ಮೈಸೂರಿನ ಹೆಗ್ಗಡದೇವಕೋಟೆಯ ಹೊಸಹಳ್ಳಿಯ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದಲ್ಲಿ ಕೃಷಿ ಪತ್ರಿಕೋದ್ಯಮ ಪಾಠ ಹೇಳಲು ಗೆಳೆಯರೆಲ್ಲ ಸೇರಿದ್ದೆವು. ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು ಮಾಧ್ಯಮ ಆಸಕ್ತರನ್ನು ಗುರುತಿಸಿ ಕೃಷಿ ಬರವಣಿಗೆ ಕುರಿತು ತರಬೇತಿ ಆಯೋಜಿಸಿದ್ದರು. ಸಂಜೆ ಹರಟೆಯ ಮಧ್ಯೆ ಈರುಳ್ಳಿ ಕತೆ ಹುಟ್ಟಿಕೊಂಡಿತು. “ಸಾಮಾನ್ಯವಾಗಿ ಒಂದು ಈರುಳ್ಳಿ ಹೆಚ್ಚೆಂದರೆ ೧೦೦-೧೨೦ ಗ್ರ್ಯಾಮ್ ತೂಕ ಇರಬಹುದು, ಅವತ್ತು ಯಾರೋ ಭೀಮ ಗಾತ್ರದ ಈರುಳ್ಳಿ ಬಗೆಗೆ ಮಾಹಿತಿ ನೀಡಿದರು, ಹೋಗಿ ನೋಡಿದರೆ ಬರೋಬ್ಬರಿ ೧ ಕ್ವಿಂಟಾಲ್ ೪೮ ಕಿಲೋ ಇತ್ತು !’ ಎಂದು ನಾನು ಮಾಹಿತಿ ಸ್ಪೋಟಿಸಿದೆ. ಅಕ್ಕಪಕ್ಕ ಇನ್ನೇನೋ ವಿಚಾರ ಮಾತಾಡುತ್ತಿದ್ದವರ ಕಿವಿ ಈಗ ನೆಟ್ಟಗಾಯಿತು. ಎಲ್ಲರೂ ಈರುಳ್ಳಿಯತ್ತ ತಿರುಗಿದರು. ವೈಜ್ಞಾನಿಕ ಯುಗದಲ್ಲಿ ಇಂತಹ ಗಾತ್ರ ಗಮ್ಮತ್ತುಗಳೆಲ್ಲ ತೀರ ಸಹಜ ಎಂಬ ನೋಟ ಕೆಲವರ ಮುಖದಲ್ಲಿ ಕಾಣುತ್ತಿತ್ತು. ಈರುಳ್ಳಿ ನೋಡುವ ಉಮೇದಿ ಹಲವರಲ್ಲಿತ್ತು.
” ಈರುಳ್ಳಿ ಅಷ್ಟೇಲ್ಲಾ ದೊಡ್ಡ ಇರೋದು ಸಾಧ್ಯವಿಲ್ಲ’ ಎಂದು ಮಲ್ಲಿಕಾರ್ಜುನ ಹೊಸಪಾಳ್ಯ ಪ್ರತಿಕ್ರಿಯಿಸಿದರು. “ನನಗೂ ಅನುಮಾನ”ತ್ತು, ಅವತ್ತು ಕೃಷಿ ನೋಡಿ ಪೋಟೋ ತೆಗೆಯೋಣವೆಂದು ಸ್ಥಳಕ್ಕೆ ಹೋಗಿದ್ದೆ, ಈರುಳ್ಳಿ ನೋಡಿ ರೈತರನ್ನು ಮಾತಾಡಿಸಿ ಅವರ ಪಡೆದೆ. ಮನೆಗೆ ಮರಳುವಾಗ ಸಂಜೆ ಮಳೆ ಸುರಿಯತೊಡಗಿತು. ಛತ್ರಿ ಒಯ್ದಿರಲಿಲ್ಲ, ಚಿಂತೆ ಕಾಡಿತು. ಆದರೆ ಕೃಷಿಕರು ತಕ್ಷಣಕ್ಕೆ ಈರುಳ್ಳಿಯ ದಪ್ಪನೆಯ ಹೊರ ಸಿಪ್ಪೆ ಬಿಡಿಸಿದರು, ಅದು ಕಡಲಾಮೆಯ ಚಿಪ್ಪು ನೆನಪಿಸಿತು. ಅದನ್ನು ಛತ್ರಿಯಂತೆ ತಲೆಯ ಮೇಲೆ ಹಿಡಿದು ನಡೆದವು!. ನಮ್ಮ ಕರಾವಳಿಯಲ್ಲಿ ಹಿಂದೆ ತಾಳೆ ಕೊಡೆ ಹಿಡಿದು ಓಡಾಡಿದ ಅನುಭವದಂತಿತ್ತು. ಮೈಗೆ ಸ್ವಲ್ಪವೂ ಮಳೆ ಹನಿ ತಾಗಲಿಲ್ಲ!’ ನಾನು ವಿವರಿಸಿದೆ. ಮಾತು ಕೇಳಿದ ಯಾರಿಗೂ ಈಗ ಅನುಮಾನವಿರಲಿಲ್ಲ, ಮಳೆಯಲ್ಲಿ ಕೊಡೆಯಾಗಿ ನೆರವಾದ ಈರುಳ್ಳಿ ಸಿಪ್ಪೆಯ ಕಲ್ಪನೆಯೇ ಹಲವರಲ್ಲಿ ನಂಬಿಕೆ ಹುಟ್ಟಿಸಿತು. ಈರುಳ್ಳಿ ಲೇಖನಕ್ಕೆ ಕೊಡೆಯಂತೆ ಬಳಸಿದ ಆ ಸಿಪ್ಪೆಯ ಚಿತ್ರ ಬಳಸಬಹುದೆಂದು ಸ್ನೇಹಿತರು ಸೂಚಿಸಿದರು!.
ಈರುಳ್ಳಿ ಕತೆಗೆ ಹೆಚ್ಚು ಕಡಿಮೆ ಮುಂದಿನ ಅರ್ಧ ತಾಸಿನಲ್ಲಿ ಚೆಂದದ ರೆಕ್ಕೆಪುಕ್ಕಗಳು ಹುಟ್ಟಿದವು. ಬೀಜ ಸಿಕ್ಕರೆ ಒಯ್ದು ಕೃಷಿ ಮಾಡುವ ಆಸೆಯೂ ಕೆಲವರಿಗೆ ಮೂಡಿರಬಹುದು ! ” ಅಡುಗೆಗೆಂದು ಈರುಳ್ಳಿ ಹೆಚ್ಚಿದಾಗ ಇಡೀ ಹಳ್ಳಿ ಅಳುತ್ತಿತ್ತಂತೆ!’ ಗೆಳೆಯ ಶಿವರಾಮ ಪೈಲೂರು ರೋಚಕ ಸಾಲು ಹೇಳಿದರು. ಒಂದು ಚಿಕ್ಕ ಈರುಳ್ಳಿ ಕೊರೆದರೆ ನಮ್ಮ ಕಣ್ಣಲ್ಲಿ ನೀರು ಬರುತ್ತದೆ, ಗಾತ್ರ ದೊಡ್ಡದಿರುವದರಿಂದ ಇಡೀ ಊರಿನ ಜನರ ಕಣ್ಣಲ್ಲಿ ನೀರು ಬಂದಿರುವದು ಸಹಜವೇ ಎಂದು ತಲೆ ಆಡಿಸಿದರು. ಬರೆಹಗಾರ್ತಿ ರೇಖಾ ಸಂಪತ್ ‘ಕ್ವಿಂಟಾಲ್ ಭಾರದ ಈರುಳ್ಳಿಯನ್ನು ನೆಲದಿಂದ ಕಿತ್ತದ್ದು ಹೇಗೆ ?’ ಎಂದು ಗುಮಾನಿ ಎದುರಿಟ್ಟಳು. ‘ನೀವು ಈರುಳ್ಳಿ ತೂಕ ಹೇಳುವಾಗ ೧ ಕ್ವಿಂಟಾಲ್ ೪೮ ಕಿಲೋ ೩೨೭ ಗ್ರ್ಯಾಮ್ ಎಂದು ನಿಖರವಾಗಿ ಹೇಳಿದ್ದರೆ ಭೀಮ ಗಾತ್ರದ ಈರುಳ್ಳಿ ಬಗೆಗೆ ಯಾರಿಗೂ ಅನುಮಾನವಿರೋದಿಲ್ಲ’ ಎಂದು ಬರೆಹಗಾರ ಡಾ. ಪಿ.ಕೆ. ಜೇನಾ ವಿಶ್ಲೇಷಿಸಿದರು. ದೊಡ್ಡ ಈರುಳ್ಳಿ ಕೃಷಿಯಿಂದ ಚಿಕ್ಕ ಈರುಳ್ಳಿ ಬೆಳೆಗಾರರ ಮೇಲೆ ಯಾವ ಪರಿಣಾಮವಾಗಬಹುದು? ಎಂದು ಚರ್ಚಿಸಿದರು. ಭೂಗತ ಈರುಳ್ಳಿಯನ್ನು ಕೀಳಲು, ಮಾರುಕಟ್ಟೆಗೆ ಸಾಗಿಸಲು ಅತಿಯಾದ ಯಂತ್ರೋಪಕರಣ ಅಗತ್ಯವೆಂದು ಹಲವರು ಪ್ರತಿಕ್ರಿಯಿುಸಿದರು.
ತಮಾಷೆ ಮಾತಿಗೆಂದು ನಾನು ಸೃಷ್ಟಿಸಿದ ದೊಡ್ಡ ಈರುಳ್ಳಿ ಇಷ್ಟೆಲ್ಲ ಚರ್ಚೆಯಾಗುತ್ತದೆಂದು ಗೊತ್ತಿರಲಿಲ್ಲ. ಅದು ಹಲವರ ತಲೆ ಹೊಕ್ಕು ಮತ್ತೆ ಮತ್ತೆ ಗಿರಕಿ ಹೊಡೆಯಿತು. ಶಿಬಿರದಲ್ಲಿ ಇನ್ನು ಈರುಳ್ಳಿ ಕತೆ ಬ್ಯಾನ್ ಮಾಡಬೇಕೆಂದು ಹಿರಿಯ ಬರಹಗಾರರು ತಾಕೀತು ಮಾಡಿದರು. ದೊಡ್ಡ ಗಾತ್ರದ ಕುಂಬಳಕಾಯಿ, ಚೌಕದ ಕಲ್ಲಂಗಡಿ ಚಿತ್ರಗಳು ಆಗಾಗ ನಮ್ಮ ಗಮನ ಸೆಳೆಯುತ್ತದೆ. ೫೦-೬೦ಕಿಲೋ ತೂಕದ ಹಲಸಿನ ಕಾಯಿಗಳ ಸಾಕ್ಷ್ಯಗಳಿವೆ. ಗೆಳೆಯ ಹೊಸಪಾಳ್ಯ ಸಂಗ್ರಹಿಸಿದ ಬಾಳೆಗೊನೆ ಚಿತ್ರ ನೋಡಿದರೆ ( ಈ ಚಿತ್ರ ತೆಗೆದವರ ಹೆಸರು ಇನ್ನೂ ತಿಳಿದಿಲ್ಲ ) ಗೊನೆ ೧೫ ಅಡಿ ಉದ್ದವಿದೆ, ಸಾವಿರಾರು ಕಾಯಿಗಳಿವೆ. ಇಂತಹ ಪುರಾವೆಗಳೇ ಈರುಳ್ಳಿಯಂತಹ ಕತೆ ಕಟ್ಟಲು ಪ್ರೇರಣೆ ನೀಡುತ್ತವೆಂದು ಅಂತಿಮ ಸ್ಪರ್ಶ ನೀಡಿದೆ.
ಕೃಷಿ ಬರೆಹ ಕತೆಯಲ್ಲ, ತಮಾಷೆಯಲ್ಲ, ಓದಿದವರಿಗೆ ಮಾಹಿತಿ, ಮಾರ್ಗದರ್ಶನ, ಕೃಷಿಗೆ ಪ್ರೇರಣೆ ನೀಡುವ ಜವಾಬ್ದಾರಿ ಬರಹಕ್ಕಿದೆ. ಬರೆಯುವವರಿಗೆ ದೊಡ್ಡ ಜವಾಬ್ದಾರಿಯಿದೆ. ಪುತ್ತೂರಿನ ಅಡಿಕೆ ಪತ್ರಿಕೆ ಎರಡು ದಶಕಗಳ ಹಿಂದೆ ಕೃಷಿಕರ ಕೈಗೆ ಲೇಖನಿ ಆಂದೋಲನ ಮಾಡಿದೆ. ಕೃಷಿಕರು ಬರೆದಾಗ ಮಣ್ಣಿನ ಅನುಭವ ಇನ್ನಳಿದ ಕೃಷಿಕರಿಗೆ ನೆರವಾಗುತ್ತದೆ ಎಂಬುದು ಆಂದೋಲನ ಆರಂಭಿಸಿದ ಶ್ರೀ ಪಡ್ರೆಯವರ ಆಶಯ. ಇಂದು ನಾಡಿನ ಪತ್ರಿಕೆಗಳಲ್ಲಿ ಕೃಷಿ ಬರೆಹಗಳು ಧಾರಾಳ ಪ್ರಕಟವಾಗುತ್ತಿವೆ. ಇವುಗಳಲ್ಲಿ ನಿಜವಾದ ಸತ್ವಯುತ ಬರಹಗಳೆಷ್ಟು? ಯೋಚಿಸಬೇಕಿದೆ. ಅವಸರದಲ್ಲಿ ಅರೆಬೆಂದ ಮಾಹಿತಿ ಹಂಚುವದು, ಕ್ಷೇತ್ರಕಾರ್ಯವಿಲ್ಲದೇ ಉಪದೇಶ ಮಾಡುವ ಕೆಲಸವನ್ನು ಕೆಲವು ಲೇಖನಗಳು ಮಾಡುತ್ತಿವೆ. ಪುಟ ತುಂಬಿಸುವ ತುರ್ತು ಹಲವರಲ್ಲಿದೆ.
ಕೃಷಿಕರಿಗೆ ಏನು ಬೇಕು ಎಂಬುದಕ್ಕಿಂತ ತಮ್ಮ ಭವಿಷ್ಯದ ದಾಳವಾಗಿ ಲೇಖನ ಬಳಸಿಕೊಳ್ಳುವ ಚಾಳಿ ಅಸಹನೀಯವಾಗಿ ಹೆಚ್ಚುತ್ತಿದೆ. ಒಂದು ಕಾಲದಲ್ಲಿ ವಿವಿಧ ಕಂಪನಿಗಳ ಗೊಬ್ಬರ, ಕೀಟನಾಶಕ ಪ್ರಚಾರ ಮಾಡುವ ಕೆಲಸವನ್ನು ಕೃಷಿ ವಿಜ್ಞಾನಿಗಳ ಬರಹಗಳು ಮಾಡುತ್ತಿದ್ದವು. ಇದನ್ನು ಟೀಕಿಸಿ ಮೇಲೆದ್ದ ಕೃಷಿ ಪತ್ರಿಕೋದ್ಯಮ ಈಗ ಕೆಲವೊಮ್ಮೆ ಸ್ವಯಂ ಸೇವಾ ಸಂಸ್ಥೆಗಳ ನರ್ತನಕ್ಕೆ ಬಲಿಯಾಗುವ ಪ್ರಮೇಯಗಳೂ ಇವೆ. ಕೃಷಿ ಸಂರಕ್ಷಣೆಯ ನೆಪದಲ್ಲಿ ತೆರೆಮರೆಯ ಅಜೆಂಡಾಗಳು ಮಾಧ್ಯಮ ವಿಶ್ವಾಸಕ್ಕೆ ಭಂಗ ತರುವ ಸಂದರ್ಭಗಳಿವೆ. ಇತ್ತೀಚಿಗಂತೂ ಕೃಷಿ ಮಾಧ್ಯಮದಲ್ಲಿ ಎನ್ಜಿಓ ಬರೆಹಗಾರರ ಹೊಸ ವರ್ಗ ಉದಯಿಸಿದೆ. ಎನ್ಜಿಓ ಆದವರು ಬರೆಹಗಾರರಾಗಬಾರದು ಎಂಬ ನಿಯಮವಿಲ್ಲ, ಆದರೆ ಬರೆಹಗಾರನಾಗಿರುವಾಗ ಎನ್ಜಿಓ ತಂತ್ರ, ಗುರಿಗಳನ್ನು ಮರೆತು ಕೃಷಿ ಮಾಧ್ಯಮ ನೀತಿಗೆ ಬೆಲೆ ಕೊಡಬೇಕಾದ ಎಚ್ಚರ ಬೇಕು. ಒಂದಿಷ್ಟು ರೋಲ್ ಮಾಡೆಲ್ಗಳನ್ನು ಎದುರು ಹಿಡಿದುಕೊಂಡು ಬರಹದ ಆಟ ನಡೆಯುವದರಿಂದ ಪ್ರಯೋಜನವಿಲ್ಲ. ಕೃಷಿ ಬರೆಹ ತರ್ಕ, ವಿಶ್ಲೇಷಣೆಗಿಂತ ನೇರ ಮಣ್ಣಿನ ಸಂಬಂಧ ಹೇಳುವದು ಮುಖ್ಯ. ಆದರೆ ಅಷ್ಟಷ್ಟು ಕಾಲಕ್ಕೆ ಒಂದೊಂದು ವಿಚಾರ ‘ಪ್ರಮೋಟ್’ ಮಾಡುವ ಯತ್ನಗಳು ನಿಜವಾದ ಕೃಷಿಕರ ಆದ್ಯತೆ ಮಂಕಾಗಿಸಬಹುದು!. ಮಾಹಿತಿ ಪ್ರವಾಹ ಎತ್ತಲೋ ನಮ್ಮನ್ನು ಹೊತ್ತೊಯ್ಯಬಹುದು.
ನಾನು ಹೇಳಿದ ದೊಡ್ಡ ಈರುಳ್ಳಿಯದು ಕಾಲ್ಪನಿಕ ಕತೆ, ತಕ್ಷಣಕ್ಕೆ ಇದನ್ನು ಮರೆತು ಬಿಡಿ ! ಆದರೆ ಕೃಷಿ ಪುಟಗಳ ಮಾಹಿತಿ ಓದುವಾಗ ಕಣ್ಮುಚ್ಚಿ ಒಪ್ಪುವ ಬದಲು ಸಾಧ್ಯಾಸಾಧ್ಯತೆಗಳ ವಿಶ್ಲೇಷಣೆಯ ಎಚ್ಚರ ನಮ್ಮಲ್ಲಿ ಸದಾ ಜಾಗೃತವಾಗಿರಲಿ. ಕತೆಗೆ ರೆಕ್ಕೆಪುಕ್ಕ ಹುಟ್ಟಿದರೆ ತೀರ ಸಹಜ, ಕೃಷಿ ಕತೆಗೆ ಹುಟ್ಟಿದರೆ ದೊಡ್ಡ ಅಪಾಯ. ಎಚ್ಚರದಿಂದಿರೋಣ.