. ದೊಡ್ಡೇರಿ ಕದನ: ಚಿತ್ರದುರ್ಗ ಚರಿತ್ರೆಯ ರೋಚಕ ಅಧ್ಯಾಯ

ಚಿತ್ರದುರ್ಗದ ಪ್ರಸಿದ್ಧ ದೊರೆ ಬಿಚ್ಚುಗತ್ತಿ ಭರಮಣ್ಣ ನಾಯಕನ (೧೬೮೯-೧೭೨೧) ಅವಧಿಯಲ್ಲಿ ನಡೆದ ದೊಡ್ಡೇರಿ ಕದನವು ದಕ್ಷಿಣಭಾರತದ ಇತಿಹಾಸ ಪುಟದಲ್ಲಿ ತನ್ನದೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಲ್ಲದೆ, ಕರ್ನಾಟಕದಲ್ಲಿ ಮರಾಠರ ಸೇನಾಪತಿ ಸಂತಾಜಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಲ್ಲದೆ, ಕರ್ನಾಟಕದಲ್ಲಿ ಮರಾಠರ ಸೇನಾಪತಿ ಸಂತಾಜಿ ಘೋರ್ಪಡೆ ನಡೆಸಿದ ಯುದ್ಧಗಳಲ್ಲೆ ಇದು ಹೆಮ್ಮೆಪಡುವಂಥಾದ್ದೆಂದು ಭಾವಿಸಲ್ಪಟ್ಟಿದೆ. ಮರಾಠರು ಮತ್ತು ಮೊಗಲರ ಸೇನೆಯು ಚಿತ್ರದುರ್ಗದ ಗಡಿಭಾಗದ ಪ್ರದೇಶವಾದ ದೊಡ್ಡೇರಿಯಲ್ಲಿ (ಚಳ್ಳಕೆರೆ ತಾಲ್ಲೂಕು) ನಡೆಸಿದ ಹೋರಾಟದಲ್ಲಿ ಭರಮಣ್ಣ ನಾಯಕ ಹಾಗೂ ಈತನ ಮಗ ಹಿರೇಮದಕರಿನಾಯಕರು ಭಾಗವಹಿಸಿದ್ದುದು ವಿಶೇಷ. ದೊಡ್ಡೇರಿಯನ್ನು ಉಳಿಸಿಕೊಳ್ಳುವಲ್ಲಿ ಈ ನಾಯಕ ಪ್ರಯಾಸಪಡಬೇಕಾಯಿತು. ಮರಾಠೀ, ಫಾರ್ಸೀ ಮತ್ತು ಕನ್ನಡ ಆಕರಗಳು ಈ ದೊಡ್ಡೇರಿ ಕದನವನ್ನು ವಿವರವಾಗಿ ನಿರೂಪಿಸುತ್ತವೆ. ಇದರಿಂದ ಈ ಕದನಕ್ಕಿರುವ ಮಹತ್ವವು ಮನದಟ್ಟಾಗುತ್ತದೆ. ಸಮಕಾಲೀನ ಫಾರ್ಸೀ ಕೃತಿ ‘ಮಾಸಿರ್-ಇ-ಅಲಂಗೀರಿ’ (ಸಾಖಿ ಮುಸ್ತಾದ್ ಖಾನ್), ಆ ನಂತರದ ‘ಮುಂತಖಾಬ್-ಉಲ್-ಲುಬಾಬ್-ಇ-ಮುಹಮ್ಮದ್‌ಶಾಹಿ’ (ಖಾಫಿಖಾನ್); ಮರಾಠೀ ಭಾಷೆಯಲ್ಲಿರುವ ‘ಶಿವಚರಿತ್ರಪ್ರದೀಪ’, ‘ಜೇಢೆಶಕಾವಲಿ’ ಮೊದಲಾದವು ದೊಡ್ಡೇರಿ ಕದನದ ಬಗೆಗೆ ಪ್ರಸ್ತಾಪಿಸುವುದು ಗಮನಾರ್ಹ. ಆಧುನಿಕ ಇತಿಹಾಸಕರರೂ ತಮ್ಮ ಮರಾಠೀ ಹಾಗೂ ಆಂಗ್ಲಭಾಷಾ ಕೃತಿಗಳಲ್ಲಿ ಈ ಕದನ ಕುರಿತು ಸ್ವಲ್ಪಮಟ್ಟಿಗಾದರೂ ವಿವರ ನೀಡಿದ್ದಾರೆ. ಈ ಕದನವನ್ನು ವರ್ಣಿಸುವ ಜನಪದ ಕಥನಗೀತೆಯೊಂದು ಕನ್ನಡಭಾಷೆಯಲ್ಲಿದೆ. (ಈ ಕುರಿತು ಮುಂದೆ ಪ್ರಸ್ತಾಪಿಸಿದೆ).

೧೬೯೨ರ ವೇಳೆಗೆ ಮರಾಠಾ ಸೇನೆಯು ಗುಲಬರ್ಗಾ ಪರಿಸರದಲ್ಲಿ ತಲೆಹಾಕಿತು. ಇದೇ ವೇಳೆಗೆ ಸಂತಾಜಿ ಘೋರ್ಪಡೆಯೂ ತನ್ನ ದಂಡಿನೊಡನೆ ಕರ್ನಾಟಕದಲ್ಲಿ ಮೊಗಲರ ಮೇಲೆ ದಾಳಿ ನಡೆಸತೊಡಗಿದ್ದ. ಹಲವಾರು ಹೆಸರಾಂತ ಮೊಗಲ್ ಸರದಾರರು/ಸೇನಾನಿಗಳು ಅವನ ಕೈಯಲ್ಲಿ ಸೋಲನ್ನನುಭವಿಸಿದರು. ಸಂತಾಜಿಯು ಜಿಂಜಿಯಲ್ಲಿದ್ದ ಶಿವಾಜಿಯ ಇನ್ನೊಬ್ಬ ಮಗ ರಾಜಾರಾಮನನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಹಾಗೂ ಕರ್ನಾಟಕದಲ್ಲಿ ಔರಂಗಜೇಬನ ಸೇನೆಯನ್ನು ಎದುರಿಸಲು ಮಹಾರಾಷ್ಟ್ರದಿಂದ ಅಲ್ಲಿಗೆ ಬಂದಿದ್ದ. ಮರಾಠಾ ಸರದಾರರಿಗೆ ಒಗ್ಗಿ ಹೋಗಿದ್ದ ಗನೀಮ (ಕೊಳ್ಳೆಹೊಡೆಯುವ) ಯುದ್ಧದಲ್ಲಿ ನಿಷ್ಣಾತನಾಗಿದ್ದನೆಂದೂ ಕೊಪ್ಪಳ ಇವನ ಜಹಗೀರಾಗಿದ್ದಿತೆಂದೂ ವ್ಯಕ್ತಪಡುತ್ತದೆ. ೧೬೯೫ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಸಂತಾಜಿಯು ಜಿಂಜಿಯಿಂದ ಹಿಂದಿರುಗಿದನಲ್ಲದೆ, ಮೊಗಲರಿಗೆ ಸೇರಿದ ಕರ್ನಾಟಕದ ಪ್ರದೇಶಗಳನ್ನು ಕೊಳ್ಳೆಹೊಡೆಯ ತೊಡಗಿದ. ಈ ಕಾರಣಕ್ಕಾಗಿಯೇ ಬಿಜಾಪುರ ಗಡಿಪ್ರದೇಶವನ್ನು ರಕ್ಷಿಸಲು ಔರಂಗಜೇಬನಿಂದ ನೇಮಿಸಲ್ಪಟ್ಟಿದ್ದ ಹಿಮ್ಮತ್‌ಖಾನನು ಸಂತಾಜಿಯ ಬೆನ್ನುಹತ್ತಿದ. ಆಗ ಇಸ್ಲಾಂಪುರಿ (ಭೀಮಾತೀರದ ಬ್ರಹ್ಮಪುರಿ) ಎಂಬಲ್ಲಿ ಬಿಡಾರಹೂಡಿದ್ದ ಔರಂಗಜೇಬನಿಗೆ ಸಂತಾಜಿ ತನ್ನ ಅಧೀನದ ಪ್ರದೇಶಗಳಲ್ಲಿ ಕೊಳ್ಳೆಹೊಡೆಯುತ್ತಿದ್ದುದು ತಿಳಿದಿತ್ತು; ಹಾಗೂ ಸಂತಾಜಿ ಕೊಳ್ಳೆಹೊಡೆದ ದೊಡ್ಡಪ್ರಮಾಣದ ಹೇರುಗಳನ್ನು ಮೈಸೂರು ಸಂಸ್ಥಾನದ ವಾಯುವ್ಯದ ಕಡೆಗೆ, ಮುಖ್ಯವಾಗಿ ಅವನ ಜಹಗೀರಾದ ಕೊಪ್ಪಳದ ಕಡೆಗೆ ತ್ವರೆಯಿಂದ ಸಾಗಿಸುತ್ತಿದ್ದದೂ ಗಮನಕ್ಕೆ ಬಂದಿತ್ತು. ಸಂತಾಜಿಯನ್ನು ಸೋಲಿಸಿ ಕೊಂದುಹಾಕಲು ಆತ ಕೆಲವಾರು ಮಂದಿ ದಖ್ಖನ್ ಸರದಾರರನ್ನು ನೇಮಿಸಿದ; ಹಾಗೂ ಅವರನ್ನು ಯುವರಾಜ ಕಾಮ್‌ಬಕ್ಷ್‌ನ ಸೇನೆಯೊಡನೆ ಸೇರಿಸಿದ.

