ಹೈದ್ರಾಬಾದ ಕರ್ನಾಟಕವೆಂದು ಕರೆಸಿಕೊಳ್ಳುತ್ತಿರುವ ಕಲಬುರಗಿ, ಬೀದರ, ರಾಯಚೂರು, ಕೊಪ್ಪಳ, ಯಾದಗಿರ ಜಿಲ್ಲೆಗಳು ನಿಜಾಮಶಾಹಿಯ ಆಳ್ವಿಕೆಗೆ ಒಳಪಟ್ಟಿದ್ದವಷ್ಟೆ. ಕರ್ನಾಟಕದ ಇತರ ಜಿಲ್ಲೆಗಳು ಬ್ರಿಟೀಷ್ ಆಡಳಿತದ ಆಧುನಿಕತೆಗೆ ಒಳಪಟ್ಟಂತೆ ಈ ಜಿಲ್ಲೆಗಳು ಒಳಪಡಲಿಲ್ಲ. ದಕ್ಷಿಣ ಕರ್ನಾಟಕದ ಭಾಗವು ಇಂಗ್ಲೀಷರ ಸುಧಾರಣಾವಾದಿ ಜೀವನ ಕ್ರಮಕ್ಕೆ ಆ ಮೂಲಕವಾಗಿ ಆಧುನಿಕ ಸಾಹಿತ್ಯಕ್ಕೆ ತೆರೆದುಕೊಳ್ಳುತ್ತಿರುವಾಗ ಈ ಭಾಗ ಮಾತ್ರ ತನ್ನ ದೇಶಿ ನೆಲೆಯಲ್ಲಿಯೇ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿತ್ತು. ಹೀಗೆಂದೇ ದಕ್ಷಿಣ ಕರ್ನಾಟಕದ ಸಾಹಿತ್ಯದಲ್ಲಿ 18ನೇ ಶತಮಾನದ ಹೊತ್ತಿಗೆ ನವೋದಯವೆಂಬ ಅಲೆಯೊಂದು ಕಾಣಿಸಿಕೊಂಡು ಹೊಸಗನ್ನಡದಲ್ಲಿ ಭಾವಗೀತೆ, ಕಥೆ, ಕಾದಂಬರಿ, ಲಲಿತ ಪ್ರಬಂಧ ಪ್ರಕಾರಗಳು ಭರದಿಂದ ರಚನೆಯಾಗತೊಡಗಿದ್ದರೆ; ಈ ಭಾಗದಲ್ಲಿ ಅದೇ ಕಾಲಘಟ್ಟದಲ್ಲಿ ದೇಶೀಯ ಕಾವ್ಯ ಪ್ರಕಾರಗಳಾದ ವಚನ, ಗೀಗೀ ಪದ, ಬಯಲಾಟ, ಪುರಾಣಗಳು, ಲಾವಣಿ ಮತ್ತು ತತ್ವಪದಗಳು ರಚನೆಯಾಗತೊಡಗಿದ್ದವು. ಅದರಲ್ಲೂ ವಿಶೇಷವಾಗಿ ತತ್ವಪದ ಪ್ರಕಾರವಂತೂ ಪಂಡಿತ, ಸಾಮಾನ್ಯ ಸದ್ಭಾವಿಗಳಾದಿಯಾಗಿ ಎಲ್ಲರನ್ನೂ ಆಕರ್ಷಿಸಿದ ರೂಪವಾಗಿದ್ದು ಈ ಭಾಗದಲ್ಲಿ ವ್ಯಾಪಕವಾಗಿ ಪಸರಿಸಿಕೊಂಡಿದ್ದ ಭಜನೆ ಪರಂಪರೆಯು ತತ್ವಪದಕಾರರಿಗೆ ಹೆಚ್ಚು ಇಂಬು ಕೊಟ್ಟಿತ್ತು. ಭಜನೆಯು ಈ ಭಾಗದ ಅನ್ಯೋನ್ಯವಾದ ಸಾಂಸ್ಕೃತಿಕ ಚಹರೆಯಾಗಿ ಬೆಳೆದುಕೊಂಡು ಬಂದಿದೆ.12ನೇ ಶತಮಾನದ ಶರಣ ಚಳವಳಿಯ ಬಳುವಳಿ ರೂಪದಲ್ಲಿ ಹರಿಗಡಿಯದಂತೆ ಮುಂದುವರೆದುಕೊಂಡು ಬರುತ್ತಿರುವ ಸ್ವರ ವಚನ, ತತ್ವಪದ ಮತ್ತು ವಚನಾನುಸಂಧಾನವು ಹಾಡುಗಾರಿಕೆಯೊಂದಿಗೆ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಿದೆ.ಹೀಗಾಗಿಯೇ ಈ ಭಾಗದ ಮಠ, ಮಂದಿರ, ದೇಗುಲಗಳಲ್ಲಿ ಶಿವಭಜನೆ ನಡದೇ ಇರುತ್ತದೆ.ಊರ ಜಾತ್ರೆ, ಹಬ್ಬ-ಹರದಿನ, ಅಮವಾಸೆ, ಹುಣ್ಣಿಮೆ, ಶ್ರಾವಣ ಮಾಸ, ಖಾಂಡ ಹೀಗೆ ಎಲ್ಲ ಧಾರ್ಮಿಕ ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಭಜನೆಗಳು ಬೆಳ್ಳಂಬೆಳಗಿನವರೆಗೂ ನಡೆಯುತ್ತವೆ.ಭಜನೆ ಮೇಳವಿಲ್ಲದ ಹಳ್ಳಿಗಳು ಕಾಣಸಿಗುವುದು ದುಸ್ತರ.ಈ ಭಜನೆ ಮೇಳಗಳಲ್ಲಿ ತತ್ವಾನುಸಂಧಾನ ಪ್ರಧಾನವಾಗಿರುತ್ತದೆ.ವಿವಿಧ ಸಂತ, ಶರಣ, ಆರೂಢ, ನಾಥ, ಶಾಕ್ತ ಮುಂತಾಗಿ ಎಲ್ಲ ಪರಂಪರೆಯ ರಚನೆಗಳನ್ನು ಹಾಡುವುದರೊಂದಿಗೆ ಅಲ್ಲಿ ವ್ಯಕ್ತವಾದ ತತ್ವಗಳ ಜಿಜ್ಞಾಸೆ ನಡೆಯುತ್ತದೆ.ಇಲ್ಲಿ ತತ್ವಾನುಸಂಧಾನ ಮೊದಲು, ನಂತರ ಹಾಡುಗಾರಿಕೆ.ತತ್ವಗಳನ್ನು ಹೊಳೆಯಿಸುವ ತಂತ್ರವಾಗಿ ಹಾಡುಗಾರಿಕೆಯ ಶ್ರುತಿ ಸೋಬತಿ ಇರುತ್ತದೆ.ಆದ್ದರಿಂದಲೆ ಪರಂಪರಾಗತ ದೇಶಿ ಭಜನೆ ಮೇಳಗಳಲ್ಲಿ ಮಂದ ಶ್ರುತಿಗತಿ ನೀಡುವ ಏಕತಾರಿ, ಮೃದು ಲಯದ ಡಪ್ಪು, ಆಗಾಗ ಧ್ವನಿಗೆ ವಿಶ್ರಾಂತಿ ನೀಡಲು ಚಳ್ಳಮ್ಮಗಳ ಬಳಕೆಯಾಗುತ್ತದೆ. ವಚನ ಮತ್ತು ತತ್ವಪದಗಳು ಅರ್ಥ-ಭಾವ ಪ್ರಧಾನ ರಚನೆಗಳಾದ್ದರಿಂದ ಅಲ್ಲಿ ಅಬ್ಬರದ ವಾದ್ಯಗಳಿಗಾಗಲಿ ಅಥವಾ ರಾಗ ವಿಸ್ತಾರಾದಿ ಶಾಸ್ತ್ರೀಯ ಹಾಡುಗಾರಿಕೆಗಾಗಲಿ ಅವಕಾಶ ಇರುವದಿಲ್ಲ. ಆದ್ದರಿಂದಲೇ ಈ ಭಜನೆಗಳನ್ನು ತತ್ವ ಸಮಾರಾಧನೆ ಎಂದೇ ಗುರುತಿಸಲಾಗುತ್ತದೆ. ಹಾಡುಗಾರರು ಅನೇಕ ಸಂದರ್ಭಗಳಲ್ಲಿ ಸ್ವತಃ ಅನುಭಾವಿಗಳೂ, ತತ್ವಪದ ರಚನೆಕಾರರೂ ಆಗಿರುವುದುಂಟು.ಬರಿ ಭಜನೆ ಮಾಡುವವರು ಕೂಡ ತತ್ವಾನುಭವದಲ್ಲಿ ಪರಿಣತಿ ಸಾಧಿಸಿದವರೇ ಇರುತ್ತಾರೆ.ಆದ್ದರಿಂದಲೇ ಅವರು ಹಾಡುವಿಕೆಯ ಮಧ್ಯದಲ್ಲಿ ತತ್ವಗಳ ಕುರಿತು ಚರ್ಚೆಗಿಳಿಯುತ್ತಾರೆ.ಪದಗಳ ಭಾವದ ಚುಂಗು ಹಿಡಿದೇ ಮುಂದಿನ ಪದಗಳು ಅರಳುತ್ತ ನಡೆಯುತ್ತವೆ.ಸಿಕ್ಕಸಿಕ್ಕಂತೆ ಪದ ಹಾಡಲಾಗದು.ಗುರುಕರುಣೆ ಎಂಬ ವಿಷಯದ ಚರ್ಚೆ ನಡೆದಿದ್ದರೆ ಅದೇ ವಸ್ತುವುಳ್ಳ ವಿವಿಧ ಸಂತ ದಾರ್ಶನಿಕರ ಪದಗಳ ಹೊನಲು ಅಲ್ಲಿ ಹರಿಯತೊಡಗುತ್ತದೆ.ಅದರಂತೆ ಸಂಸಾರ ಹೇಯಸ್ಥಲ ಭಾವದ ಪದಗಳು ಪ್ರಾರಂಭವಾದರೆ ಅದೇ ಭಾವ ಹೊಂದಿದ ರಚನೆಗಳ ಸಂತೆ ನೆರೆಯುತ್ತದೆ.ಶಿವಯೋಗ, ಕುಂಡಲಿನಿ ಶಕ್ತಿ, ಜ್ಞಾನಯೋಗ, ಭಕ್ತಿಮಾರ್ಗ ಹೀಗೆ ಹತ್ತಾರು ಆಧ್ಯಾತ್ಮಿಕ ಸಂಗತಿಗಳನ್ನು ಬಿಂಬಿಸುವ ಪದ ಪರಿಷೆ ನೆರವಿರುತ್ತದೆ.ಈ ಹಿನ್ನೆಲೆಯಲ್ಲಿ ಈ ಭಾಗದ ಭಜನೆ ಮೇಳಗಳೆಂದರೆ ಅವು ಅನುಭಾವ ಪರಂಪರೆಯ ಗರಡಿ ಮನೆಗಳೆ ಆಗಿರುತಿದ್ದವು.ಇದರ ಪರಿಣಾಮವಾಗಿ ಹೈದ್ರಾಬಾದ ಕರ್ನಾಟಕದ ಈ ಜಿಲ್ಲೆಗಳಲ್ಲಿ 19 ನೇ ಶತಮಾನದ ಉದ್ದಕ್ಕೂ ತತ್ವಪದಕಾರರು ಕಾಣಿಸಿಕೊಂಡಿದ್ದಾರೆ.ಇವರಲ್ಲಿ ಹಲವರು ಉನ್ನತ ಮಟ್ಟದ ಅನುಭಾವಿಗಳಿರುವಂತೆ ಸಾಮಾನ್ಯರು ಪದ ರಚಿಸಿದ್ದಾರೆ.ಭಜನೆ ಗೋಷ್ಠಿಗಳಲ್ಲಿ ಹಾಡಿ ಹಾಡಿ ಅದನ್ನು ಅನುಕರಿಸಿ ತಾವು ಪದ ಬರೆಯುವ ಒತ್ತಡಕ್ಕೆ ಒಳಗಾಗಿ ಪದ ಬರೆದವರು ಇದ್ದಾರೆ.ಗಮನಿಸಬೇಕಾದ ಪ್ರಮುಖ ಸಂಗತಿಯೆಂದರೆ ಉನ್ನತ ಶಿವಾನುಭಾವಿಗಳಿರುವಂತೆ ಸಾಮಾನ್ಯ ಸಾಧಕರು ಪದ ಬರೆಯುವಲ್ಲಿ ಪರಿಣತಿ ಸಾಧಿಸಿದವರಿದ್ದಾರೆ.ಶಿವಾನುಭಾವಿಗಳಿಗೆ ಪದ ರಚನೆಯು ಸಾಧನಾ ಮಾರ್ಗದ ಉಪಾಧಿಯಾಗಿ ಕಾಣಿಸಿಕೊಂಡರೆ; ಜನಸಾಮಾನ್ಯರಿಗೆ ತಮ್ಮೆಲ್ಲ ಭಾವ ಬಯಕೆಗಳಿಗೆ ಬಾಯಾಗಿ ಈ ಪದ ಪ್ರಕಾರ ಒದಗಿ ಬಂದಂತಿದೆ.ಆದ್ದರಿಂದಲೆ ಸಾಮಾಜಿಕ ವಿಡಂಬನೆಯು ಈ ತತ್ವಪದಗಳ ಪ್ರಧಾನ ಪಾತಳಿಯಾಗಿಯೂ ಒದಗಿ ಬಂದಿದೆ.ಅದೇ ಕಾಲಕ್ಕೆ ಯೌಗಿಕಾನುಭಾವದ ಕಾಣ್ಕೆಗಳು ರೂಪಕ, ಪ್ರತಿಮೆಗಳಾಗಿ ತುಂಬಿ ನಿಂತಿವೆ.

ತತ್ವಪದಗಳ ಲಕ್ಷಣಗಳನ್ನು ಹಿಡಿದಿಡುವುದು ತುಂಬಾ ಕಷ್ಟ. ಇನ್ನುವರೆಗೆ ಅವುಗಳನ್ನು ಶಿಷ್ಟ ಸಾಹಿತ್ಯವೋ ಜನಪದ ಸಾಹಿತ್ಯವೋ ಎಂಬ ಜಿಜ್ಞಾಸೆ ನಡದೇ ಇದೆ.ಏಕೆಂದರೆ ಇವುಗಳನ್ನು ರಚಿಸಿದವರಲ್ಲಿ ಪ್ರಕಾಂಡ ಪಂಡಿತರಿರುವಂತೆ ನಿರಕ್ಷರಿಗಳೂ ಇದ್ದಾರೆ.ಶುದ್ಧ ಜಾನಪದೀಯ ಶೈಲಿಯನ್ನು ಅಳವಡಿಸಿಕೊಂಡಿರುವಂತೆ ಮಾರ್ಗ ಶೈಲಿಯನ್ನು ಕರಗತ ಮಾಡಿಕೊಂಡು ಪದ ಬರೆದವರು ಇದ್ದಾರೆ.ಮುಖ್ಯವಾಗಿ ವಿವಿಧ ಜಾತಿ, ಮತ, ಪಂಥದವರು ತಮ್ಮ ತಮ್ಮ ಸೈದ್ಧಾಂತಿಕ, ಸಾಂಸ್ಕೃತಿಕ ಹಿನ್ನೆಲೆಯನ್ನು ಪ್ರತಿಪಾದಿಸಿ ಪದ ಬರೆದಿದ್ದಾರೆ.ತತ್ವಪದ ಪ್ರಕಾರವೇ ಹಾಗೆ.ಅದು ಎತ್ತಿಕೊಂಡವರ ಕೂಸಾಗಿದೆ.ಹೀಗೆಂದು ಅದಕ್ಕೆ ತನ್ನದೆ ವೈಶಿಷ್ಟ್ಯ ಇಲ್ಲವೆಂತಲ್ಲ. ಎಲ್ಲರನ್ನು ಎಲ್ಲವನ್ನು ಸಲೀಸಾಗಿ ಒಳಗೊಳ್ಳುವುದೆ ಅದರ ವೈಶಿಷ್ಟ್ಯವಾಗಿದೆ.ಆದ್ದರಿಂದಲೇ ಕರ್ನಾಟಕದ ಎಲ್ಲ ಭಾಗಗಳಲ್ಲಿ ತತ್ವಪದಕಾರರು ಒಬ್ಬಿಬ್ಬರಾದರೂ ದೊರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೈದ್ರಾಬಾದ ಕರ್ನಾಟಕದಲ್ಲಿ ವೆಗ್ಗಳವಾಗಿ ತತ್ವಪದಕಾರರು ಕಾಣಿಸಿಕೊಂಡಿರುವುದಕ್ಕೆ ಚಾರಿತ್ರಿಕ ಕಾರಣಗಳು ಇಲ್ಲದಿಲ್ಲ. ಒಂದನೆಯದಾಗಿ 12ನೇ ಶತಮಾನದ ಶರಣ ಚಳವಳಿಯ ಪ್ರಭಾವ, ನಂತರದ ಪ್ರೌಢದೇವರಾಯನ ಕಾಲದಲ್ಲಾದ ನೂರೊಂದು ವಿರಕ್ತರ ಪ್ರಭಾವ. ಎರಡನೆಯದಾಗಿ ಈ ಭಾಗವು ಬಹು ಕಾಲದವರೆಗೂ ಜಮೀನ್ದಾರಿ ವ್ಯವಸ್ಥೆಯಲ್ಲಿ ಸಾಗಿ ಬಂದದ್ದು. ಆಧುನಿಕತೆಯು ಈ ಭಾಗಕ್ಕೆ ತುಂಬಾ ತಡವಾಗಿ ಪ್ರವೇಶಿಕೆ ಪಡೆದದ್ದರಿಂದ ಇಲ್ಲಿನ ಜನತೆಯು ಸ್ಥಳೀಯ ಧಾರ್ಮಿಕ, ಆಧ್ಯಾತ್ಮಿಕ ಸಂತರನ್ನೇ ತಮ್ಮ ದೈವವೆಂದು ನಂಬಿಕೊಂಡು ಬಂದರು.ಅಷ್ಟಕ್ಕೂ ಈ ಭಾಗವು ಭೌಗೋಲಿಕವಾಗಿ ಬಯಲು ನಾಡು.ಮಳೆಯನ್ನೇ ಅವಲಂಬಿಸಿಕೊಂಡಿರುವ ರೈತಾಪಿ, ಕೃಷಿಕೂಲಿ ಕಾರ್ಮಿಕರ ನೆಲವಾಗಿದೆ.ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು ಮಾತ್ರ ಅಸ್ತಿತ್ವದಲ್ಲಿವೆ.ಇನ್ನುವರೆಗೂ ಈ ಭಾಗದಲ್ಲಿ ಬೃಹತ್ ಉದ್ದಿಮೆಗಳಾಗಲಿ, ಸಾಮೂಹಿಕ ಉತ್ಪಾದನಾ ವ್ಯವಸ್ಥೆಯಾಗಲಿ ಇಲ್ಲ. ಪದೇಪದೇ ಕಾಣಿಸಿಕೊಳ್ಳುವ ಅನಾವೃಷ್ಟಿಯು ಬಡತನಕ್ಕೆ ಭಾಷ್ಯ ಬರೆಯುತ್ತಲೇ ಇದೆ. ಒಣ ಬೇಸಾಯದ ಬವಣೆಯಲ್ಲಿ ಎರಡೂ ಹೊತ್ತು ಹೊಟ್ಟೆ ತುಂಬ ಉಂಡವನೆ ಪುಣ್ಯವಂತ. ಬಡತನ, ನಿರುದ್ಯೋಗಗಳ ನಡುವೆಯೂ ಜನಸಾಮಾನ್ಯರು ಧೃತಿಗೆಡದಂತೆ ಬದುಕನ್ನು ಹೂಡಿಕೊಂಡು ಬರಲು ಇಲ್ಲಿ ಕಾಲಕಾಲಕ್ಕೂ ಗತಿಸಿಹೋದ ಸಂತ ಶರಣರು, ಸೂಫಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಎಲ್ಲ ಬಂಧನವನ್ನು ಮೀರಿ ನಿಂತ ಅವಧೂತರು ಈ ಭಾಗದ ಜನತೆಯ ಬವಣೆಯ ಬದುಕಿಗೆ ಬಾಯಾಗಿ ತತ್ವಪದಗಳನ್ನು ರಚಿಸಿದ್ದಾರೆ.ಜಮೀನ್ದಾರಿ ವ್ಯವಸ್ಥೆಯ ದರ್ಪ, ದೌಲತ್ತು, ಪುರೋಹಿತಶಾಹಿಯ ಕರ್ಮಠತೆಯನ್ನು ಇವರು ಯಾವ ಎಗ್ಗಿಲ್ಲದೆ ವಿಡಂಬಿಸಿದ್ದಾರೆ.ಇಂಥವರ ಸಾಹಚರ್ಯೆ ಮತ್ತು ಅವರು ರಚಿಸಿದ ಪದಗಳೇ ಈ ಭಾಗದ ಸಾಮಾನ್ಯ ಜನತೆಯಲ್ಲಿ ಬದುಕುವ ಕೆಚ್ಚನ್ನು ತುಂಬಿವೆ.ನೇರವಾಗಿ ಪ್ರಭುತ್ವವನ್ನು ಎದುರಿಸಲಾಗದ ಸನ್ನಿವೇಶದಲ್ಲಿ ಭಜನೆಯ ಹಾಡುಗಳಲ್ಲಿ ವ್ಯಕ್ತವಾದ ವ್ಯವಸ್ಥೆಯ ಖಂಡನೆಯು ಜನರಿಗೆ ಶೋಷಣೆಯನ್ನು ನಿವಾರಿಸಿಕೊಳ್ಳುವ ಅಸ್ತ್ರಗಳಾಗಿ ಒದಗಿ ಬಂದದ್ದು ಇದೆ.ಹೀಗಾಗಿ ತತ್ವಪದ ಸಮಾರಾಧನೆಗಳು ಒಂದೆಡೆ ಬದುಕಿನ ಬಗೆಗೆ ಪ್ರೀತಿಯನ್ನು, ಇನ್ನೊಂದೆಡೆ ದರ್ಪ, ದಬ್ಬಾಳಿಕೆಯನ್ನು ಎದುರಿಸುವ ಉಪಾಯಗಳಾಗಿ ಕಾಣಿಸಿಕೊಂಡಿವೆ.ಎಂತಲೇ ಈ ಭಾಗದಲ್ಲಿ ತತ್ವಪದ ರಚನೆ ಮತ್ತು ಭಜನೆ ಮೇಳಗಳಹಾಡುಗಾರಿಕೆ ಎರಡೂ ಬದುಕಿನ ಅವಿಭಾಜ್ಯ ಅಂಗಗಳಾಗಿ ಬೆಳೆದು ಬಂದಿವೆ.ಇಲ್ಲಿ ಪದಗಳ ರಾಶಿಯೇ ಹರಡಿಕೊಂಡಿದ್ದು ಎಷ್ಟೋ ಪದಗಳ ಕರ್ತೃಗಳನ್ನು ಗುರುತಿಸುವುದು ಕಷ್ಟವಾಗಿದೆ.ಅವುಗಳನ್ನು ಸಂಗ್ರಹಿಸಿ ಪ್ರಕಟಿಸುವ ಕೆಲಸವು ತಡವಾಗಿಯಾದರೂ ನಡೆಯುತ್ತಿರುವುದು ಸ್ತುತ್ಯಾರ್ಹವಾಗಿದೆ.ಈಗಾಗಲೇ ಎಷ್ಟೋ ಅಪರೂಪದ ಕೃತಿಗಳು ಕಾಲಗರ್ಭದಲ್ಲಿ ಅಡಗಿ ಹೋಗಿವೆ.ಅಳಿದುಳಿದ ಪದಗಳನ್ನು ಸಂಗ್ರಹಿಸುವ ಪ್ರಯತ್ನವಿದು.

ಪ್ರಸ್ತುತ ಸಂಪುಟದಲ್ಲಿ 18ನೇ ಶತಮಾನದ ಅಂತ್ಯದಿಂದ 19ನೇ ಶತಮಾನದ ಅಂತ್ಯದವರೆಗೆ ಬಾಳಿ ಹೋಗಿರುವ ಮೋಟ್ನಳ್ಳಿ ಹಸನಸಾಬ, ಹೊಳಕುಂದ ಶರಣಕವಿ, ದ್ಯಾಗಾಯಿ ಗುಂಡಪ್ಪ, ಮಾದನ ಹಿಪ್ಪರಗಾದ ಸಿದ್ಧರಾಮ ಶಿವಯೋಗಿ, ಸಾವಳಗಿ ಮಹಮ್ಮದಸಾಬ, ಮಹಾಗಾಂವದ ಮೀರಾಸಾಬ ಮುಂತಾಗಿ ಆರು ಕವಿಗಳ ರಚನೆಗಳನ್ನು ಸೇರಿಸಲಾಗಿದೆ. ಅವಿಭಜಿತ ಕಲಬುರಗಿ ಜಿಲ್ಲೆಯಲ್ಲಿ ಬಾಳಿ ಹೋಗಿರುವವರ ಪದಗಳನ್ನು ಸಂಗ್ರಹಿಸಲಾಗಿದೆ. ತತ್ವಪದಕಾರರಿಗೆ ಜಿಲ್ಲೆ, ರಾಜ್ಯವೆಂಬ ಗಡಿಗಳ ಬಂಧನಗಳಾಗಲಿ, ಭಾಷೆ, ಧರ್ಮ, ಲಿಂಗವೆಂಬ ಮಿತಿಗಳಾಗಲಿ ಇಲ್ಲವಾದರೂ ಅಧ್ಯಯನದ ಅನುಕೂಲಕ್ಕಾಗಿ ಈ ರೀತಿಯ ಕೆಲವು ಮಿತಿಗಳನ್ನು ಕಲ್ಪಿಸಿಕೊಂಡು ಪದ ಸಂಗ್ರಹಿಸುವ ಪ್ರಯತ್ನ ಮಾಡಲಾಗಿದೆ. ಆಯಾ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪದಗಳನ್ನು ಒಂದೆಡೆ ಸೇರಿಸಲಾಗಿದೆ.ಈ ಮೇಲಿನ ಆರು ಕವಿಗಳು ಶರಣ ಪರಂಪರೆಯ ಪ್ರಭಾವದಲ್ಲಿ ಮತ್ತು ಹೈದ್ರಾಬಾದ ಕರ್ನಾಟಕದ ಭಜನಾ ಪರಿಸರದಲ್ಲಿ ಲೋಲ್ಯಾಡಿ ಪದ ಬರೆದಿರುವದರಿಂದ ಅವರನ್ನು ಒಂದೆಡೆ ತರಲಾಗಿದೆ.

ಮೋಟ್ನಹಳ್ಳಿ ಹಸನಸಾಬ

ಉಸ್ತಾದಪ್ಪ, ವಸ್ತಾದೆಪ್ಪ ಎಂದೇ ಜನರಿಂದ ಕರೆಸಿಕೊಳ್ಳುತ್ತಿದ್ದ ಹಸನ ಸಾಹೇಬನು ಈ ಭಾಗದಲ್ಲಿ ಹೆಚ್ಚು ಪ್ರಚಲಿತ ತತ್ವಪದಕಾರನಾಗಿದ್ದರೂ ಆತನ ಬದುಕಿನ ವಿವರಗಳು ಮಾತ್ರ ಕಾಲಗರ್ಭದಲ್ಲಿ ಹೂತು ಹೋಗಿವೆ.ಹೀಗಾಗಿಯೆ ಈತನ ಜನ್ಮಸ್ಥಳದಂಥ ಸಾಮಾನ್ಯ ಅಂಶಗಳು ಸಂಶಯಾಸ್ಪದವಾಗಿಯೇ ಉಳಿದುಕೊಂಡಿವೆ.ಈತನ ಆರಾಧ್ಯ ದೈವವು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಟ್ಕಾಲ ಗ್ರಾಮದ ವೀರಭದ್ರ ದೇವರಾಗಿರುವದರಿಂದ ಈತನ ಹುಟ್ಟೂರು ಇಟ್ಕಾಲ ಎಂದೇ ಹೇಳಿಕೊಂಡು ಬರಲಾಗುತ್ತಿದೆ.ಈತನ ತಂದೆ ತಾಯಿಗಳು ಬಡ ಮುಸ್ಲಿಂರಾಗಿದ್ದು ಉಪಜೀವನಕ್ಕಾಗಿ ಕಾಯಿ ಪಲ್ಯೆ ಮಾರುತಿದ್ದರಂತೆ.ಹೀಗೆ ಊರಿಂದೂರಿಗೆ ತಿರುಗುತ್ತ ಕಾಯಿ ಪಲ್ಯೆ ಮಾರುತ್ತ ಒಮ್ಮೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಗ್ರಾಮಕ್ಕೆ ಬಂದರಂತೆ.ಅಲ್ಲಿಯೇ ಕಾಲರಾ ಬೇನೆಗೆ ತುತ್ತಾಗಿ ತಂದೆ ತಾಯಿಗಳಿಬ್ಬರೂ ಮೂರು ವರ್ಷದ ಬಾಲಕನನ್ನು ಬಿಟ್ಟು ತೀರಿಕೊಂಡರಂತೆ.ಅನಾಥನಾದ ಬಾಲಕನನ್ನು ಕಂಡು ಮರುಗಿದ ಗುರುಮಠಕಲ್‍ದ ಮಠಾಧೀಶರಾದ ಶಾಂತವೀರ ಸ್ವಾಮಿಗಳು ಆಶ್ರಯ ಕೊಟ್ಟು ಬೆಳೆಸುತ್ತಾರೆ.ಮಗುವಿನ ಮುಂದಿನ ಬದುಕು ಹೇಗಾದರೂ ಹಸನವಾಗಲಿ ಎಂದು ಹರಸಿ ಹಸನ್ ಸಾಹೇಬನೆಂದು ಸ್ವಾಮಿಗಳೇ ನಾಮಕರಣ ಮಾಡಿದರಂತೆ.ಇತ್ತೀಚಿನ ಸಂಶೋಧನೆಯಿಂದ ಈತನ ಹುಟ್ಟೂರು ಆಂಧ್ರ ಪ್ರದೇಶಕ್ಕೆ ಸೇರಿದ ಮಾಚರ್ಲಾ ಎಂಬ ಗ್ರಾಮವಾಗಿರಬೇಕು ಎಂದು ಹೇಳಲಾಗುತ್ತಿದೆ. ದೀಕ್ಷಾ ಗುರುವು ಆಂಧ್ರದ ಮಹಬೂಬನಗರ ಜಿಲ್ಲೆಯ ಮುಖ್ತಲ್ ತಾಲೂಕಿನಲ್ಲಿರುವನೇರಡಗುಂಭದ ವೀರಶೈವ ಮಠದ ಸಿದ್ಧಲಿಂಗ ಸ್ವಾಮಿಗಳೆಂದೂ ಅನ್ನಮಾವಧೂತ ಎಂಬುವವರಿಂದ ಅಕ್ಷರಾಧ್ಯಯನ ದೊರೆಯಿತೆಂದು ಹೇಳುವ ಪ್ರಯತ್ನ ಮಾಡಲಾಗಿದೆ. ಒಟ್ಟಾರೆ ಈತನ ಮೂಲವನ್ನು ಆಂಧ್ರ ಪ್ರದೇಶದಲ್ಲಿ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ.ಅದೇನೇ ಇದ್ದರೂ ಹಲವಾರು ತೆಲುಗು ಪದಗಳನ್ನೂ ರಚಿಸಿರುವ ಹಸನ್ ಸಾಹೇಬನು ಕರ್ನಾಟಕಾಂಧ್ರದ ಗಡಿಭಾಗದಲ್ಲಿ ಬದುಕು ಹೂಡಿದ್ದು ಯಮಳ ಭಾಷೆಯ ದನಿ-ಬನಿಗಳನ್ನು ಬೆರೆಸಿ ತತ್ವಪದ ರಚಿಸಿದ್ದಾನೆ.ತತ್ವಪದ ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸಿದ್ದೂ ಇದೆ.ಹಸನ ಸಾಹೇಬನ ಜೀವಿತದ ಕಾಲವನ್ನು ಕ್ರಿ.ಶ. 1819 ರಿಂದ 1914 ಎಂದು ನಿರ್ಧರಿಸಿ ಈತ ಒಟ್ಟು 96 ವರ್ಷ ಬದುಕಿದ್ದನೆಂದು ಹೇಳಲಾಗುತ್ತಿದೆ.ತಕ್ಕಮಟ್ಟಿನ ವಿದ್ಯಾವಂತನಾಗಿದ್ದ ಈತನನ್ನು ಯಾದಗಿರಿ ಜಿಲ್ಲೆಯ ಕ್ವಾಟಿಗಿರಿ (ಕೋಟೆಗಿರಿ) ಎಂಬೂರಿನ ಬ್ರಾಹ್ಮಣ ದೇಶಮುಖರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲು ನೇಮಿಸುತ್ತಾರೆ.ಶಿಕ್ಷಕರಿಗೆ ಉರ್ದುವಿನಲ್ಲಿ ಉಸ್ತಾದ ಎಂದು ಕರೆಯಲಾಗುತ್ತದೆ.ಈ ಉಸ್ತಾದ ಎನ್ನುವುದೇ ಜನಪದರ ಬಾಯಲ್ಲಿ ಉಸ್ತಾದಪ್ಪ, ವಸ್ತಾದಪ್ಪ ಎಂದಾಗಿದೆ. ಹಸನ್ ಆ ಹೊತ್ತಿಗೆ ಒಬ್ಬ ಉತ್ತಮ, ಯಶಸ್ವಿ ಶಿಕ್ಷಕನಾಗಿ ಪ್ರಸಿದ್ಧಿಗೆ ಬಂದರಿಂದ ದೇಶಮುಖರು ತಾವೇ ಖುದ್ದಾಗಿ ನಿಂತು ಪಕ್ಕದ ಹಳ್ಳಿ ಮೋಟ್ನಳ್ಳಿಯ ಪೀರಜಾದೆ ಮನೆತನದ ಅಬ್ಬಸಮಾ ಎಂಬುವವಳೊಂದಿಗೆ ಮದುವೆ ಮಾಡಿಸುತ್ತಾರೆ. ಮುಂದೆ ಹಸನ್ ಸಾಹೇಬನು ಮೋಟ್ನಳ್ಳಿಯಲ್ಲಿಯೇ ಶಾಶ್ವತವಾಗಿ ನೆಲೆ ನಿಂತದ್ದರಿಂದ ಮೋಟ್ನಳ್ಳಿ ಹಸನ ಸಾಹೇಬನೆಂದೆ ಗುರುತಿಸಲ್ಪಡುತ್ತಾನೆ.ಕಲಿತಷ್ಟೇ ವಿದ್ಯೆಯಿಂದ ಈತನೊಬ್ಬ ಪ್ರತಿಭಾವಂತ ಕವಿಯಾಗಿ ಅರಳಿದ್ದು ಮಹತ್ವದ ಸಂಗತಿ.ಸಹಜ ಪ್ರತಿಭೆಗೆ ಅಂದಿನ ವೀರಶೈವ ಮಠ ಪರಂಪರೆಯ ತಾತ್ವಿಕ ಧಾರೆಯು ನಿಕಷದಂತೆ ಒದಗಿ ಬಂದಿರಲು ಸಾಕು. ಆ ಹೊತ್ತಿಗೆ ಹೈದ್ರಾಬಾದ ಕರ್ನಾಟಕದಲ್ಲಿ ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯರ ತಾತ್ವಿಕ, ಸಾಹಿತ್ಯಕ ಚಳವಳಿಯು ವ್ಯಾಪಕವಾಗಿ ಪಸರಿಸಿರುವ ಸಾಧ್ಯತೆ ಇಲ್ಲದಿಲ್ಲ. ಏಕೆಂದರೆ ಈತನೂ ಕೂಡ ಅವರಂತೆ ಆಶುಕವಿ ಮತ್ತು ಪ್ರಯೋಗಶೀಲ ಚಿಂತಕನಾಗಿ ಕಾಣಿಸಿಕೊಂಡಿದ್ದಾನೆ. ಜೀವನಾನುಭಾವಗಳನ್ನೇ ಪದಗಳಲ್ಲಿ ಎರಕ ಹೊಯ್ದು ಜನರ ಕವಿಯಾಗಿ ನಿಂತಿದ್ದಾನೆ.ಅಕ್ಷರ ಕಲಿಸುವದರೊಂದಿಗೆ ಈತ ಬಯಲಾಟಗಳನ್ನು ಕಲಿಸುವ ಮಾಸ್ತರನೂ ಆಗಿದ್ದನಂತೆ.ಇಟ್ಕಾಲ ಗ್ರಾಮದ ಜನತೆಯ ಆಣತಿಯಂತೆ ಬಯಲಾಟ ಕಲಿಸಲೆಂದು ಹೋಗಿರುತ್ತಾನೆ.ಆದರೆ ತಿಂಗಳೊಪ್ಪತ್ತು ಕಳೆದರೂ ನಾಟಕ ಕಲಿಸಿ ಆಡಿಸಲು ಸಾಧ್ಯವಾಗುವದೇ ಇಲ್ಲ. ಇದರಿಂದ ಊರ ಗೌಡರು ಕುಪಿತರಾಗಿ ಈ ವಾರದಲ್ಲಿ ಬಯಲಾಟ ಪ್ರದರ್ಶನವಾಗಲೇ ಬೇಕೆಂದು ಆಜ್ಞೆ ಮಾಡುತ್ತಾರೆ.ರಂಗ ತಾಲೀಮನ ದಿವಸ ಹಸನ್ ಸಾಬ ಹೆದರಿ ಆ ಊರಿನ ದೈವ ವೀರಭದ್ರನ ಗುಡಿಯಲ್ಲಿ ಕುಳಿತುಕೊಂಡು ಅರ್ಥಿಯಿಂದ ಧ್ಯಾನಿಸುತ್ತಾನೆ.ಅಂತೂ ಆತನ ಪ್ರಾರ್ಥನೆಯ ಫಲವೋ ಕವಿಯ ಚುರುಕುತನವೋ ಗೊತ್ತಿಲ್ಲ. ಅಂತೂ ಆಟ ಅದ್ಭುತವಾಗಿ ಪ್ರಯೋಗಗೊಂಡು ಯಶಸ್ವಿಯಾಗುತ್ತದೆ.ಅಂದಿನಿಂದ ಇಟ್ಕಾಲ ವೀರಭದ್ರನ ಮೇಲೆ ಈತನಿಗೆ ಅಪಾರ ಶ್ರದ್ಧೆ ಬೆಳೆದು ಅದೇ ಅಂಕಿತದಿಂದಲೇ ಪದ ರಚಿಸಲು ಪ್ರಾರಂಭಿಸಿದನೆಂಬ ಪ್ರತೀತಿ ಇದೆ.ಮುಂದೆ ಈತ ಕನ್ನಡ, ಉರ್ದು ಮತ್ತು ತೆಲುಗಿನಲ್ಲಿ ನೂರಾರು ಪದಗಳನ್ನು ರಚಿಸಿ ಗಮನಾರ್ಹ ಕವಿ ಎನಿಸಿಕೊಳ್ಳುತ್ತಾನೆ.ಲೋಕಾನುಭವ ಮತ್ತು ಆಧ್ಯಾತ್ಮಿಕ ಕಾಣ್ಕೆ ಎರಡನ್ನು ಮೇಳೈಸಿ ಬರೆದ ಈತನ ಪದಗಳು ಒಂದೆಡೆ ಬಸವಾದಿ ಶರಣರ ತತ್ವ ಸಿದ್ಧಾಂತ ಇನ್ನೊಂದೆಡೆ ಆರೂಢ, ಅವಧೂತ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತವೆ.

ಬಾಳಿನ ಹಲವು ಸಂಗತಿಗಳು ಕಾವ್ಯಕ್ಕೆ ವಸ್ತುವಾಗಿವೆ.ಪ್ರಖರವಾದ ತಾತ್ವಿಕತೆ ಇಲ್ಲವಾದರೂ ಮೊನಚಾದ ಲೋಕ ವಿಡಂಬನೆ, ಜೀವನಾನುರಕ್ತಿಗಳು ಪದ ಪದರುಗಳಲ್ಲಿ ಎಡೆ ಪಡೆದುಕೊಂಡಿವೆ.ಈತ ಒಟ್ಟು ಎಷ್ಟು ಪದಗಳನ್ನು ಬರೆದಿದ್ದಾನೆ ಎಂಬುದು ನಿಷ್ಕರ್ಸಿಸಲು ಸಾಧ್ಯವಿಲ್ಲವಾದರೂ ಸಧ್ಯ 133 ಪದಗಳು ಮಾತ್ರ ದೊರಕಿವೆ.ದೊರೆತ ಪದಗಳಲ್ಲಿ ಈತನ ಆಧ್ಯಾತ್ಮಿಕ ಹಂಬಲ ಮತ್ತು ಅನನ್ಯ ಕಾವ್ಯ ಪ್ರತಿಭೆ ಢಾಳವಾಗಿಯೇ ಗೋಚರಿಸುತ್ತಿವೆ.ಹುಟ್ಟಿದ್ದು ಮುಸ್ಲಮಾನನಾಗಿ ಇರಬಹುದು.ಆದರೆ ಬೆಳೆದದ್ದು ಮಾತ್ರ ಜಾತಿ, ಧರ್ಮಾತೀತವಾಗೀ ಆದ್ದರಿಂದಲೇ ಜಾತಿ, ಮತ, ಪಂಥ, ವರ್ಗಗಳನ್ನು ಮೀರಿದ ಅಖಂಡ ಮಾನವಿಯತೆಯು ಈ ಪದಗಳಲ್ಲಿ ನಳನಳಿಸುತ್ತಿದೆ.

ದ್ಯಾಗಾಯಿ ಗುಂಡಪ್ಪ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿರುವ ಪುಟ್ಟ ಹಳ್ಳಿ ದೇಗಾಂವ. ಜನರ ಬಾಯಲ್ಲಿ ಅದು ದ್ಯಾಗಾಯಿ, ದೇಗಾಯಿ ಎಂದು ಬಳಕೆಯಲ್ಲಿ ಇದೆ.ಈ ಪುಟ್ಟ ಹಳ್ಳಿಯು ತನ್ನ ನಿರಂತರ ಸಾಂಸ್ಕೃತಿಕ ಚಟುವಟಿಕೆಗಳಿಂದಾಗಿ ಗಮನ ಸೆಳೆಯುತ್ತದೆ.ಇಲ್ಲಿ ಈ ಕ್ಷಣಕ್ಕೂ ಮನೆಗೊಬ್ಬರಂತೆ ಗೀಗೀ ಪದ, ಲಾವಣಿಪದ, ದೊಡ್ಡಾಟ, ಭಜನೆ ಪದ ಬರೆಯುವವರು ದೊರೆಯುತ್ತಾರೆ.ಅವರಲ್ಲಿ ಹಲವರು ಉತ್ತಮ ಹಾಡುಗಾರರಾಗಿದ್ದು ನಾಡಿನುದ್ದಕ್ಕೂ ಕಲೆಯ ಪ್ರದರ್ಶನಗೈದವರಿದ್ದಾರೆ.ಅವರಲ್ಲಿ ದ್ಯಾಗಾಯಿ ಗುಂಡಪ್ಪನು ಅಗ್ರಗಣ್ಯನಾಗಿದ್ದಾನೆ.ಈತನ ಜೀವಿತದ ಕಾಲ ಕ್ರಿ.ಶ. 1877ರಿಂದ 1927 ಎಂದು ಗುರುತಿಸಲಾಗಿದೆ.ಲಿಂಗವಂತ ಬಣಜಿಗ ಜಾತಿಯ ಪರುತಪ್ಪ-ಶಿವಲಿಂಗವ್ವ ದಂಪತಿಗಳಿಗೆ ಮೂರನೇ ಮಗನಾಗಿ ಹುಟ್ಟಿದ ಗುಂಡಪ್ಪನಿಗೆ ಹಾಡು ಬಯಲಾಟಗಳೆಂದರೆ ತೀವ್ರ ಆಸಕ್ತಿ.ಈತನ ಸೋದರಮಾವ ಮಹಲಿಂಗ ಎಂಬಾತನು ಸ್ವತಃ ಕವಿಯಾಗಿದ್ದು ಉತ್ತಮ ಲಾವಣಿಕಾರನೂ ಆಗಿದ್ದನು.ಈತನಿಂದಲೇ ಪ್ರೇರೇಪಿತನಾದ ಗುಂಡಪ್ಪ ಚಿಕ್ಕ ವಯಸ್ಸಿನಲ್ಲಿಯೇ ಮಾವನೊಂದಿಗೆ ಹಾಡಲು ಹೋಗುತ್ತಿದ್ದನು.ಈತನಿಗೆ ಭೀಮಣ್ಣ, ಭದ್ರಣ್ಣ ಎಂಬ ಇಬ್ಬರು ಸಹೋದರರು ಇದ್ದರು.ಭೀಮಣ್ಣನು ಎಣ್ಣೆಯ ಗಾಣಾ ಹೊಡೆಯುತ್ತಿದ್ದರೆ, ಭದ್ರಣ್ಣ ಅದನ್ನು ಮಾರಿಕೊಂಡು ಬರುತ್ತಿದ್ದನಂತೆ.ಗುಂಡಪ್ಪನಿಗೆ ಅವರ ತಂದೆ ಸಣ್ಣ ಕಿರಾಣಿ ಅಂಗಡಿ ಹಚ್ಚಿಕೊಟ್ಟಿದ್ದನಂತೆ.ನಾಲ್ಕನೇ ಇಯತ್ತೆವರೆಗೆ ಗಾಂವಠಿಯಲ್ಲಿ ಕಲಿತಿದ್ದ ಗುಂಡಪ್ಪನು ಮನೆಯ ಸಕಲೆಂಟು ಜವಾಬ್ದಾರಿ ನಿಭಾಯಿಸುತ್ತಲೇ ಗೀಗೀ ಪದಗಳನ್ನು ಹಾಡುವ ಮತ್ತು ಬರೆಯುವ ಆಸಕ್ತಿ ಬೆಳೆಸಿಕೊಳ್ಳುತ್ತಾನೆ.ತಾರುಣ್ಯಕ್ಕೆ ಕಾಲಿಟ್ಟೊಡನೆ ತನ್ನ ಊರಲ್ಲಿಯೆ ಇರುವ ಗುರವ್ವ ಎಂಬ ಕನ್ನೆಯೊಂದಿಗೆ ವಿವಾಹ ಮಾಡಿಕೊಳ್ಳುತ್ತಾನೆ.ಸಂಸಾರದ ಬಂಡಿ ಯಶಸ್ವಿಯಾಗಿ ನಡೆಸುತ್ತಲೇ ಸಾಹಿತ್ಯಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾನೆ.ಸುತ್ತಲ ಹಳ್ಳಿಗಳಲ್ಲಿ ಗುಂಡಪ್ಪ ಮತ್ತು ಆತನ ಸಹೋದರ ಭದ್ರಪ್ಪ ಇಬ್ಬರೂ ಗೀಗೀ ಪದ ಹಾಡುವಲ್ಲಿ ಎತ್ತಿದ ಕೈಯಾಗುತ್ತಾರೆ.ಗುಂಡಪ್ಪನ ಕಂಚಿನ ಕಂಠದ ಹಾಡುಗಾರಿಕೆ ಕುರಿತು ಅನೇಕ ರೋಚಕ ಕಥೆಗಳು ಜನಜನಿತವಾಗಿವೆ.

ಗುಂಡಪ್ಪ ಪ್ರಧಾನವಾಗಿ ಲಾವಣಿಕಾರ. ಈತ ನೂರಾರು ಲಾವಣಿಗಳು, ಮೊಹರಂ ಪದಗಳು, ಸೋಭಾನೆ ಗೀತೆಗಳು ಮತ್ತು ತತ್ವಪದಗಳನ್ನು ಬರೆದಿದ್ದಾನೆ.ಗೀಗೀ ಪದಗಳನ್ನು ಹಾಡುವಾಗ ಭಜನೆ ಪದಗಳನ್ನು ಖ್ಯಾಲಿಯಾಗಿ ಹಾಡುವುದುಂಟು.ಹೀಗಾಗಿ ಈತ ಕೆಲವೊಂದು ತತ್ವಪದಗಳನ್ನು ಖ್ಯಾಲಿಗಾಗಿಯೇ ಬರೆದಂತಿದೆ.ಖ್ಯಾಲಿಯೆಂದರೆ ತಾನು ಸಾದರಪಡಿಸುತ್ತಿರುವ ಕಥಾವಸ್ತುವಿಗೆ ಪೂರಕವಾಗುವಂಥ ಮತ್ತು ಹಾಡುಗಾರಿಕೆಯ ಲಯವನ್ನು ಮೀಂಟುವಂಥ ರಚನೆ.ಅಂಕಿತದಲ್ಲಿ “ಗುಂಡು, ಗುಂಡಪ್ಪ” ಎಂದು ತನ್ನ ಹೆಸರನ್ನೇ ಬಳಸಿದರೂ ಲಾವಣಿಗಳಲ್ಲಿ ಒಮ್ಮೊಮ್ಮೆ “ಗುಂಡು-ಭದ್ರ” ಎಂದು ತನ್ನ ಅಣ್ಣನ ಹೆಸರನ್ನು ಸೇರಿಕೊಳ್ಳುತ್ತಾನೆ.ಕೆಲವೊಮ್ಮೆ “ದ್ಯಾಗಾಯಿವೀಶ” ಎಂದು ಬಳಸಿದ್ದು ಇದೆ.ಇದರೊಂದಿಗೆ ಹಲವಾರು ಡಪ್ಪಿನಾಟ (ಸಣ್ಣಾಟ) ಬಯಲಾಟಗಳನ್ನು ಬರೆದಿದ್ದಾನೆ.ಅದರಲ್ಲಿ ಅಮೃತರಾಜ ತಾರಾಮಲ್ಲಿ, ಗುಣಶೇಖರಾ, ಅತ್ರಿಋಷಿ ಅನುಸಾಯಿ ಎಂಬ ಬಯಲಾಟ ಕೃತಿಗಳು ತುಂಬಾ ಪ್ರಸಿದ್ಧವಾಗಿದ್ದು ಈ ಭಾಗದ ಮನೆ ಮಾತಾಗಿವೆ.ಈತ ಒಬ್ಬ ಆಶುಕವಿಯಾಗಿದ್ದರಿಂದ ಅಂದಂದಿನ ಸಂದರ್ಭಕ್ಕಾಗಿ ಅಲ್ಲಲ್ಲಿ ತತ್ವಪದಗಳನ್ನು ಕಟ್ಟಿ ಹಾಡಿ ಬಿಡುತ್ತಿದ್ದರಿಂದ ಅವು ಚೆಲ್ಲಾಪಿಲ್ಲಿಯಾಗಿ ಹೋಗಿವೆ. ಆದ್ದರಿಂದ ಈತ ಒಟ್ಟು ಎಷ್ಟು ಪದಗಳನ್ನು ರಚಿಸಿದ್ದಾನೆ ಎಂಬ ನಿಖರವಾದ ಮಾಹಿತಿ ದೊರೆಯುವದಿಲ್ಲ. ಭಜನೆಕಾರರ ಸ್ವಂತ ಹಾಡಿನ ಪ್ರತಿ ಅಥವಾ ಹಾಡುಗಾರರ ನೆನಪಿನ ಕಣಜದಿಂದ ಹೆಕ್ಕಿ ತೆಗೆದ ಕೃತಿಗಳನ್ನು ಇಲ್ಲಿ ಸೇರಿಸಲಾಗಿದೆ. ಜನಪ್ರಿಯ ಪ್ರತಿಗಳಲ್ಲಿ ಬಿಡಿಬಿಡಿಯಾಗಿ ಭಜನೆ ಸಂಗ್ರಹಗಳಲ್ಲಿ ಕೆಲವೊಂದು ಪದಗಳು ಪ್ರಕಟಗೊಂಡಿವೆ. ಗುಂಡಪ್ಪನ ಮೇಲೆ ಸಂಶೋಧನೆ ಮಾಡಿದ ಅಪ್ಪಾಸಾಬ ಬಿರಾದಾರ ಅವರು ಕೆಲವು ಪದಗಳನ್ನು ಮುತ್ತಿನ ಹಾರ ಮಾಲಿಕೆಯಲ್ಲಿ ಪ್ರಕಟಿಸಿರುತ್ತಾರೆ. ಆ ಎಲ್ಲವುಗಳನ್ನು ಪರಿಶೀಲಿಸಿ ಇಲ್ಲಿ ಗುಂಡಪ್ಪನ ಒಟ್ಟು 61 ಪದಗಳನ್ನು ಅಡಕಗೊಳಿಸಲಾಗಿದೆ.ಗುಂಡಪ್ಪ ಮೂಲತಃ ಭಾವನಾ ಜೀವಿ ಮತ್ತು ಶರಣಜೀವಿ.ಪಕ್ಕಾ ದೇಶೀಯ ಒಡಲು.ಪದಗಳಲ್ಲಿ ಶರಣ ಪರಂಪರೆಯ ಅಷ್ಟಾವರಣ ನಿಷ್ಟೆ, ಭಕ್ತಿ, ಲೋಕಾಚಾರಗಳು ಎಡೆ ಪಡೆದುಕೊಂಡಿವೆ.ಯಥಾರೀತಿ ನೈಜಾಂ ಪ್ರಾಂತ್ಯದ ಭಾವೈಕ್ಯತೆಯು ಸ್ಥಾಯಿಯಾಗಿ ಮೂಡಿ ನಿಂತಿದೆ.ಈತನ ಶಿಷ್ಯರಲ್ಲಿ ಹಲವಾರು ಮುಸ್ಲಿಂ ಕವಿಗಳು ಇದ್ದಾರೆ.ಉರ್ದು ಮಿಶ್ರಿತ ಕನ್ನಡದ ದೇಶಿ ಭಾಷೆಯು ಆಕರ್ಷಕವಾಗಿ ಕಾಣಿಸಿಕೊಂಡಿದೆ.ಪದಗಳಲ್ಲಿ ಬಂಧುರತೆ ಮತ್ತು ಗೇಯತೆಯನ್ನು ಕವಿ ಜತನ ಮಾಡಿಕೊಂಡು ಬಂದಿದ್ದಾನೆ.ದ್ಯಾಗಾಯಿಯ ಪರಿಸರವೇ ಹಾಗಿದೆ.ಅಲ್ಲಿ ಇಂದಿಗೂ ಗ್ರಾಮ ದೇವತೆ ಹನುಮಂತ ಜಾತ್ರೆ ಮತ್ತು ಶೇಖಜಿಂದಾವಲಿಯ ಜಾತ್ರೆ ಒಂದೇ ದಿನ ನಡೆಯುತ್ತವೆ.ಆಮಂತ್ರಣ ಪತ್ರಿಕೆಯಲ್ಲಿ “ಜೈ ಬಜರಂಗ ಬಲಿ-ಶೇಖಜಿಂದಾವಲಿ ಜಾತ್ರಾ ಮಹೋತ್ಸವ” ಎಂದೇ ಪ್ರಕಟವಾಗುತ್ತದೆ.ಈ ಸಂಸ್ಕೃತಿಯನ್ನು ಕಾಪಾಡುವಲ್ಲಿ ಗುಂಡಪ್ಪನಂಥ ಸ್ವಾನುಭಾವಿಗಳು ದೊಡ್ಡ ಕೊಡುಗೆಯನ್ನಿತ್ತಿದ್ದಾರೆ.

ಹೊಳಕುಂದ ಶರಣ ಕವಿ

ಶರಣಕವಿಯ ಕಾರ್ಯಕ್ಷೇತ್ರವು ಕಲಬುರಗಿ ತಾಲೂಕಿನಲ್ಲಿರುವ ಹೊಳಕುಂದಾ ಎಂಬ ಗ್ರಾಮವಾಗಿದ್ದರೂ ಹುಟ್ಟಿದ್ದು ಇದೆ ಜಿಲ್ಲೆಯ ಆಳಂದ ತಾಲೂಕಿನಲ್ಲಿರುವ ಬಾಲೇಸಾಹೇಬ ಜಾವಳಗಿ ಎಂಬಲ್ಲಿ.ಅಲ್ಲಿಯ ಗುರುಮಠದ ಶಿವಲಿಂಗಯ್ಯ ಮತ್ತು ರಾಚಮ್ಮ ಎಂಬ ದಂಪತಿಗಳಿಗೆ ಕ್ರಿ.ಶ. 1887ರಲ್ಲಿ ಹುಟ್ಟಿ ಒಂಬತ್ತನೇ ವಯಸಿನಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗುತ್ತಾನೆ.ವೀರಶೈವ ಮಠದ ಪರಂಪರೆಯಲ್ಲಿ ಹುಟ್ಟಿದ್ದರಿಂದ ಜಾವಳಿಗಿಯ ಭಕ್ತರು ತಬ್ಬಲಿ ಮಗುವನ್ನು ಕಲಬುರಗಿಯ ಶ್ರೀ ಬಸವಲಿಂಗ ಶಾಸ್ತ್ರಿಗಳ ಪಾಠಶಾಲೆಗೆ ತಂದು ಸೇರಿಸುತ್ತಾರೆ.ಅಲ್ಲಿ ತಕ್ಕಮಟ್ಟಿನ ಧಾರ್ಮಿಕ ಅಧ್ಯಯನ ಮಾಡುತ್ತಾನೆ.ಮುಂದೆ ತಾರುಣ್ಯದಲ್ಲಿ ಪಕ್ಕದ ಹಳ್ಳಿಯ ತಾವರಗೆರೆಯ ಅಡಿವೆಯ್ಯ ಎಂಬುವವರ ಮಗಳಾದ ಅಣೆಮ್ಮನೊಂದಿಗೆ ವಿವಾಹವಾಗುತ್ತದೆ.ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿ ಸಾಂಸಾರಿಕ ಬದುಕಿನಿಂದ ವಿಮುಖನಾಗಿ ಮನೆ ಗುರುಗಳಾದ ಹರಸೂರಿನ ಕಲ್ಮಠದ ಕರಸಿದ್ಧೇಶ್ವರರ ಸನ್ನಿಧಿಗೆ ಬರುತ್ತಾನೆ.ಗುರುವು ಲಿಂಗೈಕ್ಯರಾಗಲು ಹರಸೂರಿಗೆ ಹೋಗಿ ಸಾಧುವೇಷ ಹಾಕಿಕೊಳ್ಳುತ್ತಾನೆ.ಈಗಾಗಲೇ ಈತನಲ್ಲಿ ಕಾವ್ಯ ಪ್ರತಿಭೆ ಅರಳಿ ಗುರು ಕರಸಿದ್ಧನ ಅಂಕಿತದಿಂದ ಪದ ಬರೆಯಲು ಪ್ರಾರಂಭಿಸಿರುತ್ತಾನೆ.ವೀರಶೈವ ಮಠ ಪರಂಪರೆಯನ್ನು ಮೈಗೂಡಿಸಿಕೊಂಡು 36 ವರ್ಷಗಳವರೆಗೆ ದೇಶಿಕನಾಗಿ ಬಾಳಿ ಹೊಳಕುಂದ, ನಾವದಗಿ ಮಠಗಳ ಅಭಿವೃದ್ಧಿಪಡಿಸಿ 1961ರಲ್ಲಿ ಇಹಲೋಕ ತ್ಯಜಿಸುತ್ತಾನೆ.ಹೊಳಕುಂದ ಮಠದಲ್ಲಿ ಕವಿಯ ಗದ್ದುಗೆ ಇದೆ.ಈ ಕವಿಯು ತಾರುಣ್ಯಾವಸ್ಥೆಯಲ್ಲಿಯೇ ಪದ ಬರೆಯಲು ಪ್ರಾರಂಭಿಸಿ ಸುಮಾರು ಸಾವಿರಕ್ಕೂ ಮೀರಿ ಬಿಡಿಪದಗಳನ್ನು ಬರೆದಿರುವನೆಂದು ಹೇಳಿಕೊಂಡು ಬರಲಾಗುತ್ತಿದೆ.ಆದರೆ ದೊರೆತ ಪದಗಳು 100 ಮಾತ್ರ. ತತ್ವಾನುಭವ ಬೋಧೆ ಎಂಬ ಹೆಸರಿನಲ್ಲಿ ಇವುಗಳನ್ನು 1958ರಲ್ಲಿಯೇ ಪ್ರಕಟಿಸಲಾಗಿದೆ.ಉಳಿದ ಪದಗಳು ಎಲ್ಲಿ ಹೋದವು?ಏನಾದವು?ಎಂಬುದಕ್ಕೆ ಉತ್ತರಗಳಿಲ್ಲ. ಲಿಂಗಾಂಗ ಸಾಮರಸ್ಯ, ಗುರು ಮಹಿಮೆ, ಲೋಕನೀತಿ ಮುಂತಾದ ಸಂಗತಿಗಳು ಈತನ ಪದಗಳಲ್ಲಿ ಪ್ರಮುಖವಾಗಿ ಎಡೆ ಪಡೆದುಕೊಂಡಿವೆ.

ಮಾದನ ಹಿಪ್ಪರಗಾ ಸಿದ್ಧರಾಮ ಶಿವಯೋಗಿ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಮಾದನ ಹಿಪ್ಪರಗಾ ಎಂಬುದು ಹೋಬಳಿ ಗ್ರಾಮವಾಗಿದೆ.ತಾಲೂಕಿನಲ್ಲಿಯೇ ಪ್ರಮುಖ ವ್ಯಾಪಾರ ಗ್ರಾಮವಾಗಿದ್ದು ನೇಕಾರಿಕಾ ವೃತ್ತಿಗೆ ಹೆಸರಾಗಿದೆ.ಈ ಗ್ರಾಮದ ಬಟ್ಟೆ ಮನೆತನದ ಶಿವಲಿಂಗಪ್ಪ ಮತ್ತು ಚವಡಾಬಾಯಿ ದಂಪತಿಗಳ ಉದರದಲ್ಲಿ ಸಿದ್ಧರಾಮನು ಕ್ರಿ.ಶ. 1891ರಲ್ಲಿ ಜನಿಸುತ್ತಾನೆ.ವೀರಶೈವ ನೇಕಾರ ಸಮುದಾಯಕ್ಕೆ ಸೇರಿದ ಸಿದ್ಧರಾಮನಿಗೆ ಗುರುಬಸಪ್ಪ ಮತ್ತು ಸಿದ್ಧಮಲ್ಲಪ್ಪ ಎಂಬ ಇಬ್ಬರು ತಮ್ಮಂದಿರು.ಸಿದ್ಧರಾಮನಿಗೆ ಚಿಕ್ಕಂದಿನಿಂದಲೂ ಪುರಾಣ, ಪ್ರವಚನಗಳಲ್ಲಿ ಆಸಕ್ತಿ ಬಲಿತು ತಾನೂ ಒಬ್ಬ ಪುರಾಣ ಪ್ರವಚನ ಪಟುವಾಗಿ ಬೆಳೆಯುತ್ತಾನೆ.ಮಾದನಹಿಪ್ಪರಿಗೆಯಲ್ಲಿ ಶಿವಲಿಂಗೇಶ್ವರನೆಂಬ ಚಾರಿತ್ರಿಕ ಪುರುಷನೊಬ್ಬ ಆಗಿ ಹೋಗಿದ್ದಾನೆ.ಆತನ ಹೆಸರಿನಲ್ಲಿ ಪ್ರಭಾವಿಪೂರ್ಣ ಮಠವೊಂದು ತುಂಬಾ ಪ್ರಸಿದ್ಧವಾಗಿದೆ.ಸಿದ್ಧರಾಮನಿಗೂ ಚಿಕ್ಕಂದಿನಿಂದಲೂ ಶಿವಲಿಂಗೇಶನ ಮೇಲೆ ಅಪಾರ ಭಕ್ತಿ ಬೆಳೆಯುತ್ತದೆ.ತಾರುಣ್ಯಕ್ಕೆ ಕಾಲಿಟ್ಟೊಡನೆ ಪಾಲಕರು ಸಿದ್ಧರಾಮನಿಗೆ ಆಳಂದ ಊರಿನ ಉಳ್ಳೆ ಮನೆತನದ ಬುದ್ದಪ್ಪನವರ ಮಗಳು ಕಾಶಿಬಾಯಿ ಎಂಬ ಕನ್ಯೆಯೊಂದಿಗೆ ಮದುವೆ ಮಾಡುತ್ತಾರೆ.ಆದರೆ ಸಾಂಸಾರಿಕ ಜೀವನದಲ್ಲಿ ಆಸಕ್ತಿ ಬೆಳೆಸಿಕೊಳ್ಳದೆ ಆರೂಢ, ಅವಧೂತರಂತೆ ಶಿವಲಿಂಗೇಶ್ವರ ಮಠದಲ್ಲಿಯೇ ಕಾಲ ಕಳೆಯತೊಡಗುತ್ತಾನೆ.ಲಚ್ಯಾಣದ ಕಮರಿ ಮಠದ ಸಿದ್ದಪ್ಪ ಮಹಾರಾಜರಿಂದ ಗುರುದೀಕ್ಷೆ ಪಡೆದುಕೊಂಡು ಜಪ, ತಪ, ಅನುಷ್ಠಾನಗಳಲ್ಲಿ ನಿರತನಾಗುತ್ತಾನೆ.ಈ ರೀತಿಯ ಚಟುವಟಿಕೆಗಳಿಂದಾಗಿ ಜನಮಾನಸದಲ್ಲಿ ಶಿವಯೋಗಿ ಪುರುಷನೆಂದು ಬಿಂಬಿತವಾಗುತ್ತಾನೆ.ಆ ಕಾಲದಲ್ಲಿ ಪ್ರಸಿದ್ಧರಾಗಿದ್ದ ಅಕ್ಕಲಕೋಟದ ರೇವಣಸಿದ್ಧ, ಹುಬ್ಬಳ್ಳಿಯ ಸಿದ್ಧಾರೂಢರ ಸಂಪರ್ಕಕ್ಕೆ ಬಂದು ಆರೂಢ ಮಾರ್ಗಾವಲಂಬಿಯಾಗುತ್ತಾನೆ.ಸುತ್ತಲೂ ಹಳ್ಳಿಗಳಲ್ಲಿ ಉತ್ತಮ ಪ್ರವಚನ ಪಟುವಾಗಿ ಸಂಚರಿಸುತ್ತಾನೆ.ಅಪಾರ ಶಿಷ್ಯ ಬಳಗವನ್ನು ಹೊಂದಿ ತನಗೆ ಬಂದ ಆದಾಯವನ್ನು ಶಿವಲಿಂಗೇಶ್ವರ ಮಠದ ಜೀರ್ಣೋದ್ಧಾರಕ್ಕೆ ವಿನಿಯೋಗಿಸುತ್ತಾನೆ.

ಉತ್ತರ ಕರ್ನಾಟಕದಲ್ಲಿ ಲಿಂಗವಂತ ದೇವಾಂಗ ಜನಾಂಗವು ಶೈವಸಿದ್ಧ ಪರಂಪರೆಯೊಂದಿಗೆ ಅನುಸಂಧಾನಗೈಯುತ್ತ ಬಂದಿದೆ.ಆಚರಣೆಯಲ್ಲಿ ಬಸವಾದಿ ಶರಣ ಪರಂಪರೆ ಮತ್ತು ಆರೂಢ ಮಾರ್ಗ ಎರಡನ್ನೂ ಸಮನ್ವಯಿಸಿಕೊಂಡು ಬರುತ್ತಿರುವ ವಿಶಿಷ್ಟ ನಡೆ ಇದಾಗಿದೆ.ಜೇಡರ ದಾಸಿಮಯ್ಯ ಮತ್ತು ಪೌರಾಣಿಕ ಪುರುಷ ದೇವಾಂಗ ಋಷಿ ಇಬ್ಬರನ್ನೂ ಆರಾಧಿಸುವ ಇವರು ನೇಕಾರಿಕೆ ವೃತ್ತಿಯೊಂದಿಗೆ ಬಟ್ಟೆ ಮಾರಾಟ ಮಾಡುವ ಕೈಂಕರ್ಯದಲ್ಲೂ ಇದ್ದಾರೆ.ಈ ಜನಾಂಗಕ್ಕೆ ತಮ್ಮದೇ ಒಂದು ಗುರು ಪರಂಪರೆ ಇದೆ.ಈ ವಿಶಿಷ್ಟ ಗುರು ಪರಂಪರೆಯಲ್ಲಿ ಮಾದನಹಿಪ್ಪರಿಗೆಯ ಸಿದ್ದರಾಮನು ಗುರುತಿಸಿಕೊಳ್ಳುತ್ತಾನೆ.ಆರೂಢ ಮಾರ್ಗದ ಪ್ರಭಾವದಿಂದಾಗಿಯೇ ಈತ ‘ಸಿದ್ಧಲಿಂಗ ಕೈವಲ್ಯ’ ಎಂಬ ಕೃತಿ ರಚಿಸಿದ್ದಾನೆ. ನಿಜಗುಣಾದಿಗಳ ಕೈವಲ್ಯ ಪದ್ಧತಿಯನ್ನು ಅನುಸರಿಸಿ ಈತನೂ ಪರಶಿವ ಕಾರುಣ್ಯ ಸ್ಥಲ, ಜೀವ ಸಂಬೋಧನಾ ಸ್ಥಲ, ನೀತಿ ಕ್ರಿಯಾಚಾರ ಸ್ಥಲ, ಯೋಗ ಪ್ರತಿಪಾದನ ಸ್ಥಲ ಮತ್ತು ಜ್ಞಾನ ಪ್ರತಿಪಾದನ ಸ್ಥಲವೆಂದು ವಿಭಾಗೀಕರಣ ಮಾಡಿ ಪದಗಳನ್ನು ಬರೆದಿದ್ದಾನೆ. ನಿಜಗುಣ ಪರಂಪರೆಯ ಶಾಸ್ತ್ರೀಯ ತಾತ್ವಿಕತೆಯೇ ಇಲ್ಲಿ ಪ್ರಧಾನವಾಗಿ ಎಡೆ ಪಡೆದುಕೊಂಡಿದೆಯಾದರೂ ಗ್ರಾಮೀಣ ಶಿವಭಜನೆಗೆ ಇಂಬಾಗುವಂತೆಯೂ ಪದಗಳನ್ನು ಹೆಣೆದಿದ್ದು ಗಮನ ಸೆಳೆಯುತ್ತದೆ.ಗುರು ಮಹತ್ವ, ಸಂಸಾರದ ನಶ್ವರತೆ, ಶಿವಯೋಗದ ಮಹತ್ವ, ಆರೂಢ ಸ್ಥಿತಿ ಇತ್ಯಾದಿಗಳನ್ನು ಅನುಕ್ರಮವಾಗಿ ಬಿತ್ತರಿಸುವ ಒಟ್ಟು 44 ಪದಗಳು ಇವೆ.ದೀಕ್ಷಾಗುರು ಸಿದ್ಧಲಿಂಗನ ನಾಮವನ್ನೇ ಅಂಕಿತವಾಗಿಟ್ಟುಕೊಂಡು ಬರೆದ ಈ ಪದಗಳು ಅರೂಢ ಮಾರ್ಗದವರಿಗೆ ಕೈದೀವಿಗೆಯಂತಿವೆ.ಬದುಕಿರುವಾಗಲೇ ಸಿದ್ಧರಾಮ ಶಿವಯೋಗಿ ಎನಿಸಿಕೊಂಡ ಈತ ತನ್ನ ಕಾರ್ಯಕ್ಷೇತ್ರ ಮಾದನಹಿಪ್ಪರಿಗೆಯಲ್ಲಿ ಕ್ರಿ.ಶ 1953ರಲ್ಲಿ ನಿಧನ ಹೊಂದಿದ್ದು ಅಲ್ಲಿಯೇ ಈತನ ಸಮಾಧಿ ಇದೆ.

ಸಾವಳಗಿ ಮಹಮ್ಮದಸಾಬ

ಮಹಮ್ಮದ ಸಾಹೇಬನು ಕಲಬುರಗಿ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿ ಸಾವಳಗಿ ಎಂಬಲ್ಲಿ 1906ರಲ್ಲಿ ಜನಿಸಿದ್ದಾನೆ.ಕಲಬುರಗಿಯಿಂದ 20 ಕಿ.ಮೀ ಫಾಸಲೆಯಲ್ಲಿರುವ ಈ ಊರು ಶಿವಲಿಂಗೇಶ್ವರ ಎಂಬ ಶೈವಸಿದ್ಧ ಪರಂಪರೆಯ ದೈವದಿಂದಾಗಿ ಶಿವಲಿಂಗೇಶ್ವರ ಸಾವಳಗಿ ಎಂದೇ ಜನಜನಿತವಾಗಿದೆ.ಕರ್ನಾಟಕದುದ್ದಕ್ಕೂ ಶಿವಲಿಂಗೇಶ್ವರರ ಸ್ಥಾನಗಳು ಪಸರಿಸಿಕೊಂಡಿವೆ.ಬೆಳಗಾಂವಿ ಜಿಲ್ಲೆಯಲ್ಲಿಯೂ ಸಾವಳಗಿ ಶಿವಲಿಂಗೇಶ್ವರ ಆಲಯವಿರುವುದನ್ನು ಗಮನಿಸಬಹುದು. ತಾತ್ವಿಕವಾಗಿ ಎಲ್ಲ ಪರಂಪರಗಳೊಂದಿಗೆ ಸುಲಭವಾಗಿ ಕೊಡು ಕೊಳ್ಳುವಿಕೆ ನಡೆಸಿರುವ ಈ ಶೈವಸಿದ್ಧ ಪರಂಪರೆಯು ಸೂಫಿಗಳೊಂದಿಗೂ ಅಷ್ಟೇ ಸಲಿಸಾಗಿ ಬೆರೆತುಕೊಂಡದ್ದರಿಂದಲೆವ ಇರಬೇಕು, ಈ ಹಳ್ಳಿಯ ಮುಚಖೇಡ ಎಂಬ ಮನೆತನದಲ್ಲಿ ಒಂಬತ್ತು ತಲೆಮಾರಿನವರು ಸಂತಶರಣ ಸೂಫಿ ಕವಿಗಳಾಗಿ ಅರಳಿದ್ದಾರೆ. ಮಹಮ್ಮದ ಸಾಬರ ಅಪ್ಪ, ಅಜ್ಜ, ಮುತ್ತಜ್ಜ, ಪಣಜ ಹೀಗೆ ಹಿಂದಿನ ಒಂಬತ್ತು ತಲೆಮಾರಿನವರು ಕವಿಗಳಾಗಿದ್ದು ಕನ್ನಡ, ಫಾರ್ಸಿಯಲ್ಲಿ ಕಾವ್ಯ ರಚಿಸಿರುವರೆಂದು ತಿಳಿದು ಬರುತ್ತದೆ.ಈ ಮನೆತನದ ಮೋದಿನಸಾಬ, ಫಾತಿಮಾ ಅವರಿಗೆ ಏಕಮಾತ್ರ ಪತ್ರನಾಗಿ ಮಹಮ್ಮದಸಾಬ ಜನಿಸುತ್ತಾನೆ. ಐದು ವರ್ಷದವನಿದ್ದಾಗಲೇ ತಾಯಿ ತೀರಿ ಹೋಗಲು ಮಲತಾಯಿಯ ಕೈಯಲ್ಲಿ ಬೆಳೆಯುತ್ತಿರುವಾಗಲೇ 12ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಚಿಕ್ಕಪ್ಪನಾದ ಖಾಸಿಂ ಸಾಹೇಬನ ಆಸರೆಯಲ್ಲಿ ದನಗಾಹಿಯಾಗಿ ಬೆಳೆಯುತ್ತಾನೆ. ಶಿವಲಿಂಗೇಶ್ವರ ಮಠದ ಕಾಡಯ್ಯಸ್ವಾಮಿ ಎಂಬುವವರಲ್ಲಿ ಆಗಿನ ಪದ್ಧತಿಯಂತೆ ಮೋಡಿ ಲಿಪಿಯಲ್ಲಿ ಎರಡನೇ ಇಯತ್ತೆವರೆಗೆ ಶಾಲೆ ಕಲಿಯುತ್ತಾನೆ.ಚಿಕ್ಕಪ್ಪನಾದರೂ ಈತನನ್ನು ತುಳೇರ ಶರಣಪ್ಪ ಎಂಬುವವನಲ್ಲಿ ಜೀತಕ್ಕೆ ಇಡುತ್ತಾನೆ.ದನ ಕಾಯುತ್ತಲೇ ಈತ ಶಿವಲಿಂಗೇಶ್ವರ ಮಠದ ಪೌರಾಣಿಕ ವಾತಾವರಣದಲ್ಲಿ ಸೇರಿ ಹೋಗುತ್ತಾನೆ.ಅಲ್ಲಿ ನಡೆಯುವ ಜಾತ್ರೆ, ಖಾಂಡ, ಮೊಹರಮ್ಮ ಆಚರಣೆಗಳ ಪ್ರಭಾವ ಈತನ ಮೇಲಾಗುತ್ತದೆ.

ಈತನ ಮನೆತನದವರು ಗೀಗೀ ಪದ ರಚಿಸುವಲ್ಲಿ ಸಿದ್ಧಹಸ್ತರಾಗಿದ್ದರು.ಅದೇ ಊರಿನ ಪದ್ಮಣಪ್ಪ ಎಂಬುವವನು ಹರದೇಶಿ, ನಾಗೇಶೀ ಪದಗಳನ್ನು ರಚಿಸುತ್ತಿದ್ದನಂತೆ.ಈ ಪದ್ಮಣಪ್ಪನೂ ಚಿಕ್ಕಪ್ಪನಾದ ಖಾಸಿಂನಿಗೆ ಸವಾಲು ಹಾಕುತ್ತಾನೆ.ಖಾಸಿಂನಿಂದ ತಕ್ಕ ಉತ್ತರ ನೀಡಲು ಸಾಧ್ಯವಾಗದಾಗಲ ಮಹಮ್ಮದ ಸಾಬನು ತನ್ನ ಮನೆತನದ ಹೆಸರು ಉಳಿಸಿಕೊಳ್ಳಲು ಅಪ್ಪನಿಂದ ಕಲಿತ ಪದ ಪ್ರಭಾವ ಬಳಸಿ ಉತ್ತರ ನೀಡಿ ಗೆದೆಯುತ್ತಾನೆ. ಹೀಗೆ ತೀರ ಚಿಕ್ಕ ವಯಸ್ಸಿನಲ್ಲಿ ಪದ ರಚಿಸುವದನ್ನು ಸವಾಲಾಗಿ ಸ್ವೀಕರಿಸಿದ ಈತ ಮುಂದೆ ಬಹು ದೊಡ್ಡ ಲಾವಣಿಕಾರನಾಗಿ ಹರದೇಶಿ ಸಂಪ್ರದಾಯದ ಸುಮಾರು 3000 ಪದಗಳನ್ನು ಬರೆದರೆ ನಾಗೇಶಿ ಮಾರ್ಗದ 500ರಷ್ಟು ಪದಗಳನ್ನು ರಚಿಸುತ್ತಾನೆ. ಹರದೇಶಿ ಹಾಡಿಗಳಿಗೆ “ಸಿದ್ಧ ಶಿವಯೋಗಿ ಶಿವಲಿಂಗೇಶ್ವರ” ಎಂಬ ಅಂಕಿತ ಬಳಸಿದರೆ ನಾಗೇಶಿ ಹಾಡುಗಳಿಗೆ “ಶಿವಗಂಗಮ್ಮ” ಎಂಬ ಅಂಕಿತ ಬಳಸಿದ್ದಾನೆ.ಇವುಗಳಲ್ಲದೆ ಈತ ದೊಡ್ಡಾಟ, ಡಪ್ಪಿನಾಟ, ಚಾಜದ ಪದಗಳನ್ನು ರಚಿಸಿದ್ದಾನೆ.‘ಕಲಿಧರ್ಮ’, ‘ಶೂರ ಪದ್ಮಾಶೂರ’ ಮತ್ತು ‘ಬಸವೇಶ್ವರ’ ಮುಂತಾದ ದೊಡ್ಡಾಟದ ಕೃತಿಗಳನ್ನು ಸ್ವಂತ ನಿರ್ದೇಶಕನಾಗಿ ರಂಗದ ಮೇಲೆಯು ತಂದಿದ್ದಾನೆ.ಮೋಡಿ, ಉರ್ದು ಲಿಪಿಗಳಲ್ಲಿ ಈತ ಪರಿಣಿತನಾಗಿದ್ದನು.ಆಯಾ ಋತುಮಾನಕ್ಕನುಸರಿಸಿ ಹಾಡು ಬರೆಯುವುದು ಈತನ ಹವ್ಯಾಸವಾಗಿತ್ತಂತೆ.ಮೊಹರಂ ಪದ, ಜೋಗುಳ ಪದ, ಸೋಭಾನೆ ಪದ, ಹಂತಿ ಹಾಡು ಹೀಗೆ ಹಲವು ಹತ್ತು ಪದ ಪ್ರಕಾರಗಳನ್ನು ಈತ ಹದವರಿತು ದುಡಿಸಿಕೊಂಡಿದ್ದಾನೆ.ಅದರಲ್ಲಿ ತತ್ವಪದಗಳ ಸಂಖ್ಯೆ ಎಷ್ಟು ಎಂಬುದು ತಿಳಿದು ಬರುವುದಿಲ್ಲ. ಅದರಲ್ಲಿಯೂ ಈತ ಕೇಳಿದವರಿಗೆಲ್ಲಾ ಪದ ಬರೆದು ಕೊಟ್ಟು ಬಿಡುತ್ತಿದ್ದನಂತೆ.ಬರೆದುಕೊಂಡವರೊಂದಿಗೆ ಪದ ಪ್ರಯಾಣ ಬೆಳೆಸಿ ಬಿಡುತ್ತಿದ್ದವಂತೆ.ಹೀಗಾಗಿ ಈತನ ಕೃತಿಗಳ ನಿಖರ ಮಾಹಿತಿ ಸಿಗಲಾರದು. ಮಹಮ್ಮದ ಸಾಬನಿಗೆ 18ನೇ ವಯಸ್ಸಿನಲ್ಲಿ ಅದೇ ಊರಿನಲ್ಲಿರುವ ಸೋದರತ್ತೆ ಮಗಳಾದ ಹನೀಫಾಬಿ ಎಂಬುವವರೊಂದಿಗೆ ಮದುವೆಯಾಗಿ ಸುಖ ಸಂಸಾರದ ಸಾರವಾಗಿ ಮೋದಿನ್‍ಸಾಬ, ಹೈದರ್ ಸಾಬ, ದಸ್ತಗೀರ್ ಸಾಬ ಎಂಬ ಮೂರು ಗಂಡು ಮತ್ತು ಫಾತಿಮಾಬಿ ಹಾಗೂ ಫತರುಬಿ ಎಂಬ ಇಬ್ಬರು ಹೆಣ್ಣು ಮಕ್ಕಳು ಜನಿಸುತ್ತಾರೆ. ಇಷ್ಟಿದ್ದರೂ ಕವಿ ಮಹಮ್ಮದಸಾಬ ಎಂದೂ ಸಂಸಾರ ಜಂಜಾಟದಲ್ಲಿ ಸಿಲುಕಲೇ ಇಲ್ಲ. ಹೆಂಡತಿ ಮತ್ತು ಅತ್ತೆಯ ಮೇಲೆ ಸರ್ವ ಭಾರವನ್ನು ಹೊರಸಿ ತಾನಾಯ್ತು, ತನ್ನ ಸಾಹಿತ್ಯವಾಯ್ತು.ಸ್ವಂತ ಗೀಗೀ ಹಾಡುಗಾರನೂ ಆಗಿದ್ದ ಮಹಮ್ಮದಸಾಬ ತಮ್ಮ ಜೀವಿತದ ಕೊನೆಯವರೆಗೂ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಗೀಗೀ ಪದ ಪರಂಪರೆಗೆ ಭದ್ರ ನೆಲೆಯನ್ನು ಒದಗಿಸಿದ್ದಾನೆ.ಹೈದ್ರಾಬಾದ ಕರ್ನಾಟಕದ ಉದ್ದಕ್ಕೂ ಈತನ ಗೀಗೀ ಪದಗಳು ವ್ಯಾಪಕವಾಗಿ ಹಾಡಲಾಗುತ್ತದೆ.ಶಿವಲಿಂಗೇಶ್ವರ ಈತನ ಮನೆ ಮತ್ತು ಮನದ ದೈವ. ಎಂತಲೇ ಸಾವಳಗಿ ಶಿವಲಿಂಗೇಶನ ಅಂಕಿತದಿಂದಲೇ ಸಾಹಿತ್ಯ ಬರೆದಿದ್ದಾನೆ.

ಸಾವಳಗಿ ಮಹಮ್ಮದಸಾಬನ ಅಂತ್ಯ ಅಷ್ಟು ಸುಖಕರವಾಗಿರಲಿಲ್ಲ. ಬದುಕಿನುದ್ದಕ್ಕೂ ಹಾಡು, ಸಾಹಿತ್ಯ, ಶಿವಾನುಭವ ಗೋಷ್ಠಿ ಎಂದೆಲ್ಲಾ ಕಾಲ ಕಳೆದ ಈತ ಲೌಕಿಕ ಬದುಕಿಗಾಗಿ ಏನನ್ನೂ ಸಂಪಾದಿಸಲಿಲ್ಲ. ಹೀಗಾಗಿ ಬಡತನದಲ್ಲಿ ಬಳಲಿ ಸಾಯುವಾಗ ತನಗೆ ಶರಣ ಧರ್ಮದಂತೆ ಸಂಸ್ಕಾರ ಮಾಡಬೇಕೆಂದು ಹೇಳಿದ್ದನಂತೆ. ಜುಲೈ 1ನೇ ತಾರೀಖು 1987 ರಲ್ಲಿ ಸಾವಳಗಿ ಶಿವಲಿಂಗನ ಸನ್ನಿಧಿಯಲ್ಲಿಯೇ ದೇಹ ತ್ಯಜಿಸುತ್ತಾನೆ.ಈತನ ಶಿವಭಕ್ತಿಯ ಅನನ್ಯತೆ ಮಾತ್ರ ಅಸದಳವಾಗಿದೆ.ತತ್ವಪದಗಳಲ್ಲಿ ಲೋಕನೀತಿ, ಸಾಮಾಜಿಕ ವಿಡಂಬನೆ, ಗುರು, ಲಿಂಗಾದಿಗಳ ಮಹತ್ವ ಮುಂತಾದವು ಎಡೆ ಪಡೆದುಕೊಂಡಿವೆ.ಅಪ್ಪಟ ದೇಶಿ ಶೈಲಿ, ವೆಗ್ಗಳವಾದ ದೇಶಿ ಮತ್ತು ಉರ್ದು ಪದಗಳು ಬಳಕೆ ಇದೆ.ಆದಿ, ಅಂತ್ಯ ಪ್ರಾಸಗಳು ಶ್ರುತಿ ಸೋಬತಿಗಾಗಿಯೇ ಸೇರಿಕೊಂಡು ಹಾಡುಗಾರಿಕೆಗೆ ಹೇಳಿ ಮಾಡಿಸಿದಂತಿವೆ.ಸಾವಳಗಿ ಮಹಮ್ಮದ ಸಾಬನ ಭಜನೆ ಪದಗಳು ಕಲಬುರಗಿ ಭಾಗದಲ್ಲಿ ಹೆಚ್ಚು ಚಾಲ್ತಿಯಲ್ಲಿವೆ.

ಮಹಾಗಾಂವ ಮೀರಾಸಾಬ

ಕಲಬುರಗಿ ನಗರದಿಂದ 25 ಕಿ.ಮೀ. ಫಾಸಲೆಯಲ್ಲಿರುವ ಊರು ಮಹಾಗಾಂವ. ಲಾವಣಿಕಾರ ಮೀರಾಸಾಬನು ಮಹಾಗಾಂವದ ಪಕ್ಕದಲ್ಲಿರುವ ವಾಡಿಯೆಂಬಲ್ಲಿ ಕ್ರಿ.ಶ. 1917ರಲ್ಲಿ ಜನಿಸಿದ. ಈತನ ತಾಯಿ ಹುಸೇನಬಿ, ತಂದೆ ಕಮಲಸಾಬ. ಮುಸ್ಲಿಂರಲ್ಲಿಯೇ ತಳವರ್ಗವೆನಿಸಿಕೊಂಡಿರುವ ಜಾತಗಾರ ಕುಲದಲ್ಲಿ ಹುಟ್ಟಿದ್ದರಿಂದ ಮೀರಾಸಾಬ ಬಡತನದ ಬೇಗೆಯಲ್ಲಿಯೇ ಬೆಳೆಯುತ್ತಾನೆ. ಊರೂರು ವೇಷ ಹಾಕಿಕೊಂಡು ಅಲೆಯುವ ವೃತ್ತಿ.ಸೀತೆ, ಯಲ್ಲಮ್ಮ ಮುಂತಾದ ಪೌರಾಣಿಕ ವೇಷ ಕಟ್ಟಿಕೊಂಡು ಬದುಕಬೇಕಾದ ಸ್ಥಿತಿಯಲ್ಲಿ ಈತ ಪ್ರಸಿದ್ಧ ನಾಗೇಸಿ ಹಾಡುಗಾರನಾಗಿ ಅರಳಿದ್ದೇ ಬಹು ದೊಡ್ಡ ಸಾಧನೆ ಎನ್ನಬೇಕು.ಇಸ್ಲಾಂರಲ್ಲಿಯೆ ಅಸ್ಪೃಶ್ಯರಂತೆ ಪರಿಗಣಿಸಲ್ಪಡುತ್ತಿದ್ದ ಮೀರಾನ ಕುಟುಂಬವನ್ನು ಯಾರೂ ಹತ್ತಿರಕ್ಕೆ ಬರಲೂ ಬಿಡುತ್ತಿರಲಿಲ್ಲವಂತೆ.ಅಂಥದರಲ್ಲಿಯೂ ಬಾಲಕ ಮೀರಾನ ಚುರುಕುತನ ಕಂಡು ಮಹಾಗಾಂವದ ಬಸವಣ್ಣ ಮಾಸ್ತರರು ಈತನಿಗೆ ಗುರುಗಳಾಗಿ ಉರ್ದು, ಮೋಡಿ, ಅರೇಬಿಕ್, ಹಿಂದಿ ಭಾಷೆಯನ್ನಲ್ಲದೆ ಕನ್ನಡವನ್ನು ಕಲೆಸುತ್ತಾರೆ.ಸರಕಾರಿ ಶಾಲೆಯಲ್ಲಿ ನಾಲ್ಕನೇ ಇಯತ್ತೆವರೆಗೆ ಓದಿ ಅದೇ ಊರಿನ ಚೆನ್ನಪ್ಪ ಪಾರಾ ಎಂಬುವರಿಂದ ಹಾಡುಗಳನ್ನು ಕಲೆಯುತ್ತಾನೆ.

ನಾಗೇಸಿ ಹಾಡುಗಾರಿಕೆಯಲ್ಲಿ ಮೀರಾಸಾಬನದು ಎತ್ತಿದ ಕೈ.ಸ್ತ್ರೀ ವೇಷ ಹಾಕಿಕೊಂಡು ಸ್ವಂತ ಗೀಗೀ ಪದಗಳನ್ನು ಹಾಡತೊಡಗಿದರೆ ಈತನನ್ನು ಹೆಣ್ಣೆಂದೆ ಭಾವಿಸುತ್ತಿದ್ದರಂತೆ.ಅಂಥ ಮೋಡಿಕಾರ ಮೀರಾನದು ಬಡತನದಲ್ಲಿಯೂ ತುಂಬು ಕುಟುಂಬ. ಕಮಲೋದ್ದಿನ್, ಲಾಲಮಹ್ಮದ ಎಂಬ ಎರಡು ಗಂಡು ಮಕ್ಕಳು.ಮಸ್ತಾನಬಿ, ಮುಕ್ತಾಂಬಿ, ಹಾಜರಾಬಿ, ಅಮಿನಾಬಿ ಎಂಬ ನಾಲ್ಕು ಹೆಣ್ಣುಮಕ್ಕಳು.ಅವರಿಗೆ ಮಕ್ಕಳು, ಮೊಮ್ಮಕ್ಕಳು ಸಮೃದ್ಧ ಸಂಸಾರ. ಈ ಸಂಸಾರಕ್ಕಿಂತಲೂ ಈತನ ಸಾಹಿತ್ಯಕ ಸಂಸಾರವೇ ವ್ಯಾಪಕವಾಗಿತ್ತು.ಈತ ಹೈದ್ರಾಬಾದ ಕರ್ನಾಟಕ ಅಷ್ಟೇ ಅಲ್ಲದೆ ಪಕ್ಕದ ಆಂಧ್ರ, ಮಹಾರಾಷ್ಟ್ರಗಳಿಗೂ ಹಾಡೆಕ್ಕಿ (ಗೀಗೀ) ಹಾಡಲು ಮೇಳದೊಂದಿಗೆ ಹೋಗುತ್ತಿದ್ದನು.ಈ ಭಾಗದ ಶ್ರಾವಣ ಮಾಸದ ಪುರಾಣ, ಜಾತ್ರೆ, ಖಾಂಡಗಳಲ್ಲಿ ಮಠ, ಮಂದಿರದ ಫೌಳಿಗಳಲ್ಲಿ ಮೀರಾನ ಹಾಡುಗಾರಿಕೆ ಇರುತಿತ್ತು.ವರ್ಷದ ಎಂಟು ತಿಂಗಳು ಕಾಲ್ನಡಿಗೆಯಲ್ಲಿ ಹಳ್ಳಿಗಳುದ್ದಕ್ಕೂ ಸಂಚರಿಸುತ್ತ ಪದಗಳು ಹಾಡುವುದು ಈತನ ವೃತ್ತಿ ಅಷ್ಟೇ ಅಲ್ಲ. ಪ್ರವೃತ್ತಿಯೂ ಆಗಿತ್ತು. ಊರ ಮುಂದಿನ ಬಯಲಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತ ದನದ ಕೊಟಿಗೆಯಲ್ಲಿ ಉಳ್ಳವರು ನೀಡಿದ್ದನ್ನು ಉಂಡು, ಅವರು ಕೊಟ್ಟ ಪುಡಿಗಾಸಿನಲ್ಲಿ ಬದುಕು ಸವೆಸಿದ ಈತ ಸಾವಿರಕ್ಕೂ ಮೇಲ್ಪಟ್ಟು ಲಾವಣಿ ಪದಗಳನ್ನು ರಚಿಸಿದ್ದಾನೆ. ರಜಾಕಾರ ಹಾವಳಿ (ಸ್ವತಂತ್ರೋತ್ತರ ಕಾಲಘಟ್ಟದ ಸಂಸ್ಥಾನಗಳ ವಿಲೀನಿಕರಣ ಸಂದರ್ಭದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ) ಸಂದರ್ಭದಲ್ಲಿ ಮೀರಾಸಾಬನ ಪರಿವಾರ ತುಂಬಾ ಕಷ್ಟಗಳನ್ನು ಅನುಭವಿಸುತ್ತದೆ.ಅದೇ ಸಂದರ್ಭದಲ್ಲಿ ರಮಾನಂದತೀರ್ಥರಿಂದ ಪ್ರೇರಣೆ ಪಡೆದು ಪಂಚಾಕ್ಷರಿ ಎಂಬ ಅಂಕಿತನಾಮದೊಂದಿಗೆ ಸ್ವಂತ ಪದ ಕಟ್ಟಿ ಹಾಡತೊಡಗುತ್ತಾನೆ.ಮಹಾಗಾಂವದ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಪಾಟೀಲರಿಂದಲೇ ಲಿಂಗಧಾರಣೆ ಮಾಡಿಕೊಂಡು ಶರಣ ಪರಂಪರೆಯಿಂದ ಪ್ರಭಾವಿತನಾಗುತ್ತಾನೆ.ತಾನು ಲಿಂಗಧಾರಿ ಆದುದಲ್ಲದೆ ಇಷ್ಟಪಟ್ಟವರಿಗೆ ತಾನೇ ಲಿಂಗಧಾರಣೆಯನ್ನು ಮಾಡುತ್ತಿದ್ದನಂತೆ.ಇದು ತೀರ ಅಪರೂಪದ ನಡೆ.ತನ್ನ ಮೂವತ್ತೈದನೇ ವಯಸ್ಸಿನಲ್ಲಿ ಪಕ್ಕದ ನೀಲೂರ ಗ್ರಾಮದ ಶೇಖ ಸೈಯದಶಾ ಇಸ್ಮಾಯಿಲ್‌ಶಾ ಖಾದ್ರಿ ಅವರಿಂದಲೂ ಸೂಫಿ ಬೋಧನೆ ಪಡೆದುಕೊಳ್ಳುತ್ತಾನೆ.ನನಗೆ ನಮಾಜೂ ಅಷ್ಟೇ.ಲಿಂಗ ಪೂಜಾನೂ ಅಷ್ಟೇ ಅನುತ್ತಿದ್ದನು.ದಿನಾಲೂ 1100 ಸಲ ದೇವಿನಾಮ ಪಠಿಸುತ್ತಿದ್ದನಂತೆ.ಶರಣ, ಸೂಫಿ, ಶಾಕ್ತ ಪಂಥಗಳನ್ನು ಮೈಗೂಡಿಸಿಕೊಂಡು ಏಕ ಕಾಲಕ್ಕೆ ಹಲವು ಆಚರಣೆಗಳನ್ನು ಅನುಸರಿಸುತ್ತಿದ್ದ ಈತ ಈ ಭಾಗದ ಧರ್ಮ ಸಮನ್ವಯತೆಗೆ ಹಿಡಿದ ಕನ್ನಡಿಯಾಗಿದ್ದನು.ಭಾರತದ ಬಹುಮುಖಿ ಸಂಸ್ಕೃತಿಯ ಉತ್ಕøಷ್ಟ ಮಾದರಿಯಾಗಿ ಈತನ ಬದುಕು ಮತ್ತು ಸಾಹಿತ್ಯ ಕಂಗೊಳಿಸುತ್ತಿದೆ.

ಮೀರಾನದು ಎಷ್ಟು ದೊಡ್ಡ ವ್ಯಕ್ತಿತ್ವವೋ ಅಷ್ಟೇ ದೊಡ್ಡ ಕವಿತ್ವ. ಈತ ಸಾವಿರಕ್ಕೂ ಮೇಲ್ಪಟ್ಟು ಲಾವಣಿ ಪದಗಳನ್ನು ರಚಿಸಿದ್ದಾನೆ ಎಂದು ಹೇಳಲಾಗುತ್ತಿದೆ.ಆದರೆ ದೊರೆತ ಪದಗಳನ್ನು ಸಂಖ್ಯೆ ಕಡಿಮೆ ಇದೆ.ಇದರ ಜೊತೆ ಜೋಗುಳ ಪದ, ಸ್ತೋತ್ರಪದ, ಸೋಭಾನೆಪದ, ಕೋಲುಪದಗಳನ್ನು ರಚಿಸಿದ್ದಾನೆ.ನೂರಾರು ಭಜನೆ ಪದಗಳು ಪಂಚಾಕ್ಷರಿ ಅಂಕಿತದಿಂದಲೇ ಬರೆದಿದ್ದಾನೆ.ಈ ಪದಗಳಲ್ಲಿ ಶರಣ ತತ್ವ, ಸಾಮಾಜಿಕ ಸುಧಾರಣೆ, ರಾಜಕೀಯ ವೈಪರಿತ್ಯ, ಶರಣ ಸಂತರ ಸ್ತುತಿ, ಲೌಕಿಕ ವಿಡಂಬನೆ ಮುಂತಾಗಿ ಹಲವು ಹತ್ತು ವಿಷಯಗಳು ಎಡೆ ಪಡೆದುಕೊಂಡಿವೆ.ಮೀರಾನದು ರೂಪಕ ಪ್ರತಿಭೆ.ಅನುಭಾವಿಕ ಸಂಗತಿಗಳನ್ನು ರೂಪಕಾತ್ಮಕವಾಗಿ ಹೆಣೆದಿರುವುದು ಈತನ ವೈಶಿಷ್ಟ್ಯ.

– ಡಾ. ಪ್ರಭು ಖಾನಾಪುರೆ

ಸಂಪಾದಕರು

ಪಾಲಿಸಯ್ಯಾ ಪಂಚವದನ ಪರಮ ಪಾವನಾ |

ಫಾಲಾಕ್ಷನೆ ಬೇಡಿಕೊಂಬೆ ನಿಮ್ಮ ಬಾಲಕ ನಾ ||ಪಲ್ಲ||

ಮಾತೆ ನೀನೆ ಪಿತನು ನೀನೆ ಸದ್ಗತಿಯು ನೀನೇ |

ಪ್ರತಿಪಾಲಕ ಉದ್ಧಾರಕ ಅತಿ ಹಿತವನು ನೀನೇ ||1||

ಭವಭವದಲ್ಲಿ ಬಳಲಿ ಬೆಂದೆನೋ ಬಹಳ ನೊಂದನೋ |

ಭವಸಾಗರದೊಳಗೆ ಮುಳುಗಿದೆನೋ ಭವಕಡಿಯೊ ನೀನು ||2||

ತನು ಗುಣಗಳ ಕಳೆಯೊ ಮನದಾಶೆಯ ಅಳಿಯೊ |

ಧನದ ಮಿತ್ರ ಇಟಪುರೀಶ ನೀನೆನ್ನ ಪ್ರಾಣೇಶ ||3||

ನಂಬಿದೆ ನಾ ನಿನ್ನ ಹಂಬಲಗೊಂಡು |

ಇಂಬು ನೀಡುವ ಶಿವಲಿಂಗ ನಮೋ ನಮೋ ||ಪಲ್ಲ||

ಅಕ್ಕರದಲಿ ಜಾಗೃತಿಯನ್ನೊಳಗೊಂಡ |

ಮುಕ್ಕಣ್ಣ ಮೂಜಗ ಪಾಲ ನಮೋ ನಮೋ ||1||

ಭಕ್ತ ಜನರ ಮನ-ಭಾವಕೊಲಿವ ಘನ |

ಯುಕ್ತಿಲಿ ಪೊರೆವ ಮಹೇಶ ನಮೋ ನಮೋ ||2||

ಸೊಕ್ಕಿದವರ ಶಿರ ಹರಿದು ಸಂತೈಸಿ ನೀ |

ಮಿಕ್ಕಿ ಮೆರೆವ ಮುನಿಲೋಲ ನಮೋ ನಮೋ ||3||

ಕಂದನ ಕಾಯ್ದ ತೆರ ಕರುಣಿಸಿ ಅಭಯ |

ಬಂಧನ ಅಳಿವ ಶಿವಶಂಕರ ನಮೋ ನಮೋ ||4||

ಕುಂಭಿನಿಗೀಶ್ವರ ಕರಕಮಲದೊಳಾಡುವ |

ಶಂಭೋಶಿವ ಇಟಪುರೀಶ ನಮೋ ನಮೋ ||5||

ಗಿರಿಜಾರಮಣ ವರಗುರು ಮನೋಹರ |

ಪರಾತ್ಪರ ಪರಮ ಪಾವನ ಮನೋಹರ ||ಪಲ್ಲ||

ತನುಮನಧನ ಮೂರಾ ನಿನಗರ್ಪಿಸುವರಾ |

ಘನಪದ ಸುಖಸಾರಾ ಅಪರಂಪರಾ ||1||

ನಿನ್ನನೆ ಭಜಿಪರು ನಿನ್ನದೆ ಆಧಾರ |

ನಿನ್ನ ನಾಮದಿಂದುದ್ಧಾರಾ ನಿನ್ನದೆ ಉಪಕಾರಾ ||2||

ಜಯತು ಜಯಕರ ವರ ಇಟಪುರ ಧೀರಾ |

ಜಯ ನಮಃ ಪಾರ್ವತಿ ಪತಿ ಹರಹರಾ ||3||

ತಂದೆ ಎನ್ನಪರಾಧವೇನೋ |

ಅಂದಿಗಿಂದಿಗೆಂದಿಗಿಲ್ಲದ |

ಇಂದು ನೀ ಕಾಡುವುದಕ ||ಪಲ್ಲ||

ಮನೋಜಹರನೆ ಪುತ್ರರ |

ಮನ ವಿದಾರಿಸದಿರ |

ಮಾನವರೊಳಗೆನ್ನಪಮಾನವ |

ಮಾಡುವುದಕೆನ್ನಪರಾಧವೇನೋ ||1||

ತಪ್ಪು ಎನ್ನದಾಗಿರಲು |

ತಕ್ಕ ಶಿಕ್ಷೆ ಮಾಡೀಗಲೂ |

ಅಪ್ಪಿಕೊಳ್ಳದೆನ್ನ ವೈರಿಗೆ |

ಒಪ್ಪಿಸಿ ಕೊಡಲಿಕೆನ್ನಪರಾಧವೇನೋ ||2||

ಮಾತಾಪಿತ ನೀನೆಯೆನ್ನ |

ಗತಿಯೇನು ಹೇಳು ಮುನ್ನ |

ಹಿತಮನ ಪ್ರೀತಾದಾತಾ |

ಇಟಪುರೀಶ ಎನ್ನಪರಾಧವೇನೋ ||3||

ಬಾರಯ್ಯಾ ಬಾಬಾ ಗುರು ಶಂಭೋಲಿಂಗಿ | ನೀ |

ಭರದಿ ಬೇಗನೆ ಬಂದು ಬೆರೆಯೊ ಸರ್ವಾಂಗ ||ಪಲ್ಲ||

ತನುಮನಧನವನ್ನು ನಿಮಗೆ ಅರ್ಪಿಸುವೆ |

ಅನುಮಾನ ಯಾಕಿನ್ನು ತೋರು ಮುಕ್ತಿ ಪಥವ ||1||

ಅಷ್ಟೈಶ್ವರ್ಯಾದಿ ಸಕಲ ಸಂಪತ್ತಷ್ಟು |

ನಷ್ಟವಾಗಿಯೆ ಹೋಗಲಿ ನಿಮ್ಮೊಳು ಚಿತ್ತ ||2||

ಕರುಣಿಸಿ ಪಾಲಿಸು ದೇವ ಕಠಿಣತ್ವ ಯಾಕೆ |

ಧರಣಿ ಸುಖ ಸಾಕೆನಗೆ ನಿಮ್ಮ ಚರಣವು ಬೇಕು ||3||

ಬಂದ ಕಂಟಕಗಳನು ನೀ ಬಯಲು ಮಾಡೋ |

ತಂದೆ ಸದ್ಗುರುರಾಯ ಕರುಣದಿ ನೀ ನೋಡೋ ||4||

ಜಯ ಜಯ ಜಗದೀಶ ಜಯತು ದಿವ್ಯ ಪ್ರಕಾಶ |

ಜಯ ಎನ್ನ ಪ್ರಾಣೇಶ ಇಟಪುರೀಶ ||5||

ಶಿವ ಶಿವ ಕೈಲಾಸವಾಸ ದೇವಾ |

ಸಾಧು ಸಜ್ಜನ ಉಲ್ಲಾಸ ||

ಜಗದೀಶನೆ ತ್ರಿಲೋಕ ಸಂಚಾರಿ ಸರ್ವಮಹೇಶನೆ ||ಪಲ್ಲ||

ಒಂಬತ್ತು ದ್ವಾರದೊಳು ತುಂಬಿ ತುಳುಕುವನೆ |

ಅಂತರಂಗದ ಮನೆಯೊಳು ಆನಂದಭರಿತನೆ ||1||

ವೇದಾಂತ ವೇದದೊಳು ವೇದಶಾಸ್ತ್ರವು ನೀನೆ |

ಭೇದಕೆ ಮೀರಿದಾ ನಾದಮಯನೊ ನೀನೆ ||2||

ಅಂಗದೊಳು ಒಳಹೊರಗಾತ್ಮ ವಿಚಾರನೂ ನೀನೆ |

ತುಂಗ ಶ್ರೀ ವೀರಭದ್ರನು ನೀನೇ ||3||

ಅದು ಬರುವುದು ಒದಗಿ ಬರುವದು |

ಬದಿಯಲ್ಲೆ ಆದಾ ಬಯಲಿಗೆ ಬಯಲು

ಬದಲಿಲ್ಲದಕೆ ಬಲ್ಲಂತವರಿಗೆ

ಬಲವಂತರು ಪೇಳಿರಣ್ಣ ||ಪಲ್ಲ||

ಮಾತ್ಮಾ ತಿಳಿದ ಸಾತ್ವಿಕರಿಗೆ |

ಆತ್ಮ ಜ್ಞಾನದ ಆನಂದಾ

ಜಾತಿ ಸೂತಕ ಭೇದ ಮಾಡುವರು

ಆತ್ಮ ಅವರೇನು ಬಲ್ಲರು ||1||

ಅವರನು ಕಂಡವರವರಂತಿರೆ |

ಇವರನು ಕಂಡವರವರಂತಿರೆ

ಇವರವರ ತಿಳಿಯದೆ ನೀವು ಕುಂತಿರೆ

ಶಿವಪೂಜಾ ಮಾಡಬೇಕಂತಿರೆ ||2||

ಹೋಗುವ ಕಾಲಕೆ ಬ್ಯಾಗನೆ ತಿಳಿದವ |

ಯೋಗಿ ಬಲ್ಲ ಆ ಮಾತು

ಬ್ಯಾಗನೆ ಸೌಡಾ ಮಾಡಿಕೊಂಡು

ಹೋಗುವ ತಾ ಇಟಪೂರೀಶಾ ||3||

ಸತ್ತಾನಂತೀರಿ ಸತ್ತವನ್ಯಾರೋ |

ಹೊತ್ತವನ್ಯಾರೋ ಗೊತ್ತಿಲ್ಲಾ

ಗೊತ್ತು ತಿಳಿಯದೆ ಹತ್ತು ಮಂದಿಯೊಳು

ಅಲ್ಲಂತಂದರೆ ಹಲ್ಲು ಮುರಿಯುವನು ||ಪಲ್ಲ||

ಅಲ್ಲಂತಂದರೆ ಹೌದಂತೆಂಬುವ |

ಬಲ್ಲಂತವರ ಬಾಯಿ ಒಳಗೆ

ಖುಲ್ಲ ಜನರ ಮುರಿದನು

ಬಲ್ಲಂತವನೇ ಬಸವಣ್ಣ ||1||

ಗುರುವಿನ ಬಲವು ಆದಮ್ಯಾಲೆ |

ಕರವು ಹಾಲು ಸುರಿದಂತೆ

ಪರಿಚಾರಕರು ನೀವೇನು ಬಲ್ಲಿರಿ

ಚರಮೂರ್ತಿ ಶಿವಯೋಗಿ ಬ್ಯಾರೆ ||2||

ಅವನ ಬಲವು ನಮಗಿರಲಿಕ್ಕೆ |

ನೀವೇನು ಮಾಡುವಿರಿ ನಮಗಿನ್ನು

ಭಾನುಶೇಖರನ ಧ್ಯಾನ ಮಾಡೊ

ಮುನ್ನ ಸ್ಥಾನ ಇಟಪೂರೀಶಾಗ ಖೂನಾ ||3||

ಕೊಡು ಪುತ್ರನ ಶಿವನೆ ವರದ ಶಂಕರನೆ |

ಕಡು ಪಾಪಿಗಳಿಗೊಮ್ಮೆ ಕರುಣಿಸು ಭವನೆ ||ಪಲ್ಲ||

ಮೃಢನಲ್ಲದೆ ಅನ್ಯ ಒಡೆಯರಿನ್ಯಾರುಂಟು |

ಕೊಡು ನಿನ್ನ ನಿಜವಾಕ್ಯ ತಡೆಯದೆ ತ್ವರಿತದಿ ||1||

ಮಕ್ಕಳಿಲ್ಲದೆ ಮಹಾ ದುಃಖಿಷ್ಟರಾದೆವು |

ಕಕ್ಕುಲತೆ ಮಾಯಾ ಕೊಟ್ಟು ಸುಖ ಬಡಿಸು ದೇವ ||2||

ಮಾರ ಸಂಹರನೆ ಮೊರೆ ಹೊಕ್ಕೆವು ನಿನ್ನ |

ಮಾರಿ ತಿರುಗಿಸದಿರು ನಾವು ಭವಿಗಳೆಂದು ||3||

ಭಕ್ತರಿಗೆ ಬಳಲಿಕೆಯುಂಟೆ ಘೋರ ಪರಿಹರಿಸಯ್ಯ |

ಮುಕ್ತಿ ಶಕ್ತಿಗಳೆರಡು ನಿನ್ನೊಲುಮೆ ಕಾಣಯ್ಯ ||4||

ಹಿಂದೆ ಮಾಡಿದ ಕರ್ಮ ಹಿಂಬದಿಗೊಂಡು ಬಂದಿತು |

ಇಂದು ಸಂತತಿ ಇಟಪುರೀಶ ನಿಮ್ಮಯ ಕರುಣ ||5||

ಎನ್ನ ತಾಯಿ ತಂದೆ ಗುರುರಾಯ ಹೇಳಿದ ಮಾತು |

ಮುನ್ನ ಮುನ್ನವೆ ಗುಹ್ಯದೊಳು ತಿಳಿವದು |

ಎಲ್ಲರೊಳಗೆ ಒಬ್ಬ ಅಲ್ಲಮ ಪ್ರಭುರಾಯ |

ಎಲ್ಲ ಲೋಕದ ಒಡೆಯ ಏಕಾಂತದೊಳು ||ಪಲ್ಲ||

ಮಲ್ಲಿಗಿ ಮಂಟಪದೊಳು ಬೆಳ್ಳಂಬೆಳಗಿನೊಳ |

ಬಲ್ಲಂಗೆ ಥಳಥಳಿಸುವನು |

ವಲ್ಲಭನಿವಗೆಂದು ಬಲ್ಲರಿಗೆ ಬಗೆ ತುಂಬಿ |

ಉಲ್ಲಾಸದಲಿ ತಿಳಿವದು ಉತ್ತಮ ಜ್ಞಾನ ||1||

ಕಣ್ಣಿಲ್ಲ, ಮೂಗಿಲ್ಲ, ಕಾಲಿಲ್ಲ, ಕೈಯಿಲ್ಲ |

ಮೋಹಿಸಿ ಇರುತಿರ್ಪನೊ |

ನಾಣ್ಯದಿಂದಲಿ ವೇಣು ನಾದಲೀಲಾಮೃತ |

ಅಣುರೇಣು ತೃಣಕಾಷ್ಠ ಭರಿತ ಮಹಿಮಾ ||2||

ಚಿಂತೆಯಳಿಸು ನಿಶ್ಚಿಂತನಾಗಿ ದೇಹ |

ಚಿಂತಿ ಪರಿಹರಿಸುವನೊ |

ಕಂತುಹರ ಇಟಪುರೀಶನ ಧ್ಯಾನದಿ ||

ಮಂತ್ರ ಪಠಿಸಿದರೆ ಹಸನ ಮಾರ್ಗ ||3||

ಗುರುವು ಹೇಳಿದ ಮಾತು ಗುರುತು ಇಲ್ಲದೆಯೇ |

ಗುರುಪುತ್ರನಾದರೇನು |

ಪರೋಪಕಾರ ಭಕ್ತಿ ಅರುವಿನೊಳು ಬರದೆಯೇ |

ವಿರಕ್ತನಾದರೇನು ||ಪಲ್ಲ||

ಲಕ್ಷಾಧೀಶ ತಾ ಭಿಕ್ಷೆ ನೀಡದೆಯೇ |

ಲಕ್ಷ ಲಕ್ಷ ಗಳಿಸಿದರೇನು |

ಮೋಕ್ಷ ಗುರುವಿನ ಶಿಕ್ಷೆ ಇಲ್ಲದೆಯೇ |

ದೀಕ್ಷಿತನಾದರೇನು ||1||

ಶಿವನಾಮ ಅಪೇಕ್ಷೆ ಇಲ್ಲದವ ಅಸರಂತ |

ತವಶಿಷ್ಯನಾದರೇನು |

ಭವ ಬಾಧೆಯೊಳು ಬಿಡದೆ ತಪಿಸುವವ |

ಕವಿಗಾರನಾದರೇನು ||2||

ಚರಿಸ್ಯಾಡುವ ಮನ ನಿಲಿಸದೆ ಮಾನಸ |

ಪೂಜೆ ಮಾಡಿದರೇನು |

ಗುರು ಇಟಪುರೀಶನ ಘಟದೊಳು ಕಾಣದೆ |

ಘನ ಹೇಳಿದರೇನು ||3||

ಎಂಥದ್ದೊ ! ಮೃಗವೆಂಥದ್ದೋ ಗುರುವೆ |

ಇಂಥ ಕಾಯ ಕಾಂತಾರದೊಳು ಸೇರಿರುವದೊ ||ಪಲ್ಲ||

ಪಂಚವರ್ಷದ ಬಾಲೆ, ವಂಚನಿಲ್ಲದೆ ಅದು |

ಹಂಚಿಕಿಲಿಂದಲಿ ಆಡುವದೊ |

ಕಂಚಿಯೊಳಗೆ ಬಲು ಮಿಂಚಾಗಿ ಇರುವದು |

ಸಂಚಾರ ಮಾಡುವದು ಸರ್ವರೊಳು ||1||

ಅಂಗವೆಂಬುದೆ ಅಡವಿ ಬಂಗಾಳಿ ಮಾಡಿನ್ನು |

ಕಂಗಳೊಳಗೆ ಕಳವಳಿಸುವದು |

ಮುಂಗಾರು ಮಿಂಚಿನೊಲು ಒಳಗೆ ಜ್ಯೋತಿಯ ಹಚ್ಚಿ |

ಬಂಗಾರ ಥಳಥಳಿಸಿ ತಾನೇ ತಾನಿರುವದು ||2||

ಹೊತ್ತು ಹೋಗದೊಂದು ಹುತ್ತಿನೊಳಗೆ ಬಂದು |

ಗೊತ್ತು ಮಾಡಿಕೊಂಡು ಗೊತ್ತು ತಿಳಿಯದಂಗೆ |

ಅತ್ತಿತ್ತ ಲೋಡಾಡಿ ಗುಹ್ಯದೊಳಿರುವ |

ನಿತ್ಯನಾದ ಇಟಪುರೀಶ ನೋಡೋ ||3||

ಯಾರಂಜಿಕೆ ನಮಗೆ, ಗುರುವಿನ ದಯವಾದ ಮೇಲೆ |

ದೂರ ಮಾಡುವನು ದುರ್ಜನ ದುರ್ಗುಣ |

ಪಾರು ಮಾಡುವನು ಪಾಪ ಕರ್ಮಗಳಿಂದ ||ಪಲ್ಲ||

ನರರೇನು ಬಲ್ಲರು ಶಿವನಾಮ ಸ್ಮರಣೆ ಸುಖ |

ಸ್ಥಿರ ಮುಕ್ತಿ ಪಡೆವಂಥ ಸುಜ್ಞಾನ ವರ್ಮ |

ಚಿರಕಾಲ ಶ್ರೀಗುರು ವಚನ ಲಭಿಸಿದ ಮೇಲೆ ||1||

ಸಾರುವದು ಸಾಮವೇದ ಸರ್ವರೊಳು ಬೋಧ |

ಭೂರಿ ಮಂತ್ರ ಪ್ರಸಿದ್ಧ ಸಾಕ್ಷಿರ್ಭೂತಗಳಿಂದ |

ದಾರಿ ಮೋಕ್ಷಕೆ ಶಿಕ್ಷೆ ಮಾಡಿ ತೋರಿದ ಗುರುವು ||2||

ಪ್ರಣವ ಬೀಜ ಮಂತ್ರ ಪ್ರಣವ ಪಂಚಾಕ್ಷರಿ |

ಅಣುರೇಣು ತೃಣಾಕಾಷ್ಠ ಮೊದಲಲ್ಲಿರುವದು |

ರಣಭೇರಿ ವಾದ್ಯದಿ ಪೂರ್ಣನಾದ ಇಟಪುರೀಶ ||3||

ಹುಕುಂ ಬಂದ ವ್ಯಾಳೆದಲಿ

ದಿಕ್ಕಿಗೊಬ್ಬರು ಆದರು

ಧಿಕ್ಕರಿಸಿ ದಿಟ್ಟಿಸಿ

ಬಕ್ಕಳ ಗಂಟ ಕಟ್ಟಿಕೊಂಡು ||ಪಲ್ಲ||

ಲೆಕ್ಕಣಿಕೆ ಹಿಡಿದು ಬರೆಯುವ ಅವನೆ

ಲೆಕ್ಕ ನೋಡಿ ಓದಿ ಹೇಳುವ ಅವನೆ

ಅಕ್ಕರದಲಿ ಲೋಲ್ಯಾಡುವ ಅವನೆ

ಬಿಕ್ಕು ಬಿಡಿಸಿಕೊಂಡೋಗುವವನೆ ||1||

ಖಡ್ಗ ಹಿಡಿದು ಖಂಡಿಸುವದು

ಹುಡುಗರೆಲ್ಲಾ ನೀವೇನು ಬಲ್ಲಿರಿ

ಬಡ ಬಡ ಎರಡು ಮಾತಾಡುವದೆ

ಜಡ ಬಂದರೆ ಓಡಿ ಹೋಗುವದೆ ||2||

ಹರನ ಸ್ಮರಣಿ ಗುರುವಿನ ಕರುಣಾ

ಚರಣಕೆರಗುವೆ ಶರಣರಿಗೆ

ಪ್ರಾಣನಾಥ ಇಟಪೂರೀಶಾ

ಪೂರ್ಣ ಪಯೋಧರ ಜಗತ್ ಪ್ರಖ್ಯಾತ ||3||

ಸಿದ್ಧರಾಮ ಎಂಥಾತ ಸಿದ್ಧರೊಳಗೆ ಪ್ರಸಿದ್ಧ ತಾ

ಕುಂದು ಇಲ್ಲದಾತ ಆನಂದದೊಳಗೆ ತಾ ಭರಿತಾ

ಭುವನದೊಳಗೆ ಪ್ರಖ್ಯಾತ ||ಪಲ್ಲ||

ಭಕ್ತಿಯಲ್ಲಿ ಬಂಧುರ ಭವನಾಶಾ

ಮುಕ್ತಿಯಲ್ಲಿ ಮಾಹೇಶಾ

ಶಕ್ತಿಯ ಸೃಷ್ಟಿಕರ್ತ ತಾ

ದೃಷ್ಟಿ ಲಿಂಗೈಕ್ಯ ಲೀನಕರ್ತ ತಾ ಜಗದೀಶಾ ||1||

ಸಿದ್ಧರಾಮನ ಪುರಾಣ

ಸಿದ್ಧಾಂತ ಓದಿ ಹೇಳಿದ ಮಾತಾ

ಏಕಾಂತ ಲೋಕಾಂತ ಪ್ರಾಣನಾಥಗೆ ಪ್ರೀತಾ

ಶರಣರೊಳಗೆ ಇಂಥ ಶರಣನನು ಕಾಣೆನು ||2||

ಭಕ್ತಿ ವಿಶ್ವಾಸ ಶಾಂತಾ

ಮುಕ್ತಿ ಮುಕ್ಕಣ್ಣ ಸಿದ್ಧರಾಮ ಇಟಪೂರೀಶಾ

ಘಟ ಎಂಬ ಮಠ ಮಾಡಿ

ಹಟಯೋಗದಲಿ ಬಹುದಿಟ್ಟು ಸಿದ್ದರಾಮ ತಾ ||3||

ಬಾಗಿ ನಡೆಯಬೇಕೋ | ಏ ಮನುಜ

ಬಾಗಿ ನಡೆಯಬೇಕೋ ||ಪಲ್ಲ||

ಬಾಗಿ ಬಾಗಿ ಸಂಸಾರ ಮಾಡಿ ನೀ

ಯೋಗಿಯಾಗಬೇಕೋ ||ಅ. ಪಲ್ಲ||

ಧನವು ಗಳಿಸಬೇಕೋ | ದಾನ

ಧರ್ಮ ಮಾಡಲಿ ಬೇಕೋ

ಮಾನಹೀನರ ಸಂಗವ ತ್ಯಜಿಸಿ

ಜ್ಞಾನ ತಿಳಿಯಬೇಕೋ ||1||

ನೀತಿಲಿ ನಡಿಯಬೇಕೋ | ಏ ಮನುಜ

ಜಾತಿ ಅಳಿಯಬೇಕೋ

ಜಾತಿ-ಜನ್ಮಗಳು ಅತೀತವೆಂಬ

ಮಾತು ಅರಿಯಬೇಕೋ ||2||

ಸಾರವಿಲ್ಲ ನೋಡೋ ಈ ಸಂ

ಸಾರ ಬ್ಯಾರೆ ತಿಳಿದು ನೋಡೋ!

