ತಿಮಿಂಗಿಲಗಳನ್ನೆ ಗಳಕ್ಕನೆ ನುಂಗಿ
ಸದ್ದಿರದೆ ಗದ್ದುಗೆಯ ಮೇಲೆ ಕೂತವರ ಮಧ್ಯೆ
ಇವನೊಬ್ಬ ಒಣಕಲ ಮೀನು ಕದ್ದ
ಸಿಕ್ಕಿಬಿದ್ದ.

ಸುತ್ತ ಕೈಯ್ಯಲ್ಲಿ ಕಲ್ಲು ಹಿಡಿದು ಕಾದಿದ್ದೀರಿ ಸಾವಿರ ಮಂದಿ ;
ಹೇಳಿ, ಯಾರು ಎಸೆಯುತ್ತೀರಿ
ಮೊಟ್ಟ ಮೊದಲನೆ ಕಲ್ಲ ?
ಇದುವರೆಗು ಏನೇನೂ ತಪ್ಪು ಮಾಡದವರು.
ಮಾಡಿದ್ದರೂ ಸಿಕ್ಕಿಬೀಳದವರು.
ಸಿಕ್ಕಿಬಿದ್ದರೂ ಹೇಗೋ ನುಸಿದು ಪಾರಾದವರು,
ಹೇಳಿ,
ಯಾರು ಎಸೆಯುತ್ತೀರಿ ಮೊಟ್ಟಮೊದಲನೆ ಕಲ್ಲ ?

ಬನ್ನಿ, ಇನ್ನೂ ಮುಂದಕ್ಕೆ ಬನ್ನಿ ;
ನನ್ನಂಥವನ ಕೊಲ್ಲದೆ ನೀವು ಬದುಕುವುದಿಲ್ಲ ;
ನನ್ನಂಥವನನ್ನು ಕೊಲ್ಲದೆ, ಇದುವರೆಗು ನೀವು ಮಾಡಿದ್ದನ್ನು
ಮುಚ್ಚಲು ಬರುವುದಿಲ್ಲ,
ಇದು ಚರಿತ್ರೆಯ ಒಂದು ಭಾಗ
ಗುಣವಾಗದ ರೋಗ.

ಆದರೆ, ಇಷ್ಟನ್ನು ಬರೆದಿಟ್ಟುಕೊಳ್ಳಿ :
ನಟ್ಟಿರುಳು ನೀವು ನಡೆಸಿದ ಕೊಲೆಯ ರಕ್ತದ ಕಲೆಯ
ಬಿಚ್ಚಿ ತೋರಿಸುತ್ತದೆ ನಾಳಿನ ಬೆಳಗು ;
ಆಮೇಲೆ ಅರೇಬಿಯಾದ ಪರಿಮಳವೆಲ್ಲವನ್ನೂ ಸುರಿದು
ಸಪ್ತಸಾಗರದಲ್ಲಿ ದಿನವೂ ತೊಳೆದರೂ
ಬೆಳ್ಳಗಾಗುವುದಿಲ್ಲ ನಿಮ್ಮೊಳಗು.