ಪಾಹಿಯಾನನು ಮೂಲತಃ ಉತ್ತರ ಭಾರತದಿಂದ ಶ್ರೀಲಂಕಾಕ್ಕೆ ಹೋಗುವ ಮಾರ್ಗ ಮಧ್ಯೆ ದಕ್ಷಿಣ ಭಾರತದ ಮೇಲೆ ಹಾದುಹೋಗುತ್ತಾನೆ. ಹಾಗೆ ಹೋಗುವಾಗ, ಆತನಿಗೆ ತಾನು ಕ್ರಮಿಸುವ ಪ್ರದೇಶದ ಬಗೆಗೆ ಕಾರಣಾಂತರದಿಂದ ಹೇಳಬೇಕಾಗಿ ಬಂತು. ಆತನು ತನ್ನ ಪ್ರಯಾಣಾವಧಿಯಲ್ಲಿ ಕಲೆ ಹಾಕಿರುವ ಸಂಕ್ಷಿಪ್ತ ಮಾಹಿತಿಗಳು ತುಂಬ ಕುತೂಹಲಕಾರಿಯಾದುವು. ಹಾಗೆಯೇ, ಅಂತಹ ಪ್ರಸ್ತಾಪಗಳ ಮೂಲಕ ಕ್ರಿಸ್ತಶಕ ಆರಂಭ ಕಾಲದ ದಕ್ಷಿಣ ಭಾರತವನ್ನು ಪರಿಕಲ್ಪಿಸುವುದಕ್ಕೆ ವಿಪುಲ ಅವಕಾಶಗಳಿವೆ ಎಂದೂ ನನಗನಿಸಿವೆ.

ಫಾಹಿಯಾನನು ಹೀಗೆ ಮುಂದುವರಿಸುತ್ತಾನೆ: “ದಕ್ಷಿಣದಿಂದ ಎರಡೂ ಯೋಯಾನ್ (Yeoyyan) ದೂರದಲ್ಲಿ ಥಾ – ತ್ಸೆನ್ ಎಂಬ ಸಾಮ್ರಾಜ್ಯವಿದೆ” ಹೀಗೆ ಹೇಳುತ್ತ ಅದಕ್ಕೆ ಸಂಬಂಧಿಸಿದ ಎರಡು ಅಥವ ಮೂರು ಸಂದರ್ಭಗಳನ್ನು ಆತ ವಿವರಿಸುತ್ತಾನೆ. ಪ್ರಸ್ತುತ ಲೇಖನದಲ್ಲಿ ಅಲ್ಲಿ ಬಳಕೆಯಾಗಿರುವ ಪದಗಳ ಅರ್ಥವನ್ನು ವಿವರಿಸುತ್ತ, ಪೂರಕ ಮಾಹಿತಿಗಳ ಮೂಲಕ ಆ ಸಾಮ್ರಾಜ್ಯವನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.

ಶ್ರೀಯುತ ಕ್ಲಪ್ರೋತ್ (Klaproth) ಅವರು ಈಗಾಗಲೇ ಪಾಹಿಯಾನನು ಪ್ರಯೋಗಿಸಿರುವ ‘ಥಾ – ತ್ಸೇನ್’ ಪದಕ್ಕೆ ಸಂಬಂಧಿಸಿದಂತೆ ‘ದಕ್ಷಿಣ’ ಎಂಬರ್ಥವನ್ನು ನೀಡಿದ್ದಾರೆ. ಅವರು ‘ದಕ್ಷಿಣ’ ಎಂಬ ಪದವು ಇಂದು ‘ದಖ್ಖನ್’ ಎಂದು ಕರೆಯಲಾಗುವ ಭೂಪ್ರದೇಶಕ್ಕೆ ಸಂಬಂಧಿಸಿರುವುದಾಗಿ, ಅದು ದಕ್ಷಿಣದ ಅಪಭ್ರಂಶ ರೂಪವೆಂದು ಹೇಳುತ್ತಾರೆ. ಇಂತಹ ಪ್ರತ್ಯಭಿಜ್ಞೆಯ ಬಗೆಗೆ ಹೆಚ್ಚಿನ ವಿವರಣೆಗಳ ಅಗತ್ಯ ಇಲ್ಲ ಎಂದು ನನ್ನ ಅಭಿಪ್ರಾಯವೂ ಆಗಿದೆ.

‘ದಖ್ಖನ್’ ಪದಕ್ಕೆ ಸಂಬಂಧಿಸಿದಂತೆ, ವಿಂಧ್ಯಾ ಮತ್ತು ಕೃಷ್ಣಾ ನದಿ ಪ್ರದೇಶದ ನಡುವಿನ ನಾಡು ಎಂಬ ವಿವರಣೆಯು ಇತ್ತೀಚಿನದು ಎಂಬುದೇ ನನ್ನ ನಿಲುವು. ಫಾಹಿಯಾನನ ಕಾಲದಲ್ಲಿ ‘ದಕ್ಷಿಣ’ ಎಂಬುದಕ್ಕೆ ವಿಂಧ್ಯಾದಿಂದ ಕನ್ಯಾಕುಮಾರಿವರೆಗಿನ ಭೂಪ್ರದೇಶ ಎಂಬ ಅರ್ಥವೇ ಇತ್ತು. ಹಾಗಾದುದರಿಂದಲೇ ಆತನು ಇದಕ್ಕೆ ಸಂಬಂಧಿಸಿದಂತೆ ‘ಸಾಮ್ರಾಜ್ಯ’ ಎಂಬ ಪದವನ್ನು ಪ್ರಯೋಗ ಮಾಡಿದ್ದಾನೆ. ಹಾಗೆ ನೋಡಿದರೆ ಆತನೇನು ಇದಕ್ಕೆ ಹೊಂದಿಕೊಂಡಂತೆ ಬೇರೆ ಯಾವುದೇ ಸಾಮ್ರಾಜ್ಯವಿರಲಿಲ್ಲ ಎಂದೇನೂ ಹೇಳುವುದಿಲ್ಲ. ಏಕೆಂದರೆ ಇತರ ಆಧಾರಗಳಿಂದ ನಮಗೆ, ಇಡೀ ದಕ್ಷಿಣ ಭಾರತವು ಆಕಾಲಕ್ಕೆ ಏಕ ಚಕ್ರಾಧಿಪತ್ಯದ ಅಧೀನದಲ್ಲಿರಲಿಲ್ಲವೆಂದು ತಿಳಿದು ಬರುತ್ತದೆ ; ಹಾಗಿದ್ದರೂ ಆತನಿಗೆ ಮಹಿತಿ ನೀಡಿದವರು – ಅದೇ ಪ್ರದೇಶಕ್ಕೆ ಸೇರಿದವರು ಆಗಿದ್ದುದರಿಂದ – ಹೇಳಿರುವ ಪ್ರಕಾರವೇ ದಕ್ಷಿಣದಲ್ಲಿ ಬೇರೆ ಬೇರೆ ಹೆಸರಿನ ಸಾಮ್ರಾಜ್ಯಗಳಿದ್ದಾಗಲೂ ನೆರೆಯ ಸಾಮ್ರಾಜ್ಯಗಳಿಗೆ ‘ದಕ್ಷಿಣ ಸಾಮ್ರಾಜ್ಯ’ ಎನ್ನುವ ಪದವೇ ಹೆಚ್ಚು ಸೂಕ್ತವಾದುದು ಎಂಬ ತೀರ್ಮಾನಕ್ಕೆ ಆತನು ಬರಬೇಕಾಯಿತು. ಬಹುಶಃ ಫಾಹಿಯಾನನು ಗುರುತಿಸುವ ಸಾಮ್ರಾಜ್ಯವು ಇತರೆಲ್ಲ ಸಾಮ್ರಾಜ್ಯಕ್ಕಿಂತ ದೊಡ್ಡದಾಗಿರಬೇಕು ಇಲ್ಲವೇ ಇತರ ಸಾಮ್ರಾಜ್ಯಗಳ ಮೇಲೆ ಹಿಡಿತ ಸಾಧಿಸಿದ ಸಾಮ್ರಾಜ್ಯವಾಗಿರಬೇಕು.

ಫಾಹಿಯಾನನು ನೀಡುವ ಸಂಕ್ಷಿಪ್ತ ವಿವರಣೆಗಳು ಆ ಸಾಮ್ರಾಜ್ಯವು ಮುಂದುವರಿದ ನಾಗರಿಕತೆಯನ್ನು ಹೊಂದಿತ್ತು ಎಂಬ ಬಗೆಗೆ ಪರೋಕ್ಷ ಮಾಹಿತಿಗಳನ್ನು ನೀಡುತ್ತವೆ: –

೧. ೧೫೦೦ ಕೊಠಡಿಗಳಿರುವ ಭೌದ್ಧವಿಹಾರಗಳು ಮತ್ತು ಏಕಶಿಲಾ ಮೂರ್ತಿಶಿಲ್ಪಗಳಿಗೆ ಸಂಬಂಧಿಸಿದಂತೆ ಆತ ನಿರ್ದಿಷ್ಟವಾದ ಮಾಹಿತಿಗಳನ್ನು ನೀಡುತ್ತಾನೆ. ಐದು ಅಂತಸ್ತಿನ, ಗೋಪುರಾಕಾರದ ಕಟ್ಟಡವನ್ನು ಮೇಲೆತ್ತಿ ನಿಲ್ಲಿಸುವಂತಹ ಬೃಹತ್ ಶಿಲೆಗಳನ್ನು ಕೆತ್ತನೆಯ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಪ್ರತಿಯೊಂದು ಅಂತಸ್ತು ಕೂಡ ಪ್ರಾಣಿ ಅಥವ ಅನೇಕ ಪ್ರಾಣಿಗಳ ಆಕಾರದಲ್ಲಿ ಕೆತ್ತಲಾಗಿರುವುದಾಗಿ, ನೂರಾರು ಭೌದ್ಧ ಭಿಕ್ಷುಗಳ ಕೊಠಡಿಗಳನ್ನೊಳಗೊಂಡಿರುವುದಾಗಿತ್ತು. ಪ್ರತಿಯೊಂದು ಕೊಠಡಿಗಳಿಗೂ ನೀರಿನ ಕೊಳಗಳಿರುತ್ತಿದ್ದು, ಅಲ್ಲಿಂದ ನೀರನ್ನು ಬೇರೆ ಬೇರೆ ಅಂತಸ್ತುಗಳಿಗೆ ಹರಿಯ ಬಿಡಲಾಗುತ್ತಿತ್ತಲ್ಲದೆ, ಅಂತಿಮವಾಗಿ ಅದನ್ನು ಬೌದ್ಧವಿಹಾರದ ಕೊನೆಯ ಬಾಗಿಲಿನಿಂದ ಬಿಡಲಾಗುತ್ತಿತ್ತು. ಈ ಬೃಹದಾಕೃತಿಯ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳ ಮೂಲಕ ನಾವು ಕೇವಲ ಪ್ರತ್ಯೇಕವಾದ ಸ್ಮಾರಕಗಳ ಮಾದರಿ ಎಂದಷ್ಟೇ ಪರಿಗಣಿಸದೆ, ಈ ಪ್ರದೇಶಗಳಲೆಲ್ಲ ಕಂಡುಬರುವ ಅಂತಹುದೇ ಆದ ಕಟ್ಟಡಗಳ ಮಾದರಿಗಳನ್ನೂ ಕೂಡ ಪರಿಕಲ್ಪಿಸಬಹುದಾಗಿದೆ. ಇದರಿಂದಾಗಿ ಇದೀಗ ನಾವು ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳು ಈ ಪರಿಯ ಔನ್ನತ್ಯವನ್ನು ಪಡೆಯುವಲ್ಲಿ ಅವು ಮೂಲತಃ ಮಣ್ಣಿನ ರಚನೆಗಳಾಗಿರಬೇಕು ಎಂದು ಊಹಿಸಬಹುದಾಗಿದೆ. ಹಾಗಾದುದರಿಂದ ಅದನ್ನು ದೇಸಿಯ ಅಥವ ಮಾರ್ಗ ರೀತಿಯ ಶೈಲಿಯೇ ಆಗಿರಲಿ, ಆ ಕಾಲದಲ್ಲಿ ಪ್ರಚಲಿತವಾಗಿದ್ದ ಹಾಗೆಯೇ ದಕ್ಷಿಣ ಭಾರತದ ಈ ಭಾಗದಲ್ಲಿ ಇದ್ದ ವಾಸ್ತುಶೈಲಿ ಎಂದೇ ನಾವು ಪರಿಗಣಿಸಬಹುದಾಗಿದೆ.