ಈ ವೇಳೆಗಾಗಲೇ ಸಂತಾಜಿಯು ಕರ್ನಾಟಕದತ್ತ ಸಾಗಿ ಮಾರ್ಗದಲ್ಲಿಯ ಊರುಗಳನ್ನೂ ಹಳ್ಳಿಗಳನ್ನೂ ಲೂಟಿಮಾಡತೊಡಗಿದ್ದ; ಆಸ್ತಿಪಾಸ್ತಿಗಳಿಗೆ ಬೆಂಕಿಹಚ್ಚಿ ಅವಾಂತರ ಮಾಡ ತೊಡಗಿದ್ದ. ಇದರಿಂದ ಇನ್ನಷ್ಟು ಕ್ರುದ್ಧನಾದ ಔರಂಗಜೇಬನು ಸಂತಾಜಿಯನ್ನು ಸದೆಬಡಿಯಲು ನಿಯೋಜಿಸಿದ ಸೇನೆಯ ಸಂಖ್ಯೆ ೫,೦೦೦. ಆದರೆ ಆತ ತನ್ನ ಲಿಖಿತ ಆದೇಶದಲ್ಲಿ ತೀವ್ರತೆಯನ್ನು ಮನಗಾಣಿಸುತ್ತದೆ. ಮೊಗಲರ ಪರವಾಗಿ ಕರ್ನಾಟಕದ ಫೌಜುದಾರ್ ಹಾಗೂ ಸಿರಾಪ್ರಾಂತ್ಯದ ಅಧಿಕಾರಿಯೂ ಆಗಿದ್ದ ಸೈಯದ್ ಖಾಸಿಂಖಾನನಿಗೆ ಸಂತಾಜಿಯನ್ನು ಎದುರಿಸುವಂತೆ ಸೂಚಿಸಲಾಯಿತು. ಖಾಸಿಂಖಾನನಾದರೊ ಅತ್ಯುತ್ತಮ ಸೇನೆಯನ್ನೂ ಫಿರಂಗಿದಳವನ್ನೂ ಹೊಂದಿದ್ದವನು. ಮೊಗಲರ ಸಂಯುಕ್ತಪಡೆ ಸಂತಾಜಿ ಬರುವ ಮಾರ್ಗವನ್ನು ಗುರುತಿಸಿ, ಹನ್ನೆರಡು ಮೈಲಿಗಳಷ್ಟು ದೂರದಲ್ಲಿದ್ದುಕೊಂಡು ಅವನನ್ನು ಖಾನಜಾದ್‌ಖಾನ್ (ಇಮ್ಮಡಿ ರುಹುಲ್ಲಾಖಾನ್)ಎಂಬ ಇನ್ನೋರ್ವ ಸರದಾರನು ತನ್ನ ಸೇನೆಯೊಡನೆ ಖಾಸಿಂಖಾನನೊಡನೆ ಸೇರಿಕೊಂಡ.

ಮೊಗಲರು ತಮ್ಮ ಬಲಿಷ್ಠ ಸೇನೆಯೊಡನೆ ರಣಾಂಗಣಕ್ಕಿಳಿದುದೇನೊ ಸರಿ. ಆದರೆ ವಾಸ್ತವದಲ್ಲಿ, ಇತಿಹಾಸಕಾರರು ಗುರುತಿಸುವಂತೆ, ಸೇನೆಯ ನೇತೃತ್ವ ವಹಿಸಿದ್ದ ಖಾಸಿಂಖಾನನ ಅಧಿಕಾರ ಆತನ ಅಧೀನದ ಸೇನಾಪಡೆಯ ಆಚೆಗೆ ಚಲಾವಣೆಗೊಳ್ಳಲೇ ಇಲ್ಲ. ಅವನಿಗೆ ಸಹಾಯ ನೀಡಲು ಬಂದಿದ್ದ ಇತರ ಸರದಾರರು ಅದೆಷ್ಟು ಒರಟರೂ ದುಡುಕಿನ ಸ್ವಭಾವದವರೂ ಆಗಿದ್ದರೆಂದರೆ, ಮರಾಠರನ್ನು ಎದುರಿಸಲು ತಮ್ಮದೇ ಯೋಜನೆಗಳನ್ನು ರೂಪಿಸಿಕೊಂಡರು. ಮೊಗಲರು ಉತ್ತಮವಾಗಿ ಹೋರಾಡಬಲ್ಲವರಾಗಿದ್ದರೂ ಇಂಥಾ ತುರ್ತು ಸಂದರ್ಭದಲ್ಲಿ ತಮ್ಮಲ್ಲೆ ಒಗ್ಗಟ್ಟನ್ನು ಉಳಿಸಿಕೊಳ್ಳಲಾಗದ್ದಕ್ಕೆ ಆ ನಂತರ ತೊಂದರೆಗೀಡಾದರು. ಇಂಥಾ ಅನೈಕಮತ್ಯದ ಪರಿಣಾಮವಾಗಿ ಮರಾಠರಿಗೆ ಹೇರಳ ಲಾಭವಾಯಿತು. ಸಣ್ಣ ಅವಕಾಶ ಸಿಕ್ಕಿದರೂ ಮೊಗಲರನ್ನು ಹೆದರಿಸುವ ಕಾರ್ಯವನ್ನು ಮರಾಠರು ಯಶಸ್ವಿಯಾಗಿ ಜಾರಿಗೊಳಿಸಿದರು. ಹಗಲಿನಲ್ಲಿ ನೇರ ದಾಳಿ ನಡೆಸುತ್ತಾ ಬಂದೂಕುಗಳನ್ನು ಬಳಸಿದರೆ, ರಾತ್ರಿವೇಳೆಯಲ್ಲಿ ಮೊಗಲರ ಶಿಬಿರದ ಮೇಲೆ ಕ್ಷಿಪಣಿ ದಾಳಿ ನಡೆಸಲಾಗುತ್ತಿತ್ತು.

ಸಂತಾಜಿ ತನ್ನ ಸೇನೆಯನ್ನು ಮೂರುಭಾಗವಾಗಿ ವಿಂಗಡಿಸಿದನಲ್ಲದೆ, ಮೊದಲ ಭಾಗವನ್ನು ಮೊಗಲರ ಬಿಡಾರವನ್ನು ಲೂಟಿಮಾಡಲು, ಎರಡನೆಯದನ್ನು ಅವರ ಸೇನೆಯನ್ನು ಎದುರಿಸಲು ಹಾಗೂ ಮೂರನೆಯದನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಲು ನಿಯೋಜಿಸಿದ. ಎಲ್ಲವೂ ಅವರ ಎಣಿಕೆಯಂತೆಯೇ ನಡೆಯಿತು. ದೊಡ್ಡೇರಿಯಿಂದ ಸುಮಾರು ಎರಡುಮೈಲಿ(ಆರುಮೈಲಿ?) ದೂರದಲ್ಲಿ ಹೂಡಲಾಗಿದ್ದ ಮೊಗಲರ ಬಿಡಾರವೆಲ್ಲಾ ಮಧ್ಯರಾತ್ರಿಯ ನಂತರ ಲೂಟಿಗೊಳಗಾಯಿತು. ಅಸಹಾಯಕ ಸ್ಥಿತಿಯಲ್ಲಿದ್ದ ಅವರ ಸೇನೆ ಯುದ್ಧ ಕೈಗೊಳ್ಳದೆ ತಟಸ್ಥವಾಗುಳಿಯಿತು. ಮರಾಠರ ಸೇನೆಯಲ್ಲಿದ್ದ ನುರಿತ ಕಪ್ಪು ಬಿಲ್ಲಾಳುಗಳು ಬೇಡರಾಗಿದ್ದು, ತಮ್ಮ ಕೈಚಳಕದಿಂದ ಮೊಗಲರ ಸೇನೆಯನ್ನು ತಲ್ಲಣ ಗೊಳಿಸಿದರು. ಹಗಲಿನಲ್ಲಿ ಮೊಗಲರು ಮತ್ತು ಮರಾಠರ ನಡುವೆ ತೀವ್ರ ಯುದ್ಧ ನಡೆಯಿತಲ್ಲದೆ, ಮೊಗಲರ ಖಾಸಿಂಖಾನ್, ಖಾನಜಾದ್‌ಖಾನ್, ಮುರಾದ್‌ಖಾನ್‌ ಮೊದಲಾದ ಸರದಾರರು ಉಗ್ರವಾಗಿ ಹೋರಾಡಿದರು. ಆದರೆ ಮರಾಠರ ವ್ಯವಸ್ಥಿತ ಹಾಗೂ ನೈಷ್ಠಿಕ ಸೇನೆಯ ಎದುರು ಮೊಗಲರ ಸೇನೆ ಶಕ್ತಿಗುಂದಿದಂತೆ ವರ್ತಿಸಿದುದು ಸಹಜ. ಯಾವುದೇ ಹೊತ್ತಿನಲ್ಲೂ ದಾಳಿಮಾಡಬಲ್ಲ ಮರಾಠಾ ಸೇನೆಯ ಭಯ ಮೊಗಲ್ ಸರದಾರರಲ್ಲಿ ಎಷ್ಟಿದ್ದಿತೆಂದರೆ, ರಾತ್ರಿವೇಳೆಯಲ್ಲೂ ಅವರು ತಮ್ಮ ಆನೆಗಳ ಮೇಲಿಂದ ಕೆಳಕ್ಕಿಳಿಯಲಿಲ್ಲ; ಹಾಗೂ ತಮ್ಮ ಕುದುರೆಗಳ ವಿಶ್ರಾಂತಿ ಪಡೆಯಲು ಅವಕಾಶ ನೀಡಲಿಲ್ಲ! ಮರುದಿನ ಹಗಲಿನಲ್ಲಿ ಎರಡೂ ಪಕ್ಷಗಳ ನಡುವೆ ಭೀಕರ ಯುದ್ಧ ನಡೆದು ಎರಡೂ ಕಡೆಯ ಸೈನಿಕರು ಸಾಕಷ್ಟು ಸಂಖ್ಯೆಯಲ್ಲಿ ಹತರಾದರು. ಆದರೆ ಮರಾಠಾ ಸೇನೆ ಹಿಂದೆಗೆಯದೆ ಮೊಗಲರ ವಿರುದ್ಧ ನೆಲಕಚ್ಚಿ ಹೋರಾಡಿತೆಂಬ ವರ್ಣನೆ ದೊರೆಯುತ್ತದೆ ದಾಖಲೆಗಳಲ್ಲಿ.

