Garani venkatesh

ಅನುಕರಣೆಯ ಮೂಲಕ ಕಲಿಕೆ- ಎನ್ನುವುದು ಈ ಜಗತ್ತಿನ ಬದುಕಿನ ಮೂಲಸೂತ್ರ. ಈ ಪ್ರಪಂಚದ ಪ್ರತಿಯೊಂದು ಪ್ರಾಣಿಪಕ್ಷಿಯೂ ಹುಟ್ಟಿನಿಂದ ಮೊದಲುಗೊಂಡು ಸಾಯುವವರೆಗೂ ತನ್ನ ಪೋಷಕರ ಮತ್ತು ಸುತ್ತಲಿನ ಸಮಾಜದ ನಡೆವಳಿಕೆಯನ್ನು ನೋಡುತ್ತ ಅನುಕರಿಸುತ್ತ ತನ್ನ ಬದುಕನ್ನು ರೂಪಿಸಿಕೊಳ್ಳುತ್ತ ಬೆಳೆಯುತ್ತದೆ. ಆನುವಂಶಿಕ ಗುಣಗಳೊಂದಿಗೆ ಬದುಕಿನ ರೀತಿನೀತಿಗಳನ್ನು ಅನುಕರಿಸಿ ಬೆಳೆಯುವ ಗುಣವೂ ಜೀವಿಗೆ ರಕ್ತಗತವಾಗಿರುತ್ತದೆ. ಇರುವೆಯಿಂದ ಆನೆಯವರೆಗೆ, ಇಲಿಯಿಂದ ಹುಲಿಯವರೆಗೆ, ಮಂಗನಿಂದ ಮಾನವನವರೆಗೆ ಈ ಜೀವನಸೂತ್ರವು ಹಾಸುಹೊಕ್ಕಾಗಿರುವುದನ್ನು ಗಮನಿಸಬಹುದು.

ಆದರೆ, ಜೀವಜಗತ್ತಿನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹೊಸ ಪೀಳಿಗೆಯೊಂದಕ್ಕೆ ತನ್ನ ಹಿರಿಯ ತಲೆಮಾರನ್ನು ಅನುಕರಿಸಬಾರದೆಂದು ಎಚ್ಚರಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಮುಂದಿನ ಪೀಳಿಗೆಗಳಿಗೆ ಈ ಜಗತ್ತನ್ನು ಸುರಕ್ಷಿತವಾಗಿ ಉಳಿಸಿಹೋಗುವುದಕ್ಕೆ ಇಂತಹುದೊಂದು ವಿಚಿತ್ರ ಎಚ್ಚರಿಕೆಯು ಅವಶ್ಯಕವೂ ಆಗಿದೆ. ಜೀವಲೋಕದ ಅತಿಬುದ್ಧಿವಂತಜೀವಿ ಎನ್ನಿಸಿಕೊಂಡಿರುವ ಮನುಷ್ಯನೇ ತನ್ನ ಸಂತಾನಕ್ಕೆ ಈ ಎಚ್ಚರಿಕೆಯನ್ನು ಕೊಡಬೇಕಾಗಿ ಬಂದಿರುವುದು ವರ್ತಮಾನದ ಅತಿಕ್ರೂರ ವ್ಯಂಗ್ಯವೂ ಆಗಿರುವುದು ದುರ್ದೈವ.

ವಿಕಾಸಪಥದಲ್ಲಿ ಮನುಷ್ಯನೆಂಬ ಪ್ರಾಣಿ ಜೀವಿಲೋಕದ ಅತ್ಯಂತ ಕಿರಿಯ ಸದಸ್ಯ. ಅಂದರೆ, ಮನುಷ್ಯನೆಂಬುವನು ಈ ಭೂಮಿಗೆ ಅವತರಿಸಿರುವುದು ಉಳಿದೆಲ್ಲ ಜೀವಿಗಳಿಗಿಂತ ತೀರಾ ಇತ್ತೀಚೆಗೆ. ಶಿಕ್ಷೆಯೇ ಇಲ್ಲದೆ ಅತಿಮುದ್ದುಮಾಡಿ ಬೆಳೆಸಿದರೆ ಮಕ್ಕಳು ಕೆಡುವರಂತೆ.  ಈ ಪ್ರಪಂಚದ ಜೀವಿಗಳಲ್ಲಿ ಅತಿಚಿಕ್ಕವನೆಂದು ಯಾರೂ ಮುದ್ದುಮಾಡದೆ ಹೋದರೂ, ತನ್ನನ್ನು ಹತೋಟಿಯಲ್ಲಿಡುವವರು ಯಾರೂ ಇಲ್ಲದವನಂತೆಯೇ ಮನುಷ್ಯ ಬೆಳೆದುಬಿಟ್ಟ. ಮರದ ಕೊಂಬೆಯನ್ನು ಕತ್ತರಿಸಿ ಮಾಡಿದ ಕಾವು ಕೊಡಲಿಗೆ ಸೇರಿ ತನ್ನ ಕುಲಕ್ಕೆ ಮಾತ್ರವೇ ಮೃತ್ಯುವಾದರೆ, ಈ ಮನುಷ್ಯ ಇಡೀ ಜೀವಲೋಕಕ್ಕೇ ಮಾರಕವಾಗಿ ಬೆಳೆದು ತನ್ನನ್ನೂ ಲೋಕವನ್ನೂ ಅಪಾಯದ ಅಂಚಿಗೆ ತಂದೊಡ್ಡಿದ್ದಾನೆ.

ಕೋಟ್ಯಂತರ ವರುಷಗಳಿಂದ ಕ್ರಮಶಃ ರೂಪುಗೊಳ್ಳುತ್ತ ಬಂದಿರುವ ವಿಕಾಸಶೀಲ ಜೀವಜಗತ್ತು ಅವಸಾನದತ್ತ ಸಾಗಿದೆಯೇ? ಹೌದಾದರೆ, ಇದಕ್ಕೆ ಮನುಷ್ಯನೊಬ್ಬನ್ನನ್ನೇ ಹೊಣೆಮಾಡುವುದು ಹೇಗೆ, ಎನ್ನುತ್ತೀರಾ?

ಈ ಲೋಕದ ಎಲ್ಲ ಜೀವಿಗಳೂ ನಿಸರ್ಗದ ನಿಯಮಗಳಿಗೆ ಬದ್ಧವಾಗಿರುವುದನ್ನು ತಪ್ಪದೆ ಅನುಸರಿಸುತ್ತವೆ. ತಮ್ಮ ದಿನನಿತ್ಯದ ಬದುಕಿಗೆ ಯಾವುದೇ ಅಡ್ಡಿಆತಂಕಗಳಿದ್ದರೂ ಜೀವಿಗಳು ನಿಸರ್ಗವನ್ನು ಮೀರಿ ಹೋಗುವುದಿಲ್ಲ. ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿಶಾಲಿಯೆನಿಸಿಕೊಂಡಿರುವ ಮಾನವ ಮಾತ್ರವೇ ಪ್ರತಿಕ್ಷಣದಲ್ಲೂ ನಿಸರ್ಗವನ್ನು ಅತಿಕ್ರಮಿಸುವ ವಿಪರೀತ ಧಾರ್ಷ್ಟ್ಯವನ್ನು ಪ್ರದರ್ಶಿಸುತ್ತಿದ್ದಾನೆ.

ಅನೇಕ ಜಾತಿಯ ಪ್ರಾಣಿಪಕ್ಷಿಗಳೂ ಕ್ರಿಮಿಕೀಟಗಳೂ ಜೀವಲೋಕದಲ್ಲಿವೆ. ಇವೆಲ್ಲವೂ ಒಂದರ ಬದುಕಿಗೊಂದು ಅಡ್ಡಬಾರದಂತೆ ಆತಂಕವೊಡ್ಡದಂತೆ ಎಚ್ಚರವಹಿಸುತ್ತವೆ, ಆಹಾರಕ್ಕಾಗಿ ಬೇಟೆಯಾಡುವ ಪ್ರವೃತ್ತಿಯ ಜೀವಿಗಳೂ ಅವಶ್ಯಕತೆಯಿದ್ದಹೊರತು ಆಕ್ರಮಣಶೀಲತೆಯನ್ನು ತೋರುವುದಿಲ್ಲ. ಹಗಲಿನಲ್ಲಿ ಬೇಟೆಯಾಡುವ ಕೆನ್ನಾಯಿಗಳು ಹುಲಿಯಂತೆ ಇರುಳುಬೇಟೆಗೆ ಹೋಗುವುದಿಲ್ಲ. ಹುಲಿ ಅಡ್ಡಾಡುವ ಜಾಗದಿಂದ ಚಿರತೆ ದೂರವೇ ಉಳಿಯುತ್ತದೆ. ನೆಲದಲ್ಲಿ ಗೂಡು ಕಟ್ಟುವ ಜೇಡಕ್ಕೆ ಎತ್ತರದಲ್ಲಿ ಹಾರಾಡುವ ಕೀಟದ ಆಸೆಯಿಲ್ಲ. ಹದ್ದು, ಗರುಡಗಳಿಗೆ ಗುಬ್ಬಚ್ಚಿಯ ಆಹಾರವನ್ನು ಕಸಿಯುವ ಚಿಂತೆಯಿಲ್ಲ. ಆದರೆ, ಸದಾ ಕಂಡವರ ಪಾಲನ್ನು ಕಬಳಿಸುವತ್ತಲೇ  ಕೈಚಾಚುವ ಮಾನವನ ಪ್ರವೃತ್ತಿಯನ್ನೊಮ್ಮೆ ಗಮನಿಸಿ. ಪ್ರಾಚೀನಕಾಲದಿಂದಲೂ ಮಾನವರ ಇತಿವೃತ್ತವನ್ನು ರಕ್ತದಿಂದ ಕೆಂಪಾಗಿಸಿರುವ ಯುದ್ಧಗಳಿಗೆ ನೆಪವೊಂದೇ –ದುರಾಸೆ!

ನಿಸರ್ಗದಲ್ಲಿ ಯಾವುದೂ ವ್ಯರ್ಥವಾಗುವುದಿಲ್ಲ. ತಾನು ಬಲಿತೆಗೆದುಕೊಂಡ ಜಿಂಕೆಯ  ಮಾಂಸವಷ್ಟನ್ನು ಹುಲಿ ಭಕ್ಷಿಸಿ ಹೋದ ಮೇಲೆ ಉಳಿಕೆಯನ್ನು ತಿನ್ನಲು ಹಂದಿನರಿಗಳು ಕಾದಿರುತ್ತವೆ, ಅವು ಬಿಟ್ಟುಹೋದ ಅವಶೇಷಗಳು ಹದ್ದುಕಾಗೆಗಳ ಪಾಲು. ಇನ್ನೂ ಉಳಿದದ್ದು ಹುಳಹುಪ್ಪಟೆಗಳಿಗೆ ಆಹಾರವಾಗಿ ಮಣ್ಣುಸೇರುತ್ತದೆ. ಒಂದೇ ಒಂದು ಮದುವೆಯ ಸಮಾರಂಭದಲ್ಲಿ ನಾವು ಪೋಲುಮಾಡುವ ಆಹಾರ ಎಷ್ಟಿರಬಹುದೆಂಬುದನ್ನು ಅಂದಾಜುಮಾಡಿಕೊಳ್ಳೋಣ. ಇನ್ನೊಂದೆಡೆ ಹಸಿವೆಯಿಂದಲೇ ನರಳಿಸಾಯುವ ಮನುಷ್ಯಜೀವಿಗಳ ಸಂಖ್ಯೆಯೂ ನಮ್ಮನ್ನು ಮೂದಲಿಸುವಷ್ಟಿದೆ.

ಕಾಡಿನಲ್ಲಿ ಎಷ್ಟೇ ಪ್ರಾಣಿಗಳು ಸತ್ತರೂ ಸಾವಿರಾರು ಮರಗಳ ಎಲೆಕೊಂಬೆಗಳು ಬಿದ್ದು ಕೊಳೆತರೂ ಅಲ್ಲಿ ದುರ್ವಾಸನೆಯಿಲ್ಲ. ತ್ಯಾಜ್ಯವೆಂಬುದಿಲ್ಲ. ಎಲ್ಲವೂ ಮಣ್ಣುಸೇರಿ ಫಲವತ್ತತೆಯನ್ನು ಮಿಗಿಲುಗೊಳಿಸುತ್ತವೆ. ನೂರಾರು ಕಿ.ಮೀ. ವಿಸ್ತೀರ್ಣದ ಅರಣ್ಯದಲ್ಲಿ ಮೇಲುಪದರದಲ್ಲಿ ಬಿದ್ದ ಕಳೇಬರ, ತರಗುರೆಂಬೆಗಳನ್ನು ಮಣ್ಣಿಗೆ ಸೇರಿಸುವುದಕ್ಕಾಗಿಯೇ ಸನ್ನದ್ಧವಾದ ಕ್ರಿಮಿಕೀಟಗಳ ಕ್ರಿಯಾಶೀಲ ಪಡೆಯ ನಿರಂತರ ಸೇವಾ ವ್ಯವಸ್ಥೆಯಿದೆ. ಕೋಟಿಗಟ್ಟಲೆ ಹಣ ಖರ್ಚುಮಾಡಿಯೂ ಬೆಂಗಳೂರಿನಂತಹ ನಗರವೊಂದರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗದೆ ನಮ್ಮ ವ್ಯವಸ್ಥೆ ಕೈಚೆಲ್ಲಿಕುಳಿತಿರುವುದನ್ನು ನಿತ್ಯವೂ ನೋಡುತ್ತಿದ್ದೇವಲ್ಲ!

ಪ್ರಕೃತಿಯಲ್ಲಿ ವ್ಯರ್ಥವೆಂಬುದಿಲ್ಲ. ಪರಿಸರವಿಜ್ಞಾನಿಗಳ ಈ ಮಾತನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸುವುದಾದರೆ ಪ್ರಕೃತಿ ಜೀರ್ಣಿಸಿಕೊಳ್ಳಲಾಗದ, ಅದಕ್ಕೆ ಅಪಾಯವೊಡ್ಡುವ ಯಾವ ವಸ್ತುವನ್ನೂ ಪ್ರಕೃತಿಗೆ ಸೇರಿಸಬಾರದು. ನಾಗರಿಕ ಮಾನವ ತನ್ನ ಅನುಕೂಲಕ್ಕಾಗಿ ತಯಾರಿಸಿಕೊಂಡ ಅದೆಷ್ಟು ರಾಸಾಯನಿಕಗಳು ನಿಸರ್ಗದಲ್ಲಿ ನಿರಪಾಯಕಾರಿಯಾಗಿ ಬೆರೆಯಬಲ್ಲುವು ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವೇ ಇಲ್ಲ. ನಮ್ಮ ರಸ್ತೆಗಳುದ್ದಕ್ಕೂ ಹಾರಾಡುವ ಪ್ಲಾಸ್ಟಿಕ್ ಚೀಲಗಳೂ, ಚಾಕೊಲೇಟ್ ಸುತ್ತುಕಾಗದಗಳೂ, ಬಳಸಿ ಬಿಸಾಡಿದ ಪೆನ್ನಿನ ರೀಫಿಲ್ಲುಗಳೂ, ಇಂಜೆಕ್ಷನ್ ಸಿರಿಂಜುಗಳೂ, ವಿದ್ಯುದ್ದೀಪದ ಬುರುಡೆಗಳೂ ಶತಶತಮಾನಗಳು ಕಳೆದರೂ ಮಣ್ಣಿನಲ್ಲಿ ಕರಗದೆ ಉಳಿದು ನಮ್ಮ ಮೂರ್ಖತನವನ್ನು ಮೆರೆಸುತ್ತಿರುತ್ತವೆ.

