ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೇಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನು ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗು ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡಲುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನಿತ ಕಾಯಕ ಇವರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು, ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಭರತ ಖಂಡವನ್ನು ಆರ್ಯಾವರ್ತ ಎಂಬ ಹೆಸರಿನಲ್ಲಿ ಗುರುತಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದ ನಡೆದುಬಂದಿದೆ. ಆದರೆ, ಆರ್ಯರು ಭಾರತಕ್ಕೆ ಬರುವುದಕ್ಕೆ ಮುನ್ನವೇ ಈ ದೇಶದಲ್ಲಿ ಹಲವಾರು ಜನಾಂಗಗಳು ಬುದಕಿ ತಮ್ಮ ಜೀವನ, ಕ್ರಿಯೆ, ಚಿಂತನೆ, ಸೃಜನಶೀಲತೆ ಹುಡುಕಾಟಗಳ ಮೂಲಕ ತಮ್ಮ ಬದುಕಿಗೆ ಒಂದು ವಿಶಿಷ್ಟ ಚೌಕಟ್ಟನ್ನು ನಿರ್ಮಿಸಿಕೊಂಡಿದ್ದರೆಂಬುದು ಮತ್ತು ಆ ಬದುಕು ಕೇವಲ ಏಕಮುಖಿಯಾಗಿರದೆ ಬಹುಮುಖಿಯಾಗಿತ್ತೆಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಹಾಗೆಯೇ ಉತ್ತರ ಭಾರತವನ್ನು ಆರ್ಯಭೂಮಿಯೆಂದು ದಕ್ಷಿಣ ಭಾರತವನ್ನು ದ್ರಾವಿಡಭೂಮಿಯೆಂದು ಪ್ರತ್ಯೇಕಿಸುವ ಹಾಗೂ ಅವುಗಳ ವಿಭಿನ್ನತೆ, ವೈವಿಧ್ಯತೆ, ವಿಶಿಷ್ಟಗಳನ್ನು ಭಿನ್ನ ಭಿನ್ನ ಮಾನದಂಡಗಳಿಂದ ವಿಶ್ಲೇಷಿಸುವ ಪರಿಪಾಟವೂ ನಡೆದುಬಂದಿದೆ. ಈ ಪರಿಕಲ್ಪನೆಗಳು ಒಂದು ನಿರ್ದಿಷ್ಟ ಜನಾಂಗ, ಒಂದು ನಿರ್ದಿಷ್ಟ ಭೌಗೋಳಿಕ ಪರಿಸರದಲ್ಲಿ ಬದುಕುತ್ತಾರೆ, ಸಾಯುತ್ತಾರೆ ಎಂಬ ಮೂಲ ಆಲೋಚನೆಯಿಂದ ಹುಟ್ಟಿ ಬಂದದ್ದು. ಆಧುನಿಕ ಕಾಲದಲ್ಲಿ ವೃತ್ತಿ, ಶಿಕ್ಷಣ, ಯುದ್ಧ, ಆಹಾರ ಮುಂತಾದ ಕಾರಣಗಳಿಗಾಗಿ ಒಂದು ಭೂಭಾಗದಿಂದ ಮತ್ತೊಂದು ಭೂಭಾಗಕ್ಕೆ ಜನ ತಾತ್ಕಾಲಿಕವಾಗಿ ಮತ್ತು ಖಾಯಂ ಆಗಿ ವಲಸೆ ಹೋಗುತ್ತಿರುವ ಪ್ರವೃತ್ತಿ ವಿಶೇಷವಾಗಿ ಮತ್ತು ವೇಗವಾಗಿ ಕಾಣಬರುತ್ತಿದೆ. ಪ್ರಾಚೀನ ಕಾಲದಲ್ಲಿ  ಇಂತಹ ಪ್ರವೃತ್ತಿ ಅಷ್ಟೊಂದು ತೀವ್ರವೂ ವೇಗಗಾಮಿಯೂ ಆಗಿರದಿದ್ದರೂ ಹೊಸ ಹೊಸ ಜೀವನವನ್ನು , ಜೀವನ ಭೂಮಿಯನ್ನು ಹುಡುಕಿಕೊಂಡು ಅಲೆಯುವ ಪ್ರವೃತ್ತಿ ಸಾಕಷ್ಟು ದಟ್ಟವಾಗಿಯೇ ಇತ್ತು. ಆದ್ದರಿಂದ ಯಾವುದೇ ಒಂದು ಜನಾಂಗ ಅಥವಾ ಭೂಭಾಗ ಕರಾರುವಕ್ಕಾಗಿ ಇಂಥದೇ ಸಂಸ್ಕೃತಿಯ ಚೌಕಟ್ಟಿನಿಂದಲೇ ಉದ್ಭವಿಸಿದ್ದು ಮತ್ತು ಬೆಳೆದದ್ದು ಎಂದು ಹೇಳಲಾಗದು. ಪ್ರಾಚೀನ ಮಹಾಕಾವ್ಯಗಳೆನಿಸಿದ ರಾಮಾಯಣ, ಮಹಾಭಾರತಗಳಲ್ಲಿ ಕಂಡುಬರುವ ಬಗೆಬಗೆಯ ಜೀವನ ಕ್ರಮಗಳೇ ಈ ಚಲನಶೀಲತೆಯ ವಿಶಿಷ್ಟ ಸಂಕೇತಗಳಾಗಿವೆ. ಪರಸ್ಪರ ಯುದ್ಧ ಮತ್ತು ಆಕ್ರಮಣಗಳ ಕಾರಣದಿಂದಾಗಿ ಭಿನ್ನ ಭಿನ್ನ ಜನಾಂಗಗಳು ಪರಸ್ಪರ ಕಾದಾಡಿ ಒಮ್ಮೆ ಇವರು ಒಮ್ಮೆ ಅವರು ಮೇಲುಗೈ ಸಾಧಿಸಿದರೂ ಅಲ್ಲಿ ಖಚಿತ ಏಕಸಂಸ್ಕೃತಿಯೆನ್ನುವುದು ಶಿಥಿಲ ಬಹುಸಂಸ್ಕೃತಿಯಾಗಿ ಮೈದೋರಿದ್ದು ಕಂಡುಬರುತ್ತದೆ. ಮೂಲ ನಿವಾಸಿಗಳಾಗಿದ್ದ ದ್ರಾವಿಡರು (ಇವರಿಗಿಂತ ಪ್ರಾಚೀನ ಜನಾಂಗಗಳು ಭಾರತದ ಬೇರೆ ಬೇರೆ ಭಾಗದಲ್ಲಿ ನೆಲೆಸಿದ್ದರು) ಹೊರಗಡೆಯಿಂದ ಬಂದ ಆರ್ಯರ ಆಕ್ರಮಣದ ಫಲವಾಗಿ ಹಂತ ಹಂತವಾಗಿ ಕೆಳಸರಿದ ನಿದರ್ಶನಗಳನ್ನು ಚರಿತ್ರೆ ಬಿತ್ತರಿಸುತ್ತದೆ. ದಕ್ಷಿಣ ಭಾರತದ ಕಡೆಗೆ ಸರಿಯುತ್ತ ಬಂದ ದ್ರಾವಿಡರು ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೆಲೆಸದೆ ದಕ್ಷಿಣ ಭಾರತದ ತುಂಬಿ ತುಂಬಿಕೊಂಡರೆಂದು ಊಹಿಸಬಹುದಾಗಿದೆ. ಹೀಗೆ ತುಂಬಿಕೊಳ್ಳುವಾಗ ಅಲ್ಲಿಯ ಮೂಲನಿವಾಸಿಗಳನ್ನು