥಾನಿಕವಾಗಲು ಬಯಸುತ್ತದೆ. ಐಕ್ಯದಂತೆ ಪ್ರತ್ಯೇಕತೆಯೂ ಪ್ರಗತಿಯೇ. ಈ ದೇಶದ ಎಲ್ಲ ಭಾಷೆಗಳೂ ತಮ್ಮ ಪ್ರತ್ಯೇಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಬೆಳೆಸಿಕೊಂಡು ಭಾರತೀಯತೆಗಾಗಿ ದುಡಿಯಬೇಕು. ಆಗ ಮಾತ್ರ ಭಾರತೀಯತೆ ಉಳಿದ ಸಂಸ್ಕತಿಗಳು ಮುಕ್ಕಾಗದಂತೆ ಬೆಳೆದು ಬರುತ್ತವೆ. ಕನ್ನಡದ ಬೆಳವಣಿಗೆಯೂ ಭಾರತದ ಬೆಳವಣಿಗೆಯಾಗಬೇಕು. ಅದರಂತೆ ಕನ್ನಡವನ್ನು ಹೊರತುಪಡಿಸಿ ಭಾರತೀಯತೆ ಬೆಳೆಯಲಾರದು. ಇತಿಹಾಸದುದ್ದಕ್ಕೂ ಇದೇ ರೀತಿಯಲ್ಲಿ ನಮ್ಮ ನಾಡು ಹದಿನೆಂಟು ಭಾಷೆಗಳ ಅಡ್ಡಿಯನ್ನು ಲೆಕ್ಕಿಸದೇ ಬೆಳೆದು ಬಂದಿದೆ. ಸಂಸ್ಕೃತಿಯ ಬೆಳವಣಿಗೆಯಲ್ಲಿ ಮೇಲುಕೀಳುಗಳಿಲ್ಲ. ಇಂಥ ತತ್ವದ ರಾಜಕೀಯ ರೂಪವೆಂದರೆ ನಮ್ಮ ಪ್ರಜಾಪ್ರಭುತ್ವ ಎಂದು ಬೇರೆ ಹೇಳಬೇಕಾಗಿಲ್ಲ.

ವಿಶ್ವವಿದ್ಯಾಲಯದ ಗ್ರಂಥಾಲಯದ ಕಟ್ಟಡಕ್ಕೆ ‘ಅಕ್ಷರ’ ಎಂದು ಹೆಸರು ಕೊಟ್ಟಿದ್ದೇವೆ. ಅಕ್ಷರ ಎಂಬ ಶಬ್ದ ನಮ್ಮ ವರ್ಣಮಾಲೆಯೊಳಗಿನದು. ಆರೆ ಅದರ ಮೂಲ ಅರ್ಥ ‘ನಾಶವಿಲ್ಲದ್ದು’ ಎಂದಾಗುತ್ತದೆ. ಅಕ್ಷರಕ್ಕೆ ನಾಶವಿಲ್ಲ. ಈ ಪ್ರದೇಶದಲ್ಲಿ ನೆಲೆಗೊಂಡಿದ್ದ ಒಂದು ದೊಡ್ಡ ಸಾಮ್ರಾಜ್ಯ ನಾಶವಾಯಿತು. ಚಕ್ರವರ್ತಿಗಳು ವಾಸಮಾಡಿಕೊಂಡಿದ್ದ ಕಟ್ಟಡಗಳು ನೆಲಸಮವಾದವು. ಬಹುಶಃ ಇದನ್ನೆಲ್ಲ ಮನಗಂಡು ಪುರಂದರದಾಸರು ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂದು ಹೇಳಿರಬೇಕು. ಸಾಮ್ರಾಜ್ಯ ಕ್ಷರವಾದದ್ದು. ನಾಶ ಹೊಂದುವಂಥಾದ್ದು. ಆ ಕಾಲದ ಸಾಹಿತ್ಯ ಅಕ್ಷರವಾಗಿ ಉಳಿದುಕೊಂಡಿದೆ. ಒಂದಾದ ಮೇಲೊಂದು ಕರ್ನಾಟಕದ ಸಾಮ್ರಾಜ್ಯಗಳು ನಾಶವಾಗಿ ಹೋದರೂ ಕನ್ನಡಭಾಷೆ ಇಂದಿಗೂ ಉಳಿದಿದೆ. ಮುಂದೆ ಕೂಡ ಉಳಿಯುತ್ತದೆ. ಭಾಷೆ ಅಕ್ಷರಗಳಿಂದ ಆದದ್ದು. ಅದಕ್ಕೆ ನಾಶವಿಲ್ಲ. ಅದಕ್ಕಾಗಿ ಗ್ರಂಥಾಲಯಕ್ಕೆ ಕೊಟ್ಟ ಈ ಹೆಸರು ಸಾರ್ಥಕವಾಗಿದೆಯೆಂದು ನಂಬಿದ್ದೇನೆ.

