ಸಾವಿರದು ಐತಿಹಾಸಿಕ ನೆನಪುಗಳನ್ನು ತುಂಬಿಕೊಂಡಿರುವ ಹಂಪಿಗೆ ಇನ್ನೂ ಜಾಗೃತಿ ಇದೆ. ೧೯೩೪ರಲ್ಲಿ ವಿಜಯನಗರದ ಸಾಮ್ರಾಜ್ಯದ ೬೦೦ನೇ ಜಯಂತಿಯ ಉತ್ಸವನ್ನು ಇಡೀ ಕನ್ನಡನಾಡು ಸಡಗರದಿಂದ ಆಚರಿಸಿತು. ಅಂದಿನಿಂದ ಹೊಸ ಕನಸುಗಳು ಗಾಳಿಯಲ್ಲಿ ತೇಲಿ ಬರುತ್ತಲೇ ಇವೆ. ಹಂಪಿಯ ನೆಲದ ದೈವದಲ್ಲಿ ನಮಗೆ ಅಪಾರವಾದ ನಂಬಿಕೆ ಇದೆ. ಕ್ಷೇತ್ರ ಶಕ್ತಿಯ ಪ್ರಭಾವದಿಂದಾಗಿ ಹಿಂದೆ ಸಣ್ಣ ರಾಜ್ಯವಾಗಿದ್ದದ್ದು ಸಾಮ್ರಾಜ್ಯವಾಗಿ ಬೆಳೆಯುವ ಬಯಕೆಯನ್ನು ಹೊತ್ತಿಸಿಕೊಂಡ ನೆಲ ಅದು. ಹೀಗೆ ಬೆಳೆಯುವ, ಬೆಳೆಸುವ ಬಯಕೆ ಈ ನೆಲಕ್ಕೆ ಇನ್ನೂ ಹೋಗಿಲ್ಲ. ಬೇರೆ ಬೆಟ್ಟಗಳಲ್ಲಿ ಹಸಿರು ಬೆಳೆದರೆ ಇಲ್ಲಿ ಬಂಡೆಗಳೇ ಬೆಳೆಯುವ ನೆಲ ಇದು. ಇದು ವಿದ್ಯಾರಣ್ಯರ ತಪೋಭೂಮಿ, ಸಾಯಣರ ಕರ್ಮಭೂಮಿ, ಹರಿಹರ, ರಾಘವಾಂಕರ ಕಾವ್ಯಭೂಮಿ. ಈ ಪ್ರದೇಶದ ಮೊದಲ ಹೆಸರು ‘ವಿದ್ಯಾನಗರ’. ಆಮೇಲೆ ಸಾಮ್ರಾಜ್ಯದ ವಿಸ್ತಾರದಿಂದಾಗಿ ವಿಜಯನಗರವೆಂದಾಯಿತು. ಅದು ಮೂಲದಲ್ಲಿ ವಿದ್ಯೆಯ ಕೇಂದ್ರಸ್ಥಾನ. ವಿಜಯದ ತಳಹರಿಯ ಮೇಲೆ ಕಟ್ಟಿದ ಸಾಮ್ರಾಜ್ಯ ಇಂದು ನಾಮಾವಶೇಷವಾಗಿದೆ. ಅದೇ ಸ್ಥಳದಲ್ಲಿ ಈಗ ಕನ್ನಡ ವಿಶ್ವವಿದ್ಯಾಲಯ ತಲೆ ಎತ್ತಿದೆ. ಇದು ಇಡೀ ದಕ್ಷಿಣಭಾರತದ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನದು. ಈ ವಿಶ್ವವಿದ್ಯಾಲಯದ ಪರವಾಗಿಯೇ ಮುಂದೆ ಕೆಲವು ಮಾತುಗಳನ್ನು ಮಂಡಿಸುತ್ತಿದ್ದೇನೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಲ್ಕು ನಿಕಾಯಗಳಿದ್ದು, ಅವುಗಳಲ್ಲಿ ಒಟ್ಟು ಇಪ್ಪತ್ನಾಲ್ಕು ವಿಭಾಗಗಳಿವೆ. ನಮ್ಮಲ್ಲಿ ಪಿ.ಎಚ್.ಡಿ., ಎಂ.ಫಿಲ್ ಪದವಿಗಳನ್ನು ಪಡೆಯುವ ಅವಕಾಶವಿದ್ದರೂ ಶಿಕ್ಷಣವನ್ನು ನೀಡುವುದೇ ವಿಶ್ವವಿದ್ಯಾಲಯ ಮುಖ್ಯ ಗುರಿಯಲ್ಲ. ಕನ್ನಡ ಭಾಷೆ ಸರ್ವತೋಮುಖ ಏಳಿಗೆಯನ್ನು ಸಾಧಿಸುವುದು ನಮ್ಮ ಮುಖ್ಯ ಉದ್ದೇಶ. ಗುರಿ ಸಾಧನೆಗಾಗಿ ವಿಶ್ವವಿದ್ಯಾಲಯದ ಸಂರಚನೆಯನ್ನು-ಸಶೋಧನಾಂಗ, ಪ್ರಸಾರಾಂಗ ಹಾಗೂ ಆಡಳಿತಾಂಗ ಎಂದು ವಿಂಗಡಿಸಿಕೊಂಡಿದ್ದೇವೆ. ಅವುಗಳಲ್ಲಿ ಸಂಶೋಧನಾಂಗ ಅತ್ಯಂತ ಮುಖ್ಯವಾದದ್ದು. ಸಂಶೋಧನೆಗಳನ್ನು ಪ್ರಸಾರ ಮಾಡುವುದು ಪ್ರಸಾರಾಂಗ. ಇವರೆಡರ ಕೆಲಸ ಸುಗಮವಾಗಿ, ಸುರಳೀತವಾಗಿ ನಡೆಯುವಂತೆ ಅನುಕೂಲ ಮಾಡಿ ಕೊಡುವುದು ಆಡಳಿತಾಂಗ.

ಭಾಷಿಕ ಅಧ್ಯಯನಗಳಲ್ಲಿ ನಾವು ಹೊಸ ದಾರಿಯನ್ನೇ ಹಿಡಿಯಬೇಕಾಗಿದೆಯೆಂದು ನಾನು ನಂಬಿದ್ದೇನೆ. ಭಾಷೆಯ ಅಧ್ಯಯನವೆಂದರೆ ಮನುಷ್ಯನ ಅಧ್ಯಯನವೇ ಆಗಿದೆ. ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮತ್ತು ಜಾನಪದ ಅಧ್ಯಯನಗಳಿಗೂ ಭಾಷೆಯ ಅಧ್ಯಯನಕ್ಕೂ ನಿಕಟವಾದ ಸಂಬಂಧವಿದೆ. ಕನ್ನಡ ಭಾಷೆಯೆಂದರೆ ಕನ್ನಡ ಜನತೆಯ ನೈತಿಕ ಮೌಲ್ಯಗಳನ್ನು, ಆಧ್ಯಾತ್ಮಿಕ ಆಕಾಂಕ್ಷೆಗಳು, ಧಾರ್ಮಿಕ ಅಪೇಕ್ಷೆಗಳು ಮತ್ತು ಇದುವರೆಗೆ ಎಲ್ಲೂ ದಾಖಲಾಗದಿರುವ ಕ್ನನಡ ಚರಿತ್ರೆ ಇವೆಲ್ಲವುಗಳ ಪ್ರತಿಫಲವೇ ಆಗಿದೆ.

ಸಂಶೋಧನಾಂಗ

ಸಂಶೋಧನೆಯ ಸ್ವರೂಪ

ಸಂಶೋಧನೆಯ ಸ್ವರೂಪದ ಬಗ್ಗೆಯೇ ನಾವೀಗ ಹೊಸದಾಗಿ ವಿಚಾರ ಮಾಡಬೇಕಾಗಿದೆ. ನಮ್ಮ ನಾಡಿನಲ್ಲಿ ನಡೆದಿರುವ ಸಂಶೋಧನೆ-ಅದರಲ್ಲಿಯೂ ಮುಖ್ಯವಾಗಿ ಮಾನವ ಶಾಸ್ತ್ರಗಳಲ್ಲಿ-ಅಷ್ಟೊಂದು ತೇಪ್ತಿಕರವಾಗಿಲ್ಲ. ಆದರೆ ನಮ್ಮಲ್ಲಿ ವಿಷಯಗಳಿಗೇನೂ ಕೊರತೆ ಇಲ್ಲ. ನಮಗೆ ಇರುವ ಕೊರತೆ ಎಂದರೆ ಈ ವಿಷಯಗಳನ್ನು ಕುರಿತು ಅಭ್ಯಾಸ ಮಾಡಲು ಅನುಕೂಲವಾಗುವ ಶಾಸ್ತ್ರ ವಿಧಾನಗಳ ಕೊರತೆ: ಪಾಶ್ಚಾತ್ಯರು ತಮ್ಮ ಶಾಸ್ತ್ರ ವಿಧಾನಗಳನ್ನು ಉಪಯೋಗಿಸಿ ನಮ್ಮ ಇತಿಹಾಸವನ್ನು, ನಮ್ಮ ಸಾಮಾಜಿಕ ಸಂರಚನೆಗಳನ್ನು, ಭಾಷೆ ಸಂಸ್ಕೃತಿಗಳನ್ನು ಅಭ್ಯಾಸ ಮಾಡಿ ನಮ್ಮ ತಿಳುವಳಿಕೆಯನ್ನು ನಮಗೆ ದಾನ ಮಾಡಿದ್ದಾರೆ. ತಿಳುವಳಿಕೆಯ ಬಲದಿಂದ ನಮ್ಮಲ್ಲಿಯ ಸಂಶೋಧನೆ ಸಾಗುತ್ತಿದೆ. ಇಂಥ ತಿಳುವಳಿಕೆಯಿಂದ ಉಪಯೋಗವಿಲ್ಲವೆಂದಲ್ಲ. ಆದರೆ ಈ ತಿಳುವಳಿಕೆ ಈಗ ತನ್ನ ಪ್ರಯೋಜನವನ್ನು ಕಳೆದುಕೊಳ್ಳತೊಡಗಿದೆ. ವಸಾಹತುಶಾಹಿಯ ಕಾಲಕ್ಕೆ ಇಂಥ ತಿಳುವಳಿಕೆ ಆಳರಸರಿಗೆ ಅತ್ಯಂತ ಉಪಯುಕ್ತವಾಗಿತ್ತು. ನಮ್ಮ ದೇಶದಲ್ಲಿ ಬ್ರಿಟಿಷರ ಕಾಲಕ್ಕೆ ಭೂಮಿಯನ್ನು ಸರ್ವೆಮ ಡುವ ಪದ್ಧತಿ ಬಳಕೆಗೆ ಬಂದಿತ್ತು. ನೂರಾರು ಮೋಜಣಿದಾರರು ಶಂಕು, ಸರಪಣಿ, ಗೂಟಗಳನ್ನು ತೆಗೆದುಕೊಂಡು ಬಂದು ಭೂಮಿಯನ್ನು ಅಳೆದುಕೊಟ್ಟರು. ಇದರಿಂದ ಭೂಮಿಯ ಫಲವತ್ತತೆಯೇನೂ ಹೆಚ್ಚಾಗಲಿಲ್ಲ. ಆದರೆ ಅದರಿಂದ ಆಳರಸರಿಗೆ ಆಳಲು ಅನುಕೂಲವಾಯಿತು. ಮೊದಲ ಗವರ್ನರ್ ಜನರಲ್ ಆದ ವಾರನ್ ಹೇಸ್ಟಿಂಗ್ಸ್‌ ಭಗವದ್ಗೀತೆಯನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿಸಿದ. ಅದರ ಜೊತೆ ಕುರಾನನ್ನೂ ಮಾಡಿಸಿದ. ಈ ಭಾಷಾಂತರಗಳಿಂದ ಯಾರೂ ಹೊಸ ತಿಳುವಳಿಕೆಯನ್ನು ಪಡೆಯಲಿಲ್ಲ. ಆದರೆ ಕೋರ್ಟುಗಳಲ್ಲಿ ಹೇಳಿಕೆ ಕೊಡುವ ಮೊದಲು ಬೈಬಲ್ ಮೇಲೆ ಕೈಯಿಟ್ಟು ಸತ್ಯ ಹೇಳುತ್ತೇನೆಂದು ಆಣೆಯಿಟ್ಟುಕೊಳ್ಳಬೇಕು. ಕ್ರಿಶ್ಚಿಯನ್ನರಿಗಾದರೆ ಬೈಬಲ್‌ನ ಒಂದು ಪ್ರತಿ ಇಡಬಹುದು. ಅದರಂತೆ ಹಿಂದೂಗಳಿಗೆ ಭಗವದ್ಗೀತೆ, ಮುಸಲ್ಮಾನರಿಗೆ ಕುರಾನು ಇವುಗಳ ಪ್ರತಿಗಳನ್ನು ಇಡಬಹುದು. ಆದರೆ ಈ ಗ್ರಂಥದಲ್ಲಿರುವುದು ಧರ್ಮವೋ ಅಧರ್ಮವೋ ಎಂದು ಆಳರಸರಿಗೆ ಗೊತ್ತಾಗಲೆಂದು ಇಂಗ್ಲಿಷ್ ಅನುವಾದ ಅಗತ್ಯವಾಯಿತು. ಅವರೇ ಈ ದೇಶದ ಇತಿಹಾಸವನ್ನು ಬರೆಸಿದರು. ಇದು ಒಂದು ದೃಷ್ಟಿಯಿಂದ ಭಾರತದ ಅನುವಾದ. ಬ್ರಿಟಿಷರು ಸರ್ವೆಯ ಮೂಲಕ ಭೂಮಿಯನ್ನು, ಇತಿಹಾಸದ ಮೂಲಕ ಇಲ್ಲಿ ಸಂಸ್ಕೃತಿಯನ್ನು, ಇಂಗ್ಲಿಷ್ ಭಾಷೆಯ ಮೂಲಕ ಇಲ್ಲಿಯ ಸಾಹಿತ್ಯ ಮತ್ತು ಧರ್ಮಗಳನ್ನು ಅರಿತರು.

ಬ್ರಿಟಿಷರ ದೃಷ್ಟಿಯಿಂದ ಈ ಅನುವಾದ ಕಾರ್ಯ ಅಗತ್ಯವಾಗಿತ್ತು. ಪಾಶ್ವಾತ್ಯರು ನಮ್ಮ ದೇಶವನ್ನು ತಿಳಿದುಕೊಂಡಿದ್ದು ಹೀಗೆ. ಅದು ಐತಿಹಾಸಿಕ ಅನಿವಾರ್ಯತೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ನಾವು ಇಲ್ಲಿಯವರೆಗೆ ಪಡೆದುಕೊಂಡ ಶಿಕ್ಷಣ ಕೂಡಬ್ರಿಟಿಷರ ವರದಾನವಾಗಿದೆ. ಇಂಥ ಶಿಕ್ಷಣದ ಪ್ರಯೋಜನವೇನು ಎಂಬುದನ್ನು ಈಗ ಮತ್ತೊಮ್ಮೆ ತಿಳಿಸಿ ಹೇಳುವ ಕಾರಣವಿಲ್ಲ. ನಮ್ಮ ಮನಸ್ಸು ಶಿಕ್ಷಿತವಾದದ್ದು ಪಾಶ್ಚಾತ್ಯ ರೀತಿಯಲ್ಲಿ ಎಂಬುದನ್ನು ತಿಳಿದುಕೊಂಡೇ ನಾವು ಮುಂದೆ ಸಾಗಬೇಕಾಗಿದೆ. ನಮಗೆ ಶಾಸ್ತ್ರೀಯವಾದ ಚಿಂತನೆಯ ಕ್ರಮ ದೊರೆತದ್ದು ಬ್ರಿಟಿಷರಿಂದ ಎಂಬ ಒಂದು ನಿರ್ಣಯಕ್ಕೆ ನಾವಿಂದು ಬಂದು ಮುಟ್ಟಿದ್ದೇವೆ. ಸಂಸ್ಕೃತ ಮಹಾಭಾರತದ ಹೊಸ ಆವೃತ್ತಿಗಳು ಈ ಮಾತಿಗೆ ಒಳ್ಳೆಯ ಉದಾಹರಣೆಗಳಾಗಿವೆ. ಮಹಾಭಾರತ ತೋಂಡಿ ಪರಂಪರೆಗೆ ಸೇರಿದ ಬಹಳ ದೀರ್ಘವಾದ ಕಾವ್ಯವಾಗಿರುವುದರಿಂದ ಅದರಲ್ಲಿ ಎಷ್ಟುಭಾಗ ಮೂಲಕಾವ್ಯಕ್ಕೆ ಸೇರಿದ್ದು, ಎಷ್ಟುಭಾಗ ಪ್ರಕ್ಷಿಪ್ತವಾದದ್ದು ಎಂಬುದನ್ನು ಕಂಡುಹಿಡಿಯುವ ಕೆಲಸ ಅಲ್ಲಿ ಆಗಿದೆ. ಪ್ರಕ್ಷಿಪ್ತವಾದ ಅಂಶಗಳನ್ನು ಕಂಡುಹಿಡಿಯಲು ಪ್ರಮಾಣಗಳು ಕಾವ್ಯದಲ್ಲಿಯೇ ದೊರೆಯುತ್ತವೆನ್ನುವುದೂ ಸುಳ್ಳಲ್ಲ. ಆದರೆ ಈ ವಿಧಾನವೆಲ್ಲ ಪಾಶ್ಚಾತ್ಯ ಸಂಶೋಧನದ್ದು. ಈ ವಿಧಾನದ ಹಿಂದೆ ಇರುವ ತಾತ್ವಿಕತೆಯಾದರೂ ಏನು? ಮೂಲಕೃತಿ ಸತ್ಯದಿಂದ ಕೂಡಿದ್ದು ಪ್ರಕ್ಷಿಪ್ತ ಅಂಶಗಳೆಲ್ಲ ಸುಳ್ಳು ಎಂಬ ವಿಚಾರ ಇಲ್ಲಿ ಕೆಲಸ ಮಾಡುತ್ತದೆ. ‘ಯಾವುದೇ ಗ್ರಂಥವಾಗಲು ಅದರ ಗ್ರಂಥಕರ್ತ ಒಬ್ಬನೇ ಆಗಿರಬೇಕು. ಸೃಷ್ಟಿಗೆ ಸೃಷ್ಟಿಕರ್ತ ಹೇಗೆ ಒಬ್ಬನೋ ಹಾಗೆ ಗ್ರಂಥಕರ್ತನೂಒ ಬ್ಬನೇ. ಗ್ರಂಥವೆಂದರೆ ಆ ಗ್ರಂಥಕರ್ತನ ಆಸ್ತಿ. ಆದ್ದರಿಂದ ಇನ್ನೊಬ್ಬರಿಗೆ ಕೈಹಾಕಲು ಅಧಿಕಾರವಿಲ್ಲ. ಸಾಮುದಾಯಿಕ ಗ್ರಂಥ ರಚನೆ ಅಸಂಭವ. ಒಂದು ಕೃತಿಯ ವಿವಿಧ ಅಂಗಗಳಲ್ಲಿ ಐಕ್ಯವಿರುವುದು ಅನಿವಾರ್ಯವಾಗಿರುವುದರಿಂದ, ಪ್ರಕ್ಷಿಪ್ತ ಭಾಗಗಳು ಈ ಐಕ್ಯವನ್ನು ಹಾಳು ಮಾಡುವುದರಿಂದ ಅವನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಬೇಕು’. ಆಧುನಿಕ ಸಂಶೋಧನೆಯ ಹಿಂದಿನ ಈ ಚಿಂತನಕ್ರಮವನ್ನು ನಮಗೆ ಗೊತ್ತಿಲ್ಲದೆ ನಾವು ಒಪ್ಪಿಕೊಂಡುಬಿಟ್ಟಿದ್ದೇವೆ ಮತ್ತು ಅದೇ ಪರಮಸತ್ಯವೆಂದೂ ಗ್ರಹಿಸಿದ್ದೇವೆ.

ನಮ್ಮ ಶಿಕ್ಷಣಕ್ರಮದ ಸಂರಚನೆಯಿಂದಾಗಿ ಇಂಥ ವೈಚಾರಿಕ ವಾತಾವರಣ ಹುಟ್ಟಿಕೊಂಡಿದೆ. ವರ್ಗಶಿಕ್ಷಣದ ವ್ಯವಸ್ಥೆಯಲ್ಲಿ, ತಿಳುವಳಿಕೆಯ ಸಂವಹನಕ್ಕೆ ವಿಶೇಷವಾದ ಮಹತ್ವ ಬಂದಿದೆ. ತಿಳುವಳಿಕೆಯನ್ನು ಒಬ್ಬರಿಂದ ಒಬ್ಬರಿಗೆ ನಿರ್ವಹಿಸುವುದು ಸಾಧ್ಯವೆಂದು ನಾವು ತಿಳಿದುಕೊಂಡಿದ್ದೇವೆ. ಆದರೆ ಹಾಗೆ ಸಂವಹನಗೊಳ್ಳುವುದು ಮಾಹಿತಿಯೇ ಹೊರತು ತಿಳುವಳಿಕೆಯಲ್ಲ. ತಿಳುವಳಿಕೆಯನ್ನು ತುಂಬಲು ವಿದ್ಯಾರ್ಥಿಯೊಂದು ಪಾತ್ರೆಯಲ್ಲ. ಹಾಗೆ ಅವನು ಪಾತ್ರೆಯಾದರೆ ಅದು ಬರಿದಾಗುವುದೂ ಸಾಧ್ಯ. ಶಿಕ್ಷಕನಾದವನು ವಿದ್ಯಾರ್ಥಿಯನ್ನು ತಿಳುವಳಿಕೆಗೆ ಯೋಗ್ಯನನ್ನಾಗಿ ಮಾಡಬೇಕು. ತಿಳುವಳಿಕೆ ಹುಟ್ಟುವುದು ವಿದ್ಯಾರ್ಥಿಯಲ್ಲಿಯೇ ಹೊರತು ಅದು ಒಬ್ಬರಿಂದ ಇನ್ನೊಬ್ಬರಿಗೆ ಹರಿದುಹೋಗುವುದಿಲ್ಲ. ಇದೇ ಕಾರಣಕ್ಕಾಗಿ ನಮ್ಮ ಸಂಶೋಧನೆಯ ವಿದ್ಯಾರ್ಥಿಗಳು ಮಾಹಿತಿಯನ್ನು ಹುಡುಕಿಕೊಂಡು ಹೋಗುತ್ತಾರೆ. ಸಂಶೋಧನದ ನಿಜವಾದ ಸ್ವರೂಪವೇನೆಂಬುದು ಮೊದಲು ಮನವರಿಕೆಯಾಗಬೇಕು.

ಆದರೆ ಇಷ್ಟೆಲ್ಲ ಆದ ಮೇಲೆ ಕೂಡ ಇನ್ನೊಂದು ಮಹತ್ವದ ಅಂಗವೂ ಸಂಶೋಧನೆಗಿದೆ. ಸಂಶೋಧನೆ ಯಾವ ವಿಷಯದ ಬಗ್ಗೆಯೇ ಇರಲಿ, ಶಾಸ್ತ್ರ ವಿಧಾನ ಯಾವುದೇ ಆಗಿರಲಿ ಸಂಶೋಧನೆ ಕೊನೆಯಲ್ಲಿ ರೂಪವನ್ನು ಪಡೆಯುವುದು ಭಾಷೆಯಲ್ಲಿ ಎಂಬುದನ್ನು ಮರೆಯುವಂತಿಲ್ಲ. ಭಾಷೆ ಎಂದರೆ ಸಂಶೋಧನೆಯ ಮಟ್ಟಿಗೆ ಕೇವಲ ಬಾಯಿ ಮಾತಲ್ಲ. ಅದು ಬರೆವಣಿಗೆಯಾಗಬೇಕು. ಪಾಂಡಿತ್ಯ ಕೇವಲ ಬಾಯಿಮಾತಿನಲ್ಲಿ ಪ್ರಕಟವಾದರೆ ಅದರಿಂದ ಪಂಡಿತನ ಪರೀಕ್ಷೆಯಾಗಬಹುದು. ಆದರೆ ಅದು ವಿಷಯದ ಪರೀಕ್ಷೆಯಲ್ಲ. ವಿಷಯದ ಪರೀಕ್ಷೆಯಾಗಬೇಕಾದರೆ ಅದು ಬರೆವಣಿಗೆಯಲ್ಲಿ ಪ್ರಕಟವಾಗುವುದು ಅನಿವಾರ್ಯವಾಗಿದೆ. ಒಂದು ಜನಾಂಗಕ್ಕೆ ಸೇರಿದ ಜನರು ಮಾತಾಡುತ್ತಿರುವವರೆಗೆ ಭಾಷೆ ಸಾಯುವುದಿಲ್ಲ. ಲೋಕವ್ಯವಹಾರದ ಮುಖಾಂತರವಾಗಿ ಭಾಷೆಯನ್ನು ಬದುಕಿಸುವ ಜವಾಬ್ದಾರಿಯನ್ನು ಜನರೇ ಹೊತ್ತಿರುತ್ತಾರೆ. ಆದರೆ ಬರೆವಣಿಗೆ ಎನ್ನುವುದು ಒಂದು ಜನಾಂಗದ ನಾಗರಿಕತೆಯ ಫಲ. ಒಂದು ಜನಾಂಗದ ಸಾಂಸ್ಕೃತಿಕ ರಾಜಕೀಯ ಮತ್ತು ತಿಳುವಳಿಕೆಯ ರಾಜಕೀಯ ಇವೆರಡಕ್ಕೂ ತಳಹದಿಯಾಗಿರುವುದು ಒಂದು ಭಾಷೆಯ ಬರೆವಣಿಗೆ. ಬಾಯಿಮಾತಿನಲ್ಲಿ ಸಂಸ್ಕೃತಿ ಇದೆ; ಸಂಸ್ಕೃತಿಯ ರಾಜಕೀಯವಿರುವದಿಲ್ಲ. ಶುದ್ಧ ಸಂಸ್ಕೃತಿ ಪ್ರಕೃತಿಗಿಂತ ಭಿನ್ನವಾಗಿದ್ದರೂ ಅದು ತನ್ನ ಬೆಳವಣಿಗೆಗಾಗಿ ಪ್ರಕೃತಿಯನ್ನೇ ಅನುಸರಿಸುತ್ತದೆ. ಮಹಾರಾಷ್ಟ್ರದಲ್ಲಿ ಶಿವಾಜಿಯ ಕಾಲಕ್ಕೆ ಸೈನಿಕರ ಮನರಂಜನೆಗಾಗಿ ಲಾವಣಿಗಳನ್ನು ಹಾಡಿಸುವ ಪರಂಪರೆ ಪ್ರಚಾರದಲ್ಲಿತ್ತು. ಲಾವಣಿ ಶುದ್ಧವಾಗಿ ಜನಪದ ಕಾವ್ಯ ಪ್ರಕಾರ, ತೋಂಡಿ ಹಾಡಿಕೆ. ಆದರೆ ಇದರ ಉಪಯೋಗವಾದದ್ದು ಯುದ್ಧದ ರಾಜಕೀಯಕ್ಕಾಗಿ. ಶತ್ರುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಅದನ್ನು ಗುಪ್ತ ಸಂದೇಶಗಳ ಮೂಲಕ ತಲುಪಿಸುವ ಕೆಲಸವನ್ನು ಈ ಲಾವಣಿಕಾರರು ಮಾಡಬೇಕಾಗುತ್ತಿತ್ತು. ಲಾವಣಿ ಒಂದು ಮುಖವಾಡದಂತೆ ತೋರಿಕೆಯ ಸತ್ಯ ಮಾತ್ರವಾಗುತ್ತಿತ್ತು. ಹುಡುಕುತ್ತ ಹೋದರೆ ನಮ್ಮ ಇತಿಹಾಸದಲ್ಲೇ ಇಂಥ ಉದಾಹರಣೆಗಳು ಸಿಗಬಹುದು.

ರಾಜಕೀಯದಲ್ಲಿ ಮಾತಿಗಿಂತ ಬರೆವಣಿಗೆ ಹೆಚ್ಚು ಮಹತ್ವದ್ದಾಗಿದೆ. ಬರೆವಣಿಗೆಯಲ್ಲಿ ಲೇಖಕನ ಅದೃಶ್ಯವಾದ ಅಸ್ತಿತ್ವವೇ ಒಂದು ಅನುಕೂಲವಾಗಿರುತ್ತದೆ. ಬರೆವಣಿಗೆ ಸೋದ್ದಿಶ್ಯವಾದದ್ದು. ರಾಜಕೀಯದಲ್ಲಿ ಈ ಸೋದ್ದಿಶ್ಯತೆಯ ಉಪಯುಕ್ತತೆ ಏನೆಂಬುದನ್ನೂ ಬೇರೆ ಹೇಳಬೇಕಾಗಲ್ಲ. ಬರೆವಣಿಗೆಯ ಸೋದ್ದಿಶ್ಯತೆಯನ್ನು ರಾಜಕೀಯಕ್ಕೆ ಅಲ್ಲದೆ ಬೇರೆ ಪ್ರಸಂಗಗಳಲ್ಲಿಯೂ ಉಪಯೋಗಿಸಬಹುದು. ಸಂಶೋಧನೆಗೆ ಅದರ ಅಗತ್ಯ ಬಹಳವಿದೆ. ಪರಿಣಾಮದಲ್ಲಿ ಸಂಶೋಧನೆ ಬರೆವಣಿಗೆಯ ಒಂದು ಪ್ರಕಾರವಾಗಿಯೇ ಕಾಣಿಸಿಕೊಳ್ಳುತ್ತದೆ. ವ್ಯಾಕರಣಬದ್ಧವಾದ ಬರೆವಣಿಗೆ ಸಂಶೋಧನೆಯ ಉದ್ದೇಶ ಪ್ರಯೋಜನಗಳನ್ನು ಇತಿಮಿತಿಗಳನ್ನು, ಅದರ ವೈಚಾರಿಕ ನಿಲುವನ್ನು, ಸಾಂಧರ್ಭಿಕತೆಯನ್ನು ಸರಿಯಾಗಿ ಪ್ರತಿಬಿಂಬಿಸುತ್ತದೆ.

ಸಂಶೋಧನೆ ಮತ್ತು ಕನ್ನಡ

ಕನ್ನಡ ಭಾಷೆಗೆ ಇಂಥ ತ್ರಾಣವಿದೆಯೇ ಎಂಬ ಪ್ರಶ್ನೆ ಏಳುತ್ತದೆ. ಮುಂಬಯಿ ವಿಶ್ವವಿದ್ಯಾಲಯದ ಪ್ರಾರಂಭದ ಅವಸ್ಥೆಯಲ್ಲಿ ಪಿಎಚ್‌ಡಿ ಪ್ರಬಂಧಗಳನ್ನು ಇಂಗ್ಲಿಷಿನಲ್ಲಿಯೇ ಬರೆಯಬೇಕೆಂಬ ನಿಯಮವಿತ್ತು. ಇಂಗ್ಲಿಷಿಗೂ ಸಂಸ್ಕೃತಕ್ಕೂ ಮೊದಲಿನಿಂದಲೂ ಬಿಡಿಸಲಾರದ ನಂಟಿತ್ತು. ಭಂಡಾರಕರ, ವೇಲಣಕರ, ಬೆಳವಲಕರ ಮೊದಲಾದ ಸಂಸ್ಕೃತ ಪಂಡಿತರೆಲ್ಲ ಬರೆದದ್ದು ಇಂಗ್ಲಿಷಿನಲ್ಲಿಯೇ. ಕನ್ನಡದಲ್ಲಿ ಕೂಡ ಈ ಪರಂಪರೆ ನಡೆದು ಬಂದಿತ್ತು. ನಮ್ಮ ಕೆಲವು ಅಭಿಜಾತ ಕೃತಿಗಳ ಮೊದಲ ಮುದ್ರಣದ ಮುನ್ನುಡಿಗಳು ಇಂಗ್ಲಿಷಿನಲ್ಲಿವೆ. ರೈಸ್ ಸಾಹೇಬರ ಕನ್ನಡ ಸಾಹಿತ್ಯ ಚರಿತ್ರೆ ಇಂಗ್ಲಿಷಿನಲ್ಲಿದೆ. ನಮ್ಮ ವಿಮರ್ಶೆ, ಕಾವ್ಯಮೀಮಾಂಸೆ, ಭಾಷಾಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆ ಸಂಶೋಧನೆ ನಡೆದದ್ದು ಇಂಗ್ಲಿಷಿನಲ್ಲಿ. ಮಾಧ್ಯಮಿಕ ಅವಸ್ಥೆಯಲ್ಲಿಯೇ ಇಂಗ್ಲಿಷ್ ಶಿಕ್ಷಣದ ಮಾಧ್ಯಮವಾಗಿದ್ದರಿಂದ ಇಂಗ್ಲಿಷ್ ಮಾತ್ರ ಶಾಸ್ತ್ರಭಾಷೆಯಾಗಬಲ್ಲದೆಂಬ ನಂಬಿಕೆ ಎಲ್ಲರಿಗೂ ಇತ್ತು. ಕನ್ನಡವನ್ನು ಆಗ vernacular ಎಂದು ಕರೆಯಲಾಗಿತ್ತು. ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳೊಂದಿಗೆ ಹೋಲಿಸಿದಾಗ ಇಂಗ್ಲಿಷ್ ಕೂಡ ಒಮ್ಮೆ vernacular ಅವಸ್ಥೆಯಲ್ಲಿತ್ತು. ತಮಗೆ ಅಂಟಿದ್ದ ಹೆಸರನ್ನು ಇಂಗ್ಲಿಷರು ಕನ್ನಡಕ್ಕೆ ಅಂಟಿಸಿದರು. ನಮ್ಮ ಶಿಕ್ಷಣದ ಇತಿಹಾಸದಲ್ಲಿ ಮೊದಮೊದಲಿನ ನೂರು ವರ್ಷಗಳ ಕಾಲ, ಕನ್ನಡವನ್ನು ಇಂಗ್ಲಿಷ್ ಕಲಿತ ಕನ್ನಡ ಪಂಡಿತರು ಕೂಡ ಇದೇ ಹೆಸರಿನಿಂದ ಕರೆಯುತ್ತಿದ್ದರು. ಶಾಲೆಯ ವೇಳಾಪತ್ರಿಕೆಯಲ್ಲಿ ಕನ್ನಡದ ಬದಲು vernacular ಎಂದೇ ಬರೆಸುತ್ತಿದ್ದರು.

ಆದರೆ ಕನ್ನಡ ಒಂದೂವರೆ ಸಾವಿರ ವರ್ಷಗಳಷ್ಟು ಹಿಂದೆಯೇ ಬರೆವಣಿಗೆಯ ಭಾಷೆಯಾಗಿತ್ತು. ನಮ್ಮ ದೇಶದಲ್ಲಿ ಬೌದ್ಧರು ಮತ್ತು ಜೈನರು ಬರೆವಣಿಗೆಯನ್ನು ಪ್ರಚಾರದಲ್ಲಿ ತಂದರೆಂದು ಹೇಳಲಾಗುತ್ತಿದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಜೈನರೇ ಕನ್ನಡದ ಬರೆವಣಿಗೆಗೆ ನಾಂದಿ ಹಾಡಿದರೆಂದು ಹೇಳಬಹುದು. ಜೈನಧರ್ಮದಲ್ಲಿ ಗ್ರಂಥದಾನಕ್ಕೆ ಬಹಳ ಮಹತ್ವವಿದೆ. ಗ್ರಂಥದಾನಕ್ಕೆ ಶಾಸ್ತ್ರದಾನವೆಂಬ ಹೆಸರು ಇರುವುದು ಬರೆವಣಿಗೆಯ ಉಪಯೋಗದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಕನ್ನಡವನ್ನು ಕೇವಲ ಕಾವ್ಯಕೃತಿಗಾಗಿ ಅಷ್ಟೇ ಅಲ್ಲದೆ ಶಾಸ್ತ್ರಗಳಿಗಾಗಿಯೂ ಅವರು ಉಪಯೋಗಿಸಿದರು. ಕಾವ್ಯವೇ ಆಗಲಿ, ಶಾಸ್ತ್ರವೇ ಆಗಲಿ ಭಾಷೆಯಲ್ಲಿ ಅವತರಿಸಬೇಕಾದ ಅಗತ್ಯವಿರುವುದರಿಂದ ಭಾಷೆ ಅದಕ್ಕಾಗಿ ಸಿದ್ಧವಾಗಬೇಕಾಯಿತು. ಕನ್ನಡದಲ್ಲಿ ಕಾವ್ಯಕೃತಿಗಳಿರುವಷ್ಟು ಶಾಸ್ತ್ರಗ್ರಂಥಗಳು ಇಲ್ಲವೆಂಬ ಮಾತು ನಿಜವಾಗಿದ್ದರೂ ಕನ್ನಡ ಶಾಸ್ತ್ರಭಾಷೆಯಲ್ಲ ಎಂದು ಹೇಳುವಂತಿಲ್ಲ. ವ್ಯಾಕರ, ರಸಸಿದ್ದಾಂತ, ಜ್ಯೋತಿಷ್ಯ, ಸೂಪಶಾಸ್ತ್ರ, ತತ್ವಚಿಂತನ ಇವುಗಳಿಗೆ ಸಂಬಂಧಪಟ್ಟ ಗ್ರಂಥಗಳೆಲ್ಲ ಕನ್ನಡದ್ಲಲಿವೆ. ಈ ಹಳೆಯ ಶಾಸ್ತ್ರದ ಒಡಲಿನಿಂದ ಹೊಸ ಶಾಸ್ತ್ರ ಹುಟ್ಟಿ ಬಂದಿದ್ದರೆ ಕನ್ನಡವನ್ನು ಶಾಸ್ತ್ರಭಾಷೆಯಾಗಿ ಉಪಯೋಗಿಸಬಹುದಿತ್ತು. ಆದರೆ ಹತ್ತೊಂಬತ್ತನೆಯ ಶತಮಾನಕ್ಕಾಗಲೇ ನಮ್ಮ ಜನಕ್ಕೆ ಹಳೆಯ ಶಾಸ್ತ್ರ ಮರೆತುಹೋಗಿತ್ತು. ಯುರೋಪಿನಿಂದ ಬಂದ ಹೊಸ ವಿಜ್ಞಾನ ನಮ್ಮ ಹಳೆಯ ಶಾಸ್ತ್ರವನ್ನೆಲ್ಲ ಪುರಾಣವಾಗಿ ಮಾರ್ಪಡಿಸಿತ್ತು.

ಈಗ ಕೂಡ ಹೆಚ್ಚು ಕಡಿಮೆ ಅದೇ ಪರಿಸ್ಥಿತಿ ಇದೆ. ನಮ್ಮ ವಿಜ್ಞಾನದ ವಿದ್ಯಾರ್ಥಿಗಳೆಲ್ಲ ವಿಜ್ಞಾನದ ಇತಿಹಾಸವನ್ನು ಪ್ಲೇಟೋ ಅರಿಸ್ಟಾಟಲರಿಂದಲೇ ಪ್ರಾರಂಭಿಸುತ್ತಾರೆ. ಈ ಮಾತು ನಾವು ಕಲಿಯುವ ಮಾನವಶಾಸ್ತ್ರಗಳಿಗೂ ಅನ್ವಯಿಸುತ್ತದೆ. ವಿಜ್ಞಾನದ ಅಂತಾರಾಷ್ಟ್ರೀಯ ಇತಿಹಾಸದಲ್ಲಿ ನಮ್ಮ ದೇಶದ ಪಾತ್ರವೇನೆಂದು ವಿಚಾರ ಮಾಡಿದಾಗ ನಿರಾಶೆಯೇ ಕಾದಿದೆ. ಬೇರೆ ದೇಶಗಳ ಉದ್ಯಮಶೀಲತೆಗೆ, ಅರ್ಥವ್ಯವಹಾರಗಳಿಗೆ ನಮ್ಮ ದೇಶ ಒಂದು ಪೇಟೆ ಯಾಗಿರುವಂತೆ, ಬೇರೆ ದೇಶಗಳ ಶಾಸ್ತ್ರ ಕಲೆಗಳಿಗೆ ನಮ್ಮ ದೇಶ ವಿಷಯ ಸಾಮಗ್ರಿಯನ್ನು ಒದಗಿಸುತ್ತದೆ. ಈಜಿಪ್ಟ್ ಮತ್ತು ಭಾರತದ ಹತ್ತಿಯ ಬೆಳೆ ಇಂಗ್ಲೆಂಡಿನ ಗಿರಣಿಗಳಲ್ಲಿ ನವಿರಾದ ಬಟ್ಟೆಯಾಗಿ ತಿರುಗಿ ನಮ್ಮ ದೇಶಕ್ಕೇ ಬರುತ್ತದೆ ಅಥವಾ ಒಂದು ಕಾಲಕ್ಕೆ ಬರುತ್ತಿತ್ತು. ಅದರಂತೆಯೇ ನಮ್ಮ ಜಾನಪದ ವಿದ್ಯೆಗಳ ಪರೀಕ್ಷೆ ನಡೆಯುವದು ಕೂಡ ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ. ನಮ್ಮ ದೇಶ ಇನ್ನೂ ಪಾಶ್ಚಾತ್ಯರ ಅಭ್ಯಾಸಕ್ಕೆ ಒಂದು ವಿಷಯವಾಗಿದೆ. ಎ.ಕೆ. ರಾಮಾನುಜನ್ನರ ಒಂದು ಕರೆ ‘ಅಣ್ಣಯ್ಯನ ಮನಶಾಸ್ತ್ರ’ದಲ್ಲಿ ಈ ಚಿತ್ರ ಬಹಳ ವ್ಯಂಗವಾಗಿ ಮೂಡಿಬಂದಿದೆ.

ಕನ್ನಡ ಕಾವ್ಯಭಾಷೆಯಾಗಿರುವಂತೆ ಶಾಸ್ತ್ರಭಾಷೆಯೂ ಆಗಬೇಕು. ಅದಕ್ಕೆ ಅಗತ್ಯವಾದ ಸಂಕಲ್ಪಬಲ, ಮಾನಸಿಕ ಸಿದ್ಧತೆ ನಮ್ಮಲ್ಲಿ ಬರಬೇಕು. ಕನ್ನಡ ಭಾಷೆಯ ಸಂಸ್ಕಾರಕ್ಕೆ ಯಾವ ಕೊರತೆಯೂ ಇಲ್ಲ. ಆದರೆ ಇಲ್ಲಿಯೂ ವಿವೇಕದ ಅಗತ್ಯವಿದೆ. ಭಾತಶಾಸ್ತ್ರಗಳ ಬೆಳವಣಿಗೆಗಾಗಿ ನಮ್ಮ ದೇಶ ಪಾಶ್ಚಾತ್ಯರೊಂದಿಗೆ ಸ್ಪರ್ದಿಸಬೇಕಾದ ಅಗತ್ಯವಿಲ್ಲ. ಭೌತಶಾಸ್ತ್ರಗಳಿಗಿಂತ ಮಾನವಶಾಸ್ತ್ರಗಳಿಗೆ ಅವಕಾಶ ಮತ್ತು ಅನುಕೂಲತೆಗಳು ನಮ್ಮಲ್ಲಿ ಹೆಚ್ಚಾಗಿವೆ. ಔದ್ಯಮಿಕ ಪ್ರಗತಿ ರಭಸದಿಂದ ಸಾಗಿರುವ ದೇಶಗಳಲ್ಲಿ ಜನರ ದಾರಿದ್ರ್ಯದೊಂದಿಗೆ ಅವರಲ್ಲಿಯ ಜನಪದ ಕಲೆಗಳೂ ನಾಶವಾಗಿ ಹೋಗಿವೆ. ಜಾನಪದಗಳೇ ಇಲ್ಲದಲ್ಲಿ ಜನಪದ ವಿದ್ಯೆಗಳ ಅವಶ್ಯಕತೆಯೂ ಇಲ್ಲ. ಕಾಡನ್ನು ನಾಶ ಮಾಡಿ ಕಾಡುಪ್ರಾಣಿಗಳನ್ನು ಸಂಗ್ರಹಾಲಯದಲ್ಲಿ ತಂದು ಮಕ್ಕಳಿಗೆ ಮನರಂಜನೆ ಒದಗಿಸುವ ಮಧ್ಯಮವರ್ಗದ ಗೀಳು ನಮಗೆ ಅವಶ್ಯವಾಗಿಲ್ಲ. ಮಾನವಶಾಸ್ತ್ರಗಳ ಬೆಳವಣಿಗೆಗೆ ನಮ್ಮಲ್ಲಿ ಕಾಲ ಹದವಾಗಿದೆ. ಭೌತಶಾಸ್ತ್ರಗಳ ಅಭ್ಯಾಸಕ್ಕೆ ಪ್ರಯೋಗಶಾಲೆಗಳು ಬೇಕು, ಯಂತ್ರೋಪಕರಣಗಳು ಬೇಕು, ತರಬೇತಿ ಪಡೆದ ಶಿಕ್ಷಕರು ಬೇಕು. ವಿಜ್ಞಾನ ತನ್ನ ಜಗತ್ತನ್ನು ಮೊದಲು ಸೃಷ್ಟಿ ಮಾಡಿಕೊಂಡು ಆಮೇಲೆ ತನ್ನ ಅಭ್ಯಾಸವನ್ನು ಮುಂದುವರಿಸುತ್ತದೆ. ಆದರೆ ಮಾನವಶಾಸ್ತ್ರಗಳಿಗೆ ಮಾತ್ರ ಈಗಿರುವ ಜಗತ್ತೇ ಒಂದು ಪ್ರಯೋಗಶಾಲೆಯಾಗುತ್ತದೆ. ಉದಾಹರಣೆಗೆ ವಂಶಶಾಸ್ತ್ರವನ್ನು ಅಭ್ಯಾಸ ಮಾಡಬೇಕಾಗಿದ್ದರೆ ಹಳ್ಳಿಗಳಿಗೆ ಹೋಗಿ ಹೆಳವರನ್ನು ಕಾಣಬೇಕು. ಹೆಳವರು ಬರೆದಿಟ್ಟುಕೊಂಡ ಕಡತಗಳನ್ನು ಪರೀಕ್ಷಿಸಬೇಕು. ಬೆಡಗಿಗೂ ವಂಶದ ಬೆಳವಣಿಗೆಗೂ ಇರುವ ಸಂಬಂಧವನ್ನು ಕಂಡುಕೊಳ್ಳಬೇಕು. ಕೃಷಿ ವಿಜ್ಞಾನವನ್ನು ಅಭ್ಯಾಸ ಮಾಡಬೇಕಾದರೆ ಒಕ್ಕಲಿಗರಲ್ಲಿ ಒಕ್ಕಲಿಗನಾಗಬೇಕು. ಕೃಷಿಶಾಸ್ತ್ರ ಶಾಸ್ತ್ರವೆಂದರೆ ಶಾಸ್ತ್ರ, ಜೀವನ ವಿಧಾನವೆಂದರೆ ಜೀವನ ವಿಧಾನ. ಯಾವ ತಿಥಿಗೆ ಯಾವ ಬೀಜ ಬಿತ್ತಬೇಕು ಎಂಬುದರಿಂದ ಮೊದಲು ಮಾಡಿಕೊಂಡು ಯಾವ ದಿಕ್ಕಿನಿಂದ ಗಾಳಿ ಬೀಸಿದರೆ ಮಳೆಯಾಗುತ್ತದೆಂಬುದನ್ನೂಅರ ಯಬೇಕಾಗುತ್ತದೆ. ಮೇಟಿಯ ಸುತ್ತಮುತ್ತ ಕಲೆ, ಶಾಸ್ತ್ರ, ಹಾಡು, ದೈವಿಕತೆ, ನಂಬಿಕೆ, ಆಯಗಾರರು ಮತ್ತು ಅವರ ಸಾಮಾಜಿಕತೆ, ವೈದ್ಯ, ಪ್ರಾಣಿಗಳು-ಹೀಗೆ ಒಂದು ಇಡಿಯಾದ ಜೀವನ ವಿಧಾನದ ವಿವರವಾದ ಅಭ್ಯಾಸ ಮಾಡಿ ಅಲ್ಲಿಯ ಜೀವನದರ್ಶನವನ್ನು ಅರಿಯಬೇಕಾಗುತ್ತದೆ. ಔದ್ಯಮೀಕರಣ ಮತ್ತು ಹೊಸರೀತಿಯ ಶಿಕ್ಷಣ ಇವುಗಳ ಪ್ರಭಾವ ಈ ಜೀವನ ವಿಧಾನದ ಮೇಲೆ ಆಗಿರುವ ಕಾರಣಗಳನ್ನೂ ಹುಡುಕಬೇಕು.