ಗೆದ್ದೋ, ಅವರೊಡನೆ ಸ್ನೇಹ, ಪ್ರೀತಿಗಳನ್ನು ಸಾಧಿಸಿ ಅವರೊಡನೆ ಬೆರೆತೋ ಹೊಸ ಸಂಸ್ಕೃತಿಯ ಉದಯಕ್ಕೆ ಕಾರಣರಾದರು. ದಟ್ಟವಾದ ಅರಣ್ಯಗಳಿಂದ ಆವೃತವಾಗಿದ್ದ ದಕ್ಷಿಣ ಭಾರತದ ಭಿನ್ನ ಭಿನ್ನ ಪ್ರದೇಶಗಳಲ್ಲಿ ವಾಸಿಸತೊಡಗಿದ ಅವರು ಕಾಲಕ್ರಮೇಣ ನಿಶ್ಚಿತ ನೆಲೆಗಳಲ್ಲಿ ನಿಂತು ತಮ್ಮ ಬದುಕನ್ನು ಮತ್ತು ಬದುಕಿನ ವಿಧಾನಗಳನ್ನು ರೂಪಿಸಿಕೊಂಡರು. ಇದರಿಂದಾಗಿ ಭಿನ್ನ ಜೀವನಕ್ರಮ ಮತ್ತು ಭಿನ್ನ ಭಾಷೆಗಳು ರೂಪು ತಳೆದವು. ತಮಿಳು, ತೆಲುಗು, ಕನ್ನಡ, ಮಲೆಯಾಳಂ, ತುಳು ಮುಂತಾದ ಭಾಷೆಗಳು ಮತ್ತು ಕಾಲಾಂತರದಲ್ಲಿ ಅವುಗಳ ಉಪಭಾಷೆಗಳು ಹುಟ್ಟಿಕೊಂಡು ತಮ್ಮ ಸಂಸ್ಕೃತಿಯನ್ನು ವಿಶಿಷ್ಟ ನೆಲೆಗಳಲ್ಲಿ ಮತ್ತು ರೂಪಗಳಲ್ಲಿ ಅಭಿವ್ಯಕ್ತಿಸತೊಡಗಿದವು. ಇದರಿಂದಾಗಿ ಕನಾಟಕ ಸಂಸ್ಕೃತಿ, ತಮಿಳು ಸಂಸ್ಕೃತಿ, ತೆಲುಗು ಸಂಸ್ಕೃತಿ ಇತ್ಯಾದಿ ವಿಭಾಗಗಳನ್ನು ಮಾಡಿಕೊಂಡು ಸಂಸ್ಕೃತಿತಜ್ಞರು ಅಧ್ಯಯನಕ್ಕೆ ತೊಡಗಿದರು. ಅದರ ಫಲವಾಗಿ ಹಲವು ಕೃತಿಗಳು ಹೊರಬಂದವು ಮಾತ್ರವಲ್ಲದೆ ಪ್ರತಿಯೊಂದು ಭಾಷೆಯೂ ತನ್ನ ಅನನ್ಯತೆಯನ್ನು ತನ್ಮೂಲಕ ಗುರುತಿಸಿಕೊಳ್ಳಲು ಮತ್ತು ಪ್ರಕಟಿಸಲು ಸಜ್ಜಾಯಿತು. ಆದರೆ, ಈ ಭಾಷೆಗಳು ಮತ್ತು ಅವುಗಳನ್ನಾಡುವ ಜನ ಕಟ್ಟಿಕೊಂಡ ಸಂಸ್ಕೃತಿಗಳು ಶುದ್ಧಾಂಗವಗಿ ಭಿನ್ನವಾಗದೆ ಒಂದರೊಳಗೊಂದು ಬೆರೆತು ಹೋಗಿರುವುದು ಸುವೇದ್ಯ. ಮೊದ ಮೊದಲು ಅತ್ಯಂತ ಸುಲಭವಾಗಿ ಮತ್ತು ಕರಾರುವಾಕ್ಕಾಗಿ ಗುರುತಿಸಬಹುದಾಗಿದ್ದ ಪ್ರತ್ಯೇಕತೆಗಳು ಆಧುನಿಕ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಕರಶೀಲ ಬದುಕಿನ ಕಾರಣದಿಂದಾಗಿ ಒಂದರ ತೆಕ್ಕೆಯಲ್ಲಿ ಮತ್ತೊಂದು ಸೇರಿಕೊಂಡಿರುವುದು ವೇದ್ಯವಾಗುತ್ತದೆ. ಮತ್ತು ಇದೇ ಕಾರಣಕ್ಕಾಗಿ ಇದಮಿತ್ಥಂ ಎಂಬಂತೆ ಅತ್ಯಂತ ಖಚಿತವಾಗಿ ಅವುಗಳ ಪ್ರತ್ಯೇಕತೆಯನ್ನು ಗುರುತಿಸುವುದು ಕೂಡ ಕಷ್ಟವಾಗುತ್ತಿದೆ. ಒಂದು ಸಂಸ್ಕೃತಿಯ ಯಾವುದೋ ಅಂಶ ಮತ್ತಾವುದೋ ಸಂಸ್ಕೃತಿಯ ಪ್ರಭಾವಕ್ಕೆ ಕೆಲವೊಮ್ಮೆ ಮೇಲ್ಪದರದಲ್ಲಿ ಮತ್ತೆ ಕೆಲವೊಮ್ಮೆ ಅಂತರ‍್ಪದರದಲ್ಲಿ ಏಕೀಭವಿಸುತ್ತಿರುವಂತೆ ಭಾಸವಾದರೆ ಅದು ಸುಳ್ಳಲ್ಲ ಮತ್ತು ಅಪರಾಧವೂ ಅಲ್ಲ. ಭಾಷೆ, ಭೌಗೋಳಿಕ ಪರಿಸರ, ಜೀವನ ವಿಧಾನ, ಆಲೋಚನಾ ಧಾಟಿ, ಸೃಜನಶೀಲತೆಯ ಬಹುಸ್ತರಗಳು ಇವೆಲ್ಲವೂ ಒಂದರೊಡನೊಂದು ಕಂಡುಕೊಂಡಿವೆ. ಆದ್ದರಿಂದ ಈ ದಕ್ಷಿಣ ಭಾರತೀಯ ಭೌಗೋಳಿಕ ಚೌಕಟ್ಟುಗಳ ಮಧ್ಯೆ ಅಡಗಿರುವ ಭಾಷಾ ಮೂಲ ಸಂಸ್ಕೃತಿಯ ವಿವೇಚನೆಯನ್ನು ಮಾಡುವಾಗ ಒಮ್ಮೆ ಅವುಗಳನ್ನು ಭಿನ್ನವಾಗಿ ಮತ್ತೊಮ್ಮೆ ಅಖಂಡವಾಗಿ ನೋಡುವ ಅಗ್ಯತತೆ ಅಧಿಕವಾಗಿ ಕಂಡುಬರುತ್ತಿದೆ. ನಾಗರಿಕತೆಯ ನಾಗಾಲೋಟದ ಮತ್ತು ಶೀಘ್ರ ಸಂಕ್ರಮಣಶೀಲ ಗುಣದಿಂದಾಗಿ ದಕ್ಷಿಣದ ಬೇರೆ ಬೇರೆ ರಾಜ್ಯಗಳ ತೀವ್ರ ಚಲನಶೀಲತೆಯಿಂದಾಗಿ ಈ ಸಮನ್ವಯಶೀಲತೆ ಮತ್ತು ಸಂಸ್ಕೃತಿಲೀನತೆಗಳು ಸಾಂದ್ರವಾಗುತ್ತಿವೆ. ಆದ್ದರಿಂದ ದಕ್ಷಿಣ ಭಾರತದ ಜನಜೀವನದಲ್ಲೇ ಉತ್ತರ ಭಾರತಕ್ಕಿಂತ ಭಿನ್ನವಾದ ಒಂದು ವಿಶಿಷ್ಟ ಗುಣ ಗೋಚರಿಸುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮುಂತಾದ ಎಲ್ಲಾ ಭಾಷಿಕರಲ್ಲಿಯೂ ಸಮಾನತೆಯ ಅಂಶಗಳು ಅಧಿಕವಾಗುತ್ತ ಹೋಗುತ್ತಿರುವುದರಿಂದ ಘಟಕೀಕೃತ ಸಂಸ್ಕೃತಿಗಳು ಸಾರೂಪ್ಯವನ್ನು ಪಡೆಯುತ್ತಿರುವುದರಿಂದ ಈ ಸಮಾನತೆಯ ಅಂಶಗಳನ್ನು ಒಟ್ಟಾರೆಯಾಗಿ ಗಮನಿಸುತ್ತ ಇಡೀ ದ್ರಾವಿಡ ಸಂಸ್ಕೃತಿಯ ಪರಿಕಲ್ಪನೆಯನ್ನು ಕಟ್ಟಿಕೊಳ್ಳುವ ಅವಶ್ಯಕತೆ ಸನ್ನಿತವಾಗುತ್ತಿದೆ. ಈ ಎಲ್ಲ ಸಂಸ್ಕೃತಿಗಳನ್ನು ಅಖಂಡವಾಗಿ ಮತ್ತು ತೌಲನಿಕವಾಗಿ ಅಧ್ಯಯನಿಸುವ ಸಂದರ್ಭದಲ್ಲಿ ಅವುಗಳೆಲ್ಲಕ್ಕೂ ಸಮಾನವಾದ ತಾತ್ವಿಕ ಚೌಕಟ್ಟುಗಳನ್ನು ನಿರ್ಮಿಸಿಕೊಳ್ಳುವ ಮೂಲಕ ವಿಶಾಲ ನೆಲಯಲ್ಲಿ ನಮ್ಮ ಚಿಂತನೆಯ ಸೌಧವನ್ನು ಕಟ್ಟಬೇಕಾಗಿದೆ. ಈ ಹಿನ್ನೆಲಯಲ್ಲಿ ಭಿನ್ನ ಭಿನ್ನ ಸಂಸ್ಕೃತಿ ಘಟಕಗಳನ್ನು ಜೋಡಿಸಬಹುದಾದ ಅವುಗಳೊಳಗಿನ ಅನುರೂಪತೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾದ ಒಂದು ತಾತ್ವಿಕ ಪರಿಕಲ್ಪನೆಯನ್ನು ನಾವು ಸೃಷ್ಟಿಸಿಕೊಳ್ಳಬೇಕಾಗಿದೆ. ವಿಶಾಲ ನೆಲೆಯ ಈ ತಾತ್ವಿಕ ಪರಿಕಲ್ಪನೆಯೇ ದ್ರಾವಿಡಶಾಸ್ತ್ರ.

ಮೇಲಿನ ಹಿನ್ನಲೆಯಲ್ಲಿ ನಮ್ಮ ವಿಶ್ವವಿದ್ಯಾಲಯದ ದ್ರಾವಿಡ ಅಧ್ಯಯನ ವಿಭಾಗವು ಒಂದೇ ಮೂಲದಿಂದ ಹೊರಟು ಭಿನ್ನ ಭಿನ್ನ ನೆಲೆಗಳನ್ನು ಸ್ಥಾಪಿಸಿಕೊಂಡರೂ ಮತ್ತೆ ಏಕಮುಖಿಯಾಗುವ ಆಂತರಿಕ ತುಡಿತ ಮತ್ತು ಸಾಂಸ್ಕೃತಿಕ ಆಶಯಗಳನ್ನು ಈ ಪರಿಕಲ್ಪನೆಗಳ ಮೂಲಕ ಜಿಜ್ಞಾಸೆಗೆ ಒಳಪಡಿಸುವ ಕಾರ್ಯವನ್ನು ದ್ರಾವಿಡಶಾಸ್ತ್ರ ಕೃತಿಯ ಮೂಲಕ ಪ್ರಾಯೋಗಿಕವಾಗಿ ಪ್ರಸ್ತುತಪಡಿಸುತ್ತಿದೆ. ದ್ರಾವಿಡ ಭಾಷೆಗಳ ಅಕ್ಷರ ವ್ಯವಸ್ಥೆಯಿಂದ ಹಿಡಿದು, ಅದರ ಪ್ರಧಾನ ಮತ್ತು ಉಪಭಾಷೆಗಳ ವೈಶಿಷ್ಟ್ಯಗಳನ್ನು, ಆರ್ಯ ದ್ರಾವಿಡರ ಪರಿಕಲ್ಪನೆಯ ವಿಶ್ಲೇಷಣೆಯನ್ನು, ದ್ರಾವಿಡ ಸಂಸ್ಕೃತಿಯ ವಿಶಿಷ್ಟ ಮತ್ತು ಅನನ್ಯ ಆಯಾಮಗಳನ್ನು, ಈ ಸಂಸ್ಕೃತಿ ಚಿಂತನೆಯ ತಾತ್ವಿಕ ಹಿನ್ನೆಲೆಯನ್ನು, ಆರ್ಯ ದ್ರಾವಿಡ ಪರಿಕಲ್ಪನೆಯ ಸ್ವರೂಪವನ್ನು ಇಲ್ಲಿ ಸೂಕ್ತ ಅಧ್ಯಯನಕ್ಕೆ ಒಳಪಡಿಸಿರುವುದು ಮಾತ್ರವಲ್ಲದೆ ದ್ರಾವಿಡ ಡೆಕ್ಕನ್ ದಕ್ಷಿಣ ಭಾರತ ಇವುಗಳ ಸಾರೂಪ್ಯ ಮತ್ತು ವಿಶೇಷತೆಗಳನ್ನು, ದ್ರಾವಿಡ ಜನಾಂಗ ಮತ್ತು ಸಂಸ್ಕೃತಿಗಳ ಅಧ್ಯಯನ ಸಾಹಸಿಗಳಾದ ಜರ್ಮನಿಯ ವಿದ್ವಾಂಸರನ್ನು, ದಕ್ಷಿಣ ಭಾರತದಲ್ಲಿ ನಡೆದ ಸಾಮಾಜಿಕ ಭಾಷಾವಿಜ್ಞಾನದ ಸಂಶೋಧನೆಯ ಸಾಧನೆ ಮತ್ತು ಸಾಧ್ಯತೆಗಳನ್ನು