ಈ ಲೋಕದಲ್ಲಿ ಒಬ್ಬರಂತೆ ಇನ್ನೊಬ್ಬರಿರುವುದು ಅಪರೂಪ. ಅವಳಿ ಗಳಲ್ಲೂ ಗುರುತಿಸಲು ಪ್ರಯತ್ನಿಸಿದರೆ ಕಾಣಸಿಗುವ ವ್ಯತ್ಯಾಸಗಳಿರುತ್ತವೆ. ಹೀಗೆ ಒಬ್ಬರಿಂದ ಇನ್ನೊಬ್ಬರು ಬೇರೆ ಎಂಬುದನ್ನು ಗುರುತಿಸುವುದು ಹೇಗೆ? ಕಣ್ಣೋಟದಿಂದಲೇ ಈ ಭಿನ್ನತೆಯನ್ನು ಗುರುತಿಸಲು ಸಾಧ್ಯ. ವಯಸ್ಸು, ಲಿಂಗ, ಎತ್ತರ, ಚರ್ಮದ ಬಣ್ಣ, ಕೂದಲಿನ ಸ್ವರೂಪ, ಮುಖದ ಲಕ್ಷಣ ಇವೆಲ್ಲವೂ ಸಾಮಾನ್ಯವಾಗಿ ವ್ಯಕ್ತಿಗಳನ್ನು ಬೇರ್ಪಡಿಸಲು ನೆರವಾಗುವ ಅಂಶಗಳು. ಧ್ವನಿಯನ್ನು ಗಮನಿಸಿಯೂ ವ್ಯಕ್ತಿಗಳ ಭಿನ್ನತೆಯನ್ನು ನಾವು ಗುರುತಿಸುತ್ತೇವೆ. ಹೀಗೆ ಪ್ರತಿಯೊಬ್ಬರೂ ಇನ್ನೊಬ್ಬರಿಂದ ಹೇಗೆ ಭಿನ್ನವಾಗಿರುತ್ತಾರೆ ಎಂದು ಭೌತಿಕ ಚಹರೆಗಳ ನೆರವಿನಿಂದ ಕಂಡುಕೊಳ್ಳುತ್ತಿರುವಾಗಲೇ ವ್ಯಕ್ತಿ ಸಮುದಾಯಗಳನ್ನು ವರ್ಗೀಕರಿಸುವುದಕ್ಕೂ ಯತ್ನಿಸುತ್ತೇವೆ. ಭೌತಿಕ ಚಹರೆಗಳನ್ನು ಬಳಸಿ ನಡೆಸುವ ವರ್ಗೀಕರಣದಲ್ಲಿ ಗಂಡು ಮತ್ತು ಹೆಣ್ಣು; ಮಕ್ಕಳು, ವಯಸ್ಕರು ಮತ್ತು ವೃದ್ಧರು; ಎಂಬ ಸಾಮಾನ್ಯ ನೆಲೆಗಳಿವೆ. ಜತೆಗೆ ಜನಾಂಗಗಳನ್ನಾಗಿ  ವರ್ಗೀಕರಿಸುವ ವಿಧಾನವಿದೆ. ಭೌತಿಕ ಚಹರೆಗಳನ್ನು ಗಮನಿಸಿ ನೀಗ್ರೊಲಾಯ್ಡೊ, ಮಂಗೋಲಿಯನ್, ಕಕೇಸಿಯನ್, ಆಸ್ಟ್ರೋ ಲಾಯ್ಡ ಎಂಬಂಥ ಜನಾಂಗಗಳನ್ನು ರೂಪಿಸಿಕೊಳ್ಳಲಾಗಿದೆ. ವ್ಯಕ್ತಿಗಳ ಅನನ್ಯತೆಯಾಗಲೀ ಅವರು ಯಾವ ಜನಾಂಗಕ್ಕೆ ಸೇರಿದವರೆಂಬುದಾಗಲೀ ಅವರು ಬಳಸುವ ಭಾಷೆಯನ್ನು ಪ್ರಭಾವಿಸುವುದೇ ಎಂಬುದು ಮುಂದಿನ ಪ್ರಶ್ನೆ. ಬೇರೆ ಬೇರೆ ಭಾಷೆಗಳ ನಡುವಣ ವ್ಯತ್ಯಾಸಕ್ಕೂ ಅಥವಾ ಭಾಷೆಯೊಳಗೇ ಇರುವ ವಿಕಲ್ಪಗಳಿಗೂ  ವ್ಯಕ್ತಿಗಳ ಭೌತಿಕ ಲಕ್ಷಣ ಮತ್ತು ಜನಾಂಗ ಚಿಹ್ನೆಗಳಿಗೆ ಏನಾದರೂ ಸಂಬಂಧವಿರಬಹುದೇ? ಈಗಾಗಲೇ ಭಾಷಾವಂಶಗಳನ್ನು ಜನಾಂಗಗಳೊಡನೆ ಜೋಡಿಸುವ ಪ್ರವೃತ್ತಿ ಬೆಳೆದಿದೆ. ಆರ್ಯಭಾಷೆಗಳು, ದ್ರಾವಿಡ ಭಾಷೆಗಳು, ಸೆಮೆಟಿಕ್ ಭಾಷೆಗಳು ಎನ್ನುವಾಗ ಈ ಅಂಶ ಸ್ಪಷ್ಟ ವಾಗಿದೆ. ಈ ಜೋಡಣೆ ಆಕಸ್ಮಿಕವಾಗಿರಬಹುದು ಅಥವಾ ಭೌತಿಕ ಚಹರೆಗಳನ್ನು ಅವಲಂಬಿಸಿದ ಈ ವರ್ಗೀಕರಣಕ್ಕೂ ಭಾಷೆಗಳಿಗೂ ಯಾವುದಾದರೊಂದು ಬಗೆಯ ಸಂಬಂಧವಿದ್ದಿರಲೂಬಹುದು.

ದೈಹಿಕ ವಿವರ

ಎತ್ತರಕ್ಕೆ ದಪ್ಪಗಿರುವ ವ್ಯಕ್ತಿ ಕೀರಲು ದನಿಯಿಂದ ಮಾತನಾಡಿದರೆ ನಮಗೆ ಆಶ್ಚರ್ಯವಾಗುತ್ತದೆ. ಹಾಗೆಯೇ ಕೆಲವೊಮ್ಮೆ ವ್ಯಕ್ತಿಯ ಧ್ವನಿಯನ್ನು ಕೇಳಿದಾಗ ಅವರ ದೈಹಿಕ ವಿವರಗಳನ್ನು ಸ್ಥೂಲವಾಗಿ ಊಹಿಸಿರುತ್ತೇವೆ. ಏಕೆಂದರೆ ಮುಖತಃ ಆ ವ್ಯಕ್ತಿಯನ್ನು ಕಂಡಾಗ, ಅವರ ಧ್ವನಿಯನ್ನು ಆಲಿಸಿ ಅವರ ದೈಹಿಕ ವಿವರಗಳನ್ನು ನಾವು ಊಹಿಸಿದ್ದು ತಪ್ಪಾಗಿಬಿಟ್ಟಿದ್ದರೆ ಆಗಲೂ ನಮಗೆ ಆಶ್ಚರ್ಯವಾಗುತ್ತದೆ. ಸ್ಥೂಲಕಾಯದ ವ್ಯಕ್ತಿ ಗಡಸುಧ್ವನಿಯಲ್ಲಿ ಮಾತನಾಡು ವರೆಂದು ಕೃಶಕಾಯದ ವ್ಯಕ್ತಿ ಪೀಚಲು ಇಲ್ಲವೇ ಕೀರಲು ಧ್ವನಿಯಲ್ಲಿ ಮಾತನಾಡುವವರೆಂದು ಊಹಿಸುವುದು, ಕಲ್ಪಿಸಿಕೊಳ್ಳುವುದು ತಪ್ಪಲ್ಲವಾದರೂ ನಮ್ಮ ಊಹೆಗೆ ಸತಾರ್ಕಿಕ ಕಾರಣಗಳನ್ನು ನೀಡುವುದು ಕಷ್ಟ. ಧ್ವನಿಯ ಈ ಲಕ್ಷಣಗಳಿಗೂ ದೈಹಿಕ ಲಕ್ಷಣಗಳಿಗೂ ಇರಬಹುದಾದ ಸಂಬಂಧವನ್ನು ಹೊರತು ಪಡಿಸಿದರೆ ಭಾಷೆಗೂ ಮತ್ತದರ ಯಾವುದೇ ವಿಕಲ್ಪಕ್ಕೂ ದೇಹ ರಚನೆಗೂ ನೇರ ಸಂಬಂಧ ಇರುವುದು ಅಸಂಭವ.

ಉಚ್ಚಾರಣಾಂಗಗಳ ರಚನೆಯಲ್ಲಿ ಇರುವ ವ್ಯತ್ಯಾಸಗಳು ವ್ಯಕ್ತಿಗಳ ಇಲ್ಲವೇ ಜನಾಂಗಗಳ ಭಾಷೆಯನ್ನು ಪ್ರಭಾವಿಸಬಲ್ಲುದೆಂದು ತಿಳಿಯಲು ಯಾವ ಪುರಾವೆಗಳೂ ಇಲ್ಲ. ಉಂಟಾಗಬಹುದಾದ ಅಲ್ಪಸ್ವಲ್ಪ ವ್ಯತ್ಯಾಸವೂ ಗಣನೀಯವಲ್ಲ. ಬಹುಮಟ್ಟಿಗೆ ಎಲ್ಲರಲ್ಲೂ ಉಚ್ಚಾರಣಾಂಗಗಳ ಆಕಾರ ಮತ್ತು ಪ್ರಮಾಣ ಒಂದೇ ಸಮನಾಗಿರುತ್ತದೆ; ವ್ಯತ್ಯಾಸ ಅತ್ಯಲ್ಪ. ನಾಸಾಕುಹರ, ಆಸ್ಯಕುಹರ, ಗಂಟಲು ನಾಳ ಇತ್ಯಾದಿಗಳ ಆಕಾರದಲ್ಲಿ ಪರಿಗಣಿಸಬಹುದಾದ ವ್ಯತ್ಯಾಸಗಳಿರುವುದಿಲ್ಲ. ಆದರೆ ಕೆಲವು ಉಚ್ಚಾರಣಾಂಗಗಳ ಉದ್ದ, ಗಾತ್ರಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತ ಹೋಗಬಹುದು. ಉದಾಹರಣೆಗೆ ನಾಲಿಗೆಯ ಉದ್ದ. ಕೆಲವರಲ್ಲಿ ನಾಲಿಗೆ ಉದ್ದವಾಗಿದ್ದು ಒಳಕ್ಕೆ ಬಾಗಿಸಿದಾಗ ಕಿರುನಾಲಿಗೆಯನ್ನು ಮುಟ್ಟುವಂತಿರುತ್ತದೆ. ಮತ್ತೆ ಕೆಲವರಲ್ಲಿ ಕಠಿಣತಾಲನ್ನು ನಾಲಿಗೆಯ ತುದಿಯಿಂದ ಮುಟ್ಟುವುದು ಕಷ್ಟ. ಅಂಗಗಳು ಕೆಲವರಲ್ಲಿ ಬಾಗಿ ಎತ್ತರದಲ್ಲಿದ್ದರೆ ಮತ್ತೆ ಕೆಲವರಲ್ಲಿ ಆ ಎತ್ತರ ಕಡಿಮೆ ಇರುತ್ತದೆ. ಮೇಲ್ದಂತ ಸಾಲಿನ ಹಿಂಬದಿಯ ಬಾಗುವಿಕೆ ಕೂಡ ಬೇರೆ ಬೇರೆ ರೀತಿ ಇರುವುದು ಸಾಧ್ಯ. ಇಷ್ಟೆಲ್ಲ ವ್ಯತ್ಯಾಸಗಳಿದ್ದರೂ, ಈ ವ್ಯತ್ಯಾಸಗಳು ಮಾತಾಡುವ ಕ್ರಮವನ್ನು ಪ್ರಭಾವಿಸಲಾರವು ಅಂದರೆ ಭಾಷೆಯ ವಿಕಲ್ಪಗಳಿಗೆ ಕಾರಣಗಳಾಗಲಾರವು. ಅಷ್ಟೇ ಅಲ್ಲ ವ್ಯಕ್ತಿಯು ಮಾತಾಡುವುದನ್ನು ಕಲಿಯುವಾಗಾಗಲೀ ಅಥವಾ ಕಲಿತು ಮುಂದೆ ಮಾತಾಡುವಾಗಾಗಲೀ ಮೇಲೆ ಹೇಳಿದ ಏರುಪೇರುಗಳು ಯಾವ ಗಣನೀಯ ಪ್ರಭಾವವನ್ನೂ ಬೀರಲಾರವು.

ವ್ಯಕ್ತಿ ವ್ಯಕ್ತಿಗಳ ಉಚ್ಚಾರಣಾಂಗಗಳಲ್ಲಿ ಇರುವ ವ್ಯತ್ಯಾಸಗಳು ಮಾತಿನ ಲಕ್ಷಣವನ್ನು ಪ್ರಭಾವಿಸಲಾರವು ಎಂದು ತಿಳಿದೆವು. ಜನಾಂಗಗಳನ್ನು ಕಲ್ಪಿಸು ವಾಗ ದೈಹಿಕ ರಚನೆಯ ಕೆಲವು ಸಮಾನ ಲಕ್ಷಣಗಳನ್ನು ವರ್ಗೀಕರಣಕ್ಕೆ ಆಧಾರವಾಗಿರಿಸಿಕೊಳ್ಳಲಾಗುವುದಷ್ಟೆ. ಈ ಸಮಾನಲಕ್ಷಣಗಳು ಆಯಾ ಜನಾಂಗದ ಭಾಷಾ ಸ್ವರೂಪದ ವೈಶಿಷ್ಟ್ಯಗಳನ್ನು ನಿರ್ಧರಿಸಬಹುದೇ? ಈ ನಿಟ್ಟಿನಲ್ಲಿ ಯಾವ ಖಚಿತ ನಿರ್ಣಯವೂ ಸಾಧ್ಯವಿಲ್ಲ. ಆದರೂ ಲಭ್ಯ ಮಾಹಿತಿಯನ್ನು ಆಧರಿಸಿ ಜನಾಂಗದ ಸಮಾನ ದೈಹಿಕ ಲಕ್ಷಣಗಳು, ಅದರಲ್ಲೂ ಉಚ್ಚಾರಣಾಂಗಗಳಿಗೆ ಸಂಬಂಧಿಸಿದ ಸಮಾನಾಂಶಗಳು ಅವರು ಮಾತಾಡುವ ವಿಧಾನವನ್ನು, ಭಾಷಾ ಬಳಕೆಯ ಸ್ವರೂಪವನ್ನು ಹೆಚ್ಚು ಪ್ರಭಾವಿಸುವು ದಿಲ್ಲವೆಂದು ಅಧ್ಯಯನಕಾರರು ತಿಳಿಯುತ್ತಾರೆ. ಬ್ರೊಸ್ನಹನ್. ಎಫ್ (1961) ಎಂಬುವವರು ನಡೆಸಿದ ಒಂದು ಅಧ್ಯಯನದ ವಿವರಗಳು ಕುತೂಹಲ ಕಾರಿಯಾಗಿವೆ. ಒಂದು ಜನಾಂಗದ ಸದಸ್ಯರ ಉಚ್ಚಾರಣಾಂಗಗಳ ಲಕ್ಷಣಗಳು ಇನ್ನೊಂದು ಜನಾಂಗದ ಸದಸ್ಯರ ಉಚ್ಚಾರಣಾಂಗಗಳ ಲಕ್ಷಣ ಕ್ಕಿಂತ ಭಿನ್ನವಷ್ಟೆ. ಈ ಅಧ್ಯಯನದಲ್ಲಿ ನಾಲಿಗೆಯ ಉದ್ದವನ್ನೂ ಆಧಾರ ವಾಗಿರಿಸಿಕೊಳ್ಳಲಾಯಿತು. ಜಪಾನೀಯರು, ಮಲನೇಶಿಯನ್ನರು ಮತ್ತು ಕಪ್ಪುಜನರನ್ನು ಈ ಅಧ್ಯಯನದ ವ್ಯಾಪ್ತಿಗೆ ತರಲಾಗಿದೆ. ಕಪ್ಪುಜನರಿಗೆ ನಾಲಗೆ ಉದ್ದ ಸರಾಸರಿ 97 ಮಿ.ಮಿ. (ಕನಿಷ್ಠ ಮತ್ತು ಗರಿಷ್ಠ ಉದ್ದ 73-133 ಮಿ.ಮಿ) ಮಲನೇಶಿಯನ್ನರ ನಾಲಿಗೆಯ ಸರಾಸರಿ ಉದ್ದ 84 ಮಿ.ಮಿ. (ಕನಿಷ್ಠ ಮತ್ತು ಗರಿಷ್ಠ ಉದ್ದ 70-110 ಮಿ.ಮಿ) ಮತ್ತು ಜಪಾನೀಯರ ನಾಲಿಗೆಯ ಸರಾಸರಿ ಉದ್ದ 73 ಮಿ.ಮಿ (ಕನಿಷ್ಠ ಮತ್ತು ಗರಿಷ್ಠ ಉದ್ದ 55-90 ಮಿ.ಮಿ) ಈ ವಿವರಗಳನ್ನು ಆಧರಿಸಿ ಏನು ನಿರ್ಧರಿಸಲು ಸಾಧ್ಯ? ಜಪಾನೀಯರ ನಾಲಿಗೆ ಉದ್ದ ಇತರರಿಗಿಂತ ಕಡಿಮೆಯಾಗಿರುವುದರಿಂದ ಅವರು ಆಡುಮಾತನ್ನು ಕಲಿಯಲು ಕಷ್ಟಪಡುತ್ತಾರೆ; ತಡವಾಗಿ ಕಲಿಯುತ್ತಾರೆ ಎನ್ನಲು ಸಾಧ್ಯವೇ? ಇಂಥ ಯಾವ ನಿರ್ಧಾರವೂ ಸಾಧ್ಯವಿಲ್ಲ. ಏಕೆಂದರೆ ಯಾವುದೇ ಎರಡು ಸಂಗತಿಗಳಿಗೆ ಕಾರ್ಯಕಾರಣ ಸಂಬಂಧ ವನ್ನು ಕಲ್ಪಿಸಲು ಅವಶ್ಯವಿರುವಷ್ಟು ಬಲವಾದ ಆಧಾರ ಇಲ್ಲಿ ದೊರಕುವುದಿಲ್ಲ.

ಹುಟ್ಟಿನಿಂದಲೇ ನಿರ್ಧಾರಗೊಳ್ಳುವ ಜನಾಂಗ ವಿಶಿಷ್ಟ ದೈಹಿಕ ಲಕ್ಷಣಗಳು ಆಯಾ ಜನಾಂಗದ ಭಾಷಾ ಸ್ವರೂಪವನ್ನು, ಅದರಲ್ಲೂ ಆ ಭಾಷೆಯ ಆಡುರೂಪವನ್ನು ಹೇಗೆ ಪ್ರಭಾವಿಸಬಲ್ಲವೆಂಬುದನ್ನು ತಿಳಿಯುವುದು ಕಷ್ಟ. ಅಧ್ಯಯನಗಳು ಹೆಚ್ಚು ನಡೆದಿಲ್ಲ. ಅಂಥದೊಂದು ಪ್ರಭಾವ ಸಾಧ್ಯವೆಂಬ ಆಧಾರ ಕಲ್ಪನೆಯೊಡನೆ ಅಧ್ಯಯನವನ್ನು ಮೊದಲು ಮಾಡುವುದು ಅಶಕ್ಯ. ಏಕೆಂದರೆ ಗಣನೆಗೆ ದೊರಕುವ ಮಾಹಿತಿಯು ಅಂಥದೊಂದು ಆಧಾರಕಲ್ಪನೆಗೆ ಅವಕಾಶ ನೀಡುವುದಿಲ್ಲ. ಅಲ್ಲದೆ ಒಂದು ಜನಾಂಗದ ಸದಸ್ಯರು ತಮ್ಮ ಉಚ್ಚಾರಣಾಂಗಗಳಲ್ಲಿ, ಅನ್ಯ ಜನಾಂಗದೊಡನೆ ಹೋಲಿಸಿದಾಗ ಇರಬಹು ದಾದ ‘ಕೊರತೆ’ಯನ್ನು ಬೇರೊಂದು ರೀತಿಯಲ್ಲಿ ನಿವಾರಿಸಿ ಕೊಳ್ಳುತ್ತಿರಲೂ ಬಹುದು; ಉಚ್ಚಾರಣಾಂಗವನ್ನು ಯೋಜಿತವಾಗಿ ಬಳಸುವುದು ಇಂಥ ನಿವಾರಣೋಪಾಯಗಳಲ್ಲಿ ಇನ್ನೊಂದು.