ನಮ್ಮ ಅತ್ಯಂತ ಪರಿಷ್ಕೃತವಾದ ಮತ್ತು ಸುಸಂಸ್ಕೃತವೆನ್ನಬಹುದಾದ ತಾತ್ವಿಕತೆಯ ಬೇರುಗಳು ಈ ಜೀವನ ವಿಧಾದಲ್ಲಿ ದೊರೆಯುತ್ತವೆ. ಕನ್ನಡದಲ್ಲಿ ಖರೆ, ಖೊಟ್ಟಿ, ಸಟೆ, ದಿಟ ಮೊದಲಾದ ಮೌಲ್ಯ ನಿರ್ದೇಶಕ ಶಬ್ದಗಳು ದೊರೆಯುತ್ತವೆ. ಹಿಂದಿನ ಕಾಲಕ್ಕೆ ಬಂಗಾರವನ್ನು ಟಂಕಸಾಲೆಗೆ ಒಯ್ದು ಅದರ ಶುದ್ಧತೆಯನ್ನು ಒರೆಗೆ ಹಚ್ಚಿ, ಶುದ್ಧಮಾಡಿ ಅದರ ಮೇಲೆ ರಾಜಮುದ್ರೆಯನ್ನು ಒತ್ತಿ ಕೊಡಲಾಗುತ್ತಿತ್ತು. ಆಮೇಲೆ ಆ ನಾಟ್ಯ ವ್ಯವಹಾರದಲ್ಲಿ ಸರಿಯುತ್ತಿತ್ತು, ಚಲಾವಣೆ ಪಡೆಯುತ್ತಿತ್ತು. ಖೊಟ್ಟಿ ಮತ್ತು ಖರೆ ಎಂಬ ಶಬ್ದಗಳು ಅಂಥ ಟಂಕಸಾಲೆಯಲ್ಲಿ ಹುಟ್ಟಿದ ಶಬ್ದಗಳಾಗಿವೆ. ಚಿನ್ನ ಬೆಳ್ಳಿಗಳಲ್ಲಿ ಬೇರೆ ಲೋಹ ಸೇರಿಕೊಂಡರೆ ಅಂಥ ನಾಣ್ಯವನ್ನು ಬಾರಿಸಿದಾಗ ನಾದ ಹೊರಡುವುದಿಲ್ಲ, ಖೊಟ್ಟಿಯಾಗುತ್ತದೆ.

ನಾವು ಉಪಯೋಗಿಸುವ ಭಾಷೆ ಕೇವಲ ಮಾಧ್ಯಮವಾದರೆ ಅದನ್ನು ಅಭ್ಯಾಸ ಮಾಡಲು ವ್ಯಾಕರಣ ಒಂದಿದ್ದರೆ ಸಾಕು. ಆದರೆ ಭಾಷೆ ಮಾಧ್ಯಮವಷ್ಟೇ ಅಲ್ಲ. ಅದು ನಮ್ಮ ಜೀವನ ವಿಧಾನದ ಪ್ರತಿಬಿಂಬ. ಮೌಲ್ಯ ವ್ಯವಸ್ಥೆಗೆ ಒಂದು ಪ್ರಮಾಣ, ನಾವು ಕಂಡ ಒಂದು ಸತ್ಯ ಮೂರ್ತಗೊಳ್ಳುವ ಉಪಾದಾನ. ಸಾವಿರಾರು ವಷ್ಷಗಳ ಮಳೆಗಾಳಿಯನ್ನು ತಡೆದುಕೊಂಡ ಕನ್ನಡ, ವಿಜಯನಗರ ಸಾಮ್ರಾಜ್ಯದ ಪತನವಾದ ಮೇಲೆ ತನ್ನ ಆತ್ಮ ವಿಶ್ವಾಸವನ್ನು ಕಳೆದುಕೊಂಡಿತ್ತು. ಬರೆವಣಿಗೆ ಹೋಗಲಿ, ಮಾತಿಗೂ ಹೆದರುವ ಕಾಲ ಒಂದಿತ್ತು. ಈಗ ಪುಣ್ಯಕ್ಕೆ ಮೋಡಗಳೆಲ್ಲ ಚದುರಿ ಹೋಗಿ ವಾತಾವರಣ ತಿಳಿಯಾಗಿದೆ. ಮತ್ತೊಮ್ಮೆ ತಲೆ ಎತ್ತಿದ ಕನ್ನಡ ಭಾಷೆಗೆ ತನ್ನ ಅಸ್ಮಿತೆಯ ಅರಿವು ಮೂಡಿದೆ. ಆದರೆ ಕನ್ನಡ ಕೇವಲ ಕಾವ್ಯಭಾಷೆಯಾಗಿ ಇನ್ನು ಉಳಿಯುವಂತಿಲ್ಲ. ಕರ್ನಾಟಕ ಏಕೀಕರಣದ ಕನಸನ್ನು ನನಸಾಗಿ ಮಾಡಿಕೊಂಡ ಸಾಹಿತಿಗಳು ಕನ್ನಡಕ್ಕೆ ಗೌರವವನ್ನೂ ಹೆಮ್ಮೆಯನ್ನೂ ತಂದುಕೊಟ್ಟದ್ದನ್ನು ಮರೆಯುವಂತಿಲ್ಲ. ಆದರೆ ಕನ್ನಡ ವಿಶ್ವಚೇತನದ ಭಾಷೆಯಾಗಬೇಕು. ಸಾಹಿತ್ಯ, ಶಾಸ್ತ್ರ, ಕಲೆ, ಜಾನಪದ ಮತ್ತು ತತ್ವ ಚಿಂತನ ಇವ್ಯಾವುದರಲ್ಲಿಯೂ ಕನ್ನಡ ಹಿಂದೆ ಬೀಳಬಾರದು. ಮಧುರಚೆನ್ನರ ಕಾವ್ಯದ ಬಗ್ಗೆ ಹ್ಯಾಗೋ ಹಾಗೆ ಪರಮಾಣು ವಿಜ್ಞಾನದ ಬಗ್ಗೆ ಕೂಡ ಕನ್ನಡ ಆಳವಾಗಿ ಯೋಚಿಸುವಂತಾಗಬೇಕು. ಆಗ ಮಾತ್ರ ಕನ್ನಡ ಸಂಶೋಧನೆ ಮಹತ್ವದ್ದಾಗುತ್ತದೆ.

ಶಾಸ್ತ್ರ ವಿಧಾನ

ಸಂಶೋಧನೆ ಕನ್ನಡ ಭಾಷೆಯ ಮೂಲಕ ನಡೆದರೆ ಮಾತ್ರ ತನ್ನ ಶಾಸ್ತ್ರವಿಧಾನಗಳನ್ನು ಕಂಡುಹಿಡಿಯಬಹುದು.

ಶಾಸ್ತ್ರವಿಧಾನವೆಂದರೆ ಯಾಂತ್ರಿಕವಾಗಿಯೂ ಇರಬೇಕಾಗಿಲ್ಲ. ತಾನು ಆರಿಸಿಕೊಂಡಿರುವ ವಿಷಯದಲ್ಲಿರುವ ಸಮಸ್ಯೆಯಿಂದ ಆಕರ್ಷಿತನಾದ ಸಂಶೋಧಕ ಆ ಸಮಸ್ಯೆಯ ಅಭ್ಯಾಸಕ್ಕಾಗಿ ಅನುಕೂಲವಾದ ಶಾಸ್ತ್ರವಿಧಾನವನ್ನು ಅನುಸರಿಸುತ್ತಾನೆ ಮತ್ತು ಅನುಸರಿಸಬೇಕು. ಈಗ ನಮ್ಮಲ್ಲಿ ನಡೆಯುತ್ತಿರುವ ಸಂಶೋಧನೆಯ ಮಟ್ಟ ತೀರ ಪ್ರಾಥಮಿಕ ಅವಸ್ಥೆಯಲ್ಲಿದೆ. ಸಂಶೋಧನೆಗಾಗಿ ಸಮಸ್ಯಾತ್ಮಕ ವಿಷಯಗಳನ್ನು ಹುಡುಕುತ್ತಿದ್ದೇವೆ. ಒಮ್ಮೊಮ್ಮೆ ಹುಡುಕಿದ ವಿಷಯಗಳಲ್ಲಿ ಸಮಸ್ಯೆ ಇರುವುದೇ ಇಲ್ಲ. ‘ಶಿವರಾಮ ಕಾರಂತ ಮತ್ತು ಪ್ರೇಮಚಂದರ ಕೃತಿಗಳ ತೌಲನಿಕ ಅಧ್ಯಯನ’-ಇಂಥ ವಿಷಯದಲ್ಲಿ ಸಮಸ್ಯೆ ಏನಿದೆ? ಸಂಶೋಧನೆ ಒಡೆದು ಕಾಣುವ ಸತ್ಯವನ್ನು ಸಿದ್ಧಪಡಿಸಲು ಹೋಗಬಾರದು. ಮೇಲೆ ಹೇಳಿದ ವಿಷಯದ ಬಗ್ಗೆ ಉತ್ತಮವಾದ ಪ್ರಬಂಧವನ್ನು ಬರೆಯಲು ಸಾಧ್ಯ ಎಂದು ವಾದಿಸಬಹುದು. ಹಾಗಾದರೂ ಕೂಡ ಅದು ಸಾಹಿತ್ಯ ವಿಮರ್ಶೆಯಾಗಬಹುದೇ ಹೊರತು ಸಂಶೋಧನೆಯಲ್ಲ. ಸಂಶೋಧನೆಯ ಮೂಲವಾಗಿ ಹೊಸ ವಿಚಾರಗಳು, ಹೊಸ ಸಿದ್ಧಾಂತಗಳು ಹುಟ್ಟಿ ಬರುವಂತಾಗಬೇಕು. ಅದಾಗದಿದ್ದರೆ ಸಂಶೋಧನೆಯ ಪ್ರಯೋಜನವೇನೆಂದು ಕೇಳಬೇಕಾಗುತ್ತದೆ. ಜನಸಾಮಾನ್ಯರಿಗೆ ತಿಳಿಯಲೆಂದು ವಚನಕಾರರು ಸರಳವಾದ ಭಾಷೆಯನ್ನು ಉಪಯೋಗಿಸಿದರು ಎಂದು ಹೇಳಿದಂತಾಗುತ್ತದೆ. ಶಿವಶರಣರ ಕಾಲದಲ್ಲಿ ಜನಸಾಮಾನ್ಯರು ಹೇಗಿದ್ದರು? ವಚನಗಳ ಭಾಷೆಯ ಪ್ರಯೋಜನವನ್ನು ಅವರು ಪಡೆದರೆ? ಸರಳ ಮತ್ತು ಕ್ಲಿಷ್ಟ ಎಂಬ ಪರಿಕಲ್ಪನೆಗಳ ಇತಿಹಾಸವೇನು? ಸಂಶೋಧಕನನ್ನು ಈ ಪ್ರಶ್ನೆಗಳು ಕಾಡದಿದ್ದರೆ ಅವನ ಸಂಶೋಧನೆಯಿಂದ ಪ್ರಯೋಜನವಿಲ್ಲ.

ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ತನ್ನ ಸಂಶೋಧನೆಯ ಕಾರ್ಯಕ್ರಮವನ್ನು ಯೋಜಿಸಿಕೊಂಡಿದೆ. ಸಂಶೋಧನೆ ಎಲ್ಲ ಸ್ತರಗಳಲ್ಲಿಯೂ ನಡೆಯಲು ಇಲ್ಲಿ ಅವಕಾಶವಿದೆ. ವಿದ್ಯಾರ್ಥಿಗಳು ತಮ್ಮ ಪಿಎಚ್‌.ಡಿ ಪ್ರಬಂಧದ ಸಂಶೋಧನೆಯನ್ನು ಇಲ್ಲಿ ನಡೆಸಬಹುದು. ಅದಕ್ಕಾಗಿ ಶಿಷ್ಯವೃತ್ತಿಯನ್ನು ಕೊಡುವ ಯೋಜನೆ ಇದೆ. ಅವರಿಗೆ ಮಾರ್ಗದರ್ಶನ ಮಾಡಲು ಪಿಎಚ್.ಡಿ. ಆದ ಪ್ರಾಧ್ಯಾಪಕರೇ ಇರಬೇಕೆಂಬ ನಿಯಮವೂ ಇಲ್ಲ. ವಿದ್ವಾಂಸರಾಗಿರುವುದು ಮುಖ್ಯ ಮಾತಾಗಿದೆ. ಶ್ರೀಗಳಾದ ಮ.ಪ್ರ.ಪೂಜಾರ, ಶಂ.ಬಾ.ಜೋಶಿ, ಮಧುರಚೆನ್ನ, ಮುಳಿಯ ತಿಮ್ಮಪ್ಪಯ್ಯ ಇಂಥ ವಿದ್ವಾಂಸರು ಪದವೀಧರರಾಗಿರಲಿ, ಬಿಡಲಿ, ಮಾರ್ಗದರ್ಶಕರಾಗಬಹುದು.

ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ಸಂಶೋಧನೆ ಮಾಡಬಹುದು. ಮೀರಲಾಗದ ನಿಯಮವೆಂದರೆ ಅವರ ಪ್ರಬಂಧ ಕನ್ನಡದಲ್ಲಿಯೇ ಇರಬೇಕು. ಅವರ ವಿಷಯ ಭೌತಶಾಸ್ತ್ರ, ರಸಾಯನ, ಜೀವಶಾಸ್ತ್ರ, ಇಂಜನಿಯರಿಂಗ್- ಹೀಗೆ ಏನೂ ಇರಬಹುದು. ಆದರೆ ಅವರು ತಮ್ಮ ಪ್ರಬಂಧವನ್ನು ಕನ್ನಡದಲ್ಲಿಯೇ ಬರೆಯಬೇಕು. ಭೌತಶಾಸ್ತ್ರಗಳಲ್ಲಿ ಸಂಶೋಧನೆ ಮಾಡುವವರು ರಾಜ್ಯದ ಯಾವುದೇ ವಿಶ್ವವಿದ್ಯಾಲಯದ ಪ್ರಯೋಗಶಾಲೆಗಳಲ್ಲಿ ಕೆಲಸ ಮಾಡಬಹುದು.

ಆದರೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಖ್ಯವಾದದ್ದೆಂದರೆ ವಿಶ್ವವಿದ್ಯಾಲಯ ಸ್ವತಃ ಕೈಗೆತ್ತಿಕೊಂಡ ಸಂಶೋಧನೆಯ ಯೋಜನೆಗಳು. ನಿಘಂಟುಗಳ ರಚನೆ, ವಿಶ್ವಕೋಶಗಳ ರಚನೆ, ಇತಿಹಾಸ ಪುನರ್ನಿಮಾಣ ಮೊದಲಾದ ಅನೇಕ ಯೋಜನೆಗಳು ಇಲ್ಲಿ ಕಾರ್ಯಗತವಾಗಬೇಕು. ಕಾಲಕಾಲಕ್ಕೆ ನಿಯತಕಾಲಿಕೆಗಳು ಪ್ರಕಟವಾಗಬೇಕು. ನಾಡಿನ ಅನೇಕ ವಿದ್ವಾಂಸರು ತಮ್ಮ ವ್ಯಕ್ತಿಗತ ಯೋಜನೆಗಳನ್ನು ವಿಶ್ವವಿದ್ಯಾಲಯದ ಅಂಗವಾಗಿ ನಡೆಸಬೇಕು. ಕರ್ನಾಟಕದ ವಿದ್ಯಾರ್ಥಿಗಳಿಗೆ ಅವಶ್ಯವಾದ ವಿದ್ಯೆಯನ್ನು ಸೃಷ್ಟಿಸುವುದು ಈ ಸಂಶೋಧನದ ಗುರಿಯಾಗಿದೆ. ಕನ್ನಡ ಭಾಷೆಯಲ್ಲಿ ಸ್ವೋಪಜ್ಞವಾದ, ಮೌಲಿಕವಾದ ಸಂಶೋಧನೆ ಸಾಧ್ಯವಾಗುತ್ತದೆ ಎಂಬುದನ್ನು ತೋರಿಸಬೇಕಾಗಿದೆ.

ಈ ಮೊದಲೇ ಹೇಳಿರುವಂತೆ ಕನ್ನಡ ವಿಶ್ವವಿದ್ಯಾಲಯದಲ್ಲಿ ವರ್ಗಶಿಕ್ಷಣವಿಲ್ಲ ಮತ್ತು ಅದಕ್ಕಾಗಿ ಉಳಿದ ವಿಶ್ವವಿದ್ಯಾಲಯಗಳಲ್ಲಿರುವಂತೆ ಇಲ್ಲಿ ಬೇರೆ ಬೇರೆ ವಿಭಾಗಗಳೂ ಇರುವುದಿಲ್ಲ. ವಿಭಾಗಗಳ ವ್ಯವಸ್ಥೆ ವಿದ್ಯಾರ್ಥಿಗಳಿದ್ದಲ್ಲಿ-ಸಾಕಷ್ಟು ಸಂಖ್ಯೆಯಲ್ಲಿ-ಅವಶ್ಯವಾಗುತ್ತದೆ.

ಆದರೆ ಈ ವ್ಯವಸ್ಥೆಯಲ್ಲಿ ಅನುಕೂಲತೆಗಳು ಸಾಕಷ್ಟಿವೆ. ಒಂದು ನಿರ್ದಿಷ್ಟ ಕಾಲಾವಕಾಶದಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಪದವಿಗಾಗಿ ಅಭ್ಯಾಸ ಮಾಡುವುದು ಅನಿವಾಯ್ವಾಗುವುದರಿಂದ ಕಾಲ ಪಕ್ವವಾಗುವ ಮೊದಲೇ ‘ಪರಿಣತ’ರನ್ನು ತಯಾರು ಮಾಡಬೇಕಾದ ಪ್ರಸಂಗ ಬರುತ್ತದೆ. ಹೀಗೆ ತಯಾರಾದ ಪರಿಣತರು ಮುಂದೆ ಅದಕ್ಕೆ ತಕ್ಕ ನೌಕರಿಯೊಂದನ್ನು ಹಿಡಿದುಕೊಂಡು ಕಲಿತದ್ದನ್ನೆಲ್ಲ ಮರೆಯುವ ಪ್ರಸಂಗ ಬರುತ್ತದೆ. ಅಂದರೆ ಸಂಶೋಧನದ ಉಪಯೋಗ ಸಂಶೋಧಕನಿಗೇ ಮೊದಲು ಆಗುವುದಿಲ್ಲ.

ಅದಕ್ಕೆ ಬದಲಾಗಿ ಕನ್ನಡ ವಿಶ್ವವಿದ್ಯಾಲಯ ಆಡಳಿತಾಂಗ ಮತ್ತು ಪ್ರಸಾರಾಂಗಗಳನ್ನು ಬೇರ್ಪಡಿಸಿ-ತಾನೇ ಒಂದು ಸಂಶೋಧನೆಯ ಸಂಸ್ಥೆಯಾಗುತ್ತದೆ. ಸಂಶೋಧನೆಯ ಎಲ್ಲ ಕ್ಷೇತ್ರಗಳಲ್ಲಿ, ಎಲ್ಲ ಸ್ತರಗಳಲ್ಲಿ ಮತ್ತು ಎಲ್ಲ ಬೌದ್ಧಿಕ ಅವಶ್ಯಕತೆಗಳಿಗಾಗಿ ಕನ್ನಡ ಭಾಷೆಯಲ್ಲಿ ಸಂಶೋಧನೆ ನಡೆಯಬೇಕು. ವಿಶ್ವವಿದ್ಯಾಲಯ ಕೈಗೊಳ್ಳುವ ವ್ರತ ಇದು. ಧಾರ್ಮಿಕ ಶ್ರದ್ಧತೆಯಿಂದ ಅದನ್ನು ಪರಿಪಾಲಿಸಬೇಕಾದದ್ದು ವಿಶ್ವವಿದ್ಯಾಲಯದ ಕರ್ತವ್ಯವಾಗಿದೆ. ಕನ್ನಡ ಉಪಯೋಗ-ಸದುಪಯೋಗ, ದುರುಪಯೋಗ ಕೂಡ- ಕನ್ನಡವನ್ನು ಉಳಿಸಿ ಬೆಳೆಸುವುದಕ್ಕೆ ಸಹಾಯ ಮಾಡಬಲ್ಲದು.

ವಿಶ್ವವಿದ್ಯಾಲಯದಲ್ಲಿ ನಡೆಯುವ ಸಂಶೋಧನೆ ವಸ್ತುನಿಷ್ಠವಾಗಿರಬೇಕೆಂದು ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಯಾವ ವಿಷಯದಲ್ಲಿಯೇ ಆಗಲಿ ಸಂಶೋಧನೆ ವಸ್ತುನಿಷ್ಠವಾಗಿರಲೇ ಬೇಕು. ಪೂರ್ವಗ್ರಹಗಳಿಲ್ಲದೆ ತಾನು ಕಂಡ ಸತ್ಯವನ್ನು ಸ್ಪಷ್ಟವಾಗಿ ಹೇಳುವ ಧೈರ್ಯ ಸಂಶೋಧಕನಿಗೆ ಇರಲೇಬೇಕು. ಆದರೆ ವಸ್ತುನಿಷ್ಠತೆ ಬೇರೊಂದು ಅರ್ಥದಲ್ಲಿ ಕೂಡ ಬೆಳೆಯಬೇಕಾದ ಅವಶ್ಯಕತೆ ಇದೆ. ವಸ್ತುನಿಷ್ಠವಾದ ತಿಳುವಳಿಕೆ ಅಮೂರ್ತವಾಗಿ ಮನುಷ್ಯನ ಅನುಭವದಿಂದ ದೂರವಾಗಿಯೇ ಉಳಿಯುತ್ತದೆ. ಮೃಗಶಿರಾ ನಕ್ಷತ್ರ ಪೃಥ್ವಿಯಿಂದ ನೂರಾರು ಪ್ರಕಾಶವರ್ಷಗಳಷ್ಟು ದೂರದಲ್ಲಿದೆ ಎಂದು ಹೇಳಿದರೆ ಅದರಿಂದ ಹುಟ್ಟಿದ ತಿಳುವಳಿಕೆ ನಮ್ಮ ಅನುಭವಕ್ಕೆ ಬರುವುದೇ ಇಲ್ಲ. ಭೌತಶಾಸ್ತ್ರಗಳಲ್ಲಿಯ ಸಂಶೋಧನೆಯಲ್ಲಿ ಸಂಶೋಧಕನ ವ್ಯಕ್ತಿತ್ವ ಮೊದಲಿನಂತೆಯೇ ಉಳಿದುಬಿಡುತ್ತದೆ. ಅಂದರೆ ಸಂಶೋಧನೆಯ ‘ಅರ್ಥ’ ಅವನ ವೈಯಕ್ತಿಕತೆಯ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಅದಾಗಬೇಕಿದ್ದರೆ ವಸ್ತುನಿಷ್ಠತೆಯ ಅರ್ಥ ಬದಲಾಗಬೇಕು. ಸಂಶೋಧಕ ತನ್ನ ವೈಯಕ್ತಿಕ ಅನಿಸಿಕೆಗಳಿಂದ ಮೇಲೇಳುವದಷ್ಟೇ ಅಲ್ಲ, ಅವನು ತನ್ನ ಸಂಶೋಧನೆಗೆ ತಕ್ಕದಾದ ಮಾನಸಿಕ ತರಗತಿಗಳನ್ನು ಬೆಳೆಸಿಕೊಳ್ಳಬೇಕು.

ಉದಾಹರಣೆಗೆ ಹೇಳಬೇಕೆಂದರೆ ವಿಜನಗರ ಸಾಮ್ರಾಜ್ಯದ ಇತಿಹಾಸವನ್ನು ಈ ದೃಷ್ಟಿಯಿಂದ ಅಭ್ಯಾಸ ಮಾಡಿದಾಗ ಈ ಅಭ್ಯಾಸ ಸಂಶೋಧಕನ ಇತಿಹಾಸ ಪರಿಕಲ್ಪನೆಯನ್ನು ಬದಲು ಮಾಡುವಷ್ಟು ಆಳವಾಗಿರಬೇಕು. ಇತಿಹಾಸದ ಹತ್ತು ಸಿದ್ಧಾಂತಗಳನ್ನು ಒರೆಗೆ ಹಚ್ಚಿ ಕೆಲ ನಿರ್ಣಯಗಳನ್ನು ಹೇಳಿಬಿಡುವುದೂ ಒಂದು ರೀತಿಯ ಸಂಶೋಧನೆಯೇ. ಆದರೆ ವಿಜಯನಗರದ ಸಾಮ್ರಾಹ್ಯದ ಪ್ರಾರಂಭ-ಉಚ್ಛ್ರಾಯ ಮತ್ತು ಪತನಗಳು ಕೊಡುವ ಒಂದು ವಿಶೇಷವಾದ ಸಂದೇಶ ಇತಿಹಾಸದ ಒಂದು ಸಿದ್ಧಾಂತವನ್ನು ಪ್ರೇರಿಸಬೇಕು. ವಿಜಯನಗರ ಸಾಮ್ರಾಜ್ಯ ಪೋಷಿಸಿದ ಧಾರ್ಮಿಕತೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಮತ್ತು ಅದರ ರಾಜಕೀಯಕ್ಕೆ ಇರುವ ಸಂಬಂಧಗಳನ್ನು ಪರಿಶೀಲಿಸುವಾಗ ಮನುಷ್ಯನ ಪರಿಕಲ್ಪನೆ ಸ್ಫುಟವಾಗಿ ಇದ್ದು ನಿಲ್ಲಬೇಕು.

ಸಂಶೋಧನೆ ಒಂದು ಶಾಸ್ತ್ರವಾಗಿ ಅದರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವದರಲ್ಲಿಯೇ ಅದು ಕೃತಕೃತ್ಯತೆಯನ್ನು ಕಂಡುಕೊಂಡರೆ ಅಂಥ ಸಂಶೋಧನೆಯನ್ನು ಎಲ್ಲಿಯೂ ಮಾಡಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ವಿಜಯನಗರ ಸಾಮ್ರಾಜ್ಯದ ಬಗ್ಗೆಯೋ ಅಥವಾ ಕನ್ನಡ ಕಾವ್ಯದ ಛಂದೋವಿಕಾಸದ ಬಗ್ಗೆಯೋ ಸಂಶೋಧನೆಯನ್ನು ಸಮರ್ಥವಾಗಿ ಮಾಡಬೇಕೆಂಬ ಅಭಿಲಾಷೆಯಿದ್ದರೆ ಅದನ್ನು ಅಮೇರಿಕೆಯ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಮಾಡುವುದು ಒಳ್ಳೆಯರು. ಅದರ ಬದಲಾಗಿ ಹಂಪಿಯಲ್ಲಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಡಿದರೆ ಅದರ ಗುರಿ ನಿರ್ದಿಷ್ಟವಾಗಿರಬೇಕು. ಸಾಮರ್ಥ್ಯವೊಂದೇ ಅದರ ಗುರಿಯಾಗಬಾರದು. ಸಂಶೋಧನೆಯ ಮುಖಾಂತರವಾಗಿ ಸಂಶೋಧನೆಯ ಅರ್ಥ ಸಂಶೋಧಕನಿಗೆ ದೊರೆಯಬೇಕು. ಈ ವಿಶ್ವವಿದ್ಯಾಲಯದ ಸಂಶೋಧನ ನೀತಿಯ ಅರ್ಥ ಅವನಿಗೆ ಆಗಬೇಕು. ಈ ನೀತಿಯೆಂದರೆ ಹರಿಹರನ ರಗಳೆ ಮತ್ತು ಇಂದಿನ ಗಣಕಯಂತ್ರ ಇವೆರಡೂ ಅಷ್ಟೇ ಮಹತ್ವ ಸಂಶೋಧನೆಗಳೆಂಬ ಪೂರ್ಣ ನಂಬಿಕೆ. ಹರಿಹರನ ರಗಳೆಯನ್ನು ಆಳವಾಗಿ ಅಭ್ಯಾಸ ಮಾಡುತ್ತಾ ಹೋದಂತೆ ಅದು ಕೊಡುವ ಅರ್ಥ ಯಾವಾಗಲೂ ಪ್ರಸ್ತುತವಾಗಿರಬಲ್ಲುದೆಂಬ ನಂಬಿಕೆ ಈ ವಿಶ್ವವಿದ್ಯಾಲಯದ ಸಂಶೋಧನೆಯ ಆಧಾರದಲ್ಲಿರಬೇಕು.

ಸಾಂಸ್ಕೃತಿಕ ಅಗತ್ಯ

ನಾವು ಅಧ್ಯಯನಕ್ಕೆತ್ತಿಕೊಂಡಿರುವ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಬಗ್ಗೆ ಕೆಲವು ಮಾತುಗಳನ್ನು ವಿಶೇಷವಾಗಿ ಹೇಳಬೇಕಾಗಿದೆ. ನಮ್ಮ ಸಂಸ್ಕೃತಿಯ ವೈವಿಧ್ತ ಮತ್ತು ಬಹುಮುಖತೆ ದಿಗ್ಭ್ರಮೆ ಹುಟ್ಟಿಸುವಂತಿದೆ. ಈ ಬಗ್ಗೆ ಹೊಸ ಒಳನೋಟ ದೊರೆಯಬೇಕಾದರೆ ನಮ್ಮ ಅಧ್ಯಯನಗಳನ್ನು ನಾವು ಕನ್ನಡದಲ್ಲೇ ನಮ್ಮ ಭಾಷೆಯಲ್ಲೇ ನಡೆಸಬೇಕು. ಆದರೆ ಬೌದ್ಧಿಕ ಕೆಲಸಗಳಿಗೆ ಇಂಗ್ಲಿಷ್ ಭಾಷೆಯೇ ಸೂಕ್ತವೆಂಬ ಭ್ರಮೆ ನಮ್ಮ ಜನರಲ್ಲಿ ಇನ್ನೂ ಹಾಗೇ ಇದೆ. ಇಂಗ್ಲಿಷ್ ಕೇವಲ ಒಂದು ಭಾಷೆಯಲ್ಲ. ಅದು ತನ್ನದೇ ಮೌಲ್ಯ ಕಲ್ಪನೆಗಳನ್ನು ಹೊಂದಿರುವ, ತನ್ನದೇ ಪೂರ್ವಗ್ರಹಗಳನ್ನು ನಮ್ಮ ಮೇಲೆ ಹೇರುವ, ನಮ್ಮ ಲೋಕದೃಷ್ಟಿಯನ್ನೇ ಪರಿಣಾಮಿಸುವ ಮಾಧ್ಯಮವೂ ಹೌದು. ನಮ್ಮ ವಿಶ್ವವಿದ್ಯಾಲಯವು ತನ್ನ ಎಲ್ಲ ಸಂಶೋಧನೆಗಳನ್ನೂ ಕನ್ನಡದಲ್ಲೇ ನಡೆಸುವ ಪಣ ತೊಡಬೇಕು. ಇದರಿಂದ ಅನೇಕ ರಹಸ್ಯಗಳು ಬಯಲಾಗುತ್ತವೆ. ನಮ್ಮ ಬದುಕಿನ ಎಲ್ಲ ವಲಯಗಳಲ್ಲೂ ನಾವು ಕನ್ನಡವನ್ನು, ಕನ್ನಡವನ್ನೇ ಬಳಸುವ ಮುಖಾಂತರವಷ್ಟೇ ಕನ್ನಡ ಸದೃಢವಾಗಬಲ್ಲದು. ಹಲವಾರು ಚಾರಿತ್ರಿಕ ಕಾರಣಗಳಿಂದ ನಾವು ದ್ವಿಭಾಷಿಕರಾಗಿದ್ದೇವೆ, ಇದನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಹಲವು ಭಾಷೆಗಳ ನಡುವೆ ಬದುಕು ನಡೆಸಬೇಕಾಗಿದೆಯೆಂಬ ಸಂಗತಿ ನಮ್ಮ ಆತಂಕಕ್ಕೆ ಕಾರಣವಾಗಬೇಕಾಗಿಲ್ಲ. ಯುರೋಪಿನ ಎಷ್ಟೋ ರಾಷ್ಟ್ರಗಳು ಬಹುಭಾಷಿಕ ಪರಿಸರದಲ್ಲೇ ಬದುಕಿ ಸಮೃದ್ಧತೆಯನ್ನು ಸಾಧಿಸಿವೆ. ನಾವು ಕನ್ನಡದ ಬಳಕೆಯನ್ನು ಒಂದು ಧಾರ್ಮಿಕ ವ್ರತವೆಂಬಂತೆ ದೃಢನಿಷ್ಠೆಯಿಂದ ಕೈಗೊಂಡರೆ ಉತ್ತಮ ಫಲಿತಾಂಶ ದೊರೆಯುವುದರಲ್ಲಿ ಅನುಮಾನವಿಲ್ಲ. ಕನ್ನಡದ ಬಳಕೆಯಲ್ಲಿ ಎಚ್ಚರವೂ ಅಗತ್ಯ. ನಾವು ಬಳಸುವ ಭಾಷೆ, ನಾವಾಡುವ ವಾಕ್ಯಗಳ ರಚನೆ, ನಮ್ಮ ಮೌಲಿಕತೆ ಮತ್ತು ಕಲ್ಪನೆಗಳನ್ನೂ ಮನುಷ್ಯ ಸಂಬಂಧದ ಬಗೆಗಿನ ನಮ್ಮ ಧೋರಣೆಗಳನ್ನೂ ವ್ಯಕ್ತಪಡಿಸುತ್ತದೆ. ನಮ್ಮ ಭಾಷೆ ದುರ್ಬಲವಾದರೆ ನಮ್ಮ ಸಂಸ್ಕೃತಿ ಶಿಥಿಲಗೊಳ್ಳತೊಡಗುತ್ತದೆ. ಕನ್ನಡಕ್ಕೆ ಮಹತ್ವ ನೀಡಬೇಕೆಂಬುದು ಭಾವಾವೇಶದ ಮಾತಲ್ಲ. ಅದು ನಮ್ಮ ಸಾಂಸ್ಕೃತಿಕ ಅಗತ್ಯ.

ನಿಜ, ನಾನು ನನ್ನ ಕನಸುಗಳನ್ನು ವಿವರಿಸುತ್ತಿರುವಂತಿದೆ. ನಮ್ಮ ಹೊಣೆಗಾರಿಕೆಯ ಬೇರು ನಮ್ಮ ಕನಸುಗಳಲ್ಲಿದೆ ಎಂದು ಯೇಟ್ಸ್ ಕವಿ ಹೇಳಿದ. ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯವು ತಾನೇ ಒಂದು ಪ್ರತ್ಯೇಕ ದ್ವೀಪವಾಗಿ ಉಳಿಯಲಾರದು ಮತ್ತು ಉಳಿಯಬಾರದು. ಅದು ರಾಜ್ಯದ ಇತರ ವಿಶ್ವವಿದ್ಯಾಲಯಗಳೊಂದಿಗೆ ಸಂಬಂಧದ ಎಳೆಗಳನ್ನು ಕಟ್ಟಿಕೊಳ್ಳುತ್ತಾ ಹೋಗಬೇಕು.

ಸೋದರ ವಿಶ್ವವಿದ್ಯಾಲಯಗಳೊಂದಿಗೆ ನಮ್ಮ ಸಂಬಂಧ

ಮೈಸೂರು ವಿಶ್ವವಿದ್ಯಾಲಯದಂಥ, ಶಿಕ್ಷಣ ಮತ್ತು ಸಂಶೋಧನೆಯ ಸುಧೀರ್ಘ ಪರಂಪರೆಯನ್ನೇ ಹೊಂದಿರುವ ಸಂಸ್ಥೆಗಳು ನಮ್ಮಲ್ಲಿವೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಂಗವು ಅನೇಕ ವಿಷಯಗಳನ್ನು ಕುರಿತು ಪ್ರಕಟಿಸಿರುವ ಅಗ್ಗದ ಬೆಲೆಯ ಕಿರು ಹೊತ್ತಗೆಗಳು ನಾವೆಲ್ಲ ಅನುಕರಿಸಿ ಸಾಧಿಸಬೇಕಾದ ಆದರ್ಶಗಳನ್ನು ಸ್ಥಾಪಿಸಿಬಿಟ್ಟಿವೆ. ಈ ಪ್ರಚಾರ ಪುಸ್ತಕ ಮಾಲೆಯ ಕೃತಿಗಳು ಸಮೂಹ ಶಿಕ್ಷಣದ ಉದ್ದೇಶದಿಂದ ಪ್ರಕಟವಾದವು. ಹಾಗೆಂದು ಅವುಗಳ ಬೌದ್ಧಿಕ ಮಟ್ಟವೇನೂ ಕಡಿಮೆಯದಾಗಿಲ್ಲ. ಸಮೂಹ ಶಿಕ್ಷಣವೆಂದರೆ ಸಾಮಾನ್ಯ ಜನತೆಯ ಬೌದ್ಧಿಕ ಮಟ್ಟವನ್ನು ಎತ್ತರಿಸುವ ಕೆಲಸವೇ ಹೊರತು ನಮ್ಮ ಶಿಕ್ಷಣ ಮತ್ತು ಬೌದ್ಧಿಕತೆಯ ಮಟ್ಟವನ್ನೇ, ಅಗ್ಗದ ಜನಪ್ರಿಯತೆಯನ್ನು ಸಾಧಿಸುವುದಕ್ಕೆಂದು ತಗ್ಗಿಸುವುದಲ್ಲ ಎಂಬ ಸತ್ಯವನ್ನು ಈ ಹೊತ್ತಗೆಗಳು ಸಾರಿ ಹೇಳುತ್ತಿವೆ. ನಾಡಿನ ಇತರ ವಿಶ್ವವಿದ್ಯಾಲಯಗಳೂ ಈ ಸಮೂಹ ಶಿಕ್ಷಣಕ್ಕೆ ತಮ್ಮದೇ ಕಾಣಿಕೆಗಳನ್ನು ಸಲ್ಲಿಸಿವೆ.

ನಮ್ಮ ವಿಶ್ವವಿದ್ಯಾಲಯದ ಬಗ್ಗೆ ನಾಡಿನ ವಿಶ್ವವಿದ್ಯಾಲಯಗಳ ಸದಭಿಪ್ರಾಯವನ್ನು ಸಂಪಾದಿಸಿಕೊಳ್ಳುವುದು ಮತ್ತು ನಮ್ಮ ಯೋಜನೆಗಳಿಗೆ ಅವುಗಳ ಸಹಕಾರವನ್ನು ಪಡೆದುಕೊಳ್ಳುವುದು ನಮ್ಮ ಆಕಾಂಕ್ಷೆಯಾಗಿದೆ. ಸಹಕಾರ-ಸಹಯೋಗಗಳು ನಮ್ಮ ದೇಶದ ಸಂಸ್ಕೃತಿಯ ಭಾಗವೇ ಆಗಿವೆ. ಹಂಪಿಯಲ್ಲಿರುವ ನಮ್ಮ ವಿಶ್ವವಿದ್ಯಾಲಯಕ್ಕೆ ಇತರೆಲ್ಲ ವಿದ್ಯಾಸಂಸ್ಥೆಗಳ ಸಹಕಾರ ಮತ್ತು ಸಹಯೋಗ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿದೆ. ಈ ಸಂದರ್ಭದಲ್ಲಿ ಅತ್ಯಂತ ವಿನಯದಿಂದ ಒಂದು ಮಾತನ್ನು ಬಿನ್ನವಿಸುತ್ತಿದ್ದೇನೆ.

ನಮ್ಮ ವಿಶ್ವವಿದ್ಯಾಲಯವು ಒಂದು ಮಹತ್ವದ ಪ್ರಯೋಗದಲ್ಲಿ ತೊಡಗಿದೆ. ಅದು ಕನ್ನಡ ಭಾಷೆಯ ಸಾಧ್ಯತೆಗಳನ್ನು ಕಂಡುಕೊಳ್ಳುವ ಪ್ರಯೋಗ. ಸಾಹಿತ್ಯ ಮಾಧ್ಯಮವಾಗಿ ಸಶಕ್ತವಾಗಿ ಬೆಳೆದಿರುವ ಕನ್ನಡ ಇತರ ವಿಷಯಗಳ ಅಧ್ಯಯನಕ್ಕೂ ಸೂಕ್ತವೂ ಸಶಕ್ತವೂ ಆಗಿದೆಯೇ ಎಂಬುದನ್ನು ಕಂಡುಕೊಳ್ಳುವ ಪ್ರಯೋಗ ಅದು. ಮಾನವಿಕ ಮತ್ತು ಸಾಮಾಜಕ ಶಾಸ್ತ್ರಗಳ ಬೋಧನೆಗೆ ಕನ್ನಡ ಚೆನ್ನಾಗಿಯೇ ಒಗ್ಗುತ್ತದೆ. ಯಾಕೆಂದರೆ ಮನುಷ್ಯ-ಭಾಷಿಕ ಪರಿಸರದಲ್ಲಿ ಬದುಕುವ ಮನುಷ್ಯ-ಈ ಅಧ್ಯಯನದ ಶಿಸ್ತುಗಳಿಗೆ ವಿಷಯವಾಗಿದ್ದಾನೆ. ಈ ಅಧ್ಯಯನ ಶಾಖೆಗಳು ನಮಗೆ ಪರಿಚಯವಾದದ್ದು ನಮ್ಮ ಮನಸ್ಸನ್ನು ನಾವು ಪಶ್ಚಿಮಕ್ಕೆ ತೆರೆದುಕೊಂಡದ್ದರಿಂದ. ಈ ವಿಷಯಗಳನ್ನು ನಾವು ಕಲಿತದ್ದೂ ಇಂಗ್ಲಿಷಿನ ಮುಖಾಂತರ. ಇದರಿಂದ ನಮಗೆ ಲಾಭವಾಗಿರುವಂತೆಯೇ ನಷ್ಟವೂ ಆಗಿದೆ. ನಮಗೆ ಹೊಸ ವೈಜ್ಞಾನಿಕ ದೃಷ್ಟಿಕೋನ ದೊರೆತದ್ದು ಒಂದು ಲಾಭ. ಅಧ್ಯಯನ ವಿಧಾನಗಳ ಪರಕೀಯತೆಯಿಂದಾಗಿ ನಮ್ಮ ಸಮಾಜವನ್ನೇ ವಿದೇಶೀ ಕಲ್ಪನೆಗಳ ಮುಖಾಂತರ ನೋಡುವಂತಾದದ್ದು ನಷ್ಟ.

ಆದರೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಎಂಜಿನಿಯರಿಂಗ್ ಮುಂತಾದ ವಿಷಯಗಳು ಬೇರೆಯದೇ ಬಗೆಯ ಸಮಸ್ಯೆಗಳನ್ನು ಒಡ್ಡುತ್ತವೆ. ಈ ವಿಷಯಗಳಲ್ಲಿ ನಡೆಯುತ್ತಿರುವ ಹೊಸ ಶೋಧ ಮತ್ತು ಬೆಳವಣಿಗೆಗಳೊಂದಿಗೆ ಸಮ ಸಮವಾಗಿ ಹೆಜ್ಜೆ ಹಾಕುವುದು. ಈ ವಿಷಯಗಳನ್ನು ಇಂಗ್ಲಿಷಿನಲ್ಲೇ ಓದಿದರೂ, ನಮ್ಮ ವಿದ್ಯಾರ್ಥಿಗಳಿಗೆ ಕಷ್ಟದ ಕೆಲಸವಾಗುತ್ತದೆ. ಆದ್ದರಿಂದ ಮಾನವಿಕ ಮತ್ತು ಸಮಾಜಶಾಸ್ತ್ರಗಳಿಗೆ ಸಂಬಂಧಿಸಿದಂತೆ ಹೇಳಿದ ಮಾತುಗಳನ್ನೇ ಇಲ್ಲಿಯೂ ಅನ್ವಯಿಸುವುದಕ್ಕಾಗುವುದಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ನಿರ್ಲಕ್ಷಿಸಿ ಆಧುನಿಕ ಕಾಲದಲ್ಲಿ ಬದುಕುವುದೂ ಸಾಧ್ಯವಿಲ್ಲ. ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನಗಳ ಭಾಷೆ ಆಗುವುದೂ ಅಗತ್ಯ. ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಷಯಗಳನ್ನು ಕುರಿತೂ ಕನ್ನಡದಲ್ಲೇ ಸಂಶೋಧನೆಗಳು ನಡೆಯಬೇಕೆಂದು ನಮ್ಮ ಅಪೇಕ್ಷೆ. ಇದು ಸಾಧ್ಯವಾಗಬೇಕಾದರೆ ಇತರ ವಿಶ್ವವಿದ್ಯಾಲಯಗಳಲ್ಲಿರುವ ಸಮರ್ಥರಾದ ವಿಜ್ಞಾನ-ವಿದ್ವಾಂಸರೂ, ಕನ್ನಡದಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲು ಆಸಕ್ತರಾದ ಕೆಲವರಾದರೂ ವಿದ್ಯಾರ್ಥಿಗಳು ಇದ್ದಾರೆ. ಇವರೆಲ್ಲರ ಸಹಕಾರ ಮತ್ತು ಸಹಯೋಗಗಳನ್ನು ನಾನು ಕೋರುತ್ತೇನೆ. ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳ ಕೋಶಗಳ ನಿರ್ಮಾಣ, ವಿವಿಧ ವಿಜ್ಞಾನ ಶಾಖೆಗಳಿಗೆ ಸಂಬಂಧಿಸಿದ ಪುಸ್ತಕಗಳ ರಚನೆ ಈ ಎಲ್ಲ ಕೆಲಸಗಳನ್ನು ಅವರ ನೆರವು ನಮಗೆ ಅಗತ್ಯವಾಗಿದೆ. ನಮ್ಮ ವಿಶ್ವವಿದ್ಯಾಲಯವು ಈಗಾಗಲೇ ‘ವಿಜ್ಞಾನ ಸಂಗಾತಿ’ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದೆ. ಈ ಪತ್ರಿಕೆಗೆ ಲೇಖನಗಳು ಬೇಕು. ಪತ್ರಿಕೆ ಕನ್ನಡದ ಜನಕ್ಕೆ ಹೇಗೆ ಇನ್ನೂ ಉಪಯುಕ್ತವಾಗಬಹುದು ಎಂಬ ಬಗ್ಗೆ ಸಲಹೆಗಳೂ ಬೇಕು.

ನಾಡಿನ ಇತರ ವಿಶ್ವವಿದ್ಯಾಲಯಗಳು ನಮಗೆ ಇನ್ನೂ ಒಂದು ವಿಧದಲ್ಲಿ ನೆರವು ನೀಡಬಹುದು. ಭೌತ ವಿಜ್ಞಾನಗಳನ್ನು ಕುರಿತಂತೆ ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪದವಿಗಾಗಿ ಅಧ್ಯಯನ ನಡೆಸಬಹುದು. ಅಭ್ಯರ್ಥಿಯು ತನ್ನ ನಿಬಂಧವನ್ನು ಕನ್ನಡದಲ್ಲೇ ರಚಿಸಬೇಕೆಂಬುದು ಕಡ್ಡಾಯ. ಈ ಕುರಿತಂತೆ ಸಂಶೋಧನೆ ನಡೆಸಲು ಪ್ರಯೋಗಶಾಲೆಗಳ ಅಗತ್ಯವಿದೆ. ಸಮಾಜಶಾಸ್ತ್ರಗಳನ್ನು ಕುರಿತಂತೆ ನಮಗೆ ಸಮಸ್ಯೆಯಿಲ್ಲ. ಏಕೆಂದರೆ ಸಮಾಜಶಾಸ್ತ್ರಗಳ ಅಧ್ಯಯನಕ್ಕೆ ಸಮಾಜವೇ ಪ್ರಯೋಗಶಾಲೆಯಾಗಿರುತ್ತದೆ. ನಮ್ಮ ಹಂಪಿ ವಿಶ್ವವಿದ್ಯಾಲಯದಲ್ಲಿ ವೈಜ್ಞಾನಿಕ ವಿಷಯಗಳಿಗೆ ಅಗತ್ಯವಾದ ಪ್ರಯೋಗಶಾಲೆಗಳಿಲ್ಲ. ನಮ್ಮ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಷಯಗಳಲ್ಲಿ ಪಿಎಚ್‌.ಡಿಗಾಗಿ ಅಧ್ಯಯನ ನಡೆಸುವ ಅಭ್ಯರ್ಥಿಗಳಿಗೆ ನಾಡಿದ ಇತರ ವಿಶ್ವವಿದ್ಯಾಲಯಗಳಲ್ಲಿರುವ ಪ್ರಯೋಗಶಾಲೆಗಳನ್ನು ಬಳಸಲು ಅವಕಾಶ ಮಾಡಿಕೊಡಬೇಕೆಂದು, ನಾಡಿದ ಇತರ ವಿಶ್ವವಿದ್ಯಾಲಯಗಳು ಈ ಅಮೂಲ್ಯ ಸಹಕಾರವನ್ನು ನಮಗೆ ನೀಡಬೇಕೆಂದು ಕೋರುತ್ತೇನೆ. ಅಭ್ಯರ್ಥಿಗಳು ಸಂಬಂಧಿಸಿದ ವಿಶ್ವವಿದ್ಯಾಲಯಗಳಿಗೆ ನಿಗದಿತ ಪ್ರಯೋಗಾಲಯ ಶುಲ್ಕ, ಠೇವಣಿ ಇತ್ಯಾದಿಗಳನ್ನು ಕಟ್ಟಲು ವ್ಯವಸ್ಥೆ ಮಾಡಬಹುದು. ವಿಜ್ಞಾನ ವಿಷಯಗಳನ್ನು ಕುರಿತ ಅಧ್ಯಯನಕ್ಕೆ ನಮ್ಮ ವಿಶ್ವವಿದ್ಯಾಲಯದೊಂದಿಗೆ ಹೀಗೆ ಸಹಕರಿಸಲು ಇತರ ಸಂಸ್ಥೆಗಳು ನಮಸ್ಸು ಮಾಡಬೇಕೆಂಬುದಷ್ಟೇ ಇಲ್ಲಿ ಮುಖ್ಯವಾದ ಸಂಗತಿಯಾಗಿದೆ. ಅಥವಾ ಇತರ ವಿಶ್ವವಿದ್ಯಾಲಯಗಳು ಇಂಥ ಪಿಎಚ್‌.ಡಿಗಾಗಿ ತನ್ನ ವಿದ್ಯಾರ್ಥಿಗಳನ್ನೇ ಪ್ರಾಯೋಜಿಸಿದರೂ ಸೂಕ್ತವೇ ಆಗುತ್ತದೆ.

ನನ್ನ ಈ ವಿನಮ್ರ ಸೂಚನೆಯನ್ನು ಸಹೋದರ ವಿಶ್ವವಿದ್ಯಾಲಯಗಳು ಗಂಭೀರವಾಗಿ ಆಲೋಚಿಸಬೇಕೆಂದು ಕೋರುತ್ತೇನೆ. ಕನ್ನಡ ನಾಡಿನಲ್ಲಿ ಕನ್ನಡವೇ ಮುಖ್ಯವಾಗಬೇಕೆಂದು ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ. ವಿಶ್ವವಿದ್ಯಾಲಯಗಳ ಈ ಬಗೆಯ ಸಹಯೋಗವು ನಾಡಿನಲ್ಲಿ ಕನ್ನಡ ಪ್ರಜ್ಞೆಯ ವಿಕಾಸಕ್ಕೆ ಇಂಬುಕೊಡುತ್ತದೆ. ಅಲ್ಲದೆ ಇಂಥ ಸಹಯೋಗದಿಂದ ಶ್ರಮ ವಿಭಜನೆಯೂ ಸಾಧ್ಯವಾಗುತ್ತದೆ. ಒಂದು ವಿಶ್ವವಿದ್ಯಾಲಯವು ಕನ್ನಡ ಜವಾಬ್ದಾರಿಯನ್ನೂ ಇನ್ನೊಂದು ವಿಶ್ವವಿದ್ಯಾಲಯವು ವಿಜ್ಞಾನದ ಹೊಣೆಗಾರಿಕೆಯನ್ನೂ ಹಂಚಿಕೊಂಡಂತಾಗುತ್ತದೆ. ಇದೇ ರೀತಿ ಸೋದರ ಭಾಷೆಗಳ ವಿಶ್ವವಿದ್ಯಾಲಯಗಳೊಂದಿಗೂ ನಮ್ಮ ಸಂಬಂಧ ಚಾಚಿಕೊಳ್ಳಬೇಕಾಗಿದೆ.

ತಮಿಳು ಮತ್ತು ತೆಲುಗು ವಿಶ್ವವಿದ್ಯಾಲಯಗಳೊಂದಿಗೆ ಸಂಬಂಧ

ತಮಿಳು, ತೆಲುಗು ಮತ್ತು ಕನ್ನಡ ವಿಶ್ವವಿದ್ಯಾಲಯಗಳು ದಕ್ಷಿಣ ಭಾರತದ ಅತಿ ಕಿರಿಯ ವಿಶ್ವವಿದ್ಯಾಲಯಗಳಾಗಿವೆ. ಅವುಗಳ ಸ್ವರೂಪ ಮತ್ತು ಆಡಳಿತ ವಿಧಾನಗಳು ಕೂಡ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿವೆ. ಈ ಮೂರು ಸಂಸ್ಥೆಗಳಲ್ಲಿ ಪಿಎಚ್‌.ಡಿ. ಮುಂತಾದ ಪದವಿಗಳ ಅಧ್ಯಯನಕ್ಕೆ ಅವಕಾಶವಿದ್ದರೂ ಇವು ಮುಖ್ಯವಾಗಿ ಉನ್ನತ ಸಂಶೋಧನೆಯ ಕೇಂದ್ರಗಳೇ ಹೊರತು ಶಿಕ್ಷಣ ಸಂಸ್ಥೆಗಳಲ್ಲ. ಇಡೀ ಭಾರತದಲ್ಲೇ ಅತ್ಯಂತ ಪ್ರಾಚೀನವಾದ ಈ ಮೂರು ಭಾಷೆಗಳ ಅಭಿವೃದ್ಧಿಗೆ ಸಹಾಯಕವೂ ಪೂರಕವೂ ಆದ ಕೆಲಸಗಳನ್ನು ಕೈಗೊಳ್ಳುವುದು ಈ ಸಂಸ್ಥೆಗಳ ಮುಖ್ಯ ಉದ್ದೇಶ. ಭಾರತದ ಭಾಷೆಗಳ ಚರಿತ್ರೆಗಳನ್ನು ಗಮನಿಸಿದರೆ ಸಂಸ್ಕೃತಕ್ಕೆ ಅತಿ ಮಹತ್ವದ ಸ್ಥಾನ ದೊರೆತಿರುವುದು ತಿಳಿಯುತ್ತದೆ. ಜ್ಞಾನದ ಗುತ್ತಿಗೆ ಸಂಸ್ಕೃತಕ್ಕೆ ಮಾತ್ರ ಮೀಸಲಾದಂತಿದೆ. ಸಂಸ್ಕೃತವು ಇನ್ನು ಮುಂದೆಯೂ ಭಾರತೀಯ ಜ್ಞಾನದ ಮೂಲವಾಗಿ ಉಳಿಯುವುದು ಸಾಧ್ಯವಾಗದೆಂಬುದು ನಿಜ. ಆದರೂ ನಮ್ಮ ಪ್ರಾಂತೀಯ ಭಾಷೆಗಳು ದಷ್ಟ-ಪುಷ್ಟವಾಗಲು ಅವು ಸಂಸ್ಕೃತದ ಅವಲಂಬನೆಯನ್ನು ಕೂಡಲೇ ಬಿಡಿಸಿಕೊಂಡು ತಮ್ಮದೇ ಆದ ಆಲೋಚನೆಯ ಆಕೃತಿಗಳನ್ನು ಮಾದರಿಗಳನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ.

ಈ ಮೂರು ವಿಶ್ವವಿದ್ಯಾಲಯಗಳಲ್ಲಿ ಕೈಗೊಳ್ಳಲಾಗುವ ಸಂಶೋಧನೆಗಳ ಸ್ವರೂಪವೂ ಇತರ ವಿಶ್ವವಿದ್ಯಾಲಯಗಳ ಸಂಶೋಧನೆಗಳಿಗಿಂತ ಅನಿವಾರ್ಯವಾಗಿಯೇ ಭಿನ್ನವಾಗಿರುತ್ತದೆ. ನೌಕರಿ ಪೂರೈಸುವ ಶಿಕ್ಷಣ ನಮಗೆ ಹಲವು ಬಗೆಯ ಲಾಭಗಳನ್ನು ತಂದುಕೊಟ್ಟರೂ ಅದು ಅಂತಿಮವಾಗಿ ಉಂಟುಮಾಡುತ್ತಿರುವ ಪರಿಣಾಮ ಭೀಕರವಾಗಿಯೇ ಇದೆ. ಈ ಮೂರು ವಿಶ್ವವಿದ್ಯಾಲಯಗಳಲ್ಲಿ ಆರಂಭದ ಹಂತದಲ್ಲಾದರೂ, ಉದ್ಯೋಗಾಪೇಕ್ಷೆಯ ಪೂರೈಕೆಯ ಉದ್ದೇಶವನ್ನು ದೂರವಿಡಲಾಗಿದೆ. ಇತರೆಡೆಗಳಲ್ಲಿ ತಯಾರಾದ ಜ್ಞಾನವನ್ನು ಆಮದು ಮಾಡಿಕೊಳ್ಳುವುದಕ್ಕಿಂತ ನಮ್ಮದೇ ಜ್ಞಾನವನ್ನು ಸೃಷ್ಟಿಸುವುದು ಮುಖ್ಯ ಗುರಿಯಾಗಿದೆ. ನಮ್ಮ ಜ್ಞಾನವನ್ನು ನಾವು ಕಂಡುಕೊಳ್ಳುವುದು ಕಷ್ಟದ ಕೆಲಸವೇ ಆಗಿದೆ. ನಮ್ಮ ಸಂಸ್ಕೃತಿಯಲ್ಲಿರುವ ದಂಗುಬಡಿಸುವ ವೈವಿಧ್ಯವೇ ಈ ಕಷ್ಟಕ್ಕೆ ಕಾರಣವಾಗಿದೆ. ಅಧ್ಯಯನಗಳ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಸ್ಥಳೀಯ ಕಿರು ಜಗತ್ತುಗಳಿಗೂ ನಾವು ‘ಮಹಾನ್ ಸಂಸ್ಕೃತಿ’ ಎಂದು ಭಾವಿಸಿರುವ ಸಂಸ್ಕೃತಿಗೂ ಇರುವ ಸಂಬಂಧದ ನೆಲೆಬೆಲೆಗಳನ್ನು ಅರಿಯಬೇಕಾಗಿದೆ. ತಾನಿರುವ ಸ್ಥಳವನ್ನೇ ಇಡೀ ಜಗತ್ತೆಂದು ನಂಬಿ, ತನ್ನ ಸುತ್ತಲ ಪರಿಸರದಿಂದ ಜೀವದ್ರವ್ಯವನ್ನು ಪಡೆಯುವ ಜಾನಪದವು ನಮ್ಮ ಅಧ್ಯಯನಗಳ ಕೇಂದ್ರ ಬಿಂದುವಾಗಬೇಕಾಗಿದೆ. ಆದರೆ ನಾವು ಮುಖ್ಯವಾಗಿ ಗಮನಿಸಬೇಕಾದ ಮಾತೊಂದಿದೆ: ನಮ್ಮ ಜಾನಪದವನ್ನು ಅಧ್ಯಯನ ಮಾಡುವುದಕ್ಕೆ ನಾವು ನಮ್ಮದೇ ಅಧ್ಯಯನ ವಿಧಾನಗಳನ್ನು ರೂಪಿಸಿಕೊಳ್ಳಬೇಕಾಗಿದೆ.

ಪಶ್ಚಿಮದ ವಿದ್ವಾಂಸರು ರೂಪಿಸಿದ ಕ್ರಮಗಳು ನಮ್ಮ ಸಂಸ್ಕೃತಿಯ ಅಧ್ಯಯನಕ್ಕೆ ಸೂಕ್ತವಾಗಿ ಒದಗಿಬರಲಾರವು. ಸ್ಥಳೀಯ ಬದುಕನ್ನು ಅರಿಯುವುದಕ್ಕೆ ಪರದೇಶದ ನೋಟವನ್ನು ಅಳವಡಿಸಿಕೊಂಡದ್ದರಿಂದಲೇ ನಮ್ಮ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಬಹುತೇಕ ಮಾನವಿಕ ಅಧ್ಯಯನಗಳು ವಿಫಲವಾಗಿದೆ. ನಮ್ಮ ಸಂಶೋಧಕರಿಗೆ ‘ನಮ್ಮದೇ’ ಸಂಶೋಧನ ವಿಧಾನಗಳನ್ನು ರೂಪಿಸಿಕೊಳ್ಳಲು ಕಲಿಸಿಕೊಡಬೇಕಾಗಿದೆ. ಸಿದ್ಧ ಅಧ್ಯಯನಗಳ ಮಾದರಿಗಳನ್ನು ನಿರಾಕರಿಸಿ ತಮ್ಮ ತಾಜಾ ಮನಸ್ಸನ್ನು ತೊಡಗಿಸಿ ಹೊಸ ಅಧ್ಯಯನ ವಿಧಾನಗಳನ್ನು ರೂಪಿಸಿಕೊಳ್ಳಲು ನೆರವಾಗುವಂಥ ಅಧ್ಯಯನ ಕಮ್ಮಟಗಳನ್ನು ನಡೆಸಬೇಕಾಗಿದೆ.

ಈ ವಿಜ್ಞಾನ ಯುಗದಲ್ಲಿ ಮಾನವಿಕ ಮತ್ತು ಸಮಾಜಶಾಸ್ತ್ರೀಯ ಅಧ್ಯಯನಗಳಿಗೆ ಹೆಚ್ಚಿನ ಮಹತ್ವವನ್ನು ನಾವು ನೀಡಬೇಕು. ವಿಜ್ಞಾನದ ಸಂಶೋಧನೆಗಳು ಮುಖ್ಯವಲ್ಲ ಎಂದು ಈ ಮಾತಿನ ಅರ್ಥವಲ್ಲ. ವಿಜ್ಞಾನದ ಸಂಶೋಧನೆಗಳು ಮುಖ್ಯವಲ್ಲ ಎಂದು ಈ ಮಾತಿನ ಅರ್ಥವಲ್ಲ. ವಿಜ್ಞಾನದ ಸಂಶೋಧನೆಗಳಿಗೆ ನಿಗದಿತ ಮಾದರಿಗಳು ಲಭ್ಯವಿದ್ದು ಹೊಸ ಅನ್ವೇಷಣಾಶೀಲತೆಗಾಗಲೀ ಕಲ್ಪನಾ ಶೀಲತೆಗಾಗಲೀ ಅವಕಾಶಗಳು ಅಲ್ಲಿ ಕಡಿಮೆಯೇ. ಜೀವಂತ ಸಮಾಜವೇ ಪ್ರಯೋಗಶಾಲೆಯಾಗಿರುವ ಮಾನವಿಕ ಅಧ್ಯಯನಗಳಿಗೆ ಹೇರಳ ಅವಕಾಶಗಳಿವೆ. ಒಂದು ಕವನವನ್ನೂ, ಕಂಪ್ಯೂಟರನ್ನೂ ಅಧ್ಯಯನ ಮಾಡುವದಷ್ಟೇ ಮುಖ್ಯ ಎಂದು ನಮ್ಮನ್ನೇ ನಾವು ನಂಬಿಸಿಕೊಳ್ಳಬೇಕಾಗಿದೆ. ಕವನ, ಕಂಪ್ಯೂಟರ್ ಎರಡೂ ಬಾಹ್ಯ ಜಗತ್ತನ್ನುಅ ರಿಯಲು ಮನುಷ್ಯನೇ ಸೃಷ್ಟಿಸಿರುವ ‘ವಸ್ತು’ಗಳು. ನಾವು ಇಂದು ಯಂತ್ರದ ಕೌಶಲ ಮತ್ತು ಮೌಲ್ಯವನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳುವ ಸ್ಥಿತಿಯನ್ನು ಬೆಳೆಸಿಕೊಂಡಿದ್ದೇವೆ. ಆದರೆ ಒಂದು ಕವನದ, ಪುರಾಣದ ಮೌಲ್ಯವನ್ನು ಕುರಿತು ಸಂಶಯಗ್ರಸ್ತರಾಗಿದ್ದೇವೆ. ವಿಜ್ಞಾನ ಸತ್ಯವೇ ಪರಮಸತ್ಯವೆಂದು ನಂಬತೊಡಗಿದ್ದೇವೆ. ವಿಜ್ಞಾನ ಪ್ರಶ್ನಾತೀತವೆಂದು ತಿಳಿಯತೊಡಗಿದ್ದೇವೆ. ಕಥೆ, ಪುರಾಣ, ಕವನಗಳು ತಮ್ಮ ಮೌಲ್ಯವನ್ನು ಇನ್ನೂ ಸ್ಥಾಪಿಸಬೇಕಿದೆ. ಸತ್ಯದ ಭಿನ್ನ ಮುಖಗಳ ಆವಿಷ್ಕಾರ ಸಾಧ್ಯವಾಗುವಂತೆ ನಮ್ಮ ವಿಶ್ವವಿದ್ಯಾಲಯಗಳ ಸಂಶೋಧಕರು ಗಂಭೀರವಾಗಿ ಈ ಬಗ್ಗೆ ಯೋಚಿಸಬೇಕಾಗಿದೆ.

ಭಾಷಾಶಾಸ್ತ್ರ, ಸಮಾಜಶಾಸ್ತ್ರ, ಸಾಂಸ್ಕೃತಿಕ ಮಾನವಶಾಸ್ತ್ರ ಮುಂತಾದ ವಿಷಯಗಳಲ್ಲಿ ಆಗಬೇಕಾದ ಕೆಲಸ ಅಗಾಧವಾಗಿ, ಸವಾಲೊಡ್ಡುವಂತೆ ನಮ್ಮೆದುರಿಗೆ ನಿಂತಿದೆ. ಈ ವಿಷಯಗಳು ಒಡ್ಡುವ ಸವಾಲನ್ನು ಎದುರಿಸಲು ನಾವು ಒಂದೆಡೆಯಲ್ಲಿ ನಮ್ಮ ಭಾಷೆಗಳನ್ನು ಸಜ್ಜುಗೊಳಿಸಬೇಕಾಗಿದೆ. ಇನ್ನೊಂದೆಡೆಯಲ್ಲಿ ನಮ್ಮ ಚರಿತ್ರೆಗಳನ್ನು ಪುನಾರಚಿಸಿಕೊಳ್ಳಬೇಕಾಗಿದೆ. ಸ್ಥಳೀಯ ಭಾಷೆಗಳು ವಿಶ್ವದೆಲ್ಲಾ ಚಿಂತನೆಗಳನ್ನು ದಕ್ಕಿಸಿಕೊಳ್ಳುವ ಮತ್ತು ವ್ಯಕ್ತಪಡಿಸುವ ಸಾಮರ್ಥ್ಯ ಗಳಿಸಿಕೊಳ್ಳಬೇಕಾಗಿದೆ. ಆಲೋಚನೆಗಳು ರೂಪಗೊಳ್ಳುವುದೇ ಭಾಷೆಯಲ್ಲಿ. ಆಲೋಚನೆಯ ಆಸೆ ಮೊದಲು ನಮ್ಮಲ್ಲಿ ಹುಟ್ಟಬೇಕು. ನಮ್ಮ ಪ್ರಚೋದನೆ ಭಾಷೆಯನ್ನು ಉತ್ತೇಜಿಸಬೇಕು.

ಎರಡನೆಯದಾಗಿ ನಮಗೆ ಇಂದು ಲಭ್ಯವಿರುವ ಇತಿಹಾಸ ವಸಾಹತುಶಾಹಿಯ ಪೂರ್ವಗ್ರಹಗಳ ಲೇಪ ಪಡೆದಿರುವ ಇತಿಹಾಸ. ನಮ್ಮ ಇತಿಹಾಸ ದೃಷ್ಟಿಯೇ ಕಳಂಕಿತ ನೆಲದ ಮರೆಯ ನಿದಾನವಾಗಿದೆ. ಭಾರತೀಯ ಸಂಸ್ಕೃತಿಯಂತೆಯೇ ಭಾರತೀಯ ಇತಿಹಾಸವೂ ಏಕ ಶಿಲಾಕೃತಿಯದ್ದಲ್ಲ. ಭಾರತದ ಚರಿತ್ರೆಗೆ ಸಾವಿರ ಮುಖಗಳಿವೆ. ನಮಗೆ ಇಂದು ಲಭ್ಯವಿರುವುದೆಲ್ಲ ರಾಜ ರಾಣಿಯರ, ಯುದ್ಧ ಒಪ್ಪಂದಗಳ ಕಥೆ ಮಾತ್ರ. ಸಾಮಾನ್ಯ ಜನರ ಅಲಿಖಿತ ಚರಿತ್ರೆಯಾದರೋ ಅವರ ಹಾಡು ಕಥೆಗಳಲ್ಲಿ, ಕಲೆ ಮನರಂಜನೆಗಳಲ್ಲಿ, ಹಬ್ಬ ವ್ರತ ನೇಮಗಳಲ್ಲಿ ಸೂಕ್ಷ್ಮವಾಗಿ ಕಂಡುಬರುತ್ತದೆ. ನಾವು ಮೊದಲು ಜಾನಪದವನ್ನು ಜಾನಪದವಾಗಿ ಅಭ್ಯಾಸ ಮಾಡಿ ಅನಂತರ ಜಾನಪದಕ್ಕೂ ರಾಜಕೀಯ ಇತಿಹಾಸಕ್ಕೂ ಇರುವ ನಂಟುಗಳನ್ನು ಗುರುತಿಸಬೇಕು.

