ದೊಂಬಿದಾಸ ಜನಾಂಗದ ಹಿನ್ನೆಲೆ

ಗಾಯನ ಕಲೆಯನ್ನು ತಮ್ಮ ಬದುಕಿನ ಜೀವಾಳವನ್ನಾಗಿಸಿಕೊಮಡು, ಹಳ್ಳಿಗರ ಮನಸ್ಸಿಗೆ ಮುದ ನೀಡುವ ಹಾಡುಗಳನ್ನು ಹಾಡುತ್ತ; ಒಂದು ಕಡೆ ನೆಲೆಯೂರದೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯವೆ ದೊಂಬಿದಾಸರು. ಇವರು ಅರೆ-ಅಲೆಮಾರಿ ಜನಾಂಗ. ತಮ್ಮ ಬಲಗೈಯಲ್ಲಿ ’ಏಕತಾರಿ’ಯನ್ನು ನುಡಿಸುತ್ತ, ಎಡಗೈಯಲ್ಲಿ ’ಚಿಟಿಗೆ’ಯನ್ನು ಬಾರಿಸುತ್ತ, ಕಂಕುಳಿಗೆ ಜೋಳಿಗೆ ನೇತು ಹಾಕಿಕೊಂಡು, ಹೊಟ್ಟೆಪಾಡಿಗಾಗಿ ಅವರಿವರ ಮನೆಯಲ್ಲಿ ಭಿಕ್ಷೆ ಬೇಡುತ್ತ ಹೊಟ್ಟೆ ಹೊರೆದವರು ಇವರು. ಜನಪ್ರಿಯ ವೃತ್ತಿಗಾಯಕರು ಮಾತ್ರವಲ್ಲದೆ, ಹಳ್ಳಿಹಳ್ಳಿಗಳಲ್ಲಿ ಸಂಚರಿಸುತ್ತ, ಅಲ್ಲಿ ನಾಟಕವನ್ನು ಆಡುತ್ತ, ಯಕ್ಷಗಾನವನ್ನು ಕೂಡ ಪ್ರದರ್ಶಿಸುತ್ತ, ಜನರ ಹೃದಯದಲ್ಲಿ ಅಪರೂಪದ ಸ್ಥಾನವನ್ನು ಇವರು ಪಡೆದಿದ್ದಾರೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ವಿವಿಧ ಭಾಗಗಳಲ್ಲಿ ಚದುರಿ ಹೋಗಿರುವ ಇವರು, ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಚದುರಿ ಹೋಗಿರುವ ಇವರು, ಉತ್ತರ ಕರ್ನಾಟಕದಲ್ಲಿ “ದುಂಬೇದಾಸ” ಎಂಬ ಹೆಸರಿನ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ’ಏಕತಾರಿ’ ಶೃತಿ ವಾದ್ಯದ ಮೂಲಕ ಎಂತಹ ಕಲ್ಲು ಮನಸ್ಸಿನವರನ್ನು ತಮ್ಮ ಕಲೆಯ ಮೂಲಕ ಕರಗಿಸುವ ಕಲೆಗಾರಿಕೆ ಇವರದು ಎಂದರೆ ಬಹುಶಃ ಅದು ಅತಿಶಯೋಕ್ತಿಯಲ್ಲ ಎನ್ನಬಹುದು.

ದೊಂಬಿದಾಸ ಸಮುದಾಯಕ್ಕೆ ತನ್ನದೇ ಆದ ಹಿನ್ನೆಲೆ, ಇತಿಹಾಸ ಮತ್ತು ಪೌರಾಣಿಕತೆ ಇದೆ ಎನ್ನುವುದನ್ನು ಮೊದಲು ನಾವು ತಿಳಿಯಬೇಕು. ಈ ಸಮುದಾಯದ ಬಗ್ಗೆ, ಸ್ವದೇಶಿ ಮತ್ತು ವಿದೇಶಿ ವಿದ್ವಾಂಸರು, ತಮ್ಮದೇ ಆದ ಅಭಿಪ್ರಾಯ ಮತ್ತು ವ್ಯಾಖ್ಯಾನವನ್ನು ಅರ್ಥೈಸುವ ಮೂಲಕ ಆ ಸಮುದಾಯದ ಹಿನ್ನೆಲೆಯನ್ನು ಪರಿಚಯಿಸಿಕೊಳ್ಳುವುದರ ಬಗ್ಗೆ ಹೆಚ್ಚು ಪ್ರಯತ್ನಿಸಿದ್ದಾರೆಂಬುದು ಇಲ್ಲಿ ಮುಖ್ಯವಾದ ಸಂಗತಿ. ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟಸ್ (The Mysore Tribes an Castes) ಈ ಗ್ರಂಥದಲ್ಲಿ “ಭಿಕ್ಷಾಟನೆಯಿಂದ ಜೀವಿಸುವ ಈ ಜನಾಂಗವನ್ನು ಬಲಿಜ ಜನಾಂಗದ ಒಂದು ಉಪ ಜನಾಂಗವನ್ನಾಗಿ ಗುರುತಿಸಲಾಗಿದ್ದು ದಂಡಿದಾಸರು ಎಂದು ಕೂಡ ಇವರನ್ನು ಕರೆಯುವ ವಾಡಿಕೆ ಇದೆ. ಜೋಗಿ, ಹೆಳವ, ತೆಲಗು ಜಂಗಮರಂತೆ, ದೊಂಬಿದಾಸರು ಹಾಡುಗಾರಿಕೆಯನ್ನು ತಮ್ಮ ಮುಖ್ಯ ವೃತ್ತಿಯನ್ನಾಗಿಸಿಕೊಂಡು ಬಂದ ಜನಾಂಗ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ” ಎಂದು ಉಲ್ಲೇಖಿಸಲಾಗಿದೆ.

ಪಾಶ್ಚಾತ್ಯ ವಿದ್ವಾಂಸರಾದ ಎಡ್ಗರ‍್ ಥರ್ಸ್ಟನ್ ಮತ್ತು ಎಫ್. ಕಿಟಲ್ ಇವರುಗಳು ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಜನಾಂಗಿಕ ಸಂಶೋಧನೆಗಳನ್ನು ನಡೆಸಿದವರಾಗಿದ್ದಾರೆ. ಅವರು ಗುರ್ತಿಸುವಂತೆ ಈ ಸಮುದಾಯ ಭಿಕ್ಷಾವೃತ್ತಿ ಮತ್ತು ಬಯಲಾಟಗಳನ್ನು ನಡೆಸುತ್ತ ಜೀವಿಸುವವರು ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಹೇಳಿಕೆಯನ್ನೇ ಪುಷ್ಟೀಕರಿಸಿದ ಶ್ರೀ ಅನಂತಕೃಷ್ಣಅಯ್ಯರ‍್ ಮತ್ತಿತರರು ಕೂಡ ಇದೇ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ಮೂಲದಲ್ಲಿ ತೆಲುಗರು ಎಂದು ಭಾವಿಸಿದರೂ ಕನ್ನಡದಲ್ಲಿ ಮೌಖಿಕ ಸಾಹಿತ್ಯ ಕೃಷಿಯನ್ನಷ್ಟೇ ಅಲ್ಲದೆ, ಜನಪದ ರಂಗಭೂಮಿಗೆ ತಮ್ಮದೇ ಆದ ಮಹತ್ವದ ಕೊಡುಗೆಯನ್ನಿತ್ತಿರುವುದು ಮೆಚ್ಚತಕ್ಕದ್ದೆ.

ದೊಂಬಿದಾಸ ಸಮುದಾಯವನ್ನು ’ದೊಂಗದಾಸರು’ ಎಂದು ರೂಪಾಂತರಗೊಳಿಸಿ ಕರೆಯುವ ವಾಡಿಕೆ ಇದೆ. ಈಬಗ್ಗೆ ಕೆಲವು ಐತಿಹ್ಯ ಮತ್ತು ಕುಲ ಪುರಾಣಗಳು ಸಾಕ್ಷ್ಯ ಒದಗಿಸುತ್ತವೆ. ಒಂದು ಐತಿಹ್ಯದ ಪ್ರಕಾರ, ಇವರು ತಿರುಪತಿ ವೆಂಕಟರಮಣಸ್ವಾಮಿಯ ಭಕ್ತರು. ಪ್ರತಿ ವರ್ಷವು ಒಪ್ಪಿಸುತ್ತಿದ್ದ ವಾರ್ಷಿಕ ಕಾಣಿಕೆಯನ್ನು ಷರತ್ತಿನ ಪ್ರಕಾರ ಒಪ್ಪಿಸದಿದ್ದ ಕಾರಣ, ಮೋಸ ಮಾಡಿದ ಜನರಿವರು ಎಂದು ಅನೇಕ ಜನರು ಭಾವಿಸಿ, ದೊಂಗದಾಸ (ಕಳ್ಳದಾಸ)  ಎಂದು ಕರೆದಿದ್ದಾರೆ. ಕೆ. ಅನಂತಕೃಷ್ಣ ಅಯ್ಯರ‍್ ಅವರು ದೊಂಬಿದಾಸರು ಎಂದರೆ, ಯಾರು ಎಂಬ ಬಗ್ಗೆ ಹೀಗೆ ಹೇಳಿದ್ದಾರೆ. “Dombi dasru are so called on account of their dancing in group. The Term thief or Donga has no reference to any criminal propersity but is apparently applied to devotees who fail to visit holy shrine of Tirupathi for three Generations. In that case they are know as Donga kapu (K. Anantha Krishna Iyer, The Mysore Tribes and Castes, Volume-II, page 103, 1928.)

