ತಿಮ್ಮ ಶಾಲೆಗೆ ಹೊರಟಿದ್ದ. ಎಂದಿಗಿಂತ ಮೊದಲೇ ಅವನು ಅಂಧು ಹೊರಟು ಬಂದಿದ್ದ. ಅವನು ಹಾಗೆ ಹೊರಟು ಬರಲು ಒಂದು ಕಾರಣವೂ ಇತ್ತು. ಏನದು?

ತಿಮ್ಮ ಶಾಲೆಯಿಂದ ಬರುವ ದಾರಿಯಲ್ಲಿ ಒಂದು ಮಾವಿನ ಮರವಿತ್ತು. ಬಹಳ ದೊಡ್ಡ ಮರ ಅದು. ಆ ಮರದಲ್ಲಿ ನೂರಾರು ಕಾಯಿಗಳು ಜೋತಾಡುತ್ತಿದ್ದವು. ಹೆಚ್ಚಿನ ಕಾಯಿಗಳು ಬಲಿತಿದ್ದವು. ಎತ್ತರದ ಒಂದು ಗೆಲ್ಲಿನಲ್ಲಿ ನಾಲ್ಕಾರು ಹಣ್ಣುಗಳೂ ನೇತಾಡುತ್ತಿದ್ದವು. ಕಲ್ಲೆಸೆದು, ಅವುಗಳನ್ನು ಅವನು ಕಡೆವಬಹುದಿತ್ತು. ಆದರೆ ಅವನ ಸಂಗಡಿಗರೂ ಆಗ ಜೊತೆಗಿದ್ದರಲ್ಲ? ಹಣ್ಣುಗಳನ್ನು ಕೆಡವಿದರೆ, ಅವರಿಗೂ ಅದರಲ್ಲಿ ಪಾಲು ಕೊಡಬೇಕಲ್ಲ? ಅವನಿಗೆ ಅದು ಇಷ್ಟವಿರಲಿಲ್ಲ. ಹಾಗಾಗಿ ಅವನು ಆಗ ನೆಟ್ಟಗೆ ಮನೆಗೆ ಬಂದಿದ್ದ. ಗೆಳೆಯರ ಗಮನಕ್ಕೆ ಬರದ ಆ ಹಣ್ಣುಗಳು, ರಾತ್ರೆ ಕೆಳಗೆ ಬೀಳಬಹುದು. ಎಲ್ಲರಿಗಿಂತ ಮೊದಲು ತಾನು ಅಲ್ಲಿಗೆ ಹೋಗಬೇಕು, ಆ ಹಣ್ಣುಗಳ ಹೆಕ್ಕಿ ತಿನ್ನಬೇಕು. ಒಂದು ವೇಳೆ ಅವು ಮರದಲ್ಲೇ ಇದ್ದರೆ? ಏನಾದರೂ ಹಂಚಿಕೆ ಹೂಡಬೇಕು; ಆ ಹಣ್ಣುಗಳು ಕೆಳಕ್ಕೆ ಬೀಳುವ ಹಾಗೆ ಮಾಡಬೇಕು. ಬಾಯಿ ಚಪ್ಪರಿಸುತ್ತ ಅವುಗಳನ್ನು ತಾನು ತಿನ್ನಬೇಕು. ಇದು ಅವನ ಆಸೆಯಾಗಿತ್ತು; ಅಂಥ ಆಸೆಯಿಂದಲೇ ಅಂದು ಅವನು ಬೇಗನೆ ಮನೆ ಬಿಟ್ಟಿದ್ದ; ದಾಪುಗಾಲಿಟ್ಟು ನಡೆಯತೊಡಗಿದ್ದ.

ಮಾವಿನ ಮರದ ಬಳಿಗೆ ಬಂದ ತಿಮ್ಮ, ತಲೆಯೆತ್ತಿ ಮೇಲೆ ನೋಡಿದ. ಅವನು ಯೋಚಿಸಿದ್ದ ಹಾಗೆ, ಹಣ್ಣುಗಳು ಕೆಳಗೆ ಬಿದ್ದಿರಲಿಲ್ಲ. ಗೆಲ್ಲಿನಲ್ಲೇ ಅವು ಜೋತಾಡುತ್ತಿದ್ದವು. ಎಲ್ಲವು ಬಂಗಾರದ ಬಣ್ಣದ ಹಣ್ಣುಗಳು. “ಛೇ, ಒಂದು ಹಣ್ಣೂ ಕೆಳಗೆ ಬಿದ್ದಿಲ್ಲವಲ್ಲ!” ತಿಮ್ಮ ತನಗೆ ತಾನೇ ಹೇಳಿಕೊಂಡ.

ಮರ ದೊಡ್ಡದಿತ್ತು. ಹಣ್ಣುಗಳು ಎತ್ತರದಲ್ಲಿದ್ದವು. ಮರ ಏರುವುದು ಅವನಿಗೆ ಸಾಧ್ಯವಿರಲಿಲ್ಲ. ಉದ್ದದ ದೋಟಿ ಇದ್ದರೆ ಕೆಳಗಿಂದಲೇ ಹಣ್ಣುಗಳನ್ನು ಕೊಯ್ಯಬಹುದಿತ್ತು. ಆದರೆ ದೋಟಿಯೂ ಇಲ್ಲವಲ್ಲ? ಏನು ಮಾಡೋಣ? ತಿಮ್ಮ ಯೋಚಿಸಿದ. “ಕಲ್ಲು ಹೊಡೆದೇ ಹಣ್ಣುಗಳನ್ನು ಕೆಡವಬೇಕು. ಬೇರೆ ದಾರಿಯಿಲ್ಲ” ಅವನು ನಿರ್ಧರಿಸಿದ. ತತ್‌ ಕ್ಷಣ ಅವನು ಅತ್ತಿತ್ತ ಕಣ್ಣಾಡಿಸಿದ, ಅಲ್ಲಿದ್ದ ಕೆಲವರು ಕಲ್ಲುಗಳನ್ನು ಹೆಕ್ಕಿ ತಂದ, ನೋಟ ಹಿಡಿದು, ಒಂದೊಂದೇ ಕಲ್ಲನ್ನು ಹಣ್ಣುಗಳತ್ತ ಬೀಸತೊಡಗಿದ.

ಹಾಗೆ ಅಟವನ್ನು ಮೂರೋ ನಾಲ್ಕೋ ಕಲ್ಲುಗಳನ್ನು ಎಸೆದಿರಬೇಕು. ಅಷ್ಟರಲ್ಲೇ, “ಏಯ್‌, ಯಾರದು? ಏನೋ, ನನ್ನ ಮಂಡೆಗೆ ಕಲ್ಲು ಹಾಕುತ್ತೀಯಾ?” ಎಂಬ ದನಿ ಕೇಳಿಸಿತು. ಮರುಕ್ಷಣದಲ್ಲಿ ಮರದ ಮರೆಯಿಂದ ಅಜ್ಜನೊಬ್ಬ ಎದ್ದು ಬರುವುದೂ ಕಾಣಿಸಿತು.

ತಿಮ್ಮ ಗಾಬರಿಗೊಂಡ.  ತಾನು ಎಸೆದ ಕಲ್ಲು ಅಜ್ಜನ ತಲೆಗೆ ಬಿದ್ದಿರಬೇಕು. ಅವನು ಗಾಯಗೊಂಡಿರಬೇಕು ಎಂದು ಅವನು ಹೆದರಿದ. ತಾನು ತಪ್ಪು ಮಾಡಿದೆ ಎನಿಸಿತು ಅವನಿಗೆ. ಅಜ್ಜ ಸಿಟ್ಟುಗೊಂಡಿರಬಹುದು, ತನ್ನನ್ನು ಶಿಕ್ಷಿಸಬಹುದು ಎಂದು ಅವನು ಯೋಚಿಸಿದ. ತನ್ನ ಬಳಿಗೆ ನಡೆದು ಬರುತ್ತಿದ್ದ ಅಜ್ಜನನ್ನೇ ನೋಡತೊಡಗಿದ.

ಅಜ್ಜ ತಿಮ್ಮನನ್ನು ಸಮೀಪಿಸಿದ. “ಏನೋ ತಮ್ಮಾ, ಯಾಕೆ ನೀನು ಕಲ್ಲು ಹೊಡೆದೆ?” ಅವನು ಕೇಳಿದ. ಅವನ ತಲೆಗೆ ಪೆಟ್ಟು ತಗಲಿರಬೇಕು. ತನ್ನ ಕರವಸ್ತ್ರವನ್ನು ಅವನು ತಲೆಗೆ ಒತ್ತಿ ಹಿಡಿದಿದ್ದ.

ಅಜ್ಜ, ‘ತಮ್ಮ’ ಎಂದುದನ್ನು ಕೇಳಿ ತಿಮ್ಮನಿಗೆ ಸ್ವಲ್ಪ ಧೈರ್ಯ ಬಂತು. ಆದರೆ ಅವನ ಬಾಯಿಂದ ಮಾತು ಮಾತ್ರ ಹೊರಬರಲಿಲ್ಲ. ಅಜ್ಜನನ್ನೇ ಮಿಕಿಮಿಕಿ ನೋಡುತ್ತ ಅವನು ನಿಂತುಬಿಟ್ಟಿದ್ದ.

“ಹೇಳೋ ತಮ್ಮಾ, ನೀನು ಯಾಕೆ ಕಲ್ಲು ಹೊಡೆದೆ?” ಅಜ್ಜ ಮತ್ತೆ ಪ್ರಶ್ನೆ ಹಾಕಿದ.

‘ಹಣ್ಣಿಗಾಗಿ’ ಮೆಲ್ಲನೆ ಹೇಳಿದ ತಿಮ್ಮ. ಅವನ ದನಿ ನಡುಗುತ್ತಿತ್ತು. ಅದನ್ನು ಅಜ್ಜ ಗಮನಿಸಿದ.  ಹುಡುಗ ಹೆದರಿದ್ದಾನೆ ಎನಿಸಿತು ಅವನಿಗೆ . ‘ಹೆದರ ಬೇಡವೋ ತಮ್ಮಾ. ನಾನು ನಿನಗೇನೂ ಮಾಡುವುದಿಲ್ಲ. ಆದರೆ ಒಂದು ಮಾತು. ನಾನು ಕೇಳುವ ಪ್ರಶ್ನೆಗಳಿಗೆ ಮಾತ್ರ ನೀನು ಉತ್ತರ ಹೇಳಬೇಕು’ ಷರತ್ತು ಹಾಕಿದ ಅಜ್ಜ.

‘ಹೂಂ’ ಆಗಬಹುದು ಎನ್ನುವಂತೆ ತಲೆಯಾಡಿಸಿದ ತಿಮ್ಮ.

‘ಸರಿ ಹಾಗಾದರೆ, ಈಗ ಹೇಳು, ಈ ಮಾವಿನ ಮರವಿದೆಯಲ್ಲ? ಇದರಿಂದ ನಮಗೇನು ಸಿಗುತ್ತದೆ?” ಅಜ್ಜ ಕೇಳಿದ. “ಹಣ್ಣುಗಳು, ಕಾಯಿಗಳು, ಮಿಡಿಗಳು…” ಮಾತು ನಿಲ್ಲಿಸಿದ ತಿಮ್ಮ

“ಹೂಂ, ಮುಂದುವರಿಸು. ಅರ್ಧದಲ್ಲೇ ನಿಲ್ಲಿಸಬೇಡ” ಅಜ್ಜ ಹುರಿದುಂಬಿಸಿದ.

“ಮರದಿಂದ ನಮಗೆ ನೆರಳು ಸಿಗುತ್ತದೆ. ಹಾಗೆಯೇ ಸೊಪ್ಪು ತರಗೆಲೆ, ಕಟ್ಟಿಗೆ ….” ತಿಮ್ಮ ತಡವರಿಸಿದ. ಮತ್ತೆ ಏನು ಹೇಳಬೇಕೆಂದೇ ಅವನಿಗೆ ತೋಚಲಿಲ್ಲ.

