ಪಮ್ಮಿ ಸಾಧು ಸ್ವಭಾವದ ಹುಡುಗಿ; ತುಂಬ ಒಳ್ಳೆಯವಳು. ಆದರೆ ಚಿನ್ನದ ಮೇಲೆ ಮಾತ್ರ ಭಾರೀ ಪ್ರೀತಿ ಅವಳಿಗೆ. ಬಗೆ ಬಗೆಯ ಚಿನ್ನದ ಆಭರಣಗಳು ತನಗೆ ಇರಬೇಕು, ಅವುಗಳನ್ನು ತಾನು ಧರಿಸುತ್ತಿರಬೇಕು. ತನ್ನ ಆಭರಣಗಳನ್ನು ಕಂಡು ಎಲ್ಲರೂ ಮೆಚ್ಚಬೇಕು; ತನ್ನನ್ನು ಹೊಗಳಬೇಕು. ಇದು ಅವಳ ಹಂಬಲವಾಗಿತ್ತು. ಚಿನ್ನದ ಹುಚ್ಚೇ ಅವಳಿಗೆ ಹಿಡಿದಿತ್ತು. ಯಾವಾಗಲೂ ಅವಳು ಆಭರಣಗಳ ಬಗೆಗೇ ಮಾತಾಡುತ್ತಿದ್ದಳು. ಚಿನ್ನದ ಕುರಿತೇ ಯೋಚಿಸುತ್ತಿದ್ದಳು. ತಾನು ಮುಟ್ಟಿದ್ದೆಲ್ಲ ಚಿನ್ನ ಆಗಿದ್ದರೆ…. ಎಷ್ಟು ಒಳ್ಳೆಯದಿತ್ತು! ಇಂಥ ಹುಚ್ಚು ಯೋಚನೆಗಳೇ ಮೂಡುತ್ತಿದ್ದುವು ಅವಳ ಮನಸ್ಸಿನಲ್ಲಿ. ಹೀಗಿರುವಾಗ ಒಂದು ದಿನ ಏನಾಯಿತು ಗೊತ್ತೇ?

ಪಮ್ಮಿ ಒಬ್ಬಳೇ ಮನೆಯಲ್ಲಿದ್ದಳು. ಅವಳು ದೇವರ ಪಠದೆದುರು ದೀಪ ಹಚ್ಚಿ ಇರಿಸಿದ್ದಳು. ಕೈಜೋಡಿಸಿ, ಕಣ್ಣುಮುಚ್ಚಿ, ಪ್ರಾರ್ಥನೆ ಮಾಡುತ್ತಿದ್ದಳು. ಆಗ ಫಕ್ಕನೆ ಅವಳ ಮನದಲ್ಲಿ ಮೂಡಿ ಬಂತು ಚಿನ್ನದ ನೆನಪು.

“ಹಿಂದಿನ ಕಾಲದಲ್ಲಿ ದೇವರು ಭಕ್ತರ ಎದುರು ಕಾಣಿಸಿಕೊಳ್ಳುತ್ತಿದ್ದರಂತೆ. ಭಕ್ತರಿಗೆ ವರಗಳನ್ನೂ ನೀಡುತ್ತಿದ್ದರಂತೆ. ಹಾಗೆ, ಈಗ ನನಗೂ ದೇವರು ಕಾಣಿಸಿಕೊಂಡಿದ್ದರೆ …? ನಾನು ಮುಟ್ಟಿದ್ದೆಲ್ಲ ಚಿನ್ನವಾಗುವಂತೆ ವರಕೊಟ್ಟಿದ್ದರೆ?… ಎಷ್ಟು ಬಂಗಾರದ ರಾಶಿ ಹಾಕಬಹುದಿತ್ತು! ಎಷ್ಟು ಆಭರಣಗಳನ್ನು ಧರಿಸಬಹುದಿತ್ತು….” ಹೀಗೆ ಸಾಗಿತ್ತು ಅವಳ ಯೋಚನೆ. ಅಷ್ಟರಲ್ಲಿ ವಿಶೇಷ ಸಂಗತಿಯೊಂದು ನಡೆದು ಹೋಯಿತು. ಏನದು?