ದೊಂಬಿದಾಸರನ್ನು ’ಹೆಣ್ಣುವೇಷದವರು’ ಎಂದು ಕೂಡ ಕರೆಯುವ ವಾಡಿಕೆ ಇದೆ. ಈ ಬಗ್ಗೆ ಒಂದು ಸ್ವಾರಸ್ಯಕರವಾದ ಪುರಾಣ ಕತೆಯೆ ಇದೆ. ಇಬ್ಬರು ಗಂಡಸರು ಯಾವುದೋ ಒಂದು ದಾರಿಯಲ್ಲಿ ನಡೆದು ಬರುತ್ತಿರುತ್ತಾರೆ. ಪಾರ್ವತಿ ವಿಹಾರಾರ್ಥವಾಗಿ ಭೂಲೋಕದಲ್ಲಿ ವಿವಿಧ ಕಡೆಯಲ್ಲಿ ಸಂಚರಿಸುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಆಕೆಗೆ ಅಭಿಮುಖವಾಗಿ ಎದುರಾದ ಆ ಇಬ್ಬರು ಗಂಡಸರು ಆಕೆಯ ಸೌಂದರ್ಯಕ್ಕೆ ಸೋಲುತ್ತಲೆ ಆಕೆಯನ್ನು ಬಯಸುತಾರೆ. ಮದುವೆಯಾಗು ಎಂದು ಪೀಡಿಸುತ್ತಾರೆ. ಅವರ ಈ ಕೋರಿಕೆಯನ್ನು ತಿರಸ್ಕರಿಸಿದ ಪಾರ್ವತಿ ದೇವಿಯು, ಲೋಕಮಾತೆಯಾದ ನನ್ನನ್ನು ನೀವು ಬಯಸಿದ ಕಾರಣದಿಂದ ನಪುಂಸಕರಾಗಿರೆಂದು ಶಾಪ ನೀಡುತ್ತಾಳೆ. ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತಪಟ್ಟುಕೊಂಡು, ತಮ್ಮ ಪುರುಷತ್ವ ಉಳಿಸಿಕೊಳ್ಳುವ ಸಲುವಾಗಿ ಹೆಣ್ಣುವೇಷ ಧರಿಸಿದರಂತೆ. ಹೀಗೆ ಹಾಡನ್ನು ಹಾಡುತ್ತ ಜನರನ್ನು ರಂಜಿಸಿದ ಇವರನ್ನು ಹೆಣ್ಣುವೇಷದವರು ಎಂಬ ಕರೆಯುವ ಪದ್ಧತಿ ಆರಂಭವಾಯಿತಂತೆ. ಹೀಗೆ ದೊಂಗದಾಸ ಜನಾಂಗ, ದೊಂಬಿದಾಸರಾದ ಬಗೆಯನ್ನು ಅವರ ಕುಲ ಪುರಾಣಕತೆಯು ಪರಿಚಯಿಸಿದೆ.

ದೊಂಬಿದಾಸ ಸಮುದಾಯವನ್ನು ಕುರಿತಂತೆ ಬಿ.ಬಿ.ಮಹೀಶವಾಡಿಯವರು: “ದೊಂಬಿ-ದಾಸರು ಮುಖ್ಯವಾಗಿ ವೃತ್ತಿಗಾಯಕರು. ದಮ್ಮಡಿ ಬಾರಿಸುತ್ತ ಏಕತಾರಿ ಮಿಡಿಯುತ್ತ, ಅಭಿಮನ್ಯುವಿನ ಕತೆ, ರಾಮಲಕ್ಷ್ಮಣರ ಕತೆ, ಪಾಂಡವರ ಕತೆ ಹೇಳುವುದರ ಜೊತೆಗೆ ಬಂಟರ ಕತೆಗಳನ್ನು ಹೇಳುತ್ತಾರೆ. ಸಂಗೊಳ್ಳಿರಾಯಣ್ಣ, ಸಿಂದೂರಲಕ್ಷ್ಮಣ, ಕಟ್ಟೀಚನ್ನ, ಪವುಣಂಚಯ ಮೊದಲಾದ ಕನ್ನಡ ನಾಡಿನ ಸಾಮಾನ್ಯ ಜನತೆಯ ಮುಂದೆ ಅಸಾಮಾನ್ಯ ಸಾಹಸಮಾಡಿ ಮೆರೆದ ಬಂಟರ ಹಾಡುಗಳನ್ನು ಹೇಳುತ್ತಾರೆ. ಕಿತ್ತೂರ ಚೆನ್ನಮ್ಮ, ಮುಂಡರಗಿ ಭೀಮರಾಯ, ನರಗುಂದಬಂಡಾಯ,ಹಲಗಲಿ ಜಡಗಾಬಾಲಾರ ಕಥೆಗಳನ್ನು ಸುಂದರವಾಗಿ ವೀರಸ ಉಕ್ಕುವಂತೆ, ಮೈರೋಮಾಂಚನಗೊಳ್ಳುವಂತೆ ಹಾಡಿ ತೋರಿಸುತ್ತಾರೆ” (ಕನ್ನಡ ಕಥಾ ಸೃಷ್ಟಿ. ಪು.೨೪) ಎಂದು ಹೇಳಿರುವ ಅಭಿಪ್ರಾಯ ನಿಜಕ್ಕೂ ಸ್ತುತ್ಯಾರ್ಹವೆ ಎನ್ನಬಹುದಾಗಿದೆ.

ದೊಂಬಿದಾಸ ಸಮುದಾಯ ತಲತಲಾಂತರದಿಂದ ಅವರ ಹಿರಿಯವರು ಆಚರಿಸಿಕೊಂಡು ಬಂದಿರುವ ವಿಚಾರಗಳನ್ನು ಮೈಗೂಡಿಸಿಕೊಂಡು, ಕಲೆಗೆ ಹೆಚ್ಚು ಬೆಲೆ ಕಟ್ಟಿದವರು ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ. ಇವರು ತಮ್ಮ ಹಾಡುಗಾರಿಕೆಯಲ್ಲಿ ಕೇವಲ ಕತೆ, ಕಾವ್ಯ, ಪುರಾಣ, ಮತ್ತಿತರ ವಿಷಯಗಳನ್ನಷ್ಟೆ ಪ್ರಸ್ತಾಪಿಸುವುದಿಲ್ಲ ಬದಲಾಗಿ ಕನ್ನಡ ನಾಡಿನ ಹಿರಮೆ; ಗರಿಮೆ, ಚರಿತ್ರೆಯ ಮೂಲಪುರುಷರು ಮತ್ತು ಸ್ವಾತಂತ್ಯ್ರ ಚಳುವಳಿಯ ಹಿನ್ನೆಲಯ ವಿವರವನ್ನು ತಮ್ಮ ಸಿರಿ ಕಂಠದಲ್ಲಿ ಹಾಡುವ ಮತ್ತು ಅಭಿನಯಿಸುವ ಮೂಲಕ ಪ್ರದರ್ಶಿಸಿ ಜನ ಮೆಚ್ಚುಗೆ ಪಡೆಯುವುದು ಪ್ರಶಂಸನೀಯವಾದುದಾಗಿದೆ.

ದೊಂಬಿದಾಸ ಜನಾಂಗ ಮಾತನಾಡುವ ಮಾತು ತೆಲುಗು. ಆದರೆ ಅವರ ಕಾವ್ಯಭಾಷೆ ಕನ್ನಡ ಆಗಿದೆ. ಅಲ್ಲದೆ ಅವರು ದಿನನಿತ್ಯ ಬದುಕಿನಲ್ಲಿ ವ್ಯವಹರಿಸುವುದು ಸಹ ಕನ್ನಡ ಭಾಷೆಯೇ ಆಗಿದೆ. ಈ ಸಮುದಾಯವನ್ನು ಕನ್ನಡ ಮತ್ತು ತೆಲುಗು ಈ ಎರಡು ಭಾಷೆಗಳ ಬಾಂಧವ್ಯ ವಿಶೇಷವಾಗಿದ್ದ ವಿಜಯನಗರದ ಅರಸರ ಕಾಲದಿಂದ ಕರ್ನಾಟಕದ ಆಂಧ್ರ ಗಡಿ ಭಾಗಗಳಿಂದ, ಕನ್ನಡ ನಾಡಿನ ಇತರ ಭಾಗಗಳಲೆಲ್ಲ ಹರಡಿಕೊಂಡಿರಬಹುದೆಂದು ಊಹಿಸಬಹುದಾಗಿದೆ. ಮಾಗಡಿ ಕೆಂಪೇಗೌಡನ ವಂಶಸ್ಥರಾದ ಮರುಸು ಒಕ್ಕಲಿಗ ಅರಸು ಸಂತತಿಯವರು ಕನ್ನಡ, ತೆಲಗು ಭಾಷೆಗಳೆರಡಕ್ಕೂ ಸಮಾನ ಸ್ಥಾನಮಾನವನ್ನು ಕೊಟ್ಟಿದುದಲ್ಲದೆ, ಇಮ್ಮಡಿ ಕೆಂಪೇಗೌಡ ಬರೆದಿರುವ ’ಗಂಗೇಗೌರಿ ವಿಲಾಸಮು’ ಎಂಬ ತೆಲಗು ಕಾವ್ಯ ದೊಂಬಿದಾಸರು ಹಾಡುವ ಗಂಗೇ-ಗೌರೀ ಕತೆಗೆ ಮೂಲವಾಗಿರಬಹುದೆಂದು ಬಾವಿಸಲಾಗಿದೆ. ಇಲ್ಲವೆ ದೊಂಬಿದಾಸರು ಹಾಡುತ್ತಿದ್ದ ಕಥೆಯನ್ನು ಇಮ್ಮಡಿ ಕೆಂಪೇಗೌಡ ತನ್ನ ಕಾವ್ಯದ ಕಥಾ ವಸ್ತುವನ್ನಾಗಿ ಎತ್ತಿಕೊಂಡಿರಬಹುದೆಂದು ಊಹಿಸಲಾಗಿದೆ. ಅಲ್ಲದೆ ದೊಮಬಿದಾಸರಿಗೆ ಮಾಗಡಿ ಕೆಂಪೇಗೌಡನ ಬಗ್ಗೆ ಹಾಗೂ ಅವನ ವಂಶಸ್ಥರ ಬಗ್ಗೆ ಇರುವ ಶ್ರದ್ಧೆ ಭಕ್ತಿಗಳು ಇವರು ಹಾಡುವ ಐತಿಹಾಸಿಕ ಕಾವ್ಯ ಮಾಗಡಿ ಕೆಂಪೇಗೌಡದಲ್ಲಿ ಪಡಿಮೂಡಿದೆ. ಇವರು ಆಂಧ್ರದಿಂದ ಬಂದ ತೆಲುಗರೇ ಆಗಿದ್ದರೂ ಈಗ ಇವರನ್ನು ತೆಲುಗರು ಎಂದು ಕರೆಯುವದಕ್ಕೆ ಸಾಧ್ಯವಾಗದಷ್ಟು ರೀತಿಯಲ್ಲಿರುವುದು. ಕನ್ನಡ ಭಾಷೆಯ ಶ್ರೇಷ್ಟ ಜನಪದ ಗಾಯಕರ ಸಾಲಿನಲ್ಲಿ ನಿಲ್ಲಬಲ್ಲವ-ರಾಗಿದ್ದಾರೆ. ಹೀಗಾಗಿ ಈ ಸಮುದಾಯವನ್ನು ಕುರಿತಂತೆ “ದೊಂಬಿದಾಸರು ಯಾವ ಕಾಲದಲ್ಲಿ ಕರ್ನಾಟಕವನ್ನು ಪ್ರವೇಶಿಸಿರಬಹುದು ಎಂಬುದಕ್ಕೆ ನಿಖರವಾದ ಆಧಾರವಿಲ್ಲ. ಅವರು ಕನ್ನಡ ಪ್ರದೇಶಗಳಲ್ಲಿಯೇ ಹುಟ್ಟಿ ಬೆಳೆದ ಜನಾಂಗವಾಗಿರಬಹುದೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಡುವ ವಿಷಯಗಳೂ ಕೆಲವು ವ್ಯಕ್ತಿಗಳಿಂದ ತಿಳಿದುಬರುತ್ತದೆ” ಎಂದು ಕನ್ನಡ ಜಾನಪದ ವಿದ್ವಾಂಸರಾದ ಜೀಶಂಪ (ದೊಂಬಿದಾಸರ ಲಾವಣಿಗಳು: (ಸಂ) ಜೀಶಂಪ ಸಾಹಿತ್ಯ ಸದನ ಮೈಸೂರು, ಪ್ರಥಮ ಮುದ್ರಣ ೧೯೭೪, ಪ್ರ.ಸಂ.೩, ಬೆಲೆ-೧೫ರೂ.) ಅವರು ವ್ಯಕ್ತಪಡಿಸುವ ಮೂಲಕ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ದೊಂಬಿದಾಸ ಸಮುದಾಯವು, ತನ್ನದೇ ಆದ ಸಾಮೂದಾಯಿಕ ಹಿನ್ನೆಲೆ, ಪರಿಚಯ ಮತ್ತು ಸಾಂಸ್ಕೃತಿ ನೆಲೆಗಟ್ಟನ್ನು ಕಟ್ಟಿಕೊಳ್ಳುವ ಮೂಲಕ, ಕನ್ನಡ ನಾಡಿನಲ್ಲಿ ಮಹತ್ವದ ಸ್ಥಾನಮಾವನ್ನು ಪಡೆದಿದ್ದಾರೆ.