ಗ್ರಂಥಾಲಯವೆಂದರೆ ಕೇವಲ ಪುಸ್ತಕಗಳ ಸಂಗ್ರಹವಲ್ಲ. ಪುಸ್ತಕದ ಅಂಗಡಿಗಳಲ್ಲಿ ಇದಕ್ಕಿಂತ ಹೆಚ್ಚಿನ ದೊಡ್ಡ ಸಂಗ್ರಹವಿರುತ್ತದೆ. ಆದರೆ ಅಲ್ಲಿ ಯಾರೂ ಗ್ರಂಥಗಳನ್ನು ಓದುವುದಿಲ್ಲ. ಅಲ್ಲಿ ಗ್ರಂಥಗಳ ಮಾರಾಟ ಮಾತ್ರ ನಡೆಯುತ್ತದೆ. ಗ್ರಂಥಾಲಯ ಒಂದು ಉದ್ದೇಶಪೂರ್ಣವಾದ ಸಂಸ್ಥೆ. ಗ್ರಂಥಾಲಯವೆಂದರೆ ವಿಶ್ವವಿದ್ಯಾಲಯದ ಮೆದುಳು ಇದ್ದಂತೆ. ಗ್ರಂಥಾಲಯದ ಮೂಲಕವಾಗಿ ವಿಶ್ವವಿದ್ಯಾಲಯ ಯೋಚಿಸುತ್ತದೆ. ವಿಚಾರ ಮಾಡುತ್ತದೆ. ಗ್ರಂಥದಿಂದ ಗ್ರಂಥಗಳು ಹುಟ್ಟುತ್ತವೆಂದು ಹೇಳುತ್ತಾರೆ, ನಿಜವೇ. ಶಾಸ್ತ ಬೆಳೆಯುವುದೇ ಹೀಗೆ. ಕನ್ನಡ ವಿಶ್ವವಿದ್ಯಾಲಯದ ಕಟ್ಟಡದ ಬಾಗಿಲು ಇಂದು ತೆರೆದಿದೆ. ಇಂದು ಬರೆಸಿದ ಶಿಲಾಶಾಸನವನ್ನು ತಮ್ಮೆದುರು ಓದಿ ನನ್ನ ಮಾತು ಮುಗಿಸುತ್ತೇನೆ.

ಸ್ವಸ್ತಿಶ್ರೀ ಶಾಲಿವಾಹನ ಶಕ ೧೯೧೬ನೆಯ ಭಾವನಾಮ ಸಂವತ್ಸರದ ಭಾದ್ರಪದ ಶುಕ್ಲ ಚತುರ್ದಶಿ ಭಾನುವಾರದಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರರು ಬರೆಸಿದ ಶಾಸನದ ಕ್ರಮವೇನೆಂದರೆ:

ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯ ‘ಅಕ್ಷರ’ವನ್ನು ಬಲಗೊಂಡು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಂ. ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆಯಲ್ಲಿ ಭಾರತ ಸರಕಾರದ ಮಾನವ ಸಂಪನ್ಮೂಲ ಮಂತ್ರಿಗಳಾದ ಸನ್ಮಾನ್ಯ ಶ್ರೀ ಅರ್ಜುನ್‌ ಸಿಂಗ್ ಅವರು ಉದ್ಘಾಟನೆಯನ್ನು ನೆರವೇರಿಸಿದರು.

ಈ ಅಕ್ಷರ ಗ್ರಂಥಾಲಯವು ಸದಾಕಾಲ ನಿತ್ಯನಿರಂತರವಾಗಿ ಮೂಡುಮಲೆಯ ಸೂರ್ಯನಾರಾಯಣಸ್ವಾಮಿ ಪಡುಮಲೆಯ ಚಂದ್ರಾಮಸ್ವಾಮಿ ಇರುವತನಕ ತೆರೆದಿರಬೇಕೆಂದೂ ಇದು ಮುಚ್ಚದಹಾಗೆ ನೋಡಿಕೊಳ್ಳುವ ಜವಾಬ್ದಾರಿ ಸಮಸ್ತ ಕನ್ನಡಿಗರಿಗೆ ಸೇರಿದ್ದೆಂದೂ ಪಂಪಾಂಬಿಕಾ ಸಮೇತ ವಿರೂಪಾಕ್ಷಸ್ವಾಮಿಯ ಸಾನಿಧ್ಯದಲ್ಲಿ ಸಾರಲಾಗಿದೆ.

* * *


* ‘ಅಕ್ಷರ’ ಗ್ರಂಥಾಲಯದ ಉದ್ಘಾಟನೆಯ ದಿನ ಮಾಡಿದ ಸ್ವಾಗತ ಭಾಷಣ.