ಆನಂತರ ಜಾತಕ ಕಥೆಗಳಲ್ಲಿ ಬರುವಂತೆ, ಬಿಳಿ ಆನೆಯನ್ನು ಚೇದಿ ಜನಗಳಿಗೆ ಕಾಣಿಕೆಯಾಗಿ ನೀಡಲಾಯಿತು. ಹಾಗೆಯೇ ರಾಜ ವೇಸಂತರನ್ನು ದೇಶಾಂತರಕ್ಕೆ ಕಳುಹಿಸಲಾಯಿತು; ಆನಂತರ ಆತನ ಉತ್ತಮ ಚಾರಿತ್ರಯಕ್ಕಾಗಿ ಮತ್ತೆ ಮರಳಿ ರಾಜ್ಯಕ್ಕೆ ಕರೆಸಲಾಯಿತು. ಹಾಗೆಯೇ ಶ್ವೇತ ಗಜವನ್ನು ಕಾಳಿಂಗ ದೇಶಕ್ಕೆ ಕರೆತರಲಾಯಿತು. ಪರಿಣಾಮವಾಗಿ ಮತ್ತೆ ಮಳೆಯುಂಟಾಯಿತು. ದೇಶವು ಸುಭಿಕ್ಷವಾಯಿತು; ಹಾಗೆಯೇ ರಾಜಾ ವೇಸಂತರನು ಗೌತಮ ಬುದ್ಧನಾದನು.

ಕಾಳಿಂಗನ ದುರ್ಗುಣಗಳಿಗೆ ಸಂಬಂಧಿಸಿದಂತೆ ದೇವತೆಗಳು ಸೇಡು ತೀರಿಸಿಕೊಂಡ ಇನ್ನೊಂದು ಕತೆಯು ತುಂಬ ಪ್ರಚಾರದಲ್ಲಿರುವುದು ಕಂಡುಬರುತ್ತದೆ.. ಅದು ಹೀಗಿದೆ: – ಅದು ಸರಭಂಗ ಬೋಧಿಸತ್ವನು ಬಿಕ್ಕುಗಳ ನಾಯಕನಾಗಿದ್ದ ಸಮಯ. ಆಗ ಆತನ ಶಿಷ್ಯನಾದ ಕಿಸಾವಚನು ಗೋದಾವರಿ ತೀರದ ಗಿವುಲು ಪುಣ್ಯ ಸ್ಥಳಕ್ಕೆ ಹೋದನು. ಹಾಗೆಯೇ ಮುಂದುವರಿದು ಆತನು ದಂಡಕಿಯನ್ನುತ್ತರಿಸಿ ಕಾಳಿಂಗದ ಪಟ್ಟಣವಾದ ಕುಂಭಾವತಿ ಪಟ್ಟಣದಲ್ಲಿ ನೆಲೆಸಿದನು. ಒಂದು ದಿನ ಐನೂರು ಮಂದಿ ವಿಲಾಸಿನಿಯರು ನಗರದಲ್ಲಿ ಮೆರವಣಿಗೆ ಹೋಗುತ್ತಿದ್ದರು. ಇವರನ್ನು ನೋಡಲು ಜನ ನೂಕುನುಗ್ಗಲು ಮಾಡಲಾಗಿ ಇಡೀ ನಗರಕ್ಕೆ ನಗರವೇ ತುಂಬಿಕೊಂಡ ಹಾಗೆ ಆ ದೃಶ್ಯ ಕಂಡುಬರುತ್ತಿತ್ತು. ರಾಜನು ಈ ಮೆರವಣಿಗೆಯನ್ನು ಮೇಲುಪ್ಪರಿಗೆಯಿಂದ ನೋಡಿದನು. ಆತನಿಗೆ ಈ ಮೆರವಣಿಗೆಯು ನಗರದ ಸೌಂದರ್ಯವನ್ನು ಹಾಳುಮಾಡುತ್ತದೆ ಎಂದು ಕಂಡುಬಂತು. ಇವರು ಜನರನ್ನು ಮರಳು ಮಾಡುತ್ತಾರೆಂದು ರಾಜನಿಗೆ ಅನಿಸಿದುದರಿಂದ, ಅವರನ್ನು ಆಸ್ಥಾನದಿಂದ ಹೊರಹಾಕಲು ಆದೇಶಿಸಿದನು. ಒಂದು ದಿನ ವೇಶ್ಯಾಂಗನೆಯರು ಉಪವನದಲ್ಲಿ ಅಡ್ಡಾಡುತ್ತಿದ್ದಾಗ, ಸನ್ಯಾಸಿ ಕಿಸವಚನ ಮುಖವು ಕೂದಲಿನಿಂದ ತುಂಬಿ ಹೋಗಿತ್ತು. ಆತನ ಗಡ್ಡವು ಎದೆಯವರೆಗೆ ಇಳಿಬಿದ್ದಿತ್ತು. ಅವರು ಕುಣಿದು ಕೆಟ್ಟದೃಶ್ಯವೆಂಬಂತೆ ತಿಳಿದು, ತಮ್ಮ ಕಣ್ಣುಗಳನ್ನು ತೊಳೆದುಕೊಳ್ಳುವುದಕ್ಕೆ ನೀರು ಕೇಳಿದರಲ್ಲದೆ ಅವನ ಮೇಲೆ ಉಗುಳಿದರು. ಕಾಕತಾಳೀಯ ಎಂಬಂತೆ ಕೂಡಲೇ ಅವರನ್ನು ರಾಜಾಲಯಕ್ಕೆ ಸೇರಿಸಲಾಯಿತು. ಇದು ಅವರು ಬಿಕ್ಕೂವಿಗೆ ಮಾಡಿದ ಅವಮಾನಕ್ಕೆ ಪ್ರತಿಫಲವೆಂದೇ ನಂಬಲಾಯಿತು. ಅದೇ ವೇಳೆಗೆ ಪುರೋಹಿತನೂ ರಾಜಾಲಯದಿಂದ ಹೊರಹಾಕಲ್ಪಟ್ಟನು. ಪುರೋಹಿತನು ವೇಶ್ಯೆಯರಲ್ಲಿಗೆ ಹೋಗಿ ಅವರು ಹೇಗೆ ಮತ್ತೆ ಅಸ್ಥಾನಕ್ಕೆ ಸೇರಿರುವುದೆಂಬುದಾಗಿ ಕೇಳಿದನು. ಆಗ ಅವರು ಬಿಕ್ಕುವಿಗೆ ಉಗುಳಿದುದರ ಪರಿಣಾಮವೇ ಎಂದೆನ್ನಲು ಪುರೋಹಿತನೂ ಹಾಗೆಯೇ ಮಾಡಿದನು. ಆಗಲೂ ಕಾಕತಾಳೀಯ ಎಂಬಂಥೆ ರಾಜನು ಆತನನ್ನು ಸರಿಯಾಗಿ ವಿಚಾರಿಸದೆ ಹಾಗೆ ಮಾಡಿದನೆಂದೂ, ಮತ್ತೀಗ ಆತನನ್ನು ಮರಳಿ ಆಸ್ಥಾನಕ್ಕೆ ಸೇರಿಸಿಕೊಳ್ಳಲಾಗುವುದೆಂದೂ ಹೇಳಿದನು. ಹೀಗೆ ರಾಜನೂ ಕೂಡ ಪರೋಕ್ಷವಾಗಿ ಬಿಕ್ಕುವಿಗೆ ಮಾಡಿದ ಅವಮಾನದಲ್ಲಿ ಪಾಲುದಾರನಾದನು. ಮುಂದೊಂದು ದಿನ ರಾಜ್ಯದ ಕೆಲವೆಡೆಗಳಲ್ಲಿ ದಂಗೆ ಕಾಣಿಸತೊಡಗಿತು. ರಾಜನು ಅದನ್ನು ಹತ್ತಿಕ್ಕಲು ಸೈನ್ಯವನ್ನು ಕಳುಹಿಸಿದನು. ಆಗ ಬ್ರಾಹ್ಮಣರು ರಾಜನಲ್ಲಿಗೆ ಹೋಗಿ ನೀನು ವೈರಿಗಳನ್ನು ಗೆಲ್ಲಬೇಕಾದರೆ ಉದ್ಯಾನದಲ್ಲಿರುವ ಓರ್ವ ಭಿಕ್ಕುವಿನ ಮೇಲೆ ಉಗುಳಬೇಕು ಎಂದು ಹೇಳಿದರು. ರಾಜನು ಬ್ರಾಹ್ಮಣರ ಮಾತಿನಂತೆ ವೇಶ್ಯೆಯವರೊಂದಿಗೆ ಉದ್ಯಾನವನಕ್ಕೆ ಹೋದನು. ಅವರೆಲ್ಲರೂ ಹಿಂದೆ ಸನ್ಯಾಸಿಗೆ ಉಗುಳಿದವರೇ ಆಗಿದ್ದರು ; ಹಾಗೆಯೇ ಈಗಾಗಲೇ ಉಗುಳಿದವರನ್ನು ಹೊರೆತುಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದೆಂದು ಮೇಲಧಿಕಾರಿಗೆ ಆದೇಶಿಸಲಾಯಿತು. ಕಿಸವಚನಿಗೆ ಉಂಟಾಗುತ್ತಿರುವ ಈ ಅವಮಾನವನ್ನು ತಿಳಿದ ಕುಲೀನ ವ್ಯಕ್ತಿಯೊಬ್ಬ ಮಲಿನವಾಗಿದ್ದ ಅವನ ಮೈಯನ್ನು ತೊಳೆದು ಬೇರೆ ನೀಡಿದನು; ಆನಂತರ ರಾಜನು ಮಾಡಿದ ತಪ್ಪಿಗೆ ಅವನಿಗೆ ಯಾವ ಶಿಕ್ಷೆ ಕಾದಿದೆಯೋ ಎಂದು ಭಿಕ್ಕುವಿನಲ್ಲಿ ಕೇಳಿದನು. ಆಗ ಭಿಕ್ಕುವು ದೇವತೆಗಳು ಈ ಬಗೆಗೆ ಒಮ್ಮತವಾಗಿಲ್ಲವೆಂದು ಹೇಳಿದನು: ಕೆಲವರು ರಾಜನೋರ್ವನೇ ಶಿಕ್ಷಿತನಾಗಬೇಕೆಂದರೆ ಕೆಲವರು ರಾಜನಿಗೂ ಪ್ರಜೆಗಳಿಗೂ ಸಮವಾಗಿ ಶಿಕ್ಷೆಯಾಗಬೇಕೆಂದು ಹೇಳುತ್ತಾರೆ; ಇನ್ನು ಕೆಲವರು ಇಡೀ ರಾಜ್ಯವೇ ನಾಶವಾಗಬೇಕೆನ್ನುತ್ತಾರೆ. ಮುಂದುವರಿದು ಬಿಕ್ಕುವು ಒಂದು ವೇಳೆ ರಾಜನು ಕ್ಷಮೆಯನ್ನು ಕೇಳಿದ್ದೇ ಆದರೆ ಈಗ ತೋರಿ ಬರುತ್ತಿರುವ ಉತ್ಪಾತಗಳು ಕೊನೆಯಾಗಬಲ್ಲವು ಎಂದು ಬಿಕ್ಕುವಿಗೆ ಹೇಳಿದನು. ಹಾಗಾದುದರಿಂದ ಕುಲೀನನು ರಾಜನಲ್ಲಿಗೆ ಬಂದು ಪರಿಸ್ಥಿತಿಯನ್ನು ವಿವರಿಸಿದನು; ಆದರೆ ರಾಜನು ಅವನ ಉಪದೇಶವನ್ನು ಕೇಳದಿರಲಾಗಿ ಅವನು ಆಸ್ಥಾನವನ್ನು ತ್ಯಜಿಸಿದನು. ಆನಂತರ ಆತನು ಮತ್ತೆ ಬಿಕ್ಕುವಿರುವಲ್ಲಿಯೇ ಬಂದನು. ಆಗ ಬಿಕ್ಕುವು ಇರುವುದೆಲ್ಲವನ್ನೂ ಕಟ್ಟಿಕೊಂಡು ದೂರ ಹೋಗಲು ಹೇಳಿದನಲ್ಲದೇ, ಈ ನಗರವು ಇನ್ನು ಕೆಲವೇ ದಿನಗಳಲ್ಲಿ ನಾಶವಾಗುವುದಾಗಿಯೂ ಹೇಳಿದನು. ರಾಜನು ವೈರಿಗಳೊಂದಿಗೆ ಹೋರಾಡಿ ಜಯಶಾಲಿಯಾದನು; ಆಗ ಮಳೆ ಬರತೊಡಗಿತು. ಜನರು ಇದು ಬಿಕ್ಕುವಿಗೆ ರಾಜನು ಉಗುಳಿದುದರ ಪ್ರತಿಫಲವೆಂದು ಹರ್ಷಿಸಿದರು. ಆಮೇಲೆ ದೇವತೆಗಳು ಹೂ. ಹಣ ಹಾಗೂ ಚಿನ್ನದ ಮಳೆಯನ್ನು ಸುರಿಯಲಾರಂಭಿಸಿದರು. ಜನಗಳಿಗೆ ಇದರಿಂದ ಇನ್ನಷ್ಟು ಸಂತೋಷವಾಯಿತು. ಆದರೆ ಆನಂತರ ಆಯುಧಗಳ ಮಳೆ ಬೀಳಲಾರಂಭಿಸಿತು. ಇದರಿಂದ ಅವರು ಕತ್ತರಿಸಲ್ಪಟ್ಟರು. ಆನಂತರ ಕೆಂಡೆ ಮಳೆ; ಆನಂತರ ಕಲ್ಲಿನ ಮಳೆ; ಅನಂತರ ಮರಳಿನ ಮಳೆ – ಹೀಗೆ ಎಲ್ಲ ರೀತಿಯ ಮಳೆ ಸುರಿದು ಎಲ್ಲ ನಾಶವಾಯಿತು. ಬಿಕ್ಕು, ಕುಲೀನ ವ್ಯಕ್ತಿ ಹಾಗೂ ತಂದೆ – ತಾಯಿಗಳ ಸೇವೆ ಮಾಡಿದ ಕೆಲವೊಂದು ಜನಗಳು ಮಾತ್ರವೇ ಈ ವಿಪ್ಲವದಲ್ಲಿ ಬದುಕಿ ಉಳಿದರು.

ಇದೇ ರೀತಿಯ ಇನ್ನೊಂದು ಕಥಾನಕವು ಹೀಗಿದೆ : – ಒಂದಾನೊಂದು ಕಾಲದಲ್ಲಿ ನಾಳಿಕೇರ ರಾಜನು ಕಾಳಿಂಗವನ್ನು ಆಳುತ್ತಿದ್ದನು. ಆ ವೇಳೆ ಐನೂರು ಮಂದಿ ಬ್ರಾಹ್ಮಣ ಸನ್ಯಾಸಿಗಳು ಹಿಮಾಲಯದಲ್ಲಿ ವಾಸವಾಗಿದ್ದರು. ಅಲ್ಲಿ ಅವರು ಹಣ್ಣು – ಹಂಪಲಗಳನ್ನು ತಿಂದುಕೊಂಡು ನಾರುಡೆಯಲ್ಲಿ ವಾಸಿಸುತ್ತಿದ್ದರು. ಅವರು ಅಪರೂಪಕ್ಕೆ ಉಪ್ಪು ಇಲ್ಲವೇ ದವಸ – ಧಾನ್ಯಗಳಿಗೆಂದು ಹಳ್ಳಿಗಳಿಗೆ ಬರುತ್ತಿದ್ದರು. ಹಾಗೆ ಬಂದವರು ಕಾಳಿಂಗ ಪಟ್ಟಣಕ್ಕೂ ಬಂದರು. ಜನಗಳು ಅವರು ಕೇಳಿದುದನ್ನೆಲ್ಲ ಕೊಟ್ಟರು. ಬ್ರಾಹ್ಮಣರು ಅದಕ್ಕೆ ಪ್ರತಿಯಾಗಿ ‘ಬನ’ ಎಂದು ಹೇಳುತ್ತಿದ್ದರು. ಇದರಿಂದ ಜನ ಎಷ್ಟು ಪ್ರಭಾವಿತರಾದರೆಂದರೆ ಅವರನ್ನು ಅಲ್ಲೇ ಉಪವನದಲ್ಲಿ ವಾಸಮಾಡಿಕೊಂಡು ‘ಬನ’ ಎಂದು ಹೇಳುತ್ತಿರಬೇಕೆಂದು ವಿನಂತಿಸಿಕೊಂಡರು. ಪ್ರಜೆಗಳು ನಡೆದುದೆಲ್ಲವನ್ನು ವಿವರಿಸಿ ರಾಜನೂ ಅಲ್ಲಿಗೆ ಬರಬೇಕೆಂದು ವಿನಂತಿಸಿಕೊಂಡರು. ರಾಜನು ತಮ್ಮಲ್ಲಿಗೆ ಬರುತ್ತಾನೆಂಬುದನ್ನು ಅರಿತುಕೊಂಡ ಬ್ರಾಹ್ಮಣರು ತಮ್ಮಲ್ಲಿರುವ ಅತ್ಯಂತ ಬುದ್ಧಿವಂತನೊಬ್ಬನನ್ನು ರಾಜನೊಂದಿಗೆ ವ್ಯವಹರಿಸುವುದಕ್ಕೆ ಬಿಟ್ಟರು. ‘ಬನ’ ವೆನ್ನುವುದಕ್ಕೆ ಐದು ರೀತಿಯ ಪಾಪ ಮಾಡಿದವರು ಅನರ್ಹರೆಂದೂ, ಈ ಪಾಪಗಳನ್ನು ಮಾಡಿದವರು ಜಂತುಗಳಾಗಿ, ಹುಳುಗಳಾಗಿ ಅಥವಾ ಅಸುರರಾಗಿ ಜನಿಸುತ್ತಾರೆ. ಅಥವಾ ನರಕದಲ್ಲಿ ಅವರು ಸಾವಿರಾರು ವರ್ಷಗಳ ವರೆಗೆ ನರಳಬೇಕಾಗುತ್ತದೆ ಎಂದೂ ರಾಜನಿಗೂ ಅಂತಹ ಶಿಕ್ಷೆಯಾಗಲಿರುವುದು ಎಂದೂ ಆತನು ಹೇಳಿದನು. ಇದಕ್ಕೆ ಪ್ರತಿಯಾಗಿ ರಾಜನು ತಾನು ಪ್ರತೀಕಾರ ತೆಗೆದುಕೊಳ್ಳುವುದಾಗಿ ತೀರ್ಮಾನಿಸಿದನು. ಕೊನೆಯಲ್ಲಿ ಆತನು ಬ್ರಾಹ್ಮಣರನ್ನು ಭೋಜನಕ್ಕೆ ಆಹ್ವಾನಿಸಿದನು. ಆ ಬ್ರಾಹ್ಮಣರು ಊಟಕ್ಕೆ ಬರುವ ಮೊದಲೇ ಈ ರಾಜನು ತನ್ನ ಸೇವಕರಿಗೆ ಪಾತ್ರೆಗಳೆಲ್ಲೆಲ್ಲ ಮಲವನ್ನು ತುಂಬಿಸಿ ಬಾಳೆ ಎಲೆಗಳಿಂದ ಅವುಗಳನ್ನು ಮುಚ್ಚಬೇಕೆಂದು ಹೇಳಿದನು. ದಾರಿಯಲ್ಲಿ ಬರುತ್ತಿದ್ದಂತೆ ಬ್ರಾಹ್ಮಣರು ಭೋಜನ ವೇಳೆಯಲ್ಲಿ ತಾನು ಅತ್ಯಂತ ಜಾಗರೂಕವಾಗಿರಬೇಕೆಂದು ಮಾತಾಡಿಕೊಂಡರು. ಭೋಜನ ಸಿದ್ಧವಾದಾಗ ರಾಜನ ಅಪ್ಪಣೆಯ ಮೇರೆಗೆ ಪಾತ್ರೆಗಳ ಮುಚ್ಚಳಗಳನ್ನು ತೆಗೆಯಲಾಯಿತು. ಆ ದೃಶ್ಯ ಅತ್ಯಂತ ಅಸಹ್ಯವಾಗಿತ್ತು. ರಾಜನು ಅವರನ್ನು ಇನ್ನಷ್ಟು ಅವಮಾನ ಮಾಡುವುದಕ್ಕಾಗಿ, “ನಿಮಗೆ ಮನಬಂದಷ್ಟು ತಿನ್ನುವುದು, ನೀವು ಇಷ್ಟಪಡುವಷ್ಟನ್ನು ಮನೆಗೆ ಕೊಂಡುಹೋಗುವುದು, ಏಕೆಂದರೆ ಇದೆಲ್ಲವನ್ನೂ ನಿಮಗಾಗಿಯೇ ಮಾಡಿರುವುದು. ನೀವು ಜನರೆದುರು ನನ್ನನ್ನು ಅಪಮಾನ ಮಾಡಿದಿರಿ, ಅದಕ್ಕಾಗಿ ನಿಮಗೆ ಈ ಸನ್ಮಾನ” ಎಂದನು. ಹೀಗೆ ಹೇಳಿ ಆತನು ಅವರನ್ನು ತನ್ನ ಕೊಲೆಗಾರರಿಗೆ ಒಪ್ಪಿಸಿದನು. ಕೊಲೆಗಾರರ ನಿರ್ದೇಶನದಂತೆ ಬ್ರಾಹ್ಮಣರು ಪಾತ್ರೆಗಳನ್ನು ಭುಜದಲ್ಲಿರಿಸಿಕೊಂಡು ಮೆಟ್ಟಲಿಳಿಯುತ್ತಿರಲು ಮೊದಲೇ ಆ ಮೆಟ್ಟಲುಗಳು ಜಾರುತ್ತಿದ್ದುದರಿಂದ ಜಾರಿಬಿದ್ದರು. ಅಲ್ಲಿ ಅವರನ್ನು ಕ್ರೂರ ನಾಯಿಗಳು ಬೆನ್ನಟ್ಟಿದುವು. ಅವುಗಳಿಂದಲೂ ತಪ್ಪಿಸಿಕೊಂಡು ಕೆಲವರು ಪೂರ್ವಯೋಜಿತವಾದ ಹೊಂಡಗಳಲ್ಲಿ ಬಿದ್ದು ಸತ್ತರು. ಹೀಗೆ ಐನೂರು ಬ್ರಾಹ್ಮಣರೂ ಸನ್ಯಾಸಿಗಳು ಸಾವನ್ನಪ್ಪಿದರು ; ಆದರೆ ಈ ಪಾಪಕ್ಕೆ ದೇವತೆಗಳು ವಿವಿಧ ಉತ್ಪಾತಗಳನ್ನುಂಟು ಮಾಡಿ ಆ ರಾಜ್ಯವನ್ನು ನಾಶಮಾಡಿದರು.

