ಸಂಯುಕ್ತಪಡೆಯವರು ಪ್ರಾಯಶಃ ದೊಡ್ಡೇರಿ ರಣಾಂಗಣದಿಂದ ಹಿಂದಕ್ಕೆ ಸರಿಯುತ್ತಿದ್ದ ಅಥವಾ ಕದನಕ್ಷೇತ್ರದಿಂದ ನಿರ್ಗಮಿಸುತ್ತಿದ್ದ ಮೊಗಲ್ ಸೈನಿಕರ ಮೇಲೆ ದಾಳಿಮಾಡಿ ಸುಲಿದುದು ಒಂದು ಪರಿಯದಾದರೆ, ಇನ್ನೊಂದೆಡೆ ದುರ್ಗದ ದಂಡಿನವರು ‘ಅಯ್ಯಯ್ಯೋ ಧಗಡಿ ನೀ ಹೊಕ್ಕಲ್ಲಿ ಬಿಡೆನೊ’ ಎಂಬ ತಮ್ಮ ದೊರೆಯ ರೋಷವನ್ನು ಮೊಗಲರತ್ತ ತಿರುಗಿಸಿ ಅವರನ್ನು ಒಂದೇ ಸಮನೆ ಕತ್ತರಿಸತೊಡಗಿದುದು ಇನ್ನೊಂದು ಪರಿಯದು. ಹಳೆಯ ದ್ವೇಷದಿಂದ ಕುದಿಯುತ್ತಿದ್ದ ಭರಮಣ್ಣ ನಾಯಕನಿಗೆ, ಮೊಗಲರನ್ನು ನಾಶಪಡಿಸಲು ಇದಕ್ಕಿಂತ ಉತ್ತಮ ಅವಕಾಶ ಇನ್ನೆಲ್ಲಿ ದೊರೆತೀತು? ಇದರ ಅರಿವಿದ್ದ ದುರ್ಗದ ಸೈನಿಕರ ರೋಷ ಈ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಿದ್ದಿತೆನ್ನಬಹುದು. ಇದೊಂದು ಭೀಕರ ಪ್ರಸಂಗವೆಂದರೂ ಸರಿಯೇ. ಈ ಕಥನಗೀತೆಯು ಈ ಸಂದರ್ಭವನ್ನು ಯಥಾವತ್ತಾಗಿ ದಾಖಲಿಸಿ ಕೊಂಡಿದೆಯೆನ್ನಬಹುದು.

ಈ ಕದನ ಸಂದರ್ಭದಲ್ಲಿ ಜರುಗಿದ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ದಾಖಲಿಸಿಕೊಂಡಿದೆ ಈ ಕಥನಗೀತೆ. ಮೊಗಲ್‌ಸೇನೆಯ ಡೇರೆಗಳ ಮೇಲೆ ದುರ್ಗದ ಸೇನೆ ನಡೆಸಿದ ದಾಳಿಯಿಂದಾಗಿ ದಿಗ್ಭ್ರಾಂತರಾದ ಮೊಗಲ್ ಸೈನಿಕರು, ವ್ಯಾಪಾರಿಗಳಂತೆ, ಕೃಷಿಕೂಲಿಕಾರರಂತೆ, ಬೇಟೆಗಾರರಂತೆ ಸೋಗುಹಾಕಿ ಜೀವ ಉಳಿಸಿಕೊಳ್ಳಲು ಪರದಾಡಿದ ಸ್ವಾರಸ್ಯಕರ ಚಿತ್ರಣ ಇಲ್ಲಿ ದೊರೆಯುತ್ತದೆ. ‘ಹೊದ್ದ ಗುಡಾರವನ್ನು ಹೊಕ್ಕು ಕಡಿಯುವಾಗ’ ಮೊಗಲ್ ಸೈನಿಕರು ತಾವು ಬಣಜಿಗರೆಂದೂ ಬೆಳ್ಳುಳ್ಳಿ ಮಾರುವವರೆಂದೂ; ಅವರನ್ನು ಕಟ್ಟೆ (ಕಂಚಿಕಟ್ಟೆ)ಯ ಮೇಲೆ ಓಡಾಡಿಸಿಕೊಂಡು ಗದುಬಿ/ಗದುಮಿಕೊಂಡು ಕಡಿಯುವಾಗ ತಾವು ಒಕ್ಕಲಿಗರೆಂದೂ (ಕೃಷಿಕೂಲಿಯಾಳುಗಳು) ಕೂಲಿಮಾಡಲು ಬಂದಿರುವೆವೆಂದೂ; ದೊಡ್ಡೇರಿಕೆರೆ ಏರಿಯ ಹಿಂದೆ ಹಾರಾಡಿಕೊಂಡು ಕಡಿಯುವಾಗ ತಾವು ಬೇಡರೆಂದೂ ಬೇಟೆಯಾಡಲು ಬಂದಿರುವೆವೆಂದೂ ಗೋಗರೆಯುತ್ತಾರೆ. ಇದು ಕದನದ ತೀವ್ರತೆಯನ್ನು ಮನಗಾಣಿಸುತ್ತದೆ.

ಈ ಕದನದಲ್ಲಿ ೧/೩ ರಷ್ಟು ಮೊಗಲ್ ಸೇನೆ ನಾಶವಾಯಿತೆಂದು ಹೇಳಲಾಗಿದೆ. ಹಾಗಯೇ, ಎಲ್ಲ ಪಕ್ಷದವರೂ ಸೇರಿ ಈ ಸಂದರ್ಭದಲ್ಲಿ ಕನಿಷ್ಠ ೫೦,೦೦೦ ಸೈನಿಕರು ಮಡಿದಿರಬಹುದೆಂದು ಭಾವಿಸಲಾಗಿದೆ. ಈ ಯುದ್ಧದ ಭೀಕರತೆಯನ್ನು ಸಮರ್ಥಿಸುವ ಉದಾಹರಣೆಯೊಂದನ್ನು ಗಮನಿಸುವುದಾದರೆ, ಈ ಕೋಟೆಯ ನಿವೇಶನದಿಂದ ಪೂರ್ವಕ್ಕೆ ಅನತಿದೂರದಲ್ಲಿ ಸ್ಥಳೀಯರು ಗುರುತಿಸುವ ‘ಹುಳುವಿನಒಡ್ಡು’ ಎಂಬ ತಗ್ಗುಪ್ರದೇಶವೊಂದಿದೆ. ಇದು ಯುದ್ಧಸಂದರ್ಭದಲ್ಲಿ ಹತ್ಯೆಗೀಡಾದ ಅಸಂಖ್ಯ ಸೈನಿಕರ ದೇಹಗಳನ್ನು ತಂದು ರಾಶಿಹಾಕಲಾಗಿದ್ದ ಗುಂಡಿ ಎನ್ನಲಾಗುತ್ತದೆ. ಮೃತದೇಹಗಳಿಗೆ ಎಷ್ಟೋ ದಿನಗಳವರೆಗೆ ಹುಳುಗಳು ಮುತ್ತಿಕೊಂಡಿದ್ದರಿಂದ ಇದನ್ನು ಹುಳುವಿನಒಡ್ಡು ಎಂದೇ ಗುರುತಿಸಿ ಕರೆಯುವಂತಾಯಿತೆನ್ನಬಹುದು. ಈ ಪರಿಸರದಲ್ಲಿ ಆಯುಧ ಇತ್ಯಾದಿ ವಸ್ತುಗಳು ದೊರಕುತ್ತಿದ್ದ ಬಗೆಗೆ ಸೂಚನೆ ದೊರೆಯುತ್ತದೆ.

ನಾಲ್ಕನೇ ದಿನ ಮೊಗಲರ ಪಾಲಿಗೆ ದುರಂತವೆನಿಸಿತು. ದೊಡ್ಡೇರಿಕೋಟೆಯ ಸಂಯುಕ್ತ ಪಡೆಗಳ ವಶವಾಯಿತು. ಸೈಯದ್ ಖಾಸಿಂಖಾನನು ತನ್ನ ಡೇರೆಯೊಳಗೆ ಮೃತನಾಗಿದ್ದುದು ಸುದ್ದಿಯಾಯಿತು. ಇದರಿಂದ ಮೊಗಲ್ ಸರದಾರರೂ ಸೈನಿಕರೂ ಧೃತಿಗೆಟ್ಟರು; ಮರಾಠರೊಡನೆ ಒಪ್ಪಂದವೇರ್ಪಡಿಸಿಕೊಳ್ಳಲು ತೀರ್ಮಾನಿಸಿದರು. ಅಂತಿಮವಾಗಿ ದೊಡ್ಡೇರಿ ಕೋಟೆಯು ದುರ್ಗದವರ ಅಧೀನಕ್ಕೆ ಬಂದಿತು. ಮುಖ್ಯವಾಗಿ, ಖಾಸಿಂಖಾನನು ಆತ್ಮಹತ್ಯೆ ಮಾಡಿಕೊಳ್ಳಲು ಇದ್ದ ಕಾರಣವಾದರೂ ಅಫೀಮಿನ ಅಭಾವವೆನ್ನಲಾಗಿದೆ. ಸಮಕಾಲೀನ ಆಧಾರಗಳ ಪ್ರಕಾರ, ಅಫೀಮು ಸೇವನೆಯ ಚಟವುಳ್ಳ ಈತನಿಗೆ ಮೂರುದಿನಗಳಕಾಲ ಅದು ದೊರೆಯದೆ ಹೋದುದಕ್ಕೆ ಮೃತನಾದ. ಆದರೆ ದೊಡ್ಡೇರಿ ಕದನದ ಸೋಲಿನಿಂದ ಮೊಗಲರ ಗೌರವಕ್ಕೆ ಕುಂದುಂಟಾಯಿತೆಂದು ಬಗೆದು ಹಾಗೂ ಈ ಸೋಲಿಗೆ ತಾನೇ ಕಾರಣನೆಂದು ಭಾವಿಸಿ, ಅದರ ಆಘಾತದಿಂದ ಚೇತರಿಸಿಕೊಳ್ಳಲಾರದೆ ಹಾಗೂ ತನ್ನ ಸಾಮ್ರಾಟ ಔರಂಗಜೇಬನಿಗೆ ಮುಖ ತೋರಿಸಲು ಧೈರ್ಯ ಸಾಲದೆ ಆತ್ಮಹತ್ಯೆ ಮಾಡಿಕೊಂಡನೆಂಬ ಅಭಿಪ್ರಾಯವೂ ಇದೆ.

ಪ್ರಸ್ತುತ ಕಥನಗೀತೆ ಸಹಾ ಖಾಸಿಂಖಾನನು ಆತ್ಮಹತ್ಯೆ ಮಾಡಿಕೊಂಡುದನ್ನು ಹಾಗೂ ಪರ್ಶಿಯನ್ ಆಕರಗಳಲ್ಲಿಯ ಮಾಹಿತಿಯನ್ನು ಸಮರ್ಥಿಸುತ್ತದೆ. ಖಾಸಿಂಖಾನನು ‘ಸಿಟ್ಟಿನ ದೊರೆ ಕೈಯಲ್ಲಿ ಸಿಕ್ಕಬಾರದೆಂದು ಹಾಗೂ ದಕ್ಕಬಾರದೆಂದು ಹಕ್ಕಜ್ಜಿನಾಮೆ ಕುಡಿದು ಡೇರೆಯಲ್ಲಿ ಸತ್ತಿದ್ದ’ನೆಂತಲೇ ಹೇಳುತ್ತದೆ. ಇಲ್ಲಿ ಅಫೀಮಿನ ಪ್ರಸ್ತಾಪವಿಲ್ಲ. ಆದರೆ ‘ಹಕ್ಕಜ್ಜಿನಾಮೆ’ಯೆಂಬ ಮೂಲಿಕೆ (ಔಷಧಿ)ಯ ಪ್ರಸ್ತಾಪವಿದ್ದು, ಇದು ಹೊಸ ಅಂಶವಾಗಿದೆ. ಈ ಮೂಲಿಕೆಯು ಯಾವುದೋ ಸಸ್ಯದಿಂದ ತಯಾರಿಸಿದ ದ್ರವರೂಪದ ವಿಷವಿರಬಹುದು. ಇದನ್ನು ಸ್ಪಷ್ಟ ಪಡಿಸಲಾಗಿದ್ದರೂ ಖಾಸಿಂಖಾನನ ಸಾವಿಗೆ ಕಾರಣವೆನಿಸಿದ ನಿರ್ದಿಷ್ಟ ‘ವಿಷ’ದ ಬಗೆಗೆ ನೇರ ಸೂಚನೆ ದೊರೆಯುವುದು ಈ ಕಥನಗೀತೆಯಲ್ಲಿ ಮಾತ್ರ ಎನ್ನಲಡ್ಡಿಯಿಲ್ಲ.

ಚಿತ್ರದುರ್ಗ ಸಂಸ್ಥಾನದ ಪರವಾಗಿ ದೊಡ್ಡೇರಿ ಕದನದಲ್ಲಿ ಭಾಗವಹಿಸಿದ್ದ ಕೆಲವು ಪ್ರಮುಖ ವ್ಯಕ್ತಿಗಳ ಬಗೆಗೆ ಪ್ರಸ್ತಾಪಿಸುತ್ತದೆ ಪ್ರಸ್ತುತ ಕಥನಗೀತೆ. ಒಂದು ವ್ಯತ್ಯಾಸವೆಂದರೆ, ಚಿತ್ರದುರ್ಗ ನಾಯಕರ ವಂಶಾವಳಿಯಲ್ಲಿ ಕುಡುತಿನಿ ವೆಂಕಣ್ಣ ಮತ್ತು ಹೊಳಲ್ಕೆರೆ ಬೊಮ್ಮಣ್ಣರ ಹೆಸರುಗಳನ್ನು ಕಾಣಿಸಿದ್ದರೆ, ಹೊಳಲ್ಕೆರೆ ಬೊಮ್ಮಣ್ಣ ಅಥವಾ ಭಾವ ಬೊಮ್ಮಣ್ಣನೊಡನೆ ದಳವಾಯಿ ಚಿಕ್ಕಣ್ಣನನ್ನೂ ಪ್ರಸ್ತಾಪಿಸುತ್ತದೆ ಈ ಕಥನಗೀತೆ. ಕುಡುತಿನಿ ವೆಂಕಣ್ಣನ ಬಗೆಗೆ ಮೌನವಹಿಸಿದೆ ಇದು. ಏನೇ ಇದ್ದರೂ ಕಥನಗೀತೆಯಲ್ಲಿ ಪ್ರಸ್ತಾಪಗೊಂಡಿರುವ ವ್ಯಕ್ತಿಗಳ ಹಿನ್ನೆಲೆ ಅರಿಯುವುದು ಈ ಅಧ್ಯಯನದ ಮಟ್ಟಿಗೆ ಮುಖ್ಯವಾಗುತ್ತದೆ.

ಈ ಕಥನಗೀತೆಯಲ್ಲಿ ಮೊದಲಿಗೆ ಕಾಣಿಸಿಕೊಳ್ಳುವವರು ‘ರಾಜೇಶ್ರೀ’ ಬಿಚ್ಚುಗತ್ತಿ ಭರಮಣ್ಣನಾಯಕ ಮತ್ತು ಗುಂಟನೂರು ಮಲ್ಲಪ್ಪ. ಭರಮಣ್ಣ ನಾಯಕ (ಬೆಂಕಿ ಭರಮೇಂದ್ರ)ನನ್ನು ಹೊರತುಪಡಿಸಿದರೆ, ಗುಂಟನೂರು ಮಲ್ಲಪ್ಪ ಪ್ರಮುಖನೆನಿಸುತ್ತಾನೆ. ಈ ಗುಂಟನೂರು ಮಲ್ಲಪ್ಪ ಅಥವಾ ಮಲ್ಲಯ್ಯನು ಭರಮಣ್ಣನಾಯಕ ಅರಸನಾಗುವುದಕ್ಕಿಂತ ಮೊದಲೇ ದುರ್ಗದ ಹಿಂದಿನ ಅರಸರ ಬಳಿ ಚಾಕರಿ ಕೈಗೊಂಡವನು. ಭರಮಣ್ಣನಾಯಕನು ಸಿಂಹಾಸನವನ್ನು ಪರಿಗ್ರಹಿಸಿದಾಗ ಈತ ಆತನ ಪ್ರಧಾನಿಯಾಗಿ ನೇಮಕಗೊಂಡ. ದುರ್ಗದ ಚರಿತ್ರೆಯಲ್ಲಿ ಕಂಡುಬರುವ ಪ್ರಮುಖ ಹಾಗೂ ಪ್ರಭಾವಿ ಪ್ರಧಾನಿಗಳ ಪೈಕಿ ಈತನೂ ಒಬ್ಬ.

ಹೊಳಲ್ಕೆರೆ ಬೊಮ್ಮಣ್ಣನು ಭರಮಣ್ಣನಾಯಕನಿಗೆ ಭಾವನಾಗಬೇಕಿತ್ತೆಂಬುದು ಈ ಕಥನಗೀತೆಯಿಂದ ತಿಳಿಯುತ್ತದೆ. ದುರ್ಗದ ಅರಸರು ಆಡಳಿತದಲ್ಲಿ ತಮ್ಮ ಸ್ವಬಂಧುಗಳು, ಅಂದರೆ ಕುಮಾರರು, ಮೈದುನರು, ಅಳಿಯಂದಿರು, ಭಾವಂದಿರು ಮೊದಲಾದವರಿಗೂ ಪ್ರಾಶಸ್ತ್ಯ ನೀಡಿದ್ದರು. ಇಲ್ಲಿ ಪ್ರಸ್ತಾಪಗೊಂಡಿರುವ ಭಾವ ಬೊಮ್ಮಣ್ಣನಾಗಲಿ, ದಳವಾಯಿ ಚಿಕ್ಕಣ್ಣನಾಗಲಿ ಭರಮಣ್ಣನಾಯಕನು ಅರಸನಾಗುವುದಕ್ಕಿಂತ ಮೊದಲೇ ದುರ್ಗದ ಸೇವೆಯಲ್ಲಿದ್ದವರು. ಇವರೀರ್ವರೂ ಶೌರ್ಯ-ಸಾಮರ್ಥ್ಯಗಳಿಗೆ ಹೆಸರಾದವರೆಂದು ವ್ಯಕ್ತಪಡುತ್ತದೆ. ಉದಾಹರಣೆಗೆ, ದಳವಾಯಿ ಚಿಕ್ಕಣ್ಣ ಅಥವಾ ಚಿಕ್ಕಪ್ಪನು ಚಿತ್ರದುರ್ಗದ ಆರನೇ ದೊರೆ ಚಿಕ್ಕಣ್ಣನಾಯಕ (೧೬೭೫-೧೬೮೬)ನ ಕಾಲದವನಾಗಿದ್ದು, ೧೬೮೪ರ ಬೂದಿಹಾಳು (ಶ್ರೀರಾಂಪುರ) ಕಾಳಗದಲ್ಲಿ ದಂಡನಾಯಕನಾಗಿ ಕಾರ್ಯನಿರ್ವಹಿಸಿದ; ಭರಮಣ್ಣನಾಯಕನ ಕಾಲದಲ್ಲಿ ಪ್ರಸಿದ್ಧವೆನಿಸಿದ ಈ ದೊಡ್ಡೇರಿ ಕದನದಲ್ಲಿ ದಳವಾಯಿಯಾಗಿ ದುರ್ಗದ ಸೇನೆಯನ್ನು ನಡೆಸುವ ಗೌರವಕ್ಕೂ ಪಾತ್ರನಾದ.

ವ್ಯಕ್ತಿಗಳಲ್ಲದೆ, ಭರಮಣ್ಣನಾಯಕನ ಉಡುಗೆ-ತೊಡುಗೆ, ಅಲಂಕರಣ, ಬಿರುದು-ಬಾವಲಿ ಸೇನೆಯವರ ಸಮವಸ್ತ್ರ, ಶಸ್ತ್ರಾಸ್ತ್ರ, ವಾದ್ಯ, ಪರಿಚಾರಕರು, ಪರಿವಾರದವರು ಇತ್ಯಾದಿ ವಿವರವನ್ನು ಈ ಕಥನಗೀತೆ ಸಂಗ್ರಹಿಸಿಕೊಟ್ಟಿದೆ. ಇದರಲ್ಲಿಯ ಒಂದೆರಡು ಅಂಶಗಳತ್ತ ಪ್ರೊ.ದೀಕ್ಷಿತರೂ ಗಮನ ಸೆಳೆದಿದ್ದಾರೆ. ಆದರೆ ಈ ಮಾಹಿತಿಯನ್ನು ಪ್ರತ್ಯೇಕವಾಗಿ ಹಾಗೂ ವಿವರವಾಗಿ ಪರಿಶೀಲಿಸಿಬೇಕಿದೆ. ಹಾಗೆಯೇ, ಈ ಕಥನಗೀತೆಯು ಪ್ರಸ್ತಾಪಿಸುವ ‘ಕಂಚಿಕಟ್ಟೆ’ ಎಂಬ ಎಡೆ(ಕೆರೆ/ಕುಂಟೆ?)ಯನ್ನು ಹಳೇದೊಡ್ಡೇರಿ ಪರಿಸರದಲ್ಲಿ ಶೋಧಿಸುವ ಪ್ರಯತ್ನವಿನ್ನೂ ಸಫಲವಾಗಿಲ್ಲ.

ಫಾರ್ಸೀ ಮತ್ತು ಮರಾಠೀ ಆಕರಗಳು ಒದಗಿಸುವ ದೊಡ್ಡೇರಿ ಕದನದ ವಿವರಗಳಿಗಿಂತ ಭಿನ್ನವಾಗಿ ಕೆಲವು ಸೂಕ್ಷ್ಮ ಸಂದರ್ಭಗಳನ್ನು ಹಾಗೂ ವಿವರಗಳನ್ನು ಈ ಜನಪದ ಕಥನಗೀತೆ ಒದಗಿಸುತ್ತದೆನ್ನುವುದು ಸ್ಪಷ್ಟ. ಈ ಕದನಕ್ಕೆ ಸಂಬಂಧಿಸಿದಂತೆ, ಚಿತ್ರದುರ್ಗ ನಾಯಕ ಅರಸರ ವಂಶಾವಳಿಗಳಲ್ಲಿಯ ಮಾಹಿತಿಗಿಂತ ಅಧಿಕ ಮಾಹಿತಿಯನ್ನು ಈ ಕಥನಗೀತೆ ಒಳಗೊಂಡಿದ್ದು, ಇದು ಈ ಗೀತೆಯ ಮಹತ್ವವನ್ನು ಮನಗಾಣಿಸಿಕೊಡುತ್ತದೆ. ಇಷ್ಟಾದರೂ ಈ ಕಥನಗೀತೆಯ ಬೇರೆ ಮಗ್ಗಲುಗಳನ್ನು ಇನ್ನಷ್ಟು ವಿಶದವಾಗಿ ಗಮನಿಸಿ ಸಮಗ್ರವಾಗಿ ನಿರೂಪಿಸಲು ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

. ದೊಡ್ಡೇರಿ ಕಾಳಗದ ಲಾವಣಿ

ಖಾಶೀಂಖಾನ ಶಂಕರನಾರಾಯಣ ಕಂಚಿಯಲಿಬ್ಬರೂ ಭೇಟಿ ಆಗಿ |
ಹಗೆಯವನ ಮೇಲೆ ಹಣವಿಗೆ ಹೋಗುತ್ತೇನೆ | ಪಗದೀಗೆ ಹೋಗುತ್ತೇನೆ |
ದುರ್ಗದ ವಜೀರನ ದಾರಿಬಿಡೆಂದಾ  || ೧ ||

ದಾರಿಬಿಡಲೀಕೆ ನೀ ಯಾವೂರ ಧೊರೆಯೊ |
ನೀ ಎಂತೂರ ಧೊರೆಯೋ |
ಮುಂದಕ್ಕೆ ಹೋದರೆ ಆಣೆ | ಇಳಿಸೆಂದ ದಂಡಾ         || ೨ ||

ಹೊತ್ತು ಮುಳುಗಿದಾ ವಂಭತ್ತು ಗಳಿಗ್ಯಾಗೆ |
ಹನ್ನೊಂದು ಗಳಿಗ್ಯಾಗೆ |
ತಕ್ಕೋಬೇಕಂತೆ ಗಾರೆಬಾಗಿಲ ತನಕ         || ೩ ||

ಇಂತಪ್ಪ ಸುದ್ದಿಯನು ಗುಂಟನೂರು ಮಲ್ಲಪ್ಪ ಕೇಳಿ
ಬೆಂಕಿ ಭರಮೇಂದ್ರಗೆ | ಓಲೆಯ ಬರದಾ       || ೪ ||

ಬಂದಂಥ ಓಲೆಯನು ಕುಂತೊಮ್ಮೆ ಓದಿಸಿದ
ನಿಂತೊಮ್ಮೆ ಓದಿಸಿದ |
ಐಯ್ಯಯ್ಯೋ ಧಗಡಿ ನೀ ಹೊಕ್ಕಲ್ಲಿ ಬಿಡೆನೋ  || ೫ ||

ಹೊಸದುರ್ಗದ ಮಂದಿ | ಹೊಳಲ್ಕೆರೆಠಾಣ್ಯವು |
ಸಂತೆಬೆನ್ನೂರು ಮಂದಿ | ಮುಂಚೆ ಬರಲೆಂದಾ         || ೬ ||

ಭಾವ ಬೊಮ್ಮಣ್ಣ | ದಳವಾಯಿ ಚಿಕ್ಕಣ್ಣ |
ಕಾಲಮಂದಿಯ ಕರಕೊಂಡು |
ಕಣಿವೆಯ ಕಟ್ಟೆಂದಾ        || ೭ ||

ಗಡಿಗಾಳಾ ಭಂಟಾರು | ಗೌಡಾಳಿಠಾಣ್ಯವೂ |
ಹರತಿ ದೊಡ್ಡೇರಿ ಐಮಂಗಲ ಸಹವಾಗಿ |
ನಿನಗ್ಯಾರು ಎದುರೋ | ಗಾಧುರಿಹೆಬ್ಬುಲಿಗೆ |
ಗಾಧುರಿಮಾನ್ಯನಿಗೇ | ಚಂದ್ರಗಾವಿ
ಬಿರುದು ಮಾನ್ಯನಿಗೆ        || ೮ ||

ಹಸುರು ಸತ್ತಿಗೆಯು | ಹಾಕುವ ವುಡಾಸ |
ಹರಿಸುವೋ ವುಡಾಸವೊ ಪಾವಡ | ಬೀಸೋ ಬೀಸಣಿಗೆ |
ವಂಕಿನ ಮಲ್ಲಿಗೆ | ಚಿನ್ನದ ಕಾಸಿ |
ಚಿಗರುವ ಕೊನೆಮೀಸೆ | ತಿದ್ದಿ ಎಳೆಮೀಸೆ |
ಕೆನ್ನೆಲೋಲಾಡಾಡುವೋ ಮುತ್ತಿನ ತುರಾಯ |
ವತ್ತಿದಮೀಸೆ | ಮೆರಗು ಚನ್ಮುರಿಯು |
ಕತ್ತರಿ ಬಾಕು ಕೈಲಿ ಕಠಾರಿ | ಇಟ್ಟ ಭಂಡಾರ ವಿಭೂತಿ ಭಸ್ಮಾಂಗ |
ಕಟ್ಟಿ ಕಸೆ ಸಣ್ಣಗಂಬಳಿ |
ಬುರುಡೆ ಹಡಪದ ಸಂಚಯವು |
ಕಾಳಂಜಿ ಗಿಂಡಿಯರು |
ವೈಯಾರದಿಂದ ಓಲಗ
ಹೊಡೆಯುವ ಭೇರಿ | ಹಿಡಿಯುವ ಸಪೂರಿ |
ನುಡಿಸೋದು ತಂಬೂರಿ    || ೯ ||