ಪಮ್ಮಿಯ ಮನೆ ಜಗ್ಗನೆ ಬೆಳಗಿತು. ಬಂಗಾರದ ಬೆಳಕೊಂದು ಮನೆಯಲ್ಲಿ ತುಂಬಿಕೊಂಡಿತು. ಆ ಬೆಳಕಿನಲ್ಲಿ ನಗು ಮೊಗದ ದೇವರು ಅವಳೆದುರು ಕಾಣಿಸಿಕೊಂಡರು. “ಪಮ್ಮೀ, ನಿನಗೇನು ಆಸೆಯಿದೆ, ಕೇಳಮ್ಮಾ,. ನಿನ್ನಾಸೆಯನ್ನು ನಾನು ಪೂರೈಸುತ್ತೇನೆ” ಅವರು ಹೇಳಿದರು.

ಪಮ್ಮಿ ಕಣ್ಣರಳಿಸಿ ನೋಡಿದಳು. ಹೌದು, ದೇವರು ಅವಳೆದುರು ನಿಂತಿದ್ದಾರೆ! “ಏನು ಬೇಕಮ್ಮಾ, ಕೇಳಿಕೋ” ಎನ್ನುತ್ತಿದ್ದಾರೆ. ಅವಳಿಗೆ ಆಶ್ಚರ್ಯವಾಯಿತು. ಅದಕ್ಕಿಂತ ಹೆಚ್ಚು ಸಂತೋಷವೂ ಆಯಿತು.

“ದೇವರಿಗೆ ನನ್ನಾಸೆ ತಿಳಿದೇ ಇದೆ. ಆದರೆ ನನ್ನ ಬಾಯಿಂದಲೇ ಅದನ್ನು ಕೇಳುವ ಆಸೆ ಅವರಿಗೆ. ಹಾಗೇ ಆಗಲಿ. ನನ್ನಾಸೆಯನ್ನು ಹೇಳಿಯೇ ಬಿಡುತ್ತೇನೆ.” ಮನಸ್ಸಿನಲ್ಲೇ ಅವಳು ನಿಶ್ಚಯಿಸಿಕೊಂಡಳು. ಬಳಿಕ, “ದೇವಾ ನನಗೆ ತುಂಬ ಚಿನ್ನಬೇಕು. ನಾನು ಮುಟ್ಟಿದ್ದೆಲ್ಲ ಚಿನ್ನ ಆಗುವಂತೆ ವರಕೊಟ್ಟು ಬಿಡು. ಮತ್ತೇನೂ ಬೇಡುವುದಿಲ್ಲ” ಅವಳು ಪ್ರಾರ್ಥಿಸಿದಳು.

“ಒಳ್ಳೆಯದು, ನಿನ್ನಾಸೆ ನೆರವೇರಲಿ” ದೇವರು ಹೇಳಿದರು. ಹಾಗೆ ಹೇಳುತ್ತಿದ್ದಂತೆ, ಅವರು ಕಣ್ಮರೆಯಾದರು. ಪಮ್ಮಿ ಕಣ್ಣುಜ್ಜಿಕೊಂಡು, ಮತ್ತೆ ಮತ್ತೆ ನೋಡಿದಳು; ಸುತ್ತಮುತ್ತ ಕಣ್ಣಾಡಿಸಿದಳು. ಇಲ್ಲ, ದೇವರು ಎಲ್ಲೂ ಕಾಣಿಸಲಿಲ್ಲ. “ವರಕೊಟ್ಟ ದೇವರು ಕ್ಷಣಕಾಲವೂ ನಿಲ್ಲಲಿಲ್ಲ” ಪಮ್ಮಿ ತನಗೆ ತಾನೇ ಹೇಳಿಕೊಂಡಳು. ದೇವರು ಕೊಟ್ಟ ವರವನ್ನು ಪರೀಕ್ಷಿಸಬೇಕು ಎನಿಸಿತು ಅವಳಿಗೆ. ಆದರೆ ಅಷ್ಟರಲ್ಲೇ ಗೋಡೆಯ ಗಡಿಯಾರದತ್ತ ಹೊರಳಿತು ಅವಳ ನೋಟ. ಅವಳ ಎದೆ ಧಸಕ್ಕೆಂದಿತು. ಗಂಟೆ ಆಗಲೇ ೯-೪೦ ದಾಟಿತ್ತು.

