ಅಯ್ಯಾ ಮರಿ
ನೀನು ಕುರಿಯಾಗು
ಅಥವಾ ನರಿಯಾಗು.

ಕುರಿಯಾದರೆ,
ವಾಸಕ್ಕೆ ಬೆಚ್ಚನೆ ರೊಪ್ಪ
ಹಚ್ಚನೆಯ ಕಂಟ್ರಾಕ್ಟು ಹಿಡಿದ ಹುಲ್ಗಾವಲು
ಕೆಂಪು ಕಣ್ಣಿನ, ಜೋಲು ನಾಲಗೆಯ
ಡೊಂಕು ಬಾಲದ ರಕ್ಷೆ
ಎಂದೂ ಯಾವುದಕ್ಕೂ ನೀನಾಗಿ ಯೋಚಿಸುವ
ಕಷ್ಟವೇ ಇಲ್ಲ.

ಸುಮ್ಮನೆ ಕುರುಬ ಹೇಳಿದ ಹಾಗೆ ಒಂದರ
ಸಂದಿಯೊಳಗೊಂದು ತಲೆ ತೂರಿಸುತ್ತಾ
ಕಾಲ ಕಾಲಕ್ಕೆ ಕತ್ತರಿಯಾಡಿಸುವ ಕೈಗೆ
ಮೈಮೇಲೆ ಬೆಳೆದ ತುಪ್ಪಟವನ್ನೊಪ್ಪಿಸುತ್ತಾ
ತೋರಣಕ್ಕೆ ತಂದ ತಳಿರ ಮೇಯುತ್ತಾ
ಹಾಯಾಗಿ ಬದುಕಬಹುದು.

ನರಿಯಾದರೆ,
ಮೃಗರಾಜನಾಸ್ಥಾನದಲ್ಲಿ ಪಾದಪೀಠದ ಮೇಲೆ
ಥಳಥಳ ಹೊಳೆವ ಬೂಡ್ಸುಗಳ ಕನ್ನಡಿಯಲ್ಲಿ
ಮುಖ ನೋಡಿಕೊಂಡು ಹಲ್ಲು ಕಿರಿಯುತ್ತಾ
ತಿಂದೆಸೆದ ಸಿಂಹಪಾಲಿಗೆ ಬಾಧ್ಯಸ್ಥನಾಗಿ
ಬಾಲವಲ್ಲಾಡಿಸುತ್ತಾ
ಹದ್ದುಗಳ ಜೊತೆಗೆ
ಹಾಯಾಗಿ ಬದುಕಬಹುದು.

ಈ ಎರಡೂ ಆಗದೆ ಮನುಷ್ಯನಾಗಿ ಬದುಕುತ್ತೇನೆ
ಎಂದರೆ,
ಬಂತು ನಿನಗೆ ತೊಂದರೆ,
ಆದ್ದರಿಂದ ಹೇಳುತ್ತೇನೆ ಕೇಳು ಮರೀ
ನೀನಾಗು ಕುರಿ
ಅಥವಾ ನರಿ.