ಹಿಂದೂಸ್ಥಾನಿ ಸಂಗೀತದ ಹಿರಿಯ ತಲೆಮಾರಿನವರಾದ ಬಳ್ಳಾರಿಯ ಜಾಲಿಬೆಂಚಿ ಗ್ರಾಮದ ಶ್ರೀ ದೊಡ್ಡ ಬಸವಾರ್ಯ ಗವಾಯಿಗಳು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಶಿಷ್ಯರು. ಅವರ ತಂದೆ ಲಿಂ. ವೀರಭದ್ರಯ್ಯನವರು ಸಂಗೀತ ಪ್ರೇಮಿಗಳು. ೧೯೨೦ರಲ್ಲಿ ಹುಟ್ಟಿದ ಈ ಗವಾಯಿಗಳು ೧೫ ವರ್ಷಗಳ ಕಾಲ ನಿರಂತರವಾಗಿ ಹಿಂದೂಸ್ಥಾನಿ ಗಾಯನವನ್ನು ವೀರೇಶ್ವರ ಪುಣ್ಯಾಶ್ರಮದಲ್ಲಿ ಅಭ್ಯಾಸಿಸಿ ಸಂಗೀತದ ಸೀನಿಯರ್ ದರ್ಜೆ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಧಾರವಾಡ ಆಕಾಶವಾಣಿಯಲ್ಲಿ ೧೯೫೬ ರಿಂದ ೧೯೭೦ರ ವರೆಗೆ ಅಂದರೆ ೧೪ ವರ್ಷಗಳ ಕಾಲ ದೊಡ್ಡ ಬಸವಾರ್ಯ ಗವಾಯಿಗಳು ತಮ್ಮ ಸಂಗೀತ ಕಾರ್ಯಕ್ರಮ ನೀಡಿ ಜನಮನ್ನಣೆ ಪಡೆದರು. ೧೯೫೦ರಲ್ಲಿ ಮದ್ರಾಸಿನ “ಹಿಸ್‌ ಮಾಸ್ಟರ್ಸ್ ವಾಯ್ಸ್” ಸಂಸ್ಥೆಯು ಗವಾಯಿಗಳ ಸಂಗೀತವನ್ನು ಧ್ವನಿಮುದ್ರಿಕೆಗಳಲ್ಲಿ ಹೊರತಂದಿತು. ಹಾಗೆಯೇ ೧೯೭೮ರಲ್ಲಿ ಮದ್ರಾಸಿನ ಸಂಗೀತ ಸಂಸ್ಥೆ ಗವಾಯಿಗಳ ವಚನ ಸಂಗೀತದ ಧ್ವನಿಸುರಳಿಗಳನ್ನು ಬಿಡುಗಡೆ ಮಾಡಿತು.

ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮುಂತಾದ ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ಗವಾಯಿಗಳ ಸಂಗೀತ ಕಾರ್ಯಕ್ರಮ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ರೀಶೈಲ ಜಗದ್ಗುರುಗಳಿಂದ “ಗಾನಕೋಕಿಲ ಪ್ರಶಸ್ತಿ” ಬಾಗಲಕೋಟೆ ಜಿಲ್ಲೆ ಇಳಕಲ್ಲು ಶ್ರೀ ವಿಜಯ ಮಹಾಸ್ವಾಮಿಗಳಿಂದ “ಸಂಗೀತ ಕಲಾನಿಧಿ ಪ್ರಶಸ್ತಿ”. ಬಳ್ಳಾರಿ ಜಿಲ್ಲೆ ಹೊಸಪೇಟೆಯ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿಗಳಿಂದ “ಸಂಗೀತ ರತ್ನ ಪ್ರಶಸ್ತಿ”. ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರುಗಳಿಂದ “ಸಂಗೀತ ಶಿರೋಮಣಿ ಪ್ರಶಸ್ತಿ”. ಹೂವಿನ ಹಡಗಲಿ ಸೋಗಿ ಪುರ ವರ್ಗದವರಿಂದ “ಗಾನಶೇಖರ ಪ್ರಶಸ್ತಿ”. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಜನರಿಂದ “ಗಾನಕಲಾರತ್ನ ಪ್ರಶಸ್ತಿ”. ಬಳ್ಳಾರಿ ಜಿಲ್ಲೆಯ ಜೆಳಗುರ್ಕಿಯ (ಏರ್ರಿ‍ ಸ್ವಾಮಿ ಮಠ) ಆಶ್ರಯದಲ್ಲಿ ಸನ್ಮಾನ ಈ ಕಲಾವಿದರಿಗೆ ದೊರೆತಿದೆ. ಈ ಕಲಾವಿದರ ಧ್ವನಿಮುದ್ರಿಕೆಗಳಲ್ಲಿ ‘ನಗೆಯು ಬರುತಿಗೆ ಎನಗೆ, ನಗೆಯು ಬರುತಿದೆ’ ಮತ್ತು ದೇವಲೋಕ ಮರ್ತ್ಯ ಲೋಕವೆಂಬ ವಚನಗಳು ಜನಪ್ರಿಯವಾಗಿವೆ. ಹಲವಾರು ಧಾರ್ಮಿಕ ಹಾಗೂ ಸಾರ್ವಜನಿಕ ಸಂಸ್ಥೆಗಳ ಪ್ರಶಸ್ತಿ – ಸನ್ಮಾನಗಳನ್ನು ಅನೇಕ ಬಿರುದುಗಳೊಂದಿಗೆ ಪಡೆದಿರುವ ಶ್ರೀ ದೊಡ್ಡ ಬಸವಾರ್ಯ ಗವಾಯಿಗಳನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮-೯೦ ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ‘ಕರ್ನಾಟಕ ಕಲಾತಿಲಕ’ ಬಿರುದನ್ನು ನೀಡಿ ಪುರಸ್ಕರಿಸಿದೆ.