ಧರ್ಮ, ರಾಜ್ಯ ಮುಂತಾದ ಯಾವುದೇ ವಿಷಯಗಳಿಗೆ ಸಮಾಜದಲ್ಲಿ ತೊಂದರೆ ಉಂಟಾದಾಗ ಅವುಗಳನ್ನುದ್ಧರಿಸಿ ಸುಧಾರಣೆ ಮಾಡಲು ಒಬ್ಬನು ಹುಟ್ಟಿಬಂದರೆ ಸಾಕಾಗುವುದಿಲ್ಲ. ಆತನೆಂತಹ ಮಹಾಪುರುಷನಾದರೂ ಕೂಡ ಮನುಷ್ಯನೇ ಆಗಿರುವುದರಿಂದ ಮಾನವ ಸಹಜವಾದಂತಹ ನಿರ್ಬಂಧಗಳಿಗೆ, ಮಿತಿಗಳಿಗೆ ಒಳಗಾಗಲೇಬೇಕು. ಅದರಲ್ಲೂ ಬೇರೆ ಬೇರೆ ಜಾತಿ, ಭಾಷೆಗಳಿಂದ ಕೂಡಿರುವ ಹಿಂದೂ ಸಮಾಜವನ್ನು ಒಬ್ಬನು ನಿರ್ವಹಿಸುವುದೆಂತು? ಅದಕ್ಕಾಗಿ ಪ್ರಯತ್ನಿಸುವುದೇ ಅಸಾಧ್ಯ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಸುಧಾರಣಾ ಮನೋಭಾವದಿಂದ ಕೂಡಿದ ಅನೇಕರು ಹುಟ್ಟಿಕೊಳ್ಳುತ್ತಾರೆ. ನಮ್ಮಲ್ಲಿ ಸಂಭವಿಸಿರುವ ರಾಜಕೀಯ ಕ್ಷೋಭೆಯಿಂದ ನಮ್ಮನ್ನು ಪಾರುಮಾಡಲು ಎಷ್ಟು ಮಂದಿ ಸುಧಾರಕರು ಅವತರಿಸಿದ್ದಾರೆಂಬುದದನ್ನು ಕಾಣಬಹುದು. ಹಾಗೆಯೇ ವೈದಿಕ ಧರ್ಮವನ್ನು ಇತರ ಧರ್ಮಗಳನ್ನು ಬೇರೆಬೇರೆಯಾಗಿ ಸ್ಥಾಪಿಸಿದ ಆಚಾರ್ಯರ ತರುವಾಯ, ಮನುಷ್ಯ ಸಹಜವಾದ ಸುಖಾಕಾಂಕ್ಷೆ, ಸ್ವಾರ್ಥಪರತೆ ಮುಂತಾದ ಗುಣಗಳಿಂದ, ಆಯಾ ಮತಧರ್ಮಗಳಿಗೆ ಸೇರಿದವರು ಪಾರಮಾರ್ಥಿಕ ದೃಷ್ಟಿಯನ್ನು ಬಹಳವರೆಗೆ ಕಳೆದುಕೊಂಡು, ಬಹಿರಾಡಂಬರಗಳಲ್ಲಿ ಮಾತ್ರ ಜಾಗೃತರಾಗಿ ವರ್ತಿಸುತ್ತಾ, ಅಜ್ಞಾನಕ್ಕೆ ಅಕಾರ್ಯಗಳಿಗೆ ಧರ್ಮವನ್ನು ಒಂದು ಸಾಧನವನ್ನಾಗಿ ಮಾಡಿಕೊಳ್ಳಲಾಗಿ, ಜನಸಾಮಾನ್ಯರನ್ನು ಇಂತಹ ವ್ಯವಸ್ಥೆಯಿಂದ ತಪ್ಪಿಸಿ ಸನ್ಮಾರ್ಗಕ್ಕೆಳೆಯಲೆಂದು ಪ್ರಯತ್ನಿಸಿದ ವೇಮನನಂಥವರು ಹಿಂದೂ ಸಮಾಜದಲ್ಲಿ ಅನೇಕರು ಉದಯಿಸಿದ್ದಾರೆ. ಇವರು ತೋರಿದ್ದೇ ಸನ್ಮಾರ್ಗವಲ್ಲದಿರಬಹುದು. ಆದರೆ ಅಂದಿನ ಸಮಾಜ ಬಹುತೇಕ ಇದ್ದುದು ಮಾತ್ರ ಒಳ್ಳೆಯ ಮಾರ್ಗದಲ್ಲಿ ಅಲ್ಲವೇ ಅಲ್ಲ. ತತ್ತ್ವ, ನೀತಿ, ಧರ್ಮ ಮುಂತಾದ ವಿಸಯಗಳನ್ನು ತಮ್ಮ ಮನಸ್ಸಾಕ್ಷಿಯಿಂದಲೂ, ಅನುಭವದಿಂದಲೂ ನಿರ್ಣಯಿಸುವ ಬದಲು, ತಮ್ಮ ಹಿರಿಯರ ಮಾತುಗಳನ್ನು ಕೇಳಿಯೋ ಅಥವಾ ಅವರ ಹಿರಿಯರು ಬರೆದ ಗ್ರಂಥಗಳನ್ನು ಓದಿಯೋ ನಿರ್ಣಯಿಸಿಕೊಳ್ಳುವ ಸ್ಥಿತಿಗೆ ತಲುಪಿದ ಸಮಾಜದ ಬದುಕು ಬೊಂಬೆಯಾಟದಂತಹುದೇ ಹೊರತು ಶಕ್ತಿಯುತವಾದ ಪದಾರ್ಥವಾಗಲಾರದು. ಹಾಗಾದರೆ, ಎಲ್ಲರೂ ತಮ್ಮಷ್ಟಕ್ಕೆ ತಾವೇ ಮೇಲಿನ ವಿಷಯಗಳನ್ನು ನಿರ್ಣಯಿಸಿಕೊಳ್ಳುವುದು ಸಾಧ್ಯವೇ? ನ್ಯಾಯವೇ? ಎಂದು ಕೇಳಬಹುದು. ಎಲ್ಲದಕ್ಕೂ ಇತರರನ್ನೇ ನಂಬಿಕೊಳ್ಳುವುದು ಎಷ್ಟು ನ್ಯಾಯವೋ ಇದೂ ಅಷ್ಟೇ. ಎರಡೂ ಕೂಡ ಅನುಚಿತವಾದವುಗಳೇ. ನಮ್ಮ ಅನುಭವಗಳನ್ನಷ್ಟೆ ನಂಬಿಕೊಳ್ಳುವುದರಿಂದ ನಮ್ಮ ಅಜ್ಞಾನವು ನಮ್ಮನ್ನು ಎಷ್ಟು ಹಾಳುಮಾಡುವುದೋ, ಇತರರನ್ನು ನಂಬಿಕೊಂಡಾಗ ಅವರ ಅಜ್ಞಾನವೂ ನಮಗೆ ಅಷ್ಟೇ ಕೇಡನ್ನು ಉಂಟುಮಾಡುತ್ತದೆ. ಮನುಷ್ಯ ಯಾವ ವಿಷಯದಲ್ಲಿಯೂ ಪೂರ್ಣ ಸ್ವತಂತ್ರನೂ ಅಲ್ಲ ; ಹಾಗೇ ಪರತಂತ್ರನೂ ಅಲ್ಲ ; ಮಧ್ಯಮವರ್ತಿ ಇಲ್ಲದಿದ್ದರೆ ಬದುಕು ಸಾಗುವುದಿಲ್ಲ. ಆದ್ದರಿಂದಲೆ –

            “ನಿನವಲೆ ನೆವ್ವರು ಚೆಪ್ಪಿನ
            ವಿನಿನಂತನೆ ವೇಗಪಡಕ ವಿವರಿಂಪವಲೆನ್
            ಕನಿ ಕಲ್ಲ ನಿಜಮುದೆಲಿಸಿನ
            ಮನುಜುಡೇ ಪೋ ನೀತಿಪರುಡು ಮಹಿಲೋ ಸುಮತಿ.”

ಎಂಬಂತೆ

[1] ಅನ್ಯರ ಧರ್ಮವನ್ನು, ಅವರು ಎಂಥವರಾದರೂ ಕೂಡ, ತನ್ನ ವಿಮರ್ಶೆಯ ಒರೆಗೆ ಹಚ್ಚಿ ನೋಡಬೇಕು. ಹಾಗಲ್ಲದೆ ವೇದಗಳು ಒಬ್ಬರು ಬರೆಯದೆ ಅವಷ್ಟಕ್ಕೆ ಅವೇ ಹುಟ್ಟಿದವೆಂದೂ, ಅವುಗಳಲ್ಲೆಲ್ಲ ಒಂದೇ ವಿಷಯವನ್ನು ಪ್ರತಿಪಾದಿಸಲಾಗಿದೆಯೆಂದೂ, ಅದಕ್ಕೆ ಪ್ರತಿಬಿಂಬ ಪಂಚಮವೇದವು ಮಹಾಭಾರತವೆಂದೂ, ಅದರ ಸಾರವೇ ಭಗವದ್ಗೀತೆಯೆಂದೂ, ಅದನ್ನು ಹಿಂಡಿ ತೆಗದ ಸಾರವೇ ನಮ್ಮ ಮತಾಚಾರ್ಯರ ಭಾಷ್ಯೆ ಎಂದೂ, ಅದಕ್ಕೆ ನಮ್ಮ ತಾತನವರು ಬರೆದು ವ್ಯಾಖ್ಯಾನವೆ ಸರಿಯಾದುದೆಂತಲೂ – ಕಣ್ಣು ಮುಚ್ಚಿಕೊಂಡು, ತಲೆತಗ್ಗಿಸಿಕೊಂಡು, ಇರುವ ವಿವೇಚನಾಶಕ್ತಿಗೆಲ್ಲ ಎಳ್ಳು ನೀರು ಬಿಟ್ಟಿರುವುದು ಆ ಶಕ್ತಿಯನ್ನು ಕೊಟ್ಟ ಭಗವಂತನಿಗೆ ಮಾಡುವ ಮಹಾಪಚಾರವಾಗುತ್ತದೆ. ಹೀಗೆ ಮಹಾಪುರುಷರಾದ ಧಾರ್ಮಿಕರವತರಿಸಿ ಅತ್ಯಂತ ಸೂಕ್ಷ್ಮದೃಷ್ಟಿಯಿಂದ ತತ್ತ್ವಗಳನ್ನು ಚರ್ಚಿಸಿ ತಾವು ಕಂಡುಕೊಂಡ ಸಿದ್ಧಾಂತವನ್ನು ಸ್ಥಾಪಿಸಲಾಗಿ, ಅವರ ಮಹತ್ವವನ್ನು ಕಂಡು ವಿಸ್ಮಿತರಾದ ಆನಂತರದವರು, ಇದಕ್ಕಿಂತಲೂ ಹೆಚ್ಚಿನದೇನೂ ತಮಗೆ ತಿಳಿಯದೆಂದು ದೀನರಾಗಿ, ತಮ್ಮ ಸರ್ವಸ್ವವನ್ನು ಅವರಿಗೆ ಧಾರೆಯೆರೆದು, ತಮಗಿಂತಲೂ ಅಜ್ಞಾನದಲ್ಲಿರುವವರು ತಮ್ಮ ವಿಷಯದಲ್ಲಿಯೂ ಹೀಗೇ ವಿಧೇಯತೆಯಿಂದ ವರ್ತಿಸಬೇಕೆಂದು ಬೋಧಿಸುತ್ತಾ, ಸ್ವತಂತ್ರ ಆಲೋಚನೆಗಳನ್ನು ಈ ರೀತಿಯಾಗಿ ನಾಶಮಾಡಿಕೊಳ್ಳುತ್ತಿರಲಾಗಿ, ಅವರನ್ನೆಲ್ಲ ಇಂತಹ ನಿದ್ರೆಯಿಂದ ಎಬ್ಬಿಸಿ, ಅವರಲ್ಲಿ ಸ್ವತಂತ್ರವಾದ ವಿಮರ್ಶಾ ಪ್ರಜ್ಞೆಯನ್ನುಂಟು ಮಾಡುವ ಸಲುವಾಗಿ, ಕೆಲವರು ಹುಟ್ಟಿಕೊಳ್ಳದೆ ವಿಧಿಯಿಲ್ಲ. ಅಂಥವರಲ್ಲಿ ವೇಮನ ಆಂಧ್ರದವರಲ್ಲಿ ಮುಖ್ಯವಾದವನೆಂದು ತಿಳಿದುಕೊಂಡಿದ್ದೇವಲ್ಲವೆ, ಇಂತಹ ಇನ್ನಷ್ಟು ಜನರನ್ನು ಕುರಿತು ಇಲ್ಲಿ ಸಂಕ್ಷಿಪ್ತವಾಗಿ ಹೇಳಬಯಸುತ್ತೇನೆ. ಇಂತಹವರಲ್ಲಿ ವೇಮನನ ನಂತರ ಎಲ್ಲರಿಗಿಂತ ಮೊದಲು; ನಾವು ತಿಳಿದುಕೊಳ್ಳಬೇಕಾದವನೆಂದರೆ:

ಸರ್ವಜ್ಞಮೂರ್ತಿ

ಇದಕ್ಕೆ ಎರಡು ಕಾರಣಗಳಿವೆ. ವೇಮನನಿಗೆ ಈತ ಅಚ್ಚ ಪ್ರತಿಬಿಂಬದಂತಿರುವುದು ಒಂದು. ಕನ್ನಡದವನಾಗಿರುವುದು ಮತ್ತೊಂದು. ಮೊದಲಿನಿಂದಲೂ ತೆಲುಗಿನವರಿಗೆ ಕನ್ನಡದವರಷ್ಟು ಸಮೀಪಬಂಧುಗಳು ಇನ್ಯಾರು ಇಲ್ಲ. ರಾಜ್ಯಗಳೆರಡೂ ಬಹುತೇಕ ಒಂದಕ್ಕೊಂದು ಅಂಟಿಕೊಂಡಿರುವುದಷ್ಟೇ ಅಲ್ಲದೆ, ಎರಡೂ ಜನಾಂಗದವರು ಒಬ್ಬರನ್ನೊಬ್ಬರು ಆಳುತ್ತಲೂ, ಒಬ್ಬನೇ ರಾಜನಿಗೆ ಒಳಪಟ್ಟಿದ್ದೂ, ಧರ್ಮಪ್ರಚಾರ, (ವಾಙ್ಮಯ) ಸಾಹಿತ್ಯ ರಚನೆ ಮುಂತಾದ ವಿಷಯಗಳಲ್ಲಿ ಒಬ್ಬರಿಗೊಬ್ಬರು ನೆರವಾಗಿದ್ದಾರೆ. ಆದ್ದರಿಂದಲೇ, ಈ ಇಬ್ಬರ ಮಾರ್ಗಗಳು ಬಹುತೇಕ ಒಂದೇ ರೀತಿಯಾಗಿವೆ. ಹಾಗಿದ್ದ ಮೇಲೆ ನಮ್ಮನ್ನು ಕುರಿತು ಅವರೂ, ಅವರನ್ನು ಕುರಿತು ನಾವು ತಿಳಿದುಕೊಳ್ಳುವುದು ಮುಖ್ಯ ಧರ್ಮವೆಂದು ಬೇರೆ ಹೇಳಬೇಕಾಗಿಲ್ಲ.

