ಪುಟ್ಟನ ಮನೆ ಇದ್ದುದು ಒಂದು ಹಳ್ಳಿಯಲ್ಲಿ. ಮನೆಯ ಎದುರುಗಡೆ ಅಂಗಳವಿತ್ತು. ಅಂಗಳದ ಇಕ್ಕಡೆಗಳಲ್ಲಿ ಬೆಳೆದು ನಿಂತ ಸಾಲುಮರಗಳಿದ್ದವು. ಅಂಗಳದ ಮುಂದುಗಡೆ ತೋಟವಿತ್ತು. ಮನೆಯ ಸುತ್ತಮುತ್ತ ಬಗೆ ಬಗೆಯ ಹೂಗಿಡ ಬಳ್ಳಿಗಳಿದ್ದವು. ನೋಟ ಹರಿಸಿದಲ್ಲೆಲ್ಲ ಅಲ್ಲಿ ಹಸಿರು ಕಂಗೊಳಿಸುತ್ತಿತ್ತು. ಅಳಿಲಿನ ‘ಚಿಕ್‌ ಚಿವ್‌’, ಹಕ್ಕಿಗಳ ಚಿಲಿಪಿಲಿ ಆಗಾಗ ಕೇಳಿಬರುತ್ತಿತ್ತು.

ಒಂದು ಸಂಜೆ ಪುಟ್ಟ ಮನೆಯ ಅಂಗಳದಲ್ಲಿ ಆಡುತ್ತಿದ್ದ. ಅಕ್ಕ ಸ್ವಾತಿ ಜೊತೆಗಿದ್ದಳು. ಆಟ ಜೋರಾಗಿ ಸಾಗಿತ್ತು. ಆಗಲೇ ಹತ್ತಿರದ ಮರದಿಂದ ವಸ್ತುವೊಂದು ಕೆಳಗೆ ಬಿದ್ದಂತೆ ಕಂಡಿತು. ಕ್ಷಣದೊಳಗೆ ಕಾಗೆಯೊಂದು ಹಾರಿ ಬಂತು. ‘ಕಾ ಕಾ’ ಎಂದು ಕೂಗಿತು. ಅಲ್ಲಿ ಬಿದ್ದಿದ್ದ ಏನನ್ನೋ ಎತ್ತಿಕೊಂಡು, ಹಾರಿಹೋಯಿತು. ಪುಟ್ಟ ಇದನ್ನು ನೋಡುತ್ತಲೇ ಇದ್ದ. ಅವನ ಕುತೂಹಲ ಕೆರಳಿತು. ಅವನು ಅತ್ತ ಓಡಿದ. ಸುತ್ತ ಒಮ್ಮೆ ಕಣ್ಣಾಡಿಸಿದ. ಉಣ್ಣೆಯ ಚೆಂಡಿನಂಥ ವಸ್ತುವೊಂದು ಅಲ್ಲಿತ್ತು. ಪುಟ್ಟ ಬಗ್ಗಿ ನೋಡಿದ. ಅದು ಪುಟಾಣಿ ಅಳಿಲ ಮರಿ ಎನ್ನುವುದು ಅವನಿಗೆ ತಿಳಿಯಿತು. ಕೆಳಕ್ಕೆ ಬಿದ್ದು ಅದಕ್ಕೆ ಪೆಟ್ಟಾಗಿರಬೇಕು. ಆದರೆ ಅದು ಸತ್ತಿರಲಿಲ್ಲ. ಅದರ ದೇಹ ನಡುಗುತ್ತಿತ್ತು.

“ಅಕ್ಕಾ, ಅಕ್ಕಾ, ಇಲ್ಲಿ ಬಾ. ಇಲ್ಲೊಂದು ಅಳಿಲ ಮರಿ ಬಿದ್ದುಕೊಂಡಿದೆ. ಬೇಗ ಬಾ” ಪುಟ್ಟ ಕೂಗಿ ಹೇಳಿದ. ಅಕ್ಕ ಅವನ ಬಳಿಗೆ ಓಡಿ ಬಂದಳು. “ಆಗ ಎರಡು ಮರಿಗಳು ಕೆಳಗೆ ಬಿದ್ದಿರಬೇಕು. ಒಂದನ್ನು ಕಾಗೆ ಒಯ್ದಿರಬೇಕು. ಇದೊಂದು ಇಲ್ಲಿ ಉಳಿದಿದೆ” ಪುಟ್ಟ ವಿವರಿಸಿದ.