೨. ಈ ರೀತಿಯ ಭೌದ್ಧವಿಹಾರಗಳ ಕಟ್ಟೋಣಗಳ ಮೂಲಕ ಸಹಜವಾಗಿಯೇ ದಕ್ಷಿಣ ಭಾರತದಲ್ಲಿ ಬೌದ್ಧದರ್ಮವು ಸಾಕಷ್ಟು ಪ್ರಭಾವಶಾಲಿಯಾಗಿತ್ತು ಮಾತ್ರವಲ್ಲದೆ, ಅದರ ಅನುಯಾಯಿಗಳು ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದವರೂ ಆಗಿದ್ದರು ಎಂಬುದನ್ನು ನಾವು ಕಂಡುಕೊಳ್ಳಬಹುದಾಗಿದೆ. ಆದರೆ ಫಾಹಿಯಾನನು ಇದನ್ನು ಕೇವಲ ನಮ್ಮ ಊಹನೆಗಷ್ಟೇ ಬಿಡುವವನಲ್ಲ. ಬದಲಾಗಿ ಆತನು ಸನ್ಯಾಸಿಗಳು, ಬ್ರಾಹ್ಮಣರು ಮತ್ತು ನಾಸ್ತಿಕರೂ ಸಹಿತವಾಗಿ ಆ ಸಾಮ್ರಾಜ್ಯದಲ್ಲಿ ವಾಸವಾಗಿದ್ದರು ಎಂಬುದನ್ನು ಪ್ರತ್ಯೇಕವಾಗಿ ಹೇಳುತ್ತಾನೆ. ಅಂತೆಯೇ ದಕ್ಷಿಣ ಭಾರತದಲ್ಲಿ ನಾಗರಿಕತೆಯ ಪ್ರಧಾನ ಲಕ್ಷಣವಾಗಿಯೇ ಧರ್ಮವನ್ನು ಪರಿಗಣಿಸಲಾಗುತ್ತಿತ್ತಲ್ಲದೆ, ಅದರ ಮೂಲಕವೇ ಅತ್ಯುನ್ನತವಾದ ಧಾರ್ಮಿಕ ತತ್ತ್ವಶಾಸ್ತ್ರೀಯ ಪಂಥಗಳು ಹುಟ್ಟಿಕೊಳ್ಳಲಾಗಿ ಅವುಗಳಿಂದಲೇ ಆ ಕಾಲದ ಭಾರತದ ಬೌದ್ಧಿಕತೆಯು ಮೂಡಿರುವುದಾಗಿದೆ ಎಂದು ಹೇಳುತ್ತಾನೆ.

೩. ಕೊನೆಯ ಈ ವಿವರವು ಇನ್ನೊಂದು ರೀತಿಯಲ್ಲಿ ಈ ರಾಜ್ಯದ ನಾಗರಿಕತೆಗೂ ಸಂಬಂಧಿಸಿರುವುದಾಗಿದೆ. ಬೌದ್ಧವಿಹಾರಗಳು, ಬ್ರಾಹ್ಮಣರು ಮತ್ತು ಅವರೀರ್ವರ ಅನುಯಾಯಿಗಳು ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದುದಾಗಿ, ಧಾರ್ಮಿಕ ಸೌಹಾರ್ದತೆ ಎಂಬುದು ಒಂದಲ್ಲ ಒಂದು ರೀತಿಯಲ್ಲಿ ತನಗೆ ತಾನೇ ಒಪ್ಪಿತವೂ, ಪ್ರಾಯೋಗಿಕವೂ ಆದುದಾಗಿತ್ತು. ಇದನ್ನು ಪ್ರಜೆಗಳೂ, ರಾಜರುಗಳೂ ‘ದಕ್ಷಿಣದ ಸಾಮ್ರಾಜ್ಯ’ದಲ್ಲಿ ಪಾಲಿಸಿಕೊಂಡು ಬರುತ್ತಿದ್ದರು. ಹಾಗೆಯೇ ಇದು ಅತ್ಯಂತ ಮುಖ್ಯವಾದುದೇಕೆಂದರೆ ಫಾಹಿಯಾನನು ಬಹುಸಂಖ್ಯಾತ ಜನರು ಬೌದ್ಧಧರ್ಮವನ್ನು ವಿರೋಧಿಸುತ್ತಿದ್ದರೆಂದು ಸ್ಪಷ್ಟವಾಗಿಯೇ ಹೇಳುತ್ತಿದ್ದಾಗಲೂ ಇಂತಹ ಸಹನೆಯ ನಡುವೆಯೇ ಅದು ವ್ಯಕ್ತವಾಗುತ್ತಿತ್ತು ಎಂಬುದನ್ನೂ ಗಮನಿಸಬೇಕು.

೪. ಹೀಗೆ ಬೌದ್ಧಭಿಕ್ಕುಗಳು, ಬ್ರಾಹ್ಮಣರು ಮತ್ತು ಪಾಷಂಡಿಗಳು ಇವರೇ ಮೊದಲಾಗಿ, ರಚಿಸಿದ ಸಂಪುಟ – ಸಂಪುಟಗಳ ಸಾಹಿತ್ಯವು ಆ ಎಲ್ಲ ಧರ್ಮಗಳೂ ದಕ್ಷಿಣ ಸಾಮ್ರಾಜ್ಯದಲ್ಲಿ ಪ್ರಭಾವಶಾಲಿಯಾಗಿದ್ದವು ಎಂಬುದನ್ನು ಸ್ಪಷ್ಟಪಡಿಸುತ್ತದೆ.

೫. ಫಾಹಿಯಾನನು ಈ ಸಾಮ್ರಾಜ್ಯದ ಪ್ರಜೆಗಳ ಬಗೆಗೆ ಬರೆಯುತ್ತ ಅವರು ರಾಜಸೇವಾಸಕ್ತರೆಂದೆನ್ನುತ್ತಾನಲ್ಲದೆ, ಹಾಗೆ ತಮ್ಮ ಸೇವೆಗಳಿಗೆ ಅಧಿಕಾರಿಗಳಿಂದ ಪ್ರತಿಫಲವನ್ನೂ ಪಡೆಯುತ್ತಿದ್ದರು ಎಂದೆನ್ನುತ್ತಾನೆ. ಹಾಗೆಯೇ ಪ್ರವಾಸಿಗರು ನಿಯಮಿತವಾದ ಕಾಣಿಕೆಯನ್ನು ಮೊದಲಾಗಿಯೇ ರಾಜನಿಗೆ ಕೊಡಬೇಕಾಗಿರುತ್ತಿತ್ತು. ಎಂಬುದನ್ನು ಆತ ಹೇಳಿದ್ದಾನೆ. ಅದನ್ನು ಆತನ ಮಾತಿನಲ್ಲಿಯೇ ಹೇಳುವುದಾದರೆ, ಅಲ್ಲಿಗೆ ಹೋಗಬೇಕೆನ್ನುವವರು ನಿರ್ದಿಷ್ಟ ಪಡಿಸಿದ ಹಣವನ್ನು ಮೊದಲಾಗಿಯೇ ಯಾರನ್ನಾದರೂ ಜತೆ ಮಾಡಿ ಕಳುಹಿಸುತ್ತಿದ್ದನು.”