ಧೀರ ಇಟಪುರೀಶನ ಧ್ಯಾನಿಸಿ

ಪಾರಾಗುವುದು ಬಹು ಪಾಡೊ ||3||

ಶೀಲಾ ಮಾಡುವದ್ಯಾತಕೋ

ಶೀಲದೊಳಗೇನು ಇಲ್ಲಾ

ಕಾಲಕ್ಕೆ ಯಮದೂತರು ಬಂದು

ಶೂಲಕ್ಕೆ ಒಯಿದ್ಹಾಕುವರಲ್ಲಾ ||ಪಲ್ಲ||

ಶೀಲಾ ಎಂಬ ಭಾವ ಭಕ್ತಿ ಸು

ಶೀಲಾ ಎಂಬುವದು ಬ್ಯಾರಿಲ್ಲಾ

ಪಾಲಿಸು ಶಿವನ ಧ್ಯಾನ ಮಾಡಿ

ಆಲಿಸಿ ಮನದೊಳು ತಿಳಿಯೋ ಖೋಡಿ ||1||

ಅರಿವು ಇಲ್ಲಾ ಗುರುವು ಯಾಕೆ ನಿಮಗೆ

ಸರ್ವರೊಳಗೆ ಸಮರಸವಾಗಿ

ಭಿನ್ನಿಲ್ಲಾ ಭೇದಿಲ್ಲಾ

ಭೇದ ಮಾಡಿದರೆ ಬ್ಯಾರಿಲ್ಲಾ ||2||

ಮಾಡಿದಿ ಶೀಲಾ ನೋಡಿದಿ ಕಾಲಾ

ಕಾಡುವದ್ಯಾತಕೋ ತಿಳಿ ಮೂಲಾ

ಬ್ಯಾಡಗೆ ಒಲಿದಾ ಭಕ್ತಿಯಲಿಂದಾ

ಇಟಪೂರೀಶಾ ಆನಂದಾ ||3||

ಬೇಡುವದ್ಯಾಕೋ ಇನ್ನೂ

ಬೇಡಿ ಉಂಬುವನ ಕಾಡುವದ್ಯಾಕೋ ನೀನು ||ಪಲ್ಲ||

ತ್ರಿಪುರ ಸಂಹಾರ ಮಾಡಿದ

ತ್ರಿಜಗದೀಶಾ ತ್ರಿಗುಣಗಳ ಕಳೆದಾ

ಅಪರಿಮಿತ ಇಹ ಗುಪ್ತದೊಳು ಅನುಭವ

ಚಪಳ ತತ್ವ ತಿಳಿಸಿದಾ ಚಪಳನ ಕಾಣೆನು ||1||

ಜನನ ಮರಣ ಭಯವು ಇನ್ಯಾಕೋ

ಅನುದಿನ ಸ್ಮರಣೆಯು ಬೇಕೋ

ಅನ್ಯನೆ ನೀ ಎನಗೆ ನೀ ಎನ್ನ ಮಹೇಶನೆ

ಸನ್ನುತ ಗುಣನಿಧಿ ಸಂಗನಬಸವನೆ ||2||

ತ್ರಿಕೂಟ ಸಂಗಮ ನೀನೇ

ತ್ರಿಲೋಕ ಸಂಗನು ನೀನೇ

ತ್ರಿಲೋಕ ಸಂಚಾರ ಮಾಡುವನೆ

ಸ್ಮೃತಿ ವಾಕ್ಯ ಸಕಲ ಮಂದಿರ ಭಕ್ತ ಸೋಮನೆ

ಶ್ರುತಿಗೊಳಿಸಿದಾತಾ ಇಟಪೂರ ಈಶನೇ ||3||

ಮಾತಿಗೆ ಮರುಳಾದೆನೋ | ಸದ್ಗುರುರಾಯ

ಮಾತಿಗೆ ಮರುಳಾದೆನೋ ||ಪಲ್ಲ||

ಮಾತಿಗೆ ಮರುಳಾದೆ ಆ ಮಾತು ಹೇಳಲಳವಲ್ಲ

ಮಾತು ಮಾತಿನೊಳು ಅತಿ ಪ್ರೀತಿ ತೋರಿಸಿದಂಥ ||1||

ಗಗನದ ಗಿರಿಯೊಳು, ಮಿಗಿಲಾದ ಸುಖವದು

ಹಗಲಿರುಳು ಅನುದಿನ, ಅಗಲದೆ ಇರುವಂಥ ||2||

ತತ್ವಮಸಿ ಮಹಾ ಅರ್ಥವ ಬೋಧಿಸಿ

ನಿತ್ಯನಾಗಿರು ಎಂದು ತಥ್ಯ ಪೇಳಿದಂಥ ||3||

ಈ ನ್ಯಾಯದೊಡೆಯನೆ ಜ್ಞಾನಿ ಇಟಪುರೀಶನೆ

ನಾನು ನೀನೆಂಬುವ ಏನೂ ಭೇದ ಉಳಿಸದಂಥ ||4||

ಇವ ಎಂಥ ಗಾರುಡಿಗ ಹಾನೇ, ಅವ್ವಯ್ಯ ನೋಡೇ

ಇವ ಎಂಥ ಗಾರುಡಿಗ ಹಾನೇ ||ಪಲ್ಲ||

ತಂತು ತಿಳಿದು ಇವನ ಹಂತೆಕೆ ಹೋದರೆ

ಪಂಥ ಗೆಲ್ಲಿಸುವನೇ ||ಅ.ಪಲ್ಲ||

ಲಕ್ಷ ಹಿಡಿದು ಆರಕ್ಷರ ಓದಿಸಿ

ನಿಕ್ಷೇಪದೋರಿ ನಿಜ ವಸ್ತು ಕೊಡಿಸುವ ||1||

ನಿಚ್ಚನಿಚ್ಚವು ಮಹದೆಚ್ಚರ ಬೋಧಿಸಿ

ಅಚ್ಚ ಪರವಶದಿ ಹುಚ್ಚು ಹಿಡಿಸಿದವ ||2||

ಸೇರಿರುವ ಭಕ್ತರ ದುರಿತವೆಲ್ಲವನು

ದೂರ ಮಾಡುವ ಇಟಪುರೀಶ ತಾ ||3||

ಎನ್ನ ಮೊರೆ ಕೇಳೋ ಏ ಮಹಾಗುರುವೇ

ಇನ್ನು ಕರುಣಿಸೊ ನಿಜ ಧ್ಯಾನದೊಳಿರುವೆ ||ಪಲ್ಲ||

ನಾಚಿ ನಾಚಿ ನಡುಗತಿದ್ದೆ ಮುನ್ನ

ಯೋಚನ್ಯಾತಕೊ ಎರಗಿದೆ ನಿನ್ನ |

ಸೂಚನದಿ ಪೇಳೊ ಸುಖನಾದವನ್ನ

ಚಾಚು ಜ್ಯೋತಿಯ ಸರಿಗಾಣೆನು ನಿನ್ನ ||1||

ಧೀರ ನಾನರಿಯೆ ದಿವ್ಯದ ವರ್ಮ

ತೋರಿಸಿಕೊಡು ನನಗೆ ತ್ವರಿತದಿ ವರ್ವ

ಯಾರಿಗೆ ಯಾರಿಲ್ಲ, ಎಳೆವಾಗ ಯಮಧರ್ಮ

ಘೋರ ಪರಿಹರಿಸೊ ನೀ ಅಳಿ ಎನ್ನ ಕರ್ಮ ||2||

ತತ್ತಿ ಖೂನ ತಾಯಿಗಿರುವದಿಲ್ಲ

ಸುತ್ತಲಿರುವಂಥ ಹಿತವರಾರೂ ಇಲ್ಲ

ಕತ್ತಲಾಗಿ ಕೊಂಡೊಯ್ಯುವರಲ್ಲ

ಸತ್ಯ ಸದ್ಗುರು ಇಟಪುರೀಶನೆ ಬಲ್ಲ ||3||

ಹ್ಯಾಂಗ ಮರೆಯಲಿ ನಾ

ಎನ್ನ ಮನದ ಒಲಿಸಿದಾತನ ||ಪಲ್ಲ||

ಹ್ಯಾಂಗ ಮರೆಯಲಿ ನಾ ಚೆನ್ನಿಂಗ ಚೆಲುವನ

ಅಂಗರಹಿತ ಭವ ಹಿಂಗಿಸಿದ ಮಹಿಮನ ||ಅ.ಪಲ್ಲ||

ತನ್ನ ನಂಬಿದೆನೆಂದು ತಾನೆ ಮೋಹದಿ ಬಂದು

ಮನ್ನಿಸಿ ಬೆರೆದಂಥ ಮನಮೋಹನನ ||1||

ಪರತತ್ವ ಸುಜ್ಞಾನ ಪರಿಯ ಬೋಧಿಸಿಯೆನ್ನ

ಪರವಶ ಮಾಡಿದ ಪರಮ ದಯಾಳನ ||2||

ನಿಟಿಲ ಭ್ರೂಮಧ್ಯದಿ ತ್ರಿಪುಟಿ ಕೂಡುತಲೆನ್ನ

ಘಟದೊಳು ಮೆರೆವಂಥ ಇಟಪುರೀಶನ ||3||

ಭಲೆರೇ ಭಲೆರೇ ಗುರು ಮಹಾರಾಜಾ

ಕಲ್ಲನು ಕರಗಿಸಿ ಬೆಲ್ಲ ಮಾಡೀದಿ ||ಪಲ್ಲ||

ಇಬ್ಬರ ಹೂಡಿ ಒಬ್ಬಳಿ ಮಾಡಿ

ಹುಬ್ಬು ಹುಬ್ಬಿನ ಕೆಳಗೆ ಹಬ್ಬ ಮಾಡೀದಿ ||1||

ಕೂಡಿತು ಸ್ನೇಹ ಓಡಿತು ಮಾಯಾ

ಮೂಡಿದ ನಡುನಾಡಿ ಚಡಾವು ಮಾಡೀದಿ ||2||

ಅಂತರ ಕೀಲು ನಿಂತಿತು ಮೇಲು

ತಂತು ತಿಳಿಸಿ ನಿಶ್ಚಿಂತಿ ಮಾಡೀದಿ ||3||

ಅಂಗಾಚಾರದಿ ಲಿಂಗ ವಿಚಾರದಿ

ಅಂಗ ಲಿಂಗದ ಸಂಗೀಗ ಮಾಡೀದಿ ||4||

ಇಂದು ಉಲ್ಲಾಸ ಇಟಪುರೀಶ

ಮಂದಮತಿಯಳಿದಾನಂದ ಮಾಡೀದಿ ||5||

ಮಾತು ಮಾತಿಗೆ ಮರುಳು ಮಾಡಿದನಮ್ಮ

ಮಹಾಂತ ಇಂಥವನ ಕಾಣಲಿಲ್ಲಮ್ಮ ||ಪಲ್ಲ||

ಭಲೆರೆಂದು ಕೂಗುತ, ಎಡಬಲ ತೂಗುತ

ಬಲ್ಲಂಗ ಊದಿ ಬೂದಿ ಚೆಲ್ಲಿದನಮ್ಮ ||1||

ಕಸಿವಿಸಿ ನಾ ಬಿಡುವೆ ಹಸಿ ಹುಸಿ ತಾ ನುಡಿವ

ಮುಸಿ ಮುಸಿ ನಗುತ ಪ್ರೀತಿಸಿ ನೋಡಿದನಮ್ಮ ||2||

ನಿನ್ನ ನಾಮವೇನೆನ್ನಲು ನೆಲೆ ಕಲೆ ಕೇಳಲು

ಪನ್ನಂಗಧರನೆಂದು ಪೇಳಿದನಮ್ಮ ||3||

ತನುಮನಧನವನು ತನಗೊಪ್ಪಿಸು ಎಂದಾನು

ಅನುಮಾನನಿಲ್ಲದೆ ತನ್ನ ಕೂಡೆಂದನಮ್ಮ ||4||

ಇನ್ನೇನ್ಹೇಳಲಮ್ಮ ಇಟಪುರೀಶನ ಪ್ರೇಮ

ಬೆನ್ನಿಗೆ ಇರಲಿನ್ನು ಭಯವೇತರದಮ್ಮ ||5||

ಮರೆಯಲಾರೆನು ನಿಮ್ಮಯ ಉಪಕಾರ | ಗುರುವೆ

ಮರೆಯಲಾರೆನು ಮನೋಹರ ||ಪಲ್ಲ||

ಕರುಣದಿಂದಲಿ ಜ್ಞಾನ ಕರುಣಿಸಿದೀ ಕ್ಷಣ

ಮರುಳಾದೆನು ನಿಮ್ಮ ಚರಣಕ್ಕೆರಗುವೆ ||ಅ.ಪಲ್ಲ||

ಅರಿಯದ ಮೂರ್ಖಗೆ ನೀವು | ಬಹು

ಪರಿಯಲಿ ಬೋಧಿಸಿದಿ ಎನಗೆ ಅರಿವು

ಮರುಳೆ ಈ ಮಹಾಕಾವ್ಯ ಮರೆಯದಿರೆಂದು ಓಂ

ಕಾರಪಂಚಾಕ್ಷರ ಪೊರೆದು ಪೇಳಿದಿ ಗುರುವೆ ||1||

ಮತ್ಸರ ಮೋಹವ ಬಿಡಿಸಿ | ಮಹಾ

ಎಚ್ಚರದೊಳು ಮನವ ಬೆರಸಿ

ಪಶ್ಚಿಮಗಿರಿಯೊಳು ಪರಮಾನಂದದಿ

ನಿಶ್ಚಯದೊಪ್ಪಿಸಿ ನಿಜವ ತೋರಿದಿ ಗುರುವೆ ||2||

ಹೊನ್ನು ಮಾಣಿಕ್ಯ ನೆಲೆಗೊಂಡು | ನಾ

ಚೆನ್ನಾಗಿ ಅಮೃತ ಸವಿದುಂಡು

ಇನ್ನೇನು ಬೇಡಲಿ ಇಟಪುರೀಶನೆ ನಿನ್ನ

ಪುಣ್ಯದಿ ಪರಿಪೂರ್ಣ ಸಂಪನ್ನಗೊಳಿಸಿದ ಗುರುವೆ ||3||

ಸಾರ ಸುಖವನು ತೋರಿತಲ್ಲಾ | ಸಂ

ಸಾರ ಮಾಡಿ ಮನವು ತಿಳಿಯಾಯಿತಲ್ಲಾ

ಹರಹರನ ಧ್ಯಾನ ಮಂತ್ರವ ಪಠಿಸಿದರೆ

ಪಾರಮಾರ್ಥ ಭೇದ ಪರಿಪೂರ್ಣ ||ಪಲ್ಲ||

ಪೂರ್ವ ಪುಣ್ಯಾ ಫಲದಿಂದ ಗುರುರಾಯ

ಪೂರ್ಣನಾಗಿ ತಾನೆ ಬಂದಾ

ಪರೋಪಕಾರೆಂಬೊ ಭಕ್ತಿ ಭಾವಕೆ ಮೆಚ್ಚಿ

ಸ್ಥಿರಮುಕ್ತಿ ಪಡೆವಂಥ ಶ್ರೀಗುರು ವಚನವನು ||1||

ವೇದ ವೇದಾಂತ ಸಾರವನು ಇನ್ನು

ನಾದವೆ ಪರಬ್ರಹ್ಮವದು

ಬೋಧ ಚಿದಾನಂದ ಸ್ವರೂಪ ಸರ್ವೆಲ್ಲಾ

ವೇದಕೆ ಸಾಕ್ಷಿಯೇನು ಸಾಧುಸಂಗವೆ ಮೂಲಾ ||2||

ಬ್ರಹ್ಮ ಮಾಡಿದ ತದ್ರೂಪೆಲ್ಲಾ

ಬ್ರಹ್ಮ ಮೂಲಕ ಸರಿ ಏನಿಲ್ಲಾ

ಸುಮ್ಮನೆ ಇರುವಂಥ ಸುಜ್ಞಾನ ಸುಖವನು

ಒಮ್ಮನವನೆ ಮಾಡಿದಾ ಇಟಪೂರೀಶಾ ತಾ ||3||

ಏಕೋ ನಾಮವೆ ಶಿವ ನಾಮವೆ

ಜಗದೊಳು ಝೇಂಕಾರ

ಜಪ ಸ್ತೋತ್ರ ಆಕಾರಿಲ್ಲಾ

ನಿರಾಕಾರ ಪ್ರಕಾಶ ಕೋಟಿ ಸೂರ್ಯ

ತೇಜಸ್ವಿಕಾಂತಿ ಪ್ರಕಟಿಸಿ ಮನದೊಳು

ಪಂಕಜಲೋಚನ ಪಾದಾಂಕಿತ ನೆನದವಗಿನ್ನೇನು ಭಯ ||ಪಲ್ಲ||

ಬ್ರಹ್ಮ ಮಾಡಿದ ಬೊಂಬಿಗಳಾಟ ಎಂಥದು ಇನ್ನು

ಬ್ರಹ್ಮಜ್ಞಾನ ತಿಳಿದುಕೊಂಡಿರುವಂಥಾದು

ಒಮ್ಮನ ಮಾಡಿ ಸುಮ್ಮನೆ ಇರುವದು

ಸುಷುಪ್ತಿಯೊಳು ಶಾಂತನಾಗಿ ತಾ

ಹಮ್ಮು ಅಳಿದು ಪರಬ್ರಹ್ಮನ ತಿಳಿದು

ಪಾಕೀಜಾಗಿ ಮನ ಪಥಕ ಹೊಂದುವದು ||1||

ಕಾಲಕರ್ಮದ ಹಾದಿ ತಪ್ಪಿಸುವಂಥದೊ

ಕೇವಲ ಭಕ್ತಿ ಮಾಡಿ ಮುಕ್ತಿಮಾರ್ಗ ತಿಳಿವಂಥದೊ

ಕಾಲಕಾಲದಲಿರುವ ವಿಮಲ ತೋರಿ

ಮೂಲಮಂತ್ರಮಠವಾಸಾ ಶ್ರೀ ಜಗದೀಶಾ

ಆಲಿಸಿ ಮನದೊಳು ಪಾಲಿಸೋ

ಉರಗಭೂಷಾ ಭವನಾಶಾ ಮಹೇಶಾ ||2||

ಮದಮಾತ್ಸರ್ಯಗಳ ಮರೆತು ಶೋಕು ಮುರಿವಂಥದೊ

ಇಂದುಧರನ ಸ್ಮರಣೆಯ ಮಾಡಿ ಪೂರ್ಣವಾಗಿರುವಂಥದೊ

ಮಂದಾರ ಗಿರಿವಾಸಾ ಬಂಧುರ ಮನದೊಳು

ಬಂಧು ಬಳಗ ತಾನೆಂದು ತೋರಿ ಇನ್ನು

ಅಂದು ಇಂದು ಎನ್ನೆಲೋ

ಸಂದೇಹವಿಲ್ಲದೆ ಬಂದು ಕೂಡಿದಾ ನಮ್ಮ ಇಟಪೂರೀಶಾ ||3||

ಬರಿ ಗಂಟೆ ಶರೀರದ ಭ್ರಮೆಯು ಕಳಕೊಂಡಂತೆ

ಆತನ ಮಹಿಮಾ ತಿಳಿಯದೆ ಮನುಜಾ

ನೀತಿ ತಿಳಿದರೆ ಬರಿ ಗಂಟೆ ||ಪಲ್ಲ||

ಮಾತಿನ ಖೂನಾ ಗುರುತಿಲ್ಲದೆ

ಓದಿ ಸಾಧಿಸಿ ಪೇಳವರ

ಓದಿಸಿ ಮನದೊಳ ಬರಿ ಗಂಟೆ ||1||

ಆತ್ಮ ವಿಚಾರ ಮಹತ್ವವ ತಿಳಿಯದೆ

ಆಚಾರ ಮಾಡುವದು ಬರಿ ಗಂಟೆ

ಆಚಾರ ಮನದೊಳು ಸೂಚನೆ

ತಿಳಿದರೆ ಸಾಚನಾಗುವದಿನ್ನುಂಟೆ ||2||

ಗುರುವಿನ ಕರುಣಾ ಆಗೋ ಮನುಜಾ

ಗುರುತು ಹೇಳಿದರೆ ಬರಿ ಗಂಟೆ

ಪರಕೆ ಪರತರ ಇಟಪೂರೀಶನ

ಮಹಿಮಾ ತಿಳಿಯದವರಿಗಿನ್ನುಂಟೆ ||3||

ಸುಳ್ಳು ಶಾಸ್ತ್ರವು ಸುಳ್ಳಲ್ಲಾ

ಸುಜ್ಞಾನವು ಅಜ್ಞಾನಿ ಏನು ಬಲ್ಲಾ

ಸುಜ್ಞಾನ ಎಂಬಂಥ ಬೀಜ ಸುಗುಣನೆ ಬಲ್ಲ

ಬಿತ್ತಿದವನೆ ಬಲ್ಲ ಬೀಜ ಮಂತ್ರವ ||ಪಲ್ಲ||

ಅರಿವು ಎಂಬ ಅಕ್ಷರ ಒಂದೆ ಆತ್ಮದೊಳಗೆ

ಗುರುಕೀಲು ಸ್ತೋತ್ರ ಪರ ಉಪಕಾರೆಂಬೊ

ಭಕ್ತಗೆ ಭಕ್ತಿ ಒಂದೆ ಮುಕ್ತಿ ಮಾರ್ಗಕೆ ದಾರಿ

ಮೂಲಮಂತ್ರವು ಒಂದೆ ||1||

ಪಂಚಾಗ ದೇಹಾ ಒಂದೆ

ಪರಬ್ರಹ್ಮ ಮೂರ್ತಿ ಸ್ವರೂಪ ಒಂದೆ

ಪರಕೆ ಪರತರವಾದ ಪರಂಜ್ಯೋತಿ ಒಂದೆ

ಪರಬ್ರಹ್ಮವು ಮಾಡಿದ ಪರತತ್ವವು ಒಂದೆ ||2||

ಗುರುವಾಕ್ಯ ಸೌಖೆ ಒಂದೆ

ಗುಪ್ತದೊಳ ಗುಂಭಾರ್ಥ ತಿಳಿವುದೊಂದೆ

ಇಟಪೂರೀಶನ ಧ್ಯಾನ ಒಂದೆ ಮನ ಒಂದೆ

ಸ್ಥಾವರ ಒಂದೆ ಸ್ಥಲ ಒಂದೆ ಸ್ಥಾವರಲಿಂಗ ಒಂದೇ ||3||

ತಿಳಿಯೋ ಜ್ಞಾನವಾ ತಿಳಿಯೋ ಜ್ಞಾನವಾ

ತಿಳಿಯೋ ಜ್ಞಾನವಾ ||ಪಲ್ಲ||

ತಿಳಿಯೋ ನಿನ್ನೊಳು ಅವಗುಣಗಳ

ತಿಳಿದು ಪೊಳಿವಾ ಮಿಂಚಿನೊಳು

ಕಳವಳಿಸುವ ಮನ ನಿಲ್ಲಿಸಿ

ತಿಳಿಯೋ ನಿನ್ನೊಳು ತತ್ವ ವಿಚಾರವಾ ||1||

ಹುಚ್ಚನೆಂಬುವರೆಲ್ಲಾ ನಿನ್ನ

ಎಚ್ಚರಿಲ್ಲದೆ ಜ್ಞಾನವನು

ಶಾಂತನಾಗಿ ಯೋಗಧ್ಯಾನ ಮಾಡೋ

ಸಂಧಾನ ತಿಳಿಯೋ ||2||

ಮರವಿನೊಳಗೆ ಅರಿವು ಅಕ್ಷರ

ಕುರಹು ತಿಳಿಯದೆ ನೀವು

ಗರ್ವಲಿಂದಾಡುವದ್ಯಾಕೊ ಮುರಿದಾನಲ್ಲಿ

ಇಟಪೂರೀಶನಾ ತಿಳಿಯೋ ಜ್ಞಾನವಾ ||3||

ಏನಂತ ಹೇಳಲಿ ನಾ ಸದ್ಗುರುರಾಯ

ಹೇಳಿದ ಏಕಾಂತವ ಏನಂತ ಹೇಳಲಿ

ಹೆಸರಿಲ್ಲದಕ್ಷರ ಪಸರಿಸಿ ಮನದೊಳು

ಬೀಜ ಬಿತ್ತಿದ ತಂದೆ ||ಪಲ್ಲ||

ಏಕೋ ಚಿತ್ತಾನಂದ ಏಕೋ ಧ್ಯಾನ

ಏಕೋ ನಾಮಸ್ಮರಣೆಯನು ಮೂಕನಾಗಿ

ತಿಳಿವಂಥ ಮೂಲಮಂತ್ರ ಓಂಕಾರ

ಜಪಸ್ತೋತ್ರ ಝೇಂಕಾರ ಜನ್ಮದೊಳು ||1||

ನಂಬು ನೀ ಶಂಭುವನೆ ನಂಬಿದವಗೆ

ಹಿಂಬಾಲಿರುತಿರುವನೋ

ಶಂಭು ಫಾಲನೇತ್ರ ಶಂಭೋ ಶಂಕರ

ಲೀಲಾಮೃತ ಸುರಿವಂತೆ ಆತ್ಮ ವಿಚಾರವನು ||2||

ಲಿಂಗವೆ ಆಕಾಶವು ಅಂಗದೊಳಗೆ

ಲಿಂಗವಿರುವದು ಶಿವಪೂರ ಕಂಗಳೊಳಗ

ಮೆರಿವ ಹೊಳಿವ ಮುಂಚುಗಳೆಲ್ಲಾ

ಥಳಥಳಿಸುವದೋ ಇಟಪೂರೀಶಾ ಬಲ್ಲಾ ||3||

ಹ್ಯಾಂಗಿರಬೇಕೋ ಹ್ಯಾಂಗಿರಬೇಕೋ

ಯೋಗಿ ತಾನಾದವ ಹ್ಯಾಂಗಿರಬೇಕೋ

ಬಾಗಿ ಬಾಗಿ ಸಂಸಾರ ಮಾಡಿ ಮನದೊಳ ಶಿವ

ಯೋಗ ತಿಳದು ಬಾಗಿರಬೇಕೋ ||ಪಲ್ಲ||

ಕಂಗಳೊಳಗಿನ ಬೆಳದಿಂಗಳಂತೆ

ಲಿಂಗಮನ ಪಾಕೀಜಾಗಿರಬೇಕೋ

ಜಂಗಮಲಿಂಗಾ ಜಗಭರಿತನ| ಗುರು

ಭಜನಿಯ ಮಾಡಿ ಕೊಂಡಿರಬೇಕೋ ||1||

ನಾದಬ್ರಹ್ಮದೊಳು ವೇದಶಾಸ್ತ್ರದ

ಮೂಲಕೀಲ ತಿಳಿದುಕೊಂಡಿರಬೇಕೋ

ದಾನಧರ್ಮ ಮಾಡಿ ಜಗದೊಳು | ಶಿವ

ಧ್ಯಾನದೊಳಗೆ ತಾ ಇರಬೇಕೋ ||2||

ಭೋಗ ಬಿಟ್ಟು ವೈರಾಗ್ಯ ತೊಟ್ಟು

ವಿರಕ್ತನಾಗಿ ತಾನಿರಬೇಕೋ

ಇಟಪೂರೀಶನ ಧ್ಯಾನವು ಮಾಡಿ | ಶಿವ

ಘಟದೊಳು ತಿಳಕೊಂಡಿರಬೇಕೋ ||3||

ಏನು ಹೇಳಿದಿ ಗುರುವೇ ಎನಗೆ ನೀ ಒಲಿದು

ಭಾನುಶೇಖರ ಮಹಾನುಭಾವ ಭಕ್ತಿಯನು ||ಪಲ್ಲ||

ಸಾರಸುಖವನು ಎನಗೆ ತೋರಬೇಕೆನುತ

ಮಾರಹರನೆ ನಿನ್ನ ಸ್ತುತಿ ಮಾಡುವೆನು

ನಿನ್ನ ನಾಮಾಂಕಿತವು ನಿಜ ಹೌದೆಂದು

ಸಾರುವೆನು ಶಶಿಧರನೆ ನಾಮ ಉಸುರುವೆನು ||1||

ಕಾಯ ಗುಣಗಳಲಿ ಸಿಲಿಕಿ ಮಾಯೆ ಪಾಶವು ಮುಸುಕಿ

ಆಯಾಸದೊಳು ನೊಂದೆ ನಾ

ರಾಯ ರಾಯರಿಗೆಲ್ಲ ಮೀರಿದಂಥನುಭಾವ

ದಯಮಾಡಿ ನೀನಿನ್ನು ದಾರಿ ತೋರಿಸಿ ||2||

ಪರತತ್ವ ಜ್ಞಾನಭರಿತ ನೀನೆಂದು

ಸ್ಥಿರಮುಕ್ತಿ ಪದವಿಯನು ಬೇಡುವೆ ಕರುಣದಲಿ

ಇಟಪೂರಿ ವೀರಮಹೇಶ ತಾ

ಅನುವು ತಿಳಿಸಿ ಮನದ ಭ್ರಮೆಯ ಅಳಿಸಿದಾ ||3||

ನೀ ಕಂಡರೆ ಮನ ಸಮಾಧಾನ

ನೀ ಕಾಣದಿರಲು ಉಳಿಯದು ಪ್ರಾಣ ||ಪಲ್ಲ||

ಸಾಧನದೊಳು ನೀನಿರಲು

ಸಂಭ್ರಮ ಇರುಳು ಹಗಲು

ಚದುರ ನೀ ಎನ್ನನಗಲಿರಲು

ಎದೆಯೊಳು ಭುಗಿಲು ಭುಗಿಲು ||ಅ.ಪಲ್ಲ||

ಭಾರಿ ಕೃಪಾಭರಣ ನಿನ್ನದು

ವಾರಿನೋಟ ಒನಪು ನನ್ನದು

ಬೆರೆಯದೆ ತತ್ವವನರಿದು

ಭೋಗಕೊಲಿವದು ಅಳಿಮನ ನಮ್ಮದು ||1||

ಹೆತ್ತ ತಾಯಿ ತಂದೆ ಸುಳ್ಳೆ

ಅತ್ತೆ-ಮಾವ ಮೈದುನರನ್ನೊಲ್ಲೆ

ಎತ್ತ ಭಾವಿಸಲೇನು ಹುರುಳಿಲ್ಲ

ಚಿತ್ತ ನಿನ್ನೊಳು ಸಿಲುಕಿದೆಯಲ್ಲ ||2||

ಹಿಂದಿನ ಸುಕೃತದಭಿಲಾಷೆ

ಮುಂದುಗೊಂಡಾಯಿತು ಮನ ಮೋಸ

ಇಂದುಧರ ಇಟಪುರೀಶ

ತಂದೆ ಆನಂದ ಪ್ರಾಣೇಶ ||3||

ಮರೆಯದಿರೆನ್ನ ಮನೋಹರನ ನೀ

ಮರೆಯದಿರಮ್ಮ ಅನವರತ ||ಪಲ್ಲ||

ಮರೆಯದಿರು ಮಹಾ ಗುರುವಿನ ಚರಣವ

ಮರಳಿ ಈ ಜನ್ಮ ದೊರೆವುದು ದುರ್ಲಭ ||ಪ.ಪಲ್ಲ||

ಏನೋ ಭಾವದಿ ನೀನಿಂದು

ಸಾಕು ಸಾಕು ಈ ಸಂಸಾರ ಎಂದು

ಏಕೋ ಧ್ಯಾನದಿ ಸಾಕಾರ ಮಾಡಿಕೊ

ಏಕೈಕನೆನಿಸುವ ತ್ರಿಲೋಕದೊಡೆಯನ ||1||

ಸತ್ಯ ವಾಕ್ಯವ ನಮ್ಮ ಸಹಜವು

ಗೊತ್ತು ಗುರಿಯ ತಿಳಕೊಳ್ಳಮ್ಮ

ನಿತ್ಯ ನಿರ್ಮಲ ನಿಜಪದ ಸೇವಿಸಿ

ಮುಕ್ತಳಾಗು ನೀ ಮುಕ್ತಿಯ ಪಥವಿದು ||2||

ಏಸೊ ದಿನದ ಕಾಯಾ ಒಂದಿನ

ನಾಶಗೊಳುವದು ಫಾಸಿ ಮಾಡಿ

ಸಾಸಿರ ನಾಮವು ಸಾಲದೆನುತಲಿ

ಮೋಸವಾಗದಿರು ಇಟಪುರೀಶನೊಳು ||3||

ಬೇಡುವೆ ಸದ್ಗುರು ರಾಯ | ಅಭಯವ

ಬೇಡುವೆ ಸದ್ಗುರುರಾಯ ||ಪಲ್ಲ||

ಬೇಡುವೆ ಕರದ್ವಯ ಜೋಡಿಸಿ ಶಿರ ಬಾಗಿ

ಬೇಡಿದಾಕ್ಷಣ ದಯಮಾಡೋ ದಯಾವಂತ ||ಅ.ಪಲ್ಲ||

ವೈರಿ ಕಂಟಕ ಬಂದೊದಗಲಾರದಂತೆ

ಧೈರ್ಯ ಬರಿಸಿಯೆನಗೆ ಶೌರ್ಯ ತರಿಸುವಂಥ ||1||

ಭ್ರಾಂತಿ ಹಲವು ಚಿಂತೆ ಬರಿ ಭ್ರಮೆಯಲಿ ಕುಂತೆ

ಭ್ರಾಂತಗೊಳ್ಳದೆ ಮನ ಶಾಂತನಾಗಿರುವಂಥ ||2||

ಯುಕ್ತಿ-ಶಕ್ತಿಯಲಿಂದ ಇಟಪುರೀಶನೆ ನಿಮ್ಮ

ಭಕ್ತಿ ಬೆರೆದು ಜೀವನ್ಮುಕ್ತಿ ದೊರಕುವಂಥ ||3||

ಗುರು ಧ್ಯಾನವ ಮಾಡೋ | ಪಾವನಾ

ಪಾರು ಮಾಡುವ ತ್ರಿಪುರದೊಡೆಯ ||ಪಲ್ಲ||

ಘೋರದೊಳು ಆದಿ ಮನೆ ಮಾರು ನಿನ್ನದೇನೊ

ಆರು ನಾನೆಂದು ನೀ ವಿಚಾರಿಸಿ ನೋಡೋ ||1||

ಇಂದು ನೀ ಜ್ಞಾನ ಹೊಂದಿದರೆ ಭವ ಭವ

ಬಂಧನ ಬಿಡುವದಾನಂದದೊಳಾಡೋ ||2||

ಆಸೆಯಳಿದು ಪರರ ಉಲ್ಲಾಸದೊಳನುದಿನ

ಲೇಸಾಗಿ ಇಟಪುರೀಶನೊಳು ಕೂಡೋ ||3||

ನಮ್ಮ ಗುರುವು ಹೇಳಿದ ಮಾತು

ನಮ್ಮ ಅರಿವಿಗೆ ಸರಿ ಬಂತು

ಒಮ್ಮನ ಅಕ್ಕಿ ತಂದು ಥಳಿಸಿ

ಸುಮ್ಮನೆ ಇರುವಂಥದ್ದು ||ಪಲ್ಲ||

ಬಂಗಾರದುಂಗುರ ಉಡುದಾರಕ್ಕಿಂತ

ಶೃಂಗಾರ ಲಿಂಗನ ಸ್ಮರಣೆಯು

ಲಿಂಗ ಒಂದೆ ಜಂಗಮ ಒಂದೆ

ಇಬ್ಬರು ಒಂದೆ ಅಲ್ಲ ಬ್ಯಾರೆ ||1||

ಪ್ರಾಣ ಒಂದೆ ಪ್ರಣವವು ಒಂದೆ

ಪ್ರಣವದೊಳಗಿನ ಪ್ರೀತಿಯು ಒಂದೆ

ಕಾರಣ ಒಂದೆ ಕಾಮಿತವು ಒಂದೆ

ಶರಣರು ಒಂದೆ ಗುರುವು ತಂದೆ ||2||

ಲಕ್ಷಣ ಒಂದೆ ಅಪೇಕ್ಷೆಯೊಂದೆ

ಸಚ್ಚಿದಾನಂದ ಸದಿಚ್ಛೆ ಒಂದೆ

ಮೋಕ್ಷ ಒಂದೆ ಮುಮುಕ್ಷು ಒಂದೆ

ಇಟಪುರೀಸನ ಧ್ಯಾನ ಒಂದೆ ||3||

ಅಲ್ಲಲ್ಲಾ ಇಲ್ಲಿಲ್ಲಾ ಶಿವನಲ್ಲಿಲ್ಲ ಶಿವನೆಲ್ಲಿಲ್ಲಾ

ನಿನ್ನ ನೀ ತಿಳಿ ನೀನೆ ಪರಬ್ರಹ್ಮನಲ್ಲಾ ||ಪಲ್ಲ||

ಆರು ಶಾಸ್ತ್ರವ ಓದಿದರಿಲ್ಲ

ಮೂರಾರು ಪುರಾಣ ಮುಗಿಸಿದರಿಲ್ಲ

ಘೋರ ಸಂಸಾರದ ಸತಿಯಳ ಬಿಟ್ಟು

ಯಾರೂ ಇರದ ಅಡವಿ ಸೇರಿದರಿಲ್ಲ ||1||

ಗುಡ್ಡ ಗಂವ್ಹಾರ ಸೇರಿದರಿಲ್ಲ

ಗಡ್ಡ ಜಡೆಯ ಬಹಳ ಬೆಳಸಿದರಿಲ್ಲ

ದೊಡ್ಡವರೆಂದು ಕರ ಮುಗಿದರೂ ಇಲ್ಲ

ಗೊಡ್ಡಾಕಳಿನಂತೆ ಚರಿಸ್ಯಾಡಿದರಿಲ್ಲ ||2||

ಕರ್ಣಕೆ ನಖ ಊರಿ ಕೂಗಿದರಿಲ್ಲ

ಧರ್ಮಶಾಸ್ತ್ರ ಪಠಿಸಿದರಿಲ್ಲ

ನಿರ್ಮಲ ಮನದೊಳು ಇಟಪುರೀಶನನರಿಯದೆ

ಬೆರಳೊಳು ಜಪಮಣಿ ಎಣಿಸಿದರಿಲ್ಲ ||3||

ಕಣ್ಣಿನೊಳು ಕಣ್ಣಾರೆ ನೋಡೋ

ನಿನ್ನೊಳು ನೀ ಕಿರಿಗಣ್ಣಿನಲಿ ಒಡಗೂಡೋ ||ಪಲ್ಲ||

ಗಂಗೆ ಯಮುನೆಯರೆಂಬ ಸಂಗಮದೊಳು ಮಿಂದು

ಗಂಗಾಧರನ ಸ್ತುತಿ ಮಾಡೋ ||1||

ಲಜ್ಜೆ ನಾಚಿಕೆ ಬಿಡೋ ಸಜ್ಜಾಗಿ ಸಾವಧಾನದಿ |

ಹೆಜ್ಜೆ ಹೆಜ್ಜೆಗೆ ಹೆಣಗಾಡೋ ||2||

ಲಕ್ಷವು ನೀಡೊ ಬಹು ಸೂಕ್ಷ್ಮ ತರದಿಂದೆ

ಸಾಕ್ಷಾತ್ ಪ್ರಭುವ ಕೊಂಡಾಡೋ ||3||

ಕಾಗೆಯಂದದಿ ನೀ ಕೂಗಿ ಕೂಗಿ ಬರೆ

ಯೋಗ ಸಾಧಿಸಬ್ಯಾಡೋ ||4||

ನೋಟ ಕೂಟವು ಬಲಿದು ಇಟಪುರೀಶನೊಳು

ಬೂಟಕತನವ ಬಿಡೋ ||5||

ಎಂಥಾತ ಗುರುರಾಯಾ ಚಿಂತಿ ಪರಿಹರಿಸಿದಾ

ಮನೋಹರ ತಾ ಕುಂತ ಏಕಾಂತದೊಳು

ಚಿಂತ್ಯೊಂದೆ ಶಿವಲೀಲಾ ಮತ್ತೇನು ಬ್ಯಾರಿಲ್ಲಾ

ಮನು ಮುನೀಶ್ವರನ ಧ್ಯಾನ ||ಪಲ್ಲ||

ಪೂರ್ಣದಯಾ ಅಂತರಂಗ

ಎನ್ನ ಕಾರಣಕರ್ತ ಶಿವಲಿಂಗ

ಮಣಿಗುಣಸ್ತೋಮಾ ಅಣುರೇಣುತೃಣಕಾಷ್ಠ

ಪ್ರಣಮ ಬೀಜಮಂತ್ರ ಬಿತ್ತಿದೆ ನೀನೇ ತಂದೆ ||1||

ಸುತ್ತೇಳು ಲೋಕಕ್ಕೆ ಸುಗುಣಾ

ಸತ್ತು ಚಿತ್ತು ಆನಂದ ಸರ್ವೇಶಾ

ಹೊತ್ತು ಹೋಗುವುದು ಗೊತ್ತು ಉತ್ತಮ ಉಪದೇಶಾ

ಗೊತ್ತು ತಿಳಿದುಕೊಂಡು ಉತ್ತಮರಾಗುವದು ||2||

ಉರವಿಗೆ ಅಧಿಕ ಗುರುರಾಯಾ

ದುರ್ಜನರ ಹಲ್ಲು ಮುರಿವಾ

ಪರಿಹಾರ ಮಾಡುವ ಪಾಪಕರ್ಮಗಳೆಲ್ಲ

ಪಂಕಜಲೋಚನ ಇಟಪೂರೀಶಾ ||3||

ಮಾಡೆಲೋ ಮಾನವಾ ಮಾಡೆಲೋ ಧ್ಯಾನವ

ಗಂಟುಗಳ ನಮ್ಮ ನೆಂಟ ಒಂಟಿಲಿರುವನು

ಅವನೇ ತೊಂಟ ಕಂಟಕ ಪರಿಹಾರ ಮಾಡುವನು

ಬಂಟ ಬಹು ಸೂರಾ ||ಪಲ್ಲ||

ಸಾಚಾ ಅವನು ವಂಚಕನಲ್ಲಾ

ಹಂಚಿಕಿ ಯಾರಿಗೆ ತಿಳಿಯೊಣಿಲ್ಲಾ

ಮುಚ್ಚಿಕೊಂಡಿರುವನಲ್ಲಾ

ಸಂಚಾರ ಮಾಡುವನು ಎಲ್ಲಾ ||1||

ದಾರಿಗಿ ನಿಲುಕುವನಲ್ಲಾ

ಚೂರಿ ಪಾತಕನೆಂಬುವದಲ್ಲಾ

ಮೀರಿದವರಿಗೆ ಗಂಡನಲ್ಲಾ

ಅರಣ್ಯದೊಳು ಸೇರಿರುವನಲ್ಲಾ ||2||

ನಾಸ್ತಿಕ ಅಲ್ಲಾ ಅವನೂ

ನಾಸ್ತಿಕನಂದಾ ನೀನೇ ಅವನು

ದೇಶ ತಿರುಗುವದ್ಯಾಕೋ ಇನ್ನೂ

ಈಶಾ ನಿನ್ನೊಳು ಇಟಪೂರೀಶಾ ||3||

ಮಂಗಳಾರುತಿ ಬೆಳಗಬೇಕಮ್ಮ

ಪಾರ್ವತೀಶನಿಗೆ

ಮಂಗಳಾರುತಿ ಬೆಳಗಬೇಕಮ್ಮಾ

ಅಂಗಲಿಂಗ ಸಂಗಭರಿತ ಗಂಗಾಧರನಿಗೆ ||ಪಲ್ಲ||

ಕಾಲ ಕಾಲ ಮೂಲ ಮೂಲ

ಶೀಲ ಶಂಕರಗೆ

ಬಾಲಮೌಳಿಚಂದ್ರ ಮುನಿ

ಪಾಲದೇವನಿಗೇ ||1||

ಅಜಹರಿ ಸುರರ ಅನುವು

ಮೀರಿದವನಿಗೆ

ಗಜಚರ್ಮಧರಿಸಿದವನಿಗೆ

ಗೌರಿನಾಥನಿಗೆ ||2||

ಅವನಿಯೊಳಗ ಇಟಪೂರೀಶ

ವೀರಭದ್ರನಿಗೆ

ಪಾವನಮೂರ್ತಿ ದೇವನಿಗೆ

ಪರಮಾರ್ಥನಿಗೆ ||3||

ಮಂಗಳಾರುತಿ ತಂದು ಬೆಳಗಿರೆ ಸಿದ್ಧಲಿಂಗನಿಗೆ

ಮಂಗಳಾರುತಿ ಕಂಗಳೊಳ ಬೆಳ

ದಿಂಗಳಾತ್ಮದ ಅಂಗ ಮಹಿಮನಿಗೆ

ಜಯ ಜಯ ಮಂಗಳಾರುತಿ ||ಪಲ್ಲ|

ಸಾರ ಹೃದಯದ ಸಾರ ಸವಿಸುಖ

ಮೀರಿ ಚರಿಸುವ ಮಾರಮರ್ದನನಿಗೆ ||1||

ಕ್ಷೇತ್ರಪಾತ್ರ ವಿಶಾಲನೇತ್ರ

ಮೋಕ್ಷದಾಯಕ ಕೀರ್ತಿ ಶಂಕರಗೆ ||2||

ಆನಂದ ಮನದೊಳು ಬಂದು ನಿಂದು

ಚಂದ ತೋರುವ ಚಂದ್ರವದನನಿಗೆ ||3||

ಕಾಲಮದಹರ ಮೂಲ ಮೂರುತಿ

ಇಟಪೂರೀಶನಿಗೇ ||4||

ನಾದವೆ ಪರಬ್ರಹ್ಮವಸ್ತು ನೋಡಣ್ಣಾ ||ಪಲ್ಲ||

ಅಂಡಪಿಂಡ ಬ್ರಹ್ಮಾಂಡ ಭೂ

ಮಂಡಲಮಯವಾಗಿ ನುಡಿವುದಣ್ಣ

ನುಡಿಗಳು ಕೇಳಿರಣ್ಣ

ನುಡಿ ಒಳಗೆ ಹೊರಗ ಒಂದೇ ತಾನೇ ತಾನಣ್ಣ ||1||

ನಾನು ನಾನೆಂದೆನಬೇಡಾ

ನಾನು ನೀನೆಂದು ತಿಳಿಯದೆ ಕೆಡಬೇಡ ಮೂಢಾ

ಮುಂದೆ ಬಹು ನೊಂದು ಕೇಡಾ

ಚಂದದಿಂದಲಿ ತಿಳಿಯೊ ನೀನೊಂದು ಪಾಡಾ ||2||

ಆತ್ಮದೊಳಗೆ ಆನಂದ ಶಿವ ಮಹಾತ್ಮೆಯ

ತಿಳಿಯೋ ನೀನು ಗೊತ್ತದರಿಂದ

ಮತ್ತೇನು ಬ್ಯಾರಿಲ್ಲಾ ಮುಂದೆ

ಮುತ್ಯಾ ಇಟಪೂರೀಶನ ಕರುಣದಿಂದ ನಾದವು ಕೇಳಿರಣ್ಣ ||3||

ಪಾತರಗಿತ್ತಿ ಸಂಗ ಮಾಡಿದರೆ ಪುಣ್ಯವೇನೋ

ನಿಮಗೆ ಪುಣ್ಯವೇನೋ

ಪಾತೇ ಕೊಟ್ಟು ಪಾಪ ಗಳಿಸಿಕೊಂಬುವದೇನೋ ||ಪಲ್ಲ||

ವೇದ ಶಾಸ್ತ್ರ ಓದಿ ಓದಿ ತಿಳದಿ ಏನೋ

ನೀನು ತಿಳದಿಯೇನೋ

ಗದ್ದಿಕೋರ ವಾದಿ ಪಂತಗಳು ಅವುದೇನೋ

ನೀ ಆಡುವದೇನೋ ||1||

ಸತ್ಯವಂತರು ಸತ್ಯ ವಚನ ಸಾರುವದೇನೋ

ಅವರು ಸಾರುವದೇನೋ

ಹೊತ್ತು ಹೋಗುವಾ ಗೊತ್ತು

ನೀ ತಿಳಿಯಬಾರದೇನೋ ||2||

ಕರ್ತು ಗುರುವಿನ ಪಾದ ಪಿಡಿಯುವ ತನಕ

ತಿಳಿಯುವದೇನೋ

ಇಟಪೂರೀಶನ ಧ್ಯಾನ ಮಾಡುವದೇನೋ ||3||

ಶಾಸ್ತ್ರ ಓದುವದೇನೋ ಏ ಮನುಜಾ

ಶಾಸ್ತ್ರದೊಳಗ ಏನು ಇಲ್ಲಾ

ಶಾಸ್ತ್ರ ಹೇಳುವದೆಲ್ಲಾ ಅಪಾತ್ರದೊಳಾಗುವದೇ

ಸೂತ್ರದಾರ ಒಳಗೆ ಸುಶೀಲವು ತಿಳಿಯದೇನೋ ||ಪಲ್ಲ||

ಕತ್ತಲ ಮನಿಯೊಳಗೆ ಹೊತ್ತು ಹೋಗುವ

ಗೊತ್ತು ತಿಳಿಯಬೇಕಿನ್ನು ಮತ್ತೇನು ಬ್ಯಾರಿಲ್ಲಾ

ಉತ್ತಮ ಉಪದೇಶ

ಗೊತ್ತು ತಿಳಿದ ಮ್ಯಾಲೆ ಸತ್ತರೆ ಚಿಂತಿಲ್ಲಾ ||1||

ನಾನೂ ಬಲ್ಲವನೆಂದು ಪೇಳಿದರೆ

ನಿನಗೇನು ಬಂತು ಇನ್ನು

ನೀನು ಮಾಡಿದ ಕರ್ಮ ಬಿಟ್ಟು ಹೋಗುವದೇನೋ

ಏನು ಎಂದು ನರಕದೊಳಾಗುವರೇ ||2||

ಸುಳ್ಳೆಂದು ಪೇಳುವಂಥಾ ಅಜ್ಞಾನರಿಗೆ

ಸುಜ್ಞಾನ ಏನು ಅವು

ಇಟಿಪೂರೀಶನ ಮಹಿಮಾ ತಿಳಿಯದೆ

ವಟವಟ ಕೊಂಡಾಡಿದರೇನು ಫಲವಿಲ್ಲ ||3||

ಏನು ಹೇಳಲಿ ಶಿವನೆ ನಿನ್ನ ಮಹಿಮೆಯನು

ಮಾಣದೇಕೋ ಚಿತ್ತ ಜ್ಞಾನದೊಳು ನೀನು

ಕಾನನ ನಗರದೊಳು ಕಾಣದರಸುವ ತತ್ವ

ಜ್ಞಾನ ತಾನರಿಯದವ ಕಾಣನವನು ||ಪಲ್ಲ||

ಕಾಯದೊಳು ತಿಳಿಯದೆ

ಬಾಯಿ ಬಣ್ಣರು ಮಾತು ವಾಕ್ಯಗಳು

ನುಡಿವರು ಮೂಢ ಜನರು

ಕಾಣಬೇಕೆಂದೆಂದು ಶಿವನ ||1||

ಪುಂಡ ಜನರು ಎಲ್ಲಾ

ಮಂಡಲಪತಿ ಮಹಿಮಾ ಕಂಡವರಿಲ್ಲಾ

ಅಂಡಪಿಂಡಾಂಡದೊಳಾನಂದ ಭರಿತಾದ

ಬ್ರಹ್ಮಾಂಡಮಯವಾದ ಯೋಗಿ ಬಲ್ಲ ||2||

ಶ್ರೀಗುರು ಇಟಪೂರಿ ವೀರಭದ್ರನೆ

ದೇವಾ ಪರಮಾನಂದದಿ

ಪ್ರಣವ ತಾನೆ ಕರುಣಾಸಾಗರ ಮೂರು

ಪರಕೆ ಪರತರವಾದ ಪರಮಕೀರ್ತಿ ||3||

ನಮ್ಮ ದೇವರೆಂಬವುದು ಏನೋ |

ನಿಮ್ಮ ದೇವರು ಏಲ್ಯೋ ನೀವಿಲ್ಲೋ

ನಮ್ಮ ದೇವರು ನಿಮ್ಮ ದೇವರು ಎಲ್ಲಾ ಒಂದಲ್ಲೇನೋ

ತಮ್ಮಾ ನೀನೇ ತಿಳಿದರೆ ನೀನೇ ದೇವರು ನಿನ್ನ ಬಿಟ್ಟು ದೇವರಿಲ್ಲಾ ||ಪಲ್ಲ||

ಅಂಗೈದೊಳಗ ನೀ ಕುಂತಿ

ಆಗಮ ಪುರಾಣ ಓದಿ ಓದಿ ತಿಳಿಯಬೇಕಂತಿ

ಯೋಗ ಧ್ಯಾನ ಬಾಗಿಲೊಳಗೆ ಜಾಗಾ ತಿಳಿಯೋ

ಬಾಗಿ ತಿಳಿಯದೆ ಬಾಗಿ ನಡೆಯದೆ ಬಟ್ಟ ಬಯಲಾಗುವುದೇನೋ ||1||

ಮೂರ್ಖ ಗುಣ ಅತಿ ಮೂರ್ಖಾ ನೀ ಬಿಡೋ

ಕರ್ಗಸದಿಂದಾ ಕರಕರ ಯಮ ಕೊಯಿಸುವ ನೋಡೋ

ನಾಮ ಒಂದೆ ರೂಪ ಒಂದೆ ಕ್ರಿಯಾ ಒಂದೆ ಜಪವು ಒಂದೆ

ಶಾಸ್ತ್ರ ಒಂದೆ ದಾರಿ ಒಂದೆ ದಾರಿ ತಿಳಿದರೆ ದೇವರೊಂದೆ ||2||

ಕಾಲಾ ತಿಳಿದು, ಮೂಲಾ ನೀ ತಿಳಿಯೋ ಆಲಿಸಿ ಮನದೊಳು

ಪಾಲಿಸು ನಿಧಾನ ನೀ ಮಾಡೋ ಮೂಲ ತಿಳಿಯದ ಮೂರ್ತಿದಾರೋ

ಬಾಲನಂತೆ ಎಲ್ಲರೊಳಗೆ ಶೀಲಾ ಸುಶೀಲಾ ಎಂಬೊ

ಭಾವ ಭಕ್ತಿ ತಿಳಿದವ ಇಟಪೂರೀಶಾ ||3||

ಹರನ ಸ್ಮರಣೆ ಮಾಡಿ ಗುರು ಕರುಣದ ಪಡಕೊಂಡು

ಸ್ಥಿರಮುಕ್ತಿ ಪಡಿವುದ ಗುರು ಶಿಷ್ಯನೇ ಬಲ್ಲ ||ಪಲ್ಲ||

ಹಿರಿಯ ತಾನಾದ ಮ್ಯಾಲೆ

ಶಿರ ಬಾಗಿ ನಡೆದದ್ದೇ ಸಾಕ್ಷಿ

ನುಡಿದಂತೆ ನಡೆ ಇಲ್ಲಾ ನಡೆದಂತೆ ನುಡಿಯೋಣಿಲ್ಲಾ

ಕೆಡಕು ಮಾಡೋದ್ಯಾಕೋ ಬ್ಯಾಡ ಕಾಣಪ್ಪ ನೀ ||1||

ಜಂಗಮ ತಾನಾದ ಮ್ಯಾಲೆ ಜಾಣ ಕೇಳೋ

ಲಿಂಗೈಕ್ಯ ಸ್ಥಲ ಎಲ್ಲ್ಯಾದೋ

ಜಂಗಮ ಎಲ್ಲ್ಯಾದೋ ಲಿಂಗಸ್ಥಲ ಅಲ್ಲಿ

ಜಂಗಮ ಒಂದ ಲಿಂಗಸ್ಥಲ ಒಂದೆ ಮಂಗಾ ||2||

ಪರಿಚಾರಕರೆಲ್ಲಾ ಪಾಪಿಷ್ಟರು

ಪಾಪಕ್ಕೆ ಗುರಿಯಾಗುವರು

ಆ ಪರಬ್ರಹ್ಮನ ತಾನರಿಯದೆ ಇರುವದೆಂತು

ಕಪಟ ಗುಣದಿಂದ ಕಾಣೇನು ಇಟಪೂರೀಶಾ ||3||

ಮನೋಹರನ ಧ್ಯಾನವ ಮಾಡದೇ

ಮನದೊಳು ಮಂತ್ರವ ಪಠಿಸಿದರೇನು ಫಲ ||ಪಲ್ಲ||

ಹಲವು ಮಂತ್ರಗಳು ಯಾಕೋ ಫಲವಿಲ್ಲಾ

ಸುಲಭದಿ ವಸ್ತು ತಿಳಿಬೇಕೋ

ಸುಲಭದಿ ಸುಷುಪ್ತಿ ಸುಜ್ಞಾನ ಸುಗುಣ ನಿನಗೆ

ಹಲವು ಹಂಬಲ ಬಿಟ್ಟರೆ ಏನೂ ಇಲ್ಲಾ ||1||

ಪ್ರಣವವೆಂಬ ಬೀಜಮಂತ್ರ

ಪ್ರಣವವನ್ನು ತಿಳಿಯದೆ ಗಣಿತ ಹಾಕುವದೇನೋ

ಎಣಕಿ ತಿಳಿಯದೆ ನೀನು ಏನು ಓದಿದರೇನೋ

ಗುರುವೊಂದಿರಬೇಕೋ ಗುಣಕಚ್ಛಾ ||2||

ಗುರುವು ಇಲ್ಲಾ ಗುರ್ತು ಅರಿವು ಇಲ್ಲದೆ

ಅರ್ಥ ವ್ಯರ್ಥ ಹೇಳಿದರೇನಿಲ್ಲ

ಇಟಪೂರೀಶನ ಘಟದೊಳು

ತಿಳಿಯದೆ ಘನವಾಕ್ಯ ಮಾಡಿದರಿಲ್ಲಾ ||3||

ಪದ ಹಾಡಬೇಕಂತೀರಿ ಪದ ಹಾಡಿದಲ್ಲಿ

ಪದವಿ ಬಂದೀತೇ ನಿಮಗೆ

ಪದದೊಳಗಿನ ಭೇದ ಪದ ಮಾಡಿದವ ಬಲ್ಲ

ಪಾದಪದ್ಮಂಗಳಿಗೆ ಪಾದಸೇವಕನಾ ||ಪಲ್ಲ||

ಆಧಾರ ಅಂಥರವೆಂಬೋ ಆತ್ಮಜ್ಞಾನ ಬೇಕು ನಿಮಗ

ಆಧಾರವೆಂಬಂಥ ಹದ ತಿಳಿದು

ಪದ ಮಾಡಿ ಹಚ್ಚಿ ಹೊಡೆದರೆ

ನಿಮಗೆ ಆಧಾರ ಸಿಕ್ಕೀತು ||1||

ಗ್ವಾಡಿಯ ಮರಿಯಲಿ ನೀವು ಕುಂತು ಗೋಳ್ಯಾಡಿದರೆ

ಗ್ವಾಡಿಕಾರ ನೀಡುವನಾ

ನಾಡಿನೊಳಗ ಇಂತ ಗಾರುಡಿಗ್ಯಾ ಇಲ್ಲಾ

ಬೇಡಿಕೊಂಡರೆ ಬಾರಾ ಬೇಡಿ ಉಂಬುವ ಅವನು ||2||

ಮನೆ ಮಾರು ಇಲ್ಲಾ ಅವನು ಹೋಗಿ

ಕಾಡಿನೊಳಗ ಕೂಡುವನು

ಕಾಡಿನೊಳು ಕೂಡುವ ಕಾಡಸಿದ್ಧ ಅವನು

ಬೇಡದಂತೈಶ್ಚರ್ಯ ಕೊಡುವ ಇಟಪುರೀಶಾ ||3||

ಹಸನಾಗದೆ ಕಣ್ಣು ಕಿಸಿದಲ್ಲೇನಾದೊ |

ಕಿಸಿವಂಥ ಬಗೆಯದು ಬೇರಾದೋ ||ಪಲ್ಲ||

ಕಸಿವಿಸಿ ಹಂಬಲ ಕಳೆದು ಕಣ್ಣು

ಕಿಸಿದು ನೋಡಿ ವಸ್ತು ವಶಮಾಡೊ ಜಾಣಾ ||ಅ. ಪಲ್ಲ||

ಅರಿವು-ಮರೆವು ಮೀರಿ, ಘನ ಮಹಾಧಾರದ

ಅರಿವುಳ್ಳ ಮಹಿಮಗೆ ಮರೆವು ಉಂಟೇ

ಮರೆವು ಮಾಯಾ ಎಂಬ ಪರದೆಯ ಹರಿದು ನೀ

ಪರಬ್ರಹ್ಮವ ಬೆರೆದು ಪಾರಾಗೊ ಜಾಣಾ ||1||

ಭ್ರಾಂತರಾಗದೆ ಮುಕ್ತಿ ಚಿಂತೆಯೊಳು ಮಸಣಿಸಿ

ಶಾಂತರಾದರು ನಮ್ಮ ಶಿವಶರಣರು

ಅಂಥಿಂಥ ಮಾತಲ್ಲ ಕಂತು ಹರನೆ ಬಲ್ಲ

ತಂತು ತಿಳಿದು ನಿಶ್ಚಿಂತನಾಗೊ ಜಾಣಾ ||2||

ಬಡಿವಾರ ನೀಗಿ ಬಾಗಿ ಸರ್ವರಿಗೆ

ಅಡಿವರ್ಗನಾಗಿ ನೀ ಮಡಿಯಬೇಕು

ಪೊಡವಿ ಪತಿಯಾದ ಇಟಪುರೀಶನ ಪಾದ

ವಿಡಿದು ಭವದ ಪಾಶ ಕಡಿದುಕೊ ಜಾಣಾ ||3||

ನೋಡು ನೋಡೆಲೊ ಕಾಣುತಾದೋ

ನಿನ್ನಯ ಕರಸ್ಥಳದೊಳಾಡುತಾದೋ ||ಪಲ್ಲ||

ನೋಡುತ ಎಡಬಲ ಹಾಡುತ ಆಡುತ

ಕೂಡಲೊ ಕೂಡಲಸಂಗಮ ದೇವತ ||ಅ. ಪಲ್ಲ||

ಏಳುತ ಮೇಲೇಳುತ ನಡೆಯೊ

ಏಳು ಸುತ್ತಿನ ಕ್ವಾಟಿ ದಾರಿ ಹಿಡಿಯೋ

ತಾಳುತ ಬಾಳುತ ತನುಮನ ಬಾಗುತ

ಮೇಲಗಿರಿಯ ಮನೆ ಸೇರಿ ನೀ ಮೆರಿಯೊ ||1||

ಜೀವ ಶಿವಗ ಭೇದ ಇಲ್ಲ | ನೀ

ಜೀವ ಭಾವವಳಿದರೆ ಬ್ಯಾರೆ ಇಲ್ಲ

ಸಾಯುವ ಹುಟ್ಟುವ ಯಾವ ಭಯಗಳಿಲ್ಲ

ಸಾವಧಾನದಿ ನೀ ಸಾಧಿಸಿಕೊಳ್ಳಲೊ ||2||

ಬಯಲಿಗೆ ಬಯಲಾಕಾರ | ನಿ

ರ್ಬಯಲೊಳು ಇಟಪುರ ಧೀರ |

ಬಯಲನೆ ಹಿಡಿಯುತ ಬಯಲನೆ ಪಡೆಯುತ

ಬಯಲ ಬ್ರಹ್ಮನೊಳು ಬಯಲಾಗಿ ಭಜಿಸುತ ||3||

ನಿನ್ನ ನಿಜವ ನಂಬಿದೆನಯ್ಯ

ಇನ್ನೆನಗಾರ ಭಯ

ಅನ್ಯರ ಅಂಜಿಕೆ ಎನಗೇಕಯ್ಯ

ಪನ್ನಂಗಧರ ಪೂರ್ಣ ದಯ ||ಪಲ್ಲ||

ಕತ್ತಲೊಳಗೆ ಹೊತ್ತುಗಳೆದು

ಅತ್ತಿತ್ತ ಎಳಸುತ್ತಿರಲು

ಕತ್ತಲಳಿಸಿ ನೀ ಭಕ್ತಿ ಮೂಗುತಿ

ಮುತ್ತು ತೊಡಿಸಲಾರ ಭಯ ||1||

ಅಂಧಕ ತಾ ಅಡವಿ ಬೀಳಲು

ಮುಂದಿನ ಮಾರ್ಗ ತಪ್ಪಿರಲು

ಬಂದು ಕರವ ಪಿಡಿದು ಮುಕ್ತಿ

ಮಂದಿರ ತೋರಿಸಲಾರ ಭಯ ||2||

ಏಸು ಎನ್ನಯ ಕರ್ಮ ದುರಿತ

ದೋಷವಳಿಸಿ ಇಂದು ಪರ್ಯಂತ

ವಾಸವಾಗಿರ್ದ ಇಟಪುರೀಶ

ವಿಶ್ವಾಸ ಮೂಡಿಸಲಾರ ಭಯ ||3||

ಗಂಡನೊಲಿದ ಮೇಲೆ ಘಟಿತಾರ್ಥದಲಿರಬೇಕು

ಕಂಡ ಕಡೆಯಲಿ ಕಣ್ಣು ಇರಿಸುವುದ್ಯಾಕೋ

ಭಂಡಗೇಡಿಯಂತೆ ಜನರೊಳು ತಿರುಗುತ

ಅನ್ಯರ ಮೇಲೆ ಮನಸಿಟ್ಟು ಮೆರೆಯುವುದಿನ್ಯಾಕೋ ||ಪಲ್ಲ||

ಕಾಯ ಪ್ರಾಯವ ನಂಬಿ ಕಾಮನ ಆಟದೊಳು

ಮಾಯೆ ಬಲೆಗೆ ಸಿಲುಕಿ ಮರೆತಿರಬಹುದೆ?

ನ್ಯಾಯದ ನುಡಿ ಹೇಳಿ ಪರನಾರಿಗರಸುತ

ಬಾಯಿ ಮಾತುಗಳಿಂದ ಬಡಿವಾರಿನ್ಯಾಕೋ ||1||

ಚಿಕ್ಕತನದ ಬುದ್ಧಿ ಚಿತ್ತ ಚಂಚಲದಿಂದೆ

ಧಿಕ್ಕರಿಸುವರೇನೋ ಧೀರ ಪುರುಷನ?

ಲೆಕ್ಕವಿಲ್ಲದ ಕಾವಲಿಕ್ಕಿ ಕಾಯುತಲಿದ್ದು

ಸೊಕ್ಕು ಮುರಿದ ಮೇಲೆ ಸೋಗು ಇನ್ಯಾಕೋ ||2||

ಭಕ್ತಿಯೆಂಬ ನಿಜ ಬಗೆಯನು ತಿಳಿಯದೆ

ಒಗ್ತನ ಹರಿಯುವುದೆ ವಾರಿಗಿ ವರನೊಡನೆ?|

ಯುಕ್ತಿಲಿ ಕೂಡಿನ್ನು ಇಟಪುರೀಶನೊಳು |

ಮುಕ್ತಿ ಪಡೆಯದೆ ಮೂಗು ಮುರಿವದಿನ್ಯಾಕೋ ||3||

ಜೀವ ಕೊಡು ಲಿಂಗದಲಿ ಎಲವೊ ಜೀವಾತ್ಮ

ಜೀವ ಭಾವವಳಿದರೆ ಆಗುವಿ ನೀ ಪರಮಾತ್ಮ ||ಪಲ್ಲ||

ಜೀವ ಕೊಡುವ ಭಾವ ಹೇಳಿಕೊಡುವೆನು ಈಗ

ಸಾವಧಾನದಿ ತಿಳಿಯೊ ಸಾವಿಲ್ಲೆಲೋ ನಿನಗ ||ಅ.ಪಲ್ಲ||

ಅರಿವೆ ಗುರು ಎಂಬ ಬಿರುದು ಸಾರುತ ಮೊದಲು

ಮೆರೆಯುವ ಚಿದ್ಬಿಂದು ಲಿಂಗಮನನಾಗಲು

ವರ ಜಂಗಮ ಜಗದ್ಭರಿತೆಂಬುದು ನೆಲೆಗೊಳಲು

ಅರಿವು-ಆಚಾರದ ಸಂಭ್ರಮ ಇರುಳು ಹಗಲು ||1||

ಚದುರ ಮಾರ್ಕಂಡೇಯ ನಂಬಿ ತಾ ಪಡಕೊಂಡ

ಮದನ ವೈರಿಗೆ ಅಪ್ಪಿ ಅಮರತ್ವ ಕಂಡ

ಅದರಂತೆ ಆ ಪದವಿ ನೀ ಪಡೆಯೊ ಪ್ರಚಂಡ

ಎದುರಾರು ನಿನಗೆ ನೀನೇ ಯಮನ ಗಂಡ ||2||

ಮತ್ತೊಂದು ಬಯಸದೆ ಬಿಡು ನೀ ಹಂಬಲದಾಶಾ

ಅತ್ತಿತ್ತ ಮನ ಹರಿಯೆ ಆಗುವಿ ಅಪಹಾಸ್ಯ

ಸತ್ಯ ಸದ್ಗುಣ ಭಾವ ಸರಿಸು ದುರ್ಗುಣ ದೋಷ

ಇತ್ತ ಬಾರೆಂದಾಗ ಕರೆದಾನು ಇಟಪುರೀಶ ||3||

ವರಭಕ್ತ ಲಿಂಗ ಧ್ಯಾನಿ ಗಗನದಿ ವಾದ್ಯ ಕೇಳುವನು ||ಪಲ್ಲ||

ಮೊದಲ ಪೀಠವೆ ಬಿಂದು ಆಮೇಲೊದಗುವ ನಾದ ಧ್ವನಿ

ಸದಮಲ ಗುಣ ಕಳೆಯದೆಯೇ ಖಣಿ

ಮುದದಿ ಸಂಪದದಿ ಇರುವ ನಮ್ಮ ಧಣಿ

ಗುರುಜ್ಞಾನಿ ಗಗನದಿ ವಾದ್ಯ ಕೇಳುವನು ||1||

ಹತ್ತು ವಾಯುಗಳು ಮತ್ತೊಡಗೂಡಿ ಉಸಿ-

ರೆತ್ತುವನದನರಿದು ಉನ್ಮನಿಯೊಳು

ಚಿತ್ತ ಪಲ್ಲಟನಾಗದೆ ಚಿನ್ಮಯನ ಬೆರೆದು

ತತ್ವಜ್ಞಾನಿ ಗಗನದಿ ವಾದ್ಯ ಕೇಳುವನು ||2||

ಜಗದ್ಭರಿತ ಜಯ ನಮ್ಮ ಇಟಪುರೀಶನ

ಜಯಿಸುವುದೇನಗಾಧ ಹಗಲು ಇರುಳು

ಮುಗಿದು ಕರ ಅಗಲದಿರುವನು ನಮ್ಮ ಧಣಿ

ಬ್ರಹ್ಮಜ್ಞಾನಿ ಗಗನದಿ ವಾದ್ಯ ಕೇಳುವನು ||3||

ಬಯಲೆ ಬ್ರಹ್ಮವೆಂದು ಭಜಿಸುವಾತನೆ ಶರಣ

ಬಯಲೆ ಭಕ್ತನ ಪ್ರಾಣ ಬಯಲೆ ಗುರು ಕರುಣ ||ಪಲ್ಲ||

ಭಯಭಕ್ತಿ, ನಿಜ ಮುಕ್ತಿ ನಂಬುಗೆ ನೆಲೆಗೊಂಡು

ಸ್ವಯಂ ಲಿಂಗ ಧುರೀಣ ಗೆಲಿದು ಜನನ ಮರಣ ||ಅ.ಪಲ್ಲ||

ಮಮಕಾರ ಮಾಯೆ ಕತ್ತಲನೊಳಗೊಂಡು

ನಿಮಿಷ ಮಾತ್ರದಿ ತಾ ನಿಶ್ಚಲನೊ

ಶಮೆ-ದಮೆ ಸಹಿತ ಸುಷುಮ್ನನಾಳವ ಪೊಕ್ಕು

ಶಮನೆ ಗಮನೆಯೆಂದು ಮೆರೆವ ಗಂಭೀರನೇ ||1||

ಹುಬ್ಬು ಕಿವಿ ನೇತ್ರ ದವಡಿ ನಾಲಿಗೆ ದಂತ

ಹಬ್ಬಬ್ಬಿ ಲಿಂಗಕ್ಕೆ ನುಗ್ಗುವನೋ|

ಕಬ್ಬು ಗಾಣಕೆ ಕೊಟ್ಟು ರಸವುಂಡ ಪರಿಯಂತೆ

ಉಬ್ಬುಬ್ಬಿ ಸುರಿವ ಅಮೃತ ಪಾನವನೋ ||2||

ಸಟೆಯು ಶಾಶ್ವತವಲ್ಲ ದಿಟವೆ ಕಾರಣವೆಂದು

ಘಟದ ದುರ್ಗುಣ ಗಣ ನಿಗ್ರಹಿಸುವನೋ

ನಿಟಿಲ ಭ್ರೂಮಧ್ಯದಿ ಸ್ಫಟಿಕ ಜ್ಯೋತಿಯ ಕಂಡು

ಇಟಪುರೀಶನ ಕೂಡ ಹಿಗ್ಗುತಲಿಹನೋ ||3||

ತಂದೆ ನೀ ಎನಗೆ ಎಂಥ ಪದವಿಯ ಕೊಟ್ಟಿ |

ಬ್ರಹ್ಮಾನಂದವ ತೋರಿದಿ ಮನ ಮುಟ್ಟಿ

ಅಂಧಕಾರ ಮಾಯಾ-ಮೋಹ ಸುಟ್ಟಿ ||ಪಲ್ಲ||

ರಾಮಲಿಂಗ ಎನ್ನ ಧಣಿಯು ಧವಳಾಂಗ

ರಾಯಚೂಟಿಯ ಶರಭ ಪೂರ್ಣ ಸರ್ವಾಂಗ

ರಾಜಾಧಿರಾಜ ಹೊಳೆಯುತಾನಂತರಂಗ ||1||

ಅಪ್ಪಾ ಇದು ಏನು ಆಶ್ಚರ್ಯಕರ |

ಮುಪ್ಪುರಾರಿ ಮರೆಯಲ್ಹ್ಯಾಂಗ ಉಪಕಾರ

ಅಪ್ಪಿಕೊಳಲು ಆಯಿತು ಪಾಪ ಪರಿಹಾರ ||2||

ಐದು ಐದು ಇಪ್ಪತ್ತೈದು ತತ್ವ!

ಅದರೊಳು ತೋರ್ಯಾದ ಲಿಂಗದ ಮಹತ್ವ

ಅನುವುಗೊಳಿಸಿ ಅಮಳ ಸುಖ ಪೂರ್ಣತ್ವ ||3||

ಅರ್ಥ ನೀನೇ ಅಷ್ಟ ಪದವಿ ನೀನೆ |

ಅರ್ತು ನೋಡುವ ಅಲ್ಲಮಪ್ರಭು ನೀನೇ

ಮೃತ್ಯುಂಜಯ ಮುಕ್ತಿದಾಯಕ ನೀನೇ ||4||

ಹುಟ್ಟು ಸಾವು ಹೋಯಿತು ಪ್ರಾಣೇಶ |

ಬಟ್ಟ ಬಯಲುಗೊಳಿಸು ಭವನಾಶ

ಗಟ್ಟಿ ಮುಟ್ಟಿದಾನೊ ನಮ್ಮ ಇಟಪುರೀಶ ||5||

ಮಾಡೋ ಮಗನೆ ಸದ್ಗುರು ಸೇವಾ

ಮಾಡೋ ಮಗನೆ ಸಾಧುರ ಸೇವಾ

ಮಾಡಿ ಭೇದವ ತಿಳಿದವನ್ಯಾರೋ

ಮೇದಿನಿಪುರದೊಡೆಯ ಹಾದಿ ನೋಡಲಿರುವ ||ಪಲ್ಲ||

ಕಪಟ ಗುಣವ ಬಿಟ್ಟು

ಗುಪ್ತ ಮಾರ್ಗದಲಿ

ಚಪಲತ್ವ ಇವನಂಥ

ಚಪಳನ ಕಾಣೆನೆಂದು ||1||

ಬುತ್ತಿ ಕಟ್ಟುವದ್ಯಾಕೋ

ಹೊತ್ತು ತಿರುಗುವದ್ಯಾಕೋ

ತುಪ್ಪ ಬಾನ ಉಂಬುವಂಥ

ತಾತ್ಪರ್ಯ ಬೇಕೆಂದು ||2||

ಅರಗಳಿಗಿ ಗುರುಕೃಪಾ

ಕರುಣವು ಪಡಕೊಂಡು

ಶರಣ ಸೇವಕನಾಗೋ

ಇಟಪೂರೀಶಾನ ||3||

ಯಾರ ಗುಮಾನೆ ಇನ್ಯಾರ ಅವಸರ |

ಯಾರ ಗುಮಾನೇನು

ಧೀರ ಶರಣನ ಮೀರಿ ಆನಂದ

ನಿರಾಳ ನಿಂದವನಿಗೆ ಇನ್ನೇನು ಗುಮಾನೆ ||ಪಲ್ಲ||

ಯೋಗಿ ಚಾಗಿ ಜಗಭೋಗಾ |

ತ್ಯಾಗದಿ ಜನ್ಮ ನೀತಿ ಜ್ಞಾನ

ಭೋಗ ಭಾಗ್ಯ ಉಳ್ಳವನಿಗೆ ಇನ್ನಾರ ಗುಮಾನೆ ||1||

ಕಾಯ ಕರಗಿ ಗುರುರಾಯಗೊಪ್ಪಿಸಿ ಪ್ರೀತಿ |

ಕಾಯ ಕೀಟ ಭೃಂಗ

ನ್ಯಾಯವಾದವನಿಗೆ ಇನ್ಯಾರ ಗುಮಾನೆ ||2||

ಇಂಬುಕೊಂಡು ಇಟಪೂರೀಶನೊಳು ಹೊಳೆಯುತ |

ತುಂಬಿ ತುಳಕದಂಥ

ಕುಂಭನಾದವನಿಗೆ ಇನ್ಯಾರ ಗುಮಾನೆ ||3||

ಮುತ್ತಿನ ಮೂಗುತಿ ಇಟ್ಟು ಹೋದಿ ಜೋಕೆ |

ಮುತ್ತನು ಜತನಾಗಿ ಇಟ್ಟುಕೊಳ್ಳಬೇಕೆ || ||ಪಲ್ಲ||

ಹತ್ತು ಎಂಟು ಕಳ್ಳರದರ |

ಸುತ್ತಮುತ್ತ ಸುಳಿಯುತಾರ

ಅತ್ತ ಸೇರದಂತಲ್ಲಿರಬೇಕು ಬಹು ಜೋಕೆ ||1||

ಶಿವನಾಮ ಸರಸದಿ |

ಸಾವಧಾನ ಸೊಗಸದಿ

ಮನ ನೀ ಮೌನದೊಳಿರಬೇಕು ಬಹು ಜೋಕೆ ||2||

ಮನೋಹರನ ಸೇವೆಯು ಮರಿಯದೆ |

ವನಿತೆ ನಿರುತಾಗಿರಬೇಕೆ ||3||

ಮೊದಲಿನ ಪುಣ್ಯಾಫಲವು|

ಒದಗಿ ಬಂದಿಹ ಗೆಲವು

ಎದುರುಗೊಂಡು ತಾನಲ್ಲಿರಬೇಕು ಬಹು ಜೋಕೆ ||4||

ಇಟಪೂರೀಶಾ ಹಾನದಕೆ |

ಇತರ ವಸ್ತಾ ವಡವಿ ಯಾಕೆ

ಕಟ್ಟಿದ ತಾಳಿ ಇಟ್ಟ ನತ್ತು ಸಾಕೆ ||5||

ಏನು ಮಾಡಲಿ ಯೋಚನಾ |

ಆಹಾ ಏನು ಮಮ ತಾಯಿ

ಪ್ರಾಣತ್ರಯರನುಳವಿಕೊಳ್ಳ

ಪರತರ ಮುಮ್ಮಾಯೀ ||ಪಲ್ಲ||

ಪಿತನ ದೈತ್ಯ ಬಕಾಸುರನ |

ಸುತ ಮೈಸಾಸುರನ

ಹತವು ಮಾಡಲಿ ಬರುವ ನಮ್ಮ

ಗತಿಗೆ ನೀನಾಗು ಸಾಕಾರ ||1||

ಕಣ್ಣೀರು ಕಳಿಯುತ ಮುಖ ಪ್ರ |

ಸನ್ನವಾಯಿತು ಆವ ಕಳೆ

ಇನ್ನು ನೀ ಪ್ರಸನ್ನಳಾಗಿ ಬಾ

ಮುನ್ನ ಜಗದ ಜನ ಕಳೆ ||2||

ಬಂದ ಕಂಟಕ ಬಯಲು ಮಾಡಿ |

ಸಲುಹೆ ಸತ್ಯವಾಣಿಯೇ

ಇಂದು ಪಾಲಿಸಿ ಪೊರಿಯೇ

ಈ ಕ್ಷಣ ಇಟಪೂರೀಶನ ಪ್ರಾಣಿಯೇ ||3||

ಬಂದು ಜಂಗಮ ಬೇಡಿದರೆ ವಚನ

ಇಂದು ಕೊಡುವೆನು ಪ್ರಾಣ

ತಂದೆ ಸಿರಿಯಳ ತಾಯಿ ಚಂಗಳಾ

ಮುಂದೆ ತಡವ್ಯಾತಕಿನ್ನಾ ||ಪಲ್ಲ||

ಹರನ ವಾಕ್ಯಕೆ ಸರಿಯಾಗಿ ನಡೆಯಿರಿ

ಹರುಷವ ಪಡೆಯುವಿರಿ

ಕರಕರ ಕಾಯ ಕೊರೆದು ಕೊಡಿ ದೇಹ

ಅರುಪಿಸುವುದು ಕೈಲಾಸದ ದಾರಿ ||1||

ಏಸು ಕಾಲ ಬದುಕಿದರೇನು ಈ

ಹೇಸಿಗೆ ದೇಹದೊಳಗ

ಈಶನ ಚರಣಕೆ ಹೊಂದುವೆನು

ತುಸು ಅಂಜೆನು ನಾನು ||2||

ಸಟೆ ಸಂದೇಹವ ಬಿಡಬೇಕು

ದಿಟ ಸಹಜವ ಹಿಡಿಬೇಕು

ಇಟಪುರೀಶನ ಬೆರಿಯಬೇಕು

ನಟರಾಜ ಬಹುಪರಾಕು ||3||

ಅಲ್ಲಂತನಬ್ಯಾಡಿರಣ್ಣ

ಅಲ್ಲಂತ ಅಂಬುವದಲ್ಲಣ್ಣ

ಬಲ್ಲಂಥವನು ಯಾರಣ್ಣ?

ಬಲ್ಲಂಥವನೇ ಬಸವಣ್ಣ ||ಪಲ್ಲ||

ಬಲವಂತನ ಶೀಲಾವದಣ್ಣ

ಬೆಲೆಗಳಿಸುವದು ತಿಳಿಯಣ್ಣ

ಮೊಲೆಯಿದ್ದುದಕೆ ಕಾಣಣ್ಣ

ಹಾಲುಗರೆಯುತಾವಣ್ಣ ||1||

ಶಿಲಾಶಾಸನ ಓದಣ್ಣ

ಹಲವು ಮಾತುಗಳಿಲ್ಲಣ್ಣ

ಕೆಲಸಕೆ ಬರುವದು ಮುಂದಣ್ಣ

ನೆಲೆ ಯಾರಿಗೂ ತಿಳಿಯದಣ್ಣ ||2||

ನೇಮ ನಿತ್ಯ ಎದಕಣ್ಣ

ಕಾಮ ಸುಟ್ಟೋಗುದಕಣ್ಣ

ದೇವಭಕ್ತನಾಗಣ್ಣ

ಇಟಪುರೀಶ ಮೆಚ್ಚುವನಣ್ಣ ||3||

ಹೇಗಿರಬೇಕು ಹೇಗಿರಬೇಕು

ಯೋಗಿ ತಾನಾದವ ಹೇಗಿರಬೇಕು ||ಪಲ್ಲ||

ಬಾಗಿ ಸಂಸಾರ ಮಾಡಿ ಮನದೊಳು

ಯೋಗ ತಿಳಿದು ತಾ ಸಾಗಿರಬೇಕು ||ಅ.ಪಲ್ಲ||

ಕಂಗಳೊಳಗಿನ ಬೆಳದಿಂಗಳಂತೆ

ಲಿಂಗಮನ ಪಾಕೀಜಾಗಿರಬೇಕು

ಜಂಗಮಲಿಂಗ ಜಗದ್ಭರಿತ ಪರಮನ

ಭಜನೆ ಮಾಡಿಕೊಂಡಿರಬೇಕು | ಗುರು

ಭಜನೆ ಮಾಡಿಕೊಂಡಿರಬೇಕು ||1||

ನಾದಬ್ರಹ್ಮನೊಳು ವೇದಶಾಸ್ತ್ರ ಪುರಾ

ಣಾದಿ ಮೂಲ ಕೀಲು ತಿಳಿದಿರಬೇಕು

ಅನ್ನದಾನ ಧರ್ಮ ಮಾಡಿ ಜಗದೊಳು

ಧನ್ಯನಾಗಿ ತಾ ಇರಬೇಕು | ಶಿವ

ದ್ಯಾನದೊಳಗೆ ತಾ ಇರಬೇಕು ||2||

ಭೋಗ ಬಿಟ್ಟು ವೈರಾಗ್ಯ ತೊಟ್ಟು ಸಲೆ

ತ್ಯಾಗಿ ವಿರಕ್ತಿ ತಾನಾಗಿರಬೆಕು

ಯೋಗಿ ಇಟಪುರೀಶನ ಸ್ಮರಿಸು

ಈ ಘಟದ ಒಳಗೆ ತಿಳಕೊಂಡಿರಬೇಕು

ತಾ ಘಟದೊಳು ಶಿವನ ಕಂಡಿರಬೇಕು ||3||

ಶಾಣ್ಯಾ ಸದ್ಗುರು ಕರುಣೆಯಿಲ್ಲದೆ ನಾ

ಶಾಣ್ಯಾನಂದರೆ ಯಾತರ ಶಾಣ್ಯಾ

ಶಾಣ್ಯಾನಾಗಿ ತಾ ಸಾಧುರ ಸೇವಿಸಿ

ಶಾಣ್ಯಾನಾದವನೇ ಶಾಣ್ಯಾ ||ಪಲ್ಲ||

ಮೂರು ಮಲದ ಕಸ ಮುಸುರಿಟ್ಟುಕೊಂಡು

ಧೀರನೆಂದರೆ ಯಾತರ ಶಾಣ್ಯಾ

ಬ್ಯಾರೆ ಬ್ಯಾರೆ ಕುಲ ಭಾವಿಸಿ ಭವದ | ವಿ

ಚಾರವಿಲ್ಲ ಯಾತರ ಶಾಣ್ಯಾ ||1||

ಮೀರಿದ ಉನ್ಮನಿಯೊಳು ನಿಂದು ಜಾಣ ಸಂ

ಸಾರದಿ ಇದ್ದಿಲ್ಲದವನೇ ಶಾಣ್ಯಾ

ಪುರಾಣ ಪುಸ್ತಕ ಪಠಿಸಿದರೇನು

ಪರ ವಸ್ತುವರಿಯದೆ ಯಾತರ ಶಾಣ್ಯಾ ||2||

ಅಸ್ಥಿರ ದೇಹದ ವಿಸ್ತಾರ ತಿಳಿಯದೆ

ಕುಸ್ತಿಯಾಡಿದರೆ ಯಾತರ ಶಾಣ್ಯಾ

ಪುಸ್ತಕ ಪುರಾಣದೊಳು ಸ್ವಸ್ಥಾನಂದದಿ | ಗುರು

ಸ್ತೋತ್ರದೊಳಗಿದ್ದವನೇ ಶಾಣ್ಯಾ ||3||

ಮಾನವ ಜನ್ಮದ ಖೂನವ ತಿಳಿಯದೆ

ಶ್ವಾನನಾದರೆ ಯಾತರ ಶಾಣ್ಯಾ

ಜ್ಞಾನಭರಿತ ನಮ್ಮ ಇಟಪುರೀಶನೊಳು

ತಾನೇ ತಾನಾದವನೇ ಶಾಣ್ಯಾ ||4||

ಆನಂದದಿ ಮೆರೆಯುವನೊ | ಶಿವಯೋಗಿ

ಆನಂದದಿ ಮೆರೆಯುವನೊ ||ಪಲ್ಲ||

ಉನ್ಮನಿಯೊಳು ಘನ, ಚಿನ್ಮಯನೊಳು ಬೆರೆದು

ತನ್ಮಯ ತಾನಾಗಿ ||1||

ಕನ್ನಡಿ ಕಾಂತಿಯು ಕಂಗೊಳು ಹೊಳೆಯುತ

ತನ್ನೊಳು ತಲೆದೂಗಿ ||2||

ನಿರ್ಗುಣ ಭಾವದಿ ನಿರ್ಭಯದೊಳು ಮನ

ನಿರ್ಮಲ ನಿಜವಾಗಿ ||3||

ಪರಿಪರಿ ಭಾವದಿ | ಪರಮನೊಳಾಡುತ

ಪರವಶ ಪರನಾಗಿ ||4||

ವಿನಯದೊಳು ಇಟಪುರೀಶನ ಸ್ಮರಿಸುತ

ಚಿನ್ಮಯ ತಾನಾಗಿ ||5||

ನಗುತಾನ ಎಂಬುವರೆ ಶರಣ

ನಗದಿರುತಾವ ಎಂಬುವರೇ? ||ಪಲ್ಲ||

ನಗುವ-ಅಳುವ ದ್ವಯ ಭಾವವಳಿದ

ಬಗೆಯ ತಿಳಿಯದ ಜಗದ ಜನರು ||ಅ. ಪಲ್ಲ||

ಅಂದರೇನಾಗುವದು, ಅನದಿದ್ದರೇನು?

ಬಂದು ಬಾರದ, ನಿಂದು ನಿಲ್ಲದ

ಸಂದುಗಡಿಯದೆ ಮನ

ಆನಂದಿಪ ಶರಣಗ ||1||

ಒಲುವಿನ ತಾಯಿ ಮಹಾಮಾಯಿ

ಕಲಿಸುವ ತಂದೆ ನಿಜನಿರಾಳ ವಾಕ್ಯ

ನೆಲೆಯರಿದು ದೃಢದಲಿ ಭಜಿಸುತ

ತಲೆದೂಗುವ ಶರಣಗ ||2||

ನಿಚ್ಚಳವೆಂಬೊ ನಿಜದ ಪ್ರಕಾಶ

ಅಚ್ಚ ಭಕ್ತಿಗೆ ಬೆರೆದ ತಾ ಇಟಪುರೀಶ

ಮೆಚ್ಚಿ ನಡೆವ ಶರಣಗ ||3||

ಹದ ಬಂದಾಗಲೆ ಪದ ಮಾಡಿ ನೀ ಪಡೆ

ಸದಮಲ ಜ್ಞಾನ ಸಂಪೂರ್ಣ

ಅದು ಏನು ಬಲ್ಲಿರಿ ಆತ್ಮ ಜ್ಞಾನ ||ಪಲ್ಲ||

ನಾದ ವಿನೋದ ವಿಲಾಸದೊಳು ಮನ

ಮೇದಿನಿಪುರದೊಳು ಪರಿಪೂರ್ಣ

ಚಿದಮಲ ಮರ್ಮೆಲ್ಲ ಹಸನಾಗಿ ಈಶನ

ಕರುಣದಲಿ ಪಾದಕ್ಕೆರಗುವ ಹಸನ! ||1||

ಮನವರಿಯದೆ ಜನರೆಲ್ಲ ಆಡುವರು

ಮನ ಮುನೀಶ್ವರ ತಾ ಬಲ್ಲ

ದಿನಕರನೊಪ್ಪುವ ತನುವಿನೊಳಗೆ ತಾ

ತಾನೇ ಹಾನ ತಿಳಿರಣ್ಣ ||2||

ಶಿವ ಪೂಜೆಯಾಗುವ ಸ್ಥಲ ಎಲ್ಲ್ಯಾದ

ಭವ ನೀಗುವ ಹುಕುಂ ಎಲ್ಲ್ಯಾದ

ಕವನ ಮಾಡುವ ಕರ್ತೃತ್ವ ಎಲ್ಲ್ಯಾದ

ಅವಿರಳ ಇಟಪುರೀಶನ ಬಲ್ಲ್ಯಾದ ||3||

ಜ್ಞಾನದ ಸವಿಯು ಎಂಥಾದ್ದೋ! ಸು

ಜ್ಞಾನಿ ಸುಪುತ್ರರು ತಿಳಿವಂಥದ್ದು

ಮಾನಹೀನರ ಸಂಗ ಬಿಟ್ಟು ದೂರಾಗಿ

ತಾನೆ ತನ್ನ ಒಳಗೆ ತಿಳಿವಂಥದ್ದು ||ಪಲ್ಲ||

ನಿಜಬೋಧ ನಿಜದರಿವು ಎಂಥಾದ್ದೋ?

ನಿಜವೆಂದು ಗುರುಧ್ಯಾನ ಮಾಡುವದೋ

ನಿತ್ಯಾನಂದದಿ ಸತ್ಯವಂತರು ಬಹಳ

ಪ್ರೀತಿಲಿ ದಯ ಧರ್ಮ ಬಗೆವಂಥದ್ದು ||1||

ನರಜನ್ಮ ಹುಟ್ಟುವುದ್ಯಾತಕೋ?|

ಗುರುಧ್ಯಾನ ಮರೆಯದೆ ಮಾಡುವುದಕೋ

ಪರಿಪೂರ್ಣ ಮನದೊಳು ಪರತತ್ವದನುಭವ

ಅರಿತು ಆಚರಿಸಿ ತೋರುವುದಕೋ ||2||

ಅಟವಿ ನಡು ಪರ್ವತ ಪವಿತ್ರ ನದಿ

ಮಠ, ತೀರ್ಥಯಾತ್ರೆ ಹೋಗುವುದ್ಯಾಕೆ?

ಇಟಪುರೀಶ ತಾನು ಘಟದೊಳಿರಲಿಕೆ

ತಟವಟ ಹುಡುಕ್ಯಾಡುವದ್ಯಾಕೆ? ||3||

ಮಾತು ಕೇಳಬೇಕು ಎಂಥದ್ದು?| ಬಹು

ನೀತಿ ಬೋಧಿಸುವಂಥದ್ದು

ಹತ್ತು ಮಂದಿಯಲಿ ಅರಿತು ಅರಿಯದಂಗ

ಗೊತ್ತು ತನಗೆ ತಿಳಿದಿರುವಂಥದ್ದು ||ಪಲ್ಲ||

ಗುರುವಿನ ಸುಪುತ್ರ ತಾನಾಗಿ

ಗುರುವಿನ ಗುರ್ತು ಬಲ್ಲಂಥದ್ದು

ಮರೆಯದೆ ಮನದೊಳು ಮಂತ್ರವ ಪಠಿಸೆ

ಮಾರ್ಗ ತನಗೆ ತೋರುವಂಥದ್ದು ||1||

ದಾರಿ ಹಿಡಿದು ಸೇರಿ ಉನ್ಮನಿಯೊಳಗೆ

ಪಾರಮಾರ್ಥ ತಿಳಿಯುವಂಥದ್ದು

ಮೇರು ಮಂದಿರ ಪರ್ವತದೊಳಗೆ

ಪೂರ ಪಾಕೀಜಾಗಿರುವಂಥದ್ದು | ಮನ

ಪೂರ ಪಾಕಿಜಾಗಿರುವಂಥದ್ದು ||2||

ದುಷ್ಟ ಗುಣಗಳ ನಷ್ಟವ ಮಾಡಿ

ಶ್ರೇಷ್ಠನಾಗಿರುವಂಥದ್ದು

ಇಟಪುರೀಶನ ಸ್ಮರಣೆಯಲಿದ್ದು

ಘಟದೊಳಗೆ ಕಾಣುವಂಥದ್ದು | ಮನುಜ

ಘಟದೊಳಗೆ ಕಾಣುವಂಥದ್ದು ||3||

ಚಾಳೀಸ ನೋಡಬೇಕೆಂಥದ್ದು | ಶಿವ

ನಾಳ ತಿಳಿದುಕೊಂಬಂಥದ್ದು ||ಪಲ್ಲ||

ಏಳು ಜನ್ಮದ ಪಾಪವು ತಾನೇ

ಕೋಳು ಹೋಗುವಂಥದ್ದು ||ಅ.ಪಲ್ಲ||

ಭವಭವಾಂತರ ತಿರುಗುವ ಬಾಧೆ

ಅವಿರತ ತಪ್ಪಿಸುವಂಥದ್ದು

ಜೀವಭಾವ ಹೋಗಲಾಡಿಸಿ ತಾನು

ಜೀವೇಶನ ತಂದು ಕೊಡುವಂಥದ್ದು ||1||

ಸಾಕಾರನಿಷ್ಠೆ ಭೂತಂಗಳೊಳನುಕಂಪೆ

ಆತ್ಮದೊಳಗೆ ತಿಳಿಸುವಂಥದ್ದು

ಆಕಾರವಿಲ್ಲದ ನಿರಾಕಾರದ ಅರಿವು

ಏಕ ಪ್ರಕಾರ ತೋರುವಂಥದ್ದು ||2||

ಗುರುವು ತೋರಿದ ಅಖಂಡ ಜ್ಞಾನವ

ಗುಪ್ತದಿ ತಿಳಿಯುವಂಥದ್ದು

ಇಟಪುರೀಶನ ದರುಶನ ನಿರಂತರ

ಘಟದೊಳು ಬಿರುವಂಥದ್ದು ||3||

ಬಹು ದೂರ ಬಹು ದೂರ ಬಹು ದೂರ

ಭವ ಸಾಗರ ಕಡೆ ದಾಟೊ ವ್ಯಾಪಾರ ||ಪಲ್ಲ||

ನಾನು ನೀನೆಂಬುದು ಅಳಿದು | ನಿಜ

ಜ್ಞಾನಬೋಧದ ನೆಲೆಯ ತಿಳಿದು

ಸಹೃದಯ ಭಾವದಿ ಸಹಜಾನಂದದಿ

ತಾನೇ ತಾನು ಬಯಲಾಗುವ ತನಕ ||1||

ಗುರು ಮಂತ್ರದಿ ಮನಮರ್ದಿಸಿ ತನ್ಮಯ

ಪರವಶದೊಳು ತಾ ಪರಿಪೂರ್ಣನಾಗಿ

ಅರುವಿನಿಂದಲೆ ತ್ರಿಪುಟಿ ನೋಟಕ

ಗುರು ಸಾಧನ ಗುರಿ ದೊರೆಯುವ ತನಕ ||2||

ನೀರ ಮೇಲಿನ ಗುರುಳಿ ಪ್ರಕಾರ

ನಿಶ್ಚಯಿಸಿದೆ ಈ ಘಟ ವಿಸ್ತಾರ

ಪಾರಾಗಲು ಇಟಪುರೀಶನವರ

ಪರಮ ಸೌಭಾಗ್ಯ ಪಡೆಯುವ ತನಕ ||3||

ಇದು ನೋಡೋ ಹೊಸ ಆಟಾ

ಇದರನುವು ತಿಳಿದರೆ ಹಸನಾಟ ||ಪಲ್ಲ||

ಸದ್ಗುರು ಶಿಷ್ಯರು ದ್ವಯರು ಸಮಾನ

ಸಾಧಿಸಬೇಕು ಬ್ರಹ್ಮಾಸ್ಮಿ ಜ್ಞಾನ

ಸದಾಸದಭಕ್ತಿ ಏಕೋ ಸಂಧಾನ

ಸದಾಮುಕ್ತಿಗೆ ದ್ವಾರಯಿಕೋ ಜಾಣ ||1||

ಬಾಗಿ ಬಾಗಿ ನಡೆವುದು ಪಾಡೋ | ಕೈ

ಲಾಗದವನ ಗೆಳೆತನ ಬ್ಯಾಡೋ

ಯೋಗಿ ಶರಣನಲಿ ಸುಳಿದಾಡುತ ಸಾಗಿ

ಪೋಗಿ ಮುಂದಕ ಶಿವಲಿಂಗನ ಕೂಡೊ ||2||

ಕೆಳಗೆ ನೋಟ, ಮೇಲಿನ ಮಾಟ

ಎಡಬಲ ಕೂಟ ಅಷ್ಟದಳ ಪೀಠ

ಮನೋಹರ ಇಟಪುರೀಶನ ಕಡೆ ಆಟ

ಮರೆತರೆ ಅದು ತಾ ಮಹಾ ವಿರಾಟ ||3||

ಆಟ ಹೂಡೆಲೊ ಬೈಲಾಟ ಹೂಡೆಲೊ ||ಪಲ್ಲ||

ಆಟ ಹೂಡೆಲೊ ತ್ರಿಕೂಟ ಸ್ಥಾನದಲಿ

ನೋಟ ಬಲಿದು ಕೋಟಿ ಭಾನು ಪ್ರಕಾಶದ ||ಅ.ಪಲ್ಲ||

ಮೇಲು ಛಾವಣಿಗೊಂಡು

ಮೇಲ್ಗಿರಿಯ ಮೂಲ ತಿಳಕೊಂಡು

ಘಾಲು ಮೇಲಾಗದೆ ಭವ ಬಂಧನದಿ

ಲೋಲನಾಗದೆ ಭವ ನಿವಾರಣದ ||1||

ನಾನತ್ವವ ಬಿಟ್ಟು ಸಕಲ

ಮಾನವತ್ವವ ತೊಟ್ಟು

ಅನುಪಮ ಮಹಾಂತನ

ಘನಕೆ ಘನ ಅರಿಯುವ ||2||

ಶೂನ್ಯಕೆ ಶೂನ್ಯ ನಿಶೂನ್ಯ

ನಿರಾಲಂಬ ಶಾಂತಿಯೊಳಗೊಂಡು

ಮನಚಿದ್ರೂಪ ಇಟಪುರೀಶನ ಕೃಪದಿ

ಚಿಂತೆಯಳಿದು ನಿಶ್ಚಿಂತನಾಗುವ ||3||

ನರಜನ್ಮವ್ಯಾತಕೋ ಪರಮನ ಕಾಣದ

ನರಜನ್ಮವ್ಯಾತಕೋ ||ಪಲ್ಲ||

ಗುರುಭಜನೆ ಗುಪ್ತದಲಿ ಮಾಡೊ

ಪರಿಹರಿಸುವ ತಾ ಪಾತಕವನ್ನು

ಕಿರಿಕಿರಿ ಸಂಸಾರ ಶರಧಿಯಲದ್ದಿ

ಇರಬಾರದೆಂಬಂಥ ಅರಿವು ಇಲ್ಲದ ||1||

ವೇದಶಾಸ್ತ್ರ ಪುರಾಣ ಪಠಿಸಿಯದರ

ಭೇದವರಿಯದೆ ಬರೆ ಓದಿದರೇನೋ!

ಸಾಧಿಸಿ ಸದ್ಗತಿ ಪಡೆಯದೆ ಭಾವ

ಬಾಧೆಯಲಿ ಭವಭವ ತಿರುಗುವ ||2||

ಬಲದಿಂದೊಬ್ಬರ ಹಲವು ನೀತಿಗಳ

ತಿಳಿಯ ಹೇಳಿದರೆ ಫಲವೇನೋ

ಇಳೆಯನಾಳುವ ಇಟಪುರೀಶನ

ಒಲಿಸುವ ಬಗೆಯ ಅರಿಯದನ್ನಕ ||3||

ಸಂತೆ ಸಂಸಾರ ನೋಡಣ್ಣ | ನೀ

ಹೊತ್ತು ಮಾರಿಕೊಂಡ್ಹೋಗಣ್ಣ

ಸಂತೆಗೆ ಬಂದಿದಿ ಚಿಂತೆ ಯಾಕೋ

ಶಿವಗ್ಯಾಕ ಬೈತಿದಿ ಹುಚಗೋಟಿ ||ಪಲ್ಲ||

ಹೆಂಡರು ಮಕ್ಕಳು ಯಾರಣ್ಣ?

ಗಂಡಗ ವೈರಿ ನೋಡಣ್ಣ

ಭಂಡು ಮಾಡುವರು ನಿನಗಣ್ಣ

ಖಂಡಿತ ಈ ಮಾತು ತಿಳಿರಣ್ಣ ||1||

ರೊಕ್ಕ ಗಳಿಸಿ ಮಕ್ಕಳಿಗುಣಿಸಿ

ಮುಕ್ಕಣ್ಣನ ನೆನಿಯಬೇಕಣ್ಣ

ಲೆಕ್ಕ ನೋಡಿ ಮನವಕ್ಕರದಿಂದ

ಸಿಕ್ಕು ಬಿಡಿಸಿಕೊಂಡ್ಹೋಗಣ್ಣ ||2||

ಚಂಡಿ ಮಾತಾಡ ಬ್ಯಾಡಣ್ಣ | ಇವ

ಪುಂಡುಗಾರನೆಂಬುವರಣ್ಣ

ದುಂಡುಮಲ್ಲಿಗೆ ಇಟಪುರೀಶನ

ಕಂಡು ಒಗೆತನ ಮಾಡಣ್ಣ ||3||

ಸ್ಥಿರವಲ್ಲ ದ್ರವ್ಯ ಸ್ಥಿರವಲ್ಲ

ಸ್ಥಿರವೆಂದು ನಂಬಿದರೆ ಸ್ಥಿರವಾಗುವದೇನೋ ||ಪಲ್ಲ||

ಅಸ್ಥಿರದೇಹ ಸುಸ್ಥಿರವಾದುದಲ್ಲ

ವಸ್ತಿಕಾರನಂತೆ ಹೊಯಿದಾಡುವಿಯಲ್ಲ

ಹಸ್ತು ಬಂದವರಿಗೆ ಅನ್ನ ನೀಡದ ಖೋಡಿ

ಎಷ್ಟು ಗಳಿಸಿದರೇನು? ||1||

ನೆಂಟರ ಬೀಗರ ನಂಬಬ್ಯಾಡ ನೀ

ತಂಟೆಕೋರ ಅವರು ತೊಂಟಿ ತೆಗೆವರು

ಕಂಟಕಗಳು ಬಂದುಕಾಡುವ ಕಾಲಕ್ಕೆ

ನೆಂಟರು ಬೀಗರು ತಾ ನಗುವರಲ್ಲ ||2||

ತಾನು ಮಾಡಿದ ಕರ್ಮ ತನಗೆ ಬಂದಿರಲಿಕ್ಕೆ

ತಾನು ಭೋಗಿಸದೆಯೇ ಗೊಣಗಾಟವ್ಯಾಕೋ

ನಾನು ಗೆದ್ದೆನೆಂದು ಶಾನೆ ನಗುತ್ತಿದ್ದರೆ

ತಾನು ಮೆಚ್ಚುವನೇನು ಇಟಪುರೀಶ ||3||

ಅರಿವು ಮರಿಯದಲಿರುವುದು ಮಹಾನಂದಾ |

ಜೀವಾತ್ಮಾ ನೀನು ನರಕ ಸೇರದಿರಲು ಪರಮಾನಂದಾ

ಅರುವನೆ ಮರಿಯಲು ನರಕಕ್ಕೆ ಬೀಳಲು

ಸೆರೆ ಬಿಡಿಸುವರ್ಯಾರೊ ದೊರಿ ಮಗನಾದರು ||ಪಲ್ಲ||

ನಾದ ವಿನೋದದಿ ಆಲಿಸಿ ಕೇಳಿ |

ಆದಿ ಅಂತ್ಯಯಲಿ ಶೋಧಿಸಿ ಸವನಿಸಿ

ವಾದ ಭೇದಗಳ ಬಾಧಿಗೆ ನಿಲ್ಲದೆ

ಸಾಧಕದೊಳು ಗುರುವು ಸಾಕಾರಿರುವನೋ ||1||

ನೋಟದೊಳು ನೋಟವ ನಿಲಿಸಲಿಬೇಕೋ |

ನೋಟ ನಿಲಿಸಿ ಕೂಟ ಲಿಂಗಾಂಗವ ಕೂಡಿಸಬೇಕೋ

ತಾಟಕ ಬೂಟಕ ಬಯಸಿ ಬೆರಿಯದಿರೆ

ಕೀಟ ಭೃಂಗ ನ್ಯಾಯವನು ನೀ ಸಾಧಿಸೆಲೋ ||2||

ಜರೆಯು ಮರಣವು ಬಿಡಲಿ ಬೇಕೋ |

ಜೈ ಇಟಪೂರೀಶನ ಶರಣರ ಸಂಗವ ಪಡೆದಿರಬೇಕೋ

ಪರಿಪರಿ ಅಗಲದೆ ಪ್ರಭುರಾಯನ ನೀ

ಪರಬ್ರಹ್ಮನೊಳು ಪ್ರಾರ್ಥನೆ ಸಾರುತ ||3||

ಬೊಗರಿ ನೋಡಿರೇ ಭಲೆರೆ ಬೊಗರಿ ನೋಡಿರೆ |

ಬೊಗರಿ ನೋಡಿರಿ ಈ ತನು ನಗರದೊಳು ನರ್ತನ ಮಾಡಿ

ಹೆಗರಿ ಹೋಗುವ ಕಾಲಕ್ಕೆ ಬಲು

ಹಗರಣದಿಂದ ಆಡಿ ಹೋಗುವ ||ಪಲ್ಲ||

ಎಂಥ ಮಹಿಮಾ ಇದರ ಮಳಿಯು |

ಜಂತ್ರ ಜಾಳಿಗಿಲ್ಲದೆ

ಶಾಂತಮೂರ್ತಿ ಸರ್ವ ಜನರ

ಅಂತರಂಗದೊಳಾಡುತಿರುವಾ ||1||

ಹಂಬಲ ಅವಗುಣ ಅಳಿದು |

ಗಂಭೀರ ಘನವಂತರಾಗಿ

ಅಂಬರ ದ್ವಾರದ ಅಗಾಧ ಅನುಭವ

ನಂಬಿದ ನಿಜದಲ್ಲಿರುವಾ ||2||

ಧರೆಯೊಳು ಇಟಪೂರೀಶನ |

ವರವ ಪಾಲಿಸಿ ಒಲಿದು ಬಲಿದು

ಪರಮ ಸುಖದಿ ಪರವಶದಲಿದ್ದು ತಾನೂ

ಪರಿ ಪರಿ ಪರಮಾತ್ಮನಾಡುವಾ ||3||

ಮನ ನಿನಗೊಪ್ಪಿಸಿದೆನೋ ಗುರುರಾಯ |

ಮನಮೋಹನಯ್ಯಾ ಮನ ಒಪ್ಪಿಸಿದೆನೋ

ಅನುಮಾನಿಸದೆ ಮನ ಒಪ್ಪಿತ

ಮನಕೆ ಮನವೇ ಸಾಕ್ಷಿ ||ಪಲ್ಲ||

ವೈರದಲ್ಲಿ ಒತ್ತೆ ಬಿದ್ದಿತು ಅವರ ಕೈ ಸೇರಿತು |

ಐದಾರು ಮಂದಿ ಇದ್ದರು ಬಲು ಜತ್ತು

ಧೀರನು ಎನಗಾ ತೋರಿದ ಜ್ಞಾನ ವಿ

ಚಾರ ಖಡ್ಗದಿ ಠಾರ ಹೊಡೆದಿ ಮನ ||1||

ಎಂಟು ಮಂದಿ ಭಲೆ ಸರ್ದಾರರೋ ಬಹು |

ತೊಂಟರೋ ಅವರೊ ಅಂಟಾಗಿದ್ದರು ಹತ್ತು

ಕುಂಭ್ಹೇರು ಗಂಟಗಳ್ಳರಲ್ಲಿ ಗಂಟು ತಕ್ಕೊಂಡು ತಂಟೆ

ಅರುವಾಯಿತು ಕಂಟಕ ಕಡಿದುಕೊಂಡು ||2||

ಮನ ಒಪ್ಪಿಸಲು ಮಾಣಿಕವನು ಕೊಟ್ಟ |

ಮಾಯವನ್ನು ಸುಟ್ಟು ಅನುಭವದ ಅಮೃತ

ಸವಿಯೊಳಿಟ್ಟ ವಿನಯಾತ್ಮಕ ಪಾವನ

ಮಾಡೆನ್ನನು ಘನವರ ಇಟಪೂರಿ ಮನೋಹರನೆ ||3||

ಬಯಲಿಗೆಳೆಯಬ್ಯಾಡವೊ |

ಬರಿದು ಅಂತರಂಗದಿ ಕೂಡೆಲೊ ||ಪಲ್ಲ||

ಜನರೊಳು ಜಾಗ್ರದೊಳಾಡಿ ಜಾರತನವ ತೋರದೆ |

ಮನೋಹರನ ನೀ

ಮರೆಯದೆ ಕೂಡೆಲೋ ||1||

ಮೇಲುಗಿರಿಯ ಮಾಲಿನೊಳು |

ಮೀರಿದ ಉನ್ಮನಿಯಲ್ಲಿ

ಆರು ಕಾಣದಲ್ಲಿರುವದು ಪಾಡೆಲೋ ||2||

ಇರುಳು ಹಗಲು |

ಚರಣದೊಳಗಿರುವೆ ಇಟಪೂರೀಶ ನೀ

ಶರಧಿಯೊಳೆನ್ನ ಪಾವನ ಮಾಡೆಲೋ ||3||

ಛೀ ಛೀ ನಿಂದ್ಯಾತರ ಜನ್ಮವು

ನಾಚಿಕಿ ಬಾರದು ಎಲೆ ಮನವೆ

ಖೇಚರಿ ಧನುರ್ವಾಯು ಆಚಾರ್ಹೇಳಬಲ್ಲಿ

ನೀಚತೆ ನಿನ್ನೊಳಗೆ ನೀ ತಿಳಿಯದವನು ||ಪಲ್ಲ||

ಆಗೋ ಈಗೋ ಹೋಗುದಂತೀದಿ | ಮಾಯಾ

ಸೋಗಿನೊಳಗೆ ಮುಳುಗಿ ಕುಂತೀದಿ

ನಾಗಭೂಷಣೆಂಬೊ ನಾಮವ ನೆನೆಯದೆ

ಗೂಗ್ಯಾಗಿ ಭವಭವ ತಿರುಗತೀದಿ ||1||

ದವಡಿ ರುಚಿಯ ಸವಿ ಕಲತೀದಿ

ಪ್ರವರ್ಧ ಸಾಧುರ ಸಂಗ ಮರತೀದಿ

ಲೇವಡ್ಯಾಗದು ಮುಂದೆ ತಿಳಿಯಲ್ಹೋದಿ

ಕವಡಿಗಿ ಸಲ್ಲದು ಈ ನಿನ್ನ ಬುದ್ಧಿ ||2||

ಅರಿವು ಗಳಿಸದೆ ನೀನು ಅಳತೀದಿ | ಸುಳ್ಳೆ

ಮರೆವಿನೊಳಗೆ ಹೊತ್ತು ಗಳಿತೀದಿ

ಧರೆಯೊಳಧಿಕನಾದ ಇಟಪುರೀಶನ ಪಾದ

ಕ್ಕೆರಗದೆ ಕಾಡಡವಿ ಬೀಳತೀದಿ ||3||

ಸಾಕು ಬಿಡೊ ಈ ಛಲವನ್ನು

ಮುಂದಾಗುವ ಮಾತು ಅರಿವಲ್ಲಿಯೇನು?

ಹಲವು ಭವದೊಳು ಬಂದು ನೀನು

ಈ ಲೋಕದ ಜನರ ನಿಂದೆ ಮಾಡಿದರೇನು? ||ಪಲ್ಲ||

ಪಂಚಾಚಾರವು ಇಲ್ಲಂದಿ

ಪಂಚಾಚಾರಿಲ್ಲದೆ ಎಲ್ಲಿಂದ ಬಂದಿ?

ಚಾರಿ ಹಿಟ್ಟು ಮನೆಮನೆ ಬೇಡಿ ತಂದಿ

ಹಂಚಿನಾಗ ಸುಟ್ಟು ನೀನೇ ತಿಂದಿ ||1||

ಸಕಲ ಶಾಸ್ತ್ರವ ಹೇಳುವಿ ನೀ

ಬಕ ಪಕ್ಷಿ ಧ್ಯಾನವ ಮಾಡುವಿ ನೀ

ತಕತಕ ಥೈಥೈ ಕುಣಿಯುವಿ ನೀ

ಪಕಪಕ ಒದ್ದಾಡಿ ಸಾಯುವಿ ನೀ ||2||

ಧರೆಯೊಳು ಇಟಪುರ ದಯವಾಸ

ಗುರು ಬಸವಲಿಂಗ ಶಾಂತೇಶ

ನೆರೆ ಕಂಡು ಭಜಿಸು ಮನ ಉಲ್ಲಾಸ

ಉರಿಯುಂಡ ಕರ್ಪೂರ ನಿಜ ನಿವಾಸ ||3||

ನಾರಿ ಪುರುಷನನು ಮೀೀರಿ ನಡೆದ ಮೇಲೆ

ಯಾತರ ಸಂಸಾರಿದು ||ಪಲ್ಲ||

ಕೇರಿ ಕೇರಿ ಕರಕರಿಸುವುದ ಕೇಳಿ

ಯಾರಿಗಾದರೂ ಅಪಹಾಸ್ಯ ತೋರ್ಪುದು ||ಅ.ಪಲ್ಲ||

ತಾನೇ ತರ್ಕದಲಿ ತನ್ನವರ ನಿಂದೆಯೆಣಿಸಿ

ತಾನೇ ಬಾಯಿ ಬಡಿಯುವದು

ಮಾನಾಭಿಮಾನದ ಖೂನವನರಿಯದೆ

ಶ್ವಾನನಾಗಿ ಬೊಗಳುವದು

ಮಾನವರೊಳು ಮಹಾಜ್ಞಾನಿಯೆನಿಸಿದರೂ

ಮಾನಿನಿ ಮುಖಮಸಿ ಮಾಡುವಳು ||1||

ಬುದ್ಧಿಗೇಡಿ ಇಂಥ ಬುದ್ಧಿ ಬ್ಯಾಡೆಂದು

ಬುದ್ಧಿ ಹೇಳಿದರೂ ಕೇಳಳು

ಎದ್ದೆದ್ದು ಹೊರಳಿಸಿ ವಾಲಗಗೈದರೂ

ಗುದ್ದಿಗವಳು ಹೆದರಳು

ಬುದ್ಧಿವಂತರ ಬುದ್ದು ಮಾಡುವ ಹೆಣ್ಣು

ಮುದ್ದು ಮುಖದ ಮೂಳ ಏನು ಫಲ ||2||

ಕಾಮಿನಿಯಳ ಗುಣ ಕಾಸಿಗೆ ಸಲ್ಲದು

ಕಾಲ ಮೃತ್ಯುವಾಗಿಹಳು

ಪ್ರೇಮಿಸಿದ ಸತಿಯಲಿ ಪ್ರೇಮವಿಲ್ಲದಿರೆ

ಮಾಮಾಯೆ ಯಾರಿಗೂ ತಿಳಿಯದು

ನಾಮ ಇಟಪುರೀಶನ ಸ್ಮರಣೆಯೊಳಿರುತಿರೆ

ನೇಮಿಸಿದ ಸತ್ಯ ಶಾಶ್ವತವು ||3||

ಕೇಳ್ತಮ್ಮ ಕೇಳೆಲೋ | ಇದು

ಕಾಳಗತ್ತಲೆಯಾದೆಲೋ ||ಪಲ್ಲ||

ಕೇಳು ಕಿವಿಗೊಟ್ಟು

ಕೇಳುವ ಬಗೆ ಹೇಳುವೆನು

ಕೇಳದಿದ್ದರೆ ಬಗೆ ಹೇಳುವೆನು

ಕೇಳದಿದ್ದರೆ ನಾಳೆ ಯಮನವರು

ಕಾಳಾಗಿ ಕಾಡುವರೆಲೋ ||ಅ.ಪಲ್ಲ||

ನಾಲಗೆ ಸವಿಯಿಂದ ನರಕದ ಸಂಗ ಈ

ಬಾಲ ಖಯಾಲಿ ಬಿಟ್ಟು ಬಿಡು ನೀ

ಮೇಲು ಮಂದಿರ ನಡುನಾಡಿಯಮೃತ

ಕೀಲಿನೊಳು ಹರನೊಡನಾಡು ಜಾಣ ||1||

ಬಲು ಬಲು ಪರಿಯಲಿ ಬಲಿದು ಆಧಾರವ

ಭಾಳಾಕ್ಷನೊಳು ತೊಡರಿ ಒಲಿಸಿಕೊಳ್ಳೊ

ಅಲ್ಪ ಜ್ಞಾನದಿಂದ ಅರಿತರೆ ಫಲವಿಲ್ಲ

ಕಲ್ಪವೃಕ್ಷವನೇರಿ ಕಡೆಯಾಗೊ ಜಾಣ ||2||

ನಾನು ಎಂಬ ಮಹಾಕಾನನ ಕಡಿಯದೆ

ಏನೇನೋ ಮಾಡಿದಲ್ಲೇನಾದೋ

ಸ್ವಾನುಭಾವದಿ ತಾನು ತಾನೇ ತಾನಾದಲ್ಲಿ

ಜ್ಞಾನಿ ಇಟಪುರೀಶ ಕೂಡುವನು ಜಾಣ ||3||

ಕೆಡಬ್ಯಾಡಿರಯ್ಯ ಕಾನನ ಬಿದ್ದು |

ಕೆಡಬ್ಯಾಡಿರಯ್ಯ ||ಪಲ್ಲ||

ಹಿಂದಿನ ಪುಣ್ಯ ಬಲದಿಂದೆ

ಹೊಂದಿದೆ ಈ ಸಿರಿಯ ತಂದೆ

ಮುಂದಿನ ಗತಿ ಕಾಣದಿರುವನು ಚಂದೆ

ಹಂದಿಯಂತೆ ಮುಣಿಗಾಡುದು ಒಂದೆ ||1||

ಒಂದೊಂದು ಜನ್ಮದಿ ಹಾ ಹೋ ಎಂದಿ

ಬಂಧನಕೊಳಗಾಗಿ ತಿರುತಿರುಗಿ ಬಂದಿ

ಮುಂದರಿಯದೆ ಭವಭವದೊಳು ಬೆಂದಿ

ಹೊಂದು ಗುರುಪಾದಕೆ ಇಂದಾದರೂ ನಂಬಿ ||2||

ಮನಿಮಾರು ಮಡದಿ ಮಕ್ಕಳು ಕಂಡು

ಮನ ಬಂದ ರೀತಿಲಿ ಕುಣಿವರುಂಡುಂಡು

ಯಮನವರು ಒಯ್ಯುವಾಗ ನಿನಗೆ ಎಳಕೊಂಡು

ಮನೆಮಡದಿ ಬರುವಳೆ ನಿನ್ನೊಡಗೊಂಡು ||3||

ಅರುವಿನೊಳಿರುವುದು ಆತ್ಮಜ್ಞಾನ

ಅರಿತರೆ ಮನುಜನಿಗೆ ಬಹುಮಾನ

ಖರೆಯೆನಿಸಿ ಕಾಲಗಳೆದವ ಜಾಣ

ಅರುಹುಗೊಂಡುದಕೆ ಕುರುಹೆ ಖೂನ ||4||

ಮನದೊಳು ಗುರೂಪದೇಶ ಗುರ್ತನು

ಮನನ ನಿಧಿಧ್ಯಾಸ ಮಾಡಿಕೊ ಅನುವನು

ಮನದೊಳಗಿರುವ ಇಟಪುರೀಶ ತಾನು

ಹಾನಿ ಲಾಭಗಳನು ತಾನೆ ತೂಗುವನು ||5||

ಕೆಣಕಬ್ಯಾಡಪ್ಪ ಕೆಣಕಿ ತಿಣಕಬ್ಯಾಡಪ್ಪ ||ಪಲ್ಲ||

ಕೆಣಕಿದಂಗೆ ತಿಣಕತೀದಿ ಅಣಕಬ್ಯಾಡಪ್ಪ

ಎಣಕಿಯಿಂದ ಕಣಕ ಉಂಡು

ಒಣಕಿ ಹಿಡಕೊಂಡ್ಹೋಗಪ್ಪ ||ಅ.ಪಲ್ಲ||

ಹಣವ ಗಳಿಸಿ ಉಣಬೇಕಪ್ಪ

ದಾನ ಧರ್ಮ ಮಾಡಬೇಕಪ್ಪ

ದಾನ ಮಾಡದೆ ದೀನನಾದರೆ

ಏನೂ ಸಿಗದಿಲ್ಲ ನೋಡಪ್ಪ ||1||

ಸಾಧುರ ಸಂಗ ಮಾಡಪ್ಪ

ಸಾಧುರ ಸಂಗವೆ ಲಿಂಗಪ್ಪ

ಸಾಧುರ ಸೇವಾ ನಿಷ್ಠಿಲಿ ಮಾಡಿ

ಭೇದ ತಿಳಕೋಬೇಕಪ್ಪ ||2||

ವಾದದ ವಾಕ್ಯವ ಬಿಡಪ್ಪ

ಸಾಧಿಸಿ ತಿಳಿದು ನೋಡಪ್ಪ

ಶೋಧಿಸಿ ಮನವ ನಾದವ ಕೇಳಲು

ಇಟಪುರೀಶನೆ ನೀನಪ್ಪ ||3||

ಹ್ಯಾಂಗಾದೀತು ಜನ್ಮ ಸಾರ್ಥಕ | ಭವ

ಹಿಂಗದೆ ಬಾಳ್ವುದು ಅಸಾರ್ಥಕ ||ಪಲ್ಲ||

ಹಿಂದೆ ಮಾಡಿದ ಪುಣ್ಯದಿಂದೆ

ಇಂದು ಬಂದೆ ಮನುಜ ಜನ್ಮದಿಂದೆ

ಮಂದಮತಿ ಮಾಯೆ ಸಂದು ಗಡಿಯದು ನಿನ್ನ

ಎಂದಿಗೆನಿಸಿಕೊಂಬೆ ಗುರುಜ್ಞಾನಿಯೆಂದು ||1||

ಗುರು ಮುಟ್ಟಿ ಗುರುವಾಗಬೇಕೋ

ಗುರುಲಿಂಗ ಜಂಗಮ ಭಾವ ನೆಲೆ ತಿಳಿಯಬೇಕೋ

ಗುರು ಹಿರಿಯರಲಿ ಭಯ ಭಕ್ತಿ ಇರಬೇಕೋ

ಗುರುಪುತ್ರನೆನಿಸಿಕೊಂಡು ಗುಡುಮ್ಹಂಚಿಕಿ ಯಾಕೋ ||2||

ಕುಟಿಲ ಕುಹುಕತನ ಬ್ಯಾಡೋ | ಸುಳ್ಳೆ

ವಟವಟ ಒದರುತ್ತ ಹೊತ್ತುಗಳೆಯಬ್ಯಾಡೋ

ಘಟಿತ ಗಂಭೀರ ಗುಣ ಪಟುತರ ಬಿಡಬ್ಯಾಡೋ

ಇಟಪುರೀಶನ ಮರೆತು ಇರಬಾಡೋ ಮೂಢ ||3||

ಯಾರಗೊಡವಿಯೇನು | ಏ ಮಾನವ ನಿನ

ಗ್ಯಾರ ಗೊಡವಿಯೇನು?

ಮಾರಹರನ ಮನ ಸಾಧಿಸಿ ಭಜಿಸೆಲೊ

ಯಾರ ಗೊಡವಯೇನು ||ಪಲ್ಲ||

ಮಾಯಾ ಪ್ರಪಂಚದ ಮಾಯವ ತಿಳಿದು ನೀ

ಕಾಯದ ಗುಣಗಳ ಕಳೆದುಳಿದು

ಆಯಾಸ ಪಡದೆ ನಿರಾಳದಿ ಬೆರಿಯೊ

ಯಾರ ಗೊಡವಿಯೇನು ||1||

ಗುರು ಧ್ಯಾನವನು ಅನುದಿನ ಪಠಿಸುತ

ಮರೆಯದೆ ಕ್ಷಣ ಕ್ಷಣ ಮನದೊಳಗೆ

ಪರಮಾನಂದದಿ ವರ ಗುರುವಿನೊಳಿದು

ಯಾರ ಗೊಡವಿಯೇನು ||2||

ಅಂಬಿಗ ಗುರಿಯಂತೆ ನಂಬಿ ನಿಜಗುರು
ಸಾಂಬನ ಸ್ಮರಿಸುವ ಸೇವೆಯನಗಲದೆ
ಇಂಬುಗೊಂಡಿರು ಇಟಪುರೀಶನೊಳು
ಯಾರ ಗೊಡವಿಯೇನು ||3||

ಹೋಯಿತು ಮುತ್ತು ಹೋಯಿತು
ಆಯಿತು ವ್ಯಾಳೈ ||ಪಲ್ಲ||

ಮುತ್ತು ಹೋದ ಮೇಲೆ ಸತ್ತ ಹೆಣಕೆ ಕುಂತು
ಅತ್ತತ್ತು ಕರೆದಲ್ಲಿ ಏನೂ ಇಲ್ಲ
ಜ್ಯೋತಿ ಹೋದ ಮಾಲೆ ಕತ್ತಲಾಯಿತು ಮನೆ
ಅತ್ತು ಹಲವಾಡಿದರೂ ಹೊತ್ತೊಯ್ಯಬೇಕು ||1||
ಪಡೆದ ಪ್ರಾರಬ್ಧವದು ಯಾರಿಗೂ ಬಿಡದು
ಒಡೆಯ ಮೃಡನನ್ನು ಬೈಯ್ಯುವದ್ಯಾಕೆ?
ಕಡ ತಂದ ವಸ್ತುವ ಕೊಡದೆ ಕೊಟ್ಟವರಿಗೆ
ಹೊಡೆದಾಡಿ ಬಡಿದಾಡಿ ಕಡೆಗಾಗುದ್ಯಾಕೆ ||2||
ತನ್ನ ಮಕ್ಕಳೆಂದು ತೆಕ್ಕೀಲಿ ಹಿಡಕೊಂಡು
ಇನ್ನೆಷ್ಟು ಎತ್ತಿಕೊಂಡು ಮುದ್ದಾಡುವದೊ?
ತನ್ನ ಮಕ್ಕಳು ಯಾರೊ, ಮಕ್ಕಳು ತನಗಾರೋ
ಇನ್ನು ಮುಕ್ಕಣ್ಣ ಬಲ್ಲ ತಾ ಇಟಪುರೀಶ ||3||

ಕಜ್ಜಿಯೆಂಬುದು ಪರಮ ತುರಿಯು
ಲಜ್ಜೆ ನಾಚಿಕೆ ಬಿಟ್ಟಂಥ ಸಿರಿಯು ||ಪಲ್ಲ||
ಹೆಜ್ಜೆ ಹೆಜ್ಜೆ ಹೆದರವಲ್ಲದು
ಕಜ್ಜಿ ಬಿಜ್ಜಿ ಕವರೇ ಕವರುತ
ಗಿಜ್ಜಿಗಿಜ್ಜಿ ತಾನಾದರೂ ನಿನ್ನ
ಅಜ್ಜ ಮುತ್ತ್ಯಾರಿಗೂ ಬಿಡೆನೆಂಬುವದು ||ಅ.ಪಲ್ಲ||
ಆನಂದದತಿರೇಕದಾಶ್ಚರ್ಯ
ಎನ್ನಿಂದಾಗದು ಹೇಳಲಾಚರ್ಯ
ಚಿನ್ಹ ಕಳೆಯದು ಸಣ್ಣ ಗುಳ್ಳಿಯು
ಚೆನ್ನಾಗಿರುವ ಬೆರಳ ಸಂದಿಯಲಿ
ಮನ್ನಿಸಿ ಮರ್ದನ ಮಾಡಲು
ಇನ್ನೂ ತುರ್ಸೆ ತುರ್ಸು ಎನ್ನುವದು ||1||
ತಲ್ಲಣಿಸಿ ಸೊಲ್ಲು ತಡೆದ ಸಮಯವೋ
ಮೆಲ್ಲಮೆಲ್ಲನೆ ತೊಡೆಯ ಸಂಭ್ರಮವೋ
ಎಲ್ಲ ಪರಿಯಲಿ ಬರುವ ಬಾಧನೆ
ಬಲ್ಲಬಟ್ಟಿ ಬರಕು ಬರಕುತ
ಬೆಲ್ಲ ಮೆದ್ದ ಕೋತಿಯಂತೆ
ಹಲ್ಲು ಕಿಸಿದು ನಗುವಂಥ ||2||
ಕಜ್ಜಿಯೆಂಬುದು ಪರಮ ತುರಿಯು
ಲಜ್ಜೆ ನಾಚಿಕೆ ತೊರೆದಂಥ ಸಿರಿಯು
ಇಕೋ ಇಟಪುರೀಶನ ಕರುಣ
ಸಿಕ್ಕನೊಬ್ಬ ಮಹಾಕಾಲ ಶರಣ ||3||
ಆಡೊ ಗುಗ್ಗಳವ ಅಡಿಗಡಿ
ಗಾಡಿಸೊ ಗುಗ್ಗಳವ ||ಪಲ್ಲ||
ಈಡಾ ಪಿಂಗಳವೆಂಬ ಜೋಡಿನ ಗೆಳೆಯರು
ಕೂಡಿಕೊಂಡು ನಡುನಾಡ ಬೆಳಗಿನೊಳು ||ಅ.ಪಲ್ಲ||
ಎಚ್ಚರದಲಿ ನೋಡೋ ಇಳೆಯಂಬರ
ಬಿಚ್ಚಿ ಬಯಲು ಮಾಡೋ
ಪಶ್ಚಿಮ ಪೀಠದ ನಿಶ್ಚಯ ಪಥವಿದು
ತುಚ್ಚ ಮಾಡದೆ ಕಿಡಿಕಿಡಿ ಜಯ ಜಯಾಯೆಂದು ||1||
ಆರು ಸ್ಥಲವ ಹಿಡಿಯೊ ಅರಿತೈದು
ಆರು ಅಕ್ಷರ ನುಡಿಯೊ
ಭೇರಿ ನಗಾರಿ ನೌಬತ್ತು ಬಾಜಿಗಳಿಂದ
ಕೇರಿಕೇರಿ ಕಕ್ಕಲಲಲ ಎನ್ನಲು ||2||
ಸಟೆಯಾಡದೆ ಬಂದು ಸಹಜದಿ
ಘಟಿತುನ್ಮನಿಯೊಳು ಸಂದು
ಇಟಪುರೀಶನ ಹಿತದಿಂ ಭಜಿಸುತ
ಪುಟಿದು ಪುಟಿದು ಭೌಪರಾಕ್ ಪರಾಕೆಯ ||3||
ಏನಾದರೇನು ವರ ಪಡೆದವರಿಗೆ
ಸುಜ್ಞಾನದೊಳಿರಿಸುವುದಿದೇ ಮನಸ್ಸು
ಜ್ಞಾನವನರಿಯದ ಅಜ್ಞಾನಿಯು ಗರ್ವದಿ
ನಾನು ನೀನೆಂಬವದಿದೇ ಮನಸ್ಸು
ಗುರುವೆ ಇದೇ ಮನಸ್ಸು ||ಪಲ್ಲ||
ಮದನನ ತಪದಿ ಅನ್ಯ ಮಾನಿನಿಯಳ
ಸದನಕೆ ಎಳೆಸುವದಿದೇ ಮನಸ್ಸು
ಮದದ ಮರೆವಿನಲಿ ಮಾಯೆಗೆ ಮೋಹಿಸಿ
ಮಾದಿಗನೆನಿಸುವುದಿದೇ ಮನಸ್ಸು
ಹೃದಯದ ಬಗೆ ಬಗೆ ತಿಳಿದವರಿಗೆ ಮುಕ್ತಿ
ಪದವಿ ತೋರಿಸುವುದಿದೇ ಮನಸ್ಸು
ಗುರುವೆ ಇದೇ ಮನಸ್ಸು ||1||
ನೆಚ್ಚಿಕಿಲ್ಲದ ದೇಹ ಮನೆಮಾರು ಸಂಸಾರ
ಮೆಚ್ಚಿಸ ಹಚ್ಚುವದಿದೇ ಮನಸ್ಸು
ಮಚ್ಚರ ಗುಣದಲಿ ಮನುಜರ ಪರಿಪರಿ
ಹುಚ್ಚು ಹಿಡಿಸುವುದಿದೇ ಮನಸ್ಸು
ಎಚ್ಚರಗೊಳಿಸಿ ಗುರುವಚನ ಓಂಕಾರ
ಕಿಚ್ಚು ಹೊತ್ತಿಸುವದಿದೇ ಮನಸ್ಸು
ಗುರುವೆ ಇದೇ ಮನಸ್ಸು ||2||
ತಾಟಕತನದಲಿ ಥೈಥೈ ಕುಣಿಸುತ
ಚಟಾಕಿ-ಚಿನಾಲಿ ಇದೇ ಮನಸ್ಸು
ಬೂಟಕತನದಲಿ ಗುರು ಹಿರಿಯರಿಗೆರಗದೆ
ಕಟುಕನೆನಿಸುವುದಿದೇ ಮನಸ್ಸು
ಇಟಪುರೀಶನ ಹಿತದಿಂ ಭಜಿಸುತ
ಘಟಿತಾರ್ಥದಲಿರುಸುವುದಿದೇ ಮನಸ್ಸು
ಗುರುವೆ ಇದೇ ಮನಸ್ಸು ||3||
ತುರುಕರೋ ನಾವು ತುರುಕರು | ಇಂಥ
ಕಿರಿಕಿರಿ ಸಂಸಾರ ಶರಧಿ ದಾಟಿರುವಂಥ ||ಪಲ್ಲ||
ಮರೆವು ಮಾಯಾಯೆಂಬ ಮನದ ಮೈಲಿಗೆ ಬಿಟ್ಟು
ಗುರುಭಕ್ತಿಯೆಂಬಂಥ ಗುಡಗಿ ಚಣ್ಣಾ ಉಟ್ಟು
ಅರಿವಿನ ಅಂಗಿ ಬಂಧುರ ಮುಂಡಾಸ ತೊಟ್ಟು
ಮುರುಗಿ ಹೊಡೆದು ಮೂರು ಜಗವ ಸುತ್ತಿರುವಂಥ ||1||
ಮುರುಕು ಮನೆಯ ಬಿಟ್ಟು ಮೂರು ಹಣವ ಕೊಟ್ಟು
ಸರ್ಕಾರಕ ಮನ ಒಪ್ಪಿ ಸೈಯೆನಿಸಿ ಗುರು ಕೊಟ್ಟ
ಬಿರುದಾವಳಿ ಸಹಿತ ಕರಕೆ ಕಂಕಣ ಕಟ್ಟಿ
ಅರಕೇರಿ ಠಾಣೆಯಿಂದ ಮೆರಕೋತ ಬಂದಂಥ ||2||
ಧೈರಿಯದ ಶಾಲು, ವೈರಾಗ್ಯದ ಸುರಾಯಿ
ವೈರಿಗಳನ್ನೆಲ್ಲ ಒಡನೆಯೇ ಒರಗಿಸಿ
ಈರಣವ ಗೆದ್ದು ಇಟಪುರೀಶನೊಳು
ಸ್ಮರಣಿಲಿ ಮನಸಂಪನ್ನಾಗಿರುವಂಥ ||3||
ಹೋಗುತಾನೀ ದಿನ ಹಸನ | ಭವ
ನೀಗಿ ಜಳಾಜಳಾಗಿ ಹಸನ
ಹೋಗುವ ಸೂತ್ರದಿ ಜಾಗ್ರದೊಳರಿವಿನ
ಸಾಗುವ ಸದ್ಗುರು ಬೋಧ ಮಂಟಪಕಿಂದು ||ಪಲ್ಲ
‘ಅ’ಕಾರ ‘ಉ’ಕಾರವನ್ನರಿದು ಮುಂದೆ
‘ಮ’ಕಾರ ಮರ್ಮವ ತಿಳಿದು
ಸಾಕಾರವಿಡಿದು ಯಮ ಸೆರೆಯೊಳು ಸಿಲುಕದೆ
ಧಿಕ್ಕಾರ ಮಾಡಿ ಮನ ಹಕಾರಿ ಹೊಡಿಯುತ ||1||
ಭಸಿತಾಭರಣರಿಗೇ ಶರಣು | ಬಹು
ಸುಶೀಲ ಮಹಿಮರಿಗೆ ಶರಣು
ಬಸವ ಸಂಪ್ರದಾಯಕರಿಗೆ ಶರಣು
ಮುಸಲ್ಮಾನರಿಗೆ ಸಲಾಂ ಎಂದು ||2||
ಜಯ ಜಯ ಜಯ ಜಯ ಮನೋಹರ
ಜಯಪ್ರದನು ನಮ್ಮ ಇಟಪುರ ಧೀರ
ಜಯಶುಭ, ಶುಭವರ ಜಯ ಶೋಭಿತವರ
ಜಯ ನಮಃ ಪಾರ್ವತಿ ಪತಿ ಹರಹರ ಎಂದು ||3||
ಪ್ರಾರಬ್ಧ ಪ್ರಯತ್ನ ವಿಚಾರ ತಿಳಿಯದೆ ಈ |
ಪರಿಯ ವಾದವು ಯಾತಕೆ
ಪರವಸ್ತು ಎರಡರ ಪೊರೆವ ಸಾಕ್ಷಿ ಜಗ
ವರಿಯುವ ಕೂಗುವ ಶ್ರುತಿ ಅರಿಯಬಾರದೇಕೆ ||ಪಲ್ಲ||
ಅರಿವು ಮರವು ದ್ವಯ ಇರುವ ನುಡಿವ ಶಬ್ದ |
ಅರಿವು ಮರವಿಗೆ ಸಾಕ್ಷಿ ಏನಾದೋ
ಬರೆ ಮಾತು ಇದು ಅದೊ ಬರೆ ಎಂದು ತಿಳಿವಾ
ಕುರುಹಿಗೆ ಉಪಾಯ ಏನಾದೋ
ಅರಿವ ಜಾಣರು ಅರ್ಥ ಮಾಡಿಕೊಳ್ಳಿರಿ
ಪರಬ್ರಹ್ಮನ್ಹೊರತ್ಯಾವದೇನು ಬಾರದೋ ||1||
ಹದಿನಾರು ವರ್ಷದ ಆಯುಷ್ಯವಿರಲು ನಿಜ |
ಪದವಿ ಬಂದಾಶ್ಚರ್ಯ ಮೃದುವಾದ ಮಾರ್ಕಂಡೆಯ
ಮದನವೈರಿಯನಪ್ಪಿ ಆದ ಚಿರಂಜೀವಿ
ಇದರಂತೆ ತಿಳಿರಿನ್ನು
ಅದರಿದರ ಗೊಡಿವೇನು
ಸದರಿಗಿರುವಾ ಸಾಕ್ಷಾತನೆ ಖರೆ ||2||
ಹರಹರಿ ಪ್ರಯತ್ನದಿ ಹರಿದಾಡಿ ದಣಿಯಲು |
ಬರಿದಾಗೋ ಚರಿಯಾ ಏನೋ
ಹರಿಹರನೆ ಎನ್ನ ಹಣೆಬಾರ ಎಂದೆಂದು
ಸ್ಥಿರಗಾಣದಿರುವದೇನೋ
ಪರಮ ಪಾವನ ಸರ್ವ ಜಗದ ಉದ್ಧಾರಕನು
ಪರತರ ಇಟಪೂರೀಶನೆ ಕರ್ತು ತಾನು ||3||
ಚಿಂತಿ ಯಾತಕೋ ನಿನ್ನೊಳು |
ಛೀ ಬಿಡೋ ಮರುಳೆ ||ಪಲ್ಲ||
ಚಿಂತಿಯಾತಕೋ ನಿನ್ನೊಳು |
ಕಂತುಹರನ ದಯಾ ಕರುಣ
ಅಂತರಂಗದ ತುಂಬಿ ಗುರು
ಮಂತ್ರ ಕಾಯನಾದ ಮ್ಯಾಲೆ ||1||
ಸಾಧನ ಮೌನ ಸಕಲ |
ಭೇದ ಭಾವಗಳನೆಲ್ಲ ಅಳಿದು
ಆದಿ ಅಂತ್ಯ ಮೀರಿದ ಗುರು
ಪಾದದಲ್ಲಿ ಗುರುತಿಟ್ಟು ಚರಿಸಲು ||2||
ಶಾಂತ ಮನದಿ ಸಂಭ್ರಮವರಿತು |
ಇಂತು ಇಟಪೂರೀಶನ ಅರಿದು
ಪಂಥ ಗೆಲಿಸೋ ಇಹ ಪರದ
ಚಿಂತಿಯನಳಿವ ಆತೆಂದು ತಿಳಿದ ಮೇಲೆ ||3||
ಈಸಲಾರೆನೋ ಈಶಾ ಈ ಸಂಸಾರ |
ಈಶಾ ಇದಕೇನು ವಿಚಾರ ||ಪಲ್ಲ||
ಆಸೆ ಒಡಲು ಮೆಚ್ಚಿ |
ಹೇಸಿಯ ಮನ ಕಚ್ಚಿ
ಮೋಸದಿ ಘನ ಕೊಂಡಾಡಿ
ಕಾಸು ಕೈ ಚಾಚಿ ಬೇಡಿ ||1||
ಅನ್ಯರೊಳು ಭಕ್ತಿ |
ಹಾಸ್ಯವಾದುದೆ ಸತ್ಯ
ಸುಜ್ಞಾನ ಸುಳಿವು ನಿಂತಿಲ್ಲಾ
ಸುಗುಣ ಸುಮನಾಗುವದಲ್ಲಾ ||2||
ಧ್ಯಾನ ನಿನ್ನದು ಬಿಟ್ಟು |
ಶ್ವಾನನಂತೆ ತಿರುಗಿದೆ
ನೀನೇ ನಿನ್ನ ನಿಜ ದೃಷ್ಟಿಯಲಿ ನೋಡು
ಇಟಪೂರೀಶನೇ ನೀನೊಲಿಯೋ ||3||
ಖರೆ ಖರೆ ಸರಿ ಮಾಡೆಲೊ |
ಸೌದಾ ಸುಳ್ಳು ವ್ಯಾಪಾರ ಸುಳ್ಳೆ ಬ್ಯಾಡಲೋ
ಬರೆ ಬರೆ ಬಾಯಿ ಬ್ರಹ್ಮ
ಬರೆ ಗಂಟ್ಯಾಗಲಿ ಬ್ಯಾಡೋ ||ಪಲ್ಲ||
ಅರಿಯೋ ನೀನೂ ಅಂಗ ವಿಚಾರ |
ಅನುಚಾರ ಚರನಾಗೋ ಚಾತುರ್ಯಗಾರ ||1||
ಹಸಿ ಬಿಸಿ ಭಾವಿಸಿ ಜ್ಞಾನ |
ವಶವಾಯಿತೆನಬೇಡಾ
ಹಸನಾಗಿ ತತ್ವಮಸಿ ಮಹಾವಾಕ್ಯ
ಸರಿ ಇಟ್ಟು ತಿಳಿಯೋ ಹುಸಿ ಬ್ಯಾಡಾ ||2||
ಘಟಸ್ಥಲದ ಮಟದೊಳಗಿರ್ದ |
ಇಟಪೂರೀಶನ ಬಿಡುಬ್ಯಾಡ
ಸಟಿಯಾಗದೆ ನೀ ದಿಟವರಿದು ಉನ್ಮನಿ
ಮಠ ಸೇರುವದೆ ಬಲು ಪಾಡ ||3||
ವರ ಗುರುಚರಣಂಗಳ ಬೆರೆದ ಶಿವ |
ಶರಣಗಾನಂದ ಮಂಗಳ ||ಪಲ್ಲ||
ಅರಿವು ಆಚಾರ ಅರಿಯದೆ ಬರೆ ಡಂಬಕರಿಗೆ |
ದೊರೆವುದೆ ಆನಂದ ಮಂಗಳ ||1||
ಆರು ಸ್ಥಲವು ಅರಿಯೋಣಿಲ್ಲ ಮೇಲೆ ಕೀಲರಿತು |
ಮೂರು ಬೆರಿಯೋಣೀಲ್ಲ
ಧೀರತ್ವದಲಿ ಮನೋಹರನ ಸ್ಮರಿಸುತ ಬೆರಿಯೋಣೀಲ್ಲ
ಬೆರೆದರೆ ಶಿವಶರಣಗಾನಂದ ಮಂಗಳ ||2||
ವೇದವಾದಿಗಳೆಲ್ಲ ವೇದದ ಭೇದವು ತಿಳಿಯಲಿಲ್ಲ |
ಓದಿ ಓದಿ ತಾ ಕೂಚ ಭಟ್ಟನಾದಂತೆ ಅವನ
ಭವ ಬಾಧೆಯು ಬಿಡಲಿಲ್ಲ ||3||
ವಿದ್ಯಾ ಅಧಿಕ ಇದ್ದ ಸ್ಥಲ |
ಇಟಪೂರೀಶನೆ ಸಾಧ್ಯವಲ್ಲ
ವಿದ್ಯಾ ಅವಿದ್ಯಾ ತಿಳಿಯಿದ್ದ ಜಾಣನು
ಬ್ರಹ್ಮವಿದ್ಯಾ ಸಾಧಿಸಬಲ್ಲ ||4||

