ಭಾರತ ಹಾಗೂ ಚೀನಾ ದೇಶಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಉತ್ಪಾದಿಸುತ್ತವೆ ಹಾಗೂ ನಿರ್ಯಾತ ಮಾಡಬಲ್ಲವು.  ಐದು ವರ್ಷಗಳ ಹಿಂದೆ ಜಪಾನಿನಲ್ಲಿ ತರಕಾರಿಗಳ ಬೆಲೆ ವಿಪರೀತ ಹೆಚ್ಚಾಯಿತು.  ಆಗ ಜಪಾನ್ ಸರ್ಕಾರ ಚೀನಾದಿಂದ ತರಕಾರಿಗಳನ್ನು ಆಮದು ಮಾಡಿಕೊಂಡಿತು.  ಆಮದಾದ ತರಕಾರಿಗಳ ಬೆಲೆ ತುಂಬಾ ಕಡಿಮೆಯಿತ್ತು.  ಜಪಾನ್ ರೈತರು ಸರ್ಕಾರದ ಮೇಲೆ ಒತ್ತಡ ತಂದರು.  ಆಗ ಜಪಾನ್ ಸರ್ಕಾರ ಆಮದು ತರಕಾರಿಗಳ ಮೇಲೆ ತೆರಿಗೆ ಹಾಕಿತು.  ಇದರಿಂದ ಚೀನಾದ ತರಕಾರಿಗಳ ಬೆಲೆ ಜಪಾನ್‌ಗಿಂತ ದುಪ್ಪಟ್ಟಾಯಿತು.

ಇದೇ ರೀತಿ ಮೆಕ್ಸಿಕೋದ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಿದಾಗ ಮೆಕ್ಸಿಕೊ ವಿಶ್ವ ವಾಣಿಜ್ಯ ಸಂಘಟನೆಗೆ ದೂರು ಕೊಟ್ಟಿತು.  ಆದರೆ ಜಪಾನ್ ಸರ್ಕಾರ ಬಗ್ಗಲಿಲ್ಲ.  ಕೊನೆಯವರೆಗೂ ಸರ್ಕಾರ ತೆರಿಗೆ ಇಳಿಸಲು ಒಪ್ಪದೇ ಗಟ್ಟಿಯಾಗಿ ತನ್ನ ಜನರ ಪರವಾಗಿಯೇ ಉಳಿಯಿತು.  ಬಹುಶಃ ನಮ್ಮ ಸರ್ಕಾರ ತುಂಬಾ ಸ್ವಾರ್ಥಿ ಅನ್ನಿಸುತ್ತದೆ.

ಜಪಾನಿನ ಜನ ತಮ್ಮ ನೆಲದ ಉತ್ಪನ್ನಗಳನ್ನು ಹೆಚ್ಚು ಇಷ್ಟಪಡುತ್ತಾರೆ.  ಗುಣಮಟ್ಟ ಮುಖ್ಯ ಎಂದು ಭಾವಿಸುತ್ತಾರೆ.  ಒಮ್ಮೆ ಜಪಾನಿನಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚು ಬಿಸಿಲು ಬರದೆ ತಂಪಾಗಿತ್ತು.  ಆಗ ಕೃಷಿಕರಿಗೆ ಜಪಾನಿಕ ತಳಿಯ ಭತ್ತವನ್ನು ಬೆಳೆಯಲಾಗಲಿಲ್ಲ.  ಜಪಾನ್ ಸರ್ಕಾರ ಥೈಲ್ಯಾಂಡ್‌ನಿಂದ ಅಕ್ಕಿಯನ್ನು ಆಮದು ಮಾಡಿಕೊಂಡಿತು.

ಆದರೆ ಜಪಾನಿನ ಜನ ಆ ಅಕ್ಕಿಯನ್ನು ಇಷ್ಟಪಡಲಿಲ್ಲ.  ಜಪಾನಿಕ ತಳಿಯು ವಿಶೇಷ ಗುಣವುಳ್ಳದ್ದು.  ತುಂಬಾ ಸಿಹಿ.  ಸಣ್ಣ ಕಾಳು ಬೇಯಿಸಿದಾಗ ಅಂಟುಅಂಟಾಗಿರುತ್ತದೆ. (ಅನ್ನ ಅಂಟಿಕೊಂಡಿರುತ್ತದೆ) ಮತ್ತು ವಿಶೇಷ ಪರಿಮಳ ಹೊಂದಿದೆ.