೬. ಫಾಹಿಯಾನನು ಮಾರ್ಗದರ್ಶಕರನ್ನು ನೇಮಿಸುತ್ತಿದ್ದುದು ಈ ಸಾಮ್ರಾಜ್ಯದ ಒಂದು ವಿಶಿಷ್ಟವಾದ ಸಂಪ್ರದಾಯವೆಂದೇ ಪರಿಗಣಿಸುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಆತ ನೀಡುವ ವಿವರಗಳು ಹೀಗಿವೆ “ಈ ಸಾಮ್ರಾಜ್ಯದ ದಾರಿಗಳು ಅಪಾಯಕಾರವೂ, ದುರ್ಗಮವೂ ಹಾಗೂ ಸುಲಭವಾಗಿ ತಿಳಿಯಲಾರದವು ಆಗಿದೆ” ಎಂಬುದಾಗಿ ಆತನು ಬರೆಯುತ್ತ ಚೀನಾದಿಂದ ಭಾರತಕ್ಕೆ ಬರುವಾಗ ಮಾರ್ಗ ಮಧ್ಯೆ ಉಂಟಾಗುವ ಸಂಕಷ್ಟಗಳನ್ನು ವಿವರಿಸುತ್ತಾನೆ. ಮುಂದುವರಿದು ಪರ್ವತಾವಳಿಗಳಿಂದ, ಆಳದ ನದಿಗಳಿಂದ, ಅರಣ್ಯಗಳಿಂದ, ಕಳ್ಳಕಾಕರಿಂದ ಹಾಗೂ ಕ್ರೂರ ಮೃಗಗಳಿಂದ ನಿಬಿಡವಾದ ಈ ದೇಶದ ಮೇರೆಯ ಕುರಿತು ವಿವರಿಸುತ್ತಾನೆ. ಅಲ್ಲೇ ಆತನು ಮಾರ್ಗದ ಬಗೆಗೂ ಈ ಮೆಲಿನ ಮಾತುಗಳನ್ನು ಹೇಳಿರಬೇಕು ಎಂದೆನಿಸುತ್ತದೆ. ಏಕೆಂದರೆ ಮುಂದುವರಿದು ಆತನು, ಪ್ರವಾಸಿಗನು “ನಿರ್ದಿಷ್ಟಪಡಿಸಿದ ಹಣವನ್ನು ರಾಜನಿಗೆ ಕೊಡಬೇಕು” ಆ ಮೇಲೆಯೇ ಈ ಮಾರ್ಗವಾಗಿ ಪ್ರಯಾಣಿಸಬಹುದಾಗಿದೆ ಎಂದೆನ್ನುತ್ತಾನೆ. ಆನಂತರ, ” ಇಲ್ಲದಿದ್ದರೆ ಆ ಮಾರ್ಗವಾಗಿ ಹೋಗಲಾಗುವುದಿಲ್ಲ” ಎನ್ನುತ್ತಾನೆ. ಇದರಿಂದಾಗಿ ಅದು ಆತನಿಗೆ ನಿಯಮಾನುಸಾರವಾಗಿ ವಿಧಿಸಿದ, ಆದರೆ ಪೂರ್ಣಪ್ರಮಾಣದಲ್ಲದ, ಕರವಾಗಿದ್ದು, ಅದರ ಮುಖೇನ ಆತನು ಶ್ರೀಲಂಕಾಕ್ಕೆ ದೇಶಕ್ಕೆ ಹೋಗಲು ಅನುಮತಿಸಲಾಗಿತ್ತು ; ಹಾಗೆಯೇ ಹಿಮಾಲಯ ಪರ್ವತಾವಳಿಗಳ ಮೂಲಕ ಪ್ರಯಾಣ ಮಾಡುವಾಗ ಈಗಾಗಲೇ ಅನುಭವವಾಗಿದ್ದ ಕಷ್ಟನಷ್ಟಗಳಿಂದ ದಕ್ಷಿಣದಲ್ಲಿಯೂ ಅದೇ ರೀತಿಯ ಕಷ್ಟನಷ್ಟಗಳು ಎದುರಾಗಲಾಗಿ ಇವು ಕಡಿಮೆ ಪ್ರಮಾಣದವು ಎಂದು ಆತನ ಅಭಿಪ್ರಯವಾಗಿರಬೇಕು. ಇದು ನನ್ನ ಮೊದಲ ಅಭಿಪ್ರಾಯ. ಅದು ಹೌದಾದರೆ ಮೊದಲಾಗಿ ಕೊಡಬೇಕಾಗಿ ಬಂದ ಹಣವು ಪ್ರವಾಸಿಗನೊಬ್ಬ ಕೊಡಬೇಕಾಗಿರುವ ಒಂದಿಷ್ಟು ಹಣವಷ್ಟೇ ಅಲ್ಲ. ಬದಲಾಗಿ, ಅದು ದೊಡ್ಡ ಮೊತ್ತದ ಹಣವೇ ಅಗಿತ್ತು ಎಂಬುದಷ್ಟೇ ಅಲ್ಲದೆ, ಅದನ್ನು ಫಾಹಿಯಾನನು ಕೊಡುವುದಕ್ಕೆ ಸಾಧ್ಯವಾಗಿರಲಿಲ್ಲ. ಅಥವ ಫಾಹಿಯಾನನಿಗೆ ಅದನ್ನು ಕೊಡುವುದಕ್ಕೆ ಇಷ್ಟವಾಗಿರಲಿಲ್ಲ.

೭. ಅತ್ಯಂತ ನಿಷ್ಠಾವಂತನಾದ ಬೌದ್ಧಧರ್ಮೀಯವಾದ ಫಾಹಿಯಾನನು ಭಾರತದ ತನ್ನ ಪ್ರವಾಸದ ವೇಳೆಯಲ್ಲಿ ಈ ವಿಷಯದ ಬಗೆಗೆ ಎಲ್ಲವನ್ನೂ ಹೇಳಿದ್ದಾನೆ. ಆತನು ತನ್ನ ವೃತ್ತಿಯಲ್ಲಿ ನುರಿತವನಾಗಿ, ಅದರಿಂದ ನಿಜವಾಗಿಯೂ ಸಾಮ್ರಾಜ್ಯವೊಂದರಲ್ಲಿ ನೈಷ್ಠಿಕರಿಗೆ ಅವರದು ನಿಜವಾಗಿಯೂ ಧಾರ್ಮಿಕ ಉದ್ದೇಶವೇ ಆಗಿದ್ದರೆ ಸರಿಯಾದ ವ್ಯವಸ್ಥೆಯಿರುತ್ತಿರಲಿಲ್ಲ ಎಂದು ಹೇಳುವುದು ನನಗೆ ನಂಬುವುದಕ್ಕೆ ಆಗುವುದಿಲ್ಲ. ನಾವು ಈ ರೀತಿಯ ವ್ಯವಸ್ಥೆಯ ಬಗೆಗಿನ ವಿವರಗಳಿಂದ ಅದು ದಕ್ಷಿಣ ಭಾರತದಲ್ಲಿ ರೂಢಿಯಾಗಿದ್ದ ಒಂದು ಪದ್ಧತಿಯೆಂದೇ ತಿಳಿಯಬಹುದಾಗಿದೆ. ಹಾಗೆಯೇ ಯಾರಿಗಾಗಿ ಈ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತೋ ಅದು ಅಂದಿನ ಕಾಲದಲ್ಲಿ ದಖ್ಖನ್‌ಗೆ ವ್ಯಾಪಾರದ ಉದ್ದೇಶಕ್ಕಾಗಿ ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಲು ಪಶ್ಚಿಮದಿಂದ ಬರುತ್ತಿದ್ದ ವ್ಯಾಪಾರಿ ಪ್ರವಾಸಿಗರಿಗೆ ಸಂಬಂಧಿಸಿದುದಾಗಿತ್ತು. ಈ ಬೆಲೆ ಬಾಳುವ ವಸ್ತುಗಳಿಗಾಗಿ ಅವರು ತುಂಬ ಹಣವನ್ನು ಭರಿಸಬೇಕಾಗಿ ಬರುತ್ತಿತ್ತು. ಹಾಗೆಯೇ ಸಾಮ್ರಾಜ್ಯಕ್ಕೆ ಅವರಿಂದಾಗಿ ಬರುತ್ತಿದ್ದ ಹೆಚ್ಚಿನ ವ್ಯಾಪಾರದಿಂದಾಗಿ ಅದರ ರಕ್ಷಣೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗುತ್ತಿತ್ತು. ಹಾಗಾದುದರಿಂದ ದಕ್ಷಿಣದ ಸಾಮ್ರಾಜ್ಯ ಶ್ರೀಮಂತವಾದ ವ್ಯಾಪಾರ ಮತ್ತು ಒಳನಾಡಿನ ವ್ಯಾಪಾರ ಮಾರ್ಗಗಳಿಗೂ ಆಗ ಪ್ರಸಿದ್ಧವಾಗಿಯೇ ಇತ್ತು ಎಂದು ನಾವು ಭಾವಿಸಬಹುದಾಗಿದೆ.

ಫಾಹಿಯಾನನು ದಕ್ಷಿಣದ ಸಾ‌ಮ್ರಾಜ್ಯದಲ್ಲಿ ಕಂಡುಬರುವುದಾಗಿ ಹೇಳುವ ಈ ರೀತಿಯ ರಾಜಕೀಯ, ಬೌದ್ಧಿಕ ಮತ್ತು ಧಾರ್ಮಿಕ ಪದ್ಧತಿಗಳು ಆ ಮೂಲಕ ಅಲ್ಲಿ ನಡೆದಿರಬಹುದಾದ ಅನೇಕ ಅಮರ್ಸಂಬಂಧಗಳು, ವ್ಯವಸ್ಥೆಗಳೇ ಮೊದಲಾಗಿ ಪ್ರಾಚೀನ ಭಾರತದ ಕಾಲಘಟ್ಟದಲ್ಲಿಯೇ ದಕ್ಷಿಣ ಸಾಮ್ರಾಜ್ಯವು ಅತ್ಯುನ್ನತ ನಾಗರಿಕತೆಯನ್ನು ಮೆರೆದುದಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಫಾಹಿಯಾನನು ‘ರಾಜ್ಯದ ದೊರೆ’ (The king of the country) ಎಂಬುದಾಗಿ ಹೇಳುತ್ತಾನೆ. ಇದನ್ನು ಗಮನಿಸಿದಾಗ ದಕ್ಷಿಣ ಭಾರತದ ಪೂರ್ವದ ದೊರೆ ಅಥವ ದೊರೆಗಳು ಬೌದ್ಧದರ್ಮಕ್ಕೆ ಪ್ರೋತ್ಸಾಹ ಕೊಡುತ್ತಿದ್ದವರಷ್ಟೇ ವಿನಾ ಅದರ ಅನುಯಾಯಿಗಳಾಗಿರಲಿಲ್ಲ ಎಂಬುದಾಗಿ ತಿಳಿದುಬರುತ್ತದೆ.

೧. ಬೌದ್ಧ ಭಿಕ್ಷುಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿದ್ದರು ಎಂಬುದು ದೊರೆಗಳು ಬೌದ್ಧಧರ್ಮದ ವಿರೋಧಿಗಳು ಆಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಬ್ರಾಹ್ಮಣರು ಮತ್ತು ಜೈನರು ಈಗಾಗಲೇ ಸಾಮ್ರಾಜ್ಯದಲ್ಲಿ ಹೆಚ್ಚು ಪ್ರಭಾವಶಾಲಿ ಗಳಾಗಿದ್ದರು. ಆದರೆ ಸಾಮ್ರಾಜ್ಯದ ಒಂದು ಭಾಗದಲ್ಲಿ ಬೌದ್ಧಧರ್ಮದ ವಿರೋಧಿಯಾದ ಒಂದು ಅಲ್ಪಸಂಖ್ಯಾತ ವರ್ಗವೂ ಇತ್ತು.

೨. ಈ ರೀತಿಯ ಧಾರ್ಮಿಕ ಸಹಿಷ್ಣುತೆಗೆ ಬಹುತೇಕವಾಗಿ ಬೌದ್ಧದರ್ಮದ ಕಡೆಗೆ ಒಲವನ್ನು ಇರಿಸಿಕೊಂಡಿದ್ದ ರಾಜನೇ ಕಾರಣಕರ್ತನಾಗಿದ್ದನೇ ಹೊರತು, ಹೊಸ ಪಂಥಗಳಿಗೆ ಆಶ್ರಯಧಾತರಾಗಿದ್ದ ರಾಜರಲ್ಲ.

೩. ನಾವು ಆ ಕಾಲದ ಶಿಲ್ಪಕಲೆಗಳನ್ನು ಗಮನಿಸಿದಾಗ, ಅದು ಅತ್ಯಂತ ಬಲಶಾಲಿಯೂ, ಶ್ರೀಮಂತವೂ ಆದ ರಾಜನು ಮಾತ್ರವೇ ಕೈಗೊಳ್ಳಬಹುದಾದ ಕಾರ್ಯವೆಂದೆನಿಸುತ್ತದೆ. ಅಂತಹ ಪ್ರಬಲ ರಾಜನಿಗೆ ಮಾತ್ರವಲ್ಲದೇ, ರಾಜರ ಪರಂಪರೆಗೆ ಮಾತ್ರವೇ ಅಂತಹ ವೈಭವಯುತವಾದ ಕಲೆಯನ್ನು ಸಾಕ್ಷಾತ್ಕಾರ ಮಾಡುವುದಕ್ಕೆ ಸಾಧ್ಯ. ಹಾಗೆಯೇ ಅಂತಹ ರಾಜ ಅಥವ ರಾಜರು ಸಹಜವಾಗಿಯೇ ಧರ್ಮಸಹಿಷ್ಣುಗಳೂ ಆಗಿರಬೇಕಾಗುತ್ತದೆ.

ಇದೀಗ ನಾವು ದಕ್ಷಿಣ ಸಾಮ್ರಾಜ್ಯದ ವಿಸ್ತಾರವನ್ನು ಪರಿಗಣಿಸಬಹುದಾಗಿದೆ.

“ಫಾಹಿಯಾನನು ತಾನು ವರ್ಣಿಸುವ ಸಾಮ್ರಾಜ್ಯವು ದಕ್ಷಿಣಕ್ಕೆ ಎರಡು ನೂರು ಯೋಜನೆ ವಿಸ್ತೀರ್ಣತೆಯನ್ನು ಹೊಂದಿತ್ತು” ಎಂದೆನ್ನುತ್ತಾನೆ. ಮುಂದಿನ ವಿವರಗಳಲ್ಲಿ, ಆತನು ಪಾಟಲೀಪುತ್ರದಿಂದ ಗಂಗಾನದಿಯನ್ನುತ್ತರಿಸಿ, ಕಾಶೀ ಪಟ್ಟಣದ ವಾರಣಾಸಿಗೆ ಬರುತ್ತಾನೆ. ಹಾಗಾದುದರಿಂದ ಇನ್ನೂರು ಯೋಜನವೆನ್ನುವ ದಕ್ಷಿಣದ ಸಾಮ್ರಾಜ್ಯವು ಆತನು ವಾರಣಾಸಿಯಿಂದ ಹೊರಟಲ್ಲಿಂದ ಆರಂಭವಾಗುತ್ತದೆ ಎನ್ನುವುದನ್ನು ಗಮನಿಸಬೇಕು. ಇಲ್ಲಿ ಫಾಹಿಯಾನನು’ಯೋಜನೆ’ ಎನ್ನುವ ಸಂಸ್ಕೃತ ಮಾಪನವನ್ನೇ ಪ್ರಯೋಗಿಸಿರುವುದಾದರೂ ಸಂಸ್ಕೃತದ ಲೆಕ್ಕಾಚಾರಕ್ಕೂ ಚೀನೀಯರ ‘ಯೋಜನ’ದ ಅಳತೆಗೂ ವ್ಯತ್ಯಾಸ ಕಂಡುಬರುತ್ತದೆ. ಆದುದರಿಂದ ಇನ್ನೂರು ಯೋಜನವೆಂದರೆ ಆ ಸಾಮ್ರಾಜ್ಯವು ವಾರಣಾಸಿಯಿಂದ ೯೦೦ ಮೈಲು ವಿಸ್ತಾರದ ಸಾಮ್ರಾಜ್ಯವೆಂದು ಪರಿಗಣಿಸಬೇಕು.

ಈಗ ನಮ್ಮೆದುರಿಗಿರುವ ಪ್ರಶ್ನೆಯು ಹಾಗಾದರೆ ವಾರಣಾಸಿಯಿಂದ ಎಲ್ಲಿಯವರೆಗಿನ ಸಾಮ್ರಾಜ್ಯವು ದಕ್ಷಿಣವೆಂದು ಪರಿಗಣಿತವಾಗಿರುತ್ತದೆ ಎಂಬುದೇ ಆಗಿದೆ. ಆತನೇನೋ ವಾರಣಾಸಿಯಿಂದ ತನ್ನ ಪಯಣವನ್ನು ಆರಂಭಿಸುತ್ತಾನೆ. ಇದೀಗ ನಾವು ಆತನು ಸ್ಪಷ್ಟವಾಗಿಯೇ ವಾರಣಾಸಿಯಿಂದ ಆರಂಭಿಸಿ ೯೦೦ ಮೈಲು ವಿಸ್ತೀರ್ಣ ಎಲ್ಲಿವರೆಗಾಗುವುದೋ ಅಲ್ಲೇ ಅಥವ ಆತನು ವರ್ಣಿಸುವ ರಾಜಧಾನಿಯವರೆಗಿನ ಭೂಪ್ರದೇಶವೇ ಅಂತಹ ಮೇರೆಯಾಗಿರಬಹುದು ಎಂಬುದಾಗಿ ಗಮನಿಸಬಹುದು. ಇನ್ನೂ ನಮಗೆ ಒಂದು ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಫಾಹಿಯಾನನು ‘೯೦೦ ಮೈಲು’ ಎನ್ನುವ ವಿಸ್ತಾರವು ಎಲ್ಲಿಂದ ಎಲ್ಲಿವರೆಗೆ? ‘ದಕ್ಷಿಣಕ್ಕೆ’ ಎಂದರೆ ಏನರ್ಥ? ಆತನ ಅನೇಕ ವಿವರಗಳನ್ನು ಓದಿದಾಗ ನನಗೆ, ಬಹುಮಟ್ಟಿಗೆ ಅದು ಸರಿಯಾದ ವಿವರವೇ ಎಂದೆನಿಸುತ್ತದೆ. ಹಾಗಾದುದರಿಂದ ದಕ್ಷಿಣ – ದಕ್ಷಿಣ – ಪೂರ್ವ ಮತ್ತು ದಕ್ಷಿಣ – ದಕ್ಷಿಣ ಪಶ್ಚಿಮ ನಡುವೆ ಬರುವ ಯಾವುದೇ ಭೂಭಾಗವು ‘ದಕ್ಷಿಣಕ್ಕೆ’ ಎಂಬ ಸಾಮಾನ್ಯ ಅರ್ಥವನ್ನು ಪಡೆಯುತ್ತದೆ. ಹಾಗೆಯೇ ಭಾರತದ ನಕ್ಷೆಯಲ್ಲಿ ಈ ಭಾಗವನ್ನು ನಾನು ‘೯೦೦’ ಮೈಲು ಎಂದು ಪರಿಗಣಿಸುತ್ತೇನೆ. ಈ ವಿಸ್ತಾರವನ್ನು ದಕ್ಷಿಣಾಭಿಮುಖವಾಗಿ ನಕ್ಷೆಯಲ್ಲಿ ಗುರುತಿಸಿದಾಗ, ಹಾಗೆಯೇ ಸ್ವಲ್ಪ ಪಶ್ಚಿಮದ ಕಡೆಗೂ – ಎಲ್ಲೆಯ ಕಾರಣಕ್ಕಾಗಿ – ವಿಸ್ತರಿಸಿದಾಗ ೯೦೦ ಮೈಲು ಎನ್ನುವುದು ನಿಜವಾಗಿಯೂ ಮದರಾಸಿನವರೆಗೆ ತಲುಪುತ್ತದೆ. ಹಾಗೆಯೇ ಮದರಾಸಿನ ಸುತ್ತಮುತ್ತ ಈ ವಿಸ್ತಾರದಲ್ಲಿರುವ ಯಾವುದೇ ಭೂಪ್ರದೇಶವು ಫಾಹಿಯಾನನು ಹೇಳಿರುವ ವಿಸ್ತಾರಕ್ಕೆ ಸರಿಹೊಂದುತ್ತದೆ. ಹೀಗಿದ್ದರೂ, ದಕ್ಷಿಣಕ್ಕೆ ಮದರಾಸು ಭೂಪ್ರದೇಶವೇ ಅತ್ಯಂತ ಕಟ್ಟ ಕಡೆಯದೆಂದು ಫಾಹಿಯಾನನು ಹೇಳಿರುವನೆಂದು ನಂಬುವುದಾದರೂ ಫಾಹಿಯಾನನು ಬೇಕಾಬಿಟ್ಟಿಯಾಗಿ ಮಾರ್ಗವನ್ನು ಹೇಳಿರದೆ, ಅತ್ಯಂತ ಖಚಿತವಾಗಿಯೇ ನಡೆದು ಬಂದ ದಾರಿಯನ್ನು ಹೇಳಿರುತ್ತಾನೆ ಎಂಬುದನ್ನು ಗಮನಿಸಬೇಕಾಗುತ್ತದೆ. ಹಾಗೆಯೇ ಆತನು ದಕ್ಷಿಣದ ಮಾರ್ಗಗಳು ದುರ್ಗಮವೂ ಭಯಾನಕವು ತಿಳಿಯಲು ಅಸಾಧ್ಯವಾದುವೂ ಆಗಿವೆ ಎಂದು ಹೇಳುವಲ್ಲಿ ಆತನು ಒಳದಾರಿಯನ್ನೇ ಸೂಚಿಸುತ್ತಿದ್ದಾನೆ ಎಂಬುದನ್ನು ಗಮನಿಸಬೇಕಾಗುತ್ತದೆ. ಆಗ ನಾವು ಅಂತಹ ಒಳದಾರಿಯನ್ನು ಹಿಡಿದು ಮುಂದೆ ಸಾಗಿದರೆ ೯೦೦ ಮೈಲು ಎನ್ನುವ ಆ ವಿಸ್ತಾರವು ೧/೪ ಭಾಗವಷ್ಟೇ ನಮ್ಮ ಅಳತೆಗೆ ಸರಿಹೊಂದುತ್ತದೆ. ಫಾಹಿಯಾನನು ಹೇಳುವ ಮಾರ್ಗವು ಅಂತಿಮವಾಗಿ ಕೃಷ್ಣಾನದಿಯ ಸುತ್ತಮುತ್ತಲ ಪ್ರದೇಶಕ್ಕೆ ಸೀಮಿತವಾಗುತ್ತದೆ.