ನಾವು ನಡೆಸುವ ಭಾಷಿಕ ಅಧ್ಯಯನಗಳ ಸ್ವರೂಪವೂ ಬೇರೆಯೇ ಆಗಬೇಕು. ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಿಗೂ ಲಿಪಿ ಇದೆ. ಈ ಒಂದೊಂದು ಭಾಷೆಗೆ ಉಪಭಾಷೆಗಳೂ ಭಾಷಾಭೇದಗಳೂ ಇವೆ. ಈ ಪ್ರಮುಖ ಭಾಷೆಗಳಗೆ ಸಂಬಂಧಿಸಿದ ಲಿಪಿ ಇಲ್ಲದ ಉಪಭಾಷೆಗಳೂ ಇವೆ. ದಕ್ಷಿಣ ಭಾರತದ ಭಾಷಾವೈವಿಧ್ಯದ, ಭಾಷಾ ಸಂಬಂಧಗಳ, ಅಧ್ಯಯನವು ನಮ್ಮ ಸಂಸ್ಕೃತಿಯ ವೈವಿಧ್ಯದ ಅಧ್ಯಯನವೇ ಆಗುತ್ತದೆ. ಪಾರಂಪರಿಕವಾದ ಭಾಷಾಶಾಸ್ತ್ರವು ಮೂಲದಲ್ಲಿ ಒಂದೇ ದ್ರಾವಿಡ ಭಾಷೆ ಇತ್ತೆಂದೂ ಅದರಿಂದ ಈ ಎಲ್ಲ ಭಾಷೆಗಳು ಉತ್ಪನ್ನವಾದವೆಂದೂ ನಂಬುತ್ತದೆ ಅದೇನಿದ್ದರೂ ಈ ನಾಲ್ಕು ಭಾಷೆಗಳು ಈಗ ಬೇರೆ ಬೇರೆಯದೇ ದಾರಿಗಳಲ್ಲಿ ಸಾಗಿ, ತಮ್ಮ ತಮ್ಮ ಚಹರೆಗಳನ್ನು ರೂಪಿಸಿಕೊಂಡಿವೆ. ಇವುಗಳೆಲ್ಲ ಬೇರೆ ಬೇರೆಯಾಗಿ ಬೆಳೆದದ್ದರ ಇತಿಹಾಸ, ಪರಸ್ಪರ ಸ್ಪರ್ದಿಸಿದ್ದರ ಇತಿಹಾಸ, ಒಂದನ್ನೊಂದು ದ್ವೇಷಿಸಿದ್ದರ ಇತಿಹಾಸ ತಮ್ಮ ಅನನ್ಯತೆಯನ್ನು ಸಾಧಿಸಲು ಬಯಸಿದ್ದರ ಇತಿಹಾಸ ಇತ್ಯಾದಿಗಳನ್ನೆಲ್ಲ ನಾವು ತಿಳಿಯಬೇಕಾಗಿದೆ. ಈ ಭಾಷಾ ಪ್ರದೇಶಗಳ ರಾಜಕೀಯ ಚರಿತ್ರೆಯನ್ನು ಮಾತ್ರ ಅಧ್ಯಯನ ಮಾಡಿದರೆ ಫಲವಿಲ್ಲ. ಈ ಭಾಷೆಗಳನ್ನೂ ಅವುಗಳ ಪ್ರಭೇದಗಳನ್ನೂ ಆಡುವ ಜನರ ಸಾಮಾಜಿಕ ಅಭ್ಯಾಸಗಳು, ನಂಬಿಕೆಗಳು, ಸಂಪ್ರದಾಯಗಳನ್ನೂ ಅಭ್ಯಾಸಮಾಡಬೇಕು. ಒಂದೊಂದು ಭಾಷಾ ಪ್ರಭೇದವನ್ನು ಬಳಸುವ ಪ್ರದೇಶವನ್ನೂ ಆಯಾ ಪ್ರದೇಶದ ಉಪಸಂಸ್ಕೃತಿಗಳಾದರೋ ‘ಪ್ರಗತಿ’ ವಂಚಿತವಾಗಿ ಹಿಂದುಳಿದಿವೆ ಎಂದು ತಿಳಿದಿದ್ದೇವೆ. ಆದರೆ ಈ ‘ಪ್ರಗತಿ’ಯ ಕಲ್ಪನೆಯೇ ಒಂದು ಪಾಶ್ಚಾತ್ಯ ಮಿಥ್ಯ ಎಂದು ನಾವು ಅರಿಯಬೇಕಾಗಿದೆ. ೧೯ನೆಯ ಶತಮಾನದ ಯುರೋಪಿನಲ್ಲಿ ಸಂಭವಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಯ ಫಲಿತಾಂಶವಾಗಿ ‘ಪ್ರಗತಿ’ಯ ಕಲ್ಪನೆ ಹುಟ್ಟಿಕೊಂಡಿತು. ಈ ಕಲ್ಪನೆಯ ಯುರೋಪಿನಲ್ಲಿ ಬಂಡವಾಳಶಾಹಿ ಸಮಾಜದ ಬೆಳವಣಿಗೆಗೆ, ಶೋಷಣೆಗೆ ದಾರಿಮಾಡಿಕೊಟ್ಟಿತು. ಬಂಡವಾಳಶಾಹಿ ಮತ್ತು ಶೋಷಣೆ ಇಂದು ಕಾನೂನುಬದ್ಧವೆ ಆಗಿಬಿಟ್ಟಿರುವುದು ಒಂದು ವಿಪರ್ಯಾಸ. ಒಂದೊಂದು ಸಮಾಜವೂ ತನ್ನದೇ ಆಗಿ ಪ್ರೀತಿ-ದ್ವೇಷಗಳ, ಆಕರ್ಷಣೆ-ವಿಕರ್ಷಣೆಗಳ ವಿನ್ಯಾಸವನ್ನು ಹೊಂದಿರುತ್ತದೆ. ಈ ಅಕ್ಷದ ಸುತ್ತಲೇ ಆಯಾ ಸಂಸ್ಕೃತಿ ರೂಪು ಪಡೆದಿರುತ್ತದೆ. ಇದೆಲ್ಲವನ್ನೂ ನಾವು ಅರಿಯಬೇಕಾಗಿದೆ.

ಹಂಪಿಯ ನಮ್ಮ ವಿಶ್ವವಿದ್ಯಾಲಯದಂಥ ಭಾಷಾ ವಿಶ್ವವಿದ್ಯಾಲಯಗಳು ಭಾಷೆಯ ಮುಖಾಂತರವೇ ಈ ಎಲ್ಲ ಸಂಗತಿಗಳನ್ನು ಕುರಿತು ಅಧ್ಯಯನ ಮಾಡಬೇಕಾಗಿದೆ. ಇಂಥ ಸ್ಪಷ್ಟ ಗುರಿ ಇಲ್ಲದಿದ್ದರೆ ನಮ್ಮ ಭಾಷಿಕ ಅಧ್ಯಯನಗಳು ವ್ಯರ್ಥವಾಗುತ್ತವೆ.

ಆದರೆ ಮೇಲಿನ ಕನಸುಗಳು ನನಸಾಗಬೇಕಾದರೆ ಪ್ರಾದೇಶಿಕ ಭಾಷೆಗಳು ಶಿಕ್ಷಣದ ಮಾಧ್ಯಮವಾಗಲೇಬೇಕು. ನಮ್ಮ ಪಾಡನ್ನೇ ಗಮನದಲ್ಲಿಟ್ಟುಕೊಂಡು ಮಾತಾಡುವುದಾದರೆ ಕನ್ನಡ ಎಷ್ಟು ಬೇಗನೇ ಶಿಕ್ಷಣ ಮಾಧ್ಯಮವಾದರೆ ಅಷ್ಟೂ ಒಳ್ಳೆಯರು. ಇಲ್ಲದಿದ್ದಲ್ಲಿ ಮುಂದೆಂದೂ ತುಂಬಲಾರದಷ್ಟು ಹಾನಿಯಾಗುವುದು ಖಚಿತ.

ಕನ್ನಡಮಾಧ್ಯಮ

ನಮ್ಮದು ಲೋಕ ಶಿಕ್ಷಣ ಯುಗ. ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಲೋಕಶಿಕ್ಷಣ ಒಂದು ರಾಜಕೀಯ ಅವಶ್ಯಕತೆಯಾಗಿ ಪರಿಣಮಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬನೂ ಶಿಕ್ಷಣ ಪಡೆದು ರಾಜಕೀಯ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಪ್ರಜೆಗಳಿಗೆ ಅನುಕೂಲವಾದ ಆಡಳಿತ ತಂತ್ರವನ್ನು ರೂಪಿಸಿಕೊಳ್ಳಬೇಕು ಎನ್ನುವದು ಇಲ್ಲಿಯ ಉದ್ದೇಶ. ಆದರೆ ಇಲ್ಲಿ ಶಿಕ್ಷಣದ ಗತಿ ಏನಾಗಬಹುದೆಂಬುದನ್ನು ಆಡಳಿತಗಾರರು ಯೋಚಿಸುವುದಿಲ್ಲ. ಶಿಕ್ಷಣದ ವ್ಯವಸ್ಥೆ ಇಂದು ರಾಜ್ಯದ ಜವಾಬ್ದಾರಿಯಾಗಿದೆ. ಶಿಕ್ಷಣ ನೀತಿಯನ್ನು ರೂಪಿಸುವವರು ಆಡಳಿತಗಾರರೇ ಹೊರತು ಶಿಕ್ಷಣ ತಜ್ಞರಲ್ಲ. ಬ್ರಿಟಿಷರ ಕಾಲದ ಶಿಕ್ಷಣ ವ್ಯವಸ್ಥೆ ಹಲಕೆಲವು ಬದಲಾವಣೆಗಳೊಂದಿಗೆ ಇಂದಿಗೂ ಜಾರಿಯಲ್ಲಿದೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಉಚ್ಚವೆಂದು ಶಿಕ್ಷಣದ ಮೂರು ಹಂತಗಳು ನಿರ್ಮಾಣಗೊಂಡದ್ದು ಕೂಡ ಬ್ರಿಟಿಷರ ಕಾಲದಲ್ಲಿಯೇ. ತಿಳುವಳಿಕೆಯ ಕ್ರಮಪ್ರಾಪ್ತವಾದ ವಿಕಾಸಕ್ಕೆ ತಕ್ಕ ಹಾಗೆ ಶಿಕ್ಷಣ ಕೊಡುವ ಕ್ರಮ ಇಲ್ಲಿ ಕಾಣುತ್ತದೆ. ಆದರೆ ಈ ಶಿಕ್ಷಣದ ಅಂತಿಮ ಉದ್ದೇಶವೆಂದರೆ ವಿದ್ಯಾರ್ಥಿಯನ್ನು ಒಳ್ಳೆಯ ನೌಕರನನ್ನಾಗಿ ಮಾಡುವುದು, ಇಲ್ಲವೆ ವೈದ್ಯಕೀಯ, ಇಂಜಿನಿಯರಿಂಗ್‌ನಂಥ ಉದ್ಯೋಗಗಳಿಗೆ ಯೋಗ್ಯನನ್ನಾಗಿ ಮಾಡುವುದು. ಶಿಕ್ಷಣದ ಉದ್ದೇಶದಲ್ಲಿ ಇಲ್ಲಿಯೂ ಸಂಸ್ಕೃತಿಯ ಮಾತು ಬರುವುದಿಲ್ಲ.

ವಿದ್ಯಾರ್ಥಿಗಳಿಗೆ ಯಾವ ಯಾವ ವಿಷಯಗಳನ್ನು ಕಲಿಸಬೇಕು. ಯಾವ ರೀತಿಯಲ್ಲಿ ಕಲಿಸಬೇಕು. ಎಷ್ಟು ವರ್ಷಗಳವರೆಗೆ ಕಲಿಸಬೇಕು. ಪರೀಕ್ಷೆಯ ವಿಧಾನಗಳು ಹೇಗಿರಬೇಕು ಮೊದಲಾದವುಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ವಿಶ್ವವಿದ್ಯಾಲಯಗಳಿಗೆ ಸ್ವಾತಂತ್ರ್ಯವಿದೆ ನಿಜ. ಆದರೆ ದೇಶದಲ್ಲಿಯ ವಿಶ್ವವಿದ್ಯಾಲಯಗಳು ಸಮಾನವಾಗಿರಬೇಕು ಎಂಬ ಆಶಯ ಇರುವುದರಿಂದ ಏಕರೂಪತೆಯ ಕಡೆಗೇ ಇವುಗಳ ಮನಸ್ಸು ಚಿಂತಿಸುತ್ತಿರುತ್ತದೆ. ಆದ್ದರಿಂದ ಈ ಸ್ವಾತಂತ್ರ್ಯ ಇದ್ದೂ ಇಲ್ಲದಂತಾಗಿದೆ. ಇದೂ ಅಲ್ಲದೆ ನಮ್ಮ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೇರೆ ರೀತಿಯ ಶಿಕ್ಷಣವೂ ಬೇಡ. ಇಂಥ ಶಿಕ್ಷಣ ಎಷ್ಟೇ ಒಳ್ಳೆಯದಾಗಿದ್ದರೂ ಅದಕ್ಕೆ ಪೇಟೆಯ ಬೆಲೆ ಇಲ್ಲ. ಶಿಕ್ಷಣ ಹೆಚ್ಚು ಹೆಚ್ಚಾಗಿ ಸಂಘಟಿತವಾಗುತ್ತಿರುವಂತೆ, ಸಂಘಟನೆ ಉಳಿಯುವುದು ಮುಖ್ಯವಾಗುತ್ತದೆಯೆ ಹೊರತು ಶಿಕ್ಷಣದ ಸೃಜನಶೀಲತೆಯಲ್ಲ.

ನಮ್ಮಲ್ಲಿ ಇತ್ತೀಚೆಗೆ ಶಿಕ್ಷಣದ ಮಟ್ಟ ಕುಸಿಯುವುದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಲಾಗುತ್ತಿದೆ. ೧೯೩೦ನೆಯ ಸಾಲಿನ ಮ್ಯಾಟ್ರಿಕ್ ಪರೀಕ್ಷೆಗೆ ಇರುವ ಗೌರವ ಇವೊತ್ತಿನ ಎಂ.ಎ. ಪದವಿಗೂ ಇಲ್ಲವೆಂದು ಹಳೆಯ ಸತ್ಯಯುಗದ ಕೈವಾರಿಗಳು ಸದಾ ಹೇಳುತ್ತಿರುತ್ತದೆ. ಹೀಗೆ ಮಾತಾಡುವವರೆಲ್ಲ ಉದಾಹರಣೆ ಕೊಡುವುದೆಂದರೆ ಆಗಿನವರ ಇಂಗ್ಲಿಷ್ ಈಗಿನವರಿಗಿಂತ ಚೆನ್ನಾಗಿರುತ್ತಿತ್ತು ಎಂದು. ಅಂದರೆ ನಮ್ಮಲ್ಲಿ ವಿದ್ಯೆಯೆಮದರೆ ಇಂಗ್ಲಿಷ್ ಭಾಷೆ ಎಂಬ ಭ್ರಮೆ ಇನ್ನೂ ಹೋಗಿಲ್ಲ. ಇಂಗ್ಲಿಷ್ ಭಾಷೆಯ ಈ ವ್ಯಾಮೋಹ ಇರುವವರೆಗೆ ನಮ್ಮ ಶಿಕ್ಷಣ ಮಾಧ್ಯಮದ ಸಮಸ್ಯೆ ಬಗೆಹರಿಯುವಂತೆ ಕಾಣುವುದಿಲ್ಲ.

ತಾಯಿನುಡಿಯಲ್ಲಿ ಶಿಕ್ಷಣ ಕೊಡಬೇಕೆಂಬ ಸಿದ್ಧಾಂತ ಈಗ ಸರ್ವಸಮ್ಮತವಗಿದೆ. ಶಿಕ್ಷಣತಜ್ಞರು ಯಾರೂ ಇದಕ್ಕೆ ವಿರೋಧವನ್ನುಂಟು ಮಾಡಿಲ್ಲ. ಆದರೆ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕೆಂಬ ಮಾತನ್ನು ನಾವು ಒಪ್ಪಿಕೊಂಡರೂ ಅದಕ್ಕೆ ನೂರಾರು ಅಡಚಣೆಗಳಿವೆಯೆಂದು ಎಲ್ಲರೂ ಹಿಂಜರಿಯುತ್ತಾರೆ. ಕನ್ನಡ ಸಾಹಿತ್ಯವನ್ನು ಕನ್ನಡದಲ್ಲಿ ಕಲಿಸಬಹುದು. ಸಂಸ್ಕೃತ ಸಾಹಿತ್ಯವನ್ನೂ ಕಲಿಸಬಹುದು. ಮನಸ್ಸು ಮಾಡಿದರೆ ಸಮಾಜಶಾಸ್ತ್ರಗಳನ್ನೂ ಕಲಿಸಬಹುದು. ಆದರೆ ಮಹತ್ವದ ವಿಷಯಗಳಾದ ಭೌತಶಾಸ್ತ್ರಗಳು, ಗಣಿತ, ವೈದ್ಯಶಾಸ್ತ್ರ, ತಂತ್ರವಿಜ್ಞಾನ ಇವನ್ನೆಲ್ಲ ಕನ್ನಡದಲ್ಲಿ ಕಲಿಸುವುದು ಸಾಧ್ಯವಿಲ್ಲವೆಂದೇ ಎಲ್ಲರೂ ಹೇಳುತ್ತಾರೆ. ನಾವು ಕಲಿಸಬೇಕಾದ ಶಾಸ್ತ್ರಜ್ಞಾನವೆಲ್ಲ ಇಂಗ್ಲಿಷಿನಲ್ಲಿ ಲಭ್ಯವಿರುವುದರಿಂದ, ಶಿಕ್ಷಕರೆಲ್ಲ ಇಂಗ್ಲಿಷಿನಲ್ಲಿಯೇ ಕಲಿತು ಬಂದಿರುವುದರಿಂದ ಇಂಗ್ಲಿಷ್ ಭಾಷೆಯೇ ಇದಕ್ಕೆ ಸರಿಯಾದ ಮಾಧ್ಯಮವೆಂಬುದು ಒಂದು ದೃಢವಾದ ನಂಬಿಕೆಯಾಗಿದೆ. ಶಿಕ್ಷಕರು ಇಂಗ್ಲಿಷ್‌ನಲ್ಲಿಯೆ ಕಲಿಸುತ್ತಾರೆ. ಅದಕ್ಕಾಗಿ ವಿದ್ಯಾರ್ಥಿಗಳೂ ಇಂಗ್ಲಿಷ್ ಕಲಿಯಬೇಕು. “ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿರುವುದರಿಂದ ಅದು ನಮ್ಮ ಭಾಷೆಯೂ ಹೌದು. ನಮ್ಮ ರಾಷ್ಟ್ರದ ಸಂವಿಧಾನ ಇಂಗ್ಲಿಷ್ ಭಾಷೆಯನ್ನು ಭಾರತೀಯ ಭಾಷೆಯನ್ನಾಗಿ ಗುರುತಿಸಿದೆ. ಈ ಭಾಷೆ ವಸಾಹತುಶಾಹಿಯ ಇತಿಹಾಸದ ಒಂದು ಕೊಡುಗೆ ನಿಜ. ಆದರೆ ಇತಿಹಾಸವನ್ನು ಮರೆಯುವುದಾದರೂ ಹೇಗೆ? ಒಟ್ಟಿನಲ್ಲಿ ಶಿಕ್ಷಣ ಯಶಸ್ವಿಯಾಗಿ ನಡೆದುಬಿಟ್ಟರೆ ಭಾವನಾತ್ಮಕ ಕಾರಣಗಳಿಗಾಗಿ ತಾನಾಗಿ ಬಂದಿರುವ ಒಂದು ಭಾಷೆಯನ್ನು ಬಿಟ್ಟುಕೊಡುವದು ಮೂರ್ಖತನವಾಗಬಹುದು. ತಮ್ಮ ದೇಶ ಉಳಿದ ದೇಶಗಳೊಂದಿಗೆ ಪ್ರಗತಿಪಥದಲ್ಲಿ ನಡೆಯಬೇಕಾದರೆ ಇಂಗ್ಲಿಷ್ ಭಾಷೆ ಅನಿವಾರ್ಯವಾಗುತ್ತದೆ” ಎನ್ನುವುದು ಒಂದು ವಾದ. ಇಂಥ ಅನೇಕ ವಾದಗಳನ್ನು ಇಂಗ್ಲಿಷ್ ಭಾಷೆಯನ್ನು ಸಮರ್ಥಿಸಿಕೊಳ್ಳಲು ಹೇಳಬಹುದು. ಇಂಥ ವಾದಗಳ ಹುಚ್ಚು ಪ್ರವಾಹದಲ್ಲಿ ಶಿಕ್ಷಣ ಮಾಧ್ಯಮದ ಸಮಸ್ಯೆ ಕೊಟ್ಟಿಕೊಂಡು ಹೋಗಿದೆ. ಶಿಕ್ಷಣ ಮಾಧ್ಯಮ ಕನ್ನಡವೇ ಆಗಬೇಕೆಂದು ಮಾತಾಡಿದರೆ ಐತಿಹಾಸಿಕವಾಗಿ ನಾವು ಹಿಂದುಳಿಯಬಹುದೆಂಬ ಭಯ ನಮ್ಮನ್ನು ಕಾಡುತ್ತಿದೆ. ಅದಕ್ಕಿಂತ ಹೆಚ್ಚಾಗಿ ನಮಗಿರುವ ಇಂಗ್ಲಿಷ್ ಭಾಷೆಯ ವ್ಯಾಮೋಹ ನಮ್ಮನ್ನು ಬೇರೆ ಏನೂ ವಿಚಾರಿಸದಂತೆ ಮಾಡಿದೆ. ಇದಕ್ಕೆ ಕಾರಣವೂ ಇದೆ.

ನಮ್ಮ ಮನಸ್ಸಿನ ಆಳದಲ್ಲಿ ಇಂಗ್ಲಿಷ್ ಎಂದರೆ ವಿದ್ಯೆ ಎನ್ನುವ ಒಂದು ಸಮೀಕರಣ ಹುಟ್ಟಿಕೊಂಡು ಬಂದಿದೆ. ಬ್ರಿಟಿಷರ ಕಾಲದಲ್ಲಿ ಶಾಲೆ ಕಾಲೇಜುಗಳು ಒಂದು ವ್ಯವಸ್ಥೆಯ ರೂಪದಲ್ಲಿ ಬಂದವು. ಈ ವ್ಯವಸ್ಥೆಯ ಸಂರಚನೆಗೂ ಆಡಳಿತದ ಸಂರಚನೆಗೂ ಏನೂ ಅಂತರವಿರಲಿಲ್ಲ. ಗ್ರಾಮ, ತಾಲೂಕು, ಜಿಲ್ಲೆ ಮತ್ತು ಪ್ರಾಂತಗಳಂತ ಪ್ರಾಥಂಇಕ ಮತ್ತು ಮಾಧ್ಯಮಿಕ ಶಾಲೆಗಳು, ಉಚ್ಚಶಿಕ್ಷಣವನ್ನು ನೀಡುವ ಕಾಲೇಜುಗಳು ಮತ್ತು ಕೊನೆಯಲ್ಲಿ ವಿಶ್ವವಿದ್ಯಾಲಯಗಳು ತಮ್ಮ ಆಡಳಿತದ ಒಂದು ಭಾಗವಾಗದೆ ಗತ್ಯಂತರವಿರಲಿಲ್ಲ. ಅದೇ ರೀತಿಯ ವ್ಯವಸ್ಥೆಯನ್ನು ಈಗ ಕೂಡ ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಶಿಕ್ಷಣ ಸಂಸ್ಥೆಗಳ ಸಂಖ್ಯೆ ಮೊದಲಿಗಿಂತ ಎಷ್ಟೋ ಪಾಲು ಹೆಚ್ಚಾಗಿರುವುದರಿಂದ ಅವುಗಳ ಆಡಳಿತ ಹೆಚ್ಚು ಜಟಿಲವಾಗಿದೆ. ಇದೇ ಕಾರಣಕ್ಕಾಗಿ ಇಂಗ್ಲಿಷ್ ಎಂದರೆ ವಿದ್ಯೆ ಎಂಬ ಸಮೀಕರಣ ತನ್ನ ಸತ್ಯವನ್ನು, ಶಕ್ತಿಯನ್ನು ಇನ್ನೂ ಕಳೆದುಕೊಂಡಿಲ್ಲ.

ಆದರೆ ನಮ್ಮ ವ್ಯವಹಾರಗಳಲ್ಲಿ ಇಂಗ್ಲಿಷ್ ಭಾಷೆಯ ಸ್ಥಾನವೇನೆಂಬುದರ ಬಗ್ಗೆ ನಾವಿನ್ನೂ ಆಳವಾಗಿ ವಿಚಾರ ಮಾಡಬೇಕಾಗಿದೆ. ಇಂಗ್ಲಿಷ್ ಭಾಷೆ ಇರಬೇಕೋ ಇರಬಾರದೋ ಎಂಬ ಚರ್ಚೆ ಪ್ರತಿವರ್ಷ ನಡೆಯುತ್ತಲೇ ಇದೆ. ಎರಡೂ ಬಗೆಯ ವಾದಗಳು ಅಷ್ಟೇ ಪರಿಣಾಮಕಾರಿಯಾಗಿವೆ. ಈ ಪರಿಸ್ಥಿತಿ ಹೀಗೆಯೆ ಒಂದು ನಿಲುಗಡೆಗೆ ಬರದಂತೆ, ರಾಜಕೀಯ ಶಕ್ತಿಗಳು ನೋಡಿಕೊಳ್ಳುತ್ತಿವೆ. ಇದರಿಂದಾಗಿ ನಮ್ಮ ಸುಶಿಕ್ಷಿತರಿಗೆ ಕೂಡ ಇಂಗ್ಲಿಷ್ ಗೊತ್ತಿದೆ ಮತ್ತು ಗೊತ್ತಿಲ್ಲ ಎಂದೇ ಹೇಳಬೇಕಾಗುತ್ತದೆ. ಬ್ರಿಟಿಷರು ಬಿಟ್ಟು ಹೋದ ಆಡಳಿತ ವ್ಯವಸ್ಥೆ, ನ್ಯಾಯವ್ಯವಸ್ಥೆ, ಅಂಚೆ ತಂತಿಯ ವ್ಯವಸ್ಥೆ, ವಿಶ್ವವಿದ್ಯಾಲಯಗಳು ಇಂಗ್ಲಿಷ್ ಭಾಷೆಯನ್ನು ಕೂಗಿ ಕರೆಯುತ್ತಿವೆ. ಇಂಗ್ಲಿಷ್ ಭಾಷೆ ಇಲ್ಲದಿದ್ದರೆ ನಮ್ಮ ಶಾಲೆ ಕಾಲೇಜುಗಳಲ್ಲಿ ವಿಜ್ಞಾನವನ್ನು ಕಲಿಸುವುದಾದರೂ ಹೇಗೆ? ಭೌತಶಾಸ್ತ್ರದಲ್ಲಿ ನಮ್ಮ ವಿದ್ಯಾರ್ಥಿಗಳು ಕಲಿಯುವುದು Light, Electricity ಮತ್ತು Soundನ್ನೇ ಹೊರತು ಬೆಳಕು, ವಿದ್ಯುತ್ತು ಮತ್ತು ಧ್ವನಿಯನ್ನಲ್ಲ. ನಾವು ಉಸಿರಾಡಿಸುವುದು ಪ್ರಾಣವಾಯುವಾಗಿದ್ದರೂ ರಸಾಯನಶಾಸ್ತ್ರದಲ್ಲಿ ನಾವು ಕಲಿಯುತ್ತಿರುವುದು Oxygen ಅನ್ನು. Oxygen ಎಂದರೆ ಪ್ರಾಣವಾಯು ಎಂದು ಅನುವಾದ ಮಾಡಿ ಹೇಳಬಹುದು. ಈ ವ್ಯಾಖ್ಯಾನವೂ ಒಂದು ವಿದ್ಯೆಯಾಗಿದೆ.

ಇಷ್ಟೆಲ್ಲ ಆಗಿಯೂ ನಮಗೆ ಇಂಗ್ಲಿಷ್ ಗೊತ್ತಿಲ್ಲ. ಕಳೆದ ಎರಡು ನೂರು ವರ್ಷಗಳಿಂದ ನಮ್ಮ ವಿಶ್ವವಿದ್ಯಾಲಯಗಳನ್ನು ಶೇಕ್ಸ್‌ಪಿಯರನ ನಾಟಕಗಳನ್ನು ಕಲಿಸುತ್ತಿದ್ದೇವೆ. ಒಂದು ಕಾಲಕ್ಕೆ ವಿಜ್ಞಾನದ ವಿದ್ಯಾರ್ಥಿಗಳೂ ಶೇಕ್ಸ್‌ಪಿಯರನನ್ನು ಕಲಿಯಬೇಕಾಗುತ್ತಿತ್ತು. ಭಾರತದ ಪ್ರತಿಯೊಂದು ಭಾಷೆಯಲ್ಲಿ ಶೇಕ್ಸ್ ಪಿಯರನ ಕೃತಿಗಳು ಅನುವಾದಗೊಂಡಿವೆ. ವರ್ಡ್ಸ್ ವರ್ಥ್, ಶೆಲ್ಲಿ, ಕೀಟ್ಸ್, ಬಾಯರನ್, ಯೇಟ್ಸ್ ಮತ್ತು ಎಲಿಯಟ್‌ರಂಥ ಕವಿಗಳೂ ನಮ್ಮ ಭಾಷೆಗಳಲ್ಲಿ ಅನುವಾದಗೊಂಡಿದ್ದಾರೆ. ಆದರೂ ಇವರೆಲ್ಲರ ಪ್ರಭಾವ ನಮ್ಮ ಮೇಲೆ ಎಷ್ಟರಮಟ್ಟಿಗೆ ಆಗಿದೆ? ಕನ್ನಡದಲ್ಲಿ ಇಂಗ್ಲಿಷ್ ಗೀತೆಗಳು ಅನುವಾದಗೊಂಡ ಮೇಲೆ ಹೊಸಗನ್ನಡ ಕಾವ್ಯ ಹುಟ್ಟಿತು ಎಂದು ಒಪ್ಪಿಕೊಂಡರೂ ಈ ಮಾತನ್ನು ಮತ್ತೊಮ್ಮೆ ಕೇಳಬೇಕಾಗಿದೆ. ಕನ್ನಡ ಭಾಷೆ ಶೇಕ್ಸ್‌ ಪಿಯರ್‌ನನ್ನು ಅರಗಿಸಿಕೊಳ್ಳಲಿಲ್ಲ. ಉಳಿದ ಕವಿಗಳ ಪ್ರಭಾವ ಭಾಷೆಯ ಮೇಲೆ ಆಗಿರಬಹುದಾದರೂ ಅದು ಭಾಷೆಯ ಶಿಲ್ಪವನ್ನು ಬದಲಿಸುವಷ್ಟು ಪ್ರಭಾವಶಾಲಿಯಾಗಲಿಲ್ಲ. ಭಾರತೀಯ ಇಂಗ್ಲಿಷ್ ಸಾಹಿತ್ಯ ಎಷ್ಟರ ಮಟ್ಟಿಗೆ ಸಮೃದ್ಧವಾಗಿದೆ? ಇಂಗ್ಲಿಷ್ ಭಾಷೆಯ ಅಂತರಂಗವನ್ನು ನಾವಿನ್ನೂ ಹಿಡಿದುಕೊಳ್ಳಲಿಲ್ಲವೆಂದೇ ನನ್ನ ಭಾವನೆಯಾಗಿದೆ. ಇಂಗ್ಲಿಷ್ ಭಾಷೆ ನಮ್ಮ ದೇಶದಲ್ಲಿ ಯಾವ ಪ್ರಯೋಜನವನ್ನು ಸಾಧಿಸುತ್ತಿದೆ ಎಂಬುದರ ಬಗ್ಗೆ ಅಭ್ಯಾಸ ಇನ್ನೂ ಆಗಬೇಕಾಗಿದೆ. ನಮ್ಮ ರಾಷ್ಟ್ರೀಯ ಪತ್ರಿಕೆಗಳು ಇಂಗ್ಲಿಷ್‌ನಲ್ಲಿವೆಯೆಂಬುದು ನಿಜ. ನಮಗೆ ದಕ್ಕಿರುವ ಇಂಗ್ಲಿಷ್ ಇಷ್ಟೇ ಎಂದು ಕಾಣುತ್ತದೆ. ಇಂಗ್ಲಿಷ್ ಭಾಷೆಗಿಂತ ಇಂಗ್ಲಿಷರ ಭಾಷೆ ನಮ್ಮಲ್ಲಿ ಹೆಚ್ಚು ಪ್ರಚಾರದಲ್ಲಿದೆ. ನಮ್ಮ ಆಡಳಿತ ಪದ್ಧತಿ, ಕಾಯಿದೆಗಳು, ಅಂಚೆ ವ್ಯವಸ್ಥೆ, ಸಮೂಹ ಮಾಧ್ಯಮಗಳು ಕೂಡಿಕೊಂಡು ಇಂಗ್ಲಿಷರ ಭಾಷೆಯನ್ನು ನಿರ್ಮಿಸಿವೆ.

ನಮ್ಮ ಶಿಕ್ಷಣದ ಮಾಧ್ಯಮದ ಪ್ರಶ್ನೆಯನ್ನು ಈ ಹಿನ್ನೆಲೆಯಲ್ಲಿ ಪರೀಕ್ಷಿಸಿ ಅದರ ಬಗ್ಗೆ ಗಂಭೀರವಾದ ಆಲೋಚನೆ ನಡೆಸಬೇಕಾಗಿದೆ. ಈ ಬಗ್ಗೆ ವಿಚಾರ ಮಾಡಿದಾಗ ಎದುರಾಗುವ ಪ್ರಶ್ನೆಯೆಂದರೆ ಕನ್ನಡ ಭಾಷೆಗೆ ಈ ಶಕ್ತಿ ಇದೆಯೇ ಎಂಬುದು. ಈ ಪ್ರಶ್ನೆಯನ್ನು ಕೇಳಿದಾಗೆಲ್ಲ ಕನ್ನಡದ ಪರವಾಗಿ ನಾವೇನು ಉತ್ತರ ಕೊಡುತ್ತೇವೆ? ಕನ್ನಡ ಭಾಷೆಗೆ ಸಾವಿರ ವರ್ಷಗಳ ಸಾಹಿತ್ಯಕ ಪರಂಪರೆ ಇದೆ ಎನ್ನುವುದೇ ಆ ಉತ್ತರ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಬಗ್ಗೆ ಎರಡು ಮಾತಿಲ್ಲ ನಿಜ. ಆದರೆ ಪ್ರೇಚೀನ ಕಾಲದಲ್ಲಿ ಕೂಡ ನಮ್ಮಲ್ಲಿ ಶಾಸ್ತ್ರಗ್ರಂಥಗಳು ಕಡಿಮೆ ಪ್ರಮಾಣದಲ್ಲಿದ್ದವು. ಪಾಣಿನಿಯ ‘ಅಷ್ಟಾಧ್ಯಾಯಿ’, ಪತಂಜಲಿಯ ‘ಮಹಾಭಾಷ್ಯ’, ಭರತನ ‘ನಾಟ್ಯಶಾಸ್ತ್ರ’, ಕೌಟಿಲ್ಯನ ‘ಅರ್ಥಶಾಸ್ತ್ರ’ ದಂಥ ಕೃತಿಗಳು ಒಂದಾದರೂ ಕನ್ನಡದಲ್ಲಿಲ್ಲ. ಕನ್ನಡಕ್ಕೆ ಅದ್ಭುತವಾದ ಅಭಿವ್ಯಕ್ತಿಯ ಸಾಮರ್ಥ್ಯವನ್ನು ತಂದುಕೊಟ್ಟವರು ವಚನಕಾರರು. ಆದರೆ ವಚನಗಳ ಅಭಿವ್ಯಕ್ತಿಯ ಶಕ್ತಿ ಲುಪ್ತವಾಗಿ ಮತ್ತೆ ಕನ್ನಡ ಕಾವ್ಯಭಾಷೆಯಾಗಿಯೇ ಮುಂದುವರಿಯಿತು. ಇಂದಿಗೂ ಕನ್ನಡ ಕಾವ್ಯಭಾಷೆಯೇ ಆಗಿ ಉಳಿದಿದೆ. ನಮ್ಮ ಆಡಳಿತದ ಮತ್ತು ಬೌದ್ಧಿಕ ಚಟುವಟಿಕೆಗಳ ಭಾಷೆ ಇಂಗ್ಲಿಷ್, ಪೂನೆ ಪುನಸ್ಕಾರಗಳ ಭಾಷೆ ಸಂಸ್ಕೃತ, ಚಲನಚಿತ್ರದ ಭಾಷೆ ಹಿಂದೀ, ಕನ್ನಡ ಮಾತ್ರ ಕಾವ್ಯಭಾಷೆ. ಇದರಿಂದಾಗಿ ಕನ್ನಡ ಶಿಕ್ಷಣದ ಮಾಧ್ಯಮವಾಗಲು ಇನ್ನೂ ಹಿಂಜರಿಯುತ್ತಿದೆ.

ಕನ್ನಡ ಶಿಕ್ಷಣದ ಮಾಧ್ಯಮವಾಗಬೇಕಾದರೆ ನಮ್ಮ ಶಿಕ್ಷಕರೆಲ್ಲ ಒಟ್ಟಾಗಿ ಮನಸ್ಸು ಮಾಡಬೇಕು. ವಿಜ್ಞಾನದ ಪುಸ್ತಕಗಳು ಯಾವುದೇ ಭಾಷೆಯಲ್ಲಿರಲಿ ಅದನ್ನು ಕನ್ನಡದ ಮೂಲಕವಾಗಿ ಕಲಿಸುವ ಸಂಕಲ್ಪಕ್ಕೆ ಬದ್ಧರಾಗಬೇಕು. ಒಂದು ಕಾಲಕ್ಕೆ ನಮ್ಮ ಹಳೆಯ ಪಾಠಶಾಲೆಗಳಲ್ಲಿ ಸಂಸ್ಕೃತದ ಗ್ರಂಥಗಳನ್ನು ಹೀಗೆಯೇ ಕಲಿಸಲಾಗುತ್ತಿತ್ತು. ಇದು ನಾವು ಊಹಿಸಿದಷ್ಟು ಕಠಿಣವಾದ ಕೆಲಸವೇನಲ್ಲ. ಒಂದು ಭಾಷೆಯಲ್ಲಿ ಪರಿಣತನಾದ ಮನುಷ್ಯ ಯಾವ ಭಾಷೆಯನ್ನೂ ಬೇಕಾದಾಗ ಕಲಿಯಬಹುದು. ವಿಜ್ಞಾನದಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳು ಜರ್ಮನ್ ಭಾಷೆಯನ್ನು ಕಲಿಯುತ್ತಾರೆ. ಸುಶಿಕ್ಷಿತನಾದವನು ಸಹಜವಾಗಿಯೇ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಅರಿತವನಾಗಿರುತ್ತಾನೆ. ನಮ್ಮ ಶಿಕ್ಷಕರು ತಾವು ಬೇರೆ ಭಾಷೆಗಳನ್ನು ಕಲಿತು ಅಲ್ಲಿ ದೊರೆತದ್ದನ್ನು ಕನ್ನಡದಲ್ಲಿ ತಿಳಿಸುವ ಸಾಮರ್ಥ್ಯವನ್ನು ಪಡೆಯಬೇಕು. ನಮ್ಮ ದೇಶದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧ ಈ ಕಾಲದಲ್ಲಿ ಕೂಡ ಹಾರ್ದಿಕವಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರ ಸಂಬಂಧ ಈ ಕಾಲದಲ್ಲಿ ಕೂಡ ಹಾರ್ದಿಕವಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರ ಮೇಲಿನ ತಮ್ಮ ನಂಬಿಕೆಯನ್ನು ಇನ್ನೂ ಕಳೆದುಕೊಂಡಿಲ್ಲ. ಕನ್ನಡದಿಂದಲೇ ನಮ್ಮ ವಿದ್ಯಾರ್ಥಿಗಳ ತಿಳುವಳಿಕೆ ಅರಳಬೇಕಾಗಿದೆ. ಭಾಷೆ ಕೇವಲ ತಿಳುವಳಿಕೆಯ ಆಗರವಲ್ಲ. ಅದು ಯೋಜನೆಯ ಪ್ರಬಲವಾದ ಉಪಕರಣವಾಗಿದೆ. ವಿದ್ಯಾರ್ಥಿ ತನ್ನ ಭಾಷೆಯಲ್ಲಿ ಯೋಚಿಸುವುದನ್ನು ಮೊದಲು ಕಲಿಯಬೇಕು. ಈಗ ಅವನು ಇಂಗ್ಲಿಷ್‌ನ ಮೂಲಕ ಯೋಚಿಸುತ್ತಿದ್ದಾನೆ. ನಮ್ಮ ಯೋಚನೆಗಳು ಎಷ್ಟೇ ವೈಯಕ್ತಿಕವಾಗಿದ್ದರೂ ಅವು ನಮ್ಮ ಭಾಷೆಯ ಅಥವಾ ನಮ್ಮ ಯೋಚನೆಯ ಭಾಷೆಯ ಶಿಲ್ಪವನ್ನು ಅನುಸರಿಸುತ್ತವೆ.

ಕನ್ನಡದಲ್ಲಿ ಯೋಚನೆ

ಕನ್ನಡದಲ್ಲಿ ನಾವು ಯಾಕೆ ಯೋಚಿಸುವುದಿಲ್ಲ? ಬಹುಶಃ ಈ ಪ್ರಶ್ನೆಗೆ ಉತ್ತರವನ್ನು ನಮ್ಮ ಮನೋವೈಜ್ಞಾನಿಕ ಪರಿಭಾಷೆಯಲ್ಲಿ ಹುಡುಕಬೇಕಾಗುತ್ತದೆ. ಪ್ರತಿಯೊಂದು ಭಾಷೆಗೆ ಅದರದೇ ಆದ ಶಕ್ತಿಗಳಿರುತ್ತವೆ. ಪರಿಮಿತಿಗಳೂ ಇರುತ್ತವೆ. ನಮಗೆ ಅರಿವಿಲ್ಲದೆ ಈ ಶಕ್ತಿ ಮತ್ತು ಪರಿಮಿತಿಗಳು ನಮ್ಮ ವಿಚಾರಗಳಿಗೂ ಬಂದು ಬಿಡುತ್ತವೆ. ಕನ್ನಡ ನಮಗೆ ಇಂದಿಗೂ ನಮ್ಮ ವಿಚಾರಗಳ ಭಾಷೆಯೇ ಅಲ್ಲ. ಕನ್ನಡ ಆ ಅರ್ಥದಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿಲ್ಲ. ಅಣು ವಿಜ್ಞಾನದ ಬಗ್ಗೆ, ಫ್ರಾಯ್ಡನ ಮನಃಶಾಸ್ತ್ರದ ಬಗ್ಗೆ, ಎಲಿಯಟ್‌ನ ನವ್ಯಕಾವ್ಯದ ಬಗ್ಗೆ ಮತ್ತು ಇನ್ನೂ ಇಂಥ ಹಲವಾರು ಆಧುನಿಕ ವಿಷಯಗಳ ಬಗ್ಗೆ ಕನ್ನಡದಲ್ಲಿ ಚರ್ಚಿಸುವುದು ಹೇಗೆ? ಇಷ್ಟರ ಮಟ್ಟಿಗೆ ಕನ್ನಡ ನನ್ನ ಭಾಷೆಯಲ್ಲ. ಒಮ್ಮೆಲೆ ಆಧುನಿಕವಾಗಲೆಳೆಸುವ ಮನುಷ್ಯನಿಗೆ ಇರುವ ಅನೇಕ ಮುಜುಗರಗಳಲ್ಲಿ ಇದೂ ಒಂದು. ಈ ಬೌದ್ಧಿಕ ಪೂರ್ವಗ್ರಹ ನಮ್ಮನ್ನು ಭಾಧಿಸುವವರೆಗೆ ನಮ್ಮ ಭಾಷೆಯಿಂದ ನಾವು ದೂರವಾಗಿರಬೇಕಾಗುತ್ತದೆ. ಕನ್ನಡ ನಮಗಿನ್ನೂ ಆಡುಮಾತು, ಅದೊಂದು ಭಾಷಾ ವ್ಯವಸ್ಥೆಯಲ್ಲ. ಭಾಷೆಗೆ ಒಂದು ವ್ಯಾಕರಣವಿಲ್ಲದೆ ಅಥವಾ ಇದ್ದ ಮಾತ್ರಕ್ಕೆ ಅದು ಭಾಷಾವ್ಯವಸ್ಥೆಯಾಗುವುದಿಲ್ಲ. ಭಾಷೆಯ ಸಂಭಾವ್ಯತೆಗಳನ್ನು ಭಾಷಾವ್ಯವಸ್ಥೆ ನಿದೇಶಿಸುತ್ತದೆ. ಇಂಗ್ಲಿಷ್ ಭಾಷೆ ಲ್ಯಾಟಿನ್ ಭಾಷೆಯ ಅವಲಂಬನವನ್ನು ಕಿತ್ತೊಗೆಯುವವರೆಗೆ ತನ್ನ ಸಂಭಾವ್ಯತೆಗಳನ್ನು ಕಂಡುಕೊಂಡಿರಲಿಲ್ಲ. ಕನ್ನಡಕ್ಕೆ ಈಗ ಸಂಸ್ಕೃತದ ಅವಲಂಬನ ಬೇಕಾಗಿಲ್ಲ. ವಚನಕಾರರು ಅದನ್ನು ಕಿತ್ತೊಗೆದರು. ಈಗ ನಾವು ಇಂಗ್ಲಿಷನ್ನು ಅವಲಂಭಿಸಿದ್ದೇವೆ. ನಾವು ಬರೆಯುವ ಸ್ವೋಪಜ್ಞವಾದ ಕನ್ನಡ ಕೂಡ ಇಂಗ್ಲಿಷ್‌ನ ಭಾಷಾಂತರವಾಗಿದೆ. ಭಾಷೆ ಆಷಾಂತರವಾದರೆ ಸ್ವಂತ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಅದು ಭಾಷಾಂತರದ ಅವಸ್ಥೆಯಿಂದ ಪಾರಾಗಿ ಬಂದು ಒಂದು ಭಾಷೆಯಾಗಬೇಕು. ಕನ್ನಡ ಭಾಷೆ ತಾನೇ ಯೋಚಿಸುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು. ಈ ಹವ್ಯಾಸ ಹುಟ್ಟಬೇಕಾದರೆ ಭಾಷೆ ಶಿಕ್ಷಣದ ಮಾಧ್ಯಮವಾಗಬೇಕು.

ಕನ್ನಡ ಶಿಕ್ಷಣದ ಮಾಧ್ಯಮವಾಗಬೇಕಾದರೆ ನಮ್ಮಲ್ಲಿ ಅನೇಕ ಬಗೆಯ ಸಾಹಿತ್ಯ ಹುಟ್ಟಬೇಕು. ಈ ದೃಷ್ಟಿಯಿಂದ ನೋಡಿದಾಗ ಮೈಸೂರು ವಿಶ್ವವಿದ್ಯಾಲಯದ ಪ್ರಚಾರ ಪುಸ್ತಕಗಳು ಬಹಳ ದೊಡ್ಡ ಕೆಲಸ ಮಾಡಿದವೆಂದು ಹಿಂದೆ ಹೇಳಿದ್ದೇನೆ. ಈ ಚಿಕ್ಕ ಪುಸ್ತಕಗಳ ಲೇಖಕರು ಕನಿಷ್ಠಪಕ್ಷ ಆ ಪುಸ್ತಕಗಳ ಮಟ್ಟಿಗಾದರೂ ಕನ್ನಡದಲ್ಲಿ ವಿಚಾರ ಮಾಡುವಂತಾಯಿತು. ಅವರ ವಿಚಾರಗಳಾಗಲಿ, ಸಿದ್ಧಾಂತಗಳಾಗಲಿ ಸ್ವೋಪಜ್ಞವಾಗಿರಲಿಕ್ಕಿಲ್ಲ. ಆದರೆ ಸ್ವೋಪಜ್ಞವಾದ ವೈಚಾರಿಕತೆಯ ಅಭಿವ್ಯಕ್ತಿಗೆ ಒಂದು ಭಾಷೆ ಅಲ್ಲಿ ನಿರ್ಮಾಣಗೊಂಡಿತು. ಇಂಥ ಸಾಹಿತ್ಯ ಹುಟ್ಟಿದರೆ ಓದುವವರಿಲ್ಲ ಎಂಬ ಆಕ್ಷೇಪಣೆಯೂ ನಿರಾಧಾರವಾದದ್ದು. ಓದುಗರು ದೊರೆಯುತ್ತಾರೆ. ದೊರೆಯದಿದ್ದರೂ ಲೇಖಕನಾದರೂ ಕನ್ನಡವನ್ನು ಉಪಯೋಗಿಸಿದರೆ ಅದೇ ಒಂದು ದೊಡ್ಡ ಪ್ರಯೋಜನವಾಗುತ್ತದೆ. ಅನುಷಂಗಿಕವಾಗಿ ಈ ಲೇಖಕ ಶಿಕ್ಷಕನೂ ಆಗಿರುತ್ತಾನೆ. ಅಂದಮೇಲೆ ಕನ್ನಡ ಶಿಕ್ಷಣದ ಮಾಧ್ಯಮವಾದರೆ ಅವನಿಗೆ ತೊಂದರೆಯೂ ಆಗುವುದಿಲ್ಲ.