ವೇಮನನ ಚರಿತ್ರೆಯ ಬಗ್ಗೆ ಎಷ್ಟೊಂದು ಗೊಂದಲಗಳಿವೆಯೋ ಈತನ ಬಗ್ಗೆಯೂ ಅಷ್ಟಿವೆ. ‘ಬಸವರಸು’ ಎಂಬ ಆರಾಧ್ಯ ಬ್ರಾಹ್ಮಣನಿಗೂ, ಅಂಬಲೂರು ಎಂಬ ಗ್ರಾಮದ ಕುಂಬಾರ ವಿಧವೆಯಾದ ‘ಮಾಳಿ’ ಎಂಬಾಕೆಗೂ ಈತ ಜನಿಸಿದಂತೆ ಕಥೆ; ಕಥೆಯಷ್ಟೇ ಅಲ್ಲ. ಆತನ ಹೆಸರಲ್ಲಿ ಪಧ್ಯಗಳೂ ಇವೆ.[2] ಆದರೆ ಈತ ಚಿಕ್ಕಂದಿನಿಂದಲೂ ಹೆತ್ತವರನ್ನು ಲೆಕ್ಕಿಸದೆ, ತಾನು ಪರಮೇಶ್ವರನ ವರದಿಂದ ಜನಿಸಿದವನೆಂದೂ, ಹಿಂದೆ ಕೈಲಾಸದಲ್ಲಿ ಈಶ್ವರನ ಸೇವಕನಾದ ಪುಷ್ಪದತ್ತನೆಂಬುವನಾಗಿದ್ದೆನೆಂದು ಹೇಳಿಕೊಂಡಿದ್ದಾನೆ.[3] ವೇಮನನಿಗೆ ಸಂಕರ ಜನ್ಮದ ಇಂತಹ ಕಥೆ ಇಲ್ಲದಿದ್ದರೂ ಕೂಡ ಆತನಿಗೂ ಕ್ರಮವಾಗಿ ಹೆತ್ತವರ ಮೇಲಿನ ಅಭಿಮಾನ ನಶಿಸಿತು.

ತಾಯಿ ತಂದೆಯಲ್ಲಿ ದಯೆತೋರದಾ ಪುತ್ರ
ಜನ್ಮವೆತ್ತಲೊಂದೆ ಸತ್ತರೊಂದೆ….. (೧೮೫೩)

ಎಂದು ಬರೆದರೂ, ಕೊನೆಗೆ

ತಾಯಿಯೇ ಗೌರಿಯು ತಂದೆಯೇ ಶಂಭುವು
ಪ್ರಮಥಗಣವು ಅಖಿಲ ಬಂಧು ಬಳಗ.
ತಾನು ಹುಟ್ಟಿದ ಮನೆ ತನಗೆ ಕೈಲಾಸವು…..” (೪೩)

ವೇಮನನ ಕಾಲವೆಷ್ಟೋ ಮೇಲು ; ಸರ್ವಜ್ಞನದಿನ್ನೂ ಗೊಂದಲ. ಒಂದು ಪದ್ಯದಲ್ಲಿ ಬಸವೇಶ್ವರನ ಶಿಷ್ಯನೆಂದಿದಿ. (೯೪೫) ಇನ್ನೊಂದು ಪದ್ಯದಲ್ಲಿ ಇಂಗ್ಲಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ವಿಷಯವಿದೆ! (೧೦೦೧) ಹೀಗಾಗಿ ಹನ್ನೆರಡನೆಯ ಶತಮಾನದಿಂದ ಹದಿನೆಂಟನೆಯ ಶತಮಾನದವರೆಗೂ ಈತನ ಜೀವಿತ ಕಾಲವೆಂದಾಗುತ್ತದೆ! ಈತನನ್ನು ಕುರಿತು ಬಹಳಷ್ಟು ಸಂಶೋಧನೆ ಮಾಡಿ ಪದ್ಯಗಳನ್ನು ಪ್ರಕಟಿಸಿರುವ ಉತ್ತಂಗಿ ಚೆನ್ನಪ್ಪನವರು ಹದಿನಾರನೆಯ ಶತಮಾನದವನಿರಬೇಕೆಂದು ಊಹೆಮಾಡಿದ್ದಾರೆ.[4] ಆದರೆ ಇದು ಕೂಡಾ ಆಧಾರಗಳಿಲ್ಲದ ಚರಿತ್ರೆಕಾರರ ಊಹೆಯಂತಹುದಷ್ಟೆ ಅಲ್ಲದೆ, ಹೆಚ್ಚು ನಂಬಲರ್ಹವಾದುದಂತೂ ಅಲ್ಲ.

ಈತ ಹೆತ್ತವರನ್ನು ತಿರಸ್ಕರಿಸಿದನೆಂದಿದೆ. ಅದಕ್ಕೆ ಕಾರಣ ಬರೀ ಧೌರ್ತ್ಯವಾಗಿರಲಾರದು. ಈತನ ಜನ್ಮ ವಿಚಾರವನ್ನು ತಿಳಿದುಕೊಂಡು ಅಪಹಾಸ್ಯ ಮಾಡಲಾಗಿ ತಾನು ಸಾಮಾನ್ಯ ಮನುಷ್ಯ ಮಾತ್ರನಲ್ಲವೆಂಬುದಾಗಿ ಅವರಿಗೀತ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾನೆ. ‘ಶೂದ್ರಪ್ರಜ್ಞಲು’ ‘ಕಾಪುಕವಿತ್ವಮುಲು’ ನಮ್ಮಲ್ಲಿ ಪ್ರಾಂತ್ಯಮಾತುಗಳೇ ಅಲ್ಲದೆ ಹೀಗೆ ಜಾತಿಯ ಹೆಸರಲ್ಲಿ ವ್ಯಕ್ತಿಯನ್ನು ತಿರಸ್ಕರಿಸುವವರ ಮೇಲೆ ಈತ ಕತ್ತಿಮಸೆಯುವನಾದ್ದರಿಂದಲೇ ಹೀಗೆನ್ನುತ್ತಾನೆ.

ಮುತ್ತು ನೀರಲ್ಲಿ ಹುಟ್ಟಿ ಹತ್ತು ಸಾವಿರ ಹಡಗು ;
ಹತ್ತು ಚಿಪ್ಪೊಂದು ಹಣಮಿಲ್ಲ ; ತಾಯ್ತಂದೆ
ಎತ್ತಣವರೆಂದ ಸರ್ವಜ್ಞ.” (೧೧೧೨)

(ನೀರಲ್ಲಿ ಹುಟ್ಟಿದ ಮುತ್ತಿಗೆ ಹತ್ತು ಸಾವಿರ ಬೆಲೆ. ಆದರೆ ಕಪ್ಪೆಚಿಪ್ಪುಗಳೂ ಹತ್ತು ಇದ್ದರೂ ಒಂದು ನಾಣ್ಯದ ಬೆಲೆ ಅವಕ್ಕಿಲ್ಲ. ಹೆತ್ತವರೊಂದು ಲೆಕ್ಕವೆ? ಎಂದಿದ್ದಾನೆ ಸರ್ವಜ್ಞ.)

ವೇಮನನ ಹಾಗೆಯೇ ಈತನಿಗೂ ತನ್ನ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೆಚ್ಚು. ಈತನಿಗಿರುವ ಸರ್ವಜ್ಞನೆಂಬ ಹೆಸರು ಕೂಡ ಹೆತ್ತವರು ಇಟ್ಟ ಹೆಸರಾಗಿ ಕಂಡುಬರುವುದಿಲ್ಲ. ಸರ್ವಜ್ಞನೆಂಬ ಬಿರುದುಳ್ಳವರು ಅನೇಕರಿದ್ದಾರಾದರೂ, ಅದೇ ಹೆಸರಾಗಿರುವವರನ್ನು ಇದುವರೆಗೆ ನಾನು ಕಂಡಿಲ್ಲ. ಇನ್ನು ಈತ ಪಂಡಿತನೇನೂ ಅಲ್ಲವಾದ್ದರಿಂದ, ಈತನ ಪ್ರತಿಭೆಯನ್ನು ಮೆಚ್ಚಿ ಯಾವ ಪ್ರಭುವೂ ಕೂಡ ಯಾವ ಕಾಲದಲ್ಲೂ ಈ ಬಿರುದನ್ನು ಕೊಟ್ಟಿರಲಾರನು. ಆದ್ದರಿಂದ ಯಾರೋ ಈತನ ಧೂರ್ತ ಮಾತುಗಳನ್ನು ಆಲಿಸಿ ‘ಇವನೇನು ಸರ್ವಜ್ಞನೆ?’ ಎಂದು ಆಕ್ಷೇಪಿಸಿದ್ದಿರಬಹುದು. ‘ಯಾಕಾಗಬಾರದು’ ಎಂದು ಆ ಹೆಸರನ್ನೇ ಈತ ಉಳಿಸಿಕೊಂಡು ಪದ್ಯಗಳನ್ನು ರಚಿಸಿ ಅವರ ಮುಖದ ಮುಂದೆ ಎಸೆದಿರಬಹುದು! ಇದೇ ನಿಜವೆಂದಾದರೆ ತಾನು ಹುಟ್ಟಿದ ಜಾತಿ ಮತ್ತು ಹೆಸರನ್ನು ಬದಲಾಯಿಸಿಕೊಳ್ಳಲು ಇಷ್ಟಪಡದ ವೇಮನನಿಗಿಂತಲೂ ಸಂಘ ತಿರಸ್ಕಾರದಲ್ಲಿ ಈತ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾನೆಂದು ಹೇಳಬಹುದು.

ವೇಮನನ ಹಾಗೆಯೇ ಈತ ಕೂಡ ಬಹಳ ಉದ್ರಿಕ್ತ ಸ್ವಭಾವವುಳ್ಳವನು. ಓದು ಬರಹಗಳ ನಿರ್ಬಂಧಕ್ಕೊಳಪಟ್ಟವನಲ್ಲ. ಸಹಜವಾದ ಪದ ಕವಿತಾಶಕ್ತಿಯುಳ್ಳವನು. ಹಾಸ್ಯಪ್ರಿಯನು. ‘ನಕ್ಕುನಗಿಸುವಾನುಡಿಲೇಸು’ ಎಂದು ನಿರ್ಧರಿಸಿದವನು (೧೨೩೬) ಹಾಗೆಯೇ ನಕ್ಕು ನಗಿಸುತ್ತಿದ್ದವನು. ಆದ್ದರಿಂದಲೇ ಇಹಲೋಕ ಸೌಖ್ಯವನ್ನು ವೇಮನನಿಗಿಂತಲೂ ಹೆಚ್ಚು ಪ್ರೀತಿಯಿಂದ ತೃಪ್ತಿಯಿಂದ ಅನುಭವಿಸಿದವನು. ವೇಮನನಲ್ಲಿ ಚಿಕ್ಕಂದಿನಿಂದಲೂ ಆತ್ಮತೃಪ್ತಿಯೆಂಬ ಧರ್ಮವು ಮಿತಿಮೀರಿಯಿದೆ. ಈತನಲ್ಲೂ ಇದೆಯಾದರೂ ಅಷ್ಟು ಪ್ರಮಾಣದಲ್ಲಿಲ್ಲ. ಅಂದರೆ, ಈತ ದೊಡ್ಡ ಶ್ರೀಮಂತನೆಂದೇನೂ ಅಲ್ಲ. ತೃಪ್ತಿಮನೋಧರ್ಮವೇ ಹೊರತು ವಸ್ತು ಧರ್ಮವದಲ್ಲ. ವೇಮನನಂತೆಯೇ ಈತನಿಗೂ ತುಪ್ಪ, ಹಾಲು, ಮೊಸರು, ತೊವ್ವೆ ಮುಂತಾದ ಸಾಮಾನ್ಯ ಪದಾರ್ಥಗಳ ಮೇಲಷ್ಟೇ ಅಲ್ಲದೆ, ವಡೆಗಳು, ಹೋಳಿಗೆ, ಕಜ್ಜಾಯ ಮೊದಲಾದ ವಿಶೇಷ ತಿನಿಸುಗಳ ಮೇಲೆಯೂ ಆದರವಿತ್ತಾದರೂ, ಜೋಳ, ರಾಗಿ ಮುಂತಾದ ಧಾನ್ಯಗಳ ಮೇಲೆಯೂ ಅಭಿಮಾನವಿತ್ತು. ಈತನ ಸಂಸಾರ ಲಕ್ಷಣವೇನೆಂದರೆ ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು, ಎರಡು ಎತ್ತುಗಳು, ಐವರು ಗಂಡುಮಕ್ಕಳು (?) ಬತ್ತಿಹೋಗದ ಹಸುಗಳು, ಚೆನ್ನಾಗಿ ಕೆಲಸ ಮಾಡುವ ಸೊಸೆ, ಒಬ್ಬ ಮುದಿಯಜ್ಜಿ, ತನ್ನ ಇಚ್ಚೆಯನ್ನರಿತ ಗುಣವತಿಯಾದ ಹೆಂಡತಿ ಇವು ಇವೆಯೆಂದಾದರೆ ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’ (೨೬೭). ಹೀಗಾಗಿ ಈತ ವೇಮನನಿಗಿಂತಲೂ ಬುದ್ಧಿವಂತನಾಗಿದ್ದು ಏಕಪತ್ನೀವ್ರತವನ್ನು ಮರ್ಯಾದೆಯಿಂದ ಪಾಲಿಸುತ್ತಾ ಬದುಕಿದವನೆಂದು ಊಹಿಸಬಹುದು. ಆತನಂತೆಯೇ ಈತನು ಕೂಡ ಜಾರಸ್ತ್ರೀಯರು, ವೇಶ್ಯೆಯರು ಮೊದಲಾದವರಿಗೆ ಒಳಗಾಗಿದ್ದವನೇ ಅಲ್ಲದೆ, ಆ ಪ್ರಪಂಚದಲ್ಲಿ ಆತನಿಗಿಂತ ಒಂದು ಕೈ ಹೆಚ್ಚಾಗಿಯೇ ಹೋರಾಟ ಮಾಡಿದ್ದಾನೆ ಎಂಬುದನ್ನು ಹೇಳಬೇಕಾಗಿದೆ. ಎಂತಹವರು ಜಾರಸ್ತ್ರೀಯರು ಎಂಬ ವಿಷಯವನ್ನು ತಿಳಿಯಪಡಿಸುವದಕ್ಕಾಗಿಯೇ ಈತ ಅನೇಕ ಪದ್ಯಗಳನ್ನು ಬರೆದಿದ್ದಾನೆ (೧೬೬೪ – ೧೭೭೧) ಸ್ತ್ರೀವಶೀಕರಣಕ್ಕೆ ಯಾವ ಬೇರು ಮೂಲಿಕೆಗಳ ಅಗತ್ಯವಿಲ್ಲವೆಂತೆ. ಚಿನ್ನದ ಬೇರಿನಿಂದ ಅವರು ತಪ್ಪದೆ ಸ್ವಾಧೀನವಾಗುವರಂತೆ! (೧೬೨೮) ಹೀಗೆಯೇ ವೇಶ್ಯೆಯರನ್ನು ಕುರಿತೂ ಹಲವಾರು ಪದ್ಯಗಳನೀತ ಬರೆದಿರುವನು (೨೮೯) ಅವರ ವಿಷಯದಲ್ಲಿ ಒಂದು ಒಳ್ಳೆಯ ಮಾತನ್ನು ಬರೆಯದಿರುವುದಷ್ಟೇ ಅಲ್ಲಲ, ಬದಲಿಗೆ ಬರೀ ಮಾತುಗಳಿಂದಲೇ ಅವರನ್ನು ಮರಳು ಮಾಡಿ ಹಣ ಕೊಡದೆ ಮೋಸ ಮಾಡುವವನೇ ಜಾಣನೆಂದು ಒಂದು ಕಡೆ ಹೇಳಿದ್ದಾನೆ! (೧೭೬೬) ಆದರೆ ಈವರ್ತನೆ ಅನುಚಿತವಾದುದೆಂದೂ ಈತನಿಗೆ ಗೊತ್ತು. ಇತರರಿಗೆ ಹಾಗೆಯೇ ಬೋಧಿಸಿದ್ದಾನೆ. ನಿಜವಾದ ಸುಖ ಯಾವುದೆಂದರೆ –

ಜೋಳದಾ ಬೋನಾಗಿ ಮೇಲೆ ಕೆನೆ ಮೊಸರಾಗಿ
ವೇಳೆಗೆ ಬರುವ ಸತಿಯಾಗೆ, ಸೂಳೆಯನು
ಕೋಳದಿಕ್ಕೆಂದ ಸರ್ವಜ್ಞ” (೧೫೫೯)

ಜೋಳದ ಊಟ, ಕೆನೆ ಮೊಸರು, ಸಮಯಕ್ಕೆ ಬರುವ ಸತಿ – ಇವು ಇದ್ದರೆ ವೇಶ್ಯೆಯನ್ನು ಹೊರಗಿಡು – ಎಂದು ಅರ್ಥ. ಇವು ಇಲ್ಲದಿರುವಾಗ ವೇಶ್ಯೆ ಉಪಯೋಗಕ್ಕೆ ಬರುವಳೆಂದು ಇದರ ತಾತ್ಪರ್ಯ.

ಇಂತಹ ತೃಪ್ತಿಕರವಾದ ಭಾವನೆಯುಳ್ಳವನಾದ್ದರಿಂದಲೇ, ವೇಮನನಂತೆ ಪದೇ ಪದೇ ಬ್ರಹ್ಮನನ್ನು ದೂಷಿಸದೆ, ನಮ್ಮ ಅರಿವಿಗೆ ಮೀರಿದ ವಿಷಯಗಳನ್ನು ಕುರಿತು ಚಿಂತಿಸಿ, ನಮಗೆ ಸಾಧ್ಯವಾಗದಂತಹ ಕಾರ್ಯಗಳನ್ನು ಸಾಧಿಸಲು ಯತ್ನಿಸಿ, ಅವಸ್ಥೆಪಡುವುದಕ್ಕಿಂತಲೂ ‘ಶಿವತೋರಿದಂತಿಹುದೇ ಲೇಸು ಸರ್ವಜ್ಞ’ ಎಂಬ ಭಾವನೆಯಿಂದ ಇದ್ದನು. (೮೧೫)

ಬಂದೀತು ರೋಗ ನಿನಗೆಂದು ಅಂಜಿಕೆ ಬೇಡ,
ಬಂದುದನು ಉಂಡು ಸುಖಿಸುತ್ತ, ರೋಗ
ಬಂದಂದಿಗೆದ್ದೇಳು ಸರ್ವಜ್ಞ” (೪೮೩)

(ರೋಗ ಬಂದೀತೇನೋ ಎಂಬ ಭಯಬೇಡ. ಬಂದುದನ್ನು ಉಂಡು ಸುಖವಾಗಿರು. ರೋಗ ಬಂದಾಗ ಎದ್ದು ಹೊರಡು.)
ಅಂದರೆ ಈತ ಶಾಂತಮೂರ್ತಿಯಾಗಿ, ಸದ್ದಿಲ್ಲದೆ, ಅನೇಕರ ಹಾಗೆ ಸಪ್ಪೆ ಬದುಕನ್ನು ನಡೆಸಿದವನೆಂದು ಅಲ್ಲ. ವೇಮನನಂತೆಯೇ ಈತನನ್ನು ರೇಗಿಸುವುದೆಂದರೆ ಭೇರಿಯನ್ನು ಬಾರಿಸಿದಂತೆಯೇ. ಮಾತುಗಳ ತೀಕ್ಷ್ಣತೆಯಲ್ಲಿ ಇಬ್ಬರೂ ಇನ್ನೊಬ್ಬರಿಗಿಂತ ಕಡಿಮೆಯಿಲ್ಲ. ಇಬ್ಬರ ಬೈಗುಳಗಳೂ ಅತ್ಯಂತ ಕಹಿಯಾದವೆ. ಆದರೆ ವೇಮನನಿಗಿಂತ ಈತನಲ್ಲಿ ನೆಮ್ಮದಿ, ಉದಾಸೀನತೆ ಕೊಂಚ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದಲೇ, ವೇಮನನಿಗಿದ್ದಷ್ಟು ಅಸಹ್ಯ ಭಾವನೆ ಪ್ರಪಂಚದ ಮೇಲೆ ಈತನಿಗಿರಲಿಲ್ಲ.

ವೇಮನನ ಹಾಗೆಯೇ ಈತನಿಗೂ ಸಂಗೀತದಲ್ಲಿ ಅಭಿರುಚಿಯಿತ್ತು. ಆತನಿಗಿಂತಲೂ ಕೊಂಚ ಹೆಚ್ಚಾಗಿಯೇ ಪ್ರವೇಶವಿತ್ತೇನೋ. ತಂತಿವಾದ್ಯ ಒಳ್ಳೆಯದೆಂದೂ ಅದರಲ್ಲೂ ವೀಣೆ ಉತ್ತಮವೆಂದು ಈತ ತಿಳಿದಿದ್ದ. (೧೦೨೯) ವೇಮನನಿಗೆ ಪ್ರಿಯವಾದ ಆಟವೆಲದಿಗಿಂತಲೂ ಈತನ ತ್ರಿಪದಿ ಸಂಗೀತದಲ್ಲಿ ಹೆಚ್ಚು ಉಪಯುಕ್ತವಾದ ಸ್ಥಿರವಾದ ಲಯಗತಿಯುಳ್ಳದ್ದು. ಇದನ್ನು ಪದ್ಯವೆನ್ನುವುದಕ್ಕಿಂತಲೂ ಹಾಡು ಎನ್ನುವುದೇ ಮೇಲು. ಏಕನಾದವು ವೇಮನನಿಗಿಂತ ಈತನಿಗೇ ಹೆಚ್ಚು ಉಪಯುಕ್ತ. ಈ ತ್ರಿಪದಿಯಲ್ಲಿ ಪದ್ಯಗಳಲ್ಲಿನ ಹಾಗೆ, ಗುರು ಗುರುವಾಗಿಯೂ ಲಘು ಲಘುವಾಗಿಯೂ ಉಚ್ಚರಿಸಿದರೆ ಸಾಲದು! ತಾಳದ ನಡಿಗೆಗೆ ತಕ್ಕಂತೆ ಎರಡನ್ನೂ ಸ್ವಲ್ಪ ಬದಲಿಸಿ ಸರಿಮಾಡಿಕೊಳ್ಳಬೇಕು. ಸಂಗೀತಗಾರರಿಗೆ ಈತನ ಉಪದೇಶವೊಂದು ಬಹಳ ಉಪಯುಕ್ತಕರವಾಗಿದೆ. –

ಅರ್ಥವಿಲ್ಲದ ಹಾಡು ವ್ಯರ್ಥಸಾಸಿರವಿದ್ದು,
ಅರ್ತಿಯಿಂ ಕತ್ತೆಯರಚಿದದರಲ್ಲಿ
ಅರ್ಥವುಂಟೆಂದ ಸರ್ವಜ್ಞ“. (೧೨೦೮)

(ಅರ್ಥವಿಲ್ಲದ ಹಾಡುಗಳು ಸಾವಿರವಿದ್ದರೂ ವ್ಯರ್ಥವೆ. ಮನಸ್ಸಿಟ್ಟು ಕತ್ತೆ ಅರಚಿದರೂ ಅದಕ್ಕೆ ಅರ್ಥವಿರುತ್ತದೆ) ಅರ್ಥವಿಲ್ಲದ ಹಾಡು ಅದಕ್ಕಿಂತಲೂ ಕಡೆ ಎಂಬ ಭಾವ ವೇಮನನಿಗೆ ತೋಡಿ ರಾಗದ ಬಗ್ಗೆ ಬಹಳ ಪ್ರೀತಿ. ಈತ ನಾಟಿರಾಗವು ಮೇಲು ಎನ್ನುತ್ತಾನೆ (೨೬೯) ತೋಡಿಯ ಹಾಗೇ ಇದರಲ್ಲೂ ಅಸಹ್ಯ, ಹಠ, ಅತೃಪ್ತಿ, ಸ್ವಾಂತಂತ್ರ್ಯ ಮೊದಲಾದ ಭಾವಗಳನ್ನು ತೋರಿಸಬಹುದಾದರೂ, ದೈನ್ಯತೆಯನ್ನು ಅದರಲ್ಲಿಯ ಹಾಗೆ ಇದರಲ್ಲಿ ಅಷ್ಟೊಂದು ಸ್ಪಷ್ಟವಾಗಿ ತೋರಿಸಲು ಸಾಧ್ಯವಿಲ್ಲ. ಮನುಷ್ಯನಾಗಿ ಅಸಹಾಯಕನಾಗಿ, ಅಜ್ಞಾನಿಯಾಗಿ ಹುಟ್ಟಿರುವೆನಲ್ಲ ಎಂಬ ದುಃಖವು ವೇಮನನಿಗಿದೆ, ಅದು ನಿಜವೆ ಆದರೂ ಅದರ ಬಗ್ಗೆ ದುಃಖಿಸಿದರೂ ಕೂಡ ದೇಹವು ಕೃಶವಾಗುವುದಷ್ಟೇ ಹೊರತು ಇನ್ನೇನೂ ಪ್ರಯೋಜನವಿಲ್ಲವಾದ್ದರಿಂದ ಇರುವಷ್ಟು ದಿನ ಕೈಲಾದಷ್ಟು ಕೆಲಸ ಮಾಡಿ ತನಗೂ ಇತರರಿಗೂ ಕೂಡ ಸಹಜವಾಗಿ ಬದುಕುವುದು ಉತ್ತಮವೆಂಬ ಭಾವನೆ ಸರ್ವಜ್ಞನದು. ನಾಟಿರಾಗದಲ್ಲಿ ಧೀಂಗುಣವನ್ನು ಸೊಗಸಾಗಿ ತೋರಿಸಬಹುದು.

ಹೀಗಾಗಿ ಯುದ್ಧ ಸಮಯದಲ್ಲಿ ಶೌರ್ಯ, ಪ್ರಾಣಕ್ಕೆ ಲೆಕ್ಕಿಸದಿರುವುದು ಇತ್ಯಾದಿ ಗುಣಗಳನ್ನು ಈತ ಬಹಳ ಪ್ರಶಂಸಿಸಿದ್ದಾನೆ. “ಅಮ್ಮ ನಾಡಿರಿಯುವದು ಬೊಮ್ಮನಾದಡೆಯೇನೊ”? (೬೨೯) – ಬ್ರಹ್ಮನೇ ಎದುರಾದರೇನು? ತನ್ನ ಬಿರುದನ್ನು ಹೇಳಿ ತಿವಿಯಬೇಕು – ಎಂಬುದು ಈತನ ಅಭಿಪ್ರಾಯ. ಜಾತಿ ವೀರರು ನಾವಭೀತಿಗಂಜುಳಿವರೆ? (೬೨೮) – ಜಾತಿವೀರರು ಸಾವಿಗೆ ಹೆದರಿ ಹಿಂಜರಿಯುವುದಿಲ್ಲ ಎಂತಲೂ ‘ಮುರಿದು ಬಂದಾಗ ತರಿಯದಾ ಕತ್ತಿಯ, ನರೆದು ಮುಕ್ಕುವನೆ’! (೬೭೫) – ಸರಿಯಾದ ಸಮಯದಲ್ಲಿ ಕಡಿಯಲಾಗದ ಕತ್ತಿ ಇರುವುದು ಅರಿದು ಕುಡಿಯಲಿಕ್ಕಾ? ಎಂದೂ ಈತ ಅತಿ ತೀವ್ರವಾಗಿ ನುಡಿಯುವನು.

ಪರಬಲವನ್ನು ಕಂಡು ಪ್ರಾಣರಕ್ಷಣೆಗಾಗಿ
ಓಡಿಹೋಗುವ ಹೆದರುಪುಕ್ಕಲು ಮನುಷ್ಯ
ಯಮನು ಮುನಿದರೆ ಯಾರಡ್ಡಿ ಅದಕೆ.?….. (೨೪೩೨)

ಎಂದು ವೇಮನ ಕೂಡ ಹೇಳಿದ್ದಾನೆ. ಆದರೆ ಈ ವಿಧವಾದ ಶೌರ್ಯದ ಬಗ್ಗೆ ಆತನಿಗಷ್ಟು ಹಿಡಿತ ಕಂಡುಬರುವುದಿಲ್ಲ.

ಹೀಗೆ ಶೌರ್ಯ ಹಾಗೂ ಸಂಸಾರ ಸುಖದಲ್ಲಿ ಆಸಕ್ತಿಯುಳ್ಳವನಾದ್ದರಿಂದಲೇ ಈತ ಅದನ್ನು ತೀರಿಸಿಕೊಳ್ಳಲು ಕೆಲವು ಕಾಲ ರಾಜಸೇವೆ ಮಾಡಿರುವಂತಿದೆ. ವೇಮನನೂ ಮಾಡಿರಬಹುದೆಂದು ಊಹಿಸಿದ್ದೇವಾದರೂ ಈತನದು ಬಹಳ ಕಾಲ ಇದ್ದಿರಲಾರದು. ಈ ವಿಷಯದಲ್ಲಿ ಈತನಿಗೆ ಇದ್ದಷ್ಟು ಅನುಭವ ಆತನಿಗಿಲ್ಲ. ಆ ಕೆಂಡವನ್ನು ಬಹಳ ಕಾಲ ಹಿಡಿದಿಟ್ಟುಕೊಳ್ಳುವಂತಹ ಅರಸ ಆ ಕಾಲದಲ್ಲೇ ಅಲ್ಲ ಯಾವ ಕಾಲದಲ್ಲಿಯೂ ಇರಲು ಸಾಧ್ಯವಿಲ್ಲ. ದ್ರವ್ಯಾರ್ಜನೆಗಾಗಿ ಕೆಲವು ದಿನಗಳು ಹಾಗೆ ಕೆಲಸ ಮಾಡಿಕೊಂಡಿದ್ದು ಬಹುಬೇಗ ಸಾಕಾಗಿ –

ಎಷ್ಟು ಸೇವೆ ಮಾಡಿಯಾವ ಪಾಡು ಪಟ್ಟರೂ
ಅರಸುತನವನ್ನು ನಂಬಬಾರದು !
ಹಾವಿನೊಂದಿಗಿನ ಸ್ನೇಹ ಹತ್ತು ಸಾವಿರ ಪಾಲು ವಾಸಿ (೬೩೮)

ಎಂದು ಅರಿತು ಆ ಪೀಡೆಯಿಂದ ಬಿಡುಗಡೆ ಹೊಂದಿದನು. ಸರ್ವಜ್ಞ ಹಾಗಲ್ಲದೆ, ರಾಜರ ಚಿತ್ತವೃತ್ತಿಯನ್ನಾಶ್ರಯಿಸಿ ನಡೆದುಕೊಂಡು, ಅವರ ಮಂತ್ರಿಗಳ ಮರ್ಜಿಗನುಗುಣವಾಗಿದ್ದುಕೊಂಡು, ಸಭೆಗಳಲ್ಲಿ ಉಳಿದ ಹಿರಿಯರ ಬಗ್ಗೆ ವಿನಯವಿಧೇಯತೆಗಳನ್ನು ತೋರಿ ಗೌರವಿಸುತ್ತಿದ್ದನು. (೬೪೫ – ೬೬೦). ‘ಸ್ವಾಮಿ ಕಾರ್ಯಕ್ಕೆ ಮಡಿಯಲೇಬೇಕು’ (೭೦೬) ಎಂದು ಸಂಕಲ್ಪಿಸಿ ನಿರ್ವಂಚನೆಯಿಂದ ಅವರಿಗಾಗಿ ದುಡಿದಿದ್ದಾನೆ. ಆದರೆ, ಜಾರತನ, ಚೋರತನ, ಅಸತ್ಯ ಮುಂತಾದ ದುರ್ಗಣಗಳನ್ನು ಅವರಲ್ಲಿ ಕಂಡು, ಅದರ ಫಲವನ್ನನುಭವಿಸಿ ಅಸಹ್ಯಪಟ್ಟು ಕೊಂಡಿದ್ದಾನೆ. ಕೊನೆಗೆ[5] ‘ಬಿನ್ನಪದ ಕೇಳದರಸಿ ನೋಲಗದಿಂದ ಸನ್ಯಾಸಲೇಸು’ (೬೯೦) ಎಂಬ ನಿರ್ಣಯಕ್ಕೆ ಬಂದನು.

ಮೊದಲಿನಿಂದಲೂ ಈತನು ಕೂಡಾ ಬಸವೇಶ್ವರ ಪ್ರತಿಪಾದಿತವಾದ ಲಿಂಗಧಾರಿ ವೀರಶೈವ ಧರ್ಮಕ್ಕೆ ಸೇರಿದವನು. ಹೀಗಾಗಿ ಈತನಿಗೆ ಬಯಸಿದಾಗ ಸನ್ಯಾಸವನ್ನು ಕೊಡುವಂತಹ ಶಿವಯೋಗಿಗಳಿಗೆ ಇಲ್ಲಿ ಬರವಿರಲಿಲ್ಲ. ಇಂತಹವರಲ್ಲಿ ಯಾರೋ ಒಬ್ಬರು ಈತನನ್ನು ಜಂಗಮನನ್ನಾಗಿ ಮಾಡಿ ಯೋಗಮಾರ್ಗವನ್ನುಪದೇಶಿಸಿದ್ದಾರೆಂದು ತೋರುತ್ತದೆ. ಆದರೆ ಈ ಯೋಗಸಾಧನೆಗೆ ಮುನ್ನ ಈತನಿಗೆ ಸಾಮಾನ್ಯವಾಗಿ ಎಲ್ಲರ ಹಾಗೆಯೇ, ಬಹಿರಂಗ ವೇಷಗಳ ಬಗ್ಗೆ ನಂಬಿಕೆಯಿತ್ತು. ವಿಭೂತಿರುದ್ರಾಕ್ಷಿಗಳನ್ನು ಧರಿಸಿದವನಿಗೆ ಪಾಪವು ಬಯಲಾಗಿ ಇದ್ದಕಡೆಗೆ ಶಿವನು ಬರುವನೆಂದು ಈತ ತಿಳಿದಿದ್ದ (೯೯). ಲಿಂಗವಿಲ್ಲದೆ ಏನೂ ತಿನ್ನಬಾರದು (೧೦೮). ತಾನು ಉಣ್ಣುವ ವಸ್ತುಗಳೆಲ್ಲವನ್ನು ಮೊದಲು ಶಿವಾರ್ಪಣೆ ಮಾಡಿ ನಂತರ ಉಣ್ಣಬೇಕು (೧೦೭) ಜಂಗಮರು ಸಾಕ್ಷಾತ್ ಶಿವಸ್ವರೂಪಿಗಳು. ‘ತಿರುದು ತಂದಾದರೂ ಕರೆದು ಜಂಗಮಕಿಕ್ಕು’ (೫೪೯) ಎಂಬುದು ಈತನ ಬೋಧೆ. ಔದಾರ್ಯ ವಿಷಯದಲ್ಲಿ ವೇಮನನ ಹಾಗೆಯೇ ಈತನೂ ಅತಿವಾದಿಯಾಗಿ ‘ತಿರುಪೊಎ ಎತ್ತಿಯೋ ಪೀಡಿಸಿಯೋ ಕಳುವು ಮಾಡಿಯೋ ತಂದು ಕರೆದು ದಾನಮಾಡು’ (೫೫೦) ಎಂದು ಹೇಳಿದ್ದರೂ, ದಾನಪಾತ್ರ ವಿಷಯದಲ್ಲಿ ಆತನಿಗಿರುವಷ್ಟು ವಿಶಾಲದೃಷ್ಟಿ ಈತನಿಗಿದ್ದಂತೆ ಕಂಡುಬರುವುದಿಲ್ಲ. ಈತನ ಧರ್ಮದಲ್ಲಿ ಎಲ್ಲರಿಗೆ ಕೊಡುವುದಕ್ಕಿಂತಲೂ ಶಿವಭಕ್ತರಿಗೆ ಕೊಡವು ದಾನವೇ ಶ್ರೇಷ್ಠ (೫೫೧ – ೫೫೩). ಆದರೆ ಗತಿಯಿಲ್ಲದ ಕೈಲಾಗದವರೇನು ದಾನ ಮಾಡುವರು? ಈತನ ಉತ್ತರ, ಜಂಗಮರು ತಂದ ಅಕ್ಕಿಯಿಂದ ಅಡುಗೆ ಮಾಡಿಕೊಡುವುದು, ಉಳಿದುಕೊಳ್ಳಲು ಅವರಿಗೆ ವಸತಿ ವ್ಯವಸ್ಥೆ ಮಾಡುವುದು, ಕುಡಿಯುವುದಕ್ಕೆ ನೀರು ಒದಗಿಸುವುದು? (೫೫೪) ಇಷ್ಟನ್ನು ಕೂಡ ಮಾಡಲಾಗದ ಬಡವರು ಇರುವುದಿಲ್ಲವಲ್ಲ.

ಹೀಗೆ ಈತನಿಗೆ ವೇಮನನಿಗಿಂತಲೂ ಶಿವಪಕ್ಷಪಾತ, ಇತರ ದೇವರುಗಳ ಬಗ್ಗೆ ಅನಾದರ ಕೊಂಚ ಹೆಚ್ಚಾಗಿತ್ತು. ನರಸಿಂಹನ ಅವತಾರ ದೊಡ್ಡ ವಿಚಿತ್ರವೇ ಆದರೂ ಶರಭನು ಉಗುರಿನಿಂದ ಕೊಲ್ಲುವಾಗ ವಿಷ್ಣುಮೂರ್ತಿ ನರಿಯ ಹಾಗಾದನು (೧೭೫.) ಹೀಗಾಗಿ ಹತ್ತು ಅವತಾರಗಳೆತ್ತಿ ಎತ್ತು, ಎಮ್ಮೆಗಳನ್ನು ಕಾಯ್ದು ಪಾಂಡವರ ಸೇವಕನಾದ ಹರಿ ಎಂತಹ ದೇವರು? ಎಂದು ಈತ ಪ್ರಶ್ನಿಸಿದ್ದಾನೆ. (೧೭೪) ಆದರೆ ಯೋಗಸಾಧನೆಯನ್ನು ಕೈಗೊಂಡಮೇಲೆ ಅದರಿಂದ ಉಂಟಾಗುವ ಚಿತ್ರ ವಿಚಿತ್ರವಾದ ಅನುಭವಗಳನ್ನು ಗಮನಿಸಿ, ಬ್ರಹ್ಮ ಸಾಕ್ಷಾತ್ಕಾರ ಸೌಖ್ಯವನ್ನು ಅನುಭವಿಸಲು ಪ್ರಾರಂಭಿಸಿದ ಕೂಡಲೇ ಈತನಿಗೆ ಬಹಿರಂಗವನ್ನು ಕುರಿತ ಭಾವನೆಗಳೆಲ್ಲವು ವೇಮನನಿಗಾದಂತೆಯೆ ನಶಿಸಿಹೋದವು. ಈ ವಿಗ್ರಹ ಪೂಜೆಗಳು, ಈ ವೇದವಾದಗಳು, ಈ ಜಾತಿ ಭೇದಗಳು ಮೊದಲಾದವುಗಳೆಲ್ಲ ತತ್ತ್ವನಿರ್ಣಯದಲ್ಲಿ ಏನೇನೂ ಕೆಲಸಕ್ಕೆ ಬಾರವು ಎಂದು ತಿಳಿದನು. “ಚೆಡು ರಾಳ್ಳಕು ವಟ್ಟಿ ಪೂಜ ಚೇಯಕು ವೇಮಾ (೨೩೨೭) ಎಂದು ಹೇಳಿದ್ದರೂ ಆತನಂತೆಯೇ ಈತನಿಗೂ, ದೇವಳದಲ್ಲಿನ ಶಿವಲಿಂಗ ಮಸಾಲೆ ಅರೆಯುವುದಕೆ ಉಪಯೋಗಿಸಬಹುದಾದ ಗುಂಡೇ ಹೊರತು ಬೇರೇನಲ್ಲವೆಂದು ಅನ್ನಿಸಿತು. ಸಂಬಾರವರೆವ ಬಲುಕಲ್ಲು ಹರನೆಂದು ನಂಬುವರಾರು ಸರ್ವಜ್ಞ” (೧೬೫) ಎಷ್ಟು ವೇದಗಳಿದ್ದೂ ಏನು ಫಲವಿದೆ? ಅನುಭವಿಯ ವೇದವೇ ವೇದ (೮೧೬) ಮತ್ತೆ “ನಾಲ್ಕು ವೇದಗಳು ನಾಲ್ಕು ಮೊಲೆಗಳು ನಾದವೇ ನೊರೆಹಾಲು ಇದನ್ನು ಸಾಧಿಸುವ ಶಕ್ತಿ ಶಿವಯೋಗಿಗಲ್ಲದೆ ಇನ್ನಾರಿಗೂ ಇಲ್ಲ (೪೨೮) ವೇಮನನು ಕೂಡ ವೇದಸಾರಮೆಲ್ಲ ವೇಮನ ಯೆರುಗುನು (೩೬೦೭) ಎಂದಿದ್ದಾನೆ. ಯೋಗಿಗಳೆಲ್ಲ ಹೀಗೆಯೇ ಹೇಳಿದ್ದಾರೆ.

ಮಥಿತ್ವಾ ಚತುರೋವೇದಾನ್ ಸರ್ವಶಾಸ್ತ್ರಾಣಿ ಚೈವಹಿ
ಸಾರಸ್ತು ಯೋಗಿಭಿಃ ಪೀತಸ್ತಕ್ರಂ ಪಿಬತಿ ಪಣ್ಡಿತಃ
(ಜ್ಞಾನಸಂಕಲನೀ ತಂತ್ರ, ೫೦)

(ಎಲ್ಲ ವೇದ ಶಾಸ್ತ್ರಗಳನ್ನು ಮಥಿಸಿ ಯೋಗಿಗಳು ಸಾರವನ್ನು ಕುಡಿಯುವರು, ಪಂಡಿತನು ಬರೀ ಮಜ್ಜಿಗೆಯನ್ನು ಕುಡಿಯುವನು.) ಆದ್ದರಿಂದ ಜ್ಞಾನಿಯಾದವನಿಗೆ ವಾದದ ಅಗತ್ಯವಿಲ್ಲ. ಮತ್ತು ಬ್ರಹ್ಮಜ್ಞಾನವುಳ್ಳವನು ಸುಮ್ಮನಿರಬೇಕೇ ಹೊರೆತು ಅದನ್ನು ಕುರಿತು ಚರ್ಚಿಸುವುದು, ಕದಿಯಲು ಹೋದವನು ಕೆಮ್ಮಿದ ಹಾಗಾಗುತ್ತದೆ (೩೨೪) ಎಂದು ವೇಮನ ಹೇಳಿದ್ದಾನೆ. (೩೩೪೦) ಯಜ್ಞಯಾಗಾದಿಗಳ ಬಗ್ಗೆ ಆತನಿಗೆಂತಹ ದ್ವೇಷವೋ ಈತನಿಗೂ ಅಷ್ಟೇ. ಒಂದು ಮೇಕೆಯನ್ನು ಕೊಂದು ತಿಂದವನು ಸ್ವರ್ಗಕ್ಕೆ ಹೋಗಬಹುದೆಂದಾದರೆ ಯಾವಾಗಲೂ ಮೇಕೆಗಳನ್ನು ಲೆಕ್ಕವಿಲ್ಲದೆ ಕೊಂದು ತಿನ್ನುವ ಕಟುಕನು ದೇವೇಂದ್ರನೆ ಆಗಬೇಕಲ್ಲ? ಎಂಬುದು ಈತನ ಪ್ರಶ್ನೆ (೮೪೭). ಇನ್ನು ವೇಮನನ ಹಾಗೇ ಜಾತಿಭೇದಗಳನ್ನು ಕುರಿತು ದಂಡೆತ್ತಿದ ಬಸವಣ್ಣನ ಧರ್ಮವನ್ನು ಅರಿತಿದ್ದ ಈತನಿಗೆ ಪರಬ್ರಹ್ಮಾನುಭವವೂ ಜೊತೆಯಾಗಿ, ಈತನನ್ನು ಅವುಗಳಿಗೆ ಪರಮ ಶತ್ರುವನ್ನಾಗಿ ಮಾಡಿತು. ಎಲ್ಲರಿಗಿಂತಲೂ ಹೆಚ್ಚು ಮೇಲು ಎನ್ನಲಾದ ಬ್ರಾಹ್ಮಣರ ಬಗ್ಗೆ ದ್ವೇಷವೂ, ಕೀಳು ಎನ್ನಲಾಗಿರುವ ಚಂಡಾಲರ ಬಗ್ಗೆ ಕನಿಕರವೂ ಉಂಟಾಯಿತು. ಬ್ರಾಹ್ಮಣರು ಧರ್ಮಚ್ಯುತರಾದರೆಂದೇ ಈತನಿಗೂ ವೇಮನನ ಹಾಗೆ ಅವರ ಮೇಲೆ ಸಿಟ್ಟು, ಯೋಗ ಧ್ಯಾನಗಳನ್ನರಿಯದೆ ಬ್ರಾಹ್ಮಣರು ಭೋಗಿಗಳಾಗಿ ಬಿಟ್ಟಿದ್ದಾರೆಂಬುದು ಈತನ ಆರೋಪ (೮೨೫). ತಾಯಿ ಶೂದ್ರಳು ತಾನು ಹೇಗೆ ಬ್ರಾಹ್ಮಣ? (೧೪೭೬) ಎಂದು ಕೇಳಿದ ವೇಮನನಂತೆಯೇ, ಸಂಸ್ಕಾರ ಜನಿವಾರಗಳು ಅವು ಇಲ್ಲದ ತಾಯಿ, ಹೆಂಡತಿ ಮೊದಲಾದವರೊಂದಿಗೆ ಕೂಡಿದ್ದರೂ, ಶೂದ್ರರನ್ನು ಮುಟ್ಟಿಸಿಕೊಳ್ಳದೆ ಅವರಿಗಿಂತಲೂ ತಾನು ಹೆಚ್ಚು ಎನ್ನುವಂತಹ ಬ್ರಾಹ್ಮಣನದು ಎಂತಹ ಬ್ರಾಹ್ಮಣತ್ವವೆಂದು ಕೇಳುವನು (೮೨೭). ಅವರನ್ನು ನಂಬಿ ಯಾರು ಬದುಕಿದ್ದಾರೆಂದು ಆತನಂತೆಯೇ ಈತನೂ ಆಕ್ರೋಶಿಸಿದ್ದಾನೆ.! (೯೦೪) ಆದರೆ ನೀತಿಯನ್ನರಿತ ಬ್ರಾಹ್ಮಣನು ಲೋಕಕ್ಕೆ ಜ್ಯೋತಿಯಂತಹವನೆಂದು ನಿರ್ವಂಚನೆಯಿಂದ ಹೇಳಿದ್ದಾನೆ (೮೮೮). ಆದ್ದರಿಂದ ಜನ್ಮಸಿದ್ಧವಾದ ಮೇಲುಕೀಳುಗಳನ್ನು ಮಾನ್ಯ ಮಾಡಬಾರದು. ಒಂದೇ ಭೂಮಿಯ ಮೇಲೆ ನಡೆದು, ಒಂದೇ ನೀರನ್ನು ಕುಡಿದು, ಒಂದೇ ಅಗ್ನಿಯಲ್ಲೇ ಎಲ್ಲರೂ ಉರಿದು ಹೋಗುತ್ತಲಿರಲು, ನಡುವೆ ಕುಲಗೋತ್ರಗಳೆಲ್ಲಿಂದ ಬಂದವು? (೮೬೪) ಸ್ವರ್ಗದಲ್ಲಿ ಹೊಲಗೇರಿಯಿಲ್ಲವೆಂತಲೂ, ದೇವರಿಗೆ ಕುಲಭೇದವಿಲ್ಲವೆಂದೂ, ಸ್ಪಷ್ಟವಾಗಿ ಹೇಳಿದ್ದಾನೆ.

ಇನ್ನು ನನ್ನ ದೇವರೆಂಥವನು? ಆತ ಜಗಕ್ಕೆಲ್ಲ ಒಬ್ಬನೆ ಪ್ರಭುವು (೧೫೦) ಆತನು ಶಿವ. ನಿರಾಕಾರ (೯೫) ಸರ್ವವ್ಯಾಪಿ ಹಾಲಿನಲ್ಲಿ ತುಪ್ಪದ ಹಾಗೆ, ನೀರಿನಲ್ಲಿ ಬೆಂಕಿಯ ಹಾಗೆ ಎಲ್ಲದರಲ್ಲೂ ಇರುವನು (೨೭೫) ನೀನಿರುವಲ್ಲಿಯೇ ನಿನ್ನಲ್ಲಿಯೆ ಇರುವನು (೨೭೬) ಅದು ಹೇಗೆ ಸಾಧ್ಯವೆಂದು ಯಾರಾದರೂ ಪ್ರಶ್ನಿಸಿದರೆ :

ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣಿಸಿ ಬರೆದ ಪಠದೊಳಗೆ, ಇರುವಾತ
ತನ್ನಲ್ಲಿ ಯಿರನೆ ಸರ್ವಜ್ಞ“? (೨೮೦)

ಎಂದು ಈತ ತಿರುಗಿ ಪ್ರಶ್ನಿಸುತ್ತಾನೆ. ಯೋಗ ಸಮಾಧಿಯಲ್ಲಿ ನಿಂತು, ಎಲ್ಲ ಭೇದಗಳನ್ನು ಮರೆತು, ತಾನೇ ತಾನಾಗಿರಲು ಅಲ್ಲೇ ಬ್ರಹ್ಮ ಸಾಕ್ಷಾತ್ಕಾರಿಸುವನು (೨೮೨). ಜೀವಿಗಳಿಗೇ ಅಜ್ಞಾನ ರೂಪವಾದ ಮಾಯೆ ಇರುವುದಷ್ಟೆ ಆತನಿಗಲ್ಲ (೨೮೭). ತನ್ನನ್ನು ತಾನು ಅರಿತಾಗ ತನ್ನ ಮಾಯೆ ನಶಿಸಿಹೋಗುವುದು (೩೦೬).

ಹೀಗೆ ಜೀವ ಬ್ರಹ್ಮಗಳಿಗಿರುವ ಭೇದವೆ ಈತನ ಅನುಭವಕ್ಕೆ ಬಂದಿದೆಯಷ್ಟೇ, ವೇಮನನ ಹಾಗೆ ಪರಿಪೊರ್ಣದ್ವೈತಾನುಭವ ಆದಂತೆ ತೋರುವುದಿಲ್ಲ. ಶಿವಪಕ್ಷಪಾತ ಮೊದಲು ಉಂಟಾದರೂ ಕೊನೆಗೆ “ಮುಗ್ಗುರಿಕಂದನಿ ಮೂಲಮೂರ್ತಿಯೊಕಂಡು” (೩೦೩) ಎಂದು ಹೇಳಿ “ತನ್ನು ತಾನೆೞೆಗಿನ ತಾನೆಪೋ ಬ್ರಹ್ಮಂಬು” (೧೭೮೨) ಎಂದ ವೇಮನನ ಹಾಗೆ ನಿಶ್ಚಯವಾಗಿ ಈತ ಹೇಳಲಾಗಲಿಲ್ಲ. ಆತನ ಹಾಗೆ ಅತೃಪ್ತಿಯಿಂದ ಮುಂದೆ ಮುಂದೆ ಇನ್ನೂ ಕಾಣಬೇಕು ಎಂಬ ಆಶೆಯಿಲ್ಲದೆ, ಕೊಂಚಮಟ್ಟಿಗೆ ಸಿಕ್ಕಿದಷ್ಟಕ್ಕೆ ಸಂತೋಷಪಡುವ ಸ್ವಭಾವದವನಾಗಿರುವುದೇ ಇದಕ್ಕೆ ಕಾರಣವೆಂದು ತಿಳಿಯುತ್ತಿದ್ದೇನೆ. ಪರಮ ಫಲವಾದ ಅದ್ವೈತಾವಸ್ಥೆಯು ಲಭಿಸದಿದ್ದರೂ, ಹಠ ರಾಜಯೋಗಗಳ ಅಭ್ಯಾಸದಿಂದಾಗಿ ಈತನಿಗೆ ವೇಮನನಿಗೆ ಉಂಟಾದ ಇತರ ಫಲಗಳೆಲ್ಲವು – ಸರ್ವಸಮ್ಮತ, ಬಹಿರಂಗ ದ್ವೇಷ ಮುಂತಾದವು – ಲಭಿಸಿದವು. ಮತ್ತು ಬ್ರಹ್ಮಾದ್ವೈತವನ್ನು ಸಾಧಿಸಬೇಕೆಂದು ಈತ ಪ್ರಯತ್ನಿಸಲೇ ಇಲ್ಲವೆಂದು ಹೇಳಬಹುದು:

ಅದ್ವೈತ ಕೋಡಾಡಿ ಯಿದ್ದುದನು ಹೋಗಾಡಿ
ಉದ್ದನ ಮರದ ತುದಿಗೇರಿ, ಕೈಜಾರಿ
ಬಿದ್ದು ಸತ್ತಂತೆ ಸರ್ವಜ್ಞ.” (೨೮೫)

‘ಅದ್ವೈತಕ್ಕಾಗಿ ಅಲೆದು ಇದ್ದುದನ್ನು ಕಳೆದುಕೊಳ್ಳುವುದು, ಉದ್ದನೆಯ ಮರದ ತುದಿಗೇರಿ ಕೈಜಾರಿ ಬಿದ್ದು ಸತ್ತಂತೆ’ ಎಂದು ತಿಳಿದುಕೊಂಡವನೀತ. ಆದರೆ ಈತನಿಗೆ ಜೀವಾದ್ವೈತ – ಅಂದರೆ, ಪ್ರಾಣವಿರುವ ಎಲ್ಲರೂ ಒಂದೇ ಎಂಬುದು – ಸಿದ್ಧಿಸಿದೆ. ‘ತಾನದ್ವೈತನಾದನಂತರ ಯಾರೊಂದಿಗೆ ಕಲಹವಾಡಬೇಕು? ಬುದ್ಧಿಯಲ್ಲಿ ತನ್ನನ್ನರಿತವನಿಗೆ ಲೋಕದ ಜಗಳಗಳಿಲ್ಲ.’ (೩೩೭.) ಆದ್ದರಿಂದ ನಿಜವಾದ ಯೋಗಿಯು ವೇಷ, ತಿಂಡಿ ಇತ್ಯಾದಿಗಳ ಬಗ್ಗೆ ಚಿಂತಿಸದೆ, ಸಿಕ್ಕಿದ್ದನ್ನು ತಿಂದು ಸಿಗದಿದ್ದರೂ ಸುಮ್ಮನಿದ್ದು, ಯಾವುದೋ ಮನೆಯ ಪಡಸಾಲೆಯಲ್ಲೋ ಮರದ ಕೆಳಗೊ ಮಲಗಿದ್ದು, ಸದಾ ಶಿವಧ್ಯಾವಾನಂದವನ್ನನುಭವಿಸುತ್ತಾ, ಸಾವು ಬಂದಾಗ ಸಂತೋಷವಾಗಿ ಎದ್ದು ಹೊರಡಲು ಸಿದ್ಧವಾಗಿರಬೇಕೇ ಹೊರತು, ಸಂಸಾರದಲ್ಲಿ ಬಿದ್ದು ಹೆಂಡತಿ ಮಕ್ಕಳೊಂದಿಗಿದ್ದರೆ ಕೈಲಾಸ ಸಿಗುವುದಿಲ್ಲವೆಂದೇ ಸರ್ವಜ್ಞ ತಿಳಿದಿದ್ದನು. ವೇಮನನಂತೇ ಈತನಿಗೂ ಕಾಡುಮೇಡುಗಳಲ್ಲಿ ಬಿದ್ದಿರುವುದು ಅಸಹ್ಯ. ಮನಸಿನಲ್ಲಿ ಧ್ಯಾನಿಸುವವನಿಗೆ ಮನೆ, ಮಠ, ಕಾಡು, ಬೆಟ್ಟ ಎಲ್ಲವೂ ಒಂದೇ ಎಂದೂ, ಅದಿಲ್ಲದವನು ದೇವಳದ ಗರ್ಭಗುಡಿಯಲ್ಲಿದ್ದರೂ, ಬೆಟ್ಟ ಕಣಿವೆಯಲ್ಲಿದ್ದರೂ ಒಂದೇ ಎಂಬುದು ಈತನ ಅಭಿಪ್ರಾಯ (೨೦೭). ಈತ ತನ್ನ ಜೀವನವನ್ನು ಹೀಗೆಯೇ ಕಳೆದಿದ್ದಾನೆಂಬುದರಲ್ಲಿ ಸಂದೇಹವಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚಿನದು ತಿಳಿಯದು.

ವೇಮನನಂತೆಯೇ ಈತನು ಸಾವಿರ ಸಂಖ್ಯೆಯಲ್ಲಿ ಪದ್ಯಗಳನ್ನು ಹೇಳಿದವನು. ಸಮಯ ಸಿಕ್ಕಾಗಲೆಲ್ಲ ಮಾತುಗಳಿಗೆ ಬದಲಾಗಿ ಹಾಡುಗಳನ್ನೇ ಉಪಯೋಗಿಸಿದವನು. ಈ ವಿಷಯ ಆವಿಷಯವೆನ್ನದೆ ಸಿಕ್ಕಿದರ ಮೇಲೆಲ್ಲ ಪದಕಟ್ಟಿ ಎಸೆದವನು. ಹೀಗೆ ಹಾಗೆ ಎನ್ನದೆ ಮನಬಂದಂತೆಲ್ಲ ಒದರುವ ಬಾಯಿಯೀತನದು ಶಬ್ದಗಳು ಸಹ್ಯವಾಗಿಲ್ಲದಿರಬಹುದು. ಅಥವ ನ್ಯಾಯವಾಗಬಹುದು. ಆದರೆ ಅಶಕ್ತ ಮಾತುಗಳು, ಸ್ಪರ್ಶಿಸದ ಭಾವಗಳು ಈತನ ಬಾಯಿಂದ ಹೊರಬೀಳವು. ವೇಮನನಂತೆ ಈತನೂ ದೇಶಸಂಚಾರ ಮಾಡಿ ತನಗೆ ತಿಳಿದ ತತ್ವ ನೀತಿ ಧರ್ಮಗಳನ್ನು ಪ್ರಸ್ತಾವಿಕವಾಗಿ ಜನರಿಗೆ ಬೋಧಿಸಿದವನೇ. ಆದರೆ ಆತನಿಗಿಂತಲೂ ಈತನಿಗೆ ಲೌಕಿಕ ಹೆಚ್ಚು. ತನ್ನ ಮಾತಗಳನ್ನು ಆಲಿಸದ ಮೂರ್ಖರನ್ನಾತ ದನಗಳು, ಗುಲಾಮರು, ಕತ್ತೆಗಳು ಎಂದು ಬಯ್ದವನು. ಈತನೂ ಅಂತಹ ಮೊಲದ ಕಾಲುಗಳವಾದದವರನ್ನು ಎದುರಿಸದೆಯಿಲ್ಲ. ಆದರೆ ಅವರೊಂದಿಗೆ ಕಲಹಿಸುವುದಕ್ಕಿಷ್ಟ ಪಡಲಿಲ್ಲ : ಫಲವಿಲ್ಲವಾದ್ದರಿಂದ. ಅಂತಹವರನ್ನು ಕುರಿತು ಈತನೇನೆಂದಿರುವನೋ ಕೇಳಿರಿ.

ನೆಲವನ್ನು ಮುಗಿಲನ್ನು ಹೊಲಿವರುಂಟೆಂದರೆ
ಹೊಲಿವರು ಹೊಲಿವರೆನಬೇಕು ಮೂರ್ಖನಲಿ
ಕಲಹವೇ ಬೇಡ ಸರ್ವಜ್ಞ” (೯೪೦)

‘ಆದ್ದರಿಂದ ಮೂರ್ಖನು ಅಂದಂತೆ ಅನ್ನಿ’ ಎಂದು ಈತ ಬೋದಿಸಿದ್ದಾನೆ (೯೪೩) ತೊಡಕಿಲ್ಲದ ಧಾರಳವಾದ ಶೈಲಿ, ಎಲ್ಲರಿಗು ಆರ್ಥವಾಗುವ ಭಾಷೆ, ಎಲ್ಲರು ಅನುಭವಿಸಿ ತಿಳಿದಿರುವ ಉಪಮಾನಗಳು, ಮರೆಯಿಲ್ಲದ ಮಾತುಗಳು, ನಕ್ಕುನಗಿಸುವ ಹಾಸ್ಯ – ಇವು ಈತನ ಕಾವ್ಯದ ಮುಖ್ಯಾಂಶಗಳು. ಜ್ಯೋತಿಷ್ಯ, ಹಾಸ್ಯ, ಶಕುನಶಾಸ್ತ್ರ, ಕಾಮಶಾಸ್ತ್ರ ಮುಂತಾದವುಗಳಲ್ಲಿ ಈತನಿಗೆ ವೇಮನನಿಗಿಂತಲೂ ಹೆಚ್ಚು ಪ್ರವೇಶವಿತ್ತು. ರಸವಾದದಲ್ಲಿಯೂ ಆತನಿಗಿದ್ದಷ್ಟು ನಂಬಿಕೆ ಮತ್ತು ಅನುಭವವಿತ್ತು. ಅಸಭ್ಯ ವಿಷಯಗಳ ಬಗ್ಗೆ ಇಬ್ಬರಿಗೂ ಎಗ್ಗಿಲ್ಲ. ಇಬ್ಬರೂ ಅರ್ಥವಾಗದ ‘ಕೂಟ’ ಪದ್ಯಗಳನ್ನು ಆಗಾಗ ಬರೆದವರೇ. ಹೀಗೆ, ಸ್ವಭಾವದಲ್ಲಿನ ಅಲ್ಪಭೇದದಿಂದಾಗಿ ದೃಷ್ಟಿಕೋನದಲ್ಲಿ ಇಬ್ಬರಿಗೂ ಸ್ವಲ್ಪ ಭೇದ ಕಂಡುಬಂದರೂ, ಒಟ್ಟಾರೆ ಇಬ್ಬರೂ ಪರಸ್ಪರ ಮತ್ತೊಬ್ಬರಿಂದ ರೂಪುಗೊಂಡ ಪ್ರತಿಮೆಗಳೆನ್ನಬಹುದು.

ಇದಲ್ಲದೆ ಇಬ್ಬರೂ ಪರಸ್ಪರ ಮಾತಾಡಿಕೊಂಡು ಬರೆದಂತಿರುವ ಪದ್ಯಗಳೂ ಕೆಲವಿವೆ. ನೋಡಿರಿ –

.        “ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ?
            ಕಟ್ಟಲೂ ಬೇಡ, ಬಿಡಬೇಡ, ಕಣ್ಮನವ ಕಟ್ಟಿದರೆ ಸಾಕು ಸರ್ವಜ್ಞ ” (೧೪೮)
*          “ ಬಂದೆತಾಳ್ಳುದೆಚ್ಚಿ ಬಂಧಿಂಚಿ ಕಟ್ಟಂಗ
            ಲಿಂಗಡೇಮಿ ದೊಂಗಲಿಂಚಿನಾಡೊ
            ಆತ್ಮ ಲಿಂಗಮುನಕು ನರಿಚೆಂಪನೇರ ರೋ?” (೨೬೮೫)

.        “ಒಡಲ ದಂಡಿಸಿ ಮುಕ್ತಿ ಪಡೆವೆನೆಂಬುವ ಹೆಡ್ಡ
            ಬಡಿಗೆಯಲಿ ಹುತ್ತ ಹೊಡಿಯಲಡಗಿಹ ಸರ್ಪ,
            ಮುಡಿಯುವದೆ ಹೇಳು ಸರ್ವಜ್ಞ.” (೫೧೦)

            “. ಒಡಲು ಬಡಲಜೇಸಿ ಯೋಗುಲಮನುವಾರು
            ಮನಸು ಕಲ್ಮಷಂಬು ಮಾನ್ವಲೇರು
            ಪುಟ್ಟಮೀದ ಗೊಟ್ಟ ಭುಜಗಂಬು ಚಚ್ಚುನಾ?…” (೮೦೬)

.        “ಕೊಟ್ಟ ಬಹ ಕಾಲದಲ್ಲಿ ಕೊಟ್ಟಣಲಿ ಕರಿಯದೇ
            ಹುಟ್ಟಿಯ ಒಳಗೆ ಜೇನಿಕ್ಕಿ, ಪರರಿಂಗೆ ಕೊಟ್ಟು ಹೋದಂತೆ ಸರ್ವಜ್ಞ.” (೯೦೫)
            “. ಧನಮು ಗೊಡಬೆಟ್ಟಿ ಧರ್ಮಂಬು ಸೇಯಕ
            ತಾನು ಲೆಸ್ಸದಿನಕ ದಾಚು ಲೋಭಿ
            ತೇನೆ ನೀಗಗೂರ್ಚಿ ತೆರುವರಿಕೆಯ್ಯದಾ” (೨೧೦೭)

.        “ಕಲ್ಲುಪ್ಪು ಕರ್ಪುವು ಸೊಲ್ಲೆರಡು ಧಾತೊಂದು
            ಕೂಲ್ಲನೊರ್ಲಲೀದನ ರೂಪೊಂದು, ಗುಣದೊಳಗೆ,
            ಎಲ್ಲ ಅಂತರವು ಸರ್ವಜ್ಞ” (೭೨೭)
            “. ಉಪ್ಪು ಕಪ್ಪುರಂಬು ನೊಕ್ಕಪೋಲಿಕನುಂಡು
            ಚೂಡ ಜೂಡ ರುಜಾಲ ಜಾಡವೇರು
            ಪುರಷಲಂದು ಪುಣ್ಯ ಪುರುಷುಲು ವೇಱಯಾ…” (೫೩೪)

ಇಂಥವು ಇನ್ನೂ ಇವೆ. ಈ ಹೋಲಿಕೆಗಳು ಕೇವಲ ಆಕಸ್ಮಿಕವೋ ಇಲ್ಲವೆ ಒಬ್ಬರನ್ನು ಮತ್ತೊಬ್ಬರು ನೋಡಿ ಬರೆಯಲ್ಪಟ್ಟಿರುವೆವೋ ಎಂಬ ಚರ್ಚೆಗೆ ಕೈ ಹಾಕಿ ಫಲವಿಲ್ಲ. ಅಸಲು ಇಬ್ಬರ ಕಾಲವೇ ಸ್ಪಷ್ಟವಾಗಿ ನಿರ್ಣಯವಾಗಿಲ್ಲ. ಆದ್ದರಿಂದ ಇಬ್ಬರಲ್ಲಿ ಯಾರು ಮೊದಲನೆಯವರೋ ಹೇಳಲಾರೆವು. ಉತ್ತಂಗಿ ಚೆನ್ನಪ್ಪನವರು ಭಾವಿಸಿರುವ ಹಾಗೆ ಸರ್ವಜ್ಞ ಹದಿನಾರನೇ ಶತಮಾನದವನಾಗಿಯೂ, ವೇಮನ ನಾವು ತಿಳಿದಿರುವ ಹಾಗೆ ಹದಿನೇಳನೇ ಶತಕದ ಕೊನೆಯ ಭಾಗದವನೇ ಆಗಿದ್ದರೆ ವೇಮನನೇ ಈತನನ್ನು ಅನುಸರಿಸಿದ್ದಾನೆ ಎನ್ನಬಹುದು. ಆದರೆ ವೇಮನ ಕನ್ನಡನಾಡಿನ ಸಮೀಪವಿದ್ದವನಾದರೂ, ತೆಲುಗು ಮತ್ತು ತಮಿಳುನಾಡುಗಳಲ್ಲಿ ಅಲೆದಂತೆ ಕಂಡುಬರುತ್ತದೆಯೇ ಹೊರತು, ಕನ್ನಡಿಗರ ಸಹವಾಸ ಲಭಿಸಿತ್ತೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ತೆಲುಗುನಾಡಿನಲ್ಲಿ ಸರ್ವಜ್ಞನ ಪದಗಳಿಗೆ ವ್ಯಾಪ್ತಿ ಕಂಡುಬರುವುದಿಲ್ಲವಾದರೂ, ಈತ ಇಲ್ಲಿ ಕೊಂಚ ಸಂಚರಿಸಿದಂತಿದೆ. ತೆಲುಗಿನವರನ್ನು ಈತ ಬಯ್ದು ಬರೆದ ಪದ್ಯಗಳು ಇವೆ. (೧೨೫೪ – ೫೫) ಶ್ರೀರಾಮನು ಲಂಕೆಯನ್ನು ಗೆದ್ದ ನಂತರ ಲಂಕೆಯಲ್ಲಿನ ಸ್ತ್ರೀಯರಿಗೂ ಕಿಷ್ಕಿಂದಾ ಪಟ್ಟಣದ ಪುರುಷರಿಗೂ ನಡೆದ ಸಂಘ ಸಂಸ್ಕಾರ ವಿವಾಹಗಳ ಫಲವೆ ತೆಲುಗಿನವರೆಂಬುದು ಈತನ ಮನುಷ್ಯ ಶಾಸ್ತ್ರ ಸಿದ್ಧಾಂತ (೧೨೫೫) ! ಮತ್ತು ಕನ್ನಡನಾಡಿಗೆ ವಲಸೆ ಬಂದು ನೆಲೆಸಿರುವ ಆಂಧ್ರರು ಅನೇಕರಿದ್ದಾರೆ. ಮುಲಕನಾಡು ಬ್ರಹ್ಮಣರು, ಕೋಮಟಿಗರು, ಕ್ಷೌರಿಕರು, ಭಟ್ಟರಾಜರು ಮೊದಲಾದ ತೆಲುಗರನೇಕರು ಮೈಸೂರು ಸೀಮೆಯಲ್ಲಿ ಇಂದಿಗೂ ಇದ್ದಾರೆ. ಆದರೆ ಕನ್ನಡಿಗರು ಆಂಧ್ರದಲ್ಲಿ ಬಹಳ ಕಡಿಮೆ. ಹೀಗಾಗಿಯೇ ವೇಮನ ಪದ್ಯಗಳಿಗೆ ಕನ್ನಡ ಸೀಮೆಯಲ್ಲಿ ಕೊಂಚ ಮಟ್ಟಿಗೆ ಪ್ರಚಾರವಿದೆ. ಇದರಿಂದ ವೇಮನನ ವಾಸನೆಯೇ ಸರ್ವಜ್ಞನಿಗೆ ತಗುಲಿರಬಹುದೇ ಎಂಬ ಸಂದೇಹ ಕೂಡ ಉಂಟಾಗಬಹುದು. ಆದರೆ ಇದಕ್ಕಿಂತಲೂ ಹೆಚ್ಚು ದೂರ ಈ ವಿಷಯವನ್ನು ನಿರ್ಧರಿಸುವುದು ಸಾಹಸದ ಕೆಲಸ ಮತ್ತು ಈ ಇಬ್ಬರೂ ಕೂಡ ಪರಸ್ಪರ ಯಾರಿಗೆ ಯಾರು ಬೇಕಾದರೂ ಗುರುವಾಗಬಹುದಾದ ಸಾಮರ್ಥ್ಯವುಳ್ಳವರೆಂಬುದರಲ್ಲಿ ಸಂದೇಹವೇ ಇಲ್ಲ.

ತಿರುವಳ್ಳುವರ್

ನಮ್ಮ ಮತ್ತೊಂದು ನೆರೆಮನೆಯವರಾದಂತಹ ತಮಿಳರಲ್ಲಿ ಬಹಳ ಪ್ರಸಿದ್ಧವಾಗಿರುವ ತಿರುವಳ್ಳುವರ್ ನಾಯನ್ಮಾರರ ‘ತಿರುಕ್ಕುರಳ್’ ಎಂಬ ಕೃತಿಯೊಂದಿಗೆ ವೇಮನ ಪದ್ಯಗಳನ್ನು ಇಟ್ಟು ನೋಡಬೇಕೆನ್ನುವುದು ಪ್ರಕೃತ ಉಪನ್ಯಾಸ ನಿಬಂಧನೆಗಳಲ್ಲೊಂದು. ಆದರೆ ಈ ಇಬ್ಬರಿಗೂ ಹೋಲಿಕೆ ಬಹಳ ಕಡಿಮೆ. ನನಗೆ ದ್ರಾವಿಡ (ತಮಿಳು) ಭಾಷಾಜ್ಞಾನ ಅದಕ್ಕಿಂತಲೂ ಕಡಿಮೆ. ಆದರೂ ತಿಳಿದಮಟ್ಟಿಗೆ ಆತನನ್ನು ಕುರಿತು ಸ್ವಲ್ಪ ಮಟ್ಟಿಗೆ ಸಂಕ್ಷಿಪ್ತವಾಗಿ ಹೇಳಬಯಸುತ್ತೇನೆ.

ತಿರುವಳ್ಳುವರ್ ಬಹಳ ಪ್ರಾಚೀನ ವ್ಯಕ್ತಿ. ಈತನ ಕಾಲವನ್ನು ಕ್ರಿ.ಶ.ದ ಮೊದಲನೆಯ ಶತಮಾನವೆಂದು ಅನೇಕರು ತಿಳಿದಿದ್ದಾರೆ. ಮದರಾಸಿನ ಮೈಲಾಪುರದಲ್ಲಿದ್ದವನು. ಭಗವಂತನೆಂಬ ಬ್ರಾಹ್ಮಣನಿಗೂ ‘ಆದಿ’ ಎಂಬ ಚಂಡಾಲ ಸ್ತ್ರೀಗೂ ಜನಿಸಿದವನೆಂದು ಕಥೆ.* ವಳ್ಳುವರ್ ಎನ್ನುವವರು ಒಂದು ಗುಂಪಿನ ಮಾದಿಗರೇ ಆಗಿರುವುದರಿಂದ ಈತನ ಹೆಸರ ಮೇಲಿನ ಕಥೆಯಲ್ಲಿ ಸ್ವಲ್ಪ ಸತ್ಯವಿದೆಯೆಂದು ಸೂಚನೆಯಿದೆ. ಈತನ ನಿಜವಾದ ಹೆಸರೇನೋ ಗೊತ್ತಿಲ್ಲ. ನೇಯ್ಗೆ ವೃತ್ತಿ ಮಾಡುತ್ತಿದ್ದವನು. ಈತನ ಹೆಂಡತಿ ವಾಸುಕಿ. ಇವರಿಬ್ಬರ ದಾಂಪತ್ಯ ಅಪೂರ್ವವಾಗಿ ಬಹಳ ಸೌಖ್ಯಾವಹವಾಗಿತ್ತಂತೆ.

ಈತನು ಬರೆದ ಗ್ರಂಥ ‘ಕುರಳ್’. ‘ಕುರಳ್’ ಎಂದರೆ ಒಂದು ವಿಧವಾದ ಚಿಕ್ಕ ಛಂದಸ್ಸು ; ಅಟವೆಲದಿಯಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು. ಈತನ ಪದ್ಯಗಳೆಲ್ಲವು ಈ ಛಂದಸ್ಸಿನಲ್ಲಿಯೇ ಇವೆ. ಇದು ಧರ್ಮ, ಅರ್ಥ, ಕಾಮ ಎಂಬ ಮೂರು ಪುರುಷಾರ್ಥಗಳನ್ನು ಕುರಿತು ಮೂರು ಭಾಗಗಳಲ್ಲಿ ಬರೆಯಲ್ಪಟ್ಟಿರುವ ಉಪದೇಶ ಶಾಸ್ತ್ರ. ತಾನು ಬ್ರಾಹ್ಮಣನಲ್ಲದಿರುವುದರಿಂದ ಅಧಿಕಾರವಿಲ್ಲವೆಂದು ಈತ ಮೋಕ್ಷವನ್ನು ಕುರಿತು ಬರೆಯಲಿಲ್ಲವೆಂದೂ ಒಂದು ಕಥೆ. ಆದರೆ ಉಪೋದ್ಫಾತದಲ್ಲಿನ ಪದ್ಯಗಳಲ್ಲಿಯೂ, ಸನ್ಯಾಸಧರ್ಮ ಪ್ರಕರಣದಲ್ಲಿಯೂ ಭಗವಂತನನ್ನು ಕುರಿತು, ಮೋಕ್ಷೋಪಾಯಗಳನ್ನು ಕುರಿತು ಸಂಗ್ರಹವಾಗಿಯಾದರೂ ಬರೆದೇ ಇದ್ದನಾದ್ದರಿಂದ ಆ ಕಥೆಯನ್ನು ನಾವು ನಂಬಬೇಕಾಗಿಲ್ಲ; ಈತ ಸುಖಿಯಾದ ಸಂಸಾರಿಯಾಗಿದ್ದು, ಗೃಹಸ್ಥ ಧರ್ಮಗಳಾದ ಅತಿಥಿ ಪೂಜೆ ಮುಂತಾದವುಗಳನ್ನು ಮಾಡುವ ಕರ್ಮನಿಷ್ಠನಾಗಿ, ಸತ್ಯ,ನೀತಿ ಮೊದಲಾದ ಸಾಮಾನ್ಯ ಲೌಕಿಕ ಧರ್ಮಗಳನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಾ, ದೃಢನಾದ ದೈವಭಕ್ತಿಯುಳ್ಳವನಾಗಿದ್ದನೇ ಹೊರತು ವೇದಾಂತ ವಿಷಯಗಳನ್ನು ಹೆಚ್ಚಾಗಿ ಪರಿಶೀಲಿಸಿದವನಲ್ಲದಿರಬಹುದು. ಈತ ಮೇಲಿನ ಧರ್ಮಾರ್ಥ ಕಾಮಗಳಲ್ಲಿ ಪ್ರತಿಯೊಂದನ್ನು ಪ್ರತ್ಯೇಕವಾಗಿ ವಿಭಾಗಿಸಿ ಪ್ರತಿಯೊಂದು ವಿಷಯಕ್ಕೂ ಹತ್ತು ಪದ್ಯಗಳ ಪ್ರಕಾರ ಒಟ್ಟು ೧೩೩೦ ಪದ್ಯಗಳನ್ನು ರಚಿಸಿದ್ದಾನೆ. ಕೃತಿಕಾರನ ವಿಷಯ ವಿಭಾಗ ಶಕ್ತಿಯನ್ನು ಸೂಕ್ಷ್ಮದೃಷ್ಟಿಯನ್ನು ಇದರಲ್ಲಿ ಕಾಣಬಹುದು.

ಇದಕ್ಕೆ ಜೊತೆಯಾಗಿ ಒಳ್ಳೆಯ ಕವಿತಾಶಕ್ತಿಯೂ ಇದೆ. ಅಂದರೆ ವೇಮನನಂಥ ಆಶುಧಾರೆಯಲ್ಲ. ತಿಕ್ಕನನಂತೆ ತಾಳ್ಮೆಯಿಂದ ಕಡೆದು ರೂಪಿಸಿದ ರಚನೆ ಈತನದು. ಭಾವದಲ್ಲಿಯೂ ಆತನ ಉದ್ರೇಕ ಈತನಿಗಿಲ್ಲ. ಮಾರ್ದವತೆ, ತಾಳ್ಮೆ, ಸಹನೆ ಇವುಗಳನ್ನಿಲ್ಲಿ ಕಾಣಬಹುದು. ಹೀಗಾಗಿ ವೇಮನನ ಪದ್ಯಗಳ ಹಾಗೆ ಒಂದು ಸಲ ಕೇಳಿದೊಡನೆ ಇದು ಬಾಣದ ಹಾಗೆ ಎದೆಯಲ್ಲಿ ನಾಟದು. ಸೂತ್ರದ ಹಾಗೆ ಹಲವು ಸಲ ಮನನ ಮಾಡಬೇಕು. ಹಿಂದೂದೇಶದ ಎಲ್ಲ ಧರ್ಮಶಾಸ್ತ್ರ ಗ್ರಂಥಗಳಲ್ಲಿಯೂ ಕಂಡುಬರುವ ಅಹಿಂಸೆ, ಸತ್ಯ, ವೈರಾಗ್ಯ, ಶಾಂತಿ, ದಾಂತಿ, ಆತಿಥ್ಯ, ರಾಜಧರ್ಮ ಮುಂತಾದವುಗಳನ್ನು ಕುರಿತು ಎಲ್ಲರೂ ಆಚರಿಸಬಹುದಾದ ಸಾಮಾನ್ಯ ನೀತಿಗಳನ್ನು ಈತ ಬರೆದನೇ ಹೊರತು ಇದರಲ್ಲಿ ಹೊಸದೇನು ಇಲ್ಲ. ಆದರೆ ಅವುಗಳನ್ನೀತ ಸಂಗ್ರಹಿಸಿ, ಸರಿಯಾದ ಕ್ರಮದಲ್ಲಿ ಇಟ್ಟು, ಚಿತ್ರಕಾರ ಬೊಂಬೆಯನ್ನು ಮಾಡಿದ ಹಾಗೆ, ಸುತ್ತಲೂ ನಿಧಾನವಾಗಿ ಪರಿಶೀಲಿಸಿ, ಏರುಪೇರುಗಳನ್ನು ತಿದ್ದಿ, ತೀಡಿ, ಸಾವಧಾನವಾಗಿ ಕಾವ್ಯದ ಮೆರುಗನ್ನು ಕೊಟ್ಟು, ಪರಿಪೂರ್ಣವಾಗಿ ಪ್ರಕಟ ಪಡಿಸಿದವನು. ಆದರೆ, ಎಲ್ಲ ಪ್ರಾಚೀನರ ಹಾಗೆ ಮೇಲಿನ ವಿಷಯಗಳನ್ನು ಮಿತಿಮೀರಿ ಸಣ್ಣಸಣ್ಣದಾಗಿ ವಿಭಜಿಸತೊಡಗಿದ್ದರಿಂದ, ಪ್ರತಿಯೊಂದು ವಿಷಯದ ಮೇಲೆಯು ಹತ್ತು ಪದ್ಯಗಳನ್ನು ತಪ್ಪದೆ ಬರೆಯಬೇಕೆಂಬ ನಿಯಮದಿಂದಾಗಿಯೂ, ಅಲ್ಲಲ್ಲಿ ಕಾವ್ಯಶಿಲ್ಪ ತೆಳುವಾಗಿ ಸಪ್ಪೆಯಾಗಿರುವುದು ಕಂಡುಬರುತ್ತದೆ.

ವೇಮನ ವಿರಕ್ತ ಕವಿ. ಈತ ಸಂಸಾರಿ ಕವಿ. ಆದ್ದರಿಂದಲೇ ಆತ ಚಿಕ್ಕ ಮಕ್ಕಳನ್ನು, ‘ಹೊಲಸು ಮುದ್ದೆ’ ಗಳೆಂದು ‘ಮುದ್ದೆಯನ್ನು ಸೊಂಟದಲ್ಲಿಟ್ಟುಕೊಂಡು ಮುದ್ದಾಡುವುದೇತಕ್ಕೊ?’ (ವೇ.ಜ್ಞಾ ೧೧೧೨) ಎಂದು ಅಸಹ್ಯಪಟ್ಟುಕೊಂಡು ಮುಖವನ್ನು ಮೂಲೆಗೆ ತಿರುಗಿಸಿಕೊಂಡರೆ, ಈತ –

            ಪುಟ್ಟ ಮಕ್ಕಳು ತಮ್ಮ ಕಿರುಬೆರಳುಗಳಿಂದ ಚೆಲ್ಲಾಡಿದ
            ಕೂಳು ಅಮೃತಕ್ಕಿಂತಲೂ ಸವಿಯಾದುದಲ್ಲವೆ
            (ಕುರುಳ್, ಅರತ್ತುಪಾಲ್, ಪುದಲ್ವರೈಪ್ಪೆರುದಲ್೪)

ಎಂದಿದ್ದಾನೆ. ವೇಮನ ಸ್ತ್ರೀಯನ್ನು ತಿರಸ್ಕರಿಸಿ ವಿಧಿಯಿಲ್ಲದೆ ಅದಕ್ಕೆ ಶರಣಾಗುವಂತೆ ಕಂಡುಬರುತ್ತದೆ. ತಿರುವಳ್ಳುವರು ಸ್ತ್ರೀಯ ಬಗ್ಗೆ ಬಹಳ ಗೌರವ ಅಭಿಮಾನಗಳನ್ನಿಟ್ಟುಕೊಂಡಿದ್ದವರು. “ತಮಗೆ ಪ್ರಿಯರಾದವರ ಅಪ್ಪುಗೆಗಿಂತಲೂ ತಾವರೆ ಕಣ್ಣಿನ ದೇವರ ಲೋಕದಲ್ಲಿ ಇನ್ನೇನು ಸುಖವಿದೆ.”? ಎಂಬುದು ಈತನ ಪ್ರಶ್ನೆ (ಕುರಲ್, ಕಾಮತ್ತುಪಾಲ್, ಪುಣರ್ಪಿ ಮಹಿಳ್ದಲ್ ೩) ಈ ಕಾರಣದಿಂದಾಗಿಯೇ ಈತನನ್ನು ತಿರಸ್ಕರಿಸಿದವರಾರೂ ಇಲ್ಲದೆ ಹೋಗಿರುವುದೊಂದು ಕಡೆಯಿದ್ದರೆ ಅನೇಕ ಪಂಡಿತರು ಇದನ್ನು ಹೊಗಳಿ ವ್ಯಾಖ್ಯಾನಗಳನ್ನೂ ಬರೆದರು. ಇದು ಪ್ರಮಾಣ ಗ್ರಂಥವಾಯಿತು. ‘ಉತ್ತರವೇದ’ ವೆಂದೂ ‘ದೈವನೂಲೆಂ’ದೂ ಇದಕ್ಕೆ ಹೆಸರುಗಳು ಬಂದವು. ಸುಮತಿಶತಕದ ಕರ್ತೃವಾದರೂ ‘ಶ್ರೀರಾಮನ ದಯೆಯಿಂದ’ ಎಂದು ಉಪಕ್ರಮಿಸಿದ್ದರಿಂದ ಶ್ರೀರಾಮ ದ್ವೇಷಿಗಳ್ಯಾರಾದರು ಅದನ್ನು ತಿರಸ್ಕರಿಸಬಹುದಾದರೂ, ಈತ, ‘ನಾಮಲಿಂಗಾನು ಶಾಸನ’ ವನ್ನು ಬರೆದ ಯವರನ ಹಾಗೆ, ಯಾವೊಬ್ಬ ದೇವರನ್ನು ಹೆಸರಿಟ್ಟು ಕರೆಯದೆ, ‘ಆಧಿಭಗವಂತನಿಗೆ’ ನಮಸ್ಕರಿಸಿ ಗ್ರಂಥವನ್ನುಪಕರಿ, ಅಲ್ಲಿ ಯಾವ ಮತ ಪಕ್ಷಪಾತವನ್ನು ತೋರದೆ, ಸರ್ವಮತಗಳಲ್ಲೂ ಸಾಧಾರಣವಾಗಿರುವಂತಹ ಶಾಶ್ವತ ನೀತಿಗಳನ್ನು ಕುರಿತು ಮಾತ್ರ ಬರೆದಿದ್ದರಿಂದ, ಎಲ್ಲರಿಗೂ ಬೇಕಾದವನಾದನು. ಆದ್ದರಿಂದಲೇ ಈ ಕೃತಿಯನ್ನು ೧೫೦ ವರ್ಷಗಳ ಹಿಂದೆಯೇ ‘ಲ್ಯಾಟಿನ್’ ಭಾಷೆಗೆ, ನಂತರ ಜರ್ಮನ್, ಫ್ರೆಂಚ್, ಇಂಗ್ಲೀಷ್ ಭಾಷೆಗಳಿಗೆ ಪಾಶ್ಚಾತ್ಯರು ಪರಿವರ್ತಿಸಿಕೊಂಡರಂತೆ.[6] ಇಂದಿಗೆ (೧೯೨೫) ನಲವತ್ತು ವರ್ಷಗಳಷ್ಟು ಹಿಂದೆಯೇ ‘ತ್ರಿವರ್ಗ ದೀಪಿಕ’ ಎಂಬ ಹೆಸರಿನಲ್ಲಿ ಕನುಪರ್ತಿ ವೆಂಕಟರಾಮ ಶ್ರೀ ವಿದ್ಯಾನಂದರೆಂಬುವರು ಇದನ್ನು ತೆಲುಗಿನಲ್ಲಿ ಮೊದಲ ಎರಡು ಧರ್ಮಾರ್ಥ ಕಾಂಡಗಳನ್ನು ಪರಿವರ್ತಿಸಿ ಪ್ರಕಟಿಸಿದರು. ಆಂಧ್ರರು ಅದನ್ನು ಹೆಚ್ಚು ಗಮನಿಸಿದಂತೆ ಕಂಡುಬರುವುದಿಲ್ಲ ಸಹಜವೇ. ಏಕೆಂದರೆ, ಆಂಧ್ರೀಕರಿಸಿದವರಿಗೇ ಅದು ಇತರರಿಗರ್ಥವಾಗದೆಂಬ ಗಟ್ಟಿ ನಂಬಿಕೆಯುಂಟಾದ್ದರಿಂದ, ಅವರೇ ಅದಕ್ಕೆ ವ್ಯಾಖ್ಯೆ, ತಾತ್ಪರ್ಯ ಬರೆಯಬೇಕಾಯಿತು. ಹೀಗೆ ವ್ಯಾಖ್ಯೆಯೊಂದಿಗೆ ಆಂಧ್ರೀಕರಣವನ್ನೂ ರಚಿಸುವಂತಹವನು ಈ ಪ್ರಪಂಚದಲ್ಲಿ ಇನ್ನೂ ಹುಟ್ಟಿಲ್ಲ. ಇದಲ್ಲದೆ ಶ್ರೀ ಗರಿಮಳ್ಳ ಸತ್ಯನಾರಾಯಣರೂ ತೆಲುಗಿಗೆ ಅನುವಾದಿಸಿದ್ದಾರಂತೆಯಾದರೂ ಇನ್ನೂ ಅದು ಬರಹದಲ್ಲೇ ಇದ್ದಂತಿದೆ? ಇದರ ಒಳ್ಳೆಯ ಆಂಧ್ರೀಕರಣವೊಂದನ್ನು ತೆಲುಗು ಭಾಷೆಗೆ ಸದ್ಯದಲ್ಲೇ ತಂದುಕೊಳ್ಳುವ ಭಾರ ನಮ್ಮ ಮೇಲಿದೆ.

ಸಾಮಾನ್ಯವಾದ ನೀತಿಗಳ ವಿಷಯದ ಹೊರೆತು ವೇಮನನಿಗೂ ಈತನಿಗೂ ಹೋಲಿಕೆಗಳು ಸಾಲವು. ಆತ ದುರ್ನೀತಿಯನ್ನು ಹೆಚ್ಚಾಗಿ ಖಂಡಿಸಿದವನು. ಈತ ನೀತಿಯೆಂಥದೆಂದು ಹೇಳಿದವನು ; ಆತನದು ವಿರಕ್ತಿ ; ಈತನದು ರಕ್ತಿ. ಹಾಗಲ್ಲದೆ ವೇಮನ ಅನ್ವಯ ಮಾರ್ಗದಲ್ಲಿ ಹೇಳಿದ್ದರೆ ಈತನ ಹಾಗೇ ಹೇಳುತ್ತಿದ್ದ. ಆದರೂ ಈ ಹೋಲಿಕೆ ಇಬ್ಬರು ಮನುಷ್ಯರಿಗೆ ಮನುಷ್ಯತ್ವದನ್ವಯ ಹೋಲಿಕೆಯಿದ್ದಂತೆ. ಅಪಕಾರ ಮಾಡಿದವನಿಗೂ ಉಪಕಾರ ಮಾಡುವುದೇ ಒಳ್ಳೆಯದು. ಮನೆಗೆ ಬಂದ ಅತಿಥಿಯನ್ನು ಉಪಚರಿಸಬೇಕು ; ಅಸತ್ಯವನ್ನಾಡಬಾರದು – ಇತ್ಯಾದಿ ವಿಷಯಗಳಲ್ಲಿ ಯಾವ ನೀತಿ ಶಾಸ್ತ್ರಕಾರನೂ ಕೂಡ ಬೇರೆ ವಿಧವಾಗಿ ಹೇಳನು. ಆದ್ದರಿಂದ ಇಂಥದರಲ್ಲಿ ಇಬ್ಬರನ್ನೂ ಹೋಲಿಸಿ ನೋಡುವುದಕ್ಕಿಂತಲೂ ತಿರುವಳ್ಳುವರ ಕೆಲವು ಪದ್ಯಗಳನ್ನು ಯಥಾಶಕ್ತಿ ಅನುವಾದಿಸಿ ಹೇಳಿ ಈತನ ವಿಷಯವನ್ನು ಸಾಕುಮಾಡುತ್ತೇನೆ.

ನಿಷ್ಕಲ್ಮಷತ್ವ

ಮನದಲ್ಲಿ ನಿರ್ಮಲನಾದರೆ ಅದೇ ಧರ್ಮ
ಮತ್ತೆಲ್ಲವೂ ಬರಿಯ ಆಡಂಬರ
(ಅಱತ್ತುಪಾಲ್, ಅಱನ್‌ವಲಿಯುರುತ್ತಲ್, ಪ.೩)

ಆತಿಥ್ಯ

ಅತಿಥಿಗಳನ್ನುಪಚರಿಸಿ, ಉಣಬಡಿಸಿ ಮಿಕ್ಕುದನ್ನು ತಾನುಣ್ಣುವವನ
ಹೊಲಗಳಲ್ಲಿ ಬೀಜಗಳನ್ನು ಬಿತ್ತಲೇಕೆ
(ಅೞತ್ತುಪಾಲ್, ವಿರುಂದೊಂಬಲ್, ಪ.೫)

ಶಾಂತಿ

ತಾಲಿಕೊಳ್ಳಬೇಕು ಕೆಟ್ಟನಡವಳಿಕೆಯನ್ನು ಎಂದಿಗೂ
ಅದನ್ನು ಮರೆತುಬಿಡುವುದು ಅದಕ್ಕಿಂತಲೂ ಒಳ್ಳೆಯದು
(ಅಱ ಪೊರೈಯುಡೈಮೈ. ಪ.೬)

ಸ್ತ್ರೀ ವರ್ಣನೆ

ಕಂಡು ಕೇಳಿ ಉಂಡು ಆಘ್ರಾಣಿಸಿ ಸ್ಪರ್ಶಿಸಿ ಪಡೆಯಬಹುದಾದ
ಐದಿಂದ್ರಿಯಗಳ ಸುಖವೆಲ್ಲವೂ ತುಂಬಿದೆ
ಮಿನುಗುವ ಬಳೆಗಳ ಚೆಲುವೆಯಲ್ಲಿ
(ಕಾಮತ್ತುಪಾಲ್, ಪುಣರ್ಚಿ ಮಹಿಳ್ದಲ್, ಪ.೧)

 

– ತೆಲುಗು ಮೂಲ : ರಾಳ್ಳಪಲ್ಲಿ ಅನಂತಕೃಷ್ಣಶರ್ಮ
– ಅನುವಾದ : ಸಿ. ವೆಂಕಟೇಶ

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 


[1] ಈ ಪದ್ಯ ವೇಮನ ಪದ್ಯಗಳಲ್ಲಿಯೂ ಇದೆ. ೩೫೧೯

[2] ನೋ. ಧಾರವಾಡ ಉತ್ತಂಗಿ ಚೆನ್ನಪ್ಪನವರು ಪ್ರಕಟಿಸಿರುವ ‘ಸರ್ವಜ್ಞ ಪದಗಳು’ ಪೀಠಿಕಾ ಪ್ರಕರಣ.

[3] ನೋ.ಪ.೨ – ೧೪

[4] ನೋ. ಸರ್ವಜ್ಞ ಪೀಠಿಕೆ, ಪು.೩೯

[5] ನೋ. ರಾಜನೀತಿ ಪದ್ಧತಿ.

[6] ‘ಕುರಳ್’ ತೆಲುಗಿನ ‘ತ್ರಿವರ್ಗ ದೀಪಿಕ’ ದ ಪೀಠಿಕೆಗಳಲ್ಲಿ, ಅತ್ಯದ್ಭುತವಾದ ಕಥೆಗಳು ಈತನ ಬಗ್ಗೆ ಇವೆಯಾದರೂ ಅದು ಶುದ್ಧಪುರಾಣ.