ಹೀಗೆ ಫಾಹಿಯಾನನು ಹೇಳುವ ದೀರ್ಘ ವಿವರಗಳಿಂದ ನಾವು ಈ ತಿರ್ಮಾನಗಳಿಗೆ ಬರಬಹುದಾಗಿದೆ.: ವಾರಣಾಸಿಯಿಂದ ದಕ್ಷಿಣಕ್ಕೆ ೯೦೦ ಮೈಲುಗಳ ಅಂತರದಲ್ಲಿ, ಅಂದರೆ, ಗೋದಾವರಿ ಮತ್ತು ಪಾಲಾರ್ ನದಿಗಳ ತೀರಪ್ರದೇಶದಲ್ಲೆಲ್ಲೋ ಕ್ರಿ.ಶ.೪೦೦ ವರ್ಷಗಳ ಹಿಂದೆ ದಕ್ಷಿಣ ಸಾಮ್ರಾಜ್ಯದ ಈ ರಾಜಧಾನಿಯು ಶ್ರೀಮಂತವಾಗಿ ಕಂಗೊಳಿಸುತ್ತಿತ್ತು. ಅಂತಹ ಭವ್ಯವಾದ ಸಾಮ್ರಾಜ್ಯದಲ್ಲಿ ವಾಸ್ತು ಮತ್ತು ಶಿಲ್ಪ ತನ್ನ ಅತ್ಯುನ್ನತ ಹಂತವನ್ನು ತಲುಪಿಯಾಗಿತ್ತು. ಅಲ್ಲಿ ಧರ್ಮ, ತತ್ತ್ವಶಾಸ್ತ್ರ ಹಾಗೂ ಸಾಹಿತ್ಯವೇ ಮೊದಲಾದ ಜ್ಞಾನಶಾಖೆಗಳು ಬೌದ್ಧರು ಬ್ರಾಹ್ಮಣರು ಮತ್ತು ಇತರ ಧಾರ್ಮಿಕ ಪಂಥಾನುಯಾಯಿಗಳಿಂದ ಸದೃಢಗೊಂಡಿದ್ದವು. ಅಲ್ಲಿ ವ್ಯವಸ್ಥಿತವಾದ ನೀತಿ – ನಿಯಮಗಳಿಂದ ಆಂತರಿಕವಾದ ವ್ಯವಸ್ಥೆಯನ್ನು ಕಾಪಾಡಲಾಗುತ್ತಿತ್ತಲ್ಲದೆ, ವ್ಯಾಪಾರ ಮತ್ತು ವ್ಯಾಪಾರಸ್ಥರನ್ನು ಹಾಗೂ ಯಾತ್ರಿಕರನ್ನು ಕಾಪಾಡಲಾಗುತ್ತಿತ್ತು. ಇದರಿಂದ ಬೌದ್ಧವಾಸ್ತುಗಳಿಗೆ ರಕ್ಷಣೆಯೂ ದೊರೆಯಿತಲ್ಲದೆ, ಬೌದ್ಧಧರ್ಮ ಪಸರಿಸುವುದಕ್ಕೂ ಕಾರಣವಾಯಿತು.

ಇದೀಗ ನಾವು ಫಾಹಿಯಾನನ ಕಾಲದ ದಕ್ಷಿಣ ಭಾರತದ ಬಗೆಗೆ ಚರ್ಚಿಸಬಹುದಾಗಿದೆ. ನಾವೀಗ ಚರ್ಚಿಸಿರುವ ಭೂಪ್ರದೇಶವು ಗೋದಾವರಿ ಮತ್ತು ಕೃಷ್ಣಾನದಿಗಳ ನಡುವಿನ ಭಾಗವಾಗಿದ್ದು, ಅದು ಪ್ರಾಚೀನ ‘ವೆಂಗಿ’ ನಾಡೇ ಆಗಿತ್ತು. ಹಾಗೆಯೇ ಅದರ ದಕ್ಷಿಣದ ತುದಿ ಭಾಗವು ಕಾಂಚಿಯಿಂದ ೪೦ ಕಿ.ಮೀ ಅಂತರದಲ್ಲಿದೆ. ಈ ಕಾಂಚಿಯು ಪ್ರಾಚೀನ ಕಾಲದಿಂದಲೂ ಬೌದ್ಧರ ಮತ್ತು ಬ್ರಾಹ್ಮಣರ ನಿವಾಸ ಸ್ಥಾನವಾಗಿತ್ತಲ್ಲದೆ ದಕ್ಷಿಣ ಭಾರತದ ನಾಗರಿಕತೆಯ ಕೇಂದ್ರವೂ ಆಗಿತ್ತು.

ವೆಂಗಿ ಮತ್ತು ಕಾಂಚಿಗಳೆರಡೂ ಪಲ್ಲವರ ರಾಜ್ಯಧಾನಿಯ ಭಾಗಗಳೇ ಆಗಿದ್ದವರು. ಇದಕ್ಕೆ ಶಾಸನಾಧಾರಗಳಿವೆ. ಅದಲ್ಲದೆ ಪಲ್ಲವರು, ಚೇರರು, ಕದಂಬರು ಮತ್ತು ಚಾಲುಕ್ಯರಿಗೂ ಕೊಡುಕೊಳೆಗಳಿದ್ದುವು. ಪಲ್ಲವರ ದಾನಶಾಸನಗಳು ಫಾಹಿಯಾನನ ಕಾಲಕ್ಕೆ ಸಂಬಂಧಿಸಿದುವುಗಳೇ ಆಗಿವೆ. ಈ ಪ್ರಬಂಧದ ವ್ಯಾಪ್ತಿಯ ದೃಷ್ಟಿಯಿಂದ ಮುಖ್ಯವಾದ ಪ್ರಶ್ನೆಯಿದು: ಫಾಹಿಯಾನನು ಹೇಳುವ ಥ – ತ್ಸೇನ್ ಅಥವ ದಕ್ಷಿಣ ಎಂಬುದು ಗೋದಾವರಿ ಮತ್ತು ಕೃಷ್ಣಾನದಿಗಳ ನಾಡೇ ಅಥವಾ ಪಾಲಾರ್ ಮತ್ತು ಪೆನ್ನಾರ್‌ಗಳ ನಡುವಿನ ನಾಡೇ ಎಂಬುದು. ಎಕೆಂದರೆ ಈ ವಿಶಾಲವಾದ ಭೂಪ್ರದೇಶವು ಆಗ ಪಲ್ಲವರ ಆಳ್ವಿಕೆಗೆ ಒಳಗಾಗಿತ್ತು ಎಂಬುದನ್ನು ಗಮನಿಸಿಕೊಂಡು ಮುಂದುವರಿಯಬಹುದು.

ಇಲ್ಲಿಯ ರಾಜರು ಮತ್ತು ಅವರ ಆಳ್ವಿಕೆಗೆ ಸಂಬಂಧಿಸಿದಂತೆ, ಈ ವರೆಗೆ ನಾನು ಹೇಳಿರುವುದೆಲ್ಲ ಫಾಹಿಯಾನನ ನಿರೂಪಣೆಗೆ ಅನುಗುಣವಾಗಿಯೇ ಇದೆ: –

೧. ಚಾಲುಕ್ಯ ಸೈನ್ಯವು ೫ನೇ ಶತಮಾನದ ಸರಿಸುಮಾರಿಗೆ ನರ್ಮದೆಯನ್ನು ದಾಟುವ ಹೊತ್ತಿಗೆ ದಖ್ಖನ್ನಿನಲ್ಲಿಯ ರಾಜರು ಪರಮಾಧಿಕಾರವನ್ನು ಹೊಂದಿದವರಾಗಿದ್ದರು. ದಕ್ಷಿಣದ ಪ್ರಾಚೀನ ರಾಜಮನೆತನವಾದ ಚಾಲುಕ್ಯ ಪಲ್ಲವರು ಸೋಲಿಸಿದುದು ಮಾತ್ರವಲ್ಲದೆ ಅವರೀರ್ವರು ಶಾಂತಿಯಿಂದ ಬಾಳ್ವೆ ನಡೆಸುತ್ತಿದ್ದರು ಎಂಬುದಕ್ಕೆ ಪಲ್ಲವ ರಾಜಕುಮಾರಿಯೊಬ್ಬಳನ್ನು ಚಾಲುಕ್ಯ ರಾಜನು ಮದುವೆಯಾದ ನಿದರ್ಶನವನ್ನು ನೀಡಬಹುದಾಗಿದೆ. ಇಲ್ಲಿಂದ ಸ್ವಲ್ಪ ಕಾಲದಲ್ಲಿಯೇ, ಬಹುಮಟ್ಟಿಗೆ ಫಾಹಿಯಾನನು ದಕ್ಷಿಣ ಭಾರತಕ್ಕೆ ಬರುವ ಕಾಲಕ್ಕಾಗಲೇ ಪಲ್ಲವರ ಆಳ್ವಿಕೆಯು ದಖ್ಖನ್ನಿನ ವಾಯುವ್ಯ ಭಾಗದತ್ತ ಪಸರಿಸುತ್ತಿತ್ತು. ಅದೇ ಸಮಯದಲ್ಲಿ ಚೋಳ ಸಾಮ್ರಾಜ್ಯದ ಉತ್ತರದ ಸೀಮೆಯಿಂದ ಆರಂಭಿಸಿ ಒರಿಸ್ಸಾದ ದಕ್ಷಿಣದ ಸೀಮೆಯವರೆಗಿನ ಸಮುದ್ರಾಂಕಿತವಾದ ಇಡೀ ಭೂಮಂಡಲ ದಕ್ಷಿಣದ ರಾಜರ ಕೈವಶವಾಗಿತ್ತು. ವೆಂಗಿ ಮಂಡಳವು ಫಾಹಿಯಾನನು ಬಂದ ಆನಂತರವೂ ಎರಡು ಶತಮಾನಗಳ ಕಾಲ ಅವರ ಆಡಳಿತದಲ್ಲೇ ಇತ್ತಲ್ಲದೆ, ಆಮೇಲೆ ಅದು ಕುಜ್ಜ ವಿಷ್ಣುವರ್ಧನನ (ಚಾಳುಕ್ಯ ಚಕ್ರವರ್ತಿಯ ಹಿರಿಯ ಸಹೋದರ) ಆಳ್ವಿಕೆಗೆ ಒಳಗಾಯಿತು. ಹಾಗೆಯೇ ಕಾಂಚಿಯು ಅವರ ಪ್ರಬಲ ರಾಜಧಾನಿಯಾಗಿ ಹತ್ತನೆಯ ಶತಮಾನದವರೆಗೂ ಉಳಿಯಿತು. ಮುಂದೆ ಪಲ್ಲವರು ದುರ್ಬಲರಾಗುತ್ತ ಬರುತ್ತಿದ್ದಂತೆಯೇ ಚೋಳರು ಅದರ ಲಾಭಪಡೆಯುತ್ತಿರಲಾಗಿ ಅಲ್ಲಿ ಉಂಟಾದ ಅರಾಜಕತೆಯಿಂದ ಮುಂದೆ ಪಲ್ಲವರು ಫಾಹಿಯಾನನ ಯಾತ್ರೆಯ ಸಂದರ್ಭದಲ್ಲಿ ಅತ್ಯಂತ ಪವರ್ಧಮಾನರಾಗಿದ್ದರು ಅಂತಹ ಸಮರ್ಥ ಸಾಮ್ರಾಜ್ಯವನ್ನು ಅವರು ಸ್ಥಾಪಿಸಿರುವುದರಿಂದಲೇ ಅದು ಆ ಕಾಲಕ್ಕೆ ದಕ್ಷಿಣದ ಸಾಮ್ರಾಜ್ಯವೆಂದು ಹೆಸರು ಪಡೆದುದಾಗಿತ್ತು.