ಸ್ವಾತಿ, ಅಳಿಲ ಮರಿಯನ್ನು ನೋಡಿದಳು. ನಡುಗುತ್ತಲೇ ಅದು ನೆಲದಲ್ಲಿ ಬಿದ್ದುಕೊಂಡಿತ್ತು. “ಅಯ್ಯೋ ಪಾಪ! ಅದಕ್ಕೆ ಎಷ್ಟು ನೋವಾಗಿತ್ತೋ ಏನೋ” ಎಂದಳು ಅವಳು. “ಈಗ ಏನು ಮಾಡೋಣ? ಇಲ್ಲೇ ಬಿಟ್ಟರೆ ಇದನ್ನೂ ಕಾಗೆ ಒಯ್ದು ಬಿಟ್ಟೀತು” ತಮ್ಮ ಕೇಳಿದ. ಮಕ್ಕಳಿಬ್ಬರೂ ಯೋಚಿಸತೊಡಗಿದರು. ಅಳಿಲ ಮರಿಯ ಮೇಲೆ ಅವರಿಗೆ ಕರುಣೆ ಮೂಡಿತ್ತು. ಅದನ್ನು ಮನೆಗೆ ಒಯ್ಯಲು ಅವರು ನಿರ್ಧರಿಸಿದರು. ಆದರೆ ಹೇಗೆ ಒಯ್ಯಬೇಕು? ಯಾವ ರೀತಿಯಲ್ಲಿ? ಅದೇ ಅವರಿಗೊಂದು ಸಮಸ್ಯೆಯಾಯಿತು. ಅವರು ಯೋಚನೆಗೆ ಒಳಗಾದರು. ಆಗ ಪುಟ್ಟನಿಗೊಂದು ಉಪಾಯ ಹೊಳೆಯಿತು.

ತತ್‌ಕ್ಷಣ ಪುಟ್ಟ ಮನೆಗೆ ಓಡಿದ, ರಟ್ಟಿನ ತುಂಡು ಒಂದನ್ನು ಹುಡುಕಿ ತಂದ; ಅಳಿಲ ಮರಿಯನ್ನು ಮೆಲ್ಲನೆ ಎತ್ತಿ, ರಟ್ಟಿನ ಮೇಲೆ ಇರಿಸಿದ; ಎಚ್ಚರಿಕೆಯಿಂದ ಮರಿಯನ್ನು ತನ್ನ ಮನೆಗೆ ತಂದ.

“ಅಮ್ಮಾ, ನೋಡಮ್ಮಾ, ಅಳಿಲ ಮರಿಯೊಂದು ಮರದಿಂದ ಕೆಳಕ್ಕೆ ಬಿತ್ತು. ಇದರ ಜೊತೆಯನ್ನು ಕಾಗೆ ಹೊತ್ತು ಒಯ್ದಿತು. ಇದು ಅಲ್ಲೇ ಇದ್ದರೆ ಕಾಗೆಯ ಬಾಯಿಗೆ ಬೀಳುತ್ತದೆ. ಅದಕ್ಕಾಗಿಯೇ ನಾವಿದನ್ನು ಮನೆಗೆ ತಂದೆವು. ಹೇಳಮ್ಮಾ, ಇದನ್ನು ನಾವು ಎಲ್ಲಿಡಬೇಕು? ಅವನು ಅಮ್ಮನನ್ನು ಕೇಳಿದ.

ಅಮ್ಮ ಅಳಿಲ ಮರಿಯನ್ನು ನೋಡಿದರು. “ಅಯ್ಯೋ, ತೀರಾ ಪುಟ್ಟ ಮರಿ ಇದು. ಇದನ್ನು ಏನು ಮಾಡುತ್ತೀರಿ? ಎಲ್ಲಿ ಇಡುತ್ತೀರಿ? ಹೇಗೆ ಸಾಕುತ್ತೀರಿ? ನಾಯಿ – ಬೆಕ್ಕುಗಳಿಂದ ಇದನ್ನು  ಹೇಗೆ ರಕ್ಷಿಸುತ್ತೀರಿ? ಅಮ್ಮ ಪೇಚಾಡಿಕೊಂಡರು.

“ಹಾಗಾದರೆ ನಾವೇನು ಮಾಡಬೇಕಿತ್ತು? ಇದನ್ನು ಅಲ್ಲೇ ಸಾಯಲು ಬಿಡಬೇಕಿತ್ತೇ?” ದನಿ ಏರಿಸಿ ಕೇಳಿದಳು ಸ್ವಾತಿ. ಅವಳಿಗೆ ಕೋಪ ಬಂದಿತ್ತು. ಮಕ್ಕಳಿಗೆ ಏನು ಹೇಳಲಿ ಎನ್ನುವುದು ಅಮ್ಮನಿಗೂ ತಿಳಿಯದಾಯಿತು. ಅವರು ಸಹ ಯೋಚನೆಗೆ ಒಳಗಾದರು. ಅಷ್ಟರಲ್ಲಿ ಅವರ ಹಿರಿಯ ಮಗ ರಮೇಶನ ಪ್ರವೇಶವಾಯಿತು.

“ಅರೆ, ನೀವೆಲ್ಲ ಇದೇನು ಹೀಗೆ ನಿಂತು ಬಿಟ್ಟಿದ್ದೀರಿ?” ಆಶ್ಚರ್ಯದಿಂದ ಅವನು ಕೇಳಿದ. ಆಗಲೇ ಎದುರಿಗಿದ್ದ ಪುಟ್ಟ ಅಳಿಲ ಮರಿ ಅವನ ಕಣ್ಣಿಗೆ ಬಿತ್ತು. “ಅಯ್ಯೋ, ಈ ಚಿಕಣಿ ಮರಿ ಎಲ್ಲಿತ್ತು? ಯಾರು ತಂದರು ಇದನ್ನು?” ಅವನು ಮತ್ತೆ ವಿಚಾರಿಸಿದ. ನಡೆದ ಸಂಗತಿಯನ್ನೆಲ್ಲ ಅಮ್ಮ ವಿವರಿಸಿ ಹೇಳಿದರು. “ನೀನಾದ್ರೂ ಹೇಳೋ ರಮೇಶಾ, ಈ ಪುಟ್ಟ ಮರಿಯನ್ನು ಎಲ್ಲಿ ಇರಿಸುವುದು? ಹಾಲು ಕುಡಿಯಲಿಕ್ಕೂ ತಿಳಿಯದ ಮರಿಯಿದು. ಇದನ್ನು ಹೇಗೆ ಬದುಕಿಸುವುದು?” ಅಮ್ಮ ಕೇಳಿದರು.

“ಮುಚ್ಚಳವಿರುವ ಸರಿಗೆಯ ಬುಟ್ಟಿ ಇದೆಯಲ್ಲ? ಅದರಲ್ಲಿ ಹತ್ತಿಯನ್ನೊ ಬಟ್ಟೆಯನ್ನೊ ಹರಡಬೇಕು, ಮರಿಯನ್ನು ಒಳಗಡೆ ಇರಿಸಬೇಕು. ಮೇಲುಗಡೆಗೆ ಮುಚ್ಚಳ ಮುಚ್ಚಿ, ಬುಟ್ಟಿಯನ್ನು ಎತ್ತರದಲ್ಲಿ ತೂಗುಹಾಕಬೇಕು. ಆಗ ಏನೂ ತೊಂದರೆಯಾಗದು” ಸಮಸ್ಯೆಗೊಂದು  ಪರಿಹಾರ ಸೂಚಿಸಿದ ರಮೇಶ.

‘ಹೌದಮ್ಮಾ ಅಣ್ಣ ಹೇಳಿದ್ದೇ ಸರಿ. ಹಾಗೇ ಮಾಡೋಣ’ ಮಕ್ಕಳೂ ದನಿಗೂಡಿಸಿದರು.

“ಅಂತೂ ಒಂದು ಸಮಸ್ಯೆ ಪರಿಹಾರವಾಯಿತು. ಆದರೆ ಇನ್ನೊಂದು ಇದೆಯಲ್ಲ? ಈ ಮರಿಗೆ ಹಾಲು ಕುಡಿಸುವ ಬಗೆ ಹೇಗೆ?  ಯಾರು ಕುಡಿಸುವುದು? ಯಾವ ರೀತಿಯಲ್ಲಿ?” ಮತ್ತೆ ಬಂತು ಅಮ್ಮನ ಪ್ರಶ್ನೆ.

“ಅಕ್ಕ ಇದರ ಬಾಯಿ ಅಗಲಿಸಿ ಹಿಡಿಯಲಿ. ಚಮಚದಲ್ಲಿ ನಾನು ಹಾಲು ಹೊಯ್ಯುತ್ತೇನೆ” ಪುಟ್ಟ ತನ್ನ ಸಲಹೆ ನೀಡಿದ.

“ಅಯ್ಯಯ್ಯೋ, ಅದು ನನ್ನಿಂದಾಗದು. ನೀನು ಅದರ ಬಾಯಿ ಅಗಲಿಸಿ ಹಿಡಿ. ಹಾಲು ನಾನು ಹೊಯ್ಯುತ್ತೇನೆ.” ಸ್ವಾತಿ ತಿದ್ದುಪಡಿ ಸೂಚಿಸಿದಳು.

