ಆರ್ಯ ಮತ್ತು ದ್ರಾವಿಡ ಎಂಬ ಪರಿಕಲ್ಪನೆಗಳು ಜಾನಾಂಗೀಯ (ರೇಸಿಯಲ್)ವಲ್ಲ ಎಂಬುದನ್ನು ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ. ಭಾರತೀಯ ಸಂದರ್ಭದಲ್ಲಿ ಸಾಂಸ್ಕೃತಿಕವಾಗಿ ವೈದಿಕ ಮತ್ತು ಅದಕ್ಕೂ ಪೂರ್ವದಲ್ಲಿದ್ದ ದೇಶೀಯ ಪರಂಪರೆಯನ್ನು ಅವೈದಿಕ ಎಂದೋ ದ್ರಾವಿಡ ಎಂದೋ ಹೇಳುತ್ತಾ ಬಂದಿರುವುದೂ ಸ್ಪಷ್ಟವಿದೆ. ವೈದಿಕವಲ್ಲದ್ದನ್ನು ಅವೈದಿಕ ಎಂದು ಹೇಳುವುದಕ್ಕಿಂತ ದ್ರಾವಿಡ ಎಂಬ ಪರಿಕಲ್ಪನೆಯನ್ನು ಬಳಸುವುದೇ ಹೆಚ್ಚು ಸೂಕ್ತ. ಪ್ರಖ್ಯಾತ ತತ್ತ್ವಶಾಸ್ತ್ರಜ್ಞ ದೇವಿಪ್ರಸಾದ ಚಟೋಪಾಧ್ಯಾಯ ಅವರು ದ್ರಾವಿಡ ಎಂಬ ಪದವನ್ನು ಬಳಸುವುದೇ ಇಲ್ಲ. ಅವೈದಿಕ ಎಂದೇ ಬಳಸುತ್ತಾರೆ. ದ್ರಾವಿಡರಲ್ಲೂ ಅಸ್ಟ್ರೊಲೈಡ್, ನೀಗ್ರೊಯಿಟ, ಮೆಡಿಟರೇನಿಯನ್ ಜನ ಮೂಲ ರಕ್ತದ ಬೆರಕೆ ಇರುವುದರಿಂದ ದ್ರಾವಿಡವನ್ನು ಬಹುಮೂಲೀಯ ಜನಸಂಸರ್ಗ ಸಮುದಾಯವೆಂದೇ ಭಾವಿಸಬೇಕು. ಭಾಷಿಕವಾಗಿ ಆರ್ಯ, ದ್ರಾವಿಡ ಪದ ಪರಿಕಲ್ಪನೆಗಳಲ್ಲಿ ಸ್ಪಷ್ಟ ವ್ಯತ್ಯಾಸವಿದ್ದೇ ಇದೆ. ಆದರೆ ಇವು ಬರೀ ಭಾಷಾಶಾಸ್ತ್ರೀಯ ವ್ಯತ್ಯಾಸಗಳಷ್ಟೇ ಅಲ್ಲ. ಸಾಂಸ್ಕೃತಿಕವಾಗಿ ಮತ್ತು ತತ್ತ್ವಶಾಸ್ತ್ರೀಯವಾಗಿ ಅವುಗಳ ಪರಂಪರೆಯಲ್ಲಿ ಅನನ್ಯತೆಗಳಿವೆ. ಕಲಬೆರಕೆಯೂ ಇರುವುದರಿಂದ ಒಂದು ಬಗೆಯ ಸಂಕೀರ್ಣ ಸನ್ನಿವೇಶ ನಿರ್ಮಾಣಗೊಂಡಿದೆ. ಆದರೆ ನಮ್ಮ ದೇಶದ ಸಾಮಾಜಿಕಾರ್ಥಿಕ ಬೆಳವಣಿಗೆಯಲ್ಲಿ ಎಲ್ಲ ಹಂತಗಳ ಜನಕುಲಗಳನ್ನು ಮತ್ತು ಜಾತಿ ವ್ಯವಸ್ಥೆಯಲ್ಲಿ ಬುಡಕಟ್ಟು ಮೂಲದ ಆಶಯಗಳು ಉಳಿದು ಬಂದಿರುವುದರಿಂದ ಆರ್ಯ ಅಥವಾ ವೈದಿಕ ಮತ್ತು ದ್ರಾವಿಡ ಸಂಸ್ಕೃತಿಯ ವಿಭಿನ್ನತೆಗಳನ್ನು ಸ್ಪಷ್ಟವಾಗಿ ಗಮನಿಸಬಹುದಾಗಿದೆ. ಈ ಸಂದರ್ಭದಲ್ಲಿ ಆರ್ಯ ಎಂಬ ಪದಕ್ಕಿಂತ ವೈದಿಕ ಎಂಬ ಪದ ಬಳಕೆ ಹೆಚ್ಚು ಸೂಕ್ತವೆಂಬುದನ್ನು ಗಮನಿಸಬೇಕು. ಭಾರತದಲ್ಲಿ ಸಮಾಜಶಾಸ್ತ್ರವಲ್ಲ, ಜಾತಿಶಾಸ್ತ್ರದ ಅಧ್ಯಯನದ ಅಗತ್ಯವಿದೆ. ವೈದಿಕ ಮತ್ತು ದ್ರಾವಿಡ ಪರಂಪರೆಗಳ ಹಿನ್ನಲೆಯಲ್ಲಿ ಜಾತಿ ವ್ಯವಸ್ಥೆಯ ಅಧ್ಯಯನದಲ್ಲೂ ಸಾಕಷ್ಟು ಒಳನೋಟಗಳು ದಕ್ಕುವ ಸಾಧ್ಯತೆ ಇದೆ.

ವೈದಿಕವು ಶೋಷಕವೆಂದು ದ್ರಾವಿಡವು ಶೋಷಿತವೆಂದು ಸರಳೀಕರಿಸುವುದು ಸರಿಯಲ್ಲ. ಆದರೆ ವೈದಿಕ ಶೋಷಕವರ್ಗ, ಸಾಂಸ್ಕೃತಿಕವಾಗಿ ಹೆಜಿಮನಿ ಸ್ಥಾಪಿಸಿತು. ದ್ರಾವಿಡರಲ್ಲಿದ್ದ ಮೇಲ್ವರ್ಗಗಳು ವೈದಿಕೀಕರಣಗೊಳ್ಳುತ್ತ ಹೋದವು ಇಲ್ಲವೇ ಉತ್ತರ ಮೂಲಕ ಅವೈದಿಕ ಮತಗಳಾದ ಜೈನ ಬೌದ್ಧಗಳಿಗೆ ಮಾರುಹೋದವು ಎಂಬುದೇ ಕುತೂಹಲ ಅಂಶ.

ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ನಾಲ್ಕು ಭಾಷೆಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಗಳು ಉತ್ತರದ ಆರ್ಯ ಮೂಲಕ ವೈದಿಕ ಸಂಸ್ಕೃತಿಯನ್ನು ಮಿರೋಧಿಸುವ ಮೂಲನೆಲೆಗಳಂತೆ ಕಂಡರೂ ಅವುಗಳ ಚಾರಿತ್ರಿಕ ಅನುಭವಗಳು ಬೇರೆಬೇರೆಯಾಗಿವೆ. ಉದಾ: ತಮಿಳುನಾಡಿನಲ್ಲಿ ಈಚೆಗೆ ಪೆರಿಯಾರ್ ಅವರ ಹೋರಾಟದ ರಾಜಕೀಯ, ಸಾಂಸ್ಕೃತಿಕ ಆಯಾಮವಿಚೆ. ಅಂಥದು ಉಳಿದ ಮೂರು ನಾಡುಗಳಲಿಲ್ಲ. ಉತ್ತರ ಭಾರತದಲ್ಲಿ ಹರಡಿಕೊಂಡಿದ್ದ ದ್ರಾವಿಡರು ಆರ್ಯವೈದಿಕರ ಭಾಷೆ ಮತ್ತು ಸಂಸ್ಕೃತಿ ದಬ್ಬಾಳಿಕೆಯಲ್ಲಿ ತೇಲಿ ಹೋದರು. ದಕ್ಷಿಣ ಭಾರತದಲ್ಲಿ ವೈದಿಕರ ದಬ್ಬಾಳಿಕೆಯಿಂದ (ಪ್ರಭುತ್ವದ ಬೆಂಬಲವಿದ್ದುದರಿಂದ) ವೈದಿಕೀಕರಣವೂ ನಡೆಯಿತು. (ಅಗ್ರಹಾರ ವ್ಯವಸ್ಥೆಯೇ ಇದಕ್ಕೆ ಭೌತಿಕ ಆಧಾರ.) ಇಡೀ ದೇಶದಲ್ಲಿ ವಿಸ್ಮೃತಿಗೀಡಾಗಿರುವ ದ್ರಾವಿಡ ಸಂಸ್ಕೃತಿಯ ಮೂಲ ಬೇರುಗಳನ್ನು ಶೋಷಿತ ಜನ ಜಾತಿ ವರ್ಗಗಳ ಮಾನವಕುಲ ಶಾಸ್ತ್ರೀಯ ಅಧ್ಯಯನದ ಮೂಲಕ ನಾವು ಶೋಧಿಸಬೇಕಿದೆ. ಅದು ಸಿಂಧೂ ನಾಗರಿಕತೆಯಿಂದಲೂ ಉಳಿದು ಬಂದಿರುವ ಸಾಧ್ಯತೆ ಇದೆ. ವರ್ಗ ಮತ್ತು ಜಾತಿ ಹೋರಾಟಗಳ ಸಂದರ್ಭದಲ್ಲಿಯೇ ಈ ಸೂಕ್ಷ್ಮಗಳನ್ನು ಗಮನಿಸಬೇಕಾದುದರ ಜರೂರನ್ನು ನಿರ್ಲಕ್ಷಿಸುವುದು ಆರೋಗ್ಯವಲ್ಲ. ಈ ಹಿನ್ನಲೆಯಲ್ಲಿಯೇ ಪರಿಯಾರ್ ಅವರ ಸಿದ್ಧಾಂತ ಮತ್ತು ಚಳುವಳಿಗಳ ಮಹತ್ವವನ್ನು ಮತ್ತು ಇತಿಮಿತಿಯನ್ನು ಗಮನಿಸಬೇಕಾಗಿದೆ.

ಸಮಕಾಲೀನ ಸಂದರ್ಭದಲ್ಲಿ ವರ್ಗ ಜಾತಿ ಪರಿಕಲ್ಪನೆಗಳಂತೆ ವೈದಿಕ (ಆರ್ಯ) ದ್ರಾವಡ ಪರಿಕಲ್ಪನೆಗಳೂ ಪ್ರಸ್ತುತವೇ. ಯಜಮಾನೀ ಸಂಸ್ಕೃತಿ ಮತ್ತು ನಿರ್ಲಕ್ಷಿತ ನೆಲೆಗಳ ಬಹುಮುಖಿ ಸಂಸ್ಕೃತಿಗಳ ತಾಕಲಾಟಗಳ ಅರ್ಥದಲ್ಲೂ ವೈದಿಕ – ದ್ರಾವಿಡ ದ್ವಂದ್ವಕ್ಕೆ, ಸಂಘರ್ಷಕ್ಕೆ ಬೆಲೆ ಇದೆ.

ಭಾರತದ ವಾಮಪಂಥೀಯ ಚಿಂತಕರು ಈಬಗೆಯ ತಾತ್ತ್ವಿಕ ಸೂಕ್ಷ್ಮಗಳನ್ನು ಚರ್ಚಿಸಲಿಲ್ಲ. ಅದು ಪ್ರಗತಿಪರ ಚಿಂತನೆಯ ಒಂದು ದೊಡ್ಡ ಕೊರತೆ. ಇಂದು ಇದು ಒಂದು ಸವಾಲು. ವಿಚಿತ್ರವಾದರೂ ಆರೋಗ್ಯಕರ ಬೆಳವಣಿಗೆ ಎಂದರೆ ವಾಮಪಂಥೀಯ ಯುವ ಚಿಂತಕರಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಎಂಬ ವಿರೋಧಿ ನೆಲೆಗಳು ಖಚಿತಗೊಳ್ಳುತ್ತಿರುವುದು, ಅವರ ನಡುವೆ ತಾತ್ತ್ವಿಕ ಜಗಳ ತೀವ್ರಗೊಳ್ಳುತ್ತಿರುವುದು. ಬ್ರಾಹ್ಮಣರು ವೈದಿಕ ಪರಂಪರೆಗೂ ಬ್ರಾಹ್ಮಣೇತರರು ದ್ರಾವಿಡ ಪರಂಪರೆಗೂ ಆತುಕೊಳ್ಳುತ್ತಿರುವುದು ಅನಿವಾರ್ಯವೇ, ಸಹಜವೇ, ಹಿಂದೆಯೂ ಬ್ರಾಹ್ಮಣ ಜಾತಿಯಲ್ಲಿರುವ ವೈದಿಕಶಾಹಿ ವಿರೋಧಿ ಗುಂಪುಗಳಾದ ಲೋಕಾಯತರು,ಚಾರ್ವಾಕರು ಎಂದೆಲ್ಲಾ ಇದ್ದರು ಅವರು ದ್ರಾವಿಡ ಪರಂಪರೆಯನ್ನು ಬೆಂಬಲಿಸಿದ್ದರೆಂದಲ್ಲ. ಇನ್ನೊಂದೆಡೆ ದ್ರಾವಿಡರಲ್ಲಿದ್ದ ಆದಿಮತಂತ್ರ, ಯೋಗ, ಸಾಂಖ್ಯ ಮೊದಲಾದ ಭೌತವಾದಗಳನ್ನು ಕೆಲವು ಬ್ರಾಹ್ಮಣರು ಅಪ್ಪಿಕೊಳ್ಳುತ್ತಿದ್ದರು. ದ್ರಾವಿಡರಲ್ಲಿದ್ದ ಕೆಲವರು (ವಾಲ್ಮೀಕಿ, ವ್ಯಾಸ ಮೊದಲಾದವರು) ಬ್ರಾಹ್ಮಣರಾದಂತೆ, ಬ್ರಾಹ್ಮಣರೂ ದ್ರಾವೀಡೀಕರಣಗೊಳ್ಳುತ್ತಿದ್ದರು. ಆದರೆ ಇಂಥ ಉದಾಹರಣೆಗಳು ಅಪವಾದಗಳು ಅಷ್ಟೇ. ಈ ಒಳಜಗಳಗಳಲ್ಲಿ ವೈದಿಕೀಕರಣದ ದಾಳಿ ದಬ್ಬಾಳಿಕೆಯೇ ಗೆದ್ದಿತೆಂದು ದೇವಿಪ್ರಸಾದರ ಅಧ್ಯಯನಗಳು ನಮಗೆ ತೋರಿಸಿಕೊಟ್ಟಿವೆ.

ಟಿಪ್ಪಣಿ ರೂಪದ ಪ್ರತಿಕ್ರಿಯೆ ಇದಾಗಿರುವುದರಿಂದ ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ.

ದ್ರಾವಿಡ ಸಂಸ್ಕೃತಿ ಪರಿಕಲ್ಪನೆ

ಮೇಲಿನ ಚರ್ಚೆಯ ಹಿನ್ನೆಲೆಯಲ್ಲಿ ಮತ್ತು ಅದರ ಮುಂದುವರಿದ ಭಾಗದಂತೆ ಈ ಶೀರ್ಷಿಕೆಯ ವಿಷಯವನ್ನು ಟಿಪ್ಪಣಿಸಬಹುದು.

ಭಾಷಿಕ ನೆಲೆಯಲ್ಲಿ ಇಂಡೋ ಆರ್ಯರ ಭಾಷಾವರ್ಗದಂತೆ ದ್ರಾವಿಡ ಭಾಷಾವರ್ಗದ ಭಾಷೆಗಳೇ ಭಾರತದಲ್ಲಿ ನೂರಾರಿವೆ. ಇವುಗಳಲ್ಲಿ ಕನ್ನಡ, ತಮಿಳು, ತೆಲುಗು, ಮಲೆಯಾಳಗಳಿಗೆ ಮಾತ್ರ ಲಿಖಿತ ಪರಂಪರೆಯಿದೆ ಎಂಬುದರ ಅರ್ಥ ಈ ಭಾಷಿಕ ಜನಕುಲಗಳಷ್ಟೇ ವರ್ಗ ಜಾತಿ ಶೋಷಣೆಗೆ ಒಳಪಟ್ಟವು ಎಂದು. ದೇಶದ ನಾಗರೀಕತೆ ಮತ್ತು ಸಂಸ್ಕೃತಿಯ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಇವು ಭಾಗಿಯಾದವು. ಈ ನಾಲ್ಕನ್ನು ಹೊರತುಪಡಿಸಿ ಉಳಿದ ದ್ರಾವಿಡ ಭಾಷೆಗಳನ್ನು ಮಾತಾಡುವ ಜನಕುಲಗಳು ಬುಡಕಟ್ಟು ಸ್ಥಿತಿಯಲ್ಲೇ ಉಳಿದಿವೆ. ದ್ರಾವಿಡ ಭಾಷೆಗಳನ್ನು ಮಾತಾಡುವ ಜನಕುಲಗಳು ಬುಡಕಟ್ಟು ಸ್ಥಿತಿಯಲ್ಲೇ ಉಳಿದಿವೆ. ಹಾಗಾಗಿ, ದ್ರಾವಿಡ ಸಂಸ್ಕೃತಿಯ ಸ್ಪಷ್ಟ ಚಿತ್ರವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ. ಆದರೆ ದ್ರಾವಿಡ ಜನಕುಲಗಳ ಶಾಸ್ತ್ರಬದ್ಧ ಅಧ್ಯಯನಗಳು ಇಲ್ಲದಿರುವುದರಿಂದ ದ್ರಾವಿಡ ಸಂಸ್ಕೃತಿಯ ಖಚಿತ ಪರಿಕಲ್ಪನೆಯನ್ನು ಮುಂದಿಡಲು ಆಗುತ್ತಿಲ್ಲ. ಕ್ಷೇತ್ರಕಾರ್ಯ ಮತ್ತು ಸಮೀಚಿನ ಜ್ಞಾನಶಿಸ್ತುಗಳ ಪೂರ್ವ ಸಿದ್ಧತೆಯೊಂದಿಗೆ ದೇಶದ ಜನಕುಲಗಳ ಸಂಸ್ಕೃತಿ ಶೋಧನೆಯಾಗುವುದಾದರೆ ವಿದ್ವತ್ ಕ್ಷೇತ್ರದಲ್ಲೇ ಹೊಸ ಬೆಳಕು ಬೀಳುವ ಸಾಧ್ಯತೆ ಇದೆ. ಕನಿಷ್ಠ ಪಕ್ಷ ದಕ್ಷಿಣದ ನಾಲ್ಕು ರಾಜ್ಯಗಳ ಜನಕುಲಗಳ ಸಂಸ್ಕೃತಿ ಪರಂಪರೆಯ ತೌಲನಿಕ ವ್ಯಾಸಂಗವಾಗಬೇಕಿದೆ. ದ್ರಾವಿಡ ಸಂಸ್ಕೃತಿ ಸತ್ತುಹೋದ ಪರಿಕಲ್ಪನೆಯಲ್ಲ. ಜೀವಂತವಿರುವ, ನಿರ್ಲಕ್ಷ್ಯಕೀಡಾಗಿರುವ, ಅವಶ್ಯವಾಗಿ ಶೋಧಿತವಾಗ ಬೇಕಿರುವಂಥದ್ದು. ಸಿಂಧೂ ನಾಗರಿಕತೆ೩ಯಿಂದ ಹೊಂದುಗಡಿಯದಂತೆ ದೇಶವ್ಯಾಪ್ತಿಯಾಗಿ ಹರಿದು ಬಂದಿರುವ ಇದರ ವಿರಾಟ್ ಸ್ವರೂಪವನ್ನು ಅಧ್ಯಯನಿಸುವ ಅಗತ್ಯವಿದೆ.