ಹುಟ್ಟುಸಾವುಗಳ ನಡುವಣ ಬದುಕು ಒಂದು ಸವಾಲು. ದಿನನಿತ್ಯ ಈ ಬದುಕನ್ನು ನಡೆಸಲು ಸೂಕ್ತಸಿದ್ಧತೆ ಅತ್ಯವಶ್ಯ- ಎನ್ನುವ ಸತ್ಯ ಜೀವಲೋಕಕ್ಕೆ ಸ್ಪಷ್ಟವಾಗಿ ತಿಳಿದಿರುತ್ತದೆ. ಅದಕ್ಕೆ ತಕ್ಕಂತೆ ಸೂಕ್ತ ಹೊಂದಾಣಿಕೆಗಳು ಸದ್ದಿಲ್ಲದೆ ನಡೆದಿರುತ್ತವೆ. ತನ್ನ ಗೂಡು ಶತ್ರುಗಳಿಗೆ ಪತ್ತೆಯಾಗದಿರಲೆಂದು ಪಕ್ಷಿ ಕಲ್ಲುಹೂ, ನಾರು, ಬಲೆಗಳನ್ನು ಅಂಟಿಸುವ ಕಸರತ್ತುಮಾಡುತ್ತದೆ. ಕಾಗೆ ಗೂಡುಕಟ್ಟಿ ಮೊಟ್ಟೆಯಿಡುವುದನ್ನೇ ಕೋಗಿಲೆ ನಿರೀಕ್ಷಿಸುತ್ತಿರುತ್ತದೆ. ತನ್ನೆರಡು ಮೊಟ್ಟೆಗಳನ್ನು ಬಾಡಿಗೆತಾಯಿಗೆ ವಹಿಸಬೇಕಲ್ಲ!  ಹತ್ತಿಪ್ಪತ್ತು ಸದಸ್ಯರಿರುವ ಕೆನ್ನಾಯಿಗಳ ತಂಡದ ಹೆಣ್ಣುಗಳೆಲ್ಲ ಮರಿಮಾಡುವುದಿಲ್ಲ. ಸದಸ್ಯರ ಸಂಖ್ಯೆ ಹೆಚ್ಚಿದರೆ ಎಲ್ಲರ ಹೊಟ್ಟೆ ತುಂಬಿಸುವುದೆಂತು? ಗುಂಪಿನ ನಾಯಕ-ನಾಯಕಿಯರಿಗಷ್ಟೇ ಸಂತಾನಬೆಳೆಸುವ ಅಧಿಕಾರ. ಉಳಿದ ಸದಸ್ಯರು ಶಿಶುಪಾಲನೆಯಲ್ಲಿ ಪಾಲುದಾರರು. ಜಿಂಕೆ ಮರಿಮಾಡುವ ಸಮಯವೇ ಹುಲಿಗೂ ಮರಿಸಾಕಲು ಆದರ್ಶವಾದ ಅವಧಿ. ಮರಿಬಿಟ್ಟು ಬೇಟೆಗಾಗಿ ದೂರಹೋಗಲು ಆಗದ ತಾಯಿಹುಲಿಗೆ ಜಿಂಕೆಯನ್ನು ಕೊಲ್ಲಲಾಗದಿದ್ದರೂ ಅದರ ಮರಿಯಾದರೂ ಸಿಕ್ಕೀತು. ಇಷ್ಟೆಲ್ಲ ಸಂಕೀರ್ಣವಾದ ಜೀವವ್ಯವಸ್ಥೆಯ ಸಮತೋಲನಕ್ಕೆ  ಜೀವಿಗಳ ಸಂಖ್ಯಾಮಿತಿಯೂ ಬಹುಮುಖ್ಯ. ಗೊತ್ತುಗುರಿಯಿಲ್ಲದೆ ಬೆಳೆದಿರುವ ಮಾನವಕುಲದ ಜನಸಂಖ್ಯೆಯು ನಮ್ಮ ಸಾಮಾಜಿಕ-ಆರ್ಥಿಕ-ಭೌಗೋಳಿಕ ಸ್ಥಿತಿಗತಿಗಳ ಮೇಲೆ ಬೀರಿರುವ ದುಷ್ಪರಿಣಾಮಗಳು ಗೋಚರಿಸುತ್ತಲೇ ಇವೆ.

ಪ್ರಕೃತಿಯು ಅಂದಂದಿಗೆ ತಮಗೆ ಅಗತ್ಯವಾದುದನ್ನು ಕೊಟ್ಟೇಕೊಡುವುದೆಂಬ ಭರವಸೆಯೇ ಸಮಸ್ತ ಜೀವರಾಶಿಯಲ್ಲಿ ಜೀವನಶ್ರದ್ಧೆಯನ್ನು ಉಳಿಸಿದೆ. ಇರುವುದೆಲ್ಲವನ್ನೂ ಬಗೆದು ದೋಚುವ ಪ್ರವೃತ್ತಿ ಈ ಜೀವಜಗತ್ತಿನಲ್ಲಿ ಕಾಣುವುದಿಲ್ಲ. ನೂರಾರು ವರ್ಷಗಳಿಂದ ಬೆಳೆದುನಿಂತಿರುವ ಮರಗಳನ್ನೂ, ಸಾವಿರಾರು ವರ್ಷಗಳಿಂದ ಸಂಚಯನಗೊಂಡಿರುವ ಖನಿಜ ಹಾಗೂ ಇಂಧನಸಂಪತ್ತನ್ನೂ ತನ್ನ ತಾತ್ಕಾಲಿಕ ಅಗತ್ಯಗಳಿಗಾಗಿ ಕಳೆದ ಐವತ್ತು ವರುಷಗಳಲ್ಲಿ ಲೂಟಿಮಾಡಿರುವ ಮನುಷ್ಯನ ದುರಾಸೆ ಹೀಗೆಯೇ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ಉಳಿಯಬಹುದಾದ ಭೂಮಿಯ ಸ್ಥಿತಿ ಹೇಗಿದ್ದೀತು ಎನ್ನುವುದು ನಮ್ಮ ನಿಮ್ಮ ಊಹೆಗೆ ಬಿಟ್ಟ ವಿಷಯ.

Garani venkatesh

(ಚಿತ್ರ ಕೃಪೆ:  ಗರಣಿ ವೆಂಕಟೇಶ್)