ಹಳೇದೊಡ್ಡೇರಿ ಕೋಟೆಯೊಳಗೆ ಜನವಸತಿ ದಟ್ಟವಾಗಿದ್ದಿತೆನ್ನಲು ಇಲ್ಲಿಯ ನಿವೇಶನದಲ್ಲಿ ಕಂಡುಬರುವ ಮಡಕೆ ಚೂರುಗಳು, ಇಟ್ಟಿಗೆ ತುಂಡುಗಳು, ನಿತ್ಯಬಳಕೆಯ ಸಣ್ಣ ಪ್ರಮಾಣದ ಗುಂಡುಕಲ್ಲುಗಳನ್ನು ಸಾಕ್ಷಿ ಹೇಳುತ್ತವೆ. ಇಲ್ಲಿ ದೊರೆಯುವ ಕಬ್ಬಿಣದ ಕಿಟ್ಟವು ಈ ಕೋಟೆಯಲ್ಲಿ ಕಮ್ಮಾರಿಕೆ ನಡೆಯುತ್ತಿದ್ದುದನ್ನು ಸಮರ್ಥಿಸುತ್ತದೆ. ದೇವಾಲಯವಾಗಲಿ, ಇತರೆ ಸ್ಮಾರಕಗಳಾಗಲಿ ಇದ್ದುದರ ಬಗೆಗೆ ಇಲ್ಲಿ ಲವಲೇಶವೂ ಸುಳಿವು ದೊರೆಯುವುದಿಲ್ಲ.

ಈಗ ಪೂರ್ತ ನಾಶವಾಗಿರುವ ಹಳೇದೊಡ್ಡೇರಿಕೋಟೆಯ ನಿವೇಶನದಲ್ಲಿ ಪುರಾತಾತ್ವಿಕ ಶೋಧನೆ ಕೈಗೊಂಡು ಅದರ ಮೂಲರಚನೆಯನ್ನು ನಿಖರವಾಗಿ ಗುರುತಿಸಲು ಸಾಧ್ಯವಿದೆ. ಪೂರ್ವದಿಕ್ಕಿನಲ್ಲಿದ್ದ ಹೆಬ್ಬಾಗಿಲಿನ ಸ್ವರೂಪವನ್ನು ಗುರುತಿಸಬೇಕಿದೆ. ಚೌಕಾಕಾರದಲ್ಲಿದ್ದ ಇಲ್ಲಿಯ ಕೋಟೆಯು ಸ್ಥಳೀಯವಾಗಿ ದೊರೆಯುವ ಸಣ್ಣಗಾತ್ರದ ಕಲ್ಲುತುಂಡುಗಳಿಂದ ನಿರ್ಮಾಣಗೊಂಡಿದ್ದಿ ತೆನ್ನಲು ಈ ನಿವೇಶನದಲ್ಲಿ ಕಂಡುಬರುವ ಸಣ್ಣಕಲ್ಲುಗಳೇ ಸಾಕ್ಷಿ. ದೇಶಿ ತಂತ್ರಗಾರಿಕೆಯಾನುಸಾರ ಈ ಕೋಟೆ ನಿರ್ಮಾಣಗೊಂಡಿದ್ದಿ ತೆನ್ನಲಡ್ಡಿಯಿಲ್ಲ. ಇದೊಂದು ಸಾಧಾರಣ ಕೋಟೆಯಾಗಿದ್ದಿತೆನ್ನಲು, ಕದನದ ತರುವಾಯ ಯಾವ ಸಣ್ಣ ಕುರುಹನ್ನೂ ಉಳಿಸಿಕೊಳ್ಳದಂತೆ, ಹೇಳ ಹೆಸರಿಲ್ಲದಂತೆ ನಾಶವಾಗಿ ಹೋದುದೇ ಉದಾಹರಣೆ. ಈಚೆಗೆ ಸುಮಾರು ೧೫ ವರ್ಷಗಳವರೆಗೂ ಈ ಕೋಟೆಯ ನಿವೇಶನದಲ್ಲಿ ಭಾರೀ ಜಾಲಿಮರಗಳು ಬೆಳೆದುಕೊಂಡಿದ್ದು, ಕಾಡಿನ ಪರಿಸರ ಸೃಷ್ಟಿಗೊಂಡಿದ್ದಿತು. ಪಶುಪಾಲನೆಗೆ ಸೂಕ್ತ ಸ್ಥಳವಾಗಿದ್ದಿತು. ಈ ಬೀಳಿನಲ್ಲಿ ಸಾಗುವಳಿ ಆರಂಭವಾಗುತ್ತಿದ್ದಂತೆ ಈಗಿನ ಬಯಲು ಪರಿಸರ ಏರ್ಪಟ್ಟಿತು. ಈ ಕೋಟೆಯ ನಿವೇಶನದ ಮಧ್ಯಭಾಗದಲ್ಲಿ, ನೆಲಮಟ್ಟದಲ್ಲಿರುವಂತೆ ಕಂಡರೂ ಸಾಧಾರಣ ಎತ್ತರದ ದಿಬ್ಬದ ಪ್ರದೇಶವಿದ್ದು, ಇಲ್ಲಿ ‘ಅರಮನೆ’ ಇದ್ದಿತೆಂಬುದು ಸ್ಥಳೀಯರ ಹೇಳಿಕೆ. ಇ‌ಲ್ಲಿಯ ಜನರು ಇದನ್ನು ಮಾಳಿಗೆ (ಅರಮನೆ) ಜಾಗವೆಂತೆಲೇ ಗುರುತಿಸುವುದುಂಟು. ಸುಮಾರು ೧೦೦ x ೧೦೦ ಅಡಿಗಳ ವಿಸ್ತಾರವಾಗಿರುವ ಹಾಗೂ ನಾಲ್ಕು ಮೂಲೆಗಳಲ್ಲೂ ಇದ್ದಿರಬಹುದಾದ ಬುರುಜು ಕುರುಹುಗಳುಳ್ಳ ಈ ಎಡೆಯಲ್ಲಿ ಭೂಶೋಧನೆ ಕೈಗೊಳ್ಳುವುದು ಅಗತ್ಯ.

ಆದರೆ ಕೋಟೆಯ ನಿವೇಶನಕ್ಕೆ ಹೊಂದಿಕೊಂಡಂತಿರುವ ವಿಶಾಲವಾದ ‘ದೊಡ್ಡೇರಿ ಕೆರೆ’ಯ ಮುಂಭಾಗದ ಪರಿಸರದಲ್ಲಿ ದೇವಾಲಯದ ಅವಶೇಷ, ಶಾಸನೋಕ್ತ ವೀರಗಲ್ಲು, ವೀರ-ಮಾಸ್ತಿಗಲ್ಲು, ಬಿಡಿಶಿಲ್ಪ ಇತ್ಯಾದಿ ಕಂಡುಬರುತ್ತವೆ. ದೊಡ್ಡೇರಿ ಕದನ ನಡೆದ ಸಂದರ್ಭದಲ್ಲಿ ಹತರಾದ ಕೆಲವು ಸ್ಥಳೀಯ ಯೋಧರ ನೆನಪಿಗಾಗಿ ಹಾಕಿಸಿರುವ ಶಿಲೆಗಳೂ ಇಲ್ಲಿರಬಹುದು. ಒಂದೆರಡರ ವಿನಾ ಉಳಿದ ಸ್ಮಾರಕಶಿಲೆ ಹಾಗೂ ಶಿಲ್ಪಗಳು ಮುಕ್ಕಾಗಿವೆ. ಕೋಟೆ ನಿವೇಶನವು ಕೆರೆಗೆ ಹೊಂದಿಕೊಂಡಂತಿರುವುದರಿಂದ, ಹಿಂದೊಮ್ಮೆ ಈ ಕೆರೆಯ ನೀರನ್ನೆ ಕೋಟೆಯ ಕಂದಕಕ್ಕೆ ಹಾಯಿಸುತ್ತಿದ್ದಿರಬೇಕು. ಇದರ ಕುರುಹು ಸಹಾ ಗೋಚರಿಸುತ್ತದೆ. ಸುಮಾರು ಒಂದುಸಾವಿರ ಎಕರೆ ಅಚ್ಚುಕಟ್ಟು ಹೊಂದಿರುವ ಈ ಕೆರೆ ಏರಿಯ ಮೇಲೆ ಸಪ್ತಮಾತೃಕೆಯರ ಶಿಲ್ಪ ಮತ್ತು ನಂದಿ ವಿಗ್ರಹಗಳಿವೆ. ಈ ಕೆರೆ ಏರಿಯ ಮುಂದೆ ಕೋಟೆಯ ಹೊರವಲಯದಲ್ಲಿ ಜನವಸತಿಯ ಕುರುಹುಗಳು ಕಂಡುಬರುವುದರೊಡನೆ ಕದನದಲ್ಲಿ ಮಡಿದವರ ಸ್ಮಾರಕಶಿಲೆಗಳೂ ಇವೆ. ದೊಡ್ಡೇರಿ ಕದನ ಈ ಪ್ರದೇಶದಲ್ಲಿಯೂ ನಡೆದಿರಬೇಕು. ‘ದೊಡ್ಡೇರಿ ಜಗಳ’ ಲಾವಣಿಯಲ್ಲಿ ಕೆರೆಯೊಂದರ ಬಳಿ ಕದನ ನಡೆದ ಸಂದರ್ಭದ ಸೂಕ್ಷ್ಮ ಚಿತ್ರಣವಿದೆ. ಕೆರೆಕಟ್ಟೆಯ ಮೇಲೆ ಹಾಗೂ ಏರಿಯ ಹಿಂದೆ ಖಾಸಿಂಖಾನನ ಸೈನಿಕರನ್ನು ದುರ್ಗದವರು ಓಡಾಡಿಸಿಕೊಂಡು, ಗದುಬಿ(ಮಿ) ಕೊಂಡು, ಹಾರಾಡಿಕೊಂಡು ಕಡಿದ ಬಗೆಗೆ ರೋಚಕ ವಿವರಣೆಯಿದೆ. ಆದ್ದರಿಂದ ಕೋಟೆಯ ಬಳಿ ಮಾತ್ರವಲ್ಲದೆ, ದೊಡ್ಡೇರಿಕೆರೆ ಬಳಿಯೂ ಈ ಕದನ ನಡೆದಿರುವ ಸಾಧ್ಯತೆಯುಂಟು.

