ಹರೀಶ ಸುಮಾರು ಹದಿಮೂರು ವಯಸ್ಸಿನ ಹುಡುಗ. ಅವನು ಹಳ್ಳಿಯಲ್ಲೇ ಹುಟ್ಟಿ ಬೆಳೆದವನು. ಹುಟ್ಟೂರಿನ ಶಾಲೆಯಲ್ಲಿ ಅವನು ಏಳನೆಯ ತರಗತಿ ಪಾಸು ಮಾಡಿದ್ದ. ಅವನ ಹಳ್ಳಿಯಲ್ಲಿ ಹೈಸ್ಕೂಲ್‌ ಇರಲಿಲ್ಲ. ಹಾಗಾಗಿ ಅವನು ಪಟ್ಟಣದಲ್ಲಿದ್ದ ತನ್ನ ಅಜ್ಜನ ಮನೆಗೆ ಬಂದಿದ್ದ. ಅಜ್ಜ ಅಜ್ಜಿಯರ ಜೊತೆ ಇದ್ದು, ಹೈಸ್ಕೂಲ್‌ ಶಿಕ್ಷಣ ಪಡೆಯ ಬಯಸಿದ್ದ.

ಹರೀಶನ ಅಜ್ಜಿ ಮನೆ ಇದ್ದುದು ಪಟ್ಟಣದ ವಸತಿ ಪ್ರದೇಶ ಒಂದರಲ್ಲಿ. ಮನೆಯ ಎದುರಲ್ಲೇ ರಸ್ತೆ ಹಾದುಹೋಗುತ್ತಿತ್ತು. ರಸ್ತೆಯ ಇಕ್ಕಡೆಗಳಲ್ಲೂ ನೂರಾರು ವಾಸದ ಮನೆಗಳಿದ್ದವು. ಎಲ್ಲ ಜಾತಿಮತಗಳ ಜನ ಅಲ್ಲಿ ವಾಸಿಸುತ್ತಿದ್ದರು. ವಸತಿ ಪ್ರದೇಶದ ಒಂದು ಕೊನೆಯಲ್ಲಿ ಒಂದು ದೇವಾಲಯವಿತ್ತು. ಇನ್ನೊಂದು ಭಾಗದಲ್ಲಿ ಒಂದು ಮಸೀದಿ ಇತ್ತು. ದೇವಾಲಯದ ಸುತ್ತಮುತ್ತ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಸೀದಿಯ ಪ್ರದೇಶದಲ್ಲಿ ಮುಸ್ಲೀಂ ಮನೆಗಳ ಸಂಖ್ಯೆ ಅಧಿಕವಾಗಿತ್ತು. ಆದರೂ ಅಲ್ಲಿ ಮತೀಯ ಕಲಹಗಳು ನಡೆಯುತ್ತಿರಲಿಲ್ಲ. ಜನರೆಲ್ಲ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಕೂಡಿ ಬಾಳುತ್ತಿದ್ದರು.

ಇಂಥ ಪಟ್ಟಣದಲ್ಲಿ ಕಳೆದ ವರ್ಷ ಒಂದು ಘಟನೆ ನಡೆಯಿತು. ಗಣೇಶೋತ್ಸವದ ನಾಲ್ಕನೆಯ ದಿನವದು. ಗಣಪತಿಯ ಮೆರವಣಿಗೆಯೊಂದು ರಸ್ತೆಯಲ್ಲಿ ಸಾಗುತ್ತಿತ್ತು. ಅದು ಮಸೀದಿಯ ಬಳಿಗೆ ಬಂದಾಗ, ಯಾರೋ ಕಿಡಿಗೇಡಿಗಳು ಮೆರವಣಿಗೆಯ ಮೇಲೆ ಕಲ್ಲು ತೂರಿದರು. ಮೆರವಣಿಗೆಯಲ್ಲಿದ್ದ ಜನ ಪ್ರತಿಭಟಿಸಿದರು. ಗಲಭೆಗೆ ಅಷ್ಟು ಸಾಕಾಯಿತು. ಎರಡು ದಿನಗಳ ಕಾಲ ಕಲ್ಲು ತೂರಾಟ ಬೆಂಕಿ ಹಚ್ಚುವುದು, ಹೊಡೆತ, ಚೂರಿ ಇರಿತ, ಮಾರಾಮಾರಿಗಳಂಥ ಅಪ್ರಿಯ ಘಟನೆಗಳು ಅಲ್ಲಿ ನಡೆದವು. ಶಾಲೆ ಕಾಲೇಜುಗಳು, ಅಂಗಡಿ ಹೋಟೆಲುಗಳು ಎಲ್ಲ ಮುಚ್ಚಿದವು. ಕೊನಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡರು. ಹಲವಾರು ಮಂದಿಗಳನ್ನು ಬಂಧಿಸಿದರು. ಹಿಂಸೆ ಮರುಕಳಿಸದಂತೆ ಎಚ್ಚರವಹಿಸಿದರು. ಆದರೆ ಅಷ್ಟರಲ್ಲೇ ಕೆಲವು ಮಂದಿ ಅಮಾಯಕರು ಜೀವ ಕಳೆದುಕೊಂಡಿದ್ದರು. ನಿರ್ದೋಷಿಗಳನೇಕರು ಪೊಲೀಸರ ಲಾಟಿ ಏಟು ತಿಂದಿದ್ದರು. ಬಹಳ ಜನ ಕಷ್ಟ ನಷ್ಟ ಅನುಭವಿಸಿದ್ದರು. ಕೋಮುಸೌಹಾರ್ದತೆ ಕದಡಿತ್ತು. ಪಟ್ಟಣಿಗರಲ್ಲಿ ಒಬ್ಬರನ್ನೊಬ್ಬರು ಸಂದೇಹದಿಂದ ನೋಡುವಂತಾಗಿತ್ತು. ಇಂಥ ಪರಿಸ್ಥಿತಿಯಿಂದ ಬಹಳ ಮಂದಿ ಹಿರಿಯರು, ಸಜ್ಜನರು ನೊಂದುಕೊಂಡಿದ್ದರು. ಅಂಥವರಲ್ಲಿ ಹರೀಶನ ಅಜ್ಜ ರಾಮರಾಯರೂ ಒಬ್ಬರು.

ರಾಮರಾಯರು ಒಬ್ಬ ನಿವೃತ್ತ ಶಿಕ್ಷಕರು. ಸುಮಾರು ನಾಲ್ಕು ದಶಕಗಳ ಕಾಲ ಅವರು ಶಿಕ್ಷಕರಾಗಿ ದುಡಿದಿದ್ದರು. ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದರು. ಇಬ್ಬರಿಗೂ ಮದುವೆಯಾಗಿತ್ತು. ಮಗಳು ದೂರದ ಹಳ್ಳಿಯಲ್ಲಿ ಗಂಡನ ಮನೆಯಲ್ಲಿದ್ದಳು. ಇಂಜಿನಿಯರ್ ಮಗ ತನ್ನ ಹೆಂಡತಿ ಮಕ್ಕಳೊಡನೆ ಅಮೇರಿಕಾದಲ್ಲಿದ್ದ. ಆಗಾಗ ಫೋನ್‌ ಮಾಡಿ,ಕ ಅವನ ಹೆತ್ತವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದ. ಮಗಳ ಮಗ ಹರೀಶ್‌ ಸದ್ಯ ಅವರ ಜೊತೆ ಇರಲು ಬಂದಿದ್ದ. ಇದರಿಂದ ಅಜ್ಜ ಅಜ್ಜಿಯರಿಗೆ ಸಂತೋಷವಾಗಿತ್ತು.

ಶಿಕ್ಷಕರಾಗಿದ್ದ ರಾಮರಾಯರು ಎರಡು ಕೋಣೆಗಳ ಸಣ್ಣ ಮನೆಯಲ್ಲೇ ದಿನ ಕಳೆದಿದ್ದರು. ಮಗ ಅಮೆರಿಕಾದಲ್ಲಿ ಉದ್ಯೋಗ ಹಿಡಿದ ಬಳಿಕ, ಅವನ ಒತ್ತಾಯಕ್ಕೆ ಮಣಿದು, ಅವರು ದೊಡ್ಡದೊಂದು ಮಾಳಿಗೆ ಮನೆ ಕಟ್ಟಿಸಿದ್ದರು. ಮಗನೇ ಅದಕ್ಕೆ ಹಣ ಕಳುಹಿಸಿದ್ದ. ಅವನಿಗಾಗಿ ಎಲ್ಲ ಅನುಕೂಲತೆಗಳುಳ್ಳ ದೊಡ್ಡ ಕೋಣೆಯೊಂದು ಮಾಳಿಗೆಯಲ್ಲಿತ್ತು. ಮಗನ ಉಪಯೋಗಕ್ಕೆಂದೇ ಅಪ್ಪ ಅದನ್ನು ಸಜ್ಜುಗೊಳಿಸಿದ್ದರು. ಹೊಸ ಮನೆಗೆ ಬಂದ ಮೇಲೂ ಅವರು ತಮ್ಮ ಹಳೆಮನೆಯನ್ನು ಉಳಿಸಿಕೊಂಡಿದ್ದರು. ಕೆಲವು ಸಮಯ ಅದು ಖಾಲಿಯಾಗಿಯೇ ಉಳಿದಿತ್ತು. ಎರಡು ವರ್ಷಗಳ ಹಿಂದೆ ಆ ಮನೆಯನ್ನೂ ಅವರು ಬಾಡಿಗೆಗೆ ಕೊಟ್ಟರು. ಮುಸ್ಲಿಂ ಕುಟುಂಬವೊಂದು ಅದರಲ್ಲಿ ವಾಸಿಸತೊಡಗಿತು. ಅದು ನಡೆದುದು ಹೀಗೆ-

ಒಂದು ದಿನ ಮಿಲಿಟರಿ ಪೋಷಾಕಿನ ಯುವಕನೊಬ್ಬ ಮಾಸ್ತರರ ಮನೆಗೆ ಬಂದ; “ಮಾಸ್ತರರು ಇದ್ದಾರೆಯೇ? ಅಂಗಳದಲ್ಲೇ ನಿಂತು ಅವನು ವಿಚಾರಿಸಿದ.

“ಇದ್ದಾರೆ, ಬನ್ನಿ, ಕೂತುಕೊಳ್ಳಿ. ಅಜ್ಜನನ್ನು ಕರೆಯುತ್ತೇನೆ’ ಎನ್ನುತ್ತ, ಹರೀಶ್‌ ಅಜ್ಜನನ್ನು ಕರೆದ. “ಅಜ್ಜಾ, ನಿಮ್ಮನ್ನು ಕೇಳಿಕೊಂಡು ಯಾರೋ ಬಂದಿದ್ದಾರೆ” ಅವನು ಹೇಳಿದ.

ಅಜ್ಜ ಹೊರಗೆ ಬಂದರು, “ಯಾರಪ್ಪಾ? ಏನು ಬೇಕಾಗಿತ್ತು?” ಎಂದು ವಿಚಾರಿಸಿದರು. ‘ನಮಸ್ಕಾರ ಸಾರ್’ ಎನ್ನುತ್ತ ಯುವಕ ಒಳಗೆ ಬಂದ. “ನನ್ನ ಪರಿಚಯ ಸಿಗಲಿಲ್ಲವೇ ಸಾರ್?” ಅವನು ಕೇಳಿದ.

“ಅದನ್ನೇ ಯೋಚಿಸುತ್ತಿದ್ದೇನೆ. ನೆನಪಿಗೆ ಬರುತ್ತಿಲ್ಲ” ಎಂದರು ಮಾಸ್ತರರು.

“ಸಾರ್, ನಾನು ಹಸನ್‌. ಬೆಳ್ಳೂರು ಶಾಲೆಯಲ್ಲಿ ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ. ಏಳನೆಯ ತರಗತಿಯಲ್ಲಿ ನೀವು ನನಗೆ ಕಲಿಸಿದ್ದಿರಿ” ಅವನು ತನ್ನ ಪರಿಚಯ ಹೇಳಿಕೊಂಡ. ‘ಕಳೆದ ಹತ್ತು ವರ್ಷಗಳಿಂದ ನಾನು ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ ಅವನು ಸೇರಿಸಿದ.

ಆಗ ಮಾಸ್ತರರಿಗೆ ಅವನ ಗುರುತು ಹತ್ತಿತು. ಅವನ ಬಗ್ಗೆ ಅವನ ಕುಟುಂಬದ ಬಗ್ಗೆ ಅವರು ಪ್ರೀತಿಯಿಂದ ವಿಚಾರಿಸಿದರು. ಕಾಫಿ ನೀಡಿ, ಅವನನ್ನು ಸತ್ಕರಿಸಿದರು.

“ಸಾರ್, ನಾನೊಂದು ಕೆಲಸದ ಮೇಲೆ ಬಂದಿದ್ದೇನೆ. ನಿಮ್ಮಿಂದ ನನಗೊಂದು ಸಹಾಯ ಆಗಬೇಕು” ಅವನು ವಿಜ್ಞಾಪಿಸಿಕೊಂಡ.

“ಹೇಳಪ್ಪಾ, ನನ್ನಿಂದ ಆಗುವ ಕೆಲಸ ಎಂದಾದರೆ, ಖಂಡಿತ ಮಾಡಿಕೊಡುತ್ತೇನೆ. ನನ್ನಿಂದ ಏನಾಗಬೇಕು ಹೇಳು?” ಅವರು ಕೇಳಿದರು.