ದೊಂಬಿದಾಸರು ಮುಖ್ಯವಾಗಿ ನೆಲೆಸಿರುವ ಪ್ರದೇಶಗಳು

ದೊಂಬಿದಾಸ ಸಮುದ್ರಾಯವು, ಕರ್ನಾಟಕದ ವಿವಿಧ ಭಾಗಗಳಲ್ಲಿ ಹರಿದು ಹಂಚಿಹೋಗುವ ಮೂಲಕ ನೆಲೆಯೂರಿದ್ದಾರೆ. ವಿವಿಧ ಭಾಗಗಳಲ್ಲಿ ಹರಿದು ಹಂಚಿ ಹೋಗುವ ಮೂಲಕ ನೆಲೆಯೂರಿದ್ದಾರೆ.ಇವರು ಬೆಂಗಳೂರು ನಿರ್ಮಿಸಿದ ’ಮಾಗಡಿ ಕೆಂಪೇಗೌಡ’ನ ಕಾವ್ಯವನ್ನು ತಮ್ಮ ಸಿರಿಕಂಠದಲ್ಲಿ ಹಾಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಯಲಹಂಕ ನಾಡಿನಲ್ಲಿ ನೆಲೆಸಿ, ಅಲ್ಲಿಯೆ ತಮ್ಮ ಜೀವನ ವೃತ್ತಿಯನ್ನು ಆರಂಭಿಸುತ್ತಲೆ; ವಿವಿಧ  ಪ್ರದೇಶಗಳಲ್ಲಿ ಚದುರಿ ಹೋಗಿದ್ದಾರೆ. ವಿಶೇಷವಾಗಿ ಮಾಗಡಿ ಪತನವಾದ ಬಳಿಕ ತಮ್ಮ ಬದುಕಿನ ಬಂಡಿಯನ್ನು ಕಂಡುಕೊಳ್ಳುವ ಸಲುವಾಗಿ, ಕನ್ನಡದಲ್ಲಿ ’ಲಾವಣಿ’ಗಳನ್ನು ಹಾಡುತ್ತ ಊರೂರನ್ನು ಸುತ್ತತ್ತ ಜೀವನಕ್ಕೆ ಒಂದು ಕಲಾ ಮಾಧ್ಯಮವನ್ನು ಕಂಡುಕೊಂಡಿರಬಹುದೆಂದು ಊಹಿಸಬಹುದಾಗಿದೆ. ಆ ಮೂಲಕ ಕತೆ ಕಟ್ಟಿದ್ದಾರೆ. ಲಾವಣಿಗಳನ್ನು ಹಾಡಿದ್ದಾರೆ. ನಾಟಕಗಳನ್ನು ಆಡಿಸುತ್ತಲೆ; ವಿಶೇಷವಾಗಿ ತಾವೂ ಸಹ ಆಡಿದ್ದಾರೆ. ಹೀಗಾಗಿ ಇವರು ಕರ್ನಾಟಕದ ಒಂದು ಭಾಗದಲ್ಲಿ ನೆಲೆಸಿದವರಲ್ಲ. ಮುಖ್ಯವಾಗಿ ಇರು ತುಮಕೂರು ಜಿಲ್ಲೆಯಲ್ಲಿ ಕಂಡು-ಬರುತ್ತಾರೆ. ಹಾಗೆಯೇ, ಮೈಸೂರು, ಮಂಡ್ಯ, ತುಮಕೂರು, ಹಾಸನ, ಬೆಂಗಳೂರು, ಕೋಲಾರ, ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕದ ವಿವಿಧ ಕಡೆಗಳಲ್ಲಿ ಚದುರಿ ಹೋಗಿರುವುದನ್ನು ಗಮನಿಸಬಹುದಾಗಿದೆ. ಆದರೆ, ತುರುವೇಕೆರೆ ತಾಲ್ಲೂಕು, ಬೆಮ್ಮನಹಳ್ಳಿಯ ವೆಂಕಟಪ್ಪ ಅವರು ತಮ್ಮ ಜನಾಂಗವನ್ನು ಕುರಿತು ತಮ್ಮದೇ ಆದ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದ್ದಾರೆ. “ನಮ್ಮವರು ಮೊದಲು ಶಿವಗಂಗೆ. ತಾವು ಬೊಮ್ಮನಹಳ್ಳಿ ಚಿಮ್ಮನಹಳ್ಳಿಗೆ ಬಂದವರು. ಈಗ ದೊಂಬಿದಾಸರ ಮನೆ ಕಡಗ, ಅಳ್ಳೆನಹಳ್ಳಿ, ಮಲ್ಲೇನಹಳ್ಳಿ, ಮಾದೀಹಳ್ಳಿ, ಮಾದೀಹಳ್ಳಿಪಾಳ್ಯ, ಅಧಿಕಾರನಹಳ್ಳಿ, ಕಳಸಪಾಳ್ಯ, ನಾರನಹಳ್ಳಿ ಇವು ಮಾಮೂಲಿ ಪೀಠಸ್ಥಾನ, ಕುಣುಗಲ ತಾಲ್ಲೂಕು ನಾರನಹಳ್ಳಿ ಮೊದಲಿಗೆ ನೂರುಮನೆ ಗ್ರಾಮ. ಈಗ ಹತ್ತು ಹದಿನೈದು ಮನೆ ಮಾತ್ರ ಇವೆ. ನಾಟಕ ಕಲಿಸೋಕೆ ಅಂತ ಎಲ್ಲೆಲ್ಲೊ ಹೋಗಿ ಸೇರ್ಕಂಡ್ರು. ಅಲ್ಲೆ ಮಠಮನೆ ಆಯ್ತು. ಕುಲಗುರು ತಿರುಮಲ ತಾತಾಚಾರ‍್ರು ಮಗಳ ಅರಿಸಿಣ ಕುಂಕುಮಕ್ಕಾಗಿ ಹುಲಿಕೆರೆ ಗುರುಗಳಿಗೆ ಬರಕೊಟ್ರು.ಇವರಿಂದ ಬರೋ ಆದಾಯ. ಅವರಿಗೆ ’ಕುಲ’ ದ ಅವರೇ ನಡೆಸಿ-ಕೊಂಡು ಹೋಗ್ತಾರೆ” ಎಂದು ಅವರ ದೊಂಬಿದಾಸ ಜನಾಂಗದ ಹಿನ್ನೆಲೆಯನ್ನು ಪರಿಚಯಿಸಿಕೊಂಡಿದ್ದಾರೆ.

ದೊಂಬಿದಾಸರು ಕರ್ನಾಟದಕ ವಿವಿಧ ಕಡೆಗಳಲ್ಲಿ ಅಲ್ಲಲ್ಲೆ ಜೀವನ ಕಟ್ಟಿಕೊಂಡು ನೆಲೆಸಿದ್ದಾರೆ. ಅದರಲ್ಲಿಯೂ ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಕಂಡುಬರುತ್ತಾರೆ ಎಂದು ತಿಳಿದು ಬಂದಿದೆ. ಪಾವಗಡ, ಗುಜ್ಜನಾಡು ಗ್ರಾಮ, ಕೊರಟಗೆರೆ ತಾಲ್ಲೂಕು ಇನ್ನು ಕೆಲವು  ಗ್ರಾಮದಲ್ಲಿ ಕಂಡುಬರುತ್ತಾರೆಂದು ಗೊತ್ತಾಗಿದೆ. ಚಿತ್ರದುರ್ಗ ಜಿಲ್ಲೆಗೆ ಸಮೀಪವಿರುವ ಚನ್ನಯ್ಯನಹಟ್ಟಿ, ಹಳಿಯೂರು, ಬೊಮ್ಮೇನಹಳ್ಳಿ, ಚಳ್ಳಕೆರೆ, ಜಗಳೂರು, ಬಂಗಾರಮ್ಮನಗುಡ್ಡ, ದೊಡ್ಡಹಟ್ಟಿ, ಸಣ್ಣಹಟ್ಟಿ, ಮಾರಜನಹಳ್ಳಿ, ದಾವಣಗೆರೆ, ಭರಮಸಾಗರ, ಸಿರಿಗೆರೆ, ಓಬಳಾಪುರ ಮತ್ತು ಹಿರಿಯೂರು, ಇನ್ನೂ ಅನೇಕ ಕಡೆ ನೆಲೆಸಿರುವುದು ಕ್ಷೇತ್ರಕಾರ್ಯದ ಅಧ್ಯಯನದ ಹಿನ್ನೆಲೆಯಿಂದ ಗೋಚರವಾಗುತ್ತದೆ. ಮಂಡ್ಯ ನಗರಕ್ಕೆ ಹತ್ತಿರವಿರುವ ಹೊಸಹಳ್ಳಿ ಮಠದಲ್ಲಿ ತತ್ವಪದಗಳನ್ನು ಹಾಡುವ ದೊಂಬಿದಾಸರು ಕಂಡುಬರುತ್ತಾರೆ. ಹಾಸನ ಜಿಲ್ಲೆಯ ಜಾವಗಲ್‌ನ ಆಸುಪಾಸಿನ ಕೆಲವು ಪ್ರದೇಶಗಳಲ್ಲಿ ಈ ಸಮುದಾಯದ ಜನರು ವಾಸಿಸುತ್ತಿರುವುದನ್ನು ಗಮನಿಸ-ಬಹುದಾಗಿದೆ.

ದೊಂಬಿದಾಸ ಸಮುದಾಯದವರು ವಿಶೇಷವಾಗಿ ಮೈಸೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಮುಖ್ಯವಾಗಿ ಹುಣಸೂರು ತಾಲ್ಲೂಕಿನ ಕುಪ್ಪೆ ಮತ್ತು ಶ್ಯಾನುಭೋಗನ ಹಳಳಿ ಮತ್ತು ಕೆ.ಆರ‍್.ನಗರ ತಾಲ್ಲೂಕಿನ ಮಳಲಿ, ಮುದ್ದನಹಳ್ಳಿ, ಹರಂಬಳ್ಳಿಕೊಪ್ಪಲು ಈ ಗ್ರಾಮಗಳಲ್ಲಿ ಕೆಲವು ಕುಟುಂಬಗಳು ವಾಸಿಸುತ್ತಿವೆ. ಅಲ್ಲದೆ ಮೈಸೂರಿಗೆ ಸ್ವಲ್ಪ ಹತ್ತಿರವಿರುವ ಆನಂದೂರು ಕೊಪ್ಪಲು ಎಂದು ಮೊದಲು ಕರೆಯಿಸಿಕೊಂಡು ಇತ್ತೀಚೆಗೆ ಯಾಚೇಗೌಡನಹಳ್ಳಿ ಎಂಬ ಹೆಸರನ್ನು ಬದಲಾಯಿಸಿಕೊಂಡಿರುವ ಈ ಗ್ರಾಮದಲ್ಲಿಯೂ ಕೂಡ ದೊಂಬಿದಾಸ ಜನಾಂಗವು ವಾಸಿಸುತ್ತಿರುವುದನ್ನು ಕಾಣಬಹುದಾಗಿದೆ.

ಯಾಚೇಗೌಡನಹಳ್ಳಿ (ಆನಂದೂರುಕೊಪ್ಪಲು)

ಈ ಗ್ರಾಮದಲ್ಲಿ ದೊಂಬಿದಾಸ ಸಮುದಾಯವು ಸುಮಾರು ೩೪ ಕುಟುಂಬಗಳಿವೆ. ಇಲ್ಲಿ ೧೦೨ ಜನ ಗಂಡಸರು, ೮೨ ಜನ ಹೆಂಗಸರು. ಇವರ ಪೈಕಿ ೧೩೦ ಜನ ವಿದ್ಯಾವಂತರು. ೬೦ ಜನ ಅವಿದ್ಯಾವಂತರಿದ್ದಾರೆ. ೨೮ ಕುಟುಂಬಗಳಿಗೆ ಅಲ್ಪಸ್ವಲ್ಪ ತುಂಡು ಜಮೀನಿದೆ. ಉಳಿದ ಕುಟುಂಬಗಳಿಗೆ ಸ್ವಲ್ಪವೂ ಜಮೀನು ಇಲ್ಲ. ಆದರೆ ಇಲ್ಲಿಯ ಜನರು ಯಾವುದೇ ಬಗೆಯ ಸೋಮಾರಿಗಳಾಗಿ ಜೀವನ ಮಾಡದೆ ಒಬ್ಬೊಬ್ಬರು ಒಂದೊಂದು ವೃತ್ತಿ ಜೀವನ ಮಾಡುತ್ತ ವಿವಿಧ ಕಸುಬಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಲ್ಲಿ ೫ ಜನ ನೌಕರರು, ೯ಜನ ಖಾಸಗಿ ಕೆಲಸದಲ್ಲಿದ್ದಾರೆ. ೨೯ಜನ ಕೃಷಿಯಲ್ಲಿ ತೊಡಗಿದ್ದಾರೆ. ೫ ಜನರು ಕೃಷಿ ಮಾಡುವುದರ ಜೊತೆಗೆ ಫೋಟೋ ರಿಪೇರಿ ಮಾಡುತ್ತಾರೆ. ೨ ಜನರು ಕೃಷಿ ಮಾಡುವುದರ ಜೊತೆಗೆ ಭಿಕ್ಷೆ ಮಾಡುವುದನ್ನು ತಮ್ಮ ಜೀವನಾಧಾರ ಭಾಗವನ್ನಾಗಿಸಿಕೊಂಡಿದ್ದಾರೆ. ೨ ಜನ ಬಳೆ ವ್ಯಾಪಾರ, ೩ ಜನ ಬಟ್ಟೆ ವ್ಯಾಪಾರ, ೪ ಜನ ರಂಗ ನಟನೆ, ೨ ಜನ ಫೋಟೋ ರಿಪೇರಿ ಜೊತೆಗೆ ರಂಗ ನಟನೆ ಮಾಡುತ್ತಾರೆ, ೨೩ ಜನ ಕೂಲಿನಾಲಿ ಮಾಡುತ್ತಾರೆ. ೩೦ ಜನರು ವಿವಿಧ ಕಸುಬುಗಳಲ್ಲಿ ತೊಡಗಿ ಬಲು ಛಲದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಊರಿನಲ್ಲಿ ವಿವಿಧ ವಂಶಗಳಿಗೆ ಸೇರಿರುವ ವಂಶದವರು ಕಂಡುಬರುತ್ತಾರೆ. ಅವರುಗಳಲ್ಲಿ; ಒಂದು ಕುಟುಂಬ ಕಟಾಲೋಳು, ೧ ಕುಟುಂಬ ಮಿರ‍್ಯಾಲು, ೩ ಕುಟುಂಬ ಕೊಯಿಲ ಕೊಂಡೋಳು, ೧೦ ಕುಟುಂಬ ಮುತ್ತುಂಶೆಟ್ಟಿ, ೧ ಕುಟಂಬ ಕೋಮಟೋಳು, ೯ ಕುಟುಂಬ ನಂದ್ಯಾಲು ಹೀಗೆ ಯಾಚೇಗೌಡನ ಹಳ್ಳಿಯಲ್ಲಿ ಜೀವನ ಮಾಡುತ್ತಿರುವ ದೊಂಬಿದಾಸ ಸಮುದಾಯವು ಕೃಷಿಯಲ್ಲಿ ತೊಡಗಿರುವವರು. ವಿವಿಧ ಕಸುಬನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡಿರುವುದು ಮತ್ತು ಉತ್ತಮ ಬದುಕು ಯಾವುದೇ ವೃತ್ತಿಯನ್ನು ಅವಲಂಬಿಸಿದ್ದರೂ ಚೆನ್ನಾಗಿರಬೇಕೆಂಬುದು ಇವರ ಉದ್ದೇಶ, ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ಅನ್ನ ತಿನ್ನು ಹಂಬಲದಿಂದ ಜೀವನಕ್ಕಾಗಿ ಹೋರಾಟ ಎಂಬ ಆತ್ಮಸ್ಥೈರ್ಯದ ಮೂಲಕ ಜೀವನೋಪಾಯ ಕಂಡುಕೊಂಡಿರುವ ಇವರ ಬದುಕು ಛಲಗಾರಿಕಗೆ ಮತ್ತು ಸಮಾಜಕ್ಕೆ ಒಂದು ಮಾದರಿ ಎಂದೆನಿಸಿಕೊಂಡಿದೆ.