ಚಿತ್ರದುರ್ಗದ ದಾಖಲೆಗಳಲ್ಲಿ ಖಾಸಿಂಖಾನನು ತಳಕಿನಿಂದ ದೊಡ್ಡೇರಿವರೆಗೆ ಲಡಾಯಿ ಮಾಡುತ್ತಾ ಹೋಗಿ ದೊಡ್ಡೇರಿ ಕೋಟೆಯೊಳಗೆ ಹೊಕ್ಕನೆಂಬ ವಿವರಣೆಯಿದೆ. ತಳಕು ಇರುವುದು ಚಳ್ಳಕೆರೆಯಿಂದ ಉತ್ತರಕ್ಕೆ ೧೨ ಕಿ.ಮೀ. ದೂರದಲ್ಲಿ. ತಳಕು ಮತ್ತು ದೊಡ್ಡೇರಿ/ ರಣದೊಡ್ಡೇರಿಗಳ ನಡುವಣ ಅಂತರ ೭-೮ ಕಿ.ಮೀ. ಖಾಸಿಂಖಾನನ ದಂಡು ತಳಕಿನಿಂದ ಹಳೇದೊಡ್ಡೇರಿಯತ್ತ ಮರಾಠರೊಡನೆ ಕಾಳಗವಾಡುತ್ತಾ ಬಂದಿದ್ದರೆ,ಅದು ಮಾರ್ಗ ಮಧ್ಯದ ಕೆಲವು ಗ್ರಾಮಗಳನ್ನು ದಾಟಿ ಬಂದಿರುವುದು ಸಹಜ. ತಮ್ಮ ಆನೆ, ಕುದುರೆಗಳಿಗೆ ಮೇವು, ನೀರು ಇತ್ಯಾದಿಯನ್ನು ದೊರಕಿಸಿಕೊಳ್ಳುವ ಸಲುವಾಗಿ ಮೊಗಲರು ಕಾವಲು, ಕೆರೆಗಳ ಪರಿಸರದಲ್ಲಿ ಸುತ್ತಾಡಿರುವ ಸಾಧ್ಯತೆ ಹೆಚ್ಚು. (ನಕ್ಷೆ ನೋಡಿ). ಆಹಾರದ ಕೊರತೆಯುಂಟಾದಾಗ ಸೈನಿಕರು ಕೆರೆಯ ನೀರನ್ನೆ ಕುಡಿದು ಜೀವ ಹಿಡಿದುಕೊಂಡ ಉದಾಹರಣೆಗಳು ದಾಖಲೆಗಳಲ್ಲಿ ದೊರಕುವುದರಿಂದ, ಕೆರೆಗಳ ಸನಿಹದಲ್ಲಿ ಮೊಗಲರು ಗುಡಾರಗಳನ್ನು ಹಾಕಿಕೊಂಡ ಸಂದರ್ಭಗಳು ಇಲ್ಲದಿಲ್ಲ. ದೊಡ್ಡೇರಿ ಕದನ ನಡೆಯುವಾಗ ದುರ್ಗದ ಸೇನೆಯು ‘ಹೊದ್ದ ಗುಡಾರದ ಹೊಕ್ಕು’ ಖಾಸಿಂಖಾನನ ಸೈನಿಕರನ್ನು ಕಡಿದ ಪ್ರಸ್ತಾಪ ಬಂದಿದೆ ಲಾವಣಿಯಲ್ಲಿ. ಇವೆಲ್ಲವೂ ಪರಿಶೀಲನಾರ್ಹ ಅಂಶಗಳೇ.

ದೊಡ್ಡೇರಿ ಕದನದಲ್ಲಿ ಜಯಗಳಿಸಿ ಕೋಟೆಯನ್ನು ತಮ್ಮ ವಶಕ್ಕೆ ಪಡೆದ ಚಿತ್ರದುರ್ಗದವರು ಆ ನಂತರ ಮೊಗಲರ ಆಗ್ರಹಕ್ಕೆ ತುತ್ತಾಗಬೇಕಾಯಿತು. ಮರಾಠರ ವಿರುದ್ಧ ತಮ್ಮೊಡನೆ ಕೈ ಜೋಡಿಸುವಂತೆ ಮೊಗಲರು ದುರ್ಗದವರನ್ನು ನಿರ್ಬಂಧಿಸಿದರು. ಈ ಪರಿಸ್ಥಿತಿ ಕೆಲವಾರು ವರ್ಷಗಳವರೆಗೆ ಮುಂದುವರೆಯಿತು. ದುರ್ಗದವರ ಮತ್ತು ಮರಾಠರ ಸಖ್ಯ ಮತ್ತೆ ಬೆಳೆದುದು ಮೊಲಗರ ಕಾಟದಿಂದ ಮುಕ್ತರಾದ ನಂತರವೇ.

ದೊಡ್ಡೇರಿ/ರಣದೊಡ್ಡೇರಿ ಹಾಗೂ ಹಳೇದೊಡ್ಡೇರಿ ಕೋಟೆಗಳ ನಿರ್ಮಾಣದ ಕಾಲವನ್ನು ನಿರ್ಧರಿಸುವುದು ಕಷ್ಟಸಾಧ್ಯ. ಈ ಕುರಿತು ಮಾಹಿತಿ ದೊರೆಯುವುದಿಲ್ಲ. ಹೆಸರೇ ಸೂಚಿಸುವಂತೆ, ಹಳೇದೊಡ್ಡೇರಿಯೇ ಮೊದಲು ನಿರ್ಮಾಣಗೊಂಡುದೆಂದು ಭಾವಿಸಿದರೂ ಇದನ್ನು ನಿರ್ಮಿಸಿದವರ ವಿವರ ತಿಳಿದುಬರುವುದಿಲ್ಲ. ಹಾಗೆಯೇ (ರಣ) ದೊಡ್ಡೇರಿ ಕೋಟೆಯ ವಿಚಾರ ಸಹಾ. ೧೬೯೬ ರ ಕದನದ ಪರಿಣಾಮವಾಗಿಯೇ ಹಳೇದೊಡ್ಡೇರಿ ಕ್ರಮೇಣ ನಿರ್ಜನ ಪ್ರದೇಶವಾಯಿತೆನ್ನಬಹುದು. ಇದೀಗ ಬೇಚರಾಕ್ ಆಗಿ ದಾಖಲುಗೊಂಡಿದೆ. ಕದನದ ತರುವಾಯ ಅಲ್ಲಿಯ ಜನರೇ ಈಗಿನ (ರಣ)ದೊಡ್ಡೇರಿ ಗ್ರಾಮದ ಹುಟ್ಟಿಗೆ ಕಾರಣರಾದಂತೆಯೇ ಗ್ರಾಮರಕ್ಷಣೆಗಾಗಿ ನೂತನ ಕೋಟೆಯ ನಿರ್ಮಾಣಕ್ಕೂ ಕಾರಣವಾಗಿರಬಹುದು.

ದೊಡ್ಡೇರಿ ಕದನ ನಡೆದ ಪರಿಸರ

ದೊಡ್ಡೇರಿ ಕದನ ನಡೆದ ಪರಿಸರ

ಮೊಗಲ್ ಹಾಗೂ ಮರಾಠಾ ಮತ್ತು ಚಿತ್ರದುರ್ಗ ಜಂಟಿಪಡೆಗಳ ಮಧ್ಯೆ ನಡೆದ ದೊಡ್ಡೇರಿ ಕದನದಲ್ಲಿ ಮೊಗಲರ ಪ್ರತಿಷ್ಠೆಗೆ ಭಾರಿ ಪೆಟ್ಟು ಬಿದ್ದುದು ವಾಸ್ತವ. ಇಂಥಾ ಸೋಲನ್ನು ನಿರೀಕ್ಷಿಸದ ಸಾಮ್ರಾಟ ಔರಂಗಜೇಬನ ಪ್ರತಿಕ್ರಿಯೆ ಹೇಗಿದ್ದಿರಬಹುದು? ಖಾಫಿಖಾನೆ ಮತ್ತು ಮರಾಠಾ ಇತಿಹಾಸಕಾರರು ಈ ಸಂದರ್ಭವನ್ನೂ ದಾಖಲಿಸದೆ ಬಿಟ್ಟಿಲ್ಲ. ಈ ಮಾಹಿತಿಯನ್ನು ಸಂಗ್ರಹಿಸಿರುವ ಜೇಮ್ಸ್ ಗ್ರಾಂಟ್‌ಡಫ್ ಹೇಳುವಂತೆ, ದೊಡ್ಡೇರಿಕೋಟೆಯಲ್ಲಿ ಸೈಯದ್ ಖಾಸಿಂಖಾನನು ಆತ್ಮಹತ್ಯೆ ಮಾಡಿಕೊಂಡ ನಂತರ ಇತರ ಸರದಾರರು ಮರಾಠರಿಗೆ ಅಪಾರ ಒತ್ತೆಹಣ ಸಂದಾಯ ಮಾಡುವುದರೊಡನೆ ಅವರ ದಿಗ್ಬಂಧನದಿಂದ ಬಿಡುಗಡೆ ಪಡೆದರು. ಸೋಲಿನಿಂದಾದ ಅಪಮಾನದ ಮುಖ ಹೊತ್ತು ಹಾಗೂ ಮರಾಠರು ಮತ್ತು ದುರ್ಗದವರ ಔದಾರ್ಯದ ಕಾರಣವಾಗಿ ಸ್ವಪ್ರತಿಷ್ಠೆಯನ್ನು ಕಳೆದುಕೊಂಡು ಮೊಗಲ್ ಕ್ಯಾಂಪಿನತ್ತ ತೆರಳಿದರು. ಅವರೆಲ್ಲರನ್ನೂ ಚಕ್ರವರ್ತಿ ಔರಂಗಜೇಬನು ಖಂಡಿಸಿದನಲ್ಲದೆ, ಅವರ ಗೌರವ ಪದವಿಗಳು ಹಾಗೂ ಉನ್ನತಸ್ಥಾನಗಳನ್ನು ಕಿತ್ತು ಹಾಕಿದ; ಅವರನ್ನು ರಾಜಧಾನಿಯಿಂದ ದೂರವಿರುವ ಪ್ರಾಂತ್ಯಗಳಿಗೆ ವರ್ಗಾಯಿಸಿದ; ಹಾಗೂ ಕೆಳಸ್ಥಾನಗಳಲ್ಲಿದ್ದು ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದ. ಉದಾಹರಣೆಗೆ, ಅಜ್ಮೀರ್ ಸುಬೇದಾರನಾಗಿದ್ದ ಖಾನಜಾದ್‌ಖಾನನನ್ನು ನಾಂದೇಡ್ ಸುಬೇದಾರನಾಗಿ ವರ್ಗಾಯಿಸಲಾಯಿತು.

ಇಷ್ಟಾದರೂ ಕೆಲವೇ ದಿನಗಳಲ್ಲಿ ಇಂಥಾ ಸರದಾರರ ಬಗೆಗೆ ಸಾಮ್ರಾಟ ಔರಂಗಜೇಬನು ಉದಾರ ನೀತಿ ತಳೆದುದು ಗಮನಾರ್ಹ. ಮೊಗಲ್ ಆಸ್ಥಾನದ ವರದಿಗಳು ಒದಗಿಸುವ ಮಾಹಿತಿಯ ಪ್ರಕಾರ, ದೊಡ್ಡೇರಿ ಕದನದಲ್ಲಿ (೫ ಜನವರಿ ೧೬೯೬) ಸೋತು ಅಪಮಾನಕ್ಕೊಳಗಾಗಿದ್ದ ಖಾನಜಾದ್‌ಖಾನ್, ಸಾಜ್‌ಶಿಕನ್‌ಖಾನ್ ಮೊದಲಾದವರು ೧೬೯೬ ಫೆಬ್ರವರಿ ೧೩ರಂದು ಬಿಜಾಪುರದ ಸನಿಹಕ್ಕೆ ಬಂದಿದ್ದರು. ೧೭ರಂದು ಖಾನ್‌ಜಾದ್‌ಖಾನನು ಇಂಡಿಗ್ರಾಮವನ್ನು ತಲುಪಿದ್ದ. ಇದೇ ವೇಳೆಗೆ ಬಿಜಾಪುರದ ದಿವಾನನಾಗಿದ್ದ ಮೀರ್ ಬಖರ್ ಆ ಹೊಣೆಗಾರಿಕೆಯಿಂದ ಬಿಡುಗಡೆ ಹೊಂದಿದ್ದರಿಂದ, ಮಾರ್ಚ್ ೨೨ರಂದು ಔರಂಗಜೇಬನು ತನ್ನ ಪ್ರಧಾನ ಬಕ್ಷಿಯಾದ ಮುಖ್‌ಲಿಸ್‌ಖಾನನನ್ನು ಸಂಪರ್ಕಿಸಿ, ಖಾನಜಾದ್‌ಖಾನನು ಬಿಜಾಪುರ ಫೌಜುದಾರ್ ಆಗಿ ನೇಮಕಗೊಳ್ಳಲು ಆಸಕ್ತವಾಗಿರುವನೇ ಎಂಬುದನ್ನು ತಿಳಿದುಕೊಳ್ಳಲು ಸೂಚಿಸಿದ. ಒಂದುವೇಳೆ ಅವನು ಆಸಕ್ತನಾಗಿದ್ದಲ್ಲಿ, ಆ ಪ್ರಕಾರವೇ ಆದೇಶ ಹೊರಡಿಸುವುದಾಗಿ ತಿಳಿಸಿದ. ಆದರೆ ಬಕ್ಷಿ ಮುಖ್‌ಲಿಸ್‌ಖಾನನು ಮಾರ್ಚ್ ೨೮ರಂದು ಔರಂಗಜೇಬನಿಗೆ ಸಲ್ಲಿಸಿದ ವರದಿಯಲ್ಲಿ, ಖಾನಜಾದ್‌ಖಾನನು ಬಿಜಾಪುರದ ಫೌಜುದಾರನಾಗಲು ಆಸಕ್ತಿನಾಗಿಲ್ಲವೆಂದು ತಿಳಿಸಿದ. ದೊಡ್ಡೇರಿ ಕದನದಲ್ಲಿ ಉಂಟಾದ ಅವಹೇಳನಕಾರಿ ಸೋಲಿನ ಕಾರಣವಾಗಿ ಖಾನಜಾದ್‌ಖಾನನು ತೀರಾ ಅಸಂತುಷ್ಟನಾಗಿದ್ದು, ಬಿಜಾಪುರದ ಫೌಜುದಾರ್ ನಿರ್ವಹಿಸಲು ಆಸಕ್ತನಾಗಿಲ್ಲವೆಂಬುದನ್ನು ವ್ಯಕ್ತಪಡಿಸಲಾಗಿದ್ದಿತು. ದೊಡ್ಡೇರಿ ಕದನದಲ್ಲಿ ಪಾಲ್ಗೊಂಡಿದ್ದ ಮೊಗಲ್ ಸರದಾರರನ್ನು ಅಲ್ಲಿ ಉಂಟಾದ ಸೋಲು ಹೇಗೆ ನಿರಾಶೆಯ ಮಡುವಿಗೆ ದೂಡಿದ್ದಿತೆಂಬುದನ್ನು ಇಲ್ಲಿ ಅರಿಯಬಹುದು.

ಪ್ರಾಯಶಃ ದೊಡ್ಡೇರಿ ಕದನದಿಂದ ಉಂಟಾದ ಪರಿಣಾಮವನ್ನು ಔರಂಗಜೇಬ್ ನಿಧಾನವಾಗಿಯಾದರೂ ಗ್ರಹಸಿದ್ಧಿರಬಹುದು. ಈ ಕದನದ ಕಾರಣವಾಗಿ ದೊಡ್ಡೇರಿ ಕೋಟೆಯಲ್ಲಿ ತನ್ನ ಪ್ರಾಣ ಕಳೆದುಕೋಂಡ ಸೈಯದ್ ಖಾಸಿಂಖಾನನ ಬಗೆಗೆ ಈ ಸಾಮ್ರಾಟದಲ್ಲಿ ಅನುಕಂಪ ಮೂಡಿದುದು ಅಚ್ಚರಿಯೆನಿಸಿದರೂ ನಿಜ. ೧೯೯೬ ಮಾರ್ಚ್ ೨೧ರ ಮೊಗಲ್ ಆಸ್ಥಾನದ ದಿನಚರಿ ವರದಿಯ ಪ್ರಕಾರ, ಆದವಾನಿ (ಇಮ್ತಿಯಾಜ್ ಘುರ್) ಕೋಟೆಯಲ್ಲಿ ನೆಲೆಸಿದ್ದ ಖಾಸಿಂಖಾನನ ಕುಟುಂಬ ಮತ್ತು ಇತರ ಸಮೀಪಬಂಧುಗಳ ಪರವಾಗಿ ಖಾಸಿಂಖಾನನ ವಕೀಲನು ಮೊಗಲ್ ಆಸ್ಥಾನಕ್ಕೆ ಮನವಿಯೊಂದನ್ನು ಸಲ್ಲಿಸಿ, ಅವರಿಗೆಲ್ಲ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅದರಲ್ಲಿ ಕೋರಿದ್ದ. ಇದಕ್ಕೆ ಔರಂಗಜೇಬನು ಹೃತ್ಪೂರ್ವಕ ಸ್ಪಂದಿಸಿದ. ಖಾಸಿಂಖಾನನ ಅಘೋಷಿತ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಔರಂಗಜೇಬನು ಮುರಳಿಧರನೆಂಬವನನ್ನು ಆದವಾನಿಗೆ ಕಳುಹಿಸಿಕೊಟ್ಟಿದ್ದರೂ ಖಾಸಿಂಖಾನನ ಕುಟುಂಬ ವರ್ಗದವರಿಗೆ ಅಗತ್ಯ ಅನುಕೂಲ ಹಾಗೂ ರಕ್ಷಣೆಯನ್ನು ಒದಗಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸಿದ; ಇದನ್ನು ಸೂಕ್ತವಾಗಿ ಜಾರಿಗೊಳಿಸುವಂತೆ ಆದವಾನಿಕೋಟೆಯ ದಂಡಾಧಿಕಾರಿ ರಾಜಾ ಅನೂಪ್‌ಸಿಂಗ್‌ನಿಗೆ ಸೂಚಿಸಿದ. ಇಷ್ಟಲ್ಲದೆ, ಔರಂಗಜೇಬನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಖಾಸಿಂಖಾನ್ ಮತ್ತು ಹಿಮ್ಮತ್‌ಖಾನರ ಅಧೀನದಲ್ಲಿದ್ದ ಸೇನೆಯನ್ನು ಮರುವ್ಯವಸ್ಥೆಗೊಳಪಡಿಸಿದ. ೧೯೯೬ ಮಾರ್ಚ್ ೩೧ರ ದಿನಚರಿ ವರದಿಯ ಪ್ರಕಾರ, ಚಕ್ರವರ್ತಿಯು ಈ ಉದ್ದೇಶಕ್ಕಾಗಿಯೇ ಓರ್ವ ವಿಶೇಷ ದಂಡಧಾರಿ/ಅಧಿಕಾರಿ (Mace-bearer) ಯನ್ನು ನೇಮಿಸಿದನಲ್ಲದೆ, ಹಿಂದಿನ ಈರ್ವರು ಸರದಾರನ ಅಧೀನದಲ್ಲಿದ್ದ ಸೈನಿಕರು ಮತ್ತು ಅಧಿಕಾರಿಗಳು ಯುವರಾಜ ಮೊಹಮ್ಮದ್ ಬೇಡರ್‌ಭಕ್ತ್ (ಔರಂಗಜೇಬ್‌ನ ಮೊಮ್ಮಗ)ನ ವಶದಲ್ಲಿದ್ದ ಸೇನಾಪಡೆಯಲ್ಲಿ ವಿಲೀನಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಆತನಿಗೆ ಆದೇಶಿಸಿದ. ಒಟ್ಟಿನಲ್ಲಿ, ದೊಡ್ಡೇರಿ ಕದನದ ತರುವಾಯ, ಅಂದರೆ ೧೬೯೬ ಜನವರಿ ೫ ರಿಂದ ಮಾರ್ಚ್‌ ೩೧ರ ಅವಧಿಯಲ್ಲಿ, ಮೊಗಲರ ಆಡಳಿತ ಕೇಂದ್ರದಲ್ಲಿ ಈ ಮೇಲಿನಂತೆ ಕದನಸಂಬಂಧಿ ಚಟುವಟಿಕೆಗಳು, ಬದಲಾವಣೆಗಳು ತ್ವರೆಯಿಂದ ನಡೆದುಹೋದವು!

ದೊಡ್ಡೇರಿ ಕದನದ ಪರಿಣಾಮವಾಗಿ ಮೊಗಲ್ ಸಾಮ್ರಾಜ್ಯಕ್ಕೆ ಸ್ವಲ್ಪಮಟ್ಟಿಗಾದರೂ ಧಕ್ಕೆ ತಗುಲಿತು; ದಕ್ಷಿಣಕರ್ನಾಟಕದಲ್ಲಿ ಮರಾಠರ ಪ್ರತಿಷ್ಠೆ ಹೆಚ್ಚಿತು; ವಿಜಯದ ಮಕುಟ ಚಿತ್ರದುರ್ಗದವರ ಮುಡಿಗೇರಿತು. ದೊಡ್ಡೇರಿಯು ಚಿತ್ರದುರ್ಗದವರ ಪಾಲಿಗೆ ಬಂದುದು ಹಾಗೂ ಇತರ ಸಂಸ್ಥಾನಿಕರ ಮಧ್ಯೆ ಬಿಚ್ಚುಗತ್ತಿ ಭರಮಣ್ಣನಾಯಕನ ವರ್ಚಸ್ಸು ವರ್ಧಿಸಿದುದು ನಿಜವಾದರೂ ದುರ್ಗದ ಪಾಲಿಗೆ ತೀವ್ರತೆರನಾದ ಒತ್ತಡ ಆರಂಭ ಗೊಂಡುದೂ ಈ ಕದನದ ತರುವಾಯವೇ. ೧೭೭೯ರಲ್ಲಿ ದುರ್ಗವು ಹೈದರ್‌ಆಲಿಯ ಅಧೀನಕ್ಕೆ ಬರುವವರೆಗೆ, ಭರಮಣ್ಣನಾಯಕನಿಂದ ಕೊನೆಯ ಅರಸ ರಾಜಾ ವೀರಮದಕರಿ ನಾಯಕನವರೆಗೆ – ಸುಮಾರು ೮೫ ವರ್ಷಗಳಷ್ಟು ಕಾಲ-ಈ ನಾಯಕ ಸಂಸ್ಥಾನವು ಮೊಗಲ್ – ಮರಾಠಾ- ಶ್ರೀರಂಗಪಟ್ಟಣದ ನವಾಬಶಾಹಿಗಳಿಗೆ ಅಧೀನವಾಗಿರುವಂತೆ ವರ್ತಿಸಬೇಕಾಗಯಿತು. ಪೊಗದಿ/ಖಂಡಣಿ ಸಲ್ಲಿಸುವುದರೊಡನೆ ತನ್ನ ಆಡಳಿತಕ್ರಮದಲ್ಲಿ ಹೊಂದಾಣಿಕೆಯ ಕಾರ್ಯನೀತಿಯನ್ನು ಅನುಸರಿಸುವುದು ಅದಕ್ಕೆ ಅನಿವಾರ್ಯವೆನಿಸಿತು.

. ದೊಡ್ಡೇರಿ ಕಾಳಗದ ಲಾವಣಿ : ಪುನರ್ವಿಮರ್ಶೆ

ಚಿತ್ರದುರ್ಗ ನಾಯಕ ಅರಸರ ಕಾಲದಲ್ಲಿ ನೆರೆಯ ಸಂಸ್ಥಾನಿಕರು, ಮೊಗಲರು, ಮರಾಠರು ಹಾಗೂ ಶ್ರೀರಂಗಪಟ್ಟಣದ ನವಾಬರೊಡನೆ ಹಲವಾರು ಯುದ್ಧಗಳು ನಡೆದಿವೆ. ಇವುಗಳಲ್ಲಿ ಕೆಲವು ನಿರ್ಣಾಯಕವಾದವು; ಉಳಿದವು ಸ್ವರಕ್ಷಣೆಯ ನೆಲೆಯಲ್ಲಿ ನಡೆಸಿದ ಸೈನಿಕ ಪ್ರತಿರೋಧಗಳು. ನಿರ್ಣಾಯಕ ಯುದ್ಧಗಳಲ್ಲಿ ದೊಡ್ಡೇರಿ ಕದನ (೧೬೯೬ ಜನವರಿ), ಮಾಯಕೊಂಡ ಕಾಳಗ (೧೭೪೮-೪೯) ಹಾಗೂ ಹೈದರ್‌ಅಲಿಯ ಸಂಯುಕ್ತಪಡೆಗಳೊಡನೆ ನಡೆಸಿದ ಅಂತಿಮ ಯುದ್ಧ (೧೭೭೯ ಮಾರ್ಚ್)- ಇವು ಪರಿಗಣಿಸಲರ್ಹವಾದಂಥವು. ಈ ಯುದ್ಧಗಳನ್ನು ನಡೆಸಿದ ಅರಸರೆಂದರೆ, ಬಿಚ್ಚುಗತ್ತಿ ಭರಮಣ್ಣ ನಾಯಕ (ದೊಡ್ಡೇರಿ ಕದನ), ಹಿರೇಮದಕರಿನಾಯಕ ಮತ್ತು ಇಮ್ಮಡಿ ಕಸ್ತೂರಿ ರಂಗಪ್ಪನಾಯಕ (ಮಾಯಕೊಂಡ ಕಾಳಗ) ಹಾಗೂ ರಾಜಾ ವೀರಮದಕರಿನಾಯಕ (ಹೈದರ್‌ನೊಡನೆ ಅಂತಿಮ ಯುದ್ಧ). ದೊಡ್ಡೇರಿ ಕದನ ನಡೆದ ೫೩ ವರ್ಷಗಳ ನಂತರ ಮಾಯಕೊಂಡ ಕಾಳಗ ಸಂಭವಿಸಿದರೆ, ಇದಾದ ೩೦ ವರ್ಷಗಳ ತರುವಾಯ ಅಂತಿಮ ಯುದ್ಧ ನಡೆಯಿತು.

ಮೇಲೆಯೇ ವಿವರಿಸಿದಂತೆ, ಪ್ರಸ್ತುತ ದೊಡ್ಡೇರಿ ಕದನವು ಚಿತ್ರದುರ್ಗ ಚರಿತ್ರೆಯ ರೋಚಕ ಅಧ್ಯಾಯವೆನ್ನುವದರಲ್ಲಿ ಸಂಶಯವಿಲ್ಲ. ಈ ಕದನ ನಡೆದುದು ಮರಾಠಾ ಮತ್ತು ಚಿತ್ರದುರ್ಗದ ಸಂಯುಕ್ತಪಡೆ ಹಾಗೂ ಮೊಲಗರ ಮಧ್ಯೆ. ಕರ್ನಾಟಕದ ಫೌಜುದಾರ್ ಹಾಗೂ ಸಿರಾಪ್ರಾಂತ್ಯದ (ತುಮಕೂರು ಜಿಲ್ಲೆ) ಸುಬೇದಾರ ಸೈಯದ್ ಖಾಸಿಂಖಾನನ ನಾಯಕತ್ವದಲ್ಲಿ ಮೊಗಲರು ಹೋರಾಡಿದರೆ, ಸಂತಾಜಿ ಘೋರ್ಪಡೆಯ ನಾಯಕತ್ವದಲ್ಲಿ ಮರಾಠರು ಹಾಗೂ ಬಿಚ್ಚುಗತ್ತಿ ಭರಮಣ್ಣ ನಾಯಕನ ನಾಯಕತ್ವದಲ್ಲಿ ಚಿತ್ರದುರ್ಗದವರು ಒಟ್ಟಾಗಿ ಹೋರಾಡಿದುದನ್ನು ಈಗಾಗಲೇ ಗಮನಿಸಿದ್ದೇವೆ. ಈ ಕದನದಲ್ಲಿ ಮೊಗಲರು ಪೂರ್ತ ಸೋಲನ್ನನುಭವಿಸಿ ಅಪಖ್ಯಾತಿಗೀಡಾದರು. ದೊಡ್ಡೇರಿ ಕದನದ ಮಟ್ಟಿಗೆ, ಮೊಗಲರು ಮತ್ತು ಮರಾಠರ ನಡುವೆ ಚಿತ್ರದುರ್ಗ ಜಿಲ್ಲೆಯಲ್ಲಿ ನೇರವಾಗಿ ನಡೆದ ಸಂಘರ್ಷವೆಂದರೆ ಇದೇ ಎಂಬ ಕಾರಣಕ್ಕಾಗಿಯೇ ದಕ್ಷಿಣಭಾರತದ ಚರಿತ್ರೆಯಲ್ಲಿ ಈ ಕದನ ಪ್ರಾಮುಖ್ಯತೆ ಪಡೆದುಕೊಂಡಿದೆಯೆಂಬುದು ದಿಟ.

ಈವರೆಗಿನ ಅಧ್ಯಯನಗಳು ದೃಢಪಡಿಸಿರುವಂತೆ, ಮೊಗಲರು ಮತ್ತು ಮರಾಠರ ನಡುವೆ ಈ ಯುದ್ಧ ನಡೆದುದು ಒಟ್ಟು ನಾಲ್ಕುದಿನಗಳ ಕಾಲ. ನಾಲ್ಕನೇ ದಿನ ನಡೆದ ಕದನದ ಎಡೆಯೇ ದೊಡ್ಡೇರಿ (ಹಳೇದೊಡ್ಡೇರಿ). ಅಂತಿಮ ದಿನದಂದು ಚಿತ್ರದುರ್ಗದ ಸೇನೆ ಈ ಕದನದಲ್ಲಿ ನೇರವಾಗಿ ಭಾಗವಹಿಸಿ ಮರಾಠರಿಗೆ ನೆರವಾಯಿತಲ್ಲದೆ, ತನ್ನ ಪ್ರಯತ್ನದಲ್ಲಿ ಯಶಸ್ವಿಯಾಯಿತು. ಈಗಾಗಲೇ ಸ್ಪಷ್ಟಪಟ್ಟಿರುವಂತೆ, ಈ ಅಂತಿಮ ದಿನದ ಕದನ ನಡೆದುದು ೧೯೬೯ ಜನವರಿ ೫ ರಂದು. ಸಿರಾ ಸುಬೇದಾರ ಸೈಯದ್ ಖಾಸಿಂಖಾನನೊಡನೆ ಈ ಕದನದಲ್ಲಿ ಭಾಗವಹಿಸಿದ್ದ ಇತರ ಸರದಾರರೆಂದರೆ, ಮೊಗಲ್ ಸಾಮ್ರಾಟ ಔರಂಗಜೇಬನ ಪರವಾಗಿ ಬಂದಿದ್ದ ಹಾಗೂ ರಾಜಮನೆತನಕ್ಕೆ ಸೇರಿದ್ದ ಖಾನಜಾದ್‌ಖಾನ್ ಅಥವಾ ಇಮ್ಮಡಿ ರುಹುಲ್ಲಾಖಾನ್, ಮುಹಮ್ಮದ್ ಮುರಾದ್‌ಖಾನ್, ಈತನ ಮಗ ಖುದಾದಾದ್, ಮಿರ್ಜಾ ಹಸನ್, ಸಾಜ್‌ಶಿಕನ್‌ಖಾನ್, ಹಿಮ್ಮತ್‌ಖಾನ್‌ ಮೊದಲಾದವರು. ಹಾಗೆಯೇ, ಚಿತ್ರದುರ್ಗದ ಪರವಾಗಿ ನಾಯಕತನದ ಫೌಜುದಾರಿ ಹೊಂದಿ ಕುದುರೆಮಂದಿ (ಅಶ್ವಪಡೆ) ಮತ್ತು ಕಾಲುಮಂದಿಯೊಡನೆ ಭಾಗವಹಿಸಿದವರೆಂದರೆ ಕುಡುತಿನಿ ವೆಂಕಣ್ಣ. ಹೊಳಲ್ಕೆರೆ ಬೊಮ್ಮಣ್ಣ (ಭಾವ ಬೊಮ್ಮಣ್ಣ) ಮತ್ತು ದಳವಾಯಿ ಚಿಕ್ಕಣ್ಣ. ಸಂತಾಜಿ ಘೋರ್ಪಡೆಯ ವಿನಾ ಇತರ ಮರಾಠಾ ಸರದಾರರ ಹೆಸರುಗಳು ತಿಳಿದುಬರುವುದಿಲ್ಲ. ಇವೆಲ್ಲವೂ ಈಗಾಗಲೇ ಚರ್ಚೆಗೊಳಪಟ್ಟಿರುವ ಅಂಶಗಳು.

ದೊಡ್ಡೇರಿ ಕದನಕ್ಕೆ ಸಂಬಂಧಿಸಿದ ವಿವರಗಳು ದೊರೆಯುವುದು ಫಾರ್ಸೀ ಕೃತಿಗಳು, ಮರಾಠೀ ದಾಖಲೆಗಳು ಹಾಗೂ ಚಿತ್ರದುರ್ಗ ನಾಯಕ ಅರಸರ ವಂಶಾವಳಿಗಳಿಂದ; ಹಾಗೂ ಮುಖ್ಯವಾಗಿ, ಈ ಕದನವನ್ನು ಪ್ರತ್ಯೇಕವಾಗಿ ವರ್ಣಿಸುವ ಹಾಗೂ ಕನ್ನಡದಲ್ಲಿರುವ ‘ದೊಡ್ಡೇರಿಯ ಕಾಳಗ’ (ದೊಡ್ಡೇರಿಯ ಜಗಳ/ದೊಡ್ಡೇರಿವಿಜಯ) ಎಂಬ ಜನಪದ ಕಥನಗೀತೆಯಿಂದ. ಈ ಕಥನಗೀತೆಯನ್ನು ಸಂಗ್ರಹಿಸಿದವರು ಇದನ್ನು ‘ಲಾವಣಿ’ಯೆಂತಲೂ ಕರೆದಿದ್ದಾರೆ. ಉಳಿದಂತೆ, ಬಿಡಿಯಾಗಿ ಪ್ರಕಟಗೊಂಡಿರುವ ಜನಪದಗೀತೆಗಳು, ಕೈಫಿಯತ್ತುಗಳಲ್ಲಿ ಈ ಕದನದ ಪ್ರಸ್ತಾಪ ತೀರಾ ಕ್ವಚಿತ್ತಾಗಿ ಕಂಡುಬರುವುದುಂಟು.

‘ದೊಡ್ಡೇರಿಯ ಕಾಳಗ’ ಜನಪದ ಕಥನಗೀತೆ ಅಥವಾ ಲಾವಣಿಯನ್ನು ಮೊದಲಿಗೆ ಗಮನಿಸಿದವರು ಚಿತ್ರದುರ್ಗದ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರು. ಪ್ರಸಿದ್ಧ ಇತಿಹಾಸಕರ ಪ್ರೊ.ಜಿ.ಎಸ್. ದೀಕ್ಷಿತ್ ಮತ್ತು ಜೋಯಿಸರು ಈರ್ವರೂ ಒಟ್ಟಿಗೆ ೧೯೫೪ರಲ್ಲಿ (ರಣ) ದೊಡ್ಡೇರಿಯಲ್ಲಿ ಈ ಕಥನಗೀತೆಯನ್ನು ಸಂಗ್ರಹಿಸಿದರು.

[1] ಪ್ರೊ. ದೀಕ್ಷಿತರು ಈ ಕಥನಗೀತೆಯನ್ನು ೧೯೭೯ರಲ್ಲಿ ‘ದೊಡ್ಡೇರಿ ಕಾಳಗ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದರು.[2] ತಮ್ಮ ಟಿಪ್ಪಣಿಯಲ್ಲಿ ಈ ಕಥನಗೀತೆಯನ್ನು ಕುರಿತು ಸ್ಥೂಲವಾಗಿ ವಿವೇಚಿಸಿದ್ದಾರೆ ಪ್ರೊ. ದೀಕ್ಷಿತ್. ಇತಿಹಾಸಕಾರ ಜಾದೂನಾಥ ಸರ್ಕಾರರ ‘ಹೌಸ್ ಆಫ್ ಶಿವಾಜಿ’ (೧೯೪೮) ಮತ್ತು ಎಂ.ಎಸ್. ಪುಟ್ಟಣ್ಣನವರ ‘ಚಿತ್ರದುರ್ಗದ ಪಾಳಯಗಾರರು’ (೧೯೨೪) ಗ್ರಂಥಗಳನ್ನು ಆಧಾರವಾಗಿ ಬಳಸಿಕೊಂಡಿದ್ದಾರೆ. ದೊಡ್ಡೇರಿಕೋಟೆಯಲ್ಲಿ ಮೊಗಲರು ಆಶ್ರಯಪಡೆದು ಹೋರಾಡಿದ ಸಂದರ್ಭವನ್ನು ಈ ಆಧಾರಗ್ರಂಥಗಳಿಂದಲೇ ನಿರೂಪಿಸಿದ್ದಾರೆ. ಈ ಕಥನಗೀತೆಯಲ್ಲಿರುವ ಯುದ್ಧಸಂಬಂಧಿ ವಿವರವನ್ನು ಸಂ‌ಗ್ರಹರೂಪದಲ್ಲಿ ಕೊಡುವುದರೊಡನೆ, ಈ ಗೀತೆಯನ್ನು ಪರಿಚಯಿಸುವ ಹಾಗೂ ಇದು ಒಳಗೊಂಡಿರುವ ಪ್ರಮುಖ ಚಾರಿತ್ರಿಕಾಂಶಗಳನ್ನು ಎತ್ತಿ ಹೇಳುವ ಪ್ರಯತ್ನವನ್ನಷ್ಟೆ ಮಾಡಿದ್ದಾರೆ ಪ್ರೊ.ದಿಕ್ಷಿತ್.

ಪ್ರೊ. ದೀಕ್ಷಿತ್ ನಿರೂಪಿಸಿರುವಂತೆ, ‘ದೊಡ್ಡೇರಿಯ ಕಾಳಗವು’ ದೊಡ್ಡೇರಿ ಕದನದ ವಿವರಗಳನ್ನು ಸಂಕ್ಷಿಪ್ತವಾಗಿ ದಾಖಲಿಸಿದೆ; ಹಾಗೆ ಚಿತ್ರದುರ್ಗದ ಅರಸ ಬಿಚ್ಚುಗತ್ತಿ ಭರಮಣ್ಣನಾಯಕನ ಪ್ರತಾಪವನ್ನು ಹೊಗಳುವ ಉದ್ದೇಶ ಇದರದು. ಈ ಕಥನಗೀತೆಯನ್ನು ರಚಿಸಿದವನು ‘ಸಂಪಿಗೆಸಿದ್ದನ ವರಕುಮಾರ’. ಇದು ಕವಿಯ ನಿಜನಾಮವಾಗಿರದೆ ಕಾವ್ಯನಾಮವಾಗಿರಬಹುದು. ಈತ ಚಿತ್ರದುರ್ಗದ ನಿವಾಸಿಯಾಗಿದ್ದು, ಭರಮಣ್ಣ ನಾಯಕನ ಆಸ್ಥಾನದಲ್ಲಿದ್ದ. ಗೀತೆಯನ್ನು ಮರಾಠರ ಪ್ರಸ್ತಾಪವಿಲ್ಲ; ಆದರೆ ಸಿರಾ ಸುಬೇದಾರ ಸೈಯದ್ ಖಾಸಿಂಖಾನನ ವೃತ್ತಾಂತವಿದೆ. ಹಾಗೆಯೇ, ಕಂಚಿಯಲ್ಲಿದ್ದ ಶಂಕರನಾರಾಯಣನೆಂಬವನ ಪ್ರಸ್ತಾಪವಿದೆ. ಚಿತ್ರದುರ್ಗದವರ ಪೈಕಿ ಭಾವ ಬೊಮ್ಮಣ್ಣ, ದಳವಾಯಿ ಚಿಕ್ಕಣ್ಣ, ಮಂತ್ರಿ ಗುಂಟನೂರು ಮಲ್ಲಪ್ಪ – ಇವರ ಹೆಸರುಗಳನ್ನು ಪ್ರಸ್ತಾಪಿಸುತ್ತದೆ. ಭರಮಣ್ಣನಾಯಕನನ್ನು ‘ಬೆಂಕಿಭರಮೇಂದ್ರ’ನೆಂದು ಕರೆದಿರುವುದು ಗಮನಾರ್ಹ. ಭರಮಣ್ಣನಾಯಕನ ವ್ಯಕ್ತಿತ್ವ, ದುರ್ಗದ ಸೈನಿಕರ ಪೋಷಾಕು, ಯುದ್ಧಸಂದರ್ಭ, ಪರಿಸರ ಮೊದಲಾದ ಸಂಗತಿಗಳು ಈ ಕಥನಗೀತೆಯಲ್ಲಿವೆ. ಯುದ್ಧದಲ್ಲಿ ಸೋತ ಖಾಸಿಂಖಾನನು ತನ್ನ ಚಕ್ರವರ್ತಿ ಔರಂಗಜೇಬನ ಆಗ್ರಹಕ್ಕೆ ತುತ್ತಾಗಬಾರದೆಂದು ‘ಹಕ್ಕಜ್ಜಿನಾಮೆ ಕುಡಿದು ಡೇರಾದ ಒಳಗೆ ಸತ್ತಿದ್ದ’ ಎಂಬ ಅಂಶವನ್ನು ಎತ್ತಿ ಹೇಳಲಾಗಿದೆ.