“ಇನ್ನೇನೂ ನೆನಪಿಗೆ ಬರುತ್ತಿಲ್ಲವೇ? ಹಾಗಾದರೆ ನಾನು ಹೇಳುತ್ತೇನೆ ಕೇಳಿ ಬಿಡು. ಈ ಮರ ಇದೆಯಲ್ಲ? ಇದು ಭೂಮಿಗೆ, ಭೂಮಿಯಲ್ಲಿರುವ ನಮಗೆ ದೇವರು ಕೊಟ್ಟ ಒಂದು ವರ. ಇದ್ದು ಸಾವಿರಾರು ಜೀವಿಗಳಿಗೆ ಆಹಾರ, ಆಶ್ರಯ ಎಲ್ಲವನ್ನೂ ಒದಗಿಸುವುತ್ತದೆ. ನಮ್ಮ ಉಸಿರಾಟಕ್ಕೆ ಬೇಕಾದ ಶುದ್ಧ ಗಾಳಿಯನ್ನು ದೊರಕಿಸುತ್ತದ. ಮಳೆ ನೀರು ಭೂಮಿಯಲ್ಲಿ ಇಂಗಲು ನೆರವಾಗುತ್ತದೆ. ಹೆಚ್ಚು ಕಾಲ ನೆಲದಲ್ಲಿ ನೀರ ಪಸೆ ಉಳಿವಂತೆ ಮಾಡುತ್ತದೆ. ನೀರ ಒರತೆಯನ್ನು ಬಲಗೊಳಿಸುತ್ತದೆ. ಮೋಡಗಳನ್ನು ತಡೆದು, ಹೆಚ್ಚು ಮಳೆ ಸುರಿವುದಕ್ಕೂ ಕಾರಣವಾಗುತ್ತದೆ. ಹೀಗೆ ಮರದಿಂದಾಗುವ ಉಪಕಾರ ಬಹಳವಿದೆ.” ಅಜ್ಜ ವಿವಿರಿಸಿದ. ಮತ್ತೆ

“ಈಗ ನೀನೇ ಹೇಳು ತಮ್ಮಾ, ಈ ಮರಕ್ಕಾಗಿ ನಾವೇನು ಮಾಡಿದ್ದೇವೆ? ಇದಕ್ಕೆ ನಾವೇನು ನೀಡಿದ್ದೇವೆ?” ಅಜ್ಜ ಕೇಳಿದ.

“ಏನೂ ಇಲ್ಲ” ಸಹಜವಾಗಿಯೇ ಹೇಳಿದ ತಿಮ್ಮ.

“ಹಾಂ, ಸುಳ್ಳಾಡಬೇಡ ಹುಡುಗಾ. ಸರಿಯಾಗಿ ಯೋಚಿಸಿ, ಉತ್ತರ ಹೇಳು. ಈ ಮರಕ್ಕಾಗಿ ನಾನೇನೂ ಮಾಡಿಲ್ಲ. ನಾನೇನೂ ಕೊಟ್ಟಿಲ್ಲ ಇದು ನಿಜ. ಆದರೆ ಇದಕ್ಕೆ ನೀನೇನೂ ಮಾಡಿಲ್ಲವೇ? ನೀನೇನು ಕೊಟ್ಟಿಲ್ಲವೇ? ಯೋಚಿಸಿ ಹೇಳು’ ಎಂದ ಅಜ್ಜ. ಅವನು ತಿಮ್ಮನ ಮುಖವನ್ನೇ ದಿಟ್ಟಿಸುತ್ತಿದ್ದ. ತುಂಟ ನಗು ಅವನ ಮುಖದ ಮೇಲಿತ್ತು.

ತಿಮ್ಮ ಗಲಿಬಿಲಿಗೊಂಡ. ತಾನೇನು ಮಾಡಿದ್ದೆ? ಯಾವ ಸುಳ್ಳು ಮಾತು ಆಡಿದ್ದೆ? ಅವನು ಯೋಚಿಸಿದ. ತತ್‌ಕ್ಷಣ ಅವನು ಮಾಡಿದ ತಪ್ಪು ಅವನಿಗೆ ತಿಳಿದು ಹೋಯಿತು. ಈ ಮರಕ್ಕೆ ಕಲ್ಲು ಹೊಡೆದವನು ಅವನೇ ಅಲ್ಲವೇ? ಅವನಿಗೆ ನಾಚಿಕೆಯಾಯಿತು. ಅವನು ತಲೆ ತಗ್ಗಿಸಿದ.

“ಹೇಳೋ ತಮ್ಮಾ, ಈ ಮರಕ್ಕೆ ನೀನೇನು ಕೊಟ್ಟೆ ಹೇಳು? ಅಜ್ಜ ಮತ್ತೆ ಕೇಳಿದ.

‘ಕಲ್ಲೇಟು’ ತಿಮ್ಮ ಒಪ್ಪಿಕೊಂಡ. ಈಗ ಅವನು ನಿಜವನ್ನೇ ನುಡಿದಿದ್ದ.

‘ನೋಡು ತಮ್ಮಾ, ಹೂಬಿಟ್ಟು, ಮಿಡಿ, ಕಾಯಿ ಹಣ್ಣುಗಳನ್ನು ಹೊತ್ತು ನಿಂತ ಈ ಮರ, ಈ ಯಾವುದನ್ನೂ ತನಗಾಗಿ ಬಳಸುವುದಿಲ್ಲ ತನ್ನಲ್ಲಿರುವ ಎಲ್ಲವನ್ನೂ ನಮಗಾಗಿ, ಇತರ ಜೀವಿಗಳಿಗಾಗಿ ಕೊಟ್ಟು ಬಿಡುತ್ತದೆ. ಇಂಥ ಮರಕ್ಕೆ ನಾವು ಕಲ್ಲು ಹೊಡೆಯುತ್ತೇವೆ. ಇದನ್ನು ಗಾಯಗೊಳಿಸುತ್ತೇವೆ. ಇದಕ್ಕೆ ನೋವು ಕೊಡುತ್ತೇವೆ. ಎಷ್ಟೋ ಬಾರಿ ಇದನ್ನು ಕಡಿದು, ಉರುಳಿಸಿ ಬಿಡುತ್ತೇವೆ, ನಾಶಪಡಿಸುತ್ತೇವೆ. ಇದು ಸರಿಯೇ ತಮ್ಮಾ? ಯೋಚಿಸಿ, ಉತ್ತರ ಹೇಳಬೇಕು ನೀನು’ ಎಂದ ಅಜ್ಜ.

‘ಇದು ತಪ್ಪು ಅಜ್ಜಾ. ನಿಜವಾಗಿಯೂ ತಪ್ಪು’ ಒಪ್ಪಿಕೊಳ್ಳುತ್ತೇನೆ’ ತಿಮ್ಮ ಹೇಳಿದ. ತನ್ನ ತಪ್ಪಿಗಾಗಿ ಅವನು ಪಶ್ಚಾತ್ತಾಪ ಪಡುತ್ತಿದ್ದ.

“ಇನ್ನೊಂದು ಸಂಗತಿ ಇದೆ. ಅದನ್ನೂ ನಿನಗೆ ನಾನು ಹೇಳಬೇಕು.” ಅಜ್ಜ ಮುಂದುವರಿಸಿದ. “ನೀನು ಮರದ ಹಣ್ಣಿಗೆಂದು ಕಲ್ಲು ಹೊಡೆದಿದ್ದೆ. ಮರದ ಹಿಂದುಗಡೆ ನೆರಳಿತ್ತಲ್ಲ? ಅಲ್ಲಿ ನಾನು ಕೂತಿದ್ದೆ. ಅದು ನಿನಗೆ ತಿಳಿದಿರಲಿಲ್ಲ, ನಿಜ. ಆದರೆ ಮರಕ್ಕೆಂದು ನೀನು ಎಸೆದ ಕಲ್ಲು, ನನ್ನ ತಲೆಗೆ ಬಿದ್ದು ಪೆಟ್ಟಾಯಿತು; ನೆತ್ತರು ಸುರಿಯಿತು. ಈ ನನ್ನ ಕರವಸ್ತ್ರವನ್ನು ನೋಡು” ಅಜ್ಜ, ತನ್ನ ಕೈಯಲ್ಲಿದ್ದ ಬಟ್ಟೆಯ ತುಂಡನ್ನು ತೋರಿಸಿದ. ನೆತ್ತರಲ್ಲಿ ನೆನೆದು, ಅದು ಕೆಂಪಗಾಗಿತ್ತು. ತಿಮ್ಮನ ಎದೆ ಮತ್ತೂ ಡವಗುಟ್ಟ ತೊಡಗಿತು. ತಾನು ಎಂಥ ತಪ್ಪು ಮಾಡಿಬಿಟ್ಟೆ ಎಂದು ಅವನ ಮನ ಮರುಗಿತು. ಅವನ ಮುಖ ಬಿಳಚಿಕೊಂಡಿತು.

ಅಜ್ಜ ಮತ್ತೆ ಹೇಳಿದ, ‘ನೀನಿನ್ನೂ ಚಿಕ್ಕವನು, ಹೆಚ್ಚಿನ ತಿಳಿವಳಿಕೆ ಇಲ್ಲದವನಲು. ಗೊತ್ತಿಲ್ಲದೆ ನೀನು ತಪ್ಪು ಮಾಡಿದ್ದೀಯಾ. ಅದನ್ನು ನಾನು ಬಲ್ಲೆ. ಹಾಗಾಗಿ ನಿನ್ನನ್ನು ಕ್ಷಮಿಸಿದ್ದೇನೆ. ಆದರೆ, ಎಲ್ಲರೂ ಹೀಗೆ ಮಾಡುತ್ತಾರೆ ಎಂದುಕೊಳ್ಳಬೇಡ. ಕಲ್ಲೇಟಿಗೆ ಇದಕ್ಕಿಂತ ದೊಡ್ಡ ಗಾಯವೂ ಆಗಬಹುದಲ್ಲ? ಆಗ ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟವರು ಏನು ಮಾಡಬಹುದು? ಹೇಗೆ ಸೇಡು ತೀರಿಸಿಕೊಳ್ಳಬಹುದು ಹೇಳುವುದು ಸಾಧ್ಯವೇ? ಇಲ್ಲವಲ್ಲ? ಆದುದರಿಂದ ಹೇಳುತ್ತಿದ್‌ಏ ಮಗೂ, ಚೆನ್ನಾಗಿ ಯೋಚಿಸಿ ಕೆಲಸ ಮಡು. ನಿನ್ನಿಂದ ಇಂಥ ತಪ್ಪು ಇನ್ನೊಮ್ಮೆ ಆಗದಿರಲಿ” ಅಜ್ಜ ಮಾತು ಮುಗಿಸಿದ.

“ಇಲ್ಲ, ಅಜ್ಜಾ, ಇನ್ನೆಂದೂ ಇಂಥ ಕೆಲಸ ಮಾಡುವುದಿಲ್ಲ. ನಿಮಗೆ ನಾನು ಮಾತುಕೊಡುತ್ತೇನೆ. ನನ್ನ ಮಾತನ್ನು ನಂಬಿ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ” ತಿಮ್ಮ ಕೈಮುಗಿದು ಬೇಡಿಕೊಂಡ. ಅವನಿಗೆ ಈಗ ತನ್ನ ತಪ್ಪಿನ ಅರಿವಾಗಿತ್ತು. ಪಶ್ಚಾತ್ತಾಪದಿಂದ ಅವನ ಮನ ಬೇಯುತ್ತಿತ್ತು.

“ನಾನು ಆಗಲೇ ಹೇಳಿಲ್ಲವೇ ಮಗೂ? ತಿಳಿಯದೆ ನೀನು ತಪ್ಪು ಮಾಡಿದ್ದೀಯಾ. ನಿನ್ನನ್ನು ನಾನು ಸಂಪೂರ್ಣ ಕ್ಷಮಿಸಿದ್ದೇನೆ. ಶಾಲೆಗೆ ಹೋಗುವ ಹುಡುಗ ನೀನು. ಚೆನ್ನಾಗಿ ಕಲಿ. ಒಳ್ಳೆಯವನಾಗಿ ಬಾಳು. ಸಾಧ್ಯವಾದರೆ ಪ್ರತಿವರ್ಷ ಒಂದೆರಡು ಗಿಡಗಳನ್ನಾದರೂ ನೆಟ್ಟು ಬೆಳೆಸಲು ಯತ್ನಿಸು. ದೇವರು ನಿನ್ನನ್ನು ಕಾಪಾಡಲಿ” ಅಜ್ಜ ತಿಮ್ಮನನ್ನು ಹರಸಿದ; ಪ್ರೀತಿಯಿಂದ ಅವನ ಬೆನ್ನ ಮೇಲೆ ಕೈಯಾಡಿಸಿದ.

“ನಿಮ್ಮ ಮಾತನ್ನು ನಡೆಸಿಕೊಡುತ್ತೇನೆ ಅಜ್ಜಾ., ಈ ಮಳೆಗಾಲದಲ್ಲೇ ನಾಲ್ಕು ಗಿಡಗಳನ್ನಾದರೂ ಖಂಡಿತ ನೆಡುತ್ತೇನೆ. ಬೇಸಗೆಯಲ್ಲಿ ನೀರೆರೆದು, ಅವುಗಳನ್ನು ಬೆಳೆಸುತ್ತೇನೆ, ಉಳಿಸುತ್ತೇನೆ. ತಿಮ್ಮ ಭರವಸೆ ನೀಡಿದ.

* * *