ಗಾರೆಬಾಗಿಲು ಬಿಟ್ಟು ಓಡೋದು ಐಶ್ವರ್ಯವ
ಗಾರೆಬಾಗಿಲು ಬಿಟ್ಟು ಹೊರಡುವುದ ಕಂಡಾ
ತಾನಿಲ್ಲಿಂದ ಕಂಡಾ ||
ಮುರಿದು ಖಾಸೀಂಖಾನನು ದೊಡ್ಡೇರಿ ಬಿದ್ದಾ  || ೧೦ ||

ಮಟ ಮಟ ಮಧ್ಯಾನ್ಹ | ಚಟನೆಕಾಯುವ ಬಿಸಿಲಾಗೆ |
ನೆಗ್ಗಲಮುಳ್ಳಾಗೆ | ಕಂಚಿಕಟ್ಯಾಗೆ |
ಹಿಂದಕ್ಕೋತಿತು ಖಾಸಿಂಖಾನನ ದಂಡು |      || ೧೧ ||

ಎತ್ತಿನ ಮೇಲಿರುವೋದು | ಅದು ಯಾತರ ಹೇರಣ್ಣ
ಮೂಲೆ ಕೋಯಣ್ಣ | ಮೂಗಾವುದ ಚಲ್ಲಣ್ಣ
ಹಣಕಾಸಿನ ಮೇಲೆ | ಆಸೆ ಮಾಡುವವನಲ್ಲಾ |
ಅಯ್ಯಯ್ಯೊ ಧಡಿಗನೇ ಹೊಕ್ಕಲ್ಲಿ ಬಿಡೆನೊ     || ೧೨ ||

ಹೊದ್ದ ಗುಡಾರವ ಹೊಕ್ಕು ಕಡಿವಾಗ
ಬಣಿಜಿಗರು ಕಾಣಪ್ಪ | ಬೆಳ್ಳುಳ್ಳಿ ಮಾರುವರು |
ಕಟ್ಟೆಯ ಮೇಲೆ |
ಓಡಿಸಿ ಕಡಿವಾಗ ಗದಮಿಕೊಂಡು ಕಡಿವಾಗ |
ವಕ್ಕಲಿಗರು ಕಾಣಪ್ಪ | ಬಿಟ್ಟೀಯ ಬಂದೀವಿ |
ಏರಿಯ ಹಿಂದೆ ಹಾರಾಡಿ ಕಡಿವಾಗ |
ಹೊರಾಡಿ ಕಡಿವಾಗ ಬ್ಯಾಡರು ಕಾಣಪ್ಪ
ನಾವು ಬ್ಯಾಟಿಯಾ ಬಂದೀವಿ         || ೧೩ ||

ಶಿಟ್ಟೀನಾ ಧೊರೆ ಕೈಯಾಗೆ | ಸಿಕ್ಕಬಾರದೆಂದೂ
ದಕ್ಕಬಾರದೆಂದೂ |
ಹಕ್ಕಜ್ಜಿನಾಮೆ ಕುಡಿದು | ಡೇರಾದ ವಳಗೆ ಸತ್ತಿದ್ದಾ       || ೧೪ ||