ಈ ಕಥನಗೀತೆಯಲ್ಲಿ ಬರುವ ಎಲ್ಲ ಶಬ್ದಗಳ ಅರ್ಥ ಹೇಳುವುದು ಸಾಧ್ಯವಿಲ್ಲ; ಹಾಡಿದವರು ಸರಿಯಾಗಿ ಹೇಳಿರಲಿಕ್ಕಿಲ್ಲ, ಬರೆದುಕೊಳ್ಳುವಾಗಲೂ ತಪ್ಪಾಗಿರಬಹುದೆಂದಿದ್ದಾರೆ ಪ್ರೊ.ದೀಕ್ಷಿತ್. ಇವರು ಸಮರ್ಥಿಸಿರುವಂತೆ, ಚಿತ್ರದುರ್ಗದ ಪಾಳೆಯಗಾರ, ಇವರ ಅಧಿಕಾರಿಗಳು ಮತ್ತು ಇವನ ಕೈಕೆಳಗಿನ ಪಾಳೆಯಗಾರರ ಬಗೆಗೆ ಈ ಕಥನಗೀತೆ ಹೇಳುವುದನ್ನು ನಾವು ನಂಬಬಹುದು; ಏಕೆಂದರೆ ಈ ವಿಷಯಗಳೆಲ್ಲ ಈ ಗೀತೆಯನ್ನು ರಚಿಸಿದವನಿಗೆ ಚೆನ್ನಾಗಿ ಪರಿಚಯವಿದ್ದವು ಇತ್ಯಾದಿ.

‘ದೊಡ್ಡೇರಿಯ ಕಾಳಗ’ ಕಥನಗೀತೆಯನ್ನು ಪ್ರಕಟಿಸುವುದರೊಡನೆ ಚಿತ್ರದುರ್ಗ ನಾಯಕರ ಚರಿತ್ರೆ ಅಧ್ಯಯನಕ್ಕೆ ಇನ್ನೊಂದಷ್ಟು ವಿಸ್ತರಣೆಯ ಅವಕಾಶವನ್ನೊದಗಿಸಿದ್ದಾರೆ ಪ್ರೊ. ದೀಕ್ಷಿತ್. ಚಿತ್ರದುರ್ಗ ನಾಯಕ ಅರಸರ ಚರಿತ್ರೆಗೆ ಸಂಬಂಧಿಸಿದ ಪ್ರಕಟಿತ ಆಕರಗಳ ಸಾಲಿಗೆ ಇವರು ಪ್ರಕಟಿಸಿದ ಪ್ರಸ್ತುತ ಕಥನಗೀತೆಯೊಂದು ಹೊಸ ಸೇರ್ಪಡೆ. ಇದು ನಂಬಲರ್ಹ ಹಲವಾರು ಚಾರಿತ್ರಿಕಾಂಶಗಳನ್ನು ಹೊಂದಿದೆಯೆಂಬುದನ್ನು ಒಪ್ಪಿಕೊಳ್ಳಲೇಬೇಕು. ಆದರೆ ಪ್ರೊ. ದೀಕ್ಷಿತರು ಈ ಕಥನಗೀತೆಗೆ ಬರೆದಿರುವ ಟಿಪ್ಪಣಿ ಅಥವಾ ಪ್ರಸ್ತಾವನೆ ಕೆಲವು ಮಿತಿಗಳಿಂದ ಕೂಡಿದೆ. ಇದು ಸಹಜವೂ ಹೌದು. ಚಿತ್ರದುರ್ಗ ನಾಯಕ ಅರಸರ ಚರಿತ್ರೆಯ ಪೂರ್ಣ ಪರಿಚಯ ಇವರಿಗೆ ಇಲ್ಲದಿರುವುದೇ ಇದಕ್ಕೆ ಕಾರಣವೆನ್ನಬಹುದು. ಹೀಗಾಗಿ ಈ ಕಥನಗೀತೆಯನ್ನು ಅಧಿಕೃತವಾಗಿ ಹಾಗೂ ಸಮಗ್ರವಾಗಿ ವಿಶ್ಲೇಷಿಸಲು ಇವರಿಂದ ಸಾಧ್ಯವಾಗಿಲ್ಲ. ಇಲ್ಲಿಯ ಮಿತಿಗಳೆಂದರೆ, ಪ್ರಸ್ತುತ ಕಥನಗೀತೆಯಲ್ಲಿಯ ಎಲ್ಲ ಚಾರಿತ್ರಿಕಾಂಶಗಳನ್ನು ಪೂರ್ತಿ ಗಮನಿಸದಿರುವುದು; ಅದರಲ್ಲೂ ದೊಡ್ಡೇರಿ ಕದನಸಂಬಂಧಿ ಸೂಕ್ಷ್ಮ ವಿವರಗಳನ್ನು ವಿಸ್ತಾರವಾಗಿ ನಿರೂಪಿಸದಿರುವುದು; ಜಾದೂನಾಥ ಸರ್ಕಾರ್ ಮತ್ತು ಎಂ.ಎಸ್.ಪುಟ್ಟಣ್ಣನವರ ಕೃತಿಗಳ ವಿನಾ ಲಭ್ಯವಿರುವ ಇನ್ನಿತರ ಪೂರಕ ಆಕರಗಳನ್ನು ಪರಿಗಣಿಸದಿರುವುದು ಹಾಗೂ ಪರಾಮರ್ಶಿಸದಿರುವುದು ಇತ್ಯಾದಿ. ಏನೇ ಇದ್ದರೂ ಇವರ ಇಲ್ಲಿಯ ಉದ್ದೇಶವಾದರೂ ಒಂದು ಪ್ರಮುಖ ಚಾರಿತ್ರಿಕ ದಾಖಲೆಯನ್ನು ಕುರಿತು ಸರಳವಾಗಿ ನಿರೂಪಿಸುವುದಷ್ಟೇ ಎಂಬುದು ಸ್ಪಷ್ಟ.

‘ದೊಡ್ಡೇರಿಯ ಕಾಳಗ’ ಜನಪದ ಕಥನಗೀತೆಯಲ್ಲಿ ಕಂಡುಬರುವ ಹಾಗೂ ಪ್ರೊ.ದೀಕ್ಷಿತರ ವಿವರಣೆ ಒಳಗೊಳ್ಳದಿರುವ ಕೆಲವು ಗಮನಾರ್ಹ ಚಾರಿತ್ರಿಕಾಂಶಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸಬಹುದು. ಈ ಕಥನಗೀತೆ ಆರಂಭಗೊಳ್ಳುವುದು, ಸಿರಾ ಸುಬೇದಾರ ಸೈಯದ್ ಖಾಸಿಂಖಾನನು ಶಂಕರನಾರಾಯಣ ಎಂಬವನನ್ನು ಕಂಚಿಯಲ್ಲಿ ಭೇಟಿಮಾಡಿ ಹಣ (ಪೊಗದಿ) ವಸೂಲು ಮಾಡಲು ಹಗೆಯವನ (ದುರ್ಗದರಸನ) ಮೇಲೆ ದಂಡೆತ್ತಿ ಹೋಗುವುದಾಗಿ ಚರ್ಚಿಸುವುದರಿಂದ ; ಹಾಗೂ ದುರ್ಗದ ಮೇಲೆ ದಾಳಿಮಾಡಲು ಹೊಂಚುಹಾಕುವುದರಿಂದ. ಆ ನಂತರ ಇದರ ನಿರೂಪಣೆ ಮುಂದುವರೆಯುವುದು ಹೀಗೆ: ದಾಳಿಯ ಸುದ್ದಿ ತಿಳಿದ ಮಂತ್ರಿ ಗುಂಟನೂರು ಮಲ್ಲಪ್ಪ ಅದನ್ನು ಭರಮಣ್ಣ ನಾಯಕನಿಗೆ ಮುಟ್ಟಿಸುವುದು; ಸಿಟ್ಟಿಗೆದ್ದ ‘ಬೆಂಕಿ ಭರಮಣ್ಣ ನಾಯಕ’ನು ಹೊಸದುರ್ಗ, ಹೊಳಲ್ಕೆರೆ, ಸಂತೆಬೆನ್ನೂರುಗಳಿಂದ ಕಾಲುದಳವನ್ನು ದುರ್ಗಕ್ಕೆ ಕರೆಸಿಕೊಳ್ಳುವುದು; ಭಾವ ಬೊಮ್ಮಣ್ಣ ಮತ್ತು ದಳವಾಯಿ ಚಿಕ್ಕಣ್ಣರನ್ನು ಬರಮಾಡಿಕೊಳ್ಳುವುದು; ಖಾಸಿಂಖಾನನ ದಂಡನ್ನು ದೊಡ್ಡೇರಿಕೋಟೆಯ ಬಳಿ ಮಧ್ಯಾಹ್ನದ ಸುಡುಬಿಸಿಲಿನ ಸಂದರ್ಭದಲ್ಲಿ ಎದುರಿಸುವುದು; ಮೊಗಲರನ್ನು ದೊಡ್ಡೇರಿಕೆರೆ ಏರಿಯ ಮೇಲೆ ಮತ್ತು ಅದರ ಹಿಂದೆ ಓಡಾಡಿಸಿಕೊಂಡು, ಹಾರಾಡಿಕೊಂಡು ಕಡಿಯುವುದು; ಯುದ್ಧದಲ್ಲಿ ಸೋಲನ್ನುಂಡ ಖಾಸಿಂಖಾನನು ತನ್ನ ಚಕ್ರವರ್ತಿ ಔರಂಗಜೇಬನಿಗೆ ಮುಖ ತೋರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದು ಇತ್ಯಾದಿ.

ಪ್ರಸ್ತುತ ಕಥನಗೀತೆ ಒದಗಿಸುವ ಈ ಮೇಲಿನ ಕೆಲವಂಶಗಳನ್ನು ಇಲ್ಲಿ ಸ್ಥೂಲವಾಗಿ ವಿಮರ್ಶಿಸುವುದಾದರೆ, ಸೈಯದ್ ಖಾಸಿಂಖಾನನು ಕಂಚಿಯಲ್ಲಿ ಶಂಕರನಾರಾಯಣನನ್ನು ಭೇಟಿಮಾಡಿ ಚರ್ಚಿಸುವುದು ಚಿತ್ರದುರ್ಗ ಚರತ್ರೆಯ ಮಟ್ಟಿಗೆ ಒಂದು ಹೊಸ ಅಂಶ. ಇವರೀರ್ವರ ನಡುವೆ ನಡೆದ ಮಾತುಕತೆ ಹಾಗೂ ಪ್ರತಿರೋಧಗಳು ಗೀತೆಯ ಆರಂಭದಲ್ಲಿ ಸೂಚ್ಯವಾಗಿ ಬಂದಿವೆ. ಇದರ ಹಿನ್ನೆಲೆಯೇನೊ ಸದ್ಯಕ್ಕೆ ತಿಳಿಯದು. ಹಾಗೆಯೇ, ಶಂಕರ ನಾರಾಯಣನ ಬಗೆಗೂ ಖಚಿತವಾಗಿ ತಿಳಿದುಬರುವುದಿಲ್ಲ. ಖಾಸಿಂಖಾನನು ದುರ್ಗದವರ ಮೇಲೆ ದಂಡೆತ್ತಿ ಬರಲು ಇದ್ದ ಕಾರಣವಾದರೂ ಕಪ್ಪಸಲ್ಲಿಕೆಗೆ ಸಂಬಂಧಿಸಿದುದು. ಅಲ್ಲದೆ, ೧೬೯೦ರ ಯುದ್ಧದಲ್ಲಿ ಖಾಸಿಂಖಾನನು ದುರ್ಗದವರ ಮೇಲೆ ನಡೆಸಿದ ದೌರ್ಜನ್ಯದ ಕಾರಣವಾಗಿ, ದುರ್ಗದವರ ಮೊಗಲರ ಒತ್ತಡವನ್ನು ನಿವಾರಿಸಲೋಸುಗ ಮರಾಠರನ್ನು ಓಲೈಸತೊಡಗಿದುದೂ ಈ ಖಾನನನ್ನು ರೇಗಿಸಿದ್ದಿತು.

ಈ ಕಥನಗೀತೆಯ ಪ್ರಕಾರ, ಸೈಯದ್ ಖಾಸಿಂಖಾನನಿಗೆ ಇದ್ದ ಜವಾಬ್ದಾರಿಯಾದರೂ ಚಿತ್ರದುರ್ಗವನ್ನು ವಶಪಡಿಸಿಕೊಳ್ಳುವುದು; ಅಂದರೆ ಹೊತ್ತು ಮುಳುಗಿದ ಒಂಬತ್ತು ಗಳಿಗೆಯಿಂದ ಹನ್ನೊಂದು ಗಳಿಗೆಯ ಒಳಗೆ, ಅಂದರೆ ರಾತ್ರಿ ಸುಮಾರು ೧೦ ರಿಂದ ೧೧ ಗಂಟೆಯ ಒಳಗೆ, ಗಾರೆಬಾಗಿಲಿನ ತನಕ ಲಗ್ಗೆ ಹಾಕುವುದು. ಈ ಗಾರೆಬಾಗಿಲು ಎಂಬುದು ದುರ್ಗದ ಕೋಟೆಯ ಎರಡನೇ ಮುಖ್ಯ ಮಹಾದ್ವಾರ. ಗೀತೆಯನ್ನು ರಚಿಸಿದವನು ಇದನ್ನು ಸಾಂಕೇತಿಕವಾಗಿ ಇಲ್ಲಿ ಸೂಚಿಸಿದ್ದರೂ ದುರ್ಗದ ಷಹರನ್ನು ಹಿಡಿಯುವುದು ಖಾಸಿಂಖಾನನ ಹವಣಿಕೆಯಾಗಿದ್ದಿತೆಂದು ಇಲ್ಲಿ ಭಾವಿಸಬಹುದು. ಇದರ ಸುಳಿಯನ್ನು ತಿಳಿದ ಗುಂಟನೂರು ಮಲ್ಲಪ್ಪ ಈ ಸುದ್ದಿಯನ್ನು ಓಲೆಯ ಮೂಲಕ ಭರಮಣ್ಣ ನಾಯಕನಿಗೆ ತಿಳಿಸುತ್ತಾನೆ.

ಖಾಸಿಂಖಾನನು ದುರ್ಗದ ಮೇಲೆ ದಾಳಿನಡೆಸಲು ಹವಣಿಸಿರುವನೆಂದು ತಿಳಿದ ಭರಮಣ್ಣ ನಾಯಕನಿಗೆ ಅಪಾರ ಕೋಪ ಬರುತ್ತದೆ. ‘ಅಯ್ಯಯ್ಯೊ ಧಗಡಿ (ಧೂರ್ತ), ನೀ ಹೊಕ್ಕಲ್ಲಿ ಬಿಡೆನೊ’ ಎಂಬ ಸಂಕಲ್ಪದೊಡನೆ, ಹೊಸದುರ್ಗ, ಹೊಳಲ್ಕೆರೆ, ಸಂತೆಬೆನ್ನೂರುಗಳಿಂದ ಸೇನೆ (ಕಾಲುಮಂದಿ)ಯನ್ನು ಕರೆಸಿಕೊಳ್ಳುತ್ತಾನೆ. ಇದನ್ನು ಭಾವ ಬೊಮ್ಮಣ್ಣ ಮತ್ತು ದಳವಾಯಿ ಚಿ‌ಕ್ಕಣ್ಣರ ವಶಕ್ಕೆ ಕೊಟ್ಟು ಮುಂದಿನ ಕ್ರಮಕ್‌ಎಕ ಆದೇಶಿಸುತ್ತಾನೆ. ದುರ್ಗದ ಗಡಿಗಳಲ್ಲಿ ಜಮಾವಣೆಯಾಗಿದ್ದ ಸೇನೆ (ಭಂಟರು), ಗೌಡಾಳಿ(ಗೌಡಿಹಳ್ಳಿ?) ಠಾಣ್ಯದ ಮಂದಿಯೂ ಸೇರುತ್ತಾರೆ. ಇವರೆಲ್ಲರನ್ನೂ ಸೇರಿಸಿಕೊಂಡು ಮೊಗಲರು ಚಲಿಸುವ ಮಾರ್ಗದ ಕಣಿವೆಯನ್ನು ಅಡ್ಡಗಟ್ಟಲು ಸೂಚಿಸಲಾಗುತ್ತದೆ. ಹರ್ತಿಕೋಟೆ, ದೊಡ್ಡೇರಿ, ಐಮಂಗಲಗಳು ಆವರಿಸಿದಂತೆ ಸೇನಾಚಲನೆ ಕಂಡುಬರುತ್ತದೆ. ಭರಮಣ್ಣನಾಯಕನ ಸಾಮರ್ಥ್ಯಕ್ಕೆ ಯಾರೂ ಸಾಟಿಯಿಲ್ಲವೆಂಬಂತೆ ಭಾಸವಾಗುತ್ತದೆ. ಚಿತ್ರದುರ್ಗಕ್ಕೆ ಬರುವ ಎಲ್ಲ ಮಾರ್ಗಗಳಲ್ಲೂ ಕಾವಲಿಗಾಗಿ ಸೇನೆಯನ್ನಿರಿಸಿದುದು ಇದರಿಂದ ದೃಢಪಡುತ್ತದೆ. ಆದರೆ ಸೈಯದ್ ಖಾಸಿಂಖಾನನು ದುರ್ಗದವರೆಗೆ ಬರಲು ಸಮರ್ಥನಿರಲಿಲ್ಲವೆನ್ನುವುದು ಸ್ಪಷ್ಟ. ಮರಾಠರನ್ನು ಹೊಡೆದೋಡಿಸುವುದಷ್ಟೆ ಅವನ ಮುಂದಿದ್ದ ಗುರಿ.

ಇಲ್ಲಿ ಪ್ರಸ್ತಾಪಿಸಬೇಕಾದ ಸಂಗತಿಯೆಂದರೆ, ಚಿತ್ರದುರ್ಗ ನಾಯಕರ ವಂಶಾವಳಿಯು, ಖಾಸಿಂಖಾನನು ತಳಕಿನಿಂದ ದೊಡ್ಡೇರಿವರೆಗೆ ಲಡಾಯಿ ಮಾಡುತ್ತಾ ಹೋಗಿ ದೊಡ್ಡೇರಿ ಕೋಟೆಯೊಳಗೆ ಹೊಕ್ಕನೆಂದು ಹೇಳುತ್ತದೆ. ಅಂದರೆ ಈ ಕದನ ನಡೆದ ಪ್ರದೇಶದ ಒಟ್ಟು ವ್ಯಾಪ್ತಿಯು ಚಳ್ಳಕೆರೆ ಕಸಬಾ ಹಾಗೂ ಅದೇ ತಾಲ್ಲೂಕಿನ ತಳಕು, ದೊಡ್ಡ ಉಳ್ಳರ್ತಿ, ಚಿಕ್ಕ ಉಳ್ಳರ್ತಿ (ಉಳ್ಳರ್ತಿಕಾವಲ್), ದುಗ್ಗವಾರ, ಯಾದಲಗಟ್ಟೆ, ಕಾಲುವೇಹಳ್ಳಿ, ಭರಮಸಾಗರ, ನಗರಂಗದೆ ಮೊದಲಾದ ಗ್ರಾಮಗಳನ್ನೊಳಗೊಂಡಿದ್ದಿತೆನ್ನಬಹುದು. ಇಲ್ಲೆಲ್ಲ ಚಿತ್ರದುರ್ಗದ ದಂಡು ಬೀಡುಬಿಟ್ಟಿದ್ದಿರಬೇಕು. ಈ ಪ್ರದೇಶಗಳಲ್ಲಿ ಕತ್ತಿ-ಗುರಾಣಿ ಮೊದಲಾದ ಯುದ್ಧೋಪಕರಣಗಳು ಇಂದಿಗೂ ದೊರೆಯುವುದುಂಟು. ಅಲ್ಲದೆ, ಚಳ್ಳಕೆರೆ ಪಕ್ಕದಲ್ಲಿರುವ ಕಾಟಪ್ಪನಹಳ್ಳಿಯ ಕೋಟೆ ಪರಿಸರದಲ್ಲಿ ಹಾಗೂ (ರಣ) ದೊಡ್ಡೇರಿ ಗ್ರಾಮದ ಹಳೆಯ ಊರಿನಲ್ಲಿ ನೂರಾರು ಸಂಖ್ಯೆಯಲ್ಲಿ ದೊರೆತಿರುವ ವಿವಿಧ ಗಾತ್ರದ ಕಲ್ಲುಗುಂಡುಗಳು ಸಹಾ ಕದನದ ಸಂದರ್ಭದಲ್ಲಿ ಇಲ್ಲೆಲ್ಲ ದುರ್ಗದ ಸೇನೆ ಬೀಡುಬಿಟ್ಟಿದ್ದುದನ್ನು ಸಮರ್ಥಿಸುತ್ತವೆ. ಸಾಮಾನ್ಯವಾಗಿ ಇಂಥಾ ಕಲ್ಲು ಗುಂಡುಗಳನ್ನು ‘ಫಿರಂಗಿಗುಂಡು’ಗಳೆಂದು ಕರೆಯುವುದು ರೂಢಿಯಲ್ಲಿದೆ. ಆದರೆ ಇವು ‘ಸಿಡಿಗುಂಡು’ಗಳಾಗಿರದೆ, ಸಿಡಿಮದ್ದು (Gunpowder) ತುಂಬಿಸಿಕೊಂಡ ಫಿರಂಗಿಗಳ ಬಾಯಿಗೆ ಅಡ್ಡಲಾಗಿ ಜಡಿಯುವ ‘ಬಿರಾಣೆ’ (> ಬಿರಾಣಾ -A Grain, as of Gunpowder; ಬಿರಡೆ – A Cork) ಗುಂಡುಗಳಾಗಿರುತ್ತವೆ.

ಮೇಲೆ ನೋಡಿದಂತೆ, ಭರಮಣ್ಣ ನಾಯಕನು ತನ್ನ ಕೈಕೆಳಗಿದ್ದ ಹೊಸದುರ್ಗ, ಹೊಳಲ್ಕೆರೆ ಮತ್ತು ಸಂತೆಬೆನ್ನೂರು ಪಾಳೆಯಗಾರರಿಂದ ಕಾಲುದಳಗಳನ್ನು ದುರ್ಗಕ್ಕೆ ಕರೆಸಿಕೊಂಡನೆಂಬ ಅಭಿಪ್ರಾಯ ಹೊಂದಿದ್ದಂತೆ ತೋರುತ್ತದೆ. ಪ್ರೊ.ದೀಕ್ಷಿತ್. ಆದರೆ ಹೊಸದುರ್ಗ ಮತ್ತು ಹೊಳಲ್ಕೆರೆಗಳು ಚಿತ್ರದುರ್ಗ ರಾಜ್ಯಕ್ಕೊಳಪಟ್ಟಿದ್ದ ಗಡಿದುರ್ಗಗಳಾಗಿದ್ದವೇ ವಿನಾ ಸ್ವತಂತ್ರ ಪಾಳೆಯಪಟ್ಟುಗಳಲ್ಲ. ಹಾಗೆಯೇ, ಈ ಅವಧಿಯಲ್ಲಿ, ಸಂತೇಬೆನ್ನೂರು ಪ್ರದೇಶವು ದುರ್ಗದ ಆಡಳಿತ ಪ್ರಭಾವಕ್ಕೊಳಪಟ್ಟಿದ್ದಿತೇ ವಿನಾ ಅದರ ಭಾಗವಾಗಿರಲಿಲ್ಲ.

ದೊಡ್ಡೇರಿ ಕದನ ನಡೆದ ಸಂದರ್ಭದ ಕೆಲವು ಸೂಕ್ಷ್ಮ ವಿವರಗಳನ್ನು ನೀಡುತ್ತದೆ. ಈ ಕಥನಗೀತೆ. ಇಲ್ಲಿ ಬರುವ ಯುದ್ಧವಿವರವಾದರೂ ಮೊಗಲರು ದೊಡ್ಡೇರಿಕೋಟೆಯಲ್ಲಿ ಆಶ್ರಯ ಪಡೆದುಕೊಂಡ ಸಂದರ್ಭದ್ದು; ಅಂದರೆ, ನಾಲ್ಕನೇ ದಿನದ್ದು, ಪರ್ಷಿಯನ್ ದಾಖಲೆಗಳು ಬೆಳಗ್ಗೆಯೇ ಆರಂಭವಾದ ಮೊದಲನೇ ದಿನದ ಕದನವು ನಾಲ್ಕನೇ ದಿನದವರೆಗೆ ಮುಂದುವರೆದ ಬಗೆಗೆ ಸೂಚನೆ ನೀಡುತ್ತದೆ. ಈ ಕಥನಗೀತೆಯು ಕೊಡುವ ಸೂಚನೆಯಂತೆ, ಪ್ರಾಯಶಃ ನಾಲ್ಕನೇ ದಿನದ ಕದನವು ಮಧ್ಯಾಹ್ನದ ವೇಳೆಗೆ ತೀವ್ರಗೊಂಡಿತು. ಮರಾಠರು ಮತ್ತು ದುರ್ಗದವರ ಸಂಯುಕ್ತದಂಡಿನ ಏಟನ್ನು ತಾಳಲಾರದೆ ಖಾಸಿಂಖಾನನ ಸೇನೆ ದೊಡ್ಡೇರಿಕೋಟೆಯ ಬಳಿ ‘ಮಟ ಮಟ ಮಧ್ಯಾಹ್ನ, ಚಟ ಚಟನೆ ಕಾಯುವ ಬಿಸಿಲಿನಲ್ಲಿ, ನೆಗ್ಗಿಲುಮುಳ್ಳು ತುಂಬಿದ ಬಯಲಿನಲ್ಲಿ, ಕಂಚಿಕಟ್ಟೆಯ ಹಿಂದಕ್ಕೆ’ ಸರಿಯುತ್ತಿದ್ದಿತು.

ಮೊಗಲ್‌ಸೇನೆಯ ಪರಿಸ್ಥಿತಿ ಹೇಗಿದ್ದಿತೆಂದರೆ, ತಮ್ಮ ಮೇಲೆ ದಾಳಿಮಾಡಿದವರಿಂದ ಸುಲಿಗೆಗೊಳಗಾಗಬೇಕಾಯಿತು. ಎತ್ತುಗಳ ಮೇಲೆ ಹೇರು (ಸರಕು) ಗಳನ್ನು ಸಾಗಿಸುತ್ತಿದ್ದ ಮೊಗಲ್ ಸೈನಿಕರನ್ನು ಸಂಯುಕ್ತಪಡೆಯವರು ಸುತ್ತುವರೆದು, ‘ಎತ್ತಿನ ಮೇಲಿರುವುದು ಯಾವ ಹೇರಣ್ಣ? ಮೂಟೆಯ ಮೂಲೆ ಕತ್ತರಿಸಣ್ಣ. ಎತ್ತುಗಳ ಮೂಗುದಾಣ ಬಿಚ್ಚಣ್ಣ. ನಾವು ಹಣಕಾಸಿನ ಮೇಲೆ ಆಸೆ ಮಾಡುವವರಲ್ಲಣ್ಣ!” ಎನ್ನುತ್ತಲೇ ಎಲ್ಲ ಸರಕನ್ನೂ ಇಳಿಸಿಕೊಂಡರೆಂಬ ಸೂಚನೆ ದೊರೆಯುತ್ತದೆ.

[1] ಈ ಕಥನಗೀತೆಯನ್ನು ‘ದೊಡ್ಡೇರಿಕಾಳಗ’ ಎಂಬ ಶೀರ್ಷಿಕೆಯಲ್ಲಿ ಜೋಯಿಸರು ತಮ್ಮ ಸ್ವಹಸ್ತದಿಂದಲೇ ಪ್ರತಿ ಮಾಡಿರುತ್ತಾರೆ. ಇದರ ‘ಕಾರ್ಬನ್ ಪ್ರತಿ’ ಈ ಲೇಖಕನ ಸಂಗ್ರಹದಲ್ಲಿರುತ್ತದೆ. ಅಲ್ಲದೆ, ಪ್ರೊ.ದೀಕ್ಷಿತರು ಜೋಯಿಸರು ಪ್ರತಿ ಮಾಡಿಕೊಂಡ ಕಥನಗೀತೆಯ ಪಾಠವನ್ನು ಬಳಸಿಕೊಂಡಿರುವರೆಂಬುದಕ್ಕೆ ಅವರ ಲೇಖನದಲ್ಲೇ ಸೂಚನೆ ದೊರೆಯುತ್ತದೆ.

[2] ನೋಡಿ : ಶ್ರೀಕಂಠತೀರ್ಥ (ತೀ.ನಂ.ಶ್ರೀ. ಸ್ಮಾರಕಗ್ರಂಥ), ಪು. ೬೩೩-೬೩೯.