ಥೈಲ್ಯಾಂಡ್ ಅಕ್ಕಿಯನ್ನು ಕೇಳುವವರೇ ಇರಲಿಲ್ಲ.  ಸರ್ಕಾರ ೧೦ ಕಿಲೋಗ್ರಾಂಗೆ ಒಂದು ಯನ್ (೪೦ ಪೈಸೆ)ನಂತೆ ನೀಡತೊಡಗಿತು.  ಜಪಾನಿಕಾದ ಬೆಲೆ ೫೦೦೦ ಯನ್ (೨೦೦೦ ರೂಪಾಯಿ) ಆಗಿತ್ತು.

ಇದರಿಂದ ಥೈಲ್ಯಾಂಡ್‌ಗೆ ತುಂಬಾ ಅವಮಾನವಾಯಿತು.  ನನ್ನ ತಂದೆ ಸಣ್ಣ ಅಂಗಡಿ ಹೊಂದಿದ್ದಾರೆ.  ಥೈಲ್ಯಾಂಡ್ ಅಕ್ಕಿಗೆ ಇಷ್ಟು ಕಡಿಮೆ ಬೆಲೆಯಾದರೂ ಕೊಳ್ಳುವವರು ಇಲ್ಲದೆ ತಂದಿದ್ದೆಲ್ಲಾ ಅಂಗಡಿಯಲ್ಲಿಯೇ ಉಳಿಯಿತು.

ಜಪಾನಿನವರು ತಮ್ಮ ದೇಶದ ಉತ್ಪನ್ನಗಳಿಗೆ ಮೊದಲ ಪ್ರಾಮುಖ್ಯ ನೀಡುತ್ತಾರೆ.  ಆದರೆ ವಿದೇಶದ ಉತ್ಪನ್ನಗಳು ಕಡಿಮೆ ಬೆಲೆ-ಗುಣಮಟ್ಟ ಹೊಂದಿದ್ದರೆ ಅದನ್ನೂ ಇಷ್ಟಪಡುತ್ತಾರೆ.

ಈಗುಸ : ಇದೊಂದು ನೀರಿನಲ್ಲಿ ಬೆಳೆಯುವ ಹುಲ್ಲುಜಾತಿಯ ಗಿಡ.  ಇದರಿಂದ ನೆಲಕ್ಕೆ ಹಾಸುವ ಚಾಪೆಗಳನ್ನು ಹಾಗೂ ಬ್ಯಾಸ್ಕೆಟ್‌ಗಳನ್ನು ತಯಾರಿಸುತ್ತಾರೆ.  ಇದು ಈಚಲು ರೀತಿ ಸಸ್ಯ.

ನೆಗಿ : ಇದೊಂದು ಮೂಲಂಗಿ ರೀತಿಯಲ್ಲಿರುವ ಗೆಣಸಿನ ರುಚಿಯಿರುವ ಗೆಡ್ಡೆ.   ಇದನ್ನು ತರಕಾರಿಯಂತೆ ಬಳಸುತ್ತಾರೆ.

ಈ ಎರಡೂ ಬೆಳೆಗಳಿಗೆ ಜಪಾನ್ ರಕ್ಷಣೆ ನೀಡಿದೆ: ಕಾರಣ ಚೀನಾದಲ್ಲಿ ಇದು ಅಧಿಕವಾಗಿ ಸಿಗುತ್ತದೆ.

ಜಪಾನ್‌ನಲ್ಲಿ ಇವುಗಳಿಗೆ ಒಳ್ಳೆಯ ಮಾರುಕಟ್ಟೆಯಿದೆ.  ಜಪಾನ್ ಮಾರುಕಟ್ಟೆಯಲ್ಲಿ ಚೀನಾ ಈ ಬೆಳೆಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡತೊಡಗಿತು.  ಜಪಾನಿನ ರೈತರು ದಿಕ್ಕೆಟ್ಟರು.  ಬೀದಿಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.  ಈಗ ಜಪಾನ್ ಈ ಬೆಳೆಗಳಿಗೆ ಅಧಿಕ ತೆರಿಗೆ ವಿಧಿಸಿದೆ.  ಇದರಿಂದ ಚೀನಾದ ಈ ಬೆಳೆಗಳ ಬೆಲೆ ಜಪಾನಿನದಕ್ಕಿಂತ ಹೆಚ್ಚಾಗಿದೆ.

ಜಪಾನಿನ ಆರ್ಥಿಕತೆ ದಿನೇ ದಿನೇ ಕುಸಿಯುತ್ತಿದೆ.  ನಿರುದ್ಯೋಗ, ಆತ್ಮಹತ್ಯೆ (ವರ್ಷಕ್ಕೆ ೩೦,೦೦೦) ಹೆಚ್ಚುತ್ತಿದೆ, ಸಾಮಾಜಿಕವಾಗಿ ಬದುಕು ಹಾಳಾಗಿದೆ.  ಆರ್ಥಿಕ ಅಭಿವೃದ್ಧಿ ನಿಂತುಬಿಟ್ಟಿದೆ.  ಜಪಾನಿನ ಯುವಕರು ಕ್ರೂರಿಗಳಾಗುತ್ತಿದ್ದಾರೆ.  ವಿದ್ಯಾರ್ಥಿಗಳು ಶಿಕ್ಷಕರನ್ನೇ ಕೊಲೆ ಮಾಡುತ್ತಿದ್ದಾರೆ.  ಹೆಂಗಸರು ವ್ಯಾನಿಟಿ ಬ್ಯಾಗ್‌ಗೋಸ್ಕರ ದೇಹ ಮಾರುವುದಕ್ಕೂ ಹಿಂಜರಿಯುತ್ತಿಲ್ಲ.  ಒಟ್ಟಾರೆ ನೈತಿಕತೆ ಪೂರ್ತಿ ಹದಗೆಟ್ಟಿದೆ.  ನಮ್ಮಲ್ಲಿ ಬಡತನವಿಲ್ಲ.  ಆದರೆ ಸಂತೋಷವೂ ಇಲ್ಲ.  ಇದೆಲ್ಲಾ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ಸಾಧ್ಯವೇನೋ?  ಆರ್ಥಿಕ ಅಭಿವೃದ್ಧಿಯನ್ನೇ ಗುರಿ ಮಾಡಿಕೊಂಡ ಭಾರತವೂ ೨೦೨೦ರಲ್ಲಿ ಇದೇ ಹಂತ ತಲುಪಬಹುದೇನೋ?

ಇಲ್ಲಿನ ಅತ್ಯಂತ ಬಡಹಳ್ಳಿಗೆ ಹೋದರೂ ಅಲ್ಲಿ ಯಾರೂ ದುಃಖದಿಂದ ಇರಲಿಲ್ಲ.  ಮಕ್ಕಳೆಲ್ಲಾ ಜಪಾನಿನ ಮಕ್ಕಳಿಗಿಂತ ಚುರುಕಾಗಿ ಸಂತೋಷದಿಂದ ಇದ್ದರು.  ನಮ್ಮ ದೇಶದಲ್ಲಿ ಯಾವುದೇ ಮಾಹಿತಿಯು ಕಂಪ್ಯೂಟರ್‌ನಲ್ಲಿ ತಕ್ಷಣ ಸಿಗುತ್ತದೆ.  (ಆದರೆ ಈ ಮಾಹಿತಿ ಸಿಕ್ಕಿರಲಿಲ್ಲ).  ಇದನ್ನೆಲ್ಲ ನೋಡಿದರೆ ಭಾರತದ ಹಳ್ಳಿಗಳೇ ಮುಂದುವರೆದಿವೆ ಎನಿಸುತ್ತದೆ.

ಮಾಹಿತಿ: ಹಿರೋಶಿ ಬಿಂಗೊ, ವಿದ್ಯಾರ್ಥಿ, ಟೋಕ್ಯೋ, ಕೋಶಿಗಾಯ