ಸಾಹಿತ್ಯವೊಂದರಲ್ಲಿ ಮಾತ್ರ ಭಾಷೆಯ ಸೃಜನಶೀಲವಾದ ಉಪಯೋಗವಾಗುತ್ತದೆಂಬ ತಪ್ಪುಗ್ರಹಿಕೆ ನಮ್ಮಿಂದ ದೂರವಾಗಬೇಕು. ಶಿಕ್ಷಣ ಕೂಡ ಒಂದು ಸೃಜನಶೀಲವಾದ ಕ್ರಿಯೆ. ಇಂದು ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ವ್ಯವಸಾಯದ ಸಂಬಂಧವಾಗಿದೆ. ಶಿಕ್ಷಕ ಹೇಳಿದ್ದನ್ನು ವಿದ್ಯಾರ್ಥಿ ಬರೆದುಕೊಂಡು ಬಾಯಿಪಾಠ ಮಾಡಿ ಪರೀಕ್ಷೆಯ ಹೊತ್ತಿನಲ್ಲಿ ಅದನ್ನು ತಿರುಗಿ ಶಿಕ್ಷಕನಿಗೆ ಮುಟ್ಟಿಸುವುದು ಶಿಕ್ಷಣವಾಗುವುದಿಲ್ಲ. ನಮ್ಮ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಕೂಡ ಮಾಡುವುದು ಇದನ್ನೇ. ಆದರೆ ಶಿಕ್ಷಣ ಶಾಸ್ತ್ರಕ್ಕಿಂತ ಹೆಚ್ಚಾಗಿ ಒಂದು ಕಲೆಯಾಗಿದೆ. ಶಿಕ್ಷಕ ನಟನಂತೆ ಒಬ್ಬ ಕ್ರಿಯಾಶೀಲನಾದ ಕಲಾವಿದ. ಅಂಥ ಶಿಕ್ಷಕ ಭಾಷೆಯನ್ನು ಸೃಜನಶೀಲವಾಗಿ ಉಪಯೋಗಿಸುತ್ತಾನೆ. ಶಿಕ್ಷಕ ಎಂದೂ ಪುಸ್ತಕವಾಗಬಾರದು. ವಿದ್ಯಾರ್ಥಿ ಓದುಗನಾಗಬಾರದು. ಶಿಕ್ಷಕನ ಭಾಷೆ ವಿದ್ಯೆಯನ್ನು ಸೃಷ್ಟಿಸುತ್ತಿರಬೇಕು. ಶಿಕ್ಷಣದ ಮಾಧ್ಯಮ ಇಂಗ್ಲಿಷಿನಂಥ ಪರಿಭಾಷೆಯಾದರೆ ಈ ಸೃಜನಶೀಲತೆ ಸಾಧ್ಯವಾಗುವುದಿಲ್ಲ. ಅದಕ್ಕೆ ಕನ್ನಡವೇ ಶಿಕ್ಷಣದ ಮಾಧ್ಯವಾಗಬೇಕು. ಕನ್ನಡದಂದಲೇ ನಮ್ಮ ಮಕ್ಕಳ ತಿಳುವಳಿಕೆ ಅರಳಬೇಕು. ಆದರೆ ಶಿಕ್ಷಕನೊಬ್ಬನ ಸಂಕಲ್ಪದಿಂದಲೇ ಶಿಕ್ಷಣ ಮಾಧ್ಯಮ ಬದಲಾಗುವುದಿಲ್ಲ. ನಾನು ಮೊದಲೇ ಹೇಳಿರುವಂತೆ ಶಿಕ್ಷಣ ವ್ಯವಸ್ಥೆ ರಾಜ್ಯದ ಜವಾಬ್ದಾರಿಯಾಗಿರುವುದರಿಂದ ಸರಕಾರವೂ ಮನಸ್ಸು ಮಾಡಬೇಕು. ಜನತೆಯೂ ಹೀಗೆಂದು ಬಯಸಬೇಕು; ಈ ಮೂರು ಸೇರಿದಾಗಲೇ ಕನ್ನಡ ಮಾಧ್ಯಮ ಸಾಧ್ಯ.

ಪ್ರಸಾರಾಂಗ

ನಮ್ಮ ಸಂಶೋಧನೆಗಳ ಪ್ರಮುಖ ಪ್ರಯೋಜನ ಎಂದರೆ ಉಪಯುಕ್ತತೆಯೇ ಆಗಿದೆ. ಈ ಉಪಯುಕ್ತತೆ ಒಳ್ಳೆಯ ಪರಿಣಾಮಗಳನ್ನು ನೀಡಬೇಕಲ್ಲದೆ ಅದು ಬರಿಗಣ್ಣಿಗೇ ಕಾಣಿಸುವಷ್ಟು ಸ್ಪಷ್ಟವಾಗಿರಬೇಕೆಂದು ನಮ್ಮ ಆಶೆ. ಆದ್ದರಿಂದಲೇ ನಮ್ಮ ಪ್ರಸಾರಾಂಗಕ್ಕೆ ಸಂಶೋಧನಾಂಗದಷ್ಟೇ ಜವಾಬ್ದಾರಿ ಇದೆ. ಸಂಶೋಧನೆಯಿಂದ ದೊರೆತ ವಿದ್ಯೆಯನ್ನು ಪ್ರಸಾರಾಂಗ ಮೂರು ರೀತಿಗಳಲ್ಲಿ ಪ್ರಸಾರ ಮಾಡುತ್ತದೆ: ನಾಡಿನ ತಜ್ಞರಿಂದ ಗ್ರಂಥಗಳನ್ನು ಬರೆಯಿಸಿ ಪ್ರಕಟಿಸುವುದರ ಜತೆಗೆ, ವಿಶ್ವವಿದ್ಯಾಲಯ ಸೃಷ್ಟಿಸುತ್ತಿರುವ ಸಾಹಿತ್ಯವನ್ನೂ ಅದು ಪ್ರಕಟಿಸಬೇಕು. ಇಂದು ತಿಳುವಳಿಕೆ ಪರಿಪ್ರೇಕ್ಷ್ಯವಿಲ್ಲದೆ ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಕಲ್ಲಿನಲ್ಲಿರುವ ಶಾಸನಗಳನ್ನು ಕಣ್ಣೆತ್ತಿ ನೋಡದ ಜನ ಅದೇ ಪುಸ್ತಕದಲ್ಲಿ ಪ್ರಕಟಗೊಂಡರೆ ಓದುತ್ತಾರೆ. ಅರ್ಥಮಾಡಿಕೊಳ್ಳುತ್ತಾರೆ. ಜನರಾಡುವ ಶಬ್ದಗಳನ್ನೇ ಕೋಶದಲ್ಲಿ ಸಂಗ್ರಹಿಸಿದರೆ ಆ ಶಬ್ದಗಳಿಗೆ ತಿಳುವಳಿಕೆಯ ಬೆಲೆ ಬರುತ್ತದೆ. ನಮ್ಮ ಪ್ರಸಾರಾಂಗ ಇದಕ್ಕಿಂತ ವಿಶಾಲವಾದ, ಹೆಚ್ಚು ಪರಿಣಾಮಕಾರಿಯಾದ ಪರಿಪ್ರೇಕ್ಷ್ಯವನ್ನು ಕಟ್ಟುವುದರಲ್ಲಿ ತೊಡಗಿದೆ. ಪ್ರಸಾರಾಂಗದ ಪ್ರಕಟನೆಗಳಿಗೆ ಇಂಥ ಒಂದು ಸಾರ್ಥಕವಾಗಬಲ್ಲ ಉದ್ದೇಶವಿದೆ. ಲೋಕದಲ್ಲಿಯ ತಿಳುವಳಿಕೆಯನ್ನು ಸಂಗ್ರಹಿಸಿ ತಿರುಗಿ ಲೋಕಕ್ಕೇ ದಾನ ಮಾಡುವ ಒಂದು ಪ್ರಕ್ರಿಯೆ ಪ್ರಸಾರಾಂಗದಲ್ಲಿ ನಡೆಯುತ್ತಿದೆ. ಸಂಗ್ರಹವಾದ ತಿಳುವಳಿಕೆಗೆ ಗ್ರಂಥಗಳ ರೂಪವನ್ನು ಕೊಡುವ ಹೊಣೆಗಾರಿಕೆ ಈ ಪ್ರಸಾರಾಂಗದ್ದಾಗಿದೆ. ಈ ರೂಪಾಂತರದ ಪ್ರಕ್ರಿಯೆ ನಮ್ಮ ವಿಶ್ವವಿದ್ಯಾಲಯದ ವೈಶಿಷ್ಟ್ಯವಾಗಿದೆಯೆಂದರೂ ತಪ್ಪಿಲ್ಲ.

ಪ್ರಕಟಣೆಗಳ ಮೂಲಕ ಬೌದ್ಧಿಕ ವಲಯದಲ್ಲಿ ವಿದ್ಯೆ ಪ್ರಸಾರ ಮಾಡುತ್ತಾ ಕನ್ನಡದ ಚಿಂತನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳ್ಳುವಂತೆ ಮಾಡುವುದು. ‘ಪುಸ್ತಕಯಾತ್ರೆ’, ‘ಬಿತ್ತರ’, ‘ಪ್ರಸಂಗ’ದಂಥ ಕಾರ್ಯಕ್ರಮ ಹಮ್ಮಿಕೊಂಡು ಸಾಮಾನ್ಯ ಜನರಲ್ಲಿ ವಿದ್ಯೆ ಪ್ರಸಾರ ಮಾಡುತ್ತಾ ಅವರ ಜೀವನ ಹಸನಾಗುವಂತೆ, ಕನ್ನಡ ಸಂಸ್ಕೃತಿ ಸದಾ ಕ್ರಿಯಾಶೀಲವಾಗಿರುವಂತೆ ಪ್ರಯತ್ನಿಸುವುದು. ಹಾಗೂ ಕಮ್ಮಟಗಳು, ಶಿಬಿರಗಳು, ವಿಜ್ಞಾನ ಬೋಧನೆಯ ಕಾಯ್ಯಕ್ರಮಗಳು ಮುಂತಾದವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನ ಪ್ರಸಾರ ಮಾಡುವುದು.

ವಿಜ್ಞಾನದ ಸಂಗತಿಗಳನ್ನು ವಿದ್ಯಾರ್ಥಿ ಮತ್ತು ಸಾಮಾನ್ಯ ಜನರಿಗೆ ತಿಳಿಸುವುದಕ್ಕಾಗಿಯೇ ‘ವಿಜ್ಞಾನ ಸಂಗಾತಿ; ಎಂಬ ಮಾಸಿಕವನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ತರುತ್ತಿದೆ. ವಿಜ್ಞಾನ ನಮಗೆಲ್ಲ ಉಪಕಾರವೇನೋ ಹೌದು. ಅದರಂತೆ ಒಂದು ಆಹ್ವಾನವೂ ಹೌದು. ನಮಗರಿವಾಗದಂತೆ ವಿಜ್ಞಾನ ನಮ್ಮ ದಿನನಿತ್ಯದ ಬದುಕಿನಲ್ಲಿ ಸೇರಿಕೊಂಡು ಬಿಟ್ಟಿದೆ. ಆದರೂ ನಮಗಿನ್ನೂ ವೈಜ್ಞಾನಿಕ ದೃಷ್ಟಿಕೋನ ಬಂದಿಲ್ಲ. ಪಾಶ್ಚಾತ್ಯ ನಾಗರಿಕತೆಯ ಒಂದು ಮಹತ್ವದ ಕೊಡುಗೆಯಾಗಿರುವ ವಿಜ್ಞಾನ ನಮ್ಮ ದಿನನಿತ್ಯದ ಜೀವನವನ್ನು ರೂಪಿಸುತ್ತಿರುವಾಗ ನಮ್ಮಲ್ಲಿ ಆಗುವ ಮಾರ್ಪಾಡುಗಳನ್ನು ಇಂದು ದಾಖಲಿಸಬೇಕಾಗಿದೆ. ಅದರ ಜೊತೆಗೇ ವಿಜ್ಞಾನವನ್ನು ನಾವು ಯಾವ ವಿವೇಕದಿಂದ ಉಪಯೋಗಿಸಬೇಕೆಂಬುದರ ತಿಳಿವು ಕೂಡ ನಮ್ಮಲ್ಲಿ ಮೂಡಬೇಕಾಗಿದೆ.

ಪಾಶ್ಚಾತ್ಯರಲ್ಲಿ ವೈಜ್ಞಾನಿಕ ಸಾಹಿತ್ಯ ವಿಫುಲವಾಗಿ ಬೆಳೆದುಬಂದಿದೆ. ಅಂಥ ಸಾಹಿತ್ಯ ಕನ್ನಡದಲ್ಲಿ ಬರಬೇಕು. ತಿಳಿವಳಿಕೆ ಎಷ್ಟೇ ಶ್ರೇಷ್ಠವಾಗಿರಲಿ, ಅಗತ್ಯವಾದದ್ದೇ ಆಗಿರಲಿ ನಮ್ಮ ಭಾಷೆಯಲ್ಲಿ ಅದು ಮೂಡಿ ಬರದಿದ್ದರೆ, ಅದು ನಮ್ಮ ತಿಳುವಳಿಕೆಯಾಗಲಾರದು. ನಮ್ಮ ವಿಶ್ವವಿದ್ಯಾಲಯ ಈಗ ಪ್ರಾರಂಭಿಸಿರುವ ‘ವಿಜ್ಞಾನ ಸಂಗಾತಿ’ಗೆ ಈ ಮಹತ್ತರವಾದ ಉದ್ದೇಶವಿದೆ. ಕರ್ನಾಟಕದಲ್ಲಿ ಮೌಲಿಕವಾದ ವಿಜ್ಞಾನ ಹುಟ್ಟಿ ಬರಬೇಕಾದರೆ ನಮ್ಮ ಭಾಷೆಯಲ್ಲಿ ವೈಜ್ಞಾನಿಕ ಸಾಹಿತ್ಯ ಹುಟ್ಟಿ ಬರಬೇಕು. ಕನ್ನಡದಲ್ಲಿ ವೈಜ್ಞಾನಿಕ ಚಿಂತನೆ ನಡೆಯಬೇಕು. ಕನ್ನಡಕ್ಕೆ ಅಂಥ ತೇಜಸ್ಸು, ಶಕ್ತಿ ಇವೆ. ವಚನಕಾರರ ಭಾಷೆ ಅಣು ವಿಜ್ಞಾನದ ಅರ್ಥವನ್ನು ಪ್ರಕಟಿಸಲು ಸಮರ್ಥವಾಗಿದೆ.

ಆಡಳಿತಾಂಗ

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಆಡಳಿತಾಂಗಗಳು ಪಡೆದುಕೊಳ್ಳುತ್ತಿರುವ ಅನವಶ್ಯಕ ಪ್ರಾಮುಖ್ಯತೆ ಕಣ್ಣಿಗೆ ರಾಚುವಂತಿದೆ. ಅವುಗಳಿಗೆ ನಿರ್ಮಿಸುವ ಕಟ್ಟಡಗಳಿಂದ ಹಿಡಿದು ಅಲ್ಲಿ ಕೆಲಸ ಮಾಡುವವರಿಗೆ ದೊರಕುವ ವಿಶೇಷ ಸೌಲಭ್ಯಗಳವರೆಗೆ ವಿಶ್ವವಿದ್ಯಾಲಯಗಳ ವಿವಿಧ ವಿಭಾಗಗಳು ಮತ್ತು ಆಡಳಿತಾಂಗ ಇವುಗಳಲ್ಲಿ ತಾರತಮ್ಯ ಬೆಳೆಯುತ್ತಲೇ ಬಂದಿದೆ. ಹೀಗಾಗಿ ಆಡಳಿತಾಂಗಗಳು ಆಡಳಿತವನ್ನು ಮಾತ್ರ ನಿರ್ವಹಿಸದೆ ಅಧ್ಯಯನಾಂಗಗಳ ಸ್ವಾಯತ್ತತೆಯನ್ನೂ ನುಂಗಿಹಾಕಿವೆ. ವಿಶ್ವವಿದ್ಯಾಲಯದ ಶೈಕ್ಷಣಿಕ ನೀತಿಯನ್ನೂ ಅವೇ ನಿರ್ಧರಿಸುತ್ತಿವೆ. ಈ ಪರಿಸ್ಥಿತಿಯು ಬದಲಾಗದ ಹೊರತು ವಿಶ್ವವಿದ್ಯಾಲಯಗಳ ಸಮಸ್ಯೆಗಳು ಬಗೆಹರಿಯುವುದು ಕಷ್ಟ.

ಕನ್ನಡ ವಿಶ್ವವಿದ್ಯಾಲಯವು ಈ ಅಂಶವನ್ನು ಮನಗಂಡು ತನ್ನ ಇಡೀ ವ್ಯವಸ್ಥೆಯಲ್ಲಿ ಆಡಳಿತಾಂಗದ ಪ್ರಾಧಾನ್ಯವನ್ನು ಕಡಿಮೆ ಮಾಡಲು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ. ವಿಶ್ವವಿದ್ಯಾಲಯಗಳಲ್ಲಿ ಮುಂಚೂಣಿಗೆ ಬರಬೇಕಾದ ಸಂಶೋಧನೆಗಳಲ್ಲಿ ತೊಡಗಿರುವ ಸಂಶೋಧನಾಂಗ ಮತ್ತು ಜನಸಂಪರ್ಕದಲ್ಲಿ ತೊಡಗಿರುವ ಪ್ರಸಾರಾಂಗ ಇವುಗಳೊಡನೆ ಆಡಳಿತಾಂಗ ಹಿನ್ನೆಲೆಯಲ್ಲಿ ನಿಂತು ಅವು ಸುಗಮವಾಗಿ ಕೆಲಸ ಮಾಡಲು ನೆರವಾಗಬೇಕಾಗಿದೆ. ವಿಶ್ವವಿದ್ಯಾಲಯದ ವಿವಿಧ ಕಾರ್ಯಯೋಜನೆಗಳನ್ನು ಆಯಾಯಾ ಅಧ್ಯಯನ ವಿಭಾಗಗಳ ತಜ್ಞರು ನಿರ್ಧರಿಸಿ ಅವೆಲ್ಲವನ್ನು ಸಮನ್ವಯಗೊಳಿಸಿ ಜಾರಿಗೆ ಕೊಡುವಾಗ ಆಡಳಿತಾಂಗದ ಪ್ರವೇಶ ಮೊದಲಾಗುತ್ತದೆ. ಅಲ್ಲದೆ ವಿಶ್ವವಿದ್ಯಾಲಯದಲ್ಲಿ ಕಾಯ್ಯಪ್ರವೃತ್ತರಾಗುವ ಉದ್ಯೋಗಿಗಳ ಆಯ್ಕೆ, ವಿವಿಧ ಸಂಪನ್ಮೂಲಗಳ ಅಭಿವೃದ್ಧಿ ಮುಂತಾದ ವ್ಯಾವಸಾಯಿಕ ಕೆಲಸಗಳಲ್ಲೂ ಆಡಳಿತಾಂಗದ ಪಾತ್ರ ಕೇವಲ ಕನಿಷ್ಠ ಪ್ರಮಾಣದಲ್ಲಿರುತ್ತದೆ. ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಸರ್ಕಾರದೊಡನೆ ಆಡಳಿತಾತ್ಮಕ ವ್ಯವಹಾರ, ಅನುದಾನ ಮೂಲಗಳಿಂದ ಸಂಪನ್ಮೂಲಗಳನ್ನು ಪಡೆಯುವಿಕೆ, ರಾಜ್ಯ ಮತ್ತು ಹೊರಗಿನ ವಿದ್ವತ್ ಸಂಸ್ಥೆಗಳೊಡನೆ ಸಂಪರ್ಕ ಮುಂತಾದ ಕೆಲಸಗಳನ್ನು ಆಡಳಿತಾಂಗ ನಿರ್ವಹಿಸುತ್ತದೆ. ಇಂಥ ಕೆಲಸಗಳನ್ನು ನಿರ್ವಹಿಸುವಲ್ಲಿ ಆಡಳಿತಾಂಗಕ್ಕೆ ವಿಶ್ವವಿದ್ಯಾಲಯದ ವಿವಿಧ ಪ್ರಾಧಿಕಾರಗಳು ಸೂಕ್ತ ನಿರ್ದೇಶನಗಳನ್ನು ನೀಡುತ್ತವೆ ಹಾಗೂ ಮಾರ್ಗದರ್ಶನ ಮಾಡುತ್ತವೆ.

ಶೈಕ್ಷಣಿಕ ಆಡಳಿತ ಮತ್ತು ಸಾಮಾನ್ಯ ಆಡಳಿತಗಳ ನಡುವೆ ಇರುವ ಮೂಲಭೂತ ವ್ಯತ್ಯಾಸಗಳನ್ನು ಕನ್ನಡ ವಿಶ್ವವಿದ್ಯಾಲಯ ಗಮನಿಸುತ್ತಿದೆ. ಶೈಕ್ಷಣಿಕ ಆಡಳಿತದಲ್ಲಿ ಬರುವ ಮಾನವ ಸಂಪರ್ಕ, ನೀತಿ ನಿರ್ಧಾರ ಮತ್ತು ಸಾಮಾಜಿಕ ಹೊಣೆಗಾರಿಕೆ ಸಾಮಾನ್ಯ ಆಡಳಿತದ್ಲಲಿರುವುದಕ್ಕಿಂತ ಭಿನ್ನವಾದದ್ದು. ಇದರಿಂದಾಗಿ ಕನ್ನಡ ವಿಶ್ವವಿದ್ಯಾಲಯ ರೂಪಿಸ ಬಯಸುವ ಶೈಕ್ಷಣಿಕ ಆಡಳಿತ ವಿಶ್ವವಿದ್ಯಾಲಯದ ಒಟ್ಟು ಶೈಕ್ಷಣಿಕ ಉನ್ನತಿಗೆ ಪೂರಕವಾಗಿರುವಂಥದ್ದು.

ನಮ್ಮ ಆಡಳಿತಾಂಗದ ಕಾರ್ಯವ್ಯಾಪ್ತಿ ಮೇಲೆ ಹೇಳಿದಂತೆ ಮಿತವಾದದ್ದು. ಹೀಗಾಗಿ ಇದು ದೊಡ್ಡ ಕಚೇರಿಗಳನ್ನು ಹೆಚ್ಚಿನ ಸಿಬ್ಬಂದಿಯನ್ನು ನಿರೀಕ್ಷಿಸುವಂಥದ್ದಲ್ಲ. ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲು ಅಶ್ಯವಾಗುವಷ್ಟು ಸಿಬ್ಬಂದಿಯೊಡನೆ ವಿಶ್ವವಿದ್ಯಾಲಯದ ಸಂಶೋಧನಾಂಗದ ಪ್ರತಿನಿಧಿ ಆಡಳಿತವನ್ನು ನಿರ್ವಹಿಸಲು ಅನುಕೂಲವಾಗುವಂಥ ವ್ಯವಸ್ಥೆಯಿದು. ಇದು ಒಂದು ಉತ್ತಮ ಅವಕಾಶವಾಗಿರುವಂತೆ ದೊಡ್ಡ ಜವಾಬ್ದಾರಿಯೂ ಆಗಿದೆ.

* * *


* ೧೯೯೧ ರಲ್ಲಿ ವಿಶೇಷ ಅಧಿಕಾರಿಯಾಗಿದ್ದಾಗ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಸರ್ಕಾರಕ್ಕೆ ಕೊಟ್ಟ ವರದಿ.