ದಖ್ಖನ್ ಪ್ರದೇಶವು ತುಂಬಾ ಹಿಂದಿನಿಂದಲೇ ನಾಗರಿಕತೆಯ ನೆಲೆಯಾಗಿತ್ತು ಎಂಬ ಅಭಿಪ್ರಾಯವು ಇಲ್ಲೆಲ್ಲ ರೂಢವಾಗಿರುವುದನ್ನು ಕಾಣಬಹುದು. ಇದನ್ನು ಪ್ರಾಚೀನ ಬ್ರಾಹ್ಮಣ ಲೇಖಕರು ಹಾಗೂ ಬೌದ್ಧರೂ ಸರಿಸಮವಾಗಿಯೇ ತಮ್ಮ ಬರವಣಿಗೆಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಪುರಾಣಗಳಲ್ಲಿ ಮತ್ತು ಮಹಾಕಾವ್ಯಗಳಲ್ಲಿ ಭಾರತದ ಇತರ ಭಾಗಗಳಂತೆಯೇ ದಖ್ಖನ್ನಿನ ವಿವರಣೆಯು ಕಂಡುಬರುತ್ತದೆ. ಹೀಗೆ ಪೌರಾಣಿಕ ಕಾಲದಿಂದ ಹಾಗೂ ಐತಿಹಾಸಿಕ ಕಾಲದಿಂದ ದಖ್ಖನ್ನಿನ ವಿವರಣೆಗಳು ಕಂಡುಬರುತ್ತಲೇ ಇವೆ. ಹೀಗೆ ದಕ್ಷಿಣಭಾರತದ ಬಗೆಗಿನ ಈ ಎಲ್ಲ ವಿವರಣೆಗಳಿಂದ ಇಲ್ಲಿ ರಾಜನ ಆಳ್ವಿಕೆ ಇತ್ತು ಎಂಬುದು ಸ್ಪಷ್ಟವಾಗುತ್ತದೆಯಲ್ಲದೆ ಇಲ್ಲಿ ಅನೇಕ ರಾಜ್ಯಗಳೂ ಇದ್ದವು ಎಂಬುದೂ ಸ್ಪಷ್ಟವಾಗುತ್ತದೆ. ಇದಕ್ಕೆ ದಂಡಕಾರಣ್ಯವು ಅಪವಾದವಾಗಿ ಕಂಡುಬರುತ್ತದೆ.

ಮಹಾಭಾರತದಲ್ಲಿ ದಖ್ಖನ್ನಿನ ಬಗೆಗೆ ವಿವರಣೆ ಕಡಿಮೆ ಎಂದೇ ಹೇಳಬೇಕು; ಆದರೂ ವಿದರ್ಭ ರಾಜ್ಯವು ತನ್ನ ಸಿರಿಸಂಪತ್ತಿನಿಂದಾಗಿ ಹಾಗೂ ಇತರ ನಾಗರಿಕ ಗುಣಲಕ್ಷಣಗಳಿಂದ ಪ್ರಸಿದ್ಧವಾಗಿತ್ತು. ದಮಯಂತಿಯ ಸ್ವಯಂವರದ ಸಂದರ್ಭದಲ್ಲಿ ಬರುವ ಈ ವರ್ಣನೆಗಳಿಂದ ಅದು ಸ್ಪಷ್ಟವಾಗುತ್ತದೆ:

ಆ ಶುಭ ಸಂದರ್ಭ ಒದಗಿ ಬರಲಿ, ಹುಣಿಮೆಯ ದಿನ ಬರಲಿ ಆ ಕ್ಷಣ ಕೂಡಿ ಬರಲಿ;

ಭೀಮರಾಜನು ಭೂಮಿಯ ಎಲ್ಲ ರಾಜರಿಗೂ ಸ್ವಯಂವರದ ಕರೆಯೋಲೆಯನ್ನು ಕಳುಹಿಸಿದನು.

ಭೂಮಿಯ ಎಲ್ಲ ಅರಸರ ಹೃದಯದಲ್ಲಿಯೂ ಪ್ರೇಮಾಂಕುರವಾಗತೊಡಗಿತು.

ದಮಯಂತಿಯನ್ನು ಬಯಸಿ ಹಿತಶತ್ರುಗಳಾಗಿ ಎಲ್ಲ ರಾಜರೂ ಬರತೊಡಗಿದರು.

ಅವರು ಸ್ವರ್ಣಖಚಿತವಾದ ಒಡ್ಡೋಲಗ ಭವನಕ್ಕೆ ಹೊಳೆಯುವ ಮಹಾದ್ವಾರದ ಕಮಾನುಗಳ ಮೂಲಕ,

ಸಿಂಹಗಳು ಪರ್ವತವನ್ನು ಹೋಗುವಂತೆ ಪ್ರವೇಶಿಸಿದರು. ಅಲ್ಲಿ ಭೂಮಂಡಲದ ರಾಜಾಧಿರಾಜರು ಅವರವರಿಗೆ ಉಚಿತವಾದ ಆಸನಗಳಲ್ಲಿ ಮಂಡಿಸಿದ್ದರು.

ಅವರು ಪರಿಮಳ ಭರಿತವಾದ ಮಾಲೆಗಳನ್ನು ಧರಿಸಿದ್ದರು.

ಅವರ ಕಿವಿಗಳಲ್ಲಿ ಮಣಿಕುಂಡಲಗಳು ಶೋಭಿತವಾಗಿದ್ದವು.

ಅವರ ಕೈಗಳಲ್ಲಿ ಹರಿತವಾದ ಹೊಳೆಯುವ ಖಡ್ಗಗಳಿದ್ದುವು. ಕೆಲವು ಆಯುಧಗಳು ಐನೂರು ತಲೆಗಳಿರುವ ಸರ್ಪಗಳ ಹಾಗೆ ವಿಷಪೂರಿತವೂ ಕೂರಲಗುಳ್ಳವೂ ಆಗಿದ್ದುವು. ಹೊಳೆಯುವ ಮುಂಗುರುಳುಗಳು ಅಲುಗಾಡುತ್ತಿರಲು ತೀಡಿದ ಮೂಗಿನ ಹಾಗೂ ಹುಬ್ಬುಗಳುಳ್ಳ ಕಣ್ಣುಗಳ ರಾಜರು ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳ ಹಾಗೆ ಕಂಗೊಳಿಸುತ್ತಿದ್ದರು. ಇಂತಹ ರಾಜಾಧಿರಾಜರಿಂದ ಭೋಗವತಿಯ ವಿಸ್ತಾರವಾದ ಸಭಾಮಂಟಪವು ತುಂಬಿ ತುಳುಕುತ್ತಿತ್ತು.

ವ್ಯಾಘ್ರಗಳಿಂದ ಪರ್ವತದ ಗುಹೆಗಳು ತುಂಬಿರುವ ಹಾಗೆ ವ್ಯಾಘ್ರಸಮ ಅರಸರೊಪ್ಪಿದರು. ದಮಯಂತಿಯು ತನ್ನ ಅನುಪಮವಾದ ಸೌಂದರ್ಯದಿಂದ ಕಂಗೊಳಿಸುತ್ತ ಅಂತಹ ಆಸ್ಥಾನಕ್ಕೆ ಪ್ರವೇಶಿಸಿದಳು. ಆಕೆಯ ಶರೀರಿ ಕಾಂತಿಯು ಎಲ್ಲರ ಕಣ್ಣುಗಳಲ್ಲಿಯೂ ಎಲ್ಲ ಹೃದಯಗಳಲ್ಲಿಯೂ ಪ್ರತಿಫಲಿಸಿತು.

ಆಕೆಯ ಅಪ್ರತಿಮ ರೂಪವು ಗರ್ವಿಷ್ಠರಾದ ಎಲ್ಲ ರಾಜರ ಕಣ್ಮನಗಳನ್ನು ಸೆಳೆಯಿತು. ಅವರು ಆ ಕನ್ಯಾಮಣಿಯನ್ನು ನೋಡುತ್ತಿರಲಾಗಿ ಅಲ್ಲಿಯೇ ದೃಷ್ಟಿಗಳು ಕೀಲಿಸಿದವು, ಅವರು ಮೂಕ ಪ್ರೇಕ್ಷಕರಾದರು.

ರಾಮಾಯಣದ ಬಹುಭಾಗವು ದಖ್ಖನ್ನಿನಲ್ಲಿಯೇ ನಡೆಯುತ್ತದೆ. ಈ ಪ್ರಬಂಧಕ್ಕೆ ಸಂಬಂಧಿಸಿದಂತೆ ರಾಮಾಯಣದ ಸುಂದರ ಕಾಂಡದಲ್ಲಿ ಬರುವ ಈ ವಿವರಗಳನ್ನು ಗಮನಿಸಿದರೆ ಸಾಕಾಗುತ್ತದೆ. ಇಲ್ಲಿ ಸೀತಾನ್ವೇಷಣೆಗಾಗಿ ವಾನರ ಸೈನ್ಯವು ತುಂಗಭದ್ರಾ ನದಿಯ ತೀರದಿಂದ ಆರಂಭಿಸಿ, ಇಡೀ ಜಂಬೂದ್ವೀಪ ಸಹಿತವಾಗಿ ಶ್ರೀಲಂಕಾದವರೆಗೆ ಸಾಗುತ್ತದೆ. ಇಲ್ಲಿ ನಮಗೆ ತಿಳಿದುಬರುವಂತೆ ಈಗಾಗಲೇ ರಾಜ್ಯಭಾರವನ್ನು ಮಾಡುತ್ತಿರುವ ರಾಜರು ಇದ್ದರು. ಮೇಖಲರು, ಉತ್ಕಲರು, ದಶಾರ್ಣವರು, ವಿದರ್ಭರು, ಋಷಿಕರು, ಮಹಿಷಿಕರು, ಮತ್ಸ್ಯರು, ಕಾಳಿಂಗರು, ಕಾಶಿಕರು, ಆಂಧ್ರರು, ಮಂಢ್ರರು, ಚೋಳರು, ಪಾಂಡ್ಯರು ಮತ್ತು ಕೇರಳರೂ ಅಲ್ಲಿ ರಾಜ್ಯಭಾರ ಮಾಡುತ್ತಿದ್ದರು. ದಕ್ಷಿಣದ ನಗರಗಳಿಗೆ ಮುಕುಟಮಣಿಯಾಗಿ ಶೋಭಿತವಾದ ಭೋಗವತಿಯ ವರ್ಣನೆಯು ಹೀಗೆ ಅಲ್ಲಿ ಮುಂದುವರಿಯುತ್ತದೆ.