ಕುಪ್ಪೆಗ್ರಾಮ: ಹುಣಸೂರು ತಾಲ್ಲೂಕಿನಲ್ಲಿ ಈಗ್ರಾಮ ಇದೆ. ಇದೆ ತಾಲ್ಲೂಕಿನ ಹೋಬಳಿ ಸ್ಥಳವಾದ ಬಿಳಿಕೆರೆಗೆ ಸುಮಾರು ೬ ಕಿ.ಮೀ ಇದೆ. ಈ ಊರಿಗೆ ಇನ್ನೊಂದು ಹೆಸರಿದೆ. ಅದೆಂದರೆ ಬಾಪೂಜಿ ಕಾಲೋನಿ. ಈ ಊರಿಗೆ ಸುತ್ತಮುತ್ತೆಲ್ಲ ಹೆಚ್ಚಿನದಾಗಿ ಅರಣ್ಯ ಪ್ರದೇಶವೇ ಆವರಿಸಿದೆ. ಒಟ್ಟು ೧೪ ಕುಟುಂಬಗಳು ಈ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ೩೮ ಜನ ಗಂಡಸರು, ೨೯ ಜನ ಹೆಂಗಸರು ಇಲ್ಲಿದ್ದಾರೆ. ೪೪ ಜನ ವಿದ್ಯಾವಂತರು ಇಲ್ಲಿದ್ದಾರೆ. ಎರಡು ಜನ ಸರ್ಕಾರಿ ನೌಕರಿಯಲಿದ್ದಾರೆ. ೫ ಜನ ಖಾಸಗಿ ನೌಕರರು ಈ ಗ್ರಾಮದಲ್ಲಿದ್ದಾರೆ. ೨೩ ಜನ ಅವಿದ್ಯಾವಂತರು, ೭ಕುಟುಂಬಗಳಿಗೆ ಜಮೀನು ಇದೆ. ೭ ಕುಟಂಬಗಳಿಗೆ ಜಮೀನು ಇಲ್ಲದೆ ಜೀವನೋಪಾಯಕ್ಕಾಗಿ ವಿವಿಧ ಕಸುಬಿನಲ್ಲಿ ಜನರು ತೊಡಗಿದ್ದಾರೆ. ೨ ಜನ ವ್ಯವಸಾಯ, ೨ಜನ ಜನ ಫೋಟೋ ರಿಪೇರಿ ಮಾಡುವವರು, ೩ ಜನ ಭಿಕ್ಷೆಯಾಚನೆ, ೨ ಜನ ಭಿಕ್ಷೆ ಮಾಡುವುದರ ಜೊತೆಗೆ ಕೃಷಿ ಮಾಡುವುದರಲ್ಲಿ ನಿರತರಾಗಿದ್ದಾರೆ. ೭ ಜನ ಕೂಲಿ ಕಾರ್ಮಿಕರು, ೭ ಜನರು ಗಾರೆ ಕೆಲಸ ಮಾಡುತ್ತಾರೆ. ವಿವಿಧ ವಂಶಕ್ಕೆ ಸೇರಿರುವ ಜನರು ಈ ಊರಿನಲ್ಲಿದ್ದಾರೆ. ೬ ಪಡತ್ಲೋಳು ವಂಶದ ಕುಟುಂಬಗಳಿವೆ. ೨ ಕುಟುಂಬ ಗ್ವಲೋಷು, ೨ ಕುಟುಂಬ ಮುತ್ತುಂಶೆಟ್ಟಿ, ೩ ಕುಟುಂಬ-ಸಿಂತ್ಲೋಳು, ೨ ಕುಟುಂಬ ಪಾಕಲೋಳು ಹೀಗೆ ವಿವಿಧ ವಂಶಕ್ಕೆ ಸೇರಿರುವ ಕುಟುಂಬಗಳು ದೊಂಬಿದಾಸ ಸಮುದಾಯಕ್ಕೆ ಸೇರಿರುವರಿದ್ದಾರೆ. ಒಟ್ಟಿನಲ್ಲಿ ಇಲ್ಲಿರುವ ವಂಶದವರು ಆತ್ಮೀಯ ಹೊಂದಾಣಿಕೆಯ ಜೀವನ ಸಾಗಿಸುತ್ತಿದ್ದಾರೆ.

ಮುದ್ದನಹಳ್ಳಿ, ಮಳಲಿ ಮತ್ತು ಹರಂಬಳ್ಳಿಕೊಪ್ಪಲು

ಕೆ.ಆರ‍್.ನಗರ ತಾಲ್ಲೂಕಿನಲ್ಲಿ ಈ ಮೂರು ಗ್ರಾಮಗಳು ಕಂಡುಬರತ್ತವೆ. ಮುದ್ದನಹಳ್ಳಿ ಗ್ರಾಮದಲ್ಲಿ ಒಂದು ಕುಟುಂಬ ಮಾತ್ರ ಇದೆ. ಮಳಲಿ ಗ್ರಾಮದಲ್ಲಿ ಎರಡು ಕುಟುಂಬಗಳಿವೆ. ಈ ಊರಿಗೆ ಪೆದ್ದೋಡಯ್ಯ ಎಂಬ ವ್ಯಕ್ತಿ ಎಲ್ಲಿಂದಲೋ ಬಂದು ಮೊದಲು ನೆಲೆಸಿದರು. ಇವರ ಮಕ್ಕಳು ಸುತ್ತಮುತ್ತಲಿನ ಜನಕ್ಕೆ ನಾಟಕ ಕಲಿಸುವುದು ಮತ್ತು ಹರಿಕಥೆಗಳನ್ನು ಮಾಡುವುದರಲ್ಲಿ ಜನರ ಪ್ರೀತಿ ವಿಶ್ವಾಸಗಳಿಸಿದ್ದಾರೆ.

ಹರಂಬಳ್ಳಿಕೊಪ್ಪಲು: ಕೆ.ಆರ‍್.ನಗರ ಪಟ್ಟಣದಿಂದ ಸುಮಾರು ೧೫ ಕಿ,ಮೀ. ಅಂತರದಲ್ಲಿ ಇರುವ ಗ್ರಾಮ ಇದಾಗಿದೆ. ಇಲ್ಲಿ ೪ ಕುಟುಂಬಗಳಿವೆ. ೯ ಜನ ಗಂಡಸರು, ೧೦ ಜನ ಹೆಂಗಸರು. ೧೫ ಜನ ವಿದ್ಯಾವಂತರು ಇಲ್ಲಿದ್ದಾರೆ. ೪ ಜನ ಅವಿದ್ಯಾವಂತರು. ಇಲ್ಲಿನ ೪ ಕುಟುಂಬಗಳಿಗೂ ತಮ್ಮ ಜೀವನದ ನಿರ್ವಹಣೆಗೆ ಅಗತ್ಯವಾದ ಜಮೀನಿದೆ. ೨ ಜನ ಖಾಸಗಿ ನೌಕರಿಯಲ್ಲಿದ್ದಾರೆ. ೨ ಜನ ಇತರೆ ವ್ಯಾಪಾರ, ವ್ಯವಹಾರ ಮಾಡುವವರಿದ್ದಾರೆ. ಒಬ್ಬರು ಭಿಕ್ಷೆ ಬೇಡುವವರು, ಒಬ್ಬರು ಬಳೆ ವ್ಯಾಪಾರ ಮಾಡುವವರು, ಒಬ್ಬರು ಕೃಷಿ ಜತೆಗೆ ಬಳೆ ವ್ಯಾಪಾರ ಮಾಡುತ್ತಾರೆ, ಒಬ್ಬರು ತಬಲ ನುಡಿಸುವವರು ಹಾಗೂ ೪ ಜನರು ಇನ್ನಿತರೆ ಕೆಲಸ ಮಾಡುವ ಮೂಲಕ ತಮ್ಮ ಬದುಕಿನ ಮಾರ್ಗ ಕಂಡುಕೊಂಡಿದ್ದಾರೆ. ಒಟ್ಟಿನಲ್ಲಿ ಇಲ್ಲಿರುವ ೪ ಕುಟುಂಬಗಳು ಕೂಡ ಕೋಮಟೋಳ ಎಂಬ ವಂಶಕ್ಕೆ ಸೇರಿದವರಾಗಿದ್ದಾರೆ.

ಟಿ.ನರಸೀಪುರ: ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕಿನ ಗ್ರಾಮವೇ ಕುರಹಟ್ಟಿ, ಇಲ್ಲಿ ಒಟ್ಟು ೩ ಕುಟುಂಬಗಳಿವೆ. ೧೫ ಜನರು ಈ ಊರಿನಲ್ಲಿದ್ದಾರೆ. ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಜಮೀನು ಹೊಂದಿರುವವರಿದ್ದಾರೆ. ಅಲ್ಲದೆ ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಏಕಲವ್ಯ ನಗರದಲ್ಲಿ ದೊಂಬಿದಾಸ ಸಮುದಾಯದ ಕೆಲವು ಕುಟುಂಬಗಳಿವೆ. ಅರೆ-ಅಲೆಮಾರಿ ಜನಾಂಗವಾದ ಈ ಸಮುದಾಯವು, ಈ ಪ್ರದೇಶದಲ್ಲಿ ನೆಲೆ ಕಂಡುಕೊಳ್ಳಲು ಸರ್ಕಾರದ ಸೌಲಭ್ಯ, ಮೂಲಭೂತ ಅಗತ್ಯತೆಗಾಗಿ ನಿರಂತರವಾಗಿ ಹೋರಾಡುತ್ತಿದೆ.

ಒಟ್ಟಿನಲ್ಲಿ ದೊಂಬಿದಾಸ ಸಮುದಾಯವು ಮೇಲೆ ತಿಳಿಸಿರುವ ಹಾಗೆ ಒಂದು ಅಲೆ ಮಾರಿ ಸಮುದಾಯ. ಇಂತಿಷ್ಟೇ ಕುಟುಂಬಗಳು, ಇಂತಿಂತಹ ಊರಿನಲ್ಲಿ ನೆಲಸಿದೆ. ಎಂದು ತಿಳಿಸಲು , ಕರ್ನಾಟಕದ ರಾಜ್ಯಾದ್ಯಂತ ಗಂಭೀರ ಮತ್ತು ಆಸಕ್ತಿಯ ಕ್ಷೇತ್ರ ಕಾರ್ಯ ನಡೆಯಬೇಕು. ಜಾನಪದ ಸಂಶೋಧಕರು, ಸಂಶೋಧನಾ ಅಭ್ಯರ್ಥಿಗಳು ಹಾಗೂ ಸರ್ಕಾರ ಈ ಜನಾಂಗದ ಕಡೆಗೆ ವಿಶೇಷ ಆಸಕ್ತಿ ತೋರಿಸಿದರೆ ಮಾತ್ರ ಅವರ ವಾಸ್ತವಿಕ ದೈನಂದಿನ ಬದುಕು ಮತ್ತು ಬವಣೆಯನ್ನು ಗುರ್ತಿಸಬಹುದು. ಅಲ್ಲಲ್ಲೆ ಚದುರಿ ಹೋಗಿರುವ ಈ ಕುಟುಂಬಗಳು ಒಂದು ಕಡೆಗೆ ಗಟ್ಟಿಯಾಗಿ ತಳವೂರಲು ಸಾಧ್ಯವಾಗುತ್ತಿಲ್ಲ ಹಾಗೂ ಇದು ಅಷ್ಟು ಸಾಧ್ಯವೂ ಅಲ್ಲ. ಇವರ ಬಗ್ಗೆ ಸರ್ಕಾರದ ಗಮನ, ನಿಜವಾದ ಕಾಳಜಿ ಮತ್ತು ಹೊಣೆಗಾರಿಕೆಯನ್ನಿಟ್ಟುಕೊಂಡು, ಈ ಜನಾಂಗದ ಭದ್ರತೆ ಪ್ರತ್ಯೇಕ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಮಾತ್ರೆ ಅವರ ಯಶಸ್ಸು ನಿರೀಕ್ಷಿಸಬಹುದು.

ದೊಂಬಿದಾಸ ಜನಾಂಗದ ಜೀವನ ಪದ್ಧತಿ ಮತ್ತು ಇವರ ಧಾರ್ಮಿಕ ನಂಬಿಕೆ ಕಸುಬು

ದೊಂಬಿದಾಸ ಜನಾಂಗವು ಕಲೆ, ರಂಗಭೂಮಿ ಮತ್ತು ಯಕ್ಷಗಾನ ಪ್ರದರ್ಶನಕ್ಕೆ ತುಂಬ ಹೆಸರಾದವರು. ಇವರನ್ನು ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಹೆಣ್ಣುವೇಷದವರು ಎಂದು ಕರೆಯುತ್ತಾರೆ. ಭಿಕ್ಷಾಟನೆ ಮಾಡುವ ಮೂಲಕ ಒಂದು ಊರಿನಲ್ಲಿ ತಳವೂರದೆ, ಏಕತಾರಿಯನ್ನು ಬಲಗೈಲಿ ಹಿಡಿದು ಚಿಟಿಗಿಯನ್ನು ಎಡಗೈಲಿ ಹಿಡಿದು ನುಡಿಸುವುದು ಈ ಸಮುದಾಯದವರು ತಲತಲಾಂತರದಿಂದ ರೂಪಿಸಿಕೊಂಡು ಬಂದಿರುವ ಕಸುಬಾಗಿದೆ. ಭಿಕ್ಷಾಟನೆ ಮಾಡುವುದೇ ಈ ಜನಾಂಗದ ಮೂಲ ಕಸುಬಾಗಿದೆ. ಆದರೆ ಇವರು ಬೆಳೆ ಬಂದಾಗ ರೈತಾಪಿವರ್ಗ ಎಲ್ಲಿ ಹೆಚ್ಚಿನ ಬೆಳೆಯನ್ನು ಬೆಳೆದು ಜೀವನ ಮಾಡುತ್ತಿರುತ್ತಾರೋ; ಆ ಕಡೆಗೆ ಹೆಚ್ಚು ಮುಖ ಮಾಡುತ್ತಾರೆ. ಮೊದಮೊದಲು ಸಿಕ್ಕಸಿಕ್ಕ ಕಡೆ ಮನೆ, ಮಠ, ಮಂದಿರ, ಗುಡಿಗಳಲ್ಲಿ ತಂಗುತ್ತ ಜೀವನ ಸಾಗಿಸಿರುವ ನಿದರ್ಶನವು ಸಹ ಇದೆ. ಗಾಯನ, ನಾಟಕ, ಭಿಕ್ಷಾಟನೆ ಈ ಮೂರು ಮುಖ್ಯವಾಗಿ ಇವರ ಜೀವನ ನಿರ್ವಹಣೆಯ ನಿಜವಾದ ಕಸುಬಾಗಿತ್ತು. ಕಂಕುಳಿಗೆ ಜೋಳಿಗೆ ನೇತುಹಾಕಿಕೊಂಡು ಇಬ್ಬರು ಮತ್ತು ಮೂವರು ಭಿಕ್ಷಾಟನೆ ಮಾಡುವಾಗ ಹೋಗುವುದು ಇವರ ವಾಡಿಕೆಯಾಗಿತ್ತು. ಆದರೆ ಹೆಂಗಸರಾಗಿರಬಹುದು, ಗಂಡಸಾಗಿರಬಹುದು ಕುಂತು ಉಣ್ಣುವ ಜಾಯಮಾನದವರು ಈ ಸಮುದಾಯದಲ್ಲಿ ತುಂಬ ವಿರಳ. ಹೆಂಗಸರು ಊರೂರಿಗೆ ಬಾಚಣಿಗೆ, ಮಣಿಸರ, ಸ್ನೋ, ಪೌಡರ‍್, ಬಳೆ, ದಾರ, ಸೂಜಿ, ದಬ್ಬಳ, ಪೆನ್ನು, ಟೇಪು ಇವೆ ಮೊದಲಾದ ವೃತ್ತಿಯಲ್ಲಿ ತೊಡಗಿ ಊರೂರು ಸುತ್ತಿ ವ್ಯಾಪಾರ ಮಾಡಿ ಹೊಟ್ಟೆಹೊರೆದಿದ್ದಾರೆ. ಹೆಂಗಸರದು ಈ ರೀತಿಯ ಕಸುಬಾದರೆ; ಗಂಡಸರು ಕೂಡ ತಮ್ಮ ದೈನಂದಿನ ಕಸುಬಿನಲ್ಲಿ ತೊಡಗಿರುವುದಕ್ಕೆ ನಿದರ್ಶನವಾಗಿ ಇವರುಗಳು ಕೋಲೆ ಬಸವನ ಆಡಿಸುವುದು, ಛತ್ರಿ ರಿಪೇರಿ ಮಾಡುವುದು, ತಬಲ, ಪಿಟೀಲು, ಹಾರ‍್ಮೋನಿಯಂ, ಹಳೆ ಬೀಗ-ಬೀಗದಕೈ, ಬಟ್ಟೆ ವ್ಯಾಪಾರ ಇವೆ ಮುಂತಾದ ಸಣ್ಣಪುಟ್ಟ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬದುಕು ಕಳೆಯುತ್ತಾರೆ. ಸುಗ್ಗಿಯ ಸಮಯದಲ್ಲಿ ಊರಿಂದ ಊರಿಗೆ ನಾಟಕಗಳನ್ನು ಆಡುತ್ತ, ಆಡಿಸುತ್ತಾ, ದವಸ ಧಾನ್ಯಗಳನ್ನು ಸಂಪಾದಿಸುವ ಸಲುವಾಗಿ, ಹೆಂಗಸರನ್ನು ತಮ್ಮಪಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಅನಿವಾರ‍್ಯ ಸಂದರ್ಭದಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಮಾತ್ರ ತಮ್ಮೊಡನೆ ಕರೆದುಕೊಂಡು ಹೋಗುತ್ತಾರೆ. ಹೀಗಾಗಿ ಇವರು ಅಗತ್ಯಕ್ಕನುಸಾರ ಮತ್ತು ಪರಿಸ್ಥೀತಿಗನುಸಾರವಾಗಿ ಹೊಂದಿಕೊಂಡು ಬದುಕು ನಿಭಾಯಿಸುವ ಕಲೆಗಾರಿಕೆ ಇವರದಾಗಿದೆ. ಅದರಲ್ಲಿಯೂ ಗಂಡಸರಂತೂ ಊರಿನಲ್ಲಿ ಇರುವುದು ತುಂಬ ಅಪರೂಪ.

ದೊಂಬಿದಾಸ ಜನಾಂಗದ ಹಾಡುಗಾರರು ಏಕತಾರಿಯನ್ನು ಬಲಗೈಲಿ ಹಿಡಿದು, ಚಿಟಿಗೆಯನ್ನು ಎಡಗೈಲಿ ಹಿಡಿದು ನುಡಿಸುತ್ತಿದ್ದರೆ; ಇಬ್ಬರು ಉಡದ ಚರ್ಮದಿಂದ ಹದವಾಗಿ ಮಾಡಿದ್ದ ದಮ್ಮಡಿಯನ್ನು ಮತ್ತೊಬ್ಬ ಕಂಚಿನ ಬಟ್ಟು ತಾಳಗಳನ್ನು ಕುಟ್ಟುತ್ತ ಸೊಲ್ಲು ಕೊಡುತ್ತಾರೆ. ಗಂಗೇಗೌರಿ ಜಗಳ, ಹುಟ್ಟಿದಳೆ ಗೌರಮ್ಮ, ಕೃಷ್ಣಕೊರವಂಜಿ, ಬಂಜೆಹೊನ್ನಮ್ಮ, ಬಾಲನಾಗಮ್ಮ, ಅತ್ತೆ-ಸೊಸೆ, ಅಣ್ಣ-ತಂಗಿ ಇನ್ನೂ ಮುಂತಾದ ಕಾವ್ಯಗಳನ್ನು ಹಾಡಿ ರಂಜಿಸುತ್ತಾರೆ. ಅಷ್ಟೇ ಅಲ್ಲದೆ ರಾಮಾಯಣ, ಮಹಾಭಾರತ, ಪುರಾಣ ಪುಣ್ಯಕಥೆಗಳು, ಐತಿಹಾಸಿಕ, ಪೌರಾಣಿಕ, ಜನಪದ ಮಹಾಕಾವ್ಯ ಮೊದಲಾದವನ್ನು ಹಾಡುತ್ತಲೆ; ಜನರ ಹೃದಯಕ್ಕೆ ಮುದ ನೀಡುತ್ತಾರೆ. ಜೊತೆಗೆ ರಾಜಾ ಸತ್ಯವ್ರತ, ರಾಜಾ ವಿಕ್ರಮ, ಶ್ರೀಕೃಷ್ಣಪಾರಿಜಾತ, ಶ್ರೀ ಕೃಷ್ಣಲೀಲೆ, ಸತ್ಯಹರಿಶ್ಚಂದ್ರ, ಭಕ್ತಪ್ರಹ್ಲಾದ, ಪ್ರೇಮ ಸತ್ಯಭೋಜ, ನಳಚರಿತ್ರೆ, ಮಾರ್ಕಂಡೇಯ, ನಾಟಕಗಳಲ್ಲಿ ಅಭಿನಯಿಸಿ ಜನರಿಗೆ ಮನರಂಜನೆ ನೀಡುತ್ತಾರೆ. ವೃತ್ತಿಗಾಯಕರು, ನಾಟಕಕಾರರು, ಹರಿಕತೆ ಮಾಡುವುದರಲ್ಲಿಯೂ ಸಹ ಇವರು ಜನ ಮೆಚ್ಚುಗೆ ಪಡೆದಿದ್ದಾರೆ.

ದೊಂಬಿದಾಸ ಸಮುದಾಯವು ತಮ್ಮ ನಿತ್ಯ ಬದುಕಿನಲ್ಲಿ ಮಾಮೂಲಿನ ಕಸುಬು ಮಾತ್ರ ಮಾಡುವುದಿಲ್ಲ. ಇದರ ಜೊತೆಗೆ ಉಪಕಸುಬನ್ನು ಮೈಗೂಡಿಸಿಕೊಂಡು ತಮ್ಮ ಕೌಶಲ್ಯ ಪ್ರದರ್ಶನವನ್ನು ತೋರಿಸಿದ್ದಾರೆ. ಬೇಟೆ ಆಡುವುದು, ಹಂದಿಗಳನ್ನು ಹಿಡಿಯುವುದು, ಗವುಜಗನ ಹಕ್ಕಿ ಹಿಡಿಯುವುದು, ಇವರಿಗೆ ತುಂಬ ಪ್ರಿಯವಾದ ಹಂದಿಗಳನ್ನು ಬೇಟೆಯಾಡುವ ಸಂದರ್ಭದಲ್ಲಿ ಸಹ ಮಾಡಲು ನಾಯಿಗಳನ್ನು ಸಾಕುತ್ತಾರೆ. ಈ ಉಪಕಸುಬಿನ ಜೊತೆಗೆ, ದೊಂಬಿದಾಸರ ಹೆಂಗಸರು ಕುರಿ ಸಾಕಾಣಿಕೆ, ಎಲೆಕಟ್ಟುವುದು, ಮೊದಲಾದ ಕೆಲಸದಲ್ಲಿ ತೊಡಗುವ ಮೂಲಕ ಜೀವನ ಕಳೆಯುತ್ತಾರೆ.

’ದೊಂಬಿದಾಸರು’ ಎಂದು ತಮ್ಮ ಸಮುದಾಯವನ್ನು ಸಾರ್ವಜನಿಕವಾಗಿ ಗುರ್ತಿಸಿ-ಕೊಳ್ಳಲು ಇವರು ಹಿಂಜರಿಯುತ್ತಾರೆ. ಬದಲಾಗಿ ತೆಲಗು ಜಂಗಮರು ಅಥವಾ ತೆಲಗು ಬಣಜಿಗರು ಎಂದು ತಾವು ಗುರ್ತಿಸಿಕೊಳ್ಳುವ ಮೂಲಕ, ಬದುಕುತ್ತಿರುವ ಇವರು; ತಮ್ಮ ಆರಾಧ್ಯದೈವ ವೈಷ್ಣವ ಭಕ್ತಸಮುದಾಯಕ್ಕೆ ಸೇರಿರುವ ವ್ಯಕ್ತಿಗಳ ಉಪಯೋಗಕ್ಕಾಗಿ ದೇವಾರಾಧನೆ ಮಾಡುತ್ತಾರೆ ಮತ್ತು ನರ್ತಿಸುತ್ತಾರೆ. ಕುಟುಂಬದ ಹಿರಿಯ ಮಗ ಈ ವೃತ್ತಿಯನ್ನು ಮಾಡುತ್ತಾನೆ. ಶನಿವಾರ ಇವರಿಗೆ ಶುಭದಿನ. ಸೋಮವಾರ ಇತರೆ ಜನಾಂಗದವರ ಹಾಗೆ ಎತ್ತುಗಳನ್ನು ಹೊಲವನ್ನು ಉಳುಮೆ ಮಾಡಲು ಕಟ್ಟುವುದಿಲ್ಲ. ಮುಂಗಾರು ಮಳೆ ಹೊಯ್ದ ನಂತರ ಹೊನ್ನಾರು ಇವರು ಕಟ್ಟುತ್ತಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಏನಾದರೊಂದು ಮಂಗಳಕಾರ್ಯ ನಡೆಯಬೇಕು ಎಂಬ ನಂಬಿಕೆಯಿಂದ ಹೊಸ ಮನೆ ಕಟ್ಟುವುದು, ಹೊಸ ಬಾವಿ ತೋಡಿಸುವುದು ಇತ್ಯಾದಿ. ಹೊಸ ಬಾವಿಯನ್ನು ತೊಡಿಸಿದರಂತೂ, ಅಲ್ಲಿಂದ ಮೊದಲು ನೀರು ತಂದು ಗಂಗೆಯನ್ನು ಪೂಜಿಸುತ್ತಾರೆ. ಕೃಷಿಯಲ್ಲಿ ಬೆಳೆಗಲ ಬೀಜವನ್ನು ಬಿತ್ತುವುದಂತೂ ಕೆಲವು ಮಳೆ, ನಕ್ಷತ್ರಗಳ ಆಧಾರದ ಮೇಲೆಯೆ. ನಿದರ್ಶನವಾಗಿ ಹೇಳುವುದಾದರೆ ಜಮೀನಿನಲ್ಲಿ ಹರಳನ್ನು ರೋಹಿಣಿಯಲ್ಲಿ, ರಾಗಿಯನ್ನು ಮುಖ ಮಳೆಯಲ್ಲಿಯೂ ಮತ್ತು ಭತ್ತವನ್ನು ಆರ್ದ್ರಾ ಮಳೆಯಲ್ಲಿಯು ಬಿತ್ತುವುದು ಇವರಿಗೆ ರೂಢಿಯಾಗಿದೆ. ಕಸುಬು ನಿರ್ವಹಿಸುವಾಗ, ಧರ್ಮ ದೇವತೆಗಳ ಬಗ್ಗೆ ವಿಶೇಷ ನಂಬಿಕಯನ್ನಿಟ್ಟುಕೊಂಡು ಕಾಲ ಕಳೆಯುತ್ತಲೆ; ವಿವಿಧ ವೃತ್ತಿಯನ್ನು ನಂಬಿ ಬದುಕುತ್ತಿರುವುದು ನಿಜಕ್ಕೂ ಸಂತೋಷವಾದ ಸಂಗತಿ ಎನ್ನಬಹುದು.

ಉಪಚಾರ

ದೊಂಬಿದಾಸರು ಇತರ ಶೂದ್ರವರ್ಗದವರಂತೆಯೆ, ಮಾಂಸಾಹಾರಿಗಳು. ಅಂತೆಯೆ ಸಸ್ಯಹಾರಿಗಳು ಹೌದು. ಇವರು ಹಸು, ಇಲಿ, ಮೊಸಳೆ ಮತ್ತು ನವಿಲು ಮಾಂಸವನ್ನು ತಿನ್ನುವುದಿಲ್ಲ. ಆದರೆ, ಹೆಂಡ, ಸಾರಾಯಿಯನ್ನು ಕೆಲು ಜನರು ಮಾತ್ರ ಕುಡಿಯುತ್ತಾರೆ. ಇವರಿಗಿಂತ ಮೇಲ್ವರ್ಗದವರಾದ ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು ಮೊದಲಾದವರ ಮನೆಗಳಲ್ಲಿ ಹಬ್ಬ ಹರಿದಿನಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಊಟ ಮಾಡುತ್ತಾರೆ. ಇವರು ಭಿಕ್ಷೆ ಬೇಡಿ ತಂದ ವಿವಿಧ ಬಗೆಯ ಕಾಳು ಕಡ್ಡಿಗಳಿಂದ ಅಡುಗೆ ಮಾಡಿಕೊಳ್ಳುತ್ತಾರೆ. ಕೆಲವು ಸಲ ರೊಟ್ಟಿ, ಅನ್ನವನ್ನು ಬೇಡಿ ತರುವುದು ಕೂಡ ಉಂಟು. ಇವರು ಕುರಿ, ಕೋಳಿ, ಮೀನು, ಕೌಜುಗ, ಅಡವಿಕೋಳಿ ಇನ್ನೂ ಮುಂತಾದ ಪ್ರಾಣಿಪಕ್ಷಿಗಳನ್ನು ಮಾಂಸವನ್ನು ತಿನ್ನುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಶೂದ್ರವರ್ಗದವರು ಬಳಸುವ ಆಹಾರ ಪದ್ಧತಿಯಂತೆಯೇ ಇವರ ಊಟ ಉಪಚಾರ ವಿಧಾನವಿದೆ ಎನ್ನಬಹುದು

ಉಡುಗೆ

ದೊಂಬಿದಾಸ ಸಮುದಾಯದವರು ಬಟ್ಟೆ ಧರಿಸುವುದು ಇತರ ಹಿಂದೂ ಜಾತಿಯವರ ಹಾಗೆಯೆ. ಗಂಡಸರು ಹಾಡುಗಾರಿಕೆ ಸಂದರ್ಭದಲ್ಲಿ ಮಾತ್ರ ತಲೆಗೆ ಬಣ್ಣದ ರುಮಾಲು, ನಿಲುವಂಗಿ, ಮೇಲೊಂದು ಕೋಟು ಮತ್ತು ದೋತ್ರ ತೊಟ್ಟ ಹೆಗಲ ಮೇಲೆ ಶಾಲು ಹೊದ್ದು ಜೋಳಿಗೆ ನೇತುಹಾಕಿಕೊಂಡು, ಬಲಗೈಯ್ಯಲ್ಲಿ ಏಕತಾರಿ, ಎಡಗೈಯಲ್ಲಿ ಚಿಟಕಿ ಹಿಡಿದಿರುತ್ತಾರೆ. ಹೆಂಗಸರು ಹಿಂದೂ ಹೆಂಗಸರಂತೆಯೆ ಅಚ್ಚಗೆಂಪು ಕುಂಕುಮ, ಕಾಲುಂಗುರ, ಗಾಜಿನ ಬಳೆಯನ್ನು ತೊಟ್ಟಿರುತ್ತಾರೆ. ಇದರರ್ಥವೇನೆಂದರೆ ಈ ಹೆಂಗಸರು ವಿವಾಹವಾಗಿರುವವರು ಎಂದರ್ಥ. ದೇಹದ ಮೇಲೆ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ವಿಶೇಷವಾಗಿ ಕೈ, ಭುಜ, ಹಣೆ, ಗಲ್ಲ ಮತ್ತು ಕೆನ್ನೆ ಮೊದಲಾದ ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಂಡರೆ ತಮ್ಮ ಸೌಂದರ್ಯ ಹೆಚ್ಚುತ್ತದೆ ಎನ್ನುವಂತಹದ್ದು; ಕೆಲವರ ಅಭಿಪ್ರಾಯ ಶಂಖದ ತಟ್ಟೆ, ತುಳಸಿ, ಅರಳಿದ ಹೂವು, ರಥ, ಬಾಳೆಮರದ ಹಚ್ಚೆಯನ್ನು ಇವರು ಹಾಕಿಸಿಕೊಳ್ಳುತ್ತಾರೆ. ಹೆಂಗಸರು ಸೀರೆ ಉಟ್ಟು ಬಲಕ್ಕೆ ಸೆರಗು ಹಾಕಿಕೊಳ್ಳುತ್ತಾರೆ. ಗಂಡಸರು ಹಾರೋಗಚ್ಚೆ ಹಾಕಿ ಮೇಲೆ ನಿಲುವಂಗಿ ಧರಿಸುತ್ತಾರೆ. ದೇವರ ಹೆಸರಿನಲ್ಲಿ ಶಂಖ ಚಕ್ರಕಾರದ ಹಚ್ಚೆಯನ್ನು ವಿಶೇಷವಾಗಿ ಗಂಡಸರು ಹಾಕಿಸಿಕೊಳ್ಳುವ ಮೂಲಕ ತಮ್ಮ ಸೌಂದರ್ಯ ಪ್ರಿಯತೆಯನ್ನು ಹೆಚ್ಚು ಇಷ್ಟಪಡುತ್ತಲೆ; ತಮ್ಮ ಉಡುಪು ವಸ್ತ್ರಾಲಂಕಾರವನ್ನು ಮಾಡಿಕೊಳ್ಳುತ್ತಾರೆ.

ತೊಡುಗೆ (ಆಭರಣ)

ವಿಶೇಷವಾಗಿ ಮಹಿಳೆಯರು ಆಭರಣಗಳು ತೊಡುತ್ತಾರೆ. ಮೂಕು ಘಟಿಕಾ(ಮೂಗುಬಟ್ಟು), ನಲ್‌ಗಾಜಲು (ಕರೀಬಳೆ), ಕಮುಲು(ಓಲೆ), ಕಾಲಂದ್ಗುಲು(ಕಾಲಂದಿಗೆ), ಸುಮರ‍್-ಕುಪ್ಸ(ಕುಪ್ಗೆ), ಸಿಮ್ಮುನ ಮುರಾಲು (ಸಿಂಹನ ಮುರಾವು) ಎಂಬ ಕಿವಯಾಭರಣ, ಕಡಗಾಲು, ಒಡ್ಯಾಣಮು, ಕಾಲುಂಗ್ರಾಲು ಇತ್ಯಾದಿಯನ್ನು ಬಳಸುತ್ತಾರೆ. ಹೆಂಗಸರು, ಹಲ್ಲಿಗೆ ಕರುಕಾಯ್‌ಪುಡಿ ಹಾಕಿಕೊಂಡು, ಹಲ್ಲುಗಳನ್ನು ಕಪ್ಪು ಮಾಡಿಕೊಳ್ಳುತ್ತಾರೆ. ಹಣೆ, ಮುಂಗೈ, ರಟ್ಟೆಗಳಿಗೆ ಹಚ್ಚೆ ಹಾಕಿಸಿಕೊಂಡು, ತಮ್ಮ ಮೈಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಲೆ ತಮ್ಮ ಸೌಂದರ್ಯ ಕಲಾವಂತಿಕೆಯನ್ನು ಮೆರೆಯುತ್ತಾರೆ.

ಹಬ್ಬಹರಿದಿನಗಳು

ದೊಂಬಿದಾಸ ಜನಾಂಗವು ವೈಷ್ಣವ ಸಂಪ್ರದಾಯಕ್ಕೆ ಸೇರಿದವರು. ತಿರುಪತಿ ವೆಂಕಟೇಶ್ವರ ಇವರ ಕುಲದೇವರು. ಜೊತೆಗೆ ಆಂಜನೇಯ, ಈಶ್ವರ, ಕೆಂಚರಾಯ ಮೊದಲಾದ ಗರಡು ದೇವರುಗಳನ್ನು ಆರಾಧಿಸುತ್ತಾರೆ. ಕುಂದೂರಮ್ಮ, ಮಳೆಯಮ್ಮ, ಯಲ್ಲಮ್ಮ, ಕಬ್ಬಾಳಮ್ಮ, ಮಾರಮ್ಮ, ಹುಲಿಯಮ್ಮ, ಮೊದಲಾದ ಗ್ರಾಮದೇವತೆಗಳನ್ನು ಪೂಜಿಸುವ ಮೂಲಕ, ತಮ್ಮ ನಿಜವಾದ ಭಕ್ತಿ ಸ್ವರೂಪವನ್ನು ತೋರಿಸುತ್ತಾರೆ. ಹೆಣ್ಣು ದೇವತೆಗಳಿಗೆ ಪ್ರಾಣಿಯನ್ನು ಬಲಿ-ಕೊಡುವ ಪದ್ಧತಿ ಈ ಸಮುದಾಯದಲ್ಲಿದೆ. ಇವರು ವಿಶೇಷವಾಗಿ ಆಚರಿಸುವುದು, ಪಿತೃಪಕ್ಷ ಹಬ್ಬವನ್ನು. ಸತ್ತ ಹಿರಿಯರಿಗೆ ಅನ್ನ ಹಾಕುವುದೇ ಈ ಹಬ್ಬದ ವಿಶೇಷವಾಗಿರುತ್ತದೆ. ಆ ಮೂಲಕ ಎಡೆ(ಅನ್ನ) ಹಾಕಿ, ಹಿರಿಯರಿಗೆ ಸದ್ಗತಿ ದೊರೆಯಲಿ ಎಂಬ ಪ್ರಾರ್ಥನೆಯನ್ನು ಮಾಡುತ್ತದೆ. ಈ ಹಬ್ಬ ಮಾತ್ರ ಅವರಿಗೆ ತುಂಬ ವಿಶೇಷ. ಇತರ ಹಿಂದೂಗಳಂತೆಯೆ ಇವರು ಕೂಡ ದೀಪಾವಳಿ, ಯುಗಾದಿ, ಮಕರಸಂಕ್ರಾಂತಿ, ಈ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮೂಲಕ ಯಾವುದೇ ಆಚರಣೆಯಾಗಲಿ ಅವನ್ನು ಅತಿ ಶ್ರದ್ಧೆ ಮತ್ತು ನಿಷ್ಟೆಯಿಂದ ಮಾಡುತ್ತಾರೆಂಬುದು ಇಲ್ಲಿ ಮುಖ್ಯವಾದ ಅಂಶವಗಿದೆ.

ದೊಂಬಿದಾಸ ಜನಾಂಗದ ಸಾಮಾಜಿಕ ಸ್ಥಿತಿಗತಿ ಮತ್ತು ಇತರ ನಂಬಿಕೆಗಳು

ಜಾತಿ ಮತ್ತು ಉಪಜಾತಿಗಳು

ದೊಂಬಿದಾಸ ಜನಾಂಗವನ್ನು “ಮೈಸೂರು ಟ್ರೈಬ್ಸ್ ಆಂಡ್ ಕ್ಯಾಸ್ಟಸ್‌” ಎಂಬ ಗ್ರಂಥದಲ್ಲಿ ಬಲಿಜ ಜನಾಂಗದ ಒಂದು ಉಪಜಾತಿ ಎಂದು ಪರಿಗಣಿಸಲಾಗಿದ್ದುಲ; ಇವರನ್ನು ’ದಂಡಿದಸರು’ ಎಂದು ಗುರುತಿಸಲಾಗಿದೆ.

ಉಪಜಾತಿ: ದೊಂಬಿದಾಸ ಜನಾಂಗದವರ ಹಾಗೆಯೇ, ಉಪಜಾತಿಗಳು ಕೂಡ ಈ ಸಮುದಾಯದಲ್ಲಿ ಕಂಡುಬರುತ್ತವೆ. ದಂಡಿಗದಾಸರು, ಹೊಲೆದಾಸರು, ಹಾಡುದಾಸರು, ಬೇಡದಾಸರು, ಚನ್ನದಾಸರು, ಗೊಲ್ಲದಾಸರು, ಪಟ್ಟಿದಾಸರು, ತೆಲಗುದಾಸರು, ಗಂಡುದಾಸರು, ತಿರುಮಲದಾಸರು, ಗರುಡದಾಸರು, ಗೋಪಾಲದಾಸರು, ಶಂಖದಾಸರು, ಚಕ್ರಾವಧಿದಾಸ ಮೊದಲಾದ ಪಂಗಡಗಳಿವೆ. ಈಸಮುದಾದಯ ಅರೆ-ಅಲೆಮಾರಿಗಳಾದ ಕಾರಣದಿಂದ, ಇನ್ನೂ ಕೆಲವು ಒಳಪಂಗಡಗಳನ್ನು ಒಳಗೊಂಡಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕೋಲೆಬಸವದಾಸರು, ಏಡುಮಲಿ ಸೆಟ್ಟೋಡು, ಏಡುಕೋಮ್ಟೇಡು, ಬಮ್ಮನ ಕಲ್ಲೋಡು, ಏಡುಪಡುತ್ಲೋಡು, ಸ್ಯಾಮ್‌ಕಟ್ಟೋಡು, ತಿರುಮ್ಲೋಡು, ಗ್ವಾದಾವಾಡು ಮೊದಲಾದವುಗಳಿವೆ. ಅದರಲ್ಲಿ ದೊಂಬಿದಾಸ ಸಮುದಾಯವು ’ಏಡುಪಡುತ್ಲೋಡು’ ಗುಂಪಿಗೆ ಸೇರಿದ ಜನಾಂಗ-ವಾಗಿದೆ. ಒಟ್ಟಿನಲ್ಲಿ ಚೆನ್ನದಾಸರ‍್ ಸಮುದಾದಯದಲ್ಲಿ ದೊಂಬಿದಾಸರು, ದಾಸ, ದಾಸಯ್ಯ, ಉಪಜಾತಿಗಳಿದ್ದು; ಇವು ಚನ್ನದಾಸರ‍್ ಪದದ ಪರ್ಯಾಯ ಪದಗಳಾಗಿ ಬಳಕೆಯಾಗುತ್ತಿದೆ. ದೊಂಬಿದಾಸರು ಮತ್ತು ಚೆನ್ನದಾಸರು ಒಂದೇ ಮೂಲದವರಾಗಿದ್ದು; ಆಚಾರ-ವಿಚಾರಗಳು, ಸಂಪ್ರದಾಯಗಳು, ಬೆಡಗು, ವೃತ್ತಿ, ಪೂಜಿಸುವ ದೇವರು, ಆಹಾರಪದ್ಧತಿ, ವೈವಾಹಿಕ ಸಂಬಂಧಗಳು ಒಂದೇ ಆಗಿದ್ದು ಈ ಎರಡು ಸಮುದಾಯಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲವೆಂದು ಸಮಾಜಶಾಸ್ತ್ರಜ್ಞರು ತಮ್ಮ ಅಧ್ಯಯನದಿಂದ ದೃಢಪಡಿಸಿದ್ದಾರೆ ಎನ್ನಲಾಗಿದೆ.