ಕೊಂಬೆ ಕೊಂಬೆಯ ಮೇಲೆ
ಹಕ್ಕಿ ಗೂಡುಗಳು ;
ನೆಲದ ಮೇಲೆ ಕೇರಿಯುದ್ದಕ್ಕೂ
ಮನೆಗಳು ;
ಮಹಡಿಯ ಮೇಲೆ ಮಹಡಿಗಳೆದ್ದು
ಕಿಕ್ಕಿರಿದ ಊರುಗಳು.
ಸಂಜೆಯಾದೊಡನೆಯೇ ಜನ ಬಂದು
ಮನೆ ಸೇರಿಕೊಂಡು
ಸಾಗುತ್ತದೆ ಸಂಸಾರ.
ಗಾಲಿಗಳ ಸದ್ದಡಗಿ, ಝಗಝಗ ದೀಪ
ಉರಿಯುತ್ತವೆ-ಇರುಳುದ್ದ ನಿರ್ವಿಕಾರ.
ಗೂಡು ಗೂಡುಗಳಲ್ಲಿ, ಹಕ್ಕಿಗಳು
ಕೊರ್ರೆನ್ನುತ್ತ, ಆಗಾಗ ಪಟಪಟ ರೆಕ್ಕೆ
ಬಡಿಯುತ್ತ, ಬೆಳಗಾಗುವುದನ್ನು
ಕಾಯುತ್ತವೆ-
ಹೊತ್ತಾರೆ ಕತ್ತಲೆಯ ಮೊಟ್ಟೆ ಒಡೆದು
ಬೆಳಕು ಗರಿ ಬಿಚ್ಚಿ ಕೂತಾಗ
ರೆಕ್ಕೆಗಳು, ಕಾಲುಗಳು, ಗಾಲಿಗಳು
ಮತ್ತೆ ಯಥಾ ಪ್ರಕಾರ ಚಲಿಸತೊಡಗುತ್ತವೆ.