ಇಂದು ಬುಡಕಟ್ಟುಗಳು ಮತ್ತು ಜಾತಿಗಳು ವಾಸ್ತವಾಂಶಗಳಾಗಿದ್ದರೂ ಅವುಗಳಲ್ಲಿ ಅಂತರವಾಹಿನಿಯಾಗಿರುವುದು ದ್ರಾವಿಡ, ವೈದಿಕ ಸಂಸ್ಕೃತಿಗಳೇ ಮತ್ತು ಇವುಗಳ ಸಮನ್ವಯಿತ ರೂಪಗಳೇ. ಸಂಘರ್ಷ ಮತ್ತು ಸಮನ್ವಯದ ನೆಲೆಗಳನ್ನು ಪೂರ್ವಗ್ರಹೀತವಲ್ಲದ ,ಸತ್ಯನಿಷ್ಠ ದೃಷ್ಟಿಕೋನದಿಂದ ವೈಜ್ಞಾನಿಕವಾಗಿ ವ್ಯಾಸಂಗಿಸುವ ಅಗತ್ಯವಿದೆ. ಭಾಷಿಕವಾಗಿ ಮರಾಠಿ ಇಂಡೊ ಅರ್ಯನ್ ಭಾಷಾವರ್ಗಕ್ಕೆ ಸೇರಿದರೂ ಮರಾಠಿ ಧನಗರರು ದ್ರಾವಿಡ ಕುರುಬರೇ. ಇದೇ ಮಾತನ್ನು ದೇಶವ್ಯಾಪಿಯಾಗಿರುವ ದಲಿತ, ಗೊಲ್ಲ, ಯಾದವ ಮೊದಲಾದವರ ಬಗೆಗೂ ಹೇಳಲು ಸಾಧ್ಯವಿದೆ. ಆಯಾಯಾ ಪ್ರದೇಶಗಳಲ್ಲಿ ಆಯಾಯಾ ಜನಕುಲಗಳಲ್ಲಿ ಉಳಿದು ಬಂದಿರುವ ದ್ರಾವಿಡ ಸಂಸ್ಕೃತಿ ಪರಂಪರೆಯನ್ನು ಗುರುತಿಸಬೇಕಾಗಿದೆ. ಅಂತಿಮವಾಗಿ ಅವರಲ್ಲೇ ಮೂಲ ಕೃಷಿಕರು ಮತ್ತು ಮೂಲ ಪಶುಪಾಲಕರು ಎಂದು ವೃತ್ತಿನೆಲೆಯ ಎರಡು ಪ್ರಧಾನ ಗುಂಪುಗಳಾಗುತ್ತವೆ. ಆರ್ಯ ವೈದಿಕರಂತೂ ಪಶುಪಾಲಕ ಸಂಸ್ಕೃತಿಯವರೆಂಬುದು ಸರ್ವವಿದಿತ. ಆದರೆ, ದ್ರಾವಿಡರಲ್ಲಿದ್ದ ಪಶುಪಾಲಕರಿಗೂ ವೈದಿಕ ಪಶುಪಾಲಕರಿಗೂ ಸ್ಪಷ್ಟ ವ್ಯತ್ಯಾಸಗಳಿದ್ದವು. ಹಾಗಾಗಿ ದ್ರಾವಿಡ ಸಂಸ್ಕೃತಿಯಲ್ಲಿ ಹಟ್ಟಿ ಸಂಸ್ಕೃತಿ (ಪಶುಪಾಲಕರು) ಮತ್ತು ಹಳ್ಳಿ ಸಂಸ್ಕೃತಿ (ನೆಲಸುಗಾರ ಕೃಷಿಕರು) ಎಂಬ ಪ್ರಧಾನ ನೆಲೆಗಳಿವೆ. ನನ್ನ ಅಲ್ಪಮಟ್ಟಿನ ಶೋಧನೆಯ ಪ್ರಕಾರ ಮೂಲ ಕೃಸಿಕರ ಹಳ್ಳಿ ಸಂಸ್ಕೃತಿಯ ನಿರ್ಮಾತೃಗಳು, ಇಂದಿನ ದಲಿತ ಮೂಲದ ಹೊಲೆಯರು, ಮಾದಿಗರು (ಅಸ್ಪಶ್ಯರು). ಪಶುಪಾಲಕರಿಗಿಂತ ಕೃಷಿಕ ಸಮುದಾಯ ನಾಗರಿಕತೆ ಸಂಸ್ಕೃತಿಯ ಬೆಳವಣಿಗೆಯಲ್ಲಿ ಮುಂದಿರುತ್ತದೆಂಬುದನ್ನು ಜಗತ್ತಿನ ಹಲವಾರು ನಾಗರಿಕತೆಗಳ ಅಧ್ಯಯನಗಳು ತೋರಿಸಿಕೊಟ್ಟಿವೆ. ಆದರೆ ದಾಳಿ ದಬ್ಬಾಳಿಕೆಯಲ್ಲಿ ಮುಂದುವರೆದ ಸಂಸ್ಕೃತಿಗಳು ನಾಶವಾದದ್ದೋ ಸೋತದ್ದೋ ಇದೆ. ಈ ಮಾತುಗಳು ಹೊಲೆಯ ಮಾದಿಗ ಮೊದಲಾದ ಜನ ಸಮುದಾಯಗಳಿಗೆ ಅನ್ವಯಿಸುತ್ತವೆ. ಪಶುಪಾಲಕ ವೃತ್ತಿಯಲ್ಲೇ ಒಳಜಾತಿಗಳು ಸೃಷ್ಟಿಯಾದಂತೆ ಕೃಷಿಕ ವೃತ್ತಿ, ಉಪವೃತ್ತಿ, ಪೂರಕ ವೃತ್ತಿಗಳ ಜಾತಿಗಳಾದವು. ಪಶುಪಾಲಕರು ಕೃಷಿಕರಾದರು, ಕೃಷಿಕರು ಪಶುಪಾಲನೆಯನ್ನು ಅಳವಡಿಸಿಕೊಂಡರು. ಹೀಗಾದಾಗಲೆಲ್ಲ ಹೊಸ ಹೊಸ ಜಾತಿಗಳು ಹುಟ್ಟಿಕೊಂಡವು.

ನನ್ನ ಹಲವಾರು ಲೇಖನಗಳು ಮತ್ತು ಗ್ರಂಥಗಳಲ್ಲಿ ಈ ವಿಷಯದ ವಿವರವಾದ ಚರ್ಚೆಯಿರುವುದರಿಂದ ಸದ್ಯಕ್ಕೆ ಈ ಟಿಪ್ಪಣಿಯನ್ನು ಇಷ್ಟಕ್ಕೆ ನಿಲ್ಲಿಸಬಹುದು.