“ಮೊದಲು ಆ ಸರಿಗೆಯ ಬುಟ್ಟಿಯನ್ನು ಇಲ್ಲಿ ತನ್ನಿ. ಈ ಮರಿಯನ್ನು ಸುರಕ್ಷಿತವಾಗಿ ಅದರಲ್ಲಿ ಇರಿಸಿಬಿಡಿ. ಮತ್ತೆ ಇದಕ್ಕೆ ಹಾಲು ಕುಡಿಸುವ ವಿಚಾರ ಯೋಚಿಸದರಾಯಿತು” ರಮೇಶ ಹೇಳಿದ. ಸ್ವಾತಿ ಒಳಗೆ ಹೋಗಿ, ಸರಿಗೆಯ ಬುಟ್ಟಿ ತಂದಳು. ಅಮ್ಮ ತನ್ನ ಹಳೆಯ ಸೀರೆಯ ತುಂಡನ್ನು ತಂದು, ಅದನ್ನು ಮಡಚಿಕೊಟ್ಟರು. ಸ್ವಾತಿ ಅದನ್ನು ಬುಟ್ಟಿಯೊಳಗೆ ಹರಡಿದಳು. ಒಡನೆ ಪುಟ್ಟ ಅಳಿಲ ಮರಿಯನ್ನು ಮೆಲ್ಲನೆ ಎತ್ತಿ, ಬುಟ್ಟಿಯೊಳಗೆ ಇರಿಸಿದ. ರಮೇಶ ಬುಟ್ಟಿಯ ಮುಚ್ಚಳವನ್ನು ಮುಚ್ಚಿ, ಮೇಲುಗಡೆಯ ಜಂತಿಗೆ ಅದನ್ನು ತೂಗ ಹಾಕಿದ.

“ನನಗೆ ಕೆಲಸವಿದೆ. ನಾನಿನ್ನು ಬರುತ್ತೇನೆ.” ಎನ್ನುತ್ತ ಅವನು ಅಲ್ಲಿಂದ ಹೊರಟುಹೋದ.

ಇನ್ನೂ ಒಂದು ಸಮಸ್ಯೆ ಉಳಿದು ಬಿಟ್ಟಿತಲ್ಲ? ಈ ಪುಟ್ಟ ಮರಿಗೆ ಹಾಲುಣಿಸುವ ಬಗೆ ಹೇಗೆ?  ಇದರ ಬಗ್ಗೆ ಉಳಿದವರ ಯೋಚಿಸತೊಡಗಿದರು.

“ತಾಯಿ ಅಳಿಲಿನ ಮೊಲೆಗೆ ಬಾಯಿ ಹಾಕಿ ಹಾಳು ಚೀಪುವುದು ಮಾತ್ರ ಈ ಮರಿಗೆ ಗೊತ್ತಿರಬಹುದು’ ಅಮ್ಮ ಅಭಿಪ್ರಾಯ ಸೂಚಿಸಿದರು.

“ಅಣ್ಣನಲ್ಲಿ ಪೆನ್ನಿಗೆ ಶಾಯಿ ತುಂಬಿಸುವ ಹಳೆಯ ಫಿಲ್ಲರ್ ಇರಬಹುದಲ್ಲ? ಅದರಲ್ಲಿ ಹಾಲು ತುಂಬಿಸೋಣ. ಅದರ ತುದಿ ಸ್ವಲ್ಪ ಹತ್ತಿಯನ್ನು ಸಿಕ್ಕಿಸಿ, ಅಳಿಲ ಮರಿಯ ಮೂತಿಗೆ ತಾಗಿ ಇರಿಸೋಣ. ಫಿಲ್ಲರನ್ನು ತುಸು ಒತ್ತಿದರೆ, ಒಳಗಿನ ಹಾಲು ತಟಕು ತಟಕಾಗಿ ಹೊರಬರುವುದು. ಆಗ ಮರಿ ಅದನ್ನು ಚೀಪುವುದು ನೋಡೋಣ” ಸ್ವಾತಿ ಸಲಹೆ ನೀಡಿದಳು.

“ಹಾಂ, ಹೌದು, ಅದೇ ಸರಿಯಾದ ಉಪಾಯ” ಪುಟ್ಟನು ಒಪ್ಪಿಕೊಂಡ. ಕೂಡಲೇ ಅಳಿಲ ಮರಿಗೆ ಹಾಲು ಕುಡಿಸುವ ಪ್ರಯೋಗ ಅವರು ಸಿದ್ಧತೆ ನಡೆಸಿದರು. ಬಹಳ ಪ್ರಯತ್ನದ ಬಳಿಕ ಅವರ ಪ್ರಯೋಗ ಯಶಸ್ವಿಯಾಯಿತು. ಚೇತರಿಸಿಕೊಂಡ ಅಳಿಲ ಮರಿ, ನಿಧಾನವಾಗಿ ಹಾಲು ಚೀಪತೊಡಗಿತು. ಮಕ್ಕಳಿಗೆ ಎದುರಾದ ಸಮಸ್ಯೆಯೊಂದು ಹೀಗೆ ಪರಿಹಾರ ಕಂಡಿತು.