ಭೋಗವತಿಯ ಸಮೀಪದಲ್ಲಿ ಸರ್ಪಗಳ ವಾಸಸ್ಥಾನು ಕಂಗೊಳಿಸುತ್ತದೆ.
ಅದು ಹೆದ್ದಾರಿಗಳಿಂದಲೂ, ಗೋಡೆಗಳಿಂದಲೂ, ನಿರ್ಭಯವಾಗಿ
ಕಾಳಸರ್ಪಗಳ ರಕ್ಷಣೆಯಿಂದ ರಕ್ಷಿತವಾಗಿದೆ.
ತೀಕ್ಷ್ಣವಾದ ಕಣ್ಣುಗಳುಳ್ಳ ಯುವಸರ್ಪಗಳು
ಹರಿತವಾದ ತಮ್ಮ ಹಲ್ಲುಗಳನ್ನು ಮಸೆಯುತ್ತ
ವೈಭವಯುತವಾದ ಒಡ್ಡೋಲಗ ಶಾಲೆಯಲ್ಲಿ
ಕಿರೀಟ ಧಾರಿಯಾದ ವಾಸುಕಿಯಿಂದ ಪರಿಪಾಲಿತರಾಗಿದ್ದಾರೆ.
ವಾಸುಕಿಯ ನಗರವನ್ನು ಚೆನ್ನಾಗಿ ಶೋಧಿಸಿರಿ
ನಗರ, ನಗ, ಕಂದರಗಳನ್ನು ಹುಡುಕಿರಿ
ಬಯಲು, ಮರ – ಮರಗಳನ್ನುಲಕ ನಿಮ್ಮ ಎಚ್ಚರಿಕೆಯ ಕಣ್ಣುಗಳಿಂದ ಹುಡಿಕಿರಿ.

ಪುರಾಣದಲ್ಲಿಯೂ ಸಹ ರಾಮಾಯಣದಲ್ಲಿ ಹೇಳಲಾದ ಜನಗಳ ವಿವರಣೆಯು ಬರುತ್ತದೆ. ಹಾಗೆಯೇ ದಕ್ಷಿಣ ಭಾರತದಲ್ಲಿ ಅಂದು ಆಳುತ್ತಿದ್ದ ಇತರ ರಾಜ್ಯಗಳನ್ನೂ ಅದು ಹೆಸರಿಸುತ್ತದೆ. ದಖ್ಖನ್ನಿನಲ್ಲಿ ಈ ಜನಗಳು ಪ್ರಾಚೀನ ಕಾಲದಿಂದಲೇ ವಾಸಮಾಡುತ್ತಿದ್ದರು. ಕಾಳಿಂಗರು ಕಳಿಂಗದಿಂದ ಬಂದವರಾಗಿದ್ದು, ಅವರು ಬಾಲಿಯ ಐದು ಜನ ಮಕ್ಕಳಲ್ಲಿ ಒಂದು ಶಾಖೆಯಾಗಿದ್ದವರು. ಅದು ಚಂದ್ರವಂಶದ ಹತ್ತೊಂಬತ್ತನೆಯ ಶಾಖೆಯಾಗಿದೆ.

ಕಾಳಿದಾಸನ ‘ರಘುವಂಶ’ ಕಾವ್ಯದಲ್ಲಿ, ರಘು ದಿಗ್ವಿಜಯದ ಸಲುವಾಗಿ ಇಡೀ ಭಾರತದ ಮೇರೆಯನ್ನು ಸುತ್ತಾಡಿದುದರ ವಿವರಣೆಯು ಬರುತ್ತದೆ. ಆಗ ಪ್ರಾಸಂಗಿಕವಾಗಿ ಅಲ್ಲಿ ಅಸ್ತಿತ್ವದಲ್ಲಿದ್ದ ರಾಜ್ಯಗಳ ವಿವರವೂ ಆ ಕಾವ್ಯದಲ್ಲಿ ಬರುತ್ತದೆ.

ಅಯೋಧ್ಯೆಯಿಂದ ಆರಂಭಿಸಿ, ದಂಡನಾಯಕನ ಸೈನ್ಯವೊಂದು ಸಮುದ್ರಾಭಿಮುಖವಾಗಿ ಪೂರ್ವಕ್ಕೆ ಸಾಗುತ್ತದೆ. ಆತನು ಈ ಭಾಗಗಳನ್ನೆಲ್ಲ ಗೆದ್ದುಕೊಂಡ ಮೇಲೆ ಪೂರ್ವ ಕರಾವಳಿಯ ಗುಂಟ ಸಾಗಿ ದಕ್ಷಿಣಕ್ಕೆ ಬರುತ್ತಾನೆ. ಹಾಗೆ ಬರುವಾಗ ಒರಿಸ್ಸಾ (ಉತ್ಕಲ), ಕಾಳಿಂಗ, ಚೋಳ ಮತ್ತು ಪಾಂಡ್ಯ ರಾಜ್ಯಗಳನ್ನು ಹಾದುಬರುತ್ತಾನೆ. ಮತ್ತೆ ಉತ್ತರಾಭಿಮುಖವಾಗಿ ತಿರುಗಿ ಪಶ್ಚಿಮ ಕರಾವಳಿ ಗುಂಟ ಸಾಗಿ ಅಲ್ಲಿನ ಸಾಮ್ರಾಜ್ಯಗಳನ್ನು – ಕೇರಳ, ಕೊಡಗು, ತ್ರಿಕೂಟ ಗೆದ್ದು, ಪಾರಶಿಕ ಮತ್ತು ಯವನರನ್ನು ಸೋಲಿಸಿ ಸಿಂಧೂನದಿಯ ದಂಡೆಯಲ್ಲಿ ಸಾಗಿ ಹೂಣರನ್ನು ಸೋಲಿಸುತ್ತಾನೆ. ಸಿಂಧೂನದಿಯನ್ನು ಉತ್ತರಿಸುವಲ್ಲಿ ಆತನು ಕಾಂಭೋಜ ಸಾಮ್ರಾಜ್ಯವನ್ನು ಪ್ರವೇಶಿಸುತ್ತಾನೆ. ಆ ಸಾಮ್ರಾಜ್ಯವನ್ನು ವಶಪಡಿಸಿ ಕೊಂಡಾದಮೇಲೆ ಹಿಮಾಲಯ ಪರ್ವತಗಳತ್ತ ಸಾಗಿ ಅಲ್ಲಿಯ ಕಿರಾತಕರನ್ನು ಮತ್ತು ಉತ್ಸವ ಸಂಕೇತರನ್ನು ಸೋಲಿಸುತ್ತಾನೆ. ಮುಂದೆ ಆತ ಬ್ರಹ್ಮಪುತ್ರದ ಕಣಿವೆಗುಂಟ ಸಾಗಿ, ಪ್ರಾಗ್ಜ್ಯೋತಿಷವನ್ನು ಗೆಲ್ಲುತ್ತಾನೆ. ಅಂತಿಮವಾಗಿ ಕಾಮಪುರದ ಮೂಲಕ ಆತನು ತನ್ನ ಸಾಮ್ರಾಜ್ಯಕ್ಕೆ ಬರುತ್ತಾನೆ.

ರಘುವಂಶದಲ್ಲಿ ಇನ್ನೊಂದು ಕಡೆ ಇದಕ್ಕೆ ಸಂವಾದಿಯಾದ ಇನ್ನೊಂದು ವಿವರವು ಹೀಗೆ ಬರುತ್ತದೆ : ಅದು ಇಂದುಮತಿಯ ಸ್ವಯಂವರಕ್ಕೆ ಸಂಬಂಧಿಸಿದ ವಿವರವಾಗಿದೆ. ಇಂದುಮತಿಯು ವಿದರ್ಭರಾಜನ ಮಗಳು. ವಾವೆಯಲ್ಲಿ ರಾಮನ ಅಜ್ಜಿ. ಅಂತೆಯೇ ಅದು ರಘುವಿನ ದಿಗ್ವಿಜಯದ ಕತೆಯೂ ಆಗಿದೆ. ಮಗಧ, ಅಂಗ, ಮಾಳವ, ಅನೂಪ ಮತ್ತು ಶೂರಸೇನ ಮೊದಲಾದ ರಾಜರನ್ನು ಆಕೆ ತಿರಸ್ಕರಿಸಿದಳು. ಅವಳು ಅವರೆಲ್ಲರನ್ನು ತಿರಸ್ಕರಿಸಿದಳು. ಆಮೇಲೆ ಅವನನ್ನು ಅನುಸರಿಸಿ ಕಾಳಿಂಗ ರಾಜನನ್ನು ತೋರಿಸಲಾಯಿತು. ಆ ರಾಜಾ ಮಹೇಂದ್ರವರ್ಮನ ಬಾಹುಗಳಲ್ಲಿ ಸಮುದ್ರ ಅಲೆಗಳ ಮೊರೆತದ ಹಾಗಿರುವ ದನುಷ್ಠಂಕಾರವನ್ನು ಮಾಡುವ ಧನುಸ್ಸಿನ ಅಚ್ಚುಗಳು ಮೂಡಿದ್ದವು. ಅವನನ್ನು ಇಂದುಮತಿಯು ತಿರಸ್ಕರಿಸಿದಳು. ಆಮೇಲೆ ಪಾಂಡ್ಯ ರಾಜನ ಸರದಿ. ಆತನ ಕೊರಳಿನಲ್ಲಿ ಹಳದಿ ಗಂಧದ ಎಲೆಗಳ ಮಾಲೆಗಳು ಶೋಭಿಸುತ್ತಿದ್ದುವು. ಆತನು ಸೂರ್ಯೋದಯದಲ್ಲಿ ಕಂಗೊಳಿಸುವ ಪರ್ವತಗಳ ರಾಜನಾದ ಹಿಮವಂತನ ಹಾಗೆ ಕಾಣಿಸುತ್ತಿದ್ದಳು. ಆದರೆ ರಾಜಕುಮಾರಿಯು ಆತನನ್ನು ಪರಿಗಣಿಸಲಿಲ್ಲ. ಆಕೆಯು ರಘುವಿನ ಮಗನ ಬಳಿಗೆ ಬಂದಾಗ ಆತನು ಅನುಮಾನಗೊಂಡನು. ಆದರೆ ಅದು ಆಕೆಯ ಬಲಗೈಯ ಚಲನೆಯಿಂದ ದೂರವಾಯಿತು…… ಹೀಗೆ ರಘುವಿನ ಮಗನಾದ ಅರ್ಜುನನನ್ನು ಇಂದುಮತಿಯು ವರಿಸಿದಳು. ರಾಜ ವಧೂ – ವರರು ವಿದರ್ಭ ನಗರಿಯ ಹೆದ್ದಾರಿಗಳಲ್ಲಿ ನಡೆತಂದರು. ಆಗ ನಗರದ ಬೀದಿಗಳನ್ನು ತಳಿರು – ತೋರಣಗಳಿಂದ ಅಲಂಕರಿಸಲಾಗಿತ್ತು. ಯುದ್ಧೋಚಿತವಾದ ಧ್ವಜಗಳ ಹಾರಾಡುವಿಕೆಯಿಂದ ನಗರದ ಬೀದಿಗಳಲ್ಲಿ ನೆರಳುಂಟಾಗಿತ್ತು. ಹೆಂಗಸರು ತಮ್ಮ ಮನೆಕೆಲಸಗಳನ್ನು ಬಿಟ್ಟು ಕಿಟಕಿಗಳ ಮರೆಯಲ್ಲಿ ನಿಂತಿದ್ದರು. ಅವರ ಕಣ್ಣುಗಳು ಭಾವುಕವಾಗಿದ್ದವು. ವಿದರ್ಭರಾಜನಾದ ಭೋಜರಾಜನು ಅಜಮಹಾರಾಜನನ್ನು ಆನೆಯಿಂದಿಳಿಸಿ, ಅರಮನೆಗೆ ಕರೆದುಕೊಂಡು ಹೋದನು. ಅವನನ್ನು ಉಚಿತವಾದ ಆಸನದಲ್ಲಿ ಕುಳ್ಳಿರಿಸಿ ರತ್ನಖಚಿತವಾದ ಕಿರೀಟವನ್ನು ತಲೆಯ ಮೇಲಿರಿಸಿದನು. ಆರ್ಘ್ಯ – ಮಧುಪರ್ಕಗಳನ್ನಿತ್ತನು. ಒಂದು ಜತೆ ರೇಶ್ಮೆ ವಸ್ತ್ರಗಳನ್ನು ಧರಿಸಿಕೊಂಡು ಹುಣ್ಣಿಮೆಯಂದು ಅಲೆಗಳು ಸಮುದ್ರ ತೀರಕ್ಕೆ ಆಕರ್ಷಿತವಾಗುವಂತೆ ಅಜಮಹಾರಾಜನು ಇಂದುಮತಿಯ ಬಳಿಗೆ ಹೋದನು. ಆಮೇಲೆ ಭೋಜರಾಜನ ಪುರೋಹಿತನು ಅಗ್ನಿಗೆ ಹವ್ಯಕವ್ಯಗಳನ್ನು ಅರ್ಪಿಸಿ, ಪಾಣಿಗ್ರಹಣವನ್ನು ನೆರವೇರಿಸಿದನು. ವಿವಾಹಮಹೋತ್ಸವದ ಆನಂತರ ಮೂರು ದಿನಗಳವರೆಗೆ ಭೋಜರಾಜನು ಅಜನನ್ನು ಇರಿಸಿಕೊಂಡು ಆಮೇಲೆ ಅವನ ಸಾಮ್ರಾಜ್ಯಕ್ಕೆ ಕಳುಹಿಸಿಕೊಟ್ಟನು. ಅಜನನ್ನು ಇರಿಸಿಕೊಂಡು ಆಮೇಲೆ ಅವನ ಸಾಮ್ರಾಜ್ಯಕ್ಕೆ ಕಳುಹಿಸಿಕೊಟ್ಟನು. ಅಜನನ್ನು ನೋಡುತ್ತಲೇ ತಿರಸ್ಕೃತರಾದ ರಾಜರು ವಧುವನ್ನು ಅಪಹರಿಸಲು ಅವನ ಮೇಲೆ ಮುಗಿಬಿದ್ದು ವೀರಾವೇಶದಿಂದ ಹೋರಾಡಿದರು. ಪುಂಖಾನುಪುಂಖವಾಗಿ ಬಾಣ ಪ್ರಯೋಗ ಮಾಡಿದ ಅಜನು ಅವರೆಲ್ಲರನ್ನು ಬೆನ್ನಟ್ಟಿದನು. ಹೀಗೆ ಆತನು ನವವಧುವನ್ನು ಸುರಕ್ಷಿತವಾಗಿ ಕೋಸಲಕ್ಕೆ ಕರೆದೊಯ್ದನು.

ಇಲ್ಲೀಗ ಒಂದು ಪ್ರಶ್ನೆ ಬರಬಹುದು. ಪ್ರಾಚೀನ ದಖ್ಖನ್ ಭೂಪ್ರದೇಶವು ದಂಡಕಾರಣ್ಯದ ಭೂಭಾಗವೇ ಎಂದು ತಿಳಿಯುವುದಾದರೂ ಹೇಗೆ? ಎಂಬುದೇ ಆ ಪ್ರಶ್ನೆ. ಆದರೆ ಇಲ್ಲಿ ಅಂತಹ ಸಮಸ್ಯೆಯೇನೂ ಇಲ್ಲ. ಇಲ್ಲಿ ಸಮಸ್ಯೆಯಿರುವುದು ದಂಡಕಾರಣ್ಯವು ದಖ್ಖನ್ನಿನಲ್ಲೆಲ್ಲ ಪಸರಿಸಿತ್ತು ಎಂದು ತಿಳಿಯುವುದರಲ್ಲಿಯೇ ರಾಮಾಯಣದಲ್ಲಿ ಬರುವ ದಂಡಕಾರಣ್ಯದ ವರ್ಣನೆಯು ಕೇವಲ ಕವಿಕಲ್ಪನೆಯ ಹುಮಸ್ಸಿನಿಂದ ಮಾತ್ರವೇ ಅಲ್ಲದೇ, ವಾಸ್ತವ ಚಿತ್ರಣದ ಅರಿವಿನ ಹಿನ್ನಲೆಯಲ್ಲಿಯೂ ಮಾಡಿರುವುದಾಗಿದೆ ಎಂಬುದು ಅಲ್ಲಿಯ ವಿವರಗಳಿಂದ ತಿಳಿದುಬರುತ್ತದೆ. ಕವಿಯು ರಾಮನು ದಂಡಕಾರಣ್ಯದಲ್ಲಿ ಸಂಚರಿಸುವುದನ್ನು ವಿವರ ವಿವರವಾಗಿ ನಮಗೆ ವರ್ಣಿಸುತ್ತಾನೆ. ಅರಣ್ಯವು ಒಳಗೊಂಡಿದ್ದ ದಖನ್ನಿನ ಭಾಗವನ್ನು ವಿದರ್ಭದವರೂ ಆಳುತ್ತಿದ್ದರು. ಅಲ್ಲಿಗೆಲ್ಲ ಸೀತೆಯನ್ನು ಅರಸುವುದಕ್ಕೆ ವಾನರರನ್ನು ಕಳುಹಿಸಲಾಯಿತು. ಅದಲ್ಲದೆ, ದಂಡಕಾರಣ್ಯಕ್ಕೆ ಸಂಬಂಧಿಸಿದ ಮುಂದಿನ ವರ್ಣನೆಗಳ ಮೂಲಕ ಅದು ದಖ್ಖನ್ನಿನ ಕೆಲವೇ ಭಾಗಕ್ಕೆ ಮಾತ್ರವೇ ಸೀಮಿತವಾಗಿತ್ತು ಎಂಬುದಾಗಿಯೂ ತಿಳಿದುಬರುತ್ತದೆ. ಅಲ್ಲದೆ ಈಗ ಹೇಳಿದ ರಾಜ್ಯಗಳಿಂದ ಅದು ಸ್ವಲ್ಪಮಟ್ಟಿಗೆ ದೂರದಲ್ಲಿಯೇ ಇತ್ತು. ದಕ್ಷಿಣದಲ್ಲಿ ಹರಿಯುವ ಅನೇಕ ನದಿಗಳನ್ನು ವರ್ಣಿಸಿದ ಬಳಿಕ ಮುಂದಿನ ವಿವರವು ಹೀಗೆ ಬರುತ್ತದೆ : –

ವಿದರ್ಭಾನೃಷಿಕಾಂಶ್ಚೈವ ರಮ್ಯಾನ್ ಮಾಹಿಷಕಾನಪಿ
ತಥಾಮತ್ಸ್ಯಕಾಳಿಂಗಾಶ್ಚ ಕಾಶಿಕಾಂಶ್ಚ ಸಮಂತತಃ
ಅನ್ವಿಶ್ಯ ದಂಡಕಾರಣ್ಯಂ ಸಪರ್ವತನದೀ ಗುಹಮ್
ನದೀಂ ಗೋದಾವರಿಶ್ಚೈವ ಸರ್ವಮೇವಾನುಪಶ್ಯತ
ತಥೈವಾಂಧ್ರಾಂಶ್ಚ ಪುಂಡ್ರಾಶ್ಚ ಚೋಳಪಾಂಡ್ಯನ್ ಸಕೇರಳಾನ್

ಹೀಗೆ ದಂಡಕಾರಣ್ಯವು ಬೇರೆ ಬೇರೆ ರಾಜ್ಯಗಳಿಂದ ಬೇರ್ಪಟ್ಟಿರುವುದಾಗಿ, ಆ ರಾಜ್ಯಗಳೂ ಪರಸ್ಪರ ದೂರ – ದೂರದಲ್ಲಿಯೇ ಇದ್ದವು. ದಂಡಕಾರಣ್ಯಕ್ಕೆ ಇನ್ನಷ್ಟು ದೂರವಾಗಿದ್ದ ರಾಜ್ಯಗಳನ್ನು ಇನ್ನೊಂದು ವರ್ಗದ ರಾಜ್ಯಗಳನ್ನಾಗಿ ಪರಿಗಣಿಸಲಾಗಿತ್ತು.

ಕಾಳಿದಾಸನ ‘ರಘುವಂಶ’ ಕಾವ್ಯದಲ್ಲಿ ಭಾರತದ ಭೌಗೋಳಿಕ ವಿವರಗಳು ದಟ್ಟವಾಗಿ ಬರುತ್ತವೆ. ರಘುವಿನ ಮೊಮ್ಮಕ್ಕಳು ವನವಾಸಕ್ಕೆ ದಂಡಕಾರಣ್ಯಕ್ಕೆ ಬರುವಾಗಿನ ವಿವರಗಳು ತುಂಬ ಮನೋಜ್ಞವಾಗಿವೆ. ಆತನು ದಖ್ಖನ್ನಿನ ಬಲಿಷ್ಠ ಸಾಮ್ರಾಜ್ಯಗಳನ್ನು ವಿಶೇಷವಾಗಿ ವರ್ಣಿಸುತ್ತಾನಾದರೂ, ರಘು ಮತ್ತು ಇಂದುಮತಿಯರು ವಿಜಯೋತ್ಸವದೊಂದಿಗೆ ಬರುವಾಗ ಅಲ್ಲಿ ದಂಡಕಾರಣ್ಯದ ವಿವರವು ಪ್ರಾಸಂಗಿಕವಾಗಿ ಬರುತ್ತದೆ ; ಅವರು ಹದಿನಾಲ್ಕು ವರ್ಷದ ವನವಾಸದಲ್ಲಿ ಹದಿಮೂರು ವರ್ಷವೂ ಅಲ್ಲಿದ್ದುದಾಗಿ ವರ್ಣಿತವಾಗಿದೆ. ಆ ಸಮಯದಲ್ಲಿ ದಂಡಕಾರಣ್ಯದ ಅಕ್ಕಪಕ್ಕದಲ್ಲಿರುವ ಯಾವ ರಾಜ್ಯಗಳಿಗೂ ಅವರು ಪ್ರವೇಶಿಸಿದ ವಿವರಗಳಿಲ್ಲ.

ಈ ಮೇಲಿನ ಎಲ್ಲ ವಿವರಗಳಿಂದ ತಿಳಿದು ಬರುವಂತೆ, ದಂಡಕಾರಣ್ಯವು ಅದರ ಮೇರೆಗಳು ಏನೇ ಇರಲಿ, ಅವು ಅಸ್ತಿತ್ವದಲ್ಲಿ ಇರಲಿ ಇಲ್ಲದಿರಲಿ ರಘು, ಅಜ, ದಶರಥ ಮತ್ತು ರಾಮರ ಆಳ್ವಿಕೆಯ ಕಾಲದಲ್ಲಿ ಇಡೀ ದಖ್ಖನ್ನಿನ ಭೂಪ್ರದೇಶವನ್ನು ಅದು ಆವರಿಸಿರಲಿಲ್ಲ. ಹಾಗೆಯೇ ಈ ಹಿಂದೆಯಾಗಲೀ ಅಥವ ಆ ವರ್ತಮಾನ ಕಾಲದಲ್ಲಾಗಲೀ ಅಷ್ಟೆಲ್ಲ ರಾಜ್ಯಗಳು ಸುತ್ತುಮುತ್ತು ಇರುವಾಗ ಅದು ಹಾಗೆ ಪಸರಿಸುವುದಕ್ಕೆ ಸಾಧ್ಯವೂ ಇಲ್ಲವೆಂಬುದನ್ನೂ ಗಮನಿಸಬೇಕು.