“ಸಾರ್, ನನ್ನ ಮನೆ ಹಳ್ಳಿಯಲ್ಲಿದೆ. ನನ್ನ ಮಗ ಮೊನ್ನೆ ತಾನೇ ಏಳನೆಯ ತರಗತಿ ಪಾಸು ಮಾಡಿದ್ದಾನೆ. ಅವನನ್ನು ಹೈಸ್ಕೂಲಿಗೆ ಸೇರಿಸಬೇಕೆಂಬ ಆಸೆ ನನ್ನದು. ಆದರೆ ನಮ್ಮೂರಲ್ಲಿ ಹೈಸ್ಕೂಲ್‌ ಇಲ್ಲ. ಹೈಸ್ಕೂಲಿಗಾಗಿ ಇಲ್ಲಿಗೇ ಬರಬೇಕು. ಹಾಗಾಗಿ ನಾನು ಈ ಪಟ್ಟಣದಲ್ಲೇ ಬಿಡಾರ ಹುಡುಕುತ್ತಿದ್ದೇನೆ. ನನ್ನ ಮನೆಯಲ್ಲಿ ವಯಸ್ಸಾಗಿರುವ ನನ್ನ ಅಮ್ಮ, ನನ್ನ ಹೆಂಡತಿ ಮತ್ತು ಮಗ ಮೂರು ಮಂದಿ ಇದ್ದಾರೆ. ಸದ್ಯ ನಾನು ಕೆಲಸ ಮಾಡುವುದು ಕಾಶ್ಮೀರ ವಿಭಾಗದಲ್ಲಿ. ಒಂದೆರಡು ದಿನಗಳಲ್ಲಿ ನಾನು ಅಲ್ಲಿಗೆ ಹೋಗಿ, ಕೆಲಸಕ್ಕೆ ಸೇರಬೇಕಾಗಿದೆ. .ಈ ಊರಲ್ಲಿ ನನಗೆ ಪರಿಚಿತರು ಯಾರೂ ಇಲ್ಲ. ನಿಮ್ಮಲ್ಲಿ ಸಣ್ಣದೊಂದು ಮನೆ ಖಾಲಿ ಇದೆ ಎಂಬ ವಿಚಾರ ತಿಳಿದೆ. ಅದನ್ನು ನನಗೆ ನೀವು ಬಾಡಿಗೆಗೆ ಕೊಡಬೇಕು. ನನ್ನ ಕುಟುಂಬದ ಹಿತಚಿಂತಕರಾಗಿ , ರಕ್ಷಕರಾಗಿ ನೀವು ಇರಬೇಕು. ಇದು ನಿಮ್ಮಲ್ಲಿ ನನ್ನ ಪ್ರಾರ್ಥನೆ. ನಿಮ್ಮಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ, ಗೌರವವಿದೆ. ಹಾಗಾಗಿ ನಿಮ್ಮ ಬಳಿಗೆ ಬಂದಿದ್ದೇನೆ. ದಯವಿಟ್ಟು ಉಪಕಾರ ಮಾಡುವಿರಾ? ನೀವು ಹೇಳಿದ ಬಾಡಿಗೆ ನಿಮಗೆ ಸಿಗುವಂತೆ ವ್ಯವಸ್ಥೆ ಮಾಡುತ್ತೇನೆ. ಹೇಳಿ ಸಾರ್, ನನ್ನ ಪ್ರಾರ್ಥನೆಯನ್ನು ನಡೆಸಿಕೊಡುವಿರಾ?” ಅವನು ಬೇಡಿಕೊಂಡ.

ಮಾಸ್ತರರು ಕ್ಷಣಕಾಲ ಯೋಚಿಸಿದರು. “ಸರಿಯಪ್ಪಾ, ನೀನು ಹೇಳಿದ ಹಾಗೇ ಆಗಲಿ. ನೀನು ನನ್ನ ಶಿಷ್ಯ, ದೇಶ ರಕ್ಷಣೆಗಾಗಿ ದುಡಿವವನು. ನಿನಗೆ ನೆರವು ನೀಡಬೇಕಾದುದು ನನ್ನ ಕರ್ತವ್ಯ. ನನ್ನ ಮೊಮ್ಮಗ ಹರೀಶ್‌ ಸಹ ಇನ್ನು ಹೈಸ್ಕೂಲ್‌ ಸೇರುವವನು ನಿನ್ನ ಮಗನೂ ಬಂದರೆ, ಮತ್ತೂ ಒಳ್ಳೆಯದಾಯಿತು. ಅವರಿಬ್ಬರೂ ಜೊತೆಯಾಗಿ ಹೋಗಿಬರುತ್ತಾರೆ.” ಅವರು ಭರವಸೆ ನೀಡಿದರು.

ಮುಂದಿನ ಎರಡು ದಿನಗಳೊಳಗೆ ಹಸನ್‌ ತನ್ನ ಮನೆಯವರನ್ನು ಅಲ್ಲಿಗೆ ಕರೆತಂದಿದ್ದ. ಅವನ ರಜೆ ಆಗಲೇ ಮುಗಿದಿತ್ತು.

“ಸಾರ್, ನಾನು ನಾಳೆ ಬೆಳಗ್ಗೆ ಹೊರಟುಬಿಡುತ್ತೇನೆ. ಇನ್ನು ನನ್ನ ಕುಟುಂಬಕ್ಕೆ ನೀವೇ ಸಂರಕ್ಷಕರು. ನನ್ನ ಅಮ್ಮನಲ್ಲಿ ಹಣಕೊಟ್ಟಿರುತ್ತೇನೆ. ನಿಮ್ಮ ಮೊಮ್ಮಗನ ಜೊತೆ, ನಮ್ಮ ಹುಡುಗನನ್ನೂ ಶಾಲೆಗೆ ಸೇರಿಸಿ ಉಪಕಾರ ಮಾಡಬೇಕು ನೀವು” ಹಸನ್‌ ಕೈಮುಗಿದು ಕೇಳಿಕೊಂಡಿದ್ದ. ಮಾಸ್ತರರು ಒಪ್ಪಿ ತಲೆಯಾಡಿಸಿದ್ದರು. “ನೀನೇನೂ ಹೆದರಬೇಡಪ್ಪಾ. ನಿಶ್ಚಿಂತೆಯಿಂದ ಹೋಗಿ ಬಾ. ದೇವರು ನಿನ್ನನ್ನು ಕಾಪಾಡಲಿ.” ಎಂದು ಅವರು ತುಂಬು ಮನದಿಂದ ಹರಸಿ, ಅವನನ್ನು ಬೀಳ್ಕೊಂಡಿದ್ದರು. ಮರುದಿನವೇ ಹಸನ್‌ ಅಲ್ಲಿಂದ ಹೊರಟು ಹೋಗಿದ್ದ.

ಹೀಗೆ ಮುಸ್ಲಿಂ ಕುಟುಂಬವೊಂದು ಮಾಸ್ತರರ ಆಸರೆಗೆ ಬಂದಿತ್ತು. ಎರಡು ಕುಟುಂಬಗಳೂ ತುಂಬ ಅನ್ಯೋನ್ಯವಾಗಿದ್ದವು. ಹರೀಶ್‌ ಮತ್ತು ಹಮೀದ್‌ ಇಬ್ಬರೂ ಹೈಸ್ಕೂಲ್‌ ಸೇರಿದ್ದರು. ಎಂಟನೆಯ ತರಗತಿಯ ಒಂದೇ ವಿಭಾಗದಲ್ಲಿ ಇಬ್ಬರೂ ಕಲಿಯುತ್ತಿದ್ದರು. ಅವಳಿ ಸೋದರರಂತೆ ಅವರಿಬ್ಬರೂ ಜೊತೆಯಾಗಿ ಶಾಲೆಗೆ ಹೋಗುತ್ತಿದ್ದರು. ಜೊತೆಗೂಡಿಯೇ ಹಿಂದಿರುಗುತ್ತಿದ್ದರು. ಜೊತೆಗೂಡಿಯೇ ಇರುತ್ತಿದ್ದರು. ಆಟ-ಪಾಠ-ಮನೆಗೆಲಸಗಳನ್ನು ಸಹ ಜೊತೆಯಾಗಿದ್ದೇ ಅವರು ಪೂರೈಸುತ್ತಿದ್ದರು. ಅವರಿಬ್ಬರೊಳಗೆ ವಿಶೇಷ ಪ್ರೀತಿ – ವಿಶ್ವಾಸಗಳಿದ್ದವು. ಆತ್ಮೀಯ ಗೆಳೆಯರು ಅವರಾಗಿದ್ದರು.

ಹಸನ್‌ ಕುಟುಂಬ ಮಾಸ್ತರರ ಆಸರೆಗೆ ಬಂದು ಒಂದು ವರ್ಷ ಕಳೆದಿತ್ತು. ಅಷ್ಟರಲ್ಲೇ ಗಣೇಶೋತ್ಸವ ಬಂದಿತ್ತು. ಅನಿರೀಕ್ಷಿತ ಹಿಂಸೆ ಗಲಭೆಗಳು ಪಟ್ಟಣದಲ್ಲಿ ನಡೆದು ಹೋಗಿದ್ದವು. ಆದರೆ ಆಗ ಮಾಸ್ತರರಿಗೆ, ಅವರ ಮನೆಯವರಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ, ಅವರು ಸಂಕಟಕ್ಕೆ ಸಿಲುಕಿರಲಿಲ್ಲ. ಕಾರಣ ಗೊತ್ತೇ? ಆ ಬಾರಿ, ಗಲಭೆಗೆ ಎರಡು ದಿನಗಳ ಮೊದಲು ಹಳ್ಳಿಯಲ್ಲಿದ್ದ ಹಮೀದನ ಅಜ್ಜನಿಗೆ, ಅಂದರೆ ತಾಯಿಯ ಅಪ್ಪನಿಗೆ, ರೋಗ ಉಲ್ಬಣಿಸಿತ್ತು. ಅವರು ಬದುಕಿ ಉಳಿವ ಆಸೆಯಿಲ್ಲ ಎಂದು ಅಲ್ಲಿಂದ ವಾರ್ತೆ ಬಂದಿತ್ತು. ಹಾಗಾಗಿ ಅವರೆಲ್ಲ ಹಳ್ಳಿಗೆ ಹೋಗಿಬಿಟ್ಟಿದ್ದರು. ಇಲ್ಲಿ ಗಲಾಟೆ ಆರಂಭವಾದೊಡನೆ ಮಾಸ್ತರರು ಎಚ್ಚತ್ತುಕೊಂಡು, ಹಳ್ಳಿಗೆ ವಾರ್ತೆ ಮುಟ್ಟಿಸಿದ್ದರು. ಗಲಭೆಗಳೆಲ್ಲ ತಣ್ಣಗಾಗುವ ವರೆಗೆ ಹಳ್ಳಿಯಲ್ಲೇ ಇರುವಂತೆ ಅವರಿಗೆ ಸಲಹೆ ನೀಡಿದ್ದರು. ಇಲ್ಲಿ ಎಲ್ಲವೂ ಯಥಾಸ್ಥಿತಿಗೆ ಬಂದ ಬಳಿಕವೇ ಆ ಕುಟುಂಬ ಇಲ್ಲಿಗೆ ಹೊರಟು ಬಂದಿತ್ತು. ಹಾಗಾಗಿ ಆ ಬಾರಿ ಅವರೆಲ್ಲ ನಿಶ್ಚಿಂತರಾಗಿದ್ದರು. ಗಲಭೆಯ ಬಿಸಿ ಯಾರಿಗೂ ತಟ್ಟಿರಲಿಲ್ಲ.

ದಿನಗಳು ಉರುಳುತ್ತಿದ್ದವು. ತಿಂಗಳಿಗೊಮ್ಮೆ ಹಸನ್‌ ತನ್ನ ಮನೆಯವರಿಗೆ ಪತ್ರ ಬರೆಯುತ್ತಿದ್ದ. ಅದಕ್ಕೆ ಸಮಯ ಸಿಗದಿದ್ದರೆ, ಮಾಸ್ತರರ ಮನೆಗೆ ಪೋನ್‌ ಮಾಡಿ, ಕ್ಷೇಮ ಸಮಾಚಾರ ತಿಳಿಸುತ್ತಿದ್ದ. ಇಲ್ಲಿನ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದ; ಮನೆಯವರ ಖರ್ಚಿಗೆ ಹಣವನ್ನೂ ಕಳುಹಿಸುತ್ತಿದ್ದ. ಅದರಲ್ಲಿ ಮಾಸ್ತರರಿಗೆ ಕೊಡಬೇಕಾದ ಬಾಡಿಗೆ ಹಣವೂ ಸೇರಿರುತ್ತಿತ್ತು. ತೀರ ಕಡಿಮೆ ಬಾಡಿಗೆಗೆ ಮನೆ ಒದಗಿಸಿಕೊಟ್ಟ ಬಗ್ಗೆ ಮಾಸ್ತರರಿಗೆ ಹಸನ್‌ ಆಭಾರಿಯಾಗಿದ್ದ. ಮಾಸ್ತರರು ಅವನ ಕುಟುಂಬದ ಸಂರಕ್ಷಕರೂಫ ಆಗಿದ್ದರಲ್ಲ? ಹಾಗಾಗಿ ಹಸನ್‌ನ ಪ್ರತಿ ಸಂದೇಶದಲ್ಲೂ ಮಾಸ್ತರರಿಗೆ ಪ್ರತ್ಯೇಕ ವಂದನೆ ತಿಳಿಸಲು ಅವನೆಂದೂ ಮರೆಯುತ್ತಿರಲಿಲ್ಲ. ಅಂತೂ ಸಮಯ ಸರಿಯುತ್ತಿತ್ತು. ಆ ಎರಡೂ ಕುಟುಂಬಗಳ ಬದುಕು ನೆಮ್ಮದಿಯಿಂದ ಸಾಗುತ್ತಿತ್ತು.

ಒಂದು ದಿನ ಎಂದಿನಂತೆ ಹರೀಶ್‌ ಮತ್ತು ಹಮೀದ್‌ ಶಾಲೆಗೆ ಹೊರಡುತ್ತಿದ್ದರು. ಆಗಲೇ ನೆರೆಮನೆಯವರು ಯಾರೋ ಓಡಿ ಬಂದರು. ಹೊಸತೊಂದು ಸುದ್ದಿಯನ್ನು ಬಿತ್ತರಿಸಿದರು. ದೇವಸ್ಥಾನದ ಬಾಗಿಲಲ್ಲಿ ಯಾರೋ ದುರಾತ್ಮರು ದನದ ಮಾಂಸ ಇರಿಸಿದ್ದಾರಂತೆ. ಅದರಿಂದ ಹಿಂದೂಗಳು ರೊಚ್ಚಿಗೆದ್ದು, ದೇವಾಲಯದ ಬಳಿ ಒಟ್ಟುಗೂಡಿದ್ದಾರಂತೆ. ಅತ್ತ ಮಸೀದಿಯ ಬಳಿಯೂ ನೂರಾರು ಯುವಕರು ಜಮಾಯಿಸಿದ್ದಾರಂತೆ. ಅಂಗಡಿ ಹೊಟೇಲುಗಳವರು ಬಾಗಿಲು ಮುಚ್ಚುತ್ತಿದ್ದಾರಂತೆ . ಈ ಬಾರಿ ಹಿಂದಿನ ಗಲಾಟೆಗಿಂತಲೂ ಹೆಚ್ಚಿನ ಅನಾಹುತ ಆಗಲಿದೆಯಂತೆ’ ಇದು ಅವರು ತಂದ ವಾರ್ತೆಯ ಸಾರಾಂಶ.

ಈ ವಾರ್ತೆ ಹಬ್ಬಿದುದೇ ತಡ, ಹೊರಗೆ ಹೊರಟಿದ್ದ ಹೆಂಗಸರು, ಮಕ್ಕಳು ಗಡಬಡಿಸಿ ಹಿಂದೆ ಬಂದರು; ತಮ್ಮ ತಮ್ಮ ಮನೆಗಳೊಳಗೆ ಸೇರ ತೊಡಗಿದರು. ಮನೆಗಳಲ್ಲೇ ಇದ್ದವರು ಕಿಟ್ಟ ಬಾಗಿಲುಗಳನ್ನು ಮುಚ್ಚಿದರು. “ಬೇಡ ಮಕ್ಕಳೇ, ಈ ಹೊತ್ತು ಶಾಲೆಗೆ ಹೋಗಬೇಡಿರಿ. ಗಲಭೆ ಕಡಿಮೆಯಾಗುವ ವರೆಗೆ ಮನೆ ಬಿಟ್ಟು ಹೋಗಬಾರದು ನೀವು.” ಹಿರಿಯರು ಮಕ್ಕಳಿಗೆ ತಾಕೀತು ಮಾಡಿದರು ಹರೀಶ್‌ – ಹಮೀದ್‌ ಸಹ ಶಾಲೆಯ ಡ್ರೆಸ್‌ ಕಳಚಿದರು; ಮನೆಯ ಮಾಮೂಲಿ ಅಂಗಿ ಚಡ್ಡಿ ತೊಟ್ಟುಕೊಂಡರು. ಕಾತರದಿಂದ ಅವರು ಹೊರಗೆ ಇಣುಕಿ ನೋಡತೊಡಗಿದರು. ಎಲ್ಲ ಕಡೆ ಹೆಂಗಸರು ಮಕ್ಕಳು, ಮುದುಕರು ಮನೆ ಸೇರಿದ್ದರು. ಯುವರಕು ಮಾತ್ರ ಹೊರಗೆ ಧಾವಿಸುತ್ತಿದ್ದರು.

ಪಟ್ಟಣವೆಲ್ಲ ಅಲ್ಲೋಲ ಕಲ್ಲೋಲವಾಗಿತ್ತು. ಎರಡೂ ಕೋಮಿಗೆ ಸೇರಿದ್ದ ಯುವಕರು ರಸ್ತೆಗಿಳಿದಿದ್ದರು. ಕೆಲವು ಕಡೆ ಚೂರಿ ಇರಿತಗಳು ನಡೆದಿದ್ದವು. ಕೆಲವು ಕಟ್ಟಡಗಳು ಬೆಂಕಿಗೆ ಆಹುತಿಯಾಗಿದ್ದವು. ಕೆಲವು ಕಡೆ ಬಡಿಗೆ, ಕತ್ತಿ, ಖಡ್ಗಗಳಿಂದ ಹಲ್ಲೆ ನಡೆಸಿದ್ದರು. ಹಿಂದೂಗಳು ಹೆಚ್ಚಿದ್ದ ಕಡೆ ಮುಸ್ಲಿಂ ಕುಟುಂಬಗಳು ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಇರುವ ಕಡೆ ಹಿಂದೂಗಳು ಹೆಚ್ಚು ತೊಂದರೆಗೆ ಒಳಗಾಗಿದ್ದರು. ರಸ್ತೆಗಳಲ್ಲಿ ವಾಹನಗಳ ಓಡಾಟ ಸಂಪೂರ್ಣ ಬಂದ್‌ ಆಗಿತ್ತು. ಶಾಲೆ ಕಾಲೇಜುಗಳು , ಸರಕಾರ ಕಚೇರಿಗಳು ಎಲ್ಲ ಮುಚ್ಚಿದ್ದವು. ಪಟ್ಟಣದ ವಿವಿಧ ಭಾಗಗಳಿಂದ ಹಿಂಸೆಯ ವರದಿಗಳು ಬರುತ್ತಲೇ ಇದ್ದವು.

ಈಗ ಮಾಸ್ತರರ ಮನೆಯವರು, ಹಸನ್‌ನ ಮನೆಯವರು ಎಲ್ಲರೂ ಚಿಂತೆಗೆ ಒಳಗಾದರು. ಉಳಿದ ಎಲ್ಲರಿಗಿಂತಲೂ ಹೆಚ್ಚಿನ ಜವಾಬ್ದಾರಿ ಮಾಸ್ತರರ ಮೇಲಿತ್ತು. ಕಾರಣ, ಮುಸ್ಲಿಂ ಕುಟುಂಬವೊಂದು ಅವರ ಆಸರೆಯಲ್ಲಿತ್ತು. ಹಾಗಾಗಿ ಅವರು ಅತಿ ಹೆಚ್ಚು ಚಿಂತೆಗೆ ಒಳಗಾದರು.  “ಇಲ್ಲಿ ಮುಸ್ಲಿಂ ಕುಟುಂಬ ಒಂದಿರುವುದು ಈ ಭಾಗದ ಜನಕ್ಕೆ ಗೊತ್ತೇ ಇದೆ. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟವರು ಇಲ್ಲಿಗೂ ಬಂದರೆ? ಅನಾಹುತವೇನಾದರೂ ನಡೆದು ಹೋದರೆ? ನನ್ನ ಮೇಲೆ ಹಸನ್‌ ಇರಿಸಿದ ನಂಬಿಕೆಗೆ ದ್ರೋಹ ಮಾಡಿದಂತೆ ಆಗುವುದಿಲ್ಲವೇ: ಗಲಭೆಯ ಆರಂಭ ಆಗಿ ಹೋಗಿದೆ. ಈಗ ಇವರನ್ನು ಹಳ್ಳಿಗೆ ಕಳುಹಿಸುವುದೂ ಸಾಧ್ಯವಾಗದು. ಜನಕ್ಕೆ ಇವರು ಇಲ್ಲಿರುವ ಸುಳಿವು ಸಿಕ್ಕಿದರೂ ಅನಾಹುತ ನಡೆದು ಹೋದೀತು. ಏನು ಮಾಡೋಣ?…” ಅವರು ಯೋಚಿಸುತ್ತಲೇ ಇದ್ದರು.

ಅತ್ತ ಹಮೀದ್‌ ಮತ್ತು ಮನೆಯವರು ಎಲ್ಲರಿಗಿಂತ ಹೆಚ್ಚು ಹೆದರಿದ್ದರು. ಹಿಂದೂಗಳ ಈ ವಠಾರದಲ್ಲಿ ಅವರದೊಂದೇ ಮುಸ್ಲಿಂ ಕುಟುಂಬ. ಗಂಡಸರು ಯಾರೂ ಮನೆಯಲ್ಲಿಲ್ಲ. ಇರುವವರೆಂದರೆ ಒಬ್ಬ ಹುಡುಗ ಮತ್ತು ಇಬ್ಬರು ಹೆಂಗಸರು. ಕಿಡಿಗೇಡಿಗಳು ಏರಿ ಬಂಧರೆ ವಯಸ್ಸಾದ ಮಾಸ್ತರರು ಸಹ ಏನೂ ಮಾಡುವಂತಿಲ್ಲ. ಅಲ್ಲಾಹುವೇ ತಮ್ಮನ್ನು ಕಾಪಾಡಬೇಕು ಎಂದು ಅವರು ಮೊರೆಯಿಡುತ್ತಿದ್ದರು.

