ಭತ್ತದ  ಗದ್ದೆಯ ಬದುವಿನಲ್ಲಿ ನಿಂತು ಪುಟ್ಟ “ಮುತ್ತಪ್ಪ”  ಮಾತಾಡುತ್ತಿದ್ದ, ಆದರೆ  ಅನುಭವಿ ಮುದುಕಪ್ಪ(ಹಿರಿಯ) ಮಾತಾಡಿದಂತೆ ಕೇಳುತ್ತಿತ್ತು. ಹಾವೇರಿ ಸನಿಹದ ಹಳ್ಳಿಯಲ್ಲಿ ಆರನೇ ಕ್ಲಾಸ್  ಓದುತ್ತಿದ್ದವನು ಅರ್ಧಕ್ಕೆ ಪಾಠ ನಿಲ್ಲಿಸಿ  ಮೇಷ್ಟ್ರಿಗೆ ಮುಖ ತೋರಿಸದೇ  ಈಗ ಬಯಲಿಗೆ  ಓಡಿ ಬಂದಿದ್ದಾನೆ. ೧೨ರ ಹುಡುಗುತನದಲ್ಲಿ ಸಾಲ ತೀರಿಸುವ ಹೊಣೆ ಹೊತ್ತು  ಕುರಿಗಳ ಹಿಂದೆ  ಹೊರಟಿದ್ದಾನೆ. ಸಾಗರದ ಜಂಬಾನೆ ಗದ್ದೆ ಬಯಲಲ್ಲಿ ಓಡಾಡುತ್ತಿದ್ದ  ಮುತ್ತಪ್ಪನನ್ನು  ಕಂಡಾಕ್ಷಣ ಅವನ ಖಾಸಗಿ ಕತೆ  ಕೇಳಲು ಜತೆ ಸೇರಿದ್ದಕ್ಕೆ ಕಾರಣವಿದೆ. ಬಯಲು ಸೀಮೆಯಿಂದ ಹೊರಟ  ಕುರಿ ಹಿಂಡುಗಳು ಮಲೆನಾಡಿನ ಗದ್ದೆ ಬಯಲಿನಲ್ಲಿ ಸಾಗುವಾಗ ನನಗೆ ಚಿತ್ರ ತೆಗೆಯುವ ಖಯಾಲಿ.  ಆಗೆಲ್ಲ ಕುರಿಗಳ ಜತೆಗೆ ಪುಟ್ಟ ಪುಟ್ಟ ಮಕ್ಕಳು ಸಾಗುವ  ವಿಚಿತ್ರ  ಕಾಣುತ್ತದೆ. ಭಾರ ಹೊರಬೇಕಿಲ್ಲ, ಬೆವರು ಸುರಿಸಬೇಕಿಲ್ಲ  ಆಡುತ್ತ ಆಡುತ್ತ  ಕುರಿ ಕಾಯಬಹುದು,  ಈ  ಕೆಲಸ ನಡೆದಾಡುವ ಮಕ್ಕಳಿಗೆಂದೇ ಹುಟ್ಟಿದ್ದು   ಎಂಬರ್ಥದಲ್ಲಿ ಹಿರಿಯರೂ ಸಲೀಸಾಗಿ ಮಾತಾಡುತ್ತಿದ್ದರು.  ಇಡೀ ದಿನ ಕುರಿ ಕಾಯುವ ಅಟಕ್ಕೆ ದೇಹ ಕಪ್ಪಾಗಿ ಒಣಗಿದ್ದನ್ನು ನೋಡುತ್ತಿದ್ದೆ.

ನಾವು ಚಳಿ ಚಳಿಯೆಂದು ಭರ್ಜರಿ ಹೊದಿಕೆ ಹೊದೆದು ಮಲಗಿದಾಗ, ಬಿಸಿಲೆಂದು ಖುರ್ಚಿಯಲ್ಲಿ ಬೆವರುವಾಗ  ಯಾವುದಕ್ಕೂ ಅಂಜದೇ  ಬಯಲಲ್ಲೇ ಬದುಕುವವರ  ಕಷ್ಟ ಗಮನಿಸಬೇಕಿತ್ತು.  ಹೀಗಾಗಿ ಕುರಿಗಾಹಿಗಳ  ಕತೆ ಕೇಳುತ್ತಿದ್ದೆ.  ಬದುಕು ಕಷ್ಟಕ್ಕೆ ಬಿದ್ದು ಸಾಲ ಪಡೆದ ಬಳಿಕ ತಾವು ಕುರಿ ಕಾಯಲು ಬಂದುದನ್ನು  ಮಾಮೂಲಿಯಾಗಿ  ಎಲ್ಲರೂ ಹೇಳುತ್ತಿದ್ದರು. ಕುರಿಗಳೆಂದರೆ ಕಾಡು, ಹೊಲಗಳ ಕಳೆ ಮೇಯ್ದು ಬೆಳೆಯುವ ನಡೆದಾಡುವ ನೋಟುಗಳು ಎಂದು ಯಾರೋ ಹೇಳಿದ್ದರು. ಇವು  ವಿಧಾನ ಸೌಧ, ಮೆಡಿಕಲ್ ಕಾಲೇಜುಗಳಲ್ಲಿ ಬೆಳೆಯುತ್ತಿರುವ ಸಿರಿವಂತರ ಬೋಟುಗಳು ಎಂದು ಇನ್ನೊಬ್ಬರು ಟಂಕಿಸಿದ್ದರು ! ಕುರಿ ಮಂದೆಗಳ ಹಿಂದೆ  ನಡೆಯುವ ಮಕ್ಕಳು ಮಾತ್ರ  ಖಾಸಗಿ ಸಾಲಕ್ಕೆ ಜೀವ ತೇಯುವ ಜೀತದಾಳುಗಳಾಗಿದ್ದಂತೂ  ಖಾತ್ರಿಯಾಗಿ ಕಾಣುತ್ತಿತ್ತು.   ಕುಟುಂಬದ ಸಾಲ ತೀರಿಸಲು ಎಳೆ ಮಕ್ಕಳನ್ನು ಕುರಿ ಕಾಯುವ ಕಾಯಕ್ಕೆ ಕಳಿಸುವದು ಹಿರಿಯರ ಸುಲಭದ  ಆಯ್ಕೆ. ಶಾಲೆಗೆ ಹೋಗಿ ಏನು ಮಾಡೋದಿದೆ ಎಂಬುದಕ್ಕಿಂತ ತುರ್ತಕ್ಕೆ ಪಡೆದ  ಸಾಲ ತೀರಿಸಲು  ಇದೊಂದು ಉಪಾಯ ಅಷ್ಟೇ ! ಮತ್ತೆಲ್ಲಿಯೂ ಬದುಕು ಬೆಳೆಯದಂತೆ  ಸಾಲದ ಸರಪಳಿ ಮಕ್ಕಳ ಕಾಲು  ಹಿಡಿಯುತ್ತಿತ್ತು,  ಬಡ ಕುಟುಂಬದ ಮಕ್ಕಳು ಶಾಲೆ ತಪ್ಪಿಸಿ  ಬಿಸಿಲಲ್ಲಿ  ಒಣಗುತ್ತಿದ್ದ  ದೃಶ್ಯಗಳು  ಕಾಣುತ್ತಿದ್ದವು.

“ಆಪ್ಪ ಪಂಚಾಯಿತಿ ಮೆಂಬರ್ ಅದಾನ, ಚಹಾ ಅಂಗಡಿ ಇಟ್ಟು  ಜೀವನ ನಡೆದಿತ್ರಿ. ಆದರ ಈಗ ಅಂಗಡಿ ಬಾಡಗಿ ಜಾಸ್ತಿ ಮಾಡಿದ್ರು, ಲುಕ್ಸಾನಾಗಿ  ಬದುಕು ಕಷ್ಟಕ್ಕೆ ಬಂತ್ರಿ , ಅಕ್ಕ ಮಂಜುಳಾನ ಮದುವೆ ಮಾಡಬೇಕು, ಖರೀದಿ ಮಾಡಿದ ಮೂರು ಗುಂಟೆ ಜಾಗಕ್ಕೆ ೧೫ ಸಾವಿರ ಅಡ್ವಾನ್ಸ್ ಕೊಡಬೇಕು. ಆರನೇ ಕ್ಲಾಸ್ ಓದ್‌ತಿದ್ದೆ, ಶಾಲೆ ಬಿಡಬೇಕು ಅಂದ್ರು,  ನಾನು ಒಲ್ಲೆ ಅಂದೆ, ನಾಕ್ ದಿವಸ ಮುನಿಸಿ ಕುಳಿತೆ, ಕಡೇಗೆ ದಾರಿ ತೋಚಲಿಲ್ಲ,  ಮತ್ತೇನ ಮಾಡೋದ್ರಿ? ಸಾಲ ತೀರೋ ತನಕ ಕುರೀ ಕಾಯಬೇಕು ಅಂತ ಅಪ್ಪ ಹೇಳಾನ ! ಇಲ್ಲಿಗೆ ಬಂದ್ ನಿಂತೇನಿ” ಕತೆ ಎದುರಿಟ್ಟ  ಚುರುಕು ಮಾತು. ಲೆಕ್ಕ ಸರಳವಿದೆ,   ಒಂದು ವರ್ಷ ಎರಡು ಮಕ್ಕಳು ಕುರಿ ಕಾಯಲು ಹೋದರೆ  ೧೫ ಸಾವಿರ ಸಾವ್ಕಾರಿ ಸಾಲ ತೀರುತ್ತದೆ ! ಕಾಡು, ಕೆರೆ, ಗದ್ದೆ ಬಯಲಲ್ಲಿ  ಕೊರೆವ ಚಳಿ ಲೆಕ್ಕಿಸದೇ ಈ ಆಡುವ ಮಕ್ಕಳು ಕಾಯಕದಲ್ಲಿ ತಲ್ಲೀನ. ಚದುರಿ ಹೋಗುವ ಕುರಿಗಳನ್ನು ಮತ್ತೆ ಹಿಂಡಿಗೆ ತರಲು ಪುಟಾಣಿ ಹೆಜ್ಜೆಗಳು  ಓಡುತ್ತವೆ. ಆದರೆ ಇವರ ಬದುಕು ಮಾತ್ರ ಆರಕ್ಕೆ ಏರದೇ ಬಯಲಿನಲ್ಲಿಯೇ  ಉಳಿಯುತ್ತದೆ.  ‘ನಾಲ್ಕಾರು ಸಾರಿ ಅತ್ತರೆ ಒಮ್ಮೆ ಮನೆಗೆ ಹೋಗ್‌ಬೌದ್ರಿ, ನಾವು ಊರಾಗ ರೊಟ್ಟಿ ತಿಂದೋರು, ಇಲ್ಲಿ ಅನ್ನ ತಿನ್ನಬೇಕ್ರಿ, ನನ್ ತಮ್ಮ ಈರಣ್ಣ ದಿನಾ ಅನ್ನ ತಿಂದು ತಿಂದು ಬೇಜಾರು ಬಂದು ಅತ್ತು  ಅತ್ತು ವಾರದ ಹಿಂದೆ  ಊರಿಗೆ ಹೋದ್ನರಿ ‘ಮಾತಾಡುವಾಗ  ಮುತ್ಯಾನ ಕಣ್ಣಂಚಿನಲ್ಲಿ ನೀರಿತ್ತು. 

” ದಿನಕ್ಕೆ ೨೫-೨೬ ಕಿಲೋ ಮೀಟರ್ ನಡೀತೀನ್ರೀ ‘ ಹುಡುಗ ಹೇಳಿದಾಗ  ಸಣಕಲು ಕಾಲುಗಳು ಕಣ್ಣೆದುರಿದ್ದವು. ಹಾವೇರಿಯಿಂದ ಹೊರಟ  ಕುರಿಮಂದೆ  ಗದ್ದೆ ಬಯಲಲ್ಲಿ ಮೇಯುತ್ತ  ಮೇಯುತ್ತ ಬನವಾಸಿ, ಆನವಟ್ಟಿ, ಸೊರಬ, ಸಾಗರ, ಬ್ಯಾಡಗಿ, ಶಿವಮೊಗ್ಗ, ಚಿಕ್ಕಮಂಗಳೂರು ತಲುಪಬೇಕು. ಬರೋಬ್ಬರಿ ಮಳೆ ಹನಿ ಬೀಳುವ ಮುಂಚೆ ಕಡೂರು ಸೇರಬೇಕು. ಹಗಲಿಡೀ ಗದ್ದೆ ಬಯಲು, ಕಾಡು ಭೂಮಿ ಅಲೆದು ರಾತ್ರಿ ಹೊಲದಲ್ಲಿ ಠಿಕಾಣೆ. ಕುರಿ ತರುಬಿದ್ದಕ್ಕೆ  ರೈತರು ನೀಡುವ ಅಕ್ಕಿ ಕುರಿಗಾಹಿಗಳ ಅನ್ನದ ಅಧಾರ. ಐದು ಸಾವಿರ ಕುರಿ ಕಾಯುವ ದೊಡ್ಡ ಜವಾಬ್ದಾರಿ ಪುಟ್ಟನದು.  ಬರೋಬ್ಬರಿ ನಾಲ್ಕಡಿ ಎತ್ತರದ ದೈತ್ಯ ನಾಯಿ ” ರಂಗ ”  ಈ ಮುತ್ಯಾನ ಆಪ್ತ ಗೆಳೆಯ! ರಾತ್ರಿ ಕುರಿ ತರುಬಿ ಮಲಗಿದಾಗ ಚಿರತೆ, ಕಿರುಬಗಳ ಕಾಟ. ಕುರಿ ಬೇಟೆಗೆ ಹೊಂಚು ಹಾಕುವವರ ಎದೆ ನಡುಗಿಸಲು ರಂಗನ  ಗರ್ಜನೆ ಮುತ್ಯಾನಿಗೆ ಹೆಮ್ಮೆ. ಕಾಯುವ ಬಲ.

ಲೆಕ್ಕ ಹಾಕಿ ನೋಡಿ ಮುತ್ಯಾನ ತಂದೆಯ ೧೫ ಸಾವಿರ ಸಾಲ  ಮುತ್ಯಾನನ್ನು  ಒಂದು ವರ್ಷಕ್ಕೆ  ಬರೋಬ್ಬರಿ  ೮-೯ ಸಾವಿರ ಕಿಲೋ ಮೀಟರ್ ನಡೆಯಲು ಹಚ್ಚುತ್ತದೆ. ಮಳೆ ಸುರಿಯುವ ಮುಂಚೆ ಕಡೂರು ತಲುಪುವದು ಈ ಅಲೆಮಾರಿಯ ಗುರಿ. ಹಾವೇರಿಯಿಂಂದ ಅರಂಭವಾದ ಯಾತ್ರೆ ಮಲೆನಾಡು, ಅರೆಮಲೆನಾಡಿನ ಸೆರಗಿನಲ್ಲಿ ಸಾಗುತ್ತದೆ.  ಸಾವಿರಾರು ಹೊಲಗಳ ಕಳೆ ಮೇಯ್ದು ಕುರಿಗಳು ಬೆಳೆಯುತ್ತವೆ. ಹೊಲದ ಬೆಳೆ ಕಟಾವಾಗಿ ತಿಂಗಳೂಳಗೆ ಮಂದೆಗಳು ಹಾಜರ್ , ಕಳೆ ಗಿಡಗಳ ಮೇವು  ತಿನ್ನುತ್ತ ಆಹಾರವಾಗಿ ಹಿಂಂಡು ಬೆಳೆಯುತ್ತದೆ. ಮಕ್ಕಳ ಬಾಲ್ಯ ನುಂಗುತ್ತ  ಯಾರೋ ಬೆಳೆಯುತ್ತಾರೆ.  “ನಿನ್ನ ಮುಂದಿನ ಕನಸೇನು?”  ಮುತ್ಯಾನಲ್ಲಿ  ಪ್ರಶ್ನಿಸಿದೆ. ” ಸಾವ್ಕಾರು ವರ್ಷಕ್ಕೆ ೫ ಕುರಿ ಮರೀನ ನಂಗೆ ಕೊಡ್ತಾರ್‌ರಿ, ಅವ್ನ ಈ ಮಂದೆ ಜೊತೆ ಮೇಯಿಸ್ತೀನ್ರೀ, ಮುಂದೆ ನನ್ನವು ಮರಿ ಮಕ್ಕಳು ಬೆಳೆದು ಹಿಂಗ ೫ ಸಾವಿರ ಆಗ್‌ಬೇಕ್ರೀ!’  ಐದರಿಂದ ಐದು ಸಾವಿರ ಕುರಿ ಕಾಣುವ ಮುತ್ಯಾನ ಕನಸು ಎಷ್ಟು ವರ್ಷಕ್ಕೆ ಈಡೇರುತ್ತದೋ ಗೊತ್ತಿಲ್ಲ.  ಇಂದೊಂದು ಕನಸಿಗೆ ನಿತ್ಯ ೨೫ ಕಿಲೋ ಮೀಟರ್ ನಡೆಯಬೇಕು. ಎಷ್ಟು ಕಾಲ ಈ  ತ್ರಾಣ, ಸಂಯಮ!. ಕನಸು  ಕೈಗೂಡುತ್ತದಾ? ಮತ್ತೆ ಪ್ರಶ್ನಿಸುವದರೊಳಗೆ ಮುತ್ಯಾ ನನ್ನ ಕೈತಪ್ಪಿದ,  ತಪ್ಪಿದ ಕುರಿಗಳನ್ನು  ಹಿಂಡಿಗೆ ತರಲು  ಬಯಲಲ್ಲಿ  ಓಡುತ್ತಿದ್ದ!