‘ದೇಶೀಯ ಚಿಂತನ’ ಪ್ರಕಟಿಸಬೇಕೆಂದು ತೀರ್ಮಾನಿಸಿ ನಾಲ್ಕೈದು ವರ್ಷಗಳೇ ಆದವು. ಈ ಮಧ್ಯೆ ನನ್ನ ಆಲಸ್ಯದಿಂದ ಬೇಸತ್ತು ಇಬ್ಬರು ಮೂವರು ಪ್ರಕಾಶಕರು ಕೈ ಬದಲಾಯಿಸಿದ ಮೇಲೆ ನನ್ನ ತರುಣ ಮಿತ್ರ ಪ್ರಕಾಶ ಕಂಬತ್ತಳ್ಳಿಯವರು ಮುಂದೆ ಬಂದಾಗ ಇದಕ್ಕೆ ಪ್ರಕಟಣೆಯ ಯೋಗ ಕೂಡಿ ಬಂತು. ಅವರು ಗಂಟು ಬಿದ್ದು ಎಲ್ಲೆಲ್ಲೋ ಚೆಲ್ಲುವರಿದಿದ್ದ ಲೇಖನಗಳನ್ನು ಹುಡುಕುವಂತೆ ಸಂಗ್ರಹಿಸುವಂತೆ ಒತ್ತಾಯಿಸಿ, ತಾವೂ ಸಂಗ್ರಹಿಸಿ, ನನ್ನ ವಿಳಂಬವನ್ನು ಸಹಿಸಿಕೊಂಡು ಕೊನೆಗೂ ಪುಸ್ತಕವಾಗಿ ಪ್ರಕಟಿಸುವುದರಲ್ಲಿ ಯಶಸ್ವಿಯಾದರು. ಅವರ ಪ್ರಯತ್ನದಿಂದಾಗಿ ಈಗ ಈ ಪುಸ್ತಕ ನಿಮ್ಮ ಕೈಯಲ್ಲಿದೆ.

ಇಲ್ಲಿರುವ ಕೆಲವು ಲೇಖನಗಳು ನಾನು ದೇಶ ವಿದೇಶಗಳ ಸೆಮಿನಾರುಗಳಲ್ಲಿ ಮಂಡಿಸಿದ ಪ್ರಬಂಧಗಳು. ಮೂಲ ಕನ್ನಡದಲ್ಲಿದ್ದ ಇವುಗಳನ್ನು ಹಿರಿಯರಾದ ಕುರ್ತಕೋಟಿ ಅವರು, ಮಿತ್ರರಾದ ಎಚ್.ಎಸ್. ಶಿವಪ್ರಕಾಶ, ಪ್ರೋ. ಲಕ್ಷ್ಮೀ ಚಂದ್ರಶೇಖರ, ಪ್ರೋ. ಸಿ. ನಾಗಣ್ಣ ಹಾಗೂ ನನ್ನ ಸೊಸೆ ಸೌ|| ರೇಖಾ – ಇವರು ಇಂಗ್ಲೀಷಿಗೆ ಅನುವಾದಿಸಿದರು. ಇವರೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ.

ಈ ಮಧ್ಯೆ ಮೂಲ ಕನ್ನಡದ ಕೆಲವು ಲೇಖನಗಳು ಕಳೆದುಹೋಗಿ ಅವನ್ನು ಪುನಃ ಕನ್ನಡಕ್ಕೆ ಅನುವಾದಿಸಬೇಕಾಯಿತು ! ಆಗಲೂ ಸ್ನೇಹಿತರು ಬೇಸರಗೊಳ್ಳದೆ ಮುಂದೆ ಬಂದು ಕನ್ನಡಕ್ಕೆ ಅನುವಾದಿಸಿ ಕೊಟ್ಟರು. ಇವರಲ್ಲಿ ಮುಖ್ಯವಾಗಿ ಪ್ರೊ. ಸಿ. ನಾಗಣ್ಣ ಹಾಗೂ ಪ್ರೊ. ಜಾಧವ ಅವರ ಉಪಕಾರವನ್ನು ನಾನೆಂದೂ ಮರೆಯಲಾರೆ.

ಇವು ಅಚ್ಚಿಗೆ ಹೋದ ಮೇಲೂ ಫ್ರೂಫ್ ತಿದ್ದಲು ನನಗೆ ಸಮಯವೇ ಸಿಕ್ಕಲಿಲ್ಲ. ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಅಕ್ಷರಕ್ಷರ ನೋಡಿ ಶ್ರದ್ಧೆಯಿಂದ ಕರಡಚ್ಚು ತಿದ್ದಿದ್ದವರು ಎನ್. ಪ್ರಭಾ ಅವರು. ಅವರ ಉಪಕಾರವನ್ನೂ ಎಷ್ಟು ಸ್ಮರಿಸಿದರೂ ಕಡಿಮೆ. ಅವರಿಗೂ, ಕೊನೆಯದಾಗಿ ಪ್ರಕಾಶಕರಾದ ನನ್ನ ತರುಣ ಮಿತ್ರ ಪ್ರಕಾಶ ಕಂಬತ್ತಳ್ಳಿಯವರನ್ನು ಏನಂತ ನೆನೆಯಲಿ? ಅವರಿಗೂ ಓದುವ ಎಲ್ಲರಿಗೂ ನನ್ನ ವಂದನೆಗಳು

– ಚಂದ್ರಶೇಖರ ಕಂಬಾರ