ನಮ್ಮ ಪ್ರಸಾರಾಂಗ ಈಗಾಗಲೇ ಮಹತ್ವದ ಪುಸ್ತಕಗಳನ್ನು ಪ್ರಕಟಿಸಿದೆ. ಪ್ರಸಾರಾಂಗವು ತನ್ನ ಪ್ರಕಟಣೆಗಳ ಮೂಲಕ ಸಾರ್ಥಕವಾಗಬೇಕಾದ ದಾರಿಯನ್ನು ಹುಡುಕಿಕೊಳ್ಳುತ್ತಿದೆ. ಲೋಕದಲ್ಲಿಯ ತಿಳುವಳಿಕೆಯನ್ನು ಸಂಗ್ರಹಿಸಿ ತಿರುಗಿ ಲೋಕಕ್ಕೇ ದಾನ ಮಾಡುವ ಒಂದು ಪ್ರಕ್ರಿಯೆ ನಮ್ಮ ವಿಶ್ವವಿದ್ಯಾಲಯದ ವೈಶಿಷ್ಟ್ಯವಾಗಿದೆ.

ಈ ಪ್ರಯತ್ನದಲ್ಲಿ ನಾವು ಪ್ರಕಟಿಸುತ್ತಿರುವ ಪ್ರೊ.ಜಿ. ರಾಮಕೃಷ್ಣ ಅವರ ‘ಭಾರತೀಯ ವಿಜ್ಞಾನದ ಹಾದಿ’ ಎಂಬ ಗ್ರಂಥ ಬಹಳ ಮಹತ್ವದ್ದಾಗಿದೆ. ವಿಜ್ಞಾನದ ನಕ್ಷೆಯಲ್ಲಿ ಭಾರತದ ಸ್ಥಾನ ಏನು ಎಂದು ಹೇಳಿದಾಗ ತಲೆ ತಗ್ಗಿಸಬೇಕಾಗುತ್ತದೆ. ಭಾರತದ ವೈಜ್ಞಾನಿಕ ತಿಳುವಳಿಕೆಯ ಸುತ್ತಮುತ್ತ ಮೂಢ ನಂಬಿಕೆಗಳು, ದುರಭಿಮಾನಗಳು, ನಿರ್ಲಕ್ಷ್ಯಗಳು ಗೊಂದಲ ಹಾಕುತ್ತವೆ. ನಮ್ಮಲ್ಲಿಯೂ ಶಾಸ್ತ್ರಕಾರರಿದ್ದರು. ಆ ಶಾಸ್ತ್ರಗಳು ಹಳೆಯವಾಗಿರಬಹುದು, ನಿರುಪಯುಕ್ತವಾಗಿರಬಹುದು. ಆದರೆ ಶಾಸ್ತ್ರಚಿಂತನ ಎಂದೂ ನಿರುಪಯುಕ್ತವಾಗುವುದಿಲ್ಲ. ದೊರೆತ ಉತ್ತರಗಳು ಹಳೆಯವಾದರೂ ಪ್ರಶ್ನೆಗಳು ಮಾತ್ರ ಹೊಸದಾಗಿಯೇ ಇರುತ್ತವೆ. ಹಿಂದೆ ಕೇಳಿದ ಪ್ರಶ್ನೆಗಳನ್ನೇ ಮತ್ತೊಮ್ಮೆ ಕೇಳಿಕೊಂಡು ಉತ್ತರ ಪಡೆಯಬೇಕಾಗಿದೆ.

ಪ್ರೊ. ಜಿ. ರಾಮಕೃಷ್ಣರ ಈ ಪುಸ್ತಕ ಒಂದು ದೃಷ್ಟಿಯಿಂದ ಇತಿಹಾಸ ಗ್ರಂಥ. ವೇದಕಾಲದಿಂದ ಹಿಡಿದು ಬ್ರಿಟಿಷರ ಆಗಮನದವರೆಗೆ ನಮ್ಮ ದೇಶದಲ್ಲಿ ನಡೆದಿದ್ದ ಶಾಸ್ತ್ರ ಚಿಂತನವನ್ನು ಇಲ್ಲಿ ಸೆರೆಹಿಡಿಯಲಾಗಿದೆ. ತಿಳುವಳಿಕೆ ವಿಕಾಸಗೊಳ್ಳುವ ಕ್ರಮವನ್ನು ಇಲ್ಲಿ ಗುರುತಿಸಲಾಗಿದೆ. ವೈಜ್ಞಾನಿಕ ಚಿಂತನ ವ್ಯವಸ್ಥಿತವಾಗಿ ನಡೆಯದಿದ್ದದ್ದಕ್ಕೆ ಮತ್ತು ತಂತ್ರಜ್ಞಾನದೊಡನೆ ಸಂಬಂಧವನ್ನು ಬೆಳಸಲಾಗದ್ದಕ್ಕೆ ಕಾರಣಗಳ್ನನೂ ಹುಡುಕಲಾಗಿದೆ. ಇತಿಹಾಸದ ಪರಿಪ್ರೇಕ್ಷ್ಯದಲ್ಲಿ ಮಾತ್ರ ತಿಳುವಳಿಕೆ ಅರ್ಥವನ್ನು ಪಡೆಯುತ್ತದೆ. ಇತಿಹಾಸವೆಂದರೆ ಒಂದು ಸಂದರ್ಭ, ಈ ಸಂದರ್ಭ ಕಾಲಕಾಲಕ್ಕೆ ಬದಲಾಗುತ್ತ ಹೋದರೂ ತನ್ನ ಸಾಂದರ್ಭಿಕತೆಯನ್ನು ಕಳೆದುಕೊಳ್ಳುವುದಿಲ್ಲ. ಕೌಟಿಲ್ಯನ ‘ಅರ್ಥಶಾಸ್ತ್ರ’ವನ್ನಾಗಲಿ ಸೋಮದೇವನ ‘ಮನಸೋಲ್ಲಾಸ’ವನ್ನಾಗಲಿ ಪ್ರತ್ಯೇಕವಾಗಿ ಬೆಲೆಗಟ್ಟಿ ನೋಡುವ ಒಂದು ವಿಧಾನವೂ ಇದೆ. ಈ ವಿಧಾನದಿಂದ ದೊರೆಯುವ ತಿಳುವಳಿಕೆಗಿಂತ ಭಿನ್ನವಾದ ತಿಳುವಳಿಕೆ ಈ ಗ್ರಂಥಗಳನ್ನು ಐತಿಹಾಸಿಕ ಪರಿಪ್ರೇಕ್ಷ್ಯದಲ್ಲಿಟ್ಟು ನೋಡಿದಾಗ ದೊರೆಯುತ್ತದೆ. ಐತಿಹಾಸಿಕ ಪರಿಪ್ರೇಕ್ಷ್ಯಕ್ಕೆ ಪಕ್ಷಪಾತವಿಲ್ಲದ, ವಸ್ತುನಿಷ್ಠವಾದ ದೃಷ್ಟಿಕೋನದ ಅವಶ್ಯಕತೆ ಇದೆ. ಪ್ರೊ. ಜಿ. ರಾಮಕೃಷ್ಣ ಅವರದು ಇಂಥ ದೃಷ್ಟಿಕೋನವಾಗಿದೆ.

* * *


* ‘ಭಾರತೀಯ ವಿಜ್ಞಾನದ ಹಾದಿ’ ಗ್ರಂಥಕ್ಕೆ ಬರೆದ ಮುನ್ನುಡಿ