೩. ಅವರು ಮೂಲತಃ ಬೌದ್ಧರಾಗಿದ್ದರೇ ಇಲ್ಲವೇ ಎಂಬುದಲ್ಲ – ಒಟ್ಟಿನಲ್ಲಿ ಅವರು ಬೌದ್ಧವಾಸ್ತುಶಿಲ್ಪಕ್ಕೆ ಪ್ರೋತ್ಸಾಹದಾಯಕರಾಗಿದ್ದರು. ಕೃಷ್ಣಾನದಿಯ ದಂಡೆಯ ಮೇಲಿರುವ ಅಮರಾವತಿಯಲ್ಲಿ ಕಟ್ಟಿರುವ ಅತ್ಯಂತ ಎತ್ತರದ ಬುದ್ಧನ ಮೂರ್ತಿಯು ಪಲ್ಲವರ ಶಿಲ್ಪಕಲಾ ಪ್ರೇಮಕ್ಕೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ಶ್ರೀ ಫರ್ಗುಸನ್ ಅವರು ಹೇಳುತ್ತಾರೆ. ಅದು ಪಲ್ಲವರು ಸಾಮ್ರಾಜ್ಯದ ಮಧ್ಯಭಾಗದಲ್ಲಿರುವುದಾಗಿದ್ದು ಫಾಹಿಯಾನನ ಯಾತ್ರೆಯ ಕಾಲಕ್ಕೆ ಕೆತ್ತಲ್ಪಟ್ಟುದಾಗಿತ್ತು.

೪. ಹೊಯೆನ್‌ತ್ಸಾಂಗ್ ತನ್ನ ಯಾತ್ರೆಯುದ್ದಕ್ಕೂ ಹಂತದಲ್ಲಿರುವ ನಾಶವಾಗಿರುವ ಬೌದ್ಧವಾಸ್ತು ಶಿಲ್ಪದ ಬಗೆಗೆ ಹೇಳುತ್ತಾರೆ. ಹೀಗೆ ಜೀರ್ಣವಾಗಿರುವ ಅನೇಕ ಬೌದ್ಧ ವಾಸ್ತು ಶಿಲ್ಪಗಳು ಮತ್ತು ನವೀನವಾಗಿರುವ ವೈದಿಕ ದೇವಾಲಯಗಳನ್ನು ಅಲ್ಲಲ್ಲಿ ಗುರುತಿಸುತ್ತಾನೆ. ಆನಂತರದ ಕಾಲಘಟ್ಟದಲ್ಲಿ ಅವುಗಳು ಪಲ್ಲವರಿಂದ ವೈಷ್ಣವರಾದ ಚಾಲುಕ್ಯರ ಕೈಸೇರುತ್ತದೆ.

೫. ಫಾಹಿಯಾನನು ಕಂಡ ದಕ್ಷಿಣದ ಸಾಮ್ರಾಜ್ಯದಲ್ಲಿತ್ತೆಂದು ಹೇಳಲಾಗಿರುವ ಪಲ್ಲವರ ಕಾಲದ ವಾಸ್ತುಶಿಲ್ಪವನ್ನು ಪಲ್ಲವರ ರಾಜಧಾನಿಯಾದ ಕಾಂಚೀಪುರಂನಿಂದ ೩೫ ಕಿ.ಮೀ ದೂರದಲ್ಲಿರುವ ಮಹಾಮಲ್ಲಾಪುರಂನ ‘ಮಹಾರಥ’ ವೆಂದು ಗುರುತಿಸಬಹುದಾಗಿದೆ.

೬. ಈ ಎಲ್ಲ ನಿದರ್ಶನಗಳಿಂದ ಪಲ್ಲವರು ದಕ್ಷಿಣ ಪ್ರಬಲ, ಶ್ರೀಮಂತ ಸಾಮ್ರಾಟರಾಗಿದ್ದರು ಎಂದು ಪರಿಗಣಿಸಬಹುದಾಗಿದೆ. ಸಾಗರೋತ್ತರವಾದ ವ್ಯಾಪಾರ ವ್ಯವಹಾರಗಳು ನಡೆಯುವ ಸ್ಥಳಗಳೆಲ್ಲವೂ ಅವರ ಅಧೀನದಲ್ಲಿದ್ದುವು. ಹಾಗೆಯೇ ಆಗ ಗೊತ್ತಿದ್ದ ವಜ್ರದ ಗಣಿಗಳೆಲ್ಲವೂ ಅವರ ಸಾಮ್ರಾಜ್ಯದ ಅಧೀನದಲ್ಲಿಯೇ ಇದ್ದುವು. ಹಾಗೆಯೇ ಇಂತಹ ಬೆಲೆ ಬಾಳುವ ವಸ್ತುಗಳನ್ನು, ಮಾರಾಟ ಮಾಡುತ್ತಿದ್ದ ವ್ಯಾಪಾರಿಗಾಗಿ ರಕ್ಷಣೆಯೂ ಬೇಕಾಗುತ್ತಿದ್ದುದರಿಂದ ಅವರು ಫಾಹಿಯಾನನು ಹೇಳುವ ಹಾಗೆ ಸ್ವಲ್ಪ ಮಟ್ಟಿನ ಹಣವನ್ನು ಕೊಡಬೇಕಾಗಿ ಬರುತ್ತಿತ್ತು.

ಈ ಎಲ್ಲಾ ನಿದರ್ಶನಗಳಿಂದ ನಾವೀಗ ಫಾಹಿಯಾನನು ಹೇಳುವ ದಕ್ಷಿಣದ ಸಾಮ್ರಾಜ್ಯವೆನ್ನುವುದು ಕಾಂಚಿಯ ಪಲ್ಲವರ ಸಾಮ್ರಾಜ್ಯವೇ ಆಗಿತ್ತು ಎಂಬ ತೀರ್ಮಾನಕ್ಕೆ ಬರಬಹುದಾಗಿದೆ.

ಒಂದುವೇಳೆ ಈ ಪ್ರತ್ಯಭಿಜ್ಞೆಯು ನಿಜವಾದುದೇ ಆದರೆ ಆಗ ಕಳಚಿಹೋದ ಇತಿಹಾಸದ ಗೊಣಸನ್ನು ಮತ್ತೆ ನಾವು ಜೋಡಿಸಿದಂತಾಗುತ್ತದೆ. ಅಭಿಜಾತ ಭಾರತೀಯ ಕಾಲಘಟ್ಟ ಮತ್ತು ಬೌದ್ಧಧರ್ಮದ ಸಂಬಂಧಗಳು ಹಾಗೂ ನಾಣ್ಯಗಳ ಆಧಾರ ಅಂತೆಯೇ ಆದಿಯಿಂದ ಐದನೇ ಶತಮಾನದಿಂದೀಚೆ ಇವೆಲ್ಲವೂ ಸರ್ ವಾಲ್ಟರ್ ಏಲಿಯಟ್ಟನು ಸಂಪಾದಿಸಿದ ಚಾಲುಕ್ಯ ಶಾಸನಗಳ ವಿವರಗಳಿಂದ ನಮ್ಮ ಅರಿವಿಗೆ ನಿಲುಕುತ್ತದೆ. ಇದೀಗ ನಾವು ಅದರ ಮುಂದಿನ ಕಾಲಘಟ್ಟದ ಬಗೆಗೆ ಅಂದರೆ, ಪಲ್ಲವರ ಮೂಲದ ಬಗೆಗೆ ಚರ್ಚಿಸಬೇಕಾಗಿದೆ. ಅದು ಅಂತಹ ಕಳೆದುಹೋದ ಸಂಬಂಧವನ್ನು ಮತ್ತೆ ಜೋಡಿಸುವ ಪ್ರಯತ್ನವಾಗಬಹುದಾಗಿದೆ. ಇಂತಹ ಕಾಲಘಟ್ಟದ ಬಗೆಗೆ ತೊಲೆಮಿಯ (Ptoolemy) ‘ಪೆರಿಪ್ಲಸ್’ ಗ್ರಂಥದಲ್ಲಿಯೂ ಅನೇಕ ನಿದರ್ಶನಗಳಿವೆ. ಆ ಕಾಲದಲ್ಲಿಯೂ ವ್ಯಾಪಾರ ಮತ್ತು ವ್ಯವಹಾರಗಳನ್ನು ನೋಡಿಕೊಳ್ಳುವ ಸಲುವಾಗಿ ಬಲಿಷ್ಠವಾದ ಸ್ಥಳೀಯ ಸರಕಾರಗಳಿರುತ್ತಿದ್ದುದಕ್ಕೆ ಆಧಾರಗಳಿವೆ. ಹಾಗೆಯೇ ಅದು ಬೌದ್ಧವಾಸ್ತುಶಿಲ್ಪ ಚರಿತ್ರೆಯ ಬಗೆಗಿನ ವಿವರಗಳನ್ನು ನೀಡಬಹುದಾಗಿದೆ. ಹಾಗೆಯೇ ಅದು ಪ್ರಾಚೀನ ಭಾರತ ಮರೆತುಹೋದ ಸಾಮ್ರಾಜ್ಯವೊಂದರ ಮರುಸ್ಥಾಪನೆಯೂ ಆಗಬಲ್ಲದು.

ಇತಿಹಾಸಕ್ಕೆ ಅಕರಗಳಾಗಿ ಬಳಸುವ ಗ್ರಂಥಗಳ ಬಗೆಗೆ ನಾವು ತಿಳಿದಿರಬೇಕಾದ ಸಂಗತಿಗಳಿವೆ. ಇಂದಿನ ಮಟ್ಟಿಗೆ ಇಂತಹ ಗ್ರಂಥಗಳೇ ಆ ಇತಿಹಾಸಕ್ಕೆ ಸಂಬಂಧಿಸಿದಂತೆ ಮೂಲ ಮಾಹಿತಿಗಳನ್ನು ನೀಡಬಲ್ಲುವುಗಳಾಗಿವೆ. ಅವುಗಳ ದಿನಾಂಕ ಹಾಗೂ ಹಳೆಯ ದಾಖಲೆಗಳೊಂದಿಗೆ ಅವುಗಳ ಸಂಬಂಧಗಳು ಹಾಗೆಯೇ ಅವುಗಳಲ್ಲಿ ಬರುವ ಕೆಲವೊಂದು ವಿವರಗಳ ಸತ್ಯಾಸತ್ಯತೆಗೆ ಸಂಬಂಧಿಸಿ ತುಂಬ ಆಕ್ಷೇಪಗಳನ್ನು ಎದುರಿಸಲೇ ಬೇಕಾಗಿದೆ. ಇಂದಿನ ರೂಪಗಳನ್ನು ಪಡೆಯುವ ಪೂರ್ವದಲ್ಲಿದ್ದ ಅವುಗಳ ವಸ್ತುಸ್ಥಿತಿಯ ಪ್ರಾಚೀನ ಪರಂಪರೆಗಳ ಪ್ರಾಚೀನ ದಾಖಲೆಗಳೆಂಬ ಕಾರಣಕ್ಕಷ್ಟೆ ಇಲ್ಲಿ ಅವುಗಳನ್ನು ನಾನು ಬಳಸುತ್ತಿದ್ದೇನೆ. ಹಾಗೆಯೇ “ಅವುಗಳ ಕರ್ತೃಗಳು ಬದುಕಿದ್ದ ಕಾಲದಲ್ಲಿ ಕೇಳಿದ್ದ ಮತ್ತು ನೋಡಿದ್ದ ದಖ್ಖನ್ನಿನ ಜನಗಳ ಗತಕಾಲದ ಇತಿಹಾಸವನ್ನು ಪೂರ್ಣವಾಗಿ ತಿರಸ್ಕರಿಸಿರಲಾರವು ಎಂಬುದಾಗಿಯೂ ಅವುಗಳ ಬಗೆಗೆ ನನಗೆ ನಂಬುಗೆಯಿದೆ. ಅವುಗಳನ್ನು ಶುದ್ಧಾಂಗವಾದ ಶೋಧನೆಗಳೆಂದು ಪರಿಗಣಿಸುವ ಬದಲು – ಹಾಗೆ ಪರಿಗಣಿಸಲು ಸಾಧ್ಯವೇ ಇಲ್ಲ – ಕೆಲವೊಂದು ಸತ್ಯ ಸಂಗತಿಗಳನ್ನು ಹೊರಗೆಡಹುದಕ್ಕಾಗಿ ಅವುಗಳನ್ನು ನಾನಿಲ್ಲಿ ಉಪಯೋಗಿಸಿಕೊಂಡಿದ್ದೇನೆ ಎಂದು ತಿಳಿದರೆ ಸಾಕು. ಹಾಗೆಯೇ ಅವುಗಳನ್ನು ಇಂದು ಎಷ್ಟು ನಂಬಬಹುದೋ ಅದಕ್ಕಿಂತಲೂ ಮಿಗಿಲಾಗಿ ನಾನು ನಂಬುತ್ತಿದ್ದೇನೆ ಎಂದೇನೂ ಭಾವಿಸಬೇಕಾಗಿಲ್ಲ.

