ಬೆಡಗು (ವಂಶ)

ಈ ಸಮುದಾಯದಲ್ಲಿ ನೂರಕ್ಕೂ ಹೆಚ್ಚು ಬೆಡಗುಗಳಿವೆ. ಅವುಗಳಲ್ಲಿ ಮುಖ್ಯವಾಗಿ ಕೆಲವನ್ನು ಮಾತ್ರ ಹೆಸರಿಸಬಹುದು. ಪಡಥ್ಲೋಡು, ಪಾಕಲೋಳ್ಳು, ಬಂಗಾರೋಳ್ಳು, ಅರ-ವೋಳ್ಳು, ತಮಟಮೊಳ್ಳು, ಅಕ್ಕನಲ್ಲೊಳ್ಳು, ಕುಂದೊರೋಳ್ಳು, ಪಸುಲ್ಯಾಟೋಳ್ಳು, ಗುರುಮೊಳ್ಳು, ಮೊಗಸಾಲೋಳ್ಳ, ಕಂಚುಮೊಳ್ಳು, ಮಿರಾಲೋಳ್ಳು, ದತ್ರಾತ್ರಯೋಳ್ಳು, ದೋದಾವೊಳ್ಳು, ನರಾಲೊಳ್ಳು, ಕುಂದ್ರೊಳ್ಳು, ಅಂಬಿಶೆಟ್ಟೊಳ್ಳು, ಜಾಗಟಿವೊಳ್ಳು, ಮತ್ತಿಮಶೆಟ್ಟೊಳ್ಳು, ಆಚಾರಿವೊಳ್ಳು, ಸಿಂತೊಳ್ಳು, ಹೆಂಡನಪಲೋಳ್ಳು, ಜಂಗಾಲೋಳ್ಳು, ಸೀದಾವೊಳ್ಲೂ, ಗಾಲೋಳ್ಳು, ನಂದ್ಯಾಲು ಇವೆ ಮೊದಲಾದ ಬೆಡಗು(ವಂಶ) ಈ ಸಮುದಾಯದಲ್ಲಿರುವುದನ್ನು ಕಾಣಬಹುದಾಗಿದೆ.

ವಿವಾಹವಿಚ್ಛೇದನದಾಂಪತ್ಯ

ದೊಂಬಿದಾಸ ಜನಾಂಗದಲ್ಲಿ ವಿವಾಹ ಪದ್ಧತಿ ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಂತೆಯೇ ನಡೆಯುತ್ತದೆ. ವೀಳ್ಯ ಬದಲಾಯಿಸಿಕೊಳ್ಳುವ ಮೂಲಕ ಮದುವೆ ಮುಹೂರ್ತ ಆರಂಭವಾಗುತ್ತದೆ. ಇದನ್ನು “ವಕ್ಕಾಕುಶಾಸ್ತ್ರ ಅಥವಾ ವಕ್ಕಲುಶಾಸ್ತ್ರ” ಎಂದು ಕರೆಯುತ್ತಾರ. ಇದು ಮದುವೆಯ ನಿಶ್ಚಿತಾರ್ಥ, ಕುಲಪುರೋಹಿತ ಮತ್ತು ಕುಲಸ್ಥರು ಸೇರಿ ನಡೆಸುವ ಶಾಸ್ತ್ರವಗಿರುತ್ತದೆ. ಅಲ್ಲದೆ, ಮದುವಣಗಿತ್ತಿಯ ಉಡುಗೆಯ ಮಡಿಲಿನಲ್ಲಿ ಕೆಲವು ಶುಭವಸ್ತುಗಳನ್ನಿಡುವುದರ ಮೂಲಕ ಈ ಕಾರ್ಯ ನಡೆಯುತ್ತದೆ. ಮದುವೆಯ ಸಂದರ್ಭದಲ್ಲಿ ಇವರು ಬ್ರಾಹ್ಮಣ ಪುರೋಹಿತರನ್ನು ಕರೆಸುವುದಿಲ್ಲ. ವಧುವಿನ ಮನೆಯಲ್ಲಿಯೇ ಮದುವೆ ನಡೆಯುತ್ತದೆ. ಮದುವೆಯ ದಿವಸ ಹಸಿರು ಚಪ್ಪರ ಹಾಕಿ, ಹಾಲು ಕಂಬ ನೆಟ್ಟಿರುತ್ತಾರೆ. ಸಾಮಾನ್ಯವಾಗಿ, ಗಂಡನ್ನು, ಹೆಣ್ಣಿನ ಮನೆಗೆ ಕರೆದುಕೊಂಡು ಬಂದ ದಿವಸ ಚಪ್ಪರದ ದಿನವಾಗಿರುತ್ತದೆ. ಅಂದು ಹೆಣ್ಣು ಗಂಡುಗಳನ್ನು ಹಸೆಮಣೆ ಮೇಲೆ ಕೂರಿಸಿ ಮುತ್ತೈದೆಯೊಬ್ಬಳು ಎರಡು ಒನಕೆಗಳನ್ನು ಪೂಜಿಸಿ ಅವನ್ನು ಎರಡು ಕೈಗಳಲ್ಲು ಕತ್ತರಿಯ ಆಕಾರಕ್ಕೆ ಜೋಡಿಸಿ ಹಿಡಿದುಕೊಂಡು ಎಡಗೈ ಒನಕೆಯನ್ನು ಹೆಣ್ಣಿನ ಭುಜಕ್ಕೂ ಬಲಗೈ ಒನಕೆಯನ್ನು ಗಂಡಿನ ಭುಜಕ್ಕೂ ತಾಕಿಸುತ್ತ ಮೂರು ಸಲ ಅದಲು ಬದಲು ಮಾಡುತ್ತಾಳೆ. ಅನಂತರ ಹೆಣ್ಣು ಗಂಡುಗಳ ಮುಂದೆ ಒರಳು ಕಲ್ಲನ್ನು ಮಡಗಿ ಮೂರು ಜನ ಮುತ್ತೈದೆಯರು ಬತ್ತ ಕುಟ್ಟುವ ಶಾಸ್ತ್ರ ಮಾಡುತ್ತಾರೆ. ಈಗ ಹೆಣ್ಣು ಗಂಡುಗಳು ಒಂದೊಂದು ಒನಕೆಯನ್ನು ಹಿಡಿದು ಮೂರು ಸಲ ಕುಟ್ಟಿದ ಮೇಲೆ ಮುತ್ತೈದೆಯರು ಶಾಸ್ತ್ರದ ಬತ್ತ ಕುಟ್ಟುತ್ತಾರೆ. ಅನಂತರ ಮಣ್ಣುಂಡೆ ಶಾಸ್ತ್ರ. ಪೂಜಿಸಿರುವ ಕೆಮ್ಮಣ್ಣಿನ ಉಂಡೆಗಳನ್ನು ಚಪ್ಪರದ ಪ್ರತಿ ಕಂಬಕ್ಕೂ ಒಂದೊಂದರಂತೆ ಇಡುತ್ತಾರೆ. ಇದಿಷ್ಟು ಮೊದಲಶಾಸ್ತ್ರ, ಎರಡನೆಯ ದಿನ ಧಾರೆ. ವೀಳ್ಯೆದೆಲೆ ಮೇಲೆ ಗಂಡಿನ ಕೈಗೆ ಕಾಯಿ, ಹೆಣ್ಣಿನ ಕೈಗೆ ಬಾಳೆಹಣ್ಣಿನ ಚಿಪ್ಪು ಇರಿಸಿ ಹಾಲು ಬಿಡುತ್ತಾರೆ. ಜನಾಂಗದ ಅಥವಾ ಕುಲದ ಮುಖ್ಯಸ್ಥ ಒಬ್ಬನಿರುತ್ತಾನೆ. ಈತನನ್ನು ಪಿನ್ನಪೆದ್ದ ಎಂದು ಕರೆಯುತ್ತಾರೆ. ಇವನು ವಧುವರರ ಕಾಲ್ಬೆರಳಿಗೆ ಉಂಗುರ ತೊಡಿಸುತ್ತಾನೆ. ಜೊತೆಗೆ ಅರಿಶಿನ ಕುಂಕುಮ, ಅಕ್ಷತೆ, ವೀಳ್ಯದೆಲೆ,  ಅಡಕೆ, ತಾಳಿ ಮುಂತಾದ ವಸ್ತುಗಳನ್ನು ತಟ್ಟೆಯೊಂದರಲ್ಲಿಟ್ಟು ಹಿರಿಯ ಕೈಯ್ಯಲ್ಲೆಲ್ಲ ನಮಸ್ಕಾರ ಮಾಡಿಸಿ ಗಂಡಿನ ಕೈಗೆ ತಂದು ಕೊಡುತ್ತಾನೆ. ಗಂಡು ಮತ್ತು ಹೆಣ್ಣನ್ನು ಎದುರು ಮುಖಮಾಡಿ ನಿಲ್ಲಿಸಿ, ಜೊತೆಗೆ ಗಂಡು ಹೆಣ್ಣುಗಳಿಬ್ಬರು ಕೂಡ ಒಬ್ಬರನ್ನೊಬ್ಬರನ್ನು ನೋಡಿದುದಕ್ಕಾಗಿ ಅವರಿಬ್ಬರ ಉತ್ತರ ಪಡೆಯುತ್ತಾನೆ. ನಂತರ ಗಂಡು ತಾಳಿಯನ್ನು ಮೂರು ಗಂಟು ಹಾಕಿ ಕಟ್ಟುವ ಮೂಲಕ ಗಂಡು-ಹೆಣ್ಣುಗಳಿಬ್ಬರು ದಂಪತಿಗಳಾಗಿ ಹೊಸಬಾಳಿಗೆ ಪಾದಾರ್ಪಣೆ ಮಾಡುತ್ತಾರೆ.