ಅಂದಿನಿಂದ ಸ್ವಾತಿ ಮತ್ತು ಪುಟ್ಟ, ಅಳಿಲ ಮರಿಯ ಆರೈಕೆಗೆ ನಿಂತರು, ಪ್ರೀತಿಯಿಂದ ಅದನ್ನು ನೋಡಿಕೊಂಡರು. ಮೊದಲಿಗೆ ಹಾಲು ಮಾತ್ರ ಅದಕ್ಕೆ ಸಾಕಾಗುತ್ತಿತ್ತು. ಮತ್ತೇನನ್ನೂ ಅದು ಸೇವಿಸುತ್ತಿದ್ದಿಲ್ಲ. ಮುಂದೆ ಕ್ರಮೇಣ ಅದು ಬಾಳೆಹಣ್ಣು, ಮಾವಿನ ಹಣ್ಣು ಇತ್ಯಾದಿಗಳನ್ನೂ ತಿನ್ನತೊಡಗಿತು. ದಿನದಿಂದ ದಿನಕ್ಕೆ ಅದು ಬೆಳೆದು ದೊಡ್ಡದಾಯಿತು. ಅದಕ್ಕೆ ಹಾಲು – ಹಣ್ಣು ಕೊಡುವ ಕೆಲಸ, ಹೊಲಸಾದಾಗ ಅದರ ಗೂಡನ್ನು (ಬುಟ್ಟಿ) ಸ್ವಚ್ಛ ಮಾಡುವ ಕೆಲಸ ಎಲ್ಲವನ್ನೂ ಮಕ್ಕಳು ನೋಡಿಕೊಂಡರು. ಅಳಿಲಿನ ಒಡನಾಟ ಅವರಿಗೆ ಖುಷಿಕೊಡುತ್ತಿತ್ತು. ಆ ಮರಿ ಸಹ ಮಕ್ಕಳ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಂಡಿತು. ಅವರ ದನಿ ಕೇಳಿದರೆ ಸಾಕು, ಅದು ಎದ್ದು ಬರುತ್ತಿತ್ತು, ಗೂಡಿನ ಬಾಗಿಲು ತೆರೆದೊಡನೆ, ಅವರ ಹೆಗಲಿಗೆ ಅದು ಜಿಗಿಯುತ್ತಿತ್ತು. ತಲೆಯ ಮೇಲಕ್ಕೂ ಏರುತ್ತಿತ್ತು. ಆಗ ಅವರಿಗೆ ಕಚಗುಳಿ ಇಟ್ಟಂತೆ ಆಗುತ್ತಿತ್ತು. ಹೀಗೆ ಅಳಿಲ ಮರಿ ಮತ್ತು ಮಕ್ಕಳ ಒಡನಾಟ ಮುಂದುವರಿಯಿತು. ನಾಯಿ-ಬೆಕ್ಕುಗಳು ಅಳಿಲ ಮರಿಯ ಬಳಿಗೆ ಬರದಂತೆ ಮಕ್ಕಳು ಎಚ್ಚರಿಕೆ ವಹಿಸುತ್ತಿದ್ದರು. ಶಾಲೆಗೆ ಹೋಗುವ ಮೊದಲು ಅದನ್ನು ಗೂಡಿನೊಳಗೆ ಇರಿಸಿ, ಮುಚ್ಚಳ ಹಾಕಲು ಅವರು ಮರೆಯುತ್ತಿರಲಿಲ್ಲ.

ಒಂದು ದಿನ ಸ್ವಾತಿ ಮತ್ತು ಪುಟ್ಟ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದರು. ದಾರಿ ಸಾಗುತ್ತಿದ್ದಂತೆ ಅವರೊಳಗೆ ಭಾರೀ ಚರ್ಚೆಯೊಂದು ನಡೆಯುತ್ತಿತ್ತು. “ಅಳಿಲ ಮರಿ ಈಗ ದೊಡ್ಡದಾಗಿದೆ. ಅದನ್ನು ನಮ್ಮ ತೋಟದಲ್ಲಿ ಬಿಟ್ಟು ಬಿಡೋಣ. ಇನ್ನು ಅದು ಸ್ವತಂತ್ರವಾಗಿ ಬದುಕಲಿ” ಸ್ವಾತಿ ಹೇಳುತ್ತಿದ್ದಳು.