ಇದೀಗ ಅಲ್ಲಲ್ಲಿ ಉಲ್ಲೇಖಿಸಿದ ಬೇರೆ ಬೇರೆ ವಿವರಗಳಿಂದ ಈ ಪ್ರಬಂಧಕ್ಕೆ ಅನೇಕ ಆಧಾರಗಳು ಲಭ್ಯವಾದವು. ಹಿಂದೂ ಮತ್ತು ಬೌದ್ಧ ಮತೀಯ ಪ್ರಾಚೀನ ಇತಿಹಾಸ ಗ್ರಂಥಗಳು ಮತ್ತು ಪುರಾಣಗಳಲ್ಲಿ ಒಂದು ವಿಷಯದ ಬಗೆಗೆ ಒಮ್ಮತಾಭಿಪ್ರಾಯವಿದೆ. ಅದೇನೆಂದರೆ ತುಂಬಾ ಪ್ರಾಚೀನ ಕಾಲದಿಂದಲೇ ದಖ್ಖನ್ನಿನಲ್ಲಿ ಒಂದು ಸುವ್ಯವಸ್ಥಿತವಾದ ಸಾಮ್ರಾಜ್ಯವು ನೆಲೆಗೊಂಡಿತ್ತು. ಅದು ರಘು ಮಹಾರಾಜನ ಆಳ್ವಿಕೆಗೆ ಮೊದಲೆಂಬುದರ ಬಗೆಗಂತೂ ಒಂದು ಜನಜನಿತ ಅಭಿಪ್ರಾಯವಾಗಿ ಈ ಗ್ರಂಥಗಳಲ್ಲಿ ಅಧಿಕೃತವಾಗಿ ವರ್ಣಿತವಾಗಿದೆ. ಆ ಸಾಮ್ರಾಜ್ಯವು ವಂಶಪಾರಂಪರ್ಯವಾಗಿತ್ತು ಮತ್ತು ಸ್ವಯಂಪೂರ್ಣವಾಗಿತ್ತು. ಅಂದರೆ, ರಾಜ – ರಾಜರ ನಡುವೆಯೇ ವೈವಾಹಿಕ ಸಂಬಂಧಗಳು ನೆರವೇರುತ್ತಿದ್ದುದರಿಂದ ಅಲ್ಲಿ ವರ್ಣಸಂಕರಕ್ಕೆ ಆಸ್ಪದವಿರಲಿಲ್ಲ. ಹಾಗೆಯೇ ರಾಜಕನ್ಯೆಯರು – ಕೆಲವೊಂದು ನಿದರ್ಶನಗಳಲ್ಲಾದರೂ – ಇತರ ರಾಜ ಮನೆತನದ ರಾಜಕುಮಾರರನ್ನು ಸ್ವಯಂವರದ ಮೂಲಕ ಮದುವೆಯಾಗುತ್ತಿದ್ದರು. ಆ ಕಾಲದಲ್ಲಿ ದಖ್ಖನ್ ಸಾಮ್ರಾಜ್ಯವು ಪೂರ್ವಭಾಗದಲ್ಲಿ ಒರಿಸ್ಸಾ, ಕಳಿಂಗ, ಚೋಳ ಮತ್ತು ಪಾಂಡ್ಯ ರಾಜ್ಯಗಳನ್ನು ಒಳಗೊಂಡಿತ್ತು. ಹಾಗೆಯೇ ಪಶ್ಚಿಮದಲ್ಲಿ ವಿದರ್ಭ, ಋಷಿಕ, ಮತ್ಸ್ಯ, ಕೌಶಿಕ, ಆಂಧ್ರ, ಪುಂಡ್ರ, ಮಾಹಿಷಕ, ಕೇರಳ ಮೊದಲಾದ ಸಾಮ್ರಾಜ್ಯಗಳಿದ್ದುವು. ಕಳಿಂಗ ಸಾಮ್ರಾಜ್ಯವು ಅನೇಕ ಪ್ರಾಂತಗಳಾಗಿ ವಿಂಗಡನೆಯಾಗಿತ್ತಲ್ಲದೆ ಅವುಗಳಲ್ಲಿ ಕೆಲವೊಂದು ಪ್ರಾಂತಗಳು ಸಾಮ್ರಾಜ್ಯದ ವಿರುದ್ಧ ದಂಗೆಯೇಳುತ್ತಲೂ ಇದ್ದುವು. ಆದರೆ ರಾಜನಲ್ಲಿ ಅಂತಹ ದಂಗೆಗಳನ್ನು ದುರ್ಬಲಗೊಳಿಸುವಷ್ಟು ಸಾಮರ್ಥ್ಯವುಳ್ಳ ಸೈನ್ಯ ಸಂಗ್ರಹವಿತ್ತು. ಈ ಸಾಮ್ರಾಜ್ಯದಲ್ಲಿ ನಗರಗಳು, ಪಟ್ಟಣಗಳು, ಗ್ರಾಮಗಳು, ದುರ್ಗಗಳು, ಗೋಪುರಗಳು ಇದ್ದುವು. ಹಾಗೆಯೇ ಕೆಲವೊಂದು ನಗರಗಳಲ್ಲಿ ತುಂಬ ವಿಶಾಲವಾದ ಹೆದ್ದಾರಿಗಳು ಇದ್ದುವು. ಕೆಲವೊಂದು ನಗರಗಳ ಹೆದ್ದಾರಿಗಳಿಗೆ ಆನೆ ಬಾಗಿಲುಗಳು ಮತ್ತು ಗೋಡೆಗಳಿದ್ದುವು. ಹಾಗೆಯೇ ರಾಜಧಾನಿಯ ನಗರಗಳಲ್ಲಿ ವಿಶಾಲವಾದ ಸ್ಥಳಗಳಿದ್ದು ಅವುಗಳ ಮೇಲಂತಸ್ತಿನಲ್ಲಿ ಸುಮಾರು ಐನೂರು ಜನಕ್ಕೆ ಸಾಕಾಗುವಷ್ಟು ದೊಡ್ಡದಾದ ಭೋಜನ ಶಾಲೆಗಳಿದ್ದುವು. ವಿಶಾಲವಾದ ಉಗ್ರಾಣಗಳಿದ್ದುವಾಗಿ ಅವುಗಳಿಗೆ ಚಿನ್ನದ ಕಂಬಗಳಿರುತ್ತಿದ್ದುವು. ಅವುಗಳಿಗೆ ನೆಲಮಾಳಿಗೆಯಿಂದ ಬರಲು ರತ್ನಖಚಿತವಾದ ಮೆಟ್ಟಿಲುಗಳಿದ್ದುವು; ರಾಜಮಂದಿರಗಳು ಮತ್ತು ನಾಗರಿಕರ ಮನೆಗಳಿಗೆ ರಾಜಬೀದಿಗೆ ಮುಖಮಾಡಿ ಕಿಟಕಿಗಳಿದ್ದುವು; ಆ ರಾಜಧಾನಿಯಲ್ಲಿ ಕುಲೀನರ ಸಂಸಾರಗಳಿದ್ದುವು; ಕೆಲವೊಂದು ಕುಲೀನ ವ್ಯಕ್ತಿಗಳು ಆಸ್ಥಾನದಲ್ಲಿ ಸ್ಥಾನಮಾನಗಳನ್ನು ಹೊಂದಿದವರಾಗಿದ್ದು, ಅವರ ಇಷ್ಟಾನುಸಾರ ಅವುಗಳಲ್ಲಿ ಮುಂದುವರಿಯಬಹುದಾಗಿತ್ತು. ಇಲ್ಲವೇ ಬಿಡಬಹುದಿತ್ತು; ಹಾಗೆಯೇ ಆಸ್ಥಾನದಲ್ಲಿ ಪುರೋಹಿತನು ಬ್ರಾಹ್ಮಣನೇ ಆಗಿದ್ದು, ಅವನು ರಾಜನ ಇಷ್ಟಾನುಸಾರ ನೇಮಕಗೊಳ್ಳುತ್ತಿದ್ದನು. ಅಂದರೆ, ಯಾವುದೇ ಬ್ರಾಹ್ಮಣನನ್ನು ರಾಜನು ತನಗೆ ಸರಿಕಂಡಾಗ ಪುರೋಹಿತವಾಗಿ ನೇಮಿಸಿಕೊಳ್ಳಬಹುದಿತ್ತು, ಇಲ್ಲವೇ ಕೈಬಿಡಬಹುದಾಗಿತ್ತು. ಆತನು ರಾಜರ ಮದುವೆಗಳನ್ನು ಮಾಡಿಸುವವನಾಗಿದ್ದನು. ಅವನು ರಾಜನಿಗೆ ಸಲಹೆ – ಸೂಚನೆಗಳನ್ನು ನೀಡುತ್ತಿದ್ದನು; ಹಾಗೆಯೇ ಬ್ರಾಹ್ಮಣರನ್ನು ರಾಜನು ಬೇಹುಗಾರರನ್ನಾಗಿ ನೇಮಿಸುತ್ತಿದ್ದನು. ಆ ಆಸ್ಥಾನದಲ್ಲಿ ಉತ್ತಮವಾದ ಸ್ಥಾನಮಾನಗಳನ್ನು ಹೊಂದಿದ್ದ ಅನೇಕ ಮಂದಿ ನರ್ತಕಿಯರಿದ್ದರು. ಅವರ ಸೇವೆಗೆ ಅನೇಕ ಮಂದಿ ಸೇವಕರೂ ಇರುತ್ತಿದ್ದರು. ಅವರು ಕಾವಲುಗಾರರು, ಭಟರು ಹಾಗೂ ಕಾವಲು ನಾಯಿಗಳಿಂದ ರಕ್ಷಿತರಾಗಿರುತ್ತಿದ್ದರು. ರಾಜನಲ್ಲಿ ಬಲಶಾಲಿಗಳಾದ ಸೈನಿಕರಿದ್ದು ಅವರಲ್ಲಿ ವಿವಿಧ ರೀತಿಯ ಆಯುಧಗಳಿರುತ್ತಿದ್ದುವು. ಅದರಲ್ಲಿಯೂ ಕಳಿಂಗರಾಜನು ಆನೆಗಳನ್ನು ಪಳಗಿಸಿ ಯುದ್ಧಕ್ಕೆ ಬಿಡುವುದರಲ್ಲಿ ನಿಪುಣನಾಗಿದ್ದನು. ನಗರವು ನಗರ ರಕ್ಷಕ ಭಟರ ತಂಡಗಳಿಂದ ಸುರಕ್ಷಿತವಾಗಿರುತ್ತಿತ್ತು. ರಾಜ್ಯದ ನಾಗರಿಕರು ಹೊಲಗದ್ದೆಗಳನ್ನು ಮಾಡುತ್ತಿದ್ದರು. ಅವರು ವೀಳ್ಯದೆಲೆ, ತೆಂಗು, ಬಾಳೆ, ದ್ರಾಕ್ಷಿ ಹಾಗೂ ಸಾಂಬಾರ ಪದಾರ್ಥಗಳನ್ನು ಬೆಳೆಯುತ್ತಿದ್ದರು. ಅವರು ಬರಗಾಲ ಮತ್ತು ದುರ್ಭಿಕ್ಷದಿಂದ ನರಳುತ್ತಿದ್ದರು. ಕೆಲವು ಪ್ರಜೆಗಳು ವಾಣಿಜ್ಯ – ವ್ಯವಹಾರಗಳಲ್ಲಿ ತೊಡಗಿದ್ದರು. ಉಪ್ಪು, ಸಾಂಬಾರ ಮೊದಲಾದ ಅಗತ್ಯ ವಸ್ತುಗಳು ಹಳ್ಳಿಯ ಅಂಗಡಿಗಳಲ್ಲಿ ದೊರೆಯುತ್ತಿದ್ದುವು. ಅವುಗಳನ್ನು ಕೊಂಡುಕೊಳ್ಳಲು ಅವರು ಹಣವನ್ನು ಬಳಸುತ್ತಿದ್ದರು. ಅವರು ಬೇಯಿಸಿದ ಆಹಾರಗಳನ್ನು ಪಾತ್ರೆಗಳಲ್ಲಿ ಬಡಿಸುತ್ತಿದ್ದರಲ್ಲದೆ ಬಾಳೆಯೆಲೆಯಲ್ಲಿ ಊಟ ಮಾಡುತ್ತಿದ್ದರು. ಅವರು ಅಡುಗೆಯಲ್ಲಿ ಸಾಂಬಾರ ಪದಾರ್ಥಗಳನ್ನು ಬಳಸುತ್ತಿದ್ದರು. ಹಾಗೆಯೇ ದ್ರಾ‌ಕ್ಷಿ ಮತ್ತು ತೆಂಗಿನ ಮಧ್ಯವನ್ನು ಅವರು ಕುಡಿಯುತ್ತಿದ್ದರು. ಅವರು ಮನೆ ಕಟ್ಟುವುದರಲ್ಲಿ ಮತ್ತು ಗೃಹಾಲಂಕಾರಗಳಲ್ಲಿ ನಿಪುಣರಾಗಿದ್ದರು. ಅಂತೆಯೇ ಆಭರಣ ತಯಾರಿ, ನಾಣ್ಯ ಟಂಕಿಸುವುದು, ಲೋಹದ ಕಲೆ ಹಾಗೂ ಇತರ ಕಲೆಗಳನ್ನು ಬಲ್ಲವರಾಗಿದ್ದರು. ಅವರಿಗೆ ಆನೆಗಳನ್ನು ಪಳಗಿಸಿ ಯುದ್ಧ ಮತ್ತು ನಿತ್ಯೋಪಯೋಗಿ ಕೆಲಸಗಳಲ್ಲಿ ಬಳಸಿಕೊಳ್ಳುವುದಕ್ಕೆ ತಿಳಿದಿತ್ತು. ಅವರು ತಮ್ಮ ವಿರಾಮದ ವೇಳೆಯಲ್ಲಿ ಧಾರ್ಮಿಕ ಪ್ರವಚನ ಮತ್ತು ನಾಟಕಾದಿ ಕಲೆಗಳಲ್ಲಿ ಬಹಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗಾಗ ರಾಜರೂ ಸಹ ಅಂತಹ ಮನೋರಂಜನೆ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದುದೂ ಉಂಟು. ಅವರಿಗೆ ಅರಮನೆಯ ಆಭರಣಗಳ ಸಂಪತ್ತು ಕಲೆಗಳಿಗಾಗಿ ಲಭ್ಯವಾಗುತ್ತಿತ್ತು. ಅವರು ಪರಸ್ಪರರನ್ನು ತಮ್ಮ ಮನೆಗಳಿಗೆ ಬರಮಾಡಿಕೊಳ್ಳುತ್ತಿದ್ದರು. ಮದುವೆಗಳ ಸಂದರ್ಭದಲ್ಲಿ ದಾರಿಯಲ್ಲಿ ಮೆರವಣಿಗೆಗಳು ನೆರವೇರುತ್ತಿದ್ದವು. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಅವರು ಸಾರ್ವಜನಿಕ ಹೆದ್ದಾರಿಗಳನ್ನು ಶೃಂಗರಿಸುತ್ತಿದ್ದರು. ಅವರು ಬೀದಿಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ ಸೈನಿಕ ಧ್ವಜಗಳನ್ನು ನೆಡುತ್ತಿದ್ದುದರಿಂದ ಅದು ನೆರಳಿಗೂ ಉಪಯುಕ್ತವಾಗುತ್ತಿತ್ತು. ಅವರು ತಮ್ಮನ್ನು ತಾವು ಹೂಮಾಲೆಗಳಿಂದ, ಕಿವಿಯೋಲೆಗಳಿಂದ, ಚಿನ್ನದ ಸರಗಳಿಂದ ಶೃಂಗರಿಸಿಕೊಳ್ಳುತ್ತಿದ್ದರು. ರಾಜರ ಆಭರಣಗಳು ಮುತ್ತು – ರತ್ನಗಳಿಂದ ತಯಾರಿಸಿದವುಗಳಾಗಿದ್ದುವು. ಅವರ ಉಡುಗೆ ತೊಡುಗೆಗಳಲ್ಲಿ ರೇಶ್ಮೆ ವಸ್ತ್ರಗಳೂ ಸೇರಿದ್ದುವು. ಮದುವೆ ಸಮಾರಂಭಗಳಲ್ಲಿ ಕುಟುಂಬ ಪುರೋಹಿತನಿಂದ ಪೂಜೆ ನೆರವೇರುತ್ತಿತ್ತು. ಆಮೇಲೆ ನೆರೆದ ಕುಲಬಾಂಧವರಿಂದ ಇತರ ವಿಧಿಗಳು ನೆರವೇರುತ್ತಿದ್ದುವು. ಇದರೊಂದಿಗೆ ಹೀನಕುಲದವರನ್ನು ಮಾತ್ರವಲ್ಲದೆ, ಬ್ರಾಹ್ಮಣರನ್ನು ಸಹ ತಮಾಷೆ ಮಾಡುವುದೂ ನಡದೇ ಇರುತ್ತಿತ್ತು. ಜನರ ನೈತಿಕ ಮೌಲ್ಯಗಳನ್ನು ಕದಡುವವರಿಗೆ ಶಿಕ್ಷೆಯನ್ನು ವಿಧಿಸುವ ಮಟ್ಟಿಗೆ ಅಂದಿನ ಬೌದ್ಧಿಕತೆಯು ಉನ್ನತಿಕೆಯನ್ನು ತಲುಪಿತ್ತು; ಸಭ್ಯತೆ, ಸೌಹಾರ್ದತೆ, ಗೌರವ, ತ್ಯಾಗ – ಬಲಿದಾನಗಳನ್ನು ಸ್ಮರಿಸುವುದು, ದುರ್ಜನರ ಸಂಗವನ್ನು ತೃಜಿಸುವುದು, ಸಂಗೀತ – ಸಾಹಿತ್ಯವೇ ಮೊದಲಾದ ಕಲೆಗಳಲ್ಲಿ ಪಾಲ್ಗೊಳ್ಳುವುದು ಧಾರ್ಮಿಕ ಕಾರ್ಯಕ್ರಮಗಳ ಪ್ರದರ್ಶನ ಹಾಗೂ ಅವುಗಳನ್ನು ಆಲಿಸುವುದು ಮೊದಲಾದ ಉತ್ತಮ ಸಂಸ್ಕಾರಗಳನ್ನು ಅವರು ಹೊಂದಿದ್ದರು. ಆಗಿನ ಕಾಲದಲ್ಲಿ ವೇದೋಕ್ತವಾದ ದೇವರ ಪೂಜೆಯು ನಡೆಯುತ್ತಿತ್ತು. ಅದರಂತೆ ದೇವೇಂದ್ರನಿಗೆ ಅಗ್ರಪೂಜೆಯು ಸಲ್ಲುತ್ತಿತ್ತು. ಅಗ್ನಿಗೆ ಹವಿಸ್ಸನ್ನು ಅರ್ಪಿಸಲಾಗುತ್ತಿತ್ತು. ಜನರಿಗೆ ಆತ್ಮ, ಮುಕ್ತಿ, ಪಾಪ – ಪುಣ್ಯ, ಸ್ವರ್ಗ – ನರಕಗಳ ಕಲ್ಪನೆ ಇರುತ್ತಿದ್ದುದರಿಂದ ಇಂತಹ ಪೂಜೆ, ಯಜ್ಞ ಮೊದಲಾದ ವೇದೋಕ್ತ ಕಾರ್ಯಗಳು ನಡೆಯುತ್ತಿದ್ದುವು. ಅಂತಿಮವಾಗಿ, ದಖ್ಖನ್ನಿನಲ್ಲಿ ಪ್ರಾಚೀನ ಕಾಲದಲ್ಲಿಯೇ ಬ್ರಾಹ್ಮಣರಿದ್ದರು. ಅವರಲ್ಲಿ ಕೆಲವರು ರಾಜ್ಯದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದವರಾರಿ, ಆಸ್ಥಾನದ ರಾಜಕೀಯದಲ್ಲಿಯೂ ಹೊರಗಿನ ಧಾರ್ಮಿಕ ಕಾರ್ಯಗಳಲ್ಲಿಯೂ ಭಾಗಿಗಳಾಗುತ್ತಿದ್ದರು. ಇನ್ನು ಕೆಲವರು ತಮಗೆ ತಾವೇ ಧ್ಯಾನ, ತಪಸ್ಸು ಮೊದಲಾದ ಸಾಧನೆಗಳಲ್ಲಿ ತೊಡಗಿರುತ್ತಿದ್ದರು. ಕೆಲವರು ಅರಣ್ಯಗಳಲ್ಲಿ ಆಶ್ರಮಗಳನ್ನು ಕಟ್ಟಿಕೊಂಡಿದ್ದರೆ, ಇನ್ನು ಕೆಲವರು ಅಭಿಚಾರಿಕ ಪ್ರಯೋಗಗಳಲ್ಲಿ ನಿರತರಾಗಿದ್ದು ಇವರಿಗೆ ಔತರೇಯ ಭಾರತದ ಯೋಗಿಗಳಿಗೂ ಸಂಬಂಧಗಳಿರುತ್ತಿದ್ದುವು. ಆಮೂಲಕ ಭಿಕ್ಷಾಟನೆ ಮಾಡುತ್ತ ಅವರು ಧರ್ಮಪ್ರಚಾರದಲ್ಲಿ ನಿರತರಾಗಿದ್ದರು.

ಇದೀಗ ಪ್ರಾಚೀನ ದಖ್ಖನ್ನಿನ ನಾಗರಿಕತೆಯ ಚಿತ್ರಣವಾಯಿತು. ಪ್ರಾಚೀನ ಹಿಂದೂ ಮತ್ತು ಬೌದ್ಧಗ್ರಂಥಗಳಲ್ಲಿ ವರ್ಣಿತವಾಗಿರುವ ಈ ವಿವರಣೆಯು. ಅನೇಕ ಶತಮಾನಗಳಿಂದ ಜನಜನಿತವಾಗಿ ಉಳಿದುಕೊಂಡು ಬಂದಿದೆ. ಈಗ ನಾವು ಇಂತಹ ಘಟನೆಗಳಿಗೆ ಸಂಬಂಧಿಸಿದ ಕಾಲಮಾನದ ಬಗೆಗಷ್ಟೇ ಚರ್ಚೆ ಮಾಡುವುದಕ್ಕೆ ಉಳಿದಿದೆ. ಶ್ರೀಲಂಕಾದ ಅರಸನು ಕಳಿಂಗದ ಅರಸನನ್ನು ಪಲ್ಲಟಗೊಳಿಸಿ, ಬಂಗಾಳದ ರಾಜಕನ್ಯೆಯನ್ನು ಮದುವೆಯಾಗಿ ಸಾಮ್ರಾಜ್ಯವನ್ನು ಉತ್ತರೋತ್ತರವಾಗಿ ಮಾಡಿದ ಕಾಲಘಟ್ಟವನ್ನು ನಾವು ಕ್ರಿ.ಪೂ.ಸು. ಆರು ಅಥವ ಏಳನೆಯ ಶತಮಾನವೆಂದು ತರ್ಕಿಸಬಹುದಾಗಿದೆ. ಈಗ ಹೇಳಿದ ವಿವರಗಳು ರಘು ಮಹಾರಾಜನ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದವುಗಳಾಗಿದ್ದು, ಇದಕ್ಕಿಂತಲೂ ಪೂರ್ವದವುಗಳೇ ಆಗುತ್ತವೆ. ರಘು ಮಹಾರಾಜನ ಕಾಲವನ್ನು ಆತನ ಮೊಮ್ಮಗನಾದ ರಾಮನ ಆಳ್ವಿಕೆಯ ಕಾಲಗಣನೆಯಿಂದ ಗುರುತಿಸಬಹುದಾಗಿದೆ. ರಾಮನ ಜೀವತಾವಧಿಯನ್ನು ಕ್ರಿ.ಪೂ. ೨೦೨೯ರ ಕಾಲಘಟ್ಟದಿಂದೀಚೆಗೆ ಗುರುತಿಸಬಹುದು. ಶ್ರೀಯುತ ಬೆನಟ್ಲೆ (Bentley) ಅವರು ತಮ್ಮ ‘Historical View of Hindu Astronomy’ ಎಂಬ ಲೇಖನದಲ್ಲಿ ಕ್ರಿ.ಪೂ.೯೬೧ನೇ ಏಪ್ರಿಲ್ ತಿಂಗಳ ೯ನೇ ದಿನಾಂಕದಂದು ರಾಮನು ಜನಿಸಿರುವುದಾಗಿ ತಿಳಿಸುತ್ತಾರೆ. ಹಾಗೆಯೇ ಇದಕ್ಕಿಂತ ಪ್ರಾಚೀನವಾದ ಕಾಲ ಗಣನೆಯನ್ನು ಈ ವಿಷಯದಲ್ಲಿ ಕೊಡುವಂತಿಲ್ಲ. ಒಂದು ತಲೆಮಾರಿಗೆ ಸುಮಾರು ೨೫ ವರ್ಷಗಳ ಅಂತರವನ್ನು ನಿಗದಿ ಪಡಿಸುವುದಾದರೆ, ಹಾಗಾದಾಗ ರಘು ಮಹಾರಾಜನ ಕಾಲವನ್ನು ಒಂದು ಶತಮಾನ ಹಿಂದಕ್ಕೆ ಕೊಂಡೊಯ್ಯಬಹುದು. ಆಗ ಅದು ಕ್ರಿ.ಪೂ. ೧೦೩೫ನೆಯ ವರ್ಷವಾಗುತ್ತದೆ. ಇದು ರಘು ಮಹಾರಾಜನು ದಖ್ಖನ್ನಿಗೆ ಕಾಲಿರಿಸಿದ ಅತೀ ಪ್ರಾಚೀನ ಕಾಲಘಟ್ಟವಾಗುತ್ತದೆ. ಇದೀಗ ನಾವು ಮುಂದಿನ ಬೆಳವಣಿಗೆಗೆ ಒಂದಷ್ಟು ಕಾಲಾವಕಾಶವನ್ನು ಕಲ್ಪಿಸಬೇಕಾಗುತ್ತದೆ. ಆದುದರಿಂದ ಇದೀಗ ನಾವು ಈ ತೀರ್ಮಾನಕ್ಕೆ ಬರಬಹುದಾಗಿದೆ. : – ದಖ್ಖನ್ ಭೂಪ್ರದೇಶದಲ್ಲಿ ಶತಮಾನಕ್ಕಿಂತಲೂ ಮೊದಲೇ ಉನ್ನತ ಮಟ್ಟದ ನಾಗರಿಕತೆಯು ಬೆಳೆದು ನಿಂತಿತ್ತು. ಒಂದು ವೇಳೆ ಈ ತೀರ್ಮಾನವು ಯಾರಿಗಾದರೂ ಅಚ್ಚರಿಯನ್ನುಂಟು ಮಾಡಿದ್ದಲ್ಲಿ ಇನ್ನು ಒಂದು ನಂಬಲರ್ಹ ಪುರಾವೆಯನ್ನು ಒದಗಿಸಬಹುದು. ಅದೇನೆಂದರೆ, ರಾಜಾಹಿರಮ್ ಮತ್ತು ರಾಜಾಸೊಲೋಮನ್ ದಖ್ಖನ್ನ್ ಕರಾವಳಿಯಿಂದ ತನ್ನ ವ್ಯಾಪಾರವನ್ನು ಪ್ರಾರಂಭಿಸಿದನಷ್ಟೇ. ಆಗ ಆತನ ವ್ಯಾಪಾರಿಗಳು ಕೆಲವು ಅಪರೂಪದ ಸಾಂಬಾರು ಪದಾರ್ಥಗಳನ್ನು ಈಜಿಪ್ಟ್‌ಗೆ ಕೊಂಡೊಯ್ದಿರುವ ಸಾಧ್ಯತೆ ತುಂಬಾ ಇದೆ. ಅವುಗಳು ದಖ್ಖನ್ನಿನ ತೋಟಗಳಲ್ಲಿ ಬೆಳೆದವುಗಳೇ ಆಗಿವೆ.*