ಕೂಡಾವಳಿ(ಕಟ್ಟಿಂಪು) ಮತ್ತು ವಿಚ್ಛೇದನ

ಈ ಸಮುದಾಯದಲ್ಲಿ ಗಂಡಸಿಗೆ ಮೊದಲ ಹೆಂಡತಿ ತೀರಿಕೊಂಡರೆ, ಎರಡನೆ ಮದುವೆ ಆಗಬಹುದು ಅಥವಾ ಈ ಮದುವೆಯು ಕೂಡ ಶಾಸ್ತ್ರಬದ್ಧವಾಗಿಯೆ ನಡೆಯಬಹುದು. ಇಲ್ಲದಿದ್ದರೆ ಕಟ್ಟಿಂಪು (ಕೂಡಾವಳಿ) ಆಗಬಹುದು. ಅಂದರೆ ಎರಡನೆಯ ಹೆಂಡತಿ ವಿಧವೆ ಅಥವಾ ಹಿಂದಿನ ಗಂಡನನ್ನು ಬಿಟ್ಟವಳು ಆಗಿರುತ್ತಾಳೆ. ಗಂಡನನ್ನು ಬಿಟ್ಟವಳಾದಾಗ ಎರಡನೆ ಗಂಡ ಅವಳ ಹಿಂದಿನ ಗಂಡನಿಗೆ ನಷ್ಟವನ್ನು ತುಂಬಿಕೊಡಬೇಕಾದ ನಿರ್ಬಂಧವು ಈ ಸಮುದಾಯದಲ್ಲಿದೆ.

ವಿಚ್ಛೇದನ ಪದ್ಧತಿ

ಸಾಮಾನ್ಯವಾಗಿ ಗಂಡ-ಹೆಂಡತಿಯರಲ್ಲಿ ಮನಸ್ತಾಪ ಎದುರಾದಾಗ ಪತ್ನಿಯ ದುರ್ನಡತೆಗಾಗಿ ಪತಿಯು ಆಕೆಯ ತಾಳಿಯನ್ನು ಕಿತ್ತುಕೊಂಡು ಕುಲಸ್ಥನಿಗೆ ಎರಡು ರೂಪಾಯಿ ದಂಡವನ್ನು ನೀಡಿದ ನಂತರ ವಿಚ್ಛೇದನ ಪಡೆಯಬಹುದು. ಇಷ್ಟಪಟ್ಟರೆ ಇವಳು ಮತ್ತೆ ಪುನರ‍್ ವಿವಾಹವಾಗುವ ಅವಕಾಶವಿದೆ. ಇವಳನ್ನು ಶಾಸ್ತ್ರದಡಿ ಮದುವೆ ಆಗುವ ವ್ಯಕ್ತಿಯು ಹಿಂದಿನ ಗಂಡನ ಖರ್ಚುನ್ನು ತುಂಬಬೇಕಾಗುತ್ತದೆ.

ದಾಂಪತ್ಯಹೆಣ್ಣಿನ ಸ್ಥಾನಮಾನ

ದೊಂಬಿದಾಸ ಜನಾಂಗದಲ್ಲಿ ವಿಧವಾ ವಿವಾಹ ಪದ್ಧತಿ ರೂಢಿಯಲ್ಲಿದೆ. ವಿಧವೆಯು ತನ್ನ ಪತಿಯ ಸೋದರನ್ನು ಬಿಟ್ಟು ಯಾರನ್ನಾದರೂ ವಿವಾಹವಾಗಬಹುದು. ಕೊಡಿಕೆಯಡಿ ವಿಧವೆಯು ಮತ್ತೆ ವಿವಾಹವಾಗಲು ಅವಕಾಶವಿದೆ. ಬುದ್ದ ತಾಳಿ ಎಂದು ಕರೆಯುವ ತಾಳಿಯನ್ನು ಇವಳ ಕುತ್ತಿಗೆಗೆ ಕಟ್ಟಲಾಗುತ್ತದೆ. ಪುನರ‍್ ವಿವಾಹದ ನಂತರ ಈಕೆಯನ್ನು ತನ್ನ ಸತ್ತ ಪತಿಯ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಹೊಂದುವ ಹಾಗಿಲ್ಲ.

ಹೆಣ್ಣು ಮೊದಲು ಬಸುರಿಯಾದಗ ಹೆರಿಗೆ ಸಮಯದಲ್ಲಿ ತಡೆಕಾಯಿ ಎಂಬ ಹೆಸರಿನಿಂದ ಒಂದು ತೆಂಗಿನಕಾಯನ್ನು ನಿವಾಳಿಸಿ ಒಡೆಯುತ್ತಾರೆ. ಮಗು ಹುಟ್ಟಿದ ಕೂಡಲೆ ಸೂಜಿಯನ್ನು ಕಾಯಿಸಿ ಪಕ್ಕೆ, ಹಣೆ, ಮುಂಗೈ, ಮುಂಗಾಲುಗಳಿಗ ಚಿಟಿಕೆ ಹಾಕುತ್ತಾರ. ಹನ್ನೆರಡನೆಯ ದಿನದಲ್ಲಿ ನಾಮಕರಣ ಮಾಡುತ್ತಾರೆ. ಅಂದು ದಾಸಪ್ಪನನ್ನು ಕರೆಸಿ ಶಂಖ, ಜಾಗಟೆ ಊದಿಸಿ ಮೀಸಲು ತೆಗೆಸಿ ವೆಂಕಟರಮಣ ಸ್ವಾಮಿ ಪೂಜೆ ಮಾಡಿ ಮಾಡಿದ ಅಡಿಗೆಯನ್ನೆಲ್ಲ ಎಡೆಮಾಡಿಸುತ್ತಾರೆ. ದಾಸಪ್ಪ ನಿರ್ಧರಿಸಿದ ಹೆಸರನ್ನು ಗಟ್ಟಿಯಾಗಿ ಹೇಳಿ ಶಂಖವನ್ನು ಊದಿ ಜಾಗಟೆ ಬಾರಿಸುತ್ತಾನೆ. ತಿಂಗಳವರೆಗೆ ತಣ್ಣೀರನ್ನು ಮುಟ್ಟದೇ ಇದ್ದ ಬಾಣಂತಿ ಅನುಕೂಲ ದಿನದಲ್ಲಿ ಗಂಗೆ ಪೂಜೆ ಮಾಡಿ ದಿನನಿತ್ಯದ ಕೆಲಸವನ್ನು ಆರಂಭಿಸುತ್ತಾಳೆ. ಗರ್ಭಿಣಿ ಮಹಿಳೆಗೆ ಯಾವುದೇ ವಿಶೇಷ ಆಚರಣೆಯನ್ನು ವಿಶೇಷವಾಗಿ ಮಾಡುವುದಿಲ್ಲವಾದರೂ, ಈಕೆಯ ಸುಖ ಪ್ರಸವನಕ್ಕಾಗಿ ಆಕೆ ಗಂಡನು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ. ಗರ್ಭಾವಸ್ಥೆಯ ಅವಧಿಯಲ್ಲಿಪತಿಯು ಯಾವುದೇ ಪ್ರಾಣಿಯನ್ನು ಕೊಲ್ಲುವುದು, ಕತ್ತರಿಸುವುದು ಮತ್ತು ಸತ್ತವರನ್ನು ಹೊರುವ ಪದ್ಧತಿ ಇರುವುದಿಲ್ಲ. ಸುಲಭ ಹೆರಿಗೆಯನ್ನು ನಡೆಸಿಕೊಡಲು ಗರ್ಭಿಣಿಯ ಅನೇಕ ಇಷ್ಟ ಆಸೆಗಳನ್ನು ಈಡೇರಿಸುವುದು ಫಲಕಾರಿಯಾದ ವಿಷಯವೇ ಆಗಿದೆ. ತಾಯಿತನವನ್ನು ಕಟ್ಟಿಕೊಳ್ಳುವುದು ಒಂದು ನಿಗದಿತ ಸ್ಥಳದಲ್ಲಿ ಅಂತಿಕೊಂಡು ಕಲ್ಲನ್ನು ತಳ್ಳುವುದು, ಕಪ್ಪು ಪೌಡರ್‌ನಿಂದ ಗನ್‌ಫೈರ‍್ ಮಾಡುವುದು ಸಾಲಾಗಿ ನಿಂತ ಮಹಿಳೆಯರು ಎರಡು ಅಥವಾ ಮೂರು ಮಡಿಕೆಯ ನೀರನ್ನು ಗರ್ಭಿಣಿಯ ತಲೆಯ ಮೇಲೆ ಸುರಿಯಬೇಕಾಗುತ್ತದೆ. ಸಾಮಾನ್ಯವಾಗಿ, ಆ ಕುಟುಂಬದವರಲ್ಲಿ ನಿಧನರಾದ ಪೂರ್ವಿಕರ ಹೆಸರನ್ನು ಅಥವಾ ವೈಷ್ಣವ ದೇವರ ಹೆಸರನ್ನು ಮಗುವಿಗೆ ಇಡುವ ಮೂಲಕ ನಾಮಕರಣ ಸಂಪ್ರದಾಯವನ್ನು ತಮ್ಮ ಸಮುದಾಯದಲ್ಲಿ ರೂಢಿಸಿಕೊಂಡು ಬಂದಿದ್ದಾರೆ. ಗಂಡು ಮಕ್ಕಳಿಗೆ ಹೆಸರಿಡುವಾಗ ಅಮನಾವತಿ, ಬಾಳಿ, ಗಂಗೀ,ಲಿಂಗಮ್ಮ, ರಾಮಕ್ಕ, ವೆಂಕಟಿ ಈ ಹೆಸರುಗಳನ್ನು ಮಕ್ಕಳಿಗೆ ವಿಶೇಷವಾಗಿ ಇಡುತ್ತಾರೆ. ಹೀಗೆ ಹೆಸರಿಡುವ ಸಂಪ್ರದಾಯ ದೊಂಬಿದಾಸರಲ್ಲಿದೆ. ಒಟ್ಟಿನಲ್ಲಿ ದಂಪತಿಗಳು ಅನ್ಯೋನ್ಯವಾಗಿದ್ದರೆ; ಸಂಸಾರ ಸುಖವಾಗಿರುತ್ತದೆ. ಇಲ್ಲವಾದರೆ ವಿಪರೀತ ತೊಂದರೆಯುಂಟಾಗುತ್ತದೆ ಎಂಬ ಲೋಕಾರೂಢಿ ಮಾತಿನ ಮೂಲಕ ಇವರ ಜೀವನವಿದೆ. ಹೆಣ್ಣಿನ ಜೀವನ ಇತರ ಸಮುದಾದಯದವರ ಹಾಗೆಯೇ ಕಟ್ಟಿನಿಟ್ಟಿನ ಮೂಲಕ ಇದೆ ಎನ್ನಬಹುದಾಗಿದೆ.

ಋತುಮತಿಶಾಸ್ತ್ರ

ದೊಂಬಿದಾಸ ಈ ಸಮುದಾಯದಲ್ಲಿ ಹೆಣ್ಣು ಋತುಮತಿಯಾದಾಗ ಆಕೆಯನ್ನು ಆಕಳೆ, ಬೇವು, ಮತ್ತಿತರ ಸೊಪ್ಪುಗಳಿಂದ ಹಾಕಲಾದ ಪುಟ್ಟ ಗುಡಿಸಲಿನಲ್ಲಿ ಮೂರರಿಂದ ಐದು ದಿನಗಳವರೆಗೆ ಕೂರಿಸಲಾಗುತ್ತದೆ. ಹಸಿರು ಕಾಳುಗಳನ್ನು ಸೇರಿಸಿ ಬೇಯಿಸಿ ತಯಾರಿಸಿ ಅನ್ನವನ್ನು ನೀಡುತ್ತಾರೆ. ಹುಡುಗಿಗೆ ಸ್ನಾನ ಮಾಡಿಸಿ ಆರತಿ ಎತ್ತಿ ಗುಡಿಸಲನ್ನು ತೆಗೆದು ಹಾಕಲಾಗುತ್ತದೆ. ಹನ್ನೆರಡನೆಯ ದಿನ ಸೂತಕ ತೆಗೆದು ಹುಡುಗಿಯನ್ನು ಹಸೆ ಮೇಲೆ ಕೂರಿಸಿ ಒಳಕ್ಕೆ ಕರೆದುಕೊಳ್ಳುತ್ತಾರೆ. ಸುಮಾರು ಮೂರು ತಿಂಗಳಿನ ಬಳಿಕವಷ್ಟೇ ಮದುವೆ ಆಗುವುದಕ್ಕೆ ಆಕೆ ಅರ್ಹಳಾಗುತ್ತಾಳೆ.

ಅಂತ್ಯಸಂಸ್ಕಾರ

ದೊಂಬಿದಾಸ ಸಮುದಾಯದಲ್ಲಿ ಹೂಳುವ ಮತ್ತು ದಹಿಸುವ ಎರಡು ಪದ್ಧತಿ ಇದೆ. ಮೃತ ದೇಹವನ್ನು ತೊಳೆದು ಹಣೆಯ ಮೇಲೆ ಕುಂಕುಮ ಹಚ್ಚುತ್ತಾರೆ. ಚಟ್ಟದಲ್ಲಿ ದೇಹವನ್ನು ಕುಳಿತ ಸ್ಥಿತಿಯಲ್ಲಿಟ್ಟು ಶವಸಂಸ್ಕಾರದ ಸ್ಥಳಕ್ಕೆ ಹೊತ್ತೊಯ್ಯುತ್ತಾರೆ. ಮೂರು ಅಡಿ ಗುಂಡಿ ತೆಗೆದು ದೇಹವನ್ನು ಹೂಳಲಾಗುತ್ತದೆ. ಅಂದು ಸತ್ತ ಸ್ಥಳದಲ್ಲಿ ಸಂಜೆ ಕೋಲೆ ಬಲಿಕೊಟ್ಟು ಜೀವತಳಿ ಹಾಕುವ ಪದ್ಧತಿ ಇದೆ. ಸತ್ತ ಮೂರನೆ ದಿನಕ್ಕೆ ಹಾಲು-ತುಪ್ಪದ ಶಾಸ್ತ್ರ ನಡೆಯುತ್ತವೆ. ಹನ್ನೊಂದನೆ ದಿನಕ್ಕೆ ತಿಥಿ ಕಾರ್ಯ ಆರಂಭವಾಗುತ್ತದೆ. ಅಂದು ಎಲ್ಲರಿಗೂ ಮಾಂಸದ ಊಟ ವ್ಯವಸ್ಥೆ ಮಾಡಲಾಗಿರುತ್ತದೆ. ರಾತ್ರಿಯೆಲ್ಲ ಭಜನೆ ಮಾಡುತ್ತಾರೆ. ಅಂದಿನ ಕಾರ್ಯಕ್ರಮದ ಪೂರ್ಣ ಜವಾಬ್ದಾರಿ ಪಿನ್ನಪೆದ್ದನ (ಕುಲದ ಮುಖ್ಯಸ್ಥ)ದಾಗಿರುತ್ತದೆ.ಹೀಗಾಗಿ ನೂರೊಂದು ಎಲೆ, ಅಡಕೆ, ನೂರೊಂದು ಹಣ್ಣು, ನೂರೊಂದು ತೆಂಗಿನಕಾಯಿ, ಕಡ್ಡಿ ಕರ್ಪೂರ ಗಳಿಂದ ಪೂಜೆ ಮಾಡಿ ಗುದ್ದದ ಮೇಲೆ ಹೊಂಬಾಳೆ ಚುಚ್ಚಿ ಹಾಲುತುಪ್ಪ ಬಿಡುತ್ತಾರೆ. ಅದೆ ಗುದ್ದದ ಮೇಲೆ ಹೆಂಡತಿಯ ಬಳೆ, ಹೂವು, ಕುಂಕುಮಗಳನ್ನು ಕಳೆಯುತ್ತಾರೆ. ಒಟ್ಟಿನಲ್ಲಿ ಹಿಂದೂ ಧರ್ಮದ ಇತರೆ ಜಾತಿಯವರು ಮಾಡುವಂತಹ ಶವಸಂಸ್ಕಾರ ರೀತಿಯಲ್ಲಯೇ ಇವರು ಸಹ ಮಾಡುತ್ತಾರೆ. ಹೀಗೆ ದೊಂಬಿದಾಸ ಜನಾಂಗವು ತನ್ನ ಬದುಕಿನ ಸ್ಥಿತಿ ಮತ್ತು ನಂಬಿಕೆಗಳನ್ನು ಮೈಗೂಡಿಸಿಕೊಂಡು ಬಾಳು ಕಳೆಯುತ್ತಿರುವುದನ್ನು ಕಾಣಬಹುದಾಗಿದೆ.

ದೊಂಬಿದಾಸ ಜನಾಂಗದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಥಿತಿಗತಿ

ದೊಂಬಿದಾಸ ಜನಾಂಗವು ಈ ಹಿಂದಿನ ಕೆಲವು ಅಧ್ಯಾಯಗಳಲ್ಲಿ ಚರ್ಚಿಸಿರುವಂತೆಯೇ ವೃತ್ತಿಗಾಯನ, ರಂಗಭೂಮಿ ಮತ್ತು ನಾಟಕಕಲೆ ಇವೇ ಮೊದಲಾದ ಸಾಹಿತ್ರಿಕ ಪ್ರಕಾರಗಳಿಗೆ ಅಪೂರ್ವ ಕೊಡುಗೆಯನ್ನಿತ್ತವರು. ಸುದೀರ್ಘ ಲಾವಣಿಗಳನ್ನು ಹಾಡಿಕೊಂಡು, ಕಥಾಮೇಳಗಳನ್ನು ನಡೆಸುತ್ತ ಬದುಕು ಕಂಡ ಜನಾಂಗ ಇವರದು. ವೈಷ್ಣವ ಕಥೆಗಳಿಗಿಂತ ಇವರಿಗೆ ಶಿವ ಕಥೆಗಳಲ್ಲಿ ಪ್ರೀತಿ ಹೆಚ್ಚು. ಇವುಗಳೆ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದ್ದು.

ದೊಂಬಿದಾಸರ ಲಾವಣಿ

ದೊಂಬಿದಾಸರು ಹಾಡು ಲಾವಣಿಗಳು ಸಾಮಾನ್ಯವಾಗಿ ಪೌರಾಣೀಕ, ವಾಸ್ತವಿಕ ಮತ್ತು ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿರುತ್ತದೆ. ಕೆಂಪೇಗೌಡನ ಲಾವಣಿ ಇವರು ಹಾಡುವ ಲಾವಣಿಗಳಲ್ಲಿ ಹೆಚ್ಚು ಪ್ರಸಿದ್ಧಿಯಾದದ್ದು. ಅವರು ಹಾಡುವ ಲಾವಣಿಗಳನ್ನು ಈ ಕೆಳಗಿನಂತೆ ಗುರ್ತಿಸಬಹುದು.

ವಾಸ್ತುವಿಕ ಲಾವಣಿ

೧)   ಕಲಿಯುಗದ ಬಾಲೆ

೨)   ಅತ್ತೆ ಸೊಸೆ

೩)   ಕೊಣವೇಗೌಡ

ಪೌರಾಣಿಕ ಲಾವಣಿ

೧)   ಹುಟ್ಟಿದಳೆ ಗೌರಮ್ಮ ಭೂಲೋಕದಲಿ

೨)   ಗಂಗೇಗೌರಿ ಜಗಳ

೩)   ಗಂಗೇಗೌರಿ ಸವಾಲು

೪)   ಕೃಷ್ಣಕೊರವಂಜಿ

೫)   ದೇವಗನ್ನೆಯರು

೬)   ಶ್ರೀ ಕೃಷ್ಣ ಪಾರಿಜಾತ

ಐತಿಹಾಸಿಕ ಲಾವಣಿ

೧)   ಮಾಗಡಿ ಕೆಂಪೇಗೌಡ

ಮೇಲ್ಕಂಡ ಲಾವಣಿಗಳ ವರ್ಗೀಕರಣವಲ್ಲದೆ; ತಟವಾಣಿ ಹೆಣ್ಣು, ಅತ್ತೆಸೊಸೆ, ಘಾತುಕ ಅಣ್ಣಯ್ಯ, ಪಾಪಗೇಡಿ ಅಣ್ಣಯ್ಯ, ಬಾಲನಾಗಮ್ಮ, ಬಂಜೆಹೊನ್ನಮ್ಮ, ಲೋಹಿತಕುಮಾರ, ಬಸವಕುಮಾರ, ಮಾರೇಗೌಡ, ಶಿವಕಥೆ, ಕೃಷ್ಣಕಥೆಗಳು, ರಮ್ಯಲಾವಣಿಗಳು ಮುಂತಾದವುಗಳನ್ನು ಹಾಡುವ ಮೂಲಕ ದೊಂಬಿದಾಸರು ನಾಡಿನ ಸಹೃದಯರ ಮನ ಗೆದ್ದಿದ್ದಾರೆ.

ದೊಂಬಿದಾಸರು ಹಾಡುವ ಲಾವಣಿಗಳಲ್ಲಿ ಗಂಗೇಗೌರಿ ಜಗಳ, ಗಂಗೇಗೌರಿವಾದ, ಗಂಗೆಗೌರಿ ಸವಾಲು ಮೊದಲಾದವುಗಳು ಇಂದಿಗೂ ಕೂಡ ಹಳ್ಳಿ ಜನರ ಮನದಾಳದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಪೌರಾಣಿಕ ಕಥೆಗಳಿಗೆ ಸಾಮಾಜಿಕ ಲೇಪನ ಕೊಟ್ಟಿರುವುದು ಅವರ ಕಥನ ಕೌಶಲ್ಯಕ್ಕೆ ನಿದರ್ಶನವಾಗಿದೆ. ಹಾಸ್ಯಪ್ರಸಂಗಕ್ಕೆ ಹೆಚ್ಚು ಒತ್ತನ್ನು ಇವರು ನೀಡುತ್ತಾರೆ. ವಿಶೇಷವಾಗಿ ಶ್ರೀಗೌರಿ ಮದುವೆ ಸಂದರ್ಭದಲ್ಲಿ ಹಾಡುವ ಲಾವಣಿ ನಿಜಕ್ಕೂ ಉತ್ತಮ ಕಥಾ ಪ್ರಸಂಗ ಎನ್ನಬಹುದು. ನಿದರ್ಶನವಾಗಿ;

ಆಕಾಶವೇಣಿನಷ್ಟು ಚಪ್ಪರ ವಿಟ್ಟಾರು
ಭೂಮಿ ದೇವತಿಯಷ್ಟು ಹಸೆಯ ಬರದಾರು
ದೊಡ್ಡ ದೊಡ್ಡ ಮುತ್ತೆಲ್ಲ ತೋರಣ ಕಟ್ಟಿ
ಚಿಕ್ಕ ಚಿಕ್ಕ ಮುತ್ತಿನ ಸಾಸಿವೆನಿಟ್ಟು
ಆಣಿ ಮುತ್ತನು ತಂದು ಧಾರೆ ಎರೆದಾರು

ಮೇಲ್ಕಂಡ ಲಾವಣಿಯಿಂದ ತಿಳಿದುಬರುವ ಆದರ್ಶವೆಂದರೆ ಹಲವು ಮುತ್ತಗಳಿದ್ದರೂ ಸಹ ಗೌರಿಯನ್ನು  ಆಣಿಮುತ್ತು ಎಂದು ವರ್ಣಿಸುವ ಮೂಲಕ ಮುಂದೆ ಲಾವಣಿ ಹೇಳುವ ಚರಣ ಮುಂದುವರೆದು ಶಿವ ಪಾರ್ವತಿಯರ ಕಲ್ಯಾಣ ಪ್ರಸಂಗ ಕೇಳುವವರಿಗೆ ಪಾಪ ಪರಿಹಾರವಾಗುವುದೆಂದು ಕಥೆ ಮುಕ್ತಾಯವಾಗುತ್ತದೆ.

ಗಂಗೆ-ಗೌರಿ ಜಗಳ, ಈ ಕತೆಯಂತೂ ಎಂತಹವರ ಮನಸ್ಸನ್ನು ಗೆಲ್ಲುವ ಲಾವಣಿಯಾಗಿದೆ. ಗೌರಿಗಿಂತ ಗಂಗೆಯೇ ಜನಪದರಿಗೆ ಬಲು ಪ್ರಿಯವಾದವಳು. ಹಾಗಾಗಿ ಗೌರಿಗಿಂತ ಗಂಗೆಯೇ ಶ್ರೇಷ್ಠಳೆಂದು ಬಿಂಬಿಸುವುದು ಈ ಕೆಳಗಿನ ಲಾವಣಿಯ ಮುಖ್ಯ ಉದ್ದೇಶ. ಗಂಗೆ-ಗೌರಿ ಇಬ್ಬರೂ ಸಾಮಾನ್ಯ ಮನುಷ್ಯರಂತೆ ಸವತಿ ಮತ್ಸರದಲ್ಲಿಯೂ ವಿಶೇಷವಾಗಿ ವರ್ಣಿಸಿರುವುದನ್ನು ಕಾಣಬಹುದು.

ಕೇಳಲೆ ಎಲೆ ಗಂಗೆ ನನ ಮಾತು ಕೇಳೆ
ಸೇರಿನಲ್ಲಿ ಒಂದು ಸೇರು ಉಪ್ಪು ಸೇರುಂಟು
ದುಡ್ಡಾನೆ ಒಂದು ಪಡಿ ಅಕ್ಕಿ ಸಾಲುಂಟು
ದುಡ್ಡಾನೆ ದುಗ್ಗಾಣಿ ಸಾಲ ಉಂಟಮ್ಮ
ಗಂಡಾನ ಸಾಲ ಎಲ್ಲುಂಟೆ ಗಬ್ಬ ನನಸವತಿ
ತುಪ್ಪು ತುಪ್ಪನೆ ಅರಬಿ ಅಲ್ಲಿ ಕುಕ್ಕಿದರು
ತಿರುಗೇಕೆ ನೀ ಬಂದೆ ಮೂಳ ನನ ಸವತಿ
ಆಡಿ ತಪ್ಪದಲ್ಲೆ ಹಲವು ನನ್ನ ಸವತಿ
ಜಡೆ ಜತೆ ಹಿಡಕೊಂಡ ಜಗಳವೊಂದಾಡಿ
ಎರಡು ಮೂರನೆ ಪೆಟ್ಟ ಹೊಡೆದಾಳೆ ಗೌರಿ
ಎರಡು ಮೂರನೆ ಪೆಟ್ಟು ತಡೆದಾಳೆ ಗಂಗೆ
ನಿನ ಕೈ ಮಿಂಚಿತೇನೆ ಬಾಲೆ ಗೌರಮ್ಮ
ಹಿರಿಯವಳು ನೀನೆಂದು ತಡೆದು ಇದ್ದೇನೆ
ನನ ಕೈ ಬರುತೈತೆ ತಪ್ಪಿಸಿಕೊಳ್ಳೆ

ಹೀಗೇ ಸಾಮಾನ್ಯ ಜನರಂತೆ ಗಂಗೆ-ಗೌರಿ ಇಬ್ಬರೂ ಜಡೆ ಹಿಡಿದು ಎಳೆಯುವು, ಗೌರಿ ಗಂಗೆಗೆ ಪೆಟ್ಟು ಕೊಡುವುದು ಈ ಸಂಗತಿಯನ್ನು ದೊಂಬಿದಾಸರು ತಮ್ಮ ಲಾವಣಿಗಳಲ್ಲಿ ಹಾಡಿ ರಂಜಿಸುವ ಮೂಲಕ ಕೇಳುಗರಿಗೆ ಮುದ ನೀಡುತ್ತಾರೆ. ಒಟ್ಟಿನಲ್ಲಿ ದೊಂಬಿದಾಸರ ಲಾವಣಿ ಹಳ್ಳಿಯ ಜನರಿಗೆ ಜನಪ್ರಿಯ ಇಷ್ಟವಾದದ್ದು ಎನ್ನಬಹುದಾಗಿದೆ.

ದೊಂಬಿದಾಸರು ಹೇಳುವ ಕತೆ

ದೊಂಬಿದಾಸರು ಕತೆ ಹೇಳುವುದರಲ್ಲಿ ಹಾಗೂ ಹೆಣೆಯುವುದರಲ್ಲಿ ತುಂಬ ನಿಪುಣರು, ಅಷ್ಟೇ ನಿಸ್ಸೀಮರು. ತಲತಲಾಂತರದಿಂದ ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತ, ಪುರಾಣ ಪುಣ್ಯಕಥೆಗಳು, ಐತಿಹಾಸಿಕ, ಪೌರಾಣಿಕ ಜನಪದ ಮಹಾಕಾವ್ಯಗಳನ್ನು ಹೀಗೆ ಎಲ್ಲವನ್ನೂ ನಾಡಿನ ಸಾಮಾನ್ಯ ಜನರಿಗೂ ಅಥವಾಗುವಂತೆ ತಮ್ಮ ಜನಪದ ಶೈಲಿಯ ಹಾಡುಗಾರಿಕೆ, ಬಯಲಾಟಗಳು ಮತ್ತು ಹರಿಕತೆಗಳಂತಹ ಸಾಂಸ್ಕೃತಿಕ ಪ್ರಕಾರಗಳ ಮೂಲಕ ತಮ್ಮ ಕಲಾಗಾರಿಕೆಯನ್ನು ವ್ಯಕ್ತಪಡಿಸಿದ್ದಾರೆ. ದಾಸರೂ ಕತೆ ಹೇಳಿ ಹೊಟ್ಟೆ ತುಂಬಿಕೊಳ್ಳುವ, ಇಲ್ಲವೆ ಹಾಡನ್ನು ಹೇಳಿ ಭಿಕ್ಷೆ ಬೇಡುವ ಒಂದು ದಲಿತ ವರ್ಗಕ್ಕೆ ಸೇರಿದವರು. ಹರಿದಾಸರಲ್ಲ; ಇವರು ದೊಂಬೆದಾಸರು. (ಬಿ.ಬಿ.ಮಹೇಶವಾಡಿ, ಕನ್ನಡ ಕಥಾಸೃಷ್ಟಿ, ಪು.ಸಂ. ೨೪) ಎಂದಿರುವ ಮಹೇಶ್‌ವಾಡಿಯವರ ಹೇಳಿಕೆ ಸಮಂಜಸವಾದುದಾಗಿದೆ.

ದೊಂಬಿದಾಸರು ಮುಖ್ಯವಾಗಿ ಲಾವಣಿ ಹೇಳುವುದರಲ್ಲಿ ಮತ್ತು ಯಕ್ಷಗಾನ ಅಭಿನಯಿಸುವುದರಲ್ಲಿ ವೈವಿಧ್ಯಮಯವಾದವರು. ಇದರ ಜೊತೆಗೆ ಕತೆ ಹೇಳುವುದರಲ್ಲಿ, ರಂಗಭೂಮಿ ಅಭಿನಯದಲ್ಲಿಯೂ ಕೂಡ ತಮ್ಮ ಕಲಾ ಪ್ರದರ್ಶನವನ್ನು ಜನಮೆಚ್ಚಿ ಮನಸೋಲು ವಂತೆ ಮಾಡುತ್ತಾರೆ. ಇವರು ಕತೆಗಳನ್ನು ಹೇಳುವುದರಲ್ಲಿ ಅತಿ ಹೆಚ್ಚುಗಾರಿಕೆಯವರು. ಆ ಕತೆಗಳೆಮದರೆ, ಗೌರಮ್ಮನ ವಿವಾಹ, ಗಂಗೆ-ಗೌರಿ ಜಗಳ, ಬಾಲನಾಗಮ್ಮ, ಕೃಷ್ಣನ ಕತೆಗಳು, ಕೃಷ್ಣ-ಕೊರವಂಜಿ, ಬಂಜೆ ಹೊನ್ನಮ್ಮ, ರಾಜ ಸತ್ಯಭೋಜ, ರಾಮಲಕ್ಷ್ಮಣರ ಕತೆ, ಪಾಂಡವರ ಕತೆ, ಇನ್ನೂ ಮೊದಲಾದ ಕತೆಗಳನ್ನು ಹಾಡಿ ರಂಜಿಸುತ್ತಾರೆ. ನಿದರ್ಶನವಾಗಿ ’ಬಂಜೆ ಹೊನ್ನಮ್ಮ’ನ ಕತೆಯನ್ನು ಕುರಿತಂತೆ; ಬಂಜೆತನದ ಅಪವಾದ, ಸಂಕಟ, ಸವತಿ ಮತ್ಸರದ ಅನಾಹುತ, ಮೊದಲಾದ ಸಂಗತಿಗಳನ್ನು ಕರಳು ಮಿಡಿಯುವಂತೆ ಹೇಳುತ್ತಾರೆ. ಬಂಜೆಯೆಂಬ ಕಾರಣಕ್ಕಾಗಿ, ಆಕೆಯ ಅಕ್ಕತಂಗಿಯರೇ ಆಕೆಗೆ ಸಹಾನುಭೂತಿ ತೋರುವುದಿಲ್ಲ. ನೀರು ತರಲು ಹೋದರೆ ಬಂಜೆ ಹೊನ್ನಮ್ಮ ಮುಟ್ಟದಿರಲೆಂದು ಬಾವಿಯ ಜಲವೇ ಬತ್ತುತ್ತದೆ. ಈ ಸಂಗತಿಯ ಹಾಡನ್ನು ದೊಂಬಿದಾಸರು, ತಮ್ಮ ಸಿರಿಕಂಠದಲ್ಲಿ

ಕುಂಟನಾದರೂ ಆಗಲಿ ಶಿವನೆ
ಕುರುಡನಾದರೂ ಹುಟ್ಟಲಿ ಶಿವನೆ
ಈವತ್ತಾದರೂ ಹುಟ್ಟಲಿ ಶಿವನೆ
ನಾಳೆ ಬೆಳಿಗ್ಗೆ ಸಾಯಲಿ ಶಿವನೆ
ಬಂಜೆ ಎಂಬೊ ಸೊಲ್ಲೂ ಶಿವನೆ
ಹೋದರೆ ಸಾಕಲ್ಲ ಶಿವನೆ

ಹೀಗೆ, ಬಂಜೆತನದ ಆತಂಕ ನೋವುಗಳ ತೀವ್ರತೆಯನ್ನು, ಎಂತಹವರ ಗಟ್ಟಿ ಮನಸ್ಸನ್ನು ನಡುಗಿಸುವಂತೆ ಹೇಳುತ್ತಾರೆ. ಬಂಜೆತನವನ್ನು ನೀಗಿಸುವಂತೆ ನಾನಾ ದೇವರನ್ನು ಪೂಜಿಸುವ, ಹರಕೆ ಕಟ್ಟಿಕೊಳ್ಳುವ, ಹತ್ತು ಹಲವು, ವ್ರತ-ನೇಮ ಮೊದಲಾದ ಮುಖ್ಯ ವಿವರಗಳಿಂದ ಈ ಕತೆ ಜೀವ ಪಡೆದುಕೊಂಡಿದೆ.