“ನಿನಗೆ ಸೋತು ಹೋಗಿದ್ದರೆ ಹೇಳು. ನೀನಿನ್ನು ಅದರ ಕೆಲಸ ಮಾಡಬೇಕಿಲ್ಲ. ನಾನೊಬ್ಬನೇ ಮಾಡುತ್ತೇನೆ. ಅದು ನನಗೆ ಬೇಕು ಪುಟ್ಟ ವಾದಿಸುತ್ತಿದ್ದ. ಬಹಳ ಹೊತ್ತು ಅವರೊಳಗೆ ವಾಗ್ವಾದ ನಡೆದಿತ್ತು. ಕೊನಗೆ “ಅಮ್ಮನನ್ನು ಕೇಳೋಣ. ಅವರು ಹೇಳಿದಂತೆ ಮಾಡೋಣ” ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದರು.

ಅಂದು ಮನೆಯ ಮೆಟ್ಟಲು ಏರುತ್ತಿದ್ದಂತಯೇ ಸ್ವಾತಿ ಅಮ್ಮನನ್ನು ಕರೆದಳು. “ಅಮ್ಮಾ, ನಮ್ಮ ಅಳಿಲ ಮರಿ ಈಗ ದೊಡ್ಡದಾಗಿದೆ. ಅದಕ್ಕೆ ನಮ್ಮ ಸಹಾಯ ಅಗತ್ಯವಿಲ್ಲ. ಇನ್ನು ಅದನ್ನು ಬಿಟ್ಟು ಬಿಡೋಣವೇ?” ಅವಳು ಕೇಳಿದಳು.

ಮಗಳ ಮಾತು ಕೇಳಿ ಅಮ್ಮನಿಗೆ ಆಶ್ಚರ್ಯವಾಯಿತು. ಮಗಳು ಇಂದು ಹೀಗೇಕೆ ಹೇಳುತ್ತಿದ್ದಾಳೆ ಎನ್ನುವುದು ಅವರಿಗೆ ಅರ್ಥವಾಗಲಿಲ್ಲ. ಅವಳ ಯೋಚನೆಯಂತೂ ಸರಿಯಾದುದೇ. ಕೆಲವು ಸಮಯದ ಹಿಂದೆಯೇ ಅವರು ಹಾಗೆ ಯೋಚಿಸಿದ್ದರು. ಅಳಿಲಿನ ಬಗ್ಗೆ ಮಕ್ಕಳಿಗಿರುವ ಪ್ರೀತಿಯನ್ನು ತಿಳಿದು, ಅವರು ಹಿಂಜರಿದಿದ್ದರು ಅಷ್ಟೇ. ಈಗ ಅವರಿಗೆ ಸಂತೋಷವೇ ಆಯಿತು. “ಒಳ್ಳೆಯದು. ಹಾಗೇ ಮಾಡೋಣ. ಅಳಿಲನ್ನು ಬಿಟ್ಟು ಬಿಡೋಣ.” ಅವರು ಹೇಳಿದರು ಮತ್ತೆ ತುಸು ತಡೆದು,” ಅದಿರಲಿ, ಇಂದು ಈ ಯೋಚನೆ ಏಕೆ ಬಂತು? ಹೇಗೆ ಬಂತು?” ಅವರು ಕೇಳಿದರು.

“ಅಮ್ಮಾ, ಇಂದು ನಮ್ಮ ಟೀಚರ್ “ಪಂಜರ ಪಕ್ಷಿ” ಕವನ ಓದಿದರು. ಪಂಜರದ ಬಂಧನದಲ್ಲಿದ್ದ ಪಕ್ಷಿಯ ಕೊರಗನ್ನು ಮನಮುಟ್ಟುವಂತೆ ಅವರು ವಿವರಿಸಿದರು. “ಪ್ರತಿಯೊಂದು ಜೀವಿಯೂ ಸ್ವಾತಂತ್ಯ್ರವನ್ನು ಪ್ರೀತಿಸುತ್ತದೆ. ಮೃಗ ಪಕ್ಷಿಗಳು ಸಹ ಸ್ವತಂತ್ರವಾಗಿರಲು ಬಯಸುತ್ತವೆ. ಬಂಧನಕ್ಕೆ ಒಳಗಾದಾಗ ಅವು ತಮ್ಮ ಸ್ವಾತಂತ್ಯ್ರದಿಂದ ವಂಚಿತವಾಗುತ್ತವೆ. ತಮ್ಮ ಬಳಗದ ಸಹವಾಸ ಸುಖವನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ಆಹಾರ, ಆಶ್ರಯ ಸಿಕ್ಕಿದರೂ, ಬಂಧನದಲ್ಲಿ ಅವು ಕೊರಗುತ್ತಲೇ ಇರುತ್ತವೆ” ಎಂದರು ಅವರು. ಹಾಗಾಗಿ ನಾನು ಈ ತೀರ್ಮಾನಕ್ಕೆ ಬಂದೆ. ನಮ್ಮ ಅಳಿಲಿಗೂ ಸ್ವಾತಂತ್ಯ್ರ ಕೊಟ್ಟು ಬಿಡೋಣ. ಆಗದೆ ಅಮ್ಮಾ?” ಅವಳು ಇನ್ನೊಮ್ಮೆ ಕೇಳಿದಳು.

“ನನ್ನ ಸಂಪೂರ್ಣ ಒಪ್ಪಿಗೆ ಇದೆ ಮಗೂ. “ನಮ್ಮ ಮಕ್ಕಳು ಅಳಿಲ ಮರಿಯನ್ನು ಬದುಕಿಸಿ ಒಳ್ಳೆಯ ಕೆಲಸ ಮಾಡಿದರು. ಅದು ಸಂತೋಷದ ಸಂಗತಿ. ಆದರೆ ಈಗ ಅಳಿಲು ದೊಡ್ಡದಾಗಿದೆ. ಇನ್ನೆಷ್ಟು ದಿನ ಅದನ್ನು ಬಂಧಿಸಿ ಇರಿಸುವುದು?” ಎಂದು ಮೊನ್ನೆ ಅಪ್ಪನೂ ಕೇಳುತ್ತಿದ್ದರು” ಎಂದರು ಅಮ್ಮ.

ಇವರ ಸಂಭಾಷಣೆ ಪುಟ್ಟನನ್ನು ರೇಗಿಸಿತು. “ಅಮ್ಮಾ ಅಳಿಲಿನ ಎಲ್ಲ ಕೆಲಸಗಳನ್ನೂ ನಾನು ಮಾಡುತ್ತೇನೆ. ಬೇರೆ ಯಾರೂ ಮಾಡಬೇಕಾಗಿಲ್ಲ. ಅಳಿಲು ನನಗೆ ಬೇಕು” ಅವನು ಅಸಮ್ಮತಿ ಸೂಚಿಸಿದ.

“ಪುಟ್ಟಾ, ನೀನು ಅಳಿಲಿನ ಸೇವೆ ಮಾಡುತ್ತೀ ನಿಜ.  ಆದರೆ ಅದನ್ನು ಜೈಲಿನಲ್ಲೇ ಇರಿಸುತ್ತೀಯಲ್ಲ? ಇದರಿಂದ ಅಳಿಲಿಗೆ ಸಂತೋಷವಾಗುತ್ತದೆಯೇ? ಸಾಯುವ ತನಕವೂ ಅದು ಬಂಧನದಲ್ಲೇ ಕೊಳೆಯಬೇಕೇ? ಅದರ ಸ್ಥಾನದಲ್ಲಿ ನೀನೇ ಇದ್ದರೆ, ಹೇಗಾದೀತು ನಿನಗೆ? ಯೋಚಿಸಿ ನೋಡು” ಮಗನಿಗೆ ಅಮ್ಮ ಬುದ್ಧಿ ಹೇಳಿದರು.

“ನಾವು ಒಂದು ಕೆಲಸ ಮಾಡೋಣ. ಮನೆಯ ಪಕ್ಕದ ಮರದಲ್ಲಿ ಅಳಿಲುಗಳು ಆಗಾಗ ಕೂಗುತ್ತ ಇರುತ್ತವೆ. ಅಂಥ ಹೊತ್ತಿನಲ್ಲಿ, ನಮ್ಮ ಅಳಿಲನ್ನೂ ಮರದ ಬುಡದಲ್ಲಿ ಬಿಟ್ಟು ಬಿಡೋಣ. ಅದು ಹಿಂದೆ ಮನೆಗೆ ಬಂದರೆ, ಅದನ್ನು ನಾವೇ ಇರಿಸಿಕೊಳ್ಳೋಣ. ಮರದ ಮೇಲೇರಿ ಅದು ಅಲ್ಲಿದ್ದ ಅಳಿಲುಗಳನ್ನು ಸೇರಿಕೊಂಡರೆ, ನಾವು ಅದರ ಆಸೆ ಬಿಟ್ಟು ಬಿಡೋಣ.” ಸ್ವಾತಿ ಒಂದು ಪರಿಹಾರ ಸೂಚಿಸಿದಳು.

