ಮೇ ತಿಂಗಳ ಕೊನೆಯ ವಾರ ಅದು. ಶಾಲೆಗೆ ರಜೆ ಇತ್ತು. ಆದರೂ ಕೆಲವು ಮಕ್ಕಳ ಅಂದು ಶಾಲೆಯತ್ತ ಧಾವಿಸುತ್ತಿದ್ದರು. ಕಾರಣ ಗೊತ್ತೇ? ಅಂದು ಏಳನೆಯ ತರಗತಿಯ ಮಕ್ಕಳ ಪರೀಕ್ಷಾ ಫಲಿತಾಂಶ ಹೊರಬೀಳಲಿತ್ತು. ಯಾರು ಪಾಸು? ಯಾರು ನಪಾಸು? ತಿಳಿವ ಕುತೂಹಲ ಅವರಿಗಿತ್ತು.

ಮಕ್ಕಳು ಶಾಲೆಗೆ ಬಂದರು. ಮುಖ್ಯ ಗುರುಗಳ ಕೋಣೆಯ ಹೊರಗೆ ಕರಿಹಲಗೆಯೊಂದನ್ನು ನಿಲ್ಲಿಸಿದ್ದರು. ಅದರಲ್ಲಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದರು. ವಿದ್ಯಾರ್ಥಿಯ ನೋಂದಣಿ ಸಂಖ್ಯೆ, ಹೆಸರು, ಪಡೆದ ಅಂಕಗಳು, ಫಲಿತಾಂಶ – ಇತ್ಯಾದಿ ವಿವರಗಳೆಲ್ಲ ಅಲ್ಲಿದ್ದವು. ಮಕ್ಕಳು ತಾವು ಪಡೆದ ಅಂಕಗಳು ಮತ್ತು ಫಲಿತಾಂಶ ಈ ವಿವರಗಳನ್ನು ಮೊದಲಿಗೆ ನೋಡಿಕೊಂಡರು. ಮತ್ತೆ ತಮ್ಮ ಸಹಪಾಠಿಗಳ ಸಾಧನೆ – ಫಲಿತಾಂಶಗಳ ವಿವರ ಸಂಗ್ರಹಿಸಿದರು.

ಆಗಲೇ, “ಓಹ್‌, ಎಲ್ಲರೂ ಪಾಸಾಗಿದ್ದಾರೆ. ಗೋಪುಗೆ ಮೊದಲ ರ್ಯಾಂಕ್‌ ಬಂದಿದೆ” ಒಬ್ಬ ಉದ್ಗರಿಸಿದ.

“ಹಾಂ, ಹೌದು; ಹೌದು. ಗೋಪುಗೆ ಫಸ್ಟ್‌ ರ್ಯಾಂಕ್‌, ೯೮% ಸರಾಸರಿ ಅಂಕಗಳು!” ಇನ್ನೊಬ್ಬ ದನಿಗೂಡಿಸಿದ.

“ಗೋಪು ಫಸ್ಟ್‌, ಗೋಪು ಫಸ್ಟ್‌” ಇನ್ನು ಕೆಲವರು ಕೂಗಿ ಹೇಳಿದರು. “ಏಯ್‌, ಗೋಪೂ, ಕೊಡು ಕೈ” ಎಂದು ಗೋಪುನ ಕೈಕುಲುಕಿದರು ಮತ್ತೆ ಕೆಲವರು.

ಎಲ್ಲರಿಗಿಂತ ಮೊದಲು ಗೋಪುನ ಕೈಕುಲುಕಿ, ಅಭಿನಂದನೆ ಹೇಳಿ, ಅವನನ್ನು ತಬ್ಬಿ ಕೊಂಡವನು ಶಂಕರ್, ಗೋಪುನ ಆತ್ಮೀಯ ಗೆಳೆಯ ಅವನು; ನೆರೆಮನೆಯವನು ಕೂಡ.

“ಹಾಂ, ಇನ್ನು ಹೈಸ್ಕೂಲಿಗೆ ಅರ್ಜಿ ಹಾಕಬಹುದಲ್ಲ? ಒಬ್ಬ ಕೇಳಿದ. “ಹೌದು, ಹೌದು. ತಡಮಾಡಿದರೆ ಸೀಟು ಸಿಗುವುದೆ ಕಷ್ಟವಾದೀತು” ಎರಡನೆಯವ ಎಚ್ಚರಿಕೆ ನೀಡಿದ.

ಮತ್ತೆ ಯಾರು ಯಾವ ಶಾಲೆಗೆ ಸೇರುವುದು? ಅವರ ಆಯ್ಕೆ ಯಾವುದು? ಇಂಗ್ಲಿಷ್‌ ಮಾಧ್ಯಮವೇ? ಕನ್ನಡವೇ? ಇತ್ಯಾದಿ ವಿಚಾರಗಳತ್ತ ಅವರ ಮಾತು ಹೊರಳಿತು. ಅಷ್ಟರಲ್ಲಿ ಕೋಣೆಯೊಳಗಿದ್ದ ಮುಖ್ಯ ಅಧ್ಯಾಪಕರು ಹೊರಬಂದರು.

“ಪರೀಕ್ಷೆಯಲ್ಲಿ ನೀವೆಲ್ಲ ಚೆನ್ನಗಿ ಮಾಡಿದ್ದೀರಾ.. ಎಲ್ಲರೂ ತೇರ್ಗಡೆ ಹೊಂದಿದ್ದೀರಾ. ಅಭಿನಂದನೆಗಳು” ಅವರೆಂದರು. ಬಳಿ ಗೋಪುನ ಕಡೆ ತಿರುಗಿ, “ಗೋಪೂ ನೀನು ೯೮% ಅಂಕಗಳಿಸಿ, ಶಾಲೆಗೆ ಕೀರ್ತಿ ತಂದಿದ್ದೀಯಾ. ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಬೇಡ, ಮುಂದುವರಿಸು. ನಿನಗೆ ಒಳ್ಳೆಯದಾಗಲಿ” ಅವರು ಅವನ ಬೆನ್ನು ತಟ್ಟಿದರು. ಮನದುಂಬಿ ಅವನನ್ನು ಹರಸಿದರು. ಗೋಪುನ ಮುಖ ಅರಳಿತು. ಆದರೆ ಗುರುಗಳಿಗೆ ಏನು ಹೇಳಬೇಕೆಂದೇ ಅವನಿಗೆ ತೋಚಲಿಲ್ಲ. ಗುರುಗಳು ತಮ್ಮ ಕೊಠಡಿ ಸೇರಿದರು. ಮಕ್ಕಳು ಅಲ್ಲಿಂದ ಚದರಿದರು.

ಎಂದಿನಂತೆ, ಶಂಕರ್ ಮತ್ತು ಗೋಪು ಜತೆಗೂಡಿ ನಡೆಯತೊಡಗಿದರು. “ಗೋಪೂ, ನೀನು ಶಾಲೆಗೆ ಫಸ್ಟ್‌ ಬಂದಿದ್ದೀಯಾ. ನಿನ್ನ ಅಪ್ಪ ಅಮ್ಮ ಬಹಳ ಖುಷಿಪಟ್ಟಾರು. ಅದಿರಲಿ, ನೀನಿನ್ನು ಯಾವ ಶಾಲೆಗೆ ಸೇರುತ್ತೀಯಾ? ಶಂಕರ್ ಗೆಳೆಯನಿಗೆ ಪ್ರಶ್ನೆ ಹಾಕಿದ.

“ಏನು, ನಾನಿನ್ನು ಶಾಲೆಗೆ ಹೋಗುವುದೇ? ಆ ಪುಣ್ಯ ನನಗೆಲ್ಲಿದೆ ಹೇಳು? ನಮ್ಮಪ್ಪ ಮೊನ್ನೆಯೇ ತಾಕೀತು ಮಾಡಿದ್ದಾರೆ.” ಗೋಪು ಹೇಳಿದ.

“ಏನೆಂದು?” ಶಂಕರ್ ಕುತೂಹಲ ತೋರಿದ.

“ನಾನಿನ್ನು ಶಾಲೆಗೆ ಹೋಗಲಿಕ್ಕೆ ಎಂದು”

“ಯಾಕೋ, ಅವರು ಯಾಕೆ ಹಾಗೆ ಹೇಳ್ತಾರೆ?”

“ಯಾಕಂದ್ರೇ, ಶಾಲೆಗೆ ಹೋಗಲು ದುಡ್ಡು ಬೇಕಲ್ಲ? ಅದಕ್ಕೆ. ನನ್ನ ಅಪ್ಪನಲ್ಲಿ ದುಡ್ಡು ಎಲ್ಲಿದೆ ಹೇಳು?” ಗೋಪು ಕಾರಣ ತಿಳಿಸಿದ.

“ಏನೋ, ನಿನ್ನಪ್ಪ ಕೆಲಸಕ್ಕೆ ಹೋಗೋದಿಲ್ವ? ಅವರಿಗೆ ಸಂಬಳ ಸಿಗೋದಿಲ್ವಾ? ಆ ದುಡ್ಡನ್ನೆಲ್ಲ ಏನು ಮಾಡ್ತಾರೆ?” ಶಂಕರ್ ವಿಚಾರಿಸಿದ.

“ನನ್ನಪ್ಪ ಹೋಗೋದು ಕೂಲಿ ಕೆಲ್ಸಕ್ಕಲ್ವಾ? ಅದ್ರಲ್ಲೇ ಐದು ಮಂದಿಯ ನಮ್ಮ ಸಂಸಾರ ಸಾಗ್ಬೇಕಲ್ವಾ? ಅಂದಿನ ಸಂಪಾದನೇ ಅಂದಿಗೇ ಸರಿ. ಕೆಲ್ಸ ಸಿಕ್ಕದ ದಿನ ಊಟಕ್ಕೂ ಕಷ್ಟ. ಮತ್ತೆ ಶಾಲೆಗೆ ದುಡ್ಡು ಎಲ್ಲಿಂದ ಬರ್ಬೇಕು? ನನ್ನನ್ನು ಅವರು ಇಷ್ಟು ದಿನ ಶಾಲೆಗೆ ಕಳ್ಸಿದ್ದೇ ಹೆಚ್ಚು” ಗೋಪು ವ್ಯಥೆ ತೋಡಿಕೊಂಡ.

“ಏನೋ, ನಿನ್ನ ಅಮ್ಮ ಕೆಲ್ಸಕ್ಕೆ ಹೋಗೋದಿಲ್ವ?’ ಶಂಕರ್ ಕೇಳಿದ. “ಸಣ್ಣ ಮಗು ಉಂಟಲ್ಲ? ಅದನ್ನು ಬಿಟ್ಟು, ಅವನು ಹೇಗೆ ಕೆಲ್ಸಕ್ಕೆ ಹೋಗ್ತಾಳೆ?” ಗೋಪು ಮರುಪ್ರಶ್ನೆ ಹಾಕಿದ.

“ಹೈಸ್ಕೂಲ್‌ ಮಕ್ಳಿಗೂ ಸಂಬಳ ಇಲ್ಲಾಂತ ಕೇಳಿದ್ದೆನಲ್ಲಾ?

ಇಂಗ್ಲೀಷ್‌ ಮೀಡಿಯಮ್‌ ಸ್ಕೂಲಲ್ಲಿ ಮಾತ್ರ ಸಂಬಳ ಕೊಡ್ಲಿಕ್ಕಿದೆ. ಕನ್ನಡ ಶಾಲೆಯಲ್ಲಿ ಇಲ್ಲಾಂತ ಯಾರೋ ಹೇಳಿದ ಹಾಗಿತ್ತು” ಶಂಕರ್ ತಾನು ತಿಳಿದುದನ್ನು ಹೇಳಿದ.

“ಅದು ಹಾಗಲ್ಲ ಶಂಕರ್. ಕನ್ನಡ ಶಾಲೆಯಲ್ಲೂ ನಾವು ಸೇರುವಾಗ ರೂಪಾಯಿ ಮುನ್ನೂರು-ನಾಲ್ಕು ನೂರು ಕಟ್ಲಿಕ್ಕಿದೆ. ನಾನು ವಿಚಾರಿಸಿ ಬಂದಿದ್ದೇನೆ.” ಉತ್ತರಿಸಿದ ಗೋಪು.

“ಅಂದ್ರೆ, ನಿಂಗೆ ನಿಜವಾಗ್ಲೂ ಕಲೀಲಿಕ್ಕೆ ಮನಸ್ಸಿದೆ. ದುಡ್ಡಿನ ಕಾರಣಕ್ಕಾಗಿ ಅಪ್ಪು ಒಪ್ಪುತ್ತಿಲ್ಲ? ಹೌದಲ್ಲ?” ಶಂಕರ್ ಕೇಳಿದ.

“ಹೌದು” ಗೋಪು ಒಪ್ಪಿಕೊಂಡ.

“ದುಡ್ಡು ನಾನು ಕೊಡೋ ಹಾಗಿದ್ರೆ, ನೀನು ಹೈಸ್ಕೂಲ್‌ಗೆ ಬರ್ತೀಯಾ? ಅದ್ಕೆ ನಿನ್ನಪ್ಪ ಒಪ್ಪಿಕೊಳ್ತಾರಾ?” ಶಂಕರ್ ಮತ್ತೆ ವಿಚಾರಿಸಿದ.

“ನಾನಂತೂ ಹೈಸ್ಕೂಲ್‌ ಸೇರಲು ಸಿದ್ಧ ಇದ್ದೇನೆ. ಅಪ್ಪನೂ ಒಪ್ಪಿಕೊಳ್ತಾರೆ. “ದುಡ್ಡು ಇದ್ದಿದ್ರೆ ನಾನೂ ನಿನ್ನ ಶಾಲೆಗೆ ಸೇರ್ಸಿ ಬಿಡ್ತಿದ್ದೆ” ಎಂದು ಅವ್ರೇ ಮೊನ್ನೆ ಹೇಳಿದ್ರು. ಅರ್ದಿಲಿ, ನೀನೂ ನನ್ನ ಹಾಗೆ ಶಾಲೆಗೆ ಹೋಗೋ ಹುಡ್ಗ. ನಿಂಗೆ ದುಡ್ಡು ಎಲ್ಲಿಂದ ಬರ್ಬೇಕು? ಅಷ್ಟು ದುಡ್ಡು ಯಾರು ಕೊಡ್ತಾರೆ ಹೇಳು” ಗೋಪು ವಾದಿಸಿದ.

“ಯಾರು ಕೊಡ್ತಾರೋ ಬಿಡ್ತಾರೋ ಮತ್ತೆ ನೋಡೋಣ.

ದುಡ್ಡಿನ ಏರ್ಪಾಡು ನಾನು ಮಾಡಿದ್ರೆ, ನೀನು ನನ್‌ ಜೊತೆ ಹೈಸ್ಕೂಲ್‌ಗೆ ಬರ್ತೀಯಾ. ನೆಪ ಹೇಳಿ ಜಾರಿಕೊಳ್ಳೋದಿಲ್ಲ. ಎಲ್ಲಿ, ಭಾಷೆ ಕೊಡು” ಶಂಕರ್ ಕೈ ಮುಂದೆ ಮಾಡಿದ.

“ಹೂಂ ಬರ್ತೀನಿ” ಗೋಪು ಮಾತು ಕೊಟ್ಟ. ಆದರೂ ಅವನಿಗೆ ಶಂಕರ್ ನ ಮಾತಿನಲ್ಲಿ ನಂಬಿಕೆ ಬರಲಿಲ್ಲ. “ಯಾವುದಕ್ಕೂ ದುಡ್ಡು ಬೇಕಲ್ಲಪ್ಪಾ. ಅದಿಲ್ಲದೆ ಕನಸುಕಟ್ಟೋದ್ಯಾಕೆ?” ನಿರಾಸೆಯಿಂದಲೇ ಅವನು ಹೇಳಿದ.. ಅಷ್ಟರಲ್ಲಿ ಅವರು ತಮ್ಮ ಮನೆ ಬಳಿಗೆ ಬಂದಿದ್ದರು. “ಟಾ ಟಾ” ಹೇಳುತ್ತಾ ಅವರು ಪರಸ್ಪರ ಬೀಳ್ಕೊಂಡರು.

* * *

ಶಂಕರ್ ತನ್ನ ಮನೆಬಾಗಿಲಿಗೆ ಬಂದ. ಅವನ ಅಮ್ಮ ಬಾಗಿಲಲ್ಲೇ ನಿಂತಿದ್ದರು. “ಏನೋ ಶಂಕ್ರಾ, ನಿಮ್ಮ ಪರೀಕ್ಷಾ ಫಲಿತಾಂಶ ಗೊತ್ತಾಯ್ತೇ?” ಅವರು ಕೇಳಿದರು.

“ಹೌದಮ್ಮಾ ನಾನು ಪಾಸಾಗಿದ್ದೇನೆ. I ಕ್ಲಾಸ್‌ ಬಂದಿದೆ. ನಮ್ಮ ಶಾಲಾ ಮಕ್ಕಳು ೧೦೦% ಫಲಿತಾಂಶ ತಂದಿದ್ದಾರೆ. ನಮ್ಮ ಆಚೆಮನೆ ಗೋಪು ಇದ್ದಾನಲ್ಲ? ಅವನು ಮೊದಲ ರ್ಯಾಂಕ್‌ ಪಡೆದಿದ್ದಾನೆ. ೯೮% ಅಂಕಗಳು ಬಂದಿವೆ ಅವನಿಗೆ” ಶಂಕರ್ ವರದಿ ಒಪ್ಪಿಸಿದ.

“ಹೌದೇ? ಬಹಳ ಸಂತೋಷ. ಅಂತೂ ನೀವೆಲ್ಲರೂ ಪಾಸಾದಿರಲ್ಲ?” ಅಮ್ಮ ತೃಪ್ತಿ ವ್ಯಕ್ತಪಡಿಸಿದರು. ಅಷ್ಟರಲ್ಲೇ ಶಂಕರ್ ನ ಅಪ್ಪ ಮನೆಗೆ ಬಂದರು. “ಶಂಕರ್ ಪಾಸ್‌ ಅಂತೆ. I ಕ್ಲಾಸ್‌ ಬಂದಿದೆಯಂತೆ. ಫಸ್ಟ್‌ ಕ್ಲಾಸಿನಲ್ಲಿ ಪಾಸಾದ್ರೆ ಅವನಿಗೆ ವಾಚ್‌ ತಂದು ಕೊಡುತ್ತೇನೆ ಎಂದಿದ್ದಿರಲ್ಲ? ಅವನಿಗೆ ಅದನ್ನು ಕೊಡಿಸಿಬಿಡಿ”

ಅಪ್ಪ, ಮಗನಿಗೆ ಕೊಟ್ಟ ಮಾತನ್ನು ಅವರು ನೆನಪಿಸಿದರು. “ಏನು, ಶಂಕರ್ I ಕ್ಲಾಸಿನಲ್ಲಿ ಪಾಸೇನು? ತುಂಬ ಸಂತೋಷ. ನಾಳೆನೇ ಶಂಕರ್ ಹೈಸ್ಕೂಲಿಗೆ ಹೋಗಬೇಕು. ದಾಖಲಾತಿ ಅರ್ಜಿ ನಮೂನೆಯನ್ನು ಅಲ್ಲಿಂದ ಪಡೆದುಕೊಳ್ಳಬೇಕು. ಹೈಸ್ಕೂಲಿಗೆ ಅರ್ಜಿ ಸಲ್ಲಿಸಬೇಕು. ಮುಂದಿನ ವಾರ ನಾನು ಮಂಗಳೂರಿಗೆ ಹೋಗಲಿದ್ದೇನೆ. ಆಗ ವಾಚ್‌ ತಂದುಕೊಡುತ್ತೇನೆ.” ಕುರ್ಚಿಯಲ್ಲಿ ಕೂಡುತ್ತ, ಹೇಳಿದರು ಅಪ್ಪ.

“ಅಪ್ಪಾ, ನಂಗೆ ಯಾವ ವಾಚ್‌ ತರ್ತೀರಿ? ಎಷ್ಟು ಬೆಲೆಯದು?” ಶಂಕರ್ ಕೇಳಿದ.

“ಹೆಚ್‌.ಎಂ.ಟಿ.” ವಾಚ್‌ ಸಾಕಲ್ಲ? ಬೆಲೆ ಮುನ್ನೂರೋ ನಾಲ್ಕುನೀರೋ ಇರಬೇಕು. ಅಲ್ಲಿ ವಿಚಾರಿಸಿದರೆ ಗೊತ್ತಾದೀತು” ಅವರೆಂದರು.

“ಅಪ್ಪಾ, ನಾನೊಂದು ಮಾತು ಹೇಳ್ತೇನೆ. ನೀವು ಕೋಪಿಸಿಕೊಳ್ಬಾರ್ದು ಮತ್ತೆ”. ಅಪ್ಪನ ಮುಖವನ್ನೇ ನೋಡುತ್ತ, ಹೇಳಿದ ಶಂಕರ್.

“ಏನೋ ಅದು? ಇನ್ನೂ ಹೆಚ್ಚಿನ ಬೆಲೆಯ ವಾಚ್‌ ಬೇಕೆ? ತರೋಣ, ಅದಕ್ಕೇನಂತೆ?” ಅಪ್ಪ ಅದಕ್ಕೂ ಸಿದ್ಧರಿದ್ದರು.

“ಅಲ್ಲಪ್ಪಾ, ವಾಚ್‌ನ ವಿಷಯವೇ ಇಲ್ಲ. ಅದು…ಅದು ಗೋಪುನ ಬಗ್ಗೆ” ಶಂಕರ್ ತಡವರಿಸಿದ.

“ಏನು? ಗೋಪುನ ಬಗ್ಗೆ! ಏನದು?” ಕೇಳಿದರು ಅಪ್ಪ.

“ಅಪ್ಪಾ ನಮ್ಮ ಗೋಪು ಪರೀಕ್ಷೆಯಲ್ಲಿ ಮೊದಲನೆ ರ್ಯಾಂಕ್‌ ಪಡೆದಿದ್ದಾನೆ . ೯೮% ಅಂಕಗಳು ಬಂದಿವೆ ಅವನಿಗೆ. ಆದರೇನು? “ಹೈಸ್ಕೂಲಿಗೆ ಸೇರಲು ದುಡ್ಡಿಲ್ಲ. ಇನ್ನು ಶಾಲೆ ಸಾಕು” ಎಂದಿದ್ದಾರಂತ ಅವನ ಅಪ್ಪ. ಅದಕ್ಕೆ… ಅದಕ್ಕೆ.. ನೀವು ಅವನಿಗೆ ಸಹಾಯ ಮಾಡ್ತೀರಾ ಅಂತ…’ ತಡೆದು ತಡೆದು ಹೊರಬಂದವು ಅವನ ಮಾತುಗಳು.

“ಏನೋ ಶಂಕರ್, ಊರ ಮಕ್ಕಳಿಗೆಲ್ಲ ನಾವು ಸಹಾಯ ಮಾಡುವುದೇ? ನಮಗದು ಸಾಧ್ಯವೇ?” ಅಪ್ಪ ಕೇಳಿದರು.

“ಅಪ್ಪಾ, ಗೋಪು ನಮ್ಮ ನೆರಮನೆಯವನು, ನನ್ನ ದೋಸ್ತಿ. ತುಂಬ ಜಾಣ ಹುಡುಗ ಅವನು. ಕಲಿಯಲು ಅವನಿಗೆ ಬಹಳ ಆಸೆ ಇದೆ. ಅವನ ಅಪ್ಪನಲ್ಲಿ ದುಡ್ಡಿಲ್ಲ. ಅವನೊಬ್ಬನಿಗೆ ನಾವು ಸಹಾಯ ಮಾಡೋಣ ಅಪ್ಪ. ಹಣವನ್ನೇ ಅವನಿಗೆ ಕೊಟ್ಟರಾಯಿತು. ನಾವಿಬ್ಬರೂ ಒಟ್ಟಿಗೆ ಶಾಲೆಗೆ ಹೋಗುತ್ತೇವೆ. ಒಟ್ಟಿಗೆ ಕಲಿಯುತ್ತೇವೆ. ಅವನು ಜೊತೆಗಿದ್ದರೆ, ನನಗೂ ಸಹಾಯವಾಗುತ್ತದೆ. ಆಗೋದಿಲ್ಲ ಹೇಳ್ಬೇಡಿ ಅಪ್ಪಾ” ಶಂಕರ್ ಅಂಗಲಾಚಿದ.

“ಅವನಿಗೆ ವಾಚ್‌ ಬೇಡಾಂತ ಅವನೇ ಹೇಳ್ತಿದ್ದಾನಲ್ಲ? ಆ ದುಡ್ಡನ್ನೇ ಗೋಪುಗೆ ಕೊಟ್ಟುಬಿಡಿ. ಆಗ ಶಂಕ್ರುಗೆ ಖುಷಿಯಾಗುತ್ತೆ. ಜಾಣನಾದ ಬಡ ವಿದ್ಯಾರ್ಥಿಗೆ ಸಹಾಯ ಮಾಡಿದಂತೆಯೂ ಆಗುತ್ತೆ” ಅಮ್ಮ ದನಿಗೂಡಿಸಿದರು.

“ಹಾಗೆ ಈ ವರ್ಷಕ್ಕೆ ಹಣಕೊಟ್ಟರೆ ಸಾಕೇ? ಮುಂದಿನ ವರ್ಷ ಕೊಡಬೇಡವೇ?” ಮತ್ತೆ ಬಂತು ಅಪ್ಪನ ಪ್ರಶ್ನೆ.

“ಅಪ್ಪಾ, ಅದಕ್ಕೆ ನಾನೊಂದು ಪರಿಹಾರ ಹೇಳ್ತೇನೆ. ಒಪ್ಪಿಕೊಳ್ತೀರಾ?” ಶಂಕರ್ ಕೇಳಿದ.

“ಏನದು?” ಅಪ್ಪ ವಿಚಾರಿಸಿದರು.

“ಅಪ್ಪಾ, ಹೈಸ್ಕೂಲಿಗೆ ಇಲ್ಲಿಂದ ಐದು ಕಿ.ಮೀ. ದೂರವಿದೆ. ಹೆಚ್ಚಿನ ಮಕ್ಕಳು ಬಸ್‌ ಹಿಡಿದೇ ಅಲ್ಲಿಗೆ ಹೋಗುತ್ತಾರೆ. ಗೋಪು ಜತೆಗಿದ್ದರು. ನಾವು ನಡೆದುಕೊಂಡೇ ಶಾಲೆಗೆ ಹೋಗುತ್ತೇವೆ. ಆಗ ಬಸ್ಸಿಗಾಗಿ ನನಗೆ ಕೊಡುವ ಹಣ ಉಳಿಯುತ್ತದಲ್ಲ? ಆ ಹಣವನ್ನು ಗೋಪುಗಾಗಿ ವೆಚ್ಚ ಮಾಡಿದರಾಯಿತು. ದಯವಿಟ್ಟು ಒಪ್ಪಿಕೊಳ್ಳಿ ಅಪ್ಪಾ. ಗೋಪುಗೆ ಅಷ್ಟಾದರೂ ಸಹಾಯ ಮಾಡೋಣ” ಶಂಕರ್ ಮತ್ತೆ ಬೇಡಿಕೊಂಡ. ತನ್ನ ಗೆಳೆಯನಿಗಾಗಿ ಎಷ್ಟು ಕಷ್ಟಪಡಲಿಕ್ಕೂ ಅವನು ಸಿದ್ಧನಾಗಿದ್ದ. ಎಂಥ ತ್ಯಾಗಕ್ಕೂ ಅವನು ಸಜ್ಜಾಗಿದ್ದ.

ಗೆಳೆಯನಿಗಾಗಿಯೇ ಅಲ್ಲವೇ ಅವನು ತನಗೆ ವಾಚ್‌ ಬೇಡ ಎಂದದ್ದು? ಗೆಳೆಯನಿಗಾಗಿಯೇ ಅಲ್ಲವೇ ಅವನು ದಿನಕ್ಕೆ ಹತ್ತು ಕಿ.ಮೀ. ನಡೆಯುತ್ತೇನೆ ಎಂದದ್ದು? ಗೆಳೆಯನ ಬಗ್ಗೆ ಶಂಕರ್ ಗೆ ಇದ್ದ ಪ್ರೀತಿ ಅಪ್ಪನ ಮನಸ್ಸನ್ನೂ ಮುಟ್ಟಿತು. ಅವರ ಹೃದಯವನ್ನು ತಟ್ಟಿತು. ತಮ್ಮ ಮಗನ ಬಗ್ಗೆ ಅವರು ಹೆಮ್ಮೆಪಟ್ಟರು. ಕ್ಷಣಕಾಲ ಯೋಚಿಸಿ ಅವರು ಹೇಳಿದರು, “ಆಗಲಿ ಮಗೂ, ನೀನು ಹೇಳಿದಂತೆ ಆಗಲಿ. ನೀವಿಬ್ಬರೂ ಚೆನ್ನಾಗಿ ಕಲಿಯಿರಿ. ಗೋಪುಗೆ ಸಹ ನನ್ನಿಂದಾಗುವ ಸಹಾಯ ನಾನು ಮಾಡುತ್ತೇನೆ. ಮುಂದಿನ ಮೂರು ವರ್ಷಗಳ ಕಾಲ ಅವನ ಶಿಕ್ಷಣದ ವೆಚ್ಚ ನಾನು ನೋಡಿಕೊಳ್ಳುತ್ತೇನೆ.”

ಅಪ್ಪನ ಒಪ್ಪಿಗೆಯ ಮಾತು ಕೇಳಿ ಶಂಕರ್ ನ ಮುಖ ಅರಳಿತು. ಅವನಿಗೆ ಸಂತೋಷ ಹೇಳತೀರದು. “ಈಗ ಬರ್ತೀನಿ ಅಮ್ಮಾ” ಎನ್ನುತ್ತ ಅವನು ಅಲ್ಲಿಂದ ಓಟಕಿತ್ತ. ಈ ಶುಭವಾರ್ತೆಯನ್ನು ಗೆಳೆಯನಿಗೆ ತಿಳಿಸುವ ತನಕ ಅವನ ಮನಕ್ಕೆ ಸಮಾಧಾನವಿರಲಿಲ್ಲ. ಅರೆಗಳಿಗೆಯೊಳಗೆ ಅವನು ಗೆಳೆಯನ ಮನೆಬಾಗಿಲಿಗೆ ಬಂದಿದ್ದ.

“ಗೋಪೂ, ಏ ಗೋಪೂ” ಶಂಕರ್ ಗಟ್ಟಿಯಾಗಿ ಕೂಗಿದ.

“ಹೂಂ, ಬಂದೇ..” ಎನ್ನುತ್ತ ಗೋಪು ಓಡಿಬಂದ.

“ಏನೋ ಶಂಕರಾ, ಇಷ್ಟು ಬೇಗೆ ಬಂದು ಬಿಟ್ಟೆಯಲ್ಲಾ! ಏನು ವಿಶೇಷ?” ಗೋಪು ವಿಚಾರಿಸಿದ.

“ಗೋಪೂ, ಹೈಸ್ಕೂಲಿಗೆ ನೀನು ಬಂದೇ ಬರ್ತೀಯಾ. ನಿನಗೆ ಸಹಾಯ ಮಾಡಲು ನಮ್ಮಪ್ಪ ಒಪ್ಪಿದ್ದಾರೆ ಕಣೋ. ನಾಳೇನೇ ನಾವು ಹೈಸ್ಕೂಲಿಗೆ ಪ್ರವೇಶ ಪತ್ರ ಒಪ್ಪಿಸೋಣ” ಶಂಕರ್ ಹೇಳಿದ.

“ಏನು, ನಿನ್ನಪ್ಪ ನನಗೆ ಸಹಾಯ ಮಾಡ್ತಾರೆಯೇ? ಮಾಡಿದರೂ ಮುಂದಿನ ಒಂದು ವರ್ಷಕ್ಕೆ ಮಾಡಿಯಾರು. ಮತ್ತೆ?” ಆತಂಕ ವ್ಯಕ್ತಪಡಿಸಿದ ಗೋಪು.