ಅಗಲಿ ಇರಬ್ಯಾಡೆಲೊ ಕಂದಾ |

ಅರಗಳಿಗಿ ಗುರುವಿನ

ಅಗಲಿ ಇರುಬ್ಯಾಡೆಲೋ ಕಂದಾ

ಹಗಲಿರುಳು ಗುರುವಿನ ||ಪಲ್ಲ||

ಈಡ ಪಿಂಗಳೊಂದೆ ಮಾಡುತ |

ಆಡುವ ನಡುವೆ ನಾಡಿ ಭಾವದಿಂದ ಕೂಡುತ

ಕೂಡುವ ಕೂಟವನರಿದು

ನೋಡು ನಾಸಿಕಾಗ್ರ ಬೆರಿದು

ಆಡುತಿರುವಾ ಆಧಾರ ಬಲಿದು

ಆರು ಚಕ್ರದ್ವಂಶದಿರುವಾ ||1||

ಮಾಯೆ ಮೋಹ ಮೋಹನಾಗದೆ |

ಮನಸೊಂದೆ ಮಾಡಿ ದೇಹವ ನಿಲ್ಲಿಸಿ ತೂಗದೆ

ವಾಯು ವಶಮಾಡದೆ ಅರಿವುದೆಲ್ಲ

ಒಲಿದ ಗುರುವು ಕೂಡ ಬಲ್ಲ

ಬಾಹ್ಯಬ್ರಹ್ಮ ನುಡಿಗಳೆಲ್ಲ

ಭಾವ ತಿಳಿದ ಶರಣನೆ ಬಲ್ಲ ||2||

ನಿನ್ನ ಬಿಟ್ಟು ಬೇರೆ ಇಲ್ಲಾ |

ನಿನ್ನೊಳಗೆ ತಿಳಿಯೋ

ತನ್ನ ಬಿಟ್ಟು ದೇವರಿಲ್ಲಾ

ಪುಣ್ಯ ಅಧಿಕಾರಿಗಿದು ಪೂರ್ಣಜ್ಞಾನ ಫಲಿಸುವುದು

ಇನ್ನು ಇಟಪೂರೀಶನ ವಿನಾ ||3||

ಜಾಕನ ಹಳ್ಳಿಯಲಿ ಸಿದ್ಧಲಿಂಗ ಹಾನ |

ಜನ ಕೇಳಿರಿ ಕವನಾ

ಅಧಿಕ ಚಿಂತ್ನಳ್ಳಿ ಗವಿಸಿದ್ಧಲಿಂಗ ಹಾನ

ಆತ ವರಪಿಂಡ ಹಾನ ||ಪಲ್ಲ||

ಏನ ಹೇಳಲಿ ಹುಟ್ಟಿದ ಮಾರ್ದೇಶಾ |

ಆತನ ಪ್ರಕಾಶಾ

ಚರಿಗಳು ತೂರುವಾ ಬಹುದಿಶಾ

ನೋಡು ನಾಲ್ಕು ದೇಶಾ

ಜ್ಞಾನವಂತರಿಗೆ ಬಹು ಸಂತೋಷಾ

ಘನ ಗುಣ ಮಣಿ ಭೂಷಾ ||1||

ಗುಡ್ಡ ಗಂವಾರಾ ಗವಿ ಸುಳಿದಾನ |

ಗಟ್ಯಾಗಿ ನಿಂತಾನ

ಹಾದಿ ಹಿಡಿಯದೆ ಅನುಗಾಲ ಅರಣ್ಯ ಸೇರ್ಯಾನ

ಹುಲಿ ಕರಡಿಗಿ ಅಂಜದೆ ನಡು ಅಡವ್ಯಾಗ ನೆಲಸ್ಯಾನ ||2||

ಪರಿ ಪರಿ ಕಷ್ಟದಿ ತಪಸು ಮಾಡಿ |

ವರವನು ಪಡೆದಾನು

ದುರಿತ ದೋಷ ದುರ್ಗುಣಗಳ ಸುಟ್ಟಾನ

ವರ ಧೀರನು ತಾನು

ಪರಕೆ ಪರಸ್ಥಲ ಖರೆಗೊಂಡಾನಲ್ಲಿ

ಪರಿಪೂರ್ಣನು ತಾನು ||3||

ಮೂಲ ಜ್ಞಾನವೆಲ್ಲಾ ಆತನಿಗೆ ಹಿತವು |

ಮೆಚ್ಚನು ಅಜ್ಞಾನವ

ಪಾಲು ಅರ್ಪಿತಾ ಪ್ರಸಾದ ವರ್ಜಿತವು

ಪರಧನ ಪರಸತಿಯೋ

ಸ್ಥೂಲ ಮಲತ್ರಯ ಮಾಡ್ಯಾನೋ

ತಾನು ಹತವು ತಿಳಿದಿಯೂ ಸಪ್ತದವು ||4||

ಮನಿ ಮಾರು ಸಂಸಾರ ಮಾಡ್ಯಾನ ತ್ಯಾಗಾ

ಮಾಯೀನ ಜರದಾನ |

ಕನಸಿನಂತೆ ಕಂಡಾನು ಜಗ ಭೋಗ

ಖರೆ ಖರೆ ಜೊಳ್ಳು ತ್ಯಾಗ

ತೊರದಿಹನೋ ಭವರೋಗ ||5||

ಬಡವರಿಗೆ ತಾ ಮಾನ್ಯತೆ ಕೊಡುವಾ |

ಬಹಳ ಸಂತೋಷಪಡುವ

ತಡಿಯದೆ ಮುಖಮಾರ್ಜನ ಮಾಡಿಸುವಾ

ತಾನೇ ಎದ್ದೇಳುವಾ

ಗಡಿಬಿಡಿ ಓಡಿಸ್ಯಾಡಿ ಪ್ರಸಾದ ಬಡಿಸುವಾ

ಘನ ಕನಿಕರ ಬಡುವಾ ||6||

ಹಿಂದಿನ ಪುರಾನತರಿಂದ ಆಚಾರ |

ಇಂದು ಬಂಧು ಭಾವವು

ನಿಂದು ನಿಲಕದಿಹ ಭಕ್ತ ಜನ ಪರಿಯಾ

ಕಂದುಗೊರಳನಾ ಕೃಪಾವೊಂದು ಖರಿಯಾ

ಕಣ್ಣಂದಿತು ಚರಿಯಾ ||7||

ಕವಿಗೊಂದಿನಾ ಖರೆಗೊಂಡಾನು ಸೋಪಾನ

ಕಣ್ಮರೆವು ಕಾಣ |

ಕನಸಿನೊಳು ಬಂದು ಮಹತ್ವವ ನುಡಿದಾನ

ಕವಿಯು ಮಾಡಂದಾನ ಮೌನದಿ ಮೆಚ್ಚಿಲೇ ಮನ

ಸಾಕ್ಷಾತ್ ಸೂಚನಾ ಮುಟ್ಟಿ ನಡಸ್ಯಾನ ವಚನ ||8||

ಗತಪಿ ಗ್ರಾಮದೊಳು ಭಕ್ತರ ಮನೆಯೊಳು |

ಆಕಳ ಬಸಿರೊಳು ಅಧಿಕ ಪುಟ್ಟಿತು

ಬಸವನಂತೆ ಚೆಲುವು

ಇದು ನಿಮಗೆ ಸಲ್ಲಲಿ ಎಂದು

ಭಕ್ತನು ಅರ್ಪಿಸಿದನಾ ಕ್ಷಣವು ||9||

ಬಸವನ ಗುಣ ಹೇಳಲಳವಲ್ಲಾ |

ಪಶುವಿನ ತೆರನಲ್ಲ

ಸುಶೀಲ ಸುಮತಿಯ ಶಬ್ದ ಮಾತ್ರವಿಲ್ಲಾ

ಸುಳು ಬಲ್ಲನು ಎಲ್ಲಾ

ಕುಟಿಲ ಭಕ್ತರ ಮನಿಗೊಂಚನವಿಲ್ಲಾ

ಕುಟಿಲರ ಮನಿಗೊಲ್ಲಾ ||10||

ಶರಣು ಭಾವ ಶರಣರಿಗೆ ಅರಿದವರಿಗೆ ಅರ್ತಿ |

ಅವನ ನಿಂದೆ ಮಾಡುವನೇ ಬೆರಕಿ

ತುರಗನ ಸರ ಓಡಿಸ್ಯಾಡುವಳೆ ಪಿರಕಿ

ಕರಿಯಾ ಕತ್ತೆಡಕೀ ||11||

ಇಳಿಯೊಳು ಈ ಪದ ಹಾಡುವವರಿಗೆ ಚಂದ |

ಈ ಮಾತು ಪಸಂದಾ

ತಾಳಮದ್ದಲಿ ಸ್ವರ ನಾದಗಳಿಂದ ತಲೆದೂಗಿರಿ ಇಂದ

ತಿಳಿ ಹೇಳಿದಾ ಇಟಪೂರೀಶನ ಕಂದಾ

ತಾ ಬ್ರಹ್ಮಾನಂದಾ ||12||

ಗುರುವೆ ತಾಯಿ ತಂದಿ ಗುರು ಪಾದಕ ಹೊಂದಿ |

ಗುರುವೆ ಗತಿ ಎಂದು ಅಂದುಕೊಳ್ಳಿರಿ ತಂಗಿ ||ಪಲ್ಲ||

ದೃಢದಿ ಬಾಗಿ ಮನೋಹರ ಒಡೆಯನ ಪಡಿರೆಮ್ಮಾ ||ಅ.ಪಲ್ಲ||

ಗುರುವೆ ಜಗಜೀವಾ ಗುರುವೆ ಸಂಜೀವಾ |

ಗುರುಭಕ್ತರ ಜೀವದ ಜೀವ ಕೇಳಿರಿ ತಂಗಿ ||1||

ಗುರುಭಾವ ಅರಿಯುತ ಗುರುಲಿಂಗ ಬೆರೆಯುತ |

ಮರೆವ ಜಂಗಮ ಜಗಭರಿತಾ ಕೇಳಿರಿ ತಂಗಿ ||2||

ಏಸು ದಿನದ ಇದು ಹೇಸಿಕಿ ಸಂಸಾರ |

ಈಶನ ಬಿಟ್ಟರೆ ಯಮಪೂರ ಕೇಳಿರಿ ತಂಗಿ ||3||

ಮುಕ್ತಿಗೆ ಮೂಲಮಾರ್ಗಾ ಭಕ್ತಿಯೇ ಸುಮಾರ್ಗ |

ಯುಕ್ತಿಲೆ ನುಡಿದಾರೆ ಸ್ವರ್ಗಾ ಕೇಳೀರಿ ತಂಗಿ ||4||

ಜನ್ಮ ಜನ್ಮಾಂತರ ಜನಿಸಿ ಬರುವದು ನಿಂತರ |

ಸನ್ಮಾರ್ಗ ಅರಿಯದ ತಂತ್ರ ಕೇಳಿರಿ ತಂಗಿ ||5||

ಮನು ಮುನಿಗಳೆಗೆಲ್ಲಾ ಮಹಾಗುರು ಸ್ತುತಿ ಬೆಲ್ಲಾ |

ಗುಣಹೀನರಿಗೆ ಇದು ಸಲ್ಲದು ಕೇಳಿರಿ ತಂಗಿ ||6||

ನಿಟಿಲಾಕ್ಷನ ನೆನಹು ನಿಷ್ಠಿಲಿ ನಿಧಾನವು |

ನಡಿ ಸಾಲದೆ ಬಹುಮಾನವು ಕೇಳಿರಿ ತಂಗಿ ||7||

ವಂಚನೆ ಮನ ಸಲ್ಲಾ ಕಿಂಚಿತ ಗುಣ ಸಲ್ಲಾ |

ಪಂಚಮುಖನ ದಯವಿಲ್ಲಾ ಕೇಳಿರಿ ತಂಗಿ ||8||

ಬಣ್ಣದ ಬಡಿವಾರ ಬೆಳಕೀಲಿ ನಡಿವರು |

ಪುಣ್ಯವ ಪಡಿವುದು ಬಹುದೂರಾ ಕೇಳಿರಿ ತಂಗಿ ||9||

ಅನುಮಾನ ಬರೆ ಭ್ರಾಂತಿ ಹಲವು ಹಂಬಲ ಚಿಂತಿ |

ಅನುಗಾಲ ಸುಡಗಾಡ ಸಂತಿ ಕೇಳಿರಿ ತಂಗಿ ||10||

ನೆಚ್ಚಿಕಿಲ್ಲದ ದೇಹಾ ಮೆಚ್ಚುವದನ್ಯಾಯ |

ಎಚ್ಚರದಿರುವುದು ನಿರ್ಭಯ ಕೇಳೀರಿ ತಂಗಿ ||11||

ಸತ್ಯವ ಹಿಡಿಬೇಕೋ ಅಸತ್ಯವ ಬಿಡಬೇಕೋ |

ಸತ್ತು ತಾವು ಬದುಕಿರಬೇಕೋ ಕೇಳಿರಿ ತಂಗಿ ||12||

ಭೂಮಂಡಲವು ಬಯಲು ಬೆರೆದರೆ ನಿರ್ಬಯಲು |

ಬ್ರಹ್ಮವು ಬಯಲಿಗೆ ಬಯಲದ ಕೇಳಿರಿ ತಂಗಿ ||13||

ತಿಳಿಕೊಳ್ಳಿರಿ ಇದರ ಘನವ ಅರಿತುಕೊಳ್ಳಿರಿ |

ಕದನವು ಮನಸಿನ ಕಾಳ ಕೇಳಿರಿ ತಂಗಿ ||14||

ವಲ್ಲಭನ ಸೇವೆಯಲ್ಲಿ ಬಾಗಿರುವಾ ನಲ್ಲೆ |

ಬಾಲೆಯರ ಶಿವ ಕಾಯುವನು ಕೇಳಿರಿ ತಂಗಿ ||15||

ಮುಸ್ಲಮಾನರ ಬಾಲಾ ಉಸರಿದ ಗುರುಲೀಲಾ |

ಹಸನನ ನುಡಿ ನೀವು ಹಸನಾಗಿ ಕೇಳಿರಿ ತಂಗಿ ||16||

ಜಯ ಜಯ ಜಗದೀಶಾ ಜಯ ಇಟಪೂರೀಶಾ |

ಜಯ ಎಂದು ಪಡಿರಿ ಉಪದೇಶಾ ಕೇಳಿರಿ ತಂಗಿ ||17||

ಸುಮ್ಮನಲ್ಲಾ ಸುಮ್ಮನಲ್ಲಾ ಸುಜ್ಞಾನವೆಲೋ |

ಮಾಯಾ ಸಂಹಾರದೊಳು ಮೋಹಿಸದೀ ಮನ ||ಪಲ್ಲ||

ಮಾಯಾ ಮೋಹ ರಹಿತನ |

ಮಾಯ ಮೋಹ ತಿಳಿಯದೆಲೋ ||1||

ಆಶೆ ಹಿಡಿದು ಭವಪಾಶ ಬೀಳುವ ನರ |

ಈಶನೊಲಿಸಿ ಪರವಶದೊಳಿದ್ದೆಲೊ ||2||

ಹೀನ ಗುಣವ ಜರಿದು ಇಟಪೂರೀಶನ |

ಧ್ಯಾನವರಿದು ಘನಜ್ಞಾನ ಪಡಿವುದೆಲೋ ||3||

  1. ಸುಮ್ಮನಿರು ಸುಮನಾ

ಸುಮ್ಮನಿರು ಸುಮನಾ ಸುಗುಣದಿ ನೀ |

ಪರಬ್ರಹ್ಮಾನಂದದೀ ಬ್ರಹ್ಮನಾಗಿ ನೀ ||ಪಲ್ಲ||

ಕಾಯದ ಗುಣದೊಳು |

ಕಳವಳಗೊಳ್ಳದೆ

ಮಾಯಾ ವಿರಹಿತನ

ಮಹಿಮೆಯೊಳಡಗಿ ನೀ ||1||

ಜೇಂಕಾರ ಜಣಿತಕ್ಕ |

ಜೇಂ ಎಂದು ನುಡಿಸುತ

ಶಂಕರನಗಲದೆ

ಶಾಂತ ಗುಣದಲಿ ನೀ ||2||

ಭೀತಿ ಭಯದಿ ಮನ |

ಸೋತವರಂದದಿ

ಈ ತರ ಜುಟ

ಇಟಪೂರೀಶನೊಳಗಾಗೀ ||3||

ಜೀ ಹೋ ಜೀ ಹೋ ಜೀ |

ಮಹಾ ಅರುವೆ ನಿನ್ನರಿದು ಬೆರಗಾದೆ ||ಪಲ್ಲ||

ಆಧಾರ ಅರಿದು ಅನುದಿನಾ |

ಆರು ಸ್ಥಲವ ಸುಳಿದು ನಾ

ನಾದ ಬಿಂದು ಕಳೆಯ ತೋರಿ

ಸಾಧಿಸಿ ಸುಖಿಯಾದೆ ನಾ ||1||

ಪಂಚ ತತ್ವ ಕೂಡಿದೆ |

ಪಂಚ ಮುದ್ರೆಯ ಹೂಡಿದೆ

ಪಂಚ ವಸ್ತುವಿನ ಪರದಿ ಹರಿದು

ಪರಬ್ರಹ್ಮನೊಳಗಾದೆ ನಾ ||2||

ನೀತಿಲಿ ನಿಜ ಧ್ಯಾನವು |

ನಿನ್ನನಗಲಿದ ನಿಮಿಷವೆ

ಸೋತು ಸೊರಗಿ ಸವೆದ ಖಂಡ

ಜ್ಯೋತಿಯೊಳಗಾದೆ ನಾ ||3||

ಕಾಯವನ್ನು ಕರಗಿಸಿ |

ಮಾಯ ಮೋಹ ಒರಗಿಸಿ

ಬಾಹ್ಯ ಬ್ರಹ್ಮವನ್ನು ಕಳೆದು

ಬಯಲಿಗೆ ಬಯಲಾದೆ ನಾ ||4||

ಸತ್ಯ ಸಮರಸವಾಯಿತು |

ಅನಿತ್ಯವು ಅಳಿದ್ಹೋಯಿತು

ನಿತ್ಯ ಅನಿತ್ಯವನರಿದು ನಿನ್ನ

ಗೊತ್ತಿದೆ ಸೇರಿದೆ ನಾ ||5||

ಅರುವಿನೊಳಗಾಡಿದೆ |

ಮರವೆಯ ಮರೆ ಮಾಡಿದೆ

ಅರುವು ಮರವು ಅಡಗಿ ಪರಕೆ

ಪರವಶಕೊಳಗಾದೆ ನಾ ||6||

ಕಂಪು ಕಲ್ಪವೃಕ್ಷನೆ |

ಇಂಪು ಸೊಂಪುದಿಂದೆ

ಇರುವ ಇಟಪೂರೀಶ ನೀನೇ ನಾ ||7||

ಮರವು ಮಹಾ ಆದರವು ಬೆರಿದು |

ಗುರು ಕರುಣಾ ಬೆರಿಯುವ ತನಾ ಬಹು ದೂರಾ ||ಪಲ್ಲ||

ಕುಟಿಲ ವಿಷಯ ಗುಣ ಕಡಿದು ಕಡಿದು ಸಂಹರಿಸದೆ |

ಸಟಿಯಾಗಿ ತೋರದೀ ಸಂಸಾರ ||1||

ಯೋಗ ಮುಖದಿ ತತ್ವ ಬೋಧಿಸದೆ ಶಿವ |

ಯೋಗದ ಸುಖವು ಬಹುದೂರಾ ||2||

ಈ ಪರಿ ತಿಳಿದರೆ ಇಟಪುರೀಶನ ಬೋಧಾ |

ಪಾಪ ಎಂದೆಂದಿಗೆ ಪರಿಹಾರ ||3||

ಎಂಥಾ ಗಾರುಡಿಗ್ಯಾ ಹಾನೇ ಅವ್ವಯ್ಯ ನೋಡೇ |

ಎಂಥಾ ಗಾರುಡಿಗ್ಯಾ ಹಾನೇ ||ಪಲ್ಲ||

ಅಂತ ತಿಳಿಯದೆ ಇವನ ಹಂತೇಕ ಹೋದವರನ |

ಪಂಥ ಗೆಲಿಸುವಂಥ ಗಾರುಡಿಗ್ಯಾನೆ ||1||

ಲಕ್ಷ ಹಿಡಿದು ಅರಕ್ಷರ ಓದಿಸಿ |

ನಿಕ್ಷೇಪ ತೋರಿ ನಿಜ ವಸ್ತು ಕೊಡಿಸುವ ||2||

ನಿಚ್ಚ ನಿಚ್ಚವು ಮಹದೆಚ್ಚರ ಬೋಧಿಸಿ |

ಅಚ್ಚ ಪರವಶದಿ ಹುಚ್ಚು ಹಿಡಿಸಿದಾ ||3||

ಸೇರಿರುವ ಭಕ್ತರ ದುರಿತವನು |

ದೂರ ಮಾಡುವಾ ಇಟಪೂರೀಶಾನು ||4||

ನಿನ್ನ ನಿಜವನರಿದು ನೀ ನೋಡಿದ್ಯಾ |

ಪನ್ನಂಗಧರನಾ ಪೂರ್ಣದಯದಿ

ನಿನ್ನ ನಿಜವನರಿದು ||ಪಲ್ಲ||

ಹೇಸಿಕಿ ದೇಹದ ವಾಸನವಳಿದು |

ಮನ ಹೇಸಿಗೂಡದೆ

ಗುರು ಧ್ಯಾನದೊಳಗೆ ಇರು ||1||

ಸತಿ ಸುತರ ಹಂಬಲ ಸಟೆಯೆನ್ನುತ ನಿನ್ನ |

ಮತಿಯೊಳಿಂದು ಸದ್ಗತಿ ಪಥದಿ ||2||

ಬಂಧನ ಭವ ಸೆರೆ ಬ್ಯಾಸರಗೊಂಡು |

ಇಂದು ಇಟಪೂರೀಶನ ಒಲಿಸೋ ||3||

ರಾಜಾಧಿರಾಜಶೇಖರಾ ಸಹಜ ಸೃಷ್ಟಿಕರ್ತ |

ಮೂಜಗದ ಉದ್ಧಾರ ಅಧಿಕಾರಾ ||ಪಲ್ಲ||

ತನು ಮನ ಧನ ಮೂರು ನಿನಗರ್ಪಿಸಿದವರ |

ಘನ ಪದವಿಯ ನೀ ಗುಣ ಮಣಿಹಾರಾ ||1||

ಭಾವ ಭಕ್ತಿ ವಿಚಾರ ಭಾವಿಸಿ ಭಜಿಪರು |

ಆವ ಕುಲದವನಾದರು ದೋಷಗಾರ ||2||

ತಂದೆ ನೀನೊಲಿದರೆ ಬಂದ ಕಂಟಕದೂರ |

ಇಂದುಧರ ಇಟಪೂರೀಶನೆ ಧೀರಾ ||3||

ಮೋಸವ ಮಾಡಿದಾ ಮೋಸವ ಮಾಡಿದಾ |

ಮೋಹಿಸಿ ಎನ್ನ ||ಪಲ್ಲ||

ಓಂ ಮನಃವನು ಓದಿಸಿ ಉನ್ಮನಿ ಸಾಧಿಸಿ |

ಭಾನು ಪ್ರಕಾಶದ ಬೆಳಗಿನೊಳು ನೀನಿದ್ದಿ ||1||

ಸಾಸಿರ ನಾಮದ ಸಂಗವ ಬೆರಿಯಲು |

ಏಸೇಸು ಜನ್ಮದ ದೋಷದ ಗಳಿಸಿ ||2||

ತತ್ವದ ಬ್ರಹ್ಮರ ಅರಿವ ಸ್ಥಾನದಿ |

ನಿರ್ಮಲ ವಾಸನೆ ನಿರಾಳದೊಳಿರಿಸಿ ||3||

ನಾನು ನೀನೇ ಎನಿಸುವನು ಏನೇನೊ ಬೋಧಿಸಿ |

ಹೀನ ಗುಣವಳಿದು ಇಟಪೂರೀಶನು ||4||

ಬಿಡಿಸೋ ಗುರುವೇ ಎನ್ನವಗುಣವ ಗಡಬಡಿಸುವಾ |

ಅಡಿಗಡಿಗೆ ಎನ್ನಂಗದೊಳಗೆ ನವನಡೆಗಳು ||ಪಲ್ಲ||

ಎಂಥ ಮರೆವಿದು ಮನಸಂತೆ ಕುಣಿದು |

ಭ್ರಾಂತಿಗಳಿವುದು

ತಂತು ತಿಳಿಯದೆ ಕುಂತು ನಾ ಬರೆ

ಚಿಂತಿಯೊಳು ಚರಿಸಾಡುವುದು ||1||

ಶೋಧಿಸಿ ಶಾಂತರ ಸಾಧಿಸಲಿಲ್ಲಾ |

ಬೋಧ ಮಂತ್ರ ಕ್ರೋಧ ವರ್ಗ

ಛೇದಿಸಿ ಎನ್ನ

ಸಾಧುರ ಸೇವೆಯೊಳಿರಿಸಿ ||2||

ಮಂದಮತಿಯಲಿ ಬಂದೊದಗುವ ಭವ |

ಬಂಧನ ಶೂಲ ಕುಂದೆಣಿಸದೆ

ಹೊಂದಿ ಮುಕ್ತಿ

ಇಂದು ಪಾಲಿಸೋ ಇಟಪೂರೀಶಾ ||3||

ಮಾಡೋ ಮಾಡೋ ಮಾನವಾ |

ಮನೋಹರನ ಧ್ಯಾನವಾ ||ಪಲ್ಲ||

ಚಿಂತಿ ಯಾವುದ್ಯಾತಕೋ ನಿ |

ಶ್ಚಿಂತ ನಿನ್ನ ಹೃದಯದೊಳು

ಅಂತರಂಗದಿ ಕೂಡಿ ಆಗೋ

ಅಂತಃಕರಣವ ||1||

ಗಂಟುಗಳ್ಳರೆಂಟರವರು |

ತಂಟೆ ಕೂಗಾಟೊಂದಿಲ್ಲಾಗಿ

ಬಂಟ ನೀ ಭಜಿಸೆಲೋ

ಭವದ ಕಂಟಕ ಕಳಿವಾ ||2||

ಬೇಸರಾಗದೆಲೋ ನಿಜ |

ಧ್ಯಾಸ ಮರೆಯದೆ

ಇಟಪೂರೀಶನೊಳುಲ್ಲಾಸದಿ ಬೆರಿ

ಮೋಸವಾಗದೊ ||3||

ತಿಳಿ ತಿಳಿ ತಿಳಿ ಮನವೇ ನೀ |

ತಿಳಿದರೆ ಮಹಾ ಘನವೆ

ಅಳಿ ನಿನ ದುರ್ಗುಣವ

ಅಳಿಯದಿದ್ದರೆ ಹಗರಣವೇ ||ಪಲ್ಲ||

ಮಂದಮತಿಯ ಭ್ರಾಂತಿ |

ಮಾಡುವದ್ಯಾಕೋ ಹಲವು ಚಿಂತಿ

ಮುಂದ ಅರಿಯದೆ ಕುಂತಿ

ಇದು ಮೂರು ದಿನದ ಸಂತಿ ||1||

ಪರರ ಗೊಡವಿ ಸಾಕೋ |

ಪರರವಸರೇನು ಬೇಕೋ

ಹರನ ನುಡಿಯೊಳು ಶೋಕೋ

ಮರಿಯದೆ ನೀ ಹೊಡಿ ಜೋಕೇ ||2||

ಕುಟಿಲತನವು ಬ್ಯಾಡೋ |

ಕಟಕಟಿಸುವದೇನು ಪಾಡೋ

ಇಟಪೂರೀಶನ ಕೂಡೋ

ಘಟದೊಳಗೆ ನೋಡಿಕೋ ಮೂಢಾ ||3||

ಗುರುವೆ ನಿಮ್ಮಯ ಉಪಕಾರ |

ಮರಿಯಲಾರೆನು ಮನೋಹರ

ಕರುಣದಿಂದಲಿ ಜ್ಞಾನ ಕರುಣಿಸಿದೀ ಕ್ಷಣ

ಮರುಳನಾದೆನು ನಿಮ್ಮ ಚರಣಕ್ಕೆರಗುವೆನು ||ಪಲ್ಲ||

ಅರಿಯದ ಮೂರ್ಖಗೆ ನೀವು ಬಹು |

ಪರಿಯಲಿ ಬೋಧಿಸಿ ಎನ್ನ ಗರ್ವ

ಮುರಿದು ಈ ಮಹಾ ವಾಕ್ಯ

ಮರಿಯದಿರೆಂದು ಪೇಳಿದಿ ಗುರುವೇ ||1||

ಮತ್ಸರ ಮೋಹವ ಬಿಡಿಸಿ ಮಹ |

ದೆಚ್ಚರದೊಳೆ ಮನ ಬೆರಸಿ

ಪಶ್ಚಿಮಗಿರಿಯೊಳು ಪರಮಾನಂದನ ಸುಖ

ನಿಶ್ಚಯದೊಪ್ಪಿಸಿ ನಿಜವು ತೋರಿದಿ ಗುರುವೇ ||2||

ಹೊನ್ನು ಮಾಣಿಕದ ಬೆಲೆ ಕಂಡೆ |

ಇನ್ನೇನೂ ಬೇಡಲಿ ಇಟಪೂರಿಶನೇ

ನಿನ್ನ ಪುಣ್ಯದಿ ಪೂರ್ಣ ಸಂ

ಪನ್ನ ಮಾಡಿದಿ ಗುರುವೆ ||3||

ನುಡಿಯ ಲಾಲಿಸೋ ಮನವೇ |

ನಡಿಯಲು ಸೋಪಾನ

ಕೂಡು ಪ್ರಾಣನಾಥನ

ಕಂಡು ಕಾಣದಾತನ ||ಪಲ್ಲ||

ವಾದ ಭೇದವ ಕಳೆದು

ಉಳಿದುದೆ ರತನ

ಅದನು ಮಾಡಿಕೋ ಜನತಾ

ಇದರದು ಪ್ರಯತ್ನಾ ||1||

ಅಪರಂಪಾರ ಗುರತಾ |

ಅದರಂತೆ ಎಲ್ಲ ತತ್ವ

ತಾ ಪರಬ್ರಹ್ಮ ಭರಿತಾ

ಥಳಥಳ ಹೊಳಿಯುತ ||2||

ನೋಟ ಕೂಟ ನೇಮಸ್ಥಲ |

ನಟಿಸಲು ನಿರ್ಮಲ

ಇಟಪೂರೀಶನ ಲೀಲಾ

ಪಟಿಸಿ ಪಾರಾಗೆಲಾ ||3||

ಮರಿಯದಿರು ಮಾನವರೊಳಗೆ ಬಂದು |

ಬೆರಿಯೋ ಸದ್ಗುರುವ

ಪರಮ ಪಾವನಮೂರ್ತಿ ಕರುಣಾಸಾಗರ ನಿನ್ನ

ಕರದಿ ಕಂಗೊಳಿಸುವ ಪರತರ ಶಿವಲಿಂಗಾ ||ಪಲ್ಲ||

ಅದೆ ಮಹಾ ಪ್ರಕಾಶಾ |

ಅದರೊಡಗೂಡಲು ಆಗುವದು ಭವ ನಾಶಾ

ಮೊದಲು ಮಾಡಿದ ಪುಣ್ಯ ತೋರಿ ಒದಗುವ ಘನ

ಸದರ ನಿನ್ನೆದುರಿಗೆ ಅದಕ ಮರಿಯದೆ ನೋಡೋ ||1||

ತನು ಮನ ಪ್ರಾಣ ತ್ರಿವಿಧ ಭಾವ ತಿಳಿವ ಸಂಧಾನ |

ಅನುಮಾನಳಿದು ಪೂರ್ಣ ಅನುಮೇಶ ದೃಷ್ಟಿಲಿ

ಅನುಮಾನಿಸದೆ ಕೂಡೋ

ಅದೇ ನೋಡೋ ಪರಬ್ರಹ್ಮಾ ||2||

ಆಶೆಯು ಬೇಡಾ ಆ ಸುಳುವಿನೊಳು |

ಘಾಸಿ ಅನುಗಾಢ ಮೋಸಾ ಮೋಹವ ಬಿಟ್ಟು

ಲೇಸಾದ ಇಟಪೂರೀಶನ ಪಡೆದು

ಉಲ್ಲಾಸದಿ ಇರು ಕಂಡ್ಯಾ ||3||

ಗುರುಜ್ಞಾನ ಗುರುಭಕ್ತರಿಗಲ್ಲದೆ |

ಮರವಿನ ಅಜ್ಞಾನಿಗೆ ಸಲ್ಲುವದೆ ||ಪಲ್ಲ||

ಕಾಗೆಯು ಕರಕರ ಕೂಗಲು ಭೋರ್ಗರಿವ |

ಕೋಗಿಲ ಸ್ವರ ಸಮನಾಗುವದೆ ||1||

ಭೃಂಗವು ಪರಿಮಳ ಸಂಗಕೆ ಹಂಬಲಿಸಿ |

ಭೃಂಗಿ ಸುಗಂಧವ ಕೊಂಬುವದೆ ||2||

ಇಟಪೂರೀಶನ ಹಿತ ಶಿವ ಸಾಧನ |

ಕುಟಿಲ ಕುಹಕರಿಗೆ ಸಲ್ಲುವದೆ ||3||

ನಿಗಮಗೋಚರ ವರ ನಗುರೋರಧಿಕನ ನೆನಿಯೊ |

ಜಗದಿ ಜಗಜಗಿಸುವ ಮಿಗಿ ಬಾಗಿಲ ತೆರಿಯೊ ||ಪಲ್ಲ||

ಆಶಾಪಾಶವನಳಿದು ಮಲ ಪಂಚ |

ಕ್ಲೇಶದ ಮೋಹವ ಕಳೆದು

ನಾಶವಾಗುವ ದೇಹದ

ವಾಸನೆ ಅಳಿಯೊ ||1||

ತತ್ವ ಪದದೊಳು ತತ್ವವು ತಿಳಿದು |

ಅನುಭಾವ ತಡೆದದು ಅಸಿಪದವು

ಸತ್ ಚಿದಾನಂದನೊಳು

ಆನಂದದಿ ಉಳಿಯೊ ||2||

ಕುಟಿಲ ಕುಹಕ ಬಿಟ್ಟು |

ಕಟು ಮನವ ಸುಟ್ಟು

ಹಟಯೋಗ ಮನಕೆ ನಟ್ಟು

ಇಟಪೂರೀಶನ ಧ್ಯಾನದಿ ಪಟಿಸುತ ಮರಿಯೊ ||3||

ನಿನ್ನ ತಿಳಿ ನಿನ್ನೊಳು ಜ್ಞಾನವಾ |

ತನ್ನೊಳಗಾತನ ಐಶ್ವರ್ಯವ ಕಾಣುವದು ||ಪಲ್ಲ||

ಓಂ ನಮಃ ಮಂತ್ರ |

ಓದಿಸಿ ಭೇದಿಸಿ ಸಾಧಿಸಿ

ಆಧಾರ ಬಲಿದು ಆಗೆಲೋ ಸುಮನಾ

ಆಗು ಘನಾ ಅನುದಿನಾ ||1||

ಆಯಾಸ ಬಡದವಗೆ ಸುಖವಾಗದೋ ||

ಬಾಯಿ ಬ್ರಹ್ಮದಿಂದ ಭವ ನೀಗದೋ

ಸಾಯದಲೇ ನೀ ಸಾಯಲೋ

ಸೋಲೆಲೋ ಇದು ಸ್ವಾಯಲೋ ||2||

ಅರುವೇ ಗುರುವು ಬಿಂದುವೇ ಲಿಂಗವು |

ಆಚಾರ ಜಂಗಮ ತ್ರಿವಿಧ ಸಂಗವು

ಬೆರಿಯಲಿ ಇಟಪೂರೀಶನೇ

ಆತನೇ ಎನ್ನ ದಾತನೇ ||3||

ಎಂಥಾ ಸುಖವು ಬ್ರಹ್ಮಾನಂದಾ ಹೇಳಲಾಗದು ಎನ್ನಿಂದ |

ಎಂಥಾ ಸುಖವು ಬ್ರಹ್ಮಾನಂದಾ ಇದಕಂತ ತಿಳಿದವಗೆ

ಚಿಂತಿ ಅಳಿದು ನಿಶ್ಚಿಂತ ಇರಿಸುವುದು ||ಪಲ್ಲ||

ಮನ ಮನ ಒಂದಾಗಿ ಥರ ಥರ ನಡಗೂತ |

ಝನನ ಝನನ ಝೇಂಕರಿಸುವದೋ ||1||

ಕನ್ನಡಿ ಕಾಂತಿಯು ಕಂಗಳೊಳ ಹೊಳಿಯುವದು |

ಹೊಳೆಯುವ ಜ್ಯೋತಿಯ ಒಳಹೊರಗೆ ಥಳಥಳಿಸುವ ||2||

ಸೋತ ಭಕ್ತರ ಭಯ ಭೀತಿ ಬಿಡಿಸುವುದು |

ಶ್ರೀ ಇಟಪೂರೀಶನ ಕರುಣವು ||3||

ಭೋಗದೊಳಗಾತ್ಮ ಒಂದುಗೂಡದೆ ಶಿವ |

ಯೋಗಾನುಭವಿಸಿದ ಯುಕ್ತನೆ ಯೋಗಿ ||ಪಲ್ಲ||

ನಿಟಿಲ ತಟಿಯ ನಾಸಿಕ ಸಹಿತ ಏಕ |

ದೃಷ್ಟಿ ಸಂಘಟಿತ ಹೃದ್ಗತಿಯು ಹೃದಯ ಗತಿಯು

ತ್ವಂ ಶ್ರುತಿಯೊಳು ಬೆಳಗಿ ಕುಟಿಲ ದೃಷ್ಟೀಂದ್ರಿಯೊಳು

ಘಟಪೃಥ್ವಿಯು ಶೂನ್ಯಾಗಿ ಘಟ ಘನತೆ ನಿರ್ವಿಕಾರನೆ ಮುನಿ ||1||

ಅಂಗ ಭಾವ ಲಿಂಗ ಸಂಗ ವಿಚಾರ ಹೃತ |

ಸಂಗ ಸರ್ವಾಂಗದೊಳು ಲಿಂಗ ವೃತ್ತಿ

ಸಾಂಗಗೊಳಿಸಿ ಸಾಂಗೋಪಾಂಗ ಸತ್ ಕಳಿದು ಚಿತ್ತ

ಭೃಂಗಕೀಟನ್ಯಾಯ ಸಂಗಿ ತಾನೆ ಯೋಗಿ ||2||

ನೆನೆಸಿ ನೆನಿಯದ ನೆನವು ಉಣಿಸಿ ಗುಣಸದ ಗುಣವು |

ಮನಸಿಗಿ ಆಶ್ಚರ್ಯವಾಗಿ ಘಟ ಸುಖದಿ

ಜನಕದ ದಿಟ ಇಟಪೂರೀಶನ ಪಾದ ನೆರೆ ನಂಬಿ

ದಿನಕರ ಪ್ರಭೆಯ ಒಲಿವನೆ ಯೋಗಿ ||3||

ಬರಿ ಗಂಟೆ ಶರೀರದ ಭ್ರಮೆಯು ಕಳಕೊಂಡಂತೆ |

ಆತನ ಮಹಿಮಾ ತಿಳಿಯದೆ ಮನುಜಾ

ನೀತಿ ತಿಳಿದರೆ ಬರಿ ಗಂಟೆ ||ಪಲ್ಲ||

ಮಾತಿನ ಖೂನಾ ಗುರುತಿಲ್ಲದೆ |

ಓದಿ ಸಾಧಿಸಿ ಪೇಳವರ

ಓದಿಸಿ ಮನದೊಳ ಬರಿ ಗಂಟೆ ||1||

ಆತ್ಮ ವಿಚಾರ ಮಹತ್ವವ ತಿಳಿಯದೆ |

ಆಚಾರ ಮಾಡುವದು ಬರಿ ಗಂಟೆ

ಆಚಾರ ಮನದೊಳು ಸೂಚನೆ

ತಿಳಿದರೆ ಸಾಚನಾಗುವದಿನ್ನುಂಟೆ ||2||

ಗುರುವಿನ ಕರುಣಾ ಆಗೋ ಮನುಜಾ |

ಗುರುತು ಹೇಳಿದರೆ ಬರಿ ಗಂಟೆ

ಪರಕೆ ಪರತರ ಇಟಪೂರೀಶನ

ಮಹಿಮೆ ತಿಳಿಯದವರಿಗಿನ್ನುಂಟೆ ||3||

ಶಂಕರನೆ ಪಾಲಿಸೋ ಮೊರೆಯಾ |

ಸದ್ಗುಣಸಾಗರ ದೊರಿಯೇ || ||ಪಲ್ಲ||

ನಿಜವು ಮಹಾಪದವು ಧರ್ಮವು ನರಕವು |

ಎಂದಾಡುವ ಅವರಿವರ ದ್ವಯ ಪದಗಳ ತಿಳಿಸಿ

ಮುದದಿ ಮುಕ್ತಯು ಸದರಗಾಣಿಸೋ

ಶಂಕರನೇ ದಯಪಾಲಿಸೋ ||1||

ಸುಗುಣವು ಹಿತವು ದುರ್ಗುಣವು ಅಹಿತ |

ಎಂದ್ಹೇಳುವ ಆ ಗುಣ ಈ ಗುಣ ನಿರ್ಗುಣ

ಜಾಗರದವನು ಶಿವಯೋಗಿಯು ನೀನೂ

ಭೋಗಿಯ ಭೂಷಣ ಶಂಕರನೆ ||2||

ದಿಟವು ಜ್ಞಾನಪುಟವು ಗುಣ ಸಟಿಯು ಸಂಕಟ |

ಎಂದುಸುರುವ ಹಟವು ತಟವು ಎಂಬೊ

ಕುಟಿಲವಳಿದು ಎನ್ನ ಜಠರಾಗ್ನಿಯು ಜೈಸಿ

ಇಟಪೂರೀಶಾ ಶಂಕರನೆ ಪಾಲಿಸೋ ||3||

ಮಾರಹರನೆ ನಿನ ಭಜನಿ |

ಮರೆದು ನಾ ಹ್ಯಾಂಗ ಇರಲಿ ದೇವಾ

ಘೋರ ದುರಿತವನ್ನೆ ನೀ ||ಪಲ್ಲ||

ಪಾರು ಹರಿಸಿ ಪೊರೆಯೋ ದೇವಾ ||ಪಲ್ಲ||

ನಂಬಿದಾ ನಿಜ ಭಕ್ತರನು |

ಇಂಬುಗೊಂಡು ಕಾಯ್ವೆ ನೀ

ಶಂಭೋ ಶಂಕರಾ ಗಂಗಾಧರಾ

ಅಂಬಾ ಗೌರಿ ವರನೇ ದೇವಾ ||1||

ಶರಣಸತಿಯು ಲಿಂಗಪತಿಯು |

ಸಾರುವ ಶ್ರುತಿ ಸಹಜವು

ಹಿರಿಯ ಸೇವಕ ನಾನೋ

ಕರುಣಾಸಾಗರ ನೀನೋ ಕರುಣಿ ದೇವಾ ||2||

ನಿನ್ನ ಸ್ಮರಣಿಯನೆ ಮಾಡುವೆ |

ನಿನ್ನನೆ ಕೊಂಡಾಡುವೆ

ನಿನ್ನ ಸರಿ ಇನ್ಯಾರು ಕಾಣೆ

ಇಟಪೂರೀಶನೆ ದೇವಾ ||3||

ಹರಿ ಹರ ಬ್ರಹ್ಮ ಪ್ರಳಾಪಿಸುವದ್ಯಾತಕೋ |

ವರದಿ ನಮ್ಮುದರದೊಳು ಜನಿಸಿದ್ದು

ಜನ ಸತ್ತಾಯಿತಿ ಹರಿಹರ ||ಪಲ್ಲ||

ಎಂಥದು ಮರವು ಎನ್ನದು |

ಎಂಥದು ನಾ ಚಿಂತಿಸಿ ಅರುವಿಲ್ಲದೆ

ಅಂತಃಕರಣಾ ಅಂತರಂಗದೊಳು

ಇಂತಾಯಿತು ಅಯ್ಯೋ ||1||

ಪಾಪಿಷ್ಟ ಜನ್ಮವಿದು |

ಪಾಪಿಯ ಮನ ಸಲ್ಲದು

ದಿಟತನದಿಂದ ಪವನರಿದು

ಸ್ವರೂಪವಾಯಿತು ||2||

ಸಟೆಯನುಸರಿಸದ ವಾಕ್ಯವನು ಸ್ಥಿರವೆನ್ನದೆ |

ಚಟ್ಟನೆ ಚೆಂಡಾಡುವನು

ಕುಟಿಲ ಬಿಡದಿರೆ ಇಟಪೂರೀಶನೊಳು

ಸಟೆ ಹಾರಾ ಹರಿಹರ ಬ್ರಹ್ಮಾ ||3||

ಹೇ ರಾಜಯೋಗಿ ಬಾಗಿ ನಡಿಯೆಲೊ |

ಬಹು ಜನತಾಗಿ ನಡಿಯಲೋ ||ಪಲ್ಲ||

ನಾಗಭೂಷಣನೆಂಬೋ ನಾಮವ |

ಕೂಗಿ ಕರಿಯೆಲೋ

ಕುಂಭ ಕ್ಷೋಣಿಯ ಬಾಗಿಲದೊಳ

ಪೋಗಿ ಸುಳಿಯೋ ||1||

ಸಾಧನ ಮೌನದಿ ಸಕಲ |

ಭೇದ ಭಾವಗಳನೆಲ್ಲ ಒಗೆದು

ಆದಿ ಅಂತ್ಯ ಮೀರಿದ ಗುರು

ಪಾದದಲ್ಲಿ ಗುರುತಿಟ್ಟು ಬೇರಿಯೋ ||2||

ಪ್ರಾಣವನ್ನು ಘ್ರಾಣ ನೇತ್ರ |

ಕರ್ಣ ಜಿಹ್ವೆ ಒಲಿದು

ಮಾಣದೇಕೋ ಚಿತ್ತದಿಂದ

ಜ್ಞಾನಮಾರ್ಗ ಸ್ನಾನದಿಂದೆ ||3||

ಶಾಂತ ಮನದಿ ಸಂಭ್ರಮದಿನರಿದು |

ಇಂಥ ಇಟಪೂರೀಶನ ಒಲಿಸಿ

ಪಂಥ ಗೆಲಿಸೋ ಇಹ ಪರ

ಚಿಂತಿ ಅಳಿದು ತಂತು ತಿಳಿದು ||4||

ಶಿವಲಿಂಗ ಸಭೆಗೆ ನಾ ಬಂದೆ |

ಭವಬಾಧೆಯೊಳ ಸಿಲ್ಕಿ ಬಹಳ ನೊಂದೆ ||ಪಲ್ಲ||

ಮಂಗಲ ಮಹಿಮನೆ ರಂಗಮಂಟಪದೊಳು |

ಸಂಗವೆ ಸುಖ ಸಂಭ್ರಮದಿಂದೆ ||1||

ಗಗನಮಾಲಿನೊಳು ಘನ ಗುರುವಿನ ಕಂಡು |

ಸೊಗಸಿದೆ ಸಂಜೀವಾ ಶರಣೆಂದೆ ||2||

ಘಟದ ಗಂಭೀರ ದೊರಿಯೇ ಘಟಮಠ ಸ್ಥಾನ ದೊರಿಯೆ |

ಇಟಪೂರೀಶಾ ನೀ ನಾನೊಂದೆ ಶಿವಲಿಂಗ ||3||

ಸದ್ಗುರು ರಾಯಾ ಬೇಡುವೆನಭಯ |

ಬೇಡುವೆ ಸ್ವಯಂ ಕರ ಜೋಡಿಸಿ ಶಿರಬಾಗಿ

ಬೇಡಿದಾಕ್ಷಣ ದಯಮಾಡೋ ದಯವಂತ ||ಪಲ್ಲ||

ವೈರಿ ಕಂಟಕ ಬಂದು ಒದಗಲಾರದಂತೆ ಧೈರ್ಯ |

ತೋರಿಸಿ ಎನ್ನ ಶೌರ್ಯ ತರಿಸುವಂತೆ ||1||

ಭ್ರಾಂತಿ ಹಲವು ಚಿಂತಿ ಬರಿಯ ಭ್ರಮೆಯೊಳಗಾಗಿ ಕುಂತೆ |

ಭ್ರಾಂತನಾಗದೆ ಮನ ಶಾಂತನಾಗಿರುವಂತೆ ||2||

ಯುಕ್ತಿ ಶಕ್ತಿಯಿಂದ ಇಟಪೂರೀಶನೆ | ನಿಮ್ಮ

ಭಕ್ತಿ ಬೆರಿದು ಜೀವನ್ಮುಕ್ತನಾಗಿರುವಂತೆ ||3||

ಮಾತು ಮಾತಿನೊಳಗೆ ಮರಳು

ಮಾಡಿದನಮ್ಮ ಮಹಾಂತ |

ಇಂಥವನ ಕಾಣಲಿಲ್ಲಮ್ಮಾ ||ಪಲ್ಲ||

ಭಲೆರೆಂದು ಕೂಗುತ ಎಡ ಬಲ ತೂಗುತ |

ಬಲ್ಲಂಗ ಊದಿ ಬೂದಿ ಚೆಲ್ಲಿದನಮ್ಮ ||1||

ಕಸಿವಿಸಿ ನಾ ಬಡುವೆ ಅತಿ ಹುಸಿ ತಾ ನುಡಿವ |

ಮುಸಿಮುಸಿ ನಗನಗತ ಪ್ರೀತಿ ನುಡಿದನಮ್ಮಾ ||2||

ನಿನ್ನ ನಾಂ ಎನಲು, ನೆಲೆ ಕಲೆ ಕೇಳಲು |

ಪನ್ನಂಗಧರೆನೆಂದು ಹೇಳಿದನಮ್ಮಾ ||3||

ತನು ಮನ ಧನವನ್ನು ತನಗೊಪ್ಪಿಸೆಂದಾನು |

ಅನುಮಾನವಿಲ್ಲದೆ ತನ್ನ ಕೂಡೆಂದಾನು ||4||

ಇನ್ನೇನು ಹೇಳಲಮ್ಮಾ ಇಟಪೂರೀಶನ ಪ್ರೇಮಾ |

ಬೆನ್ನಲಿರುವಾಗ ಇನ್ನಾರ ಭಯವು ಏನಮ್ಮಾ ||5||

ಶ್ರೀ ಗಣೇಶ ಈಶ್ವರ ಸುತ |

ಬಾ ನಿಮ್ಮ ಭಜನಾ ಮಾಡುವೆ |

ಸುರು ಬಂದು ವರನ ಬೇಡುವೆ |

ಧರವಿಲಿ ಪದ ಮಾಡಿ ಹಾಡುವೆ ||ಪಲ್ಲ||

ಕರಿ ಮುಖ ತೋರೋ ಪ್ರಾರ್ಥನ ಮಾಡಿ ಬೇಡುವೆ |

ಗುರು ರೂಪ ನೀ ಮಂತ್ರದ ಮಡಿವೆ |

ಕರದೊಳು ರತ್ನದ ತ್ರಿಶೂಲ ಪಿಡಿವೆ |

ಗರರ ಚಕ್ರವ ತಿರವುತ ನಡಿವೆ ||1||

ಚತುರ್ಮುಖ ಚೌಷಷ್ಟೀ ವಿದ್ಯಾದ ವಡಿವೆ |

ಗಜ ಮೂಷಕ ವಾಹನ ಅಜಹಾರಿ ನುಡಿವೆ |

ಗಜ ಚರಮಾಂಬಲ ಪೂಜೆ ಕೊಟ್ಟು ನಡುವೆ |

ಗಜ ಮುಖ ನಿನ್ನ ನಾವು ನಿತ್ಯ ನುಡಿವೆ ||2||

ಬಿಡದೆ ಭಜಿಸು ಗುರುನಾಮ ನುಡಿದ ದುಡಿವೆ |

ಕಡಿ ಪುರಾಣ ಬರದ ವ್ಯಾಸ ಅದು ಯಾವ ದಿಢವೆ |

ಅಡಿಗಡಿಗೆ ನಿನ್ನ ನಾಮವ ಕೊಂಡಾಡುವೆ |

ವಡಿ ದ್ಯಾಗಾಯಿ ವೀಶನ ಮೇಲಗಡಿವೆ ||3||

ನುಡಿ ಬಾರದೇನೋ ಶಿವ ನಾಮವ |

ನುಡದಂಗ ನಡದಿಲ್ಲ ಮಾನವ ||ಪಲ್ಲ||

ನುಡದಂಗ ನಡದಿಲ್ಲ ಮಾನವ |

ದೃಢ ಇಡಲಿಲ್ಲ ಒಂದೇ ಸ್ಥಾನದ||ಅ.ಪಲ್ಲ||

ಗುಡಿವಳಗೆ ಕಾಯಿ ಕರ್ಪೂರ ವೈದು |

ನಡಗಲ್ಲಿಗೆ ಮಾಡತೀರಿ ನಿತ್ಯ ಪೂಜವ |

ಶಿವಶಿವ ಅಂದು ಸೇರಿರಿ ಶಿವಪೂರವ |

ಶಿವ ಶರಣರ ಆಳಾಗಿದ ಬಸವ ||1||

ಮನ ತೃಪ್ತನಾಗಿ ತೀರಿಸಿದ ಹಸವ |

ವಿಷ ಪಾಯಸ ಮಾಡಿ ವಿಷ ಸೇವಿಸಿದ ರುಚಿ |

ಶಿವ ನಾಮವ ನುಡದರ ಬರತದ ಕಸವ |

ಪರಿಪೂರ್ಣ ಇಡರಿ ಏಕೋ ಭಾವ ||2||

ದುರಮರ್ಣ ದೂರಾದಿತೋ ಸಾವ |

ಅರುಣೋದಯ ನುಡಿ ನಾಮ ಶಿವ ಶಿವ |

ಧರಣಿಯೊಳು ನಮ್ಮ ದ್ಯಾಗಾಯಿ ವೀಶನ |

ಚರಣ ಕಮಲದಲ್ಲಿ ಮಾಡ್ಯಾರ ಸೇವಾ ||3||

ಬಸವ ಬಸವ ಬಸವ ಮೂರು ಅಕ್ಷರ |

ಉಸುರುವುದೇ ಮಹಾ ಕಾರಣ |

ಶಿವ ಬಸಿತ ತ್ರಿಪುಂಡದಿ ಧಾರಣ |

ಬಸವ ಮೂರ ಅಕ್ಷರ ಹೆಸರ ಜಪಿಸಿದರೆ |

ಬಿಸಲಾಗುವದು ಶಶಿಚಂದ್ರನ ಕಿರಣ ||ಪಲ್ಲ||

ತುತ್ತಿಗೊಮ್ಮೆ ನೀ ಮತ್ತೆ ಬಸವ ಅನ್ನುತ |

ಸತ್ಯ ಪ್ರಸಾದ ಸಹ ಭೋಜನ |

ನಿತ್ಯ ನೆನಿಯೋ ಬಸವರಾಜನ |

ಕತ್ತಲ ಸಂವತ್ತಿನಾಗ ಹೋದರ ಎತ್ತ

ಹೋದರೆನ್ನ ಹತ್ತ್ಯಾರ ಬೆನ್ನ ||1||

ಮೂರು ಅಕ್ಷರದಲಿ ಮೂರು ಲೋಕಗಳು |

ಸಾರಾಮೃತ ಸಂಪಾದನ ಮುರಹರಿ |

ಮೂರು ಅಕ್ಷರ ಧ್ಯಾನ ಮುರರೊಳಗೆ ನೋಡು |

ಮೇಲು ಶಿಖರನೇರಿ ಆರುಸ್ಥಲದ ಅರು ಜ್ಞಾನದ ಸ್ಥಾನ ||2||

ಶ್ರೇಷ್ಠಾದ ಶ್ರೀ ಗುರುಲಿಂಗ ಜಂಗಮ ಬಸವನಂಗ |

ಅಷ್ಟಾವರಣ ಹಿಡಿದು ಹಸರ ಮಾಡಿಕೊ ತ್ರಿಕರ್ಣ |

ವಸುಧಿಯೊಳು ನಮ್ಮ ದ್ಯಾಗಾಯಿ ವೀಶನ

ಬಸವ ಸ್ತೋತ್ರ ಮಾಡಿ ಪಿಡಿದೇನೋ ಚರಣ ||3||

ಸಾವಿಜ ಮುಕ್ತಿಯ ಮ್ಯಾಲಿಲ್ಲ ಮನಸೋ |

ಭಕ್ತಿ ಮಾಡಿ ಸತ್ಪುರುಷರ ಮನದಣಿಸೋ ||ಪಲ್ಲ||

ಮನ ತೃಪ್ತಿ ಮಾಡಿ ವೀಶನ ನೆನಿಸೋ |

ಭಕ್ತಿ ಮಾಡಿ ದಾನಸೂರ ಮಗನಿಗಿ |

ಕುತಗಿ ಕೊಯ್ದು ರಕ್ತ ಕೊಟ್ಟಿದ ಖಾಸೋ |

ಕಪ್ಪ ಕೊರಳದವನ ಮ್ಯಾಲ ಇಸವಾಸೋ ||1||

ಭಪ್ಪರೆ ಕರ್ಣ ಆಗಿದಿ ಪಾಸೋ |

ಒಪ್ಪಿ ಶ್ರೀಹರಿ ಹಾರಸ್ಯಾನ ಸಿರಸೋ |

ಅಪ್ಪ ಬಸವೇಶ್ವರನ ಕಪ್ಪಿ ಹೊಟ್ಟಿ ಸೀಳಿ |

ತುಪ್ಪ ಸಕ್ಕರಿ ಉಣಸಿದ ಪಾವಿಸೋ ||2||

ಗರ್ವಿನಾಗೇ ಅದರ ನಾಸೋ |

ಕೆಟ್ಟ ಹೊಲುಸ ಪುರಾಣ ಬರದಿದ ವ್ಯಾಸೋ |

ಹೀಂಗ ಸಾರ್ಯಾವ ಶಾಸ್ತ್ರ ಸಮಜ್ಯಾಸೋ |

ಧರಣಿದೊಳಗ ನಮ್ಮ ದ್ಯಾಗಾಯಿ ಗುರುಸ್ತ

ಗುರುವಿನ ನೆನಿಯಾಗಿ ಗುರುವಿನ ಕೂಸೋ ||3||

ಶಿವ ಶಿವ ಶಿವ ಸಿದ್ದೇಶ |

ಮತಿ ಕೊಡೋ ಜಗತ್ ಗುರು ಜಗದೀಶ |

ಪರುವುತ ಗಿರಿಗಾಗಿ ಮಲ್ಲೇಶ |

ಕಂಡು ನೀನರೆ ತೋರಿದಿ ಕಲ್ಲೇಶ | ||ಪಲ್ಲ||

ಮಾಯಿಗಿ ಮರ್ಧನ ಮಹೇಶ |

ಮೋಹಿಸಿದವರಿಗೆ ತೀರಸಿದಾಶ |

ರಾವಣಗ ಕೊಟ್ಟ ಎರಡು ಕೋಟಿ ಆವೀಷ |

ಆರ ಕೋಟಿಗ ಅರ್ ಕೋಟಿ ಮಾಡಿ ನಾಶ || ||1||

ತ್ರಿಪುರ ಕೊಟ್ಟ ಶಂಬೋರೇಶ |

ತ್ರಿಸೂಲ ಮ್ಯಾಲ ಎತ್ತಿದಿ ದೇಶ |

ಭಜನ್ಯಾಗ ಬಾನೀ ತೊಟ್ಟು ವೇಶ |

ವರವಾಗೋ ತಂದಿ ದ್ಯಾಗಾಯಿ ವೀಶ ||2||

ಬದ್ದಾಚಾರಿ ಕೆಟ್ಟ ಕಲಿ ಕರ್ಮವೋ

ಸದ್ಯ ಉಳಿಯಲಿಲ್ಲ ನಿಮ್ಮ ಧರ್ಮವೋ

ಸುದ್ದಲಿಂಗ ಕಟ್ಟಿದ ಗುರುವೋ

ಕದ್ದ ಹಂಜಿ ಬುಟ್ಯಾಗಿಟ್ಟು ಇಲ್ಲ ಶರ್ಮವೋ ||ಪಲ್ಲ||

ಕಚ್ಯಾಗ ಸಿಗಸಂವ ಕಚ್ಚಾ ಕುಲವೋ

ಹೆಚ್ಚಿಗ ಹೇಳಲಿಕ ಇಲ್ಲ ಒಬ್ರು ಚಲವೋ

ಗಚ್ಚಿ ವಸ್ತ್ರ ಕೊರಳಾಗ ಮನವೋ

ಗುರುಬಚ್ಚನಾಗಿ ಮುಟ್ಟು ಗುರುಸ್ತಲವೋ ||1||

ಚೆನ್ನಬವಣ್ಣ ಬರತಾನೆಂದು ವೀಕ್ಷಣವೋ

ಕಾಲಜ್ಞಾನ ಸೂತ್ರ ಬರದಕ್ಷರವೋ

ನೇಮ ನಿಷ್ಠಿಲಿ ಬಿಡಬ್ಯಾಡ್ರಿ ಪೂರಾ ಕ್ಷೇಮವೋ

ಮುಂದ ಕಷ್ಟವ ಕೊಡತಾರ ಯಮಲೋಕ ಶಿಕ್ಷಾವೋ ||2||

ಭಜನ ಮಾಡವರಿಗ ಹೇಳತೀನಿ ಮುಗಿದು ಕರವೋ

ನಗಬ್ಯಾಡ್ರಿ ಭಜನ್ಯಾಗ ಎಂದು ಗರ್ವೋ

ಭಕ್ತಿ ಮಾಡಿ ಬೇಡಕೋರಿ ವರವೋ

ಹೊಕ್ಕಿ ಬೇಡೋ ದ್ಯಾಗಾಯಿವೀಶಗ ಅಧಿಕಾರವೋ ||3||

ಭೂ ಲೋಕಕ್ಕೆ ನಾವು ಬರಬೇಕಾದರೆ

ಧರ್ಮನಂಗ ಧೈರ್ಯ ಇರಬೇಕೋ ||ಪಲ್ಲ||

ದುಸ್ಮಾನಂತ ವಿಶ್ವಾಸ ಘಾತಕ

ಇದ್ದೇನು ಉದ್ದ ಹುರಿಯದಕೋ

ಆರು ಎಂಟೋ ಅರ್ಜುನ ಬಂದ

ಮ್ಯಾಗ ವಿಚಾರನೆಂಬೋ ಕೃಷ್ಣ ಇರಬೇಕೋ ||1||

ಸಿಟ್ಟ ಎಂಬೋ ಭೀಮ ಹುಟ್ಟಿ ಬಂದ

ಮ್ಯಾಗ ನೀಚ ಕೀಚಕನ ಸಿರ ಬಿಡಸದಕೋ

ಆಶಾ ಎಂಬೋ ಕೆಟ್ಟ ಫಾಸಿ ಕ್ವಾರನಿಗೆ

ಹೇಸಿ ಶಕುನಿ ಅಂತ ಕರಿಯಬೇಕೋ ||2||

ಜ್ಞಾನ ಎಂಬೋ ನಕುಲ ಸಹಾದೇವನಿಗೆ

ಆಗೋ ಭವಿಷ್ಯ ಎಲ್ಲಾ ತಿಳಿಯುವದಕೋ

ದೇಶದೊಳ ನಮ್ಮ ದ್ಯಾಗಾಯಿ ವೀಶಾನ

ದ್ಯಾಸ ಮಾಡಿ ಸಂಶ ಕಳಿಯುವದಕೋ ||3||

ಹ್ವಾದಿ ಹ್ವಾದಿ ಹ್ವಾದಿ ನಿನಗಿಲ್ಲಿ ಸಿಗಲಿಲ್ಲ ಹಾದಿ

ದೊರಕೋಣಿಲ್ಲ ಸಿಂಹಾಸನ ಗಾದಿ

ಎಂದಿಗ ತಪ್ಪುದು ಯಮಬಾದಿ

ಹಾದರ ಕಳವ ಕರ್ಮದ ಯಾದಿ ||ಪಲ್ಲ||

ಹಂತವನಿಗ ಕುಡಬಾರದೋ ಗುರು ಬೋಧಿ

ಮುಂಚ ಗುರುವಿಗಿ ತರ್ಕ ಮಾಡಿ ತಿಳಿ

ಯಮ ಬಾದಿ ಸಿಗಲಿಲ್ಲ ಇದರ ಹಾದಿ ||1||

ಗುರು ಬೋಧಿ ಎಂಬುದು ದೊರಮರಿಯಾದಿ

ದೊರಕುತೈತಿ ಸಿಂಹಾಸನ ಗಾದಿ

ಗೋತ್ರ ಸೂತ್ರ ಶಿವ ಮಂತ್ರ ಜಪಿಸಿದಂವ

ಅವನಿಗನಬೇಕು ಗುರುಪುತ್ರನ ಅವಲಾದಿ ||2||

ಮಾಯಾ ಪ್ರಪಂಚದೊಳಗೇ ಆದಿ

ಹಸುನಾಗಲಿಲ್ಲೋ ಕಸ ಬಿದ್ದಾದ ಬೂದಿ

ಕಸುರವಿಲ್ಲದಂಗ ಉಡುಗಿ ಹಸುನ ಮಾಡಿ

ಕಕಲತಿ ಮಾಡಿ ಚಲ್ಲೊ ಕಸ ಬೂದಿ ||3||

ಕಾಮ ಕ್ರೋಧಗಳು ಕಳಿಯಲ್ದ ಕುಳಿತಿ

ಭೂತ ಪಿಶಾಚಿಯಾಗಿ ಭುವನ ತಿರಗತಿ

ದ್ಯಾಗಾಯಿ ವೀಶನ ಧ್ಯಾನ ಮಾಡಿದರ

ದೆವ್ವ ಹೋಗಿ ದೇವರಾಗತಿ ||4||

ನೀನು ತಿಳಕೋ ನಿನ್ನ ಮನಕೋ

ಸತ್ಯಾಗ್ರ ಹಾದಿ ನೀನು ಹಿಡಕೋ ||ಪಲ್ಲ||

ಪಂಚ ತತ್ವದ ದೇಹ ಅದ ನೋಡಿ ಎಳಕೋ

ಒಳಗಿನ ಕಿಲ್ಮವು ಜಳ ಜಳ ತೊಳಕೋ

ಮ್ಯಾಗ ನೀರ ಹಾಕಿ ಮಾಡಬ್ಯಾಡ ಜಳಕೋ

ಕೆಟ್ಟ ಗುಣಗಳು ಹೊರಗ ನೂಕೋ ||1||

ಆಚಾರ ಲಿಂಗಕ್ಕ ವಿಚಾರ ಮಾಡಕೋ

ಸೂಚಿರಲಿಂದ ನಿನ್ನ ಕರ್ಮವು ಸೆಳಕೋ

ಮಾಡಬ್ಯಾಡ ನೀ ಏಕ ಬಳಕೋ

ಬಳ್ಳಿಗ ಬಳ್ಳ ಅಂತರ ವಿಟ್ಟಾರ್ಯಾಕೋ ||2||

ಒಂದೇ ನೇತ್ರ ಕುಲ ಮಾಡಿದ ಏಕೋ

ಕಪ್ಪ ಕಡಿ ಕುರಿಮರಿ ಅದ ಎಳಕೋ

ಬಿಳಪ ಬೀಜ ಕಡಿಯಾದು ಯಾಕೋ

ದ್ಯಾಗಾಯಿ ವೀಶನ ಮುಕ್ಕಿ ಬೇಡಕೋ ||3||

ಕಾಗಿ ಕರಿಯುತಾದ ಪೋರಿ ಕಾಗಿ ಕರಿಯುತಾದ

ಕಾಗಿ ಕರಿಯುವದು ದೊಡ್ಡ ಯೋಗಿಗ ತಿಳಿದಿಲ್ಲ

ನಿನ್ನಂತ ಮರಳಿಗೆ ಏನು ಗೊತ್ತಾದ ||ಪಲ್ಲ||

ಜೀವಾತ್ಮ ಅಂಬುವದೇ ಕಾಗಿ

ಕಾಂತಿ ಅಂಗ ಹೆಸರಂದಿ ಮಾಗಿ

ದೇಹದೊಳಗಿನ ಜೀವಾತ್ಮ ಹೋದ ಮೇಲ

ಹೆಸರು ಹೆಣನಂತ ಕೂಗಿ ||1||

ಇನ್ನ ಒದರ ಬ್ಯಾಡ ಗೂಗಿ

ಪಾದ ಪಿಡಿಯೇ ನೀನು ಬಾಗಿ

ಗೂಗಿಯಂತೆ ರಾತ್ರಿ ಟೈಮಿನಾಗ ಸಿಗತಾದ

ನೋಡ ಐಗೋಳ ಜೋಗಿ ||2||

ಇದ್ಯಾತಕೋ ಸದ್ಗುರು ಸೇವಾ ಮಾಡಲ್ದೇ

ಬದ್ಧ ಭವ ಕೂಡು ಇದ್ದುವಿಲ್ಲದೇ ||ಪಲ್ಲ||

ಇದ್ಯಾತಕೋ ಶ್ರೀ ಸದ್ಗುರು ಸೇವಾ

ಬದ್ಧ ಭವದೊಳು ಮಾಡಲ್ದಂವ

ಸದ್ಯ ಮುಕ್ತಿ ಸಿಂಹಾಸನದಾಗೆ

ದೊರಕೋಣಿಲ್ಲ ಹದ್ದು ಕಾಗಿ ಜನ್ಮಕವಾಗಿ ||1||

ಗುರುವ ಮುಟ್ಟಿ ಗುರುವಾಗದೆ ಗುರುವಿನ

ಗುರುತವನರಿಯವ ಈ ಕರಿ ತೆಲಿ ಮಾನವ

ಗುರುವ ಶಿಷ್ಯರು ಅಂತರ ಪ್ರಸಾದ

ದೊರಕುತೈತೇನ್ರಿ ಕುರುಡನ ಕೈ ಕುರುಡ ಹಿಡದರ ಹಾದಿ ||2||

ಉಪಾಯ ಗುರುವಿನ ಕೃಪಾಯವಿಲ್ಲದಂವ

ತಪಾ ಮಾಡಿದಂವ ಅಪಾಯ ಒದಗಿತು

ಜಪಾ ಮಾಡೋ ಸನ್ಯಾಸಿ ಸಾವಜನ

ಅಪ್ಪೋರ ಪುಣ್ಯವಿದ್ದು ವಿಲ್ದೇ ||3||

ಕಾಯ ಹಿಡಿದು ಜೀವಾತ್ಮ ರಾಶಿ

ಉಪಾಯ ಗುರುವಿನ ಬಾಯನ ಮಂತ್ರ

ಮಾಯಿ ಜಪಿಸಿ ಆಗ್ಯಾಳ ನಿಜಮುತ್ತೈದಿ

ಹೋಯಿತು ಗುರವಿನ ಮಂತ್ರದಿಂದ ಗುಂಡಪ್ಪನ ಯಾದಿ ||4||

ಇಷ್ಟ ಲಿಂಗ ಧರಿಸೋ ನೇಮ ನಿಷ್ಠಿಲಿ

ಅಷ್ಟ ವರ್ಣ ಜ್ಞಾನ ದೃಷ್ಟಿಲಿ

ಕಷ್ಟ ಬಿಡೋ ಶ್ರಾವಣ ಶಿವಲೀಲಿ

ಶ್ರೇಷ್ಠ ಪ್ರಸಾದ ತೊಗೋ ನೀ ಪ್ರೀತಿಲಿ ||ಪಲ್ಲ||

ಗುರುಲಿಂಗ ಜಂಗಮ ಮನುಜರಲ್ಲಿ

ಗುರ್ತವ ತಿಳಿಬೇಕು ಗುರುಕೀಲಿ

ಗುರು ದೀಕ್ಷಾವ ಇಲ್ಲದೆ ತಿಂದಿ ಜೋಲಿ

ಮುಂದ ಮೋಕ್ಷಕ ಹಂದುದಿಲ್ಲೊ ಹುಚ್ಚ ಪ್ಯಾಲಿ ||1||

ಮಹಾಪಾತಕ ತೊಳಿಬೇಕೋ ಮನ ಮೈಲಿ

ಸಾರ್ಥಕ ಆಗಬೇಕೋ ಶಿವನಲ್ಲಿ

ಅರ್ಥವ ತಿಳಿಬೇಕೋ ಅರವೀಲಿ

ಇದ್ಯಾತಕೋ ಸದ್ಗುರು ಸೇವಾ ಮಾಡಲ್ದೇ ||2||

ನಿನಗ ತಿಳಿಯಲಿಲ್ಲ ಸಾಂಬನ ಹೊರತ ದೇವರಿಲ್ಲ

ಬಂಡಿಗಲ್ಲಿಗ ಭಂಡಾರ ಬಡದೆಲ್ಲ ಇದು ಕಾಡಗಲ್ಲು ||ಪಲ್ಲ||

ಟೆಂಗ ಒಡಿ ಅಂದಾನ ಮುಲ್ಲಾ

ತಿಂದು ಪರಟ ಒಗದಾರಲ್ಲಾ

ದೇವರು ನೆವದಿ ಉಣಲಿಲ್ಲಾ

ಇದು ಮನಸ್ಸಿನಾನ ಮಾತ ಭುಗುಲಾ ||1||

ನೀ ತಿಳಿ ಈಗ ಅಕಲ

ಗುರುವಿನ ಬಲ್ಲಿ ತೊಗೋ ಗುರುಪ್ಯಾಲ

ದೇಶದೊಳು ದ್ಯಾಗಾಯಿ ಶೇಲ

ಗುಂಡುನ ಗುಡ ಬಿದ್ದಿರಿ ಬ್ಯಾಲ ||2||

ಸಿಟ್ಟ ಬಂದರ ಪಟೇದ ಹುಲಿಗ ಹೊಡಿಯೋ

ನಷ್ಟ ಗುಣ ನಾಯಿಗ ಕಡಿಯೋ

ಕಷ್ಟ ಮಾಡಲಾಕ ಕೊಟ್ಟಿದ ಮುಸರಿ

ಮುಟ್ಟತನಕ ದುಡಿಯೋ ||ಪಲ್ಲ||

ಮುಷ್ಠಿಲಿಂದ ಮುರವಿನ ಉಂಗುರ ಮುಡಿಯೋ

ಇಷ್ಟಾರ್ಥ ಕೊಟ್ಟು ನೋಡಿ ಪಡಿಯೋ

ಕೊಟ್ಟು ಕೊಟ್ಟೆವಂತ ಅನಬೇಡ

ಕಟ್ಟಿದ ಬುತ್ತಿ ಹಂಗೆ ಕಡಿಯೋ ||1||

ಕಟ್ಟಿದ ದ್ಯಾಗಾಯಿ ಪದದ ಅಡಿಯೋ

ಪಿಟ್ಯಾದ ಸಕ್ಕರಿ ಸವಿ ನುಡಿಯೋ

ಮುಟ್ಟಿದ ಗುರುವಿಗ ಮಗ ಅನಸಿದ

ಗುಂಡುನ ಕವಿಗೊಳು ಮೇಲಗಡಿಯೋ ||2||

ಗುರು ನಡದಿಲ್ಲ ನೋಡರಿ ಅಂವ ನೇಮ ನಿಷ್ಠಿ

ಈ ಭವದೊಳು ಬಂದು ಮೊದಲೆ ಕೆಟ್ಟ

ವಿಚಾರ ಲಿಂಗಕ್ಕ ನೀ ಎಲ್ಲಿ ಇಟ್ಟಿ ||ಪಲ್ಲ||

ಲಿಂಗಾ ಕಟ್ಟದ ರೊಕ್ಕಾ ನೀ ಹ್ಯಾಂಗ ಬಿಟ್ಟಿ

ನಿಮ್ಮ ಬಲ್ಲಿ ಸೊಕ್ಯಾದ ಪಾಪದ ಮಟ್ಟಿ

ಜರ ಅರವೀಲಿ ನಡೆಬೇಕೋ ಹುಚಗೊಟ್ಟಿ ||1||

ಸಿಂದಿ ಶೆರಿ ಕುಡ್ಯಾದು ನೀವು ಘಟ್ಟಿ

ಖಂಡಾ ತಿಂದು ನೀ ಈಗ ಕುಲಗೆಟ್ಟಿ

ನಾಮ ಜಂಗಮರಂತ ಹ್ಯಾಂಗ ತಿಳಿಯಬೇಡ ದೃಷ್ಟಿ ||2||

ಪಾಪದ ಕರ್ಮವು ಸುತ್ಯಾದ ಪಾಪಿಷ್ಟಿ

ದ್ಯಾಗಾಯಿ ಭಜನಿಗೂಡ ಹಿಡಿಬ್ಯಾಡ ತಿಗಟಿ

ಪಾಪ ಉದ್ಧರ್ಣ ಮಾಡಿ ಪಾದಹಿಡಿ ಗಟ್ಟಿ ||3||

ಆಗೆಲ್ಲಿ ಇತ್ತೋ ಆಚಾರ ಇದ್ದಿದಲ್ಲ ಯಾರ್ಯಾರ

ಮೊದಲೆ ಇತ್ತೋ ನಿರಂಕಾರ

ಓಂ ಎಂಬೋ ಅಕ್ಷರ

ನೀರಿನ ಮ್ಯಾಲ ಅಂತರ ತಿಳಿದು

ನೋಡೋ ಇದರ ವಿಚಾರ ||ಪಲ್ಲ||

ಪಂಚಭೂತ ತತ್ವ ತಯಾರ

ಆಮೇಲೆ ಶರೀರದಾಕಾರ

ಹಿಂದಿದ್ರೊ ಸೂರ್ಯಚಂದರ

ತಿಳಿಯಲಾರದೆ ಪದ್ಯ ಹಾಡ್ಯಾರ ||1||

ಬುದ್ಧಿ ಜ್ಞಾನ ಮಾಡಿ ಇಟ್ಟಾರ

ದುರ್ಗುಣಕ ದೂರ ಬಿಟ್ಟಾರ

ಗರ್ವ ಅಹಂಕಾರ ಸುಟ್ಟಾರ

ಶಿವನಾಮ ಅದಕೆ ಇಟ್ಟಾರ ||2||

ದೇಶದೊಳು ದ್ಯಾಗಾಯಿ ಊರ

ಅಲ್ಲಿ ಹರ ಬಲಭೀಮ ದೇವರ

ಕವಿ ಹರ ನಿರಕ್ಷರ ಆತನ ಚರಣಕ ಮುಟ್ಯಾರ ||3||

ಹುಟ್ಟಬೇಕಂತ ಲೋಕದಾಗ ಹುಟ್ಟಿನಿ

ಕೆಟ್ಟ ಕೃತಿ ಮಾಡಿ ನಾ ಎಲ್ಲ ಕೆಟ್ಟಿನಿ ||ಪಲ್ಲ||

ಜ್ಞಾನ ದೃಷ್ಟಿ ಎಂಬೋ ದೂರ ನಿಗಾ ಇಟ್ಟಿನಿ

ಅಷ್ಟ ಮದಾ ಎಂಬೊ ಎಂಟು ಆನಿ ಕಟ್ಟಿನಿ

ಆನಿ ಮಸ್ತಕ ಮ್ಯಾಲ ಉಳಿ ಇಟ್ಟು ಮೆಟ್ಟಿನಿ ||1||

ಬ್ರಹ್ಮಿ ಎಂಬೋ ಬಸವಿಗೆ ನಾ ಬಿಟ್ಟಿನಿ

ಬ್ರಹ್ಮ ಜ್ಞಾನ ಲೆಕ್ಚರನಾ ಕೊಟ್ಟಿನಿ

ಬಾಲ ಬ್ರಹ್ಮಚಾರಿ ಆಗಿ ನಾ ಸುಟ್ಟಿನಿ ||2||

ಕಳ್ಳ ಗುಣ ಎಂಬೋ ಕಳ್ಳಗ ಹಿಡಿದು ಕುಟ್ಟಿನಿ

ಅಳ್ಳ ಮಾಡಿ ಆರ ಸೂಳೆರಿಗ ಒಟ್ಟಿನಿ

ಬಸ್ತಿ ದ್ಯಾಗಾಯಿ ವೀಶನ ಪಾದಕ ಮುಟ್ಟಿನಿ ||3||

ದುರುಮರ್ಣ ತಪ್ಪಿಸಿ ಶಿವಶರಣರು

ಮರಣ ಇಲ್ಲದ ಬ್ರಹ್ಮಣರೋ

ಶರಣರ ಕಿನ್ನ ಶಿವಾ ಆಗಿ ಸಣ್ಣವರೋ

ಪ್ರಮಾಣಿಸಿ ಪ್ರತ್ಯಕ್ಷ ಕಾಣುವರೋ ||ಪಲ್ಲ||

ತ್ರಿಗುಣ ಕಳದು ತ್ರಿಮಲ ಮಾಡಿ ಜೋರೋ

ಕರ್ಣ ಪ್ರಸಾದ ಪಾದೋದಕ ಜೋರೊ

ಪೂರ್ಣ ಬಸವಣ್ಣನವತಾರೋ

ಕಾಣುಸ್ಥಾನ ನೋಡೋ ಕಲಿದಾಗ ಕಣ್ಣಾರೋ ||1||

ಸಂಪತ್ತಿನ ಶ್ರೀಮಂತ ಸಾಹುಕಾರೋ

ಸಂತಾನಿಲ್ದಕ ಸತಿಪತಿ ಮರಗಿದರೋ

ಪಂತ ಹಾಕಿ ಶರಣಗ ವರು ಬೇಡಿ ಅವರೋ

ಸಂತಾನ ಕೊಟ್ಟ ಹಣ ಕೊಡತೇವಂದ್ರೋ ||2||

ವರ್ಷಿಗ ಗಂಡಸ ಮಗ ಜನಸಿದರೋ

ಫರ್ಸಿ ತಂದು ಜಂಗ ನೆರಸಿದರೋ

ಸಾವಿರ ಕೊಟ್ಟು ಸಂತಾನ ಮಾಡಿ ಹೆಸರೋ

ಸಹಸ್ರ ಜಂಗಮರ ಬಿನ್ನ ಮುಗಸ್ಯಾರೋ ||3||

ವೃತ್ತಿ ದಾಸೋಗಿಟ್ಟಾರ ಧರ್ಮ ಪ್ರಕಾರೋ

ಧರ್ಮಾರ್ಥ ಉಣತಾರ ಎಷ್ಟೋ ಬಡ ಜನರೋ

ಧರ್ಮದಂವ ಮಾಪ ಮಾಡಿದ ಸರಕಾರೋ

ಧರ್ಮದ ಪ್ರಸಾದ ಮುಗದ ದ್ಯಾಗಾಯಿ ಕವಿಗಾರೋ ||4||

ಸುಮ್ಮನೆ ಬ್ಯಾಡೋ ತಿಳಿದು ನೋಡೋ

ನಿನ್ನ ಮನ್ಯಾಗ ಉಂಡಾಂಡೋ ||ಪಲ್ಲ||

ಸುಮ್ಮನೆ ಬ್ಯಾಡ ನಾ ಅಂತಿನಿ ಕದನಾ

ವಡದಂಗ ಆದಿತು ನೋಡಪ್ಪ ಮದನಾ

ಹೀಂಗೆ ಮಾಡತಿದ ಮನಾಸದನಾ

ನೇಮವಿಟ್ಟು ನೀವು ಮಾಡಿರಿ ಭಜನಾ ||1||

ನಾವೇ ಭಲಾ ಅಂತ ನೀವೇ ಅಂತಿರಿ

ಮತ್ತ ಹಲ್ಲ ಕರಕರ ತಿಂತಿರಿ

ತಾಸಿನಾಗೆ ಕಟ್ಟಿ ಬಿಟ್ಟ ಹಂತಿರಿ

ಮೂರದಿಂದ ಮಾಡಿಕೋರಿ ನಿಮ್ಮ ಸಂತಿರಿ ||2||

ನೂರಾ ಒಂದು ಮನುಷ್ಯರೆ ಹುಟ್ಟಿರಿ

ಸ್ವಲ್ಪ ಕೇಳರಿ ನೀವು ಕಿವಿ ಕೊಟ್ಟರಿ

ನಾವೇ ಅಂತ ನೀವು ಧೈರ್ಯ ತೊಟ್ಟಿರಿ

ಭೀಮೇಶನ ಕೈಯಾಗ ಪ್ರಾಣ ಕೊಟ್ಟಿರಿ ||3||

ದೇಶದೊಳಗ ನಮ್ಮ ದ್ಯಾಗಾಯಿ ಪಾಡೋ

ವೀಶನ ಭಜನಿ ರೋಜಿ ಮಾಡೋ

ಬೇ ಫರಾಕ್ ನೀ ನೀತಿ ಹಾಡೋ

ದ್ಯಾಗಾಯಿ ವೀಶಾಗ ಮುಕ್ತಿ ಬೇಡೋ ||4||

ಭಜನಾ ಮಾಡಿರಿ ಕಷ್ಟವು ಪಡಿದು

ಶಿವ ನಾಮವ ಬಾಯಲಿ ನುಡಿದು

ಮರುವಿನ ಜನ್ಮಕ ಬಂದು

ಅರುವಿನಲ್ಲದೆ ನೋಡಪ್ಪ ಬಂದು || ಪಲ್ಲ

ಸ್ಥಿರವಿಲ್ಲ ನೋಡಪ್ಪ ತಿಳಿದು

ಗುರುತವಿಲ್ಲದ ನನ್ನದು ಅಂದು

ಆಶಾ ಮಾಡಿದ ಕಷ್ಟವ ಪಡಿದು

ಇಷ್ಟದಂತೆ ಮಾರ್ಗವ ಹಿಡಿದು ||1||

ಪ್ರಪಂಚ ಕಷ್ಟ ಅಂಬುವದು

ನೀವು ನಷ್ಟ ಆಗಿರಪ್ಪ ಇದರಾಗ ಬಿದ್ದು

ಗುರುವಾಕ್ಯ ಕೇಳೋ ನೀ ತಿಳಿದು

ಸ್ವತಾ ಧ್ಯಾನ ಮಾಡೋ ನೀ ಅಳದು ||2||

ಅಷ್ಟ ಮದ ಆರು ಗುಣ ಅಳಿದು

ನಿತ್ಯ ಗುರುವಿನ ಪಾದವ ಪಿಡಿದು

ಸಿದ್ಧಾರಾಮಗ ಕರಣಿಸೋ ಬಂದು

ನಿನ್ನ ಕೃಪಾ ನನ್ನ ಮ್ಯಾಲ ಇಂದು ||3||

ದ್ಯಾಗಾಯಿ ಪದ ಕೇಳಬಹುದು

ಅಲ್ಲಿ ದ್ಯಾಗಾಯಿ ವೀಶಗ ನೆನದು

ಭಜನಿ ಮಂಡಳಿಗವರು ಅವರದು

ಸ್ತೋತ್ರ ಮಾಡಿ ಪದ ಹಾಡುವುದು || ||4||

ಪಾರಮಾರ್ಥಕ ದುಡಿ ಪರಮಾತ್ಮ

ದೊರಿತಾನ ಪ್ರಪಂಚ ಮಾಡಂವಗ

ಪ್ರಭುನ ಪ್ರಾರ್ಥನಾ ಮಾಡಂವಗ

ಪ್ರಥಮ ಪಿತ್ಯಾರ್ಥ ನೋಡಂವಗ ||ಪಲ್ಲ||

ಪರಧನ ಬಿಡು ನೀ ನೀರ ಬಟ್ಟಂಗ

ಪರೋಪಕಾರ ಮಾಡೋ ಕುಡು ಕೊಟ್ಟಗಂ

ಪರಸ್ತ್ರೀ ಮ್ಯಾಲ ಬ್ಯಾಡ ಇರು ಕಣ್ಣ ಕಟ್ಟಂಗ

ಪರರ ಹಿತಕ ದುಡಿ ನೀ ಕೊಟ್ಟಂಗ ||1||

ಆರು ಗುಣ ಅಳಿಬೇಕು ತಿಳಿ ಅಷ್ಟಾಂಗ

ಮೂರು ಗುಣ ತಿಳಿದಿರಬೇಕು ಸುಟ್ಟಂಗ

ಮೂರು ಆರು ಒಂಭತ್ತು ಹರಿ ಬಿಟ್ಟಂಗ

ಬಿಡಬ್ಯಾಡ ಬಿಗಿ ಹಗ್ಗಿಲ ಕಟ್ಟಂಗ || ||2||

ಪ್ರಪಂಚ ಸಾಧುರ ವೇಸ ತೊಟ್ಟಂಗ

ಸಾಧು ಕಬೀರ ತನ್ನ ಸತಿಗಿಟ್ಟಂಗ

ಪಂಢರಿ ಸಾಹುಕಾರನ ಸಾಲ ಕೊಟ್ಟಂಗ

ಸಾಧು ಕಬೀರಗ ಸಾಹುಕಾರ ಮಾಡಿ ಸಾಷ್ಟಾಂಗ ||3||

ನರ ಜನ್ಮಕ ಹುಟ್ಟಿರಿ ಹುಟ್ಟಂಗ

ನರ ದೇಹದ ಸಂಗತಿ ಬಿಟ್ಟಂಗ

ಬಿಟ್ಟು ನಡಿ ಹಸಿ ಗಡಗ್ಯಾಗ ಅನ್ನ ಅಟ್ಟಂಗ

ದ್ಯಾಗಾಯಿ ವೀಶನ ಚರಣಕ ಮುಟ್ಟಂಗ ||4||

ಸುದ್ದ ನಡತಿ ಯಾಕ ಬಿಡತಿ

ಗುದ್ದಿ ಹಾಕಂವ ಕೇಳತಾನ ಘಡತಿ

ಗುದ್ದಿ ಹಾಕಂವ ಯಮರಾಜ

ಇರಲಾಕಾಗಿ ಬದ್ಧ ಜ್ಯಾಲ ನಡಿತಿ

ಮದ್ಯ ಮಾಂಸ ಮತ್ತು ಕದ್ದ

ಕಳವು ಮಾಡ ಭಜನ್ಯಾಗ ಹಾಡತಿ ||ಪಲ್ಲ||

ಸಾ ಎಂಬೋ ಆರು ಗುಣ ಸಾಕಿರಿ

ಬಳಗ ಸಾಧುನಂಗ ಕಾಣತಿ

ಶಿವನಾಮ ಬಿಟ್ಟು ಸೂಳಿ ಸೋಂಗ

ತಗದು ಸೂಳ್ಯರ ನೋಡಿ ಸುಳದಾಡತಿ ||1||

ಅಂಗದ ಅನುಭವ ಅರೇಕಲ್ತು

ಮಂಗ್ಯಾನಂಗ ವದರತಿ

ಜಂಗಮಾದರ ಜಲ್ದಿ ಹೇಳೋಬಾರ ಜ್ಯೋರ್ತಿಲಿಂಗ

ದೇಹದ ಮ್ಯಾಲ ಯಾವ ಯಾವ ಜಾಗದಾಗೈತಿ ||2||

ತಿರವ್ಯಾಹತ್ರಿ ಖೋಡಿ ಪದ ಕಲ್ತು

ಬಂದು ತಿರುಗಿ ಹಾಡತಿದಿ ಹೆಂತಾಭಾತಿ

ತೇರಾಲಿಂಗ ಅಂಗದ ಮೇಲ ಯಾವ ಯಾವ

ದಳ ಹೇಳೋ ದಳ ಎದ್ದಂಗ ಹಾರತಿ ||3||

ಮುತ್ತಿನ ಬೆಲಿ ಮುತಗಾರನೆ ಬಲ್ಲ

ಕತ್ತಿ ಕಾಯವನಿಗೇನು ಗುರುತೈತಿ

ಬತ್ತಿಸಕೂಟದ ಹೆಸರ ಲೆಕ್ಕ ಮಾಡಿ

ಹೇಳೋ ಭಜನಿ ಬಿಟ್ಟು ಓಡತಿ ||4||

ಬದ್ಧವಿಲ್ಲದೆ ನೀವು ತಾಳ ಬಡದು

ಸಭಾ ಗದ್ದಲ ಮಾಡಿ ಭರತಿ

ಖುದ್ಧ ಗುರುವಿನ ಆಣಿ ಅದಾ ಸದ್ಯ

ಜವಾಬ ಮಾಡಿ ಹೇಳೋ ದ್ಯಾಗಾಯಿ ಧರತಿ ||5||

ಭಜನಿ ಮಾಡನು ಬನ್ನಿರಿ

ಭಜಿಸೋ ನಾಮ ಬಸವಾ ಬಸವಾ

ಬಸವ ನಾಮ ಜಪಿಸಿ ಸವಿರುಚಿ

ಮುಖದೊಳು ಉದ್ಭವಿಸಿದಿ | ||ಪಲ್ಲ||

ಜನಿಸಿ ಜೆಡಿಯೊಳು ಬಂದು ಶಿಶುವಾ

ಶಶಿಯ ಸೋಮವ ಸಾರಿದಿ

ಹಸುವು ಆಗ್ಯಾದೆಂದು ಬಸವ

ಹೋಗಿ ಕ್ಷೀರಸಾಗರ ಕುಡದಿ ||1||

ಸಹಸ್ರ ನಾಮ ಶೂನ್ಯದ ಚಕಡಿ

ಪ್ರಭುಗ ಗೊತ್ತಿಲದಿರತಿದಿ

ಉಸುರಲಿಂದೆ ವಿಷ್ಣುಗ ಹಾರಿಸಿ

ಮುರಿದು ಕಾಲ ಹೆಸರಾಗಿದಿ ||2||

ವೃಶಾ ಬಿಂದು ನಾಗವೀಂದ್ರಗ

ಹೊಡದು ಸಿಂಹಾಸನ ಗೆದ್ದಿದಿ

ಬ್ರಹ್ಮಾಂಡ ನವಖಂಡ ಕಾಸಿ

ದಶಖಂಡ ಪೃಥ್ವಿಗಧಿಕಾರಾಗಿದಿ ||3||

ತಾನೇ ಆಗಿ ಸೋತು ಪ್ರಭುಗ

ಮಾನಕೊಟ್ಟು ಶ್ವಾನಾಗಿದಿ

ದರ್ಣಿದೊಳು ದ್ಯಾಗಾಯಿ ವೀಶಾನ

ಧ್ಯಾನ ಸಂಬಾನ ವರದಿ ||4||

ಲಿಂಗ ಪೂಜೆ ಮಾಡೋ ನಿಜ ಭಕ್ತ

ನಿತ್ಯ ಕಾಲ ಮೂರ ಹೊತ್ತ ||ಪಲ್ಲ||

ಅಂಗ ಲಿಂಗ ಜಂಗಮನೆ ವಿರಕ್ತ

ನಿತ್ಯ ಸೇವಿಸಬೇಕೋ ಆತನ ತೀರ್ಥ

ಮೋಕ್ಷ ಹೊಂದಂವ ದೀಕ್ಷಾವಂತ

ಆಚಾರ ವಿಚಾರ ಸುಚಿರಭೂತ ||1||

ಕಾಶಿದೊಳಗ ವೀಶನ ನೆನಸುತ

ಸರ್ವ ದೇವತ್ರ ಸೃತಿಯ ಸಾರುತ

ಸರ್ವ ಲೋಕ ಸದ್ಯವಾಗಿ ಪೋಕತಾ

ಪವಿತ್ರ ಅದಾ ಅಷ್ಟ ಪರವ್ರತಾ ||2||

ಸತ್ಯ ಶರಣ ಬಸವಣ್ಣಗ ಬೆರಿತಾ

ಇಷ್ಟಲಿಂಗ ಕಟ್ಟಿ ವಿಚಾರ ಕಲಿತಾ

ಕಟ್ಲದಂವ ಅಂವ ಹನಾ ಘರತಾ

ಅವನಿಗನಬೇಕು ಜಾತಿಯ ಹೊರತಾ ||3||

ಅಂಬಿಗಾರ ನಮ್ಮ ಚೌಡಯ್ಯ ಚಡತಾ

ವೀರಶೈವ ಸದಾ ಆಚಾರ ಹಿಡತಾ

ಗೋತ್ರ ಸೂತ್ರ ಮ್ಯಾಲ ಮಾಯಾ ಮಮತಾ

ಲಕ್ಚರೆ ಕೊಡುವವ ವಿಚಾರವಂತ ||4||

ಅರವತ್ತಾರು ಶೇಲ ಸಮಸ್ತ

ಶೀಲವಾದ ಚನ್ನಬಸವಣ್ಣ ಚಡತಾ

ಲೀಲವಿಲ್ದೇ ಬಸವಣ್ಣನ ಹಿಡತ

ಮೋಲವಿಲ್ಲ ದ್ಯಾಗಾಯಿ ವೀಶನ ಕವಿತಾ || ||5||

ನೀ ಯಾರೋ ಬಂದಿದ್ಯಾಕ ಯಾರೆಂಬುದು

ಇಲ್ಲ ಧ್ಯಾನಕಾ ಬರಂಗೆ ಬಂದಿದಿ ನರಜನ್ಮಕಾ

ಮೂರ ದಿನದ ಸಂತಿ ಬಜಾರ ಮುಗಿಸಿ

ಹೋಗತವ ತಮ್ಮ ಮೂರು ಲೋಕ ||ಪಲ್ಲ||

ಹುಟ್ಟೋದು ಸಾವೋದು ಸಾವೋದು ಹುಟ್ಟೋದು

ಯುಗ ಯುಗ ಅಂತರ ಯಾದಿ ಲೆಕ್ಕ

ಘೂಟ ಅದ ಇದು ಗಾರುಡಗ್ಯಾನ ಆಟ

ಆಟದ ಡಾಂವ ಕೊಟ್ಟು ಆಗೋ ಕಡಿಯಾಕ || ||1||

ಮುಂಚ ಅವಾ ಇವು ಪಂಚ ತತ್ವಗಳು

ಪಂಚ ಭೂತ ಕಲ್ತು ಆಗ್ಯಾವ ಏಕ

ಹಂಚಿ ಪಾಲ ಹಾಕಿ ಐದು ಮಂದಿ ಹಾರಿ ಹೋದ್ರು

ಹಂಚಾಗಿ ಎಲುವುಗಳು ಬಿದ್ದಾವ ನೆಲಕ || ||2||

ತಿಂಡಿಗಾಗಿ ನೀವು ಹಟ್ಟಿ ಬಂದಿರಿ

ದಂಡಿಗಾಗಿ ಮತ್ತು ಮಡದ ಹೋಗದಕ

ಗುಂಡಾಗಿರಿ ಮಾಡವರಿಗ ಗುಂಡ ಹಾಕಿ ಹೊಡಿರೆಂದ

ಪುಂಡ ದ್ಯಾಗಾಯಿ ವೀಶನ ಕವಿಗೊಳು ಅವ ಠಳಕ || ||3||

ಇಲ್ಲೇ ಇಟ್ಟಿದ ಕಳದು ಹೋಯಿತು ಧಾರಾ

ಎಲ್ಲಿ ಹೋಯಿತು ಧಾರಾ ||ಪಲ್ಲ||

ಸೋಲಾಪೂರದ ಮೂಲವಿಲ್ಲದ ಧಾರಾ

ಅಲ್ಲಮಪ್ರಭುನ ಬಲ್ಲಿದ್ದ ಧಾರಾ |

ಇದು ಬಲಿಷ್ಠ ಬಲಿಷ್ಠ ಧಾರಾ

ಕೋಲಾಪೂರ ಮಾಯಿ ತುರಬಿನ ಧಾರಾ

ಸಾಂಬ ಸದಾಶಿವ ನೆಂಬಿದ ಧಾರಾ ||1||

ಬಿಂಬಾದರ ಕುಬಸ ಹೊಲಸಿದ ಧಾರಾ

ಮುಂಬಯಿ ಪ್ಯಾಟೆಂದು ತರಸಿದ ಧಾರಾ |

ಅಂಬಾಬಾಯಿ ಧಾರಾ

ರಂಬೆಕ್ಕನ ಕೊಳ್ಳಂದ ನವರತ್ನ ಧಾರಾ

ಕಾಶಿ ಅಲ್ಲ ಉಂಚಿ ರೇಶಮಿ ಧಾರಾ ||2||

ಕುಬಸಿನ ಮ್ಯಾಲ ಗಿಳಿ ತಗಸಿದ ಧಾರಾ

ಕಾಶಿ ವೀಶನ ದೋಷವಿಲ್ಲದ ಧಾರಾ |

ಇದು ಕಾಶಿಧಾರಾ

ಜೋಷಿ ಜೋಗ್ಯಾನ ಬಲ್ಲದ್ದುದು ಧಾರಾ

ಹರಿ ಮತದ ಜನಿವಾರ ಧಾರಾ ||3||

ಹರ ಭಕ್ತನ ಚವಕೀನ ಶಿವಧಾರಾ

ಊರ ಜನರಿಗೆ ಊರಲ ಹಾಕಿದ ಧಾರಾ |

ಈ ಧರ್ಣಿ ಧಾರಾ

ಗಿರಣಿ ಸೂತ್ರ ಸೂಜಿದಾನ ಧಾರಾ

ರುಂಡ ನೂಲಿ ಶ್ರೀ ಚಂಡಿನ ಧಾರಾ ||4||

ದಂಡೇಶನ ಕೊರಳಗಿನ ಧಾರಾ

ಗುರುಲಿಂಗ ಕಟ್ಟಿದ ಇದೇ ಧಾರಾ |

ನಿನ್ನ ದಂಡಿಯ ಧಾರಾ

ದ್ಯಾಗಾಯಿ ಕವಿಗಳು ಸಾಕಿದ ಧಾರಾ

ಗುಂಡನ ಹೆಣ್ಣಿನ ತೊಂಡಲ ಧಾರಾ ||5||

ಹುಲಿಯ ಗುಡ ಕುರಿ ಕುಸ್ತಿಗ ಬಿತ್ತೊ

ನಡು ಹೋಗಿ ಇಲಿ ಬಿಡಸಿತ್ತೊ

ಹಲ್ಲಿ ನೋಡಿ ಹೌಹಾರಿ ಬಂದಿತ್ತೊ || ||ಪಲ್ಲ||

ಹಾರಿ ಬಂದು ಮೂರಕ ನುಂಗಿತ್ತೋ

ಕಂಡು ಕರಡಿಯ ಎದಿ ವಡದಿತ್ತೊ

ಅರಿಯಲ್ದಂವಗ ಅಜಾಬ ತಮಾಶವಾಯಿತೊ

ನಾಡ ಮಂದಿ ನೋಡಲಕ ಹೊಂಟರ ಹಲ್ಲಿ ಹೆಂತಾದಿತ್ತೋ ||1||

ಬರೋತನ ಸಿಂಹಾಗ ಹಿಡದಿತ್ತೋ

ಕಂಡು ಕರಡಿಯ ಎದಿ ವಡದಿತ್ತೋ

ತಿಂದು ನುಂಗಿ ತಿನಬೇಕಂತೊ

ಕರಡಿಗ ತಿಲ್ಲಕ ನಡದಿತೋ ||2||

ಹಲ್ಲಿ ಮಂದಿಗ ನೋಡತಿತ್ತೋ

ನೋಡಿ ಮಂದಿ ಅಂಜಿ ಓಡತಿತ್ತೋ

ದ್ಯಾಗಾಯಿ ವೀಶಾ ಅಂದ ಮಂಗ ಹಲ್ಲಿ

ನಿಮಗೇನು ಅದು ಮಾಡತಿತ್ತೋ || ||3||

ಶಾರದಿ ಶಾರವಾಣಿ ವರು

ಆಗೋ ಜನನಿ ದೇವಿ ||ಪಲ್ಲ||

ಶಂಭ ನಿಶುಂಭಗ ಹೊಡದು

ಅಂಬಾನ ಅವತಾರ ತಾಳಿದ್ದಿ

ಲಂಬೋಧರನ ಮಗನ ಮಾಡಿ

ಸಾಂಬನ ಬಾಯಿದಂದು ಉಳದಿದ್ದಿ

ಕುಂಭಸ್ತನ ಮಾಯಾಮರ್ಧನಿ

ನೆಂಬಿದವರಿಗೆ ತಾಳಿದ್ದಿ ||1||

ಅಷ್ಟ ವಕ್ತ ನಾರಾಯಣನಾಗಿ

ಭಸ್ಮಾಸೂರಗ ಸುಡಸಿದಿ

ಸಂಹಾರ ಮಾಡ ದೈತ್ಯರಿಗೆ

ತರುವ ಮಾಡಿ ಹುರದಿದಿ

ಪರಮೇಸೂರನ ಪಟ್ಟದ ರಾಣಿ

ಪರಮೇಶ್ವರಗ ದುಡದಿದಿ ||2||

ಮೈಸಾಸುರಗ ಸಂಹಾರ ಮಾಡಿದಿ

ಅರ್ಧಾಂಗಿನಿಯಾಗಿ ಗೆದ್ದಿದಿ

ವಿಷವ ಕುಡದು ಉಳದ ಶಿವ

ನಿನ್ನ ಕುಶೇಲ ತಾಳಿ ಧರಸಿದಿ

ಅರಸನ ಪದರಿಗ ಬಿದ್ದು

ದ್ಯಾಗಯಿ ವೀಶಾಗ ದುಡದಿದಿ ||3||

ಮಾಯದ ಸುಗುಣಗ ಹ್ಯಾಂಗ ಮರಿಯಲಿ

ನಿರ್ಗುಣ ನಿನ್ನ ಬಿಟ್ಟು ಹ್ಯಾಂಗಿರಲಿ

ನಾದ ಬಿಂದು ನಾಮಿಲ್ಲದ ಪುರುಷಗ

ನಾ ಹ್ಯಾಂಗ ಕರಿಯಲಿ ||ಪಲ್ಲ||

ತಿಮ್ಮರಿಗ ತಿಲ್ಲಕ ಏನು ತರಲಿ

ಅವುನ ಸಲ್ಯಾಕ ಹೊತ್ತಿದ ಹರಲಿ

ಕುಡಿಲಾರದೆ ವಿಷ ಏರಿ

ಕುಂತಾನ ಸತ್ಪಾಕ ಸವಿಯಲಿ | ||1||

ಅಂತಿ ನೀ ನಾ ಇನ್ನೊಮ್ಮರೆ ಬರಲಿ

ಮಂತ್ರ ವೀರ್ಯಾ ಜರ್ರನೆ ಜರಿಯಲಿ

ಜರ್ರ ಅಂತ ಜಪ್ಪಿಸಿ ಹಿಡಿದು

ನಾ ಅಂತರಲೇನೆ ಸುರಿಯಲಿ ||2||

ಅಂಕ ಊದಿದರ ಸಂಕ ಸವಿಯಲಿ

ಸರದ ಮ್ಯಾಲ ನನ್ನ ಹಣಿಬಾರ ತೆರಿಯಲಿ

ತೆರಿಯಲಿ ಅಂತ ನಮ್ಮ ದ್ಯಾಗಾಯಿ

ವೀಶಾನ ಮಾಡತಾಳ ಅಂಸರಲಿ ||3||

ತಾಳೋ ತಾಳೋ ತಾಳಿದಷ್ಟು ಬಾಳೋ

ಬಾಳ್ಯ ಮಾಡಂತ ಬಾಳುಳ್ಳವನಿಗೆ ಕೇಳೋ ||ಪಲ್ಲ||

ಭಜನಿಯವರು ಬಡಿಯುವರು ಮದ್ದಲಿ ಜಾಂಗುಟಿ

ಬ್ರಹ್ಮಬಡಿಗ್ಯಾ ಮಾಡ್ಯಾನ ಕೂರಿಗಿ ಕುಂಟಿ ತಾಳೋ

ಬಾಯಿಬಡ್ಯಾ ಭಯಗೇಡಿ ಮನುಷ್ಯಗ ಬಡಗಿನೆ ತಾಳೋ ||1||

ಬಡತನ ಬಂದರ ಬರಲಿ ಬಹಳ ಕಷ್ಟವ ತಾಳೊ

ಬಲ್ಲವರು ಬೈದು ಹೇಳಿದರ ಬುದ್ಧಿನೆ ತಾಳೋ

ಅಜ್ಞಾನಿ ನಕ್ಕು ನಿಮಗೆ ಮಾಡತನ ಹಾಳೋ ||2||

ತಾಳ ಬಿಟ್ಟು ಹಾಡಿದರ ಅಂತರ ಬೇತಾಳೋ

ಪಂಚಾಮೃತ ಕುದಿಯಲಾಕ ಬೇಕೋ ಸೀತಾಳೋ

ವ್ಯಾಖ್ಯಾನ ಹೇಳಿದಂತವರಿಗೆ ಕೊಟ್ಟರಿ ಕೈತಾಳೋ ||3||

ತಾಳಿದಷ್ಟು ತಾಳಿ ನೀ ದ್ಯಾಗಾಯಿದಾಗ ಬಾಳೋ

ಬಾಳ್ಯಾ ಮಾಡಂತ ಮಹಾಲಿಂಗಗ ಕೇಳೋ

ಗುರುವಿನ ಮಗಾ ಗುಲಾಮ ಗುಂಡು ಹೇಳಿದಷ್ಟು ತಾಳೋ ||4||

ವಿಸಾಯದ ಆಶಾವು ಬೇಡೋ

ಭವ ಹರುಷದ ಭಜನಿಯ ಮಾಡೋ ||ಪಲ್ಲ||

ಹೇಸಿ ಪ್ರಪಂಚಕ ಆಶಿ ಬಿದ್ದೆಲ್ಲೋ

ಖಾಸ ತಿಳಿದು ನೀ ದುಡಿಬ್ಯಾಡೋ ||1||

ಹೆಣ್ಣು ಹೊನ್ನು ಮಣ್ಣು ತನ್ನವರಲ್ಲೋ

ಘನ ಪದವಿಯ ನೀ ಬೇಡೋ ||2||

ತನು ಮನು ಧನ ಗುರುವಿನ ಪಾದವು ಪಿಡಿಯೋ

ಘನವಿಲ್ಲದ ಮಾತವ ಬೇಡೋ ||3||

ಬಸವಾ ಬಸವಾ ಓಂ ಗುರು ಬಸವಾ

ಬಸವಾ ನಾಮವು ಬೇಡೋ ||4||

ದೇಶಕ್ಕ ದಿಕ್ಕುವದ ವಾಸುಳ್ಳ ದ್ಯಾಗಾಯಿ

ವೀಶನ ಭಜನವು ಮಾಡೋ ||5||

ಎಲ್ಲಿ ಕಳಿತೋ ಹಂಡ ಬಣ್ಣದ ಗುಂಡ ಮಾರಿಯ ಬೆಕ್ಕ

ಹೌದು ನಾ ಸಾಕಿದ ಬೆಕ್ಕ ||ಪಲ್ಲ||

ಹುಲಿಯ ಗುಡ ಗೆಳತನ ಕಟ್ಟಿದ ಬೆಕ್ಕ

ಇಲಿಯ ಗುಡ ನಕರಿ ಆಡಿದ ಬೆಕ್ಕ ||1||

ಶೇರ ಮಾಂಸ ತಿಂತಿತೋ ಬೆಕ್ಕ

ಐಗೋಳ ಮನಿ ಸೇರಿತೋ ಬೆಕ್ಕ ||2||

ಕೋಳಿಗುಡ ಕದನ ಹಿಡದಿದ ಬೆಕ್ಕ

ಅತ್ತಿ ಸೊಸಿಗ ಜಗಡಾ ಹಚ್ಚಿದ ಬೆಕ್ಕ ||3||

ಹೆಂಡತಿ ವದಾ ಮಾಡಸಿದ ಬೆಕ್ಕ

ಮತ್ರ್ಯದೊಳು ಮಿಗಿ ಮೀರಿದ ಬೆಕ್ಕ ||4||

ಏಕ ಬಳಕಿ ಒಂದೇ ಮಾಡಿದ ಬೆಕ್ಕ

ಶಿವ ಸಂಬನಲ್ಲವರು ಬೇಡಿದ ಬೆಕ್ಕ ||5||

ಸರ್ವ ಕುಲಕ್ಕೆಲ್ಲ ಮಣಸಿದ ಬೆಕ್ಕ

ದ್ಯಾಗಾಯಿ ವೀಶನ ಬಲಿ ಐಕಾದ ಬೆಕ್ಕ ||6||

ಭಜನಿ ಮಾಡರಿ ಸುಜನರೆಲ್ಲರು ಕೂಡಿ

ಅಜಹಾರಿ ಸುರ ಮನಮುನಿ

ಮಹಾ ಸುಜಾತ ಭಕ್ತರ ಧನಿ

ಶಿವಾ ಕುಲ ಕ್ರೋಧಗ್ರಹ

ವಿಜಯಿಸಲಾರದೆ ಮುಂಜಾನೆದ್ದು

ಮಹಾಗುರು ಮಹಾದೇವ ||ಪಲ್ಲ||

ಗಜಮುಖದಾತಗೆ ಭಜಿಪ ಭಕ್ತನಿಗೆ

ಆ ಜನ್ಮ ದುರಿತತ್ವ ಪರಾಭವ

ಈ ಜನ್ಮ ಸಾರ್ಥಕ ಚಿರಂಜೀವ

ರಾಜಶೇಖರ ರಾಜಚೂಡನೆ

ರಾಜಕಿಂಕರ ಭಕ್ತೋಭವ ||1||

ಬೀಜಕ ರಾತ್ರಿ ಬೀಜದಕ್ಷ

ತೇಜಸ್ಕರನಿಗೆ ಸದಾಶಿವ

ಮೂಜಗ ವಂದಿಪ ಉಮಧಾವ

ಸಾಧು ಜನ ಹೃದಯ ಜನಸಿದ

ಪಾದ ಪಿಡಿದು ಪಟ್ಯಾಗಿ ಕೂಡವ ||2||

ದೇಶಕ ದಿಕ್ಕು ಭಾಗಾದಿ ಹೆಸರಾದ

ದ್ಯಾಗಾಯಿ ದಶಮೂರ್ತಿಗಳು ನುತಿಸುವಾ

ದಶಮಿತ್ತೋಪಾದೋದಕ ಸವಿಂದ್ರವಾ

ದಶ ಉಳ್ಳ ಬಸವನ ಸಂಘ ದಿಕ್ಕ

ಸೋಸಿಲ್ಲ ದ್ಯಾಗಾಯಿವೀಶನ ದಯಾ ಉಳ್ಳಾವ ||3||

ಕಾಲ ಯಾಕ ನೋಯಿತಾವೇ ಹೆಂಡತಿ ನಿನಗ

ಬಂಕಿ ತೀರಿದ ಮ್ಯಾಲ ಬಾಲನೆ ಮೂಡಿದ

ಮಾಯಾದ ಗಂಡನ ನೀ ಹ್ಯಾಂಗ ಮರತಿ ||ಪಲ್ಲ||

ಬೆಣ್ಣಿ ತುಪ್ಪ ನೀ ಕಮ್ಮಗ ತಿನ್ನು ಅಂದ್ರ

ಬಾರಿ ಕಾಯಿಯ ತಿಂದು ಬಾಯಲಿ ಕಾರುತಿ ||1||

ಖೋಡಬ್ಯಾಳಿ ಮಾಡಕೊಂಡು ತೌರುರವರು ಬಂದಾಗ

ಹುಣಸಿಕಾಯಿಯ ತಿಂದು ಮೂಲ್ಯಾಗ ಕುಂದ್ರತಿ ||2||

ಮಾಡಿದನ್ನವ ಬಿಟ್ಟು ಗ್ವಾಡಿ ಮ್ಯಾಲಿನ ಮಣ್ಣ ತಿಂದು

ಹೊಟ್ಟೆ ಡುಮ್ಮ ಕೈಕಾಲ ಸಣ್ಣಾಗಿ ನಿಂತಿ ||3||

ಪಿಚ್ಚಗಣ್ಣಿನ ಪೋರಿ ಹುಚ್ಚಾಗಿ ತಿರುಗತಿ

ದ್ಯಾಗಾಯಿ ವೀಶಾನಲ್ಲ ಆಗ ಹೋಗಾ ಮುಕ್ತಿ ||4||

ಶಿವ ಶಿವ ಶಿವ ಶ್ರೀಗುರುವಿನ ಭಜನಿ

ಮರಿಯಲಾರದೆ ಮಾಡಿರಿ

ಘನ ಪ್ರಕಾಶವ ನೋಡಿರಿ ||ಪಲ್ಲ||

ಆಧಾರ ಮಧ್ಯದಲ್ಲಿ ವೇದ

ಓದಿಕೊಂಡು ವೇದಿನ ಅಳತಿ ಮಾಡಿರಿ

ಮುದಾಕ್ಷತ ಲಿಂಗಕ ನೀಡರಿ

ಕೋಟಿ ಸೂರ್ಯನಂಗ

ಹೊಳಿಯುವ ಲಿಂಗಿನ ಭೆಟ್ಟಿ

ಮಾಡಿ ಭವದಾಗ ಗೆದಿರಿ ||1||

ಈ ಸುದ್ದಿ ಚಕ್ರದ ಪ್ರಸಾದ ಲಿಂಗಿನ

ಪ್ರಾರ್ಥನ ಮಾಡಿ ಪದ ಹಾಡರಿ

ಗುರುಲಿಂಗಿನ ಗುರತ ಗೂಡರಿ

ಗುರುತ ತಿಳಿದು ಗುರು ದ್ಯಾಗಾಯಿ

ವೀಶಾನ ಸುಂದ್ರ ಮುಕುಟ

ಮ್ಯಾಲ ಚಂದ್ರಚೂಡರಿ ||2||

ನುಡಿಯೋ ನುಡಿ ಶಿವ ಶಬ್ದವನೋ

ಬಿಡಬ್ಯಾಡ ಕೊಂಡಾಡೋ ಹರಹರನೋ ||ಪಲ್ಲ||

ಸಹಸ್ರ ವರ್ಷ ಮಾಡಿ ಸ್ತವನೋ

ದಶಭುಜ ದಶಮುಖ ರಾವಣನೋ

ಈಶ್ವರ ಮೆಚ್ಚಿಸಿ ಆಸೆ ಇಲ್ಲದೇನೋ

ಖಾಸ ಸತಿಗ ಕೊಟ್ಟ ಪಾರ್ವತಿನೋ ||1||

ನಿರಾಂಕಾರದಾಗ ಪ್ರಭು ಒಬ್ಬವನೋ

ಪರವಸ್ತು ಏಕೇಲ ಆತನೋ

ಆಕರದಾಗ ಶಕ್ತ ಪಾವನೋ

ಸತಿ ಪತಿ ಸಂಕರ ದೊರದಿದನೋ ||2||

ಮರಿಯಬ್ಯಾಡ ನೀ ನಿಜಗುರು ಧ್ಯಾನೋ

ಶ್ರೀಹರಿ ಭಾವ ಗುರುತಿಲ್ಲೇನೋ

ಹರಿ ಸ್ವತಃ ಶಿರ ಬೆರಳಿನ ಮ್ಯಾಲ

ಗೊವರ್ಧನ ಗಿರಿ ಎತ್ತಿಲ್ಲೇನೋ ||3||

ಅಗ ಹರ ಈಗೀಗಿಲ್ಲೇನೊ

ತ್ಯಾಗಿಸಿದಂವ ಹುಬ್ಬಳಿ ಆರೂಢಹನೋ

ಧರ್ಮಶಾಸ್ತ್ರ ದ್ಯಾಗಾಯಿದಾಗ ವಚನೋ

ಗುರ್ತ ಹೇಳಿದ ಗುರುವಿನ ಖೂನೋ ||4||

ಕೆಟ್ಟ ಕಲಿ ಖೋಡಿ ಕರ್ಮವು ಕಾದ್ಯಾಡಿ

ಬದ್ದರಾದ ಬುದ್ಧಿಗೇಡಿ ಕದ್ದ ಉದ್ಯೋಗ ಮಾಡಿ

ಮದ್ಯ ಮಾಂಸ ತಿಂದು ಸದ್ಯ ನಿಂತಾರ ಜಿದ್ದಾಡಿ ||ಪಲ್ಲ||

ಎತ್ತವಿಲ್ಲದೆ ರಥಗಳು ಹೂಡಿ

ಯುಕ್ತಿಲಿಂದೆ ಆಗಿನ ಗಾಡಿ

ಅಂತರ ಮೋಟಾರ ತಂತ್ರ

ನೇತ್ರಲಿಂದೆ ನೋಡಿ ||1||

ನಿಜಾಮ ಸರ್ಕಾರ ಕಲ್ಯಾಣ

ಬೇಜಧಂದಿ ಮಜಾಬ ಮಾಡಿ

ಅಜಾದ ಭಕ್ತರ ಕೂಡಿ

ಹಜಾಮರಲ್ಲಿ ಊಟವ ಮಾಡಿ ||2||

ಸೊಕ್ಕಿಗೇರಿ ಹೊಕ್ಕು ಹೊಲಗೇರಿ

ಪಕ್ಕ ಗುರು ಪಡದಯ್ಯ ನೋಡಿ

ಲೆಕ್ಕವಿಲ್ಲದೆ ಸುದ್ದ ಮಾಡತಾನ

ರೊಕ್ಕಿಗ ಆಶಿ ಮಾಡಿ ||3||

ದೊಡ್ಡ ದೇವರಂತ ಪಾಡಿ

ಸಿಂದಿ ಸೆರಿ ಕುಡದುರಳ್ಯಾಡಿ

ಪಾಮರ ಭಕ್ತರ ಪಾದ

ಪಿಡಿದು ಶನ್ಮಾಡಿ ||4||

ಕಾಲಜ್ಞದ ಸೂಚ ನೋಡಿ

ಲುಚ್ಚ್ಯಾ ಜನ ಹೆಚ್ಚು ಕುಲಗೇಡಿ

ಘಚ್ಚಿ ದ್ಯಾಗಾಯಿವೀಶನ

ಪದಗೊಳು ಗಚ್ಚಿನ ಗ್ವಾಡಿ ||5||

ದೆವ್ವ ಬಡಿತಾ ಹುಚ್ಚು ಹಿಡಿತಾ

ಇದು ಯಾರಿಗೇನು ಗುರುತಾ ||ಪಲ್ಲ||

ಕರ್ಮ ಎಂಬೋ ಕತ್ತಲಿ ಬಂದು ಬಿತ್ತಾ

ಧರ್ಮ ಪ್ರಕಾಶ ಎಂಬೋ ಜ್ಯೋತಿ ಬೆಳಗಿತ್ತಾ

ಅಧರ್ಮ ಎಂಬೋ ಅನಾಚಾರಿ ದೆವ್ವ

ಅಡ್ನಾಡಿ ಗುಣ ಮಾಡಿ ಅಡವಿ ಸೇರಿತ ||1||

ಭೀತ ಭೂತವಾಗಿ ಘಾತ ಮಾಡಿತ

ರೀತಿ ಬಿಟ್ಟು ಬೆರಿತಿ ನಡಿತಿ

ಛಾತಿ ಇದ್ದಂವ ಬಂದು ಮಾತಿಲಿ ಮಂತ್ರವ ಹಾಕಿದ್ರ

ತನ್ನ ಭಾತಿಲಿ ತಾ ಓಡಿ ಹೋಗಿತಾ ||2||

ದೇಶದೊಳು ದ್ಯಾಗಾಯಿ ವೀಶನ ಪಾತ್ರ

ಪರಮಾನಂದನ ಜಾತ್ರಿ ದಿನ ಶಿವಸ್ತೋತ್ರ

ಗುಂಡಪ್ಪ ಗುರುಪತ್ರ ಹೇಳತಾನ ಮಿತ್ರ

ಬಂದವರಿಗೆಲ್ಲ ಬೆನ್ನ ಹತ್ತಿತ ||3||

ನೋಡಿರೇನವ್ವಾ ನೀವು ಸಿದ್ಧಾ ಎಂಬುವಾ

ಸಿದ್ಧರೊಳಗೆ ಶ್ರೇಷ್ಠವಾದ ಹುಬ್ಬಳಿಯಾಂವ

ರೂಢಿಯೊಳಗೆ ಸಿದ್ಧ ಬಂದು ಆರೂಢ ಆದಾಂವ ||ಪಲ್ಲ||

ಆರು ಮಂದಿನ ಮೊದಲೆ ದೂರವಿರಸಿದಾಂವ

ಆರ್ಯ ಆದಿ ಅನಾದಿ ಕೋಟಿ ಯುಗದಾಗ ಇದ್ದಾಂವ ||1||

ಎಂಟ ಮಂದಿ ತುಂಟರ ಕಂಠ ಹಾರಿಸಿದಾಂವ

ಎಂಟು ಏಳು ದೇಶದೊಳು ಶ್ರೇಷ್ಠ ಆದಾಂವ ||2||

ವಿರಾಟ ಪ್ರಭು ಓದಲ್ದರ ನಾಟಕ ತೋರಸಾಂವ

ಸಿಂದಿ ಗಾಂಜಿ ಸೇದೋ ಸಾಧುರಗೆಲ್ಲ ಬುದ್ಧಿ ಹೇಳಾಂವ ||3||

ಹಳಿ ಹದ್ದಿನಕಿನ ಕಡಿ ಜನ್ಮ ಅದ ಹೆಂಡಾ ಕುಡಿಯಾಂವ

ರಂಡಿ ಮನಿ ಸೇರಿದರ ರೊಂಡಿ ಮುರಸಾಂವ|| ||4||

ಗುರುವಿನ ಗುಲಾಮಾಗಿ ಗುರುವಿನ ಗುರು ಆದಾಂವ

ಮರುವಿನ ಜನ್ಮಕ ಬಂದು ಮಾನ ಉಳಿಸಾಂವ ||5||

ಮರಣ ರಹಿತನಾಗಿ ಜನ್ಮ ಮುಕ್ತಿನಾದಂವ

ಧರಣಿಯೊಳು ದ್ಯಾಗಾಯಿ ವೀಶಾ ನಿನ್ನ ಪಾದ ಹಿಡಿಯಾಂವ ||6||

ಮಹಾ ಪಾತಕವಿದು ಪ್ರಪಂಚ ಯಾತಕ ಸಾರ್ಥಕ ಆದಂವಗ

ಸತ್ಯಲಿಂದ ಸತ್ಯಲೋಕಕ ಹೋಗಂವಗ

ಪತ್ಯ ಮಾಡಿ ಪ್ರಪಂಚ ನೀಗಂವಗ ||ಪಲ್ಲ||

ತತ್ವ ಪಿಂಡಾಂಡ ಶೋಧ ಮಾಡಿ ತಿಳದಂತಂವಗ

ಈ ಬೃಹ್ಮಾಂಡದಳತಿ ತಿಳದಂತಂವಗ

ಬ್ರಹ್ಮಾಂಡದಳತಿ ತಿಳದುಳದಂತಂವಗ

ಕರ್ಮದ ಭಾಂಡೋಲಿ ತೊಳದಂತಂವಗ ||1||

ಕಾಮ ಸುಟ್ಟು ಸುಕಮುನಿ ತೋರಸಿದ ತನ್ನೊಳಗ

ಸ್ತ್ರೀಗ ಮುಟ್ಟಿದರ ಸುಟ್ಟು ಹೋಗತಿರೋ ಘಳಗ್ಯಾಗ

ದಿಟ್ಟಿಸಿ ನೋಡಿ ಮುಟ್ಟಿದ ಕಡಿ ಬಾಯಿ

ರಟ್ಟಿಸಿದಂಗ ಬೆಂಕಿ ಕೊಳ್ಳಿಗ ||2||

ಅಂತರಲೇ ಸಿದ್ಧಾರಾಮ ಹೋದ ಸಿಂಹ ಬಯಲಿಗ

ಮಂತ್ರ ಪಿಂಡ ಬರದಿರೋ ಸಿಗುವ ಕ್ಷಣಗ

ಯಂತ್ರ ಯಮಜರ ಖಾಲಿ ಮಾಡಿಸಿ ಅಂತರಲೇ

ಕೈಗ ಸಿಗದೇ ವೈದ ತನ್ನ ಕಡಿಗ ||3||

ಸಿದ್ಧಾರೂಢ ಈಗೀಗ ಹಾನ ಹುಬ್ಬಳ್ಯಾಗ

ಸದ್ಯ ಮಹತ್ವ ತೋರಿ ಹಳ್ಳಿ ಹಳ್ಳಿಗ

ಬದ್ದಿಸಿ ನೋಡಿದರ ಗೊತ್ತಾಗ್ತಾದ ಒಳ್ಳೆಯಂವಗ

ಸದ್ಯ ಮುಕ್ತಿ ಅದ ದ್ಯಾಗಾಯಿ ನೆಳ್ಳಿಗ ||4||

ಕಂಡ ಮಂಡಲದೊಳು ಒಂದು ಎತ್ತ

ಕಾಲ ಬಾಲ ಇಲ್ಲದೆ ಇತ್ತ

ಮಾಡಲಾರದೇನೆ ಮಾಲಗಾರನ

ಮನಿಯಗ ಹುಟ್ಟಿತ್ತ ||ಪಲ್ಲ||

ಎತ್ತಿನ ಕಿಮ್ಮತ ತೋಲಿತ್ತ

ಮೂರ ಕಮ್ಮ ಮೂವತಕ್ಕ ಮಾರಿತ್ತ

ಕಳದ ಹೋಯಿತ ಕೈಯಾನ ಎತ್ತ

ಖಟುಗನಿಗ ಅದು ದೊರದಿತ್ತ ||1||

ಖಟುಕ ಹೋಗಿ ಹಾರಿ ಮೇಲ ಕುಂತ

ಎಳಿಯ ಹೋರಿ ಬೆನ್ನ ಬಿಗದಿತ್ತ

ಖಟುಕನ ಅಚ್ಚಿಗ ಶಟಗಾರನಲಿಲ್ಲ

ಹೋಗಿ ಹಟಗಾರನ ಬಲ್ಲ ಸತ್ತ ||2||

ದೇಶದೊಳು ದ್ಯಾಗಾಯಿ ಊರ ಸಿಸ್ತ

ಅಲ್ಲಿ ವಾಸ ಮಾಡ್ಯಾರ ಬಲಭೀಮೇಶ

ಎತ್ತಿನ ಗುಣ ಮತ್ಯಾರಿಗ ಗೊತ್ತಿಲ್ಲ

ಗುರು ಗುಂಡುಗೆ ಗೊತ್ತ ||3||

ಮಾಡೋ ಮಾಡೋ ಗುರು ಸೇವಾ ಮಾಡೋ

ಮಾಡಲ್ದೇ ನೀನು ಇರಬ್ಯಾಡೋ ||ಪಲ್ಲ||

ಸಜ್ಜನ ಬುದ್ಧಿ ನೀ ನಿತ್ಯ ಗುಣಸ್ಯಾಡೋ

ಸಾಧು ಸತ್ಪುರುಷರ ಸಂಗತಿ ಕೂಡೋ

ಆತ್ಮದೊಳಗೆ ಅರಗಳಗೆ ಖಂಡಿಲ್ಲ

ಪಿಂಜರದೊಳಗಿನ ಅರಗಿಳಿಯಾಗಿ ಆಡೋ ||1||

ಕನಸ ಮನಸ ಎರಡು ಎತ್ತಗೊಳು ಜೋಡೋ

ಬುದ್ಧಿಯ ಮಾಲಗಾರ ಮಟ್ಟಿಯ ಹೂಡೋ

ಭವ ಭಕ್ತಿ ಎಂಬೋ ಬಾರಕೋಲ ಬೀಸಿ

ಮನ ಎಂಬೋ ಮಿಣಿ ಮ್ಯಾಗ ಕುಂತಾಡೋ ||2||

ನೀರ ಹೂಡಿ ಬೆಳಿ ಬರುವದು ಪಾಡೋ

ಸರ್ವ ಧಾನ್ಯ ಬಿತ್ತಿ ಸವಿರುಚಿ ನೋಡೋ

ಕರ್ಮ ಎಂಬೋ ಕಣಕಿಯ ತೆನಿಯ ಕೊಯ್ದು ||3||

ಆರು ಗುಣ ಅಳದವನೇ ಆರೂಢೋ

ಬುದ್ಧಿ ಇಲ್ಲದಂವ ಕಣ್ಣಿಲಿ ಕುರುಡೋ

ದುರಬಿನ ಹಚ್ಚಿ ದೂರ ದೃಷ್ಟಿಲಿ ನೋಡಿದರ

ದ್ಯಾಗಾಯಿ ವೀಶನ ಕೊಂಡಾಡೋ ||4||

ಸಾಕೋ ಸಾಕೋ ಈ ಭವ ಇನ್ಯಾತಕೋ ||ಪಲ್ಲ||

ಪೈಲೆ ಪ್ರಥಮ ಹುಟ್ಯಾದ ಏಕೋ

ಏಕ ಆಗದು ಲಾಕೋ

ಏಕ ಲಾಕ ಕೂಡಿ ಲೋಕ ಗೆದಿಯಾಗ

ಇದ್ದ ಮಂದಿ ಏನು ಇದ್ದಿರಲಾಕೋ ||1||

ಪಂಚ ಕಲ್ಯಾಣಿ ಘೋಡಾದೇಕೋ

ರಜ ತಮ ಸದ್ಗುಣ ಕೋಗಿಲ ಹಾಕೋ

ಆತ್ಮ ರಾಮನ ಮ್ಯಾಲ ಸವಾರಿ ಆಗತಾನ

ಲಗು ಮಾಡಿ ಅಕಲದ ಲಗಮ ಹಾಕೋ ||2||

ಗುರುಶಿಷ್ಯಂದು ಒಂದೇ ತೂಕೋ

ದೀಕ್ಷಾ ಆಗದು ಮೋಕ್ಷ ಹೊಂದದಕೋ

ಗುಂಡು ಭದ್ರುನ ಸಾಲಿ ಜ್ಞಾನದ ಸಾಲಿ

ಬಂದು ನೀ ಸಮಾಜ ತಿಳಕೋ ||3||

ನಮ್ಮ ಖಳಿವುಳ್ಳ ಕಾಂತನ ಎಳಿಯ ಹುಡುಗ ||ಪಲ್ಲ||

ಸುಳದಾಡ ಬ್ಯಾಡಂದಿ ಮನಿಗ

ನಾ ಇಲ್ಲದಿದ್ರ ಹೋಗ್ತಿ ಎಲ್ಲಿಗ

ಹಿನಾ ಸಂಸಾರ ಹತ್ತಿಲ್ಲ ತೆಲಿಗ

ಬಂದು ಮೂರು ದಿನವಾಯಿತು ಗೊತ್ತಿಲ್ಲ ಯಾರಿಗ ||1||

ಮೊದಲ ಮದುವಿ ಆಗೋ ಯಾಳ್ಯಾಗ

ತಾಳಿ ಕರಮಣಿ ಕಟ್ಟಕೊಳ್ಳಾಗ

ಮುಂಚ ಪಂಚಕಳಸ ಹೂಡಿ ಪಂಜರದೊಳಗ

ಅಕ್ಷತಾ ಹಾಕ್ಯಾರ ಅದೇ ವ್ಯಾಳ್ಯಾಗ ||2||

ಬ್ಯಾಡಂದ್ರ ಬಿಡೋದಿಲ್ಲ ನಿನಗ ನೀ

ಮಡದಿ ಆಗಬೇಕ ನನಗ ನೀ

ತಡದಷ್ಟು ಫಲಭೋಗ

ಹಣಿಬಾರ ಇದರೊಳಗ ||3||

ನಮ್ಮ ದ್ಯಾಗಾಯಿ ಊರ ಎದರಿಗ

ಮೂರಗ ಇಲ್ಲ ಎದರಿಗ

ಗುಂಡು ಗುರು ಶಾಂತ ಮಾಡಕೊಂಡ್ರು

ಭಂಡ ಮಾಡಾ ಹೆಣ್ಣಿಗ ||4||

ಖರೆ ನಂಬಬಾರದೋ ಈಗಿನ ರಂಬೇರಿಗ

ಹಂಬಲಸಿ ಖರೆ ನಂಬಬಾರದೋ ||ಪಲ್ಲ||

ನಂಬಬಾರದು ಮನ ರಂಬೇರ ಹೃದಯದಿ

ಕಾಂಬುಕುಂಚ ತಂಬೂರಿ ಹಿಡಕೊಂಡು

ಶಂಬೋಲಿಂಗನ ಗುಡಿಗ ಹೋಗೋ ಸನ್ಯಾಸಿ

ಆ ಲಂಬೋದರನ ಪುತ್ರ ಲಂಬೋದರ ಎಂದೆನಿಸಿ ||1||

ಬಣ್ಣದ ಶರವೀರ ಹಣ್ಣಾದ ಅತ್ತಿಯ ಹಣ್ಣ

ಒಡೆದರ ಹುಳ ಕಣ್ಣಿಲಿ ಕಾಣುವುದು

ತಿನ್ನುವ ಮುಂದ ತನ್ನೊಳು ತಾನೇ ತಳಮಳಸಿ

ಹೌದು ತಣ್ಣಗ ಅನಬ್ಯಾಡ ಸುಣ್ಣ ಹರಳಿನಂತೆ ಬಿಸಿ ಬಿಸಿ ||2||

ಕಾಮಿನಿ ಅರಿಯದೆ ಕಾಮನ ಆಟವು

ಸಾಮಾನ್ಯ ಜನರಿಗೆ ಪ್ರೇಮ ತೋರುವುದೇ

ಸುಮ್ಮನೆ ಇಲ್ಲಪ್ಪ ಕಾಮಿಸಿ

ಉಮಭಾದಿ ಆ ವಿಷ್ಣು ಬ್ರಹ್ಮ ತಮ್ಮೊಳು ತಾನೇ ವಿಚಾರಿಸಿ ||3||

ಆಗ ಈಗ ಶ್ರೀ ಭೋಗದ ಬ್ರಹ್ಮಗೊಳು

ತ್ಯಾಗಿಸಿದವ ಆ ಮುಕ್ತ ಕಾಗಿಯೋ

ಬಿಳಿಯ ಕಾಗದ ಮೇಲಿಟ್ಟ ತತ್ವದ ಮಸಿ

ಆರೇಗಾ ಓದ್ಯಾನ ದ್ಯಾಗಾಯಿ ವೀಶ ಹರದಾಸ ||4||

ಶ್ರೀಗುರು ಸಿದ್ಧ ಸುದ್ಧ ಪ್ರಸಾದ ಎಲ್ಲರಿಗೆಲ್ಲಿದೋ

ಅಲ್ಲಮ ಪ್ರಭುಗೆ ಸಲ್ಲದೋ

ಕಲ್ಯಾಣ ಬಸವ ಸವಿ ಬಲ್ಲಿದೋ ||ಪಲ್ಲ||

ಚನ್ನಬಸವ ಪ್ರಸಾದ ಪಿಂಡ

ಮುಂದಿನವರಿಗ ಅನ್ನದ ದಂಡ

ಧನ್ಯ ಧನ್ಯ ನಂದೇನ ಗತಿ ಶ್ರೀಗುರುವೇ ||1||

ಗಡಗಿದೊಳಗ ಅಟ್ಟದ ಅನ್ನ

ಎಡಿ ಮಾಡಿ ಉಣಲಿಲ್ಲ ಬಾನಾ

ಮಡಿವಾಳಪ್ಪನ ನೈವಿದ್ಯ ಶ್ರೀಗುರುವೇ ||2||

ಜಂಗಮ ಮುಟ್ಟಿದ ಪ್ರಸಾದವೆಂದು

ಅಂಗ ಭೋಗಿಗಳೆಲ್ಲವ ತಿಂದು

ಲಿಂಗದನ್ವಯ ತಿಳಿಯದೇ ಶ್ರೀಗುರುವೇ ||3||

ಜಲ ಮೂಲ ಉಳ್ಳವರಿಗೆ

ಫಲ ಪದವಿ ದೊರದಿತು ಹ್ಯಾಂಗೆ

ದ್ಯಾಗಾಯಿ ಗುಂಡು ಹೀಂಗಂತಾನ ಶ್ರೀಗುರುವೇ ||4||

ಜೋ ಜೋ ಜೋ ಜೋ ಶರಣು ಬಸವೇಶಾ

ಜಗದೋಡಿ ಜಗದೀಶಾ ಪಾಪ ಮಾಡೋ ನಾಶಾ ||ಪಲ್ಲ||

ಶಿವ ಭಕ್ತರಾಗಿ ಗುರು ಶಿಷ್ಯ

ಹೆಂತದು ನಿಮ್ಮ ಮಾರದಶ

ಕಲಬುರ್ಗಿ ಬ್ರಹ್ಮಪೂರದೊಳು ಆಗಿ ಆದೃಶ್ಯಾ ||1||

ಬೇಡಿದವರಿಗಿ ವರ ಕೊಟ್ಟದ್ದಿಲ್ಲ ಸಂಶ್ಯಾ

ಸಾವಿರ ಕರಳಿಗಿ ಸಂತಾನ ಕೊಟ್ಟಿದಿ ಸಂತೋಷ

ಸತ್ಯ ಸದಾ ನಿತ್ಯ ವೃತ್ತಿ ದಾಸೋಗ ಹಮೇಶಾ || ||2||

ಸತ್ಯ ಲೋಕ ಶಿವ ಮಂದಿರ ಗುಡಿ ಮುಂದ ಬಸವೇಶಾ

ಕಳಸಾ ಏರಸಿದಿಲ್ಲೊ ಹಿಂದೆಷ್ಟು ವರುಷ

ನೆಹರು ಸರಕಾರ ಕಳಸ ಏರಿಸಿ ಹೊಡದಾರ ಜಯ ಘೋಷ ||3||

ಪ್ರಥಮ ಜಯ ಮಹಾತ್ಮಾ ಪ್ರಸಾದ ಹಿಂದುಸ್ತಾನ ದೇಶಾ

ಸೃತಿ ಸಾರಿ ಪುರಾಣ ನಾಟಕ ಪುನ್ಯಾನಿರಾಶಾ

ಧನ್ಯ ಧನ್ಯ ದ್ಯಾಗಾಯಿ ಭಜನಾಕ ಆಗಿರಿ ಆದರ್ಶಾ ||4||

ಭಲೇಲೆ ಹೆಂತಾ ಪಂಡಿತನೋ

ಗುರುವಿನ ಗುಡ ವಾದ ಆಡುವನೋ ||ಪಲ್ಲ||

ತಿರ್ಕಪದ ಸದಾ ಹಾಡುವನೋ ಈ

ಮರ್ತ್ಯಕ ಅಂಜಿ ಯಾಂವ ಓಡುವನೋ ||1||

ನೇಮ ನಿಷ್ಠಿಲಿ ಮಾಡೋ ಸಂಬನ ಭಜನೋ

ಕೆಟ್ಟದು ನುಡದಿದಿ ದುರ್ಜನೋ ||2||

ಮರತುಬಿಟ್ಟ ಗುರುವಿನ ಧ್ಯಾನೋ

ಕಾಲ ಬಿಟ್ಟು ಕತ್ತಿ ಹಂಗ ಕುಣದವನೋ ||3||

ಕಳಕೊಂಡು ಹುಡಕ್ಯಾಡಬ್ಯಾಡ ಬೈಮಾನೋ

ತಿಳಕೊಂಡು ಮಾಡು ನೀ ಗಾಯನೋ ||4||

ತೆಲ್ಲೂರದಾಗ ಹುಲ್ಲು ಹಿಡಿದವನೋ

ಬಂದು ದ್ಯಾಗಾಯಿ ವೀಶಾನ ಪಾದ ಪಿಡಿದವನೋ || ||5||

ರವಿನಂದನನೇ ಹೇ ಪ್ರಭುದೇವಾ

ಎಲ್ಲರ ಮೇಲೆ ನಿನ್ನ ಪ್ರಭಾವ ||ಪಲ್ಲ||

ದಶಕಂಠ ರಾವಣ ಗರ್ವ ತಾಳಿದವ

ಜನಕನ ಸಭೆಯಲ್ಲಿ ನೆಲಕ ಉರಳಿದವ

ರಾಮನ ಅವತಾರದಲ್ಲಿ ಸಿರ ಹಾರಸಿದೆಯ್ಯ ||1||

ನೀಚ ಕೀಚಕನಲ್ಲಿ ಬಂದು ಕುಭಾವ

ದ್ರೌಪದಿ ರೂಪ ನೋಡಿ ಮಾಯಾದಿಂದ ಮೋಹವಾ

ಕ್ರಿಷ್ಣ ಪರಮಾತ್ಮನ ಮಾಡತಾಳೋ ಧ್ಯಾನ ||2||

ಬಲವಂತ ಭೀಮನ ಕೈಯಾಗ ಕೀಚಕನ ವಧವಾ

ದೇಶದೊಳು ದ್ಯಾಗಾಯಿ ವೀಶ ಚಿರಂಜೀವ

ಜಾವ ಜಾವಕ್ಕೆ ನಿನ್ನ ಮಾಡುವೆ ಸೇವ ||3||

ಹೆಂಡತಿ ನೋಡಣ್ಣ ಈಕಿ ನನ್ನ ಹೆಂಡತಿ ನೋಡಣ್ಣ

ದಂಡನಿಲ್ಲದ ಹಂಡ ಹೋರಿ ಮ್ಯಾಲ ಕುಂತು

ಭಂಡಗೇಡಿ ಇಕಿ ಬಯಲಿಗ ಬರತಾಳ ||ಪಲ್ಲ||

ಕರಿಯ ಮಾರಿಯವಳೋ

ಮೂರೂರ ಸಂತಿನೆ ಮಾಡುವಳೋ

ಹತ್ತೆಂಟು ಸೀರಿ ಹಿಂದ ಉಡುವಳೋ

ಮುಂದ ಬರೆ ಬತಲೆ ಇರತಾಳೋ ||1||

ಕುತಗಿ ಇಲ್ಲದವಳೋ

ಕುಂತವರ ಖೂನನೇ ಹೇಳುವಳೋ

ನೆತ್ತಿ ಇಲ್ಲದೆ ನಿತ್ಯ ನೀರ ತರತಾಳೋ

ಅತ್ತಿಮನಿ ಸೊಸಿ ಹಾಳೋ ||2||

ಮುರುಕ ಮನಿಯಾವಳೋ

ಮುಗಲುದ್ದ ಹಾರ್ಯಾರಿ ಬೀಳುವಳೋ

ಸದಾಶಿವನ ಕ್ವಾಟಿದಾಗ ಇರತಾಳೋ

ದ್ಯಾಗಾಯಿದವರ ಗೂಡ ಬರಬೇಕಂತಾಳೋ ||3||

ರಾಮ ರಾಮ ಅನ್ರಿ ವಿನಂತಿ ಮಾಡತೀನಿ ಸಲಾಮ

ಆಗಬೇಕೋ ಗುರುವಿನ ಗುಲಾಮ

ಖೂರಾನ ಷರೀಪ ಬರದಾನೋ ಕಲಾಮ ||ಪಲ್ಲ||

ಬಸವಣ್ಣ ಒಂದೇ ನೇಖಿ ರಸುಲ ರಹೀಮ

ರಾಮ ರಹೀಮ ಶ್ರೀಕೃಷ್ಣ ಕರೀಮ

ಕಲಿದಾಗ ಬಂದು ಕಳಕೋರಿ ನಮ್ಮ ಕರ್ಮ

ಸುಧಾರ್ಣ ನಿಮ್ಮ ನಿಮ್ಮ ಧರ್ಮ ||1||

ಲಾಕ ಅಟ್ಯಾಂಸಿ ಹಜಾರ ಪೈಗಂಬರ ಸ್ವಯಂ

ಲಕ್ಷ ತೊಂಬತ್ತಾರು ಸಾವಿರ ಜಂಗಮ

ಅವರೇ ಬಂದು ಸೇರಿರೋ ಕಲ್ಯಾಣ ಗ್ರಾಮ

ಲಿಂಗ ಕಟ್ಟಿ ಲಿಂಗೈಕ್ಯ ಮಾಡ್ಯಾರೋ ತಮಾಮ ||2||

ತಿಳದವರಿಗೆ ಇದಕ ಅರ್ಥವಿಲ್ಲ ಗುಂಬ

ತೊಳದು ತಗಿ ನಿನ್ನ ಮನಸ್ಸಿನ ಕಿಲ್ಮ

ಅಳೆದು ಬಿಡು ಅಷ್ಟ ಮದಗಳು

ಶಾಮ ಬೆಳೆದ ಕವಿ ನಮ್ಮ ದ್ಯಾಗಾಯಿ ಗ್ರಾಮ ||3||

ಬಾ ಬಾ ಬಸವೇಶ

ಇರುವ ಎಂಬತ್ತು ಕೋಟಗಿ ಸಲವೀದಿ ಹಮೇಶಾ ||ಪಲ್ಲ||

ನೂರು ಅಕ್ಷರ ನಿನ್ನ ನಾಮ

ಮೂರು ಲೋಕದೊಳಗೆ ನಿನ್ನ ಪ್ರೇಮ

ಮೀರಿದ ಮುರಲಿಧರಗೆ ಮುದ್ದ ಮಾಡಿದೋ ಬಸವ ||1||

ಬ ಅಂದ್ರ ಬ್ರಹ್ಮದೇವರ