“ಇದು ಸರಿಯಾದ ಮಾತು.  ಇದನ್ನು ಒಪ್ಪಿಕೊಳ್ಳೋಣ. ಪುಟ್ಟ ಅಳಿಲಿಗೆ ನಾವು ಹಾಲು ಹಣ್ಣು ಕೊಟ್ಟರೆ ಸಾಕೇ? ಅದಕ್ಕೂ ಸ್ವಾತಂತ್ಯ್ರ ಸಿಗಬೇಡವೇ? ದಿನವೂ ಅದು ಕೊರಗುತ್ತಿದ್ದರೆ ನಮಗೆ ಸಂತೋಷವೇ? ಅದಕ್ಕೆ ನಿನ್ನ ಸ್ನೇಹವೇ ಬೇಕಿದ್ದರೆ ಅದು ಹಿಂದೆ ಬರಲಿ, ಸ್ವಾತಂತ್ಯ್ರ ಬೇಕಿದ್ದರೆ ಹೊರಟು ಹೋಗಲಿ. ಒಂದು ವೇಳೆ ಅದು ಹಿಂದೆ ಬಂದರೆ, ಅದನ್ನು ನೀನೇ ಸಾಕುವೆಯಂತೆ. ಆಗದೆ ಪುಟ್ಟಾ?” ಅಮ್ಮಾ ಸಮಾಧಾನ ಹೇಳಿದರು. ಕೊನಗೆ ಅರೆಮನಸ್ಸಿನಿಂದಲೇ ಪುಟ್ಟ ಇದಕ್ಕೆ ಒಪ್ಪಿಗೆ ನೀಡಿದ.

ತುಸು ಹೊತ್ತು ಕಳೆಯಿತು. ಆಗಲೇ ಮರದ ಮೇಲಿಂದ ಅಳಿಲಿನ ಕೂಗು ಕೇಳಿ ಬಂತು. ಸ್ವಾತಿ ಮತ್ತು ಪುಟ್ಟ ಗೂಡಿನ ಬಳಿಗೆ ಬಂದರು. ಗೂಡನ್ನು ಮರದ ಬಳಿ ಇರಿಸಿ , ಅದರ ಮುಚ್ಚಳ ತೆಗೆದರು;  ಅಳಿಲಿಗೊಂದು ಮುದ್ದುಕೊಟ್ಟು ಅದನ್ನು ಮರದ ಕೊಂಬೆಯ ಮೇಲೆ ಇರಿಸಿದರು. ಮರದ ಮೇಲಿನ ಅಳಿಲು ಕೂಗುತ್ತಲೇ ಇತ್ತು . ಕೆಳಗಿದ್ದ ಅಳಿಲಿಗೂ ಅದು ಕೇಳಿಸಿತು. ಅದು ತಡಮಾಡಲಿಲ್ಲ. ಸರಸರನೆ ಮರ ಹತ್ತಿತು. ಅರ್ಧದಷ್ಟು ಮೇಲೇರಿದ ಅದು, ಒಮ್ಮೆ ಮಕ್ಕಳತ್ತ ನೋಡಿತು. ಮತ್ತೆ ಮುಂದುವರಿದು, ಮರದಲ್ಲಿದ್ದ ಅಳಿಲನ್ನು ಕೂಡಿಕೊಂಡಿತು; ಮರದ ಹಸುರೆಲೆಗಳ ಮಧ್ಯೆ ಕಣ್ಮರೆಯಾಯಿತು.

“ನಿಜ ಅಮ್ಮಾ. ಅಳಿಲಿಗೂ ಸ್ವಾತಂತ್ಯ್ರ ಬೇಕಿತ್ತು. ನನ್ನನ್ನು ಬಿಟ್ಟು ಅದು ಹೊರಟೆ ಹೋಯಿತು” ಪುಟ್ಟ ಹೇಳಿದ. ಅವನ ಮುಖಬಾಡಿತ್ತು, ಮುಖ್ಯವಾದ ಏನನ್ನೋ ಕಳೆದುಕೊಂಡ ಅನುಭವ ಅವನದಾಗಿತ್ತು.

“ಸತ್ತು ಹೋಗಬಹುದಾಗಿದ್ದ ಅಳಿಲಿನ ಜೀವ ಉಳಿಸಿ, ಒಳ್ಳೆಯ ಕೆಲಸ ಮಾಡಿದ್ದೀರಾ. ಅದಕ್ಕಾಗಿ ಖುಷಿಪಡಬೇಕು ನೀವು.” ಮಕ್ಕಳನ್ನು ಅಮ್ಮ ಸಮಜಾಯಿಸಿದರು. “ಸ್ವಾತಂತ್ಯ್ರದ ಸುಖ ಎಲ್ಲಕ್ಕಿಂತ ದೊಡ್ಡದು. ಮೃಗ-ಪಕ್ಷಿಗಳೂ ಸ್ವಾತಂತ್ಯ್ರವನ್ನು ಬಯಸುತ್ತವೆ.” ಅವರು ಹೇಳಿದರು. ಮಕ್ಕಳಿಗೂ ಆ ಮಾತು ನಿಜ ಎನಿಸಿತು.

* * *