“ಓಹ್‌, ಶಾಲೆಗೆ ಹೊತ್ತಾಯಿತು. ಮೊದಲು ಊಟ ತೀರಿಸಿಬಿಡುತ್ತೇನೆ.” ಅವಳು ಎಂದುಕೊಂಡಳು. ತತ್‌ಕ್ಷಣ ಅವಳು ಅಡುಗೆ ಮನೆಗೆ ನಡೆದಳು, ತನ್ನ ಊಟದ ತಟ್ಟೆಯನ್ನು ಕೈಗೆತ್ತಿ ಕೊಂಡಳು. ಅವಳ ಕೈ ಸೋಕಿದುದೇ ತಡ, ಊಟದ ತಟ್ಟೆ ಬಂಗಾರದ ತಟ್ಟೆಯಾಯಿತು! ಪಮ್ಮಿಗೆ ಖುಷಿಯೋ ಖುಷಿ.

“ಓಹ್‌, ದೇವರು ಕೊಟ್ಟ ವರ ನಿಜವಾಯಿತು!” ಅವಳು ಉದ್ಗರಿಸಿದಳು. ತಟ್ಟೆಯನ್ನು ಕೆಳಗಿಟ್ಟು, ಅನ್ನದ ಪಾತ್ರೆಗೆ ಕೈ ಹಾಕಿದಳು. ಅವಳು ಮುಟ್ಟಿದುದೇ ತಡ, ಅದು ಸಹ ಬಂಗಾರದ ಪಾತ್ರೆಯಾಯಿತು. ಪಮ್ಮಿಗಾದ ಸಂತೋಷ ಹೇಳಿತೀರದು. ಖುಷಿಯಿಂದಲೇ ಅವಳು ಸಟ್ಟುಗವನ್ನು ಕೈಗೆತ್ತಿಕೊಂಡಳು. ಅದು ಬಂಗಾರದ ಸಟ್ಟುಗವಾಯಿತು!

“ಹಾಂ, ಇದೂ ಬಂಗಾರದವಾಯಿತಲ್ಲಾ! ಇರಲಿ. ಇದರಿಂದಲೇ ಅನ್ನ ಹಾಕಿಕೊಳ್ಳುತ್ತೇನೆ.” ಅವಳೆಂದಳು; ಪಾತ್ರೆಯಲ್ಲಿದ್ದ ಅನ್ನಕ್ಕೆ ಸಟ್ಟುಗ ಹಾಕಿದಳು. ‘ಕಟಕ್‌’ ಸದ್ದು ಕೇಳಿಸಿತು. ಗಾಬರಿಗೊಂಡ ಅವಳು ಪಾತ್ರೆಯೊಳಗೆ ಇಣುಕಿ ನೋಡಿದಳು. ಅಲ್ಲಿ ಅನ್ನ ಇರಲಿಲ್ಲ; ಅನ್ನದ ಅಗುಳೆಲ್ಲ ಬಂಗಾರವಾಗಿತ್ತು!.