– ಇಂಗ್ಲಿಶ್ ಮೂಲ : ಥೋಮಸ್ ಫೋಕಸ್
– ಅನುವಾದ : ಡಾ. ಮಾಧವ ಪೆರಾಜೆ

 


* ದ್ರಾವಿಡ ಅಧ್ಯಯನ ಸಂಚಿಕೆಯಿಂದ ಆರಂಭವಾದ ಈ ಅನುವಾದವು ಇಲ್ಲಿಗೆ ಮುಗಿಯಿತು. ಇದು ದ್ರಾವಿಡ ಅಧ್ಯಯನದ ಮೊದಲ ಸಂಚಿಕೆಯಲ್ಲಿ ಪ್ರಕಟವಾದ ‘ದ್ರಾವಿಡ – ಡೆಕ್ಕನ್ – ದಕ್ಷಿಣ ಭಾರತ’ ಎಂಬ ನನ್ನ ಲೇಖನಕ್ಕೆ ಇನ್ನಷ್ಟು ಖಚಿತ ಆಧಾರಗಳನ್ನು ನೀಡುವ ವಿದ್ವತ್ ಲೇಖನವಾಗಿದೆ. ಆ ಲೇಖನದಲ್ಲಿ ಪ್ರಾಚೀನ ಕಾಲದಲ್ಲಿ ‘ದಖ್ಖನ್’ ಮತ್ತು ‘ದಕ್ಷಿಣ ಭಾರತ’ ಎಂಬ ಪದಗಳು ಇಡಿಯ ದಕ್ಷಿಣಪಥಕ್ಕೆ ಪರ್ಯಾಯವಾಗಿ ಪ್ರಯೋಗವಾಗುತ್ತವೆ ಎಂದು ನಾನು ಪ್ರತಿಪಾದಿಸಿದ್ದೆ. ಆ ಸಂಬಂಧ ಅನೇಕ ಪುರಾವೆಗಳನ್ನು ಲೇಖನದುದ್ದಕ್ಕೆ ನೀಡಿದೆ. ಇದೀಗ ಪ್ರಾಚೀನ ಸಂಶೋಧಕರ ಅಭಿಪ್ರಾಯವನ್ನು ಇಲ್ಲಿ ಹೆಚ್ಚುವರಿಯಾಗಿ ನೀಡಿದಂತಾಯಿತು.

ಎರಡು ಸಂಚಿಕೆಗಳಲ್ಲಿ ಅನುವಾದಗೊಂಡ ಈ ಲೇಖನವು ವಿದ್ವತ್ ಪೂರ್ಣವಾಗಿದೆ. ಭಾರತದ ಇತಿಹಾಸವೆಂದರೆ ಉತ್ತರ ಭಾರತದ ಇತಿಹಾಸವೆಂದೇ ನಂಬುತ್ತಿದ್ದ ಕಾಲದಲ್ಲಿ ಅದನ್ನು ಪಲ್ಲಟ ಮಾಡುವುದಕ್ಕೆ Oriental Research’ ಪತ್ರಿಕೆಯ ೧೮ನೆಯ ಸಂಚಿಕೆಯಲ್ಲಿ ೧೮೭೯ರಲ್ಲಿ ಈ ಲೇಖನವನ್ನು ಪ್ರಕಟಿಸಲಾಗಿತ್ತು. ಆಗಿನ್ನೂ ಭಾರತೀಯ ಪ್ರಾಚೀನ ಗ್ರಂಥಗಳು ಈ ಪ್ರಮಾಣದಲ್ಲಿ ಇಂಗ್ಲಿಷ್‌ಗೆ ಅನುವಾದವಾಗಿರಲಿಲ್ಲ. ಹಾಗಿದ್ದರೂ ಸಿಗುವ ಮಾಹಿತಿಗಳೆಲ್ಲವನ್ನೂ ಸಂಗ್ರಹಿಸಿ ವಿಷಯ ನಿರೂಪಣೆ ಮಾಡಿದ ಲೇಖನವಿದು. ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಕೆಲವೊಂದು ಇಂಗ್ಲೀಷ್ ಮತ್ತು ಕನ್ನಡ ಗ್ರಂಥಗಳಲ್ಲಿಯೂ ಸಹ ಈ ಅಪೂರ್ವವಾದ ಲೇಖನವನ್ನು ಗಮನಿಸಿದಂತೆ ಕಂಡುಬರುವುದಿಲ್ಲ. ಐತಿಹಾಸಿಕ ವಿಶ್ಲೇಷಣೆಗೆ ಮಾತ್ರವಲ್ಲ ದಕ್ಷಿಣ ಭಾರತದ ಬಗೆಗಿನ ಮೊತ್ತ ಮೊದಲ ಅಧಿಕೃತ ಲೇಖನ ಎಂಬ ಕಾರಣಕ್ಕಾಗಿಯೂ ಇದಕ್ಕೆ ಐತಿಹಾಸಿಕ ಮಹತ್ತ್ವವಿದೆ.

– ಅನುವಾದಕ