“ಮುಂದಿನ ಮೂರು ವರ್ಷಕ್ಕೂ ಅವರು ಸಹಾಯ ಮಾಡ್ತಾರೆ ಕಣೋ.

ನೀನು ನಂಬಬಹುದು” ಶಂಕರ್ ಭರವಸೆ ನೀಡಿದ.

“ಏನು, ಮೂರು ವರ್ಷವೂ ನಿನ್ನಪ್ಪ ಸಹಾಯ ಮಾಡ್ತಾರೆಯೇ?

ಅಷ್ಟು ದೊಡ್ಡ ಸಹಾಯ?” ಗೋಪು ಕೇಳಿದ. ಗೆಳೆಯನ ಮಾತಿನಲ್ಲಿ ಅವನಿಗೆ ಇನ್ನೂ ನಂಬಿಕೆ ಹುಟ್ಟಿರಲಿಲ್ಲ.

“ನೋಡು ಗೋಪೂ ನಾನು ಫಸ್ಟ್‌ ಕ್ಲಾಸಿನಲ್ಲಿ ಪಾಸಾದರೆ ೪೦ ರೂಪಾಯಿ ಬೆಲೆಯ ವಾಚ್‌ ಕೊಡಿಸುವುದಾಗಿ ನನ್ನಪ್ಪ ಹೇಳಿದ್ದರು. ನನಗೆ ವಾಚ್‌ ಬೇಡ. ಆ ಹಣವನ್ನು ಗೋಪುಗೆ ಕೊಡಿರಿ. ಅವನು ಹೈಸ್ಕೂಲ್‌ ಸೇರಲಿ” ಎಂದೆ ನಾನು. ಅವರು ಅದಕ್ಕೆ ಒಪ್ಪಿದರು.

“ಗೋಪು ಜೊತೆಗಿದ್ದರೆ ನಾನು ಸಹ ನಡೆದುಕೊಂಡೇ ಶಾಲೆಗೆ ಹೋಗುತ್ತೇನೆ. ಬಸ್ಸಿಗಾಗಿ ನನಗೆ ಕೊಡುವ ಹಣ ಉಳಿಯುತ್ತದಲ್ಲ’ ಆ ಹಣವನ್ನೇ ಗೋಪುನ ಮುಂದಿನ ಶಿಕ್ಷಣಕ್ಕೆ ಬಳಸಿಕೊಳ್ಳಿರಿ ಇದರಿಂದ ನನಗೆ ಸಂತೋಷವಾಗುತ್ತದೆ. ಗೋಪುಗೆ ಸಹಾಯವಾಗುತ್ತದೆ. ದಯವಿಟ್ಟು ಒಪ್ಪಿಕೊಳ್ಳಿರಿ” ಎಂದು ನಾನು ಅಪ್ಪನನ್ನು ಬೇಡಿಕೊಂಡೆ. ಅಮ್ಮನೂ ಅದಕ್ಕೆ ದನಿಗೂಡಿಸಿದರು. ಅಪ್ಪ ಒಪ್ಪಿಕೊಂಡರು. ಇದನ್ನು ನಿನಗೂ ತಿಳಿಸೋಣ ಎಂದು ಓಡಿ ಬಂದೆ. ಶಂಕರ್ ವಿವರಿಸಿದ. ಅವನು ಬಹಳ ಖುಷಿಯಲ್ಲಿದ್ದ. ಉತ್ಸಾಹ ಕಳೆ ಪುಟಿಯುತ್ತಿತ್ತು ಅವನ ಮುಖದಲ್ಲಿ.

“ಅಯ್ಯೋ ನನ್ನಪ್ಪಾ, ನನಗಾಗಿ ನೀನೆಷ್ಟು ತೊಂದರೆ ತೆಗೆದುಕೊಂಡೆಯೋ” ಕಷ್ಟದಲ್ಲಿ ಹೇಳಿ ಮುಗಿಸಿದ ಗೋಪು ಅಷ್ಟರಲ್ಲೇ ಅವನ ಗಂಟಲು ಕಟ್ಟಿಹೋಗಿತ್ತು. ಕಣ್ಣುಗಳು ತುಂಬಿ ಬಂದಿದ್ದವು. ಮಾತು ಮೌನವಾಗಿತ್ತು. ಅವನ ಕೈಗಳು ಮಾತ್ರ ಗೆಳೆಯ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡೇ ಇದ್ದವು.

ದೋಸ್ತಿ ಎಂದರೆ ಹೀಗಿರಬೇಕು. ಅಲ್ಲವೇ?

* * *