ಭಾರತೀಯ ಸಮಾಜವು ಜಾತಿಬದ್ಧವಾಗಿರುವುದರಿಂದ ಜಾತಿಗಳ ವೈಜ್ಞಾನಿಕ ಅಧ್ಯಯನವಷ್ಟೇ ಭಾರತದ ವಸ್ತುನಿಷ್ಠವಾದ ಮತ್ತು ಸಮಗ್ರವಾದ ಕಲ್ಪನೆಯನ್ನು ತಂದುಕೊಡಬಲ್ಲದು. ಭಾರತದಲ್ಲಿ ಸಮಾಜ ‘ಜಾತಿ’ಯ ರೂಪದಲ್ಲಿರುವುದರಿಂದ ‘ಸಮಾಜಶಾಸ್ತ್ರ’ವು (ಸೋಶಿಯಾಲಾಜಿ) ಇಲ್ಲಿ ‘ಜಾತಿಶಾಸ್ತ್ರ’ (ಕಾಸ್ಟಾಲಾಜಿ) ವಾಗಬೇಕಾದುದು ಅನಿವಾರ್ಯ

‘ಆರ್ಯ – ವೈದಿಕ’ ಮತ್ತು ‘ದ್ರಾವಿಡ’ ಎಂಬ ನೆಲೆಯ ಅಧ್ಯಯನದ ಮಹತ್ವವು

೧. ದ್ರಾವಿಡ ಭಾಷೆಗಳನ್ನಾಡುವ ಜನ ಸಮೂಹಗಳ ತೌಲನಿಕ ವ್ಯಾಸಂಗದಿಂದಲೂ

೨. ವೈದಿಕಾರ್ಯ ಮತ್ತು ದ್ರಾವಿಡ ಜಾತಿಗಳ ತುಲನೆಯಿಂದಲೂ ಖಚಿತಗೊಳ್ಳುತ್ತದೆ.

ಶತಮಾನ ಹಿಂದೆ ಥರ್‌ಸ್ಟನ್ ದಕ್ಷಿಣ ಭಾರತದ ಜಾತಿಗಳು ಮತ್ತು ಬುಡಕಟ್ಟುಗಳ ಸಾಮಾಜಿಕ ವಿವರಗಳನ್ನು ಏಳು ಸಂಪುಟಗಳಲ್ಲಿ ಪ್ರಕಟಿಸಿದ. ಈ ಅಪರೂಪದ ಮಾಹಿತಿ ಸಂಗ್ರಹ ಕಾರ್ಯದಲ್ಲಿ ಕೊಲೆನಿಯಲ್ ಹಿತಾಸಕ್ತಿ ಕೆಲಸ ಮಾಡಿದರೂ ದ್ರಾವಿಡ ಪರಂಪರೆಯ ಶೋಧನೆಗೆ ಈ ಸಂಗತಿಗಳು ಮೂಲ ಸಾಮಗ್ರಿಯನ್ನು ಒದಗಿಸುತ್ತವೆ.

ಅನಂತಕೃಷ್ಣ ಅಯ್ಯರ್ ಮತ್ತು ನಂಜುಂಡಯ್ಯ ಇದೇ ಬಗೆಯ ಕೆಲಸವನ್ನು ಕರ್ನಾಟಕಕ್ಕೆ, ಸಂಬಂಧಿಸಿದಂತೆ ಕೈಗೊಂಡರು. ಅಲ್ಲಿ ಕೊಲೊನಿಯಲ್ ಅಲ್ಲ ಮೇಲ್ವರ್ಗ ಮತ್ತು ಮೇಲ್ ಜಾತಿಯ ಪೂರ್ವಾಗ್ರಹಗಳು ಕೆಲಸ ಮಾಡಿವೆ.