ಸ ಅಂದ್ರ ಶಿವ ಶಶಿಧರ

ವ ಅಂದ್ರ ವಿಷ್ಣು ಇವು ಮೂರು ಅವಾ ಅವರ ಅಕ್ಷರ ||2||

ದೇಶದೊಳು ದ್ಯಾಗಾಯಿ ವೀಶನ

ದಾಸ ಕೂಸ ನಾನು ಬಂದು

ದ್ಯಾಸ ಮರಿಯಲಾರೆನೊ ||3||

ಮಾಡೋ ಮಾಡೋ ಹಿಂತಾ ಭಕ್ತಿ

ಸದ್ಗುರುವಿನ ಭಜನಿ ನಿತ್ಯ ಗುಣಶ್ಯಾಡೋ

ಸಾಧು ಸತ್ಪುರುಷರ ಸಂಗತಿ ಕೂಡೋ

ಆತ್ಮದೊಳಗೆ ಅರಘಳಗಿ ಖಂಡಿವಿಲ್ಲ

ಅರಗಿಳಿಯಾಗಿ ಪಂಜಾರದೊಳಗಾಡೋ ||ಪಲ್ಲ||

ಕಾಡಿ ಎಂಬವರಿಗ ಮಾಡೋ ತೃಪ್ತಿ

ಬಿಡಲಾರದೆ ನೀಡೋ ಕೈಯೆತ್ತಿ

ದುಂದನ ಭಕ್ತಿಗ ನೋಡಿ ಪ್ರಭು ಬಂದು

ಆಡಾಡುತ ಉಂಡು ಆದನೋ ಶಾಂತಿ ||1||

ಅಂಗದ ಮೇಲಿರುವ ಲಿಂಗ ಮೂರ್ತಿ

ಕಂಗಳಲಿಂದೇ ಮಾಡೋ ಮಂಗಳಾರತಿ

ಲಿಂಗ ಜಂಗಮ ಪ್ರಭು ನಂದರ ಹಿಂಗೋ ಭವದ ಬೇರು ಕಿತ್ತಿ ||2||

ಬಿಜ್ಜಳಗ ಬಸವ ಆದ ಹುಜುತಿ

ಹಿಂತಾ ಮಹಾತ್ಮ ಇದು ಹ್ಯಾಂಗಾಗೈತಿ

ಅಪ್ಪ ಬಸವೇಶ ಕಪ್ಪಿ ಸೀಳಿ ತುಪ್ಪ ಸಕ್ಕರಿ ತೋರಿಸಿದೈತಿ ||3||

ಭವದೊಳು ಒಬ್ಬ ಜಂಗಮ ಉಣಸಿದರೆ ಒಂದು ಸರತಿ

ಮೂರು ಲೋಕ ಕೊಂಡಾಡತೋ ಕೀರ್ತಿ

ಅಷ್ಟ ಪುತ್ರ ಗುಣ ಪಶು ಪಕ್ಷಿ ಉಂಡೈತಿ ||4||

ಲಿಂಗನ ಭಕ್ತನ ಜಗದ ಜಾಸ್ತಿ

ಅವನಿಗ ಉಣಸಿದರೆ ಮುಕ್ತಿ

ವೀರಶೈವ ಮತ ಸಾರ್ವಭೌಮ

ವಿರಕ್ತ ಶಿಷ್ಯ ದ್ಯಾಗಾಯಿ ವೀಶನಕ ಎಲ್ಲ ||5||

ಶಿವ ನಾಮವ ಸ್ಮರಿಸೋ

ಈ ಭವ ಮಾಲೆಯ ಪರಿಹರಿಸೋ

ಜೀವ ಶಿವನ ಬೆರಿಸೋ

ಆತ್ಮನ ಭೇದವ ಪರಿಹರಿಸೋ ||ಪಲ್ಲ||

ಥೋಡೇ ದಿನದ ಸಂತಿ

ಆತ್ಮನ ಕಾಣದೇ ಕುಂತಿ

ಖೋಡಿ ಮರಗಿ ಭ್ರಾಂತಿ

ನಾಡೊಳು ಕುಣಸ್ಯಾಳೋ ಕಾಂತಿ

ಬೇಡ ಪರರ ಚಿಂತಿ

ನಾಳೆ ಯಮ ಕೇಳಿದರೆನಂತಿ ||1||

ಆಯುಷ್ಯಕ ಹತ್ತತ್ತು ರಾತ್ರಿ

ಹೋದವು ಐವತ್ತು

ಪ್ರಾಯಕ ಇಪ್ಪತ್ತು ಕಾಯಜ

ಗಾಯಿಗೆ ಮೂವತ್ತು

ವಾಯುಗಿಲ್ಲ ಹೊತ್ತು ನೀ

ತಿಳಿವೇಳೆ ವೇಳೆಕ ಗೊತ್ತು ||2||

ಅರ್ಥ ಪ್ರಾಣ ಅಭಿಮಾನ

ಅವರರಿತು ನೀಡೋ ಬಾನಾ

ಕರ್ತೃ ಶ್ರೀಗುರು ಧ್ಯಾನ ಅಮೃತ

ತರುತ ಮಾಡೋ ಪಾನ

ಬೆರತು ಕೊಳ್ಳು ಮಹಾಜ್ಞಾನ

ಅದರೊಳಗಿರತಾವ ಒಂದೇ ಖೂನಾ ||3||

ಆಸೆ ಮಾಡಲು ಬೇಡ

ನಿರಾಶೆಯ ನಿಜ ನೋಡ

ದ್ವೇಷವು ತೊಡಬೇಡ ಒಬ್ಬರಸ

ದೋಷಿಸಿ ನುಡಿಬೇಡ

ಪಾಲಿಸಿ ಬಡಿಬೇಡ ಶ್ರೀ ದ್ಯಾಗಾಯಿ

ಹಣಮೇಶನ ಮರಿಬೇಡ ||4||

ಪಂಚವರ್ಣ ಪಂಜಾರದಾಗಿನ ಗಿಳಿಯೋ

ಹಾರಿ ಹೋಗಿತುಗಿಳಿಯೋ

ಕಂಡು ಬಂದ ನಾ ಕಲುವಿಕಿದೊಳಗಿನ

ಹಸರ ಬಣ್ಣದ ಗಿಳಿಯೋ

ಅಸಲ ಜ್ಯಾಲ ಅಸವಲ್ಲನ ಗಿಳಿಯೋ ||ಪಲ್ಲ||

ಬ್ಯಾಸರಿಲ್ಲದೆ ಆಸರಿ ಮಾಡಿಕೊಂಡು

ಆಕಾಶ ಮ್ಯಾಲ ಹರದಾಡುವ ಗಿಳಿಯೋ

ಮಹಾದೇವರಿಗ ಮೀರಿದ ಗಿಳಿಯೋ

ಮಲ್ಲ್ಯಾಡದಾಗ ಮನಿ ಕಟ್ಟಿದ ಗಿಳಿಯೋ ||1||

ಮಾವಿನ ಮರವನೇರಿ ಮರ್ತ್ಯ ಲೋಕಕೆಲ್ಲ

ಮೋಹಿಸಿ ಮರುಳ ಮಾಡಿದ ಗಿಳಿಯೋ

ಅಂಜುರ ಹಣ್ಣ ತಂದು ಪಿಂಜಾರದೊಳಗಿಟ್ಟು

ಸಂಜೆ ಮುಂಜಾಳಿ ತಿನ್ನುವ ಗಿಳಿಯೋ ||2||

ಅಂಜಿಕಿಲ್ಲದೆ ಅಜಾತ ಹಾರಿ

ಅಜ ಹರಿ ರುದ್ರರಿಗ ಮೀರಿದ ಗಿಳಿಯೋ

ಕಂಡ ಕಂಡವರಿಗ ಜಗಳ ಹಚ್ಚಿದ ಗಿಳಿಯೋ

ಭಂಡ ಮಾಡಿತು ಭವದೊಳು ಗಿಳಿಯೋ ||3||

ಹಿಂಡ ಹಕ್ಕಿದೊಳು ಪುಂಡ ಅನಿಸಿಕೊಂಡು

ಗುಂಡುನಲ್ಲಿ ಐಕಾದ ಗಿಳಿಯೋ ||4||

ಕುರಸಾಲಗಿತ್ತಿ ಆಚಾರ ಭಾಳ ಹೇಳತಿ

ಗಿದ್ದುನ ಜೋಳ ಬಿಸಂದ್ರ ನಿದ್ದಿನೆ ಬರತಾದಂತಿ ||ಪಲ್ಲ||

ಮಂದಿ ಮಕ್ಕಳದಾಗ ಬಂದು ಕಂಡಂಗ ವದರತಿ

ನಾನು ಭೇದ ಮಾಡಲ್ದೇನೆ ನೀನೇ ವಾದ ಹಾಕತಿ ||1||

ಉಡದಾರ ಇಲ್ದ ಹೆಂಗಸೀನ ಹಿಡದು ಹಿಗ್ಗತಿ

ಒಂದು ಚೀಲ ಬೀಜಿಗ ಒಂಬತ್ತು ತಿಂಗಳ ಮೆತಗಿ ಹಾಕತಿ ||2||

ಒಂಬತ್ತು ತಿಂಗಳ ಮೇಲಿಂದ ಮೆತಗಿ ಒಡಿತಿ

ನಿರಸ ಮೆತಗಿ ಒಡಿಯುವ ವ್ಯಾಳ್ಯಾಗ ದ್ಯಾಗಾಯಿ ವೀಶಗ ನೆನಸ್ತಿ ||3||

ಕಾಯಪೂರ ನಗರ ಶ್ರೀ ಆತ್ಮಲಿಂಗ ದೇವರ ||ಪಲ್ಲ||

ಈ ದೇಹ ಗುಡಿ ಮಂದಿರ

ಪ್ರಾಣ ಅಂಬುವವ ಹನಾ ದೇವರ

ಬುದ್ಧಿ ಜ್ಞಾನ ಪೂಜಾರಿಯರ

ಅವರಲಿಂದೇ ತೋಗೋ ಆಧಾರ ||1||

ಇವರ ಹೊರ್ತ ದೇವರು ಜಗದಲ್ಲಿ ಇಲ್ಲೊ ಯಾರ್ಯಾರ

ಎಲ್ಲಾ ಕಡಿ ಹುಡಕುತ ಕುಂತರ ಸಿಗುದಿಲ್ಲೋ ದೇವರ

ತಿಳಿದು ನೋಡೋ ಇದರ ವಿಸ್ತಾರ

ಇಲ್ಲೆ ಹನಾ ದೊಡ್ಡ ದೇವರ ||2||

ಬ್ರಹ್ಮಾಂಡವೆಲ್ಲ ಹಾಕಬೇಡೋ ಫೇರಾ

ಪಿಂಡಾಂಡದಲ್ಲಿ ಒಂಬತ್ತು ದ್ವಾರಾ

ತೊಳದು ಹಸನ ಮಾಡೋ ನೀ ಪೂರಾ ||3||

ಕಾಮ ಕ್ರೋಧ ನಗರದ ಜನರಾ

ಅವರ ಸಂಗ ಬ್ಯಾಡೋ ಇರು ನೀ ಧೂರಾ

ಚಂಚಲ ಗುಣಗಳು ಪಂಚರಾ

ಲಂಚಕ್ಕಾಗಿ ಕೆಟ್ಟಿತು ನಗರ ||4||

ರಜ ತಮ ಸತ್ವವು ಮೂರ

ತಿಳಿದವರೇ ಬಸವೇಶ್ವರ

ಅವರಿಗಂದಾರ ಸತ್ಯ ಶರಣರ

ಸಾವಿರ ಜನ ಚರಣಕ ಹೊಂದ್ಯಾರ ||5||

ದ್ಯಾಗಾಯಿ ಊರ ಸುತ್ತ ಜಾಹೀರ

ಅಲ್ಲಿ ನೆನದರ ಬಲಭೀಮ ಶಂಕರ

ಬೆಳೆದ ಕವಿ ಗುಂಡು ಭಾದ್ದೂರ

ಜ್ಞಾನದ ಅಗಿ ಹಚ್ಚಿ ಹೋಗ್ಯಾರ ||6||

ನೀನು ತಿಳಕೋ ತಿಳದು ಉಳಕೋ

ಕೆಟ್ಟ ಕರ್ತದ ಬಲಿ ನೀ ತೊಳಕೋ

ಅಷ್ಟಮದ ಯಮಭಾದಿ ಎಳಕೋ

ನಷ್ಟ ಆಗತದ ಈ ಅಟ್ಟ ಅಡಗಿ

ಪುನಃ ಸುಟ್ಟು ಸುದ್ದಾಗಿ ತೊಳಕೋ ||ಪಲ್ಲ||

ಅರು ಎಂಬೋ ಬಾಜಾರಕ ಹೋಗೋ

ಆರ ಸೇರ ಅಕ್ಕಿ ಮಾಪಿಲಿ ಅಳಕೋ

ಗುರು ಮುಖ ಎಂಬೋ ಪ್ರಸಾದ ಅನ್ನ ಉಂಡು

ಪರರ ಉಪಕಾರ ಗಂಗಾಳ ತೋಳಕೋ ||1||

ಭಕ್ತಿ ಎಂಬೋ ಭಜನ ಮಾಡಿ

ಮುಕ್ತಿ ಸ್ಥಳಕ ಕಲಕೋ

ತಿರುಗಿ ಮುರಗಿ ಯಾಕ ಬರತಿ ಭುವನದೊಳು

ತಿಳಿ ಮಾಡಿ ಸೋಮವಾರ ದಿವಸರೆ ತೊಳಕೋ ||2||

ಆರು ಮೂರು ಇದರ ಆರ್ಥವ ತಿಳಿದು

ಜ್ಞಾನ ಪ್ರಕಾಶ ಗುರುವಿನ ಬೆಳಕೋ

ಆಕೃತಿಲಿಂದೇ ದ್ಯಾಗಾಯಿ ವೀಶ ಹೇಳತಾನ

ತಕ್ರಾರವಿಲ್ಲದೆ ಶುಕ್ರಾರ ದಿನ ತೊಳಕೋ ||3||

ಉಳಕೋ ಬ್ಯಾಡೋ ತಿಳಿದು ನೋಡೋ

ಕಷ್ಟ ಮಾಡಿದಷ್ಟು ಪಾಡೋ ||ಪಲ್ಲ||

ವಯಾ ಇರುವತನ ಕುಂತು ಮಾಡೋ

ಉತ್ಪನ್ನ ಮುಂದ್ ಹ್ಯಾಂಗ ಆಗತದ ನೋಡೋ

ಬಾವಾ ಕುಂತಂಗ ಸುಮ್ಮನೆ ಕೂಡೋ

ಬಾಯಿಗ ಅನ್ನ ಹ್ಯಾಂಗ ಬರತಾದ ನೋಡೋ ||1||

ವಯಾ ಹೋದ ಮ್ಯಾಲ ಆಗತಾದ ಕೇಡೋ

ಜಪ್ಪಿಸಿ ಕೆಲಸ ಈಗೆ ಮಾಡೋ

ಇಲ್ಲದಿದ್ದರ ಸುಮ್ಮನ ಕೂಡೋ

ಮುಪ್ಪಿನ ಕಾಲಕ ಮುಕ್ತಿ ಬೇಡೋ ||2||

ಕೈಯಾಗ ಏನು ಇಲ್ಲಪ್ಪ ಕಟಗಿ

ಸುಮ್ಮ ನಿನ ಹ್ಯಾಂಗ ಬಂತಪ್ಪ ಪುಟಗಿ

ಪದದೊಳು ಹೊಡಿಯಲ್ಲೋ ಜಟಗಿ

ಸೇರಿಸಿ ಬಿಟ್ಟ ನಿನಗ ಎತ್ತಿ ಕೊಟಗಿ ||3||

ಇದರ ಮ್ಯಾಲ ಇನ್ನ ಸುಮ್ಮನ ಕೂಡೋ

ಕೂಡುವಲ್ದರ ಮುಂದ ನೋಡೋ

ದುರಮಿಂದ ಹಚ್ಚಿ ದೂರ ನೋಡೋ

ದ್ಯಾಗಾಯಿ ವೀಶಗ ಶರಣ ಮಾಡೋ ||4||

ಕುಲದ ಭೇದ ನಿಮಗೇನು ಗೊತ್ತೊ

ಕುಲ ಕುಲ ಅಂದು ನೀವು ಹೋಗಬ್ಯಾಡ್ರಿ ಸತ್ತೋ ||ಪಲ್ಲ||

ಕುಲದ ಕುರುಹು ತಿಳಿಯಲಾರದೇನೆ ವದರ ಬ್ಯಾಡ್ರಿ ಮತ್ತೋ

ಬಸವೇಶ್ವರ ಆಧಾರಲಿಂದೇ ಮೃಷ್ಠಾನ್ನ ಸಿಕ್ಕಿತೋ ||1||

ಮಾನ್ಯರ ಸಂಘ ಮಾಡೋ ಅರಘಳಗಿ ಕುಂತೋ

ಆರಿಸಿ ನಡದವನಿಗ ಹತ್ತಲಿಲ್ಲ ಅದರ ಅಂತೋ ||2||

ಮೂರು ತತ್ವದವನಿಗ ಅದ ಇದರ ಮಾಹಿತೋ

ಆರು ಗುಣ ಅಳದವನಿಗ ಶಿವಲೋಕ ಸಿಕ್ತೋ ||3||

ದ್ಯಾಗಾಯಿ ಭಜನಾ ಅದಾ ನೋಡು ಹಿಡತೋ

ಬಲ್ಲಂತ ಜ್ಞಾನಿಗಳು ತಿಳಿದಾಡಿದರ ಅರತೋ ||4||

ಸುಮ್ಮನ್ಯಾಕೋ ಬಡವೇರ ಸುಳ್ಳಾದ ಸಂಸಾರ

ಅಕ್ಕ ತಂಗಿ ರಂಬೇರ ರೊಕ್ಕು ನೋಡಿ ನಂಬುವರ

ಪಕ್ಕ ಬಡತಾನ ಬಂದರ ದಿಕ್ಕಿಲ್ಲ ಯಾರ್ಯಾರ ||ಪಲ್ಲ||

ತಾಯಿ ತಂದಿ ಬಂಧುಗಳೆಲ್ಲ

ಘಳಸಿದರ ಹಾಕತಾರ

ಕೂಲಿ ಇಲ್ಲದಿದ್ದರ ತಗಿತಾರ ಜಗಳಾ

ಮನಿ ಹೊರಗ ಹಾಕತಾರ ಮೂಳ ||1||

ದೇಶದೊಳು ದ್ಯಾಗಾಯಿ ಊರಾ

ಅಲ್ಲಿ ಬಲಭೀಮ ದೇವರ

ಆತನ ಮುಂದಿಡು ಪದರಾ

ಮುಕ್ತಿ ನಿನಗ ದೊರದಿತು ಪೂರಾ ||2||

ಭಜಿಸುವೆನು ಗುರುವೆ ನಿಮ್ಮ ಭವದೊಳಗಿಂದು ಗೆಲಿಸೈ |

ಭವದೊಳಗಿಂದು ಗೆಲಿಸೈ ಪಾದದಲ್ಲಿ ಉಳಿಸೈ ||ಪಲ್ಲ

ನಿತ್ಯ ಕಾಲದಲ್ಲಿ ನಿಮ್ಮ ನಿಜ ರೂಪ ನಾನು ಕಂಡೆ |

ಅತ್ಯಧಿಕ ಘನ ಗುರುವಿನ ಮರೆಯಲಾರೆ ನಾನ ||1||

ತನು ಮನ ನಿಂದು ಧನವೆಲ್ಲ ನಿಂದು |

ಅನುಮಾನ್ಯಾತಕ ಗುರುವೆ ಆಗಲಿರುವುದು ನಿಂದು ||2||

ಕರಸಿದ್ಧೇಶ ನೀನಾ ಕಾಯೊ ಎನ್ನ ಮಾನಾ |

ಸಕಲ ಲೋಕಕ್ಕೆ ನಾಯಕ ಜಗದೀಶ ನೀನಾ ||3||

ಖೂನಾದೆ ಗುರುರಾಯ ಮಾನವ ಜನ್ಮಾದಿ |

ವ್ಯಸನವ ಕಳಿದಿ ನೀ ಬಂದು ತೋರಿದಿ ಹಾದಿ ||ಪಲ್ಲ||

ವ್ಯಸನವ ಕಳಿದಿ ನೀ ಬಂದು ಉಳಿದಿ |

ಜಗದೊಡೆಯ ನೀನೆ ಜಗದೊಳು ಬೆಳಿದಿ ||1||

ಸತಿಪುತ್ರರ ನಾಮಾ ನಿಜವೊಂದು ನೇಮಾ |

ಅವರ ಮೇಲಿರಲಯ್ಯ ಕರಸಿದ್ಧ ನಿಮ್ಮ ಪ್ರೇಮಾ ||2||

ಕಳವಳಗೊಂಡ ಕಾಂತ ನಿಮ್ಮ ಕಂಡ |

ಗುರುಪಾದೇಶನ ನಿಜ ಸುಖ ಕಂಡ ||3||

ಹುಶಾರಿ ಹೇಳ್ತಾನ ಎನ ಗುರು |

ಎನಗೊಂದು ತಾಸಿಗೊಂದು | ಹುಶಾರಿ ಹೇಳ್ತಾನ

ಘಳಗಿಗೊಂದು ಹರಶಾರಿ ಹೇಳ್ತಾನ

ಹುಶಾರಿ ಹೇಳ್ತಾನ ಮುಶಾರಿಲ್ಲದೆ ಬಂದು

ಕಸುರ ಇದ್ದ ಕಿಂವಿಯ ಹಿಂಡಿ ||ಪಲ್ಲ||

ಈ ಅಂಗದ ನೆಲಿ ತಿಳಿಯಂತಾನ |

ಲಿಂಗದೊಳು ನೆನುಯಿಡು ಅಂತಾನೊ

ಕಂಗಳನಂತೆ ಸುಮ್ಮನೆ ಕುಂತರ

ಡಂಗೂರ ಹೊಡಿಯಂತಾನೊ ||1||

ಈ ಜಗದೊಳು ಜತ್ತನ ಅಂತಾನೊ |

ಮಿಗಿಲಾದವ ಎನಿಸುಬೇಡ ಅಂತಾನೊ

ಹಗಲು ಇರುಳು ಧ್ಯಾನವ ಮಾಡಿ

ಭವ ನೀಗಂತಾನೊ || ||2||

ನಿನ್ನೊಳು ನೀ ತಿಳಿಯಂತಾನೊ |

ಘನವಾಗಿ ಅಳಿದುಳಿ ಅಂತಾನೊ

ಕರಸಿದ್ಧನು ತಾನು ತಾಂ ಕಂಡಾಕ್ಷಣಕೆ

ಶಿರ ಬಾಗಂತಾನೊ ||3||

ತಂದಿ ಉದರದಿ ಜನಿಸಿ ಬಂದೆ ನೀ ಜಗದೊಳು |

ತಂದಿ ತಾಯಿಲ್ಲವೊ ಓಂ ಗುರುವೆ

ತಂದಿಲ್ಲ ತಾಯಿಲ್ಲ ಬಂಧು ಇಲ್ಲಾ ಬಳಗ ಇಲ್ಲಾ

ಒಂದಕ್ಕ ನೆಲೆ ಇಲ್ಲವೊ ಗುರುವೆ ||ಪಲ್ಲ||

ಅಸನದಾಶಕ ಬಿದ್ದು ವ್ಯಸನ ಮಾಡಿಕೊಂಡು |

ದೇಶ ದೇಶ ತಿರುಗಿದ್ದೆನೊ ಗುರುವೆ ಶಿಶುಮಗ ರೇವಣಪ್ಪ

ಖುಸಿಯಿಂದ ಕರದೊಯ್ದ ಹಸು ಆದಾಗ ಉಣು ಅಂದಾನೊ ||1||

ಹಡೆದವರು ಮಡಿದು ಹೋದರು ಹಿಡಿದ ಭೀಮರಾಯ ಗೌಡ |

ಗಾಣಿಗೇರ ಶಿವಪ್ಪನು ಗುರುವೆ ಹುಡುಕಿ ಕನ್ಯ ತಂದು

ಕಡದ ಲಗ್ನವ ಮಾಡಿ ಮಿಡುಕಿದರು ಬೀಗರು ||2||

ಅವರು ಹಚ್ಚಿದ ದೀಪ ಅವ ಎರಡು ಮಕ್ಕಳು ಅವರಿಂದೆ |

ಈ ಐಶ್ವರ್ಯವೊ ಸಕಲ ಭಾಗ್ಯವ ಕಂಡೆ

ಸೊಸ್ತೆರು ಮೊಮ್ಮಕ್ಕಳ ಕಂಡೆ ಕರಸಿದ್ಧ ನಿನ ಕಂಡೆನೊ ||3||

ಝಾಂಗುಟಿ ನುಡಿತಾದ ಶ್ರೀಗುರುವಿಂದು |

ಝಾಂಗುಟಿ ನುಡಿತಾದೊ

ಝಂನಂನಂ ಓಂ ಎಂದು ಓಂಕಾರ ಗುರುವಿನಲ್ಲಿ

ಅಲಂಕಾರ ಅಳಿದು ತಾನೆ ||ಪಲ್ಲ||

ಪ್ರಪಂಚ ತತ್ವ ಬೆರಸಿ ಹಂಚಿಕೆಲಿಂದೆ |

ಕಂಚುಗಾರ ಮಾಡ್ಯಾನ ಸೋಸಿ

ಕಂಚಿನ ಝಾಂಗುಟಿ ಕಟ್ಟಿ ಬಡಿದಾರೆ

ಗುರುವಿನ ಭೆಟ್ಟಿ ಮಾಡಿಕೊಂಡರೆ ಮುಟ್ಟಿತ್ತೊ ಪಾದಕ್ಕೆ ||1||

ಹರಹರ ಅಂತಾದೊ ಗುರು ಸೂತ್ರದ

ದಾರವ ಪಿಡಿತಾದೊ

ನಾಸಿಕದ ಕೊನೆಯಲ್ಲಿ

ಈಶಾನ ಮನಿಯಲ್ಲಿ ವಾಸವ ಮಾಡಿದ ||2||

ಮನಸಿನೊಳು ಬಿದ್ದಾದ ಕರಸಿದ್ಧೇಶನ

ಹೆಸರ ಮೇಲೆ ಕುಂತಾದ

ಅಸುವಲ್ಲದ ವಿಭೂತಿ ಬಟ್ಟು ಗುರು ತಾನು

ಫಣಿಯೊಳಿಟ್ಟು ಆ ಮೇಲೆ ಎದ್ಹೋದ ||3||

ಕಾಗಿ ಕರೆಯುತಾದ ಆಕಾಶದೊಳು |

ಕಾಗಿ ಕರೆಯುತಾದ ಬೇಗನೆ ಬಾಯೆಂದು

ಯೋಗಿ ರುದ್ರನಲ್ಲಿ ಭೋಗಿ ನೀ ಬಾರೆಂದು ||ಪಲ್ಲ||

ಕಪ್ಪು ಛಾಯವು ಆದ ಬಹು ದಿವಸದ್ದು ಮುಪ್ಪಿನ ಕಾಗ್ಯಾದ |

ಝಪ್ಪಿಸಿ ಹಿಡಿದರೆ ತಪ್ಪಿಸಿ ಕೊಂಬುವುದು | ಅಪ್ಪನ ಕಾಗ್ಯಾದ ||1||

ಕಾಗೆಯ ರೂಪವು ಕೋಗಿಲೆ ಮೊಟ್ಟೆ ಇಡದೆ |

ಯೋಗ ಮಂಟಪದೊಳು ಸಾಗಿ ನೀ ಬಾರೆಂದು ||2||

ನಿಜವಾಗಿ ನಿಂತಾದ ಅಜಹರಿ ರುದ್ರನಾಗಿ ತಾಂ ಕುಂತಾದಾ |

ಕರಸಿದ್ಧ ನಿಜ ಬೈಲದೊಳು ಬಂದು ನಿಜ ರೂಪ ತೋರಿದ ಕಾಗಿ ||3||

ಗಾಡಿ ನಡೆಯುತಾದ ಗಮ್ಮತ್ತಿನ

ಗಾಡಿ ನಡೆಯುತಾದ |

ನಾಡಿನೊಳಗೆ ಬಂದು ಗಾಢ

ನಿದ್ರೆಯೊಳು ಮಲಗಲಿ ಬೇಡಿರಿ ||ಪಲ್ಲ||

ಏಳು ಬೀದಿಯು ಆದಾ ಈ ಊರೆಲ್ಲಾ |

ಹಾಳು ಮಾಡುತಾದಾ

ಗೊಳ ಹೊಡೆಯುತಾದಾ

ಗುರುವಿನ ಆಳಾಗಿ ದುಡಿಯುತಾದಾ ||1||

ಆರು ಕೀಲಿನದಾದ ಗುರು ಮಂತ್ರಕ್ಕೆ |

ಮೇಲಾಗಿಯಿರುತಾದ

ಯಂತ್ರ ತಂತ್ರ ಆದಾ

ಮಂತ್ರ ಅದರ ಸ್ವಾತಂತ್ರ ಆದಾ ||2||

ನಯನ ಜ್ಯೋತಿ ಆದಾ

ಶ್ರೀ ಗುರು ತೋರಿದ ಬೆಳಗಾದಾ

ಶಿವಶರಣರ ಒಳಗಾದಾ

ಗುರು ಕರಸಿದ್ಧಗ ತಿಳದಾದಾ || ||3||

ಸಣ್ಣಾಗಿ ನಡಿಬೇಕೊ |

ಈ ಜಗದೊಳು ಸಣ್ಣಾಗಿ ನಡಿಬೇಕೊ

ಅಣ್ಣ ಅಪ್ಪಯೆಂದು ಬಣ್ಣದ ಮಾತುಗಳು

ಬೈಲೊಳಗಾಡಿಕೊಂಡು ||ಪಲ್ಲ||

ಸಣ್ಣಾಗಿ ಶಿಶುವು ತಾನಾಗಬೇಕೊ |

ಶಿಶುನಾಳಧೀಶನ ನೋಡಬೇಕೊ

ಹಸನಾಗುವುದು ಹಣೆಬಾರ ನಿಂದು

ಭಸಿತದ ಭಸ್ಮವ ನೊಸಲದ ಫಣೆಯ ಮೇಲೆ ||1||

ಕಿಂಕರ ಆಗಿಯಿರ ಬೇಕೊ

ಶಿವಶಂಕರನ ಧ್ಯಾನದೊಳಿರಬೇಕೊ

ಓಂಕಾರವನ್ನು ಆತನ ಪಾದಕ್ಕೆ ಅರ್ಪಿಸಿ

ಮೋದದಿ ಪಿಡಿಕೊಂಡು ಸಾಧು ಜಂಗಮನಲ್ಲಿ ||2||

ಶಾಂತಿ ಮನಸ ಬೇಕೊ

ಶಾಂತ ರೂಪ ತಾಳಲಿ ನೀ ಬೇಕೊ

ಚಿಂತಿ ಅಳಿದು ನಿರಂತರ ಸುಖದಲ್ಲಿ

ಅತ್ತ ಕರಸಿದ್ಧನ ಧ್ಯಾನದಲ್ಲಿರಬೇಕೊ ||3||

ಶ್ರೀಮಂತಿ ನೀ ಸುಖಸಾರ |

ಮೋಕ್ಷದ ಮಾರ್ಗವು ಬಹುಭಾರ ಮೇಲಿರುವುದು ಶಿವಪೂರ

ಅದು ದೊಡ್ಡದು ಕಾಣುವದು ಊರಾ ||ಪಲ್ಲ||

ಮೂವತ್ತಾರು ಮಂದಿ ಕಾರುಬಾರ |

ಹದಿನೆಂಟು ಮಂದಿ ಛಪರಾಶೇರಾ

ಚೋರರಾರು ಮಂದೀ ಹಾರಾ

ಮೂರು ಮಂದಿ ದಲಾಲೇರಾ ||1||

ಅರಸ ಪಿಂಡಾಡದೊಳಗಾರ |

ಕಾಣಲ್ದವರಿಗೆ ದೂರ ಹಾರ

ಜ್ಞಾನವುಳ್ಳವರಲ್ಲಿ ಶೇರ್ಯಾರ

ಜಗದೊಳಗೆ ಅವರು ಮೀರ್ಯಾರ ||2||

ನಿಜವಾದ ವ್ಯಾಪಾರ ಮಾಡ್ಯಾರ |

ಸತಿಪತಿ ಪ್ರೀತಿಲಿಂದ ಕೂಡ್ಯಾರ

ಅತಿಮೋಹದಿಂದ ಪದ ಹಾಡ್ಯಾರ

ಗುರು ಕರಸಿದ್ರ್ಧದನ ಪಾದಾ ಪಿಡದಾರಾ ||3||

ಏನು ಬೇಡಲಿ ನಾನು ಗುರುರಾಯಾ |

ಶೃಂಗಾರವಾದ ತಾಳಿಯಾರೆ ಕಟ್ಟಿ ನೋಡಯ್ಯಾ

ತಾಳಿಯಾರೆ ಕಟ್ಟಿ ನೋಡೋ ಬಿಟ್ಟು ನಾನು ಇರುವದಿಲ್ಲಾ

ಘಟ್ಟಿ ಗುರುವಿನ ಪಾದದಲ್ಲಿ ಮುಟ್ಟಿ ಭಜಿಸಿ ಹೇಳುವೆ ನಾ ||ಪಲ್ಲ||

ಉತ್ತಮಾ ನಿನ ಸೇವೆ ಮಾಡುವೇನೊ |

ನಿತ್ಯೊಂದು ಕಾಲದಿ ನೆತ್ತಿ ಮೇಲೆ ಹೊತ್ತು ತಿರುಗುವೆನೋ

ಸತ್ತು ಸಾವಲ್ದಂಗೆ ಮಾಡೊ ಬಿದ್ದೆ ನಿಮ್ಮ ಪಾದದಲ್ಲಿ

ಶುದ್ಧ ಮಾಡೊ ಈ ಜನ್ಮವನ್ನು

ಬುದ್ಧಿ ಎನಗ ತಿಳಿಯದ್ಹೋಯಿತು ||1||

ಹಾಸಿ ಉಂಡು ಬೀಸಿ ಒಗದೇನೋ |

ಈ ಸಂಸಾರ ಹೇಸಿಕೊಂಡು ದೂರ ಸರದೇನೊ

ಮುನಿಸಿದಿಯು ನಿಮ್ಮ ಬದಲಿಯಾದ

ಕಾಸಿ ನೋಡಿ ಭಂಗಾರವನು

ಸೊಸಿ ನೋಡಿದಾರೆ ಒಂದು ಮಾಸಿಯಾರೇ ಉಳಿಯಬೇಕು ||2||

ದೃಢನೆ ಹರಸೂರ ಮೃಢನೆ ಕರಸಿದ್ಧ ಹಡದಿಟ್ಟಿದೆನ್ನನು

ಹರನಿಗೆನಿತು ಹರಕಿ ಮಾಡಿದ್ದಾ

ಪಡೆದ ಬಂದ ಪ್ರಾಲಬ್ದ ಎಂದಿಗಾದರು ತಪ್ಪೊದಿಲ್ಲಾ

ಮಡದಿಯಾಗಿ ನಿನ್ನ ಮನೆಯೊಳು

ದುಡಿದು ಋಣ ನಾ ಮುಟ್ಟಿಸುವೆನೊ ||3||

ಭವದ ಸಂತೆ ಮಾಡಬೇಕಣ್ಣಾ |

ಬಹು ಎಚ್ಚರಿಟ್ಟು ಭವದ ಸಂತೆ ಮಾಡಬೇಕಣ್ಣಾ ||ಪಲ್ಲ||

ಭವದ ಸಂತೆ ಮಾಡಬೇಕೊ ಬ್ರಹ್ಮವಿದ್ಯಾ ಬಲಿಸಬೇಕೋ

ಓಂ ಸೋಂಹಂವೆಂಬೊ ನಾಮಾ ಪ್ರೇಮದಲ್ಲಿ ಇಡಬೇಕೊ ||ಅನು ಪಲ್ಲ||

ಆರು ಮಂದಿ ಬಣಜಗೆರಣ್ಣಾ |

ಈ ಅಂಗಡಿಯೊಳು ಅವರದೆ ಅದ ಕಾರುಬಾರಣ್ಣಾ

ಮೂರು ಮಂದಿ ಊರ ಗೌಡರು

ನಾಡ ಸುದ್ದಿಯು ಹೇಳುತಾರ

ಕಾಡಿನ್ಹಗ್ಗ ಕೊರಳಿಗ್ಹಾಕಿ ಹಿಡಿದು

ಅವರು ಜಗ್ಗುತಾರಾ ||1||

ಪ್ಯಾಟಿ ಸುತ್ತಲಿ ಕ್ವಾಟಿ ಶೃಂಗಾರ |

ಒಂಭತ್ತು ಅಗಸಿಗಳು ನಡುವೆ ಬೀದಿ ಪಗಡಿ ಬಜಾರ

ಹತ್ತರ ಹಾದಿ ಗೊತ್ತು ತಿಳಿಯದೆ

ಉತ್ತುಮಾನ ಮಗನು ಆಗಿ

ಮುತ್ತುಗಾರನ ಬದಲಿ ಹೋಗಿ

ಗೊತ್ತು ಮಾಡಿಕೊಳ್ಳೊ ಹಾದಿ ||2||

ಮೂರು ಲೋಕದ ಸುದ್ದಿ ಹೇಳುವನು |

ಮುತ್ತುಗಾರನಿವನು ಏಸು ದೇಶ ತಿರಿಗಿ ಬಂದವನು

ತಂದಿ ಕರಸಿದ್ಧನ ಬದಲಿ ಹೊಂದಿ

ವ್ಯಾಪಾರ ಮಾಡೋ ನೀನು

ಎಂದು ಕಡಿಮೆ ಕೊಡುವುದಿಲ್ಲ

ಕಂದನೆಂದು ತಿಳಿಯುತಾನ ||3||

ಪಡೆದ ದೈವಕ್ಕೇನು ಮಾಡಲಿ | ಹಡದಪ್ಪಗಳಿರಾ

ಪಡೆದ ದೈವಕ್ಕೇನು ಮಾಡಲಿ

ಪಡೆದ ದೈವಕ್ಕೇನು ಮಾಡಲಿ

ಒಡೆಯರಾಜ್ಞಿಯು ಹೇಗೆ ಮೀರಲಿ

ಜಡದ ದೇಹವು ಎಷ್ಟು ಹೊದಿಯಲಿ

ಜನರ ಬಾಧೆಯು ಎಂತು ತಾಳಲಿ ||ಪಲ್ಲ||

ಹುಚ್ಚನ ಬೆನ್ನ ಹತ್ತಿ ಹೋಗಿದೆನೊ

ಪಶ್ಚಿಮ ದಿಕ್ಕಿನ ಕಿಚ್ಚು ಎನ್ನೊಡಲೊಳಗೆ ತುಂಬಿದೆನೊ |

ಮುಚ್ಚಿದಾವೊ ಎರಡು ನೇತ್ರಾವು

ಬಿಚ್ಚಿ ನಿಮ್ಮನು ನೋಡಲ್ಹ್ಯಾಂಗ

ತುಚ್ಚ ಮಾಡಬೇಡಿರೆನ್ನನು

ನಿಚ್ಛಯಿದಿ ನೀವು ಆಡೋ ನುಡಿಗಳು ||1||

ಉಟ್ಟ ಸೀರೆ ಸೆಳೆದು ಒಗದಿದನೋ |

ತೊಟ್ಟಂಥ ಕುಪ್ಪಸ ತಿರಿವಿ ತೊಳಿನಿಂದ ತೆಗೆದಿದನೊ

ಮುಟ್ಟಿದಾನೋ ದಿಟ್ಟ ತಾನು

ಕೂಡಿ ಉಂಡು ಕುಲಗೆಡಿಸಿದಾನೊ

ಜಾತಿಯೊಳಗಿಂದು ಜರದಿದಾನೊ

ಮಾತಿಗಾಗಿ ಮನ ಸೋತಿದಾನು ||2||

ಕಲಿಯುಗದಲಿ ಕರ್ಮ ಕಳದಿದನೋ |

ಧರ್ಮೆಂಬೊ ಬೀಜ ಕರ್ಣದಲ್ಲಿ ಬಿತ್ತಿ ಬೆಳದಿದನೊ

ಚಂದ್ರ ಸೂರ್ಯರೊಡನೆ

ಬ್ರಹ್ಮರಂದ್ರದಲ್ಲಿ ಹೊಳಿಯುತಿರ್ಪ

ಆನಂದ ಮೂರುತಿ ಕರಸಿದ್ಧೇಶನ

ಅಗಲಿ ನಿಮ್ಮನು ನೋಡಲ್ಹ್ಯಾಂಗ ||3||

ಗುರುವನ್ನು ಕಾಣಲಿಲ್ಲ ಖೋಡಿ |

ಹರನನ್ನು ಹಾಡಿ ಗುರುವಿನನ್ನು

ಗುರುವಿನನ್ನು ಕಾಣಲಿಲ್ಲ ಮರವಿನ ಜನ್ಮದಿ ಹುಟ್ಟಿ

ಮೃತನಾಗುವ ಕಾಲಕ್ಕೆ ಯಮ ಶಿಕ್ಷೆ ಬಾದೆಗೆ ನೀನೆಯಾದಿ ||ಪಲ್ಲ||

ಸತಿಯ ಸುತರು ಬಂಧು ಬಳಗಿಲ್ಲ |

ಸತ್ಹೋಗೋ ಕಾಲಕ ಸಾವಿರಾರು ಮಂದಿ ನಿನಗಿಲ್ಲಾ

ಉದರಲಿ ಉದ್ಭವಿಸಿ ಬಂದಿದು

ಚದುರ ದೇಹವು ಬಿಟ್ಟು ನಡೆದಿ

ಸದರಲಿಂದೆ ಹುಕುಂ ಬಂತೋ ಸಾಕ್ಷಿದಾರರೊಬ್ಬರಿಲ್ಲಾ ||1

ರೊಕ್ಕ ರೂಪಾಯಿ ಘಳಿಸಿ ರಿಣ ಕೊಟ್ಟಿ

ಹೆಚ್ಚಾದ ಹಣವು ಮನಿಯೊಳಗ ವೈದು ಬಚ್ಚಿಟ್ಟಿ

ಹಬ್ಬ ಹುಣ್ಣಿಮೆ ಮಾಡಲಿಲ್ಲ |

ಒಬ್ಬ ಜಂಗಮನ ಉಣಿಸಲಿಲ್ಲ

ಹುಗ್ಗಿ ಹೋಳಿಗ ಮಾಡಿ ಹಿಗ್ಗಿನಿಂದೆ ಉಣ್ಣಲಿಲ್ಲ ||2||

ಅಷ್ಟ ಐಶ್ವರ್ಯ ಹ್ಯಾಗೆ ಬಿಡಲೆಂದಿ |

ಯಮನನ್ನು ಕಂಡು ಕಣ್ಣು ತುಂಬಾ ನೀರತಂದಿ

ಎಷ್ಟು ಪರಿಲಿಂದೆ ಬೇಡಿಕೊಂಡರು

ದುಷ್ಟ ನಿನ್ನನು ಎಳೆದುವೈವರು

ಮುಟ್ಟಲಿಲ್ಲ ಕರಸಿದ್ಧನಲ್ಲಿ ಬಿಟ್ಟು ಯಮಪೂರಕ್ಕೆ ನಡದಿ ||3||

ಕಲ್ಲು ಪೂಜಿ ಮಾಡಬೇಕಣ್ಣಾ |

ಬಲ್ಲಂಥಾ ಜಾಣರು ಕಲ್ಲು ಪೂಜೆಯು ಮಾಡಬೇಕಣ್ಣಾ

ಕಲ್ಲು ಪೂಜಿಯು ಮಾಡಬೇಕು

ಸಲ್ಲುವುದು ಇದು ನ್ಯಾಯ ನಿಮಗೆ

ಅಲ್ಲಿ ಏನಿಲ್ಲನ್ನಬೇಡಿರಿ ಬಲ್ಲೆ ಇರುವನು ಮಲ್ಲಿಕಾರ್ಜುನ ||ಪಲ್ಲ||

ಗುಪ್ತ ಗುಡಿಯೊಳು ಗುಂಡು ಬಸವಣ್ಣಾ |

ಹಂಡ್ಹುಲಿಯ ಬಣ್ಣ ಹರುಷದಿಂದಲಿ ಕಾಣಬೇಕಣ್ಣಾ

ಮೂರು ಕಣ್ಣಿನ ಮೃಗವು ತಾನು

ಮುಸುಕು ಹಾಕಿತು ಲೋಕದೊಳು

ಮಿಸುಕದಂತೆ ಮಾಡಿ ಇಟ್ಟು

ಹಿಸುಕಿ ಹಾಕುವುದೊಂದು ದಿನ ||1||

ತಂಪಿನೊಳಗಿನ ಸಂಪು ಕೇಳಣ್ಣಾ|

ಬಿಚ್ಚಿ ನೋಡಿದವರಿಗೆ ಸಂಪು ದೀವಿಗಿ ತೋರುತಾದಣ್ಣಾ

ಮುತ್ತು ರತ್ನ ವಜ್ರ ಮೂರು

ಮಾಣಿಕದ ಮಂಟಿಪವ ಸೇರು

ಸೇರಿದವನ ಕೊರಳಾಗ್ಹಾರು

ಹಾಕಿಕೊಂಡು ಡಂಗುರವೇ ಸಾರು ||2||

ಅಳಗಲಿಂಗವು ಏಕು ಮಾಡಣ್ಣಾ |

ಈ ಸಾರ್ವಭೂಮ ರಂಗು ರಚನ ಸಾಕು ಮಾಡಣ್ಣಾ

ತುಂಗ ಕರಸಿದ್ಧನ ಪಾದಾ ಲಿಂಗದಲಿ ನಿಜ ರೂಪ ಕಂಡೂ

ಜಂಗಮಯ್ಯನ ಪೂಜೆ ಮಾಡಿ

ಮಂಗಳಾರುತಿ ಮಾಡೊ ಮನುಜಾ ||3||

ಜ್ವಾಕಿಯಿಂದಲಿ ನಡಿಯಣ್ಣಾ |

ಜ್ವಾಕಿಯಿಂದಲಿ ನಡಿಯೋ

ಏಕೋ ಭಾವವಿಟ್ಟು

ಸಾಕೋ ಸಂಸಾರದ ಭ್ರಾಂತಿ

ಈಶಾನೊಳು ಇಡುವೊ ಪ್ರೀತಿ ||ಪಲ್ಲ||

ನರರು ನನ್ನವರೆಂದು ತಿಳಿಬ್ಯಾಡೊ |

ಏನು ಕಾರಣವಿದು ಮಾಯದ ಕತ್ತಲಿ

ಮಹಾ ಗುರುವಿನ ಮರೆತು ಇರುಬ್ಯಾಡಿಲ್ಲಿ ||1||

ಮೇಲು ಪರ್ವತಗಿರಿ ಅಂಗವನೇರಿ |

ನುಡಿಸೋ ನೀ ಭೇರಿ

ನಾಸಿಕದ ಉನ್ಮನಿಯೊಳು ಸೇರಿ

ವಾಸ ಮಾಡೊ ನೀ ಈಶಾನ ಪಾದದಿ

ತಾಸಿಲ ಜನ್ಮದಿ ತಾಳದು ಬಾಧಿ || ||2||

ಸೀಮಿ ಕಲ್ಲು ಶಿವಪುರದ ಬದ್ಧ |

ಪೇಳಿದವನೇ ಗೆದ್ದ

ಕರಸಿದ್ಧನಲ್ಲಿ ನೀ ಆಗೊ ಶುದ್ಧ

ನೀಲಗನ್ನಡಿಯನ್ನು ನಿಲಿಸಿದ ನಿನ್ನೊಳು

ವಲಿಸೊ ನೀ ಭವದೊಳು

ಬಲಿಸೋ ನೀ ಮನದೊಳು ||3||

ಚಂದ್ರ ಸೂರ್ಯರು ಹೊಳಿಯುತಾರಣ್ಣಾ | ಚಿನ್ಮಾಯದಲ್ಲಿ

ಚಂದ್ರಸೂರ್ಯರು ಹೊಳಿಯುತ್ತಾರಣ್ಣಾ

ಚಂದ್ರ ಸೂರ್ಯರು ಹೊಳಿಯುತಾರಾ

ರಂಗ ಮಂಟಪದಲ್ಲಿ ಕುಳಿತು

ಆನಂದ ಮೂರುತಿ ನೀನು ಆಗಿ ಆತನನ್ನು ಕಾಣಬೇಕಣ್ಣಾ ||ಪಲ್ಲ||

ಮೋಡ ಮಸುಕು ಹಾಕಿದಾರಣ್ಣಾ

ಈ ರೂಢಿಯೊಳಗೆ ಮೂಢ ಜನರಿಗೆ ತಿಳಿಯಗೊಡರಣ್ಣಾ |

ಮರದ ಕೊನಿಯಲಿ ಮನೆಯ ಕಟ್ಟಿ

ಮಹಾಲಿಂಗನು ಕುಳಿತುಕೊಂಡು

ಮಾಡುವ ಕೃತಿಯನು ನೋಡುತಾರಣ್ಣಾ ಸುಳ್ಳಲ್ಲೋ ಅಣ್ಣಾ ||1||

ಸಪ್ತ ವ್ಯಸನಗಳು ಅಳಿಯಬೇಕಣ್ಣಾ | ಗುರುಭಕ್ತನಾಗಿ

ಮೂಲ ಮಂತ್ರವ ತಿಳಿಯಬೇಕಣ್ಣಾ

ಘೋರ ಕಾಂತರವನ್ನು ಸೇರಿ

ಮೇಲಾದ ಮರವನೇರಿ

ಪರಮಾತ್ಮನ ಕಾಣುಬೇಕಣ್ಣಾ | ಪರಶಿವನೆ ಅಣ್ಣಾ ||2||

ಮರವಿನೊಳು ಮುಳಗೇಳು ಬ್ಯಾಡಣ್ಣಾ |

ಸ್ಥಿರವಲ್ಲ ಜನ್ಮ ನೀರ ಮೇಲಿನ ಗುರಳಿ ನೋಡಣ್ಣಾ

ಹೊನ್ನು ಹೆಣ್ಣು ಮಣ್ಣಿಗಾಗಿ

ಮೂರು ಲೋಕವೇ ಮುಳುಗಿ ಹೋಗಿತ್ತು

ಮಾನ್ಯ ಕರಸಿದ್ಧನ ಪಾದಾ ಮನದೊಳಗೆ ಭಜಿಸೊ ಅಣ್ಣಾ ||3||

ಲಿಂಗ ಪೂಜೆಯು ಮಾಡಬೇಕಣ್ಣಾ |

ನಿಶ್ಚಿಂತನಾಗಿ ಲಿಂಗ ಪೂಜೆಯ ಮಾಡಬೇಕಣ್ಣ

ಲಿಂಗ ಪೂಜೆಯು ಮಾಡಬೇಕೊ ಲಿಂಗ ಸಾಧನ ಮಾಡಿಕೊಂಡು

ಮಂಗಲ ಸ್ನಾನವೆ ಮಾಡಿ ವiಹಾ ಗುರುವಿನ ಪಾದದಲ್ಲಿ ||ಪಲ್ಲ||

ಒಂದು ಎರಡು ಮೂರು ನೋಡಣ್ಣಾ |

ಮೋಕ್ಷದಾ ಪಾಂವಟಿಗೇರಿ ನಿಂತು ಪಾದ ಪಿಡಿಯಣ್ಣಾ

ಆರು ಮೂರು ನದಿಯದಾಟಿ ಏರಿ ಶಹರಾದಲ್ಲಿ ಹೋಗಿ

ಪಾರಮಾರ್ಥನ ಪೂಜೆ ಮಾಡಿ ಪರಬ್ರಹ್ಮನಾಗೊ ನೀನು ||1||

ಅಷ್ಟದಳ ಅಷ್ಟ ಅಂಗದಲ್ಲಿ ಅಷ್ಟ ಗುಣಗಳು ಅಳದು |

ಅಷ್ಟ ವರ್ಣದ ನೆಲೆಯು ತಿಳಿಯುತ ಶ್ರೇಷ್ಠ ಜನ್ಮದಲ್ಲಿ ಹುಟ್ಟಿ

ಇಷ್ಟ ಲಿಂಗದ ಪೂಜಿ ಮಾಡಿ ಅಷ್ಟೈಶ್ವರ್ಯ ಕಂಡು ನೀನು

ಸೃಷ್ಟಿಯೊಳಗಿಂದು ಗೆಲಿಯಬೇಕೊ ||2||

ಹಗಲು ಇರುಳು ಎರಡು ಒಂದಾಗಿ |

ಕತ್ತಲ ಬೆಳಕು ಎರಡು ರೂಪವೊಂದೆ ಸಂವನಾಗಿ

ಸತ್ಯ ಕರಸಿದ್ಧನ ಪಾದಾ ನಿತ್ಯ ನಿಜ ಶಿರದ ಮೇಲೆ

ಚಿತ್ತದಲಿಟ್ಟುಕೊಂಡು ಗೊತ್ತು ಮಾಡಿಕೊಳ್ಳೊ ದಾರಿ ||3||

ಜ್ವಾಕಿ ಜತ್ತನ ಯಾರು ಮಾಡುವರೋ |

ನಿನ್ನನ್ನು ಜಗದೊಳು ಜ್ವಾಕಿ

ಜ್ವಾಕಿ ಜತ್ತನ ಯಾರು ಮಾಡುವರು

ಏಕ ಮೂರತಿ ತ್ರಿವಿದ ರೂಪನೆ

ಲೋಕ ನಾಯಕ ಒಡೆಯ ನಿನ್ನನು ||ಪಲ್ಲ||

ಮರವಿನೊಳು ಮನೆಯು ಮಾಡುಬೇಕಣ್ಣಾ |

ವiಹಾ ಗುರುವಿನನ್ನು ಮನದ ಒಳಗೆ ಭಜಿಸಬೇಕಣ್ಣಾ

ಅರವು ತಂದು ಆರು ಮಂದಿನ ಆದತನ ಪಾದಾದಿಕೊಂದು

ಮಾತು ಮಾತಿಗೆ ಮಹಿಮೆ ತೋರುವ

ದಾತ ಶ್ರೀಗುರುನಾಥ ನಿನ್ನಗೆ ||1||

ಹಾದಿ ಹಸನ ಮಾಡುಬೇಕಣ್ಣಾ |

ಹಾದಿ ಹಸನ ಮಾಡಬೇಕು

ನಾದ ಸಂಪು ತೋರುತಿರ್ಪುದು

ಓಂ ಸೋಂ ಎಂಬೊ ಶಬ್ದ ಸೂತ್ರ ಹಿಡಿದು ಭಜಿಸುಬೇಕು ||2||

ಧ್ಯಾಸವಿಟ್ಟು ಭಜಿಸು ಬೇಕಣ್ಣಾ |

ಶ್ರೀಗುರುವಿನಲ್ಲಿ ವಾಸವಿಟ್ಟು ಉಳಿಯಬೇಕಣ್ಣಾ

ಈಶ ಕರಸಿದ್ಧನ ಪಾದ ವಾಸ ಮಾಡೊ ಮನದ ಒಳಗೆ

ಆಶೆಗಳೆಲ್ಲಾ ಅಳಿದು ಈಶನಾ ಪಾದಾದಿ ಉಳಿದು ||3||

ಜ್ವಾಕಿಯಿಂದಲೆ ನಡೆಯಣ್ಣಾ |

ಜ್ವಾಕಿಯಿಂದಾಲಿ ನಡಿಯೋ

ಏಕೋ ಭಾವವಿಟ್ಟು ಸಾಕೋ ಸಂಸಾರದ ಭ್ರಾಂತಿ

ಈಶಾನೊಳು ಇಡುವೋ ಪ್ರೀತಿ ||ಪಲ್ಲ||

ನರರು ನನ್ನವರೆಂದು ತಿಳಿಯಬ್ಯಾಡೋ |

ನರಕದ ಮಡವಿನೊಳು ಮುಳು ಮುಳುಗಿ

ಎಬ್ಬಿಸುವರು ನೋಡು

ಏನು ಕಾರಣವಿದು ಮಾಯದ ಕತ್ತಲಿ

ಮಹಾಗುರುವಿನ ಮರೆತು ಇರಬ್ಯಾಡಿಲ್ಲಿ ||1||

ಸೀಮಿಕಲ್ಲು ಶಿವಪೂರ ಬದ್ದ |

ತಿಳಿದವನೇ ಗೆದ್ದ

ಕರಸಿದ್ಧನಲ್ಲಿ ನೀ ಆಗೋ ಶುದ್ಧ

ನೀಲಗನ್ನಡಿಯನ್ನು ನಿಲಿಸಿದ ನಿನ್ನೊಳು

ಒಲಿಸೋ ನೀ ಭವದೊಳು ಒಲಿಸೋ ನೀ ಮನದೊಳು ||2||

ಸಂಸಾರದ ತಗಲಿತ್ತೊ ತಳ್ಳಿ |

ಜಗವೆಲ್ಲಾ ಕಳ್ಳಿ

ಮನ ಮುನಿಗಳಿಗೆ ಹೊಡಿಸಿತೊ ಸುಳ್ಳಿ

ಇದು ಖಾಲಿ ತಿಳಿ ||ಪಲ್ಲ||

ಹಾಲಿನೊಳು ಬೆರಸಿದನೊ ನೀರಾ |

ತೋರುವಲ್ಲದೊ ಬ್ಯಾರಾ

ತಿಳಿವಲ್ದೊ ಎನಗಿದರ ಸಾರಾ

ಜಗವೆಲ್ಲ ಪೂರಾ ||1||

ಕೊರಳೊಳಗ ಕಂಠಿಯ ಗೋಪಾ |

ನೀ ಮಾಡಿದಿ ಪಾಪಾ

ನಿನ್ನೊಳಗೆ ನೀ ಹಚ್ಚೊ ದೀಪಾ

ತಿಳಿದವನೇ ಭೂಪಾ ||2||

ಹೇಸಿಕಿಯಿಲ್ಲೊ ಸಂಸಾರವೆ ಖೋಡಿ |

ತಿರು ತಿರುಗಿ ನೋಡಿ

ಮುಳ ಮುಳಗಿ ಏಳೊದು ನೀ ನೋಡಿ

ಬಂದಿದೋ ಖೋಡಿ ||3||

ಯಾತಕ್ಕೆ ತೊಟ್ಟಿದೋ ನೀ ನಡಿಯೊ ಸರಸಾ |

ಇದರೊಳಗೆ ನೀ ಮಾಡಿಕೊಳ್ಳು

ಸುಷುಮ್ನೆದಿ ಬೆರಿಸೊ ||4||

ಯಾತಕ ಬಂದಿದಿ ಭವರೋಗಿ |

ತಿರುಗಿ ಬರಬಾರದಿತ್ತೊ ಈ ಊರಿಗಿ

ಮೆಚ್ಚಿ ಕುಂತಿದಿ ನೀ ನಾರಿಗಿ

ತಿರುಗಿ ಹೋಗಾದು ನಾಳೆ ಯಮಪೂರಿಗಿ ||ಪಲ್ಲ||

ನೀನು ಬಂದಿದಿ ಒಂದು ಆಶಿಗಿ |

ಮಾಯಾ ಮೋಹದಾ ಬಲೆಯ ಘಾಶಿಗಿ

ಜಗದೋಳು ಹಾಕಿದಿ ಹಾಸಿಗಿ

ನಿನಗೆಷ್ಟೂ ಅರಿವು ಇಲ್ಲೊ ಹೇಸಿಗಿ ||1||

ಕಳ್ಳ ಸುಳ್ಳರ ಸಂಗ ಹಿಡದಿದಿ |

ನೀ ಒಳ್ಳೆಯವರ ಸಂಗ ಕಡದಿದಿ

ತಳ್ಳಿ ಸುಳ್ಳರ ಬೆನ್ನ ಹಿಡದಿದಿ

ಮಳ್ಳ ಭವದೊಳಗೆ ಮುಳು ಮುಳುಗಿ ನಡದಿದಿ ||2||

ಸುಳ್ಳೆ ಸಂಸಾರದ ಝೋಲಿಯೋ

ನಿನ ಬಾಯಿಗಿ ಬಿದ್ದಾದೋ ಕೀಲಿಯೋ |

ಕರಸಿದ್ಧ ಹಚ್ಚಿದನೀ ಬೇಲಿಯೋ

ಈ ಬೇಲಿಯೊಳಗಿಂದು ನೀ ಗೆಲಿಯೋ ||3||

ಏನು ಹೇಳಲಿ ಎನ್ನ ಹಡದಮ್ಮಾ |

ಅಕ್ಕ ತಂಗಿದೇರು ಆರು ಮಂದಿ ಅಳವು ತಾರಮ್ಮಾ

ಆರು ಮಂದಿ ಅಳುವುತಾರಾ

ಮೋರಿ ಮುಸುಕು ಹಾಕಿಕೊಂಡು ಸೇರಲಿಲ್ಲಾ

ಎನಗ ಅವರು ಬೇರೆ ಒಬ್ಬಳೆ ಆದೆನಮ್ಮಾ ||ಪಲ್ಲ||

ವರ್ಮ ಕರ್ಮ ಆಡಿದರೆನಗೆ |

ಸುಮ್ಮನೆ ಇದ್ದೆ ಸೂಳಿ ಹಾಂಗೆ ಕುಂತಾಳೆಂದಾರೆ

ಮೂರು ಮಂದಿ ಅಣ್ಣದೆರು ಮಾರಿ ನೀರು ಸಿವಟುತ್ತಿದ್ದರು

ಒಬ್ಬರೊಬ್ಬರು ಅಪ್ಪಿಕೊಂಡು ಬೊಬ್ಬಾಟ ಎಬ್ಬಿಸಿದರಮ್ಮಾ ||1||

ದೊಡ್ಡ ದೇಗುಲದಂತ ಮನೆಯೊಳಗೆ |

ಒಬ್ಬವಳೆ ನಾನು ಅಗಲಿ ಹ್ಯಾಂಗ ಇರಲಿ ಹಡದಮ್ಮಾ

ಹಗಲಿರಳು ಎನಗೆ ಜೋಡ ಅವರು ಇದ್ದರೆ ಎನಗೆ ಪಾಡಾ

ಕುಟ್ಟಿ ಬೀಸಿ ತಂದು ಎನಗೆ ಹೊಟ್ಟಿಗೆ ಹಾಕಿ ಸಲಹುತ್ತಿದ್ದರಮ್ಮಾ ||2||

ಕರಸಿದ್ಧೇಶನ ಪಾದಾ ಪಿಡಕೊಂಡಾ |

ಮೋಕ್ಷಾದ ಗಂಡಾ ಅವನಲಿಂದೆ ಸುಖವು ನಾ ಕಂಡಾ

ಗುರುವಿನ ಮಗಳಾಗಿ ಗುರು ಪಾದೋದಕವ ಕೊಂಡಾ

ಹಸ್ತಿಣೆಯಾದ ಬಳಿಕ ತನುವಿಟ್ಟು ಬಂದು ಎನಗೆ ||3||

ಹಳೆಯ ಬೇಡಿ ಹಾರಿ ಹೊಡೆಯಣ್ಣಾ |

ಈ ಭವದ ಆಶೆಯ ಕಡಿ ಅಣ್ಣಾ

ಆವಾಗ ಸಿಗುವನು ಬಸವಣ್ಣಾ ||ಪಲ್ಲ||

ಹರಹರ ಪಾರ್ವತಿ ಹರಣ್ಣಾ

ಹರಗವರಾರ ಹರ ಹೇಳಣ್ಣಾ |

ಬಿತ್ತಿದ ಬೆಳೆ ಯಾರದಣ್ಣಾ

ಆದಿ ಅನಾದಿ ಆತನಿರುವನಣ್ಣಾ ||1||

ಖೋಡಿಗಿ ಅಣಸ ಹಾಕ್ಯಾರಣ್ಣಾ |

ಮೈಮೇಲೆ ಧರಸಿದಾನೋ ಬಿಳಿ ಬಣ್ಣಾ

ಆತಗ ಇದ್ದಾವೋ ಮೂರು ಕಣ್ಣಾ

ನಂದಿಕೇಶ್ವರ ಅಂವ ಹಾನ ನೋಡಣ್ಣಾ ||2||

ಅಲ್ಲಾನ ನಾಮದ ಅವರು ಅಣ್ಣಾ |

ಮಹ್ಮದ ಮಶಾಖ ನೋಡಣ್ಣಾ

ಕರಸಿದ್ಧನಿರುವನು ಮೇಲೆ ಸುಣ್ಣಾ

ಕಲ್ಲಿನೊಳಗ ಹುಟ್ಯಾದ ಭಸ್ಮ ತಿಳಿರಣ್ಣಾ ||3||

ನಿಂದ ನೀ ಹ್ಯಾಂಗಾರೆ ಮಾಡಯ್ಯಾ |

ಎಲ್ಲೆರೆ ಕುಂತು ನೀ ನೋಡಯ್ಯ

ನೋಡಿದ ಕ್ಷಣದಲ್ಲಿ ಕೂಡಯ್ಯ

ಇದು ಬಳಗದ ಮಂದಿಯ ಹಾಡಯ್ಯ ||ಪಲ್ಲ||

ಮನಿಯ ಮಾರ ಎನಗೆ ಮರುವು ಅಯ್ಯ |

ಸತಿ ಪುತ್ರರು ಎನಗೆ ಎರುವು ಅಯ್ಯಾ

ಈಗ್ಹ್ಯಾಂಗ ಮಾಡತಿ ಗುರುರಾಯಾ

ಅನುವವರು ಹಾರಾ ತಿಳಿ ಶಿವರಾಯಾ ||1||

ಜಾಣನ ಜಾತ್ರಿ ಮಾಡಿದಾ ತಂಬುರಿ ವೀಣಾ |

ಕರದೊಳು ತಂತಿ ಪಿಡದೀದಾ

ಶಾಂತ ವಿರಹಿತನ ಪಿಡಿದೀದಾ

ನಿಃಸ್ಸಿಮ ಜಗದೊಳಗೆಂದು ನುಡಿದಿದಾ ||2||

ಸತ್ಯ ಶ್ರೀಗುರುರಾಯಾ ನಿನ್ನ ಬಾಲಾ |

ಚಿತ್ತ ಇಟ್ಟಾದ ನಿನ್ನ ಶಿಖರದ ಮ್ಯಾಲಾ

ಉತ್ತಮನ ಸೇವೆ ಮಾಡುವೆ ಕುಡಿಸ್ಹಾಲಾ

ಚಿತ್ತದಲಿ ಚಿನ್ಮಯ ಇರುವ ಅಂವ ಸೇಲಾ ||3||

ಗಿರಿಜ ಕಲ್ಯಾಣಿ ಶ್ರೀ ಗಿರಿಧರಾ |

ಲಕ್ಷ್ಮೀ ಪುತ್ರ ಇದಕ ಅಧಿಕಾರ

ಹರಸೂರ ಗ್ರಾಮದ ಶೃಂಗಾರ

ಕರಸಿದ್ಧೇಶ ಗುರುಪಾದೇಶ್ವರ ಭಂಗಾರ ||4||

ಅಂಜಿಕಿ ಕಳದಾಳೊ ಸಂಜಿಗಿ ಬಾ ಅಂತ ಹೇಳ್ಯಾಳೋ |

ಅಕಿ ಎನಗ ಅಂಜಿಕಿ ಕಳದಾಳೋ

ಹೊಂದಿಕೆಲಿಂದ ಮಲಗಂತ್ಹೇಳ್ಯಾಳೋ ||ಪಲ್ಲ||

ಕುಚವ ಲಿಂಬಿ ಹಣ್ಣಾ |

ನೀಲವರ್ಣದ ನಿನ್ನ ಬಣ್ಣಾ

ತುಟಿಗಳು ಸಣ್ಣಾ ಮೂಗು ಸಂಪಿಗಿ ತೆನಿ ಅಣ್ಣಾ ||1||

ರೊಂಡಗಾಲಿನ ಹೆಣ್ಣ |

ನಾಚಿಕಿಲ್ಲ ನೋಡಿರೆಣ್ಣಾ

ಐದು ಮಂದಿ ಮಿಂಡರಿಗೆ ಮಾಡಿದಾಳೊ ಅಕಿನೇ ನೋಡಿರೆಣ್ಣಾ ||2||

ಕುಂತಲ್ಲೆ ಕುಂತಾಳೊ |

ಕರಸಿದ್ಧನ ಖೂನ ಹೇಳುತಾಳೊ

ಕುಂಟಗಾಲಿನವಳೊ ಗುರುಪಾದೀಶನ ಮಗಳವಳೊ ||3||

ಕಳದ್ಹೋದ ಕಾಂತನ ಕಂಡಿರೇನಕ್ಕಾ

ಕಳವಳಿಕೆಯೊಳು ಕಂಡಿರೇನಕ್ಕಾ ||ಪಲ್ಲ||

ಕಾಮನ ಬಿಲ್ಲಿನಂತೆ ನೇಮದ ತಿಲಕವು |

ನಾಮ ರೂಪವು ನೀವು ಕೇಳಿರೇನಕ್ಕಾ ||1||

ಜಂಗಮಯ್ಯನು ತಾನು ಜಗದೊಳಗೆ ತಿರುಗುವನು |

ಮುಗಿಲಿಗಿ ಮುಟ್ಟಿದಾತನ ನೋಡಿರೇನಕ್ಕಾ ||2||

ಮೂರು ಗಾವೂದ ಮೋರಿ ಅಂಥವರು ನಮ್ಮ ದೊರಿ |

ಶಾಂತ ರುದ್ರನ ನೀವು ನೋಡಿರೇನಕ್ಕಾ ||3||

ನೀಲವರ್ಣದ ಬಣ್ಣಾ ನಿಜರೂಪ ನೀರ ಅಣ್ಣಾ |

ನಿಜವಾಗಿ ನಿಮ್ಮೊಳು ನೀವು ಕಂಡಿರೇನಕ್ಕಾ ||4||

ಮಾಯಾ ಮೋಹದ ಗಿಳಿಯೇ ಕರಸಿದ್ಧನ ಶವಿ ಬೆಳಿಯೇ |

ಮುತ್ತಿನ ಸಾಲದ ಹೊಳಿಯೇ ಗುರುಪಾದೀಶನ ತಿಳಿಯೇ ||5||

ಸತ್ಯನಿಲ್ಲದ ಲಿಂಗ ಸಾವಿರಿದ್ದರೇನೊ |

ತಾನು ಉಣ್ಣಲಾರದ ಅನ್ನ ಎಟ್ಟಿದ್ದರೇನೊ ||ಪಲ್ಲ||

ಮಾತಿಗಿಲ್ಲದ ಸತಿಯು ಮನಿಯೊಳಿದ್ದರೇನೋ |

ಮಾತು ಕೇಳಲ್ದ ಮಗನು ಎದುರಿದ್ದರೇನೋ ||1||

ಹೊತ್ತು ತಿಳಿಯಲ್ದ ಜನ್ಮ ಹೊತ್ತು ಬಂದರೇನೋ |

ಕುರುಡನ ಮುಂದೆ ಕನ್ನಡಿದ್ದರೇನು ||2||

ಕುಡಿಯಲಾರದ ನೀರು ಅರಮನಿಯೊಳಿದ್ದರೇನೋ |

ದುಡಿಯಲಾರದ ಆಳು ಎದುರಿದ್ದರೇನೋ ||3||

ಸೋತು ನಮ್ಮ ಕರಸಿದ್ಧೇಶನ ದಾಸನು

ಧ್ಯಾಸದೊಳು ಇದ್ದಾರೆ ಕಡಿಮೆಯೇನೋ ||4||

ಗುರುವೆ ಸಂಚರಿಸುತ ಗುರುತಿಟ್ಟು ನಾ ಬಂದ |

ಗುರುಮಠ ಸ್ಥಲದೊಳು ಉಳಕೊಂಡೆನೋ

ಮರುಯೆಂಬೋ ಮನಿಗೆ ಕೀಲಿಯನಿಟ್ಟು

ಮಾಡುವ ಕೃತಿ ತಾನು ನೋಡುತಿದ್ದಾನೋ ಆ ಆ ಆ ||ಪಲ್ಲ||

ವ್ಯಾಘ್ರಯೆಂಬೊ ನಾಯಿನ ತಟ್ಟಿ | ||1||

ರುದ್ರಯೆಂಬೊ ಕುರಿಯ ಕಟ್ಟಿ

ಎರಡರ ನಡು ತಾಂ ನಿಂತಿದ್ದೆನೋ ಆ ಆ ಆ ||2||

ಹುಲಿಯು ಹಸುವಿಗೆ ಸತ್ತು |

ಕುರಿಯು ಅಭಯಕೆ ಸತ್ತು

ಗೊತ್ತು ತಿಳಿಯದೆ ಸತ್ತು ಹೋಯಿತ್ತೊ ಆ ಆ ಆ ||3||

ಏನು ಇಲ್ಲದಂತೆ ತಾನಾದ ಶರಣರು |

ಖೂನವು ಅರಿಯದೆ ಕೆಟ್ಟು ಹೋದರು ||4||

ಮಾನು ಜನ್ಮಾದಿ ಹುಟ್ಟಿ ಮನಸೊಸಿ ತಿಳಿಯಲಿಲ್ಲಾ |

ಮನದೊಳಗೆ ಮನಿಯು ಮಾಡಿದ ಕರಿಸಿದ್ಧೇಶನೆ ಬಲ್ಲಾ ||5||

ಆರು ತತ್ವವು ಭೋಗಿಸಿದ ಶ್ರೀಗುರುರಾಯ |

ಮಿರಿದುನ್ಮನಿ ಸೇರಸಿದಾ ಪಾರಮಾರ್ಥನೆ ಬಂದು

ಪರದೇಶಕ್ಕೆ ಕರದೊಯ್ದು ಪಾವನ ಮಾಡಿದ ಸದ್ಗುರು ರಾಯಾ || ||ಪಲ್ಲ||

ಚಂದ್ರ ಸೂರ್ಯರ ಬೆಳಗಾದ ರನ್ನ ಮಂಟಪದೊಳು

ದೇವೇಂದ್ರನ ಸಭೆಯು ಬಳಗಾದಾ ||

ಸರ್ಪ ಭೂಷಣ ಪಂಚಾಮೃತವ ಸುರಿವ |

ಸಪ್ತವರ್ಣ ಲಿಂಗದ ಕಪ್ಪುಗೊರಳಲಿಂದೆ ಕಾಣಿಸಿದ ಸದ್ಗುರು ರಾಯ ||1||

ನೀಲಗನ್ನಡಿಯೊಳಗಿದ್ದಾ ಶ್ರೀಗುರುರಾಯಾ

ನಿಜರೂಪವನೆ ತೋರಿದ್ದಾ

ಸಣ್ಣ ಕಂದನ ಮುಂದೆ ದೀವಿಗಿ ಹಚ್ಚ್ಯಾನ

ಚಂದ ಕಂಡಾರೆ ಆನಂದ ಗುರುವಿನ ದಯದಿಂದೆ ||2||

ಸೀಮಿ ಕಲ್ಲು ಶಿಖರಕ್ಕೇರಿಸಿದಾ ಸದ್ಗುರು ರಾಯಾ

ಸಿಂಹಾಸನವನ್ನು ಸೇರಿಸಿದಾ

ಸಾಕ್ಷಾತ ಸಂಗಮೇಶ್ವರ ಮನಿಯಲ್ಲಿ ಬಂದಾ

ಶಿವಶರಣನ ದಯದಿಂದಾ ಕಂಡರಾಯಿತೋ ಆನಂದಾ ||3||

ತೊಟ್ಟಿಲೊಳು ಮಲಗಿಸಿದಾ |

ಈ ಬಾಲನ ತೊಟ್ಟಿಲೊಳು ಮಲಗಿಸಿದಾ

ಈ ಕಂದನಾ ತೊಟ್ಟಿಲೊಳು ಮಲಗಿಸಿದಾ

ತೊಟ್ಟಿಲೊಳು ಮಲಗಿಸಿದ

ನಿಟಿಲ ಲೋಚನೆಯೆಂದು ಬೊಟ್ಟಿಲಿಂದೆ

ಅಮೃತ ತುಟಿಯ ಮೇಲೆ ಬೆರಸಿದಾ ||ಪಲ್ಲ||

ತೈಲ ಜಲವನ್ನೇ ಬೆರಸಿದಾ |

ಸದ್ಗುರುರಾಯಾ ಮಜ್ಜನವನ್ನೇ ಗೈಸೀದಾ

ಕಣ್ಣೊಳು ಕಾಡಿಗೆನಿಕ್ಕಿ ಫಣಿಯೊಳು ಇಟ್ಟಾನ ಚುಕ್ಕಿ

ಬೈತಲವನ್ನೇ ತಿಕ್ಕಿ ಬೈಲಾದ ಗುರು ರಾಯಾ ||1||

ಅಂತರ ಇಲ್ಲದ ಆಕಾಶದ |

ಅರವಿನಾಲಾಯದಿ ಒಯ್ದು

ನಿಲುವಂಗಿ ತೊಡಸಿದಾ ಖಡಗವೇ ತೊಡಸಿದಾ

ಮುದ್ರೆಯ ಜೋಗುಳ ಮೂಲವೇ ಪಾಡಿದಾ ||2||

ಹರಸೂರ ಒಡೆಯ ಬಂದಾ |

ಹರುಷವಾಯಿತೊ ಎನ್ನ ಆತ್ಮಕ್ಕೆ ಆನಂದಾ

ಉಡಸಿದ ಉಡಗೇರಿ ಬಿಡಿಸಿದ ಸರ್ವೇಲ್ಲಾ

ಕುಡಸಿದಾ ಮೊಲಿ ಹಾಲಾ ಕರಸಿದ್ಧ ಮಾಡಿದ ಶೇಲಾ ||3||

ಪಾಪಿಗ್ಯಾತಕ ಬೇಕು ಪರ ತತ್ವದ ಬೋಧೆ |

ಕೋಪಿಗೆಲ್ಲಿಂದು ಮುಕ್ತಿ ಮಾರ್ಗವೇನೋ ||ಪಲ್ಲ||

ಓದು ಬರದಿದ್ದರೇನೋ ವಾದ ಮಾಡಿದರೇನೋ |

ಸಾಧು ಸಂತರ ಮಾರ್ಗ ಸುಮ್ಮನೇನೋ ||1||

ಭಲೆವನ ಸತಿಯೊಳು ಬಡತನ ಮನೆಯಲ್ಲಿ |

ಒಡಲದಾಸೆಗೆ ಬಿದ್ದು ದುಡಿವಳೇನೊ || ||2||

ಕಾಮಿನಿಯಲಿದ್ದ ಮೋಹ ಕರಸಿದ್ಧನಲ್ಲಿಟ್ಟರೆ

ಕರ್ಣ ಬೋಧವ ಮಾಡೊದು ಬಿಟ್ಟಾನೇನೋ ||3||

ಎಂಥ ಕನಸು ಕಂಡೆ ನಾ ಕೇಳೆಲೆ ಸಖಿ |

ಎಂಥಾ ಕನಸು ಕಂಡೇ ನಾ ಎಂಥಾ ಕನಸು ಕಂಡೇ

ಶಾಂತ ರೂಪವು ಕಂಡೆ ಮಹಾದೇವಿ ನಿನ್ನ ಕಂಡೆ ನಾ ||ಪಲ್ಲ||

ನೀಲದುಪ್ಪರಗಿಯ ಮೇಲೆ ತಾಳ |

ಮದ್ದಲಿ ಝಾಂಗಟಿ ನುಡಿದಾವಲ್ಲೆ |

ಏಳು ಸುತ್ತಿನ ಕ್ವಾಟಿ ಒಂಬತ್ತು ಬಾಗಿಲ

ಒಬ್ಬವಳೆ ಮುಚ್ಚಿದನೆಲ್ಲೆ ||1||

ಬೆಳದಿಂಗಳ ಬಿಸಲಾಯಿತೋ ಎನ್ನ ಹಣೆಬಾರ |

ಬರೆದ ಬ್ರಹ್ಮನ ರೂಪಾಯ್ತೋ

ಚಿತ್ರ ಗುಪ್ತರು ಅಲ್ಲಿ ವಿಚಿತ್ರವೆ

ಮಾಡುವರು ಚಿನ್ಮಯ ಕಂಡ್ಹಾಂಗಾಯಿತೋ ||2||

ನಾನಾ ಜನ್ಮವು ತಿರುಗಿದೆ |

ನಾನೊಬ್ಬಳೆ ನನ್ನೊಳಗೆ ನಾ ತಿಳಿದೇನ

ಶಶಿಕಾಂತಿ ರುಕ್ಮೀಣಿ ಶಂಭೋ

ಪಾರ್ವತಿದೇವಿ ಗಂಗೆ ಜಡಿಯೊಳು ಕಂಡೆನೆ ||3||

ವಿಘ್ನೇಶ್ವರನ ಕಂಡೆ ನಾಂ |

ವಿಘ್ನ ಬಾರದಂತೆ ಬೇಡಿಕೊಂಡೆ ನಾ

ಫಣಿಯಲ್ಲಿ ತ್ರಿಮೂರ್ತಿ ಭಸ್ಮವ ಧರಿಸಿದ

ತ್ರಿಪುರಾಂತಾಚಿಲಿ ಕಂಡೇನಾ ||4||

ಹರಸೂರೀಶನ ಕಂಡೆ ನಾ |

ಕರಸಿದ್ಧೇಶನ ಪಾದವೇ ಪಿಡಕೊಂಡೆ ನಾ

ಗುಪ್ತಾದಲ್ಲಿರುವಂಥ ಗುರುಪಾದೀಶನ

ಮಗಳು ರುದ್ರಾನ ಕಂಡೆ ನಾ ||5||

ಗುರು ಭಕ್ತರ ಪೂಜೆ ಯಾತರಿಂದಲಿ ಮಾಡಲಿ |

ಗುರುನಾಥನ ಪೂಜೆ ಯಾತಾರಿಂದಲಿ ಮಾಡಲಿ ||ಪಲ್ಲ||

ಮನವು ಎಂಬೊ ಮಜ್ಜನ ನೀಡಿ |

ತನವು ಎಂಬೊ ಗಂಧವ ತೀಡಿ

ನೆನವು ಎಂಬೊ ಪುಷ್ಪವ ಸೂಡಿ

ತ್ರಿದಳವೆಂಬೊ ತ್ರಿಕೂಟ ಮಾಡಿ ||1||

ಬೈಲಿನೊಳಗೆ ಬೈಲಾಕಾರ ಭಸ್ಮ ಧೂಳಿಪ

ಭವ ಉದ್ಧಾರ ದಶ ಅನಂಗವೇ ||2||

ಶಾಶ್ವತಾ ಧಾರ ನಾನಾ ಜನ್ಮದಿ ನಾನೇ ಇಲ್ಲಾ

ಮಾನೊ ಜನ್ಮ ಮೊದಲೆ ಇಲ್ಲ |

ಜ್ಞಾನಮೂರ್ತಿ ಕರಸಿದ್ಧೇಶನ ಅರಿತ

ವiಹಾತ್ಮನ ಮಗನೆ ಬಲ್ಲ ||3||

ಘನ ಗುರುವಿನ ಮಹಿಮೆ ವೈಭವದ ಸುಖವೇನ್ಹೇಳಲಿ |

ವನಪು ವೈಯಾರ ಮಾಡಂವ ತಾನೆ

ಮನಕೆ ಮನದೊಳು ಕೂಡಂವ ತಾನೆ

ಮೋಹದೊಳಗೆ ಲೋಲಾಡಂವ ತಾನೆ ||ಪಲ್ಲ||

ಉಡುಗೆ ವಸ್ತಗಳುಡಂವ ತಾನೆ |

ಕಡಿಯ ಮಾರ್ಗದಿ ಚರಿಸ್ಯಾಡಂವ ತಾನೆ

ಪೊಡವಿಯೊಳಗೆ ಬಂದು ಪಡೆದಿರಂವ ತಾನೆ ||1||

ಸ್ವರ್ಗ ಮರ್ತದೊಳ ಚರಿಶ್ಯಾಡಂವ ತಾನೆ |

ಸ್ವಾದಿಷ್ಟ ಮಣಿಪುರದೊಳಗಿರಂವ ತಾನೆ

ನಾಸಿಕದ ಕೊನಿ ಮೇಲ ಗುರುನಾಥನೆ ಹಾಂನೆ ||2||

ಜಾಣ ಜಾಣರೊಳು ಜಾಣೆರಂವ ತಾನೆ |

ಜಂಗಮ ರೂಪವೂ ಧರಿಸಿರುತಾನೆ

ಸಂಗಮೇಶ ಕರಸಿದ್ಧನೆ ಹನಾ ಆತಂದು ಮಾಡವ್ವ ನಿತ್ಯ ಧ್ಯಾನಾ ||3||

ಶ್ರೀರಾಮ ರಾಮಾ ಆ ಪ್ರಭೋ ರಾಮ ರಾಮಾ |

ಆ ಶಿವ ರಾಮ ರಾಮಾ ಗಿಳಿಯು ಪಿಂಜಾರದೊಳಗಿಲ್ಲ ||ಪಲ್ಲ||

ಸಣ್ಣಾಗ ಇದ್ದಾಗ ಹಿಡತಂದು ಸಾಕಿದ |

ಜ್ವಾಕಿ ಮಾಡಿದವನ ಮರೆತಿತ್ತು ಆ ಗಿಳಿಯು ||1||

ಹಸಿರು ಬಣ್ಣದ ಪಕ್ಷಿ ಹೆಸರಿಟ್ಟು ಕರದಿದ್ದೆ |

ಬಸವ ಪ್ರಮಥರೊಳು ವ್ಯಸನದೊಳು ಆಡಿದ್ದ ಗಿಳಿಯು ||2||

ಹಲವು ಹಂಬಲ ಮಾಡಿ ಫಲ ಹಣ್ಣುಗಳು ತಂದು |

ಬೆಲಿಯಿಲ್ಲದ ಪ್ರಸಾದ ಮುಗಿದು ಹೊಯಿತ್ತಾ ಗಿಳಿಯೊ ||3||

ಮೂಗು ಕೆಂಪು ಬಣ್ಣಾ ಮೂರು ಲೋಕದ ಕಣ್ಣಾ |

ಮುರಹರಿ ಸೇವೆಯೊಳು ಸೇರಿಕೊಂಡಿದ ಗಿಳಿಯು ||4||

ಉದಯದಲ್ಲೇಳುತ್ತ ಸದಾಶಿವನ ನೆನೆಯುತ್ತ |

ಮದುವೆ ಗಂಡ ಕರಸಿದ್ಧನ ಧ್ಯಾನದೊಳಗೆ ಅಡಗಿದ ಗಿಳಿಯೊ ||5||

ಅಡಿಗಡಿಗೆ ಗಡಿಗಡಿಗೆ ಹರ ಹರಾ

ನುಡಿ ನುಡಿಗೆ ಧ್ಯಾನವನ್ನೇ ನೀ ಮಾಡೊ

ನುಡಿನುಡಿಗೆ ಮೃಢಕರ ಶರಣರೊಳು ನಲಿದಾಡೊ ||ಪಲ್ಲ||

ರೇಚಕ ಪೂರಕ ಮಾರ್ಗವನ್ನೋ ನೀ ತಿಳಿಯೋ

ಆಧಾರ ಸ್ವಾಧಿಷ್ಟ ಮಣಿಪುರವನ್ನೆ ನೀ ತಿಳಿಯೋ

ಘನಂ ಜ್ಯೋತಿಲಿಂಗ ನಿನ್ನೊಳಗೆ ನೀ ತಿಳಿಯೋ ||1||

ಸುಷುಮ್ನದ ಸೂತ್ರದ ಆಧಾರವನ್ನೆ ನೀ ಪಿಡಿಯೋ |

ಓಂಕಾರ ಝೆಂಕಾರ ಶಂಕರನೆಂದು ನೀ ನುಡಿಯೋ

ಅನುದಿನ ಗುರುವಿನ ಪಾದ ಧ್ಯಾನದಿ ನೀ ಉಳಿಯೊ ||2||

ಕಾಳಿ ಕರ್ಣದಿ ಭೇರಿ ನಾದವನ್ನೇ ನೀ ಕೇಳಿ |

ಈಡಾಪಿಂಗಳ ಎಂಬೊ ನಾಡಿ ಮಧ್ಯಾದಿ ಒಡಗೂಡಿಯೋ

ತಂಬೂರು ತಾಳ ಧ್ವನಿಯನ್ನೇ ನೀ ಕೇಳಿ ||3||

ಅಂತರಂಗದಲ್ಲಿ ಅಗಣಿತ ಆಸನ ಹಾಕಿ |

ಏಕಾಂತ ಗುರು ಕರಸಿದ್ಧಂದು ಮುಟ್ಟಿಸೊ ಮೋಹದಿ ಬಾಕಿ

ಪ್ರೇಮ ಮಾಯಾ ಮೋಹದಿ ಒಡಗೂಡಿ ||4||

ಬೇಡಿದವರಿಗೆ ವರವು ನೀಡುವನೊ |

ನಮ್ಮ ಗುರುರಾಯಾ

ಬೇಡಿದವರಿಗೆ ವರವು ನೀಡುವನೊ

ಬೇಡಿದವರಿಗೆ ವರವು ನೀಡಿ ಕಾಡಿನಗ್ಗ ಕಡೆಗೆ ತೆಗೆದು

ರೂಢಿಯೊಳಗೆ ತಮ್ಮ ನಾಮ ತಾನೆ ಕೀರ್ತಿಗೊಳಿಸುವನು ||ಪಲ್ಲ||

ಭವದ ರೋಗ ಕಳದಿದಾನೊ |

ಭವದ ಒಳಗ ಉಳದಿದಾನೊ

ಭಕ್ತಿಯೊಳಗೆ ಬೆರೆದಿದಾನೊ

ಮುಕ್ತಿ ಮಾರ್ಗವು ತೋರಿದಾನೊ ||1||

ಮನಸಿನೊಳಗೆ ಮನೆಯೇ ಮಾಡಿದನೊ ಮಹಾಲಿಂಗ ತಾನು |

ಮನಸಿನೊಳಗೆ ಮನೆಯ ಮಾಡಿದನೊ

ಕನಸಿನೊಳಗೆ ಕಾಣುತಾನಾ ದಿನಸು ದಿನಸು ತೋರುತಾನಾ

ನ್ಯಾಯಾಧೀಶನು ತಾನೇ ಹಾನಾ ||2||

ಸತ್ಯ ವಾಕ್ಯ ಸಾರುತಾನಾ |

ಸಕ್ಕರಿಯೆಂತೆ ಬೀರುತಾನಾ

ಮತ್ತೆ ಗುರು ಪುತ್ರರಲ್ಲಿ

ಮಿತ್ರರಂತೆ ಇರುತಾನಾ ||3||

ಸಾಲನಿಲ್ಲದೆ ಸಲಹುತಾನಾ |

ಹಾಲು ಸಕ್ಕರೆ ಸುರಿಯುತಾನಾ

ಬಾಲ ಬ್ರಹ್ಮನು ತಾನೆ ಹಾನಾ

ಭವದೊಳಗೆ ಸುಳಿಯುತಾನಾ ||4||

ಹುಟ್ಟು ಸಾವು ಅಳಿಸುತಾನಾ |

ಜನನ ಮರಣಕ್ಕೆ ತಾನೇ ಹಾನಾ

ಕರಸಿದ್ಧೇಶನೆ ಕಾಣುತಾ

ಅವನಲಿಂದೆ ಎನಗೆ ಮಾನಾ ||5||

ಕಲಬುರ್ಗಿ ಬಾಜಾರದೊಳು

ಕಳೆದ್ಹೋಯಿತೊ ನಮ್ಮ ಎತ್ತು |

ಖರೀದಿ ಕೊಂಡಿದ್ದೆನಣ್ಣಾ ಕರಿಯ ಬಣ್ಣದ ಎತ್ತು

ಖಳಿಯ ಬಿಳಿಯ ಬಣ್ಣದ್ದು

ಎಳಿಯ ಹೋರಿನಾ ನೋಡಿದೇನಣ್ಣಾ ||ಪಲ್ಲ||

ಎಷ್ಟು ದಿವಸ ಘಳಿಸಿದ್ದು ಅಷ್ಟು ಹಣ

ಎಲ್ಲ ಕೊಟ್ಟು ನಿಷ್ಟಿ ಇಟ್ಟುಕೊಂಡಿದ್ದೆನಣ್ಣಾ |

ಆಕಳ ಮಾರಿಯಿತ್ತು ಆಕಾಶ ಘಂಟಿತ್ತು

ಯಾರರೆ ನೋಡಿರೇನಣ್ಣಾ ||1||

ಶಾಂತ ಗುಣದ ಹೋರಿ

ಸಂತಿಯೊಳು ಕಳದ್ಹೋಯಿತು |

ಸಂತರು ನೋಡಿರೇನಣ್ಣಾ

ಎನ್ನ ಮನಸ್ಸಿಗೆ ಶಾಂತವು ಮಾಡಿಸರಿ

ಮನ ಸೋಸಿ ಧಿನಸೀನ ಹೋರಿ ಹೇಳಣ್ಣಾ ||2||

ಕನಸಿನೊಳಗೆ ಬಂದು ಕಂಡಂತೆ ಆಯಿತ್ತೊ |

ಕರವಿನ ನೋಡಿರಣ್ಣಾ

ಗುರು ಕರಸಿದ್ಧನ ಗುಪ್ತದೊಳು ಇರುವಂಥ

ಘೂಳಿನ ಕಂಡಿರೇನಣ್ಣಾ ||3||

ಪರದೇಶಿ ಕ್ವಾಣಿಗಿ ಪಾಪಸಲಿ ಹೊಡಿರೆಪ್ಪಾ |

ಫಲವಿಲ್ಲ ಈ ಕ್ವಾಣ ಹುಟ್ಟಿ

ನಾಲ್ಕು ಕೊಡದ ಲಗಳಿ ನಾನಿಟ್ಟು ಹೊಡಿದರೆ

ಕೊಡವೊಂದು ಉಳಿಲಿಲ್ಲಾ ಘಟ್ಟಿ ||ಪಲ್ಲ||

ಮನಿಯೊಳು ನೀರಿಲ್ಲಾ ಭಾವಿ ದೂರಿಲ್ಲಾ

ಮನಸೆಂಬೊ ಕ್ವಾಣವು ಕಟ್ಟಿ

ಹಣಿಗಂಟು ಹಾಕಿದರ ಹಾರಿತ್ತೊ

ನಮ್ಮ ಕ್ವಾಣ ಹರಸೂರ ಊರಲ್ಲಿ ಹುಟ್ಟಿ ||1||

ಅಂದೀಗಿ ಇಂದೀಗಿ ಇದ್ದಿದ್ದು ಎಂದೀಗಿ ಈ ಕ್ವಾಣಾ |

ಕುಂದಿಲ್ಲದೆ ಸಲವಿದ್ದೇನಣ್ಣಾ

ಕುರಸಾಲ್ಯಾ ಕ್ವಾಣಿಗೆ ಬೆರಸುಬೇಡರಿ ನೀರು

ಹೊರಸಿನೊಳು ಹಾಕು ಬೇಕಣ್ಣಾ ||2||

ಕಡಿದ ಕಣಕಿಯ ಬೇಡ ಕರಿಯ ಕ್ವಾಣವು ಬೇಡಾ

ಕರಸಿದ್ಧನ ಕಾಣೆಲೋ ಮೂಢಾ

ಗುರು ಗುರುಪಾಧೀಶನ ಗುಪ್ತಾದಿ ತಿಳಿಕೊಂಡು

ರುದ್ರನಲ್ಲಿರುವೊದೆ ಪಾಡಾ ||3||

ಯಾರ ಮುಂದೆ ದೂರಿಕೊಳ್ಳಲಿ ಮನಸಿನ ಕಷ್ಟ |

ಯಾರ ಮುಂದೆ ಹೇಳಿಕೊಳ್ಳಲಿ ||ಪಲ್ಲ||

ಎಷ್ಟು ಮಂದಿ ಬಂಧು ಬಳಗ |

ಕಷ್ಟದಿಂದ ಸಲುಹಿದರು ಎನಗ

ಎಷ್ಟು ಪರಿಯಿಂದ ಬೇಡಿಕೊಂಡರೆ

ಅದೃಷ್ಟ ಭೋಗವು ತಪ್ಪಲಿಲ್ಲಾ ||1||

ಬಟ್ಟ ಬೈಲೆ ಆಯಿತಲ್ಲಾ |

ಮರವು ಮುರಿದು ಹೋಯಿತಲ್ಲಾ

ಅಟ್ಟ ಅಡವಿಯೊಳಗೆ ಉಳಿದು

ಸುಟ್ಟು ನಷ್ಟ ಆದೆನಲ್ಲಾ ||2||

ತಂದ ಸಾಲಾ ತೀರಲಿಲ್ಲಾ |

ಒಂದು ನನಗ ಅರುವು ಇಲ್ಲಾ

ಬಂಧನ ಸಾಗರ ಬಿಡಲಿಲ್ಲಾ

ನಾ ಮಾಡೆನಂದರ ತೀರಲಿಲ್ಲಾ ||3||

ಎಷ್ಟು ಜನ್ಮದಿ ಕಳದೆನಲ್ಲಾ |

ಅಷ್ಟು ಇಷ್ಟು ಭಾಗಾದಿಗಳೆಲ್ಲಾ

ಎಷ್ಟೂ ನನಗ ಅರವು ಇಲ್ಲಾ

ಎಚ್ಚರ ಅರಿತಂವ ಗುರುವೆ ಬಲ್ಲಾ ||4||

ಅಂತರ ಅಂತರಾಯಿತಲ್ಲಾ |

ನಿರಂತರ ಸುಖದಿ ಉಳಿದೆನಲ್ಲಾ

ಸಂತ ಸಂಗದಿ ಕರಸಿದ್ಧೇಶನ

ಪಂತ ಪಾವಡ ಗೆಲಿದೆನಲ್ಲಾ ||5||

ಶಿವನು ಬಂದಾನ ನೋಡಮ್ಮಾ ಈ ಭುವನದೊಳಗೆ |

ಶಿವನು ಬಂದಾನ ನೋಡಮ್ಮ ||ಪಲ್ಲ||

ಸ್ವರ್ಗ ಮರ್ತ್ಯದಿ ಚರಿಸ್ಯಾಡುತಾನಾ |

ಸ್ವಾದಿಷ್ಪ ಮಣಿಪುರದೊಳಗಿರುತಾನಾ

ನಿತ್ಯ ಮಾಡುವೆ ಆತನ ಧ್ಯಾನ

ಅವನಿಂದೆ ಅದ ಎನಗೆ ಮಾನಾ ||1||

ಬಲ್ಲವರ ಭಾವದಿ ದುಡಿಯುತಾನಾ

ಗುರುಭಕ್ತನೆ ಹಾನಾ

ಗುರು ಉದೇಶವು ಕೇಳುತಾನಾ

ತನ್ನೊಳು ತಾನು ಮರೆಯುತಾನಾ ||2||

ಜಗ ಜಗ ಜಗದೊಳು ಹೊಳಿಯುತಾನಾ |

ಜಗದ ಜಾತ್ರಿಯು ಮಾಡುತಾನಾ

ನಿತ್ಯ ಮಾಡುವೆ ಆತನ ಧ್ಯಾನಾ

ಸತ್ ಚಿತ್ತಾನಂದ ಅವನೆ ಹಾನಾ ||3||

ಮಂಗಲಾತ್ಮ ಮನಸಿನ ಮಹಾದೇವ |

ಕರಸಿದ್ಧೀಶನು ತಾ ಪರಶಿವನ

ಮರಿಯದೆ ಮಾಡಮ್ಮ ಆತನ ಸೇವಾ

ಕರುಣದಿಂದ ಕಾಯ್ದನು ದೇವ ||4||

ಎಷ್ಟು ಗುಣಿಸಿದರೆ ಏನಿಲ್ಲಾ |

ದೈವದ ಭೋಗಿದು ಬಿಡಲಿಲ್ಲಾ

ಯಾರಿಗ ಆದರಿದು ತಪ್ಪಿಲ್ಲಾ

ಗುರುವಿನ ಉಪಕಾರ ನೆಪ್ಪಿಲ್ಲಾ ||ಪಲ್ಲ||

ಖಟಿ ಪಿಟಿ ಸಂಸಾರ ಘಟ್ಟಿಲ್ಲಾ |

ಮಹಾ ಗುರುವಿನ ಮರೆತು ಕೆಟ್ಟಿಲ್ಲಾ

ಹೆಂಡರು ಮಕ್ಕಳು ಯಾರು ಇಲ್ಲಾ

ಕಂಡು ಕಂಡು ಸಾಕು ಸಾಕಾಯಿತಲ್ಲಾ ||1||

ನಾನಾರೆಂಬುದು ಅರಿಲಿಲ್ಲಾ |

ಮೋಹದ ಮನವು ಮುರಿಲಿಲ್ಲಾ

ಹಿಂದಿನ ಆಸಿ ಬಿಡಲಿಲ್ಲಾ

ಶಿವ ಶಿವ ಅಂದರೇನು ಫಲವಿಲ್ಲಾ ||2||

ಹಾದಿ ಬಿಟ್ಟು ಹಾದಿ ಬಿತ್ತಲ್ಲಾ |

ಅಜ್ಞಾನ ಮಾನವಗ ಗೊತ್ತಿಲ್ಲಾ

ಹೋದೆನಂದರೆ ಮತ್ತು ಹೊತ್ತಿಲ್ಲಾ

ಕಣ್ಣಮಸ್ಕ ಕತ್ತಲಯಿತಲ್ಲಾ ||3||

ಹುಟ್ಟಿದ ಮಕ್ಕಳು ನಿನಗಿಲ್ಲಾ |

ಕಟ್ಟಿದ ಮನೆಯು ಖರೆ ಇಲ್ಲಾ

ಬಿಟ್ಟು ಹೋಯಿತು ಈ ಭವಯಲ್ಲಾ

ಎಷ್ಟು ಹೇಳಿದರೆ ಅರಿವು ಇಲ್ಲಾ ||4||

ಈಚಲ ಗಿಡದಂತೆ ಇದು ಎಲ್ಲಾ |

ನಾಚಿಕಿ ಶರ್ಮ ಇವರಿಗಿಲ್ಲಾ

ಮಾನ ವiರ್ಯಾದೆ ಬೇಡುವರಲ್ಲಾ

ಮನೆತನ ಹೋದರೆ ಪರವಿಲ್ಲಾ ||5||

ಭವಿಯು ಹೋಗಿ ಭಕ್ತರಾದರಲ್ಲಾ |

ಗುಪ್ತಾದಿ ಗುರುವಿನ ಪಡಿಲಿಲ್ಲಾ

ಮುಕ್ತಿ ಮಂತ್ರದ ಅರುವಿಲ್ಲಾ

ಈ ಜನ್ಮಕ ಅವರಿಗೆ ಗುರುವಿಲ್ಲಾ ||6||

ಹಣವು ಕೊಟ್ಟು ಗುಣವು ಪಡಿಲಿಲ್ಲಾ |

ಹೆಣದಂತೆ ಬಾಯಿ ತೆರಿವರಲ್ಲಾ

ನೊಣದ ಪಾವಿಸ ಅದು ನಿಮದಲ್ಲಾ

ಗುರು ಕರಸಿದ್ಧೇಶನ ಮಗ ಬಲ್ಲಾ ||7||

ಹಾದಿ ಉಡಗಿ ಹಸನ ಮಾಡಿದೆನೊ |

ಮನ ಮೋಹನಾಂಗಾ

ಸಾಧು ಸಂತರಿಗೆ ಎಡೆಯ ಮಾಡಿದೆನೊ

ಗುರು ಪ್ರಭುಲಿಂಗ ||ಪಲ್ಲ||

ಮಾರ್ಗದೊಳಗ ಬಿತ್ತಿ ಬೆಳೆದು |

ಮುತ್ತು ರಾಶಿ ಮಾಡಿ ಅಳೆದು

ಮತ್ತೆ ಮಾನ ತುಂಬಿ ನಾನು

ಕತ್ತೆಯಂತೆ ದುಡಿದು ದುಡಿದು ||1||

ಸಾನುರಾಗದ ರಚನೆಗಳನ್ನು |

ಜ್ಞಾನ ಬೋಧ ಮಾಡುತಿರ್ಪ

ಮಾನಹೀನರ ಸಂಗದಲ್ಲಿ ಬೀಳದೆ

ಅರವಿನೊಳು ಮನೆಯ ಮಾಡಿದೆನೊ ||2||

ಬಿರುದು ಪ್ರಾಣ ಜಗದಿ ಜಂಗಮ |

ಕರಸಿದ್ಧೇಶಾನೊ ಹರುಷಾದಿ

ಚರಣವು ಪಿಡಿದು ಮುಕ್ತನಾದನೊ

ಗುರು ಲಿಂಗ ಗುಪ್ತ ಸ್ಥಾನದ ಲಿಂಗ ಕಂಡೆನೊ ||3||

ತಂದಿ ಚಿಂತೆ ಮಗನಿಗೆ |

ಮಗನ ಚಿಂತೆ ತಂದಿಗೆ ||ಪಲ್ಲ||

ನನ್ನ ಚಿಂತೆ ನಿನಗೆ |

ನಿನ್ನ ಚಿಂತೆ ಎನಗೆ

ಎರಡು ಚಿಂತೆ ಒಂದಾದ ಮೇಲೆ

ಸಲುವಲೇನ ಮಂದಿಗೆ ||1||

ಸತಿಯ ಚಿಂತೆ ಪತಿಯನಿಗೆ |

ಪತಿಯ ಚಿಂತೆ ಸತಿಯಳಿಗೆ

ತಾಳಿ ಕಟ್ಟಿದಂಥ ಗುರುವಿನ

ಚಿಂತೆ ಶಿಷ್ಯನಾದ ಶಿವನಿಗೆ ||2||

ಶಿಸುವಿನ ಚಿಂತೆ ತಾಯಿಗೆ |

ಹಸುವಿನ ಚಿಂತೆ ಬಾಲನಿಗೆ

ಬಸವನ ಚಿಂತೆ ಭಕ್ತನಿಗೆ

ಬಹು ಚಿಂತೆ ಗುರುವಿಗೆ ||3||

ಆಳಿನ ಚಿಂತೆ ಅರಸನಿಗೆ |

ಪ್ರಜೆಯ ಚಿಂತೆ ಪ್ರಭುವಿಗೆ

ಓಂ ಸೋಹಂ ನುಡಿಯುವ ನಾವi

ಕಾಮ ರಹಿತ ದೇವಗೆ ||4||

ಜಾತಿ ಚಿಂತೆ ಜ್ಯಾಣಿಗೆ |

ಕೋತಿ ಚಿಂತೆ ಕೊರೆಯನಿಗೆ

ಮಾತಿನ ಚಿಂತೆ ಜ್ಞಾನಿಗೆ

ಮತ್ತೊಂದು ಚಿಂತೆ ಮನೆಯೊಳಗೆ ||5||

ಸಾಧು ಚಿಂತೆ ಸಾಂಬನಿಗೆ |

ಮಡದಿಯ ಚಿಂತೆ ಮಡಿವಾಳಗೆ

ಒಳಗ ಹೊರಗ ಒಂದನಾದ

ಕರಸಿದ್ಧೇಶಾ ಪರಮೇಶನಿಗೆ ||6||

ಕತ್ತಲಳಿಸಿ ಬೆಳಗು ತೋರಿದನೊ |

ನಮ್ಮ ಗುರುದೇವಾ

ಮಾಯ ಮೋಹ ಮೃಗವು ಕೊಂದಿದನೋ ||ಪಲ್ಲ||

ಭುವನದೊಳು ಚರಿಶಾಡುತಿರ್ಪ ಚಂದ್ರೋದಯ |

ಚಿನ್ಮಯ ತಾನೆ ಮುನ್ನ ಕೈವಲ್ಯವು ಶಿವ ಮಂತ್ರ ಜಪಿಸಿದನು ||1||

ಭುವನವೇ ಕೈಲಾಸವೆನಿಸಿದೊ ಬಸವೇಶ ತಾನು

ಭಸ್ಮದೂಳಿಪ ತಾನೆ ಆಗಿದನೊ ||2||

ಭವಕೆ ಭಕ್ತನು ಮುಕ್ತಿ ಪಡದಿದನೊ ಮುಕಣ್ಣ ಶಿವನು ||3||

ಚಿಂತೆ ಪರಿಹಾರ ಪರದಿ ಮಾಡಿದನೊ ಪರಮಾತ್ಮ ತಾನು

ಪರಕೆ ಪರಹರ ಬ್ರಹ್ಮ ಅನಿಸಿದನೆ ||4||

ಕಾಕು ಗುಣದ ಕಾಗಿ ಹಿಂಡು ಖಳ್ಯಾಯೆಂದು ಕೂಗಿದಾನೊ |

ಜೊಳ್ಳು ಜಟ್ಟಿ ಗೊಳ್ಳು ಸೊಳ್ಳು ತಾನೆ ಉಸುರಿದನೊ ||5||

ಸುಂಕವಿಲ್ಲದಂತ ಧ್ಯಾನ ಅಂಕೂರ ಮಾಡಿದನೊ

ಅಕ್ಕಿಯೊಳಗೆ ಭತ್ತ ಮುತ್ತು ಬೀಜ ಹಿಡದಿದನೊ ||6||

ಅಭಯ ಹಸ್ತ ಮಸ್ತಕದ ಮೇಲೆ ಕರವನಿಟ್ಟಿದನೋ

ಕರುಣಾಮೃತ ಬೆರಸಿ ಕರಸಿದ್ಧೇಶಾ ಕಡಿಯ ಅನಿಸಿದನೋ ||7||

ಮುತ್ತು ಬಂದಾವ ಕೊಳ್ಳರೊ |

ಮುತ್ತುಗಾರನಲ್ಲಿ

ಮುತ್ತು ಬಂದಾವ ಕೊಳ್ಳರೊ ||ಪಲ್ಲ||

ಮುತ್ತೈದಿ ಮಕ್ಕಳು ಆಡುವ ಮುತ್ತು

ಮೂಗಿನ ಮೇಲೆ ಮೂಗುತಿ ಮುತ್ತು

ಮುರಹರಿ ಮೂಡಲ ಬೆಳಗಿನ ಮುತ್ತು ||1||

ಹರದೇವರು ಐವರು ಧರಿಸುವ ಮುತ್ತು

ವಾಲಿಝಮಕಿಯ ವನಪಿನ ಮತ್ತು

ಥಳಥಳಿಸುವ ಹರಳದ ಪರಂಜ್ಯೋತಿ ಮುತ್ತು ||2||

ಏಳು ಸಮುದ್ರದಲಿ ಜನಿಸಿದ ಮುತ್ತು

ಸಪ್ತ ವ್ಯಸನಗಳ ಕಳೆದಿರುವ ಮುತ್ತು

ಜಲದಲಿ ಜನಸಿದ ಜನಕರಾಯನು ಕಂಡ ಮುತ್ತು ||3||

ಅಂತರ ರೂಪದ ಆಕಾಶದ ಮುತ್ತು

ಅಕಾರ ಉಕಾರ ಮಕಾರದ ಮುತ್ತು

ಶಿಖರದ ಮೇಲ ಶಿವಪೂಜೆಗೈವ ಶಿವನ ಮುತ್ತು ||4||

ಸತ್ ಚಿತ್ತಾನಂದ ಚಿದ್ಭಸ್ಮವೆ ಮುತ್ತು

ಆದಿಶೇಷನ ಅವತಾರದ ಮುತ್ತು

ಸಾಧು ಶರಣರ ಬೋಧವೆ ಮುತ್ತು ||5||

ರಾಜ ರಾಜರೊಳು ನಾಮದ ಮುತ್ತು

ರಾಜ ಪೂಜಿಪ ಸಿದ್ಧಲಿಂಗನೆ ಮುತ್ತು

ಓಂ ಸ್ಹೋಂ ಕರಸಿದ್ಧನೇ ಮುತ್ತು ||6||

ನಿದ್ರಿ ಬಾರದು ಕಣ್ಣಿಗೆ |

ಗುರುನಾಥನು ಎದ್ದು ಬಾರನು ಮನಿಗೆ ||ಪಲ್ಲ||

ಹಲವು ಹಂಬಲದಾ ಎಡಿಮಾಡಿ |

ಹರುಷದಿಂದೆ ನೀಡುವೆನು

ಪರುಷ ಪತಿದೇವನು ತಾನು

ಎಚ್ಚರರಿತು ಮಲಗಿದಾನು ||1||

ಸಂಚಿತ ಪುಣ್ಯವೆಂಬೊ |

ಮಂಚ ಗಾದಿಯ ಹಾಸಿ

ಕಂಚಿ ಕಳಸವ ಪಿಡಿದು

ಕರ ಮುಟ್ಟಿ ಕರೆದು ತರಲೆ ||2||

ಕಾಲ ಜಾರತಾರವೆ ಹೊಟ್ಟೆ |

ಬಾಲರಂತೆ ಮಲಗಿದಾರೆ

ಮೇಲು ಮಲಗಿಸಿ ನಾನು

ಲೋಕದೊಳು ಆದೆನೆಂದರೆ ||3||

ಹಂಬಲ ಹರಿಸುತಾದ |

ಹಿಂಬಲ ಬರುತಾದ

ಸಾಂಬ ಕರಸಿದ್ಧನ ಪಾದಾ ರಂಭಿ

ಮನಸಾದಿ ಉಳಿಯುತಾದಾ ||4||

ತನ್ನ ಸುಖಕ್ಕಾಗಿ ತಾನೆ ತಿರುಗುವುದು

ಈ ಜಗವೆಲ್ಲಾ ದೇವಾ ಈ ಜಗವೆಲ್ಲಾ ||ಪಲ್ಲ||

ತನ್ನಂತೆ ಪರರಾತ್ಮ ತಿಳಿಯಲಿಲ್ಲಾ |

ಸ್ಥಿರವಾದ ಪದವಿಯು ಪಡಿಯಲಿಲ್ಲಾ

ಪಾಪಿ ಜನ್ಮ ಹುಟ್ಟಿ ಫಲವೇನಿಲ್ಲಾ ||1||

ಗುರುವೇ ಗುರುವೆಯೆಂದು ಕೂಗುವರೆಲ್ಲಾ |

ಗುರು ನಾಮ ಇವರಿಗೆ ಗುರುತೇ ಇಲ್ಲಾ

ಮರವಿನೊಳಗ ಮುಳಗಿ ಹೋಗುವರೆಲ್ಲಾ ||2||

ಗುರುವಿನ ಹೊರ್ತು ಇನ್ಯಾರೂ ಇಲ್ಲಾ

ಅರಿವು ತೋರಿದಾ ತಾನೇ ಅಲ್ಲಾ

ಗುರುವು ರೇವಣಸಿದ್ಧ ತಾನೇ ಬಲ್ಲಾ

ತಂದರ ಬಂದರ ಬಾ ಅಂತಿ |

ತರವಲ್ಲದ ಹೋದರ ಏನಂತಿ

ಹೆಂತಕ್ಕಿ ದೊರತಾಳ ನನ್ನ ಹೆಣತಿ

ಮಾಯದಕ್ಕಿ ಮಾಯಿ ಗುಣವಂತಿ ||ಪಲ್ಲ||

ನುಡಿದಂತೆ ನಡಿಯಂತಿ |

ಹಗಲಿರುಳು ಎನಗ ದುಡಿಯಂತಿ

ಪಟೋಳಿ ಸೀರಿ ಉಟ್ಟೇನಂತಿ

ಚಂದ್ರಕಾಳಿ ಕುಪ್ಪಸ ತಾ ಅಂತಿ

ಒಡವಿ ವಸ್ತ್ರ ಬೇಡಿ ಅತ್ತು ಬಿಡತಿ

ಏನೀಲ್ದ ಹೋದರ ಹ್ಯಾಂಗ ಮಾಡ್ತಿ ||1||

ಅಳಗ ಬಳಗದೊಳು ಸೇಲಂತಿ |

ಗುರುಹಿರಿಯರಕಿನ್ನ ಮೇಲಂತಿ

ಸಂತಿ ಸೂಳೆರ ಕಂಡು ಮಾಡ್ತಿ ಚಿಂತಿ

ಒಟ್ಟು ತಾಳಿಗಾಸಿ ನೀ ಬೇಡ್ತಿ ||2||

ಮುತ್ತಿನ ಮೂಗುತಿ ಇಟ್ಟೆನಂತಿ |

ಅತ್ತಿಮಾವನ ಸೇವಾ ಆಗಲಂತಿ

ತಾನೆ ತೊತ್ತಾಗಿ ತೊತ್ತ ಬೇಡ್ತಿ

ನಿತ್ಯಮಂಗಳವಾರ ವಂದತ್ತ ಮಾಡ್ತಿ

ಅಣ್ಣ ತಮ್ಮದೇರ ಮ್ಯಾಲ ಪದಾ ಹಾಡ್ತಿ

ಸಣ್ಣಕ್ಕಿ ಶಾಂವ್ಗಿಬೋನ ತುಪ್ಪ ನೀಡೇನಂತಿ ||3||

ಗಂಡನ ಬಳಗಕ ಬೈಲಂತಿ |

ಅತಗಿ ನಾದನಿದೆರಿಗಿ ಸೇರದ್ಹೋಹೋಗತಿ

ಕರಕರ ಹಲ್ಲು ತಿಂದು ಸಣ್ಣಾಗತಿ

ಇವರು ಮಣ್ಣಪಾಲ ಆಗಲೆಂದು ನೀ ಬೇಡ್ತಿ ||4||

ಹುಟ್ಟಿದ ಸ್ಥಲವನ್ನು ನೀ ಬಿಟ್ಟು ಬರತಿ |

ನಿನಗ ಕರಸಿದ್ಧ ಕೇಳಿದರ ಏನಂತಿ

ಜಡಿಯ ಝಲಿಸಿದಾಗ ಝಲ್ಲಂತಿ

ಹಿಂತಾ ಗಂಡನ ನೀ ವಲ್ಲಂತಿ ||5||

ಸಂತಿಯೊಳಗಿನ ಲಿಂಗ ಸಾವಿರಿದ್ದರೇನೊ |

ಮಾತಿಗಿಲ್ಲದ ವಸ್ತು ಮನೆಯಲ್ಲಿದ್ದರೇನೊ ||ಪಲ್ಲ||

ನಡಿ ನುಡಿಯೊಳಗಿಲ್ಲದ ಮಗನಿದ್ದರೇನೊ

ದುಡಿಯಲಾರದ ಆಳು ಎದುರಿದ್ದರೇನೊ ||1||

ಗುಣಕನಿಲ್ಲದ ಸತಿಯ ಎಲ್ಲಿದ್ದರೇನೊ |

ನಡೆಯಲಾರದ ಹಾದಿ ಕಾಲೊಳಿದ್ದರೇನೊ ||2||

ಬಳಸಿ ಉಣ್ಣಲಾರದ ಭತ್ತಾ ಭಾಳಿದ್ದರೇನೋ |

ಭಾವನೆ ಇಲ್ಲದ ಅಂಥ ಭಕ್ತನಿದ್ದರೇನೊ ||3||

ನಾಸಿ ಕಾಗ್ರವ ಬಿಟ್ಟು ಶ್ವಾಸವಿರುವದೇನೊ |

ನಯನವ ಕಾಣುವಲ್ಲದ ರೂಪವಿರುವುದೇನೊ ||4||

ಕರ್ಣವು ಕೇಳುವಲ್ಲದ ಸ್ಮರಣವಾಗುವದೇನೊ |

ಕರಸಿದ್ಧ ಮೂಡುವಲ್ಲದೆ ಕಿರಣಾಗುವದೇನೊ ||5||

ಪರರ ಅನ್ನವ ತಿಂದು ಪಾತಕದೊಳೆಗಾದೆ |

ಪಾಪಿ ಜನ್ಮವು ಹುಟ್ಟಿ ಫಲವಿಲ್ಲ ಪ್ರಾಣಿ ||ಪಲ್ಲ||

ವಿಪರೀತ ಕಾಲಕ್ಕೆ ಅಪರಾಧಿ ಬುದ್ಧಿಗಳು |

ಅಪರಾಧಿ ನಾನಯ್ಯೋ ರಕ್ಷಿಸೋ ||1||

ಯಾರಿಗಿ ಯಾರಿಲ್ಲಾ ಎರವಾಗೊ ಸಂಸಾರ |

ದಾರಿ ತಪ್ಪಿಸಿಕೊಂಡು ಉಳದಿದ್ದೆ ಗುರುವೇ

ಧೀರ ನಿಮ್ಮಯ ಚರಣ ಸೇರಿಸೊ ಧಡಿಗೊಯ್ದು

ದಾರಿ ಕಾಣದಂತಾ ಪರದೇಶಿ ನಾ ಗುರುವೆ ||2||

ಕುರುಡರ ಕೈಯೊಳಗೆ ಕಟ್ಟಿಗೆಯು ಪಿಡಿದಂತೆ |

ಅಂಧಕನ ಕರದೊಳಗೆ ಕಾಷ್ಠವು ಪಿಡಿದಂತೆ

ಘಟಿತ ಗುರು ನಾಮದೊಳು ಇರಿಸಯ್ಯೋ ಗುರುವೇ |

ಬೈಲಿಗೆ ಬೈಲಾಗಿ ಬ್ರಹ್ಮಾಂಡ ಜರದಿತ್ತು

ಬಲವಂತ ಕರಸಿದ್ಧನ ಬದಿಲುಳಿದೆ ಗುರುವೆ ||3||

ಮಾತಾಡಬಾರದೇನೊ ಮಲ್ಲಿನಾಥಾ |

ಮಾತಾಡಬಾರದೇನೊ ಮಾತಾಡಬಾರದೆ

ಯಾತಕ ಮಲಗಿದ್ದಿ ಸೋತು ಬಂದು

ನಿಮ್ಮ ಚರಣದೊಳು ಉಳದಿದ್ದೇನೊ ||ಪಲ್ಲ||

ನನ್ನನ್ನು ಕೇಳವರು ಯಾರಿಲ್ಲಾ |

ಮಲ್ಲಿನಾಥಾ ನನಗ್ಯಾರು ದಿಕ್ಕಿಲ್ಲಾ

ನಿನ್ನಂಥಾ ಪುರುಷಾನೇ ಜಗದೊಳು ದೊರೆಲಿಲ್ಲಾ ||1||

ಯಾರಿಗೆ ಯಾರಿಲ್ಲಾ |

ಮಲ್ಲಿನಾಥಾ ದೂರಕ ದೂರಿಲ್ಲಾ

ನಾರಿ ಎನ್ನವಳೆಂದು ಮಾರಿ ತೆರೆದು ನೋಡಿ ||2||

ಅಡ್ಡ ಗುಡ್ಡದಿ ನಡುವೆ ಮಲ್ಲಿನಾಥಾ |

ಒಡ್ಡಿ ಸೆರಗು ಹಾಸಿದ್ದೆ

ಮಂಡಿಗೂದಲ ಬಿಟ್ಟ ಕಂಡೇ ನೀ ಜಗದೊಳು ||3||

ಹಲವು ಹಂಬಲ ಮಾಡಿದೆ |

ಮಲ್ಲಿನಾಥಾ ಹಾಲು ಸಕ್ಕರಿ ತಂದೀನಿ

ಕಾಲನ್ನೇ ಬೀಳುವೆ ಹಿಡಿದು ನೋಡಯ್ಯಾ ||4||

ಸಕಲ ವ್ಯಾಪ್ತಿಯು ನೀನು ಮಲ್ಲಿನಾಥಾ

ಸಾಂಬ ಕರಸಿದ್ಧನೇ ದೇವ ನೀನು ಕರುಣಾದಿ

ಕಾಯೋ ಎನ್ನ ಮರಿಯಲಾರೆನಯ್ಯೊ ನಿಮ್ಮ ||5||

ಬಹು ಪಾಶಾದೊಳು ಸಿಲುಕಿ ಬಡದಾಡಿ |

ಸಾಯುವಂತ ನಾಯಿ ಕಂಡಿರೇನಣ್ಣಾ

ನೀವು ನಾಯಿ ಕಂಡಿರೇನಣ್ಣಾ

ನ್ಯಾಯ ಅನ್ಯಾಯದ ಖೂನವು ತಿಳಿಯದೆ

ಜ್ಞಾನಿಲ್ಲದೆ ಬೊಗಳುವದಣ್ಣಾ ||ಪಲ್ಲ||

ಮೂಲಮಂತ್ರವು ತಿಳಿಯದೆ ಭವಹರನ |

ನೆನಿಯದ ನಾಯಿನ ಕಂಡೆರೇನಣ್ಣಾ

ನಾಡಿನೊಳಗೆ ಹುಟ್ಟಿ ನರಜನ್ಮದೊಳು

ಬಂದು ನಾಛೇರಿ ಮಾಡುವದಣ್ಣಾ

ಇಂಥಾ ನಾಯಿನ ಕಂಡೀರೇನಣ್ಣಾ ||1||

ಮೂ ಜಗದೊಳು ಹುಟ್ಟಿ ಸೂಜಿಗ

ಕಂಡಿದ್ದೆ ತಾಜುಬ ಆಯಿತ್ತೇನಣ್ಣಾ |

ಬೀಜನ್ನು ಕಾಣದೆ ಬೆಳಿಯನ್ನು ಮಾಡಿಟ್ಟು

ಬೋಗಳಿದರೇನಾಗುವದಣ್ಣಾ

ಇಂಥಾ ನಾಯಿನ ಕಂಡೀರೇನಣ್ಣಾ ||2||

ಸ್ವರ್ಗದಿಂದೇ ಬಂದು ಶಿವ ಶಿವ |

ತಾ ಎಂದು ಶೀಲದೊಳಗಿರುವುವದಣ್ಣಾ

ಶ್ರೀಗುರು ಕರಸಿದ್ಧನ ದೇವಾಲಯ ಮರೆತು

ದೇವನ ಕಂಡಿರೆನಣ್ಣಾ ಇಂಥಾ ನಾಯಿನ ||3||

ಶಿವ ಬಂದಾನೇಳೆ ಶೀಲವಂತಿ ಮಗಳೆ |

ಶಿವನು ಬಂದಾರ ಬರಲಿ ಸೀತಾಳ ತಂದಾರ ತರಲಿ

ವ್ಯಾತಾಳ ಭೂತಾಳದೊಳಗಿರುವ ||ಪಲ್ಲ||

ಮೋಡ ಕತ್ತಲಿ ಮುಸಕಿತ್ತು ಈ ಜಗವೆಲ್ಲಾ |

ಚಂದ್ರ ಉದಯವಾಗುವಂಥಾ ಚನ್ನ ಬಂದಾನೇಳೆ ||1||

ಹಿಂದಿನ ಜನ್ಮದಿ ತಂದಿ ನಂದಿಯನೇರಿ

ಕಿರಿ ಜಂಗು ಸರಪಳಿ ಕಿನ್ನುರಿಯ ನಾದವ ಕೇಳಿ ||2||

ಪಾದವ ತೊಳಿದು ನೀ ಪಾವನ ಆಗಮ್ಮಾ |

ಪರಮಾತ್ಮ ಕರಸಿದ್ಧ ಪರದಲ್ಲಿ ಇರುಹುವನಮ್ಮಾ ||3||

ಅನ್ಯರ ಆಶಿ ಇಲ್ಲಾ ಇನ್ನೊಬ್ಬರು ಯಾರು ಇಲ್ಲಾ |

ಚನ್ನ ಶ್ರೀ ಗುರು ಸಂಗಮನಾಥಾ ತಾನೇ ಬಲ್ಲಾ ||4||

ಕಂಚಿನ ಗುಡಗುಡಿ ಮಿಂಚಿನಂತೆ ಹೊಳಿಯುತಾದ |

ಸಾಧು ಜಂಗಮ ಬಂದಾನ ನೋಡಮ್ಮಾ

ತಂಗಿ ಸಾಧು ಜಂಗಮ ಬಂದಾನ ನೋಡಮ್ಮಾ ತಂಗಿ

ಭಾವ ಎಂಬುವ ಭಿಕ್ಷೆಯು ನೀಡಮ್ಮಾ ||ಪಲ್ಲ||

ಕಾಲ-ಮೂಲದ ಸುದ್ದಿ ಕರುಣಾ ಮೂರುತಿ |

ಕಣ್ಣು ತೆರೆದು ನೀ ನೋಡಮ್ಮಾ ತಂಗಿ

ಭಾವ ಎಂಬೊ ಭಿಕ್ಷೆಯ ನೀಡಮ್ಮಾ ||1||

ಕಲ್ಯಾಣ ಪುರದೊಳು ಅಲಂಪ್ರಭು |

ತಾನು ನಿಲ್ಲದೆ ಪವಾಡಗೈದಾರಮ್ಮಾ

ತಂಗಿ ಭಾವ ಎಂಬೊ ಭಿಕ್ಷೆಯ ನೀಡಮ್ಮಾ ||2||

ಬಸವ ಬಂಡಿಯನೇರಿ ಸಂಗಯ್ಯ ಮದಿಮಗ |

ಸಾಕ್ಷಾತ ಶಿವರೂಪ ನೋಡಮ್ಮಾ ತಂಗಿ

ಭಾವ ಎಂಬೊ ಭಿಕ್ಷೆಯು ನೀಡಮ್ಮಾ ||3||

ಏಳು ಸುತ್ತಿನ ಕ್ವಾಟಿ ಒಂಬತ್ತು ಬಾಗಿಲದೊಳು |

ಸಾಂಬನ ಬೆಳಕು ನಿನಗಮ್ಮಾ ತಂಗಿ

ಭಾವ ಎಂಬೊ ಭಿಕ್ಷೆಯು ನೀಡಮ್ಮಾ ||4||

ಉಂಡು ಉಣಿಸುವುದು ಕೊಟ್ಟಿದ್ದೆ ಕೊಡುವದು |

ಗುರುವಿನ ನೀನು ನೆನಿಯಮ್ಮಾ ತಂಗಿ

ಭಾವ ಎಂಬೊ ಭಿಕ್ಷೆಯು ನೀಡಮ್ಮಾ ||5||

ಸಂತಿಯೊಳಗಿನ ಲಿಂಗ ಸಂತರ ಸಭಿಯೊಳು ಲಿಂಗ

ಕಾಂತ ಕರಸಿದ್ಧೇಶಾನೇ ಲಿಂಗ

ತಂಗಿ ಭಾವ ಎಂಬೊ ಭಿಕ್ಷೆಯು ನೀಡಮ್ಮಾ ||6||

ವಾಹವ್ವಾರೇ ಪಂಚಮ ಶನಿಯೇ |

ವೈರಿಯಾಗಿ ನೀ ಬಂದೆಲ್ಲಾ

ಪಂಚಪಾಂಡವರು ಎಲ್ಲಾ

ಹಂಚಿನೊಳಗೆ ಉಣಸಿದೆಯಲ್ಲಾ ||ಪಲ್ಲ||

ಹರಹರಾ ಹರಿಶ್ಚಂದ್ರಗ

ಕಂಬಳಿಕನಾಳ ಮಾಡಿದಿಯಲ್ಲಾ |

ಪುರಂದರ ದಾಸನ ಭಕ್ತಿಗೆ ಬಂದು

ಬ್ರಾಹ್ಮಣಾಗಿ ಭಿಕ್ಷಾ ಬೇಡಿದಿಯಲ್ಲಾ ||1||

ಅತ್ರಿ ಋಷಿ ಅನುಲಾ ಅನಸೂಯಾ |

ಭಕ್ತನಾಗಿ ನೀ ಬಂದೆಲ್ಲಾ ಲೋಕನಾಯಕ

ಕರಸಿದ್ಧೇಶನ ನೆನವಿಯೊಳಿದ್ದರೇನೂ ಕಡಿಮಿಲ್ಲಾ || ||2||

ನಿಲಕಿಸಿಕೊಳ್ಳು ಮ್ಯಾಲ ಅದ ಹಣ್ಣಾ |

ಅದಕ ಅವ ಸಾವಿರ ಕಣ್ಣಾ

ತಿಂದರ ಬಾಯಿಯೊಳು ಅದ ಬಣ್ಣಾ ||ಪಲ್ಲ||

ಪಂಚ್ಯಾಮೃತವ ತುಂಬ್ಯಾದಾ |

ನಂಬಿದವರಿಗದೂ ನಂಬ್ಯಾದಾ

ಬಣ್ಣ ಸೂತ್ರದ ಗೊಂಬ್ಯಾದಾ

ತಲಿ ಮ್ಯಾಲ ಹಾಂವಿನ ಸಿಂಬ್ಯಾದ ||1||

ಕನಸು ಮನಸಿನೊಳು ಬೆರತಾದಾ |

ನೆನಸಿದಲ್ಲಿ ಬಂದು ಇರುತಾದಾ

ತನ್ನೊಳು ತಾನೇ ಅರತಾದಾ

ಗುರು ಪುತ್ರರಿಗಿ ಮಾತು ಗುರುತಾದಾ ||2||

ಆದಿಯಲ್ಲಿ ಹಚ್ಚಿದಾಳೊ |

ಬಿಟ್ಟೆನಂದರ ಇಲ್ಲೊ ಸೋಯಿ

ತಿಂದೆನಂದರ ಅದಕ ಘಾಯಿ

ಮೊದಲಿನಕ್ಕಿ ಮಹಾಮಾಯಿ ||3||

ಇಚ್ಚಿಸಿದಲ್ಲಿ ಇದ್ದ ಆತ |

ಶ್ರೀಗುರು ಕರಸಿದ್ಧನೇ ದಾತಾ

ಕೀರ್ತಿ ಜಗದೊಳು ಪ್ರಖ್ಯಾತ

ಶ್ರೀಗುರು ಶಂಕರ ಗುರು ನಾಥಾ ||4||

ಏಸ ಊರ ತಿರುತಿರುಗಿ ನಾನು ಬಂದಾ |

ಹರಸೂರ ಅದ ಚಂದಾ

ತಾಸಿನೊಳಗ ಸಂತಿ ಆಯಿತು ಅಂದಾ ಧುಂದಾ

ಗುರುರಾಯನ ಮುಂದಾ ||ಪಲ್ಲ||

ಬ್ರಹ್ಮ ಬರೆದಿದು ಭವದ ಆಶಿಯು ಅಳಿದಾ |

ಗುರು ಮಂತ್ರವು ತಿಳಿದಾ

ಅಂಗ ಲಿಂಗದ ಸಮರಸದಲಿ ಉಳಿದಾ

ಗುರುಮಂತ್ರವು ಹೇಳಿದಾ ||1||

ಪ್ಯಾಟಿಯೊಳಗ ಒಬ್ಬ ಘಾಟಿನವ ಬಂದಾ |

ಅಗಸಾಲ್ಯಾಹಾನ ಚಂದಾ

ಮೂಗಿನೊಳಗ ಅಂವ ಮೂಗ ಬಟ್ಟ ತಂದಾ

ಸಾಗಿ ಬಂದಾ ಇಂತಾನಂದ ||2||

ಕಲ್ಲು ಮಠದ ಕರಸಿದ್ಧನ ಕಾಲ ಹಿಡಿದಾ |

ಕರುಣಾಮೃತ ಕುಡಿದಾ

ಗಂಡನಿಲ್ಲದೆ ಗರ್ಭಿಣಿಯಾಗಿ ಹಡಿದಾ

ಮಗನೆತ್ತಿ ಅಂವ ಪಡಿದಾ ||3||

ರಂಗ ಮಂಟಪದಲಿ ಜಂಗಮಯ್ಯ ಹಾನಾ |

ಎನಗಿದ್ದಿದಿಲ್ಲ ಖೂನಾ

ಅವನಿಂದೆ ಅದ ನನಗ ಇಷ್ಟು ಮಾನಾ

ಮುತ್ತೈದಿ ತಾನಾ || ||ಪಲ್ಲ||

ಸತಿಪತಿ ಇದ್ದರೂ ಸಾರ್ಥಕಾಗಲಿಲ್ಲಾ |

ವ್ಯರ್ಥ ಕೆಟ್ಟೆವಲ್ಲಾ

ನಾ ಮಾಡಿದ ಕೃತಿಯು ಬರೆದು ಇಟ್ಟೆನಲ್ಲಾ

ಒಪ್ಪಕೊರೊ ಮುಲ ||1||

ಆರು ಮಂದಿನ ಬಿಟ್ಟು |

ದೂರ ಹೋಗಿ ಕಾಲ ಹಿಡಿದಾ ಗುಡ್ಡದೊಳಗ

ಹೋಗಿ ಉಳಿದಾ ಕಾಂತಿ ಎನ್ನವಳೆಂದು

ಕರವು ಅವನು ಪಿಡಿದಾ ಸ್ಥಿರವಾಗಲೆಂದು ನುಡಿದಾ ||2||

ಶಿಖರ ಏರಿ ಕುಂತು |

ಶಿವ ಪೂಜೆ ಮಾಡುತಾನಾ

ಕರಸಿದ್ಧನ ತಾನಾ ಅಂಗ ಹರಿದು

ನಾ ಸಂಗ ಮಾಡಿದೆ ಅಂತರಂಗದಿ ನಾನಾ ||3||

ಹಗಲು ಇರುಳ ಹೋಗಿ ದುಡಿಯೊ |

ಮೊದಲ ಅಣ್ಣ ತಮ್ಮರ ರಿಣವನ್ನು ಕಡಿಯೋ

ಗುರುವಿನ ಪಾದಾ ನೀ ಹಿಡಿಯೋ

ಈ ಋಣವು ಕಡಿದು ಭವದಾಂದು ನಡಿಯೊ ||ಪಲ್ಲ||

ಋಣ ಕೊಟ್ಟ ಹಿರಿಮಗ ಬಂದಾ |

ಬರುವಾಗ ಸಂಗಟ ಮಂದೀನ ತಂದಾ

ಮಂತ್ರ ಓದಿದ ಅವರ ಮುಂದ

ಆ ಮಂತ್ರ ಕೇಳಿ ನನಗ ಬಂತಪ್ಪ ಧುಂದ ||1||

ವಂಶಿನೊಳು ಋಣ ಇಡಬೇಡಾ |

ವಂಶಪರಂಪರ ಇರುವಾದು ಪೀಡಾ

ವಿಷವು ಕುಡಿದು ಸಾಯುವದೇ ಪಾಡಾ

ಇಂಥಾ ಋಣವು ಎಂದಿಂದಿಗೆ ಬೇಡಾ ||2||

ಲೋಕದ ಹಣ ಇಲ್ಲಾ ಎನ್ನಲ್ಲಿಲ್ಲಾ ಒಂದೊಂದು

ಮಾತಾಡಿದ ಶಿವ ತಾ ಬಲ್ಲಾ ಅಂತರಂಗದ ಸಿದ್ದಿ

ಗುರುರಾಯನೆ ಬಲ್ಲಾ ಋಣವ ಕಡಿವಂಥ

ಗುರು ಕರಸಿದ್ದಾನೇ ಬಲ್ಲಾ ||3||

ಏನು ಹೇಳಲಿ ದೇವಾ ಮಾನವ ಜನ್ಮಕೆ ಬಂದು |

ಮರೆತು ನಾ ಕುಂತಿದ್ದೆನೊ

ಹೊಲಸು ಮಾಂಸಕ್ಕಾಗಿ

ಹೊಲಸ ಮೋಹದೊಳು ಬಿದ್ದು

ಹೊಲಸುತನ ಮಾಡಿದೆನೊ ||ಪಲ್ಲ||

ಈ ಲೋಕ ಎನಗ ಸಾಕೊ ಮಾರಾಯಾ |

ಬೇಕಾಗಿಲ್ಲೊ ಎನಗೆ

ಸತಿ ಪುತ್ರರಿಗಾಗಿ ಅತಿ ಮೋಹದೊಳು ಸಿಲುಕಿ

ಮತಿಗೆಟ್ಟು ತಿರಗಿದೆನೊ ||1||

ಹಗಲು ಇರುಳು ಕುದಿ ಎನಗ ಬಂದಿತೊ ಮುದಿ |

ನಾನು ಒಡೆದೆನು ಎದಿ

ಭಾನು ಪ್ರಕಾಶನೆ ಬಲು ಸೌಖ್ಯ ಮಾಡಿಟ್ಟಿ

ಭವದೊಳಗೆ ಮುಳಗಿದೆನೊ ||2||

ರುಚಿಯ ಆಶಕ ಬಿದ್ದು ರುದ್ರನ ಮರೆತು ನಾ |

ರುದ್ರಾಕ್ಷಿ ಧರಿಸಿದ್ದೆನೊ

ಭದ್ರ ಮಂಟಪದಿಂದೆ ಬಂದು

ಕರಸಿದ್ಧ ಸ್ವಾಮಿ ಭಸ್ಮವೆ ಧರಸಿದ್ದೆನೊ ||3||

ಕಾಡುವ ದೇವರು ಕಾಳಿಕಾ ಭವಾನಿ ತಾಯಿ |

ಕಡಿತಾನಾ ಇರುವಳಣ್ಣಾ ಕನಸಿನೊಳಗ ಬಂದು

ದಿನ ದಿನವು ಹೇಳಿ ಎನ್ನ

ಮನಸ್ಸು ಬ್ಯಾರೆ ಮಾಡ್ಯಾಳಣ್ಣಾ ||ಪಲ್ಲ||

ಹತ್ತೊಂಬತ್ತು ಮಕ್ಕಳು ಹಡಿದೆ |

ಎತ್ತಿ ಮಗನನ್ನ ಪಡಿಲಿಕ ಸತ್ತು ಹುಟ್ಟಿ ನಾ ಬಂದೆ

ಸಾಕ್ಷಾತ್ ಗುರುವೆ ನಿನ್ನಿಂದೆ ||1||

ಶೃಂಗಾರದ ಮಗ ಹುಟ್ಟಲಿ ಸಿಲೇಟ ಕಳುವೆನೆಂದು |

ಶಿವ ಸಾಲಿಯಲ್ಲಿ ಬೇಡಿ ಬಂದೆ

ಬಡತನಕ್ಕಾಗಿ ನಾ ಬಹು ದಿವಸ ಮರತಿದ್ದೆ

ಅರಿತು ಅರವಿನೊಳು ||2||

ಗುರುತು ತೋರಿದ ತಾಯಿ ಗುರುವಿನ ಮಗಳಿದ್ದೆ

ಮರಿಲಾರೆ ಮಾಡಿದ ಹರಕಿ

ಕರಸಿದ್ಧ ಕೊಡುವನು ಸರಸಾಗಿ

ಮಾಡುವೆನು ಹಿರಸಿನ ಕಳಸವನಿಕ್ಕಿ ||3||

ಅಗಾಧ ಮಾತೊಂದು ಆಡಿದೆಲ್ಲಾ ಖೋಡಿ |

ಅಗಡ ಬಿದ್ದಾದ ಬಾ ತಂಗಿ ಓಡಿ

ಆಶ್ರಿ ಇದ್ದ ಮನಿಯೊಳು ಸರಸಾಗೆ ಬಂದು

ಹಿರಸಿಲಿ ಕೈ ಹಿಡಿ ತಂಗಿ ನೋಡಿ ||ಪಲ್ಲ||

ಒಂಬತ್ತು ಮನಿಯೊಳು ವಾಸವ ಮಾಡಿ

ತುಂಬಿ ಸೋಸುವ ಕೊಳಲವ ನೋಡಿ

ಹೇಸಿಕಿ ನಿನಗ ಇಲ್ಲವ ಖೋಡಿ

ಹಿಸಾಬಿಲ್ಲದ ಲೆಕ್ಕ ಮಾಡತಿ ನೋಡಿ ||1||

ಕಳ್ಳರ ಸಂಗ ಮಾಡಿದೆಲ್ಲಾ ಮಂಗಾ |

ನೀನು ಆಗಿದಿ ಗಿಡದನ ಕೊಂಗಾ

ಮಂಗ ಸಂಗ ಮಾಡಿದೆಲ್ಲಾ ಮಂಗಾ

ನಿನಗ ಬುದ್ಧಿ ಹ್ಯಾಂಗ ಬಂದೀತ ಹುಚ ಪೆಂಗಾ ||2||

ಕರಸಿದ್ಧನಲ್ಲಿ ಕಣ್ಣ ಇಡಲಿಲ್ಲ ಖೋಡಿ |

ಕರದಲ್ಲಿ ಲಿಂಗ ಮೂರ್ತಿ ನೋಡಿ

ಮರುವಿನ ಜನ್ಮಕ ಮರಳಾದಿ ಹೇಡಿ

ಮಹಾಲಿಂಗನ ಪೂಜೆ ಮಾಡು ನೀ ನೋಡಿ ||3||

ಕಣ್ಣದ ಕಣ್ಣದ ಕಣ್ಣಾದ |

ಕಣ್ಣಿನೊಳಗ ಒಂದು ಹೆಣ್ಣಾದ

ಹೆಣ್ಣಿನ ಬಣ್ಣಾ ಬ್ಯಾರ್ಯಾದಾ

ಅದು ಮೂರು ಲೋಕಕ ಮೀರ್ಯಾದಾ ||ಪಲ್ಲ||

ಹೆಣ್ಣಿನ ಬಳಗ ತೋಲಾದಾ |

ಎಲ್ಲರೊಳಗ ಅದು ಸೇಲಾದಾ

ಬಹಳ ಮಂದಿಗಾದು ಮೂಲಾದಾ

ಅದರ ಬಲ್ಲಿ ಒಂದು ಗುರುವಿನ ಕೀಲಾದಾ ||1||

ಬೇಡಿದ್ದು ಐಶ್ವರ್ಯ ಕೊಟ್ಟಾದಾ

ಮನಸ್ಸಿನೊಳಗೆ ಒಂದು ಇಟ್ಟಾದಾ |

ಬಹಳ ಮಂದಿಮ್ಯಾಲ ಸಿಟ್ಟಾದಾ

ಸಾಧು ಸಂತರ ಮೇಲ ಮನಸಿಟ್ಟಾದಾ ||2||

ಹರಸೂರ ಈಶನ ಹಿಂದಾದಾ

ಕರಸಿದ್ಧೇಶನ ಮುಂದಾದಾ |

ಅವನದು ಒಂದು ಕಂದಾದಾ

ಅದಕ ಇದಕ ವರ ಛಂದಾದಾ ||3||

ಪ್ರಪಂಚ ಎಂಬುದು ಹಡಿ ಹೊಲಸೊ |

ಇದರೊಳಗೇನಾದ ನಮ ನಿಮ ಕೆಲಸೊ

ಸುಳ್ಳಿ ಸುಳ್ಳಿ ಹೊಡಿತಾದ ಈ ಮನಸೊ

ಇದಕ ಬಿದ್ದಂಗ ಆಯಿತು ಒಂದು ಕನಸೊ ||ಪಲ್ಲ||

ಹೆಂಡಾರು ಮಕ್ಕಳು ಕಾಳಾ |

ಅವರು ಹೊಡಿತಾರ ಗೋಳಾ

ತಂದ ಹಾಕಂತ್ತಾರ ಜ್ವಾಳಾ

ಬೇಡಿ ತಂದು ಹಾಕಂತರ ಜ್ವಾಳಾ

ಕುಂತಲ್ಲೆ ತಿಂದು ಕೂಡತಾರ ಕೂಳಾ ||1||

ರುದ್ರಾಕ್ಷಿ ರೇಶಿಮಿ ಧಡಿ |

ಅಂವ ಎನಗಾಗಿ ತಕ್ಕೊಂಡ ನೋಡಿ

ಉಟಕೋ ಅಂತನ ಜೋಡಿ

ಕಳದುಟಕೋ ಅಂತನ ಜೋಡಿ

ನೀನು ಬಿಟ್ಟು ಇರುಬ್ಯಾಡಂತಾನಾ ಮಡಿ ||2||

ಹರಸೂರ ಸಂತಿ ಮಾಡಿ ಗುರು ಕರಸಿದ್ಧ

ತಕ್ಕೊಂಡ ಪುಡಿ ಹಚಗೊ ಅಂತಾನ ತೀಡಿ |

ಹಣಿಮ್ಯಾಲ ಹಚಗೊ ಅಂತಾನ ತೀಡಿ

ನೀನು ಬಂದಿದಿ ಶಿವನಲ್ಲಿ ಬೇಡಿ ||3||

ರಾಗ ಮಾಡುತ ಬಂದಾನೇ ಎ |

ರನ್ನದಾ ರಾಗ ಮಾಡುತ ಬಂದಾನೇ ಎ ರನ್ನ ದಾ

ರಾಗ ಮಾಡುತ ಬಂದ ಸಾಗಿ ಶಿವಪೂರದೊಳು

ಬೇಗನೆ ಬಾ ಎಂದು ನಾಗಭೂಷಣ ತಾನು ||ಪಲ್ಲ||

ಪಂಚ ವರ್ಣದ ಗಿಳಿಯೆ ಪಂಚಾಕ್ಷರಿ ಮಂತ್ರವ ತಿಳಿಯೇ |

ಸಂಚಿತ ಭೋಗದ ಲಿಖಿತವ ತಿಳಿಯುತ ||1||

ಬೈಲಿಗಿ ಬೈಲಾಟಾ ಬೈಲ ಬ್ರಹ್ಮಾಂಡದಾಟಾ ಭಕ್ತಿಗೆ ಬಸವಾಗಿ

ಗುರುಭಕ್ತ ತಾನಾಗಿ ನಿನ್ನೊಳು ನಾನಾಗಿ

ನನ್ನೊಳು ನೀನಾಗಿ ||2||

ನಾಚಿನ ಸ್ತ್ರೀಯರಿವರೆಲ್ಲಾ ಹಿಂಬಲೊಬ್ಬಾರುಯಿಲ್ಲಾ |

ಹಂಬಲ ಹರಿಲಿಲ್ಲಾ

ರಂಭಿ ಸುಖವು ತಾನೇ ಬಲ್ಲಾ ||3||

ತಾನೇ ತಾನಾಗಿದ್ದೆನೆ |

ತನ್ನೊಳು ತಾನಿರಲಿದ್ದೆನೆ

ಕರಸಿದ್ಧನ ಕಂಡಾ

ಕಂಡಾರೆ ಆನಂದಾ

ಗುರುವೆ ನಿಮ್ಮ ದಯದಿಂದೆ ಎನಗಾಯಿತಾನಂದಾ ||4||

ಹರಸೂರ ಹರಳಂದಾನೋ |

ಕೊರಳೊಳು ಮುತ್ತಿನ ಹಾರಂದಾನೊ

ರಾಚೊಟ್ಟಿ ಈಶ್ಯಾನೊಳು ಸವಿರುಚಿ ಬೀರಂದಾನೊ ||5||

ಬಿಸಿ ನೀರು ಕಾಸಿ ನಾನು ಬೆಚ್ಚಗ ಮಾಡಿಟ್ಟೆ |

ಹುಚ್ಚು ನನ್ನ ಪತಿ ಏಳವಲ್ಲನಮ್ಮಾ |

ಮಿಸುಕಲ್ಲಾ ನೋಡಲ್ಲಾ ಕಣ್ಣ ತೆರಿವಲ್ಲಾ

ಹೆಣ್ಣು ಮಗಳು ನಾನು ಸಂಣ್ಣಾದೆನಮ್ಮಾ ||ಪಲ್ಲ||

ಕಂಚಿನ ಕಳಸ ಬೆಳಗಿ ಕರವನ್ನು ಮುಗಿದಿದ್ದೆ |

ಕರ ಹಿಡಿದು ಎನ್ನಾನು ಕರಿಲಿಲ್ಲೇಳಮ್ಮಾ

ಪರಿಪರಿಲಿಂದಲಿ ಸೆರಗೊಡ್ಡಿ ಬೇಡಿದ್ದೆ

ಪರಿವರಾಳದ ವಚನವು ಸುರಿಲಿಲ್ಲ್ಹೆಳಮ್ಮಾ ||1||

ಎಚ್ಚರವನು ತಪ್ಪಿ ಹುಚ್ಚಾಗಿ ಮಲಗಿದರೆ |

ಮೆಚ್ಚು ಮರುಳು ಯಾರು ಮಾಡಿದರಮ್ಮಾ

ಗಗನ ಮಂಟಪದೊಳು ಗಂಭಿರನೆನ್ನು

ಕಂಡು ರಂಭಿಯ ಸುಖವನ್ನು ಮರತಿದ್ದರಮ್ಮಾ ||2||

ಅಕ್ಷಾಂತಿ ಕಾಳಗ ಅಂಬಲಿಯನ್ನು ಜಾನಿ |

ಅನ್ನ ಅಗಲೊಳು ಎಡಿಯ ಮಾಡಿದೆನಮ್ಮಾ

ತಗೋವಲ್ಲಾ ತಾಕೊಲ್ಲಾ ತಾರೀಪೇನ್ಹೆಳಾಲಿ

ಏಕೋ ಭಾವದಿ ತಾನೆ ನಿಲ್ಲತಿದ್ದರಮ್ಮಾ ||3||

ಕಾಯವೇ ಕೈಲಾಸ ಮಾಯಾವೇ ಉಲ್ಲಾಸ

ನ್ಯಾಯಾಧೀಶನ ಮಗನ ಹಡದಿದ್ದನಮ್ಮಾ

ಬಸುರಿಲ್ಲಾ ಬಂಕಿಲ್ಲಾ ಹೊತ್ಯಾರು ಹಡದಿಲ್ಲಾ

ಮತ್ತೆ ಇವನ ಹೆಸರು ಏನೀಡಬೇಕಮ್ಮಾ ||4||

ರಾಮಾ ರಾಮಾ ಕೂಗೂದಿ ನಾಮಾವೆ ಇಟ್ಟಿದರು

ಪಂಚ ಬ್ರಹ್ಮ ಪರಶಿವನು ನೋಡಮ್ಮಾ |

ಸಂಚಿತ ಲಿಖಿತವು ಸರ್ವಾ ರೂಪಿಯೂ ಸಿದ್ಧ

ಶಿವ ಮತದೊಳು ತಾನು ಜನಸಿದನಮ್ಮಾ ||5||

ಹರ ಹರಾ ಶಿವ ಶಿವಾಕರ ಸಿದ್ಧ ಮಹಾದೇವ

ಕರುಣಾಮೃತವೇ ಮುಗಿದು ಕಡಿಗಾದನೆಮ್ಮಾ

ಮಡಿಯ ಮಾರ್ಗಲಿಂದೆ ಬಿಸಿ ನೀರು ಕಾಸಿ ನಾನು ||6||

ಭವಕಾಲದಿ ನಾ ಭವ ಭವ ಚರಿಸುತ |

ಈ ಭುವನದೊಳಗೆ ನಾ ಬಂದೆ ಭವ ಕಾಲದೊಂದು

ಸುದ್ದಿ ಹೇಳಿದರ ಕೇಳುವವರಿಲ್ಲ ಮುಂದೆ ||ಪಲ್ಲ||

ಮರ್ಜಿ ತಿಳಿದು ನಾ ಅರ್ಜಿ ಮಾಡತಿನಿ

ನಾ ಹೇಳಲೇನು ನಿನ ಮುಂದಾ |

ಗುರುವಿನ ನಿಶಾನಿ ಖೂನ ಅರಿಯದೆ

ಗುರುವೆ ನೀನೆ ಗತಿ ಎಂದಾ ||1||

ಆದಿ ಅನಾದಿ ಕೋಟ್ಯಾನುಕೋಟಿ

ಸತ್ತು ಹೋಯಿತು ಜಗಬಂಬೆ |

ಕಟ್ಟಿದ ಮನೆಯು ಹುಟ್ಟಿದ ಸ್ಥಲವು

ಘಟ್ಟಿ ಮಾಡಲಿಲ್ಲ ನಾ ಒಂದೆ ||2||

ಕಾಲ ಕರ್ಮದ ಮೂಲವು ತಿಳಿಯದೆ |

ಕಾಲಗಳಿವರಾ ನಂದೆ

ಕಾಮಿತ ಸುಖವು ಕನಸಿನೊಳಿಲ್ಲ

ಅದೇ ನಾ ನಂದೆ ||3||

ಹಗಲಿರುಳು ನಿಮ ಹರುಷಾದಿ ಎಳಿದು |

ಭಜನಿ ಮಾಡುವೆ ನಾ ನಂದೆ

ಸುಜನರ ಸಂಗದಿ ಕರಸಿದ್ಧೇಶನೊಳು

ಕೂಡಿಕೊಂಡರಾಯ್ತಾ ನಂದೆ ||4||

ಬ್ರಹ್ಮ ವಿದ್ಯಾ ಬಾಯಿ ಮಾತಲ್ಲಾ | ಬಲ್ಲವೇ ಬಲ್ಲಾ |

ಬ್ರಹ್ಮ ವಿದ್ಯಾ ಬಾಯಿ ಮಾತಲ್ಲಾ

ಭವದ ಆಶಿ ಅಳಿದವನೆ ಬಲ್ಲಾ

ಸರ್ವರಿಗೆ ಅದು ತೂಗೋದಲ್ಲಾ

ತೂಗಿದಂವಾ ಅಂವಾ ನೀಗೆನಲ್ಲಾ ||ಪಲ್ಲ||

ಆರು ಚಕ್ರದ ಮೂರು ದಳದಲ್ಲಿ |

ತ್ರಿಕೂಟವಾದ ತ್ರಿಮೂರ್ತಿಯಿರುವ ಸ್ಥಳದಲ್ಲಿ

ಹರಹರಾ ಎಂಬುವ ನಾಮಾ ಹರುಷದಿಂದಲಿ ಕೂಗಿ

ಯೋಗಿ ಉನ್ಮನಿಯಲ್ಲಿ ಜೋಗಿ

ಗುರುವಿನ ಪಾದ ಹಿಡಿಯೋ ಬೇಗಿ ||1||

ಎಂಟು ಮಂದಿ ಭಂಟರನು ಕಡಿಯೋ ಒಂಟ್ಟೊ

ನೀನು ಹತ್ತು ಸ್ಥಾನದ ಹಾದಿಯನ್ನು ಹಿಡಿಯೋ |

ಘಂಟಿ ಜಾಂಗುಟಿ ಭೇರಿ ಕಾಳಿ ರುದ್ರನಾ ಮನಿಯಲ್ಲಿ ಕೇಳಿ

ಲಿಂಗದಲಿ ನಿಜ ರೂಪ ತಾಳಿ ನಿಶ್ಚಿಂತಿಲಿಂದೆ ಉಳಿ ||2||

ಸಾಂಬನೊಲಿಮೆ ಸಾಧಿಸಿಕೊಳ್ಳು |

ತ್ರಿಲೋಕದಲ್ಲಿ ಬ್ರಹ್ಮ ಸ್ವರೂಪನಾಗಿ ನೀ ಬಾಳೊ

ಹರಸೂರ ಕರಸಿದ್ಧ ನಿನ್ನ

ಹರುಷದಿಂದಲಿ ಚರಣ ತೀರ್ಥ ಕರುಣಾಮೃತ

ಕುಡಿದು ನೀನು ಕಡಿಯ ಗಾಣಲಿ ಬೇಕೊ ಮನುಜಾ ||3||

ಹಡದ ತಾಯಿ ತಂದಿ ಎನಗ ವರವು ನೋಡಿ |

ಧಾರಿ ಎರದಾರ ಏನ ಚಂದಾ ಚಂದವೋ

ಮುತ್ತೈದಿತಾನಾ ಏನ ಚಂದ ಏನ ಚಂದಾವೊ ||ಪಲ್ಲ||

ಶಾಶಿಪತ್ತಲ ಉಡುವುದು ಚಂದಾ |

ಕೊಬ್ಬರಿ ಗುಂಡಾ ಉಡಿಯೊಳು ಚಂದಾ

ಹಣಿಬಾರದ ಭಾಷಿಂಗ ಚಂದಾ

ಹಣಿಗೆ ಕುಂಕುಮ ಚಂದಾ ||1||

ಮೂಗಿನಲ್ಲಿಡುವ ಮೂಗುತಿ ಚಂದಾ |

ಕರ್ಣದೊಳಗೆ ವಾಲಿಯು ಚಂದಾ

ಮುತ್ತೈದಿತಾನದ ಬಳಿಗಳು ಚಂದಾ

ಕಾಲೊಳು ಕಾಲೂಂಗರ ಚಂದಾ ||2||

ಕರಸಿದ್ಧೇಶನ ಕನ್ನೆಯು ಚಂದಾ |

ಏನ ಚಂದಾ ಏನ ಚಂದಾವೊ ||3||

ಪೊರಿಯೋ ದೇವಾ ಜಗ ಬಗಿಯಾ ತಿಳಿಯದೆ ||ಪಲ್ಲ||

ಬಾಗಿಯು ತಾನು ನಡಿಯಲಿ ಬೇಕೊ |

ಕಾಗಿಯ ಗುಣಗಳು ಕಳೆಯಲಿ ಬೇಕೊ

ಕನಸಿನಂತೆ ಭವ ತಿಳಿಯಲಿ ಬೇಕೊ ||1||

ದುಷ್ಟ ಭಾವಗಳು ಸುಟ್ಟಿರಬೇಕೊ |

ಅದೃಷ್ಟ ಭೋಗವ ಅಂಬುವದ್ಯಾಕೊ

ಅಷ್ಟು ಇಷ್ಟು ನೀ ಗುಣಿಸಿ ಕಳಿಯುವದ್ಯಾಕೊ ||2||

ನಾಮ ರೂಪವ ಕಳಿಯಲಿ ಬೇಕೊ |

ಪ್ರೇಮ ಬಿಟ್ಟು ನೀ ತಿರುಗುವದ್ಯಾಕೊ

ತನ್ನೊಳು ತಾನರಿತು ಉಳಿದಿರಬೇಕೊ ||3||

ಹಲವು ಹಂಬಲ ಹರಿದಾಡುವದ್ಯಾಕೊ |

ಕೆಲವು ಕೆಲಸವ ನೀ ಬಯಸುವದ್ಯಾಕೋ

ಕರಸಿದ್ಧೇಶನ ಕಾಣಲಿ ಬೇಕೊ ||4||

ಸಹಸ್ರ ನಾಮದ ಸಂತತಿ ನಾನು |

ಭೂಲೋಕದಲ್ಲಿ ಯಾಕ ಬಂದೆ ತಿಳಿಯಲಿಲ್ಲ ಖೂನಾ

ಕಾಕು ಬುದ್ಧಿ ಕಳಿಯೊ ಗುರುವೆ ನೂಕು ಮದಗಳೆಂಟು ನೀನು

ಸಾಕು ಸಂಸಾರ ಭ್ರಾಂತಿ ಎನಗೆ ಏಕೊ ಬ್ರಹ್ಮಾ ರುದ್ರ ನೀನೆ ||ಪಲ್ಲ||

ಕಲಿ ಯುಗದ ಕಡೆಯ ಮಗ ಹುಟ್ಟಿ |

ಶ್ರೀಗುರುವೆ ನಿಮ್ಮ ಪಾದದಲ್ಲಿ ಕೊಡುವೆನೊ ಭೆಟ್ಟಿ

ಸತ್ಯಶೀಲ ನಿಮ್ಮ ಕಂದಾ ಬೆತ್ತದಲಿ ಚಿನ್ಮಯನು ಬಂದಾ

ಸತ್ವ ತೋರಿ ಸಾಕ್ಷಿ ಗುರುವಿನ ಮೋಕ್ಷ ಪದವಿಯನ್ನು ಕಂಡು ||1||

ಚಂದ್ರ ಸೂರ್ಯರ ಬೆಳಗಿನೊಳಗಿದಾನ

ಶಂಕರನ ಕೃಪೆಯಿಂದ ಹರುಷದಿಂದ ಹರಸೂರಿಗೆ ಬಂದಾ |

ಮರಸಿದಾನೊ ಮನೆಯ ಮಾರಾ

ಸೇರಿಕೊಂಡ ದೊಡ್ಡ ಸ್ಹೇರಾ

ಮಾವಿನಾ ಹಣ್ಣುಗಳು ಭಾರಾ ಇಳಿಸಿ ಉಂಡಾತನಿಗೆ ಸಾರಾ ||2||

ಯೋಗಿ ಉನ್ಮನಿ ವಾಸದಲ್ಲಿದ್ದಾ

ಅಂತರಂಗದೊಳಗೆ ಆತನನ್ನು ಬೆಳಗೆ ಕಂಡಿದ್ದಾ |

ಒಳಗ ಹೊರಗ ಇರುವ ಮೂರ್ತಿ

ಆಟಕ ಇರುವಾನೊ ಸಾರ್ತಿ

ನಂಬಿದ ಭಕ್ತರಿಗೆ ಬಂದು ಮಾಡಿ ಹೋಗುವಾನೊ ಆರ್ತಿ ||3||

ಏಸೊ ಜನ್ಮದಿ ಯೋನಿಯಲಿ ಹುಟ್ಟಿ |

ಗುರುಪಾದೀಶ್ವರನು ಗುಪ್ತ ಸ್ಥಾನದಿ ಬಂದು ಅಂದ ಮುಟ್ಟಿ |

ಮಿಂಚು ಶಾಶ್ವತ ಬೆಳಗಿನೊಳಗೆ ಕರಸಿದ್ಧ ಇರುವನೊ ಒಳಗೆ |

ಆತನ ಪಾದಾದ ಕೆಳಗೆ ಸಕಲ ಲೋಕವೆಲ್ಲಾ ಒಳಗೆ ||4||

ವರನುಳ್ಳ ವಗತನ ನೋಡಿ ಕೊಟ್ಟರ ವಗತನ ಮಾಡಮ್ಮಾ |

ತಂಗಿ ವಗತನ ಮಾಡಮ್ಮಾ

ವಾರಿಗೆವರ ಕೂಡಾ ನೀರಿಗೆ ಹೋದಲಿ

ಮಾತಾಡಬೇಡಮ್ಮಾ ತಂಗಿ ಮಾತಾಡಬೇಡಮ್ಮಾ ||ಪಲ್ಲ||

ಹೊತ್ತು ಐದು ನಿಲಿಗಿಗಳಿಗಾದರೂ ಒಟ್ಟಾ ತರಬೇಡಮ್ಮಾ |

ತಂಗಿ ಒಟ್ಟಾ ತರಬೇಡಮ್ಮಾ

ಕಟ್ಟಿದ ಸೀರಿಯನುಡು ಅಮ್ಮಾ

ಕಟ್ಟದ ಸೀರಿಯನುಡು ಅಮ್ಮಾ ||1||

ನೆರಿ ಹೊರಿಯರ ಮಾತವ ಕೇಳಿ ಮುನಿಸಲಿ ಬೇಡಮ್ಮಾ |

ತಂಗಿ ಮುನಿಸಲಿ ಬೇಡಮ್ಮಾ

ನೆನೆಸಿದರೇನು ಬರುವದಿಲ್ಲಾ

ಮನಸ್ಸಿಗೆ ತಿಳಿಯಮ್ಮಾ ||2||

ಪಂಚ ತತ್ವದ ದೇಹವ ಧರಿಸಿ ಕಡಿಗಾಣಿಸಮ್ಮಾ |

ತಂಗಿ ಕಡಿಗಾಣಿಸಮ್ಮಾ ಅಂಗದ ಅನುಭವ

ಅರಿತು ಲಿಂಗ ಧರಿಸಮ್ಮಾ

ಅರಿತು ಲಿಂಗ ಧರಿಸಮ್ಮಾ ||3||

ಅರಸನ ಕಂಡು ಪುರುಷನ

ನೀನು ಮರಿಯಲಿ ಬೇಡಮ್ಮಾ |

ತಂಗಿ ಮರಿಯಲಿ ಬೇಡಮ್ಮಾ

ಗುರು ಕರಸಿದ್ಧೇಶನ ಪಾದದಿ

ಕೂಸಾಗಿ ಉಳಿಯಮ್ಮಾ ||4||

ಕುರಸಾಲ್ಯಾಗ ಹುಟ್ಟಿದಿಯೇನೊ ಭಾಡ್ಯಾ ನೀನು |

ಕಟ್ಟಿಸಿಕೊಂಡು ಕುಂತಿ ಯಾರದು ಮಾಡ್ಯಾ ||ಪಲ್ಲ||

ಒಂಬತ್ತು ಬಾಗಿಲ ಬಿಟ್ಟಾ ನಿನ್ನ ತೆಲಿ ಮ್ಯಾಲಾ

ಹೊಡಿವನೊ ಹಳ್ಳಿಟ್ಟು ಮೆಟ್ಟಾ |

ಅವಂದೇನು ಕಿತ್ತಾಲೊ ಶೆಂಟಾ

ಈ ಊರು ಬಿಟ್ಹೋಗಾಗ ನೀ ಇರತಿ ಒಂಟಾ ||1||

ತಾಯಿಗಂಡಾ ತಾರಿಪದ ಹೊಲಸಾ |

ಇದರೊಳೆನಾರಾ ಅದೇನೊ ಎಳ್ಳಷ್ಟು ಕೆಲಸ

ಮುಳ ಮುಳಗಿ ಎಳತಿದ್ದಿ ಮಡಸಾ

ನಿನ್ನ ಜಿಡ್ಡಾರ ಹೋಗಲ್ದು ಈ ಹಡಿ ಹೊಲಸಾ ||2||

ನಗ ನಗುತ ಹೇಳುತ್ತ ಬಂದಾ |

ಹರಸೂರಿಗೆ ಹುಟ್ಟಿತ್ತು ಸಣ್ಣಾದು ಕಂದಾ

ಬೈದು ಬೊಗಳುತ್ತಾ ನಂದಾ

ಗುರುಪಾದೀಶ್ವರ ರುದ್ರನ ಮುಂದಾ ||3||

ಕಂಡಿರೇನೊ ಕಳಸದ ಮುತ್ತು |

ಮುತ್ತಿನೊಳಗ ಕುಂತಿತ್ತು ಎನ್ನ ಚಿತ್ತು ||ಪಲ್ಲ||

ಅರಿಯದೆ ಮರತು ನಾ ಕುಂತಾ |

ಪರಿಹರಿಸೊ ಗುರುವೆ ಎನ್ನ ಚಿಂತಾ

ಬಳಗದ ಮಂದಿಯಿಲ್ಲಾ ಸುತ್ತಾ

ಜಗದೊಳು ಜಾತ್ರಿ ಮಾಡುತ ನಾ ಕುಂತಾ ||1||

ಹುಲ್ಲು ಕಲ್ಲಿಗೆ ಜಗಳ ಹಚ್ಚಿ

ಕಲ್ಲು ಮಠದೊಳು ಕುಂತೆಯ್ಯಾ ಘಟ್ಟಿ |

ಮುಸಲ್ಮಾನರು ಮುರುಷದರಿಗೆ ಚಿಂತೆ

ಅವರ ಮನಸಿಗೆ ಇಲ್ಲಯ್ಯ ಎಳಷ್ಟು ಶಾಂತಿ ||2||

ಗೋದಿ ಕಾಳಿನಂಥಾ ಬಣ್ಣಾ |

ಕೆಂಪು ಹಸಿರು ಬಿಳಿದು ಕರಿದು ಅಣ್ಣಾ

ಹಡದು ಕೊಟ್ಟಿದ್ದ ಎನಗೊಂದು ಹೆಣ್ಣಾ

ಹೆಣ್ಣಿನ ಮೈಯಲ್ಲಾ ಇದ್ದಾವೊ ಸಾವಿರ ಕಣ್ಣಾ ||3||

ಮಿಂಚ ಪ್ರಕಾಶದ ಬೆಳಕಾ

ಮೂರು ಲೋಕಕೆ ಮೇಲಾದೊ ಥಳಕಾ |

ಬೆಳದಿಂಗಳ ಬಿಸಿಲೊಳು ಬೆಳಕಾ

ಗುರುಪಾದೇಶ್ವರ ಗುಪ್ತದೊಳು ತೋರಿದ ಜಳಕಾ ||4||

ಬಸವಲಿಂಗನ ಬೆಳಗ |

ಗುರುಪಾದೇಶ್ವರ ಹನಾ ಒಳಗ

ಆತನ ಪಾದದ ಕೆಳಗ

ಹೊಳಕುಂದಿ ಶರಣಯ್ಯನ ಬಳಗ ||ಪಲ್ಲ||

ಚಿಂತಿಯು ಕಳಿರಯ್ಯ |

ಈ ಮನದ ಭ್ರಾಂತಿಯು ಬಿಡಿಸಯ್ಯಾ

ಶಾಂತ ಮೂರುತಿ ನಿಮ್ಮ ಕಾಂತನ

ಪಿಡಿದಿದ್ದಾ ಶಾಂತಾಗೊಳಿಸಿರಯ್ಯಾ ||1||

ಕತ್ತಲಿ ದುಂದಾಕಾರಾ ಮಂಜು ಘೋಷದಲ್ಲಿ ಶಹರಾ |

ಅಲ್ಲೆದಾ ಶಿವಪೂರಾ

ಅಲ್ಲಮಪ್ರಭು ಗುರು ಗಿರಿಧರಾ ||2||

ಲೋಕದಲ್ಲಿ ಹುಟ್ಟಿ ತಾಯಿ ತಂದಿ ಸುಖವೆ

ನಟ್ಟ ನಡು ನೀರೊಳು ಕೈಯಿ ಬಿಟ್ಟಿ |

ಮುಂದೆ ಹಡದಿದ್ದು ನೀ ಘಟ್ಟಿ ||3||

ಸತಿ ಪತಿ ಸಂಭ್ರಮಾ ಮಾಡಿದ

ಎಂಥದು ಅಂವ ನೇಮಾ |

ನೇಮದಲ್ಲೀ ಪ್ರೇಮಾ ಪ್ರೇಮಕೆ

ಎರಡು ಪುತ್ರರೆ ನಾಮಾ ||4||

ಹರಸೂರೇಂದ್ರ ಗ್ರಾಮಾ |

ಆತನೆ ಇರುವಾನು ನಿಃಸ್ಸಿಮಾ

ನಿಜವಾದ ವಸ್ತು ಧಾಮಾ

ಅವರ ಮೇಲಿರಲಿ ನಿಮ್ಮ ಪ್ರೇಮಾ ||5||

ಅಷ್ಟಾಂಗದ ಕೀಲಾ ಶ್ರೇಷ್ಠ

ಜಗದ ಕರ್ತು ಮೇಲಾ |

ಕರಸಿದ್ಧನ ಬಾಲಾ

ತನ ಪಾದದಲ್ಲಿ ಚೇಲಾ ||6||

ಇರಬೇಕೊ ಜತ್ತನಿರಬೇಕೋ

ವಿರತಿ ಮಡಿಯನ್ನು ಅರತಿಲಿ

ಉಟ್ಟುಕೊಂಡು ಇರಬೇಕೊ ||ಪಲ್ಲ||

ಇದ್ದು ಇಲ್ಲದಾಂಗ ಶುದ್ಧವಾಗಿ |

ನಡಿದು ಗುರು ಮುದ್ದಾದ

ಮಗನಾಗಿ ಶುದ್ಧಾಗಿ

ಭವನದೊಳಿರಬೇಕೋ ||1||

ಜ್ವಾಕಿಲಿಂದ ನಿನ್ನೊಳು

ಏಕೋಭಾವ ನಿಟ್ಟು |

ಅನೇಕ ಬೆಳಗಿನೊಳು

ಆತನ ಧ್ಯಾನದಿ ಇರಬೇಕೋ ||2||

ಹಸು ಯಾಕೊ ಖಾಲೆ ವ್ಯಸನ್ಯಾಕೊ |

ಹಸಗೂಸು ಕರಸಿದ್ಧನ ಧ್ಯಾನದೊಳಿರಬೇಕೊ || ||3||

ಪಾಪಗೇಡಿ ಪರದೇಶಿ ಘೂಟಕ ಕಟ್ಟಲಾರೆ |

ಮೇಲಧೋತರ ಉಟ್ಟು ಆರ್ಭಟ ಕೇಳಲಾರೆ ||ಪಲ್ಲ||

ನಾತ ನೋಡಿದಾರೆ ದಾತ ತೆರಿತಾವ ನೋಡ್ರೊ |

ನಾರಿಸಂಗ ನಾಜುಕ ಚ್ಯಾಗ ನೊಡ್ಯಾನೇನ್ರೊ ||1||

ಶೃಂಗಾರ ಹೆಣ್ಣಿಗೆ ಸೀರಿ ಉಡಸಿ ತಂದಾನೇನ್ರೋ |

ಭಂಗಾರೆಂದು ಬಯಸಿ ತಾನು ನುಂಗ್ಯಾನೇನ್ರೊ

ಅಂಗಾರದಂಥಾ ಅರ್ಭಟದೊಳು ನುಂಗ್ಯಾನೇನ್ರೋ

ಗುರುಲಿಂಗ ಜಂಗಮರಲ್ಲಿ ಇವನ ಗುರುತಾವೆನ್ರೋ ||2||

ಗುರುವಿನ ಮಗಳು ಗುರುಲಿಂಗಿ ಎಂದು ತಿಳಿಯಲಿಲ್ರೊ |

ಅಣ್ಣ ತಂಗಿಗೆ ಹೋಗೊದು ಸಣ್ಣ ಮಾತೇನ್ರೋ

ಸಣ್ಣ ಬಣ್ಣದ ನದಿಗಳು ಕಣ್ಣೆಲೆ ಕಂಡೆಲ್ಲೇನ್ರೋ

ಕರಸಿದ್ಧೇಶಾ ಗುರುಪಾದೀಶನ ಸುಖವು ಕಂಡಿಲ್ಲೇನ್ರೋ ||3||

ಶರಣರ ದಂಡೆದ್ದಿತೊ |

ಶ್ರೀಗುರು ಹರ ಶರಣಾರ ದಂಡೆದ್ದಿತೊ

ಶರಣಾರ ದಂಡೆದ್ದಿತ್ತು

ವರಣಾಂಗ ಹರಸೂರ ಕರುಣಾ

ಕರಸಿದ್ಧನ ಶರಣಾರ ದಂಡೆದ್ದಿತೊ ||ಪಲ್ಲ||

ಕಲ್ಯಾಣ ಸೀಮಿ ಬಿಟ್ಟಿ ಕಲಿಯುಗದೊಳು

ಕಲ್ಲುಮಠದೊಳು ನೀ ಹುಟ್ಟಿ ಕೊಟ್ಟಿದ್ದಿ ಭೆಟ್ಟಿ

ಮುಟ್ಟಿ ಶಿಖರದ ಮೇಲೆ ಮೆಟ್ಟಿದಿ

ಅಂವಿಗಿ ದಿಟ್ಟ ಶರಣರ ಮೇಲೆ ||1||

ಶರಣರಿಗೆ ಶರಣೆಂದರೊ ಶಿವಭಕ್ತರೆ

ಸಿಂಧು ಗೊಲ್ಲಾಳನೆಂದಿರೊ |

ಅಂದಿಗಿಂದಿಗಿದ್ದ ಎಂದಿಗಿದ್ದ ಶರಣರೇ

ಆನಂದ ಗುರುಪಾದೀಶನ ಕಂಡ ಶರಣರೆ ||2||

ರುದ್ರನ ಲಯವೆದ್ದಿತೋ |

ಮೂರುಲೋಕ ಮೋಕ್ಷಕಾ ಲಯವಾಯಿತೋ

ಮಿಕ್ಕ ಪ್ರಸಾದವನ್ನು ಮುಗಿದು

ಲೆಕ್ಕಿಲ್ಲದೆ ಜಂಗಮರು ಅಕ್ಕ ನಾಗಮ್ಮಳಿಗೆ ಶರಣಾದರು ||3||

ಆಸನ ಹಾಕಿದೆನಾ ಬಹು ಲಾಭದ ಆಸನ ಹಾಕಿದೆನಾ |

ಆಸನ ಹಾಕಿದೆ ಈಶನ ನಾಮದ ಕೂಸಿನಂಥಾ

ಗುರುವಿನ ಕರಿದು ಕುಳ್ಳಿರಿಸಿದೆ ||ಪಲ್ಲ||

ಅರುವಿಲ್ಲೆಂದನನೆ ಸೂಸು ಮನದೊಳು ತಾನಿರಸಿ |

ಪಾತ್ರ ವಾತ್ರ ಪವಿತ್ರ ಚರಣವೇ ಕಂಡು ಆಸನ ಹಾಕಿದೇ

ನಿಜ ಕಂಡು ನಾ ಆಸನ ಕಾಕಿದೆ ||1||

ಝುಗಝುಗಿಸುವ ಬೆಳಗ ಜ್ಯೋತಿ ಪರಂಜ್ಯೋತಿ

ನಿನ್ನೊಳಗ ಸತ್ಯ ಜ್ಞಾನವು ನಿತ್ಯ ನಿಲವಿನೊಳು

ತೊತ್ತಾಗಿ ಸಿಂಹಾಸನ ವಾಸನದೊಳಗ ಉಳಿದೆ ||2||

ಅಂತರಯಾಮಿಯ ಮಾತು ಆತ್ಮ ಸಾಕ್ಷಿ ಕರಸಿದ್ಧನ ಮಾತು |

ಆಕಾರದೊಳು ಬಂದು ಗುರುವಿನ ಕರತಂದು

ಏಕಾಗಿ ಲೋಕ ನಾಯಕ ದೇವನ ಕಂಡು ಆಸನ ಹಾಕಿದೆ ||3||

ಕಾವಿ ಹಚ್ಚಡ ಹೊದ್ದು ಮುಸಕ್ಹೊಡದು ಮಲಗ್ಯಾರಾ |

ಇವರ ಹೆಸರೇನಿರುವದು ಹಡದಮ್ಮಾ

ಮಿಸುಕಲ್ಲಾ ನೋಡಲ್ಲಾ ಮಾರೆರೆ ತೆರೆವಲ್ಲಾ

ಇವರು ಯಾರಿರುವರೊ ಹಡೆದಮ್ಮಾ ||ಪಲ್ಲ||

ಜಗ ಜಗಿಸುವ ಮಾಲಾ ಜಗದೊಡೆಯ ಗೋಪಾಲಾ |

ಮುನಿಸ್ಯಾಕೆ ಮಾಡುವರಮ್ಮಾ ಹಂಬಲಾ

ನಾ ಮಾಡಿ ರಂಭಿ ಚರಣಕೆ ಬಂದೆ

ಎನ್ನ ನಂಬುಗೆ ನೋಡುವರಮ್ಮಾ

ಹಂಬಲವನ್ನು ಹರಿದು ಚುಂಬನವನ್ನು

ಕೊಟ್ಟು ಸಂತೋಷಗೊಳಿಸುವರಮ್ಮಾ ||1||

ಝಾಂವ ಝಾಂವಾದೊಳು ಝಾಂವಿನೊಳುಳದಿದ್ದೆ

ಎನ್ನ ಹ್ಯಾಂವಗಲಿಸೊ ಪ್ರಭುದೇವಾ |

ಗಿರಿಜಾ ಕಲ್ಯಾಣಿ ನಾನು ಗಿರಿಧರನಾಥನ

ಬೆಳಗಿನೊಳಗಿದ್ದೆನಮ್ಮಾ

ಥಳಥಳಿಸುವ ದೇಹಾ

ತಾರಿಪೇನ ಹೇಳಲಿ ತಾನೆ ತಾನಾಗಿದ್ದಾರಮ್ಮಾ ||2||

ಮಧ್ಯಾಹ್ನ ಬಿಸಿಲಿನೊಳ ಎದ್ದು ಬಂದವನ

ಸುದ್ದಿ ಯಾರು ಹೇಳ್ಬೇಕಮ್ಮಾ |

ಇದ್ದಲ್ಲೇ ಇರುಹುವನು ಕರದಲ್ಲೆ ಬರುಹುವನು

ಕಣ್ಣಾರೆ ಕಂಡಿದ್ದೆನಮ್ಮಾ

ಬಸುರಿಲ್ಲ ಬಂಕಿಲ್ಲಾ ಕಸರಿಲ್ಲದಾ ಹಣ್ಣು

ಕರಸಿದ್ಧನಿರುಹುವರು ಹೇಳಮ್ಮಾ ||3||

ನೀ ಮಾಲಗಾರಾ ಮಾಯಾದ ಬಲೆ ಏನ ಹೇಳಲಿ |

ನೆಲಿ ತಿಳಿಯದು ಹರಿಹರರಿಗಿದು

ಉದಯದಲ್ಲೆದ್ದು ಸದಾಶಿವ ನೆನೆಯುವದು || ||ಪಲ್ಲ||

ಜಾಡ ಬಿತ್ತಿ ಬೆಳೆದು ತಿಂಬುವ

ಬಾಡಿಗೆ ಮನಿಯೊಳು ಇದ್ದು ದುಡಿಯುವ ಭಾಡಾ

ತಿಂದು ನೀ ಬಾಳೆ ಮಾಡುವಂಥ ನೀ ಮಾಲಗಾರಾ ||1||

ಬಿತ್ತಿ ಬೆಳೆದು ಹೊತ್ತು ಮಾರಾಂವ |

ಹೊಲದ ಮೋಹದೊಳು ಸೇವೆ ಮಾಡಾಂವಾ

ಬಾಲಲೀಲೆಯೊಳುಳಿದು ಕಾಲಗಳೆಂವಾ ||2||

ಅಂದ ಚಂದದ ಉಡಿಗೆ ಉಡಾಂವಾ |

ಗಂಧ ಕಸ್ತೂರಿ ಪೂಶಿಸಿದಾಂವಾ

ಆನಂದದೊಳಗೆ ಕಾಲಗಳೆಂವಾ ||3||

ಸೋಲು ಪಂಥಗಳ ಜೂಜನಾಡಾಂವಾ |

ಚಂದ್ರ ಸೂರ್ಯರಿಗೆ ರಥ ಹೂಡಿದಾಂವಾ

ಸುಳಗಾಳಿಯೊಳಗೆ ಸುಳದಾಡಾಂವಾ ||4||

ರಂಗ ಮಂಟಪದ ನೆಲೆ ಆದಾಂವಾ |

ಮಡದಿ ಮಕ್ಕಳಿಗೆ ಮರಿಯದಾಂವಾ

ಸಡಗರದೊಳಗೆ ಉಳಿದುಕೊಂಡಾವಾ ||5||

ಹಂಗು ಹರಿದು ನಿಸ್ಸಂಗ ಮಾಡಾಂವಾ |

ಲಿಂಗ ರೂಪದಲಿ ನಿತ್ಯ ಕಂಡಾಂವಾ

ಕರಸಿದ್ಧನ ನಾಮ ಪಾಡಾಂವಾ

ಪ್ರಾಣ ಪ್ರತೀಕ್ಷೆ ಮಾಡಿ ಬೇಡಾಂವಾ ||6||

ಕೃತಯುಗ ತೃತಯುಗ ದ್ವಾಪರದೊಳಗ

ವ್ಯಾಪಾರ ಮಾಡಿಕೊ ಬರಾಬರಿ

ಕಲ್ಯಾಣ ಬಸವ ಕೈಲಾಸಕ ಹೋದನೆಂದು

ಹೇಳತಾದ ಜಗ ಪರಿಪರಿ ||ಪಲ್ಲ||

ಹೇಳವರ್ಯಾರೋ ಕೇಳವರ್ಯಾರೊ |

ತಿಳಿದು ನೋಡು ನೀ ಬರಾಬರಿ

ಹೇಳವರಿಲ್ದರ ಕೇಳವರಿಲ್ಲಾ

ಭವದ ಅಶಾ ಹರಿ ಬರಾಬರಿ ||1||

ಕೂಸಿನ ಸುದ್ದಿ ಮಾಸೇನು ಬಲ್ಲಾದು |

ಎಸೊ ಜನ್ಮದ ಕರ್ಮ ಪರಿಪರಿ

ಈಶ್ಯಾನವಾಲ್ಮಿಯ ದಾಸೇನು ಬಲ್ಲನು

ಕಬ್ಬು ನೆಕ್ಕಿ ನೋಡಿ ಪರಿಪರಿ ||2||

ಕುಂಬಾರ ಗುಂಡಯ್ಯಾ ಕಾಲೊಳು ಮೆದ್ದು |

ಕೆಸರು ಮಾಡಿದನೊ ಪರಿಪರಿ

ಹೆಸರನಿಲ್ಲದ ಹರಿಯೊಂದು ಮಾಡಿದಾ

ಮೂವತ್ತಾರು ಕೊಡ ಹಿಡಿಯೊ ಪರಿ ||3||

ಕಣ್ಣ ಇಲ್ಲದ ಕುರುಡನು ಹೋಗಿ |

ಸೌದೆ ಮಾಡಿದನೊ ಪರಿಪರಿ

ಕಿವಿಯಿಲ್ಲದ ಕಿವುಡನು ಹೋಗಿ

ಕೇಳಿ ಕೊಂಡಿದ್ದು ಯಾವ ಪರಿ ||4||

ಮಾತನಾಡದೆ ಹಣವನ್ನು ಗಳಿಸಿ |

ಜಂಗಮರಿಗೆ ಎಡಿ ಸುರಿ ಸುರಿ

ಲಿಂಗ ಪ್ರಸಾದ ಮುಗಿವಂಥಾ

ಕರಸಿದ್ಧ ಅಂಗದೊಳಡಗಿದ ಯಾವ ಪರಿ ||5||

ಒಂದು ಕುದರಿ ನಾ ಕೊಂಡು ಮ್ಯಾಲ ಕುಂತರ |

ನಡಿವಲ್ದು ಗುಣ ಕಂಡಾ ||ಪಲ್ಲ||

ಹಸಿ ಹುಲ್ಲು ತಿನ್ನುತಾದ |

ಕಾಲ ಕೆದರಿ ಕೂಗುತಾದ

ಜೀನ ಕಂಡಾರೆ ಅದು ಕಣ್ಣು ಮುಚ್ಚಿ ಬಾಗುತಾದಾ ||1||

ಇಕ್ಕಿದ ಆಸು ಕಡ್ಲಿಕಾಳನು |

ಬುಕ್ಕೆನೆಂದು ಬಯಸುತಾದ

ಥಕಥಕ ಕುಣಿದು ಅದು ಲದ್ದಿಯನ್ನು ಇಕ್ಕುತಾದೆ ||2||

ಸುತ್ತಗಟ್ಟಿ ಸುಳಿಯುತಾದ |

ಲಗಾಮ ಕಂಡರೆ ಬೆದರುತಾದ

ಮಡವಿನ ನೀರಿನಲ್ಲಿ ನಿಂತು ಉಚ್ಚಿ ಹೊಯುತಾದಾ ||3||

ಮುಂದೆ ಬಂದರ ಕಚ್ಚುತಾದ |

ಹಿಂದೆ ಹೋದರ ಒದೆಯುತಾದಾ

ತಂದೆ ಗುರುಸಿದ್ಧನ ಕಂದನ ಮುಂದೆ ಮಲಗುತಾದ ||4||

ಹುಶಾರಿ ಹೇಳತಾನ ಎನ ಗುರು |

ಎನಗೊಂದು ಹುಶಾರಿ ಹೇಳತಾನ

ತನುವಿಯೊಳಗಿನ ಕಣಗಿಲ ಕರಕಿ

ಬೇರಗಳಂತಾನಾ ||ಪಲ್ಲ||

ಬುದ್ಧಿಯೆಂಬುವ ಗುದ್ದಲಿ ಹಚ್ಚಿ |

ಅಗೆದು ನೋಡಂತಾನಾ

ಕಾಯಯೆಂಬುವ ಕಡಿಯ

ಹೊಲದ ಕಂಟಿ ಕಡಿಯಂತಾನಾ

ಅಲ್ಲಿ ಗಂಟಾದ ಅಂತಾನಾ ||1||

ಭಂಟನಾಗಿ ಇಲ್ಲಿ ಭವದೊಳು |

ಬಂದು ಬಾಳೆ ಮಾಡಂತಾನಾ

ಚಿತ್ತ ಚಿನ್ಮಯ ಎತ್ತವ ತಂದು

ಆರ ಹೂಡಂತಾನಾ

ಮೂರು ತಾಳಿನ ಕೂರಗಿ ಕೂಡಿ

ಬೀಜ ಬಿತ್ತಂತಾನಾ ||2||

ಘನ ಗುರುವಿನ ಬೆಳೆಯನು ಮಾಡಿ |

ಎಡಿ ಹೂಡಂತಾನಾ

ಮನವು ಎಂಬುವ ಮಂಚಿಕೆ ಹಾಕಿ

ಕುಂತು ನೋಡುಂತಾನಾ

ಶಿವನಾ ಎಂಬೊ ಸೀತನೆ ಕಾಳನು

ತಿಂದು ಸವಿ ನೋಡಂತಾನಾ ||3||

ಭಾವಯೆಂಬುವ ಭತ್ತವ ಬೆಳೆದು |

ಅಳಿದು ನೋಡಂತಾನಾ

ಖರೆ ಎಂಬುವದು ಕಟ್ಟಿದ ಸೇರು

ಇಟ್ಟು ನೋಡಂತಾನಾ

ಖೊಟ್ಟಿಯ ಸೇರು ಜಗದೊಳು

ನೀ ತರಬ್ಯಾಡಂತಾನಾ ||4||

ಬಹು ದಿವಸದ ಸಿಲಕಿನ |

ಮಾಲು ಒಪ್ಪಿ ನೋಡಂತಾನಾ

ಬಲು ನೆಪ್ಪು ಇಡು ಅಂತಾನಾ ಕಪ್ಪು ಗೊರಲ

ನಮ್ಮ ಕರಸಿದ್ಧೇಶ ಕಡಿತನಕ ಇರುತಾನಾ ||5||

ಕುದಿ ಕಡಕೊಂಡ್ಹೋಗಾದೆ ಪಾಡಾ |

ಜಗದೊಳಗ ಬಹುದಿವಸ ಇದೆ ಆದ ಹಾಡಾ ||ಪಲ್ಲ||

ಖುಸಿಲಿಂದೆ ಜಿನಗಾನಿ ಮಾಡಿ

ಒಳ್ಳೆ ಹಸನ ಮಾಡಿಕೊಳ್ಳು ನೆನವಿನೊಳ ನೋಡಿ |

ಮರೆತು ಇರಬ್ಯಾಡ ನೀನು ಖೋಡಿ

ಶ್ರೀಗುರು ರಾಯನ ಧ್ಯಾನವು ಮರಿಲಾರದೆ ಮಾಡಿ ||1||

ನಾಳೆಂಬುವವನ ಮನಿ ಹಾಳು |

ಗುರು ಪ್ರಸಾದ ಮುಗಿಸಿಕೊಂಡು

ನಿಜವಾಗಿ ಕೇಳಾ ಮರಿತು ಇರಬ್ಯಾಡ ನೀನು ಮೂಳಾ

ನಿನ್ನ ಮನಿಯೊಳಗೆ ಮೂರಾವ ಜ್ವಾಳಾದ ಕಾಳಾ ||2||

ಕಾಂತನ ಮ್ಯಾಳಿಡು ಪಂಥಾ |

ನಿಮ್ಮ ಮನಸ್ಸಿಗೆ ಮಾಡುವದು ಶಾಂತಾ

ಗುರುಪಾದೀಶ್ವರ ತಾನು ಕುಂತ

ರುದ್ರ ದೂರ ಮಾಡುವರು ಮನಸಿನ ಚಿಂತಾ ||3||

ಸರಿ ಬಾರದವ್ವಾ ಇಂಥಾ ಊರಾ |

ನಾನು ಬಿಟ್ಟು ಬದೆನವ್ವಾ ನನ್ನ ತವರೂರ ||ಪಲ್ಲ||

ಅತ್ತಿಯ ಕಿಟಕಿಟಿ ಬಹಳಾ |

ಲೆಕ್ಕಿಲಿ ಹಾಕಂತಾಳಾ ಜ್ವಾಳದ ಕಾಳಾ

ಮನಿಯೊಳಗ ಆವ ಎಂಟು ಆಳಾ

ಮಾಂವ ಹೊಡಿತಾನ ಹಗಲಿರುಳು ಗೋಳಾ ||1||

ಅತ್ತಿಗಿ ನಾದನಿಯರು ಎಲ್ಲಾ ಎತ್ತಿ ಹಾಕತಾರಾ |

ತೆಲಿ ಮ್ಯಾಲ ಕಲ್ಲಾ ಕರಕರ ತಿಂತಾರ ಹಲ್ಲಾ

ಥೊಡೆ ಸುಖಕ್ಕಾಗಿ ನಾ ಬಂದೆನಲ್ಲಾ

ಥೊಡೆ ಸುಖಕ್ಕಾಗಿ ನಾ ಬಂದೆನಲ್ಲಾ ||2||

ಹಾಸೆನಂದಾರೆ ಒಂದು ಹರೂಣಿ ಇಲ್ಲಾ |

ಆಶಾ ಎಂಬುವದು ಎನಗೊಂದು ಇಲ್ಲಾ

ಮದಿಗಂಡಾ ಮುಸುಕ ಹೊಡ್ದು ಮಲಗ್ಯಾನಲ್ಲಾ

ಇದಿಮಾಯಿ ರಂಡಿ ನಾ ಎದಿಯೊಡಿದೆನಲ್ಲಾ ||3||

ಅಕ್ಕ ತಂಗಿಯರೊಳಗ ಸೇಲಾ |

ತಾಯಿ ತಂದಿ ಮನಿಯೊಳಗ ಕುಡದಿದ್ದೆ ಹಾಲಾ

ಘಳ ಘಳಗಿ ಆಗತಾದ ಖ್ಯಾಲಾ

ಗುರು ಕರಸಿದ್ಧನ ಮ್ಯಾಲಾದ ಖ್ಯಾಲಾ ||4||

ಯಾರಿಗೆ ಹೇಳಲಿ ಹಡದವ್ವ ಎನ್ನ ದುಃಖ |

ಗಂಡ ಸಿಗಲಿಲ್ಲ ತಕ್ಕ

ಯಾರಿಗೆ ಹೇಳಲಿ ಹಡದವ್ವ ಎನ್ನ ದುಃಖ ||ಪಲ್ಲ||

ಷಂಡನಂತೆ ತಿರುಗ್ಯಾಡುತಾನಾ |

ಭಂಡ ಭಂಡ ಮಾತಾಡುತಾನಾ

ಹೆಂಡ ಕುಡದಂಗ ಒದರ್ಯಾಡುತಾನಾ

ಯಾಸಿಗಣ್ಣಿಲೇ ನೋಡುತಾನಾ ||1||

ಬಾ ಅಂತ ಕರಿದರೆ ಬಾಯಿಮ್ಯಾಲ ಬಡಿತಾನಾ |

ಬಾಳಿ ಹಣ್ಣಿನಂತೆ ನಾ ನಾ

ಕೆಟ್ಟದ್ದು ಸೇರ್ಯಾದ ಇವನಲ್ಲಿ ಅಜ್ಞಾನಾ

ಏನು ಹೇಳಲಿ ನಾ ನಾ ||2||

ಗೊಂಡೆದ ಮೆಟ್ಟು ಮೆಟ್ಟುತಾನಾ |

ರಂಡೇರ ಮನಿಯೊಳು ತಿರುಗ್ಯಾಡುತಾನಾ

ಭಂಡ ಭಂಡ ಮಾತನಾಡುತಾನಾ

ಹುಲಿಯಂಗ ಹಾರಿ ಬರುತಾನಾ ||3||

ಆರು ಮೂರು ರೊಟ್ಟಿ ಒಬ್ಬಳೆ ಮಾಡಿದ್ದೆನ |

ಹೆರತುಪ್ಪ ಹಾಕಿ ಕಲಸಿದ್ದೆ ನಾ ನಾ

ಕರಸಿದ್ಧೇಶಗ ಎಡಿಯ ಮಾಡಿದೆನಾ

ಕಾಯೋ ನೀ ಎನ್ನ ||4||

ಮ್ಯಾಲ್ ಮ್ಯಾಲ್ ಮಾತುಗಳಾಡಿದ್ದು ಬೈಲಾಯಿತೊ |

ಅಂತರಂಗದ ಭಾವನರಿಯದೆ ಸತ್ತು ಹೋಯಿತೊ ||ಪಲ್ಲ||

ಆರು ದುರ್ಗುಣದಲ್ಲಿ ಸೇರಿ ಕೈಸೆರೆಯಾಯಿತೊ |

ಅಟ್ಟ ಅಡವಿಯೊಳಗೆ ಉಳಿದು ಕೆಟ್ಟು ಹೋಯಿತೊ

ಒಡಲೊಳಗಿನ ಗುಟ್ಟನ್ನು ತಿಳಿಯದೆ ಹೋಯಿತೊ ||1||

ಅಟ್ಟ ಅಡಗಿಯ ಗಡಗಿ ಒಡಿದು ಹಾಳಾಗಿ ಹೋಯಿತೊ |

ನಟ್ಟು ನಡು ಮಧ್ಯಾಣದೊಳಗ ಹೊತ್ತು ಹೋಯಿತೊ

ಮುತ್ತು ನಮ್ಮ ಶರಣಾರಲ್ಲಿ ಬೆಳಗಾಯಿತೊ ||2||

ಅರುವಿನಾಲಯದೊಳಗೆ ಅರಿತು ಅರವು ಆಯಿತೊ |

ಗುರುವು ಕರಸಿದ್ಧೇಶನ ಧ್ಯಾನದೊಳು ಗುಣವು ಕೂಡಿತೊ

ಗುರುವು ಕರಸಿದ್ಧೇಶನ ಧ್ಯಾನದೊಳು ಗುಣವು ಕೂಡಿತೊ ||3||

ಸಾರಿ ಚಲ್ಯಾದೋ ಮುಕ್ತಿ |

ಈ ಮುಂಡೆ ಮಕ್ಕಳಿಗೆಲ್ಲಿ ಇರುವಾದೊ ಭಕ್ತಿ ||ಪಲ್ಲ||

ಕಂಡು ಕಂಡು ನಮಗ ಸಾಕಾಯಿತಲಾ |

ಹೆಂಡ ಗುಂಡಕರ ಸಂಗದೊಳು ಉಳಿದೆನಲ್ಲಾ

ಭವ ಭಂಡಾಟ ಬಯಿಲಾಯಿತಲ್ಲಾ ||1||

ಭಗ್ವದ್ಗೀತಾ ಹೇಳುತಾರಾ |

ಭಗಿನಿಯ ಸಂಗ ಮಾಡತಾರಾ

ತಗಬಿಗಿ ಮನಿಯೊಳು ಈಸ್ಯಾಡುತಾರಾ

ಅಗ್ನಿಯೊಳಗೆ ಸುಟ್ಟು ಮಗ್ನರಾಗುತಾರಾ ||2||

ಕಾಮ ಕ್ರೋಧದೊಳು ಕುಣಿದಾಡುತಾರಾ |

ಮಾಯ ಮೋಹದೊಳು ಮನಿ ಮಾಡ್ಯಾರಾ

ಶೃಂಗಾರ ಕಂಡು ಶೀಲವು ಮಾಡ್ಯಾರಾ

ಶಿವಶಿವನೆಂದು ನುಡಿಯುತಾರಾ ||3||

ಹಳಿಯ ಕೋರಿಗೆ ಹೊರತಿರುತಾರಾ |

ಶ್ಯಾಲು ಜಮಕಾನಿ ಹಾಕಿರುತಾರಾ

ಜಾಣೆಯ ಮುಂದೆ ಮಲಗುತಾರಾ

ಜಿಗದ ತೊಟ್ಟಿಲ ಕಟ್ಟುತಾರಾ ||4||

ಹರಹರನೆಂದು ನುಡಿಯುತಾರಾ |

ಹರದೇರಿಗಾಗಿ ದುಡಿಯುತಾರಾ

ಮರಣ ಬಂದಲ್ಲೆ ಮಡಿಯುತಾರಾ

ಹ್ಯಾಂಗಾದಿತ್ತೊ ಜನ್ಮದ ಉದ್ಧಾರಾ ||5||

ಅಲ್ಲ ಸಲ್ಲದ ಸಲಿಸುತ್ತಾರಾ |

ಬೆಲ್ಲದ ಪಾಯಿಸ ಮಾಡುತ್ತಾರಾ

ಮಲ್ಲಿಕಾರ್ಜುನನ ಹೊರತಿರುತಾರಾ

ಮಲ್ಲಮ್ಮನ ಭಕ್ತಿಯೆ ಮೇಲೆನುತಾರಾ ||6||

ಕುಲ ಛಲ ಬಿಟ್ಟು ಕುಲಗೆಡುತಾರಾ |

ಕುಲದವರ ಖುನಕ ಹೊರತಿರುತಾರಾ

ಜಂಗಮ ಕರಸಿದ್ಧಗ ಮರತಿರುತಾರಾ || ಸಾರಿ ||7||

ಬಾರವ್ವಾ ನೀ ಬೀಗುತಿ |

ಮುತ್ತೈದಿ ತಾನಾದಾ ಮೂಗುತಿ

ಆ ಊರಾಗಾ ನೀ ಗರತಿ

ಈ ಊರೊಳಗ ಪತಿವೃತಿ ||ಪಲ್ಲ||

ಎಲ್ಲದರೊಳಗ ನೀ ಮ್ಯಾಲಾ |

ನಿನ್ನ ಮ್ಯಾಲೆ ನನ್ನ ಹಂಬಾಲಾ

ನಿನ್ನ ಅಣ್ಣ ಹೊಂಟಾನಾ ಹಿಂಬಾಲಾ

ಮನದೊಳಗಿಟ್ಟ ಅಂಬಲಾ ||1||

ಚಂದುಳ್ಳ ಮಡಿವೊಂದು ಉಟ್ಟಿದಿ |

ಊರೂರಿಗೆ ನೀ ಭೆಟ್ಟಿ ಕೊಟ್ಟಿದಿ

ಕರಿಬಸವ ಕಡದ ಇಟ್ಟಿದಿ

ಪಂತಿನ ತಾಳಿ ಕಟ್ಟಿದಿ ||2||

ಕೈಲಾಸದೊಳಗ ಮನಿ ಕಟ್ಟಿದಿ |

ಶಿವಶರಣನ ನಾಮವೊಂದಿಟ್ಟಿದಿ

ಸಿದ್ಧರಾಮನ ಪಡದೀದಿ

ರಾಚೋಟೇಶ್ವರನೊಳು ದುಡದಿದಿ ||3||

ಬೆಟ್ಟದಾವರೆ ಹೂವಾಗಿ |

ಬಟ್ಟು ಕುಂಕುವಕ್ಕೆ ನೆಲೆಯಾಗಿ

ಮುತ್ತೈದೆಯರೊಳು ಸೇಲಾಗಿ

ಸರ್ವರೊಳಗೆ ನೀ ಮೇಲಾಗಿ ||4||

ಪುತ್ರಿವಂತಳು ನೀನಾದಿ |

ಪುತ್ರ ಪ್ರೇಮದೊಳು ಮೇಲಾದಿ

ಕರಸಿದ್ಧನಲ್ಲಿ ಜೇಲಾದಿ

ಬಾಲಲೀಲೆಯೊಳು ಕಾಲ ಕಳದಿ

ಗುರು ನಾಮದೊಳು ಹೊತ್ತಗಳದೀದಿ ||5||

ಕಾಲ ಬಿದ್ದು ಕರವು ಹಿಡಿದು ಕರೆದು ತಂದೇನೆ |

ಕಾಯ ಆತ್ಮ ಗುರುವಿನ ಅಂಗದೊಳಗೆ

ಲಿಂಗ ಭರಿಸಿ ಪೂಜೆಗೈದೇನೆ ||ಪಲ್ಲ||

ಭಸ್ಮ ಗಂಧ ಭಸಿತಳಾಗಿ ಪೂಜೆ ಗೈದೇನೆ |

ವ್ಯಸನ ಏಳು ಹಸನ ಮಾಡಿ ಮನಿಯ ತೊಳೆದೇನೆ ||1||

ಧೂಪ ದೀಪ ಕರ್ಪೂರ ಹಚ್ಚಿ ಕಾಯಿ ಒಡೆದೇನೆ |

ಆಶೀರ್ವಾದ ಬೇಡಿ ಉಡಿಯಲ್ಲಿ ಪಡೆದುಕೊಂಡೇನೆ ||2||

ಅಂದಿದೆಲ್ಲಾ ಆಗಲೆಂದು ವರವು ನೀಡ್ಯಾನೇ |

ಮರವಿನ ಜನ್ಮದ ಕತ್ತಲಳಸಿ ಬೆಳಗು ತೋರ್ಯಾನೇ ||3||

ದುಃಖ ಸಾಗರ ದೂರ ಮಾಡಿ ಆಕೃತಿಲಿಂದೆ |

ಕೂಡಿಕೊಂಡು ಸಕ್ಕರಿ ತುಪ್ಪ ಸವಿದುಕೊಂಡೇನೆ

ಚಿಕ್ಕ ಚನ್ನ ಕರಸಿದ್ಧೇಶನ ಪಾದ ಕಂಡೇನೆ ||4||

ಸಂತರ ಭಜನಾ ಮಾಡಾನು ಬರ್ರೆ |

ಸಭೆಯೊಳು ಹೋಗಿ ಕೂಡಾನು ಬರ್ರೆ

ಚಿಂತಿ ಅಳಿದು ನಿಜ ನೋಡಾನು ಬರ್ರೆ

ಆತಗ ಮನ ನೀಡಿ ಬೇಡಾನು ಬರ್ರೆ ||ಪಲ್ಲ||

ಅನಂತ ಕಾಲದಿ ಉಳಿಯನು ಬರ್ರೆ |

ಮನಸ್ಸಿನ ಮೈಲಿಗೆ ಕಳಿಯನು ಬರ್ರೆ

ಗುರುತ ಹಿಡಿದು ನಾವು ಗೆಲಿಯನು ಬರ್ರೆ

ಕರ್ತು ಶ್ರೀಗುರುವಿನ ಧ್ಯಾನವು ನುಡಿರೆ ||1||

ಗುರುಲಿಂಗ ಜಂಗಮ ಗುರುತವ ಹಿಡಿರೆ |

ಗುಪ್ತದೊಳು ಗೂಢಾರ್ಥವು ತಿಳಿರೆ

ಓಂ ಸೋಹಂ ಎಂಬ ನಾಮವ ನುಡಿರೆ

ಪ್ರೇಮದ ಅಮೃತ ಸವಿ ಮಾಡಿ ಕುಡಿರೆ ||2||

ಹಿರಿಸಿನ ಆಟ ಆಡಾನು ಬರ್ರೆ |

ಆರು ಮೂರು ಒಂಬತ್ತು ನೀಡನು ಬರ್ರೆ

ಆತನ ಸಖಿಯರೆ ಜೋಡಾಗಿ ಬರ್ರೆ

ಗುರು ಕರಸಿದ್ಧನ ಕೂಡನು ಬರ್ರೆ ||3||

ಕರುಣಾದಿ ನೋಡೊ ಓಂ ಶ್ರೀ ಗುರುದೇವಾ |

ಕರುಣಾದಿ ನೋಡೊ ನೀನಾ ಶರಣ ಆಗುವೆ ನಾನಾ

ವರಣಾಂಗ ರುದ್ರನ ವಾಸಸ್ಥಾನದಲ್ಲಿ ||ಪಲ್ಲ||

ಅಂಗದೊಳು ನಿಲಿಸೊ ಶ್ರೀಗುರುಹಾರಾ |

ಜಗದೊಳಗಿಂದು ಗೆಲಿಸೊ ಲಿಂಗದೊಳು

ನಿನ್ನ ಧ್ಯಾನಾ ನಿರಂತಾರಾ ನೀನಾ

ಅಂಗದೊಳಗೆ ಎನ್ನ ಅಡಗಿಸೊ ಗುರುರಾಯಾ ||1||

ಬಂಧನದೊಳಗೆ ಶ್ರೀಗುರುರಾಯಾ ಬೆಂದು ಬಂದೇನಾ |

ಕಂದುಗೊರಳ ನೀನಾ ತಂದಿ ಕರಸಿದ್ಧ

ಎನ್ನ ಕಂದನ ರಕ್ಷಿಸಿ ಕರವು ಹಿಡಿಯೋ ನೀನಾ || ||2||

ಶಿಶುವಿನೊಳು ಕೂಡೊ ಹರಸೂರೀಶನ ಹಗಲಿರುಳು ಹಾಡೊ |

ಗುರುಪಾದೀಶ್ವರನ ರೂಪಾ ರುದ್ರಾನೆ ನಿಜ ಭೂಪಾ

ಅದೃಶ್ಯಾದ ಫಣೆಯೊಳು ಅಡಗಿಸೊ ಗುರುರಾಯಾ ||3||

ಎಂಥಾ ಸವಿ ಎಂಥಾ ಸವಿರೆ |

ಸದ್ಗುರುವಿನ ಭಜನಾ

ಎಂಥ ಸವಿ ಎಂಥಾ ಸವಿರೆ ||ಪಲ್ಲ||

ಎಂಥ ಸವಿ ಎಂಥ ಸವಿ ಪಂತಗಾರ ಕಾಂತಾ ಸವಿ |

ಶಾಂತ ರೂಪ ನೀನೆ ಸವಿ ಸಕ್ಕರಿಕ್ಕಿನ ಸವಿ ||1||

ಏಕ ಮಂತ್ರವೆ ಮೂಲ ಸೃಷ್ಟಿ ರಚನಾದ ಕೀಲ |

ಶ್ರೇಷ್ಠ ತಿಳಿದವನೇ ಶೀಲಾ ಆಗೋ ಆತನ ಚೇಲಾ ||2||

ಪಿಂಡಾಂಡದೊಳಗೆ ತಿಳಿ ಮೂರು ಲೋಕದ ಮೂರ್ತಿಗೆ ಕೇಳಿ |

ಕೊರಳೊಳು ಕಟ್ಟಿಕೊ ತಾಳಿ ಗುರು ಪಾದದೊಳು ಊಳಿ ||3||

ನಿಜ ಭಕ್ತಿ ನೀನು ಪುಟ್ಟಿ ಬಸವಣ್ಣನದು ಮಾಡೊ ಭೆಟ್ಟಿ

ಕರಸಿದ್ಧನ ಉದರದಿ ಹುಟ್ಟಿ ಅನಂತ ರೂಪವೇ ತೊಟ್ಟಿ ||4||

ತಿಳಿಯಲಿಲ್ಲವೊ ಗುರುವೆ ತಿಳಿಯಲಿಲ್ಲವೊ |

ನೀ ಮಾಡಿದಾಟವೂ ತಿಳಿಯಲಿಲ್ಲವೊ ||ಪಲ್ಲ||

ತಿಳಿಯಲಿಲ್ಲ ಗುರುವೆ ನಾನು |

ಉಳಿಯಲಿಲ್ಲ ಚರಣಾದೊಳು

ಮರಣ ರಹಿತ ನಿಮ್ಮ ಪಾದದ

ನೆರಳಿನಲ್ಲಿ ಉಳಿದುಕೊಂಡೆ ||1||

ನಿನ್ನ ಬಿಟ್ಟು ಗತಿಯೂ ಇಲ್ಲ |

ಅನ್ಯ ಜಾಗದಲ್ಲಿ ಹುಡುಕಿದರಿಲ್ಲ

ನೋಡೆನೆಂದರ ನಯನಗಳಿಲ್ಲ

ಬೇಡೆನೆಂದರ ಬಾಯಿಯಿಲ್ಲ ||2||

ಹೊತ್ತು ಹಡಿದ ಮಕ್ಕಳಿಲ್ಲ |

ತುತ್ತು ಊಣಿಸುವ ತಾಯಿಯಿಲ್ಲ

ಬತ್ತಲಾಗಿ ಭವಜರಿದು ಹೋಗುವಾಗ

ಕರವು ಹಿಡಿದು ಕರಿಯುವರಿಲ್ಲ ||3||

ನಾನಾ ಜನ್ಮ ಕಳೆದೆನಲ್ಲ |

ಮಾನವ ಜನ್ಮದಿ ಉಳಿದೆನಲ್ಲ

ಜ್ಞಾನ ಶೂನ್ಯನಾಗಿ ನಾನು

ಮರವಿನೊಳು ಕೆಟ್ಟೆನಲ್ಲ ||4||

ಹಿಂದೆ ನೋಡಲು ಏನೂ ಇಲ್ಲ |

ಮುಂದಾಗುವ ಅರಿವು ಇಲ್ಲಾ

ಬಂಧನದಿಂದ ನೀಗಲಿಲ್ಲ

ಭ್ರಮೆಯೊಳಗೆ ಬಿದ್ದೆನಲ್ಲಾ ||5||

ಅಂದ ಚಂದ ಒಂದು ಇಲ್ಲಾ |

ಬಂಧು ಬಳಗ ಯಾರು ಇಲ್ಲಾ

ಕಂದುಗೊರಳ ಕರಸಿದ್ಧೇಶನ ಕಂಡು

ಹೊತ್ತುಗಳಿದೆನಲ್ಲಾ ||6||

ಗಂಡನಾಜ್ಞಾ ಮೀರಿ ನಾನು ಕಂಡ ಕಡೆಗೆ ತಿರುಗಿದೆನೊ |

ಭಂಡರಂಡಿಯೆಂದು ಆತ ಬೈದಿದಾನೆ ಎನಗೆ ||ಪಲ್ಲ||

ಬ್ರಹ್ಮಲಿಖಿತ ಬರೆದ ಗಂಡ |

ಬಂದು ಎನಗೆ ಮಾಡಿಕೊಂಡಾ

ಆತನಿಂದೆ ಸುಖವು ನಾನು ಬಹಳ ಕಂಡಿದೆ

ವ್ಯಾಳೆ ವ್ಯಾಳೆಕೆ ಯಾರೊ ಎನಗೆ ಒಳ್ಳಿದ್ಹಾಂಗೆ ಕೇಳುತಾದ

ಕರ್ಣದೊಳಗೆ ವಾಲಿ ಜಮ್ಕಿ ಒಬ್ಬಳಿಟ್ಟಿದ್ದೆ ||1||

ವೈಶ್ಯಾಂಗಿನಿಯಾಗಿ ನಾನು ಏಸು ರೂಪವನ್ನು ತಾಳಿ |

ಈಶ ನಿಮ್ಮ ನಾಮದೊಂದು ಚಂದ್ರ ಧರಿಸಿದ್ದೆ

ವಾಸ ಮಾಡಿದೆ ಶಿರದ ಮೇಲೆ

ಲೇಸಾದ ದಂಡಿಯು ಮುಡಿದು ಧ್ಯಾಸವಿಟ್ಟು

ಸುಷುಮ್ನಾದಿ ಸುಮ್ಮನಾ ಇದ್ದೆ ||2||

ಕನ್ನಡಿಯೊಳಗೆ ನಿನ್ನ ರೂಪ |

ಚಂದ್ರ ಜ್ಯೋತಿಯಂತೆ ದೀಪ

ರಂಗು ಮಂಟಪದಲ್ಲಿ ರಂಭಿ ನಿಲಿಸಿಕೊಂಡಿದ್ದೆ

ಜಂಗಮಯ್ಯ ನಿಮ್ಮ ರೂಪ

ನಂಬಿಕೊಂಡು ಬಂದೆ ನಾನು

ಸಾಂಬ ಕರಸಿದ್ಧೇಶನ ನಿನ್ನ ಮಗಳು ನಾನಿದ್ದೆ ||3||

ಗೂಡಿನೊಳು ಗೂಗಿ ಸೇರಿತ್ತೊ |

ಗೂಗಿಯು ಸೇರಿತ್ತು ಯೋಗಿಗೆ ಮೀರಿತ್ತೊ

ಭೋಗಿಗೆ ನಿಲುಕಾದೆ ತ್ಯಾಗಿಯಾಗಿ ಉಳದಿತ್ತು ||ಪಲ್ಲ||

ಕತ್ತಲಿಯೊಳಗಿತ್ತು ಈ ನಾಡೆಲ್ಲಾ

ಬೆಳಗವ ಧರಿಸಿತ್ತು ಫಲದ ಮೇಲೆ ಚಿತ್ತೋ

ತಿಂದು ಗಳದಿತ್ತೊ ಹೊತ್ತೊ ||1||

ಆರು ಶಾಸ್ತ್ರ ಹೇಳುತಿತ್ತೊ |

ಹದಿನೆಂಟ ಪುರಾಣ ಅದಕ ಗೊತ್ತೊ

ಭವದೊಳಗ ಬಿತ್ತೊ ಜಗವು ಅದರ ಸುತ್ತೊ ||2||

ಮುಕ್ತಿಯನ್ನ ಬೇಡತ್ತಿತ್ತೊ

ಮೂಲ ಬಸವ ನಾನೆ ಅಂತಿತ್ತೊ

ಭಕ್ತ ವರದ ಕರಸಿದ್ಧನ ನಾಮ ಭಜಿಸಿತ್ತೊ ||3||

ಲೋಕದಾಶೆ ಸಾಕು ಮಾಡೊ |

ಪೊರಿಯೊ ಸಿದ್ಧರಾಮನೆ

ಕಾಕು ಗುಣದ ಕಾಕು ಮನದ

ಭ್ರಮೆಯು ಕೊಂದ ದೇವನೆ ||ಪಲ್ಲ||

ತನುವು ಮನವು ಧನವು ಎಲ್ಲಾ |

ನೆನವಿನೊಳಗೆ ಇಟ್ಟೆನೋ

ಮಾಯಾ ಮೋಹಯೆಂಬೊ ಮರವು

ಮನಸ್ಸುವೊಂದು ಸುಟ್ಟೆನೊ ||1||

ಆರು ತತ್ವದ ಅರಿವು ವ್ಯಸನ ಅಳಿಸಿ |

ಹಸನ ಮಾಡಿದ ಸಾಂಬನೆ

ಬಸವ ನಿಮ್ಮ ಜಪವು ಮಾಡಿ

ತಪವಗೈದ ತರುಳನೆ ||2||

ಭಕ್ತಿ ಬೀಜವನ್ನು ಬಿತ್ತಿ |

ಬೆಳೆಯ ಮಾಡಿದಾತನೆ

ಮಾತು ಮಾತಿಗೆ ಮಹಿಮೆ

ತೋರಿದ ಕರಸಿದ್ಧೇಶಾ ದೇವನೆ ||3||

ಏಕೋ ವ್ರತ ಜ್ಯೋತಿಯ ವಾಹನನಿಗೆ ಎತ್ತುವೆ ಆರತಿ |

ನಾ ಬೆಳಗುವೆನಾರುತಿ ||ಪಲ್ಲ||

ಭಾವಪೂರಿತ ಭಕ್ತಿಯ ನಾಥಗೆ |

ಬೆಳಗುವೆನಾರುತಿ ಶಿವಾ ಶಿವಾ

ಮಂಗಳ ಮೂರುತಿ ||1||

ಕಾಮಧೇನು ಕರುಣಾ ಸಾಗರ |

ಮರಣ ರಹಿತ ಮಹಾದೇವಾ

ನಿಮಗೆ ನಾ ಬೆಳಗುವೆನಾರುತಿ ||2||

ತ್ರಿವಿಧ ರೂಪನೆ ಲೋಕ ನಾಮಕನೇ |

ಗಗನ ಮಧ್ಯದಿ ಬೆಳಗು ತೋರಿದ

ಕಲ್ಲು ಮಠದ ಕರಸಿದ್ಧನ ಪಾದಕೆ

ಬೆಳಗೂವೆನಾರುತಿ

ಶಿವಾ ಶಿವ ಮಂಗಳ ಮೂರುತಿ ||3||

ಪತಂಗ ಹಾರುತಿದೆ ಪಂಚರಂಗಿ ಪತಂಗ ಹಾರುತಿದೆ

ಪತಂಗ ಹಾರುತಿದೆ ಆತಂಕವಿಲ್ಲದೆ ವಾತಂಗ ಆಧಾರ ಮೇಲೆ

ಭೂತಂಗ ಅಂಬರದೊಳು ||ಪಲ್ಲ||

ಭವಕಾಲ ಕಾಲದಿಂದೆ ಗಾಳಿಪಟ ಭವವ ದಾಟಿ ಬಂದು

ನವಮಾಸದಿಂದಾದ ಅವಧಿ ಗಾಳಿಪಟ

ಭುವನದೊಳು ಆಡುವ ಶಿವ ಜೀವರಾಟದಿ ||1||

ಪಂಚತತ್ವ ಎಂಬ ಪಂಚವರ್ಣದ ಪತಂಗ ಬಿಂಬಾ

ಮುಂಚೆ ಹಳದಿ ಬಿಳಪು ಮಿಂಚು ಹಸರುಮಾಯಿ

ಹಂಚಿಕೆಯಿಂದಾದ ಸಂಚಿತ ಕರ್ಮದಿ ||2||

ನಡುಗಂಭ ನಾಡಿಯು ಈಡಾಪಿಂಗಳ ಸೇರಿದಂಬು

ನಡುಸೂತ್ರ ಸುಷುಮ್ನ ಬುಡದಿ ಬಾಲವು ಮಾಡಿ

ಹೆಡೆಯೆತ್ತಿ ಕೂಡಲಿ ಸರ್ಪವು ಮೇಲಕ್ಕೆ ||3||

ದುರಿತ ದುರವಿಷಯೆಂಬಾ ಮೋಹ ಭ್ರಾಂತಿಯೊಳು

ಮರವಿ ಮಾಯ ಪಾಳ ಬಿರುಗಾಳಿಯಿಂದಲಿ

ಪರಿಭಾವ ಚಕ್ರಕ್ಕೆ ತಿರುಗಿಸಲಾಗದೆ ||4||

ಗುರುವರ ಕರಕಂಜದಿ ಈ ಪಟವು ಗುರು ಕರುಣದಿಂದ

ವರಶಿವ ಶರಣರ ವರಸಂಗದೊಳಾಡಿ

ಸ್ಥಿರಮುಕ್ತಿ ಸ್ಥಾನೆಂಬೊ ಬರಿಯ ಬೈಲೊಳು ಸೇರಿ ||5||

ಪರಮ ವೈರಾಗ್ಯದಿಂದೆ ನಿರ್ಭಯದಿ ವರಭಕ್ತಿ ಜ್ಞಾನದಿಂದೆ

ಉರುತರ ಉನ್ಮನಿಯೊಳು ನಿರುತದಿಂದಲಿ ಸೇರಿ

ಪರತರಾನಂದದಿ ಪರವಶನಾಗಿಯು ||6||

ಧರೆಯೊಳು ಹಿಪ್ಪರಗಿ ಶರಣರ ಚರಣಕ್ಕೆ ಶಿರಬಾಗಿ

ವರಶಾಂತ ಮೌನದಿ ಚರಿಸುತ ಅಂತ್ಯದಿ

ಗುರುಸಿದ್ಧನೊಳು ಕೂಡಿ ಪೂರ್ಣನಾಗಿ ಉಳಿದು ||7||

ಹಿಂದ ಯಾರೂ ಇಲ್ಲೋ

ಮುಂದ ಯಾರೂ ಇಲ್ಲೋ

ಅಂದು ಇಂದು ಎಂದೆಂದಿಗು

ನೀನೊಬ್ಬನೆಯಲ್ಲೋ ||ಪಲ್ಲ||

ಹಿಂದ ನೀನು ಬಂದುದೆಲ್ಲಿ ಮುಂದ

ನೀನು ಹೋಗೂದೆಲ್ಲಿ

ಹಿಂದ ಮುಂದ ಯಾರೂ ಇಲ್ಲೊ

ಎಂದಿಗಾದರೂ ಒಂದೆ ನೀನು ||1||

ಇಂದೂಧರ ನಂದಿವಾಹನನ

ಛಂದದಿಂದ ಭಜನಿ ಮಾಡೊ

ಹಿಂದ ಮುಂದ ಭೇದವ್ಯಾಕೊ

ಮುಂದಿನದನ್ನು ತಿಳಿಯೋ ನೀನು ||2||

ಸೃಷ್ಟಿಯೊಳು ಹುಟ್ಟಿ ಬಂದು

ಶ್ರೇಷ್ಠ ಮಾನವ ಜನ್ಮದೊಳು

ನಿಷ್ಠೆಯಿಂದ ಶಿವನ ಭಜಸಿ

ಶ್ರೇಷ್ಠ ಮುಕ್ತಿ ಪಡೆಯೊ ನೀನು ||3||

ಹುಟ್ಟಿ ಬಂದ ಮೇಲೆ ಗೇಣು

ಹೊಟ್ಟೆಗಾಗಿ ದುಡಿದು ಪ್ರಾಣಾ ಬಿಟ್ಟು

ಹೋಗುವಾಗ ನಿನಗ ಒಡ ಹುಟ್ಟಿದವರಾರೂ

ಇಲ್ಲೊ ತಿಳಿಯೊ ತಮ್ಮಾ ||4||

ಜನಿಸಿದಾಗ ತಾಯಿ ತಂದಿ

ನೆನಸಿದಾಗ ಹೆಂಡತಿ ಮಕ್ಕಳು

ಕನಸಿನಂತೆ ಸಂಸಾರವಿದು

ಮನಸಿನಲ್ಲಿ ತಿಳಿಯೋ ನೀನು ||5||

ಒಂದೆ ಮಾನವ ಜಾತಿಯೊಳು

ನಿಂದೆ ಭೇದವನ್ನು ಮಾಡಿ

ಮುಂದೆ ನಾನಾ ಜನ್ಮದೊಳು

ಬಂದು ಕೆಡಬೇಡೋ ತಮ್ಮಾ ||6||

ಅಂದವಾಗಿ ಕಾಣುವುದು

ಬಂಧುರಾ ಹಿಪ್ಪರಗಿ ಊರಾ

ತಂದಿ ಶರಣ ಶಿವಲಿಂಗೇಶನ

ಹೊಂದಿ ಮುಕ್ತಿ ಪಡಿಯೋ ನೀನು ||7||

ಜ್ಞಾನದಿ ತಿಳಿಯೊ ಮೌನದೊಳು ಸುಳಿಯೊ

ನಾನು ನೀನೆಂಬುದ ಭೇದವನಳಿಯೊ ||ಪಲ್ಲ||

ಮುಕ್ತಿಗೆ ಮೂಲಾ ಶ್ರೀಗುರು ಶೀಲಾ

ಭಕ್ತಿಯಿಂದ ನಿಜ ವಿರಕ್ತಿಯ ಲೋಲಾ ||1||

ನುಡಿಯಂತೆ ನಡಿಯೋ ಈ ಜನ್ಮ ಕಡಿಯೋ

ಮೃಢನ ಭಜಿಸಿ ನೀ ಭವ ಬೇರ ಕಡಿಯೊ ||2||

ಶರಣರ ಸಂಗಾ ತಿಳಿ ಅಂತರಂಗಾ

ಹರಿವದು ಮಾಯಾ ಮೋಹ ತರಂಗಾ ||3||

ಅನುಮಾನದೊಳಗೆ ದಿನಗಳಿಯದೆ ನೀ

ಮನದೊಳು ನೆನಿ ಶಿವ ಘನ ಸುಖವನ್ನು ||4||

ಧಾತ್ರಿಯೊಳು ಹಿಪ್ಪರಗಿ ಕ್ಷೇತ್ರ ಶಿವಲಿಂಗದ

ನೇತ್ರದಿಂದ ನೋಡಿ ಪಾತ್ರನಾಗೆಲೊ ಬೇಗ ||5||

ಬರಿಯ ಸಂಸಾರಕ ಭ್ರಾಂತನಾಗಿ ತಮ್ಮಾ

ಚಿಂತಿ ಮಾಡತಿ ಸುಮ್ಮ ಸುಮ್ಮ

ಬರಿಯ ಚಿಂತಿಗಾಗಿ ಸೊರಗಬೇಡೊ ತಮ್ಮಾ

ಮರಿಗಿ ಹೋಗತಿ ಸುಮ್ಮ ಸುಮ್ಮ ||ಪಲ್ಲ||

ಹೊನ್ನು ಹೆಣ್ಣು ಮಣ್ಣು ಹಗಲು ಇರುಳು

ಚಿಂತಿ ಅದರೊಳಗೆ ಕುಂತಿ

ಕಣ್ಣ ಮುಚ್ಚುತ ಕಣ್ಣ ತೆರೆಯುತ

ಏನ ಮಾಡಲೆಂತಿ ಕಣ್ಣ ಮುಚ್ಚಿ ಬಾಯಿ ತೆರಿತಿ ||1||

ನನ್ನ ಭೂಮಿ ಮನಿ ಧನವು ನನ್ನದೆಂದಿ

ನಿನ್ನ ಸತಿ ಸುತರು ಹಿತರೆಂದಿ

ಹೊನ್ನು ಕನಕವು ನನ್ನದು

ನನ್ನ ನನ್ನದೆಂದೆಲ್ಲಿಗೆ ಹೋದಿ ||2||

ಕಾರಮಿಂಚಿನಂತೆ ತೋರಿ ಅಡಗುವ ತನುವೊ

ನಿನ್ನ ಸತಿಸುತ ಧನವೊ

ಕ್ಷಣ ತೋರುತ ಕ್ಷಣ ಅಡಗುತ ಭೂರಿಭಾಗ್ಯ

ಸುಖ ತೋರಿ ಅಡಗುವ ಜಗವೊ ||3||

ಅಳ್ಳಿಮುದ್ದಿ ಕಂಡ ಬೆಕ್ಕು ಬೆಣ್ಣೆಯೆಂದು ತಿಳಿದು

ಸುಳ್ಳೆ ಬಾಯಿ ಹಾಕಿ ಸತ್ತಿತು

ತಿಳಿ ಇದರಂತೆ ಮಳ್ಳ ನಿನ್ನ ಭ್ರಾಂತಿ

ತಳ್ಳೊ ಸಂಸಾರ ಚಿಂತಿ ಸುಳ್ಳೆ ಹಚಗೊಂಡು ಕುಂತಿ ||4||

ಹೇಸಿ ಸಂಸಾರಕ ಆಸಿ ಮಾಡಬೇಡೊ

ಘಾಸ್ಯಾಗತೈತಿ ನೋಡೊ

ಮೋಸ ಹೋಗದೆ ಘಾಸಿಯಾಗದೆ

ಈಶನಾಮ ನುಡಿಯೊ ಭವಪಾಶವ ಕಡಿಯೊ ||5||

ಮುದ್ದ ಹಿಪ್ಪರಗಿ ಶರಣ ಶಿವಲಿಂಗ

ಸಿದ್ಧಾರೂಢನ ಕೂಡೊ

ಉದ್ಧಾರಾಗುತ ಸಿದ್ಧನ ನೆನೆಯುತ

ಆದ್ಯರ ವಚನ ಪಾಡೊ ಒದ್ದಾಡಲಿ ಬೇಡೊ ||6||

ಧರಿಯ ಭೋಗವು ನಂಬಿ ಕೆಡದಿರು ಎಲೆ ಮನಜ್ಯಾ

ಪರ ತತ್ವದರಿವನು ತಿಳಿಯದೆ ನೀನು ||ಪಲ್ಲ||

ತನುವು ವನಿತಾದಿ ವಿಷಯಗಳ ಚಿಂತಿಸಿ

ಘನ ತಾಪದೊಳು ಬೆಂದು ತೊಳಲಿ ಬಳಲಿದೆ

ಕನಸಿನ ಪರಿ ಮಿಥ್ಯ ಸಂಸಾರ ಸುಖವಿದು

ಮನದೊಳರಿಯದೆ ನಿತ್ಯ ಸುಖವನೆ ಭಾವಿಸಿದೆ ||1||

ಹಿರಿಯ ಸಂಪದ ಸುಖಕ್ಕೆಳಸಿ ಮೋಹಿನಿ ಮನ

ಮರಗಿ ಸ್ವರಗಿ ಹಣ್ಣಾದೆಲೊ ನೀನು

ಬರಿಯ ಚಿಂತೆಯ ಮಾಡಿ ಸುಖವ ಕಾಣದೆ ಮುಂದೆ

ಮರಳಿ ದುಃಖದಿ ಬೆಂದು ಸಾವುದುಚಿತವು ನೀ ||2||

ಪರಧನ ಪರಸತಿಯರ ಕಂಡು ಮೋಹಿನಿ

ವರನೆಲ್ಲಾ ಅಪಹರಿಸಿ ಭೋಗಿಸುತ

ಮರವಿ ಮಾಯಾಪಾಶದೊಳು ಬಂದುವಿಡಿದು

ದುರಿತು ಕಾಲನ ಬಾದಿಗ್ವಶನಾಗುತ ||3||

ಹಲವು ಪರಿ ವಿಷಯಾದಿ ಜಗದ ಭೋಗವನೆಲ್ಲಾ

ಸಲೆ ಬಿಡದೆ ಭೋಗಿಸಿ ಮತ್ತೆ ಮೋಹಿಪರೆ

ಬಲು ಸಾಕು ಮಾಡಿನ್ನು ವಿಷಯ ಭ್ರಾಂತಿಗಳಿಂದ

ಹಲವು ಜನ್ಮಗಳಲ್ಲಿ ತಿರುಗುದುಚಿತವೆ ನೀ ||4||

ನರಜನ್ಮದಿಂದಿನ್ನು ಮಿಗಿಲುಂಟೆ ಧರಿಯೊಳು

ಬರಲಾರದಿದನೊಮ್ಮೆ ಬಂದ ಮೇಲೆ

ಮರಿಯದೆ ಪಡಿ ಮುಕ್ತಿ ಗುರುಸಿದ್ದ ಕರುಣದಿ

ಮೆರಿವ ಹಿಪ್ಪರಗಿಯ ಶರಣ ಸಂಗದೊಳರಿ ||5||

ಘಟವು ನಂಬಬೇಡೊ ಸಟೆ ಇದು ಘಟವು ನಂಬಬೇಡೊ

ಘಟವು ನಂಬಬೇಡಾ ಘಟದೊಳಗಿರುವಂಥಾ

ದಿಟವನರಿದು ನಿಟಿಲಾಕ್ಷನ ಭಜಿಸೋ ನೀ ||ಪಲ್ಲ||

ಪಂಚ ಭೂತದೀ ಘಟವು ಹುಟ್ಟಿದಾ

ಪಂಚ ವಿಶಂತಿ ತತ್ವದಿ

ಸಂಚಿತ ಕರ್ಮದಿ ಭೋಗವ ಭೋಗಿಸಿ

ವಂಚಿಸಿ ಅಡಗಿರ್ದ ಮಿಂಚಿದ ತೆರದಿ ||1||

ಮಲ ಮೂತ್ರ ರಕ್ತ ಮಾಂಸದಿ ಈ ದೇಹವು

ಎಲುವು ಸುತ್ತಿದಾ ನರಗಳ ಬಲಿದು ತನುವಿದು

ಎಲುವು ಚರ್ಮದ ಹೊದ

ಹಲವು ಜನ್ಮಗಳಲ್ಲಿ ತೊಳಲುತಿಹುದು ||2||

ಬಾಲ ಪ್ರಾಯ ಮುಪ್ಪು ಈ ಕಾಯಕೆ

ಕಾಲಗತಿಗಳುಂಟು

ಸ್ಥೂಲ ತನುವೆನಿಸಿಹುದು ಮಾಯದ

ಜಾಲದೊಳಗೆ ಬಹು ಕಾಲದಿ ಬಳಲುವಾ ||3||

ಜನನ ಮರಣ ರುಚಿಯ ದೇಹಕ್ಕೆ

ಘನ ತಾಪತ್ರಯಗಳುಂಟು ತನುವಿದು ಪರಿ ತಿಳಿ

ತನವು ತಾನೆನ್ನದೆ

ಮನದೊಳು ಅರಿ ನಿಜಸಿದ್ಧನ ಸುಖವನು ||4||

ನಂಬಿದರೆ ನಂಬೊ ಏ ಮನುಜ

ನಂಬೋ ಶ್ರೀಗುರು ಸಿದ್ಧನ

ಕುಂಭಿನಿಯೊಳು ಬಹು ಸಂಭ್ರಮ ಹಿಪ್ಪರ್ಗಿ

ಶಂಭೋ ಶರಣರ ನಂಬಿ ಭಜಿಸೊ ನೀ ||5||

ಸುಮ್ಮನ ಕುಂಡರಬೇಡೊ ಏ ಮನುಶ್ಯಾ

ಹಮ್ಮಿನೊಳಗ ನೀನು

ಸುಮ್ಮನ ಕುಂಡರಬೇಡಾ ಹಮ್ಮೀಲೆ ಕೆಡಬೇಡಾ

ನಿನ್ನ ನಿಜವು ನೀ ತಿಳಿಯದೆ ಮೂಢಾ ||ಪಲ್ಲ||

ಹಿರಿಯ ಸಂಪದ ಸುಖವು ನೀ ಮೆಚ್ಚಿ

ಮರುಳನಾದೆಲೊ ಹುಚ್ಚಾ

ಶರೀರ ಸತಿಯ ಸುತ ಮೋಹ ಭ್ರಾಂತಿಯೊಳು

ಬರಿದೆ ಚಿಂತೆಯಲ್ಲಿ ಮೈಮರೆತು ನೀ ||1||

ಪರರ ಮನವ ನೋಯಿಸಿ ನಿಂದಿಸಿ

ಪರಿತಾಪವ ಪಡಿಸಿ

ಪರಿಪರಿ ಕಷ್ಟಕೆ ಗುರಿಯಾಗದೇ

ಪುರಹರ ನಾಮವು ನೆನಿಯದೇ ಮನುಜಾ ||2||

ದೀನ ಜನರ ಕಂಡು ಮರುಗದೆ

ಶ್ವಾನನಂತೆ ಬೊಗಳಿ

ನಾನಾ ದುಃಖದಿಂದ ಹೊಂದದೇ ನೀ ಶಿವ

ಧ್ಯಾನದೊಳನುದಿನ ಸುಖ ಪಡಿಯದೆ ನೀ ||3||

ಅಷ್ಟಮದವ ಹಮ್ಮು ಬಿಮ್ಮು

ನಷ್ಟಗೊಳಿಸು ತಮ್ಮಾ

ದುಷ್ಟದುರ್ಗುಣಗಳು ದೂರಮಾಡಿ ಶಿವ

ನಿಷ್ಟಿಯಿಂದಲಿ ನಿಜ ತಿಳಿಯದೆ ಮೂಢಾ ||4||

ಧರಿಯೊಳು ಹಿಪ್ಪರಗಿ ಶಿವಲಿಂಗಾ

ಶರಣ ಸಿದ್ಧಯೋಗಿ

ವರಗುರು ಕರುಣವ ಪಡಿತಯುತ ಬೇಗದಿ

ಸ್ಥಿರಮುಕ್ತಿಯ ಸುಖ ಸೌಖ್ಯವ ಪಡಿ ನೀ ||5||

ನಿಶ್ಚಿಂತನಾಗಬೇಕಾದರ ಮನ

ದುಶ್ಚಿಂತಿ ವ್ಯಸನವ ಕಳದಿರಬೇಕೊ

ಸಚ್ಚಿದಾನಂದ ರೂಪದೊಳಗ ತಾ

ನಿಶ್ಚಲನಾಗಿ ಕುಳತಿರಬೇಕೊ ||ಪಲ್ಲ||

ಕಾಮಿನಿಯರ ಮನ ಮೋಹದಿ ನೂಕುವ

ಪಾಮರ ಗುಣಗಳು ಸುಟ್ಟಿರಬೇಕೊ

ನಾಮ ರೂಪದಿ ತೋರುವ ಜಗವಿದು

ನೇಮದಿ ಮಿಥ್ಯವು ತಿಳಿದಿರಬೇಕೊ ||1||

ಮಡದಿ ಮಕ್ಕಳೆಂಬೊ ಮೋಹದ ಭ್ರಾಂತಿ

ಬಿಡದೆ ಧನದ ಲೋಭ ಕಡದಿರಬೇಕೊ

ಮೃಢಹರ ನಾಮವು ನುಡಿಯುತ ಮನದಿ

ದೃಢ ಮುಕ್ತಿಯ ಸುಖ ಪಡೆದಿರಬೇಕು ||2||

ಮನಸಿನ ವಿಷಯದಿ ವಾಸನೆಗಳನು

ಕನಸಿನ ಪರಿಯಂದರಿಯಲು ಬೇಕೊ

ಮಲಹರ ರೂಪವು ನಿಲಿಸುತ ಚಿತ್ತದಿ

ಬೆಳಗುವ ಪ್ರಭೆ ತಾ ನೋಡಿರಬೇಕೊ ||3||

ಆಸನ ಸ್ಥಿರನಾಗಿ ಸೂಸುವ ಮನವನು

ನಾಸಿಕಾಗ್ರ ದೃಷ್ಟಿ ಇಟ್ಟಿರಬೇಕೊ

ಸಾಸಿರ ರವಿ ಶಶಿ ಕೋಟಿ ಬೆಳಕಿನೊಳು

ಘೋಷ ಝೇಂಕಾರ ಕೇಳಿರಬೇಕೊ ||4||

ಆರು ಚಕ್ರವನು ಏರು ಸುಷಮ್ನಿಯ

ದ್ವಾರುದೊಳಗೆ ತಾ ಸೇರಲೆಬೇಕೊ

ಮೀರಿದ ಉನ್ನತಿ ತಾರಕ ಬ್ರಹ್ಮದಿ

ಬೆರಲಾಗದೆ ತಾ ಸುಳದಿರಬೇಕೊ ||5||

ಮೇದಿನಿಯೊಳು ಬಹು ಮೋದದಿ ಕಾಣುವ

ಮಾಧನಪುರ ತಾ ಸೇರಲಿ ಬೇಕೊ

ಸಾಧು ಶರಣ ಗುರುಸಿದ್ಧಲಿಂಗನೊಳು

ಭೇದವಿಲ್ಲದೆ ತಾ ಬೆರದಿರಬೇಕೊ ||6||

ಸುಮ್ಮನೆ ಕಾಲವ ಕಳಿಯಬೇಡೊ

ಹಮ್ಮಿನೊಳಗೆ ನೀ ಕೆಡಬೇಡೊ

ಒಮ್ಮೆರೆ ಶಿವ ನಾಮವು ನುಡಿಯ ಪರ

ಬ್ರಹ್ಮನ ನಿಜ ರೂಪವ ತಿಳಿಯೊ ||ಪಲ್ಲ||

ಅನಂತ ಜನ್ಮವ ತಿರಗಿ ತಿರಗಿ

ಮಾನವಜನ್ಮದೊಳು ನೀ ಬಂದಿ ಮರಗಿ

ನಾನ್ಯಾರೆಂಬುದು ತಿಳಿಯದೆ ಕುಂತಿ

ಹೀನ ಸಂಸಾರಕ ನೀ ಮನ ಸೋತಿ ||1||

ತನು ಮನ ಧನದಾಶಿಯಲಿಂದ

ಅನುತಾಪದೊಳಗೆ ನೀ ಬೆಂದೆ

ಮನಮುನಿಗಳೆಲ್ಲಾ ಇದರಿಂದ ಬಿಟ್ಟು

ಘನ ಸುಖ ಪಡಿದಾರೊ ಆನಂದ ||2||

ಇಂದು ನಾಳೆ ಸಂದೇಹವ್ಯಾಕೊ

ಮುಂದೆಂದಿಗು ನಿಜ ತಿಳಿಯಬೇಕೊ

ನಿಂದೆ ಕುಹಕ ನುಡಿ ಬಿಡಬೇಕೊ

ನಿನ್ನ ಮಂದ ಬುದ್ಧಿ ಕಡಿಯಕ ನೂಕೊ ||3||

ಅನುಮಾನದೊಳ ದಿನ ಸನಿ ಬಂತೊ

ಮನಸಿನ ಭ್ರಾಂತಿ ಉಳದಾಯಿತೊ

ಕನಸಿನ ಪರಿ ಸಂಸಾರ ಚಿಂತ್ಯೋ ತಮ್ಮಾ

ನೆನಸೀ ನೆನಸೀ ಸಣ್ಣಾಗಿ ಕುಂತ್ಯೋ ||4||

ಧರಿಯೊಳು ಮಾಧನ ಹಿಪ್ಪರಗಿ

ಶರಣರ ಪಾದಕ ನೀ ಎರಗಿ

ಸ್ಥಿರ ಮುಕ್ತಿಯ ಸುಖ ಪಡಿ ಬೇಗ

ಗುರು ಸಿದ್ಧನ ರೂಪವೇ ನೀನಾಗಿ ||5||

ನಂದು ನಂದೆನಲು ಬೇಡಾ

ನಿಂದೇನೇನಿಲ್ಲ ತಿಳಿ ಜಡಮೂಢಾ

ನಂದು ನಂದೆಂದು ಅಂಧಾ ಧುಂದಿನೊಳು

ಸುಂದ ಬ್ಯಾನಿ ತೆಲಿಗೇರೇದ ಪಾಡಾ ||ಪಲ್ಲ||

ನಾನಾ ಜನ್ಮವನು ತೊಳಲಿ ಬಳಲಿ ನೀ

ಮಾನವ ಜನ್ಮಕೆ ಬಂದಿದಿ ಮರುಳೇ

ನೀನು ಜಗದೊಳು ಜನಸಿ ಬರುವಾ

ಏನೇನೂ ತಂದಿಲ್ಲಾ ಸುಳ್ಳ ಸುಳ್ಳೇ ||1||

ಹೊನ್ನ ಹೆಣ್ಣು ಮಣ್ಣು ನನ್ನದೆಂದು ಬಲು

ಕಣ್ಣು ಕಿಸಿದು ಅನ್ನಲಿಬೇಡಾ

ನಿನ್ನ ತನವು ನಿನ್ನಗಲಿ ಹೋದ ಮೇಲೆ

ಹೊನ್ನ ಹೆಣ್ಣು ಮಣ್ಯಾರ ಪಾಲೋ ||2||

ಸರ್ವ ಸಂಪತ್ತ ಐಶ್ವರ್ಯ ಭೋಗವು

ಸರ್ವನೆಲ್ಲಾ ನಂದೆನುಬೇಡಾ

ಸರ್ವ ಸೃಷ್ಟಿಕರ್ತ ದೇವನೆನ್ನದೆ

ಗರ್ವದಿಂದ ಮೆರಿಯಲಿ ಬೇಡಾ ||3||

ನಂದ ನಂದೆಂದು ಅಂದ ರಾವಣ

ಬೆಂದು ಬೂದಿಯಾಗಿ ಹೋದನು

ನಿಂದೇ ನಿಂದೇ ದೇವಾ ಅಂದ ವಿಭೀಷಣಾ

ಛಂದದಿ ಚಿರಸುಖಿ ಆದನು ||4||

ನಾನೇ ಎನ್ನುವ ಅಹಂಕಾರಿ ದುರ್ಯೋಧನಾ

ಮಾನಹಾನಿಯಾಗಿ ಹೋದನು

ನೀನೇ ನೀನೇ ಕೃಷ್ಣಾ ಅಂದ ಪಾಂಡವರು

ಮಾನ್ಯ ಜಗದಿ ಧನ್ಯರಾದರು ||5||

ನಂದೇನಾದ ಇಲ್ಲಿ ಅಂದ ಸಂತರು

ನಂದದಿ ನಿತ್ಯ ಮುಕ್ತರಾದರು

ನಂದೆಯೆಂದು ಮುಂದೆಂದೆನ್ನದೆ

ಇಂದುದ್ದರನು ಬೆರದಿಹರು ಶರಣರು ||6||

ನಂದೇ ಎನ್ನುವ ಅಭಿಮಾನ ಕಡಿ ನೀ

ಮುಂದಿನ ಜನ್ಮದ ಬಂಧನಾ

ಛಂದ ಹಿಪ್ಪರಗಿ ಶರಣಸಿದ್ಧನನು

ಹೊಂದಿ ಮುಕ್ತಿ ಸುಖ ಪಡಿ ಅಣ್ಣಾ ||7||

ಆ ಪರಶಿವ ನೀ ನೋಡೊ | ಶಿವ

ರೂಪ ಶರಣರೊಳಾಡೋ

ಕೋಪವು ಶಾಂತವು ಮಾಡೋ | ಭವ |

ತಾಪತ್ರಯಗಳು ದೂಡೆಲೋ ತಮ್ಮಾ ||ಪಲ್ಲ||

ನೋಡುವೆನೆಂದಾಲಸ್ಯಾನಿ

ಮಾಡದೆ ನೋಡೋ ಈಶಾ

ರೂಢಿಯೊಳಗ ಬಂದು ವಾಸಾ ಮಾಡೀ

ನೋಡದೆ ಹಾದ್ವಿ ಈಶಾ ಈಶಾ ||1||

ತೋರುವ ತೋರಿಕಿ ಅಲ್ಲಾ | ಅದು |

ತೋರಿಸಿ ಕೊಳತಾದಲ್ಲಾ

ತೋರಿದ್ಯಾವಾದಿಲ್ಲಾ | ಅದು |

ತೋರಿದ್ದು ಮರಿವ್ಯಾಗಿಲ್ಲಾ ||2||

ನೋಡದ ನೋಡವಾ ನೀನೇ | ಅದು |

ನೋಡಿದ್ದೆಲ್ಲವು ತಾನೇ

ನೋಡದ ಮೊದಲಿಗ ಮೊನ್ನೆ ಆ

ರೂಢ ರೂಪವದು ತಾನೇ ತಾನೇ ||3||

ಜೀವ ಶಿವರ ಭೇದ ಅಳಿಯೋ | ದೇಹ |

ನಾನೆಂಬದು ಭಾವ ಮರಿಯೋ

ಸಾವದು ಹುಟ್ಟದು ಭ್ರಮಿಯೋ | ಗುರು |

ದೇವ ತೋರಿ ಗುರ್ತ ಅರಿಯೋ ಅರಿಯೋ ||4||

ಸಾಧು ಜನಕ ಸಿರ ಬಾಗಿ | ನಿಜ |

ಬೋಧ ಬ್ರಹ್ಮ ರೂಪಾಗಿ

ಮೇದಿನಿಯೊಳು ಹಿಪ್ಪರಗಿ ಶಿವ

ಸಾಧು ಶರಣ ಸಿದ್ಧಯೋಗಿ ಯೋಗಿ ||5||

ಮೋಸ ಹೋದಿಯಲ್ಲೊ ಈ ಜಗದೊಳು

ಮೋಸ ಹೋದಿಯಲ್ಲೊ

ಈಶನ ಜ್ಞಾನ ಅರಿಯದೆ ಮನದಿ

ನಾಶಾಗುವ ದೇಹದಾಶಿಯಿಂದಲಿ ಬಲು ||ಪಲ್ಲ||

ಮೂರು ಮಲದಿ ಜನಸಿ | ಈ ಧರಿಯೊಳು |

ಮೂರು ಈಶಣವು ಬಯಸಿ

ಮೂರು ಕರ್ಮದಿ ಕುದಿದು ಮೂರು ತಾಪದಿ ಬೆಂದು

ಘೋರೆಂಬ ಸಂಸಾರ ದುಃಖದ ಶರಧಿಗೆ ||1||

ಪರಿ ಪರಿ ವಿಷಯದಾಶಿ | ಈ ಮನಸಿನ |

ಪರಿ ಪರಿ ಭ್ರಾಂತಿಗಳು

ಅರಿಯದೆ ಮರ್ಕಟ ಪಿಂಜರದೊಳು ತಾ

ಕರನಿಕ್ಕಿ ಕೊರವನು ಕೆರಿಯೊಳು ಸಿಕ್ಕಂತೆ ||2||

ಕಲ್ಪಿತ ಸೃಷ್ಟಿಯಲ್ಲಿ | ಬಹು ವಿಧದಿ |

ಕಲ್ಪಿತ ಶರೀರದಿ

ಕಲ್ಪಿತ ನಾಮ ರೂಪ ಸಂಕಲ್ಪದಿ ನೀ

ಕಲ್ಪ ಕಲ್ಪಾಂತರ ತಿರುಗುತ ಸುಮ್ಮನೆ ||3||

ತನು ವನಿತಾದಿಗಳು | ಈ ವಿಶ್ವವು |

ಜನಸಿ ತೋರುತಲಿಹುದು ||

ಕನಸಿನ ಪರಿಮಿಥ್ಯ ಕ್ಷಣ ಭಂಗುರವೆಂದು

ಮನದೊಳು ಅರಿಯದೆ ಅನುದಿನ ಮೋಹಿಸಿ ||4||

ಪರತರ ಜ್ಞಾನವನು ಈ ನವವಿಧ |

ವರಭಕ್ತಿ ವಿರತಿಯಿಂದ

ವರಮಾಧನಪುರ ಶರಣರ ಸ್ಥಲದಿ

ಗುರುಸಿದ್ಧಲಿಂಗನ ಕರುಣದಿ ಅರಿಯದೆ || ||5||

ಏನಿದು ಸೋಜಿಗ ಮಾಯದ ಮರವೋ

ಏನೊಂದರಿಯಲು ಗುಡದಣ್ಣಾ

ನಾನಾ ಜನ್ಮವನು ತಿರುಗಿ ತಿರುಗಿಸಿ

ಮಾನವಜನ್ಮದೊಳು ಬರಸಿತು ಮಾಯಿ ||ಪಲ್ಲ||

ಜನನಿ ಜಠರದಿಂದ ಜನಿಸುವ ಮುನ್ನ

ಅನುಪಮ ಶಿವಧ್ಯಾನದೊಳಣ್ಣಾ

ಜನನಿ ಜಠರದಿಂದ ಜನಿಸಿ ಪ್ರಾಯದೊಳು

ಅನತಿ ಮಮತಿ ಮಾಯಾ ಚಿತ್ತಾಣ್ಣಾ ||1||

ನಾನ್ಯಾರೆಂಬುದು ತಿಳಿಯದೆ ಹೋದೆ

ಹೀನ ಸಂಸಾರಕ ಮರುಳಾಗಿ

ನಾನಾ ದುಃಖದಿಂದ ತೊಳಲಿ ಬಳಲುವದು

ಏನು ಕಾರಣ ತಿಳಿಯಲುಗುಡದು ||2||

ತಾನೊಂದಿಚ್ಛಿಸಿ ಮಾಡಲು ಹೋದರೆ

ತಾನೊಂದಿಚ್ಛಿಸಿ ಮಾಡುವುದು

ಧ್ಯಾನ ಧಾರಣಾ ಮೌನದೊಳಿದ್ದರೆ

ಹೀನ ವಿಷಯದೊಳೆಳಸಿತು ಮಾಯಿ ||3||

ಏನೇನಿಲ್ಲದ ಆಚಿಲೆ ಬ್ರಹ್ಮನ

ಆಶ್ರಯವಾಗಿತ್ತು ಈ ಮಾಯಿ

ನಾನಾ ಭೇದ ವಿಕಾರದೀ ಜಗವು

ತಾನೇ ಮುಸುಕಿ ತೋರುತಲಿಹುದು ||4||

ನಿನ್ನಿಂದಲ್ಲದೆ ಏನೊಂದಿಲ್ಲವು

ನೀನೇ ಸಕಲ ಆದಿ ಮಾಯಿ

ತಾನೆ ನಿಜವು ತಾ ತಿಳಿದೊಡೆ ಬ್ರಹ್ಮದಿ

ಧನ್ಯ ಧನ್ಯವಾಯಿತು ಮಾಯಿ ||5||

ಉನ್ನತವಾಹಿ ಮಾಧನಪುರದೊಳು

ಪನ್ನಂಗದರ ಶರಣರ ನಿಲಯಾ

ಚನ್ನ ಶ್ರಿಗುರು ಸಿದ್ಧಲಿಂಗನೊಳು

ಬೆರದು ಬೈಲವಾಯಿತು ಮಾಯಿ ||6||

ಏನಿದು ಸೋಜಿಗ ಮಾಯದ ಮರವೋ

ಜ್ವಾಕಿಲೆ ಭವ ದಾಟಿಸೊ ನೀನು

ಲೋಕನಾಥನ ಸುಖ ಸಾಕೆನಿಸದು ಅದು

ಮೂಕ ಸಕ್ಕರಿ ಸವಿ ಮೂಕರಿತಂತೆ ||ಪಲ್ಲ||

ಅನಂತ ಜನ್ಮದಿ ಹುಡುಕುತ ಸುಖವನು

ಕಾಣದೆ ಪರಿಭವ ತಿರುಗಿ ನೀನು

ಮಾನವ ಜನ್ಮದಿ ಜನಸಿ ತಾನಾರೆಂದರಿಯದೆ

ಹೀನ ವಿಷಯ ಸುಖಕ್ಕೆಳಸಿ ಮೋಹಿಸಿದಿ ||1||

ಸತಿಸುತರಿಲ್ಲದಿರೆ ಸತತ ಮರುಗುತ್ತಿರೆ

ಸತಿಸುತರಿದ್ದರೆ ಅತಿ ದುಃಖವಾಗುತ್ತಿರೆ

ಮತಿಗೇಡಿ ಮಾನಿಣಿ ಸತಿ ಮಿತಿಮೀರಿ ನಡಿದರೆ

ಕ್ಷಿತಿಯೊಳು ಬಹುಮಾನ

ಗತಿಗೆಟ್ಟು ಮುಸುಕಿನೊಳಗ ಕುಳಿತು ||2||

ಅಸಾರ ಸಂಸಾರ ಮಾಯ ಮುಸುಕಿನೊಳಗ ಕುಳಿತು

ವ್ಯಸನ ಬಹು ಧನದಾಸಿ ಮಾಡುತಿ ನೀನು

ಕಾಸವಿಸಗೊಳ್ಳುತಾ ಹೀನ ವಿಷಯ ನೆರಿದ ಕಪ್ಪಿ

ಹಸಿದ ಹಾರುವ ನೊಣ ಕಾಸಿಸುವಂತೆ ||3||

ಏಸು ಕಾಲದ ಹಿಂದೆ ಮುಂದೆ ಸುಕಾಲದ ಬರಿದೆ

ಘಾಸ್ಯಾಗುವದು ಜಗ ಈ ಕ್ಷಣಯದಿ

ಆಸಿಯಿಂದಲಿ ಬಲು ಮೋಸ ಹೋಗದೆ ನೀ

ಆಸಿಯನಳಿದು ಈಶನವೊಲಿಯೋ ||4||

ದೇಶದೊಳೊಪ್ಪುವ ಖಾಸ ಹಿಪ್ಪರಗಿಯು

ವಾಸ ಶಿವಶರಣರ ದಾಸನಾಗಿರುತ

ಭಾಸಿ ಪಾಲಿಪ ನಮ್ಮ ಈಶ ಗುರುಸಿದ್ಧನ

ದ್ಯಾಸದೊಳಿತು ನಿನ್ನ ಪೋಷಿಸುವನು ತಮ್ಮಾ ||5||

ಬಿಡು ಬಿಡು ಲೌಕಿಕ ಸುಖದಾಸಿಯನು

ಅಡಿಗಡಿಗೆ ದುಃಖದ ಶರಧಿಯನು

ತಡಿಯದೆ ಶರಣರ ಸಂಗದಿ ನೀನು

ಮೃಢನಾಮದಿ ಮುಕ್ತನಾಗೆಲೊ ತಮ್ಮಾ ||ಪಲ್ಲ||

ತಾತನ ಯೋನಿಯಿಂದ ಮಾತೆಯ ಬಸರೊಳು

ದಾತು ರೂಪದಿ ಸೇರಿ ಪಿಂಡವು ಬಲಿದು

ಕೋತಿಯಂದದಿ ತೆಲಿ ಕೆಳಗೆ ಮಾಡಿ ಘೋರ

ಯಾತನೆಯಿಂದ ಲಾಗಾ ಹೊಡೆದೆಲೊ ತಮ್ಮಾ ||1||

ಕಂದ ರೂಪದಿ ಜಗದೊಳು ಜನಿಸಿ

ಅಂಧಕನಂದದಿ ಕಾಲವ ಕಳೆಯುತ

ತಂದಿತಾಯಿಗಳು ಬಂಧು ಬಳಗ ಭವ ಬಂಧನದೊಳು

ಬಿದ್ದು ಒಳಲಿದೆ ನೀನು ||2||

ಪ್ರಾಯವ ಬರಲಿದಿ ಮಾಯಿಗೆ ಮೋಹಿಸಿ

ಕಾಯವ ಸೊರಗಿಸಿ ಮರಗಿದಿ ನೀನು

ನ್ಯಾಯ ಅನ್ಯಾಯ ಏನೊಂದರಿಯದೆ

ಮಾಯದೊಳಗೆ ಮುಳುಗಿ ಹೋದೆಲೊ ಮರುಳೆ ||3||

ಬಣ್ಣದ ಚರ್ಮಿನ ಹೆಣ್ಣಿಗೆ ಮರುಳಾಗಿ

ಸುಣ್ಣ ಹೇರಿದ ಕೋಣ ಮಡುವು ಬಿದ್ದಂತೆ

ಕಣ್ಣಿಗೆ ಚಲುವಾಗಿ ಕಾಣುತಲಿರುವಾ

ಮಣ್ಣು ಪುತ್ಥಳಿ ಇದು ತಿಳಿಯಲೊ ನೀನು ||4||

ಇಂತೆಲ್ಲಾ ವಿಷಯದ ಭ್ರಾಂತಿಯನಳಿದು

ಶಾಂತ ಶ್ರೀಗುರು ಸಿದ್ಧರಾಮ ಹೊಂದಿ

ಅಂತರ ಮುಖನಾಗಿ ನಿನ್ನ ನೀ ನೋಡಲು

ಕಂತುಹರನ ರೂಪಾಗುವೆ ನೀನು ||5||

ಮುಕ್ತಿಯ ಸುಖವನು ಪಡಿಬೇಕಾದರೆ

ಯುಕ್ತಿಲೆ ಪರಿಭವ ಗೆಲಿದಿರಬೇಕು

ಭಕ್ತಿ ಜ್ಞಾನ ವಿರತಿಯಿಂದಲಿ

ಶಕ್ತಿಯ ಶಿವನ ಒಲಿಸಿರಬೇಕು ||ಪಲ್ಲ||

ಹೇಯವಾದ ಇದಿ ಮಾಯಂಗನಿಯರ

ಮಾಯ ಮೋಹವನು ನೀಗಿರಬೇಕೊ

ಪ್ರಾಯದ ಸತಿಯರ ಮುಕ್ತಾಂಗನಿಗೆ

ಪ್ರಿಯದ ಪತಿ ತಾನಾಗಿರಬೇಕೊ ||1||

ಮಿಥ್ಯ ಸಂಸಾರದ ತಾಪದಿ ಬಳಲಿದೆ

ಉತ್ತಮ ಶಿವ ಪಥ ಹಿಡಿದಿರಬೇಕೊ

ಸತ್ಯ ಸದ್ಗುರು ವಚನುಪದೇಶದಿ

ನಿತ್ಯ ನೇಮದಿ ನಡೆದಿರಬೇಕೊ ||2||

ಪರಧನ ಪರಸತಿ ಅಪಹರಿಸುವ ದುಷ್ಟ

ದುರುಳರ ಸಂಗವು ತೊರದಿರಬೇಕೊ

ಪರಶಿವ ನಾಮವು ಸ್ಮರಿಸುವ ಅನುದಿನ

ಶರಣರ ಸಂಗದೊಳಿರುತಿರಬೇಕೊ ||3||

ಮೆರಿಯುವ ಅಷ್ಟಮದಗಳು ಎಂಬ

ಮರವಿನ ಗಜಮದ ಮುರಿದಿರಬೇಕೋ

ಪರಿಪರಿ ವಿಷಯದಿ ಚರಿಸುವ ಮನಸಿನ

ದುರಿತ ದುರ್ಗುಣ ಪರಿಹರಿಸಿರಬೇಕೊ ||4||

ಗಂಭೀರದಿ ಸಿದ್ಧಾಸನ ಬಲಿಸಿ

ಸ್ತಂಬಗಳೆರಡು ಹಿಡದಿರಬೇಕೊ

ಅಂಬರ ಮಧ್ಯದಿ ದೃಷ್ಟಿಯ ನಿಲಿಸಿ

ಶಂಭನ ಸಂಭ್ರಮ ನೋಡಿರಬೇಕೊ ||5||

ಆಧಾರ ಅಂತ್ಯದಿ ಷಟುಸ್ಥಲ ದಾಟಿ

ವೇದ ಚೌಕಿಯಲಿ ಕುಳಿತಿರಬೇಕೊ

ಮೋದದಿ ವಾಜಿಪ ದಶವಿಧವೆಂಬ

ನಾದದಿ ಮನ ಲಯಗೊಳಿಸಿರಬೇಕೊ ||6||

ಧರಿಯೊಳು ಮಾಧನ ಪುರದೊಳು ಮೆರಿಯುವ

ಶರಣರ ನಿಜವನು ಅರಿತಿರಬೇಕೊ

ಗುರು ಸಿದ್ಧರಾಮ ವರಶಿವ ಯೋಗಿಯ

ಚರಣಕಮಲದಲ್ಲಿ ಬೆರತಿರಬೇಕೊ ||7||

ನಡಿ ನಡಿ ನುಡಿದಾಂಗ ನಡಿ

ನಡಿ ನುಡಿ ಒಂದಾದರ ಈ ಜನ್ಮ ಕಡಿ

ನಡಿದು ನಡಿದು ಭವ ಬೇರ ಕಡಿದು

ದೃಢ ಮುಕ್ತಿಯ ಸುಖ ಪಡಿ ಪಡಿ ||ಪಲ್ಲ||

ಹಿಡಿ ಹಿಡಿ ಗುರುಪಾದ ಹಿಡಿ

ಹಿಡಿದು ಗುರುವಿನ ಕೃಪಾ ಪಡಿ

ನಡಿ ಸತ್ಯ ನುಡಿಯೋ ನುಡಿ ಸತ್ಯ ನಡಿಯೋ

ಮೃಢ ಶರಣರ ನಡಿ ಹಿಡಿ ಹಿಡಿ ||1||

ಮಂತ್ರ ನುಡಿ ಶಿವ ಮಂತ್ರ ನುಡಿ

ನಮಃ ಶಿವಾಯ ಎಂಬ ಮಂತ್ರ ನುಡಿ

ಮಂತ್ರವು ನುಡಿಯುತ ಮರ್ಮವ ತಿಳಿಯುತ

ತಂತ್ರ ಶಿವನ ಗುರ್ತು ಹಿಡಿ ಹಿಡಿ ||2||

ಮೂರು ತೊಳಿ ಮೂರೈದು ತೊಳಿ

ಆರು ಮೂವತ್ತಾರು ತತ್ವ ತಿಳಿ

ಆರು ಅಳಿದು ಮೂರು ತಿಳಿದು

ಮೀರಿದು ಉನ್ಮನಿ ಸೇರಿ ಸುಳಿ ||3||

ಪಡಿ ಪಡಿ ನಿಜ ಪದವಿ ಪಡಿ

ಪಡಿಯಲು ಬೇಕಾತುರ್ಯ ಹಿಡಿ

ಸಡಗರದಿಂದಲಿ ಪಡಿಯುತ ಮುಕ್ತಿಯ

ಪಡೆದೇನೆಂಬ ಅಭಿಮಾನ ಕಡಿ ||4||

ಮೇಧಿನಿಯೊಳು ಹಿಪ್ಪರಗಿ ಘಡಿ

ಸಾಧು ಶರಣರು ಸಂಗ ಹಿಡಿ

ಆದಿ ಅನಾದಿಯಿಂದ ಅತ್ತಲು ಶ್ರೀಗುರು

ಸಿದ್ಧಲಿಂಗನ ನಾಮ ನುಡಿ ನುಡಿ ||5||

ಈಶನ ನಾಮವು ಭಜನಿ ಮಾಡೊ ಮನುಜ್ಯಾ

ನಾಶವಾಗುವದು ಪಾಪದ ರಾಶಿ

ಏಸೋ ಜನ್ಮವು ತಿರುಗದ ಬಿಡಸಿ

ಈಶನಾಗುವಿ ನೀ ತಿಳಿ ಸೋಸಿ

ತಾಸು ತಾಸಿಗೆ ಧ್ಯಾಸಿಸು ಮನುಜ್ಯಾ

ಈಶ ನಾಮವಾ ||ಪಲ್ಲ||

ವ್ಯರ್ಥ ಕಾಲ ಕಳಿಬೇಡವೊ ನೀನು

ತುರ್ತ ಜನ್ಮ ಸ್ವಾರ್ಥಕ ಮಾಡಿನ್ನು

ಕರ್ತೃ ಗುರು ಪಾದವ ಪಿಡಿ ನೀನು

ಸತ್ಯ ಮಾರ್ಗ ಶಿವ ನಾಮದ ಭಜನಿ

ಮಾಡೊ ಮನುಜ್ಯಾ ||1||

ಕಾಲ ವದಗಿ ಬರುವಷ್ಟರೊಳಗ

ಬಾಲ ಪ್ರಾಯ ಮುಪ್ಪಾಗದರಾಗ

ಸ್ಥೂಲ ದೇಹ ನಾಶವಾಗದರೊಳಗೆ

ಮೂಲ ಮಂತ್ರ ಸ್ವರೂಪ ತಿಳಿದು

ನೀ ಮಾಡೊ ಮನುಜ್ಯಾ ||2||

ಮಾನವ ಜನ್ಮ ಬರುವದು ಮುಂದೆಂದೂ

ಏನೊ ಪುಣ್ಯದ ಫಲದಿಂದ ಬಂದು

ಖೂನ ತಿಳಿಯೊ ನೀ ನಾನಾರೆಂದು

ನಾನು ನೀನು ಎಂಬ ಭೇದವನಳಿಯೊ

ಮಾಡೊ ಮನುಜ್ಯಾ ||3||

ಭಜನಿ ಮಾಡಿ ಭವ ಕಳಿಯೊ

ಸುಜನರ ಸಂಗದಿ ಜ್ಞಾನವ ತಿಳಿಯೊ

ನಿಜ ಮೋಕ್ಷದ ಸುಖ ಸೌಖ್ಯವ ಪಡಿಯೊ

ಗಜಿಬಿಜಿ ಜನರ ಸಂಗವ ಬೇಡೊ

ಮಾಡೊ ಮನುಜ್ಯಾ ||4||

ದೇಶದೊಳಗ ಮಾಧನ ಹಿಪ್ಪರಗಿ

ವಾಸ ಮಾಡಿದನು ಚಿರ ಸುಖವಾಗಿ

ಈಶ ಶರಣ ಶಿವಲಿಂಗನೇ ಯೋಗಿ

ದಾಸನಾಗಿ ಶಿವಧ್ಯಾಸದೊಳನುದಿನ

ಮಾಡೊ ಮನುಜ್ಯಾ ||5||

ವರಗುರು ಧ್ಯಾನವ ಮರಿಯದನುದಿನ

ಮಾಡೊ ಮನುಜ್ಯಾ

ಧ್ಯಾನವನುದಿನ ಮಾಡೊ ಮನುಜ್ಯಾ ||ಪಲ್ಲ||

ಅಪರೂಪದ ನರ ಜನ್ಮಕೆ ಬಂದು

ಅಪರೂಪದ ಗುರು ದೊರಿಯುವದೆಂದು

ಅಪರೂಪದ ಶಿವ ಪೂಜೆಯದೆಂದು

ಕಪಟವಳಿದು ನಿತ್ಯ ಜಪತಪ ನೇಮದಿ

ಮಾಡೊ ಮನಜ್ಯಾ ||1||

ಸಾಕು ಮಾಡೊ ಈ ಲೌಕಿಕವನ್ನು

ಬೇಕು ಮಾಡೊ ನೀ ನಿಜ ಸುಖವನ್ನು

ನೂಕೆಲೊ ನಾನಾ ದುರ್ಗುಣವನ್ನು

ಸಾಕೆನಿಸದೆ ನೀ ಏಕ ಚಿತ್ತದಿ ಧ್ಯಾನವ

ಮಾಡೊ ಮನುಜ್ಯಾ ||2||

ಪಂಚಭೂತ ದೇಹ ಮಿಥ್ಯವಿದಾಗಿ

ಪಂಚೇಂದ್ರಿಯಗಳ ಲಂಚಪಟ ನೀಗಿ

ಸಂಚಿತ ಕರ್ಮವು ಹರಿಯಲು ಬೇಗಿ

ದುಃಶ್ಚಿಂತನಳಿದು ನಿಶ್ಚಿಂತನಾಗಿ ಧ್ಯಾನವ

ಮಾಡೊ ಮನುಜ್ಯಾ ||3||

ಮಂತ್ರಾಲಯ ಹಟರಾಜಯೋಗದಿ

ಅಂತರಂಗದಿ ಘನ ಶಿವಯೋಗದಿ

ತಂತಿ ದಶವಿಧ ನಾದಾನಂದದಿ

ಕಂತುಹರನ ಮಹಾದಿವ್ಯತೇಜದಿ

ಧ್ಯಾನವ ಮಾಡೊ ಮನುಜ್ಯಾ ||4||

ಸಾಧಿಸು ಬೇಗದಿ ಐದು ಯೋಗವಾ

ಹಾದಿನಾಲ್ಕರ ಮಧ್ಯೆದಿ ಇರುವಾ

ಮಾಧನ ಪುರದೊಳು ಮೋದದಿ ಹೊಳಿವಾ

ಸಾಧು ಗುರುಸಿದ್ಧರಾಮನ ಧ್ಯಾನವ

ತಪ್ಪದೆ ಮಾಡೊ ಮನುಜ್ಯಾ ||5||

ಏನು ಹೇಳಲಯ್ಯೋ ಹೀನ ಮನುಜನೆ ನೀನು

ನಾನಾರೆಂಬುದನ್ನು ಖೂನ ಮರತೆಲ್ಲೊ ಸ್ವಾನಾ ||ಪಲ್ಲ||

ಹಿಂದೆ ನಾನಾ ಜನ್ಮದೊಳು ಹಂದಿ ನಾಯಿ ಮೊದಲು

ಹೊಂದಿ ತಿರಗಿ ಭವದೊಳು ಬಂದಿ ನರ ಜನ್ಮದೊಳು ||1||

ಹಿಂತ ಮಾನುವ ಜನ್ಮಯೆಂತು ಸಿಗುವುದು ತಮ್ಮಾ

ಕಂತುಹರನ ಪ್ರೇಮದಿ ಅಂತು ಬಂದಿದೊಮ್ಮೆ ||2||

ಪರಶಿವನ ನಾಮ ಸ್ಮರಣಿ ಮಾಡೆಲೊ ಒಮ್ಮ

ದುರಿತ ವನಘ ಭಸ್ಮ ಹರಿವುದು ಮಾಯ ಕರ್ಮ ||3||

ನೀತಿವಂತನಾಗೊ ಕೋತಿ ದುರ್ಗುಣ ನೀಗೊ

ಸೋತು ಬಂದವರಿಗೊ ಮಾತು ಮುನಿಸೊ ಬೇಗ ||4||

ಸಿರಿಯ ಸಂಪದ ಸ್ಥಿರಾ ಶರೀರ ಸತಿ ಪುತ್ರರಾ

ಸ್ಥಿರವು ಇಲ್ಲವೊ ಜರಾ ಬರಿಯ ಭ್ರಮಿಯ ಸಂಸಾರ ||5||

ಕಳಿಯೊ ದುರಾಸೆಯನ್ನು ಅಳಿಯೊ ಭ್ರಾಂತಿವಿದನು

ತಿಳಿಯೊ ನಿನ್ನೊಳು ನೀನು ಹೊಳಿವ ಆತ್ಮವನ್ನು ||6||

ದೇಶದೊಳು ಹಿಪ್ಪರಗಿ ವಾಸ ಶರಣರಾಗಿ

ಈಶ ಸಿದ್ಧಯೋಗಿ ದಾಸನಾಗಿರೊ ಹೋಗಿ ||7||

ಮಾಯದ ಬಾಜರಕ ನೀ ಬಂದಿ ತಮ್ಮಾ

ಮಾಯದ ಮೋಜಿಗೆ ಮೋಹಿಸಿದಿ

ಬಾಯಿಬಡಕರ ಹಾರ ಅಲ್ಲಿ ಆರು ಮಂದಿ ಅವರ

ಕೈಯ್ಯಾಗ ಸಿಕ್ಕರ ಮಾಡತಾರ ಚಿಂದಿ ||ಪಲ್ಲ||

ಮಾಯದಿಂದ ಜನಸಿ ಬಂದು ನೀ ಬೆಳದಿ ಕೆಟ್ಟ

ಹೇಯವಾದ ಸಂಸಾರಕ ನೆರೆ ನಂಬಿದಿ

ಛಾಯನುಳ್ಳ ಸುಂದರ ಸತಿ ಒಳ್ಳೆ ಹಿತದಿ ಕಂಡು

ಬಾಯಿ ತೆರದು ಹುಚ್ಚನಂತೆ ಮರುಳಾಗಿದಿ ||1||

ನಾಲಕು ಅಗಸಿ ಪ್ಯಾಟಿಸಾಲ ಬಾಜಾರಾ | ನೋಡೊ |

ಅಲಕ ಮಲಕ ಘಡಮುಡ ವ್ಯಾಪಾರ

ನಾಲಕು ಎಂಟು ಹತ್ತು ಮಂದಿ ಭಾಮಟಿರಾ

ಬಲು ಜ್ವಾಕಿಲೆ ಮಾಡೊ ನಿನ್ನ ವ್ಯಾವ್ಹಾರಾ ||2||

ಆಯಸಿಲ್ಲದೆ ಸುಖ ತೋರುವದು | ನಿನ್ನ |

ಬಾಯಿಗೆ ನೀರದು ತರಸುವದು

ಸಾಹಸ ಮಾಡಲು ಹಚ್ಚುವದು | ನಿನ್ನ |

ಕಾಯ ಸೊರಗಿ ಸಣ್ಣಾಗುವುದು ||3||

ಹೊನ್ನು ಹೆಣ್ಣು ಮಣ್ಣಿಂದಾಯತೇ ಬಾಜಾರಾ | ನಿನ್ನ |

ಕಣ್ಣ ಮುಂದೆ ಕಾಣುವದೆಲ್ಲಾ ಮಾಯಾ ತಂತರಾ

ಅಣ್ಣಾ ತಮ್ಮಾ ತಾಯಿ ತಂದಿ ಹೆಂಡರು ಮಕ್ಕಳರು | ಅವರು |

ನಿನ್ನ ಸಂತಿ ಮುಗದ ಮ್ಯಾಲ ಅಗಲುವರು ||4||

ಸ್ಥಿರವಿಲ್ಲೋ ಸಂಸಾರೆಂಬೊ ಮಾಯ ಬಾಜರಾ | ಬಿಟ್ಟು |

ಗುರುಸಿದ್ಧ ನಾಮವನು ಮರಿಯದಿರಾ

ಪಾರಮಾರ್ಥ ಬಾಜಾರೆಂಬೋ ಮಾಧನಪುರಾ | ಅಲ್ಲಿ |

ಸ್ಥಿರ ಮುಕ್ತಿ ಸವದಾ ಮಾಡೊ ಸಂಗ ಶರಣರಾ ||5||

ಹೊತ್ತು ಹೋಯಿತು ಸುಮ್ಮನೆ

ಹೊತ್ತುಗಳದಿ ಹುಮ್ಮಾ

ಹೊತ್ತುಗಳಿಯದೆ ನಿಜ ಗೊತ್ತವ ತಿಳಿಯದೆ

ಸತ್ತು ಹೋಗಬ್ಯಾಡಾ ಗೊತ್ತಿಗೇಡಿ ಮನುಜ್ಯಾ ||ಪಲ್ಲ||

ಮಾಯದಿಂದ ಜನಸಿ ಈ ಕಾಯವು

ಮಾಯ ಮೋಹದಿ ಬೆಳಸಿ

ಪ್ರಾಯದ ಮದದಲಿ ಕಾಯವ ಕೊರಗಿಸಿ

ಮಾಯ ಮೋಹಿನಿ ಪರಸ್ತ್ರೀಯರ ಕಾಲೊಳು ||1||

ಧನಮದದಬ್ಬರದಿ ಕೋಣಾ

ವಿನಯ ಗುಣವ ತೊರದಿ

ಘನ ಗರ್ವದಿ ಬಡಜನರನು ಪೀಡಿಸಿ

ದನಕರ ಮನಿ ಹೊಲ ಅಪಹರಿಸುತ ನೀ ||2||

ಪರರುಪಕಾರವನು ಮರೆತು

ದುರಿತ ದುರ್ಗುಣದಿಂದೆ

ಪರಧನ ಪರಸತಿ ಅಪಹರಿಸುತ ನೀ

ಪರ ನಿಂದೆ ಮಾಡುತ ಪಾಮರತನದಲಿ ||3||

ಶರಣ ಸಂತ ಸಾಧುರನ ಜರಿದವಾ

ದುರುಳ ಮಾನಗೇಡಿ ಮನುಜನು

ಜರೆ ಮರಣದಿ ಭವಚಕ್ರದಿ ಸಿಲುಕಿ

ಪರಿಪರಿ ವಿಷಯದಿ ಚರಿಸುವ ಕಪಿಯಂತೆ ||4||

ಹೊತ್ತು ಗಳಿಯದೆ ನಿಜ ಜ್ಞಾನವ ತಿಳಿಲಿಲ್ಲಾ

ಕತ್ತಿ ಮೂಳ ಮನುಜನೇ ನೀನು

ಸತ್ಯವಂತ ಶಿವಶರಣಾ ಹಿಪ್ಪರಗಿಯ

ಗೊತ್ತು ಸೇರಿ ಗುರುಸಿದ್ಧನ ಕಾಣದೆ ||5||

ಹೆಂತಾ ಮಂಗ ಮನುಜಾ ನೀನು

ಭ್ರಾಂತಿಯೊಳು ತಿರುಗತಿದಿ

ಭ್ರಾಂತಿಯಳಿದು ಚಿಂತಿನಳಿದು

ಕಂತುಹರನ ಧ್ಯಾನ ಮಾಡೊ ||ಪಲ್ಲ||

ನರನ ದೇಹ ತಾಳಿ ಬಂದು

ಮರವಿ ಮಾಯದೊಳು ಬಿದ್ದು

ಮರಳಿ ಸತ್ತು ಹೋದ ಮೇಲೆ

ತಿರಗಿ ಬರಲಕ ಬಹುಕಾಲ ಬೇಕು ||1||

ಹೊನ್ನು ಹೆಣ್ಣು ಮಣ್ಣು ನಿನ್ನ

ಕಣ್ಣ ಮುಂದೆ ಕಟ್ಟಿಕೊಂಡು

ಸುಣ್ಣಿನಂತೆ ಕುದಿದು ಕುದಿದು

ಮಣ್ಣ ಪಾಲಾದೆಲ್ಲೊ ನೀನು ||2||

ಮೇಲೆ ಮೇಲಯು ರೋಗ ಬಾಧೆಯು

ಕಾಲ ಚಕ್ರವನು ತಿರುಗಿತಿರ್ಪದು

ಬಾಲ ಪ್ರಾಯವದು ಮುಪ್ಪವಾದರೂ

ಮೂಲ ಮಂತ್ರವು ಭಜಿಸಲಿಲ್ಲಾ ||3||

ದುರಿತ ದುರ್ಗುಣ ದೂರ ಮಾಡೊ

ಪರರ ನಿಂದೆ ಆಡದಿರೊ

ಮರಿಯಬ್ಯಾಡೊ ಅರಿತು ನೋಡೊ

ಶರಣ ಸಂಗದಿ ಹರನ ಕೂಡೊ ||4||

ಆಶಿಯಿಂದಲಿ ಘಾಶಿ ಆಗುವಿ

ಆಶಿ ಅಳಿಯಲು ಮುಕ್ತನಾಗುವಿ

ವಾಸು ಹಿಪ್ಪರಗೀಶ ಶರಣರ

ದಾಸನಾಗಿರಲ್ಲೊಲ್ಲ್ಯೊ ನೀನು ||5||

ಆಶಿ ವಿಷಯದ ಘೋರ ಘಾಸಿ

ಮೋಸದೊಳು ಅದಿ ಘಾಶಿ

ಹೇಸಿ ಅಂಗಾಸೋಸಿ ನೋಡಿ

ಈಶ ಸುಖವು ಕಾಣಲಿಲ್ಲ ||ಪಲ್ಲ||

ಹೊನ್ನು ಹೆಣ್ಣು ಮಣ್ಣು ಕಂಡು

ಕ್ವಾಣಿನಂತೆ ಮದವನೇರಿ

ನಿನ್ನ ತನವು ಅಳಿದು ಮೇಲೆ

ಕಣ್ಣಿಗೆರವಾಯಿತಲ್ಲೊ ತಮ್ಮಾ ||1||

ಉಚ್ಚಿ ಬಚ್ಚಲ ನೆಚ್ಚಲೆಂದು

ಮಚ್ಚಿ ಕಡಿವಾ ಸ್ವಣಗನಂತೆ

ಹುಚ್ಚನಾಗಿ ರೊಜ್ಜಿನೊಳು

ಮೆಚ್ಚಿ ನೀನು ಬಿದ್ದಿ ತಮ್ಮಾ ||2||

ಕೂಟ ಸುಖವು ನೇಟವೆಂದು

ನೋಟಲಿಂದ ಕೆಟ್ಟರೆಲ್ಲಾ

ಬ್ಯಾಟ ಮಾಡಿ ಕೆಟ್ಟ ರಾವಣ

ಥಾಟಿನೊಳು ತಿರುಗುತಿದ್ದಿ ||3||

ಸುಣ್ಣಿನೊಳಗಣ ಅಗ್ನಿಯಂತೆ

ಹೆಣ್ಣಿನೊಳು ಇರುತಿರ್ಪ ಗುಣವು

ಹೆಣ್ಣು ಕೆಣಕಿ ಪುಂಡ ಕೀಚಕಾ

ಮಣ್ಣು ಪಾಲಾದೆಂದು ತಿಳಿಯೊ ||4||

ಮಲವು ರಕ್ತ ಮಾಂಸ ಯಜ್ಞ

ಮಲಿನ ದೇಹ ನಂಬಿ ನೀನು

ನೆಲಸಿ ವಿಷಯ ಸುಖವು ಭೋಗಿಸಿ

ಮೇಲೆ ನರಕಿ ಆದಿ ತಮ್ಮಾ ||5||

ಮೆರಿವ ಮಾಧನಪುರದೊಳಿರುವಾ

ಶರಣ ಸಿದ್ಧರಾಮನ ಹೊಂದಿ

ತೊರಿದು ವಿಷಯಗಳನು ನೀನು

ಕಿರಿಯನಾಗಿ ವಾಸ ಮಾಡೊ ||6||

ಭಜಿನ ಮಾಡಿ ಭವ ಬಾಧಿಯ ಕಳಿಯೊ

ಸುಜನರ ಸಂಗದಿ ಜ್ಞಾನವು ತಿಳಿಯೊ

ತ್ಯಜಿಸೆಲೊ ದುರ್ಗಣ ದುರಿತವನಳಿಯೊ

ನಿಜ ಮೋಕ್ಷದ ಸುಖ ಸೌಖ್ಯದಿ ಸುಳಿಯೊ ||ಪಲ್ಲ||

ತನು ವನಿತಾದಿ ವಿಷಯಗಳೆಲ್ಲವು

ಮನದಾಸಿಯೆ ಭವಬಂಧಕೆ ಮೂಲವು

ನೆನಸಿದ ಮಾತ್ರದಿ ತೋರುವ ವಿಶ್ವವು

ಕನಸಿನ ಪರಿ ಬರೆ ನೆನವಿನ ಜಗವು ||1||

ಮಮಕಾರದಿ ಮುಳುಗಿತು ಜ್ಞಾನ |

ಅಘ ತಿಮಿರದೆ ಪರಿಭವ ಕಾನನ

ಭ್ರಮಿಸುತ ಜೀವವು ನಾನತ್ವದಿ ಸುಳ್ಳೆ

ಸಮವಿಲ್ಲದ ಸಂಸಾರದಿ ಮರುಳೆ ||2||

ಮಿಥ್ಯವಾದ ಮಾಯದ ಭ್ರಾಂತಿ |

ಕೆಲ ಹೊತ್ತಯಿರುವ ಅರಘಳಿಗಿಯ ಸಂತಿ

ಗೊತ್ತು ಗಾಣದೆ ಹಗಲಿರುಳಂತಿ

ಮತ್ತೆ ಮತ್ತೆ ಭವ ತಿರುಗುತ ಕುಂತಿ ||3||

ತೊರಿಯಲು ಲೌಕಿಕದ ಅಭಿಮಾನ |

ನಿಜ ವಿರತಿಯೆ ಮುಕ್ತಿಗೆ ಸಾಧನಾ

ಅರಿತರೆ ಬ್ರಹ್ಮವು ಮರೆತರೆ ಜೀವವು

ನೆರೆನಂಬೆಲೊ ಶಿವಶರಣರ ವಚನಾ ||4||

ಪರಿಪರಿ ಜನ್ಮದ ಕಿಲ್ಮಿಷಾ |

ಗುರು ಚರಣದಿ ಎರಗಲು ಭವ ನಾಶ

ಗುರು ಸಿದ್ಧರಾಮನ ಉಪದೇಶಾ

ತಿಳಿ ಪರಶಿವ ತತ್ವದ ನಿರ್ದೇಶಾ ||5||

ಏನು ಹೇಳಲಿದು ಸಂಸಾರ

ಮದ್ಯ ಪಾನ ಮಾಡಿದಂತೆ ವಾನರಾ

ಹೀನ ವಿಷಯ ಸುಖ ದಾಳಿಯಿಂದ

ಅಜ್ಞಾನದಿ ಮುಳುಗಿದ ಪಾಮರ ||ಪಲ್ಲ||

ಪರಿ ಪರಿ ಜನ್ಮದಿ ಪರಿ ಪರಿ ವಿಷಯವು

ಪರಿ ಪರಿ ಜೀವನ ಭ್ರಾಂತಿಗಳಿಂದೆ

ಪರಿ ಪರಿ ಭವದೊಳು ತೊಳಲುತ ಬಳಲುತ

ನರಜನ್ಮದಿ ಬಂದೆಲೊ ಮನುಜ್ಯಾ ||1||

ಮೊದಲು ದುಃಖ ಮತ್ತೆ ಹುಟ್ಟಲು ದುಃಖಾ

ಮದನ ಕಾಟ ಮೊದಲದು ಬಲು ದುಃಖಾ

ಮದವೇರಿದ ನರ ಹರಕಿಯ ಕೋಣವು

ಬದುಕಿರಲೆನದು ಮರಿಯಲ್ಲಪ್ಪಾ ||2||

ಹೊನ್ನು ಹೆಣ್ಣು ಮಣ್ಣೆಂಬುವುದು ಹಳಿ

ಹುಣ್ಣಿನಂತೆ ಭವ ರೋಗದ ಬೀಜದು

ಕುನ್ನಿ ಮನುಜ್ಯಾ ಇದು ನೆನಸಿದ ಮಾತ್ರದಿ

ಮನ್ನಿಸಿ ಮೋಹದ ಕೆಡಹುವದು ||3||

ನೋಡಿದರದು ಮನ ಸೆಳೆಯುವದು |

ಮಾತಾಡದರದು ಗುಣ ಕೆಡಿಸುವದು

ಕುಡಿದರಂತೂ ಸರ್ವವು ಕೆಡಿಸಿ

ದೂಡುವದದು ಅಘ ಕೂಪದಿ ಮನುಜ್ಯಾ ||4||

ವೃದ್ಧನಾದರೂ ಮಾಯ ಮೋಹ |

ದುರ್ಬುದ್ಧಿಯಿಂದ ಭ್ರಮಿಗೆಟ್ಟಿಲ್ಲಾ

ಒದ್ದು ವೈವ ಯಮಕಾಲನ ಬಾಧಿಗೆ

ಸುದ್ದಿ ಇಲ್ಲದಂತಾಯಿತಲ್ಲಾ ||5||

ಕಷ್ಟಪಟ್ಟು ವ್ಯರ್ಥಾಯಿತಲ್ಲಾ |

ಎಳ್ಳಷ್ಟು ಮಾತ್ರ ಸುಖ ಸಿಗಲಿಲ್ಲಾ

ಅಷ್ಟು ಎಲ್ಲಾ ಮಾಯದ ಜ್ಯಾಲ

ಸುಳ್ಳೆ ಭ್ರಷ್ಟನಾದಿ ದುಃಖಕೆ ಮೂಲಾ ||6||