ನಾಟಕ ವೃತ್ತಿ

ದೊಂಬಿದಾಸರು ನಾಟಕದಲ್ಲಿ ಅಭಿನಯಿಸುವುದರಲ್ಲಿಯು ಸೈ ಎನಿಸಿಕೊಂಡವರು. ಇವರು ಆಡುವ ನಾಟಕಗಳಲ್ಲಿ ಸತ್ಯ ಹರಿಶ್ಚಂದ್ರ, ನಳದಮಯಂತಿ, ಸತ್ಯವ್ರತ, ಶ್ರೀ ಕೃಷ್ಣಾಪಾರಿಜಾತ, ಶ್ರೀ ಕೃಷ್ಣಲೀಲೆ, ಪ್ರೇಮ ಸತ್ಯಭೋಜ, ಮಾರ್ಕಂಡೇಯ, ಸಾರಂಗಧರ, ಗಂಗೆಗೌರಿ, ರಾಜಾವಿಕ್ರಮ, ಶನಿಕತೆ, ಭಕ್ತಪ್ರಹ್ಲಾದ ಇನ್ನು ಮುಂತಾದವು. ಹರಿಕಥೆಗಳನ್ನು ಮಾಡುವ ಇವರಿಗೆ, ಶ್ರಾವಣ ಮತ್ತು ಕಾರ್ತಿಕ ಮಾಸಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಮೂಲತಃ ಭಿಕ್ಷೆ ಬೇಡುವ ಇವರು, ಊರೂರು ಸುತ್ತಿ ಬದುಕು ಕಳೆಯುತ್ತಾರೆ. ತಾವು ಯಾವ ಊರಿನಲ್ಲಿ ಬೀಡು ಬಿಟ್ಟಿರುತ್ತಾರೆಯೊ; ಆ ದಿವಸದ ರಾತ್ರಿ ಊರಿನ ಸ್ಕೂಲು ಮೈದಾನಗಳಲ್ಲೊ, ದೇವಸ್ಥಾನದ ಮುಂಭಾಗದಲ್ಲೊ ತಮ್ಮ ನಾಟಕ ರಂಗವನ್ನು ಹೂಡುತ್ತಾರೆ. ಅಲ್ಲಿ ತಮ್ಮ ಅಭಿನಯ ಪ್ರದರ್ಶಿಸಿ ಹೊಟ್ಟೆಬಟ್ಟೆಗೆ ದವಸ, ಧಾನ್ಯ, ಕಾಸು ಮೊದಲಾದವನ್ನು ಸಂಪಾದಿಸುತ್ತಾರೆ. ಹೆಂಗಸರು ನಾಟಕಗಳಲ್ಲಿ ಹೆಚ್ಚಾಗಿ ಭಾಗವಹಿಸುವುದಿಲ್ಲ. ಗಂಡಸರೇ ಎಲ್ಲ ಪಾತ್ರಗಳನ್ನೂ ಲೀಲಾಜಾಲವಾಗಿ ನಿರ್ವಹಿಸುತ್ತಾರೆ. ಸಮಯ ಸ್ಪೂರ್ತಿಯಿಂದಲೇ ಇವರ ನಾಟಕದ ಸಂಭಾಷಣೆ ಮತ್ತು ಹಾಡುಗಳು ಹುಟ್ಟಿಕೊಳ್ಳುತ್ತವೆ. ಇಂತಹವರೆ ಇಂತಹ ಪಾತ್ರ ಮೀಸಲು ಎಂಬ ನಿಯಮ ಇರುವುದಿಲ್ಲ. ಯಾರು ಬೇಕಾದರೂ, ಉಳಿದ ಯಾವ ಪಾತ್ರವನ್ನಾದರೂ ಯಶಸ್ವಿಯಾಗಿ ಅಭಿನಯಿಸಬಲ್ಲರು. ಹಿಂದೆ ಇವರು ಯಕ್ಷಗಾನಗಳನ್ನೂ ಪ್ರದರ್ಶಿಸುವ ಕಲಾವಂತಿಕೆ ಇದ್ದುದರಿಂದಲೇ, ಅಲ್ಲಿಯ ಕಥಾವಸ್ತುಗಳನ್ನು ನಾಟಕವಾಗಿ ಪರಿವರ್ತಿಸುವ ಮೂಲಕ ತಮ್ಮಲ್ಲಿ ಅದಮ್ಯವಾಗಿ ಅಡಗಿರುವ ಅಪೂರ್ವ ಕಲಾಪ್ರತಿಭೆಯನ್ನು ಇವರು ಪ್ರದರ್ಶಿಸುತ್ತಾರೆ. ಒಟ್ಟಿನಲ್ಲಿ ದೊಂಬಿದಾಸರು ಕತೆಯನ್ನು ಹೇಳುವಂತೆಯೆ ಮೇಲೆ ತಿಳಿಸಿರುವ ನಾಟಕಗಳನ್ನು ಅಭಿನಯಿಸುವ ಮುಖೇನ ತಮ್ಮ ಸಿರಿವಂತ ಕಲಾಪ್ರೌಢಿಮೆಯನ್ನು ಪ್ರದರ್ಶಿಸುವುದು ನಿಜಕ್ಕೂ ಮೆಚ್ಚುವಂತಹದ್ದೆ.

ದೊಂಬಿದಾಸರು, ವಿಶಿಷ್ಟ ಸಾಂಸ್ಕೃತಿಕ ಮತ್ತು ಸಂಪ್ರದಾಯವನ್ನು ತಮ್ಮ ನಿತ್ಯ ಬದುಕಿನಲ್ಲಿ ಮೈಗೂಡಿಸಿಕೊಂಡವರು. ನಾಟಕವನ್ನು ಆಡುವಾಗ, ಹರಿಕತೆಗಳನ್ನು ಹೇಳುವಾಗ ವಿಶಿಷ್ಟ ಉಡುಪನ್ನು ಧರಿಸುವ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಹೆಂಗಸರು ಸೀರೆ ಉಟ್ಟು ಬಲಕ್ಕೆ ಸೆರಗು ಹಾಕುತ್ತಾರೆ. ಹಣೆಗೆ ಒಂಟಿನಾಮ ಇಡುತ್ತಾರೆ. ಗಂಡಸರು ಹಾರೋಗಚ್ಚೆ ಹಾಕಿ ಮೇಲೆ ನಿಲುವಂಗಿ ತೊಡುತ್ತಾರೆ. ಸ್ಥಳೀಯ ಸಂಸ್ಕೃತಿಯ ಪ್ರಭಾವವನ್ನು ತಮ್ಮ ಅಭಿನಯದಲ್ಲಿ ಅಳವಡಿಸಿಕೊಂಡು ಉತ್ತಮ ಅಭಿನಯ ತೋರುತ್ತಾರೆ.

ಒಟ್ಟಿನಲ್ಲಿ ಗಾಯನ ಕಲೆಗೆ ಹೆಸರಾದ ಈ ಸಮುದಾಯ,ಒಂದು ಕಡೆ ನೆಲೆ ನಿಲ್ಲದೆ ಬದುಕು ಕಂಡುಕೊಂಡವರು. ಕತೆ, ನಾಟಕ ಮತ್ತು ಲಾವಣಿಗಳನ್ನು ಹಾಡುತ್ತಲೆ, ತಮ್ಮ ಸಂಸ್ಕೃತಿಯ ಛಾಪನ್ನು ಇವರು ಪ್ರೇಕ್ಷಕರು ಮನದಾಳದಲ್ಲಿ ಮೂಡಿಸಿದ್ದಾರೆ. ಈ ಸಮುದಾಯದಲ್ಲಿ ಯಾವುದೇ ಸಂಪ್ರದಾಯದ ಆಚರಣೆಗಳಿರಬಹುದು.. ಅಂತಹದರಲ್ಲಿ ತಮ್ಮ ಮೂಲ ಸಂಸ್ಕೃತಿಗೆ ಹೆಚ್ಚು ಒತ್ತು ನೀಡುವುದೇ ಈ ಜನಾಂಗದ ಒಂದು ವಿಶೇಷ ಎಂದು ಭಾವಿಸಬಹುದಾಗಿದೆ.