ಈ ಮಧ್ಯೆ ಮೊಗಲರ ಪಾಳೆಯದಲ್ಲಿ ಆಹಾರದ ಕೊರತೆ ಕಾಣಿಸಿಕೊಂಡಿದ್ದರಿಂದ, ಅವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ತಮಗೆ ಅಗತ್ಯವಿದ್ದ ಆಹಾರಸಾಮಗ್ರಿಯನ್ನು ಮೊಗಲರು ದೊಡ್ಡೇರಿ ಕೋಟೆಯೊಳಗಿದ್ದ ವರ್ತಕರಿಂದ ಅವರು ಹೇಳಿದ ಬೆಲೆಕೊಟ್ಟು ಕೊಂಡರು. ಈ ವಣಿಕರಾದರೂ ತಮ್ಮಲ್ಲಿದ್ದ ಪದಾರ್ಥಗಳನ್ನು ಕೋಟೆ ಪ್ರಾಕಾರದ ಮೇಲಿನಿಂದಲೇ ಮಾರಾಟ ಮಾಡುತ್ತಿದ್ದರಂತೆ. ಅವರ ಬಳಿಯಿದ್ದ ಹೇರು ಸಹಾ ಕರಗಿಹೋದಾಗ ಮೊಗಲರಿಗೆ ಮತ್ತೆ ಆಹಾರದ ಅಭಾವ ಪರಿಸ್ಥಿತಿ ಎದುರಾಯಿತು. ಈ ಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ, ಸೈನಿಕರಿಗೆ ಅನ್ನ ಹಾಗೂ ಪ್ರಾಣಿಗಳಿಗೆ ಮೇವಿಲ್ಲದ ಸಂದರ್ಭ. ಸಾಲದ್ದಕ್ಕೆ ಮರಾಠರಿಂದ ಸತತ ಕಿರುಕುಳ. ಸ್ವರಕ್ಷಣೆಗಾಗಿ ನಿಂತ ಮೊಗಲರ ಸೇನೆಗೆ ಏನು ಮಾಡಲಾಗದ ಸ್ಥಿತಿ. ಖಾನಜಾದ್‌ಖಾನ್ ಮತ್ತು ಖಾಸಿಂಖಾನರೇನೊ ತಮ್ಮೊಡನೆ ತಂದಿದ್ದ ಆಹಾರವನ್ನು ಹಂಚಿಕೊಂಡರು. ಸಾಮಾನ್ಯ ಸೈನಿಕನಾದವನಿಗೆ ಬಳಿಯಲ್ಲಿದ್ದ ಕೆರೆಯ ನೀರಲ್ಲದೆ ಇನ್ನೇನೂ ಇಲ್ಲ. ಇನ್ನು ಆನೆ-ಕುದುರೆಗಳನ್ನು ಪಾಡನ್ನು ಕೇಳುವವರಿಲ್ಲ. ರಾತ್ರಿಯಾದೊಡನೆ ಮೊಗಲರ ಶಿಬಿರವನ್ನು ಮರಾಠರು ಸುತ್ತುವರೆದರೂ ಯುದ್ಧ ಮುಂದುವರೆಸದೆ ಹಿಂದಿರುಗುತ್ತಿದ್ದರು. ಹೀಗೆ ಮೂರು ದಿನಗಳು ಕಳೆದುಹೋದವು. ನಾಲ್ಕನೇ ದಿನವೆಂಬುದು ಮೊಗಲರ ಪಾಲಿಗೆ ದುರಂತದ ದಿನವೆನಿಸಿತು. ಇಂಥಾ ಸುದಿನವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡವನೆಂದರೆ ಬಿಚ್ಚುಗತ್ತಿ ಭರಮಣ್ಣ ನಾಯಕ. ಔರಂಗಜೇಬನ ಆಸ್ಥಾನ ಇತಿಹಾಸಕಾರ ಖಾಫಿಖಾನ್ ತನ್ನ ‘ಮುಂತಖಾಬ್-ಉಲ್-ಲುಬಾಬ್-ಇ-ಮುಹಮ್ಮದ್‌ಶಾಹಿ’ ಯಲ್ಲಿ ಹೇಳುವಂತೆ, ದೊಡ್ಡೇರಿ ಕಾಳಗ ನಡೆದುದು ನಾಲ್ಕುದಿನಗಳ ಕಾಲ. ಇದನ್ನೊಪ್ಪದ ಮರಾಠಾ ಇತಿಹಾಸಕಾರರು, ಆಗಿನ ತಮ್ಮ ಅಸಹಾಯಕ ಸ್ಥಿತಿಯಲ್ಲಿ ಮೊಗಲರು ಎರಡುದಿನಗಳಿಗಿಂತ ಹೆಚ್ಚು ಕಾಲ ಕಾಳಗ ನಡೆಸುವಷ್ಟು ಸಮರ್ಥರಾಗಿರಲಿಲ್ಲವೆನ್ನುತ್ತಾರೆ. ಆದರೆ ಮರಾಠರ ಇತಿಹಾಸ ಬರೆದ ಜೇಮ್ಸ್ ಗ್ರಾಂಟ್‌ಡಫ್ ಹೇಳುವಂತೆ, ಮೊಗಲರು ದೊಡ್ಡೇರಿ ಕೋಟೆಯನ್ನು ಹೊಕ್ಕಿದ್ದು ಮೂರನೇ ದಿನ. ಅಂದರೆ, ನೇರ ಕದನ ಕೈಗಟ್ಟಿದ್ದು ನಾಲ್ಕನೇ ದಿನವೆಂಬುದು ಸ್ಪಷ್ಟ. ಈ ಕಾಳಗ ನಡೆದುದು ಒಟ್ಟು ನಾಲ್ಕು ದಿನಗಳ ಕಾಲವೆಂದಾದರೆ, ನಾಲ್ಕನೇ ದಿನದಂದೇ ಭರಮಣ್ಣನಾಯಕನು ಮೊಗಲರ ಮೇಲೆ ದಾಳಿ ಮಾಡಿದನೆನ್ನಬೇಕಾಗುತ್ತದೆ.

ಭರಮಣ್ಣ ನಾಯಕನು ದುರ್ಗದ ಸೇನೆಯೊಡನೆ ಮೊಗಲರ ಮೇಲೆ ದಾಳಿ ನಡೆಸಿದ. ಮಿರ್ಜಾ ಹಸನ್ ಮೊದಲಾದ ಮೊಲಗ್ ಸರದಾರರು ಕಾಳಗದಲ್ಲಿ ಕೊಲ್ಲಲ್ಪಟ್ಟರು. ಮುಹಮ್ಮದ್ ಮುರಾದ್‌ಖಾನನ ಮಗ ಖುದಾದಾದ್ ಗಾಯಗೊಂಡ. ಅಲ್ಲದೆ, ಖಾಸಿಂಖಾನ್ ಮತ್ತು ಖಾನಜಾದ್‌ಖಾನರು ಸಂಪೂರ್ಣವಾಗಿ ಹೆದರಿಹೋದರು. ಮರಾಠರೊಡನೆ ಸೇರಿದ ದುರ್ಗದವರು ನೀಡಿದ ಈ ಕಾಳಗದ ತೀವ್ರತೆ ಎಷ್ಟಿತ್ತೆಂದರೆ, ಕಾಳಗದಲ್ಲಿ ಮಡಿದ ತಮ್ಮ ಯೋಧರ ಶರೀರಗಳನ್ನು ಯುದ್ಧಭೂಮಿಯಿಂದ ಎತ್ತಿ ಕೊಳ್ಳಲೂ ಮೊಗಲರು ಹಿಂಜರಿದರು. ಕಡೆಗೆ ತಮ್ಮಲ್ಲೆ ಸಮಾಲೋಚಿಸಿದ ಈ ಸರದಾರರು, ಸನಿಹದಲ್ಲಿದ್ದ ದೊಡ್ಡೇರಿಗೆ ತೆರಳಿ ಅಲ್ಲಿಯ ಸಣ್ಣ ಕೋಟೆಯಲ್ಲಿ ಆಶ್ರಯ ಪಡೆದುಕೊಳ್ಳಲು ನಿರ್ಧರಿಸಿದರು. ಆದರೆ ಅವರಿಗೆ ಈ ಕೋಟೆಯನ್ನು ತಲುಪುವುದೇ ದುಸ್ತರವೆನಿಸಿತು. ಮರಾಠಾ ಸೈನಿಕರು ಬೆನ್ನುಹತ್ತಿದ್ದರಿಂದ ಈ ಯೋಜನೆ ಇನ್ನಷ್ಟು ಜಟಿಲವೆನಿಸಿತು. ಸಂಜೆಯ ವೇಳೆಗೆ ಕೋಟೆಯನ್ನು ಸಮೀಪಿಸಿದರೂ ಅದನ್ನು ಸುಲಭದಲ್ಲಿ ಪ್ರವೇಶಿಸಲಾಗಲಿಲ್ಲ. ಕೋಟೆಯಲ್ಲಿದ್ದವರು ಪ್ರತಿದಾಳಿ ಮಾಡಿದ್ದರಿಂದ ೧/೩ ರಷ್ಟು ಮೊಗಲ್‌ಸೇನೆ ಸ್ಥಳದಲ್ಲಿಯೇ ನಾಶಗೊಂಡಿತು. ಆದರೂ ಪ್ರಯಾಸದಿಂದ ಕೋಟೆಯನ್ನು ಪ್ರವೇಶಿಸಿ ತಳವೂರಿದ ಸೇನೆಗೆ ಅಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಆಹಾರ ಪದಾರ್ಥ ಇಲ್ಲವೆಂಬುದು ಅರಿವಿಗೆ ಬಂದಿತು. ಇದ್ದಷ್ಟು ಧಾನ್ಯವನ್ನೆ ಬಳಸಿಕೊಂಡು ಮೇಲ್ದರ್ಜೆ ಕೆಳದರ್ಜೆ ಎಂಬ ಭೇದವಿಲ್ಲದೆ ಎಲ್ಲರೂ ಜೋಳದರೊಟ್ಟಿಗಳನ್ನೆ ತಿಂದರು. ಹಾಗೆಯೇ, ಪ್ರಾಣಿಗಳಿಗೆ ಜೋಳದದಂಟನ್ನು ತಿನ್ನಿಸಲಾಯಿತು. ಎರಡನೇ ದಿನ ಅದೂ ದೊರೆಯದೆ ಬಹುಪಾಲು ಸೈನಿಕರು ಹಸಿವಿನಿಂದ ನಿತ್ರಾಣಗೊಂಡರು ಹಾಗೂ ಕೆಲವರು ಸತ್ತೂಹೋದರು. ದನಗಳು ಇತರ ದನಗಳ ಬಾಲಗಳನ್ನು ಸೊಪ್ಪೆಯೆಂದು ತಿನ್ನಲು ಹೋದವಂತೆ! ಆ ನಂತರ ಈ ಪ್ರಾಣಿಗಳನ್ನೆ ಮೊಗಲರ ಸೇನೆಗೆ ಆಹಾರವಾಗಿ ಒದಗಿಸಲಾಯಿತು. ಹೀಗೆ ಹಸಿವಿನಿಂದ ಕಂಗಾಲಾದ ಮೊಗಲರ ಮೇಲೆ, ಅಂದರೆ ದೊಡ್ಡೇರಿ ಕೋಟೆಯ ಮೇಲೆ ದಾಳಿ ನಡೆಸಿದ ಮರಾಠರು ಅದನ್ನು ತಮ್ಮ ವಶಪಡಿಸಿಕೊಂಡರು. ಈ ವೇಳೆಗೆ ಖಾಸಿಂಖಾನನೂ ಮೃತನಾದ. ಅಫೀಮು ಸೇವನೆಯ ಚಟವುಳ್ಳ ಈತನಿಗೆ ಮೂರುದಿನಗಳ ಕಾಲ ಅದು ದೊರೆಯದೆ ಮೃತನಾದನೆಂದು ಸಮಕಾಲೀನ ಆಧಾರಗಳು ಹೇಳುತ್ತದೆ. ಆದರೆ ತನ್ನ ನಿಮಿತ್ತ ಮೊಗಲರ ಸೇನೆಗೆ ಹಾಗೂ ಸರದಾರರಿಗೆ ಒದಗಿದ ಸೋಲಿನ ಆಘಾತದಿಂದ ಚೇತರಿಸಿಕೊಳ್ಳದೆ ಹಾಗೂ ತನ್ನ ಸಾಮ್ರಾಟ ಔರಂಜೇಬನಿಗೆ ಮುಖತೋರಿಸಲು ಧೈರ್ಯಸಾಲದೆ ಆತ್ಮಹತ್ಯೆ ಮಾಡಿಕೊಂಡನೆಂಬ ಅಭಿಪ್ರಾಯವೂ ವ್ಯಕ್ತಪಟ್ಟಿದೆ.

ಸೈಯದ್ ಖಾಸಿಂಖಾನನ ಸಾವಿನಿಂದ ಧೃತಿಗೆಟ್ಟ ಇತರ ಸರದಾರರು ಮರಾಠರೊಂದಿಗೆ ಒಪ್ಪಂದವೇರ್ಪಡಿಸಿಕೊಳ್ಳಬಯಸಿದರು. ಇವರ ಪರವಾಗಿ ಖಾನಜಾದ್‌ಖಾನನು ತನ್ನ ದಿವಾನ್ ಹಾಗೂ ಓರ್ವ ದಖ್ಖನೀ ಸರದಾರನನ್ನು ಸಂತಾಜಿಯ ಬಳಿಗೆ ಕಳುಹಿಸಿಕೊಟ್ಟ. ಈ ಸಂಧಾನವೇರ್ಪಟ್ಟ ಸಂದರ್ಭವೂ ಸ್ವಾರಸ್ಯಕರವಾದುದು. ಸ್ವಜನ/ಸ್ವಾಮಿದ್ರೋಹಕ್ಕೆ ಇದು ಇನ್ನೊಂದು ವಿಶಿಷ್ಟ ಉದಾಹರಣೆಯೆನ್ನಬಹುದು. ಸಂತಾಜಿಯು ಮೊಗಲ್ ಸರದಾರರಿಂದ ವಸೂಲು ಮಾಡಬಯಸಿದ ಒತ್ತೆಹಣವೆಂದರೆ ಒಂದುಲಕ್ಷ ಹೊನ್ನು/ರೂಪಾಯಿ ಮಾತ್ರ. ಜತೆಯಲ್ಲಿ ಅವರ ಸೇನೆಯಲ್ಲಿದ್ದ ಆನೆ, ಕುದುರೆ ಇನ್ನಿತರ ಬೆಲೆಬಾಳುವ ಪದಾರ್ಥಗಳನ್ನೂ ಅಪೇಕ್ಷಿಸಿದ. ಆದರೆ ಖಾನಜಾದ್ ಖಾನನ ಪರವಾಗಿ ಬಂದಿದ್ದ ದಖ್ಖನೀ ಸರದಾರನು ಸಂತಾಜಿಯನ್ನು ಕುರಿತು, “ನೀವು ಏನನ್ನು ಕೇಳುತ್ತಿದ್ದೀರಿ!? ನಿಮ್ಮ ಶರತ್ತನ್ನು (ಒತ್ತೆಹಣವನ್ನು) ಇನ್ನೂ ಹೆಚ್ಚಿಸಿ. ತನ್ನ ಒತ್ತೆಹಣವಾಗಿ ಇಷ್ಟು ಮೊತ್ತವನ್ನು ಖಾನಜಾದ್‌ನ ನೊಬ್ಬನೇ ಸಂದಾಯ ಮಾಡಬಲ್ಲ!” ಎಂದು ಹೇಳಿಕೊಟ್ಟ. ಇದರಿಂದಾದ ಪರಿಣಾಮವೆಂದರೆ, ಸಂತಾಜಿಯ ಖಾನಜಾದ್‌ಖಾನ್ ಮತ್ತು ಇತರ ಸರದಾರರಿಂದ ಪರಿಣಾಮ ವೆಂದರೆ, ಸಂತಾಜಿಯು ಖಾನಜಾದ್‌ಖಾನ್ ಮತ್ತು ಇತರ ಸರದಾರರಿಂದ ಅಂತಿಮವಾಗಿ ೨೦ ಲಕ್ಷ ರೂಪಾಯಿಗಳನ್ನು ವಸೂಲು ಮಾಡಿಕೊಂಡ! ಸಂತಾಜಿಯ ಸೈನಿಕರು ಮೊಗಲರೊಡನಿದ್ದ ಪ್ರಾಣಿಗಳನ್ನೂ ಗಂಟುಮೂಟೆಗಳನ್ನೂ ತಮ್ಮ ವಶಕ್ಕೆ ತೆಗೆದುಕೊಂಡರು. ಮರಾಠರು ವಿಧಿಸಿದ ಕರಾರಿಗೆ ಮೊಗಲ್ ಸರದಾರರು ಸಹಿ ಹಾಕಬೇಕಾಯಿತು. ನಿರ್ದಿಷ್ಟ ಅವಧಿಯವರೆಗೆ ಅವರ ಹತ್ತಿರದ ಬಂಧುಗಳು ಒತ್ತೆಯಾಳುಗಳಾಗಿ ಮರಾಠರ ವಶದಲ್ಲಿರಬೇಕೆಂದು ಒಪ್ಪಂದವಾಯಿತು. ಅಲ್ಲದೆ, ಮೊಗಲರ ಪ್ರತಿಯೊಬ್ಬ ಸೈನಿಕ ಮೈಮೇಲಿನ ಉಡುಗೆ ಮತ್ತು ತನ್ನ ಕುದುರೆಯನ್ನು ಮಾತ್ರ ತೆಗೆದುಕೊಂಡು ಹೋಗಬೇಕೆಂದು ತೀರ್ಮಾನವಾಯಿತು. ಮೊಗಲರು ಎರಡು ದಿನಗಳಲ್ಲಿ ದೊಡ್ಡೇರಿ ಕೋಟೆಯನ್ನು ತೆರವುಗೊಳಿಸಿದರು. ಈ ಹಂತದಲ್ಲಿ ಮೊಗಲ್ ಸರದಾರರನ್ನೂ ಸೇನೆಯನ್ನೂ ಸಂತಾಜಿ ಉದಾರವಾಗಿ ನಡೆಸಿಕೊಂಡ. ಮರಾಠರು ಹಾಗೂ ದುರ್ಗದವರು ಮೊಗಲ್ ಸರದಾರರು ಹಾಗೂ ಸೈನಿಕರಿಗೆ ಉತ್ತರ ಆಹಾರವನ್ನು ಒದಗಿಸಿ ಅವರಲ್ಲಿ ಇನ್ನೊಮ್ಮೆ ಜೀವಸಂಚಾರವಾಗುವಂತೆ ನೋಡಿಕೊಂಡರಂತೆ. ಮೂರನೇ ದಿನ ಖಾನಜಾದ್‌ಖಾನನು ದೊಡ್ಡೇರಿಯಿಂದ ಮರಾಠರ ಬೆಂಗಾವಲಿನಲ್ಲಿ ಇಸ್ಲಾಂಪುರಿಯಲ್ಲಿ ಸ್ಥಾಪಿಸಿದ್ದ ಮೊಗಲ್ ದರ್ಬಾರಿನತ್ತ ಪ್ರಯಾಣ ಬೆಳೆಸಿದ. ದೊಡ್ಡೇರಿ ಕದನದ ಮಟ್ಟಿಗೆ, ಮೊಗಲರು ಮತ್ತು ಮರಾಠರ ನಡುವೆ ಚಿತ್ರದುರ್ಗ ಜಿಲ್ಲೆಯಲ್ಲಿ ನೇರವಾಗಿ ನಡೆದ ಸಂಘರ್ಷವೆಂದರೆ ಇದೇ.

ಮರಾಠೀ ದಾಖಲೆಗಳು ಹೇಳುವಂತೆ, ಭರಮಣ್ಣ ನಾಯಕ ತನ್ನ ಮಗ ಹಿರೇಮದಕರಿ ನಾಯಕನ ಸಹಿತ ಸಂತಾಜಿಯೊಡನೆ ಸೇರಿ ಮೊಗಲರ ವಿರುದ್ಧ ಹೋರಾಡಿದ. ಈ ನಾಯಕನಿಗೆ ಮೊಗಲರೊಡನೆ ಕಾದಾಡುವ ಪ್ರಸಂಗ ಒದಗಿದಾದರೂ ಹೇಗೆ? ಸೈಯದ್ ಖಾಸಿಂಖಾನ್ ಮತ್ತು ಭರಮಣ್ಣನಾಯಕರ ನಡುವೆ ಇದ್ದ ವಿರೋಧವಾದರೂ ಕಪ್ಪಸಲ್ಲಿಕೆಗೆ ಸಂಬಂಧಿಸಿದುದು. ಚಿತ್ರದುರ್ಗದವರು ಮೊಗಲರ ಒತ್ತಡವನ್ನು ನಿವಾರಿಸಲೋಸುಗ ಮರಾಠರನ್ನು ಓಲೈಸಿದುದು ಸಹಜ. ಮೊಲಗರ ವಿರುದ್ಧ ಅವರೊಡನೆ ಸೇರಿ ಅಥವಾ ಅಗತ್ಯ ಸೈನಿಕ ಸಹಾಯ ಒದಗಿಸಿ ಸಹಕರಿಸಿದುದೂ ವಾಸ್ತವ. ಅಲ್ಲದೆ, ೧೬೯೦ರ ಯುದ್ಧದಲ್ಲಿ ಖಾಸಿಂಖಾನನು ದುರ್ಗದವರ ಮೇಲೆ ನಡೆಸಿದ ದೌರ್ಜನ್ಯವೂ ಇದಕ್ಕಿದ್ದ ಇನ್ನೊಂದು ಕಾರಣ. ಈ ಕುರಿತು ಫಾರ್ಸೀ ದಾಖಲೆಗಳಲ್ಲಿ ವಿವರವಿರುವುದನ್ನು ಇತಿಹಾಸಕಾರರು ಪ್ರಸ್ತಾಪಿಸುತ್ತಾರೆ. ಆದರೆ ಈ ಯುದ್ಧ ಕುರಿತು ಚಿತ್ರದುರ್ಗದ ದಾಖಲೆಗಳಲ್ಲಿ ಯಾವ ಸೂಚನೆಯೂ ಇಲ್ಲ. ದೊಡ್ಡೇರಿ ಕದನ ಕುರಿತ ವಿವರವಾದರೂ ತೀರಾ ಕಡಿಮೆ. ವಂಶಾವಳಿಯಲ್ಲಿ ಉಕ್ತಗೊಂಡಂತೆ, ೧೬೯೬ರಲ್ಲಿ (ಧಾತು ಸಂವತ್ಸರದಲ್ಲಿ) ಸಂತಾಜಿ ಘೋರ್ಪಡೆಯು ೨೦,೦೦೦ ಅಶ್ವಸೇನೆಯೊಡನೆ ಬಂದಿರುವಲ್ಲಿ, ಸಿರಾ ಸುಬೇದಾರ ಖಾಸಿಂಖಾನನು ತಳಕಿನಿಂದ ದೊಡ್ಡೇರಿವರೆಗೆ ಲಡಾಯಿಮಾಡುತ್ತಾ ಹೋಗಿ ದೊಡ್ಡೇರಿ ಕೋಟೆಯೊಳಗೆ ಹೊಕ್ಕ. ರಾಜೇಶ್ರೀಗಳು (ಭರಮಣ್ಣ ನಾಯಕನು) ದುರ್ಗದ ಕುಡುತಿನಿ ವೆಂಕಣ್ಣ ಮತ್ತು ಹೊಳಲ್ಕೆರೆ ಬೊಮ್ಮ (ಬೊಮ್ಮಣ್ಣ)ರಿಗೆ ನಾಯಕತನದ ಫೌಜುದಾರಿ ಕೊಟ್ಟು ಅಶ್ವಸೇನೆ (ಕುದುರೆಮಂದಿ) ಯೊಡನೆ ಕಳುಹಿಸಿಕೊಟ್ಟಲ್ಲಿ ಜಗಳದಲ್ಲಿ ಖಾಸಿಂಖಾನನು ಮೃತನಾದ. ದೊಡ್ಡೇರಿ ಕೋಟೆ ದುರ್ಗದವರ ವಶವಾಯಿತು.

ಕನ್ನಡಭಾಷೆಯಲ್ಲಿರುವ ಲಾವಣಿಯನ್ನು ‘ದೊಡ್ಡೇರಿ ಜಗಳ’ ಎಂಬ ಶೀರ್ಷಿಕೆಯಲ್ಲಿ ಪ್ರೊ.ಜಿ.ಎಸ್. ದೀಕ್ಷಿತರು ೧೯೭೬ರಲ್ಲಿ ಪ್ರಕಟಿಸಿದ್ದಾರೆ.[1] ಈ ಜಗಳ/ಕಾಳಗವನ್ನು ‘ದೊಡ್ಡೇರಿವಿಜಯ’ವೆಂತಲೂ ಬಣ್ಣಿಸಲಾಗಿದೆ. ಈ ಲಾವಣಿಯನ್ನು ರಚಿಸಿದವನು ‘ಸಂಪಿಗೆಸಿದ್ದನ ವರಕುಮಾರ’. ಇದು ಲಾವಣಿಕಾರನ ಕಾವ್ಯನಾಮ. ನಿಜವಾದ ಹೆಸರೇನೊ ತಿಳಿಯದು. ಈತ ಚಿತ್ರದುರ್ಗ ನಿವಾಸಿಯೇ ಇರಬಹುದು. ಈತ ಭರಮಣ್ಣ ನಾಯಕನ ಆಸ್ಥಾನದಲ್ಲಿದ್ದವನೇ ಆಗಿರಬೇಕೆಂಬ ಅಭಿಪ್ರಾಯವಿದೆ. ಈ ಲಾವಣಿಯು ಮರಾಠರನ್ನು ಹೆಸರಿಸದೆ ಸಿರಾ ಸುಬೇದಾರ ಖಾಸಿಂಖಾನನ ಹೆಸರನ್ನು ಮಾತ್ರ ಪ್ರಸ್ತಾಪಿಸುವುದು ಗಮನಾರ್ಹ. ಚಿತ್ರದುರ್ಗದ ಭರಮಣ್ಣ ನ ನಾಯಕನ ಪ್ರತಾಪವನ್ನಷ್ಟೆ ಹೇಳುವ ಉದ್ದೇಶ ಈ ಲಾವಣಿಯದು. ಚಿತ್ರದುರ್ಗದವರ ನೆರವು ದೊರೆಯದೆ ಹೋಗಿದ್ದರೆ ಮರಾಠರು ಅಥವಾ ಸಂತಾಜಿ ಘೋರ್ಪಡೆಯು ದೊಡ್ಡೇರಿ ಕದನದಲ್ಲಿ ಜಯಗಳಿಸುತ್ತಿರಲಿಲ್ಲವೆಂಬ ಧೋರಣೆ ಅದರದು. ಸ್ಥಳೀಯರ / ಸ್ವಜನರ ಅಭಿಮಾನ ಹಾಗೂ ದೃಷ್ಟಿಕೋನಗಳೊಂದಿಗೆ ಇಂಥಾ ಆಕರ ಸೃಷ್ಟಿಗೊಳ್ಳುವುದು ಅಸಹಜವೇನಲ್ಲ. ಇದನ್ನೆ ಮರಾಠೀ ಮತ್ತು ಫಾರ್ಸೀ ಗ್ರಂಥಗಳಿಗೂ ಅನ್ವಯಿಸಬಹುದು. ಏನೇ ಇದ್ದರೂ ದೊಡ್ಡೇರಿ ಕದನದಲ್ಲಿ ಭರಮಣ್ಣ ನಾಯಕ ನಿರ್ವಹಿಸಿದ ಪಾತ್ರವನ್ನು ನಿಖರವಾಗಿ ವರ್ಣಿಸಲೆತ್ನಿಸುತ್ತದೆ ಈ ಲಾವಣಿ. ಈ ಮಟ್ಟಿಗೆ ಇದರ ವಸ್ತುನಿಷ್ಠತೆ ಬಗೆಗೆ ವಿಶ್ವಾಸ ವ್ಯಕ್ತಪಡಿಸಲಡ್ಡಿಯಿಲ್ಲ.

ಈ ಲಾವಣಿಯಲ್ಲಿ ಭರಮಣ್ಣನಾಯಕನು ‘ಬೆಂಕಿಭರಮೇಂದ್ರ’ನೆಂದು ವರ್ಣಿತನಾಗಿರುವುದು ಉಚಿತವಾಗಿಯೇ ಇದೆ. ಭರಮಣ್ಣ ನಾಯಕನ ವ್ಯಕ್ತಿತ್ವ, ದುರ್ಗದ ಸೈನಿಕರ ಪೋಷಾಕು, ಮುಖ್ಯವಾಗಿ, ಮರಾಠೀ ಮತ್ತು ಫಾರ್ಸೀ ದಾಖಲೆಗಳಲ್ಲಿ ಉಕ್ತಗೊಂಡಿರುವ ಕೆಲವಂಶಗಳ ಯಥಾವತ್ತಾದ ನಿರೂಪಣೆ ಕಂಡುಬರುತ್ತದೆ. ಈ ಕದನ ನಡೆದುದು ದೊಡ್ಡೇರಿಕೆರೆಯ ಬಳಿ, ಕೆರೆಕಟ್ಟೆಯ ಮೇಲೆ ಹಾಗೂ ಕೆರೆ ಏರಿಯ ಹಿಂದೆ ಎನ್ನುತ್ತದೆ ಲಾವಣಿ; ‘ಮಟ ಮಟ ಮಧ್ಯಾನ್ಹ ಚಟಚಟನೆ ಕಾಯುವ ಬಿಸಿಲಿನ’ವೇಳೆಯಲ್ಲಿ ಎನ್ನುತ್ತದೆ ಅದು. ‘ಶಿಟ್ಟೀನಾ ಧೊರೆ ಕೈಯಾಗೆ ಸಿಕ್ಕಬಾರದೆಂದೂ ದಕ್ಕಬಾರದೆಂದೂ’ (ಅಂದರೆ ತನ್ನ ಚಕ್ರವರ್ತಿ ಔರಂಗಜೇಬನ ಆಗ್ರಹಕ್ಕೆ ತುತ್ತಾಗಬಾರದೆಂದು) ಖಾಸಿಂಖಾನನು ‘ಹಕ್ಕಜ್ಜಿ ನಾಮೆ ಕುಡಿದು ಡೇರಾದ ವಳಗೆ ಸತ್ತಿದ್ದ’ನೆಂಬ ಅಂಶವಂತೂ ನೈಜವಾದುದು. ಅಫೀಮುಸೇವನೆಯ ಅಭ್ಯಾಸವಿದ್ದ ಖಾಸಿಂಖಾನನಿಗೆ ಮೂರುದಿನಗಳ ಕಾಲ ಏಕಪ್ರಕಾರವಾಗಿ ಅಫೀಮು ದೊರೆಯದ ಕಾರಣಕ್ಕೆ ನಾಲ್ಕನೇ ದಿನ ಸತ್ತುಹೋದನೆನ್ನಲಾಗಿದೆ. ‘ಮಾಸಿರ್-ಇ-ಅಲಂಗೀರಿ’ಯೂ ಇದನ್ನೆ ಸಮರ್ಥಿಸುತ್ತದೆ. ಆದರೂ ಖಾಸಿಂಖಾನನ ಸಾವಿಗೆ ಬೇರೆ ಕಾರಣಗಳನ್ನೂ ಆರೋಪಿಸಿರುವುದುಂಟು. ಮುಖ್ಯ ವಿಚಾರವೆಂದರೆ, ದೊಡ್ಡೇರಿಕೋಟೆಯಲ್ಲಿ ಮೃತನಾದ ಖಾಸಿಂಖಾನನ ಶರೀರವನ್ನು ಸಿರಾಕ್ಕೆ ಒಯ್ದು ಅಲ್ಲಿ ಸಮಾಧಿ ಮಾಡಲಾಯಿತು.

ದೊಡ್ಡೇರಿ ಕದನ ನಡೆದುದು ಯಾವ ತೇದಿಯಂದು ? ಈ ಕುರಿತು ವಿವಿಧ ಅಭಿಪ್ರಾಯಗಳು ವ್ಯಕ್ತಪಟ್ಟಿವೆ. ‘ಮಾಸಿರ್-ಇ-ಅಲಂಗೀರಿ’ ಪ್ರಕಾರ, ಖಾನಜಾದ್‌ಖಾನ್‌ ಮತ್ತು ಸೈಯದ್ ಖಾಸಿಂಖಾನರು ಮರಾಠಾ ಮತ್ತು ದುರ್ಗದ ಸೇನೆಯನ್ನು ಎದುರಿಸಲು ಒಗ್ಗೂಡಿದುದು ೧೬೯೬ ಜನವರಿ ೧೯ರಂದು. ಇದನ್ನು ಇತಿಹಾಸಕಾರ ಜಾದೂನಾಥ ಸರ್ಕಾರವು ಒಪ್ಪುವುದಿಲ್ಲ. ಸಮಕಾಲೀನವಾದ ಹಾಗೂ ನಂಬಿಕೆಗೆ ಅರ್ಹವೆನಿಸಿದ ‘ಅಖ್‌ಬರಾತ್’ (ಔರಂಗಜೇಬನ ಆಸ್ಥಾನದಿಂದ ನಿತ್ಯವೂ ಹೊರಬೀಳುತ್ತಿದ್ದ ರಾಯಸ- Daily Court Bulletin) ಗಳನ್ನು ಉಲ್ಲೇಖಿಸಿ ಅವರು ಹೇಳುವಂತೆ, ಈ ತೇದಯು ಎರಡು ತಿಂಗಳ ವ್ಯತ್ಯಾಸ ಹೊಂದಿದೆ. ಏಕೆಂದರೆ ಖಾಸಿಂಖಾನನು ಜನವರಿ ೧೯ಕ್ಕೆ ಒಂದು ತಿಂಗಳ ಮೊದಲೇ ಮೃತಪಟ್ಟಿದ್ದ. ೧೬೯೫ ಡಿಸೆಂಬರ್ ೫ರ ತೇದಿಯನ್ನು ಹೊಂದಿರುವ ‘The Madras Dairy’ ದಾಖಲೆಯ ಪ್ರಕಾರ ಆಗಾಗಲೇ ಖಾಸಿಂಖಾನನು ಕದನದಲ್ಲಿ ಸೋತುಹೋಗಿದ್ದನೆನ್ನುತ್ತಾರೆ ಅವರು. ಮರಾಠೀ ದಾಖಲೆಗಳಾದ ‘ಶಿವಚರಿತ್ರಪ್ರದೀಪ’ ಮತ್ತು ‘ಜೇಢೆಶಕಾವಲಿ’ಗಳು ಹೇಳುವಂತೆ, ೧೬೯೬ ಜನವರಿ ೫ರಂದು ಸಂತಾಜಿಯು ಖಾಸಿಂಖಾನ್ ಮತ್ತು ಖಾನಜಾದ್‌ಖಾನ್‌ರನ್ನು ದೊಡ್ಡೇರಿಕೋಟೆಯಲ್ಲಿ ನಿರ್ಬಂಧಿಸಿದ್ದ. ಖಾಸಿಂಖಾನನು ಅಲ್ಲಿ ಮೃತಪಟ್ಟಿದೆ. ಖಾನಜಾದ್‌ಖಾನನು ೧ ಲಕ್ಷ ರೂಪಾಯಿ ಒತ್ತೆಹಣವನ್ನು ನೀಡಿ ಬಿಡುಗಡೆ ಹೊಂದಿದ. ಈ ಎಲ್ಲ ಆಧಾರಗಳನ್ನು ಪರಾಮರ್ಶಿಸಿದ ಮರಾಠಾ ಇತಿಹಾಸಕಾರ ಜಿ.ಟಿ. ಕುಲಕರ್ಣಿ ನಿರ್ಧರಿಸುವಂತೆ, ಮರಾಠರು ದೊಡ್ಡೇರಿ ಕೋಟೆಯನ್ನು ೫ ಜನವರಿಗೆ ಮುನ್ನ ಆಕ್ರಮಿಸಿಕೊಂಡಿರಲೇ ಇಲ್ಲ; ಹಾಗೂ ಖಾಸಿಂಖಾನನು ೧೬೯೬ ಜನವರಿ ೫ರ ನಂತರವೊ ಏನೊ ಮೃತಪಟ್ಟಿರಬೇಕಲ್ಲದೆ ಜಾದೂನಾಥ ಸರ್ಕಾರರು ಹೇಳುವಂತೆ ೧೬೯೫ ನವೆಂಬರ್ ೨೦ರಂದು ಅಲ್ಲ; ‘ಜೇಢೆಶಕಾವಲಿ’ ಯನ್ನು ವಿಶ್ವಾಸಾರ್ಹ ಆಕರವೆಂದು ಒಪ್ಪುವುದಾದರೆ, ‘ಮಾಸಿರ್-ಇ-ಅಲಂಗೀರಿ’ಮತ್ತು ಜಾದೂನಾಥ ಸರ್ಕಾರರ ನಮೂದುಗಳು ತಪ್ಪೆಂದು ಸ್ಪಷ್ಟವಾಗುತ್ತದೆ.

ನಂಬಿಕೆಗೆ ಅರ್ಹವೆನಿಸುವ ತೇದಿಗಳನ್ನು ನಮೂದಿಸಿಕೊಂಡಿರುವ ಚಿತ್ರದುರ್ಗ ನಾಯಕ ಅರಸರ ದಾಖಲೆಗಳ ಸಹಾ, ಮೇಲೆಯೇ ಹೇಳಿದಂತೆ, ದೊಡ್ಡೇರಿ ಕದನ ನಡೆದುದು ಧಾತು ಸಂವತ್ಸರದ್ಲಲಿ, ಆದರೆ ೧೬೯೬ರಲ್ಲಿ ಎಂಬುದನ್ನು ಸಮರ್ಥಿಸುತ್ತವೆ. ಜೇಮ್ಸ್ ಗ್ರಾಂಟ್‌ಡಫ್ ಸಹಾ ೧೬೯೬ರಲ್ಲೆ ದೊಡ್ಡೇರಿ ಕದನ ನಡೆದುದನ್ನು ಒಪ್ಪುತ್ತಾರೆ. ಆದರೆ ಎಂ.ಎಸ್.ಪುಟ್ಟಣ್ಣ, ಜಿ.ಎಸ್.ದೀಕ್ಷಿತ್, ಬಿ.ಮುದ್ದಾಚಾರಿ, ಸೂರ್ಯನಾಥ ಕಾಮತ್ ಮೊದಲಾದವರು ಈ ಕದನ ನಡೆದುದು ೧೬೯೫ರಲ್ಲೆ ಎಂದು ಸೂಚಿಸಿದ್ದಾರೆ. ಮಹಾದೇವ ಗೋವಿಂದ ರಾನಡೆಯವರು ದೊಡ್ಡೇರಿ ಕದನದ ತೇದಿಯನ್ನು ಸ್ಪಷ್ಟವಾಗಿ ಹೇಳಿಲ್ಲವಾದರೂ ಕದನದ ನಂತರ ಖಾಸಿಂಖಾನನು ಸಂತಾಜಿ ಘೋರ್ಪಡೆಗೆ ಶರಣಾದನೆಂತಲೂ ಬರೆದು ಅಚ್ಚರಿ ಮೂಡಿಸುತ್ತಾರೆ. ಮೈಸೂರು ಇತಿಹಾಸವನ್ನು ಎರಡು ಸಂಪುಟಗಳಲ್ಲಿ ಬರೆದ ಮಾರ್ಕ್‌‌ವಿಲ್ಕ್ಸ್ ಸಹಾ ತನ್ನ ಮೊದಲನೇ ಸಂಪುಟದಲ್ಲಿ ದೊಡ್ಡೇರಿ ಕದನದ ವಿವರವನ್ನು ದಾಖಲಿಸಿದ್ದು, ಮರಾಠರು ಚಿತ್ರದುರ್ಗ ನಾಯಕನ ನೆರವಿನೊಡನೆ ೧೬೯೮ರಲ್ಲಿ ಖಾಸಿಂ ಖಾನನ ಮೇಲೆ ದಿಢೀರ್ ದಾಳಿ ನಡೆಸಿದರೆಂದು ಹೇಳಿರುವುದು ಗೊಂದಲ ಹುಟ್ಟಿಸುವಂತಿದೆ.

ದೊಡ್ಡೇರಿ ಕದನವು ೧೬೯೬ ಜನವರಿ ೫ರಂದು ನಡೆಯಿತೆಂಬುದು ಸ್ಪಷ್ಟ. ಆದರೆ ಈ ಕದನ ನಡೆದ ನಿರ್ದಿಷ್ಟ ಸ್ಥಳ ಯಾವುದು? ಈ ಕುರಿತು ಸದ್ಯಕ್ಕೆ ಯಾವುದೇ ಖಚಿತ ಸೂಚನೆ ದೊರೆತಿಲ್ಲ. ಏಕೆಂದರೆ ಕೆಲವೇ ಕಿಲೊಮೀಟರ್‌ಗಳ ಅಂತರದಲ್ಲಿ ದೊಡ್ಡೇರಿ ಹೆಸರಿನ ಎರಡು ಎಡೆಗಳು ನೆಲೆಸಿವೆ ; ಹಾಗೂ ಎರಡೂ ಎಡೆಗಳಲ್ಲಿ ಕೋಟೆಯ ಸಾಕ್ಷ್ಯಗಳು ಕಂಡುಬಂದಿದೆ. ಇವುಗಳಲ್ಲಿ ಈಗ ಜೀವಂತವಿರುವ ದೊಡ್ಡೇರಿಯನ್ನು ‘ರಣದೊಡ್ಡೇರಿ’ ಎಂತಲೂ ಕರೆಯಲಾಗುತ್ತದೆಯೆಂಬ ಅಭಿಪ್ರಾಯವಿದೆ.[2] ಆದರೆ ಹಿಂದಿನಿಂದಲೂ ಸರ್ಕಾರಿ ದಾಖಲೆಗಳಲ್ಲಿ ಹಾಗೂ ಜನಬಳಕೆಯಲ್ಲಿರುವುದು ‘ದೊಡ್ಡೇರಿ’ ಎಂದೇ. ಇನ್ನೊಂದು ದೊಡ್ಡೇರಿಯೆಂದರೆ ಈಗ ಬೇಚರಾಕ್ ಎನಿಸಿರುವ ಹಳೇದೊಡ್ಡೇರಿ. ದೊಡ್ಡೇರಿ/ರಣದೊಡ್ಡೇರಿ ಗ್ರಾಮ ನೆಲೆಸಿರುವುದು ಚಳ್ಳಕೆರೆಯ ಪೂರ್ವಕ್ಕೆ ೬ ಕಿ.ಮೀ.ದೂರದಲ್ಲಿ; ಚಳ್ಳಕೆರೆಯಿಂದ ಪಾವಗಡಕ್ಕೆ ಸಾಗುವ ಬಸ್‌ಮಾರ್ಗದ ಎಡಬದಿಯಲ್ಲಿ. ಇಂದಿನ ಊರಾದರೂ ಹಳೇಕೋಟೆಯ ಪ್ರದೇಶದಲ್ಲೆ ಇರುವಂಥಾದ್ದು. ಸುಮಾರು ೪೦ ಎಕರೆ ವಿಸ್ತಾರದ ಪ್ರದೇಶವಿದು. ಈ ಊರನ್ನು ಆಡಳಿತಾತ್ಮಕವಾಗಿ ‘ಗ್ರಾಮಠಾಣ’ ಎನ್ನಲಾಗುತ್ತದೆ.

ಚಳ್ಳಕೆರೆ-ಪಾವಗಡ ಮುಖ್ಯರಸ್ತೆಯಿಂದ ಎಡಬದಿಗೆ ಚಲಿಸಿ ಈಗಿನ ದೊಡ್ಡೇರಿ ಗ್ರಾಮವನ್ನು ಪಶ್ಚಿಮದಿಕ್ಕಿನಿಂದ ಪ್ರವೇಶಿಸುವಾಗ ಎದುರುಗೊಳ್ಳುವ ಸ್ಮಾರಕವೆಂದರೆ ತಕ್ಕಮಟ್ಟಿಗೆ ದೊಡ್ಡದಾಗಿರುವ ಒಂಟಿ ಬುರುಜು. ಹಿಂದೆ ಇಲ್ಲಿದ್ದ ವಿಶಾಲವಾದ ಕೋಟೆಯ ಕಟ್ಟಕಡೆಯ ಭೌತಿಕ ಸಾಕ್ಷ್ಯವಾಗಿ ನಿಂತಿರುವಂತೆ ತೋರುತ್ತದೆ ಇದು. ಈ ಬುರುಜಿಗೆ ಹೊಂದಿಕೊಂಡಿರುವ ಕಂದಕ (ಅಗಳ್ತೆ)ಈಗ ಬಹುಮಟ್ಟಿಗೆ ಮುಚ್ಚಿಹೋಗಿದ್ದರೂ ಸುಸ್ಥಿತಿಯಲ್ಲಿದ್ದ ಕಾಲದಲ್ಲಿ ವಿಶಾಲವೂ ಆಳವೂ ಆಗಿದ್ದಿರಬೇಕೆಂದು ಮನದಟ್ಟಾಗುತ್ತದೆ. ಈ ಬುರುಜಿನ ವಿನಾ ಊರಿನ ಯಾವ ದಿಕ್ಕಿನಲ್ಲೂ ಕೋಟೆಯ ಅವಶೇಷಗಳು ಕಂಡುಬರುವುದಿಲ್ಲ. ಕೋಟೆಯ ಪ್ರಾಕಾರಕ್ಕೆ ಹೊಂದಿಸಿದ್ದ ಕಲ್ಲುಗಳು ಮನೆಗಳಿಗೆ ಬಳಕೆಯಾಗಿರುವುದರಿಂದ ಈಗ ಕೋಟೆಸಾಲು ಮಣ್ಣಿನ ದಿಬ್ಬವಾಗಿ ಪರಿವರ್ತನೆಗೊಂಡಿದೆ. ಕಂದಕಗಳು ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡಿವೆ.

ಊರಿನಿಂದ ಪೂರ್ವಕ್ಕೆ ಕೋಟೆಯ ಹೆಬ್ಬಾಗಿಲಿದ್ದ ಸ್ಥಳದಲ್ಲಿ, ಅಂದರೆ ಕೋಟೆಯ ಹೆಬ್ಬಾಗಿಲನ್ನು ಪ್ರವೇಶಿಸುವಲ್ಲಿ ಬಲಗಡೆಗೆ ಆಂಜನೇಯ ಗುಡಿ, ಅದರ ಎದುರಿಗೆ ಅಂದರೆ ಎಡಗಡೆಗೆ ವೈಷ್ಣವ ಸಂಪ್ರದಾಯದ (?) ದೇವಾಲಯ ಅವಶೇಷಗಳು, ಶಾಸನೋಕ್ತ ಸ್ತಂಭ ಮೊದಲಾದವು ಕಂಡುಬರುತ್ತವೆ. ಇನ್ನೆಲ್ಲ ಕಾಣಬರುವುದು ನೊಳಂಬ ಶಿಲ್ಪಶೈಲಿಯ ರಚನೆಗಳು. ಅನತಿದೂರದಲ್ಲೆ ಉತ್ತರದಿಂದ ದಕ್ಷಿಣಕ್ಕೆ ಸಾಣಿಕೆರೆಯತ್ತ ಸಾಗುವ ಹಳ್ಳ ಅಥವಾ ದೊಡ್ಡೇರಿಹಳ್ಳ ಇದೆ. ಊರಿನಲ್ಲಿ ಪ್ರಾಯಶಃ ಪಾಳೆಯಗಾರರ ಕಾಲದ ಮಾರಮ್ಮ, ಕಾಳಮ್ಮ, ವೀರಭದ್ರ ಮೊದಲಾದ ದೇವಾಲಯಗಳು ನೆಲೆಸಿವೆ. ನೊಳಂಬರ ಶಿಲ್ಪಗಳೊಡನೆ ೧೭-೧೮ನೇ ಶತಮಾನಗಳ ವೀರಗಲ್ಲು, ವೀರ-ಮಾಸ್ತಿಗಲ್ಲು ಮೊದಲಾದ ಶಿಲ್ಪಗಳು ಅಲ್ಲಲ್ಲಿ ಚದುರಿದಂತೆ ಕಂಡುಬರುವುದುಂಟು. ದೊಡ್ಡೇರಿಯ ಪ್ರಾಚೀನ ಎಡೆಯೆನ್ನುವುದರಲ್ಲಿ ಸಂದೇಹವಿಲ್ಲ. ಇತಿಹಾಸಕಾರರು ಭಾವಿಸುವಂತೆ, ೧೬೯೬ರ ಕದನ ನಡೆದುದು ಇದೇ ದೊಡ್ಡೇರಿ ಪರಿಸರದಲ್ಲಿ. ಅದೇ ವರುಷ ದೊಡ್ಡೇರಿಯು ಚಿತ್ರದುರ್ಗದವರ ವಶಕ್ಕೆ ಬಂದಿತು. ಚಿತ್ರದುರ್ಗ ಸಂಸ್ಥಾನವನ್ನು ೧೭೭೯ರಲ್ಲಿ ಹೈದರ್‌ಅಲಿ ವಶಪಡಿಸಿಕೊಳ್ಳುವವರೆಗೆ ದೊಡ್ಡೇರಿಯು ಚಿತ್ರದುರ್ಗದ ಭಾಗವಾಗಿಯೇ ಇದ್ದಿತು. ೧೮೮೨ರ ವರೆಗೆ ದೊಡ್ಡೇರಿಯೇ ಈಗಿನ ತಾಲ್ಲೂಕಿನ ಕೇಂದ್ರಸ್ಥಾನವೆಂದು ಗುರುತಿಸಲ್ಪಟ್ಟಿದ್ದಿತು. ಚಳ್ಳಕೆರೆಯನ್ನು ತಾಲ್ಲೂಕು ಕೇಂದ್ರವೆಂದು ಕರೆದುದು ೧೮೮೨ರಲ್ಲಿಯೇ. ಕಾಗದ ತಯಾರಿಕೆಗೆ ದೊಡ್ಡೇರಿ ಪ್ರಸಿದ್ಧವಾಗಿದ್ದುದನ್ನು ಅದರ ಸ್ಥಾನಮಾನದ ಹಿನ್ನೆಲೆಯಲ್ಲಿಯೂ ಗುರುತಿಸಬಹುದು. ಉತ್ತಮ ಗುಣಮಟ್ಟದ ಕಾಗದ ಇಲ್ಲಿ ತಯಾರಾಗುತ್ತಿದ್ದಿತು. ಇಲ್ಲಿಯ ಕಾಗದ ಅಳತೆಯನ್ನು ‘ದೊಡ್ಡೇರಿ ಗಜ’ ಎಂಬ ಪ್ರಮಾಣಿತ ಅಳತೆಯಾಗಿ ಪರಿಗಣಿಸಲಾಗಿದ್ದಿತೆನ್ನುವುದು ಗಮನಾರ್ಹ.