ಶ್ರೀಲಂಕಾದ ಐತಿಹಾಸಿಕ ಗ್ರಂಥಗಳಲ್ಲಿ ಪ್ರಾಚೀನ ಕಾಲದಿಂದ ಆರಂಭಿಸಿ ಇಲ್ಲಿಯವರೆಗೆ ಸಿಗುವ ಮಾಹಿತಿಗಳ ಪ್ರಕಾರ ನಿರಂತರವಾದ ಹಾಗೂ ಸಲುಗೆಯಿಂದಿರುವ ಸಂಬಂಧವೊಂದು ದ್ವೀಪರಾಷ್ಟ್ರ ಮತ್ತು ಕಾಳಿಂಗ ರಾಜ್ಯದ ನಡುವೆ (ಭಾರತದ ಪೂರ್ವ ಕರಾವಳಿಯ ಮೇಲ್ಭಾಗ) ಇದ್ದಿತ್ತೆಂಬುದಾಗಿ ತಿಳಿದುಬರುತ್ತದೆ. ಬಹುಮಟ್ಟಿಗೆ ಇದೇ ರೀತಿಯ ಆದರೆ ವೈರತ್ವದ ಸಂಬಂಧವೂ ಸಹ ಚೋಳ ಮತ್ತು ಪಾಂಡ್ಯರೊಂದಿಗಿತ್ತಲ್ಲದೆ, ಅದು ಉಳಿದ ದಕ್ಷಿಣಾಭಿಮುಖವಾಗಿರುವ ಪೂರ್ವಕರಾವಳಿಯಲ್ಲೆಲ್ಲ ಕಾಣಿಸುತ್ತಿತ್ತು. ಶ್ರೀಲಂಕಾದ ‘ಮಹಾ ಸಾಮ್ರಾಜ್ಯ’ವು ಮೂಲತಃ ಕಳಿಂಗ ರಾಜಮನೆತನದ ಸ್ತ್ರೀಮೂಲದಿಂದ ಕವಲೊಡೆದುದಾಗಿದೆ. ಹಾಗೆಯೇ ಡಾ. ಗೋಲ್ಡ್‌ಷ್‌ಮಿತ್ತ್ (Dr. goldshemidt) ಅವರು ಹೇಳುವಂತೆ, ಇತ್ತೀಚಿನವರೆಗೂ ಸಮರ್ಥರಾದ ಉತ್ತರಾಧಿಕಾರಿಗಳು ಇಲ್ಲವಾದಲ್ಲಿ ಸಿಂಹಳೀಯರು ಕಳಿಂಗ ರಾಜ ಮನೆತನದಿಂದ ಅಂತಹವರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತೆಂಬುದಾಗಿ ಶಾಸನಗಳಿಂದ ತಿಳಿದುಬರುತ್ತದೆ. ಇದಕ್ಕೆ ಸಿಂಹಳವು ಪಾರಂಪರಿಕವಾಗಿ ಆ ರಾಜ ಮನೆತನಕ್ಕೆ ಸೇರಿರುವುದೇ ಕಾರಣವಾಗಿತ್ತಲ್ಲದೆ ಅವರ ಆಳ್ವಿಕೆಯಲ್ಲಿ ರಾಜಧರ್ಮವು ಸುರಕ್ಷಿತವಾಗಿರುತ್ತದೆ ಎಂಬ ಮನೋಧರ್ಮವೂ ಕಾರಣವಾಗುತ್ತದೆ. ಹಾಗೆಯೇ ಈ ಗ್ರಂಥಗಳು ಬೌದ್ಧಧರ್ಮದ ಮುಖ್ಯಗ್ರಂಥಗಳೂ ಆಗಿವೆ. ಹಾಗಾದುದರಿಂದಲೇ ಅವು ಬೌದ್ಧಧರ್ಮದ ಪಸರಿಸುವಿಕೆಯ ಬಗೆಗೆ ವಿವರಿಸುತ್ತವೆ. ಹಾಗೆಯೇ ಬೌದ್ಧಧರ್ಮಕ್ಕೆ ಸಂಬಂಧಿಸಿದಂತೆ ಪ್ರೋತ್ಸಾಹ ನೀಡಿದ ಸ್ಥಳೀಯ ಅರಸರು ಹಾಗೂ ಅಂತಹ ಪ್ರಾಚೀನ ವಿವರಗಳು ಆ ಗ್ರಂಥಗಳಲ್ಲಿ ಕಂಡುಬರುತ್ತವೆ. ಸಹಜವಾಗಿಯೇ ಇಂತಹ ಗ್ರಂಥಗಳಲ್ಲಿ ಪ್ರಾಚೀನ ದಖ್ಖನ್ನಿನ ಬಗೆಗೆ ಏನಾದರೂ ವಿವರಗಳಿವೆಯೇ ಎಂದು ಕುತೂಹಲ ಉಂಟಾಗುತ್ತದೆ. ಈ ಗ್ರಂಥಗಳಲ್ಲಿರುವ ಭಾರತದ ಭಾಗಗಳಿಗೆ ಸಂಬಂಧಿಸಿದಂತೆ ಅನೇಕ ಅಸ್ಪಷ್ಟ ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಆಕಸ್ಮಿಕವಾಗಿ ಇಲ್ಲವೇ ಉದ್ದೇಶಪೂರ್ವಕವಾಗಿ ಕಾಲ್ಪನಿಕ ಸಂಗತಿಗಳು ಇರುತ್ತವೆಯಾಗಿ ನಿಸ್ಸಂದೇಹವಾಗಿ ಕ್ರಿ.ಶ. ೭ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಅಲ್ಲಿ ರಾಜಾಡಳಿತ ಇತ್ತೆಂಬುದನ್ನು ಅದಕ್ಕಾಗಿಯೇ ಆ ವೈಭವೀಕರಣವೂ ಸಹಜವೆಂಬುದನ್ನು ಸ್ಪಷ್ಟಪಡಿಸಬಲ್ಲುವು.

ಶ್ರೀಲಂಕಾಕ್ಕೆ ಸಂಬಂಧಿಸಿದಂತೆ ರಾಜಕೀಯ ಇತಿಹಾಸಕ್ಕೆ ಸೇರಿದ ಪ್ರಾಚೀನ ಸಂಗತಿಯೊಂದು ಈ ಗ್ರಂಥಗಳಲ್ಲಿ ಕಂಡುಬರುತ್ತದೆ. ಅದು ಮಹಾ ಸಾಮ್ರಾಜ್ಯದ ಮೂಲಪುರುಷ ಮಹಾರಾಜ ವಿಜಯನು ತನ್ನ ಏಳುನೂರು ಮಂದಿ ಅನುಯಾಯಿಗಳೊಂದಿಗೆ ಶ್ರೀಲಂಕಾಕ್ಕೆ ಭೇಟಿ ನೀಡಿರುವುದಾಗಿದೆ. ಬಂಗಾಳಕೊಲ್ಲಿಯ ಮೂಲಕ ಕ್ರಿ.ಶ.೫ ಅಥವ ೬ನೇ ಶತಮಾನದಲ್ಲಿ ಬುದ್ಧನು ಮರಣ ಹೊಂದಿದ ಕಾಲಕ್ಕನುಗುಣವಾಗಿ ಈ ಪ್ರಯಾಣವು ಘಟಿಸಿತೆಂಬುದಾಗಿ ನಂಬಲಾಗುತ್ತದೆ ; ಹಾಗೆಯೇ ಅಲ್ಲಿ ಕಳಿಂಗದೆ ಬಗೆಗೆ ಹೀಗೆ ವಿವರಿಸಲಾಗಿದೆ: “ಹಿಂದೆ, ವಾಂಗೋ ಭೂಮಿಯ ಮೇಲೆ, ವಾಂಗೋ ರಾಜಧಾನಿಯಲ್ಲಿ ಒಬ್ಬ ವಾಂಗೋ ದೊರೆಯಿದ್ದ. ಕಳಿಂಗ ರಾಜನ ಮಗಳು ಆ ರಾಜ ಮನೆತನದ ಮಹಾರಾಣಿಯಾಗಿದ್ದಳು” ಇದು ವಿಜಯ ರಾಜನ ವಂಶವರ್ಣನೆಯನ್ನು ಮಾಡುವ ಪದ್ಯವಾಗಿದೆ. ಮುಂದೆ ಈ ಪದ್ಯವು ಈ ರೀತಿಯಾಗಿ ವಂಶವೃಕ್ಷವನ್ನು ಸೂಚಿಸುತ್ತದೆ.

ಕಳಿಂಗರಾಜ

ವಾಂಗೋರಾಜ ಮಗಳು

ಸಿಂಹ ಅಥವ ಶಿವ

ಮಗಳು ಸುಪ್ತದೇವಿ

ಸೀಹಬಾಹು

ಸೀಹಸೀವಳಿ

ವಿಜಯೊ ಸುವಿತ್ತೊ ಇತರ ೧೫ ಮಂಚಿ ಅವಳಿಗಳು

ವಿಜಯನು ಶ್ರೀಲಂಕಾದಲ್ಲಿ ನೆಲೆನಿಂತನು. ಅದು ಬುದ್ಧನ ಮೊದ ಉತ್ತರಾಧಿಕಾರಿಯು ನಿರ್ವಾಣವನ್ನು ಪಡೆಯಲು ಲತಾ ಗೃಹದಲ್ಲಿ ಒರಗಿದ ಕಾಲವಾಗಿತ್ತು. ಅಂದರೆ ಈ ದಾಖಲೆಯ ಪ್ರಕಾರ ಕ್ರಿ.ಪೂ.೫೪೩ನೆಯ ವರ್ಷವಾಗುತ್ತದೆ; ಹಾಗಾದುದರಿಂದ ಕಳಿಂಗರಾಜನು ಕ್ರಿ.ಪೂ.೭ನೇ ಶತಮಾನಕ್ಕಿಂತ ಪೂರ್ವದವನೆಂದು ಈ ಆಧಾರಗಳಿಂದ ತಿಳಿದುಬರುತ್ತದೆ.