ಕರಡಿಯಾ ಕೈತಾಳ ಮದ್ದಳೆ ಸುವಿಮೇಳಾ ||
ಸಂಪಿಗೆಸಿದ್ದನ ವರಕುಮಾರ         || ೧೫ ||

—-

ಕೃತಜ್ಞತೆ : ಎರಡು ಹಂತಗಳಲ್ಲಿ ಕೈಗೊಳ್ಳಲಾದ (ರಣ)ದೊಡ್ಡೇರಿಯ ಕ್ಷೇತ್ರಕಾರ್ಯದಲ್ಲಿ ಸಹಕರಿ ಸಿದವರು ದೊಡ್ಡೇರಿ ಗ್ರಾಮಪಂಚಾಯಿತಿಯ ಮಾಜಿ ಅಧ್ಯಕ್ಷ ಶ್ರೀ ಬಿ. ವೀರಣ್ಣ; ಹಾಗೂ ಹಳೇದೊಡ್ಡೇರಿಯ ಕ್ಷೇತ್ರಕಾರ್ಯದಲ್ಲಿ ಸಹಕರಿಸಿದವರು ಶ್ರೀ ಜಂಡೇಕುಂಟೆ ಗೋಸೆಪ್ಪನವರ ಸಿರುಗೊಂಡಪ್ಪ. ಕೆಲವು ಮಾಹಿತಿ ಒದಗಿಸಿದವರು ಉಪ್ಪಾರಹಟ್ಟಿಯ ಶ್ರೀ ಸಿ. ತಿಪ್ಪಣ್ಣ. ಈ ಎರಡೂ ಸ್ಥಳಗಳಲ್ಲಿ ಕೈಗೊಂಡ ಸುತ್ತಾಟಗಳಲ್ಲಿ ಜತೆಗಿದ್ದು ನೆರವಾದವರು ಚಿತ್ರದುರ್ಗ ನಾಯಕ ಅರಸರ ನೇರ ಸಂತತಿಗೆ ಸೇರಿದ ದೊಡ್ಡ (ದೊಡ್ಡೇರಿ) ಮದಕರಿನಾಯಕರ ಪೀಳಿಗೆಯವರಾದ ಚಳ್ಳಕೆರೆಯ ಶ್ರೀ ಪಿ.ಆರ್. ವೀರಭದ್ರನಾಯಕ ಮತ್ತು ಚಿತ್ರದುರ್ಗದ ಸಾಹಿತಿ ಶ್ರೀ ಎಸ್.ಆರ್. ಗುರುನಾಥ್. ಅಗತ್ಯ ಮಾಹಿತಿ ನೀಡಿ ಉಪಕರಿಸಿದವರು ಚಳ್ಳಕೆರೆಯ ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಡಾ. ಎಸ್.ಜಿ. ರಾಮದಾಸರೆಡ್ಡಿ ಹಾಗೂ ಚಿತ್ರದುರ್ಗದ ಶ್ರೀ ಲ.ನಾಗರಾಜ ಹೊಯ್ಸಳ. ಇವರೆಲ್ಲರಿಗೂ ಈ ಲೇಖಕ ಕೃತಜ್ಞ.

ಆಕರಸಾಹಿತ್ಯ

೧. Sir Jadunath Sarkar, 1948, House of Shivaji, S.C. Sarkar and Sons Ltd.

೨. Mahadeo Govind Ranade, 1966, Rise of the Maratha Power, Government of India, Delhi

೩. B.N.Sri Sathayn (Ed.), 1967, Chitradurga District Gazetteer, Government of Mysore, Bangalore

೪. B.Muddachari, 1969, The Mysore-Maratha Relations in the 17th Century, University of Mysore, Mysore

೫. G.T.Kulkarni, 1983, The Mughal-Maratha Relations: Twenty Five Fateful Years (1682-1707), Deccan College, Pune

೬. Mark Wilks, 1989, History of Mysore, Vol.I. Asian Educational Services, New Delhi

೭. John F.Richards, 1997, The Mughal Empire, Cambridge University Press, Foundation Books, New Delhi

೮. James Grant Duff, 1999, A History of the Mahrattas, Vol. I, Cosmo Publications, New Delhi

೯. Suryanath U.Kamath, ‘The Chitradurga Chiefs and Marathas, 1695-1778,’ Maratha History Seminar (Ed. :A.G.Pawar), 1971, Shivaji University, Kolhapur

೧೦. Setumadhava Rao Pagadi, ‘News Reports from the Moghal Camp About South Karnataka’, The Quarterly Journal of the Mythic Society, Vol, LXXXII, Nos. 3-4, July-December, 1991

೧೧. ಎಂ.ಎಸ್.ಪುಟ್ಟಣ್ಣ, ೧೯೨೪, ಚಿತ್ರದುರ್ಗದ ಪಾಳಯಗಾರರು, ಬೆಂಗಳೂರು

೧೨. ಎಂ.ವಿ. ಶ್ರೀನಿವಾಸ್, ಲಕ್ಷ್ಮಣ್ ತೆಲಗಾವಿ (ಸಂ.), ೧೯೭೬, ಚಂದ್ರವಳ್ಳಿ (ಚಿತ್ರದುರ್ಗ ಜಿಲ್ಲೆಯ ಇತಿಹಾಸ ಕುರಿತ ಲೇಖನಗಳು), ಜಿಲ್ಲಾ ಇತಿಹಾಸ ಸಂಶೋಧನ ಮಂಡಳಿ, ಚಿತ್ರದುರ್ಗ

೧೩. ಜಿ.ಎಸ್.ದೀಕ್ಷಿತ್, ‘ದೊಡ್ಡೇರಿಯ ಕಾಳಗ’, ಶ್ರೀಕಂಠತೀರ್ಥ (ತೀ.ನಂ.ಶ್ರೀ. ಸ್ಮಾರಕಗ್ರಂಥ) (ಸಂ.: ಎಂ. ಚಿದಾನಂದಮೂರ್ತಿ ಮತ್ತಿತರರು), ೧೯೭೬, ತೀ.ನಂ.ಶ್ರೀ.ಸಂಸಾರವರ್ಗ, ಬೆಂಗಳೂರು