ಪ್ರಸ್ತುತ ದೊಂಬಿದಾಸ ಸಮುದಾಯದ ಸ್ಥಿತಿಗತಿ

ದೊಂಬಿದಾಸ ಸಮುದಾಯವು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಇತರ ಕೋಮಿನ ಸ್ಥಿತಿಗತಿಗೆ ಹೋಲಿಸಿಕೊಂಡರೆ ತೀರ ಹಿಂದುಳಿದಿದೆ. ಇತ್ತೀಚೆಗೆ ಮಾತ್ರ ಅಲ್ಲಲ್ಲೆ ನೆಲೆಸಿರುವ ಕೆಲವು ಹಳ್ಳಿಗಳಲ್ಲಿ, ಅಲ್ಪಸ್ವಲ್ಪ ಓದು ಬರಹದ ಕಡೆಗೆ ಗಮನಹರಿಸುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು ಮೂವತ್ತು ಸಾವಿರದಿಂದ ನಲವತ್ತು ಸಾವಿರ ಜನಸಂಖ್ಯೆ ಇರುವ ಈ ಸಮುದಾಯದ ಅಕ್ಷರಸ್ಥರ ಸಂಖ್ಯೆ ಸುಮಾರು ಶೇ. ೨ರಿಂದ ಶೇ ೨.೫ರವರೆಗೆ ಮಾತ್ರ ಇದೆ ಎಂದು ಅಂದಾಜಿಸಲಾಗಿದೆ. ಅಕ್ಷರಜ್ಞಾನವಿಲ್ಲ ಎಂದರೆ, ಅಲ್ಲಿ ಸಹಜವಾಗಿಯೇ ಬಡತನ, ಆರ್ಥಿಕ ಅಭದ್ರತೆ, ವಸತಿ ಸೌಲಭ್ಯದ ಸಮಸ್ಯೆ ಹಾಗೂ ಸರ್ಕಾರದ ಅನೇಕ ಸವಲತ್ತುಗಳಿಂದ ಹೆಚ್ಚು ವಂಚಿತರಾಗಿ, ದುಃಸ್ಥಿತಿಯಿಂದ ಬದುಕುವಂತಹ ಸಂದರ್ಭ ಎದುರಾಗದಿರುವುದಿಲ್ಲ. ಸರ್ಕಾರಿ ನೌಕರಿಯಲ್ಲಂತೂ ಬೆರಳೆಣಿಕೆಯಷ್ಟು ಜನ ಮಾತ್ರ ’ಸಿ’ ಮತ್ತು ’ಡಿ’ ದರ್ಜೆ ಉದ್ಯೋಗದಲ್ಲಿರುವುದನ್ನು ಕಾಣಬಹುದಾಗಿದೆ. ಇತ್ತೀಚೆಗೆ ತಮ್ಮ ಮೂಲಸೌಲಭ್ಯದ ಖಚಿತ ಅವಕಾಶಕ್ಕಾಗಿ ಸಂಘಟನೆಗಳನ್ನು ಮಾಡಿಕೊಂಡು ಹೋರಾಡುತ್ತಿದ್ದಾರೆ. “ಅಕ್ಷರ ಕಲಿತರೆ ಮಾತ್ರ ಆರ್ಥಿಕ ಭದ್ರತೆ” ಎಂಬ ಮಾತಿನ ಹಿನ್ನೆಲೆಯಲ್ಲಿ, ವಿದ್ಯಾವಂತರು ಸಣ್ಣಪುಟ್ಟ ನೌಕರಿಯಲ್ಲಿದ್ದು-ಕೊಂಡು ತಮ್ಮ ಸಮುದಾಯದವರ ಅಲ್ಪಸ್ವಲ್ಪ ಏಳಿಗೆಗಾಗಿ ಹೋರಾಡುತ್ತಿದ್ದಾರೆ. ಅಂತಹ ಪ್ರಮುಖರಲ್ಲಿ, ಕುಪ್ಪೆನಾಗರಾಜ್ (ಹುಣಸೂರು ತಾಲ್ಲೂಕು) ಒಬ್ಬರು. ಅವರು ತಮ್ಮ ನಾಯಕತವದಲ್ಲಿ ೨೦೦೩ರಲ್ಲಿ ತಮ್ಮ ಜನಾಂಗದವರನ್ನು ಒಟ್ಟುಗೂಡಿಸಿ ಮೈಸೂರಿನಲ್ಲಿರುವ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ವಿಭಾಗ ಮಟ್ಟದ ಸಮಾವೇಶವನ್ನು ನಡೆಸಿ, ಸರ್ಕಾರದ ಗಮನಸೆಳೆದಿದ್ದಾರೆ. ಜೊತೆಗೆ ತಮ್ಮ ಜನಾಂಗದ ಕುಲದ ಕಥೆಯನ್ನು ಅಲ್ಪಸ್ವಲ್ಪ ಪರಿಚಯಿಸುವುದಕ್ಕಾಗಿ ’ಏಕತಾರಿ’ ಎಂಬ ಕಿರುಹೊತ್ತಿಗೆಯನ್ನು ಹೊರತಂದಿದ್ದಾರೆ.

ದೊಂಬಿದಾಸ ಜನಾಂಗವು ತಮ್ಮಲ್ಲಿ ಯಾವುದೇ ಸಂದರ್ಭದಲ್ಲಿ ಒಡಕು ಉಂಟಾದರೆ ಕಟ್ಟೆಮನೆ ನ್ಯಾಯಪದ್ಧತಿ ಎಂದು ಕರೆಸಿಕೊಳ್ಳುವ ಕುಲಸಭೆಯಲ್ಲಿ ಇತ್ಯರ್ಥಪಡಿಸಿಕೊಳ್ಳುತ್ತಾರೆ. ಜೊತೆಗೆ ’ಸಮೀಲು’ ಎಂಬ ಕುಲತಪ್ಪಿನಡಿಯಲ್ಲಿ ಆಸಕಸ್ತಿಯಿಂದ, ತಮ್ಮ ಜಾತಿಗೆ ಸೇರಿಕೊಳ್ಳುವ ಜನರನ್ನು ಸೇರಿಸಿಕೊಳ್ಳುತ್ತಾರೆ. ಶ್ರಮ ಜೀವಿಗಳಾದ ದೊಂಬಿದಾಸ ಜನಾಂಗದ ಅವಿದ್ಯಾವಂತ ಜನರು, ತಮ್ಮಹಣಕಾಸು ಮತ್ತು ಭವಿಷ್ಯದ ಭದ್ರತೆಗಾಗಿ ಹತ್ತು ಹಲವು ಲಾಭದಾಯಕವಲ್ಲದ ಕಸುಬುಗಳನ್ನು ಮಾಡುತ್ತಿದ್ದಾರೆ.ಹಳೆಬೀಗ ರಿಪೇರಿ, ಛತ್ರಿ, ತಬಲ, ಹಾರ್ಮೋನಿಯಂ ರಿಪೇರಿ ಮೊದಲಾದ ಕೆಲವು ವೃತ್ತಿಗಳಲ್ಲಿ ತೊಡಗಿದ್ದಾರೆ. ಮಹಿಳೆಯರು ಸ್ನೋ, ಪೌಡರ‍್, ಟೆಪು,ಹೇರ್‌ಪಿನ್ ಹಾಗು ಚೌಲಿ ಮಾರಿ ಬದುಕುತ್ತಿದ್ದಾರೆ. ಸಂವಿಧಾನಾತ್ಮಕವಾಗಿ ಈ ಸಮುದಾಯಕ್ಕೆ ದೊರಕಬೇಕಾದ ಸವಲತ್ತು ದೊರಕುತ್ತಿಲ್ಲ. ಇದೊಂದು ವಿಷಾದನೀಯವಾದ ಸಂಗತಿ ಎಂದು ಭಾವಿಸಬೇಕಾಗಿದೆ.

ರಾಜಕೀಯ ಕ್ಷೇತ್ರದಲ್ಲಂತೂ ಈ ಸಮುದಾಯದ ಬಹಳಷ್ಟು ಬಗೆಯಲ್ಲಿ ವಂಚಿತವಾಗಿದೆ. ತಳಮಟ್ಟದ ಸಮುದಾಯಕ್ಕೂ, ರಾಜಕೀಯ ಸ್ಥಾನಮಾನಗಳು ದೊರಕಬೇಕೆಂಬುದು ಸಂವಿಧಾನದ ಮುಖ್ಯ ಆಶಯವಾಗಿದೆ. ಆದರೆ, ಗ್ರಾಮಪಂಚಾಯ್ತಿ, ಪಟ್ಟಣ ಪಂಚಾಯ್ತಿ, ನಗರಸಭೆ ಮತ್ತು ಶಾಸನ ಸಭೆ, ಸಂಸತ್ತಿನ ಉಭಯಸದನಗಳು ಈ ಯಾವುದೇ ಮಟ್ಟದ ಸದನಗಳಲ್ಲಿಯೂ ತಮ್ಮ ನೋವು ಹೇಳಿಕೊಳ್ಳಲು ಒಬ್ಬ ಪ್ರತಿನಿಧಿ, ಸದಸ್ಯರು ಇಲ್ಲದೆ ಈ ಸಮುದಾಯ ವಂಚಿತವಾಗಿದೆ. ಈಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯತೆ ಅನಿವಾರ‍್ಯವಾಗಿ ಬೇಕಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸುವುದು ತೀರ ತುರ್ತು ಅಗತ್ಯವಾಗಿ ಬೇಕಾಗಿದೆ. ಸ್ವಾತಂತ್ರ‍್ಯ ಬಂದು ಆರು ದಶಕಗಳು ಕಳೆದರೂ ಇವರ ದೈನಂದಿನ ಬದುಕು ತೀರ ಶೋಚನೀಯವೆ ಆಗಿದೆ. ಇತ್ತೀಚೆಗೆ ಅಲೆಮಾರಿ ಮತ್ತು ಅರೆ-ಅಲೆಮಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಎಸ್. ರೇಣುಕೆ ಅವರ ತ್ರಿಸದಸ್ಯ ನಿಯೋಗ ಡಿಸೆಂಬರ‍್ ೨೬ ಮತ್ತು ೨೭ನೇ ೨೦೦೬ರಂದು ಮೈಸೂರು ನಗರಕ್ಕೆ ಭೇಟಿಯನ್ನಿತ್ತಿದ್ದಾರೆ. ಇವರ ಜೊತೆಗೆ ಸದಸ್ಯರಾದ ಲಕ್ಷ್ಮಣಬಾಯಿ, ಕೆ.ಪಟ್ನಿ ಮತ್ತು ಸದಸ್ಯಕಾರ್ಯದರ್ಶಿಯಾದ ಶ್ರೀ ಲಕ್ಷ್ಮೀಚಂದ್ ಇವರುಗಳು ಈ ಸಮುದಾಯವನ್ನು ಖುದ್ಧು ಭೇಟಿಯಾಗಿದ್ದಾರೆ. ಇವರ ನೋವಿನ ಬಗ್ಗೆ ಅವಲೋಕಿಸಿದ್ದಾರೆ. ಇವರ ಬೇಡಿಕೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಪಿಸಲು ಇವರ ಜೊತೆಗೆ ಒಪ್ಪಿಕೊಂಡಿದ್ದಾರೆ. ಕರ್ನಾಟಕ ರಾಜ್ಯದ ಅಲೆಮಾರಿ, ಅರೆ-ಅಲೆಮಾರಿ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ಕೆ.ಎಂ.ಮೇತ್ರಿ ಅವರು ಸಹ ಪಾಲ್ಗೊಂಡಿದ್ದುದು ಅವರ ನಿಜವಾದ ಕಾಳಜಿಯನ್ನು ತೋರಿಸುತ್ತದೆ.

ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ದೊಂಬಿದಾಸ ಜನಾಂಗ-ದೊಡಗೂಡಿ ಸುಮಾರು ೩೯೮ಕ್ಕಿಂತಲು ಅಧಿಕ, ಇತರೆ ಅಲೆಮಾರಿ ಕುಟುಂಬಗಳು ಮೈಸೂರು ನಗರದ ’ಏಕಲವ್ಯ’ ನಗರದಲ್ಲಿ ವಾಸಿಸುತ್ತಿವೆ. ಅವರುಗಳಲ್ಲಿ ಶಿಳ್ಳೆಕ್ಯಾತರು, ಬುಡಬುಡಿಕೆ-ಯವರು, ಸೋಲಿಗರು, ಕೊರಮರು, ಕೋಲೆಬಸವ, ಹಕ್ಕಿಪಿಕ್ಕಿ ಮೊದಲಾದ ಇತರೆ ಸಮುದಾಯಗಳ ಪರಿಸ್ಥಿತಿಯು ಕೂಡ ದೊಂಬಿದಾಸ ಜನಾಂಗದ ಸ್ಥಿತಿಗತಿಗೆ ಭಿನ್ನವಾದುದೇನೂ ಅಲ್ಲ. ಇವರುಗಳು ಸತ್ತರಂತೂ ಸ್ಮಶಾನವಿಲ್ಲ. ಬದುಕುವುದಕ್ಕಂತೂ ಸೂರಿಲ್ಲ. ಪುರಾಣ ಪುಣ್ಯಕತೆಗಳ ವೇಷಧಾರಿಗಳಾಗಿ ದಾಸರಪದ, ಕೋಲುಬಸವ, ಕುದುರೆಯಾಟ ಮತ್ತು ದೊಂಬರಾಟ ಇವೆ ಮೊದಲಾದ ವೃತ್ತಿಯಲ್ಲಿ ತೊಡಗಿರುವ ಇವರು ಆ ದಿನದ ಹೊಟ್ಟೆ ಹೊರೆಯಬಹುದೇ ವಿನಾಃ ಮುಂದಿನ ಆರ್ಥಿಕ ಭದ್ರತೆಯನ್ನಂತೂ ಇದರಿಂದ ಕಾಣಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ಈ ಸಮುದಾಯದ ಬಗ್ಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದುಡಿಯುತ್ತಿರುವವರು ಮತ್ತು ಇತರ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ವಿಶೇಷವಾಗಿ ರಾಜ್ಯ, ಕೇಂದ್ರ ಸರ್ಕಾರ ಸಂವಿಧಾನಬದ್ಧವಾಗಿ ಲಭ್ಯವಾಗಬೇಕಾದ ಸವಲತ್ತುಗಳನ್ನು ಇವರಿಗೆ ಒದಗಿಸಿಕೊಡುವ ಕಡೆಗೆ ಬಾಯಿ ಮಾತಿನ ಆಶ್ವಾಸನೆ ನೀಡದೆ ಕಾರ್ಯರೂಪಕ್ಕೆ ತರುವಂತಹ ಕಾರ್ಯಕ್ರಮಗಳನ್ನು ಪ್ರಗತಿ ಪರವಾಗಿ ಜಾರಿಗೆ ತರಬೇಕು. ಹಾಗಾದಾಗ ಮಾತ್ರ ಅವರ ನೋವಿಗೆ ಸ್ಪಂದಿಸುವ ಮನೋಭೂಮಿಕೆ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಂಘ ಸಂಸ್ಥೆಗಳು ದೊಂಬಿದಾಸ ಸಮುದಾಯದವರೊಡನೆ ಬೆರೆಯುವ ಸಹಾಯಮಾಡುವ ಮತ್ತು ಇತರೆ ಯಾವುದೇ ಪ್ರಗತಿಯ ಕೆಲಸ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಪಾಲ್ಗೊಳ್ಳುವಂತೆ ಸಹಕರಿಸಬೇಕು. ಭಾರತ ರಾಷ್ಟ್ರೀಯ ಅಲೆಮಾರಿ ಮತ್ತು ಅರೆ-ಮಾಲೆಮಾರಿ ಆಯೋಗದ ಅಧ್ಯಯನದ ತಂಡ, ಕೇಂದ್ರ ಸರ್ಕಾರಕ್ಕೆ ಕೇವಲ ವರದಿಯನ್ನು ಸಲ್ಲಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಬದಲಾಗಿ ಆ ನಿಟ್ಟಿನಲ್ಲಿ ಸಕ್ರಿಯವಾಗಿ ಆ ವರದಿಯನ್ನು ಕಾರ‍್ಯಗತಗೊಳಿಸಬೇಕು. ನೊಂದವರ ನೋವಿಗೆ ಸ್ಪಂದಿಸುವ ಮಾನವೀಯ ಕಾಳಜಿ ಯಾವ ಸರ್ಕಾರ ಅಥವಾ ಜನ ಪ್ರತಿನಿಧಿಗಳಿಗಿರುತ್ತದೆಯೋ ಆಗ ಮಾತ್ರ ಸಂವಿಧಾನದ ಎಲ್ಲ ಮೂಲ ಆಶಯ ಮತ್ತು ಗೊತ್ತುಗುರಿಗಳು ಈಡೇರಲು ಸಾಧ್ಯವಾಗುತ್ತದೆ.

 

ಪರಾಮರ್ಶನ ಗ್ರಂಥಗಳು

೧.   ಕನ್ನಡ ವಿಶ್ವಕೋಶ-ಮೈಸೂರು ವಿಶ್ವವಿದ್ಯಾನಿಲಯ

೨.   ಏಕತಾರಿ-ದೊಂಬಿದಾಸರ ಕ್ಷೇಮಾಭಿವೃದ್ಧಿ ಯುವಕ ಸಂಘ, ಮೈಸೂರು

೩.    ಜನಪದ ಲೌಕಿಕ ಕಾವ್ಯ ಸಂಪ್ರದಾಯಗಳು-ಜೀಶಂಪ

೪.   ಕುಪ್ಪೆನಾಗರಾಜ್(ಹುಣಸೂರು ತಾ)-ಈ ಪ್ರಬಂಧ ಸಿದ್ಧಪಡಿಸುವಲ್ಲಿ ಇವರು (ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಡ್‌ಅಕೌಂಟೆಂಟ್ ಆಗಿದ್ದಾರೆ) ತಮ್ಮ ಜನಾಂಗದ ಬಗ್ಗೆ ಕಿರುಮಾಹಿತಿ ಒದಗಿಸಿದ್ದಾರೆ.
೫. ಪರಮೇಶ್‌ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಮೈಸೂರು ಜಿಲ್ಲೆ; ಇವರು ಈ ಪ್ರಬಂಧ ಸಿದ್ಧಪಡಿಸುವ ಸಂದರ್ಭದಲ್ಲಿ ಸೂಕ್ತ ಮಾಹಿತಿ ನೀಡಿ ಸಹಕರಿಸಿದ್ದಾರೆ.

* * *