ಹರೀಶನ ಚಡಪಡಿಕೆಯಂತೂ ಹೇಳಿತೀರದು. ತನಗಿಂತ ಹೆಚ್ಚಾಗಿ ಅವನು ಹಮೀದ್‌ ಮತ್ತು ಅವನ ಅಮ್ಮ-ಅಜ್ಜಿ ಅವರ ಬಗ್ಗೆ ಚಿಂತಿಸುತ್ತಿದ್ದ. ದುಷ್ಟರು ಯಾರಾದರೂ ಫಕ್ಕನೆ ಬಂದು ಆ ಮನೆಗೆ ನುಗ್ಗಿದರೆ? ಅಥವಾ ಆ ಮನೆಗೆ ಬೆಂಕಿ ಹಚ್ಚಿದರೆ? .. ಇಂಥ ಯೋಚನೆಗಳೇ ಅವನನ್ನು ಕಾಡತೊಡಗಿದವು. ಅವನಿಗೆ ಇನ್ನೂ ತಡೆಯಲಾಗಲಿಲ್ಲ. ‘ಅಜ್ಜನಲ್ಲಿ ಈ ಬಗ್ಗೆ ಮಾತಾಡಬೇಕು. ಅವರೇನು ಹೇಳುತ್ತಾರೋ ಕೇಳಬೇಕು’ ಅವನು ನಿರ್ಧರಿಸಿದ. ತತ್‌ಕ್ಷಣ ಅವನು ತನ್ನ ಅಜ್ಜನ ಬಳಿಗೆ ಬಂದ.

ಏನು ಬಂದೆ ಹರೀಶಾ? ಏನಾದರೂ ಹೇಳಲಿತ್ತೇನು? ’ಅಜ್ಜ ಕೇಳಿದರು. ‘ಅಜ್ಜಾ, ಹಮೀದನ ಮನೆಯಲ್ಲಿ ಗಂಡಸರು ಯಾರೂ ಇಲ್ಲ. ಅವರು ಭಾರೀ ಹೆದರಿಕೊಂಡಿದ್ದಾರೆ. ಅವನ ಅಜ್ಜಿ ಆಗಲೇ ಮುಸು ಮುಸು ಅಳುತ್ತಿದ್ದರಂತೆ” ಹರೀಶ್‌ ವರದಿ ಒಪ್ಪಿಸಿದ. ‘ಅವರು ಸಹ ನಮ್ಮ ಮನೆಯಲ್ಲೇ ಇದ್ದರೆ ಆಗದೆ ಅಜ್ಜಾ?’ ಅವನು ಅಜ್ಜನನ್ನು ಕೇಳಿದ.

‘ನಾನು ಸಹ ಇದನ್ನೇ ಯೋಚಿಸುತ್ತಿದ್ದೆ ಮಗೂ. ನೀನು ಬಂದುದು ಒಳ್ಳೆಯದಾಯಿತು. ಈಗಲೇ ನೀನು ಅಜ್ಜಿಯ ಬಳಿಗೆ ಹೋಗಬೇಕು. ಅವರನ್ನು ಇಲ್ಲಿಗೆ ಕರೆತರಬೇಕು’ ಅವರು ಹೇಳಿದರು. ಕೂಡಲೇ ಹರೀಶ್‌ ಹಮೀದನ ಮನೆಗೆ ಬಂದ; ಅಜ್ಜಿಯನ್ನು ಕರೆತಂದ.

‘ನೋಡಿ ತಾಯೇ, ಪಟ್ಟಣದಲ್ಲಿ ಪುನಃ ಗಲಭೆ ಆರಂಭವಾಗಿದೆ. ಯಾವಾಗ ಏನಾದೀತೋ ಹೇಳ ಬರುವುದಿಲ್ಲ. ನಿಮ್ಮ ಮಗ ನಿಮ್ಮ ಮೂವರ ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿ ಹೋಗಿದ್ದಾನೆ. ಅವನು ನನ್ನ ಮೇಲೆ ಇರಿಸಿದ ನಂಬಿಕೆ ಹುಸಿಯಾಗಬಾರದು. ಆದಕಾರಣ ಈ ಮಾತು ಹೇಳುತ್ತಿದ್ದೇನೆ. ನೀವು ಈಗಲೇ ನಿಮ್ಮ ಬಿಡಾರಕ್ಕೆ ಹೋಗಬೇಕು. ಮೂರು ನಾಲ್ಕು ದಿನಗಳ ಮಟ್ಟಿಗೆ ನಿಮಗೆ ಬೇಕಾಗುವ ಬಟ್ಟೆ ಬರೆ, ಅಡುಗೆ ಪಾತ್ರೆಗಳು, ತಟ್ಟೆ ಬಟ್ಟಲು, ಗ್ಯಾಸ್‌ ಒಲೆ, ಬೆಂಕಿಪೆಟ್ಟಿಗೆ, ಚಿಮಿಣಿ ಇವುಗಳನ್ನು ತೆಗೆದಿರಿಸಬೇಕು. ನಾನು ಈ ಮನೆಯ ಹಿಂಬಾಗಿಲನ್ನು ತೆರೆದಿರಿಸುತ್ತೇನೆ. ಅದರ ಮೂಲಕ ನೀವು ನಿಮ್ಮ ವಸ್ತುಗಳೊಡನೆ, ಮೇಲೆ ಮಾಳಿಗೆಯ ದೊಡ್ಡ ಕೋಣೆ ಸೇರಿಕೊಳ್ಳಬೇಕು. ನಾನು ಹೇಳುವವರೆಗೆ ನೀವು ಅಲ್ಲೇ ಇರಬೇಕು. ಅಲ್ಲಿ ಹೆಚ್ಚು ಸದ್ದು ಮಾಡಬಾರದು. ಲೈಟ್‌ ಹಚ್ಚಬಾರದು. ಕತ್ತಲಾದಾಗ ಮೇಣದ ಬತ್ತಿ ಅಥವಾ ಚಿಮಿಣಿ ದೀಪ ಮಾತ್ರ ಉರಿಸಬೇಕು. ಕಿಟಕಿ ಬಾಗಿಲುಗಳು ಮುಚ್ಚಿಯೇ ಇರಲಿ. ಪರದೆಗಳನ್ನು ಇಳಿಸಿಬಿಡಿ. ನೀವು ಅಲ್ಲಿರುವುದು ಹೊರಗಿನವರ ಗಮನಕ್ಕೆ ಬರಬಾರದು. ನಾಲ್ಕು ದಿನಗಳ ಕಾಲ ನಿಮಗೆ ಸ್ವಲ್ಪ ತೊಂದರೆಯಾದೀತು. ಕ್ಷಮಿಸಿ. ಸದ್ಯ ಬೇರೆ ದಾರಿ ಇಲ್ಲ. ದಯವಿಟ್ಟು ಸಹಕರಿಸಬೇಕು ನೀವು. ನಿಮ್ಮ ಬಿಡಾರದ ಬೀಗವನ್ನು ನನ್ನಲ್ಲಿ ಕೊಟ್ಟು ಬಿಡಿರಿ. ನಿಮ್ಮ ಬಿಡಾರಕ್ಕೆ ಬ ಈಗ ನಾನು ಹಾಕುತ್ತೇನೆ. ಬೀಗದ ಕೈ ನಾನೇ ಇರಿಸಿಕೊಳ್ಳುತ್ತೇನೆ. ಅನಿವಾರ್ಯ ವಸ್ತು ಏನಾದರೂ ಬೇಕಾದರೆ, ಹಮೀದನ ಮೂಲಕ ತಿಳಿಸಿರಿ. ಬೇಕಾದುದನ್ನು ನಾವು ಒದಗಿಸಿಕೊಡುತ್ತೇವೆ. ನೆನಪಿಡಿ . ನಿಮ್ಮಲ್ಲಿ ಯಾರೂ ಹೊರಕ್ಕೆ ಕಾಣಿಸಿಕೊಳ್ಳಬಾರದು. ಗಲಭೆ ಕಡಿಮೆಯಾದಾಗ ನಾನೇ ನಿಮಗೆ ತಿಳಿಸುತ್ತೇನೆ. ಆಗ ನೀವು ಕೆಳಗೆ ಬರಬಹುದು. ಆಗಬಹುದಲ್ಲ?” ಮಾಸ್ತರರು ಕೇಳಿದರು.

ಅಜ್ಜಿಗೂ ಅವರ ಮಾತು ಸರಿ ಎನಿಸಿತು. “ನಿಮ್ಮ ಉಪಕಾರ ನಾವೆಂದೂ ಮರೆಯುವುದಿಲ್ಲ ರಾಯರೇ, ನೀವು ಹೇಳಿದಂತೆ ನಡೆದುಕೊಳ್ಳುತ್ತೇವೆ.” ಅವರು ಸಮ್ಮತಿ ಸೂಚಿಸಿದರು. ತಾಸು ಹೊತ್ತು ಕಳೆವ ಮೊದಲೇ ಹಸನ್‌ನ ಕುಟುಂಬವು ಮಾಸ್ತರರ ಮನೆಯ ಮಾಳಿಗೆ ಸೇರಿಕೊಂಡಿತು. ಕತ್ತಲಾಗುತ್ತಿದ್ದಂತೆ ಮಾಸ್ತರರೇ ಬಾಡಿಗೆ ಮನೆಗೆ ಬೀಗ ಹಾಕಿಬಂದರು.

ಗಲಭೆ ಎರಡನೆಯ ದಿನಕ್ಕೆ ಕಾಲಿಟ್ಟಿತು. ಹಿಂದಿನ ದಿನಕ್ಕಿಂತಲೂ ಹೆಚ್ಚಿನ ಅನಾಹುತಗಳು ಅಂದು ಸಂಭವಿಸಿದವು. ಅಲ್ಲಲಿ ಹೊಡೆದಾಟಗಳು, ಚೂರಿ ಇರಿತಗಳು ನಡೆದವು. ಹಲವಾರು ಮಂದಿ ಗಾಯಗೊಂಡರು. ಎರಡು ಮೂರು ಕಡೆ ಕಿಡಿಗೇಡಿಗಳು ಅಂಗಡಿಗಳನ್ನು ಲೂಟಿ ಮಾಡಿದರು; ಕಟ್ಟಡಗಳಿಗೆ ಬೆಂಕಿ ಹಚ್ಚಿದರು. ಇಬ್ಬರು ಅಮಾಯಕರು ಜೀವ ಕಳೆದುಕೊಂಡರು. ಸಾಕಷ್ಟು ಪೋಲೀಸರು ಪಟ್ಟಣದಲ್ಲಿ ಇರಲಿಲ್ಲ. ಆದುದರಿಂದ ಗಲಭೆಯನ್ನು ಹತ್ತಿಕ್ಕಲು ಅವರು ಒದ್ದಾಡಬೇಕಾಯಿತು. ಹೆಚ್ಚಿನ ಪೋಲೀಸ್‌ ಬಲಕ್ಕಾಗಿ ತುರ್ತು ಕರೆ ಹೋಗಿತ್ತು. ಆದರೆ ಅದಿನ್ನೂ ಪಟ್ಟಣಕ್ಕೆ ಬಂದಿರಲಿಲ್ಲ. ಹಾಗಾಗಿ ಎರಡನೆಯ ದಿನವೂ ಪಟ್ಟಣದಲ್ಲಿ ಅರಾಜಕತೆ ಮುಂದುವರಿಯಿತು.

ಗಲಭೆಯ ಮೂರನೆಯ ದಿನ ಮುಂಜಾನೆ ಹೆಚ್ಚುವರಿ ಪೋಲಿಸ್‌ ಪಡೆ ಪಟ್ಟಣದಲ್ಲಿ ಬಂದಿಳಿಯಿತು. ಒಡನೆ “ನಿಷೇಧಾಜ್ಞೆಯನ್ನು ಪಟ್ಟಣದಲ್ಲಿ ಜಾರಿಗೊಳಿಸಲಾಗಿದೆ. ನಾಗರಿಕರು ಯಾರೂ ಬೀದಿಗಿಳಿಯಬಾರದು” ಎಂಬ ಘೋಷಣೆ ಹೊರಬಿತ್ತು. ಶಾಂತಿಪಾಲನೆಯ ಕಾರ್ಯ ಚುರುಕುಗೊಂಡಿತು. ಗುಂಪು ಗೋಚರಿಸಿದ ಕಡೆ ಪೋಲಿಸರು ಧಾವಿಸಿದರು. ಜನರನ್ನು ಚದರಿಸಿದರು. ವಿರೋಧಿಸಿದವರ ಮೇಲೆ ಲಾಟಿ ಬೀಸಿದರು. ಅನಿವಾರ್ಯ ಎನಿಸಿದಾಗ, ಅವರು ಗಾಳಿಯಲ್ಲಿ ಗುಂಡು ಹಾರಿಸಿದರು. ಕೆಲವು ಮಂದಿ ಜಖಂಗೊಂಡರು. ಅಂತೂ ಮೂರನೆಯ ದಿನ ಪರಿಸ್ಥಿತಿ ಹತೋಟಿಗೆ ಬಂತು. ಜಿಲ್ಲಾಧಿಕಾರಿಗಳು, ಶಾಸಕರು, ಗಣ್ಯರು ಶಾಂತಿ ಸಭೆ ನಡೆಸಿದರು; ಶಾಂತಿ ಕಾಪಾಡಲು ಸಹಕರಿಸಬೇಕೆಂದು ಸಾರ್ವಜನಿಕರಿಗೆ ಕರೆನೀಡಿದರು. ನಿಧಾನವಾಗಿ ಪಟ್ಟಣವು ಯಥಾಸ್ಥಿತಿಗೆ ಹಿಂದಿರುಗಿತು. ಸಂಜೆಯ ವೇಳೆಗೆ ಬಸ್‌ ಸಂಚಾರವೂ ಆರಂಭಗೊಂಡಿತು.

ನಾಲ್ಕನೆಯ ದಿನ ಬೆಳಿಗ್ಗೆ ಮಾಸ್ತರರು ರೇಡಿಯೋ ಹಚ್ಚಿದರು. “ಪಟ್ಟಣದಲ್ಲಿ ಸಂಪೂರ್ಣ ಶಾಂತಿ ನೆಲೆಸಿದೆ. ರಾತ್ರಿ ಸಹ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿ ಬಂದಿಲ್ಲ” ಎಂಬ ವಾರ್ತೆ ಕೇಳಿ ಅವರಿಗೆ ಸಮಾಧಾನವಾಯಿತು. ವಾರ್ತಾಪ್ರಸಾರ ಕೇಳುತ್ತಿದ್ದ  ಹರೀಶನಿಗೂ ಖುಶಿಯಾಯಿತು. “ಗಲಭೆ ನಿಂತಿದೆಯಲ್ಲ ಅಜ್ಜಾ. ಇನ್ನು…” ಅವನು ಮಾತೆತ್ತಿದ.

‘ಗೊತ್ತಾಯಿತು ಮಗೂ. ಇನ್ನು ಹಮೀದ್‌ ಮತ್ತು ಮನೆಯವರನ್ನು ಕೆಳಗೆ ಕರೆಯಬಹುದಲ್ಲ ಎನ್ನುವ ಅಭಿಪ್ರಾಯ ನಿನ್ನದು. ಅದು ತಪ್ಪಲ್ಲ ಮಗೂ. ಆದರೂ ಸಂಜೆಯವರೆಗೆ ಕಾದುನೋಡೋಣ. ಪರಿಸ್ಥಿತಿ ಶಾಂತವಾಗಿಯೇ ಇದ್ದರೆ, ಮತ್ತೆ ಅವರು ಬಿಡಾರಕ್ಕೆ ಬರಲಿ. ಸಂಜೆ ಅವರು ಹಳ್ಳಿಯಿಂದ ಹಿಂದಿರುಗಿದ್ದಾರೆ ಎಂದೇ ಜನರು ತಿಳಿವಂತಾಗಲಿ. ನಮ್ಮ ಮನೆಯಲ್ಲೇ ಅವರು ಇದ್ದರು ಎನ್ನುವುದು ಹೊರಗಿನವರೆಗೆ ಗೊತ್ತಾಗದಿರುವುದೇ ಒಳ್ಳೆಯದು” ಅಜ್ಜ ಹೇಳಿದರು. ಹರೀಶನಿಗೂ ಇದು ಸರಿ ಎನಿಸಿತು. “ಅಗತ್ಯಬಿದ್ದರೆ, ಇನ್ನೊಂದು ಬಾರಿಗೂ ಈ ಯೋಜನೆ ಉಪಯೋಗಕ್ಕೆ ಬಂದೀತಲ್ಲ?” ಅವನು ಯೋಚಿಸಿದ. ಆ ಹಗಲು ಹಾಗೇ ಕಳೆದು ಹೋಯಿತು. ಪಟ್ಟಣ ಶಾಂತವಾಗಿತ್ತು.

ರಾತ್ರೆ ಊಟವಾದೊಡನೆ ಅಜ್ಜ ಹರೀಶನನ್ನು ಕರೆದರು. ‘ಹೋಗು ಮಗೂ, ಹಮೀದ್‌ ಮತ್ತು ಮನೆಯವರನ್ನು ಕೆಳಗೆ ಬರಲು ಹೇಳು. ನಾನು ಹಿಂಬಾಗಿಲು ತೆರೆದಿಡುತ್ತೇನೆ. ಅವರು ಬಿಡಾರ ಸೇರಿಕೊಳ್ಳಲಿ’ ಎಂದರು ಅಜ್ಜ. ಹರೀಶ್‌ ಹಮೀದನ ಅಜ್ಜಿಗೆ ವಾರ್ತೆ ಮುಟ್ಟಿಸಿದ. ಸದ್ದು ಮಾಡದೆ ಅವರೆಲ್ಲ ಕೆಳಗೆ ಬಂದರು. “ನಮ್ಮ ಜೀವ ಉಳಿಸಿದಿರಿ ರಾಯರೆ, ಅಲ್ಲಾಹು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ” ತುಂಬು ಮನದಿಂದ ಅಜ್ಜಿ ಮಾಸ್ತರರಿಗೆ ಕೃತಜ್ಞತೆ ಸಲ್ಲಿಸಿದರು..

“ನಮ್ಮನ್ನೆಲ್ಲ ಕಾಪಾಡಿದಿರಿ ರಾಯರೇ. ನಿಮ್ಮ ಉಪಕಾರವನ್ನು ನಾವೆಂದೂ ಮರೆಯುವುದಿಲ್ಲ.” ಹಮೀದನ ಅಮ್ಮನೂ ದನಿಗೂಡಿಸಿದರು. ಅವರ ದನಿ ಗದ್ಗಗವಾಗಿತ್ತು.

“ಎಲ್ಲರನ್ನೂ ಕಾಪಾಡುವವನು ಆ ದೇವನೊಬ್ಬನೇ. ನಾವೆಲ್ಲ ಅವನ ಮಕ್ಕಳು. ಸೋದರರಂತೆ, ಪ್ರೀತಿಯಿಂದ ಕೂಡಿ ಬಾಳಬೇಕಾದವರು. ನಮ್ಮ ಧರ್ಮಗಳು ಬೇರೆ ಬೇರೆ ಯಾದರೇನು? ಅವುಗಳ ಸಾರ ತತ್ವ ಒಂದೇ ಇದೆ. “ಎಲ್ಲರನ್ನೂ ಪ್ರೀತಿಸು. ಒಳ್ಳೆಯದನ್ನೇ ಯೋಚಿಸು. ಒಳ್ಳೆಯ ಕೆಲಸಗಳನ್ನೇ ಮಾಡು” ಎಂದೇ ಅವು ಬೋಧಿಸುತ್ತವೆ. ಮೂರ್ಖರಿಗೆ, ಧಮಾಂಧರಿಗೆ ಇದು ಅರ್ಥವಾಗುವುದಿಲ್ಲ. ಯಾರ ಬುದ್ಧಿಯ ಮಾತೂ ಅವರಿಗೆ ನಾಟುವುದಿಲ್ಲ. ಹಾಗಾಗಿ ಇಂಥ ಅನರ್ಥಗಳು ಆಗಾಗ ನಡೆಯುತ್ತವೆ.  ‘ಸಬ್‌ಕೋ ಸನ್ಮತಿ ದೇ ಭಗವಾನ್‌’ ಎಂದು ಗಾಂಧೀಜಿ ಪ್ರಾರ್ಥಿಸುತ್ತಿದ್ದರಲ್ಲ? ಹಾಗೆ ನಾವೂ ಪ್ರಾರ್ಥಿಸೋಣ. ಭಗವಂತ ಎಲ್ಲರಿಗೂ ಒಳ್ಳೆಯ ಬುದ್ದಿಕೊಡಲಿ. ಅಂತೂ ಸದ್ಯ ಬಂದ ಕಂಟಕ ದೂರಾಯಿತಲ್ಲ? ಹಸನ್‌ ನನ್ನ ಮೇಲೆ ಇರಿಸಿದ ವಿಶ್ವಾಸವನ್ನು ಉಳಿಸಿಕೊಂಡೆನಲ್ಲ? ಅದಕ್ಕಾಗಿ ಸಂತೋಷಪಡುತ್ತೇನೆ. ಹೋಗಿ ತಾಯೀ ಇನ್ನು ನಿಶ್ಚಿಂತೆಯಿಂದ ನಿದ್ದೆ ಮಾಡಿರಿ” ಮಾಸ್ತರರು ಅವರನ್ನು ಕಳುಹಿಸಿಕೊಟ್ಟರು. ಅಷ್ಟು ಹೊತ್ತು ಹರೀಶ್‌ ಮತ್ತು ಹಮೀದ್‌ ಖುಷಿಯಿಂದ ಪರಸ್ಪರ ತಬ್ಬಿಕೊಂಡೇ ನಿಂತಿದ್ದರು.

ಭಾರತ ಮಾತೆಯ ಪ್ರೀತಿಯ ಮಕ್ಕಳು
ನಾವೆಲ್ಲರು ಒಂದೇ,
ನಾವೆಲ್ಲರು ಒಂದೇ ……
ಎಂದು ಹಾಡುತ್ತಲೇ ಇದ್ದರು.

* * *