ಇಷ್ಟಾದರೂ ಚಾರಿತ್ರಿಕವಾಗಿ, ಈಗಿನ ಜನವಸತಿಯುಳ್ಳ ದೊಡ್ಡೇರಿ/ರಣದೊಡ್ಡೇರಿಗಿಂತಾ ಬೇಚರಾಕ್ ಸ್ಥಿತಿಯಲ್ಲಿರುವ ಹಳೇದೊಡ್ಡೇರಿಯೇ ಮಹತ್ವದ್ದೆಂದು ಹೇಳುವುದು ಸೂಕ್ತ. ಸಿರಾ ಸುಬೇದಾರ ತನ್ನ ಇತರ ಮೊಗಲ್ ಸರದಾರರೊಡನೆ ಆಶ್ರಯ ಪಡೆದುದು ಹಾಗೂ ೧೬೯೬ ಜನವರಿ ೫ರಂದು ಕಾಳಗ ನಡೆದುದು ಇದೇ ಪರಿಸರದ ಕೋಟೆಯಲ್ಲಿ ಎನ್ನಲು ಕೆಲವು ಪರೋಕ್ಷ ಸಾಕ್ಷ್ಯಗಳಿವೆ.[3] ಚಳ್ಳಕೆರೆ-ಪಾವಗಡ ರಸ್ತೆಯಲ್ಲಿ ಈಗಿನ ದೊಡ್ಡೇರಿಯನ್ನು ತಲುಪುವ ಮೊದಲೇ ಬಲಕ್ಕೆ, ಅಂದರೆ ದಕ್ಷಿಣದಿಕ್ಕಿಗೆ ಹೊರಳಿ ಮುಖ್ಯರಸ್ತೆಯಿಂದ ೧ ಕಿ.ಮೀ. ದೂರ, ಅಂದರೆ ಬೆಳಗೆರೆಗೆ ಹೋಗುವ ಒಳಮಾರ್ಗದಲ್ಲಿ ಸಾಗಿದರೆ ಸಿಕ್ಕುವ ಗ್ರಾಮವೇ ಉಪ್ಪಾರಹಟ್ಟಿ. ಈ ಗ್ರಾಮದ ದಕ್ಷಿಣಕ್ಕೆ ೧ ಕಿ.ಮೀ. ಅಂತರದಲ್ಲಿ ಇರುವುದೇ ಹಳೇದೊಡ್ಡೇರಿ ಬೇಚರಾಕ್ ನಿವೇಶನ. ಸನಿಹದಿಂದಲೂ ಪತ್ತೆಹಚ್ಚಲಾಗದಷ್ಟು ಹಾಳಾಗಿ ಹೋಗಿದೆ ಹಿಂದೊಮ್ಮೆ ಇಲ್ಲಿದ್ದ ಕೋಟೆ. ಇದರ ಒಟ್ಟು ಬಗೆಗಿನ ಯಾವ ಕಲ್ಪನೆಯೂ ಇಲ್ಲಿ ನಿಷ್ಪ್ರಯೋಜಕವೆಂದರೆ ಅಚ್ಚರಿಯೇನಲ್ಲ. ಇಡೀ ಕೋಟೆಯ ಆವರಣವನ್ನು ಕೃಷಿಕ್ಷೇತ್ರವಾಗಿ ಪರಿವರ್ತಿಸಿ ತುಂಬಾ ಕಾಲವಾಗಿದೆ. ಬೆಲೆಕಾಲವನ್ನು ಹೊರತುಪಡಿಸಿ ಬೇಸಗೆಕಾಲದಲ್ಲಿ ಈ ಕೋಟೆ ನಿವೇಶನದ ಸದ್ಯದ ಚಹರೆಯನ್ನು ಸ್ಥೂಲವಾಗಿ ಗುರುತಿಸಬಹುದಷ್ಟೆ. ಕೋಟೆಯ ಪ್ರಾಕಾರಗಳು ಸಂಪೂರ್ಣ ನಾಶವಾಗಿದ್ದು, ಈಗ ದಿಬ್ಬರೂಪದಲ್ಲಿ ಅಲ್ಲಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಕೋಟೆಯನ್ನು ಆವರಿಸಿದ್ದ ಕಂದಕ ಮಾತ್ರ ಅಲ್ಲಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಕೋಟೆಯನ್ನು ಆವರಿಸಿದ್ದ ಕಂದಕ ಮಾತ್ರ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ಕಾಣಿಸುವುದುಂಟು. ಕೋಟೆಯ ಒಂದು ಮೂಲೆಯಲ್ಲಿರುವ ಹೊಂಡವು ಅಲ್ಲೆಲ್ಲ ದಟ್ಟವಾಗಿ ವ್ಯಾಪಿಸಿರುವ ಮುಳ್ಳುಪೊದೆಗಳ ಮಧ್ಯೆ ಕಾಣೆಯಾಗಿದೆ.

[1] ‘ದೊಡ್ಡೇರಿ ಕಾಳಗ’ ಲಾವಣಿಯನ್ನು ಸಂಗ್ರಹಿಸಲು ಪ್ರೊ. ದೀಕ್ಷಿತರಿಗೆ ನೆರವಾದವರು ಚಿತ್ರದುರ್ಗದ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರು. ಪ್ರೊ.ದೀಕ್ಷಿತರು ಮತ್ತು ಜೋಯಿಸರು ಈರ್ವರೂ ಒಟ್ಟಿಗೆ ೧೯೫೪ರಲ್ಲಿ (ರಣ) ದೊಡ್ಡೇರಿಯಲ್ಲಿ ಈ ಲಾವಣಿಯನ್ನು ಸಂಗ್ರಹಿಸಿದರು.

[2] ಇದನ್ನು ನನ್ನ ಗಮನಕ್ಕೆ ತಂದವರು ಶ್ರೀ ಪಿ.ಆರ್.ವೀರಭದ್ರನಾಯಕ.

[3] ಸುಮಾರು ಮೂವತ್ತುವರ್ಷಗಳ ಹಿಂದೆ, ಮಹಾರಾಷ್ಟ್ರದಿಂದ ಬಂದ ಸಂಶೋಧಕರೋರ್ವರು (ಹೆಸರು ಮರೆತುಹೋಗಿದೆ) ತಮ್ಮೊಡನೆ ಹಳೇದೊಡ್ಡೇರಿ (ಬೇಚರಾಕ್) ಸ್ಥಳಕ್ಕೆ ಭೇಟಿಕೊಟ್ಟು ಮಾಹಿತಿ ಸಂಗ್ರಹಿಸಿದ್ದರೆಂದು (ರಣ) ದೊಡ್ಡೇರಿ ಗ್ರಾಮಪಂಚಾಯಿತಿಯ ಮಾಜಿ ಅಧ್ಯಕ್ಷ ಶ್ರೀ ಬಿ.ವೀರಣ್ಣನವರು ಕ್ಷೇತ್ರಕಾರ್ಯ ಸಂದರ್ಭದಲ್ಲಿ ತಿಳಿಸಿರುತ್ತಾರೆ. ಮರಾಠಾ ಇತಿಹಾಸ ಕುರಿತು ವಿಶೇಷವಾಗಿ ಕೆಲಸ ಮಾಡಿರುವ ಹೆಸರಾಂತ ವಿದ್ವಾಂಸ ಸೇತುಮಾಧವರಾವ್ ಎಸ್.ಪಗಡಿ (ಈಗ ದಿವಂಗತರು) ಅವರನ್ನು ಸುಮಾರು ೧೯೮೭ರಲ್ಲಿ ಬೆಂಗಳೂರಿನ ಎಂ.ಜಿ. ರೋಡ್ ಹಿಂಭಾಗದ ಅಪಾರ್ಟ್‌‌ಮೆಂಟೊಂದರಲ್ಲಿ ಇತಿಹಾಸ ಪ್ರಾಧ್ಯಾಪಕ ಡಾ.ಎಂ.ವಿ.ಶ್ರೀನಿವಾಸ್ ಅವರೊಡನೆ ಈ ಲೇಖಕನೂ ಸಂದರ್ಶಿಸಿದ್ದ. ಆಗ ನಡೆಸಲಾದ ಚರ್ಚೆಯಲ್ಲಿ, ತಾವು ಮಹಾರಾಷ್ಟ್ರದಿಂದ ಹೊರಟು ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ (ಹಳೇದೊಡ್ಡೇರಿ)ಗೆ ಭೇಟಿ ನೀಡಿ ಆ ಸ್ಥಳವನ್ನು ಖುದ್ದಾಗಿ ಪರಿಶೀಲಿಸಿ ಬಂದುದಾಗಿ ಪಗಡಿಯವರು ತಿಳಿಸಿದ್ದರು. (ರಣ)ದೊಡ್ಡೇರಿಯ ಶ್ರೀ ಬಿ.ವೀರಣ್ಣನವರನ್ನು ಸಂಪರ್ಕಿಸಿದ ವ್ಯಕ್ತಿ ಇವರೇ ಆಗಿದ್ದರೆಂಬುದು ಇದರಿಂದ ದೃಢಪಡುತ್ತದೆ. ಹಳೇದೊಡ್ಡೇರಿ ನಿವೇಶನವನ್ನು ಪರಿಶೀಲಿಸುವಲ್ಲಿ ಪಗಡಿಯವರು ತೋರಿದ ಆಸಕ್ತಿಯನ್ನು ಗಮನಿಸಿದರೆ, ೧೬೯೬ರ ಕದನ ನಡೆದ ಸ್ಥಳ ಹಳೇದೊಡ್ಡೇರಿಯೇ ಆಗಿದ್ದಿತೆಂಬುದು ಸ್ಪಷ್ಟ.