ಶ್ರೀ ಪಳಕಳ ಸೀತಾರಾಮ ಭಟ್ಟರು ಮಕ್ಕಳಿಗಾಗಿ ಬರೆದಿರುವ ಕವನಗಳು, ಕಥನಕವನಗಳು, ಕಥೆಗಳು, ಪ್ರಹಸನ, ನಾಟಕ, ಜೀವನ ಚರಿತ್ರೆ, ಪತ್ರಲೇಖನ, ಚುಟುಕುಗಳು, ಪ್ರಬಂಧಗಳು ಇಲ್ಲವೂ ನೇರವಾಗಿ ಮಕ್ಕಳ ಮನ ಮುಟ್ಟುವಂತಿವೆ. ಶಿಶು ಸಾಹಿತ್ಯ ಮಾಲೆಯ ಮೂಲಕ ಮಕ್ಕಳಿಗಾಗಿ ಸಿಹಿ ತಿನಿಸನ್ನು ನೀಡುತ್ತಾ ಬಂದಿರುವ ಶ್ರೀ ಪಳಕಳರ ಬಹುತೇಕ ಸತ್ಕೃತಿಗಳು ನಮ್ಮ ಪ್ರಕಟಣಾಲಯದ ಮೂಲಕ ಪ್ರಕಟವಾಗಿವೆ.

ಶಿಶು ಸಾಹಿತ್ಯ ಮಾಲೆಯ ಮೂಲಕ ಹೊಸ ಆಯಾಮವನ್ನೇ ಪರಿಕಲ್ಪಿಸಿ ಸಾರಸ್ವತ ಲೋಕದಲ್ಲಿ ಸ್ವಂತ ನಡಿಗೆಯಲ್ಲಿ ಮುನ್ನಡೆಯುತ್ತಿರುವ ಶ್ರೀ ಪಳಕಳ ಸೀತಾರಾಮ ಭಟ್ಟರ “ದೋಸ್ತಿ” ಎಂಬ ಈ ಮಕ್ಕಳ ಕಥಾ ಸಂಗ್ರಹವನ್ನು ನಮ್ಮ ಪ್ರಕಟಣಾಲಯದ ೩೯೯ನೇ ಕೃತಿಯಾಗಿ ಓದುಗರ ಮುಂದೆ ಇರಿಸಲು ಸಂತೋಷಪಡುತ್ತೇವೆ. ಶ್ರೀ ಪಳಕಳರಿಗೆ ನಮ್ಮ ವಂದನೆಗಳು.

ಈ ಕೃತಿಯಲ್ಲಿ ಅಚ್ಚುಕಟ್ಟಿನ ದಿಶೆಯಲ್ಲಿ ಸಹಕರಿಸಿದ ಯುಗಪುರುಷದ ಕಾರ್ಯಕರ್ತರಿಗೆಲ್ಲರಿಗೂ ಹಾರ್ದಿಕ ಕೃತಜ್ಞತೆಗಳು.

ಕೊಡೆತ್ತೂರು ಭುವನಾಭಿರಾಮ ಉಡುಪ
ಪ್ರಕಾಶಕ
ಕಿನ್ನಿಗೋಳಿ