ನಾಮ ರೂಪದಿ ಪ್ರಪಂಚ ಮೋಹ ಜಗ

ನೇಮದಿ ಮಿಥ್ಯವು ಸರ್ವೆಲ್ಲಾ

ನಾಮರಹಿತ ನಿಸ್ಸೀಮಧಾಮ ಸಿದ್ಧ

ರಾಮನೆ ಸದ್ಗುರು ತಾ ಬಲ್ಲಾ ||7||

ಮಾತಿನ ಮೋಜಿಗೆ ಮೋಹಿಸದೆ ಚಿತ್ರ

ಗುಪ್ತರ ಲಿಖಿತವ ಕಿತ್ತಿ ಬಿಸಾಟೊ

ತಾತನ ಭವ ಬೋಧನೆ ಕೇಶದ ಸದ್ಗುರು

ನಾಥನ ಹೊಂದಿ ಶಿವನೊಳು ಕೂಡೊ ||ಪಲ್ಲ||

ಸತಿ ಸುತರಿಂದಲಿ ಅತಿ ಸುಖವೆನುತಲಿ

ಕ್ಷಿತಿಯೊಳು ಗತಿಗೆಟ್ಟು ಹತನಾಗಬ್ಯಾಡೊ

ಮತಿವಂತರ ಕೂಡಿ ಸತ್ಯ ಶರಣರ ಅಡಿ

ಅತಿ ಭಕ್ತಿಯಿಂದ ನುತಿಸೆಲೊ ನೀನು ||1||

ಮನಿ ಭೂಮಿ ನನ್ನದೆಂದು ಹೀನರ ಮಾತ ಕೇಳಿ

ಮನದೊಳು ನಿಶ್ಚಯ ಮಾಡಿದಿ ನೀನು

ತನವು ಬಿಟ್ಟು ಹೋಗುವ ಕಾಲಕ್ಕೆ ನೀನು

ಮನಿ ಭೂಮಿ ಧನವೆಲ್ಲಿ ವೈಯುವೆ ಮರುಳೆ ||2||

ಹಣವು ಗಳಿಸುವೆನೆಂದು ತನುವನು ದಂಡಿಸಿ

ಹಣದಾಸಿಯಿಂದ ವಣಗುವದ್ಯಾಕೊ

ಹಣವು ಇದ್ದರೆ ಚಿಂತಿ ಹಣವಿಲ್ಲದಿದ್ದರೆ ಚಿಂತಿ

ಹಣದಿ ನಿಶ್ಚಿಂತ ಸುಖ ದೊರೆಯದೆಂದಿಗೂ ||3||

ಅನಂತ ಪುಣ್ಯದ ಫಲದಿಂದ ನೀನು

ಮಾನವನಾಗಿ ಜನಿಸಿದ ಮೇಲೆ

ಜ್ಞಾನಿಗಳ ಸಂಗ ಅನುದಿನ ಮಾಡಿ

ಸ್ವಾನಂದ ಸುಖ ನೀ ಪಡಿಯಲೆ ಖೋಡಿ ||4||

ಧರಿಯೊಳು ಪುಣ್ಯದ ಪ್ರಭೆಯಿಂದ ಮೆರೆಯುವಾ

ಗುರು ಸಿದ್ಧರಾಮನ ಚರಣವ ಹೊಂದಿ

ಮರಿಯದೆ ಆತ್ಮನು ಧ್ಯಾನದೊಳಿರುತ

ಸ್ಥಿರ ಮುಕ್ತಿ ಸುಖ ನೀ ಪಡಿಯೆಲೊ ಹೇಡಿ ||5||

ತಿಳಿಯಬಾರದೆ ತಿಳಗೇಡಿ ಮನುಜ್ಯಾ

ಅಳಿದು ಹೋಗುವಿ ನೀನು ಉಳಿಯುದಿಲ್ಲೇನೇನು ||ಪಲ್ಲ||

ಸಕಲ ಚರಾಚರದೊಳು ಹೊಳೆಯುವನು

ಅಕಲಂಕ ಪರಮಾತ್ಮನ ನಿಜವನು ||1||

ನಿನ್ನ ನಿಜವ ನೀ ತಿಳಿಯುವ ಬಗೆಯನು

ಸನ್ನುತ ಗುರುಪದ ಸೇವೆಯೊಳನುದಿನ ||2||

ಉರತರ ಭಕ್ತಿಯಿಂದಿರುತಲಿ ನೀನು

ಉರು ವೈರಾಗ್ಯದಿ ಪರತರ ಜ್ಞಾನವು ||3||

ಶರಣರ ಸಂದದದೊಳಿರುತಲಿ ಅನುದಿನ

ಪರಿಭವ ಮರಣಾ ದುರಿತಾ ಅಘ ಹರಣಾ ||4||

ದೇಶದೊಳು ಹಿಪ್ಪರಗಿ ಈಶ ಶಿವಶರಣರ

ಧ್ಯಾಸ ಗುರುಸಿದ್ಧನ ದಾಸನಾಗಿರುತ ||5||

ಬಿಡು ಬಿಡು ಬಿಡು ಮನುಜ್ಯಾ ದುರ್ಗುಣ ದುರಾಸಿ

ಜಡಭೂತ ಪಿಶಾಚಿ ಬಿಕನಾಸಿ

ನುಡಿಯಲ್ಲಿ ಪರ ನಿಂದಿಸಿ ನಡಿಯಲ್ಲಿ ಪರ ಘಾಷಿಸಿ

ಕಡುಪಾಪಿ ರಕ್ಕಸ ಬಿಕನಾಸಿ ||ಪಲ್ಲ||

ಬಡವರ ಹೊಲ ಮುನಿ ದುಡಿದು ಹಣವನು

ತಡಿಯದೆ ಘಾತಿಸಿ ಬಿಕನಾಸಿ

ಕಾಡಿನಲ್ಲಿ ಬಡವರನ್ನು ಅಡವಿ ಪಾಲವು ಮಾಡಿ

ಕಿಡಗೇಡಿ ಪಾತಕ ಬಿಕನಾಸಿ ||1||

ಪರಧನ ಪರಸ್ತ್ರೀಯರ ಅಪಹರಿಸಿದಿ

ತಿರಕ ಮೂಳ ನಾಯಿ ಬಿಕನಾಸಿ

ಶರೀರ ಮುಪ್ಪಾಯಿತು ನಿನ್ನ ದುರ್ಗುಣ ಬಿಡಲಿಲ್ಲೊ ನಿನ್ನ

ಮರಣವು ಕರಿಯುತಿದೆ ಬಿಕನಾಸಿ ||2||

ದೇವ ದೇವರು ಹಣವು ಸಾವು ಹತ್ರರ ಉಂಟು

ಝಾವದಿ ಅಪಹರಿಸಿ ಬಿಕನಾಸಿ

ಸಾವು ಸಾವು ಎಂದು ದೆವ್ವಿನಂತೆ ಚೀರ್ಯಾಡಬ್ಯಾಡ

ದೇವ ಭಾವನೆ ಸಾವು ಬಿಕನಾಸಿ ||3||

ಮೋಸದಿ ಬಡವರನ್ನು ಘಾಶಿಸಿ ಘಳಿಸಿದ ಹಣವು

ಘಾಸಿಕೋರ ನೀನು ಬಿಕನಾಸಿ

ಈಶ ನಾಮವನ್ನು ಧ್ಯಾಸದೊಳಿಲ್ಲೊ ಒಮ್ಮ

ಹೇಸಿ ಮೂಳ ಬಾರಗೆ ಬಿಕನಾಸಿ ||4||

ಏನು ಹೇಳಿದರೆ ನಿನಗೆ ಜ್ಞಾನ ಬರಲಿಲ್ಲೊ

ಶ್ವಾನ ಮಾನಗೇಡಿಯು ನೀನು ಬಿಕನಾಸಿ

ಸ್ಥಾನ ಹಿಪ್ಪರಗಿ ಜಗಮಾನ್ಯ ಸಿದ್ಧೇಂದ್ರ ಶರಣರ

ಖೂನವು ಮರತೆಲ್ಲೋ ಬಿಕನಾಸಿ ||5||

ಶಿವನಾಮ ಶಿವನಾಮ ಶಿವನಾಮ ಶಿವಹರ

ನಾಮ ನುಡಿಯೋ ಮನುಜ್ಯಾ

ನಾಮ ನುಡಿಯೋ ಮನುಜ್ಯಾ ||ಪಲ್ಲ||

ಶಿವನಾಮ ರಸಾಮೃತ ಸೇವಿಸೊ

ನೀ ಸದಾ ಬಿಡದೆ

ದೇವ ನೀನಾಗಿರುವಿಯೊ

ನಾಮ ನುಡಿಯೋ ಮನುಜ್ಯಾ ||1||

ಹೊನ್ನು ಹೆಣ್ಣು ಮಣ್ಣು ನಂಬಿ

ತನ್ನ ಸುಖವು ಮರೆತು ಜಗದೊಳು

ಕುನ್ನಿಯಂತೆ ತಿರುಗಲಿ ಬೇಡೊ

ನಾಮ ನುಡಿಯೋ ಮನುಜ್ಯಾ ||2||

ನಾನಾ ಜನ್ಮವನ್ನು ತಿರುಗಿ

ಮಾನು ಜನ್ಮದೊಳು ಬಂದು

ಶ್ವಾನಂನತೆ ತಿರುಗಲಿ ಬೇಡೊ

ನಾಮ ನುಡಿಯೋ ಮನುಜ್ಯಾ ||3||

ಅನ್ಯರನ್ನು ಮೋಸಗೊಳಿಸಿ

ಹೊನ್ನ ಗಂಟು ಸೆಳೆದುಕೊಂಡು

ಕುನ್ನಿ ಜನ್ಮ ಎತ್ತಲಿ ಬೇಡೊ

ನಾಮ ನುಡಿಯೋ ಮನುಜ್ಯಾ ||4||

ಅಂಗ ಲಿಂಗ ಸಂಗ ಸುಖವು

ಮಂಗ ಮನುಜ್ಯಾ ತಿಳಿಯೊ ನೀನು

ತುಂಗ ಹಿಪ್ಪರಗೀಶ ಶರಣರ ಸಂಗದಲ್ಲಿರೊ

ಮನುಜ್ಯಾ ನಾಮ ನುಡಿಯೊ ||5||

ಅಬ್ಬಬ್ಬ ಇನ್ನೆಂಥವರೊ ಈ ಜನರೆಲ್ಲಾ

ಅಬ್ಬಬ್ಬ ಇನ್ನೆಂಥವರೊ ||ಪಲ್ಲ||

ಮಬ್ಬು ಯವ್ವನ ಮದದಿ

ಮಬ್ಬು ಬಲು ಧನ ಮದದಿ

ಕೊಬ್ಬಿದ ಕೋಣನಂಥ ಭರದಿ

ಮೇಲು ಬರುವರೊ ||1||

ಕಡು ಪಾಪಿ ರಕ್ಕಸರೋ ನೀಚರು

ಹಡೆದ ಮಕ್ಕಳ ಭೋಗಿಪರೊ

ಬಿಡದೆ ಅವ್ವಾ ಅಕ್ಕಾ ತಂಗಿಗಳೆನತವ

ರೊಡನೆ ಭೋಗಿಸುವರು ಸುಡುಗಾಡು ಭೂತರು ||2||

ಹದಗೆಟ್ಟ ಹೋಯಿತು ಪ್ರಾಯವದು ಹೋದರು ನೀವು

ಮುದಿ ಮಂಗಾದರು ಬಿಡರೆಣ್ಣಾ

ಚದರಿ ಚನ್ನಿಂಗಿಯರ ವದನ ಮೋಹಿನಿ ಅವರು

ಮುದದಿ ಮುದ್ದಾಡುತ್ತ ಮುದಿನಾಯಿ ಜ್ಯಾತಿಗಾರು ||3||

ಶರೀರ ಮುಪ್ಪಾಗಿ ಹೋಯಿತಣ್ಣಾ ಖಬರಿಲ್ಲೊ ನಿನ್ನ

ದುರಮರಣ ಸನಿ ಬಂತಣ್ಣಾ

ಶರೀರ ಮುಪ್ಪಾದರೂ ನಿನ್ನ ದುರ್ಗುಣ ಮುಪ್ಪಾಗಿಲ್ಲಣ್ಣಾ

ಪರಧನ ಪರಸತಿಯರ ಮೇಲೆ ನಿನ್ನ ಕಣ್ಣಾ ||4||

ಧನ ಧಾನ್ಯ ಮನಿ ಭೂಮಿ ನಾನೆ ಗಳಿಸಿದೆನೆಂದು

ಬಡ ಜನರನ್ನು ಬೈದಿದಿ ನೀನು

ಧನವಂತ ಬಲು ನೀನೆಲೊ ಗುಣವಂತ ನೆಹರು ಆದೆನೊ

ಗುಣಗೇಡಿ ಛಿ ಪಾಮರ ಧನವಂತ ನೆಹರು ಸರಕಾರ ||5||

ಜ್ಞಾನವು ನಿಮಗಿಲ್ಲಣ್ಣಾ

ಮಾನವು ಮೊದಲೇ ಇಲ್ಲಣ್ಣಾ

ಮಾನಗೇಡಿಯ ಸಂಗ ಏನು ಕೊಟ್ಟರೆ ಬೇಡ

ಜ್ಞಾನಿಗಳ ಸಂಗ ಜೇನು ಸಕ್ಕರಿ ಸವಿ ಅಣ್ಣಾ ||6||

ದುರ್ಜನ ಗುಣವು ಬಿಡರೆಣ್ಣಾ

ಸಾಧು ಸಜ್ಜನರ ಸಂಗವು ಮಾಡಿರೆಣ್ಣಾ

ಸಜ್ಜನರು ಸತ್ತರೆ ಊರ ಜನರು ಮರುಗುವರು

ದುರ್ಜನರು ಸತ್ತರೆ ಊರ ಜನರ ಖಜ್ಜಿ ಹೋಯಿತಣ್ಣಾ ||7||

ಇಳಿಯೊಳು ಹಿಪ್ಪರಗಿಯೆಂಬ ಸ್ಥಲದಲ್ಲಿ

ಹೊಳಿವ ಶರಣರ ಬಿಂಬ

ಬೆಳಗುವ ಪ್ರಭಾಕರ ಗುರುಸಿದ್ಧ ದೇವರ

ಬಳಿಯಲ್ಲಿ ಝಳಝಳ ಆಗದೆ ನಿಂದಿಪ ನೀಚರು ||8||

ಶ್ರೀಗುರು ವಚನವ ಲಾಲಿಸದೆ ನೀ ಕೆಟ್ಟಿ ಮಾನವಾ

ಸುಮ್ಮನೆ ಕೆಟ್ಟಿ ಮಾನವಾ ||ಪಲ್ಲ||

ಕಾಲ ಹಿಂದೆ ಮಾಡಿ ಜಗದೊಳು ಹೆತ್ತಿ

ಕಾಲ ಮೃತ್ಯುವಿನ ಬಾಯಲಿ ಕುತ್ತಿ

ಕಾಲನ ಬಾಧಿಗೆ ಬಳಲುತ ಅತ್ತಿ

ಕಾಲಾಂತಕನ ಸ್ಮರಣಿಯ ಮರತಿ ||1||

ಬಾಲತ್ವದಿ ಮೊಲಿಪಾನವನುಣುತ

ಬಾಲಿಯರಂ ಕಂಡು ಖುಲು ಖುಲು ನಗುತಾ

ಬಾಲಕರಾಟದಿ ಲೀಲೆಯೊಳಿರುತ

ಕಾಲಾಂತರದಿ ಪ್ರಾಯದಿ ಮದದಿ ||2||

ಕಾಮಾತುರ್ಯದಿ ಕಾಮಿನಿಯೆಂಬ

ಕಾಮಿಸಿದಿ ಮಲ ಮೂತ್ರದ ಡಿಂಬ

ತಾಮಸದೊಳ ಮುಳಗಿ ಹೋದೆಲೊ ಹೊಂಬಾ

ಪಾಮರನೆ ನಿತ್ಯನೇಮವ ಮರೆತು ||3||

ಕತ್ತಿ ಕರಕಿಗೆ ಮರುಳಾದಂತೆ

ಅತ್ತಿಯ ಮಗಳಿಗೆ ಮೋಹಿಸಿ ಕುಂತಿ

ಮತ್ತೆಯು ನಾನಾ ವಿಷಯದ ಭ್ರಾಂತಿ

ಸತ್ಯ ಶರಣರ ಸವಿಯ ಮರತಿ ||4||

ಪಿತ ಮಾತೆಯರು ಹಿತದವರೆಂದು

ಸತಿ ಸುತ ಬಳಗವು ಎಮ್ಮವರೆಂದು

ಕ್ಷಿತಿಯೊಳು ನೀನತಿ ದುಃಖದಿ ಬೆಂದು

ಗತಿಗೆಟ್ಟು ಯತಿಗಳ ನುತಿಸದೆ ನಿಂದಿಸಿ ||5||

ಮಾನವ ಜನ್ಮಿದು ದುರ್ಲಭವೆಂದು

ನಾನಾ ಜನ್ಮದಿ ಉತ್ತಮವೆಂದು

ಏನೊ ಸಂಚಿತ ಪುಣ್ಯದಿ ಬಂದು

ಮಾನವನೆ ನಿಜ ಜ್ಞಾನವನರಿಯದೆ ||6||

ಕಾನನದೊಳು ಹಿರಿ ವಾನರನಂದದಿ

ಮಾನಗೇಡಿಯಾದ ಮನಸಿನ ಸಂಗದಿ

ಏನೊಂದರಿಯದೆ ಅಜ್ಞಾನಂದದಿ

ನಾನಾ ಜನ್ಮವು ಎತ್ತುತ ಭವದಿ ||7||

ಒಡಲ ವಿಕಾರಕೆ ಬಡದ್ಯಾಡಿ ನೀನು

ನುಡಿಯದೆ ಅಡಿಗಡಿ ಮೃಡ ಮಂತ್ರವನು

ಪಡಿಯದೆ ಶ್ರೀಗುರು ಕಡು ಕರುಣವನು

ಮಡಿದು ಹೋಗುವಾಗ ಮಿಡಕಿದರೇನು ||8||

ಧರಿಯೊಳು ಮಾಧನಪುರ ಹಿಪ್ಪರಗಿ

ಗುರು ಸಿದ್ಧರಾಮನೆ ವರ ಮುಕ್ತಿಯ ಪಡಿಯೊ ||9||

ತಾಳೊ ತಾಳೊ ನೀ ತಾಳೊ ಗುರು ವಾಕ್ಯವ ಕೇಳೋ

ತಾಳೊ ತಾಳೊ ಮನಶಾಂತಿ ಕ್ಷಮೆ ದಮೆ

ಬಾಳುವ ಶರಣರಿಗಾಳಾಗಿ ಅನುದಿನ ||ಪಲ್ಲ||

ಹೊನ್ನು ಹೆಣ್ಣು ಮಣ್ಣು ಭವರೋಗದ ಮಣ್ಣು

ಇನ್ನು ನೀ ಬಯಿಸದೆ ಬಿನ್ನಂತೆ ಗುರು ಪಾದಾ

ಉನ್ನತವಾಗಲು ಚನ್ನಾಗಿ ನಿಜಸುಖ ||1||

ದೇಹ ಮಾಯ ಛಾಯಾ ಇಂದ್ರ ಛ್ಯಾಪದ ನ್ಯಾಯಾ

ದೇಹದ ಸುಖ ದುಃಖ ಭೋಗ ದುರ್ಗುಣಗಳು

ಮಾಯ ಮರ್ಧನ ಪ್ರಭುರಾಯಗೊಪ್ಪಿಸಿ ಧೈರ್ಯ ||2||

ಭಕ್ತಿ ಯುಕ್ತಿ ವಿರಕ್ತಿ ಇದುವೆ ನಿಜ ಮುಕ್ತಿ

ಶಕ್ತವಡೆಯ ಸಿದ್ಧಲಿಂಗನ ಭಜಿಸುತ

ಭಕ್ತಿ ಜ್ಞಾನ ವೈರಾಗ್ಯದೊಳು ಹರುಷವ ||3||

ಸತ್ಯ ಶಿವಶರಣರ ನಿತ್ಯ ಭಜಿಸೋ ನೀ

ಮೃತ್ಯು ಭಯನಾಶವು ಸತ್ಯಮಿದೆಂದು ||ಪಲ್ಲ||

ಶರಣರ ನಡೆಯು ಪರಮ ಪಾವನವು

ಶರಣರ ನುಡಿಯು ವರ ಗುರು ಮಂತ್ರವು ||1||

ಶರಣರ ದರುಶನ ದುರಿತ ನಿವಾರಣ

ಶರಣರ ಸ್ಪರ್ಶನ ಪರಭವ ಹರಣಾ ||2||

ಶರಣರ ಸಂಭಾಷಣೆ ವರಮುಕ್ತಿ ಜ್ಞಾನ

ಕರುಣಿಸಿ ಪೊರಿವನು ಪರಮ ಭಕ್ತರನ್ನು ||3||

ಶರಣರು ನರರೊಳಗಲ್ಲವರೆಂದು

ಶರಣರಂ ಪಾರ್ವತೀಶ್ವರಗಧಿಕೆಂದು ||4||

ಶರಣರ ಮಹಿಮೆಯು ಮೆರಿವ ಹಿಪ್ಪರಗಿಯು

ಗುರುಸಿದ್ಧಲಿಂಗನ ಕರುಣಾನಂದದಿ ||5||

ಆಡುತಾದ ಕೂಸು ಆಡುತಾದ

ಗಾಢದಿ ಮಲಿ ಉಂಡು ನಾಡತಾಯಿ ಮಗ್ಗಿಲೊಳು

ಕಾಡಿ ಬೇಡುವದಲ್ಲಾ ಬೇಡಿ ಕಾಡುವದಲ್ಲಾ

ಕಾಡದೆ ಬೇಡದೆ ಜೋಡು ಕೈಕಾಲವು ಬಿಚ್ಚಿ ||ಪಲ್ಲ||

ದೂಡತಾದ ಕರ್ಮವು ದೂಡುತಾದ

ದೂಡುತ ಕಾಲನ ಝಾಡಿಸಿ ಒದಿಯುತ

ಮೂಢ ಬಾಲಕರೊಳು ಕೂಡಿ ಆಡದೆ ತಾ

ರೂಢಿಯೊಳು ಶಿವಶರಣ ಕೂಡಿ ಆಡುವೆನೆಂದು ||1||

ಆಡುತಾದ ಬೊರಲೆ ಆಡುತಾದ

ಇಡಿ ಭವಸಾಗರೀಸ್ಯಾಡಿ ದಾಟುವೆನೆಂದು

ಕೂಡುತ ಕೂಸವು ನೋಡುತ ಸಕಲವು

ಆಡುವ ದಾಟುವ ನೋಡಿರಿ ಬಹು ಲೀಲದಿ ||2||

ಆಡುತಾದ ಹೀಗೆ ಆಡುತಾದ

ಈಡಪಿಂಗಳಿಗಳು ಕೂಡಿರುವ ಮಧ್ಯದಿ

ಮೂಡಿದ ರವಿಶಶಿ ಸೂಡಿದ ಪ್ರಭೆಯನು

ನೋಡುತ ತೊಟ್ಟಿಲೊಳಗಾಡುತ ಮಲಗಿ ತಾ ||3||

ಕೇಳುತಾದ ಕೂಸ ಕೇಳುತಾದ

ಏಳುತ ದಶನಾದವು ಕೇಳುತ ಝೇಂಕಾರವು

ಏಳು ಚಕ್ರದಿ ಯಶವ ಮೇಲೆ ಉನ್ಮನಿಯೊಳು

ಸಾಲಿಟ್ಟು ಸುರತಿರ್ಪ ಹಾಲನೆ ಸವಿದುಂಡು ||4||

ಆಡುತಾದ ಕೂಸು ಆಡುತಾದ

ಆಡುತಾನಂದದೊಳು ಕೂಡಿ ರಾಜ ಹಂಸವು

ನಾಡಿನೊಳ ಹಿಪ್ಪರಗಿ ಪಾಡುತ ಶರಣರ

ಕೂಡಿ ಗುರುಸಿದ್ಧನೊಳ ಆಡುತ ಬೆರಿದು ತಾ ||5||

ಗುರ್ತು ಹೇಳು ನಿನ್ನನ್ನು ಕೇಳುವದು

ನೀನ್ಯಾರೆಂಬುವದು

ಗುರ್ತು ಹೇಳು ನಿನ್ನನ್ನು ನೀ ತಿಳಿದು

ಮರ್ತಿ ನೋಡು ನೀ ತುರ್ತು ಹೇಳುವದು ||ಪಲ್ಲ||

ಮೂರೂವರಿ ಮಳಾ ಸ್ಥೂಲ ದೇಹವ ನೀನೊ

ಬ್ಯಾರೆ ಸೂಕ್ಷ್ಮ ತನು ಕಾರಣ ನೀನೊ

ಮೀರದ ತನು ಮಹಾಕಾರಣ ನೀನೊ

ಮಾರುತನೊಳು ಪಂಚ ಪ್ರಾಣವ ನೀನೊ ||1||

ಮೂರು ತನುವಿನ ಮೂರು ಶಕ್ತಿಯು ನೀನೊ

ಮೂರು ಅವಸ್ಥಾ ಮೂರು ಜೀವರು ನೀನೊ

ಮೂರು ಗುಣದ ವೃತ್ತಿ ಒಳಗಾಗದೆ ತಾ

ಬೇರೆ ಇರುವ ಪ್ರತ್ಯಗಾತ್ಯನು ನೀನೊ ||2||

ತೋರುವ ಘಟದೊಳು ಆರು ಮಂದಿರ ಮಹಾ

ಮೇರು ಮಂದರಗಿರಿ ಈಶನು ನೀನೊ

ಮೇರು ಗಿರಿಯ ಮ್ಯಾಲ ಮೀರಿ ಹೊಳೆಯತಿಹ

ಆರು ವೃಕ್ಷಮಹಾ ಆರೂಢ ನೀನೊ ||3||

ಕಾಣುವ ಈ ವಿಶ್ವವೆಲ್ಲವು ನೀನೊ

ಮಾಣದೆ ಸಕಲವು ವ್ಯಾಪಕ ನೀನೊ

ಕಾಣದ ಕಾಣುವ ರೇಣು ಮಹತ್ವ ಮಹೀ

ಖೂನ ದಶಾಂಗುಲ ಉಳದವ ನೀನೊ ||4||

ಗುರ್ತಿನ ತತ್ವದ ಮರ್ಮವು ನೀನೊ

ಗುರ್ತು ಹಿಪ್ಪರಗಿ ಶರಣ ಅರ್ತವ ನೀನೊ

ಗುರ್ತಿನ ಗುರು ಸಿದ್ಧಲಿಂಗನ ಬೆರೆದು

ಬೆರೆತು ಗುರ್ತಡಗಿದ ಮಹಾ ಉನ್ಮನಿ ನೀನೊ ||5||

ನೀನೆ ದೇವರಣ್ಣಾ ನಿರಂಜನ ರೂಪವೆ ತಾನಣ್ಣಾ

ನಾನಾ ರೂಪದಿ ರಂಜಿಪ ಜಗಕೆ

ತಾನೆ ಸಾಕ್ಷಿಯಾಗಿಹುದೆಂದರಿದರೆ ||ಪಲ್ಲ||

ತೋರಿ ಕೆಡುವ ತನವು ಜನನದಿ ಆರು ವಿಕೃತಿಯಿಂದೆ

ಮೀರಿದ ದುಃಖವು ರೋಗ ಬಾಧಿಗಳಿಂದೆ

ತೋರಿ ಅಡಗುವ ತನು ತಾನಲ್ಲೆಂದರಿದರೆ ||1||

ತಂದಿರ್ದ ತನವು ಮೂರ ಜೀವರು

ಹೊಂದಿ ಮೂರು ಅವಸ್ಥಿಗಳು

ಒಂದರೊಳು ಒಂದಿಲ್ಲಾದಿದರೊಳ ಹೊಂದದೆ ಇರುತಿರ್ಪ

ಬಂಧುರ ಆತ್ಮನು ತಾನೆಂದರಿದರೆ ||2||

ತನು ಮಧ್ಯ ಈಡ್ಯಾಡುವಾ ಅನುದಿನ

ಘನ ಹಂಸ ಸೋಹಂ ಎಂದು

ದಿನದೊಳ ಇಪ್ಪತ್ತೊಂದು ಸಾವಿರದಾರು ನೂರು ಜಪವನು

ಈ ನಿತ್ಯಲ್ಲಾ ಆತ್ಮನ ಸ್ವರೂಪವೆಂದು ಅರಿತರೆ ||3||

ತನುವೆಂಬ ಮಂದಿರದಿ ಸುಮನದಿ

ಘನಯೋಗ ಸಾಧನದಿ

ಮಿನುಗುವ ರವಿ ಶಶಿಯನು ಕೋಟಿ ಪ್ರಭೆಯನು

ಘನ ತೇಜ ಬ್ರಹ್ಮನು ತಾನೆಂದರಿದರೆ ||4||

ನಾನೆ ದೇವರೆಂದು ಈ ಅಭಿಮಾನ

ಖೂನ ಮರಿವದು ಜಾಣ

ಮಾನ್ಯ ಹಿಪ್ಪರಗಿಯ ಶರಣರ ಸಂಗದಿ

ಜ್ಞಾನ ಮೂರುತಿ ಗುರು ಸಿದ್ಧನೊಳು ಬೆರಿತರೆ ||5||

ಇದೇ ನೋಡು ಶಿವಶರಣರ ಮಠವಣ್ಣಾ

ಈ ಊರೊಳಗಣ್ಣಾ

ಇದೇ ನೋಡು ಶಿವಶರಣರ ಮಠವು

ಇದರಲ್ಲಿ ಕಾಣುವನು ಗುರು ಬಸವಣ್ಣಾ ||ಪಲ್ಲ||

ಊರು ನೋಡು ಈ ಊರ ಹೆಂತಾದು

ಪೂರ್ವಿ ಪುಣ್ಯಾ ಪಡಿದಂಥಾದು

ಊರು ಮೂರುವರಿ ಮೈಲುದ್ದ ಇರುವದು

ಊರು ನೋಡು ಅಂತರಲಿರಹುವದು ||1||

ಊರು ನೋಡು ಶೃಂಗಾರ ಕಾಣುವದು

ಆರು ಗಲ್ಲಿ ಮೂರು ಬೀದಿಗಳಣ್ಣಾ

ಊರ ಮುಂದ ಹರಿಯುವ ಗಂಗಾ ನದಿಗಳು

ಮೂರು ಕೂಡಲ ಸಂಗಮ ಕ್ಷೇತ್ರವು ||2||

ಶಾಂತಿ ಸದನದೊಳು ಸಾಧು ಸಂತರು

ಭ್ರಾಂತಿ ಭ್ರಮೆಯನಳದಿರುತಿಹರಣ್ಣಾ

ಸ್ವಾಂತರಂಗದೊಳು ಚಿಂತೆಯಿಲ್ಲದೇ

ಕಾಂತದಿ ಇರುವರು ಶಾಂತ ರೂಪದಿ ||3||

ಶರಣರವತ್ತು ಮೂರು ಪುರಾತನರು

ಶರಣರೇಳುನೂರು ಎಪ್ಪತ್ತು ಗಣರು

ಮೆರಿವ ಹೃದಯ ಎಂಬ ಕಲ್ಯಾಣದೊಳು

ಇರುವರು ಬಸವಾದಿ ಪ್ರಮಥರಣ್ಣಾ ||4||

ಸಕಲ ಮನಮುನಿ ವರ ಋಷಿ ಯೋಗಿ

ಸಕಲ ಪುಣ್ಯ ಕ್ಷೇತ್ರವೆನಿಸುವದಾಗಿ

ಸಕಲ ಜಗದೀಶಾ ಶ್ರೀಗಿರಿಯಾಗಿ

ಮುಖ್ಯ ಕಮರಿ ಮಠ ಸಿದ್ಧ ಹಿಪ್ಪರಗಿ ||5||

ನೀ ನೋಡೊ ಪರಬ್ರಹ್ಮ ಪ್ರಕಾಶವು

ನಿನ್ನೊಳು ಆ ಪರಬ್ರಹ್ಮನು ಸ್ವರೂಪವು ||ಪಲ್ಲ||

ತನು ಸಿದ್ಧಾಸನದಿ ನೆಟ್ಟಗೆ ಕುಳಿತು

ಮನ ವಸು ದೃಷ್ಟಿಯು ಒಂದಾಗಿರಿಹುತ

ಘನ ಮಹಾಲಿಂಗನ ಜ್ಯೋತಿಯೊಳು ನಿಲಿಸುತ ||1||

ಗಂಗೆಯೊಳು ಮಂಗಲ ಸ್ನಾನವಗೈದು

ಇಂಗಳ ಪಿಂಗಳ ತಿಂಗಳ ಸೂಡಿದಾ

ತುಂಗ ಶ್ರೀಗಿರಿಯ ಜ್ಯೋತಿರ್ಲಿಂಗವು ಹೊಳಿವದು ||2||

ಒಂಬತ್ತು ಬಾಗಿಲೊಳು ಇಂಬಾಗಿ ಕುಳಿತು

ಕುಂಭಕ ಬಲದಿ ಅಂಬರ ಮಧ್ಯದಿ

ಶಂಭೋಲಿಂಗನ ಸಂಭ್ರಮ ಪೂಜಿಯು ||3||

ಭೇರಿ ತಾಳ ಘಂಟೆ ಝೇಂಕಾರ ಕೇಳೊ

ಹಾರದ ಮರಿದುಂಬಿ ಹಾಡದು ಕೇಳೊ

ತಾರಕ ಬ್ರಹ್ಮನ ರವಿಕೋಟಿ ಪ್ರಭೆಯನು ||4||

ಅನಂತ ಕೋಟಿ ಬ್ರಹ್ಮಾಂಡಗಳೊಳು

ಅನಂತ ರವಿ ಶಶಿ ಕೋಟಿ ಪ್ರಕಾಶವು

ಅನಂತ ಕೋಟಿ ಋಷಿ ಮುನಿ ಗಣರಿರುವು ||5||

ನೋಡಿದುದೆಲ್ಲಾ ನೀನೆಂದು ತಿಳಿದು

ನೋಡದ ಮೊದಲು ನೀ ಕೂಡಿದಿದ್ದೆಲ್ಲವು

ರೂಢಿಗೆ ಸಾಕ್ಷಿಯು ಆರೂಢ ರೂಪವು ||6||

ಮರಿಯದಿಷ್ಟೆಲ್ಲವು ಗುರುತವನರಿದು

ಅರಿಯುತ ಬೆರಿಯುತ ಗುರುತವ ಮರೆದು

ಗುರು ರೇವಣಸಿದ್ಧ ಕ್ಷೀರಾಲಿಂಗನೊಳು ಕೂಡೊ ||7||

ಲಿಂಗ ಪೂಜಿ ಮಾಡಿರಯ್ಯಾ ಶಿವಲಿಂಗ ಪೂಜಿಯು

ಲಿಂಗಪೂಜಿ ಮಾಡಿರಯ್ಯ ಅಂಗವೆಂಬ ಕ್ಷೇತ್ರದಲ್ಲಿ

ಗಂಗೆ ಯಮುನೆ ಸಂಗಮದಲ್ಲಿ ಮಂಗಲ ಸ್ನಾನವನ್ನು ಮಾಡಿ ||ಪಲ್ಲ||

ಕಂಗಳೆರಡು ಮಧ್ಯದಲ್ಲಿ

ಮಂಗಲಾಮಯ ಪ್ರಭೆಯಿಂದಲ್ಲಿ

ಕಂಗೊಳಿಸುವ ಶಿವಲಿಂಗನ

ಅಂಗ ಭಾವವಳಿದು ನಿತ್ಯ ||1||

ಕರುಣ ಶರಧಿ ಮಜ್ಜನಗರಿದು

ಹರುಷ ಭಸ್ಮ ಸುಗಂಧ ಧರಿಸಿ

ವರ ವಿವೇಕ ಅಕ್ಷತೆಯನಿಟ್ಟು

ಪರಮ ಶಾಂತಿ ಪುಷ್ಟ ಹೂಡಿ ||2||

ವರ ಭಕ್ತಿಯ ಧೂಪ ಬೀಸಿ

ಮೆರಿವ ಚಿದ್ಬಿಂದು ದೀಪ ಬೆಳಗಿ

ಪರಮಾನಂದ ನೈವಿದ್ಯ ಮಾಡಿ

ವಿರತಿ ಸದ್ಗುಣ ತಾಂಬುಲ ಕೊಟ್ಟು ||3||

ಆರು ಚಕ್ರ ದಾಟಿ ಮುಂದೆ

ಭೇರಿ ನಾದ ಕೇಳಿಸಣ್ಣ

ದ್ವಾರದಲ್ಲಿ ಸೇರಿ ತಾನು

ಮೀರಿ ಹೊಳಿವ ತೇಜದಲ್ಲಿ ||4||

ಲಿಂಗ ಮಧ್ಯದಿ ಸಕಲ ಜಗವು

ಕಂಗಳೊಳು ಜ್ವಲಿಪ ಸಿದ್ಧ

ಲಿಂಗ ತಾನೇ ಶರಣ ಶಿವ

ಲಿಂಗ ನಿನ್ನ ಕಣ್ಣ ಮುಂದಿಹುದು ||5||

ಕೂಗಿ ಕರಿತಾದ ಮುಕ್ತಿ ಶಿವ

ಯೋಗಿಗಲ್ಲದೆ ಕೇಳಿಸದಣಾ ||ಪಲ್ಲ||

ಆದಿ ಅನಾದಿಯಿಂದ ಕೂಗುವದು

ಮತ್ತೆ ಮೇದಿನಿಯೊಳು ತಾ ಕೂಗುತಲಿಹುದು

ವೇದಾಗಮದಲ್ಲಿ ಬೋಧಿಸುವದು

ಖರೆ ಸಾಧುರಿಗಲ್ಲದೇ ಕೇಳಿಸದಣ್ಣಾ ||1||

ಕಂತುಹರನ ದಿವ್ಯ ನಾಮವಿದು

ಅನಂತ ಮುಖದಿ ತಾ ನೀತಿ ಹೇಳುವದು

ಅಂತಪರಿಲ್ಲದೆ ಕೂಗುವದು ನಿಜ

ಸಂತರಿಗಲ್ಲದೆ ಕೇಳಿಸದಣ್ಣಾ ||2||

ಜಾಗ್ರ ಸ್ವಪ್ನ ಸುಷಪ್ತಿಗಳಲ್ಲಿ

ಜಾಗ್ರದಿ ಸೋಹಂ ಎನುತಿಹುದಲ್ಲಿ

ಶೀಘ್ರದಿ ಉನ್ಮನಿ ಸೇರಿವು ಎಲ್ಲಿ

ಅಗ್ರ ಭಾಗ ಪಶ್ಚಿಮ ಗಿರಿಯಲ್ಲಿ ||3||

ಸತ್ಯ ಚಿತ್ತ ಆನಂದಿವಿದು

ನಿತ್ಯ ಪರಿಪೂರ್ಣದು ತೋರುವದು

ಅತ್ತಲಿತ್ತ ಸುಳಿದಾಡುವದು

ಅದು ತತ್ವಮಸಿ ಮಹಾವಾಕ್ಯ ಸಾರುವದು ||4||

ಅಲ್ಲಿ ಇಲ್ಲಿ ಮತ್ತೆಲ್ಲದರಲ್ಲಿ

ಎಲ್ಲಿ ನೋಡಲದು ಕೂಗತದಲ್ಲಿ

ಬಲ್ಲಿದ ಶರಣರ ಹಿಪ್ಪರಗೆಲ್ಲಿ

ಎಲ್ಲ ಸಾಕ್ಷಿ ಗುರು ಸಿದ್ಧರ ಬದಿಲಿ ||5||

ಅರಿಯಬಾರದೇ ಅರುವೆ ನಾನೆಂದು

ನರಜನ್ಮದೊಳು ಮರುಳಿ ಬಂದು ನೀ ||ಪಲ್ಲ||

ಕಳೆಯುಳ್ಳ ತನುವಿನೊಳು

ಹೊಳಿಯುವ ಆತ್ಮನು

ಥಳ ಥಳ ಬೆಳಗುವ ಪರಬ್ರಹ್ಮನು ||1||

ಅರಿಯುವನು ತಾ

ಅರಸಿಕೊಳ್ಳುವನು

ಅರವು ಮರವಿಗೆ ಸಾಕ್ಷಿ ಚೈತನ್ಯನು ||2||

ನಿನ್ನ ಅರವು ನೀ

ಅರಿಯುವ ಬಗಿಯನು

ಉನ್ನತ ಶರಣರ ಸಂಗದೊಳನುದಿನ ||3||

ಅರವಿನಿಂದಲಿ ಮರೆವೆಯ ಕಳೆದು

ಉರುತರ ಆತ್ಮನು ತಾನೆಂದರಿಯುತ ||4||

ಅರವಿನೊಳ ಮೆರೆಯುವಾ ಗುರು ಕ್ಷೀರಾಲಿಂಗನು

ಪರಮ ಗುರು ರೇವಣಸಿದ್ಧನ ಕರುಣದಿ ||5||

ಮೌನದೊಳಿರು ಅಂದಾನೋ ಸದ್ಗುರುನಾಥ

ಮೌನದೊಳಿರು ಎಂದಾ ಜ್ಞಾನವು ತಿಳಿಯಂದಾ ಹೀನ ಗುಣವನಿಳಿದು ನಿನ್ನ ನೀ ತಿಳಿಯಂದಾ ||ಪಲ್ಲ||

ಪ್ರಣವ ಪಂಚಾಕ್ಷರಿ ಬಿಡದೆ ಜಪಿಸೆಂದಾ

ಪ್ರಣವ ನಾದದೊಳು ಮನಲಯ ಮಾಡೆಂದಾ

ಅಣು ಮಾಯಾ ಕಾರ್ಮಿಕ ಮಲತ್ರಯ ಕಳಿಯಂದಾ

ಕ್ಷೋಣಿಯ ಬೆಳಗುವ ಆತ್ಮನ ನೋಡುಯಂದಾ ||1||

ಮನದೊಳು ದೈತದ ಭಾವನೆ ಅಳಿಯಂದಾ

ನಿನ್ನ ಆತ್ಮನಂತೆ ಸರ್ವ ಆತ್ಮ ತಿಳಿಯಂದಾ

ದಿನದೊಳು ನಡಿಯುವ ಹಂಸನ ಜಪವನು

ಮನದೊಳು ಎಡಬಿಡದೆ ನುಡಿಯುತ ಇರು ಎಂದಾ ||2||

ಭಕ್ತಿ ಜ್ಞಾನ ವೈರಾಗ್ಯದೊಳಿರು ಎಂದಾ

ಯುಕ್ತಿಲಿಂದ ನಿನ್ನ ಸ್ವರೂಪವು ನೋಡೆಂದಾ

ಶಕ್ತವಡಿಯ ಗುರು ರೇವಣಸಿದ್ಧನ

ನಿತ್ಯ ಧ್ಯಾನಿಸಿ ಸ್ಥಿರ ಮುಕ್ತಿಯ ಪಡಿಯೆಂದಾ ||3||

ಅರಿಯಬಾರದೇನೊ ಈ ಪರಿಯೊಳು

ಅರಿಯಬಾರದೇನೊ

ಅರಿಯಬಾರದೇ ಶ್ರೀಗುರು ಮುಖದಿ

ಮೆರಿವ ಶಿವಾತ್ಮನು ತಾನೆಂದರಿಯುತ ||ಪಲ್ಲ||

ಧರಿ ಗಗನಾದಿಗಳು ಭೂತ ಪಂಚ

ವಿರಜಿಸುತೀ ಜಗದಲಿ

ಪರಿವಿಡಿದೆಲ್ಲವು ಕಲ್ಪಿತ ಮಾಯವು

ನೆರೆ ತಿಳಿಯದಕ್ಕೆ ತಾ ಸಾಕ್ಷಿಯಾಗಿಹುದೆಂದು ||1||

ಪರಿ ಪರಿ ನಾಮಗಳು ಈ ಶರೀರದಿ

ಪರಿ ಪರಿ ರೂಪಗಳು

ಪರಿ ಪರಿ ವಿಷಯದಿ ವಿಕೃತಿಗಳಿಗೆ

ಪೆರತಾಗರಿವದು ನಿರುಪಮ ಬ್ರಹ್ಮವು ||2||

ಮೂರು ತನುವಿನೊಳಗೆ ಸಂಚರಿಸಿ

ಮೂರು ಅವಸ್ಥಿಯಲ್ಲಿ

ಮೂರು ಜೀವರ ಶಕ್ತಿ ಮೂರು ಗುಣ ವ್ಯಕ್ತಿಗಳ

ಮೀರಿ ತೋರುವ ತಾ ತಾರಕ ಬ್ರಹ್ಮವು ||3||

ಸಕಲ ಚರಾಚರವು ಈ ತೋರುವ

ಅಖಿಲ ಬ್ರಹ್ಮಾಂಡಗಳು

ಚಕಚಕಿಸುವ ಮಹಾ ತೇಜದಿ ಬೆಳಗುವಾ

ಅಕಳಂಕಾತ್ಮನು ತಾನೆಂದರಿಯುತ ||4||

ಅರಿದೊಡೆ ಶಿವಾತ್ಮನು ತನ್ನನು ತಾ

ಮರೆದೊಡೆ ಜೀವಾತ್ಮನು

ಅರಿವು ಮರವು ಮೀರಿ ಗುರುಸಿದ್ಧನೊಳು ಬೆರಿ

ನೆರಿವ ಹಿಪ್ಪರಗಿಯ ಶರಣರ ಸಂಗದಿ ||5||

ತರುಣ ಯಾರಿಗೆ ಕಾಣದು ಈ ಮುತ್ತ |

ಗುರು ಅಂತಃಕರಣ ಪೂರ್ಣ ಅರಿತವಗ ಆದಿತ್ತು ಗೊತ್ತ ||ಪಲ್ಲ||

ಕಾಷ್ಠದೊಳು ಅಗ್ನಿಯಂತೆ ಶ್ರೇಷ್ಠಾಗಿ ಹೊಳದಿತ್ತ |

ಕೋಟಿ ಸೂರ್ಯರ ಪ್ರಭೆಯಂತೆ ಥಾಟಾಗಿ ಉಳದಿತ್ತ |

ಒಳ್ಳೆ ನಿಷ್ಠಿಯುಳ್ಳವನ ನೋಟಕ ಘಾಟಾಗಿ ಸೆಳದಿತ್ತ ||1||

ಮಿಥ್ಯ ಅಳಿದು ಸತ್ಯ ನಡಿದರ ಕತ್ತಲೆಯೊಳು ಕಂಡಿತ್ತ|

ಸತ್ತ್ ಚಿತ್ತ್ ನಿತ್ಯ ಪರಿಪೂರ್ಣನ ಚಿತ್ತ ಸುತ್ತಿಕೊಂಡಿತ್ತ |

ನೆತ್ತಿಯೊಳು ಗೊತ್ತು ಮಾಡಿಕೋ ಉತ್ತಮ ಉನ್ಮನಿ ಸೇರಿಕೊಂಡಿತ್ತ ||2||

ಅರಿತ ಗುರುಪುತ್ರಗ ತುರ್ತ ಗುರ್ತ ಸಿಕ್ಕಿತ್ತ |

ಸೂತ್ರ ಹಿಡಿದು ವತ್ರ ಹೋದ್ರ ಹತ್ರ ಬಂದು ನೆಕ್ಕಿತ್ತ |

ತ್ರಿನೇತ್ರ ಉಳ್ಳವನ ಸ್ತೋತ್ರದೊಳು ಇದ್ರ ತ್ರಿಕೂಟ ಬಂದೊರಕಿತ್ತ ||3||

ಸಾವಿರದೆಂಟು ಬ್ರಹ್ಮಾಂಡದಲ್ಲಿ ಸದಾ ಅದರ ಬೆಳಕಿತ್ತ |

ಬ್ರಹ್ಮ ವಿಷ್ಣು ರುದ್ರರಲ್ಲಿ ಅದರ ಜುಳುಕಿತ್ತ |

ಆ ಮುತ್ತ ಹಚ್ಚುವ ಮೂಗುತಿ ಸುತ್ತ ಕುತ್ತಿಗೆ ಮಟ್ಟ ಹುಳಕಿತ್ತ ||4||

ಧರೆಯೊಳು ಹಿರೇಸಾವಳಗಿ ಗಿರಿಯೊಳು ನಿಂತಿತ್ತ |

ಜಗದ್ಗುರು ಶಿವಯೋಗಿಗೆ ಆ ಮುತ್ತು ಅರ್ಪಿತ್ತ |

ಗುರು ಗುಲಾಮಾದ ಗುರುಪುತ್ರ ಮಹ್ಮದಗ ಆ ಮುತ್ತ ಗೊತ್ತಿತ್ತ ||5||

ಆತ್ಮ ಪರ ಆತ್ಮ ಪರಮಾತ್ಮ ಆದ |

ಒಳ್ಳೆ ಸತ್ವದಿಂದ ತಿಳಿಕೊಳ್ಳಿರಿ ಮಹಾತ್ಮನ ಭೇಧ ||ಪಲ್ಲ||

ಆತ್ಮ ಒಬ್ಬ ಕರ್ಮ ಎರಡು ಗುಣ ಮೂರು ಶೀಲ |

ಕರ್ಣ ನಾಲ್ಕು ಇಂದ್ರಿ ಐದು ವರುಣ ಆರು ಅಹುದ |

ಸಜೀವ ವ್ಯಸನ ಏಳು ಮದ ಎಂಟು ನಳ ಒಂಬತ್ತು ಕಾಯಿದ ||1||

ವಾಯು ಹತ್ತು ಎಪ್ಪತ್ತೆರಡು ನಾಡಿ ಸದ |

ಅರವತ್ತಾರು ಕೋಟಿ ಗುಣಗಳು ಹಾಯಿದ |

ಎಂಟುವರಿ ಕೋಟಿ ರೋಮ ಘಟದ ಮೇಲೆ ಸ್ವಲ್ಪ ಇಲ್ಲ ಸಂದ ||2||

ತೊಂಬತ್ತಾರು ಅಂಗುಲಿ ದೇಹದ ಒಳಗು ಒಂದಕ್ಕೊಂದ |

ಜಾರ ಚೋರ ಹಾಸ್ಯ ಹುಸಿ ಡಾಂಭಿಕ ಮೂಡಾಂಧ |

ಜೀವ ಹಿಂಸ ಪರದ್ರವ್ಯ ಅಪಹಾರ ಕ್ರೂರ ವಿಕಾರದಂದ ||3||

ಅಪಾಹಾರ ಅಹಂಕಾರ ಅನಾಚಾರ ಬೇಬದ್ಧ |

ಪಂಚ ಮಹಾಪಾತಕ ವಿಶ್ವಾಸಘಾತಕ ಅಶುದ್ಧ |

ದಯೆ ಧರ್ಮ ನ್ಯಾಯ ನೀತಿ ಶಾಂತಿ ಇಟ್ಟು ನಡಿರಿ ಸೀದಾ ||4||

ಭಕ್ತಿ ಜ್ಞಾನ ವೈರಾಗ್ಯ ನಿರಾಶೆ ಅಷ್ಟಾಂಗ ಯೋಗದ |

ಅಷ್ಟಾವರ್ಣ ಅಷ್ಟ ವಿದ್ಯಾರ್ಚನೆ

ನಿಷ್ಟ ಭಾಗದ |

ಸೃಷ್ಟಿಗಧಿಕ ಶ್ರೇಷ್ಠ ಸಾವಳಗಿ ಕವಿ ಹೇಳಿದ ಮಹ್ಮದ ||5||

ಶಿವ ನಿನ್ನಲ್ಲಿ ಹಾನ ನೀ ನೋಡಿಲ್ಲ |

ಎಲ್ಲಿ ಹುಡುಕಿದರಿಲ್ಲ ಶಿವ ಎಲ್ಲೆಲ್ಲೂ ಇಲ್ಲ ||ಪಲ್ಲ||

ಸತ್ಯ ಲೋಕ ಶಿವಲೋಕ ವೈಕುಂಠ ಹುಡಿಕ್ಯಾಡಿದರಿಲ್ಲ |

ಇಂದ್ರಲೋಕ ಚಂದ್ರಲೋಕ ಮಹೇಂದ್ರಲೋಕ ಹುಡಿಕ್ಯಾಡಿದರಿಲ್ಲ |

ಆಗ್ನೇಯ ವಾಯು ನೈರುತ್ಯ ಈಶಾನ್ಯ ನೋಡಿ ಮಿಡಿಕ್ಯಾಡಿದರಿಲ್ಲ ||1||

ನಿತ್ಯ ಸತ್ಯ ಸಾವಿರದೆಂಟು ಬ್ರಹ್ಮಾಂಡ ಎತ್ಯಾಕಿದರಿಲ್ಲ |

ಅಂಡಪಿಂಡ ಅಖಿಲಾಂಡ ನವಖಂಡ ಸುತ್ಯಾಕಿದರಿಲ್ಲ |

ಅಪ್ ತೇಜ ವಾಯು ಆಕಾಶ ಒತ್ತಿ ನೋಡಿದರಿಲ್ಲ ||2||

ನಾಲ್ಕು ವೇದ ಆರು ಶಾಸ್ತ್ರ ಹದಿನೆಂಟು ಪುರಾಣ ಓದಿದರಿಲ್ಲ |

ಇಪ್ಪತ್ತೆಂಟು ನಿಗಮ ಆಗಮಗಳು ಹುಡಿಕ್ಯಾಡಿದರಿಲ್ಲ

ಪಂಚ ಷಡಕ್ಷರಿ ತೋಡಿ ಗ್ವಾಡಿಗಿ ಕೂಡು ಮೃಢ ಇಲ್ಲಿಲ್ಲ ||3||

ಕಾಶಿ ಕೇದಾರ ಉಳವಿ ಗೋಕರ್ಣ ಓಡ್ಯಾಡಿದರಿಲ್ಲ |

ಪಂಚ ಮುಖದ ಪಂಚ ಸಿಂಹಾಸನ ನೋಡಿ ನೆರಳ್ಯಾಡಿದರಿಲ್ಲ |

ನಿನ್ನಲ್ಲಿ ಶಿವ ಅಲ್ಲಿಲ್ಲ ಇಲ್ಲಿಲ್ಲ ಸತ್ಯ ಸತ್ಯ ಇಲ್ಲ ||4||

ಧರೆಯೊಳು ಮೆರೆಯುವ ಹಿರೇಸಾವಳಗಿ ಗಿರಿಯೊಳು ಇಲ್ಲ |

ಜಗದ್ಗುರು ಶ್ರೀ ಸಿದ್ಧ ನಿನ್ನಲ್ಲಿ ಒಳಗ್ಹನ ಕೇಳಿದರು ಇಲ್ಲ |

ಸಿದ್ಧನ ಉಪದೇಶದೊಳು ಖುದ್ಧ ಮಹ್ಮದಗ ಬಂಧು ಬಳಗ ಇಲ್ಲ ||5||

ಅರಳಗುಂಡಗಿ ಶರಣರದು ಕೇಳಿರಿ ಪ್ರಕರಣ |

ಸರಳ ತಿಳಿ ನೀರಿಲಿ ತೊಳದರ ಥಳ ಥಳ ಹೊಳಿವದು ತ್ರಿಕರಣ ||ಪಲ್ಲ||

ಪೂಜಾಕ ಪತ್ರಿಗಿ ರಾತ್ರಿನೆ ಹೋಗಿದಾರೊ ಶರಣ |

ಒತ್ರದಿಂದ ಹಿತ್ತಲ ದೊಡ್ಯಾಗ ಮಾಡಿರೋ ಪ್ರಯಾಣ |

ಕಂತ್ರಿ ಎಂಟು ಮಂದಿ ಕಳ್ಳರಿಗಿ ಕಂಡು ಹಾರಿತು ಹರಣ ||1||

ಬಂದವರು ಯಾರೆಂದು ಛಂದದಿ ಕೇಳಿದರು ಶರಣ |

ತೊಂದರಿಲ್ಲದೆ ಕಳ್ಳರೆಂದು ಹೇಳಿದರು ಅದೇ ಕ್ಷಣ |

ಕಳ್ಳರು ಕಳ್ಳಮಿಳ್ಳಿ ಆಡಬೇಡರಿ ತಂದು ಕೊಡುವೆನು ಹಣ ||2||

ಗ್ವಾಡಿ ಒಡದು ದರೋಡಿ ಹಾಕಿ ಆಗಬೇಡಿರಿ ಹೈರಾಣ |

ವಡಿ ವಸ್ತು ತಂದು ಕೊಡುವೆನು ತಡಿರಿ ಅರೆಕ್ಷಣ |

ಮಡದಿ ಮಹಾದೇವಿಗಿ ಹೇಳಿದ ಉಚ್ಚಿಕೊಡು ಆಭರಣ ||3||

ವಡಿ ವಸ್ತ್ರ ಕಡುಗಲಿ ಶರಣ ಮಾಡಿದರು ಅರ್ಪಣ |

ತುಡುಗರೆ ತಡ ಮಾಡಬೇಡಿರಿ ಪಟ್ನೆ ಮಾಡಿರಿ ಪ್ರಯಾಣ |

ಅಡಿ ಕಿತ್ತಿ ಮುಂದಿಡುವುದರಾಗ ಹೋಗಿದ್ದಾವು ಕಣ್ಣ ||4||

ಸತ್ಯ ಶರಣರೆ ಕಾಪಾಡಿರೆಂದು ಪಿಡಿದಿದರು ಚರಣ |

ಒಡೆಯರೆ ನಿಮ್ಮ ಆಳಾಗಿ ದುಡಿಯುವೆವು ಹಿಡಿರಿ ಪ್ರಮಾಣ |

ತಡ ಮಾಡದೆ ಪ್ರೌಢ ಶರಣ ಕೊಡಿರಿ ನಮ್ಮ ಕಣ್ಣ || ||5||

ಮಳತಾನ ಕಳತಾನ ಸುಳತಾನ ಕಳಿರಿವರ ಶರಣ |

ತಾಯಿ ನೀನೆ ತಂದಿ ನೀನೆ ಮಾಡಿ ಅಂತ:ಕರಣ |

ದುಷ್ಟಗುಣ ಬಿಡಿಸಿ ಜಟ್ಟನೆ ಸೇನು ಶ್ರೇಷ್ಠ

ಅಷ್ಟಾವರಣ ||6||

ಈಶ್ಯಾ ನಿಮ್ಮ ದಾಸಾನುದಾಸಾಗಿ ನಮಿಸುವೆವು ಪೂರ್ಣ |

ಭಾಷಿ ಪಾಲಿಪ ದೂಷಿಸಬೇಡ ದೋಷ ಮಾಡಿರಿ ನಿವಾರಣ |

ಆಶಾ ಪಾಶಾ ತಾಮಸ ನೀಗಿಸಿ ಮಾಡಿರಿ ಉದ್ಧರಣ ||7||

ಮಂಗಲಾಂಗ ಗಂಗಾಧರ ಮಾಡಿರಿ ಲಿಂಗಧಾರಣ |

ಚಂಗ್ಯಾ ಬಿಂಗ್ಯಾ ಗುಣಗಳು ಬಿಡಿಸಿ ಶೃಂಗರಿಸು ನೀನ ಶರಣ |

ಭವ ಬಂಧನ ಇಂದಿಗಿ ಸಾಕು ನಂದಿ ವಾಹನ ನೀ ಪೂರ್ಣ ||8||

ಧರೆಯೊಳು ಹಿರೇಸಾವಳಗಿ ಅವ ಕಮರಿ ಠಾಣ |

ಜಗದ್ಗುರು ಶಿವಲಿಂಗನಿಂದೆ ಉದ್ಧರಣ |

ಕವಿಗಾರ ಮೊಹ್ಮದ ಅರುಣೋದಯದಿ ಮಾಡಿದ ತಮ್ಮ ಸ್ಮರಣ ||9||

ಕಡಕೋಳ ಮಡಿವಾಳಪ್ಪ ಶರಣರ ಪಾದ ಹಿಡಿದು

ಶರಣರ ಕಡೆಯಿಂದ ಶಿವದೀಕ್ಷೆ ಪಡೆದು ||ಪಲ್ಲ||

ಆತ್ಮ ಶುದ್ಧಾಗಿ ಮಾಡಿಕೊಂಡು ದಾಸೋಹದಲ್ಲಿ ದುಡಿದು

ನಡಿ ನುಡಿ ತೋಡಿ ಹಿಡಿ ಬಿಗ್ತಾರ ಹಿಡಿದು

ತ್ರಿಕಾಲ ಜಳಕ ಮಾಡಿ ತ್ರಿವಿಧ ಮಡಿ ತಡದು ||1||

ಆಶಾ ಪಾಶ ತಾವiಷದ ತೇಲಿ ಮೇಲ ಬಡಿದು

ಅಸನ ವ್ಯಸನ ವಿಷಯ ವಿಕಾರಕ ನಿರದಾರ ಜಡದು

ಮೂರು ಆರು ಗುಣಗಳು ಅರಿತು ದೀಪ ಬಡದು ||2||

ಪತ್ರಿಗಿಡ ತಿಪ್ಪಯೊಳು ಬಿದ್ದು ಎದ್ದು ನಿಂತಿತು ಬೆಳದು

ಪೂಜಾಕ ಬರುವುದು ಇಲ್ಲೊ ಶರಣರು ಹೇಳಿರಿ ತಿಳಿದು

ಸೂಕ್ಷ್ಮ ದೃಷ್ಟಿಲಿ ನೋಡಿ ಶರಣರು ಅಂದಿರು ಒಳ್ಳೆದು ||3||

ಸುಜ್ಞಾನಿ ಶರಣರು ಶೌರ್ಯದಿಂದ ತಿಳದು

ಕಮಲ ಕೆಸರಿನಲ್ಲಿ ಮೂಡಿ ಪಸರಿಸಿ ಹೊಳದು

ಬ್ರಹ್ಮ ವಿಷ್ಣು ಕಮಲದೊಳು ಉದ್ಭವಿಸಿ ಹೊಳದು ||4||

ಲಕ್ಷ್ಮೀ ಪಾರ್ವತಿ ಕಮಲದಲ್ಲಿ ಕಾಲ ಕಳೆದು

ಸಾವಿತ್ರಿ ಸರಸ್ವತಿ ಕಮಲದಲ್ಲಿ ಬೆಳೆದು

ಕಮಲ ಕಮಲ ಕಮಲುದ್ಭವ ಅರ್ಥ ಮಾಡು ತಿಳದು ||5||

ಸಾಕ್ಷಾತ ಆಸ್ತಿಕ ಋಷಿ ಕಬ್ಬಲಿಗ ಹೌದು

ದುರ್ವಾಸ ಮುನಿಗಳು ಕಬ್ಬ್ಯಾರವ ಹೌದು

ಕಶ್ಯಪ ಋಷಿಗಳು ಕಂಬಾರವ ಹೌದು ||6||

ಶರಣರ ವಚನಾಮೃತ ಮಡಿವಾಳಪ್ಪ ತಿಳಿದು

ಆತ್ಮಕ್ಕೆ ಸುತ್ತಿದ ಮನಸಿನ ಮೈಲಿಗಿ ತೊಳದು

ಶರಣರು ಹೇಳಿರು ಕರ್ಮದ ಕತ್ತಲಿ ಬಿಡು ಕಳದು ||7||

ಶರಣರು ಹೇಳಿರು ಚಿಣಮಗೇರಿ ಗುಡ್ಡಕ್ಹೋಗು ನಡದು|

ಸುತ್ತಮುತ್ತ ಇದ್ದ ಕಮರಿ ಕಂಠಿಗಳು ಕಡದು

ಲೇವಡಿಗಿಡ ಇರುವುದಲ್ಲಿ ಅದಕ ನೋಡು ಹೊಡದು ||8||

ನಿನ್ನ ಗುರು ಮಹಾಂತಯೋಗಿ ನಿನ್ನ ಗುರ್ತು ಹಿಡದು

ಸಮಾಧಿ ಒಳಗಿಂದು ಹೇಳುವರು ಒಡದು

ಕಡಿ ಕಾಲಕ ಕೊಡೆಕಲ್ಲಕ ಹೋಗು ಜೈಭೇರಿ ಹೊಡದು ||9||

ಹಿರೇಸಾವಳಗಿಯ ನಾಮಾಂಕಿತ ಹತ್ತು ಜಿಲ್ಲಾ ನುಡದು

ಜಗದ್ಗುರು ಶಿವಲಿಂಗ ಯೋಗಿ ಕಮರಿಗಿರಿ ಹಿಡದು

ಕವಿಗಾರ ಮಹ್ಮದ ಅವರ ಉಪದೇಶ ಪಡದು ||10||

ನಾವು ಹೋಗಿದೆವಮ್ಮ ಶಿವಯೋಗಿ ಮಠಕ

ನೇಮ ಎತ್ತಿ ನೋಡಿದ ಗುಡಿ ಪಾಠಕ ||ಪಲ್ಲ||

ಖಾಯಂ ಸಿದ್ಧಲಿಂಗ ಇದ್ದ ಗುಡಿ ಮೂಲ ಪೀಠಕ

ಚೈತ್ರ ಶುದ್ಧ ತ್ರಿಯೋದ ಸುದ್ದ ಹಠಕ

ಸಹಸ್ರಾರು ಜನ ಭೋಜನ ಊಟಕ

ನಾ ಹೋಗಿ ಕೂತಿದೆ ಆ ತಾಟಕ

ನೋಡಿ ಧನ್ಯನಾದೆನೋ ನಾ ಪಾಠಕ ||1||

ಶ್ರೀಗುರುಸಿದ್ಧಲಿಂಗ ಇದ್ರೋ ಗುಡಿ ಕೋಠಕ

ಮರಳಮ್ಮ ಮಲ್ಲಮ್ಮ ಚಟವಟಕ

ಬಾಲ ಮಾಂತಗ ಹಚ್ಚಿರೋ ಓಡಾಟಕ

ಕಾಳದೈತ್ಯ ನಡೆಸಿದ ತನ್ನ ನಾಟಕ

ತುಪ್ಪ ನೀಡ ಅಂತಿದ ಒಂದೊಂದು ನೋಟಕ ||2||

ಬಾಲ ಮಹಾಂತ ಬಂದಾರೋ ಉಗ್ರಾರಿ ಗಾಠಕ

ಪಂಜಿ ಪವಾಡ ಹಂಚುವ ಆರ್ಭಾಟಕ

ಸಹಸ್ರ ಪಂಜಿ ಹಂಚಿರೋ ಅಲ್ಲಿ ಜಟಜಟಕ

ಪಾದ ತೀರ್ಥ ಕುಡದೇವೋ ಒಂದೊಂದು ಗುಟಕ ||3||

ಹಿರೇಸಾವಳಗಿ ತ್ರಿಕೂಟಕ

ಶೂರ ವರರು ನಿಂತಿರು ಅವರ ಊಟಕ

ಮುಂದ ಮಲ್ಲಿಕಾರ್ಜುನ ಸ್ವಾಮಿ ಬಂದಿರು ಆ ಪೀಠಕ

ಸತ್ಯ ಸಿಂಹಾಸನದ ಬೈಠಕ ||4||

ಶ್ರೀಗುರುಸಿದ್ಧ ಲಿಂಗಾಯ ನಮಃ

ಪರಮ ಷಡಾಕ್ಷರಿ ಷಟಸ್ಥಲ ಪ್ರಣಾಮ ||ಪಲ್ಲ||

ಜನ್ಮ ಭೂಮಿ ಕೊಳ್ಳೂರು ಗ್ರಾಮ

ಜನ್ಮ ಕೊಟ್ಟು ಜನನಿ ಮಲ್ಲಮ್ಮ

ಲಿಂಗ ಬಸವಯ್ಯಾ ಜನಕನ ನಾಮ

ಶ್ರೀಗುರು ಸಿದ್ಧಲಿಂಗಾಯ ನಮಃ ||1||

ಜಗದ್ಭರಿತ ಅನಿಸಿ ಜಂಗಮ

ಮಾಸ್ತರಗ ಹಚ್ಚಿದಿ ಗೋಮ

ದನಕರುಗಳು ಕಾಯ್ದಿ ಖಾಯಮ

ಕಟ್ಟಿದ ಬುತ್ತಿ ಹುಡುಗರಿಗಿ ಕೊಟ್ಟು

ಹೊತ್ತು ಹೋಗಿ ಮಲಗುವ ನೇಮ

ಶ್ರೀಗುರು ಸಿದ್ಧಲಿಂಗಾಯ ನಮಃ ||2||

ಪಿಂಜಾರ ಮಹಲ ಆತು ಸಾಮದಾಮ

ದನಕರುಗಳು ತಿಂದು ತಮಾಮ

ದನಗಳು ಒಯದ ಕೊಂಡ ವಾಡಿಗಿ ಹಾಕಿ

ನಿಂತ ಶಂಖ ಹೊಡಿದ ಇಮಾಮ

ಶ್ರೀಗುರು ಸಿದ್ಧಲಿಂಗಾಯ ನಮಃ ||3||

ಊರಿಗಿ ಊರ ಜನ ಆಗಿ ಜಮ

ಪಂಜಿ ಹಚ್ಚಿ ಹುಡುಕ್ಯಾರ ಹೋಮ

ಏಳ ಹೆಡಿ ಸರ್ಪ ನೆರಳ ಹಿಡಿದಿತ್ತು

ಯೋಗ ನಿದ್ರಿಯೊಳಗಿದ್ದಿ ಹೇಮ

ಶ್ರೀಗುರು ಸಿದ್ಧಲಿಂಗಾಯ ನಮಃ ||4||

ಜನನಿ ಜನಕ ಅಂದಾರೋ ತಮ್ಮ

ಪಿಂಜಾರ ಬೆಳೆ ದನ ತಿಂದು ತಮಾಮ

ಒಂದಕೊಂಬತ್ತು ತೆನಿ ಮಾಡಿ ತೋರಿ

ಪಿಂಜಾರ ವಂಶ ಮಾಡಿಟ್ಟಿ ಗುಮ್ಮ

ಶ್ರೀಗುರು ಸಿದ್ಧಲಿಂಗಾಯ ನಮಃ ||5||

ಹಿರೇಸಾವಳಗಿ ಗಿರಿ ಗಮಗಮ

ವಿರಕ್ತ ಮಠ ನಿನ್ನ ಆಶ್ರಮ

ಕಾಳದೈತರ ಕಾವಲಿಟ್ಟು

ಅದೃಶ್ಯವಾದಿ ಅಂತರಾತ್ಮ

ಶ್ರೀಗುರು ಸಿದ್ಧಲಿಂಗಾಯ ನಮಃ ||6||

ಗಳಿಸಿದ ಹಣ ಬಳಸಲಾರದೆ

ಹಳಸಿ ಹೋಯಿತ ಕೊಳಕಿ

ಯಳಸಿ ಯಮ ಥಳಿಸಿ ಕೇಳುವಾಗ

ಕಳಿಸಿ ಬಂತು ತಿಳುವಳಿಕಿ ||ಪಲ್ಲ||

ಪಾಪ ಮಾಡಿ ಪರ್ವತಕ

ಹೋದೆ ಉರುಳಿದೆ ದಿಂಡೊಳಿಕಿ

ಪರರಿಗೆ ಪ್ರಸಾದ ನೀಡದೆ ಕಟ್ಟಿಕೊಂಡೆ ಫಳಕಿ

ಪರ್ವತದಷ್ಟು ಪರತ ತಂದಿ ಮಾಡಿ ಹೊಡಕಿ ||1||

ಆಶಾಪಾಶ ತೊಳಿಲಾರದೆ

ಕಾಶಿಗೆ ಹೋದಿ ಕೊಳಕಿ

ಕಾಶಿಗಿ ಬಂದು ಕಾಸು ಕೊಡಲಾರದೆ ವಾಪಸ ತಂದಿ ಗಳಕಿ

ಹೇಸಿ ವಂಶ ಪರಂಪರ ಉಳಿದಿತ್ತೋ ದೋಷದ ಮಳಕಿ ||2||

ಸಾಧು ಸಂತರ ಸತ್ಪುರುಷರ

ಸ್ವರೂಪ ಕಂಡು ನಕ್ಕಿ

ಫಕೀರ ಅಕೀರ ಭಿಕಾರಿಗಳಿಗೆ ನೀಡಲಿಲ್ಲ ಭಿಕ್ಕಿ

ಸೊಕ್ಕಿನಿಂದ ಧಿಕ್ಕರಿಸಿದಕ ಲೆಕ್ಕಿಯೊಳು ಸಿಕ್ಕಿ ||3||

ಬಂಡಿ ತುಂಬ ಪಾಪ ಕಟ್ಟಿಕೊಂಡು

ಪಂಡರಪುರ ಹೊಕ್ಕಿ

ಕೈ ಕಾಲು ಕಣ್ಣಿಲ್ಲದವರು ಪೈ ಬೇಡಿರು ಭಿಕ್ಕಿ

ಪೈ ಕೊಡಲಾರದ ಪಾಪಿ ಪಂಡರಿಗಿ ಹೋಗಿ ಹಾದಿ ತೆಕ್ಕಿ ||4||

ಕೊಳ್ಳಿ ತಗೊಂಡು ಕಳ್ಳ ಮನಿ ಹೊಕ್ಕ

ಹೊಳ್ಳಸಿ ನಿನ ರೆಕ್ಕಿ

ಹುಗದಿಟ್ಟ ದ್ರವ್ಯ ವೈದರು ಜಿಗದ ಕೊಟ್ಟು ಧಕ್ಕಿ

ಕೊಳ್ಳಿ ಹೊನ್ನು ಕಳ್ಳಿಮಳ್ಳಿ ಆಡಸಿತು ಲುಕ್ಕಿ ||5||

ಎದಿ ಒಡೆದು ಕುದಿ ಹತ್ತಿ ಬಿದ್ದು

ಸತ್ತಿ ಮಣ್ಣ ಮುಕ್ಕಿ

ಕೇರ್ಯಾಂದ ಎಳದೊಯ್ದು ಗೋರ್ಯಾಗ ಹಾಕಿ ಬಂದಿರು ನೂಕಿ

ಮೂರ ದಿವಸಕ ಮರಕೂಳ ಇಟ್ಟಾಗ ಮುಟ್ಟಲಿಲ್ಲ ಹಕ್ಕಿ ||6||

ಧರೆಯೊಳು ಹಿರೇಸಾವಳಗಿ

ಗ್ರಾಮ ಐತಿ ನಿಕ್ಕಿ

ಜಗದ್ಗುರು ಶಿವಯೋಗಿದು ವಾಹನ ಪಲ್ಲಕ್ಕಿ

ಕವಿ ಮಹ್ಮದನ ಕಾವ್ಯ ಹೊಳದಂಗ ಧ್ರುವ ಚುಕ್ಕಿ ||7||

ಅಂತರಂಗದ ಸಂತಿ ಹಂತಿಲೈತಿ

ಚಿಂತಿ ಮಾಡುವದ್ಯಾಕ ಮರಗಿ

ಅಲ್ಲಿಲ್ಲ ಇಲ್ಲಿಲ್ಲ ಪ್ಯಾಲಿ ನಿನ್ನ

ಬಲ್ಲೈತಿ ಗುದುಮುರಗಿ ||ಪಲ್ಲ||

ಭಾರಿ ಪೀತಾಂಬರಿ ಶರೀರ ಬೆಲೆ

ಇದು ಕೇಳಿಕೋ ಶಾಣೇರಿಗಿ

ಸಾವಿರ ಕೋಟಿ ಜಪ ಸಾರಿ

ಹೇಳುವದು ಶರೀರ ಧರಿಗಿ

ಕೋಟ್ಯಾನುಕೋಟಿ ಅನುಷ್ಠಾನ

ಪಟಿಸು ಮುಂದಿನ ದಾರಿಗಿ ||1||

ಬಂದಾಗ ತಂದಿದ್ದು ಒಂದುಳಿಲಿಲ್ಲ

ಇಪ್ಪತ್ತೊಂದು ಸಾವಿರ ಆರುನೂರು

ಜಪ ಬಾರಿ ಬಾರಿಗಿ

ಒಣ ಖಟಪಟ ಹೋಗುವುದು

ಜಟಪಟ ಹೊಂಟು ಗೋರಿಗಿ ||2||

ಸಾರಿ ಪೂರಾ ಆರು ರೂಪಾಯಿ

ಕೊಟ್ಟಿನೆಂದಿ ಖಾರದ ಪುಡಿಗಿ

ಆರು ಗುಣ ದೂರ ಮಾಡಿ

ಉಡಲಿಲ್ಲ ಮನಸಿನ ಮಡಿಗಿ

ಎಂಟು ಮದ ನಿನ್ನ ಸೊಂಟ

ಮುರಿದಿವು ಕುಂತಿದಿ ಗ್ವಾಡಿಗಿ ||3||

ಗುರು ಹಿರಿಯರ ಖೂನರಿಯದ

ಕುಲಗೇಡಿ ಬಿದ್ದಿದಿ ಫೇರಿಗಿ

ನಿನ್ನ ತಪ್ಪು ನಿನ್ನ ಅಪ್ಪ ಆಯಿತು

ಇಲ್ಲಿ ಹೇಳುದು ಯಾರಿಗಿ

ಹೊಡಿದು ಬಡಿದು ಜಡಿದು ಯಮ

ಹಿಡಿದು ಹಾಕತಾನ ಗೋರಿಗಿ ||4||

ಧರೆಯೊಳು ಮೆರೆಯುವ

ವರಪುರ ಹಿರೇಸಾವಳಗಿ

ಶ್ರೀ ಶಿವಯೋಗಿ ಅನುಗ್ರಹ

ನಮ್ಮ ಗುರುವಿಗಿ ಅದೇ ಫೌಳೀಗಿ

ಶುದ್ಧ ಮಹ್ಮದ ಕವಿ ಸಿದ್ಧನ

ಜೋಳಗ್ಯಾನ ಉಂಡಿದ ಹೋಳಿಗಿ ||5||

ನೀಗುವೆನೋ ಸತ್ತು ಹೋಗುವೆನೋ

ಸತ್ತು ಚಿದಾನಂದನ

ಅನುಗ್ರಹದಿಂದ ಆಗುವೆನೋ ||ಪಲ್ಲ||

ಸತಿ ಸುತರ ಉಪದ್ರವಕ್ಕಾಗಿ

ಪ್ರೇತನಾಗುವೆನೋ

ಮಾತಾ ಪಿತರ ಹಿತಕ್ಕಾಗಿ

ಆಗುವೆನೋ

ಮಿತ್ರ ಖಳತ್ರಾಯಾದಿಗಳಿಗೆ

ಅಮೃತ ಆಗುವೆನೋ ||1||

ಧನ ಲೋಭಕ್ಕಾಗಿ ಜಿನನಾಗುವೆನೋ

ತನು ಲೋಭಕ್ಕಾಗಿ ಶ್ವಾನನಾಗುವೆನೋ

ಮನ ಲೋಭಕ್ಕಾಗಿ ಮರದ

ಮೇಲಿನ ಮರಜೇನನಾಗುವೆನೋ ||2||

ಸಾಲಾ ಕೊಟ್ಟ ಸಾಹುಕಾರರಿಗೆ

ನಾನು ಕೂಸ ಆಗುವೆನೋ

ಸಹಾಯ ಮಾಡಿದ ಸಜ್ಜನರಿಗೆ

ದಾಸ ಆಗುವೆನೋ

ಹಾಸ್ಯ ಮಾಡುವವರ ಹರವಿಯೊಳು

ಹಾಸ ಆಗುವೆನೋ ||3||

ಗುರು ಹಿರಿಯರ ಚರಣಕ

ಶಿರ ಬಾಗುವೆನೋ

ಶಿವಶರಣರ ಸ್ಮರಣೆ ನಾನು

ಸದಾ ಕೂಗುವೆನೋ

ನಾಲ್ಕನೇ ಸ್ವರ್ಗಕ ಹೋಗಿ ಮುಟ್ಟಿ

ಸುರರ ತೊಟ್ಟಿಲ ತೂಗುವೆನೋ ||4||

ಧರಿಗಿಳಿದು ಧರಿಯೊಳಗಿನ

ಮುತ್ತ ಆಗುವೆನೋ

ಶ್ರೀ ಸಿದ್ಧನ ಗಿರಿಯೊಳಗಿನ

ಹುತ್ತ ಆಗುವೆನೋ

ಹರದಾಸ ಮಹ್ಮದನ ಕೈಯೊಳಗಿನ

ತೊತ್ತ ಆಗುವೆನೋ ||5||

ಕೆಟ್ಟ ಗುಣಕ ಬಿಟ್ಟ ಬಾರ ಹಡಸಿ

ಇಟ್ಟರ ಕೆಟ್ಟ ಪುಟ್ಟಿಕಾಯಂತೆ

ತಟಗರಿತಿತ್ತು ತಡಸಿ ||ಪಲ್ಲ||

ಕೆಟ್ಟ ಕೃತ್ಯಾ ಕುಟಿಲ ತರ್ಕ ಬೂಟಿಲೆ ಗಡಸಿ

ಅಟ್ಟಹಾಸದ ಸ್ವಾಟಿ ಹರಿದು

ಜಟಪಟ ಬಡದ ಓಡಿಸಿ

ನೀಲಕಂಠಗ ನಿಗಮ ಗೋಚರ

ಅನುತಿರು ಪುಟಗಳು ಜೋಡಿಸಿ ||1||

ಎಟ್ಟಿ ಖೊಟ್ಟಿ ದುಷ್ಟ ಗುಣಗಳಿಗೆ

ಪೆಟ್ಟ ಹಾಕಿ ಜಡಿಸಿ

ನಟಿಸಿ ಪಂಚಾಕ್ಷರ ಪಟಿಸಿ

ನಿಷ್ಠಿ ಮಡಿ ಉಡಸಿ

ನಷ್ಟ ಗುಣಕ ಅಷ್ಟಾವರಣದ

ಬಣ್ಣ ಹಚ್ಚಿ ಬಿಡು ತೊಡಿಸಿ ||2||

ಗಟಲಾ ಅಗಟಿತಾ ದುರ್ಗಟಕ

ಗಟಮುಟ್ಯಾಗಿ ಹಿಡಸಿ

ತಿಟಿಮಿಟಿ ಒಟಒಟ ಗುಣಕ

ಗೂಟಕ ಬಡಿಸಿ

ದಿಟ್ಟ ಗುರು ಕಟ್ಟಿದ ಉನ್ಮನಿ

ಪೀಠಕ ಜಟ್ಟನೆ ಬಿಡು ಓಡಿಸಿ ||3||

ಜಾರ ಚೋರ ಕ್ರೂರ ಕೃತ್ಯಕ

ನಿರ್ಧಾರ ಬಿಡು ಬೆನ್ನುಡಿಸಿ

ಅತ್ಯಾಚಾರ ಅನಾಚಾರ ಗ್ರಹಾಚಾರ

ಹಿಸಿ ಬಿಡು ಸುಡಸಿ

ಆಚಾರ ವಿಚಾರದಿಂದ ಶರೀರಕ

ಶಿವಾಚಾರದೊಳು ದುಡಸಿ ||4||

ಹರ ನಾಮ ಬಿಟ್ಟು ಹಲು ಹಂಬಲದೊಳು

ಹಡಗೇಡಾಗಬೇಡ ಹಡಸಿ

ಹಾದಿ ಬೀದಿ ಹಲ್ಕಾ ಚೋದಿ

ವಾದ ಭೇದ ನಡಸಿ

ಹರ ಹರ ಉಧೋ ಉಧೋ ಎಂದು

ನಡುನದಿಯೊಳು ಮುಳುಗಿತು ನಿನ್ನ ತಡಸಿ ||5||

ಧರೆಯೊಳು ವರಪೂರ ಹಿರೇಸಾವಳಗಿ

ಸಿದ್ಧನ ನಾಮ ನುಡಸಿ

ಧರಿಗಿರಿಯಲ್ಲಿ ಪರಿಪರಿ

ಜಯಭೇರಿ ಹೊಡಸಿ

ಹರದಾಸ ಮಹ್ಮದನ ಕವಿಗ

ಹರದೆರು ಚಡಪಡಿಸಿ ||6||

ಪರಶು ದೇಹಾದ ಪತಂಗ ದಾರ ಕಡಿತೋ

ಪೃಥ್ವಿಗುರುಳಿ ಪಾಪಿಷ್ಟ ಪಿಂಡ ಮಡಿತೋ ||ಪಲ್ಲ||

ಪ್ರಾಣ ಬರುವ ಮುಂದ ಪಿಂಡಿಗಿ ಜಡಿತೋ

ಗಂಡುಗಲಿ ಪ್ರಚಂಡ ಪ್ರಾಣ ಸಿಡಿತೋ

ಪ್ರಾಣದ ಕೋದಂಡ ಪಿಂಡಿಗೆ ಒಡಿತೋ ||1||

ಮೊದಲು ಪಿಂಚಣ ಮಣ್ಣಲಿ ಮೂಡಿತೋ

ಪಿಂಡ ಮಡದಾಗ ಅದೆ ಮಣ್ಣ ತೋಡಿತೋ

ಪಿಂಡ ಹೆಣ್ಣ ಅನಿಸಿ ಮಣ್ಣಲಿ ಕೂಡಿತೋ ||2||

ಶರೀರ ಬಿಟ್ಟಂದು ತ್ರೀಜಗ ನುಡಿತೋ

ಶರೀರ ಮಡದದ್ದು ನೇತ್ರದಿಂದ ನೋಡಿತೋ

ಪ್ರಾಣ ಹೋದ ಮ್ಯಾಲ ಖಂಡ ಪಿಂಡ ಬಾಡಿತೋ ||3||

ಪಿಂಡ ಮಡಿತೆಂದು ಕಂಡವರ ನಾಲಿಗಿ ನುಡಿತೋ

ಪ್ರಾಣ ತೀರಿದ್ದು ಯಾರ ಕಣ್ಣ ನೋಡಿತೋ

ಪ್ರಾಣ ಪ್ರಣಾಮಾಗಿ ಪರಲೋಕ ದಾರಿ ಹಿಡಿತೋ ||4||

ಪ್ರಾಣ ಪಂಚ ವರ್ಣಾಗಿ ಚರಚಾಡಿತೋ

ಪಂಚ ಶತಕೋಟಿ ಬ್ರಹ್ಮಾಂಡ ಓಡ್ಯಾಡಿತೋ

ಪರಬ್ರಹ್ಮ ಸ್ವರೂಪಾಗಿ ಹಾಡಿತೋ ||5||

ಧರೆಯೊಳು ಮೆರೆಯುವ ಹಿರೇಸಾವಳಗಿ ಚಡಿತೋ

ನಿರಂಜನ ಶಿವಯೋಗಿ ಮಠ ಸೇರಿತೋ

ಬಡು ಮಹ್ಮದಗ ಕವಿ ನಾಡೆ ಕೊಂಡಾಡಿತೋ ||6||

ತಿಳಿದು ಬಿಟ್ಟ ತಿಳಿದು ಅಳದು ಬಿಟ್ಟ

ಅಳಿದು ಉಳಕೋಲಿಲ್ಲ ಮಳ್ಳತನಕ ಬಿದ್ದು ಕಳಕೊಂಡ ಬಿಟ್ಟ ||ಪಲ್ಲ||

ಗುಗ್ಗರಿಗಿ ಗೋಧಿ ಇದ್ದಿದಿಲ್ಲ ಗೂಡ್ಯಾ ಕಟ್ಟಿಸಿದ ಲಟ್ಟ

ಗೂಡ್ಯಾದ ಬಲ್ಲಿ ಮಾಡಾ ಕಟ್ಟಿಸಿ ನೋಡು ಆಗ ಗಾಟ

ಆ ಮಾಡಿನೊಳು ಕೋಡಗ ಸೇರಿ ಮಾಡಿತು ತಳ ಭ್ರಷ್ಟ ||1||

ಅಹಿಂಸಾ ಪರಮೋಧರ್ಮ ಮಹಿಮರ ಗುಟ್ಟ

ಧರ್ಮದ ಮರ್ಮ ತಿಳಿಯದೆ ಕರ್ಮ ಮಾಡಿದ ಕೆಟ್ಟ

ಶ್ರೀಪಿರ್ಮಯ ಭಕ್ತನಾಗಿ ಇಡಲಿಲ್ಲ ನಿಷ್ಠ ||2||

ಸ್ವಾಥಿ, ನಿಸ್ವಾರ್ಥಿ ತಿಳಿಯದೆ ವರ್ತಿಸಿದ ಸಗಟ

ಅರಿತು ಮಹಾಕೃತ್ಯ ಮಹಾ ಗುರುವಿಗಿ ಬಾಗಲಿಲ್ಲ ಮುಕುಟ

ಗುರುವಿನ ಗುರು ಅರಿಯದೆ ಗೂಗಿಯಾದೆ ಶ್ರೀಹರಿ ಅಗ ||3||

ಸತಿ ಸುತರ ಹಿತಕ್ಕಾಗಿ ಮಾಡಿದಿ ಖಟಪಟ

ಮಾತಾ ಪಿತರ ಮಾತು ಮೀರಿ ಆದೆ ಮರದ ಮರ್ಕಟ

ಬಂದು ಬಳಗ ಒಂದು ಎನದೆ ಹಂದಿಯಂತಾದೆ ತೆಲಕಟ ||4||

ಧರೆಯೊಳು ಹಿರೇಸಾವಳಗಿ ಗಿರಿ ಐತಿ ಘಾಟ

ಶ್ರೀಮನ್ ಮಹಾ ಶಿವಯೋಗಿ ಮೀರಿದ ಸ್ಥಳದ ಪೀಠ

ಅದೇ ಮಠದಲ್ಲಿ ಗರೀಬ ಮಹ್ಮದಂದು ಮಿಕ್ಕ ಪ್ರಸಾದದ ಊಟ ||5||

ಮಾತಿನೊಳಗ ಮಾತಾಡಿದರ ಹೊಯ್ತೋ

ಮುತ್ತ ಒಡದರ ಹೊಯ್ತೋ ||ಪಲ್ಲ||

ಪತ್ತ ಹ್ವಾದರ ಹೊತ್ತ ಹೊಯ್ತೋ

ಮಾತಾ ಪಿತ ಸತ್ತಂಗಾಯಿತ್ತೋ

ವಿಶ್ವಾಸ ಹೋದರ ವಿಜಯ ಹೊಯ್ತೋ

ಈಶ್ವರನ ಅರಮನಿ ಎರುವಾಯ್ತೋ ||1||

ದಿಗಡ ಹ್ವಾದರ ಕೊಡಾನೆ ಹೊಯ್ತೋ

ಬುದ್ಧಿ ಎಂಬ ಬುಡಾನೆ ಹೊಯ್ತೋ

ಮಧ್ಯಕ್ಕಿದ್ದ ನಡಾನೆ ಹೊಯ್ತೋ

ವಿದ್ಯೆ ಹೀನನ ಗುಣಾನೆ ಹೊಯ್ತೋ ||2||

ಗುರು ಪುತ್ರನ ಗುರ್ತ ಹೊಯ್ತೋ

ಗುರು ಒಂದ ಮರ್ತ ಹೊಯ್ತೋ

ಗಾರ್ದಪಾಗಿ ಗಾರತಕ ಹೊಯ್ತೋ

ಘನ ಗುರುವಿನ ಹೊರತ ಹೊಯ್ತೋ ||3||

ಸಾವಳಗಿ ಧರಿಯೊಗ ಹೊಯ್ತೋ

ಕಮರಿ ಮಠದ ಗಿರಿಯೊಳಗ ಹೊಯ್ತೋ

ಅಮರ ಸಿದ್ಧಗ ಎರುವಾಗಿ ಹೊಯ್ತೋ

ಮಹ್ಮದಗ ಮಿಗಿ ಮಿರಿ ಹೊಯ್ತೋ ||4||

ಇಟಕೋರ ಇಟ್ಟು ಕುಟಕೋರ

ಕಟ್ಟಿ ಕುಟ್ಟಿ ಬುಟ್ಟಿ ತುಂಬಿ ಚಟಗ್ಯಾಗ

ಆಟಕೋರ ||ಪಲ್ಲ||

ನಿಷ್ಠಿಲೆ ಆಪ್ತಿಷ್ಠರ ಕರೆಸಿ ಕೊಟ್ಟಿದ್ದು ಕೊಟಕೋರ

ಕೊಟ್ಟಿದ್ದು ಎಳ್ಳಷ್ಟು ಉಳಿಯದೆ ಗಂಟ್ಹಾಕಿ ಕಟಕೋರ

ಕಟ್ಹಿದ ಬುತ್ತಿ ಒಯ್ದು ಕಡಿಗಿ ಹಚ್ಚಿ ಪುರುಷ ಗಟ್ಟಿ ಮುಟಕೋರ ||1||

ಬೈಲಿನ ಹೊಯಿಲ ತಿಳಿದು ಬೈಲ ಬಟ್ಟಿಯ ಉಟಕೋರ

ಬೈಲ ಬ್ರಹ್ಮಚಾರಿ ಬೈಲಿನ ಕುಪ್ಪಸ ತೊಟಕೋರ

ಮಹಾ ಬೈಲಿನೋಳು ಬೈಲಾಗಿ ಹೋಗಿ ಬೈಲಿನೊಳು ಶಟಕೋರ ||2||

ನಷ್ಟ ದುಷ್ಟ ದುರಾಚಾರ ಕಾಷ್ಠಕದೊಳು ಸೆಟಕೋರ

ಅಷ್ಟಮದ ಪಟ್ಟದಾನಿಗಿ ಮೆಟ್ಟಿಲೆ

ಮೆಟಕೋರ

ಮಹಾ ಗುರು ಕೊಟ್ಟ ಗುಪ್ತದ ಗುಟ್ಟು ಉನ್ಮನಿಯೊಳು ಒಟಕೋರ

||3||

ಹಮ್ಮು ದಿಮ್ಮು ಅಹಂಭಾವದ ಗುಣಕ ಹಗ್ಗ ಹಚ್ಚಿ ಕಟಕೋರ

ರಜ ತಮ ಸತ್ವ ಮೂರು ಸತ್ಯ ಲೋಕದಿ ಬಿಟಕೋರ

ಸಾಲುಕ್ಯ ಸಾವಿಜ್ಯ ಸಾಮಿಪ್ಯದಲಿ ಸುಜ್ಞಾನದಿ ನಟಕೋರ ||4||

ಧರೆಯೊಳು ಹಿರೇಸಾವಳಗಿ ಗಿರಿಯೊಳು ಮನಿ ಕಟಕೋರ

ಜಗದ್ಗುರು ಶ್ರೀ ಸಿದ್ಧನ ನೆದರಿನೊಳು ತಟಕೋರ

ಕವಿ ಮಹ್ಮದನ ಖ್ಯಾಲಿ ಕರ್ಣದೊಳು ಹೆಟಕೋರ ||5||

ನತ್ತು ತರಲು ಹೋಗಿ ನಾನು ಮುತ್ತು ಒಂದೆ ಕಂಡ

ಸಾವಿರ್ದೆಂಟು ತೂತ ಅದಕ ಒಂದೆ ಬ್ರಹ್ಮಾಂಡ ||ಪಲ್ಲ||

ಒಂದಕ ಬಿಟ್ಟು ಇನ್ನೊಂದಿಲ್ಲ ಮೂರು ಅಖಂಡ

ಮೂರು ಮೂರು ಆರು ಮೂರು ಒಂಬತ್ತು ತುಂಡ

ಆರು ಮೂವತ್ತಾರಿನ್ನೂರದ ಹದಿನಾರು ಕೋದಂಡ ||1||

ಒಂದನ್ನೊಂದು ಹನ್ನೊಂದಾದವು ಹರನಲ್ಲಿ ಹರಕೊಂಡ

ಮುನ್ನೂರದರವತ್ತೈದು ಒಂದಕ್ಕೆ ಹತಗೊಂಡ

ಒಂದರಲ್ಲಿ ಮತ್ತೊಂದಿಲ್ಲ ಅನಿಸಿತದುವೆ ಗಂಡ | ||2||

ಎಪ್ಪತ್ತೆರಡು ಸಾವಿರ ತಪ್ಪಿಲ್ಲ ಗಂಡಿನ ಹಿಂಡ

ಇಪ್ಪತ್ತೆರಡು ಸಾವಿರದಾರುನೂರು ಹಿಂಡಿನ ರುಂಡ

ಎಂಟು ಕೋಟಿ ದಾಟಿ ಹಿಡಿತು ನಾಟಿತು ಬೀಜಾಂಡ ||3||

ಏಕ ನಾಕು ಸಾಕ ಅಂದಿತು ಎಲ್ಲರದಾಗ ಪುಂಡ

ಐದು ಐದು ಇಪ್ಪತ್ತೈದು ಎಲ್ಲದರಾಗ ಮೊಂಡ

ಮೊಂಡಿನಿಂದ ಗುಂಡ ಹಾರಿತು ಬಿಚ್ಚಿತು ಪಿಂಡಾಂಡ ||4||

ಚೌರೈಂಸ್ಸಿ ಗಾರಿ ಬಿದ್ದವು ಕೆಡಲಿಲ್ಲ ಅಂಡ

ಹುಟ್ಟಿ ಕೆಟ್ಟು ಸುಟ್ಟಿ ಹೋಯಿತು

ಮುಟ್ಟಾದ ಪಿಂಡ

ಗಂಡ ಪುಂಡ ಪುಂಡೆ ಗಂಡ ಅನಿಸಿತು ಬ್ರಹ್ಮಾಂಡ ||5||

ಧರೆಯೊಳು ಹಿರೇಸಾವಳಗಿ ಧರಿಗಿರಿ ಪ್ರಚಂಡ

ಜಗದ್ಗುರು ಶ್ರೀ ಶಿವಯೋಗಿ ಅಲ್ಲಿ ನೆನಸಿದ ನಂಜುಂಡ

ವರಕವಿ ಹರದಾಸ ಮಹ್ಮದ ಹಚ್ಚಿದ ಹಸರ ಜಂಡಾ ||6||

ಹಳಸಿದ ಹದಿನಾರು ವರ್ಷದ ಕೊಡ ಒಡಿತು

ಇಪ್ಪತ್ತೈದು ವರ್ಷದ ಹರ್ಷ ಕೂಡಿತ್ತು ||ಪಲ್ಲ||

ತನು ಮನ ಧನ ದೈವಕ ಕೂಡಿತ್ತು

ಕುಂಬಾರನ ಕೊಡದ ಜಡವಾದ ಬುಡ ಸಿಡಿತು

ವೈಕುಂಠ ಮೃತ್ಯು ಪಾತಾಳ ಕೊಂಡಾಡಿತು ||1||

ತಿಂಗಳ ತಿಂಗಳಿಗೆ ಅನಂಗ ತುಳಕ್ಯಾಡಿತು

ನೆಪ ನವ ಗ್ರಹಕ್ಕೆ ನೆಟ್ಟಿ ಹಿಡಿತು

ನವ ತೇಜಸ್ವಿ ಜ್ಯೋತಿರ್ಲಿಂಗ ಮೂಡಿತ್ತು ||2||

ಕರ್ಮದ ಕಳೆಯ ಸುಳಿಯಲ್ಲಿ ಸುಳಿದಾಡಿತು

ಮುನ್ನೂರದರವತ್ತು ಕಂಟಕ ಕಾಡಿ ನೋಡಿತು

ಉಂಡ ಉಪವಾಸ ವ್ರತ ಎನ್ನಗ ಪಾಡಿತು ||3||

ಕೈಯಿಂದ ಕೊಯಿದ ಧಾನ್ಯ ಧರ್ಮಗೂಡಿತ್ತು

ಗೂಡಿನೊಳಗ ನಾಮದ ಗಂಡ ಹೇಡಿತ್ತು

ಗಡಾನೆ ಒಡೆದ ಕೊಡ ದೂಢಿಗಿ ಈರಿತ್ತು ||4||

ನಿರಾಕಾರ ನಿಚ್ಚಳ ನಿರಂಜಿ ಓಡಿತ್ತು

ಚೌರೈಂಸ್ಸಿ ಜನ್ಮ ಜಗದೊಳು ಕಾಡಿತ್ತು

ಕಾಡಿ ಕಾಡಿ ಕತ್ತಲೆಯೊಳು ಮಡಿತು ||5||

ಇರೇಳು ಲೋಕಕ್ಕೆ ಮೀರಿದ ಸಾವಳಗಿ ನಾಡಿತ್ತು

ಶ್ರೀಮನ ನಿರಂಜನ ಸಿದ್ಧ ಅಲ್ಲಿ ಪ್ರೌಢಿತ್ತು

ಉಮರ ಹಸ್ತ ದಸ್ತಗಿರನ ಜೋಡಿತ್ತು ||6||

ನೋಡಿ ಕಟ್ಟಿದ ರೂಢಿ ಕೆರಿಯಲ್ಲಿ

ಝರಿ ಉಕ್ಕಿ ಹರಿತು

ಉಕ್ಕಿ ಬಂದ ಉಸಿಕಿನ ಜರಿಗೆ

ಸೊಕ್ಕಿನ ತೆರಿ ಮುರಿತು ||ಪಲ್ಲ||

ತೆರೆಯಲ್ಲಿ ತೆರೆ ಹುಟ್ಟಿ ಮುಂದೆ

ನೊರೆಯೆಂದು ಕರಿತು

ಮರೆಯಲ್ಲಿ ಸರಿ ಹೊಂದಿ ಸಂದ್ಯಾಗ

ಖರೆ ಆಗಿ ನುರಿತು

ಹರಿಯಲಿ ಹರಿಯುಂಟು

ಹರಿಬರಿಯಾಗಿ ಸರಿತು ||1||

ಉಕ್ಕಿ ಬಂದ ಉಕ್ಕಿನ ಮಾಯೆಯಿಂದ

ಮತ್ಸ್ಯ ಬಂದು ಪರಿಪರಿಯಾಗಿ ಬೆರಿತು

ಗರಿ ತೆಗಿದು ಸರಿಯಾಗಿ

ಆಡಿ ದರಿಯಲ್ಲಿ ಅರಿತ

ಜಾಣನರಿ ಫಾಣ ಹಾಕಿತು ಮೀನಿನ ಪರಿ ಹರಿತು ||2||

ಉಕ್ಕಿ ಬಂದ ತ್ರಾಣ ಹೋಗಿ ಪ್ರಾಣ

ಉಳಿದು ಶ್ರಾವಣಕ ಕೋರಿತು

ಕೊರಿತದ್ದೆ ಖೊನರಿ ಆಗಿ

ಕೊನೆವರೆಗೂ ಉಳಿತು

ಉರಿಯಲ್ಲಿ ಆರಿಸಿರಿ ಬಂದು

ಶಿವಪುರಕ ಜರಿತು ||3||

ಉಕ್ಕಿ ಬಂದ ಉಕ್ಕಿನ ಹಂಬಲ ಹದಗೆಟ್ಟು

ಹೋಗಿ ಚುಂಬನದಾಗ ಹೇರಿತು

ಚೆಲುವಿಗಿ ಚುಂಬನ ಕೊಟ್ಟು

ಕಂಬನಿಯಾಗಿ ಸೋರಿತು

ಮರ್ಮಿನಿಂದ ಮತ್ರ್ಯಕ್ಕೆ ಬಂದು

ಗುರುವಿನಲ್ಲಿ ಸೇರಿತು ||4||

ಉಕ್ಕಿ ಬಂದ ಏರಿಯಲ್ಲಿ

ಭರಿಯಾಗಿ ಹೋಗಿ ಬಯಲಲ್ಲಿ ಕರಿತು

ಮರೆತು ಮೆರ್ತು ಪೊಡವಿಯೊಳು

ಪುಡಿಪುಡಿಯಾಗಿ ಸುರಿತು

ಸುಂಟರಗಾಳಿ ಅಂಟಿಕೊಂಡಿತು

ಘಂಟಿ ಹೊಡಿದು ಜಾರಿತು ||5||

ಧರೆಯೊಳು ಹಿರೇಸಾವಳಗಿ

ಧರಿಗಿರಿ ಮಿರಿತು

ಶ್ರೀಮನ್ ಶಿವಯೋಗಿ ಅಲ್ಲಿ

ಅಮರಾಗಿ ತೋರಿತ್ತು

ವರಕವಿ ಹರದಾಸ ಮಹ್ಮದ

ತರತರದಿಂದ ಮೆರಿತು || ||6||

ವಿಷಲಂಪಟ ಈಶ್ಯಾಡಿ ಬಿಡು ಇಡಬೇಡ

ಈಶ್ವರ ಸ್ವರೂಪ ವಿಶ್ವಾಸ ಬಿಟ್ಟು

ಮೋಸಿಲಿ ಕೆಡಬೇಡ ||ಪಲ್ಲ||

ಪರದೋಷ ಪರಹಾಸ್ಯ ಮಾಡಿ ಪಾಶಾಣ ಆಗಬೇಡ

ಪರರಿಗೆ ನಾಶ ಆಗಲೆಂದು ಬಯಸಿ ಕೂಗಬೇಡ

ಪರರ ಆತ್ಮ ನೋಯಿಸಿ ಪರರಿಗೆ

ಕೊಯಿಸಿ ಪಶುಜನ್ಮಕ ಹೋಗಬೇಡ ||1||

ಆತ್ಮದಂತೆ ಪರರ ಆತ್ಮ ತಿಳಿ ಪರುಷದ ಬುಡ

ದ್ವೈತ ನಾಶ ಅದ್ವೈತ ಲೇಶ ಆಕಾಶ ಆರೂಢ

ಆರು ಅಳಿದು ಮೂರು ತಿಳಿದು

ನೋಡಿದರ ಸುಳಿಯನಲ್ಲಿ ಪ್ರಾಭ್ರೂಡ ||2||

ವಿಶ್ವಾಸ ಘಾತಕ ಮಹಾಪಾತಕ ಸೂತಕ ಕೇಡ

ಅದೆ ಸೂತಕ ಸುತ್ತಿ ನಿನಗ ಎತ್ತೋದು ಸುಡಗಾಡ

ಸತ್ಯ ಶಾಂತಿ ಸಮೆ ದಮೆ ಸಾಧಿಸು

ಸ್ವರ್ಗದ ಸುಖ ಅನಗಡ ||3||

ಪರಂಪರ ಉಪಕಾರಕ ಪರಲೋಕದ ಈಡ

ಪರರಲ್ಲಿ ಅಪಕಾರ ಮಾಡಿದರ ಪರಮೇಶ್ವರಗ ಗೂಡ

ಪರ ಹಿತಕ್ಕಾಗಿ ಪ್ರಾಣಕೊಟ್ಟರ ಪರರಲ್ಲಿ ಪ್ರೌಢ ||4||

ಪಾರ್ಥನ ಕೀರ್ತಿ ಹರಿಸುವ ಸಲುವಾಗಿ ಪರಮಾತ್ಮ ಆದ ಬ್ಯಾಡ

ಪಾರ್ವತಿಗೆ ಸ್ವರೂಪ ತೋರುವದಕ ಶಿವನಾದ ರೂಢ

ಸರ್ವಾಂತರ್ಯಾಮಿ ಪರಮೇಶ್ವರನ

ಪಾದದಲ್ಲಿ ಇಡು ಧೃಢ ||5||

ಧರೆಯೊಳು ಹಿರೇಸಾವಳಗಿ ಧರಿಗಿರಿಯಲ್ಲಿ ಚಡ

ಜಗದ್ಗುರು ಸಿದ್ಧನ ಚರ ಮರತಿರಬೇಡ ಮೂಢ

ಸಿದ್ಧನಶುದ್ಧ ಅನುಗ್ರಹದಿಂದ ಮಹ್ಮದಗ

ಕೊಂಡಾಡತೈತಿ ನಾಡ ||6||

ಒಂದು ಮಯದ ಕಳ್ಳ

ಮನಿ ಮಾಡಿ ಹೋದ ಹಳ್ಳ ||ಪಲ್ಲ||

ಕಳ್ಳಗ ಕೈ ಕಾಲು ಕಣ್ಣ ಇದ್ದಿದಿಲ್ಲ ಒಳ್ಳ

ಕಳ್ಳಗ ಹೆಂಡರಿಬ್ಬರು ಅವರಿಗಿಲ್ಲ ಗುಳ್ಳ

ಕಳ್ಳನ ಮಕ್ಕಳು ಆರು ಅವರಿಗಿಲ್ಲ ನೆಳ್ಳ ||1||

ಖೂಳ ಕಳ್ಳ ಹೇಳಿ ಕೇಳಿ ಇರುವುದು ಏಳುಕೊಳ

ಏಳು ಕೊಳ್ಳದ ನೆಲದಲ್ಲಿ ತಿಳಿ ನೀರಿನ ಹಳ್ಳ

ತಿಳಿ ತಿಳಿ ತಿಳಿ ಯಡಿ ಶುದ್ಧ ಆ ಸ್ಥಳದಲ್ಲಿ ಒಳ್ಳ ||2||

ಏಳು ಉಪ್ಪರಗಿ ಮನಿ ಅಗಿದು ಮಾಡಿ ಬಿಟ್ಟಿದ ಫಳ್ಳ

ಏಳು ಕೊಪ್ಪರಿಗಿ ದ್ರವ್ಯ ಸಿಕ್ಕಿದ ಮೇಲೆ ಕಳ್ಳಾಗಿದ ಮಳ್ಳ

ವಜ್ರ ವೈಢೂರ್ಯ ರತ್ನ ಗೋಮೇಧಿಕ ಒಯ್ದು ಮುತ್ತು ಹವಳ ||3||

ಶುದ್ಧಾತ್ಮಕ ಮಧ್ಯ ಮನಿಯೊಳು ಇದ್ದು ಮೂರ ಫಳ್ಳ

ಆರು ಮೂರು ನವದ್ವಾರ ಕೆದರಿ ಆರಿಸಿದ ಗೊಳ್ಳ

ಒಳ್ಳೆ ಮನಿ ಉಳಿಸಿ ಬಿಟ್ಟಾಯಿತು ಅಳ್ಳಿಗಳ್ಳ ||4||

ಕಳ್ಳ ಕಳ್ಳೆ ಮಿಳ್ಳೆ ಆಡಿಸಿ ಹಿಡಿಸಿ ಹೋದ ನೆಳ್ಳ

ನೆಳ್ಳಿನೊಳು ಬಿದ್ದು ಆದಿ ಮಹಾ ಮಳ್ಳ

ಇದ್ದ ಮನಿ ಇದ್ದಂತೆ ಆತು ಪೆದ್ದಿ ಇಲ್ಲ ಸುಳ್ಳ ||5||

ಧರೆಯೊಳು ಹಿರೇಸಾವಳಗಿ ಮೆರೆಯುವ ಸ್ಥಳ

ಜಗದ್ಗುರು ಶ್ರೀ ಶಿವಯೋಗಿ ಜಗದ್ಭರಿತ ಝಳ ಝಳ

ಬಿದ್ದ ಮನಿಗಿ ಮಹ್ಮದ ಕವಿ ಬಡಿರೆಂದಿದ ಮುಳ್ಳ ||6||

ತಿಳಕೊಂಡೆ ತಿಳದು ಕಳಕೊಂಡೆ

ಕಳದ ಮೇಲು ತಿಳಿದ ಹುಡುಕಿ

ಅಳಕೊಂಡು ಕಳದು ಬಳಕೊಂಡೆ ||ಪಲ್ಲ||

ತಿಳಿದು ತಿಳದು ತಿಳಿ ನೀರಾಗಿ ತಿಳದು ತಿಳಕೊಂಡೆ

ಕಾಲ ಭೈರವನ ಕಾಲ ಹಿಡಿದು ಕರ್ಮ ಕಳಕೊಂಡೆ

ತಿಳಿದ ಶರಣರ ಉಳಿದ ಎಂಜಲ

ಬಳಿದು ಉಳವಿಯೊಳು ಉಳಕೊಂಡೆ ||1||

ಆಸನ ವ್ಯಸನ ವಿಷಯ ವಿಕಾರ ಹಸನಾಗಿ ತೊಳಕೊಂಡೆ

ಆಶ ಪಾಶ ತಮಾಶಕ ಬೇಸಾಗಿ ಬೆಳಕೊಂಡೆ

ಪರಮೇಶ್ವರನ ನಾಮದ ಪಾಯಸ

ಉಂಡು ಪುರುಷಾಗಿ ಬೆಳಕೊಂಡೆ ||2||

ಎಚ್ಚರ ಶಿಷ್ಯನಾಗಿ ಅರುಗುರವಿನ ಚರಣ ಹಿಡಕೊಂಡೆ

ಮತ್ಸರಕ ಮಚ್ಚಿಲೆ ಬಡಿದು ಎಚ್ಚರ ಪಡಕೊಂಡೆ

ಅಂತಃಕರಣುಳ್ಳ ಗುರುವಿನ ಚರಣ

ಅಧಿಕೆಂದು ದುಡಕೊಂಡೆ ||3||

ಹುಟ್ಟುದೊಮ್ಮೆ ಸಾಯುದೊಮ್ಮೆ ಮುಖಪಾಥ ಮಾಡಿಕೊಂಡೆ

ಉಟ್ಟ ಬಟ್ಟಿ ಬಿಟ್ಟು ಹೋಗುವುದು

ಗಟ್ಟಿ ಎಂದು ತಿಳಕೊಂಡೆ

ದುಷ್ಟ ನಿಗ್ರ ಶಿಷ್ಟ ಪರಿಪಾಲನದಲ್ಲಿ

ಶ್ರೇಷ್ಠಾಗಿ ಕೂಡಿಕೊಂಡೆ ||4||

ಧರೆಯೊಳು ತಿರುಗಿ ಹಿರೇಸಾವಳಗಿ ಊರ ಸೇರಿಕೊಂಡೆ

ಜಗದ್ಗುರು ಶಿವಯೋಗಿ ಪಾದ ಹಿಡಕೊಂಡೆ

ಹರದಾಸ ಮಹ್ಮದನ ಹಸ್ತಿಕಾಗಿ ಉನ್ಮನಿ ಏರಿಕೊಂಡೆ ||5||

ದೇಹ ಸತ್ತಿತೋ ದೇಹಕ ದೇಹನೆ ಹೊತ್ತಿತೋ

ದೇಹಕ ದೇಹನೆ ಹೊತ್ತು ದೇಹನೆ

ಒಯ್ದು ಮಣ್ಣಾಗ ಒತ್ತಿತೋ ||ಪಲ್ಲ||

ಜೀವ ಸತ್ತಿಲ್ಲ ಹುಟ್ಟಿಲ್ಲ ದೇಹ ಸತ್ತು ಚಿತ್ತ ಇತ್ತೋ

ಜೀವ ಶಿವ ಸ್ವರೂಪವೆಂದ

ಒಂದೇ ಜೀವ ಜಾತ ಮುತ್ತಿತೋ

ಈ ದೇಹ ಅನುವಂತ ಹುತ್ತ ಹೇತು ನಾತಿತೋ ||1||

ಜೀವ ಕುಂತಿಲ್ಲ ನಿಂತಿಲ್ಲ ದೇಹಾನೆ ಕುಂತಿತೋ

ಅಂತ ಪಾರವಿಲ್ಲದ ಜೀವ ಶಾಂತಾತೀತ ಜ್ಯೋತಿತೋ

ಜೋತಿರ್ಮಯ ಜೀವ ಹಾರಿಹೋದ

ಮೇಲೆ ದೇಹ ಸೋತಿತೋ ||2||

ಜೀವ ಉಂಡಿಲ್ಲ ತಿಂದಿಲ್ಲ ದೇಹ ಉಂಡು ಪಿಂಡಿತೋ

ಜೀವ ಗುಂಡಿಲ್ಲ ದುಂಡಿಲ್ಲ ಜೀವ್ಯಾರಿಗಿ ಕಂಡಿತೋ

ಜೀವ ಬಯಲು ಬ್ರಹ್ಮ ಬಯಲಾದ

ಮೇಲೆ ಅಲ್ಲೇನು ಜಿಂಡಿತೋ ||3||

ದೇಹ ಪಿಟ್ಟಿ ದೇಹಾನೆ ಹುಟ್ಟಿ ದೇಹ

ಸೊಟ್ಟಿ ಗೆಟ್ಟಿತೋ

ದೇಹ ಜಿಟ್ಟಿ ಅರಿಷ್ಟ ಬಟ್ಟೆ

ಉಟ್ಟು ತೊಟ್ಟಿತೋ

ದೇಹ ಉಟ್ಟಿ ತೊಟ್ಟಿ ಬಟ್ಟಿಗಳೆಲ್ಲ

ಧಳ್ಯಾಗ ಹಾಕಿ ಸುಟ್ಟಿತೋ ||4||

ದೇಹ ಹೆಂಡತಿ ಜೀವ ಗಂಡೆಂದು ಶಾಸ್ತ್ರ ಅಭಯ ಕೊಟ್ಟಿತೋ

ದೇಹ ಫಂಡ ಜೀವ ಪುಂಡೆಂದು ಮಂಡಲ ಓಟ ಕೊಟ್ಟಿತೋ

ಜೀವ ಪಿಂಡದ ಕುಂಡಿ ಮೇಲ

ಬಿದ್ದು ಬ್ರಹ್ಮಾಂಡ ಮುಟ್ಟಿತೋ ||5||

ಧರೆಯೊಳು ಹಿರೇಸಾವಳಗಿ ಗಿರಿ ಘಾಟಿತೋ

ಜಗದ್ಗುರು ಶಿವಯೋಗಿ ಮೀರಿ ಸ್ಥಳದ ಪೀಠಿತೋ

ಹರದಾಸ ಮಹ್ಮದ ಮಾಡುವ ಖ್ಯಾಲಿ

ನಾಗೇಶಿಯವರಿಗೆ ಗೂಟಿತೋ | ||6||

ಮಂಡಲದೊಳಗ ಗಂಡುಳ್ಳ ಗರತೇರು ಕಂಡಿರೇನವ್ವ

ಬಸವನ ಹೆಂಡತಿ ನೀಲಮ್ಮನ ಕೈಲಿ ಉಂಡಿರೇನವ್ವ ||ಪಲ್ಲ||

ಅನಸೂಯನಂತೆ ಗಂಡಗ ತೀರ್ಥ ಕುಡಿಸಿರೇನವ್ವ

ಗಂಡನ ಹೆಬ್ಬೆರಳು ಪಾದೋದಕದಂತೆ ಹಿಂಡಿರೇನವ್ವ

ಅನಸೂಯನಂತೆ ಮಂಡ ಗಂಡನ ಹೊತಕೊಂಡಿರೇನವ್ವ ||1||

ಅನಸೂಯನಂತೆ ಗಂಡಗ ಬಟ್ಟಿ ತೊಡಿಸಿರೇನವ್ವ

ಹುಚ್ಚ ಗಂಡನ ಮನಸಿನ ಇಚ್ಚಾ ಬಿಡಸಿರೇನವ್ವ

ಪತಿವ್ರತಿ ಸತ್ಯ ಸಾವಿತ್ರಿಗಿ ನೋಡಿರೇನವ್ವ ||2||

ಸಾವಿತ್ರಿ ತೀಡಿದ ಸತ್ಯದ ಕಿತ್ತಾ ತೀಡಿರೇನವ್ವ

ಮಡಿದಂತ ಗಂಡನ ಪ್ರಾಣ ಪ್ರತಿಷ್ಠ ಮಾಡಿರೇನವ್ವ

ಚೆನ್ನಮ್ಮನಂತೆ ಸತ್ತ ಗಂಡಗ ಲಗ್ನ ಆಗಿರೇನವ್ವ ||3||

ಗಂಡನ ಗುಡ ಅಗ್ನಿ ಪ್ರವೇಶಕ ಹೋಗಿರೇನವ್ವ

ಸತ್ತಂವಗ ಪಡಸಿ ಸ್ವರ್ಗದ ತೊಟ್ಟಿಲ ತೂಗಿರೇನವ್ವ ||4||

ಧರೆಯೊಳು ಮೆರೆಯುವ ಹಿರೇಸಾವಳಗಿಗೆ ಹೋಗಿರೇನವ್ವ

ಜಗದ್ಗುರು ಶ್ರೀ ಸಿದ್ಧನ ಚರಣಕ ಬಾಗಿರೇನವ್ವ

ಬಡು ಮಹ್ಮದನ ಬೆಡಗಿನ ನುಡಿಗಳು ಕೇಳಿರೇನವ್ವ ||5||

ನಡಿ ಗೆಳದಿ ತಿಳದು ಹಾಜರಕ

ಇಳೆದೇಳು ಭವ ಎಂಬ ಬಾಜರಕ ||ಪಲ್ಲ||

ನಮ್ಮ ತಲಿ ಮೇಲ ತನುವಿನ ಹೆಡಗಿ

ಅದರೊಳು ಘನ ಎಂಬುವ ಗಡಗಿ

ಮನ ಎಂಬ ಮಾಪಿಡಿದು ಮಾರುದಕ ||1||

ಹರನಾಮ ಎಂಬ ಹಾಲು ಹಿಂಡು ಹುಡಗಿ

ನೆಪ್ಪೆಂಬ ಹೆಪ್ಪಾಕು ಮೊಸರಾಗುವುದು ಅಡಗಿ

ಮಥನೆಂಬುವ ಮಜ್ಜಿಗಿ ಕಡಿಯುವುದಕ ||2||

ಭಕ್ತಿ ಎಂಬ ಬೆಣ್ಣೆ ಕಾಸು ಕರಗಿ

ಮುಕ್ತಿ ತುಪ್ಪ ಸೋಸು ಸರಿಯಾಗಿ

ಮಥನೆಂಬುವ ಮಜ್ಜಿಗಿ ಕಡಿಯುವದಕ ||3||

ತತ್ವ ದೇಹದ ತಕ್ಕಡಿ ಅಂಡಿಗಿ

ದೃಢವೆಂಬುವದು ಮೇಲು ದಂಡಿಗಿ

ಆಶ ಪಾಶ ಪಾಸಂಗ ಇಡಬೇಡ ಅದಕ ||4||

ಅರಿವೆಂಬುವ ಆರು ಓಣಿ ತಿರಗಿ

ಗುರು ಹಿರಿಯರ ಚರಣಕ ಎರಗಿ

ಯಾಪಾರ ಮಾಡಿಕೊಂಡ ಸೇರೋನ ಶಿವಲೋಕ ||5||

ಧರಿಯೊಳು ಮರೆಯುವ ಹಿರೇಸಾವಳಗಿ

ಶ್ರೀ ಸಿದ್ಧನಲ್ಲಿ ಸದಾ ದೀವಳಗಿ

ಕವಿ ಮಹ್ಮದ ಕೊಟ್ಟಿದ ಈ ಬದಕ ||6||

ಘಿಲ್ ಘಿಲ್ ಘಿಲ್ ಘಿಲೇರಿ ನಾಗಲೋಕದಿಂದ

ನಡಕೋಂತ ಬಂದಿನಿ ನನ್ನ ಹೆಸರು ನೂರಿ ||ಪಲ್ಲ||

ಷಡ್ವರ್ಣದ ಶರ್ಟ ಶಲ್ವರ ಇಲ್ಲ ಗಗ್ಗರಿ

ಮುಗ್ಗರಿಸಿದ ಮೂರು ಓಡಣೆ ಇಲ್ಲ ಬರೋಬರಿ

ಹಾವಭಾವ ತಿಳಿಯದೆ ನಾನು ಉಟ್ಟಿ ತೊಟ್ಟೆ ಸೀರಿ ||1||

ಅಸನ ವ್ಯಸನ ಹಸನ ಮಾಡಿ ಹಿಗ್ಗಿಲೆ ಹೌಹಾರಿ

ಮುಗ್ಗಿದ ಮಗ್ಗಿ ಬಗ್ಗಿಲೆ ಮುಡಿದೆ ನಾನೆಂತ ನಾರಿ

ಬಗ್ಗಿ ತಗ್ಗಿ ಕುಗ್ಗಿ ಹೋಯಿತು ಆಗಿಲ್ಲ ಹುಸ್ಯಾರಿ ||2||

ಮೂರುವರಿ ಮುತ್ತಿನ ದಂಡಿ ತರಿಸಿದೆ ತರಾತುರಿ

ಆರು ಮಳದ ನಿಳಾದ ಸೀರಿ ಗೋಳಿನ ಗೋರಿ

ಆರುಮೂರು ಒಂಬತ್ತು ತೊಂಬತ್ತಾರು ಫೇರಿ ||3||

ತನುಮನ ಅನು ಆಗಲಿಲ್ಲ ಅರಳಿತು ಅಲ್ಲಿರಿ

ವನದಾಗ ವನವಾಸ ಬಂತು ಬಹುಳಿನ ಖಲಿರಿ

ಸೊಕ್ಕಿಲೆ ತಿಕ್ಕಿ ತಿಕ್ಕಿ ಮುಕ್ಕೆನೆಂಬ ಸವಿಲಿಲ್ಲ ತಲಿರಿ ||4||

ಅರಿಯದೆ ಮರಿಯಾದೆ ಬಿಟ್ಟ ಹಿಡಿದು ನನ್ನ ಸುಲಿರಿ

ನೆಲಿ ಇಲ್ದ ಖಲಿ ಕಲ್ಲಾಗ ಭಲೆ ಭಲೆ ನನ್ನ ಕೊಲರ್ರಿ|

ಕಡಿಗೂ ಮಡಿಯ ಕೂಲಿ ಮಾಯಲಿಲ್ಲ ಮರಣದ ಖಲಿರಿ ||5||

ಧರೆಯೊಳು ಹಿರೇಸಾವಳಗಿ ಸಿದ್ಧನ ಶಿಲಿರಿ

ಶಿಲಿಯಲ್ಲಿ ಅಲಿ ಎದ್ದಿತು ಪುಷ್ಪದ ಎಲಿರಿ

ಎಲಿಯಲ್ಲಿ ನೆಲಿಯಾಗಿ ಉಳಿದಸ್ತಗಿರ ಕಲಿರಿ ||6||

ಮೂರಕ ಬಿಟ್ಟು ಮುಕ್ತಿ ಇಲ್ಲ

ಆದಿಶಕ್ತಿ ಎಲ್ಲಿ ಅಳಿತ

ಗಾದಿಯ ಮಾತ ಚೋದಿ ಕೇಳ

ನಡು ಹಾದ್ಯಾಗ ಅದು ಕಳಿತ ||ಪಲ್ಲ||

ಸೃಷ್ಟಿ ರಚನಾಲಯ ಕರ್ತನಾಗಿ

ಹರ ಹರಿ ಬ್ರಹ್ಮದತ್ತ

ಜನನ ಮರಣ ಅನುಕರಣ

ಎಲ್ಲಿ ಯಾರಿಗಿ ತಿಳಿದಿತ್ತ

ಮರಣ ಮಳೆ ಮಾರಾಟ ಮೂರು

ಅಲ್ಲಿ ಯಾರಿಗಿ ಸಿಕ್ಕಿತ್ತ ||1||

ಬಾಲ್ಯ ಯೌವ್ವನ ಮುಪ್ಪಿಗಿ

ನೋಡಿ ಗಪ್ಪಾಗಿ ನಕ್ಕಿತ್ತ

ಹಾಲಿಗಿ ಹೆಪ್ಪ ಮಸರೈತಿ

ಒಪ್ಪ ಬೆಣ್ಣಿಗಿ ತಿಕ್ಕಿತ್ತ

ತಿರುಮರು ಆರುವಾಗಿ

ತಿಕ್ಕರದಾಗ ತುಪ್ಪಾಗಿ ಉಕ್ಕಿತ್ತ ||2||

ಉದಯ ಮಧ್ಯ ಸಾಯಂಕಾಲ

ಇಲ್ಲಿ ಸರಿ ಸಮಯದ ಇತ್ತ

ಲಿಂಗ ಅಂಗದ ಅನಂಗದೊಳು

ಗಮ ಗಮನಾರಿತ್ತ

ಗಂಡ ಹೆಣ್ಣ ಹೆಣ್ಣಿನ ಬಣ್ಣ

ಹಿಜಡ್ಯಾ ಬಾರಿತ್ತ ||3||

ಜ್ಞಾನ ಅಜ್ಞಾನ ಸುಜ್ಞಾನ ಸಗಟ

ಸಾಲಿಯ ಸಾರಿತ್ತ

ಭಯ ಭಕ್ತಿ ಮುಕ್ತಿಯಿಂದ ಮುಂದ

ಮುರಾಗಿ ಮೂರಕ ಹಿರಿತ್ತ

ನಯ ವಿನಯ ಅನಯದೊಳು

ಅರ್ಥ ಆರಿತ್ತ ||4||

ಅವಗುಣ ಶಿವಗುಣ ದೈವಗುಣ

ಇವು ನೇರಾಗಿ ತೋರಿತ್ತ

ಅಣುರೇಣು ತೃಣದಲ್ಲಿ ತೃಪ್ತಿ

ಪಡಿರಿ ಪಾಖಂಡ ಕಾರಿತ್ತ

ಆಡಿನುಡಿ ತೊಡಿಸಮ ಮೂರಕ

ಹಿಡಿರಿ ಹಿಡಿದರ ಜಾರಿತ್ತ ||5||

ಧರಿಗಿರಿ ಸಾವಳಗಿ ಗಿರಿ ಧರಿಸಿದ್ದ

ಮೂರಕ್ಕೆ ಮೂರೈತ

ಹರದಾಸ ಮಹ್ಮದ ರವಿಭವಿ

ಕವಿಯಾಗಿ ಕಣ್ಣಿಗಿ ತೋರಿತ್ತ

ಕೆಲಸ ತಾಪದಿ ರೂಪ

ಕೆಟ್ಟಿತ್ತು ದಸ್ತಗಿರ ಅರಿತ ||6||

ಅಪು ಅಗ್ನಿ ನುಂಗಿ

ಎಂಥ ತಾರಿಪ ತಂಗಿ ||ಪಲ||್ಲ

ದರ್ಪುಳ್ಳ ಶರ್ಪಭೂಷಗ ಕರ್ಪೂರ ನುಂಗಿ

ಕರ್ಪೂರದ ಮೆರ್ಪಕ್ಕಾಗಿ ತಿರ್ಪಾಗಿಳು ಗಂಗಿ

ಉರ್ಪ ಉರ್ಪ ಉರ್ಪೆಂದು

ಹುರ್ಷಿಲಿ ಹಾರ್ಯಾಳೋ ಶಿವಲಿಂಗಿ ||1||

ಇಪ್ಪತ್ತೊಂದು ಸ್ವರ್ಗಕ ನೆಪ್ಪಿಲೆ ಕಪ್ಪಿ ಹೋಗಿ ನುಂಗಿ

ಏಳು ಹೆಡಿ ಶರ್ಪಿಗಿ ಕಪ್ಪಿಗಿ ಕುಸ್ತಿ ನಡಿತು ಜಂಗಿ

ಕಪ್ಪಿ ಹೋಗಿ ತಿಪ್ಪಿಯೊಳು ಸೇರಿ

ತೊಟ್ಟಿತು ಮಾಡಿ ಅಂಗಿ ||2||

ಒಪ್ಪುಳ್ಳ ಕಪ್ಪನ ಗುರಡಿ ಕಣ್ಣಿಗಿ ಹೋಗಿ ನುಂಗಿ

ಜಪ್ಪಿಸಿ ಹಾಕಿದ ಹೆಪ್ಪು ತುಪ್ಪಕ ಹೋಗಿ ನುಂಗಿ

ದೀಪ ಧೂಪ ನೈವಿದ್ಯಾ ಎಲ್ಲಾ ಜಪ ತಪ ನುಂಗಿ ||3||

ಏಳು ಉಪ್ಪರಿಗಿ ಗಪ್ಪನೆ ಹಾರಿ ಉಪ್ಪ ಸಮುದ್ರ ನುಂಗಿ

ದಪ್ಪಾದ ತಿಪ್ಪ್ಯಾನ ಸೊಪ್ಪ ಹಾರಿ ಹೋಗಿ ಹಪ್ಪಳ ನುಂಗಿ

ತ್ರಿಪುರಾಂತಕ ತ್ರೀಪೂರ ಹೊಕ್ಕು ತ್ರಿಮೂರ್ತಿಗೆ ನುಂಗಿ ||4||

ಇಂದ್ರ ಮಹಿಂದ್ರ ಜಾಲ ಸೂರ್ಯ ಚಂದ್ರಗ ನುಂಗಿ

ಇಂದ್ರಾದಿ ಅಷ್ಟ ದಿಕ್ಪಾಲಕರಿಗಿ ಮಂದರ ನುಂಗಿ

ಇಂದುಧರ ನಂದಿ ವಾಹನಗ ವೃಷಬಿಂದ್ರ ನುಂಗಿ ||5||

ಕಾಡಿನೊಳು ಇದ್ದ ಕೋಡಗಗ ಪ್ರೌಢ ಕೋಳಿ ನುಂಗಿ

ಆಡ ಮಾಡ ನುಂಗಿ ಗೋಡೆ ಸುಣ್ಣ ನುಂಗಿ

ಬಿಡುಗಡೆ ಇಲ್ಲದೆ ಓಡ್ಯಾಡಿ ನೋಡಿದೆ ಮಾಡ ಮುಗಿಲ ನುಂಗಿ ||6||

ಧರೆಯೊಳು ಹಿರೇಸಾವಳಗಿ ಸಿದ್ಧಗ ಧರಿಗಿರಿ ನುಂಗಿ

ಮರುಗೇಡಿ ಗರೀಬ ಮಹ್ಮದಗ ಗುರುವಿನ ಅರು ನುಂಗಿ

ಹುಚ್ಚ ಕಾಶಿನಾಥಗ ಎಚ್ಚರದ ಮಶ್ಚರ ನುಂಗಿ ||7||

ಖೊಟ್ಟಿ ಸೂಳೇರು ರಾಟಲ ಇಟ್ಟಾರ

ಅಷ್ಟು ಅನಾನುಕೂಲ

ನಷ್ಟ ಶರೀರ ರಾಟಲ ಕೆಟ್ಟು ಕೂಲ ಆಗ್ಯಾವ ಸೈಲ

||ಪಲ್ಲ||

ರಾಟಲದ ಅಗಲ ಉದ್ದಳತೆ ಮೂರುವರಿ ಮೈಲ

ಒಳಗ್ಹೊಕ್ಕಿ ನಿಕ್ಕಿ ನೋಡಿದರ ಬೈಲಿಗಿ ಬೈಲ

ಬಾವನ ಅಕ್ಷರಲಿ ಬ್ರಹ್ಮ ಬಡಿಗ್ಸಾಮುಗಶ್ಯಾನ ಅದರ ಹೊಯಿಲ ||1||

ಆರು ಆರು ಮೂವತ್ತಾರೆ ಮುಖ್ಯ ಅದರ ಹುಗಿಲ

ಈಡ ಪಿಂಗಳ ಆಸ್ತಿ ಖಂಬ ಎರಡು ಮಗ್ಗಲ

ಸ್ಥೂಲ ಸೂಕ್ಷ್ಮ ಕಾರಣ ಚರ್ಮ ಸುತ್ತ್ಯಾದ ತೊಗಲ ||2||

ಅಸತ್ಯ ದೇಹದ ಹೊಲ ಇಕಿ ಹಿಡದಾಳ ಕಾಲ

ಸತ್ಯ ಅಸತ್ಯ ಎಂಬುವ ಹತ್ತಿ ಪತ್ತಾ ಇಕಿ ಬಿತ್ತಿಲ್ಲ

ಜಗತ್ತದ ಮಿಥ್ಯದ ಕಸ ಹೊಲಸಿಟ್ಟದ ಹೌಲ ||3||

ಶಾಂತಿ ಸಮೆ ಧಮೆ ಸಾಧಿಸಿ ಹೊಡಿಸು ರಾಟಲ

ಆಶಾ ಪಾಶಾ ತಮಶ್ಯಾದ ಇಟ್ಟಿದಿ ಹೋಟಲ

ಅಸಲಿ ರಾಟಲ ಠಿಸಲೋಡೆದಾಟ ಮುಸರಿ ಇನಾ ತೊಳದಿಲ್ಲ ||4||

ಧರೆಯೊಳು ಹಿರೇಸಾವಳಗಿ ಊರೈತಿ ಅಸಲ

ಜಗದ್ಗುರು ಸಿದ್ಧನ ರಾಟಲ ಬಿದ್ದಂಗ ಎಳಿ ಬಿಸಲ

ಸಿದ್ಧನ ಪಾದಕ ಬಿದ್ದು ಮಹ್ಮದ ಅನಿಸಿದ ಕುಶಲ ||5||

ಅಂಗನ ಮಣಿಯರು ಅಂಗದ

ಅನಂಗ ಅಳಿಯನು ಬರ್ರೆವ್ವ

ಗಂಗಾ ಯಮುನಾ ತುಂಬ

ಭ್ರಮೆಯಲಿ ತೊಳೆಯನು ಬರ್ರೆವ್ವ ||ಪಲ್ಲ||

ಆಶಾಪಾಶ ತಮಾಶ ನಾಶ ಇವು ಕಳಿಯನು ಬರ್ರೆವ್ವ

ಆಶನ ವ್ಯಸನ ವಿಷಯ ವಿಕಾರ ಸೆಳೆಯನು ಬರ್ರೆವ್ವ

ಪ್ರಾಣೇಶನ ಹಾಸಿಗೆಯ ಮೇಲೆ

ಪ್ರಕಾಶನಾಗಿ ಹೊಳಿಯನು ಬರ್ರೆವ್ವ ||1||

ಅರಿಷಡ್ವರ್ಗಕ ಅರಿತು ತುರ್ತು ನಾವು ತಡಿಯನು ಬರ್ರೆವ್ವ

ಅಂಗನ ಪ್ರಾಣೇಂದ್ರಿ ಪ್ರಸಾದ ಕುಡಿಯನು ಬರ್ರೆವ್ವ

ಜಂಗಮವೇ ಜಗಭರಿತವೆಂದು

ಜಾಂಗುಟಿ ಹೊಡಿಯೇನು ಬರ್ರೆವ್ವ ||2||

ಮೆಚ್ಚಿ ಅಚ್ಚುತನ ನಾಮ ಹೆಚ್ಚೆಂದು ನಡಿಯನು ಬರ್ರೆವ್ವ

ಅಚ್ಚ ಉಚ್ಚ ಮತ್ಸರ ಬುದ್ಧಿಗೆ ಕಡಿಯನು ಬರ್ರೆವ್ವ

ನೀಚತನ ಮಾಡು ಲುಚ್ಚಮನ

ಮಚ್ಚಿಲೆ ಹೊಡಿಯನು ಬರ್ರೆವ್ವ ||3||

ಪತಿಯಿಂದ ಪರಲೋಕ ಸತಿಯಿಂದ ಸದ್ಗತಿ ಸೇವೆ ಮಾಡನು ಬರ್ರೆವ್ವ

ತನು ಮನ ಧನ ಪ್ರಾಣೇಶನ ಚರಣಕ ನೀಡನ ಬರ್ರೆವ್ವ

ಮಂಡಲದೊಳಗಿನ ಗಂಡುಳ್ಳ

ಗರತಿಯರಾಗಿ ಹಾಡನು ಬರ್ರೆವ್ವ ||4||

ಧರೆಯೊಳು ಹಿರೇಸಾವಳಗಿ ಹೋಗೋನು ಬರ್ರೆವ್ವ

ಜಗದ್ಗುರು ಶ್ರೀ ಸಿದ್ಧನ ಪಾದಕ ಬಾಗನೋ ಬರ್ರೆವ್ವ

ಮಹ್ಮದ ಕವಿ ಕಾಮಧೇನು

ಕಾವ್ಯ ಕೂಗನು ಬರ್ರೆವ್ವ ||5||

ಗೋಕುಲ ಗೊಲ್ಲರ ಹುಡಗಿ ತುಂಟಿ

ಗೋಲಮಾಲ ಮಾಡಿ ಗೊಲ್ಲ ನೇಯ್ದ

ಬುಟ್ಟಿ ಹೊತ್ತು ಬಾಜಾರ ಹೊಂಟಿ ||ಪಲ್ಲ||

ಮುರಕ ಮಾಡಿ ತರಕ ಹಾರಿ ಫರಕಿ ತಂದೆ ತುಂಟಿ

ಬುರಕಾ ಹಾಕಿ ಹರಕ ಸಿಂಬಿ ಹೊತ್ತಿ ಮುಳ್ಳಿನ ಕಂಟಿ

ಸರ್ಕಸರ್ಕ ಎಂದು ಸಪ್ಪಳ ಮಾಡುತ್ತ

ಮುರ್ಕ ಮನಿಗಿ ಹೊಂಟಿ ||1||

ಅಂಗಳದಾಗ ಸಂಗೊಳ್ಳಿ ಮಾಮಾ ಸುಲಿತಿದ್ದ ಮುಳ್ಳಕಂಟಿ

ಮೂರು ಸುತ್ತು ಒತ್ತಿ ಹಾಕಿದ ಮುತ್ತಿನ ಲಂಗೋಟಿ

ಹ್ವರಿ ಇಳಿಸಿ ಸರಿಯಾಗಿ ಹೊಡಿದ

ಬುಡದಾಗ ಮೃಢಗಂಟಿ ||2||

ಅಘಮ ನಿಘಮ ಸುಗಮ ಮಾಡಿದ ಕೆತ್ತಿ ಫರ್ಕಿ ಜಂಟಿ

ದಣಿದು ಹೆಣದ ಬುಟ್ಟಿ ಹೊತ್ತು ಕುಣಿದು ಹೊಂಟಿ

ಆರು ಕಾಶಿಗಾಗಿ ಹೇಸಿ ನೀನು

ಫಾಸಿ ಮಾಡಿದೆ ಮೆಂಟಿ ||3||

ಅಸನ ವ್ಯಸನ ಹಸನ ಮಾಡಿಲ್ಲ ತಳದಾಗೆ ತುಂಟಿ

ಆಶೆಯೆಂಬ ಕಾಸಿಗಿ ಮಾರಿ ಪಾಶಕ್ಕೆ ಹೋಗಿ ಅಂಟಿ

ಜಂಟಿ ಜಗರಾಮ ಜಗದಾಗ ಜರ್ಬಿಲೆ

ಕೂಡ್ಸಿದ ಇಂಬಿನ ಸುಂಟಿ ||4||

ಬೃಗು ರಾಮನ ಬಾಜಾರದಾಗ ಸಾಜರಿಲ್ಲಿ ಸೆಂಟಿ

ಸಾಜರದ ಸಾಮಾನುಕೊಳ್ಳಾಗ ಕುಂಟ ಹಾಕಿದ ಘಂಟಿ

ಸೆಂಟಿ ಸಂಟಾ ಹರಿದು ಒಂಟ್ಯಾಗಿ

ಹೊಂಟಿಕೊಂಡು ಮಣ್ಣಿನ ಹೆಂಟ ||5||

ಧರೆಯೊಳು ಹಿರೇಸಾವಳಗಿ ಧರಿಗಿರಿ ಅಂಟಿ

ಜಗದ್ಗುರು ಶ್ರೀ ಶಿವಯೋಗಿ ಅಲ್ಲಿ ಆರೂಢ ಫೆಂಟಿ

ಕವಿ ಹರದಾಸ ಮಹ್ಮದ

ಹೊಡಿದ ರಂಟಿ ||6||

ಹಾಡ ಹಗಲೆ ಮಲಗಂತಾಳ ಮಲ್ಲಿ

ಚೌರೈಂಸ್ಸಿ ಜನ್ಮ ತಿರಗಿ ಬಂದಾಳ ನನ್ನ ಬಲ್ಲಿ ||ಪಲ್ಲ||

ತ್ರಿನೇತ್ರ ತ್ರಿಶೂಲ ತ್ರಿಗಾತ್ರ ಚೋಲಿ

ತ್ರಿರಷ್ಟು ತ್ರಿಭಸ್ಮ ತ್ರೀಕಸ್ಮದ ಸೀರಿ ನೀಲಿ

ತ್ರಿಪುರದರ ತ್ರಿಂಬಕೇಶ್ವರ ತ್ರಿಪುರಾರಿ ಬಳಿಯಲ್ಲಿ ||1||

ಆಶಾಪಾಶ ರೋಷ ದ್ವೇಷ ತುಂಬಿದ ಖೊಲಿ

ಕಾಮಕ್ರೋಧ ಮದ ಮೋಹ ಕೋದಂಡದ ತೊಲಿ

ಅರಿಯದೆ ಅಲ್ಪ ಆಯುಷ್ಯಕ್ಕೆ ಸಿಕ್ಕ ಮುರಕೊಂಡಾಳ ಕೀಲಿ ||2||

ಅಂಗ ಕೊಂಗ ಭಂಗ ಮಾಂಗ ಸಂಗದ ನಾಲಿ

ಸಂಗ ಹಂಗ ತಂಗ ಲಂಗಾ ಸಿಂಗಾರದ ಸೂಲಿ

ಹಾಡ ಹಗಲೆ ಹರುಷದ ಪುರುಷ ಹೊಡದಿದ ಝೋಲಿ ||3||

ಸಾಗು ಕೂಗು ಮೂಗು ನೀಗು ಸೋಗಿನ ಸವಿಯಲ್ಲಿ

ಹಿಗ್ಗು ಬಗ್ಗು ಸಗ್ಗು ಗುಗ್ಗು ಸುಗ್ಗಿಯ ಸನಿಯಲ್ಲಿ

ಆಯಾ ಖಾಯ ಮಾಯದೊಳು ಮರೆತು ಮನಗಿದಿ ಮನಿಯಲ್ಲಿ ||4||

ವೀರ ಶೂರ ಧೀರ ಪಾರ ಈರನ ಎಳಿಯಲ್ಲಿ

ಹೇರ ಫೇರ ಘೋರನಾದ ನಾದಿನ ಸುಳಿಯಲ್ಲಿ

ಯಾರ ಯಾರ ಯಾರ ಅನ್ನುತ ಹೋದಿ ನಿದ್ದಿಗಣ್ಣಲ್ಲಿ ||5||

ಧರೆಯೊಳು ಹಿರೇಸಾವಳಗಿ ಧರಿಗಿರಿಯ ಎರಿಯಲ್ಲಿ

ಜಗದ್ಗುರು ಶ್ರೀ ಸಿದ್ಧಗ ಶುದ್ಧ ಶಮಲಶೈಲಿ

ವರಕವಿ ಹರದಾಸ ಮಹ್ಮದ ಕುಡಿದವನ ಪ್ಯಾಲಿ ||6||

ಹೇಡಿ ಲೌಡಿದು ಜಡವಾದದ್ದು ಈ ಕೊಡ

ಪ್ರೌಢ ಬ್ರಹ್ಮ ಗಡಗ್ಯಾಗ ಮಾಡಿದ

ಬುಡಕಿಲ್ಲದಾ ಬುಡಾ ||ಪಲ್ಲ||

ನಡನಿಲ್ಲದ ಕೊಡ ತಗೊಂಡು

ನಡದಾಳಕಿ ನೋಡಿಲ್ಲ ಪಾಡ

ದೃಢವಿಲ್ಲದ ಕೊಡ ಹೊತ್ಕೊಂಡು

ಖೋಡಿ ತಿರಗ್ಯಾಳ ನಾಡಿಗಿ ನಾಡ

ದಿನ್ನ ಕಟಕಟ ದಿನ್ನ ಕಿಡಕ್ಯಾಗ

ತೊಡಕ ಒಂಬತ್ತು ಮಾಡ ||1||

ಕೊಡ ಹೊತ್ಕೊಂಡು ಮಡುಕ ಹೋಗಿಳು

ಮಡು ನುಡಿದಿತ್ತು ಬುಡ ಬುಡ

ಆಡಾಡಿ ಮಾಡಿ ಮಡಾ ಇಳದಿಳೋ

ಕಡಿಗೆ ಬಂದಿತು ಫಡಾಡ

ಇದು ಫಾಡಲೆಂದು ಓಡಿ ಬಂದಳು

ಕಾಡ ಅಂದಿತು ಕಡಡ ||2||

ತಿದ್ದಿ ತೀಡಿ ಮಾಡಿದ ಕುಂಬಾರಗ

ಬೈದಿಳು ಒಡ ಒಡ

ನೋಡಿಲ್ಲ ಮಾಡಿಲ್ಲ ಆಡಾಡ್ಯಾಗ

ತಂದಾಳ ಬಡ ಬಡ

ಕೊಡ ಕೊಡಾಗ ಸಿಕ್ಕಿತೆಂದು ಹಾಡಿ ಹಾಡಿ

ಅತ್ತಿಳು ಕುಡ ಕುಡ ||3||

ಕೊಡ ಹೊತ್ತು ಅಡಿ ಇಟ್ಟಾಗ

ಎದಿ ಅಂತೈತಿ ಧಡ ಧಡ

ಕಡಾ ಕೊಡಬೇಡಿದ್ರ

ಕೊಡಬೇಡಂತ ಥಳ ಥಳ

ನಾನೆ ಮಾಡಿ ನಾನೆ ಕೊಡ ಹೊತ್ತು

ಕಾಡ ಸೇರುವೆ ಸುಡಗಾಡ ||4||

ಕೆಡಕ ಕೊಡ ಹೊತ್ತು ಮಿಡಕ್ಯಾಡಿ

ಹುಡಕಿಳು ಅಡಮಡ

ಹುಡಕಿ ಹುಡಕಿ ದುಡಕಬೇಡ

ನಿನ್ನ ಹಣಿಬಾರ ಕೇಡ

ಸೀದಾ ಸೆಡಕ ಹಿಡಿದು ನಡದು

ಕಡಿ ಮನಿಯೊಳು ಓಡ್ಯಾಡ ||5||

ಪೊಡವಿಯೊಳು ಹಿರೇಸಾವಳಗಿ

ನಡಗಡ್ಡಿ ಬೇಡ

ಪ್ರೌಢನ ಅವತಾರಿಕ

ಶಿವಯೋಗಿ ಆರೂಢ

ಕಡುಗಲಿ ಬಡು ಮಹ್ಮದನ ಕೊಡ

ಹೊತ್ತು ಹುಡಗಿ ಕಡಿಮಾಡ ||6||

ಪೀರ ಫೇರಿ ಹಾಕುತ ಸೀರಿ ತಂದಾನ ಘನ ಮೂಢ

ತನು ಮನ ಧನ ಅರುವಿಲ್ಲ ಎಲ್ಲಾನು ಆರೂಢ ||ಪಲ್ಲ||

ಬಲ್ಲ ಬಳಿಕ ಅನ್ನದೆನಲ್ಲಿ ನಲ್ಲನ ಒಳಗೂಡ

ಅಲ್ಲಿ ಇಲ್ಲಿ ಎಲ್ಲಿಯೂ ಹಾನ ಅಲ್ಲಮ ನಿನ್ನ ಜೋಡ

ಗುಲ್ಲಸಲ್ಲ ಬಲ್ಲವಳಾಗಿ ಖುಲ್ಲಾಂ ಖುಲ್ಲ ಕೂಡ ||1||

ಚಿದ್ರೂಪ ಚಿದಘನ ಚಿತ್ಕಲ ಚೀರವರ ನೋಡ

ತದ್ರೂಪ ಅದ್ರೂದಿ ಹೋಗಿ ರುದ್ರನಲ್ಲಿ ಆಡ

ಅರು ಕಳಿದು ಮರುವಿಲೆ ಹೋಗಿ ಹರನಲ್ಲಿ ಹರದಾಡ ||2||

ನೀಲಿ ಸೀರಿಗಿ ನಿಲಗಿ ಎಂಟು ನಿರುಪಮ ನಿರ್ಗುಡ

ಚುನರಿ ಚೌರೈಂಸಿ ಹೊಲಗಿ ಇದ್ದವು ಬಲು ಪಾಡ

ಕೇರ್ಯಾಗ ಹೋಗಿ ವಾರಿ ಬಿದ್ದಿಳು ನೂರನ ಹಳಿ ಬಿಡ ||3||

ಸೀರಿಗಿ ಸರಿ ಪ್ಯಾರಿ ಕುಪ್ಪಸ ಕಂಡಿಲ್ಲ ಈ ರೂಢ

ಅಣು ರೇಣು ತೃಣ ಕಾಷ್ಠದಲ್ಲಿ ತವರಿನ ಗೂಡ

ಸಾವಿರದೆಂಟು ಸಲ ತಿರಗಿದರು ಸಿಗಲಿಲ್ಲ ತಿಳಿ ಮೋಡ ||4||

ಚಿನ್ನದೊಡವಿ ಚರ್ಮಾಂಭರ ಉನ್ಮನಿ ಕಡಿರೋಡ

ಜಡದಿಂದ ಮೃಢ ದೊರೆತಾನು ಮಹಾದೇವ ಪ್ರೌಢ

ಕೂಡಿ ಆಡಿ ಕಾಡಿ ಬೇಡಿ ಸೇರು ಸಸುರವಾಡ ||5||

ಧರೆಯೊಳು ಹಿರೇಸಾವಳಗಿ ದಕ್ಕನ್ನ ಕಡಿನಾಡ

ಶ್ರೀಮನ್ ನಿರಂಜನ ಶಿವಯೋಗಿ ಮಂಜಿನ ಹೊಳಿಗಿಡ

ವರಕವಿ ಹರದಾಸ ಮಹ್ಮದ ಮುತ್ತಿನ ನುಡಿ ತೀಡ ||6||

ಸತ್ತಮ್ಯಾಲ ಅತ್ತರೆ ಏನು ಮೂಳ

ಹೊತ್ತಾಕು ತಿಳಿಗೂಳ

ತಿಳುವಳಿ ತಿಳಿಯಾಗಿ

ಇರಬೇಕು ತಿಳಿ ಆಳ ||ಪಲ್ಲ||

ಸತ್ತಾವ ಸತ್ತೆ ಸತ್ತಾನ ಮಳ್ಳ

ತಿರುಗಿ ತಿರಗಿ ಒಂಬತ್ತು ಹಳ್ಳ

ಕಾಲಾಗ ಮುರಿಕೊಂಡು ನೆಗ್ಗಿಯ

ಮುಳ್ಳ ಮುಳ್ಳ ಮುರದಾಗೆ ಹರಿದಿತ್ತು ಡೊಳ್ಳ ||1||

ಡೊಳ್ಳ ಹರದಾಗ ಹಾಕಿದ ಸಿಳ್ಳ

ಸಿಳ್ಳಿಗಿ ಕೇಳಿ ಬಂದಾನ ಕಳ್ಳ

ಬಾಯಾಗ ನೂಕಿದ ಕಾಕಿಯ ಎಳ್ಳ

ಸೆಕಿಗಿ ನೋಡಿಲ್ಲ ನುಡದಾನ ಸುಳ್ಳ ||2||

ಹೊತ್ತು ಹೊಂಟಾನ ಹಗಲು ಇರುಳ

ಬಾಯಿಗಿ ಬರತಿವು ಹೊಟ್ಯಾನ ಕರಳ

ದಾರಿ ಸಿಗಲಿಲ್ಲ ವಾರ್ಯಾಗ ಸರಳ ಕುರುಡ

ತೋರಶ್ಯಾನ ಕೈ ಮಾಡಿ ಬೆರಳ ||3||

ದಡ್ಡರು ಹಚ್ಚಿ ತೋಳಿಗಿ ತೋಳ ಮಣ್ಣಾಗ

ಮುಚ್ಚಾಗ ಹೆಚ್ಚಿನ ಗೋಳ

ಕಣ್ಣೀರ ಹಾರ್ಯಾವ ಕಡದಂಗ ಚೇಳ ಕುಣಿಯಲ್ಲಿ

ಬಿತ್ತು ಹೆಣ ಆಗಿಹೋಳ ||4||

ಮಾಯ ಸಂಸಾರ ಮಾಯಿಲೆ ಹಾಳ

ದಯೆ ಮಯೆ ಇಲ್ಲ ಲಯಕರ್ತ ಖೂಳ

ಖೂಳಮಾರಿಗಿ ಹಾರ್ಸಿದ್ದು ಧೂಳ

ಧೂಳ ದುಮ್ಮಸ ಗುಮ್ಮಟ ಗೋಳ ||5||

ಗುಮ್ಮಟ ಗೋಳು ಅದರಾಗೆ ಬೀಳ

ಕದರ ಇಲ್ಲದೆ ಒದರಾದು ಕೀಳ

ಅದುರನ ಮಾತ ಬಿದುರಿನ ರೂಳ ರೂಳ

ಮುರಿದಾಗ ಮುತ್ತಿಷ್ಟ ಗೋಳ ||6||

ಧರೆಯೊಳು ಮೆರೆಯುವ ಹಿರೇಸಾವಳಗಿ ಮೇಳ

ಜಗದ್ಗುರು ಶಿವಲಿಂಗ ನೆನದಲ್ಲಿ ಭಾಳ

ಕಮರಿ ಮಠದ ಮಂಗಲನೆಳ್ಳ

ಕಂದ ದಸ್ತಗಿರಿ ನೆಳ್ಳಾಗ ಉಳ್ಳ || ||7||

ದುಡುಕೋ ನೀ ದುಡಕೋ

ದುಡಿತದ ದುಡ್ಡ ಪಡಕೋ

ಪಡದ ದುಡ್ಡು ಹಿಡಕ್ಯಾಗ ಒತ್ತಿ ಹಿಡಕೋ ||ಪಲ್ಲ||

ದುಡಿತ ಇರುವದು ದುಡ್ಡಿನ ಬುಡಕೋ

ದುಡ್ಡು ಮುರಿತಾದ ದಡ್ಡನ ಹೆಡಕೋ

ಹೆಡಕಿನ ಬುಡಕ ಇರತಾದ ಫಡಕೋ

ಫಡಕ ಬಿದ್ದಲ್ಲಿ ಜಡ ಆಗಿ ಅಡಕೋ ||1||

ಮೆಡಕ ಹೊತ್ಯಾದ ದುಡಕಿನ ಕೊಡಕೋ

ಕೆಡಕಿನ ಕೊಡ ಒಡದಾದ ಬುಡಕೋ

ಬಡಿದಿದ್ದ ಕೊಡ ಇರುವುದು ಹಡಕೋ

ಹಡಕಿ ಹಿಡಿಕೊಂಡ ದುಡುಕಿಗಿ ತೊಡಕೋ ||2||

ತಡಕ ಬಿಟ್ಟಾಗ ದುಡಕಿನ ತೊಡಕೋ

ದುಡಕನ ಹಿಡಿಕೊಂಡ ಕಂಡಾಂಗೆ ಕೂಡಕೋ

ಹೊಡದ ನಂತರ ಹೊಡದಲ್ಲಿ ಸಿಡಕೋ

ಸಿಡಕ ಸಿಕ್ಕರೆ ಗುರುವಿನ ಕೂಡಕೋ ||3||

ಗುರುವಿನ ಅಡಿಯಲ್ಲಿ ಅರಿವಿಲೆ ಅಡಕೋ

ಅರುಗುರುವಿಗಿ ಅರುವಾಗಿ ನಡಕೋ

ನಡೆದಂತೆ ಖಡಾಖಡಿ ನುಡಿದಂತೆ ನಡಕೋ

ನಡಿ ನುಡಿ ಸರಿಯಿಟ್ಟು ಅರಿದುಡ್ಡು ಪಡಕೋ ||4||

ಪಡದ ಪಾಪಿ ದುಡ್ಡ ಅಡ್ಡ ಹಾಕಿ ಕಡಕೋ

ಕಡಿದಿದ್ದ ಕಡಿತಕ ತೀಡಿ ಕುಡಕೋ

ಕುಡಿತದ ಅಮಲೇರಿ ಹಿಡಿ ಗುರುಗಿಡಕೋ

ಗಿಡದ ಬುಡದಲ್ಲಿ ಮೃಢಹನ ಮಿಡಕೋ ||5||

ಮಿಡಕಿದ ತೂತಗ ಅದೋ ಹಡಕೋ

ಹಡಕ ಆದದ್ದು ಲೋಕಕ್ಕೆ ಕಡಕೋ

ಕೆಡಕಿನ ಕಳದು ಹಿಡಿ ನೀ ಮೃಢಕೋ

ಮೃಡ ಹರಿ ಮಹಾದೇವ ಮೆಚ್ಯಾನ ದೃಢಕೋ ||6||

ಧರೆಯೊಳು ಹಿರೇಸಾವಳಗಿ ನಡಕೋ

ಜಗದ್ಗುರು ಸಿದ್ಧನ ಪಾದ ಹಿಡಕೋ

ಮಹ್ಮದ ಕವಿಯಲ್ಲಿ ಮೃದುವಾಗಿ ದುಡಕೋ

ಅರುಗುರುವಿನಿಂದ ಅಮೃತ ಪಡಕೋ ||7||

ಸಿಕ್ಕಪ್ಪ ಸಿಕ್ಕು ನಕ್ಕಪ್ಪ ನಕ್ಕಿನ ನಕ್ಕವನೆ ಬಿಕ್ಕಪ್ಪ

ಮಡದಿ ಮಾಯದ ಮೋಹಕ ಸಿಕ್ಕಿದಿ ಲಕ್ಕಪ್ಪ

ಬಡದ್ಯಾಡಿ ಬೆಂಡಾದ ಮೇಲೆ ತಿಳಿದಿತ್ತು ಲೆಕ್ಕಪ್ಪ ||ಪಲ್ಲ||

ಹಡದವರಿಗೆ ಬಡದಿತ್ತು ತುಡುಗ ಸೊಕ್ಕಪ್ಪ

ನಿನ್ನ ಒಡಲೊಳು ಮಾಡಿ

ಬಡಿಯುವ ಹುಡುಗರದ್ಯಾವ ಲೆಕ್ಕಪ್ಪ ||1||

ಮಾಡಿದ ಕಡಬು ಮಹಾರಾಯ

ಉಣಬೇಕು ಯಾರಿಗೆ ದುಃಖಪ್ಪಾ

ನೀ ಹೊಡಗಿ ತಿಂದು ಗುಡುಗುಡು

ಉರಳುವಾಗ ಮೃಢ ನಕ್ಕಪ್ಪ || ||2||

ಅಕ್ಕತಂಗಿ ಚಿಕ್ಕವರಿಗೆ ಧಿಕ್ಕರಿಸಿದಿ ಚೊಕ್ಕಪ್ಪ

ಮುಂದ ಮುಪ್ಪಾವಸ್ತಿಯಲ್ಲಿ ಮಣ್ಣು ಮುಕ್ಕಪ್ಪ

ಲೆಕ್ಕಿಲ್ಲದೆ ಲಾಭ ಗಳಿಸಿದಿ ರೊಕ್ಕಪ್ಪ

ರೊಕ್ಕ ಡಾಕಾಗಿ ಹೋದ ಮೇಲೆ ಸೇರಿತು ಹುಕ್ಕಪ್ಪ ||3||

ನುಡಿನುಡಿ ತೊಡಿ ಹೆಡಿ ಇಡಲಿಲ್ಲ ನಿಕ್ಕಪ್ಪ

ಯಮ ಜಡಿದು ಕೇಳುವಾಗ ಮುಕಳಿ ಪುಕ್ಕಪ್ಪ

ಧರೆಯೊಳು ಹಿರೇಸಾವಳಗಿ ಅಧಿಕಪ್ಪ

ಬಿದ್ದ ಮಹ್ಮದಗ ತಿದ್ದಿದ ಸಿದ್ಧ ಮುದಕಪ್ಪ ||4||

ಹಡದಪ್ಪ ಬಿಟ್ಟ ನಡೆದೆಪ್ಪ

ಈ ಹಡಗ ಹತ್ತಿ ಹಡಗೇಡಿಯಾದೆ

ಹಡಗ ಬೆನ್ನ ಬಿಡದಪ್ಪ ||ಪಲ್ಲ||

ಹಡದವರಿಗೆ ಬಿಡಗಡೆಯಾಗಿ ಎದಿ ಒಡೆದೆಪ್ಪ

ಒಡ ಹುಟ್ಟಿದ ದೃಢ ಬಾಂಧವರಿಗೆ

ಕೇಡ ನುಡಿ ನುಡದೆಪ್ಪ

ಹಡಗದ ಸಿಡಿಲಿನಂತ ಗುಡಗ ಕೇಳಿ

ಪಡವಲ ಮೂಲಿ ಹಿಡದಪ್ಪ ||1||

ಮಡವಿಯೊಳು ಕಡು ಯೋಗದಿಂದ

ಹಡಗ ನಡದಪ್ಪ

ಹಡಗದ ಅವಜಾರ ಸಿಡಿದು

ನಡುವಿಗಿ ಒಡದಪ್ಪ

ನಾ ಬಡದಾಡಿ ಬೆಂಡೊಡದ

ಬುರಡ್ಯಾನ ಮಿದಳ ಸಿಡದಪ್ಪ ||2||

ಹಡಗಿನ ಬೆಡಗ ತಿಳಿಯದೆ

ಹಡಗ ಏರಿ ಕುಳಿತಪ್ಪ

ಹಡಗ ಮಡವಿನೊಳು ಧಡಗರಿಯುದು

ಹಡಗಕ್ಕೆನು ಗೊತ್ತಪ್ಪ ||3||

ಹಡಗೆಂಬುದು ನಾಲ್ಕು ಯೋಜನೆ

ಬಿಡದೆ ಮೆರಿತಪ್ಪ

ಅದೆ ಹಡಗ ಮೊಡವಿಗಿ ಇಳಿದು

ನಡವಿಗಿ ಮುರಿತಪ್ಪ

ಹಡಗ ಹೆಡಕ ಹೆಡಮರಗಿ ಕಟಿಕೊಂಡು

ಮಡದೊಳು ಉರಿತಪ್ಪ ||4||

ಅದೇ ಹಡಗ ಸಾವಳಗಿ ನಡಗಡ್ಡಿ ಸೇರಿತಪ್ಪ

ಜಗದ್ಗುರು ಶ್ರೀ ಸಿದ್ಧಗ ಮುಟ್ಟಿ ಜಾರಿತಪ್ಪ

ಬಡು ಮಹ್ಮದ ಹಡಗು

ಹೋಗುವ ಬೆಡಗ ಅರಿತಪ್ಪ ||5||

ಕಲ್ಲಾಗ ನುರಿತ ಮುಲ್ಲಾಗ ಅಲ್ಲಾ

ಅನ್ನೂದೆ ಗುರುತಿಲ್ಲ

ಕಣ್ಣ ಮುಚ್ಚಿಕೊಂಡ ಕಲ್ಲ ಹಿಡಿದು

ಅಂವ ಅಂತಿದ ಹೌದಲ್ಲ ||ಪಲ್ಲ||

ಕಲ್ಲಿನ ಅಲ್ಲಾ ಮುಲ್ಲಾಗ ಖುಲ್ಲಾ

ಹಚ್ಚಿದವರಿಗಲ್ಲ

ಕಲ್ಲಿನೊಳು ಸಿಂಹ ಶಾರ್ದೂಲ ಕಂಡಾನು

ಮುಲ್ಲಾಗ ಬಿತ್ತು ಬುಗಲ

ಕಲ್ಲಿಗಿ ಬಿಟ್ಟು ಖುಲ್ಲಾ ಓಡಿ ಮನಿ

ಸೇರಿದಾನು ಹಗಲ ||1||

ಕಣ್ಣ ಮುಚ್ಚಿಕೊಂಡು ಅಂವ ಕಲ್ಲ

ಹಿಡಿದು ಮನಿಯಲ್ಲಿ ಹೋಗಿ

ಧ್ವನಿ ಮಾಡಿ ಕರಿದ

ಮತ್ಯಾರು ಬರಲಿಲ್ಲ

ಭರ್ಜಿ ಡಾಲ ಕೊಡ್ಲಿ ಕುರ್ಪಿ

ಕುಣಿದವು ಹಾವಿಗೆ ಹೆಡಿಯಿಲ್ಲ

ಕಾಂವಿಗಿ ಹಿಡ್ದು ಕೊಡ್ಲಿ ನೋಡತಾನ

ಕಡದಂಗೈತೋ ಕಾಲ ||2||

ಕಣ್ಣ ಮುಚ್ಚಿಕೊಂಡು ಸತ್ತೆ ಸತ್ತೆಯೆಂದು

ಮತ್ತೆ ಓಡಿ ಬಂದ ಬೀದ್ಯಾಗ ಖಲಲಲ

ಬೀದ್ಯಾನ ರಾಡಿ ಹಾದಿ ಕಟ್ಟಿತ್ತು

ಮುಂದಕ ಬಿಡಲಿಲ್ಲ

ಅಡಗಲ್ಲ ಹಾಕಿ ನಡುಗಲ್ಲ ಕೆಡವಿತ್ತು

ಅಂದ ಅರೇ ಅಲ್ಲ ||3||

ಕಲ್ಲಿಗಿ ಕಟಿದು ಕೈಯಲ್ಲಿ ಇಟ್ಟು

ನೋಡಿ ಲಿಂಗದ ಲೀಲಾ

ಕಲ್ಲಿನ ಪೆಟ್ಟಿಗಿ ಕಣ್ಣ ತೆರದು ಮುಲ್ಲಾ

ಎರದ ಹಸಿಹಾಲ

ಕಲ್ಲ ಮುಲ್ಲಾನೊಳು ಮುಲ್ಲಾ ಕಲ್ಲಿನೊಳು

ಖರೆ ಆಗಿ ಶಾಮಿಲ ||4||

ಕಣ್ಣ ಮುಚ್ಚಿಕೊಂಡು ಕಲ್ಲಾನೆ ಅಲ್ಲಾ

ಅಲ್ಲಾನೆ ಕಲ್ಲ ಜೀವಶಿವ ಭೇದಿಲ್ಲ

ಭೇದಿಗಿ ಛೇದ ಮಾಡಿ ನೋಡಿದರೆ

ಮಾಧವ ಬ್ಯಾರಿಲ್ಲ

ತಿಳಿದರೆ ಅರ್ಥ ತಿಳಿದಿದ್ದರನರ್ಥ

ತಿಳಿಯೊಳು ತಿಳಿ ಮೇಲ || ||5||

ಧರೆಯೊಳು ಮೆರೆಯುವ ಹಿರೇಸಾವಳಗಿ

ಕಲ್ಲಿನ ಮಠಗೋಲ

ಅಂಗಸಂಘದಿ ಅಂಗ

ಸಮರ್ಪಪಂ ಸಿದ್ಧಗ ತ್ರಿಶೂಲ|

ನಿರ್ವಿನೊಳು ಅರ್ವಿಲಿ ಮಾಡಿದ

ಕವಿಭವಿ ಮಹ್ಮದ ಮೊದಲ ||6||

ಓಂಕಾರದಿಂದ ಉತ್ಪನ್ನ ಆಯಿತು

ತ್ರಿವರ್ಣದ ತ್ರಿಶೂಲ

ಆಕಾರದಿಂದ ಆಗಿಲ್ಲ ಅನ್ನಗೇಡಿ

ಉತ್ಪನ್ನ ನಿಮ್ಮ ಚೀಲ ||ಪಲ್ಲ||

ಗೋಲ ಚೀಲದೊಳು ಸೇಲಾದ ಅಳ್ಳಿ

ತುಂಬಿದ ನಮ್ಮ ಗೊಲ್ಲ

ನೆನುವಿನುಕ್ಕಿನ ಮಳಿ ತನುವಿನ ಕಲ್ಲ

ಮಹಾದೇವ ಜಯಶೀಲ

ಎಪ್ಪತ್ತೆರಡು ಸಾವಿರದೆಳಿಯಿಂದ ಹೊಲದಾದ

ಮಲ ಮೂತ್ರದ ಚೀಲ ||1||

ಪ್ರಾರಬ್ಧ ಮುಂದ ಪ್ರಯತ್ನ ಹಿಂದ

ಸೃಷ್ಟಿಗೆ ಬ್ರಹ್ಮ ಮೂಲ

ದುಷ್ಟ ನಿಗ್ರ ಶಿಷ್ಟ ಪರಿಪಾಲಕ

ವಿಷ್ಣು ನಿಂತ ಸೇಲ

ಬ್ರಹ್ಮಸೃಷ್ಟಿಯ ನಷ್ಟ ಮರಣಕ್ಕೆ

ರುದ್ರನೆ ಮೇಲ ||3||

ಚೀಲ ಹೊಲೆಯಲು ಚಿದ್ರುಪ

ಚಿನ್ಮಯ ಚಿದಘನದ ನೂಲ

ನೀಲಕಂಠ ನಿರ್ಮಾಣ ಮಾಡಿದ

ಚೀಲ ಹೊಲಿದ ಫೈಲ

ಹರಿಬ್ರಹ್ಮರುದ್ರು ಚಿದ್ರ ಮಾಡ್ಯಾರು

ಚೀಲಕ್ಕ ನೂರ ಕಾಲ ||4||

ಹರನೆ ಹಕಾರಿ ಹೊಡಿದು ಹೂಡಿದ

ಮಕಾರದ ಖೇಲ

ಆಯುಷದಾರ ದರ್ಪಿಲೆ ಕಡಿದ

ಶರ್ಪನ ಭೂಪನೀಲ

ನಿರಾಕಾರದೊಳು ನಿಜರೂಪ ತೊಟ್ಟಿತು

ಹೊಲಸು ಚೀಲದ ಹುದಲ ||5||

ಮೂರೇಳು ಲೋಕಕ್ಕೆ ಮೀರಿದ

ಸಾವಳಗಿ ದಕ್ಷಿಣಕ ರೈಲ

ದರಿಗಿರಿಯಲ್ಲಿ ಶ್ರೀ ಸಿದ್ಧ ನೆನೆದ

ಅನಿಸಿತು ಶ್ರೀಶೈಲ

ಬ್ರತ್ಯಾ ಮಹ್ಮದ ನಿತ್ಯದಿ ತೋರಿತ

ತನ್ನ ಅಂಗ ಹಗಲ ||6||

ನಂಬು ಮನವೆ ಹಲು ಹಂಬ

ಬಿಡು ನಂಬಿಗಿಂದ ಗುರು ಶನಿ

ತುಂಬಾ ನಂಬಿಗಿ ಅಂಬಿಗಿ

ಆ ಶಿವ ಸಾಂಬನ ಅರಮನಿ ||ಪಲ್ಲ||

ಸೃಷ್ಟಿಯೊಳ ಗಟ್ಟಿ ಬಂಗಾರ

ಗೋರಾ ಕುಂಬಾರ ಭಜನಿ

ನಿಷ್ಟಿಲೆ ಮನ ಮುಟ್ಟಿ ಮಾಡಿದ

ವಿಠೋಬಾನ ಭಜನಿ

ಹೊಟ್ಟೆ ಕೂಸು ಕೆಸರಾಗ ಸತ್ತಿದು

ನೋಡಲಿಲ್ಲ ಸಜನಿ ||1||

ಕೂಸ ಕಂಡು ಗಂಡ ಹೆಂಡರು

ಮಾಡಲಿಲ್ಲ ರೋಧನಿ

ಪುಂಡ ಪಂಢರಿ ತಾನೆ

ಮಾಡಿದಾನೋ ಶೋಧನಿ

ಶಿಶುವಿನ ಪ್ರಾಣ ಪ್ರತಿಷ್ಟ ಪಡಿಸಿದ

ಇಲ್ಲದಂತೆ ಬಾದನಿ ||2||

ತನ್ನ ಕೈ ಸತಿ ಎದಿಮ್ಯಾಗ ಬಿದ್ದಿದು

ನೋಡಿಕೊಂಡ ಧನಿ

ಎರಡು ಹಸ್ತ ಕಡಕೊಂಡಿದ

ರಕ್ತ ಇಲ್ಲ ಹನಿ

ಮಂಡ ಗೈಲಿ ಭಜನಾ ಮಾಡುತ್ತಿದ್ದ

ಸೇರಿ ಉನ್ಮನಿ ||3||

ಕೈ ಹಿಡಿದಿದ್ದು ಪಂಢರಿನಾಥಗ

ಆಗಿತ್ತು ಬ್ಯಾನಿ

ಎರಡು ಹಸ್ತ ಪವಾಡ ಮಾಡಿದ

ಸೇರಿಸಿ ಸಂಜೀವಿನಿ

ಮೂಢ ಭಕ್ತಿರಿಗೆ ಗಾಡಾಗಿ ಕಾಡಿ

ನೋಡವನೆ ಶನಿ ||4||

ಧರೆಯೊಳು ಹಿರೇಸಾವಳಗಿ

ಊರ ಘನ ಘನಿ

ಜಗದ್ಗುರು ಶಿವಯೋಗಿ

ಮುತ್ತಿನ ಗೊನಿ

ಹರದಾಸ ಮಹ್ಮದನ ಕಾವ್ಯ

ಹಾಲ ಮೇಲಿನ ಕೆನಿ ||5||

ಎ ಎಪ್ಪಾ ಪಡಕೊಂಡೆ

ಒಪ್ಪಿ ಸಪ್ಪಳಿಲ್ಲದೆ ಹಿಡಕೊಂಡೆ ||ಪಲ್ಲ||

ಸಾವಿರದೆಂಟನೂರ ಬ್ರಹ್ಮಾಂಡ ಶ್ರದ್ಧಾದಿಂದ ನಡಕೊಂಡೆ

ನಡೆ ನುಡಿ ತೊಡಿ ಹೆಡಿ ಕೂಡಿಸಿ ದುಡಕೊಂಡೆ

ಪ್ರೌಢನ ಅಡಿಗಳಲ್ಲಿ ಬಿಡಗಡೆ ಇಲ್ಲದೆ ಬೇಡಿಕೊಂಡೆ ||1||

ಜಪ್ಪಿಸಿ ಜಪತಪ ಗೈದು ಜಗದೀಶನ ಕಾಡಿಕೊಂಡೆ

ಶರ್ಪಭೂಷಣ ದರ್ಪದ ಪಾದ ತಿರ್ಪಾಗಿ ನೋಡಿಕೊಂಡೆ

ಕರ್ಪೂರದಂತೆ ಕರಗಿ ಪಿರ್ಯಾಯನ ಕೂಡಿಕೊಂಡೆ ||2||

ಕೆಂಪಾಗಿ ಹಾಲು ಕಾಸಿ ಹೆಪ್ಪು ಮಾಡಿಕೊಂಡೆ

ಸಪ್ಪಳಿಲ್ಲದೆ ಹಾಲಿಗೆ ಕಲಿತು ಬಿಳುಪು ಬೆಣ್ಣೆ ತೀಡಿಕೊಂಡೆ

ಅಪ್ಪನ ಅಪ್ಪಾಗಿ ಮುಪ್ಪಿನ ತುಪ್ಪ ಎನಿಸಿಕೊಂಡೆ ||3||

ಕಪ್ಪಗೊರಳನ ಕೃಪ ಪಡೆದು ತೀರ್ಪು ಬುದ್ಧಿಗೆ ಬಡಕೊಂಡೆ

ಆ ರೂಪ ಈ ರೂಪಾ ಬೇ ರೂಪ ಬೇರಿಜ ಮಾಡಿ ಜಡಕೊಂಡೆ

ಇಪ್ಪತ್ತೊಂದು ಸ್ವರ್ಗದ ಸೋಪಾನ ನಿಜ ರೂಪಾಗಿ ಸೇರಿಕೊಂಡೆ ||4||

ದರ್ಪದಿಂದ ಧರಿಯೊಳು ಶರ್ಪಾಗಿ ಆಡಿಕೊಂಡೆ

ಕರ್ಪೂರ ದೀಪವು ಸಿದ್ಧನಲ್ಲಿ ನರ್ಪಾಗಿ ತಡಕೊಂಡೆ

ಮರ್ಪಿನ ಮಹ್ಮದನ ಖ್ಯಾಲಿ ಹುರಪಿಲೆ ಹಾಕಿಕೊಂಡೆ ||5||

ಬೂದಿ ಅನಬೇಡ ಬೂದಿ ಮುಚ್ಚಿದ ಕೆಂಡ

ಆ ಬೂದಿ ನಾದಿ ವೇದ ಪ್ರಿಯ ಮಾಡಿದ ಅಖಳಾಂಡ ||ಪಲ್ಲ||

ಆದಿಗಿ ಅನಾದಿ ಬೂದಿ ಸದ್ಯೋಜ್ಯಾತ ಅಖಂಡ

ಬೂದಿನೆ ನಾದಿ ಮಾಡಿದ ಸಾವಿರದೆಂಟು ಬ್ರಹ್ಮಾಂಡ ಆ

ಬೂದಿಲೆ ಮೇದಿನಿಯಾಗಿದೆ ಸೀದಾ ನೌಖಾಂಡ | ||1||

ಬೂದಿಲೆ ವೇದ ಆಗಮ ಪುರಾಣ ಬೂದಿ ಪ್ರಚಂಡ

ಬೂದಿ ಬೂದಿ ಬೂದ್ಯಾಗ ವೇದ ನಾದಿ ಕಂಡ

ಬೂದಿಯೊಳು ಅಗ್ನಿ ಅಗ್ನ್ಯಾಗ ಬೂದಿ ಬೂದಿ ಐತಿ ಮುಖಂಡ ||2||

ಅಂಡಜಾ, ಪಿಂಡಜಾ ಜಲವಿಜ ಉದ್ವೀಜ ಬೂದಿ ಅಂಡ ಪಿಂಡ

ಸ್ವರ್ಗ ಮೃತ್ರ್ಯು ಪಾತಾಳ ಮೂರು ಬೂದಿಯೊಳು ಗುಂಡ

ಬೂದಿಲೆ ಅಪ್ ತೇಜ ವಾಯು, ಆಕಾಶ ಥಂಡ ಥಂಡ ||3||

ಶಬ್ದ ಸ್ಪರ್ಶ ರಸ ರೂಪ ಗಂಧ ಬೂದಿಲೆ ಕಂಡ

ಓಂ ನಮಃ ಶಿವಾಯೇ ಬೂದಿಲೆ ಮುದ್ರ, ರುದ್ರ, ರುಂಡ

ಆ ಬೂದಿ ನಾದಿ ನಾದಿ ಸದಾಶಿವ ಅನಿಸಿಕೊಂಡ ||4||

ಬೂದಿ ಬಡಕನ ಅರ್ಧಾಂಗಿ ಪಾರ್ವತಿ ಬೂದಿನೆ ಉಂಡ

ಬೂದಿಯೊಳು ಐವತ್ತೆರಡು ಅಕ್ಷರ ಅದವು ತುಂಡ ತುಂಡ

ಬೂದಿ ಪದೇಪದೇ ಉದ್ಧಾರ ಮಾಡಿತ್ತು ಆಗಿ ಉದ್ದಂಡ ||5||

ಧರೆಯೊಳು ಹಿರೇಸಾವಳಗಿ ಬೂದಿಗಾಗಿ ಪದೇಪದೇ ದುಡಕೊಂಡ

ಸಿದ್ಧನ ಬೂದಿ ಸದಾ ಬೇಕೆಂದು ಮಹ್ಮದ ಬೇಡಿಕೊಂಡ

ಆ ಬೂದಿ ಹಾದಿ ತಿಳಿದು ಕಾಶಿನಾಥ ಉಪದೇಶ ಪಡಕೊಂಡ ||6||

ಹರ ಹರ ಶಿವ ಶಿವ ಹಾವೂ ಎನಗ ಹರಿತು

ಹರಿದಾಗಲೆ ಹರದೇಶಿ ಹಣಿಬಾರ ತೆರಿತು ||ಪಲ್ಲ||

ಹಿಡದು ಕಡಿದ ಜಾಗಿಲೆ ಬುಗುಬುಗು ಉರಿತು

ಒಡಲೊಳು ಕಾಲಕೂಟ ಧಗಧಗ ಮಿರಿತು

ಎನ್ನ ಕಾಲು ಮೃತ್ಯುವಿಂದ ಎನಗ ಕರಿತು ||1||

ಹಾಂವೂ ಯಾವುದಿತ್ತೆನೋ ಹರಣ ಹಾರಿತ್ತು

ಹಾಂ ಹಾಂ ಅನ್ನೋದರೊಳಗ ಹುತ್ತ ಸೇರಿತ್ತು

ಎನ್ನ ಹೃತ್ಕಮಲದಿಂದ ವಿಷ ಕಾರಿತ್ತು ||2||

ಕಾಲಾ ಕಪ್ಪ ತಲಿಯ ಮೇಲೆ ಕೆಂಪು ಘೇರಿತ್ತು

ಸರದ್ದಿನ ಮುಪಾವರಿ ಎನಗ ಪೂರಾ ತೋರಿತ್ತು

ಹೆಗರಿ ಉಗರ ಕಣ್ಣಿಗೆ ಹರಿದು ಜಾರಿತ್ತು ||3||

ಹಳದಿ, ಹಸಿರು, ನೀಲಿ ಬಿಳಿದು ಇಂಪಾಗಿ ಹೊಳದಿತ್ತು

ಹಂಪಿತನ ಹುಡಕ್ಯಾಡಿ ನೋಡಿದೆ ಸೊಪ್ಪಿನೊಳು ಕಳದಿತ್ತು

ನೆಪ್ಪಿಲೆ ಪಂಪಾನಲ್ಲಿ ನೋಡಿದೆ ತಂಪಾಗಿ ಸಂಶ ಉಳಿದಿತ್ತು ||4||

ನೌಮಾಸಿಲೆ ಎನ ಜೀವ ಉಳಿತು

ಹಾವೂ ಹರಿದ ಜಾಗದಲ್ಲಿ ತುಸುನೆ ಕೊಳಿತು

ಅದು ಎನ್ನ ಸದ್ಗುರುನಾಥರ ಸರ್ವೆಶಾಮ ತಿಳಿತು ||5||

ಧರೆಯೊಳು ಹಿರೇಸಾವಳಗಿ ಗಿರಿ ಹುತ್ತ ಬೆಳಿತು

ಜಗದ್ಗುರು ಶಿವಯೋಗಿ ಜಾತ ಹಾವು ಹೇಳಿತು

ಕವಿ ಮಹ್ಮದನಿಂದ ಹಾವಿನ ವಿಷ ಇಳಿತು ||6||

ಕಣ್ಣ ಹೊಡೆದು ಸಣ್ಣ ಪೋರಿ ಹಿಡಿದಾಳ ಅಡದಾರಿ

ಸೆಡವಿಲೆ ನಡು ಬಂದು ಕಡಿತು ಹಾವು ಅಲ್ಲಮ ಚೌರಿ ||ಪಲ್ಲ||

ಆರೂಢ ಗಾರೂಢಿಯಾಗಿ ಬಂದ ಮೂರಾಗಿ

ಓಂಕಾರದ ಔಷಧಿ ಕೊಟ್ಟ ಮುರಲಿ ಶ್ರೀಹರಿ

ಕೃಷ್ಣ ಕನ್ನಯ್ಯ ಕೊಳಾಲ ಊದಿದ ಸಪ್ತ ಸ್ವರ ಭಾರಿ ||1||

ಗುಪ್ತ ನಾಲಿಗಿ ಚುಕ್ತ ತಗಿತು ಎಂಥ ಕಿರಿಕಿರಿ

ಕಡಿದ ಹಾವು ನಡಿದು ಹೋಯ್ತು ಒಂಬತ್ತು ಹರದಾರಿ

ಇಂಬಿನಲ್ಲಿ ಸುಂಬಾಗಿ ಬಿತ್ತು ಬಿಟ್ಟು ಬಿಳಿ ಪರಿ ||2||

ಸೆಡವಿಲೆ ನಡು ಮುನ್ನೂರದರವತ್ತು ತರದ ವಿಷ ಭರಪೂರಿ

ಏಳು ಸಾವಿರದಿನ್ನೂರ ವಾಸನೆ ತೋರಿ

ಮುರ್ಲಿ ಶಾಪ ಗೊರ್ಲಿ ರೂಪ ಮಾಡಿದ ಗಿರಿಧರಿ ||3||

ತ್ರಿಪೂರ ಕರಗಿ ಹೋಯಿತು ಬಂದ ತ್ರಿಪೂರಾರಿ

ಎಂಟು ಕೋಟಿ ಎಪ್ಪತ್ತು ಸಾವಿರ ಜೀವಕಳಿ ಹಾರಿ

ದುಷ್ಟ ನಿಗ್ರ ಶಿಷ್ಟ ಪರಿಪಾಲಕ ವಿಷ್ಣುನೆ ಅಧಿಕಾರಿ

||4||

ಚೌರೈಂಸಿ ಚಕ್ರ ಹೊರಳಿತು ಪೋರಿ ಚೀರಿ ಚೀರಿ

ಕಡಿದ ಹಾವು ನಡೆದು ಬಂದಿತು ಕಡದಲ್ಲಿ ಬರೋಬರಿ

ಪೋರಿ ಎದ್ದು ಮುದ್ದಾಗಿ ಹಾಕಿಳು ನೂರಾ ಎಂಟು ಫೇರಿ ||5||

ಧರೆಯೊಳು ಹಿರೇಸಾವಳಗಿ ಧರಿಗಿರಿ ಗಿರಿಧರಿ

ಶ್ರೀಮನ್ ಶಿವಯೋಗಿ ಅಲ್ಲಿ ನಿಜರೂಪ ತೋರಿ

ರವಿಯಂತೆ ಕವಿ ದಸ್ತಗಿರಿ ಭವಕಾದ ಅಸರಿ ||6||

ಕಣ್ಣ ಹೊಡಿದು ಸಣ್ಣ ಪೋರಿ ಹಿಡಿದಾಳ ಅಡದಾರಿ

ಅಡ್ಡಗಟ್ಟಿ ಗುಡ್ಡದ ಮ್ಯಾಗ ಕಡಿದಿತ್ತು ಮಿಡಿನಾಗರಿ ||ಪಲ್ಲ||

ಹುಸಿ ಇಲ್ಲ ವಿಷ ವಿಪರೀತ ಎರಿತು ಪರಿಪರಿ

ಪೋರಿ ಹಾರಿ ವಾರ್ಯಾಗ ಬಿದ್ದಳು ಬಿದ್ದಲ್ಲಿ ಹೌಹಾರಿ

ಗಂಡುಗಲಿ ಮಿಂಡದ ಗರುಡ ಮಂಡಲ ಮಾಧೂರಿ ||1||

ಹೋಷ ಭರಿತ ರೋಷದ ಔಷಧ ಕೊಟ್ಟ ಕೊಠಾರಿ

ಮೊಠ ಢಾಟ ನಿಟ್ಟಾಗಿ ಬಂದ ಮುರಲಿ ಮುರಾರಿ

ಅಪ್ತನ ಗುಪ್ತಾಗಿ ಬಾರಿಸಿ ಸಪ್ತಸ್ವರ ತೋರಿ ||2||

ಸಪ್ತ ನಾಲಿಗಿ ಚುಕ್ತಾ ತೆರಿತು ಹಾವು ಭರ್ಜರಿ

ಕಡಿದ ಹಾವು ನಡಿದು ಹೋಯಿತು ಒಂಬತ್ತು ಹರದಾರಿ

ಯಂಬಿನಲ್ಲಿ ಖೊಂಬಾಗಿ ಬಿತ್ತು ರಂಬಿಯ ರವಿಕಾರಿ ||3||

ಮೂರು ದಿನ ಮೂಗಿನ ಉಸಿರ ಇರಲಿಲ್ಲ ಬರೋಬರಿ

ಅಸ್ತವ್ಯಸ್ತ ಸುಸ್ತಾಗಿತ್ತು ಸುಸ್ತಿನ ಶರೋ ಜಕೋರಿ

ತಡಿದ ಹಾವು ನಡಿದು ಮುಟ್ಟಿತು ಕಡಿದು ಬಂದ ದಾರಿ ||4||

ವಾರ್ಯಾಗ ಬಿದ್ದ ಪೋರಿಗಿ ಇದ್ದವು ಮುದ್ದು ಅರಸೀರಿ

ಸಿರಿಗಿ ಸಾವಿರ್ದೆಂಟು ಪರಿ ಪರಿ ಝೂಲರಿ

ಹುತ್ತೆಂದು ತಿಳಿದು ಹಾವು ಹೊಕ್ಕಿತು ದುಬಾರಿ ||5||

ಹಾಂವ ಹೋಗಿ ತ್ಯಾಂವ ಮಾಡಿತು ತಳದಾಗ ತಲಿಯೂರಿ

ರೋಷ ತುಂಬಿ ಹೋಷಿಲಿ ಪೋರಿ ಚಟ್ಟನೆ ಚೀರಿ

ಚೌರೈಂಸಿ ಫೇರಿ ಹಾಕಿಳು ಇಳಿಯೊಳು ಮುಳಿಮಾರಿ ||6||

ಧರೆಯೊಳು ಹಿರೇಸಾವಳಗಿ ಶಿವಲಿಂಗ ಧರಿ

ಶಿಸ್ತಿನ ಶೈಲಿ ಶಮಲಕ ಐದು ಮುತ್ತಿನ ಫೇರಿ

ಹರದಾಸ ಮಹ್ಮದ ಫೇರ್ಯಾಗ ನೂರಾಗಿ ಮುಖ ತೋರಿ ||7||

ಹಿಗ್ಗಿಲೆ ಜೋಕಾಲಿ ಏರಿತು ಸರಸರಕ

ಹಗ್ಗ ಹರದರ ಬುಡಕಿನ ಬುಗ್ಗಿ ಚಿರಕ ||ಪಲ್ಲ||

ಮುನ್ನೂರದರವತ್ತು ಮಾಯದ ಟೊಂಗ್ಯಾದ ಮರಕ

ಇನ್ನೂರದ ಹದಿನಾರು ಅದರೊಳಗೆ ಫರಕ

ಎಂಟ್ಹೋರಿ ಕೊಂಬೆ ತಪ್ಪಲ ಮೆಲಗಿರಕ ||1||

ಮರಕ ಜೋಕಾಲಿ ಹಾಕು ಮಾಡಿ ತರಕ

ಜೋಕಾಲಿ ಕೆಳಗಿರಲಿ ಜೋಡ ಕಟಗಿ ಎರಕ

ಕಟಗಿ ಮುರದರ ಪುಟಗಿಲೆ ಹಾರಿತೋ ಬುರಕ ||2||

ಜೋಕಾಲಿ ಮುಟ್ಟಿಸು ಮರದ ಶಿಖರಕ

ತಲಿ ಕೆಳಗ ಮ್ಯಾಲಾಗುವುದು ಆಧಾರಕ

ಅದರಲ್ಲಿ ಭೇದಿಸಿತು ನರಕ ||3||

ಜೋಕಾಲಿ ಏರಿಸಿದವರ್ಯಾರು ದೂರ ದೂರಕ

ಅವರಿಗೆ ಸ್ಮರಿಸು ಜೋಕಾಲಿ ಏರ ಅಕ್ಕ

ಜೋಕಾಲಿ ಹಗ್ಗ ಹರಿದರ ಮುರಿಯುವದು ನಿನ ಸೊಕ್ಕ ||4||

ಜಾಗೃತ ಜೋಕಾಲಿ ಆಯಿತು ಆಚಾರಕ

ಆಚಾರ ತಪ್ಪಿ ಬರಬೇಡ ಈ ಪ್ರಚಾರಕ

ಆಚಾರ ಅನಾಚಾರ ವಿಚಾರ ಮಾಡು ಸುಚಿರಕ ||5||

ನಾರಿ ಬಂಗ್ಹೋಗು ಹಿರೇಸಾವಳಗಿ ಬಾಜಾರಕ

ಕಮರಿಯೊಳು ಶ್ರೀ ಸಿದ್ಧನ ಹಾಜರಕ

ಕವಿಗಾರ ಮಹ್ಮದ ಅಂದ ಚೆಂದ ಜೋಕಾಲಿ ತಿರಕ ||6||

ಹಾದಿ ಹಸನ ಮಾಡೋ ಹರ ಲೋಕದ ರೋಡೋ ||ಪ||

ಸಾಧಿಸಿ ಹಾದಿ ಹಸನ ಮಾಡೋ

ಬೀದಿ ಊದಿ ನೀ ಪಾದ ನೀಡೋ

ಬುದ್ಧಿ ಹೇಳುವರಿಗಿ ವಾದಿಸಬೇಡೋ

ಬೂದಿ ಬಡಕನ ಸದಾ ಕೊಂಡಾಡೋ ||1||

ಸಿಟ್ಟೆಂಬ ನಟ್ಟಿದ ಕಲ್ಲದ ಅಗಡೋ

ಬಿಟ್ಟಿದರಿದು ಪೆಟ್ಟ ಮಾಡತಾದ ರಗಡೋ

ಜಟ್ಟನೆ ಜ್ಞಾನದ ಹಾದಿ ಮಾಡೋ

ನಿಷ್ಟಿಯಿಂದ ಅದು ಕಿತ್ತಿ ಇಡ್ಯಾಡೋ ||2||

ಭೋಗಿ ಆಗಿನೆಂದು ಹಿಗ್ಗಿಲಿ ಬೇಡೋ

ಹಗ್ಗೆಂಬ ನೆಗ್ಗಿನ ಮುಳ್ಳವ ನೋಡೋ

ಮುಗ್ಗಿದರೆ ಮುರಿತಾವ ಓಡ ಓಡೋ

ಭವ ಯೋಗಿಯಾಗಿ ನೀ ಬಳಲಲಿ ಬೇಡೋ ||3||

ಮಾಯಿ ಮೋಹಿನ ಮೋಹಿಸಬೇಡೋ

ಮಾನುಳ್ಳವನೆ ನಿನಗ ಮಾಡದಿ ಕೇಡೋ

ಉನ್ಮನಿ ಮಾರ್ಗ ಹಿಡಿದುರಳಾಡೋ

ಸನ್ಮದಿ ಚಿನ್ಮಯನ ಕೊಡೋ ||4||

ಧರಿಯೊಳಧಿಕ ಹಿರೇಸಾವಳಗಿ ಚಡೋ

ಕಮರಿ ಮಠದೊಳು ಹಾನ ಸಿದ್ಧರೂಡೋ

ಚರಣಕ ಎರಡಿ ನೀ ಮುಕ್ತಿ ಬೇಡೋ

ಮಹ್ಮದ ಹೇಳಿದ ಜ್ಞಾನದ ತೋಡೊ ||5||

ಪ್ರಾಣ ಪತಂಗ ಆಯುಷ್ಯದಾರ ಕಡಿತು

ಪರ ಲೋಕದ ದಾರಿ ಹಿಡಿದು ನಡಿತು ||ಪಲ್ಲ||

ಪಂಚ ವರ್ಣದ ಪತಂಗ ಇದ್ದಿತು

ಪರಶು ದೇಹಾದ ಮನಿಯಾಳು ಬಿದ್ದಿತು

ತಗಿ ಬಿಗಿಯಾಗಿ ಪತಂಗ ಕುದ್ದಿತು ||1||

ಧಾರಿನ ಜೋರಿಲೆ ಪತಂಗ ಏರಿತು

ಈ ಮೂರು ಲೋಕಕ ಮೀರಿತು

ಹಾದಿ ಮರಕ ಹೋಗಿ ಸಿಗಿಬಿದ್ದು ಹರಿತು ||2||

ಪೂರಾ ಆರು ಓಣಿಯೆಲ್ಲಾ ಓಡ್ಯಾಡಿತು

ಆರು ಮೂರು ಒಂಬತ್ತು ನೋಡಿತು

ಅಪನಂಬಿಗಿ ಪತಂಗ ತಾನೆ ಮಡಿತು ||3||

ನೂರು ವರ್ಷ ತನಕಲೂ ದಾರ ತಡಿತು

ಆಯುಷ್ಯ ತೀರಿದ ಮೇಲೆ ತಾ ಕಡಿತು

ಪತ್ತಗೇಡಿ ಪತಂಗ ಬಿಟ್ಟು ಸಿಡಿತು ||4||

ಹಿರೇಸಾವಳಗಿ ಗ್ರಾಮ ಹೋಗಿ ಸೇರಿತು

ಅಲ್ಲಿ ಜಗದ್ಗುರು ಶಿವಯೋಗಿನ ಕರಿತು

ಕವಿ ಮಹ್ಮದ ಹಿಡಿದಿದ ಅದರ ಗುರುತು ||5||

ಗಂಡನೂರಿಗಿ ಗೆಳದಿ ಹೋಗುಣ ಬಾರ

ದಾರಿ ಅದ ದೂರ ||ಪಲ್ಲ||

ಮನ್ನೆ ಮನ್ನೆ ಬಂದಿನಿ ಶನಿವಾರ

ಮಲಿ ಮಂಜನವ ಅನುವ್ಯಾರ

ಜಾಲಿಕೊನಿಗಿ ಸಿಗಿ ಬಿದ್ದಿತು ಜನಿವಾರ

ಉಚಕೊಂಡೋಯಿತು ಉಡ್ಯಾನ ಪನವ್ಯಾರ ||1||

ಹಾದಿ ಹಿಡಿದು ಹೋಗುವರಿಬ್ಬರ

ಗುಬ್ಬಿಮರಿ ಇರೋದಿಲ್ಲ ಒಬ್ಬರ

ಕೊಬ್ಬಿದ ಕಲಿದು ಅದಾ ಅಬ್ಬರ

ಆರು ಮಂದಿ ಕಳ್ಳರು ಹಾರ ಜಬರ ||2||

ಇದ್ದಷ್ಟು ದ್ರವ್ಯ ಬಡಕೋತಾರ

ರತ್ನದ ಚೀಲ ಒಡಕೋತಾರ

ಮನಿಗಿ ಹೋದರ ಗಂಡ ಭಾವ ಕೇಳತಾರ

ಹಿಂಗಾಗಿದವರಿಗೆ ಯಾರ ಹೇಳತಾರ ||3||

ಅತ್ತಿ ಮಾವರೆ ಯಾಕ ತಾಳತಾರ

ನಾದುನಿಯರು ಜಗಳ ತಗಿತಾರ

ನಮ್ಮ ತವರೂರೈತಿ ಮಣ್ಣೂರ ||4||

ಅಣ್ಣ ಇರುವದು ಸಣ ಕಣ್ಣೂರ

ಅತ್ತಗಿ ಇರೋದು ಸುತ್ತಿಗಿ ಗೆಣ್ಣೂರ

ಮಾವ ಇರೋದು ಗೆಳತಿ ನೆಣ್ಣೂರ ||5||

ತಾ ನೆಟ್ಟಗಿದ್ದರೆ ನೆಟ್ಟಗೆಲ್ಲವರ

ಕೆಟ್ಟರೆ ಇಲ್ಲ ಖುಲ್ಲಾ ಯಾರ್ಯಾರ

ಕಟ್ಟ ಕಡಿಗಿ ಆಗಿ ದಿಗಂಬರ

ಝಟ್ಟನೆ ಹೋಗಿ ನೆರದು ಶಿವಪೂರ ||6||

ಧರೆಯೊಳು ಅಧಿಕ ಹಿರೇಸಾವಳಗಿ ಊರ

ಸಿದ್ಧಲಿಂಗ ಅಲ್ಲಿ ನೆನದಿದ ಧೀರ

ಆತನಿಂದೆ ಆಗೆಂದು ಉದ್ಧಾರ

ಬುದ್ಧಿ ಹೇಳಿದ ಮಹ್ಮದ ಕವಿಗಾರ ||7||

ತುಡಗಿ ಹುಡಗಿ ಗಡಗಿಯ ಬುಡ ಮೇಲ

ಅಡಗಿ ಸುಡಗಾಡ ಪಾಲ ||ಪಲ್ಲ||

ಅರುವಿಲ್ಲದ ಗಡಗಿ ಮುಟ್ಟೆಯಿಲ್ಲಾ

ಗುರುವಿಲ್ಲದೆ ಗಡಗಿ ಸುಟ್ಟಿಲ್ಲ ಒಡದ

ಗಡಗಿ ವಾದ್ಯ ಕೊಟ್ಟಿಲ್ಲ

ಬಡದ ಹಚ್ಚಕೊಟ್ರ ಇಟ್ಟೆಯಿಲ್ಲ ||1||

ಮಂತ್ರದ ಗಡಗಿ ಆರೂಢೆಲ್ಲ

ಕಂತ್ರಿಯ ಗಡಗಿ ಇರುದೆಲ್ಲ

ಮಲ ಮೂತ್ರ ಮಾಂಸ ಬಾಂಡೋಲ

ಅತಂತರ ಐತಿ ಗಡಗಿ ಕುಂಡೋಲ ||2||

ಗಡಗಿ ಇಲ್ಲದೆ ಸಿಡದಾದ ಜಲ

ಜಲದೊಳು ಮೂಡ್ಯಾದ ನೆಲ

ಕಾಮ ಒಡಗೂಡಿ ಪುಟ್ಟಿತೋ ಕಲ್ಲ

ಕುಲಗೇಡಿ ನಿಮ್ಮ ಗಡಗಿ ಕುಟಿಲ ||3||

ಗಡಗಿ ಆರೂಢಕ ಹೋಗಿಲ|

ಗಡಗಿ ಪ್ರೌಢಗ ಬಾಗಿಲ

ಗಡಗಿ ಆರೂಢಕ ನೀಗಿಲ್ಲ

ಆರೂಢಕ ಗಡಗಿ ಜಾಗಿಲ್ಲ ||4||

ಹೇಡಿ ಗಡಗಿ ಬುಡ ಬಡದಿಲ್ಲ

ನಡದುರ ಗಡಗ್ಯಾಗ ನಡಿಲಿಲ್ಲ

ಓಂ ಪ್ರಭೂತಿ ನುಡಿ ನುಡಿಲಿಲ್ಲ

ಕಿಡಗೇಡಿ ನಿಮ್ಮ ಗಡಗಿ ತಡಿಲಿಲ್ಲ ||5||

ಧರೆಯೊಳು ಹಿರೇಸಾವಳಗಿ ಮಿಗಿಲ

ಜಗದ್ಗುರು ಶ್ರೀ ಶಿವಯೋಗಿ ಪ್ರಬಲ

ಜ್ಞಾನದ ಖ್ಯಾಲಿ ಮಾಡಿದರಲ್ಲ

ಮಹ್ಮದ ಇದ್ದಿದು ಕೈಲಾಸ ಬಾಗಿಲ ||6||

ಅತ್ಯಾಚಾರ ಕೃತ್ಯ ಮಾಡಿ ಮೃತ್ಯು ಬಾಯಿಯೊಳು ತೊಡಕಿದ್ದೆ

ಅಂತ್ಯಕ್ಕೆ ಮೃತ್ಯುಂಜಯನ ನಾಮ ಸ್ಮರಿಸಿ ಮಿಡಕಿದ್ದೆ ||ಪಲ್ಲ||

ಕಾಮ ಕ್ರೋಧ ಲೋಭ ಮದ ಮೋಹದೊಳು ಫಿಟ್ಟಿದ್ದೆ

ಕಚ್ಚರಕ ಮಶ್ಚರ ಬುದ್ಧಿಗೆ ಹುಚ್ಚುಚ್ಚ ಮಾಡಿ ಮೆಟ್ಟಿದ್ದೆ

ಅಜ್ಞಾನದ ಅಂಧಕಾರದೊಳು ಅರಿಷಡ್ವರ್ಗಕ ದುಡಕಿದ್ದೆ ||1||

ಅಷ್ಟಮದ ಪಟ್ಟದಾನಿಗೆ ಪಾಗದೊಳು

ಕಟ್ಟಿದ್ದೆ

ಆಶಪಾಶ ರೋಷದ ಆಹಾರ ಆನಿಮುಂದ ಒಟ್ಟಿದ್ದೆ

ಅನುಭಾವ ಅರಿಯದೆ ಮರುವಿನ ಅಜ್ಞಾನಕ ಹುಡಕಿದ್ದೆ ||2||

ಉತ್ತಮ ಚಿತ್ತ ಬುದ್ಧಿಗೆ ಒತ್ತ್ಯಾಡಿ ಬಿಟ್ಟಿದ್ದೆ

ಅವಧೂತ ಅನಿಸಿದೆ ಮಿತ್ಯ ಭೂತನಾಗಿ ಕೆಟ್ಟಿದ್ದೆ

ನಿತ್ಯ ನಿರ್ಮಲಕನಗಲಿ ಕತ್ತಿ ಮೂಗಿನಂತೆ ಒಡಕಿದ್ದ ||3||

ಕಲ್ಲು ಸಕ್ಕರಿಯ ಕಸ್ತೂರಿ ವ್ಯಾಪಾರ ಮಸ್ತಿಯೇರಿ ಸುಟ್ಟಿದ್ದೆ

ನಾಸ್ತಿಯಾಗು ಮೆಂತಿಪಲ್ಲೆ ಕೋತಿಯಂತೆ ಅಟ್ಟಿದ್ದೆ

ಅಸನ ವ್ಯಸನ ವಿಷಯ ವಿಕಾರದ ಕಿಂಕರಾಗಿ ಬುಡಕಿದ್ದೆ ||4||

ಹಮ್ಮು ದಮ್ಮು ಗರ್ವ ಅಹಂಕಾರದ ಅರವಿ ತೊಟ್ಟಿದ್ದೆ

ಭೀತಿ ಇಲ್ಲದೆ ಶಾಂತಿ ಸಮೆ ದಮೆ ನೀತಿಯೊಳು ಭ್ರಷ್ಟಿದ್ದೆ

ಪಿತೃದ್ರೋಹಿ ಹೋತಿನ ಜಾತಿ ಆಹುತಿಗೆ ಹೋತಿನ ಹೆಡಕಾದೆ ||5||

ಧರಿಯೊಳು ಹಿರೇಸಾವಳಗಿ ಗಿರಿ ಮೆಟ್ಟಾದೆ

ಜಗದ್ಗುರು ಶ್ರೀ ಸಿದ್ಧನ ಕಮರಿಯೊಳು ಫಿಟ್ಟಾದೆ

ಕವಿ ಮಹ್ಮದನ ಕಾವ್ಯ ಕೇಳಿ ಭವ್ಯ ಬೇದಡಕಾದೆ ||6||

ಶಿವನಾಮ ಎಂಬೋ ಶೀಲವಂತಿ ಹೆಣ್ಣಾ |

ಸಿಗುವುದು ಬಹು ಕಠಿಣಾ ||ಪಲ್ಲ||

ಓಂ ನಮಃ ಶಿವಾ ಎಂಬೋ ಪ್ರಣಮದ ಹೆಣ್ಣಾ

ಉಣಸಲಾರದೆ ಒಗಿದನು ನೋಡೋದಿಲ್ಲರೆಣ್ಣಾ

ಸಹಸ್ರ ವರ್ಷ ಮಾಡಿದ ಪಾರಾಯಣಾ|

ಸ್ವಲ್ಪರೇ ತೆರಿದು ನೋಡಲ್ಲ ಕಣ್ಣಾ ||1||

ರಂಗಮಹಲಿನೊಳು ಅದ ನಿನ್ನ ಠಾಣಾ

ನವದ್ವಾರಕಾ ಹರಾ ಅರಬ ಪಠಾಣ|

ಸ್ವಪ್ನ ಸುಸುಪ್ತಿ ಜಾಗೃತ ಹೆಣ್ಣಾ

ತುರಾ ಅವಸ್ತೆದಿಂದ ಮಾಡಾಕಿ ಪ್ರಯಾಣ ||2||

ಕಣ್ಣಯಿದ್ದವರಿಗಿ ಕಾಣಲಾರದ ಹೆಣ್ಣಾ

ಶರಣರ ಕೈವಶಾ ಆಗ್ಯಾದ ಹೆಣ್ಣಾ

ಅಣುರೇಣು ತೃಣ ಕಾಷ್ಠಕಿಂತಾ ಸಣ್ಣಾ

ಕಂಗಳರಿಗಿ ಕಾಣುವುದು ಹೆಣ್ಣಾ ||3||

ನಂಬಿದರೆ ನೇರಲ ಲಿಂಬಿ ಬಣ್ಣದ ಹೆಣ್ಣಾ

ಹಂಬಲಿಸಿದರೆ ಹಾರಿ ಹೊಯ್ತು ಕರಿಮಾರಿ ಹೆಣ್ಣಾ

ಶಿವನ ಜಡಿಯಾಗ ಇತ್ತು ಸಂಭಾವಿತ ಹೆಣ್ಣಾ

ದುಂಬಿ ಆಗಿ ಹಾರಿ ಹೋಯಿತು ಆಕಾಶದ ಹೆಣ್ಣಾ ||4||

ಭೂಲೋಕದಲ್ಲಿ ಪ್ರಕಾಶದ ಹೆಣ್ಣಾ

ನೀಲೂರ ಶರಣರ ಅಂಗಳ ಉಡಗದು ಹೆಣ್ಣಾ

ಹಾಲ ಕುಡಿದು ಹಲಬ್ಯಾನ ಬಾಲಪಂಚಣ್ಣಾ

ಇಲ್ಲಿಂದಲೇ ಬೈಲಡಗಿತು ಬಗಲಾನ ಹೆಣ್ಣಾ ||5||

ಕಟ್ಟು ಫಕೀರನ ಗೆಳೆತಾನ

ಬಿಟ್ಟುಬಿಡು ಸುಳ್ಳತಾನ ||ಪಲ್ಲ||

ಹೊಟ್ಟಿಗಿ ಅನ್ನ ಹಾಕತಾನ

ಸಾಕಷ್ಟು ಸರಿಯಾಗಿ ಊಟ ಮಾಡಿಕೋ

ಕಷ್ಟ ಬಂದಾಗ ಅವನಿಗಿ ಬೇಡಿಕೋ ||1||

ಪಂಚ ಪರಷು ಜೋಳಿಗಿಯಲ್ಲಿ

ಪಂಚ ತತ್ವ ದೇಹದಲ್ಲಿ

ಪಂಚಾಂಗದ ಘಟದಲಿ

ಪಂಚಾಮೃತ ಸೇವನ

ಶೀಘ್ರದಲ್ಲಿ ಮಾಡಿಕೋ ||2||

ಫಕೀರ ಕಾನೂನ ಬಿಕ್ಕಟ

ಬೇಫಿಕೀರದು ಮಾಡತಾರ ಊಟಾ

ಆಖ್ರಿ ಮಾತ ಇಡು ತರ್ಕಾ

ಲೆಖ್ಖ ಸರಿಯಾಗಿ ಕೊಡಬೇಕು

ಮುಕ್ಕಣ್ಣನ ಗುಡಾ ಒಡಗೂಡಬೇಕೋ ||3||

ಫಕೀರ ಆದಾಯವು ಅಲಿಶಾ

ನೀಲೂರ ಗುರುಗಳು ತೊಡಿಶ್ಯಾರ ಮೇಫ್

ಹಿಂದಿನ ಜನ್ಮದು ತಿಳಿದು ಭವಿಷ್ಯಾ

ತರ್ಕ ಕೊಟ್ಟು ಅಂದ್ರು ಊರಾಗ ಬೇಡಿಕೋ

ಗರೀಬ ಮೀರಾನ ಗೆಳೆತನ ಹಿಡಿಕೋ ||4||

ನುಡಿರೋ ನುಡಿರೋ ಸತ್ಯ ನುಡಿರೋ

ನಿಮ್ಮ ನಡೆ ನುಡಿ ತಪ್ಪಿದರೆ ಶಿವ ಆದ ಕಡಿರೋ ||ಪಲ್ಲ||

ನೀ ಯಾರೆಂಬುದು ತಿಳಿದು ನಿಮದೆ ನೀವು ನೋಡಿರೋ

ತಿಳಿದ ಮೇಲೆ ತೊಳದ ಮುತ್ತಿನಾಗ ಕುಡಿರೋ ||1||

ಆರ ಗುಣದ ಅರ್ಥವನ್ನು ಮೊದಲ ನೀವು ಮಾಡಿರೋ

ಮೂರ ಗುಣದ ಮೂಲವನ್ನು ತಿಳಿದು ನೋಡಿರೋ ||2||

ಪಂಚ ಪ್ರಣವ ಮೊದಲ ಓದಿಕೊಂಡು ನೋಡಿರೋ

ಪಂಚ ಮುಖದವನ ಸ್ಮರಣೆ ಮೊದಲದೆ ಬಿಡಬೇಡಿರೋ ||3||

ದೃಢ ಇರೋತಾನ ದುಡಿದು ಪುಡಿಯಾಗಿರೋ

ನಮ್ಮ ಉಡಥಡಿ ಮಹಾದೇವಿಗಿ ಓಡಿ ಆಗಿರೋ ||4||

ಮೀಸಲ ಮನಕ ನೀವು ತಾಸಿಲ ಧ್ಯಾನ ಮಾಡಿರೋ

ಈಶ ನೀಲೂರ ಶರಣರ ಪಾದ ಹಿಡಿರೋ ||5||

ರಂಡಮುಂಡಿ ಕಾರಭಾರ

ಹಿಜಿಡೆರದೈತು ಕಾರಭಾರ

ಕುಂಟಲ್ಯಾ ಮಂದಿದು ಸರಬಾರ ||ಪಲ್ಲ||

ನಾಡಿಗಿ ಐತೋ ಫಕೀರಾಬಾದಿ

ನೋಡ ನೋಡತಾನ

ಹರಿದೊತೊ ಚಾಕಾನಿ ಬದಿ ||1||

ಸಾಕಾರಿ ಆದರೋ ಸಾಧುರಾ

ಬೇಕಾಗಿ ಸಿಗ ಬಿದ್ದ ಬಾಹುದಾರ

ಏಕಾಗಿ ನಿಂತೋ ಮಾದರ ||2||

ಲೋಕದ ಜನಕ ಹತ್ತೊ ಹೆಂತಾಯಾದಿ

ಇದ್ದವರ ಕುಂಡಿಗಿ ಮೆತ್ತಿತೊ ಅಂಗಡಿ ಗಾದಿ

ಹಾಡವರದು ಹಸನಿಲ್ಲಾ ಹಣಿಬಾರ

ಹಾಡಿಸವರಿಗಿಲ್ಲಾ ಶಾಣ್ಯಾರಾ ||3||

ನೋಡವರು ತುಂಬ್ಯಾರ ಮನಾರಾ

ಗುಡಿಗುಂಡಾರದಾಗ ನಡಿತೊ ಗರದಿ

ಸುಡಗಾಡ ಉರಿದು ಹತ್ತಿತೋ

ಮಹಾಗಾಂಯಿಗಿ ಸುದ್ದಿ ||4||

ಯಾರ ಹೊಲ ಯಾರ ಮನಿ

ಮೆಚ್ಚಿ ಕೂತದಿ ಸುಳ್ಳೆ ಎಲ್ಲಾ

ನಾನು ನನ್ನದು ಅನ್ನುತಿ ಎಲ್ಲಾ

ನೀ ಹೋಗದು ಗೊತ್ತೇ ಇಲ್ಲ ||ಪಲ್ಲ||

ದಾನ ಧರ್ಮ ಮೊದಲೇ ಇಲ್ಲ

ರೊಕ್ಕಾ ಗಳಿಸಿ ಇಟ್ಟಿದಿ ತೋಲ

ಒದಗಿ ಬಂತೋ ಮರಣ ಕಾಲ

ನೀ ಸತ್ತು ಹೋದ ಮೇಲೆ ಇದು ಯಾರ ಪಾಲ ||1||

ಮನುಷ್ಯ ಜನ್ಮ ದೊಡ್ಡದೈತಿ

ಪಾಪದಲ್ಲಿ ಬಿದ್ದು ಸಾಯಿತಿ

ಹಗಲು ಇರುಳು ದುಡಿದು ಮನೆ ಕಾಯ್ತಿ

ನೀ ಹೋಗುವಾಗ ಸಂಗಟ ಏನೋಯ್ತಿ ||2||

ಹಣವು ಗಳಿಸಿ ಇಟ್ಟಿ ಹೆಚ್ಚ

ಸಾಯುತನಕ ತಿಂದಿದಿ ನುಚ್ಚ

ಬಾಯಿ ಮಾತ್ರ ಬೆಲ್ಲದ ಅಚ್ಚ

ಪರೋಪಕಾರ ಮಾಡಲಿಲ್ಲ ಹುಚ್ಚ ||3||

ಪುಣ್ಯದಿಂದ ಪದವಿಗಿ ಬಂದು

ಸಾರ್ಥಕ್ಕಿಲ್ಲ ಜನ್ಮನಿಂದು|

ಸತ್ಯ ಮಾರ್ಗ ಹಿಡಿಯಪ್ಪ ಒಂದು

ಮತ್ತೆ ಹುಟ್ಟಿ ಬರುವದೆಂದು? ||4||

ಹುಟ್ಟಿದವರು ಉಳಿಯುವುದಿಲ್ಲ

ತಿರುಗಿ ತಿರುಗಿ ಬರುವುದಿಲ್ಲ

ಪಂಚಾಕ್ಷರಿ ಹೇಳ್ಯಾನ ಖುಲ್ಲಾ

ಪರಶಿವನ ಹೊರತು ಗತಿ ಯಾರಿಲ್ಲ ||5||

ಕಳ್ಳಿಮಠದಾಗ ಬೆಳ್ಳಿದೇವರ ನೋಡೋ

ನೀ ನೋಡೋ ನೋಡೋ ||ಪಲ್ಲ||

ಓಂ ಶಿವ ಆಗಿ ಉಟ್ಟಾರ ನೋಡೋ

ಬ್ರಹ್ಮನ ಸ್ವರೂಪ ಲುಂಗಿ ತೊಟ್ಟಾರ ನೋಡೋ

ಬಂಗಾರ ಮುತ್ಯಾನ ಟಾವಿಲ ನೋಡೋ

ಮಠದ ಮೇಲೆ ಕಾವಿ ಝಂಡಾವ ನೋಡೋ ||1||

ಇಂದ್ರಾನ ವಿಭೂತಿ ಹಚ್ಯಾರ ನೋಡೋ

ರುದ್ರಾನ ರುದ್ರಾಕ್ಷಿ ಹಾಕ್ಯಾರ ನೋಡೋ

ಚಂದ್ರಧರನಂತೆ ಇವರ ವರ್ಣ ನೋಡೋ

ಸೂರ್ಯನ ಕಿರಣದ ಬೆಳಕವ ನೋಡೋ ||2||

ಅಂಗೈ ಮೇಲೆ ಶಿವನ ಲಿಂಗವು ನೋಡೋ

ಲಿಂಗದಗೂಡ ಸಂಗವ ನೋಡೋ

ಪೂಜದಾಗ ರಾಮನ ಬಾಣವ ನೋಡೋ

ಭಕ್ತಿಯೊಳು ಇವರು ಬಸವಣ್ಣ ನೋಡೋ ||3||

ಕರ್ಮದ ಗುಣಕ ಬತ್ತಿ ಹೊಸದಾರ ನೋಡೋ

ಮರ್ಮದ ಗುಣಕ ಹಣತಿ ಹಚ್ಯಾರ ನೋಡೋ

ಚಂಚಲ ಮನಸ್ಸಿವಗಿ ಎಣ್ಣಿಯ ಸುರವ್ಯಾರ ನೋಡೋ

ಕರ್ಮದ ಕಡ್ಡಿ ಕೊರದಾರ ನೋಡೋ ||4||

ಹರದೋಗೋ ಮನಸ್ಸಿಗಿ ಕಟ್ಯಾರ ನೊಡೋ

ಖೋಟ್ಟಿ ಗುಣಗಳಗಿ ಒಟ್ಯಾರ ನೋಡೋ

ಶರೀರ ಅದರ ಮೇಲಾ ಇಟ್ಟಾರ ನೋಡೋ

ಕನಸೆಂಬ ಸಂಸಾರವು ಸುಟ್ಟಾರ ನೋಡೋ ||5||

ಲಕ್ಷ್ಮೀದೇವಿ ಕೈ ಮಾಡಿ ಕರದಾಳ ನೋಡೋ

ಶರಣರ ಪದ ಮಾಡಿ ಸ್ವಂತ ನೀನೇ ಹಾಡೋ

ಪಂಚಾಕ್ಷರಿ ಗುರುವಿನ ಬೋಧವು ಬೇಡೋ ||6||

ಲಿಂಗ ಪೂಜೆಯ ಮಾಡೋ ಮನುಜಾ

ಲಿಂಗ ಪೂಜೆಯ ಮಾಡೋ

ಲಿಂಗದೊಳು ಐಕ್ಯ ಆಗಿ ಕೂಡೋ || ||ಪಲ್ಲ||

ಅಂಗ ಅಂದ್ರ ಶಿವನ ಸ್ವರೂಪಾ

ಜಂಗಮನಾಥ ಕೇಳೋ ನೀನು ಭೂಪಾ

ಗಂಗೆಯಲ್ಲಿ ಸ್ನಾನ ಮಾಡಿದವಂಗನೆಂಬಾ

ಸಂಗದಲ್ಲಿ ಮಾಡೋ ಅಂಗದ ಧೂಪಾ ||1||

ಶಾಸ್ತ್ರ ಪುರಾಣ ವೇದ ಖುರಾನಾ

ಮಿತ್ರ ಭಕ್ತಗ ಇಲ್ಲದೆ ಖೂನಾ

ಸ್ತೋತ್ರ ಮಾಡೋ ನೀ ಹಗಲು ಇರುಳು ಧ್ಯಾನಾ

ಮತ್ತೆ ಇಡು ನೀ ಲಿಂಗದ ವಚನಾ ||2||

ಅಂಗದ ಮಹಿಮ ಮಂಗನಿಗ ಏನು ಖೂನಾ

ಝಂಗಿನ ನಾದ ಕೇಳಿ ಮಾಡವನೇ ಶರಣಾ

ಅಂಗದಲ್ಲಿ ಶಿವಲಿಂಗನ ಸ್ಥಾನಾ

ಭಂಗಿ ಕುಡಿಯವಗ ಏನಾದ ಖೂನಾ ||3||

ಮಹಾಗಾಯಿ ಇರುವುದು ನನ್ನ ಸ್ಥಾನಾ

ಮಹಾದೇವಿ ಅಕ್ಕನ ಮಾಡವಾ ಧ್ಯಾನಾ

ಮಹಾಕವಿ ಪಂಚಾಕ್ಷರಿ ಹೇಳ್ಯಾನ ವಚನಾ ||4||

ಕರಿಲಾಕ ಬಂದಾರಪ್ಪಾ ಎನ್ನ ಮನಿಯವರ

ಹ್ಯಾಂಗ ಬಿಟ್ಟು ಹೋಗಲಿ ಗೆಳತಿ ಎನ್ನ ತವರೂರಾ ||ಪಲ್ಲ||

ಹಿಂದಿನ ಜನ್ಮದ ಸುದ್ದಿ ತಿಳಿದು ತೆಗೆದಾ ಕಣ್ಣಾಗ ನೀರಾ

ಬಂದಿಖಾನಿ ಮೂತ್ರ ಭಾಂಡ್ಯಾದೊಳ ದುರ್ಗಂಧ ಅನಿವಾರ್ಯ

ಕಂದುಗೊರಳನ ಆಜ್ಞೆದಂತೆ ಬಂದ ಭವ ದೂರಾ ||1||

ಕಾಲ ಬಾಲ ತಲೆ ಟೊಂಕ ಇಲ್ಲದೆ ಹೇರ ಎತ್ತ ತಂದಾರ

ಎಡಬಲ ಯಮನರಿಗೆ ನೋಡಿ ನನಗಿದು ಥರಾ ಥರ

ಜುಲ್ಮಿದಿಂದ ಎನಗ ಎಳದೊಯ್ದೊರೋ ನನ್ನದೆಂಥಾ ಹಣಿಬಾರಾ ||2||

ಜನ್ಮ ಕೊಟ್ಟ ತಾಯಿ ತಂದಿ ಬಿಟ್ಟು ಅಗಲ್ಯಾರ

ಆರು ಮೂರು ಒಂಬತ್ತ ಮಂದಿ ಎನ್ನ ಬಳಗದವರ

ಹತ್ತು ಮಂದಿ ಎನಗ ಸುತ್ತಿ ಹೊತ್ತುಕೊಂಡು ನಡದಾರ ||3||

21 ಸಾವಿರದಾರನೂರ ಹಳ್ಳಿ ದಾಟ್ಯಾರ

108 ಯೋಜನ ನಡೆದು ಮಣ್ಣೂರ ಮುಟ್ಯಾರ

200 ಹದಿನಾರು ಪರದಿ ಹರದು ಮುರುದು ಕಟ್ಟ್ಯಾರ ||4||

ಪಾಪ ಪುಣ್ಯದ ಲೆಕ್ಕಾ ಕೊಡು ಅಂತ ಕೇಳ್ಯಾರಾ

ದಾನ ಧರ್ಮ ಮಾಡಿನೆಂದಾಗ ತಗೊಂಡವರಿಗಿ ಒಳ್ಯಾರಾ

ಎನ್ನ ಪಾಪ ಎನ್ನ ಪದರಾಗ ಕಟ್ಟಿ ಎಲ್ಲರೂ ಹೊಳ್ಯಾರ ||5||

ಕಠಿಣ ಪ್ರಸಂಗಕ ಬಂದ್ರೊ ನೀಲೂರ ಶರಣರ

ಕಾಟ ಹೊಡದಾರ ಪಾಪದ ಹಾದಿಗಿ ಎಂಥ ಧುರೀಣರಾ

ಮೆಟ್ಟಿಲಿ ಹೊಡಿ ಅಂದ ಕವಿ ಪಂಚಾಕ್ಷರಿ ಝೂಟ್ ಪ್ರಸಾರಾ ||6||

ಪ್ರಾಣ ಪಕ್ಷಿಯೆಂಬೊ ಪರಮಾತ್ಮನ ನುಡಿತು

ಪರಲೋಕದ ರೂಢಿಯಲ್ಲಿ ದುಡಿತು ||ಪಲ್ಲ||

ದೇಹ ಸದಾಕಾಲ ದುಡಿಯುತ ನಡಿತು

ಹೇಯ ಸಂಸಾರ ಎಂಬೋದು ಕಡಿತು

ಜೀವ ಇರೋತನ ನಿನ್ನ ಕಾಯ ದುಡಿತು ||1||

ಪಕ್ಷಿ ನವದ್ವಾರದಲ್ಲಿ ಹಾರ್ಯಾಡಿತು

ಕುಕ್ಷಿಯಲ್ಲಿ ಮೋಕ್ಷದ ದಾರಿ ಪಿಡಿತು

ದೀಕ್ಷೆ ಗುರುವಿನಲ್ಲಿ ಪಾದ ಹಿಡಿತು ||2||

ಎಪ್ಪತ್ತೆರಡು ಸಾವಿರ ನಾಡಿ ಕೂಡಿತು

ತುಪ್ಪಿನಂಥ ಗುಣ ತಿಳಿಮಾಡಿ ತೀಡಿತು

ಪಿಂಡ ಹೆಚ್ಚ ಅಂತ ತಿಳಿಗೇಡಿ ನುಡಿತು ||3||

ಕಂಡ ಕಂಡವರಲ್ಲಿ ಭೋಗ ಸುಖ ಪಡಿತು

ಭಂಡ ಮಾರಲಾರದೆ ಗಂಡ ಜೀವ ನೋಡಿತು

ಹಾದರ ಮಾಡಿ ಊರೆಲ್ಲ ಹರಗ್ಯಾಡಿತು ||4||

ಜೀವಾತ್ಮ ಪಿಂಡದ ಶೈಲಿಯ ಸುಖಕಂಡಿತು

ಶಿವನಾಮದ ಹಾದಿಗಿ ಅಡತಡಿ ಮಾಡಿತು

ಭವದೊಳು ಜೀವಕ ಜಯ ನುಡಿತು ||5||

ಕಂಡ ಪಿಂಡ ಪಕ್ಷಿಗಿ ನೋಡಿ ನಡುಗಿತು

ಬ್ರಹ್ಮನಂದದ ಸುಖದಲ್ಲಿ ಮಡಿತು

ಕಂಡು ಕಾಣಲದಾಗ ದೇಹ ಬಿಟ್ಟು ನಡಿತು ||6||

ನೀಲೂರ ಶರಣರ ನಾಮದೊಳು ಪಕ್ಷಿ ನುಡಿತು

ಪಂಚತತ್ವದ ಶೈಲಿಯಲ್ಲಿ ಮಹಾಗಾಯಿ ಕೀರ್ತಿ ಪಡಿತು

ಪಂಚಾಕ್ಷರಿ ಜೀವಾತ್ಮ ಶಿವನಲ್ಲಿ ಬೆರಿತೋ ||7||

ಜೋಕಾಲಿ ಆಡದೂ ಬಿರಿ ಅದ ಬೀರಕ್ಕ

ಕಾಲ ಜಾರಿ ಬಿದ್ರ ಹೋದ ಸ್ವರ್ಗಕ ||ಪಲ್ಲ||

ಗುರುವಿನ ಮುಖ ಎಂಬುವಂತ ಮರಕ್ಕ

ಆರು ಎಂಬೂ ನಾರ ಹಗ್ಗ ಗಂಟು ಹಾಕಿ ಸರಕ

ಸ್ಥಿರಗುಣ ತೊಟ್ಟಿಲ ತಂಗಿ ನಿಂತೋ ಜಾಗಕ ||1||

ಆಧಾರ ಎಂಬೋ ಅಡ್ಡ ಬಡಗಿ ತೊಡಗಿಸು ಹಾಕಿ ಮಲಕ

ನಾದ ಬಿಂದು ಕಲೆ ಸ್ವಾದಿಷ್ಟ ಸ್ಥಲಕ

ಶುದ್ಧ ಮಣಿಪೂರದಿಂದ ಜೋಕಾಲಿ ಹೊಡದಿ ಮ್ಯಾಲಕ ||2||

ಪಂಚಭೂತ ಎಂಬೋ ಪಂಚಮಿ ಹಬ್ಬಕ

ಪಂಚ ಕಾರ್ಯ ಎಂಬೂ ಈ ಪ್ರಪಂಚ ಪಂಚಾಂಗಕ

ಸಂಚಿತ ಕರ್ಮ ನಿನ್ನ ಭೋಗಕ ||3||

ಪತಿವೃತೆಯೆಂದು ಪಾದಿಡು ಮತ್ರ್ಯಾಕ್ಕ

ಅತ್ತೆ ಮಾವನ ಸೇವೆ ಮಾಡವ್ವ ತುರ್ತಕ್ಕ

ಭೂತವಾಂಗ ಮೂಲಾಧರ ನಿರ್ತಕ ||4||

ಪ್ರಾಯಯಂಬೋ ಮದ್ಯಾನ ಜೋಕಾಲಿ ಹೊಡಿಬ್ಯಾಡ ಜೋಕ

ತ್ರಾಯ ತ್ರಾಯ ಮಾಡೋ ಪ್ರಾಯ ಇರುವತನಕ

ಗುರುವಿನ ಆಶ್ರಯದಲ್ಲಿ ಇರು ಜೀವಿಸೋತನಕ ||5||

ನೂರು ವರ್ಷ ಪುರಾತರ ಮಾರ್ಗಕ್ಕ

ಬಿರಿ ಆದ ಮುಟ್ಟೋತಾನ ಕಲಿತ ವರ್ಗಕ

ಗರೀಬ ಪಂಚಾಕ್ಷರಿ ಜೋಕಾಲಿ ಹೊಡದರ ಮುಟ್ಟಿತು ಸ್ವರ್ಗಕ ||6||

ಹಗಲು ರಾತ್ರಿ ಜಾತ್ರಿ ನಡದೈತಿ ಮಹಾತ್ಮ ಶಂಕರಾಚಾರಿದು

ಜಗದ್ಗುರುವಿನ ಆಶೀರ್ವಾದ ಸರಿ ಬಾರದು ||ಪಲ್ಲ||

ಮುತ್ಯಾ ಬಂದುನಂದರೆ ಒತ್ತ ಒತ್ತ ಜನ ಹೋಗತಾರ ತೊರದು

ಕುಂತಲ್ಲೆ ಕೂತು ಸುತ್ತಾ ನೋಡತಾರ ಖಿಡಕ್ಯಾಂದು

ದತ್ತಗೇಡಿ ಬಂದರೆ ಹಸ್ತ ಏಳಲ್ಲಾ ಅವರದು ||1||

ಭಾಗ್ಯಶಾಲಿ ದೈವಿ ಬಂದರ ಬರತಾರ ಹಾತೊರೆದು

ಭೋಗದ ಭವಿಷ್ಯ ತಿಳಿದು ಆ ಸೀರ ಓದಿಸೋದು

ಭಾಗ್ಯಹೀನ ಬಂದರೆ ಕರಗಳಿ ಮಡಚಂದು ||2||

ಪ್ರಕಾಶ ಶಕ್ತಿದಿಂದ ನೋಡತಾರ ಮುತ್ಯಾ ನೇತ್ರ ತೆರದು

ಉರಿ ಹಸ್ತದಂತೆ ಹಸ್ತಾ ಕರ್ಮ ಸುಡವದು

ಬ್ರಹ್ಮ ರೇಖಾ ನಾಲಗಿ ಮೇಲೆ ನುಡದದು ಆಗೊದು ||3||

ಮನುಷ್ಯ ಜನ್ಮದ ಆಶಾ ಬಹಳ ಕೆಟ್ಟದು

ಎನಗೆ ಗುರು ಆಶೀರ್ವಾದ ಆದರೆ ಒಳ್ಳೆಯದು

ಅಲ್ಲೇ ಬೇಡಿ ಬಂದಿಲ್ಲ ಇಲ್ಯಾಂಗ ಸಿಗವದು ||4||

ದಿನಾ ತಪ್ಪಲದೆ ನಾವು ದರುಶನಕ ಹೋಗೋದು

ದರುಶನ ಆದರೆ ಏನೈತು ಮನ ಹಸನ ಇಲ್ಲ ನಮ್ಮದು

ಪನ್ನಂಗಧರ ಪರೀಕ್ಷೆ ಮಾಡಿ ಪ್ರಸಾದ ಕೊಡತಾನ ತಂದು ||5||

ನೀಲೂರ ಗುರು ಆಶೀರ್ವಾದ ಎಲ್ಲಕ ಹೆಚ್ಚಿಂದು|

ಹರ ಮುನಿದರೆ ಗುರು ಕಾಯ್ದ ಮಾತ ಅದ ಮುಂಚಿಂದ್ದೂ

ಗುರುವಿನ ಗುಲಾಮ ಆಗಲಾರದೆ ದಾರಿ ಸಿಗಲಾರದು ||6||

ಯಾರೇನು ಮಾಡ್ಯಾರ ಹಣೀಬಾರ ಕತಿ ಯಾರಿಗಿ ಮಾಹಿತಿ

ಬರಬಾರದೆ ಬಂದು ಆದಂಗ ಫಜೀತಿ ||ಪಲ್ಲ||

ಮಾಯಾ ಪ್ರಪಂಚವೆಂಬುದು ತಾಯಿ ತಂದಿ ಪ್ರೀತಿ

ಮೂತ್ರ ಭಾಂಡೆದೊಳು ಆಗುವುದು ಆಕೃತಿ

ನವಮಾಸ ತುಂಬಿ ದಾಟಿದಿ ಅಗಸಿ

ಗುರುರಾಯ ಮಾಡಿ ಕಳುಹಿದ ಹಿಕಮತಿ ||1||

ಬಾಲ ವಯ ವೃದ್ಧ ದೇಹಕ ಜತಿ

ರಜ ತಮ ಸತ್ವ ಗುಣಗಳು ಜ್ಯೋತಿ

ಒಳ್ಳೆಯದು ಕೆಟ್ಟದ್ದು ಕೆಟ್ಟದ್ದು ಒಳ್ಳೆಯದು

ಹೊಡದಾಡಿ ಬಡದಾಡಿ ನೀ ಸತ್ತು ಹೋಗತಿ ||2||

ಮಿಥ್ಯ ಪ್ರಪಂಚ ಮಾಡಿ ಕಡಿಗೆಲ್ಲ ಸಾಗತಿ

ಸತ್ಯ ಚಿತಾನಂದಗ ಕಡಿಗಲ್ಲ ನೋಡತಿ

ಮರ್ತ್ಯದಾಗ ಚಂದ ಗುರುತ ಹಿಡಿ ಗುರುವಿಂದು

ಹರ ಗುರು ಚರಮೂರ್ತಿ ಚರಣ ಹಿಡಿ ಒತ್ತಿ ||3||

ಪಡವಿ ಮಹಾಗಾಂವದಲ್ಲಿ ಉಡತಡಿ ಪ್ರೀತಿ

ಬಡವ ಮೀರಾಗ ತಿಳಿದಿಲ್ಲ ಹಿಂದಿನ ಹಿಕಮತಿ

ನೀಲೂರ ಒಡೆಯರು ಅವರೇ ಕಾಯ್ವರು

ನಿಮ್ಮ ಹೊರತು ನನಗಂತು ಯಾರಿಲ್ಲ ಗತಿ ||4||

ತಾಯಿ ಸೇವಾ ಮಾಡಬೇಕು ತಂದಿ ಪಾದ ಹಿಡಿಬೇಕು

ಉದ್ಧರ ಆಗೋದು ನಿಮ್ಮ ವಂಶ

ಇಲ್ಲದರ ದೀಪ ಬಡದು ಆಗತಾದ ನಾಶ ||ಪಲ್ಲ||

ಅಣ್ಣ ತಮ್ಮರ ಬಾಯಿ ಬಡಿಬಾರದು

ಪರರ ನಿಂದಾ ಮಾಡಬಾರದು

ಎರಡನೆಯವರ ಗಂಟ ಹೊಡಿಬಾರದು

ಹೆಚ್ಚಿದ್ದು ಅಗತೀರಿ ಮೋಸ

ಹುಚ್ಚ ನಾಯಿ ಆಗಿ ಸಾಯತಿರಿ ಒಂದಿವಸ ||1||

ಕಟ್ಟಿದ ಕರಿಮಣಿ ಕಡಿಬಾರದು

ಬಿಟ್ಟ ಹೆಂಡತೀನಿ ಕೂಡಬಾರದು

ಒಣ ಬಣವಿ ಸುಡಬಾರದು

ಹೊಟ್ಟಿ ಕೆಡವಿ ಕೊಲ್ಲಬಾರದು

ದೇಶ ದಿಕ್ಕ ಪಾಲಾಗಿ ಹೋಗ್ವದು ಕುಲ ನಾಶಾ ||2||

ಕಲಸಿದ ಗುರುವಿನ ಮರಿಬಾರದು

ಗುರುದ್ರೋಹಿ ಆಗಿ ಇರಬಾರದು

ಹೆಸರ ಅಳಿಸಿ ಹಾಡಬಾರದು

ಮಹಾ ಪಾಪ ಅದ ಕೆಲಸಾ

ಅಂತವಗ ಅನ್ನ ಆಗಲ ಅಂದ ಮೀರಾಸಾಬ ||3||

ಎಷ್ಟು ಕಷ್ಟ ಈ ದೇಹಕ ಹುಟ್ಟಬಾರದು ಮಾನ ಜನ್ಮಕ

ಹುಟ್ಟಿ ಹುಟ್ಟಿ ಸತ್ತು ಸತ್ತು ಗೊತ್ತ ಇಲ್ಲದೆ ಹೋದೇನವ್ವ

ಹೊತ್ತ ಐತು ನಡಿ ತೆಂಗೆವ್ವಾ ||ಪಲ್ಲ||

ನಿರಂಕಾರ ನಿಜಗುಣ ಎಂಬೋ ನೀರ ಒಳಗ ಹಾಕಿದೇನವ್ವಾ

ಭವಬಾಧೆ ಎಂಬೋ ಮಣ್ಣ ಜಿಗಟ ಕೆಸರ ಕಲಸ್ಯಾನವ್ವಾ

ಚಿತ್ರಗುಣ ಎಂಬೋ ಒಳಗ ಕಲಸಿ ಬಿಟ್ಟಾನವ್ವಾ ||1||

ಆಕಾರ ಎಂಬೋ ಆಂವಗಿ ತಂದು ಜೋಡಿಸಿ ಇಟ್ಟ್ಯಾನವ್ವ

ನಿರಾಕಾರ ಎಂಬೋ ಜೀವ ಒಳಗ ಹಾಕಿ ಕುಟ್ಟ್ಯಾನವ್ವ

ನವ ದ್ವಾರದೊಳು ನಿಂತು ಜ್ಞಾನ ಬೆಳಕ ನೋಡ್ಯಾನವ್ವಾ ||2||

ಧ್ಯಾಸವೆಂಬೋ ದಾಸರಿಗಿ ನೆನವು ಮಾಡಿ ಕೆಟ್ಟಾನವ್ವ

ಅತಿ ಅಹಂಕಾರ ಎಂಬೋ ಕನಸ್ಸಿನಂತೆ ಕೊಟ್ಟಾನವ್ವ

ಮಾಸಿದ ಮೈಲಿಗಿ ಗಡಗಿ ಹೇಸಿಕಿಲ್ಲದೆ ಮೆಟ್ಟ್ಯಾನವ್ವ ||3||

ಆರು ಮಂದಿ ಐಯಗಾರಿಗೆ ಅರವಿನಿಂದ ನೋಡಿದೇನವ್ವಾ

ಮೂರು ಮಂದಿಯಲ್ಲಿ ಮುಕ್ತಿ ಯುಕ್ತಿಯಿಂದ ಪಡದೇನವ್ವಾ

ಯಾರು ಇಲ್ಲದ ಸಮಯವು ನೋಡಿ ಜೋರವಾಗಿ ಬಯ್ಯದಾನವ್ವಾ ||4||

ಲಕ್ಷ ಚೌರೈಂಸಿ ಜನ್ಮದ ಟಿಗರಿ ತಿರವಿ ಬಿಟ್ಟಾನವ್ವಾ

ನೂರಾ ಎಂಟ ಪೆಟ್ಟವ ಹಾಕಿ ಗಟ್ಟಿ ಗಡಗಿ ಮಾಡಿದೇನವ್ವಾ

ಗುರು ಜ್ಞಾನವೆಂಬ ಅಗ್ನಿ ಒಳಗ ಹಾಕಿ ಸುಟ್ಟನೆವ್ವಾ ||5||

ಗಡಗಿ ತೊಳಿದು ಅಡಗಿ ಮಾಡದು ಹುಡಗಿ ನಿನ್ನಲ್ಲಿಂದ ಆಗಲದವ್ವಾ

ಸಡಗರದಿ ಅಡಗಿ ಮಾಡಿ ಒಡಿಯನಿಗೆ ನೀಡೇ ನಮ್ಮವ್ವಾ

ಗಡಬಡದಿ ಎಡಿಯ ಕೊಟ್ಟು ಮಡಿಲಿಂದೆ ಇರಬೇಕವ್ವಾ ||6||

ಧರಿಯೊಳು ಮೆರಿಯುವ ಮಹಾಗಾಂಯಿ ಗ್ರಾಮ ಐತಿ ಅಧಿಕವ್ವಾ

ಅರಿವಿಲಿ ಗಡಗಿ ತೊಳದಾಗ ಮಹಿಬೂಬ ದೇವರವ್ವಾ

ಬಾಲ ಪಂಚಾಕ್ಷರಿ ಕವಿತಾ ಮಾಡಿದಾ ಗುರುತಿಟ್ಟು ನೋಡಿರೆವ್ವಾ ||7||

ಭಕ್ತಿಗಿ ಶಿಷ್ಯ ಬೇಕು ಮುಕ್ತಿಗೆ ಗುರು ಬೇಕು

ಶಕ್ತಿ ರೂಪ ಶಿವನಲ್ಲಿ

ಶಕ್ತಿ ಇಲ್ಲದೆ ಶಿವನ ಸತ್ಯ ನಡೆಲ

ಕೊಡಲಾಕ ಏನಾದೋ ಅವನಲ್ಲಿ ||ಪಲ್ಲ||

ಕಷ್ಟಕ ರೊಕ್ಕ ಇಲ್ಲದೆ ಜಡಿಗಳು ಬೆಳಶ್ಯಾನ

ತನ್ನ ಶಿರದಲ್ಲಿ ಸುಟ್ಟ ಹೆಣದ ಬೂದಿ ಬಡಕೊಂಡು

ಕೂತ ಸ್ಮಶಾನದಲ್ಲಿ ಕುಂಚಿ ಕೊರವರಂಗ

ಲಂಗೋಟಿ ಸುತಕೊಂಡು ಹಾಕಿಕೋತ ತನ್ನ ಮುಕಳೆಲ್ಲ

ಹೆಂಗಸರ ಸೀರಿ ಫಡಕಿಲಿ

ಅಂಜಿ ಹೋಗಿ ಕೂತ ಸುಡಗಾಡದಲ್ಲಿ ||1||

ಮಾರಿ ತುಂಬ ಬಂಡಾರ ಬಡಕೊಂಡು

ಪೋತರಾಜ ಆದ ಹುಚಪ್ಯಾಲಿ

ಬುರಬುರ ಪೋಚಮ್ಮ ಡೋಲ

ಬಡದಾಗ ಕುಣತ್ತಿದ್ದ ರಸ್ತಿಯಲ್ಲಿ

ಲಡಿಲಿ ಮೈತುಂಬ ಕಡಕೋತ್ತಿದ್ದ

ಜಿಂಜೀ ಹರಕೊಂಡ ಜೋರಿಲಿ

ದುಡ್ಡ ಬೇಡತಿತ್ತು ಅಂಗಡಿಯಲ್ಲಿ

ಹೊಟ್ಟಿ ಹೊಟ್ಟಿ ಬಡಕೋತಿತ್ತು ಕೈಲಿ ||2||

ದುರ್ಯೋಧನ ಪಿಚಂಡಿ

ಕಟ್ಟಿರು ಬಿಗತಾರ ಸರ್ಪಿಲಿ

ದ್ರೌಪದಿ ಶರೆ ಬಿಡಸ್ಯಾಳ

ಕಾಲಿನ ಅಂಗಪ್ಪೊಲಿ

ಶಕ್ತಿಕಿನ್ನ ಶಿವ ಹೆಚ್ಚ ಅನ್ನವಗ

ಹೊಡಿರಿ ಹಳೆಯ ಬೂಟಿಲಿ

ಬಾಯಿ ತೊಳಿಯಿರಿ ಹಾವಿಲಿ ನಾಲಗಿ

ಒರಸರ ಮೆಟ್ಟಿಲಿ ||3||

ಅರಸ ಚಂದ್ರಗುಪ್ತ ಮನಸ

ಮಾಡಿದಾ ಖಾಸ ಮಗಳ ಮ್ಯಾಲಿ

ಮಗಳ ಶ್ಯಾಪಿಲಿ ಏಳ ಗಜದ

ಕಲ್ಯಾಗಿ ಬಿದ್ದ ಪಾತಾಳದಲ್ಲಿ

ಹರದೇಶಿಯವರು ಸುಮ್ಮ

ಯಾಕ ಕುಂತಿರಿ ಎಬ್ಬಸಿರಿ ನಿಮ್ಮ ಕಾಲಲಿ

ಕೇಳಿರಿಲ್ಲರೋ ನಿಮ್ಮ ಕಿವಿಲಿ

ನಾಚಿಕಿ ಶರ್ಮ ಆದ

ಇಲ್ಲರೋ ನಿಮ್ಮ ಬಲ್ಲಿ ||4||

ಕುಡು ಕುಡು ಅಂದ್ರ ಶಿವ

ಏನ್ ಕುಡತಾನಾ ನಿನ್ನ ಪಡಿ

ನಿನ್ನ ಪದರಲ್ಲಿ

ದುಡಿಯಲಾರದೆ ದುಡ್ಡ ಸಿಗೊದಿಲ್ಲ

ಒದರ್ಯಾಡೊದು ಖಾಲಿ

ಬಡವ ಪಂಚಾಕ್ಷರಿ ತೋಡ ಕೊಟ್ಟು

ಹೋಡ ಹೊಡದಾನ ಜೋರಿಲಿ

ಸಾವಳಿಗಿಯಾಂವ ಬಿದ್ದಾನ ಬಾರಲಿ

ಮುಕಳಿ ಮ್ಯಾಲ ಬರಿ ಅಂತ ಕ್ಯಾರಿಲಿ ||5||

ಹುಟ್ಟಿ ಬಂದಿ ಮಾನವ ಜನ್ಮಕ ಭೆಟ್ಟಿ ಮಾಡಲಿಲ್ಲಾ

ಸೃಷ್ಟಿಯೊಳು ಶ್ರೇಷ್ಠಾದ ಶಿವನಾಮ ನಿಷ್ಟಿಲಿ ನುಡಿಯಲಿಲ್ಲಾ ||ಪಲ್ಲ||

ನೀನ್ಯಾರು ಅಂಬೋದು ಎಲ್ಲಿಂದ ಬಂದಿ ನಿನಗೇನ ತಿಳಿದಿಲ್ಲಾ

ದೃಷ್ಟಿಲಿಂದ ತಿಳಿದು ನೋಡಿದರೆ ನಿನಗಿದು ಹೊಳಿಲಿಲ್ಲಾ

ಜ್ಞಾನ ಎಂಬೋ ಅರುಹಿನ ಮನಸ್ಸಿಗಿ ನೀವನ ಕೇಳಿದಿಲ್ಲಾ

ಓಂನಮಃ ಶಿವಾಯ ಮಂತ್ರದಿಂದ ನಿನ್ನ ಕಾಯನೆ ತೊಳೆದಿಲ್ಲಾ ||1||

ಅಂತರಂಗ ಎಂಬೋ ಅರವಿನ ಮನಿಗಿ ಶಂಕರನ ಲೀಲಾ

ತಾಮಸ ಗುಣ ಎಂಬೋ ತಾಂಬಾಡಿ ತಂದು ನೀಡೋ ಊಟಕ್ಕೆಲ್ಲಾ

ಭಕ್ತವತ್ಸಲ ಊಟಕ್ಕ ಬಂದರ ಅಡಗಿ ಮೀಸಲಾ

ಗಡಗಿ ಶುದ್ಧ ಆದರೆ ಅಡಗಿ ಆಗೋದು ಶ್ರೀಗುರುವಿನ ಲೀಲಾ ||2||

ಪಂಚತತ್ವದ ಗಡಗಿ ತಂದು ಹಾಕೋ ಅಡಗಿ ಮಾಲಾ

ಜ್ಞಾನ ದೃಷ್ಟಿಯ ಬಲಿ ಗುಂಡ ಹಚ್ಚಿ ಮಾಡೋ ಅಡಗಿ ಮೀಸಲಾ

ಒಳಗಿನ ಮಂದಿಗಿ ಊಟ ಬಡಿಸೋದಕ ತ್ರಾಸ ತಾಳಲಿಲ್ಲಾ

ಎಲ್ಲರೂ ಒಂದಿನಾ ಬಿಟ್ಟು ಹೋಗಾದು ಯಾರು ಉಳಿಯೊದಿಲ್ಲ ||3||

ದೇಶಕಧಿಕವಾದ ವಾಸುಳ್ಳ ಮಹಾಗಾಯಿ ಗ್ರಾಮ ಮಿಗಿಲಾ

ಈಶ ಮಹಿಬೂನ ಕೂಸಿನ ಅವತಾರ ತಿಳಿದು ನೋಡಿರೆಲ್ಲಾ

ವಾಸ ಆದ ನೀಲೂರ ಗ್ರಾಮಕ ದೋಷ ಹತ್ತಲಿಲ್ಲಾ

ಸೋಸಿ ನೋಡಿ ಆತನ ಶರಣಕ ದಾಸ ಆದೆವು ಎಲ್ಲಾ ||4||

ಗಡಗಿ ತೊಳದು ಅಡಗಿ ಮಾಡ್ಯಾಳವ್ವಾ

ಗಂಡಗ ನೀಡ್ಯಾಳವ್ವಾ ||ಪಲ್ಲ||

ಮುಟ್ಟಾದ ಗಡಗಿ ಮುಡಚಟವಾ

ಸುಟ್ಟಿದ ಗಡಗಿ ಇಡಬಾರದವ್ವಾ

ಪೆಟ್ಟ ಹಾಕಿದರೆ ಒಡಿಬಾರದೆವ್ವಾ

ಇಟ್ಟ ಗಡಗಿ ಇಟ್ಟಲ್ಲಿ ಇಟ್ರು ಕೆಡಬಾರದವ್ವಾ ||1||

ತೊಗಲ ಗಡಗಿ ಒಂಬತ ಹುಗಲವ್ವಾ

ಸ್ಥೂಲಗಡಗಿದು ತಗಲ್ಯಾದವ್ವಾ

ಸೂಕ್ಷ್ಮ ಗಡಗಿ ಮಿಣಲಾದವ್ವಾ

ಕಾರಣ ಗಡಗಿ ಕರಗಿತವ್ವಾ ||2||

ಗಡಗಿ ಇಡು ತ್ರಿಗುಣ ಎಂಬೋ ಒಲಿಮ್ಯಾಲವ್ವಾ

ನಿರ್ಗುಣ ಎಂಬೋ ನೀರ ಹಾಕವ್ವಾ

ಧರ್ಮ ಎಂಬೋ ಧಾನ್ಯದೆ ಗಂಜಿ ಕಾಸವ್ವಾ

ಪರಮ ಪೂಜ್ಯರಿಗಿ ಉಣಶ್ಯಾಳ ಮಲ್ಲವ್ವಾ ||3||

ತೊಳದ ಗಡಗಿ ತಳದಾಗ ಹೋಯಿತವ್ವಾ

ಉಳಿದ ಗಡಗಿ ಉಳ್ಳಿ ಬಿತ್ತವ್ವಾ

ಕಳದ ಗಡಗಿ ಕರಮಸಿ ಆಯಿತವ್ವಾ

ಬೆಳದ ಗಡಗಿ ಬೆಳಕಿಗಿ ಬಂತವ್ವಾ ||4||

ಅವಗಿ ಇದ್ದಲ್ಲೆ ಬರಬೇಕು ಗಡಗೆವ್ವಾ

ಅಗ್ನಿಪುಟು ಇಲ್ಲದೆ ಆಹಾರ ಸುಡಬೇಕವ್ವಾ

ಅಡಗ್ಯಾಗ ಗಡಗಿ ಹಾಕಿ ಹಾಡಬೇಕವ್ವಾ

ಗುರು ಮುಟ್ಟಲದಂವಗ ಒಯ್ದು ಕೊಡಬೇಕವ್ವಾ ||5||

ಅಕ್ಕ ಮಹಾದೇವಿ ಗಡಗ್ಯಾಗ ಅಮೃತವ್ವಾ

ಅಕ್ಕರತಿಲಿ ನೀಡ್ಯಾಳ ನಮ್ಮವ್ವಾ

ಚಿಕ್ಕ ಪಂಚಾಕ್ಷರಿಗಿ ಸಕ್ಕರಿ ಹಾಲಾ

ಅಕ್ಕಿಬಾನ ಮಾಡಿ ಉಣಶ್ಯಾಳವ್ವಾ ||6||

ಒಂದೇ ಕಂಬಕ ಸೂಸುವ ನಾಡಿ

ಈಡ ಪಿಂಗಳ ಅದಕ ಕೊಟ್ಟಾ ಮೇಡಿ

ಬ್ರಹ್ಮ ಸ್ಥಾನದಿಂದ ಶಿಖರಕ ಕೂಡಿ ||ಪಲ್ಲ||

ಪಂಚ ತತ್ವದಿಂದ ಕಟ್ಟಿದ ಗ್ವಾಡಿ

ಮಾಯ ಪ್ರಪಂಚ ಸಾರಿಸುವ ರಾಡಿ

ಆರು ಮೂರೆಂಬತ್ತು ಮಕ್ಕಳು ಕಾಡಿ

ಅರಿವು ಹಾರಿಸಿ ಬಿಟ್ಟಾವ ಖೋಡಿ ||1||

ಮೂರು ವರ್ಷದ ಕವಲಿನ ಗಾಡಿ

ಸ್ಟೇಶನ್ ಬಂದಾಗ ನಿಂದ್ರದು ನೋಡಿ

ಮಾಸ್ಟರ್ ಕೊಟ್ಟ ಟಿಕೇಟ್ ಇಡಬೇಕು ರೆಡಿ

ಇಲ್ಲಂದ್ರ ಕೈಗ ಹಾಕತಾನ ಬೇಡಿ ||2||

ಸಾಕಾದರೆ ಸೇರು ಮಹಾದೇವಿ ಗುಡಿ

ಬೇಕಾದರೆ ನಿನ್ನ ಝೇಳಜಿ ಹಿಡಿ

ಏಕವಚನೆಂಬ ಝೂಂಗಟಿ ಹೊಡಿ

ಚಿಕ್ಕಮೀರಾನ ಕವಿ ಮುತ್ತಿನ ನುಡಿ ||3||

ಹ್ಯಾಂಗ ಹೊಯ್ತವನ ಯವ್ವನ

ಮದ ಮೀರಿ ಹೊಯ್ತ ಹಾರಿ

ಅದರ ಇದರ ಉಳಿತು ದೂರ ದಾರಿ ||ಪಲ್ಲ||

ಬಾಲತ್ವ ಆಡರದಾಗ ಕಳದಿ

ಹಾಲ ಕುಡದು ಬೆಳದಂಗ ಬೆಳದಿ

ಈ ಪ್ರಾಯ ಉಕ್ಕುವ ಹಾಲ

ತುಂಬಿದ ಉಸುಕಿನ ಚೀಲಾ

ತೋಳ ತೊಡಿ ತುಂಬಿದ ಗಲ್ಲ

ವಿದ್ಯಾ ಚೆಲ್ಲಿದಿ ಎಲ್ಲಿಂದಲ್ಲಿ

ಅಮೃತಕುಂಡ ಐತು ಖಾಲಿ

ಕಡಕೊಂಡಿ ರತ್ನದ ಮಾಲಿ ||1||

ಯಮ ಕುಂಡದಾಗ ಹಾರಿ

ಅಡ್ಡ ಕಟಗೊಂಡಿ ನಿನ್ನ ಗೋರಿ

ಮಣ್ಣ ಇರೋತಾನ ಮೈ ಮ್ಯಾಲ ಹೆಣ್ಣ ಚದರಿ

ಹೋಗಬ್ಯಾಡ ಬೆದರಿ ಪಾಗಾದಾಗ ಕಟ್ಟಿದ ಕುದರಿ

ಪಾದೋದಕ ಬಿಂದು ಮಾಡಿ ಕುಡಿರಿ

ಸದ್ಭಕ್ತಿಯಂಬೋ ಮಗಾ ಒಂದು ಹಡಿರಿ ||2||

ಪ್ರಪಂಚದಾಟ ಕಣ್ಣ ಮುಚ್ಚಗಿ

ಗುರುರಾಯಾನ ಹಾಕ್ಯಾನ ಪೇಚಿಗಿ

ನೀ ಎಂದ ಬರತಿ ಏನ ಹೊರಳಿ

ನೀರ ಮೇಲೆ ತೇಲಿದ ಗುರಳಿ

ಒಂದಿವಸ ಹೋಗುವುದು ಹೊರಳಿ ||3||

ಪಾಪದಿಂದ ತುಂಬಿದ ತಿಜೋರಿ

ಕೈಯಾಗ ಹಿಡಿದು ನಡದಿ ಶಿವಪೂರ ದಾರಿ

ವೃದ್ಧ ಆದಾಗ ನಡದ್ಯೊ ಕೋಲ ಊರಿ

ಬಿದ್ದಿ ಕಾಲ ಜಾರಿ ನಡಿಯದು ಮಣಿಯಲ್ಲ ದಾರಿ ||4||

ಬಿಟ್ಟು ಬಿಡರಿ ಪರನಾರಿ ವ್ಯಸನ

ಶರೀರ ಮಾಡಿಕೋ ಹಸನ ||ಪಲ್ಲ||

ನಸುಕಿನಾಗ ಮಾಡಿಕೋ ಸ್ನಾನ

ಈಶನ ಸ್ಮರಿಸುತ ನೀ ಮಾಡೋ ಧ್ಯಾನ

ಹಸಿಹಾಲ ಮಾಡಿಕೋ ನೀ ಸೇವನ

ಬಿಸಿಬಿಸಿ ಪ್ರಸಾದ ಮಾಡೋ ನೀ ಭೋಜನ ||1||

ಉದ್ಯೋಗ ಮಾಡಿ ನೀ ಕಳಿಯೋ ಜೀವನ

ಬುದ್ಧಿ ತಪ್ಪಿ ನೀ ಮಾಡಬೇಡ ಮದ್ಯಪಾನ

ಹದ್ದು ಕಾಗಿ ಹಾಂಗ ತಿರಗಾಂವ ಶ್ವಾನ

ಸದ್ಭಾವದಿಂದ ನುಡಿಯೋ ನೀನ ||2||

ನಕ್ಕು ನಲಿದು ನೀ ಮಾತಾಡೋ ಜಾಣ

ಅಕ್ಕ ತಂಗಿಯರಿಗೆ ಬಗ್ಗಿಸಬೇಕಣ್ಣ

ಸೊಕ್ಕೇರಿ ಮಾತಾಡಿದಾಗ ರಾವಣ

ಬಿಕ್ಕಿ ಬೇಡವರಂಗ ಬಾಯಿ ಬಿಡಬೇಡ ನೀನ ||3||

ಪರಬ್ರಹ್ಮ ಮಾಡಿದ ಈ ಮಣ್ಣಿನ

ಆರು ಮೂರೊಂಬತ್ತು ದ್ವಾರ ಇಡು ಹಸನ

ಸೂರ್ಯೋದಯದಿ ಕುಂತು ಹಾಕೋ ಪದ್ಮಾಸನ

ಪಂಚಾಕ್ಷರಿ ಜಪಿಸಿ ಪಾರಾಗೋ ನೀನ ||4||

ಕಂಡ ಕಂಡಂಗ ಹೆಣಗಾಡಬೇಡ ನೀನ

ಗಂಡುಗಲಿ ಅನಿಸಿದ ನೀಲೂರ ಶರಣ

ದಂಡ ಪ್ರಣಾಮ ಹಾಕಿ ಹಿಡಿಯವನ ಚರಣ

ದಂಡ ಶಿಕ್ಷೆ ತಪ್ಪಿಸಕೋ ನೀನ ||5||

ಬ್ರಹ್ಮಾನಂದದ ಸುಖವು

ಅಪಾರ ಬ್ರಹ್ಮನಿಗೆದಕೋ ||ಪಲ್ಲ||

ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದ ಪಡಿಬೇಕೋ

ಶುದ್ಧ ಪ್ರಸಾದದಿಂದ ತನವ ಶುದ್ಧ ಮಾಡಿಕೋ

ಸಿದ್ಧ ಪ್ರಸಾದದಿಂದಲಿ ಮನ ಶುದ್ಧ ಮಾಡಿ ಬೇಡಿಕೋ ||1||

ತನು ತ್ರಯಗಳು ಸವೆಸಿ ಜ್ಞಾನ ಉದಯ ಮಾಡಿಕೋ

ಮನ ನೇತ್ರ ಇಂದ್ರಿ ನಿಗ್ರಹಿಸಿ ಆಸನ ಹಾಕಿ ಕೂಡಿಕೋ

ಘನ ನೂರಾ ಎಂಟು ಜಪಮಣಿ ಎಣಿಸಿ ಶಿವನೊಡಲೊಳು ಅಡಕೋ ||2||

ಆಧಾರ ಎಂಬೋ ಆರು ಚಕ್ರದ ಪಾವಟಿಗಿ ಏರಿಕೋ

ಆರು ಪೂರದೊಳಗ ಅರವಿಲಿ ಸೇರಿಕೋ

ತ್ರಿಕೂಟ ಮಧ್ಯೆದಿ ತ್ರಿಂಬಕೇಶ್ವರನಾದಿ ಬ್ರಹ್ಮ ರಂಧ್ರ ಹಾರಿಕೋ ||3||

ಇಪ್ಪತ್ತೊಂದು ಸಾವಿರದಾರನೂರ ಜಪಗಳು ಓದಿಕೋ

ತಪ ಇರಲಾರದೆ ಪಂಚಾಕ್ಷರಿ ಮಂತ್ರ ಪಟಿಸೋದಕೋ

ಒಪ್ಪುವ ಮಹಾದೇವಿ ತೀರ್ಥ ಕುಡದು ಝಪ್ಪನೆ ಬೀಳ ಪಾದಕೋ ||4||

ಪಾರಮಾರ್ಥ ಪತಂಗದ ಅರ್ಥ

ತಿಳಿದು ಕೂಡಬ್ಯಾಡಪ್ಪ ವ್ಯರ್ಥ

ಜೀವ ಇಲ್ಲದೆ ಪಕ್ಷಿ ಹಾರಿತು

ಜನ್ಮ ಹೊಯ್ತು ನಿನ್ನದು ವ್ಯರ್ಥ ||ಪಲ್ಲ||

ತಿರಗಿ ತಿರಗಿ ಬರುವದೆ ಗೊತ್ತಾ

ಮರವಿನ ಜನ್ಮದ ಮಾತ

ಮಾಯ ಸ್ತುತಿ ಮೋಹದ ಮಮತಾ

ಕಾಯದೊಳು ಇರುವುದು ಜಾಸ್ತಾ ||1||

ಹಿಡಬೇಕ ಅಂದ್ರ ಸಿಗುವಲ್ಲದೈತಾ

ನೋಡೇನಂದರೆ ಕಾಣವಲ್ಲದು ಕಾಂತಾ

ಖೋಡಿ ಜನ್ಮ ಮಾಡೋದು ವ್ಯರ್ಥ

ಹಾಡಹಗಲೆ ಮಾಡಿತು ಘಾತಾ ||2||

ಪರಬ್ರಹ್ಮ ನಿರ್ಮಿಸಿದಂತಾ

ಪರಶುದೇವ ಪಾವನ ಆದಿತಾ

ಜೀವಶಿವ ದೈವದ ಭಕ್ತ

ತಿಳದು ಹೇಳ ಇದರ ಗುರತಾ ||3||

ಕಂಡಥೌಲಿ ತಿರಗ್ಯಾಡುತಾ

ಉಂಡು ಮೂರವ್ಯಾಳಿ ಉಪವಾಸ ಇದ್ದಿತು

ಕದ್ದು ಬಂದು ಕದ್ದು ಹೋಯಿತಾ

ಶುದ್ಧ ಗುರುವಿಗಿ ಮರತೀತಾ ||4||

ಗುರುತ ಇಟ್ಟು ಗುರುವಿನ ಮಾತಾ

ದೀಕ್ಷಾ ತಗೋ ಮೋಕ್ಷದ ಮಮತಾ

ಅರಿವೆ ಗುರು ಆಗಿತು ಅರ್ಥ

ತಿಳಿಯಲಾರದ ಪಕ್ಷಿ ಹಾರಿತಾ ||5||

ದೇಶದೊಳು ಮಹಾಗಾಯಿ ಮಮತಾ

ಈಶ ಮಹಿಬೂಬ ಬಿಲ್ಲಾತ

ಪಂಚಾಕ್ಷರಿಗಿ ತಿಳಿಸಿ ಮಾಹಿತಾ

ಮುಂಚಿನಂಗ ಇಟ್ಟ ಕಿಮ್ಮತಾ ||6||

ನಡಿರವ್ವ ಮುಕ್ತಿ ಪಡಿರೆವ್ವ

ನಿಮ್ಮ ಗಂಡನ ಸೇವೆಯಲ್ಲಿ ಸದಾ ದುಡಿರೆವ್ವ ||ಪಲ್ಲ||

ತಾಯಿ ಉದರದಾಗ ಎಷ್ಟು ಕಷ್ಟ ಸಹಿಸಿರೆವ್ವ

ಮಲ ಮೂತ್ರದೊಳಗಿನ ಕ್ರಿಮಿಗಳ ಕಾಟವ್ವ

ಕಿವಿ ರಕ್ತದೊಳಗ ಬಿದ್ದಿದ್ದು ಎಚ್ಚರಿಲ್ಲರೆವ್ವ ||1||

ಕೂಸಾಗಿ ನಾನು ಇದ್ದಾಗ ದೋಷ ಹತ್ತಿತವ್ವ

ಬಾಯಿ ತೆರೆದು ಬಹಳ ಒದರಿದರೆ ಕೇಳುವರಾರವ್ವ

ಸೋತ್ರಿ ಬ್ರಹ್ಮನೊಡಗೂಡಿ ಸೀದಾ ನುಡಿದೆನವ್ವಾ ||2||

ನವಮಾಸ ತಾಯಿ ಉದರದಾಗ ನಾನು ಬೆಳೆದನವ್ವ

ಭವದೊಳಗ ಬೇಡವೆಂದು ಬಹಳ ಪರಿ ಬೇಡಿದನವ್ವ

ರವರವ ನರಕ ಭೋಗಿಸಿ ಜನ್ಮಕ ನೂಕಿದವನವ್ವ ||3||

ಬಾಲವಯ ದಾಟಿ ಯವ್ವನಕ ಬಂದೇನವ್ವ

ಯವ್ವನದ ಮಬ್ಬಿನಲ್ಲಿ ಹುಬ್ಬ ಹಾರಿಸಿದೇನವ್ವ

ಬೊಬ್ಬೆ ಹೊಡೆದು ತಾಯಿ ತಂದಿ ಹೇಳಿದರೆ ಕೇಳಲಿಲ್ಲವ್ವ ||4||

ಮದವೇರಿ ಮನ್ಮಥ ಬಾಣ ಮನಸ್ಸು ನೋಡಿತವ್ವ

ವ್ಯಭಿಚಾರ ಮಾಡಿ ಮಾಡಿ ದೇಹ ಮುರಡಿತವ್ವ

ಮುಪ್ಪಿನ ಕಾಲಕ ಮಾಡಿದ್ದು ನೆನಸಿ ದುಃಖಪಟ್ಟೆನವ್ವ ||5||

ಧರೆಯೋಳ ಮೆರೆಯುವ ಮಹಾಗಾಂವ ಊರ ದೂರವ್ವ

ವರಪುತ್ರ ಅನಿಸಿಕೊಂಡಾವ ಮಹಿಬೂಬ ದೇವರವ್ವ

ತಾಯಿ ಆಶೀರ್ವಾದ ಪಡೆದು ಮೀರಾ ಅದೃತ ತಾಯಿ ಸೇವಕವ್ವ ||6||

ಗಂಡನೂರವರು ಖಳಶ್ಯಾರ ತವರೂರಾ

ಕಂಡಂಗ ಬಡದಾರ ||1||

ಬಿಟ್ಟು ಹೋದ ಘಳಿಸಿದ ಮನಿಮಾರ

ಕಟ್ಟಿಲಿ ಮಾಡಬೇಕವ್ವ ಸಂಸಾರ

ಕೆಟ್ಟ ಖೋಡಿ ಅದ ನನ್ನ ಹಣಿಬಾರಾ

ಮುಟ್ಟಿ ಗಂಡ ನನಗ ಬಳಸಿ ಮನಾರಾ ||2||

ಮನಿ ಇಲ್ಲದೆ ತಿರಗಿದಾ ವರ್ಷ ನೂರಾರ

ತಳಾ ಇಲ್ಲದೆ ಪಾಯಾ ಹಾಕಿ ಬಹು ದೂರಾ

ಗುದ್ದಲಿ ಸಲಕಿ ಇಲ್ಲದೆ ಪಾಯಾ ಅಗಶ್ಯಾರಾ

ಸಾವಿರ ವರ್ಷ ಯೋಜನ ಹಾಕ್ಯಾರಾ ||3||

ಏಳು ಕಲ್ಲ ಸುದರಾಸಿ ತಂದಾರಾ

ನೋಡಿ ನೆದರಾಗಿ ಬಂದ ಉಷಾರಾ

ಕಟದು ಟುಣಕ ಮಾಡಿ ಇನ್ನೂರ ಹದಿನಾರಾ

ಲಕ್ಷಚೌರ್ಯಾಂಶಿ ವರ್ಷ ಕಟ್ಯಾರಾ ||4||

ಒಂಬತ್ತ ಖಿಡಕಿ ಇಲ್ಲದೆ ಆಧಾರ

ನೀರಿನ ಖಂಭಾ ಒಳಗ ಕೊಟ್ಟಾರಾ

ಗಾಳಿ ಪನ್ನೊಳಗಿ ಹಚ್ಚಿ ಬಿಟ್ಟಾರಾ

ಬೆಂಕಿ ಮ್ಯಾಲ ಮುದ್ದಿ ಬಡದು ಇಟ್ಟಾರಾ ||5||

ಸಿಕ್ಕಂಗ ಮಳೆ ಬಂದು ಸೋರಿ ಚಪ್ಪರಾ

ಕೊಳತು ನಾರೋದು ವಾಸ ಬಹುದೂರಾ

ಸಾಕಾಗಿ ಹೋಯಿತವ್ವಾ ಆಗಿ ಬೇಸರಾ

ತಿರಗಿ ಹೋಗಬೇಕೆಂದೆ ಗಂಡನ ಊರಾ ||6||

ಒಬ್ಬರ ಇಟಕೊಂಡೆನಾ ಇಟ್ಟಗಾರ

ಬಳಸಲಾರದೆ ಎನಗ ಎತಗೊಂಡ ಒಯ್ದಾರು

ಗಂಡ ಅಂಜಿ ತೊರದ ತನ್ನ ಮನಿ ಮಾರಾ

ಕಂಡು ಕಾಣಲಾರದೆ ಆದ ಫರಾರ ||7||

ನೆಲಕ ಬಿದ್ದು ಮನಿ ಐತು ಹವಾರ

ಆರು ಏಳು ಎಂಟು ಒಂಬತ್ತ ಮಂದಿ ಬೀಗರಾ

ಬಿದ್ದ ಮನಿಗಿ ನೋಡಿ ಖುಲಖುಲ ನಕ್ಕಾರಾ

ಗಂಡಿಲ್ಲದೆ ನಾ ಹ್ಯಾಂಗ ಮಾಡಲಿ ಸಂಸಾರ ||8||

ದೇಶದೊಳು ನನ್ನ ಮಹಾಗಾಯಿ ಊರಾ

ಗುರುವ ಗಂಡನ ಮನಿ ನೀಲೂರ

ಕೂಸ ಮೀರಾ ಕರಂಗ ದುಡದಾರಾ

ಕವಿ ಪಂಚಣ್ಣ ನೋಡಿ ಕಣ್ಣಾರಾ ||9||

ಮಾಯಾ ಪ್ರಪಂಚ ಮರವಿನ ಹಂಚ

ಮರತ ಕೂಡಬ್ಯಾಡ ನೀ ತಿಳಿಯೋ ||ಪಲ್ಲ||

ಗುರುವಿನ ಬೋಧಕ ತಿರಗ್ಯಾಡಿ ನೋಡು

ಗುರು ಎಂಬೋದು ಕಳದು ಜನ್ಮ ತೀಡು

ಅಂದು ಇಂದು ಎಲ್ಲಾನಂದು ಅಂಬುದು

ನೀನು ಎಲ್ಲಾ ಕಳಿಯೋ

ಮಾನವ ಜನ್ಮ ಬಂದಿದು ಹೀನಾ

ಪರ ಉಪಕಾರದಲ್ಲಿ ಕಳಿಯೋ ||1||

ತಾಯಿ ತಂದಿ ಪ್ರೇಮವು ಹೊಂದಿ

ಜಗದಾಗ ನೀನು ಹುಟ್ಟಿ ಬಂದಿ

ಯವ್ವನೆಂಬೋ ಮೋಹದ ದೇಹ

ಮುಪ್ಪಿನ ಕಾಲಕ ನೊಂದು ಖಳಿಯೋ

ಎಲವಿನ ಹಂದರ ಮಾಯಾದ ಮಂದಿರಾ

ಬ್ರಹ್ಮ ಭೋಗ ಬರದಾ ನಿನ್ನ ಸುಳಿಯೋ ||2||

ಶಂಬರ ವರ್ಷ ಆಯುಷ್ಯ ಪಡದಿ

ಸಂಸಾರದಲ್ಲಿ ಬಿದ್ದು ಹಾಕಿದಿ ಹುಡದಿ

ಮಣ್ಣಿನ ದೇಹ ಮಣ್ಣಿಗಿ ಹೋಗದು ಬೈಲಗಿ

ಬೈಲ ನಿರ್ಬೈಲ ಉಳಿಯೋ

ಕತ್ತಲ ಕೋಣ್ಯಾಂದು ಬತ್ತಲೆ ಬಂದಿ ಪತ್ತ ಇಲ್ಲಾ

ಸಂಸಾರ ಹೊಳಿಯೋ ||3||

ಭವದೊಳು ಬಂದ ಮ್ಯಾಲ ದುಃಖದ ಸಾಗರ

ಸರಿ ಇರಲಾರದು ಮೋಹದ ಬಜಾರ

ತಾಯಿ ತಂದಿ ಹೆಂಡರ ಮಕ್ಕಳ ಎಲ್ಲರ

ನಡುವೆ ಚಿಂತಿ ಬಕ್ಕಳ ಗಂಡ ಹೆಣ್ಣ ಜೋಡ ಮಾಡಿದಿ

ಮೂಢಾ ಕಾಯಾ ವಾಚಾ ಮನಸಾ ನೀ ತೊಳಿಯೋ ||4||

ದೇಶಕ್ಕೆ ಹೆಸರೈತು ಮಹಾಗಾಂಯಿ ಊರ

ಈಶ ಮಹಿಬೂಬ ಮನಿಯ ದೇವರ

ದೋಷನಾಶ ಪರಿಪೋಶಾ ಪಂಚಾಕ್ಷರಿ ನೀಲೂರ

ಕೂಸಾ ಶರಣರ ಪ್ಯಾಲಾ ಕುಡದಿದಾ ಹಾಲಾ|

ಮಹತ್ವಿಕ ಪುರುಷನ ಖಳಿಯೋ ||5||

ಗಂಡನ ಮನಿದಿಂದ ತವರ ಮನಿಗಿ ನಡದಾ

ನೂರ ವರ್ಷತನಕಲು ಅಲ್ಲೆ ದುಡದಾ ||ಪಲ್ಲ||

ಆರು ಎಂಬೋ ಗುರು ಗಂಡನಲ್ಲಿ ತಡದಾ

ಆರು ಮೂರು ಒಂಬತ್ತು ಮಕ್ಕಳು ಹಡದಾ

ಕರ್ಮ ಎಂಬೋ ನೆಗೆಣಿರು ಎನಗೆ ಕಾಡೋದು ||1||

ಪಂಚಾಚಾರ ಎಂಬೋ ಮಂತ್ರದ ನೀರ ಕುಡದಾ|

ತೆಲಿಲಿಂದ ತವರೂರಿಗೆ ನಡಕೋತ ನಡದಾ

ಎಲ್ಲಾ ಬೀಗರ ನೆಂಟರ ಕೇಳ್ಯಾರ ಹಿಡದಾ ||2||

ಪ್ರಾಯ ಇರೋತಾನ ಪುರುಷ ಮುದ್ದಾಡಿದಾ

ಹರೆ ಹೋದ ಮೇಲೆ ಎನಗ ಬಿಟ್ಟು ಓಡಿದಾ

ಸೇರದೆ ಹೋದರು ಮಕ್ಕಳು ಸೊಸದೇರ ಮಡದಾ ||3||

ಮರ್ತ್ಯಲೋಕದ ಸುಖ ಬ್ಯಾಡಾದಾ

ಸ್ವರ್ಗ ಲೋಕದ ಸುಖ ದೊಡ್ಡದಾದ

ಯಾರಿಗೆ ಯಾರಿಲ್ಲ ಒಂಟಿ ಹೋಗದೆ ಪಾಡಾದ ||4||

ನೀಲೂರ ಗ್ರಾಮ ತವರೂರ ಪುರ ಆದ

ಕಲಗಿ ಮಹಾಗಾಂಯಿ ಮೀರಾ ಪ್ಯಾಲ ಕುಡದಾ

ಮಲ್ಲಿಗಿ ಹೂವ ಏರಿಸುವೆ ಕೈ ಮುಟ್ಟ ಕಡದಾ ||5||

ಹೇಗೆ ದಾಟಲಿ ಈ ಖೊಟ್ಟಿ ಮಂದಿ ಒಳಗಿಂದು

ಕೆಟ್ಟಗಣ್ಣೀಲಿ ನೋಡತಾರೋ ತಿರುಗಿ ಬಂದು ||ಪಲ್ಲ||

ಪುಣ್ಯಾತ್ಮ ನೀ ಅನ್ನುವರು ಇಲ್ಲದೊಂದು

ಅಜ್ಞಾನಿ ಮನ ಅಂತಾದ ಬದುಕು ನರಕ ತಿಂದು

ಸುನಕಗ ಸುಖವು ಆಗೋದು ಎಲ್ಲವಿಂದು ||1||

ಆರ ಮೂರು ಒಂಬತ್ತು ಮಂದಿ ಕಾಡವರು ಹೆಚ್ಚಿಂದು

ಯಾರ ಮುಂದ ಹೇಳಲಿ ಕೆಟ್ಟ ಹಣಿಬಾರ ಅದಾ ನಂದು

ಪಾರ ಮಾಡೋ ಗುರುರಾಯ ಇದರಂದು ||2||

ಮ್ಯಾಲ ಮಾತಾಡಿ ಬುಡಕ ಕಾಲ ತುಳಿಯದು

ಕುಲ್ಲ ಮಂದಿಗಿ ಆಯ್ಹೇರಿ ಮಾಡೋದು ಕಾಲಾಂದು ತೆಗೆದು

ಎಲ್ಲಿತನಕ ಇರತಾರೋ ತಿಳಿಯವಲ್ಲದು ||3||

ಹರಿಶ್ಚಂದ್ರ ವಿಕ್ರಮಗ ಶನಿ ಕಾಡಿತು ಬಂದು

ಆರ್ಯಾಣ ದೂಡಿ ಬಿಟ್ಟಾ ಕಾಂತಾರಾ ವನ ತಂದು

ಕಡಿ ಕಾಲಕ ಗುರು ಕಾಯಿದಾ ಬಂದು ||4||

ನೀಲೂರು ಶರಣರೇ ಮರೆಯದೆ ಕಾಯ್ವರು ಮೀರಾಂದು

ನಿಮ್ಮ ಹೊರ್ತ ನನಗ್ಯಾರರ ಪರದೇಶಿ ಮಗಾ ನಿಮ್ಮದು

ದುಶಮನ್ ಬಾಯಾಗ ಮಣ್ಣ ತುಂಬು ಮಸಟಗ್ಯಾಂದು ||5||

ಎಷ್ಟು ದಿವಸ ಇದ್ದರ ಎದಕ

ಒಂದಿನ ಆದ ದುಃಖ ||ಪಲ್ಲ||

ಖುಶಿವೆಂಬ ಬಿಸಿನೀರಿಲಿ ಮಾಡಕೋ ಜಳಕ

ಹಸು ತೃಷೆ ಎಂಬ ಅನ್ನ ಎದಕ

ಆಶೆಯೆಂಬ ಆಯುಷ್ಯ ತೀರಿದ ಬಳಿಕ

ಕಾಲ ಹಿಡಿದು ತಂದು ಕೂಡಿಸತಾರೋ ಹೊರ್ಯಾಕ ||1||

ಸಾಕಷ್ಟು ಗಳಿಸಿದಿ ನೀ ಭಾಗ್ಯಕ

ಲೆಕ್ಕ ಹಾಕಲಿಲ್ಲ ನೀ ಸಾಯುವುದಕ

ಮಕ್ಕಳ ಹೆಂಡರಿದ್ದರು ಯಾತಕ

ಬಕ್ಕಂತ ಒದ್ದು ಒತ್ತಿ ಕೂಡಿಸುತಾರೋ ಮೂರ್ಖ ||2||

ಈ ಮನಿ ಬೀಳುವುದು ಕೆಲವು ದಿವಸಿನ ಬಳಿಕ

ಆ ಮನೆ ಉಳಿತಾದ ಬಹಳ ದಿನ ತನಕ

ಹೂಳಿ ಬಂದು ಮನ್ಯಾಗ ಹೋಳಿಗಿ ಉಣತಾರ

ಕಾಳಿದಿ ಮನ್ಯಾಂದು ಹೋಯಿತು ಸೂತಕ ||3||

ಯೋಗ ಸಾಧನ ಬೇಕು ಇರೋತನಕ

ತ್ಯಾಗ ಭಾವನ ಬೇಕು ಜನ್ಮಕ

ಜೋಗಿ ಜಂಗಮರ ಧ್ಯಾನ ಮಾಡಬೇಕ

ನಾಗಭೂಷಣನಿಗಿ ನೆನಿಯಬೇಕ ||4||

ಮಹಾಗಾಂವ ಗ್ರಾಮಕ ಬಹಳ ಠಳಕ

ಬಾಲಮೀರನ ಕಾವ್ಯದ ಬೆಳಕ

ಗುರುವಿನ ಗುಲಾಮ ಆಗಿದ ಬಳಿಕ

ಹರನಾಮ ಸಾಕೊಂದೇ ಈ ಜನ್ಮಕ ||5||

ನೀ ಯಾರ ಮಗೂ ಯಾರಯ್ಯಾ

ನಾ ನಿನ್ನ ಕರಿತೀನಿ ಬಾರಯ್ಯ ||ಪಲ್ಲ||

ಪರಮಾನಂದ ಪುರುಷನಿಗೆ ಮಾಡಿನೀ ದೂರಯ್ಯಾ

ಜಾರಕರ್ಮ ಆಗದ ಎನಗ ಅಮೃತಕ್ಷೀರಯ್ಯಾ

ಪ್ರಾಯ ಉಕ್ಕೇರಿ ಹೊಡಿತೈತಿ ಥೆರಿಯಾ ||1||

ಬಂಗಾರಂಥ ಕಾಯಕ್ಕ ಹೆಚ್ಚಿನ ಉರಿಯಾ

ಗುರುಲಿಂಗ ಜಂಗಮನ ಅವಂಗಳ ತೆರಯಾ

ಲಿಂಗದಂತ ಕುಚ ಪಿಡಿಯೋ ಪ್ರಿಯಾ ||2||

ಮನ ಎಂಬೋ ಮಡದಿಗಾಗಿ ಹೊಲಮನಿ ಮಾರಯ್ಯಾ

ತನುವ ಎಂಬುವಂತ ಹಣವು ತಂದಗ ತಾರಯ್ಯಾ

ಹಣ ಇಲ್ಲದವನ ಮುಖ ಹೆಣದ ಸರಿಯಾ ||3||

ನೀಲೂರ ಶರಣರು ಸ್ವರ್ಗದ ದ್ವರಿಯಾ

ಬಾಲಪಂಚಣ್ಣ ಅವರ ಕಾಲನ ಮರಿಯಾ

ಪ್ಯಾಲ ಕುಡದಾದ ಮಣ್ಣ ಮರಿಯಾ ||4||

ಹಲಕಟ ಪದ ಹಾಡವ ಹಿಡತ

ಉರಲ ಹಾಕೋಬ್ಯಾಡ ಗಿಡಕ

ಕಲ್ಲು ಒಗಿಬ್ಯಾಡ ತುಂಬಿದ ಕೊಡಕ ||ಪಲ್ಲ||

ಗರ್ವಿನಾಗ ಮುರಕೊಂಡಿ ನಿನ್ನ ಹೆಡಕ

ತೆಳಗ ನೋಡು ಸೊರಲಾಕತ್ಯಾದ ಬುಡಕ ||1||

ಬುಡಾವಡಿತು ಮೂರ ಪಾಲ ಆಯಿತು

ಕೊಡವಂತು ಅರಪಾಲ ಆಯಿತು

ಗಿಡಾ ಕಡಿತು ಯಾರ ಪಾಲ ಆಯಿತು ||2||

ಹುಡುಕಲಾಕ ಬೇಕು ಬಹು ದಿವಸ

ಹುಡಕರದಾಗ ಹೋಯಿತು ವಯಸ್ಸು

ಕಡಿದುಕೊಂಡ ತೋಳ ವ್ಯಾಸ

ಯಾಸಿಬಿದ್ದಾದ ಎಡಬಲಕ

ಕೂಸಮೀರಾ ಹಿಡದ ಓಡೋ ಮಲಕ ||3||

ಕುಲಕ ಒಬ್ಬ ಶರಣರ ಹುಟ್ಟಿದರೋ

ಕುಲ ಅರಸಲಿಲ್ಲ ಒಂದು ಸರತಿ ||1||

ಅವರದು ಎಲ್ಲಾರದು ಒಂದ ನಡತೀ

ತನು ಎಂಬ ಅನುಭಾವದ ಮಂಟಪಕ

ಅನುಯಾಯಿಗಳ ಹರಜತೆ ||2||

ಬ ಬ್ರಹ್ಮ ಸ ಶಂಕರ ವ ವಿಷ್ಣು

ಮೂರು ಶಕ್ತಿವುಳ್ಳವ

ಆದಿ ಬಸವ ಒಬ್ಬವ

ಶಿವನೆ ಬಸವ ಬಸವನೇ ಶಿವ

ತಾನೇ ಆಗಿದ ಪರಶಿವ

ಓಂ ನಮಃ ಶಿವಾಯ ||3||

ಐದ ಅಕ್ಷರ ಬಾಯಿ ಇಲ್ಲದೆ ಓದವ

ಶಾಹಿ ಕಾಗದ ಇಲ್ಲದೆ ಬರದವ

ಏರುವ ಇಳಿಯುವ ಶ್ವಾಸ ಉಶ್ವಾಸ

ತಾನೇ ಆಗಿದ ಸಂಜೀವ ||4||

ಐದ ತತ್ವಕ ಬಿಟ್ಟು ಬೇರೆ ಹನ

ಆತ್ಮಲಿಂಗ ಅನುಭಾವ

ಒಳಗ ಹರಾ ಪಾರ್ವಧವಾ

ಐದರಲಿಂದ ಇಪ್ಪತೈದು

ಮೂವತ್ತಾರ ತತ್ವದಿಂದ ಭವ ||5||

ಈ ಅನುಭವ ಮಂಟಪದ ತಾರೀಪ

ಭವ್ಯ ಅಪರೂಪ

ಮುಗಲಿಗ ಹೋಗಿ ಹುಟ್ಟಿದ ಅವ ಶಿಖರ

ನೋಡಿದ್ರ ಸ್ವರ್ಗದ ಆಕಾರ ||6||

ಶಿವಶರಣೆ ನೀನೆ ನೀಲಮ್ಮ

ನಿನ್ನ ಕೃಪ ಇರಲೆಮ್ಮ ಕಾಯಪೂರ

ಎಂಬೋ ಕಲ್ಯಾಣ ಗ್ರಾಮ ||ಪಲ್ಲ||

ಭಕ್ತಿ ಎಂಬೋದೆ ಬೀಜ ಬಸವನ ಜನ್ಮ

ಅಲ್ಲಮಪ್ರಭು ಎಂಬೋ ಅರಸಾತ್ಮರಾಮ

ರಜ ತಮ ಸತ್ಯ ತ್ರಿಕೂಟ ಸಂಗಮ ||1||

ಅನುಭಾವ ಮಂಟಪ ಎಂಬೋ ಮನ ಬುದ್ಧಿ ಚಿತ್ತಮ್ಮ

ನೂರಾ ಒಂದು ಸ್ಥಳ ಶಿಖರದ ಕೊನೆಯಮ್ಮ

ಇಪ್ಪತ್ತೊಂದು ಸಾವಿರ ಆರನೂರ ಜಂಗಮ

ಆರು ಮೂರು ಬೀದಿ ತುಂಬಿ ತುಳಿಕ್ಯಾರಮ್ಮ ||2||

ಲಿಂಗ ಪ್ರಾಣ ಎಂಬೋ ನೀಲಮ್ಮನ ಜನ್ಮ

ಅಂಗ ಪ್ರಾಣದಲ್ಲಿ ಸುಳಿಯುವ ಜಂಗಮ

ಲಿಂಗದಲ್ಲಿ ನೀಲಮ್ಮ ಐಕ್ಯ ಆಗಿ

ಸಂಗನ ಬಸವಗ ಮುಟ್ಯೆಳಮ್ಮ ||3||

ಕಾಯದ ಕಲ್ಯಾಣದಲ್ಲಿ ಸಾಕಷ್ಟು ಹೇಮ

ಅರವತ್ಮೂರು ಮಂದಿ ಪುರಾತರಮ್ಮ

ಬಸವ ನೀಲಮ್ಮನಿಂದ ಕಲ್ಯಾಣ ಗ್ರಾಮ

ನೂರು ವರ್ಷ ಆಳಿ ಬಿಟ್ಟು ಹೋದಾರಮ್ಮ ||4||

ಸಡಗರದಿ ಮೆರೆಯುವ ನೀಲೂರ ಗ್ರಾಮ

ಉಡತಡಿ ಅಕ್ಕಮಹಾದೇವಿಯ ನಾಮ

ಬಡವ ಪಂಚಾಕ್ಷರಿ ಹಿಡಿದಿದ ನೇಮ

ಉಡಿಯಲ್ಲಿ ಆಡಿಸಿ ಹಾಲ ಉಣಿಸಿದೆಯೆಮ್ಮ ||5||

ಭಕ್ತಿವುಳ್ಳ ಮಾದಾರ ಚೆನ್ನಯ್ಯ

ಮುಕ್ತಿ ಕೊಡು ನನ್ನಯ್ಯಾ ||ಪಲ್ಲ||

ಚೋಳ ಅರಸನ ಕುದರಿ ಸೈ ಸೈಯಾ

ಆಳ ಇದ್ದ ಮಾದರ ಚೆನ್ನಯ್ಯಾ

ವ್ಯಾಳದ ಮೇಲೆ ಲಿಂಗಾರ್ಚನೆ ಮಾಡಾಗ

ಕೂಳ ಉಂಡು ಕುಲಗೇಡಿ ಆಗಿದೇನಯ್ಯಾ ||1||

ಮಾದಾರ ಚೆನ್ನನ ಅಂಬಲಿ ಸ್ವಾದಯ್ಯಾ

ಮಹಾದೇವ ಮೆಚ್ಚಿ ಬಂದ ಸವಿದಯ್ಯಾ

ಹೃದಯ ತುಂಬಿ ಪ್ರಸಾದ ಸ್ವೀಕರಿಸಿ ಮುದ್ದು

ಮಾತಾಡಿ ಹೋಗಿದತವಯಾ ||2||

ಮಹಾಪುರುಷ ಚೋಳ ಅರಸ ದೊರಿಯಾ

ಮಹಾಪಂಚಾಮೃತ ಪಾಕ ಸವಿಯಾ

ಮಹಿಮಾಶಾಲಿ ಈಶ್ವರನ ಕರದು

ದೇಹ ಬಿಚ್ಚಿ ಉಣ್ಣರೆಂತಿದಾ ಪರಿಯಾ ||3||

ಒಂದ ದಿನ ತಡ ಮಾಡಿದ ಗುರುರಾಯಾ

ಕೇಳ್ಯಾನ ಚೋಳ ಹಿಂಗ್ಯಾಕಯ್ಯಾ

ಮಾದರ ಚೆನ್ನನ ಅಂಬಲಿ ರುಚಿ

ಅಂಗ ತುಂಬಿ ಅಗ್ಯಾದ ಆನಂದ ||4||

ಎನ್ನ ಕುದರಿ ಒರಸು ಸೈಸೈಯಾ

ಅವನ ಮನಿಗಿ ನೀ ಹೋಗಿದೆ ಐಯ್ಯಾ

ಹೀನ ಜಾತಿ ಮನಿಯಾಗ

ಉಂಡಿದ ಮೇಲೆ ಕುಲಹೀನನಾದಿ

ಕುರುಸಾಲಯ್ಯಾ ||5||

ಈಶ್ಯಾನ ವಿಷ್ಯಾ ತಟ್ಟಿತು ಅಂಬಲಿ ಅಗಳಯ್ಯಾ

ಅರಸ ನೋಡಿದ ಆತನ ಖಳಿಯಾ

ಘಾತಕತನ ಮಾಡಿ ಕುತ್ತಗಿ ಕೊಯ್ಯುದು

ದೇಹ ದೇಗುಲಕ ಹಚ್ಚಿದಿ ಖಲಿಯಾ ||6||

ರಾಜ್ಯ ಮದವು ನಾಶ ಆಗಿತಯ್ಯಾ

ಪೂಜ್ಯಭಕ್ತಿ ಪೂರಿತಯ್ಯಾ

ರಾಜಕೀಯ ಮೇಲೆ ಪತ್ರಿದಳಾನೀಕೀ

ಸಾಯುಜ್ಯ ಪದವಿ ಪಡಕೊಂಡಿದನಯಾ ||7||

ಬಲ್ಲಿದ ಮಹಾಗಾಯಿ ಗ್ರಾಮ ನನ್ನ ಮನಿಯಾ

ಬಾಲ ಪಂಚಣ ರನ್ನ ಗೂನಿಯಾ

ಬಲ್ಲಿದ ಪಂಡಿತರಿಗಿ ಹಾಲ ಮ್ಯಾಲಿನ ಕೆನಿಯಾ

ನೀಲೂರ ಶರಣರು ಅಂದ್ರು ಘಟಾ ಹೈ ದುನಿಯಾ ||8||

ಎಲ್ಲಿ ಐತಿ ನೋಡುಣ ಶ್ರೀಶೈಲ

ಮೂಲಪೀಠ ಮಲ್ಲಯ್ಯಂದು ಇಲ್ಲೆ ಐತಿ ಸ್ಥಳ ||ಪಲ್ಲ||

ಈಡ ಪಿಂಗಳ ಸುಸ್ಮನ ಮಾರ್ಗದ ಸಿಡಿಗಳಾದ ಟಿಸಲಾ

ಬ್ರಹ್ಮ ಸೀಕಾ ಚಕ್ರದ ಮೇಲೆ ಶಕ್ತಿಯ ರಾವಣ ಕಾಲ

ಕೈ ಇಲ್ಲದೆ ಖಡಿ ಏರಾಗ ಫದ್ರುಣಿಕಿ ಮಿಂಚಕವವು ಸಿಡಿಲಾ ||1||

ಪಾತಾಳ ಗಂಗೆಯ ಸೀತಾಳ ಹಾಳಾ

ಸತ್ಯಶರಣರ ತೀರ್ಥ ಉಜ್ವಲಾ

ಹತ್ತು ಹನ್ನೊಂದು ಶಿಖರದ ಮೇಲೆ ಇನ್ನೊಂದೇನಿಲ್ಲಾ ||2||

ಒಂಬತ್ತ ಬಾಗಿಲಕ ಒಂಬತ್ತ ಮಂದಿ ಕಾವಲ

ಎಂಬತ್ತು ನಾಲ್ಕು ಲಕ್ಷ ಗೊಂಬಿಗಳೆಲ್ಲಾ

ಜಂಬೋ ನೀಲಗನ್ನಡಿ ಹೊಳಿತಾವ ನೋಡುಣು ಡಬಲಾ ||3||

ಶ್ರೀಶೈಲ ಮಲ್ಲಯ್ಯಾನ ಕೈಯಾಗ ಐತಿ ನಂದಿ ಕೋಲಾ

ಈರೇಳು ಲೋಕಗಳು ನಿಂತಾವ ಅದರ ಮ್ಯಾಲಾ

ಶ್ರೀಗಿರಿ ಮಲ್ಲಯ್ಯಾನ ಹೊನ್ನ ಮನಿಗಿ ಬಂಗಾರ ತಲಬಾಗಿಲಾ ||4||

ಎತ್ತೊ ಬ್ರಹ್ಮಾಂಡ ತತ್ತ ಪಿಂಡಾಡಕ ಇನ್ನೂರ ಹದಿನಾರು ಸಕೀಲಾ

ಸತ್ಯ ಚಿದಾನಂದ ನಿತ್ಯ ನಿರ್ಮಲಾ

ಭಕ್ತಿವುಳ್ಳ ಪಂಚಾಕ್ಷರಿ ಹಿಡದ ನಿನ್ನ ಕಾಲಾ ||5||