ಇದೊಂದು ಮಕ್ಕಳ ಕಥಾಸಂಗ್ರಹ. ಇದರಲ್ಲಿ ಐದು ಕಥೆಗಳಿವೆ. ಮಕ್ಕಳೇ ಇಲ್ಲಿನ ಪ್ರಧಾನ ಪಾತ್ರಗಳು. ಪರೋಪಕಾರ, ತ್ಯಾಗ, ಜೀವದಯೆ, ಕೋಮುಸಾಮರಸ್ಯ ಇತ್ಯಾದಿ ನೈತಿಕ ಮೌಲ್ಯಗಳನ್ನು ಪರೋಕ್ಷವಾಗಿ ಬಿಂಬಿಸುವ ಕತೆಗಳಿವು. ನೆಮ್ಮದಿಯ  ಬದುಕಿಗೆ ಚಿನ್ನಕ್ಕಿಂತ ಅನ್ನ ಮಲುಖ್ಯ, ಪ್ರೀತಿ ಮುಖ್ಯ, ಮರ ಎನ್ನುವುದು ಈ ಭೂಮಿಗೆ ದೇವನಿತ್ತ ವರ-ಇಂಥ ವಿಚಾರಗಳನ್ನು ಬಿಂಬಿಸುವ ಕಥೆಗಳೂ ಇಲ್ಲಿವೆ. ಮಕ್ಕಳು ಇವುಗಳ ಸದುಪಯೋಗ ಪಡೆದರೆ ನನ್ನ ಶ್ರಮ ಸಾರ್ಥಕ.

ಈ ಪುಸ್ತಕವನ್ನು ಪ್ರಕಟಿಸಿ, ಉಪಕಾರ ಮಾಡಿದವರು ನನ್ನ ನಿರಂತರ ಪ್ರೋತ್ಸಾಹಕರಾದ ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದ ಶ್ರೀ ಕೆ. ಭುವನಾಭಿರಾಮ ಉಡುಪರು. ಅವರಿಗೆ ನಾನು ಚಿರ ಋಣಿ.

ಈ ಪುಸ್ತಕಕ್ಕೆ ಅಂದವಾದ ಚಿತ್ರಗಳನ್ನು ಬರೆದುಕೊಟ್ಟು ಸಹಕರಿಸಿದವರು ನನ್ನ ಕಲಾವಿದ ಮಿತ್ರ ಶ್ರೀ ಬಾಲ ಮಧುರ ಕಾನನ ಅವರು. ಇದನ್ನು ಅಂಧವಾಗಿ ಮುದ್ರಿಸಿದವರು ಕಿನ್ನಿಗೋಳಿ ಯುಗಪುರುಷ ಗ್ರಾಫಿಕ್ಸ್‌ನ ಬಂಧುಭಗಿನಿಯರು. ಇವರೆಲ್ಲರಿಗೆ ನಾನು ಆಭಾರಿ.

ಕಿರು ಹೊತ್ತಗೆಯಿದು ಹೊರಬರುತ್ತಿರುವ ಈ ಸಂದರ್ಭದಲ್ಲಿ ಹಿಂದೆ ನನಗೆ ಮಹದುಪಕಾರ ಮಾಡಿದ್ದ ಹಿರಿಯರು ದಿ. ಕೊ. ಅ. ಉಡುಪ ಮತ್ತು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ.

ಪಳಕಳ ಸೀತಾರಾಮ ಭಟ್ಟ
ಶಿಶುಸಾಹಿತ್ಯ ಮಾಲೆ
ಮಿತ್ತಬೈಲು
೧೧-೭-೨೦೦೬