ಉಫಮನು ಬರೆದಿರುವ ಸಿಲೋನಿನ ಧಾರ್ಮಿಕ ಗ್ರಂಥಗಳಲ್ಲಿ ಹೆಚ್ಚಿನವು ಅನುವಾದವಾಗಿ ಅಪವ್ಯಾಖ್ಯಾನಕ್ಕೊಳಗಾಗಿವೆ. ಅನುವಾದವಾಗಿರುವ ಭಾಗಗಳಲ್ಲಿರುವ ಮೇಲಿನ ವಿವರಣೆಯು ‘ಮಹಾವಂಸೆ’ ಕೃತಿಯ ವಿವರಗಳಿಗೆ ಸರಿಹೊಂದುತ್ತವೆ.

ಆ ಕಾಲಕ್ಕೆ ಎಂದರೆ ಕ್ರಿ.ಪೂ. ಆರು ಅಥವ ಏಳನೆಯ ಶತಮಾನಕ್ಕಿಂತ ಪೂರ್ವದಲ್ಲಿ ಈ ದಾಖಲೆಯಿಂದ ಸ್ಪಷ್ಟವಾಗುವಂತೆ ಕಳಿಂಗದಲ್ಲಿ ಒಬ್ಬ ರಾಜನಿದ್ದ ; ಹಾಗಾದುದರಿಂದ ರಾಜ್ಯವು ಇತ್ತು ; ಹಾಗೆಯೇ ಕಳಿಂಗ ರಾಜನಿಗೆ ಇತರ ಭಾರತೀಯ ರಾಜರ ನಡುವೆ ತನ್ನದೇ ಆದ ಸ್ಥಾನವಿತ್ತು. ಆದರಿಂದಾಗಿಯೇ ಆತನು ಬಂಗಾಳದ ರಾಜನ ಮಗಳನ್ನು ಕೈಹಿಡಿಯುವುದು ; ಆಕೆಯನ್ನು ಪಟ್ಟದರಾಣಿಯಾಗಿ ಮಾಡುವುದು. ಉಫಮನ (Upham) ಕಾವ್ಯದಲ್ಲಿ ಬರುವಂತೆ, ಈ ಕಳಿಂಗರಾಜನು ಅನೇಕ ರಾಜನ ಉತ್ತರಾಧಿಕಾರಿಯಾಗಿದ್ದಾನೆ: – “ಜಂಬೂದ್ವೀಪದಲ್ಲಿ ಕಳಿಂಗೊ ರಾಜ್ಯದಲ್ಲಿ, ಕಳಿಂಗ ರಾಜನ ಮಗಳೊಬ್ಬಳು ವಾಂಗೋ ರಾಜ್ಯದಲ್ಲಿ ವಾಂಗೋ ರಾಜನ ರಾಣಿಯಾಗಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು”.

ಶ್ರೀ ಆರ್.ಆಸ್.ಹಾರ್ಡಿಯವರು ತಮ್ಮ ‘Manual of Budhism’ ಕೃತಿಯಲ್ಲಿ ಅನೇಕ ಬೌದ್ಧಕತೆಗಳನ್ನು ಅನುವಾದ ಮಾಡಿದ್ದಾರೆ ; ಈಗ ಭಾರತಾದಾದ್ಯಂತ ಇರುವ ಇಂತಹ ಕತೆಗಳಿಂದ ತಿಳಿದುಬರುವಂತೆ, ಆಗಿನ ಕಾಲದಲ್ಲಿ ಗೌತಮಬುದ್ಧನಿಗಿಂತಲೂ ಮೊದಲು, ಈ ದೇಶದಲ್ಲಿ ಕಳಿಂಗ ಅರಸನು ಆಳುತ್ತಿದ್ದನು ಎಂಬ ಜನಾಭಿಪ್ರಾಯ ಇರುವಂತೆ ತೋರಿಬರುತ್ತದೆ ; ಹಾಗೆಯೇ ಆ ರಾಜನಿಗಿಂತಲೂ ಪೂರ್ವದಲ್ಲಿಯೇ ದಖ್ಖನ್ನಿನ ನಾಗರಿಕತೆಯೂ ಊರ್ಜಿತವಾಗಿತ್ತೆಂಬುದೂ ಅವುಗಳಿಂದ ತಿಳಿಯುತ್ತದೆ.

ಶ್ರೀ ಹಾರ್ಡಿಯವರು ಸಂಗ್ರಹಿಸಿದ ಐತಿಹ್ಯಗಳ ಪ್ರಕಾರ ಒಂದು ವೇಳೆ ಬುದ್ಧನು ಕ್ರಿ.ಪೂ. ೫೬೦ರಲ್ಲಿ ಜನಿಸಿರುವನೆಂದಾದರೆ – ಬುದ್ಧನಿಗಿಂತ ಎರಡು ತಲೆಮಾರು ಹಿಂದೆ ಕಳಿಂಗದಲ್ಲಿ ಉಂಟಾದ ಬರಗಾಲವು ಕ್ರಿ.ಪೂ. ಸುಮಾರು ೬೨೦ಕ್ಕೆ ಸಂಭವಿಸಿರಬೇಕು. ಹಿಂದಿನ ಕಾಲದಲ್ಲಿ ಜಂಬೂ ದ್ವೀಪದಲ್ಲಿ ಜಯತೂರ್ ಎಂಬುದು ಪ್ರಧಾನ ನಗರವಾಗಿತ್ತು. ಆ ನಗರವನ್ನು ಸಂದ ಅಥವಾ ಸಂಜ ಹೆಸರಿನ ರಾಜನು ಆಳುತ್ತಿದ್ದನು ; ಫುಸತಿಯು ಆತನ ಪಟ್ಟದ ರಾಣಿಯಾಗಿದ್ದಳು. ಆಕೆಯು ಮೊದಲು ದೇವಸೇಕರನ ಪತ್ನಿಯಾಗಿದ್ದಳು. ಹಾಗೆಯೇ ನಾಲ್ಕು ಅಸಂಖ್ಯಗಳು ಮತ್ತು ಒಂದು ‘ಕಪ್ಲಕ್ಷ’ಗಳ ಬಳಿಕ ಆಕೆಯು ಬುದ್ಧನ ತಾಯಿಯಾದಳು. ಕಾಲಾನಂತರ ಅವರಿಗೆ ಮಗನೊಬ್ಬನು ಜನಿಸಿದನು. ಅವನಿಗೆ ‘ವೆಸಂತ್ರ’ ಎಂದು ನಾಮಕರಣ ಮಾಡಲಾಯಿತು. ಆತನ ತಾಯಿ ಈ ಹೆಸರಿನ ಬೀದಿಯಲ್ಲಿ ಹೋಗುತ್ತಿದ್ದಾಗ ಪ್ರಸವ ಮಾಡಿದುದರಿಂದಲೇ ಅವನಿಗೆ ಹಾಗೆ ನಾಮಕರಣವಾಗಲು ಕಾರಣವಾಯಿತು. ಈ ಪುತ್ರನು ಬೋಧಿಸತ್ವನೇ ಆಗಿದ್ದು ಮುಂದಿನ ಜನ್ಮದಲ್ಲಿ ಆತನು ಗೌತಮ ಬುದ್ಧನಾಗಿ ಜನಿಸಿದನು. ಜನಿಸಿದ ಕೂಡಲೇ ಆತನಿಗೆ ಮಾತು ಬರುತ್ತಿದ್ದುದರಿಂದ ಆತನಿಗೆ ಉಜ್ಜ್ವಲ ಭವಿಷ್ಯವಿದೆ ಎಂದು ಎಲ್ಲರೂ ತಿಳಿದರು. ಆತನು ಪ್ರಾಪ್ತವಯಸ್ಕನಾದಾಗ, ಆತನಿಗೆ ಚೇತಿಯ ಅರಸನ ಮಗಳಾದ ಮಾದ್ರೀದೇವಿಯೊಂದಿಗೆ ಮದುವೆಯಾಯಿತು ; ಹಾಗೆಯೇ ಸಂದಾ ರಾಜನು ಅವನಿಗೆ ರಾಜ್ಯವನ್ನು ಒಪ್ಪಿಸಿದನು.

ಈ ಕಾಲದಲ್ಲಿ ಕಾಳಿಂಗದಲ್ಲಿ ಮಳೆಯಿಲ್ಲದೆ ಬರಗಾಲವುಂಟಾಯಿತು. ಆಗ ಬಿಳಿ ಆನೆಯನ್ನು ಹೊಂದಿರುವ ವೇಸಂತರನಿಗೆ ಮಳೆ ತರಿಸುವ ಸಾಮರ್ಥ್ಯವಿದೆ ಎಂದು ತಿಳಿದುಬಂತು. ಅತನು ಎಂಟು ಬ್ರಾಹ್ಮಣರನ್ನು ಕಳುಹಿಸಿ ಆ ಆನೆಯನ್ನು ತರಲು ಹೇಳಿದನು. ಹಾಗೆ ಜಯತುರಾಕ್ಕೆ ದೂತರು, ಬಂದಾಗ ಅಲ್ಲಿ ‘ಪೊಯ’; ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ರಾಜನು ಬಿಳಿ ಆನೆಯನ್ನೇರಿ ಧರ್ಮಾಚತ್ರಕ್ಕೆ ರಾಜಮರ್ಯಾದೆಯನ್ನು ಕೊಡಲು ಹೋಗುತ್ತಿದ್ದನು. ಆತನು ಪ್ರಸನ್ನನಾಗಿ “ನೀನು ನನ್ನ ಕಣ್ಣನ್ನೋ, ಮಾಂಸವನ್ನೋ ಕೇಳಿದರೂ ಕೊಡುತ್ತಿದ್ದೆ. ಆದರೆ ನೀವು ಬಿಳಿ ಆನೆಯನ್ನು ಕೇಳಿದಿರಿ. ಅದರ ಬೆಲೆಯೇ ೨೪ ಲಕ್ಷ ವರಾಹ ಬೆಲೆಬಾಳುವುದಾಗಿದೆ, ಆದರೂ ನಾನು ಅದನ್ನು ಕೊಡುತ್ತಿದ್ದೇನೆ. ನಾನು ಇದರಿಂದ ಬುದ್ಧನಾಗಬಹುದು” ಎಂದು ಉದ್ಘರಿಸಿದನು. ಆದರೆ ಅದರ ಬೆಲೆಯೇ ೪ ಲಕ್ಷ ವರಾಹಗಳ ಬೆಲೆಬಾಳುತ್ತದೆ ಎಂದೂ ಹೇಳಿದನು. ಅದನ್ನು ಕೊಂಡುಕೊಂಡವನು ಬುದ್ಧನಾಗಬಹುದು!” ಎಂದು ಅವನು ಉದ್ಘರಿಸಿದನು.