“ಅಯ್ಯೋ ದೇವರೇ, ಇದನ್ನು ಹೇಗೆ ತಿನ್ನಲಿ? ಅವಳು ತನ್ನನ್ನೇ ತಾನೇ ಕೇಳಿಕೊಂಡಳು. ಅವಳು ಹೆದರಿದಳು. ಅವಳ ಗಂಟಲ ಪಸೆ ಆರಿದಂತೆ ಅನಿಸಿತು . ಅವಳು ನೀರು ಕುಡಿಯ ಬಯಸಿ, ಒಂದು ತೋಠವನ್ನು ಎತ್ತಿಕೊಂಡಳು. ಅದೂ ಬಂಗಾರವಾಯಿತು. ಕುಡಿಯಲು ನೀರೆತ್ತಿಕೊಂಡಾಗ, ಅದು ಸಹ ಬಂಗಾರದ ನೀರಾಯಿತು.

“ಅಯ್ಯೋ ದೇವರೇ, ಇದೇನು ಆಗಿ ಹೋಯಿತು? ಇನ್ನು ನಾನು ಏನನ್ನು ತಿನ್ನಲಿ? ಏನನ್ನು ಕುಡಿಯಲಿ? ಹೇಗೆ ಜೀವ ಉಳಿಸಿಕೊಳ್ಳಲಿ?” ಹುಡುಗಿ ಗೋಳಾಡ ತೊಡಗಿದಳು. ಅವಳ ದೇಹ ಥರಗುಟ್ಟಿ ನಡುಗ ತೊಡಗಿತು.

ಆಗಲೇ ಪಮ್ಮಿಯ ಅಮ್ಮ ಒಳಗೆ ಬಂದರು. ‘ಕಾರ್ಖಾನೆಗೆ ಇಂದು ರಜೆ ಕೊಟ್ಟಿದ್ದಾರೆ. ನಾನು ಬೇಗನೆ ಬಂದುಬಿಟ್ಟೆ’ ಎಂದರು ಅವರು. ಅಮ್ಮನನ್ನು ಕಂಡುದೇ ತಡ, ಪಮ್ಮಿಗೆ ದುಃಖ ಒತ್ತರಿಸಿ ಬಂತು. “ಅಮ್ಮಾss” ಎನ್ನುತ್ತ ಅವಳು ಅತ್ತ ಧಾವಿಸಿದಳು. ಅಮ್ಮನನ್ನು ಬಿಗಿದಪ್ಪಿದಳು. ತತ್ ಕ್ಷಣ ಅವಳ ಅಮ್ಮನೂ ಬಂಗಾರದ ಬೊಂಬೆಯಾಗಿ, ನೆಲಕ್ಕೆ ಉರುಳಿದರು. ಪಮ್ಮಿಯ ತಲೆಗೆ ಸಿಡಿಲು ಬಡಿದಂತಾಯಿತು.

“ಅಯ್ಯೋ, ನನ್ನಮ್ಮನನ್ನು ನಾನೇ ಕೊಂದೆನೇ? ಇನ್ನು ನನ್ನ ಜೊತೆಗೆ ಇರುವವರು ಯಾರು? ಪ್ರೀತಿಯಿಂದ ನನ್ನನ್ನು ‘ಪಮ್ಮೀ” ಎಂದು ಕರೆಯುವವರು ಯಾರು? ನನಗೆ ಬೇಕದುದನ್ನು ಒದಗಿಸುವವರು ಯಾರು? ನಾನಿನ್ನು ಯಾರನ್ನು ನಂಬಿ ಬದುಕಲಿ? ನನ್ನ ಚಿನ್ನದ ಹುಚ್ಚಿನಿಂದ ಎಂಥ ಅನರ್ಥವಾಯಿತು! ದೇವಾ, ನನಗೆ ಅಮ್ಮ ಬೇಕು; ನನಗೆ ಅನ್ನಬೇಕು. ಚಿನ್ನಬೇಡ. ದಯವಿಟ್ಟು ನಿನ್ನ ವರವನ್ನು ಹಿಂದೆ ಪಡೆದುಕೋ. ನನ್ನ ತಪ್ಪನ್ನು ಕ್ಷಮಿಸಿ, ಕಾಪಾಡು ಅಳುತ್ತಲೇ ಅವಳು ಪ್ರಾರ್ಥಿಸಿಕೊಂಡಳು. ಅವಳ ದನಿ ನಡುಗುತ್ತಿ ಕಣ್ಣುಗಳಿಂದ ಕಂಬನಿ ಸುರಿಯುತ್ತಿತ್ತು. ಬಹಳ ಹೊತ್ತು ಅವಳು ಪ್ರಾರ್ಥಿಸುತ್ತಲೇ ಇದ್ದಳು.

“ಏನಮ್ಮಾ, ನೀನು ಕೇಳಖಿದ ವರ ನಿನಗೆ ಸಿಗಲಿಲ್ಲವೇ. ಇನ್ನೂ ಯಾಕೆ ಅಳುತ್ತಿದ್ದೀಯಾ?” ದಿನ ಕೇಳಿ, ಪಮ್ಮಿ ಕಣ್ಣು ತೆರೆದಳು. ಎದುರಿಗೆ ದೇವರು ನಿಂತಿದ್ದರು.

“ದೇವಾ, ನಾನು ಬುದ್ಧಿ ಇಲ್ಲದವಳು. ಹಾಗಾಗಿ ಎಲ್ಲಕ್ಕಿಂತ ಚಿನ್ನ ಮುಖ್ಯ ಎಂದುಕೊಂಡಿದ್ದೆ. ಕೇಳಬಾರದ ವರ ಕೇಳಿ, ತಪ್ಪು ಮಾಡಿದ್ದೆ. ನನಗೀಗ ಬುದ್ಧಿ ಬಂದಿದೆ. ಚಿನ್ನಕ್ಕಿಂತ ಅನ್ನ ಮುಖ್ಯ, ಅಮ್ಮ ಮುಖ್ಯ ಎನ್ನುವುದು ಅರ್ಥವಾಗಿದೆ. ದಯವಿಟ್ಟು  ನಿಮ್ಮ ವರವನ್ನು ಹಿಂದೆ ಪಡೆಯಿರಿ, ನನ್ನ ತಪ್ಪನ್ನು ಕ್ಷಮಿಸಿರಿ” ದೈನ್ಯದಿಂದ ಮತ್ತೆ ಅವಳು ಬೇಡಿಕೊಂಡಳು.

“ಹೌದು ಮಗೂ, ಬದುಕಿಗೆ ಚಿನ್ನಕ್ಕಿಂತ ಅನ್ನ ಮುಖ್ಯ; ಪ್ರೀತಿ ಮುಖ್ಯ ಮುಖ್ಯ. ಕೊನಗೆಗೂ ಈ ಸತ್ಯವನ್ನು ನೀನು ತಿಳಿದುಕೊಂಡೆಯಲ್ಲಾ ನನಗೆ ಸಂತೋಷವಾಗಿದೆ. ನಿನಗೆ ಕೊಟ್ಟ ವರವನ್ನು ಹಿಂದೆ ಪಡೆದಿದ್ದೇ ನಿನ್ನನ್ನು ಕ್ಷಮಿಸಿದ್ದೇನೆ. ಅತಿ ಆಸೆಯನ್ನು ಬಿಡು. ಎಲ್ಲರನ್ನೂ ಪ್ರೀತಿಸು ಗುಣವಂತೆಯಾಗಿ ಬಾಳು.” ದೇವರು ಪಮ್ಮಿಯನ್ನು ಹರಸಿದರು.

ಆಗಲೇ, “ಬಕ್‌ ಬಕ್‌ ಬೌ” ಮನೆಯ ನಾಯಿ ಬೊಗಳಿತು. ನಿದ್ದೆಯಲ್ಲಿದ್ದ ಪಮ್ಮಿಗೆ ಎಚ್ಚರಾಯಿತು. ಅವಳೊಂದು ಕನಸು ಕಂಡಿದ್ದಳು. ಎಂದೋ ಒಮ್ಮೆ ಅವಳು ಕೇಳಿದ್ದ ಕತೆ, ಕನಸಿನಲ್ಲಿ ಪುನರಾವರ್ತನೆಗೊಂಡಿತ್ತು.

* * *