(ಕ್ರಿ. ಶ. ೧೮೩೪-೧೯೦೭) (ಧಾತುಗಳ ವರ್ಗೀಕರಣ)

ದ್ಮಿತ್ರಿ ಇವಾನೊವಿಚ್ ಮೆಂಡೆಲೆಯೇವ್ ಫೆಬ್ರುವರಿ ೭, ೧೮೩೪ರಂದು ಸೈಬೇರಿಯಾದ ತೊಬೊಲ್ ಸ್ಕ್ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ಮಂಗೋಲಿಯಾ ವಂಶಜಳು. ಅವರಿಗೆ ಹದಿನಾರು ಮಕ್ಕಳಿದ್ದರೆಂದು ಹೇಳಲಾಗುತ್ತದೆ. ದ್ಮಿತ್ರಿ ಕೊನೆಯವ. ತಂದೆ ಕೆಲಸದಲ್ಲಿರುವಾಗ ಕಣ್ಣು ಕಳೆದುಕೊಂಡ ಕಾರಣ ಅರ್ಧ ಸೇವಾವಧಿಗೇ ನಿವೃತ್ತರಾದರು. ತಾಯಿ ಗಾಜಿನ ಕಾರ್ಖಾನೆ ತೆರೆದು ಮಕ್ಕಳ ಪೋಷಣೆ ಮಾಡಬೇಕಾಯಿತು. ದ್ಮಿತ್ರಿ ಪ್ರೌಢ ಶಾಲಾ ವ್ಯಾಸಂಗ ಮುಗಿಸುವ ಹೊತ್ತಿಗೆ ತಂದೆಯನ್ನು ಕಳೆದುಕೊಂಡರು. ತಾಯಿಯ ಕಾರ್ಖಾನೆ ಸುಟ್ಟು ಹೋಯಿತು. ತಾಯಿ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ (ಲೆನಿನ್ ಗ್ರಾದ್) ನೆಲೆಸಿ ಸ್ನೇಹಿತರೊಬ್ಬರ ಸಹಾಯದಿಂದ ಮಗನಿಗೆ ಕಾಲೇಜಿಗೆ ಪ್ರವೇಶ ದೊರಕಿಸಿಕೊಟ್ಟಳು. ಕೆಲವು ದಿನಗಳಲ್ಲಿ ಆಕೆಯೂ ಮೃತ್ಯವಶವಾದಳು. ಕಾಲೇಜು ಶಿಕ್ಷಣದ ತರುವಾಯ ಮೆಂಡೆಲೆಯೇವ್ ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ರಸಾಯನಶಾಸ್ತ್ರದ ಅಧ್ಯಯನ ಮಾಡಿದರು. ಪ್ರತಿಯೊಂದು ಅನಿಲವೂ ಒಂದು ನಿರ್ದಿಷ್ಟ ತಾಪದಲ್ಲಿ ಮಾತ್ರ ದ್ರವೀಕರಣ ಹೊಂದುತ್ತದೆ ಎಂಬ ಅಂಶವನ್ನು ಅವರು ತನ್ನ ಉಚ್ಚ ವ್ಯಾಸಂಗದ ಅವಧಿಯಲ್ಲಿ ಕಂಡುಹಿಡಿದರು. ಅದನ್ನು ಸಂಧಿಸ್ಥ ತಾಪ ಎಂದು ಕರೆಯುತ್ತಾರೆ.

ಸ್ವದೇಶಕ್ಕೆ ವಾಪಸಾದ ಮೇಲೆ ದ್ಮಿತ್ರಿ ಮೆಂಡೆಲೆಯವ್ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸತೊಡಗಿದರು.

ರಾಸಾಯನಿಕ ಧಾತುಗಳನ್ನು ಶಾಸ್ತ್ರೀಯವಾಗಿ ವರ್ಗೀಕರಿಸಿದುದು ಮೆಂಡೆಲೆಯೇವರ ಒಂದು ಬಹು ಮಹತ್ವದ ಸಾಧನೆ. ಅವರಿಗಿಂತ ಮುಂಚೆ ಇಂಗ್ಲಿಷ್ ವಿಜ್ಞಾನಿಗಳು ಧಾತುಗಳ ವರ್ಗೀಕರಣಕ್ಕಾಗಿ ಪ್ರಯತ್ನ ಮಾಡಿದ್ದರು. ಮೆಂಡಲೆಯೇವ್ ನ್ಯೂಲೆಂಡ್ಸ್ನ ನಿಯಮವನ್ನು ತಿದ್ದಿ ಮಾರ್ಪಡಿಸಿದರು. ಆಗ ಅದು “ಆವರ್ತ ನಿಯಮ” ಎಂದು ಪ್ರಸಿದ್ಧಿ ಪಡೆಯಿತು. ಧಾತುಗಳ ವರ್ಗೀಕರಣದ ಬಗ್ಗೆ ಮೆಂಡೆಲೆಯೇವ್ ತಯಾರು ಮಾಡಿದ್ದ ಕೋಷ್ಟಕ ೧೮೮೫ರ ತರುವಾಯ ವಿಶ್ವವಿಖ್ಯಾತಿ ಪಡೆಯಿತು.

ದ್ಮಿತ್ರಿ ಮೆಂಡೆಲೆಯೇವ್ ಫೆಬ್ರವರಿ ೨, ೧೯೦೭ರಲ್ಲಿ ನಿಧನರಾದರು. ೧೦೧ನೆಯ ಧಾತುವಿಗೆ ಮೆಂಡೆಲೇವಿಯಮ್ ಎಂಬ ಹೆಸರನ್ನಿಟ್ಟು ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲಾಯಿತು.