೧೯೯೨ ರಲ್ಲಿ ಪದ್ಮಭೂಷಣ ಎಚ್. ನರಸಿಂಹಯ್ಯನವರು ವಿದ್ಯಾರಣ್ಯಕ್ಕೆ ಭೇಟಿಕೊಟ್ಟಿದ್ದರು. ಆಗ ಆ ಮರಡಿ ಪ್ರದೇಶವನ್ನು ನೋಡಿ “ಈ ಶತಮಾನದಲ್ಲಿಯೂ ಕನ್ನಡ ವಿಶ್ವವಿದ್ಯಾಲಯದ ಕಣ್ಣಿಗೆ ಗೋಚರಿಸೋದಿಲ್ಲ ಬನ್ನಿ”- ಎಂದು ವಾಪಸಾದರು. ಮುಂದೆ ೧೯೯೮ ರಲ್ಲಿ ಅಲ್ಲಿಗೆ ಬಂದ ಅವರು ವಿಶ್ವವಿದ್ಯಾಲಯವನ್ನು ನೋಡಿ ತಾವು ಹಿಂದೆ ಹೇಳಿದ ಮಾತನ್ನು ಜ್ಞಾಪಿಸಿಕೊಂಡು ಸಾರ್ವಜನಿಕ ಸಭೆಯಲ್ಲಿ ತಮ್ಮ ಮಾತನ್ನು ವಾಪಸ್ ಪಡೆಯುತ್ತ ವಿಶ್ವವಿದ್ಯಾಲಯ “ಅದ್ಭುತ”ವಾಗಿ ಬೆಳೆದಿದೆಯೆಂದು ಬೆನ್ನು ತಟ್ಟಿದರು. ಡಾ.ಶಿವರಾಮ ಕಾರಂತರು ಶಾಂತಿನಿಕೇತನಕ್ಕಿಂತ ನಿಮ್ಮ ವಿಶ್ವವಿದ್ಯಾಲಯ ಚೆನ್ನಾಗಿದೆಯೆಂದು ಹರಸಿದರು. ಇದು ಆ ಅವಧಿಯ ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆಯ ಮೂರ್ತ ಇತಿಹಾಸ.

ಆ ಅವಧಿಯಲ್ಲಿ ಹೇಗೆ ಯೋಜನೆ ಮಾಡುತ್ತ ಹೋದನೆಂದು ಇಲ್ಲಿನ ಮುನ್ನುಡಿಗಳಿಂದ, ಆ ಅವಧಿಯಲ್ಲಿ ಬರೆದ ಕೆಲವು ಲೇಖನಗಳಿಂದ ತಿಳಿಯುತ್ತದೆ. ಕನ್ನಡದ ಅಗತ್ಯಕ್ಕೆ ತಕ್ಕಂತೆ ವಿಶ್ವವಿದ್ಯಾಲಯದ ಸ್ವರೂಪ ಹೊಸಹೊಸ ಆಯಾಮಗಳನ್ನು ಪಡೆಯುತ್ತ ಹೋಗಬೇಕು. ಆದರೆ, ಪ್ರಾರಂಭದ ಪ್ರಯತ್ನಗಳು ಮುಂದಿನ ಸಾಧ್ಯತೆಗಳನ್ನು ಒಳಗೊಂಡಿರಬೇಕು. ಅಂಥ ಒಂದು ಹೊರಗೆರೆಯ ಸ್ವರೂಪ ಇಲ್ಲಿದೆ. ಇದು ಕನ್ನಡಿಗರೆಲ್ಲರ ವಿಶ್ವವಿದ್ಯಾಲಯ. ಎಲ್ಲರ ಕನಸು, ಅಭಿಮಾನ ಮತ್ತು ಜವಾಬ್ದಾರಿಗಳಿಂದ ಬೆಳೆಯಬೇಕಾದ ವಿಶ್ವವಿದ್ಯಾಲಯ. ಆದ್ದರಿಂದಲೇ ಇದು ಮುಗಿದ ಪುಸ್ತಕವಲ್ಲ. ಕನ್ನಡದ ಸಮಸ್ತ ದೈವ ಬರೆಯಬೇಕಾದ ಪುಸ್ತಕವಿದು.

ಈ ಪುಸ್ತಕದ ಹೆಸರಿನ ಬಗ್ಗೆಯೂ ಒಂದು ಮಾತು ಹೇಳಬೇಕಾದ್ದಿದೆ. ಆಗಿನ್ನೂ ನಮ್ಮ ನಾಡಿನ ಇತಿಹಾಸ ಮೊಳಕೆ ಒಡೆದಿರಲಿಲ್ಲ. ಆಗ ದೇಶದಲ್ಲಿ ‘ಮಾರ್ಗ’ದ ಅಬ್ಬರ ಹೆಚ್ಚಾಗಿದ್ದಾಗಲೇ ಹಂಪಿಯ ಮತಂಗ ಮುನಿ ದೇಶಿಯನ್ನೇ ಬೃಹತ್ತೆಂದು ಕರೆದು ತನ್ನ ಬೃಹದ್ದೇಶಿಯನ್ನು ಬರೆದ. ಅದರ ಅನುವಾದ ಕಾರ್ಯವನ್ನು ಕನ್ನಡ ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿತಲ್ಲದೆ ಬೃಹದ್ದೇಶಿಯನ್ನು ಕುರಿತು ದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ಒಂದು ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಅಲ್ಲಿ ಓದಿದ ಪ್ರಬಂಧಗಳನ್ನು ಒಂದು ಕಡೆ ಕೂಡಿಸಿ ಸದರೀ ಅಕಾಡೆಮಿ ಪ್ರಕಟಿಸುತ್ತಿದೆ. ಅಂದು ಮತಂಗಮುನಿ ಮಾರ್ಗಕ್ಕೆ ತೋರಿದ ಪ್ರತಿಕ್ರಿಯೆಯೇ ಇಂದಿಗೂ ಇಂಗ್ಲಿಷನ್ನೆದುರಿಸುತ್ತಿರುವ ಭಾರತೀಯ ಭಾಷೆಗಳಿಗೆ ಮಾದರಿಯಾಗಿದೆ. ಮತಂಗಮುನಿ ಬೃಹದ್ದೇಶಿಯನ್ನು ಬರೆದ ಸ್ಥಳದಲ್ಲಿಯೇ ಕನ್ನಡ ವಿಶ್ವವಿದ್ಯಾಲಯ ತಲೆಯೆತ್ತಿರುವುದು ಅರ್ಥಪೂರ್ಣವಾಗಿದೆಯೆಂದು ನನ್ನ ಭಾವನೆ. ಮತಂಗಮುನಿಯ ಆಕಾಂಕ್ಷೆಯ ಮುಂದುವರಿಕೆ ಕನ್ನಡ ವಿಶ್ವವಿದ್ಯಾಲಯ ಮತ್ತು ವಿದೇಶಿಯ ಚಿಂತನೆ.

* * *