ಇಲ್ಲಿ ವಿವರಿಸಲಾಗಿದೆ. ಚೀನಾ ಯಾತ್ರಿಕನಾದ ಫಾಹಿಯಾನ್ ದಕ್ಷಿಣ ಸಾಮ್ರಾಜ್ಯವನ್ನು ಕಂಡ ಬಗೆ ಹಾಗೂ ದ್ರಾವಿಡ ದೇಶದ ವೇಮನ ಮುಂತಾದ ಅನುಭಾವಿಗಳ ಚಿಂತನೆಗಳಲ್ಲಿರುವ ವೈವಿಧ್ಯತೆಯಲ್ಲಿನ ಏಕತೆಯನ್ನು ವಿವೇಚಿಸಿರುವ ಬರಹಗಳು ಕೂಡ ಇಲ್ಲಿವೆ. ಇಲ್ಲಿನ ನಾಲ್ಕು ಲೇಖನಗಳು ಅನುವಾದಗಳಾಗಿದ್ದು, ಉಳಿದ ಏಳು ಲೇಖನಗಳು ಸ್ವತಂತ್ರ ಬರಹ ಗಳಾಗಿವೆ. ಕಥಾಕಥಿತ ನೆಲೆಯಲ್ಲಿ ಈ ದ್ರಾವಿಡ ಭಾಷಾ ಸಂಸ್ಕೃತಿಗಳ ಕೇವಲ ವಿವರಣೆಯನ್ನು ನೀಡದೆ ಅಥವಾ ಮಹತ್ವವನ್ನು ಉದ್ಘೋಷಿಸದೆ ನಿರ್ಭಾವುಕವಾದ ಸುಧಾರಿತ ಚಿಂತನೆಗಳ ವಿಶಿಷ್ಟ ಚೌಕಟ್ಟಿನಲ್ಲಿ ಈ ಲೇಖನಗಳು ಮೂಡಿಬಂದಿವೆ. ದ್ರಾವಿಡ ಅಧ್ಯಯನಕ್ಕೆ ಈ ಸಂಪುಟದ ಲೇಖನಗಳು ವಿಶೇಷ ಆಯಾಮಗಳನ್ನು ಒದಗಿಸಿಕೊಡುತ್ತವೆ ಮತ್ತು ಪ್ರಬುದ್ಧವಾದ ಅಧ್ಯಯನ ಮತ್ತು ಆಲೋಚನೆಗಳ ಫಲವಾಗಿ ಈ ಲೇಖನಗಳು ಮೈದಳೆದಿರುವುದರಿಂದ ಇವು ಎತ್ತುವ ಪ್ರಶ್ನೆಗಳು, ಗುರುತಿಸಿರುವ ಹೊಸ ಅಂಶಗಳು ಈ ದಿಸೆಯಲ್ಲಿ ದ್ರಾವಿಡ ಸಂಸ್ಕೃತಿಯ ಹೊಸ ರೀತಿಯ ವಾಗ್ವಾದವನ್ನು ಹುಟ್ಟಹಾಕಬಲ್ಲಷ್ಟು ಸಮರ್ಥವಾಗಿವೆ. ಸಂಪಾದಕರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರು ಈ ಕೃತಿಗೆ ಬರೆದಿರುವ ವಿಸ್ತಾರವಾದ ಪ್ರಸ್ತಾವನೆ ಅವರ ಆಳವಾದ ಅಧ್ಯಯನ ಮತ್ತು ಸೂಕ್ಷ್ಮವಾದ ಒಳನೋಟಗಳ ಪ್ರತೀಕವಾಗಿದ್ದು ಈ ಕೃತಿಯ ಮೌಲ್ಯವನ್ನು ಅಧಿಕಗೊಳಿಸಿದೆ. ಇಂಥದೊಂದು ಕೃತಿಯನ್ನು ದ್ರಾವಿಡ ಅಧ್ಯಯನ ವಿಭಾಗದ ಮೂಲಕ ದೊರಕಿಸಿಕೊಟ್ಟ ಸಂಪಾದಕರಿಗೆ ಮತ್ತು ಹೊಸ ರೀತಿಯ ಸಂಶೋಧನೆಯ ನೆಲೆಗಟ್ಟಿನ ಅಭ್ಯಾಸಪೂರ್ಣ ಲೇಖನಗಳನ್ನು ಬರೆದಿರುವ ಲೇಖಕರಿಗೆ ನನ್ನ ಅಭಿನಂದನೆಗಳನ್ನು ಸಲ್ಲುತ್ತವೆ.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಯವರು