ಕಾಸಿನಷ್ಟಗಲ ಜಾಗದಲ್ಲೇ
ರೂಪಾಯಿ ದೌಲತ್ತು ನಿನಗೆ ;
ಮತ್ತೆ ಮೈದಾನದಲ್ಲಿ ಕುದುರೇ ಹತ್ತಿಸಿ ನಿನ್ನ
ಕೈಬಿಟ್ಟರಿನ್ನು ಗತಿಯೇನೊ ನಮಗೆ !

ನಿನ್ನ ತಲೆ ಹನ್ನೆರಡುಸಾವಿರದ ಐನೂರು ಅಡಿ
ಎತ್ತರದ ಬೆಟ್ಟದ ಮಂಡೆ,
ಹುಲ್ಲು ಹುಟ್ಟದ ಬರೀ ಗಾಳಿ-ಮೋಡಗಳ ಜಾರುಬಂಡೆ,
ಕೆಳಗೆರಡು ಗವಿ ಕಣ್ಣು;
ನಡು ಹಾದಿ ಹಿಡಿದು ಮೂಗಿನ ಕೆಳಗೆ ಬಂದರೆ ನೇರ
ಸದಾ ಗಂಟೆ ಬಾರಿಸುವ ನಾಲಗೆ.
ಯಾವಾಗಲೂ ಫೈರ್‌ಬ್ರಿಗೇಡ್ ಆಂಬ್ಯುಲೆನ್ಸ್
ವ್ಯಾನಿನಾತುರ ನಿನಗೆ.
ಯಾರೋ ಸಿಗರೇಟು ಸೇದಿ ಹೊಗೆ ಬಿಟ್ಟರೂ ಸಾಕು
ಒಂದಿಷ್ಟು ಎಡವಿ ತರಚಿಕೊಂಡರು ಸಾಕು
ನಿನ್ನ ಗಾಲಿಗಳಿಗಿಲ್ಲ ಎಂದಿಗೂ ಬ್ರೇಕು.

ಎಂಥ ಗೊಮ್ಮಟ ವಿಗ್ರಹದಲ್ಲೂ
ಬಿರುಕು ತೋರಿಸುವ ವಿಮರ್ಶಕ ವರೇಣ್ಯ
ನಿನ್ನ ಸುತ್ತಲೂ ಮೊಳೆಯುತಿದೆ ನೀನೇ
ನೆಟ್ಟು ನೀರೆರೆದು ಬೆಳೆಸಿದ ಕಂಟಕಾರಣ್ಯ.

ಚೆನ್ನಾಗಿ ನಡೆವ ಹೊಚ್ಚ ಹೊಸ ಯಂತ್ರಕ್ಕೆ
ಸದ್ದಿರದೆ ಒಂದೇ ಒಂದು ಹಿಡಿ ಮಳಲ ಸೇವೆಯ ಸಲಿಸಿ
ನಸುನಕ್ಕು ನಿಲ್ಲುವ ಭಾವುಕ.
‘ಸಂಭವಾಮಿ ಯುಗೇ ಯುಗೇ’ ಎಂದು
ಎಂದೋ ಉದ್ಘೋಷಿಸಿದ
ಶ್ವೇತ ಕೃಷ್ಣಕಾರಕ
ದೋಷೋದ್ಧಾರಕ.