ಶತಮಾನದ ಹಿಂದಿನ ಈ ಬಗೆಯ ಮಾಹಿತಿಗೆ ಇಂದಿಗಿಂತ ಹೆಚ್ಚಿನ ಪ್ರಾಚ್ಯರೂಪ ಇರುತ್ತದೆ. ಬಂಡವಾಳಶಾಹಿ ವ್ಯವಸ್ಥೆಯ ಹುಟ್ಟಿನ ಮೊದಲ ಹಂತದ ಅನುಭವಗಳು ಪ್ರಾಚ್ಯಸ್ಥಿತಿಯನ್ನು ಉಳಿಸಿಕೊಂಡಿರುವುದು ಸಹಜವೇ. ಏಕೆಂದರೆ : ಭಾರತೀಯ ಪರಂಪರೆಗೆ ಬಂಡವಾಳಶಾಹಿಯಷ್ಟೇ ನಿರ್ಣಾಯಕವಾದ ಬಲು ದೊಡ್ಡ ಹೊಡೆತವನ್ನು ಅದು ನೀಡಲಿತ್ತು.

ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳು ದ್ರಾವಿಡ ಮೂಲದವು. ಅವಕ್ಕೆ ಮಾತ್ರ ಸಹಸ್ರಾರು ವರ್ಷಗಳ ಲಿಪಿ ಪರಂಪರೆಯಿದೆ. ಅಂದರೆ ಇವನ್ನು ಮಾತಾನಾಡುವ ಜನ ಸಮೂಹಗಳಷ್ಟೇ ವರ್ಗ ಶೋಷಣೆಗೆ ಗುರಿಯಾಧವು. ನಾಗರಿಕತೆ ಮತ್ತು ಸಂಸ್ಕೃತಿಯ ಮೇಲು ಮೇಲಿನ ಘಟ್ಟಗಳನ್ನು ಏರುತ್ತ ಬಂದವು. ಆದರೆ ಉಳಿದ ನೂರಾರು ದ್ರಾವಿಡ ಭಾಷೆಗಳನ್ನು ಆಡುವ ಜನ ಸಮುದಾಯ ವರ್ಗ – ವರ್ಣಗಳ ಹಿಡಿತಕ್ಕೆ ಸುಲಭದಲ್ಲಿ ಸಿಕ್ಕಲಿಲ್ಲ. ಅಂದರೆ ಅವು ತಮ್ಮ ಬುಡಕಟ್ಟು ಸ್ವರೂಪದಲ್ಲೇ ಪರಿವರ್ತನೆಗೊಳ್ಳುತ್ತ ಬದುಕುಳಿದವು. ದಕ್ಷಿಣ ಭಾರತದ ಭೌಗೋಲಿಕ ಸನ್ನಿವೇಶಗಳು ಇಂಥ ಜೀವನ ಸ್ಥಿತಿಗೆ ಅನುಕೂಲಕರವೆ ಇವೆ. ಮಧುರೈ ಜಿಲ್ಲೆಯ ಕಾಡುಗಳಲ್ಲಿರುವ ‘ಪಳಿಯನ್‌’ರು ಅನಾಗರಿಕ ಸ್ಥಿತಿಯಲ್ಲಿರುವ ಒಂದು ಬುಡಕಟ್ಟು. ಇಂಥ ಹಲವಾರು ಜನಕುಲಗಳು ದಕ್ಷಿಣದಲ್ಲಿವೆ.

ಈ ಸಂಗತಿಯನ್ನು ಹೀಗೆಯೂ ಹೇಳಬಹುದು. ದ್ರಾವಿಡ ಕುಲಗಳ ಅಭ್ಯಾಸದ ಒಂದು ವೈಶಿಷ್ಟ್ಯವೆಂದರೆ : ಸಾಮಾಜಿಕಾರ್ಥಿಕ ಬೆಳವಣಿಗೆಯ ಎಲ್ಲ ಹಂತಗಳಲ್ಲಿ ಬದುಕುತ್ತಿರುವ ಜನವರ್ಗಗಳನ್ನು ಕಾಣಲು ಸಾಧ್ಯವಿರುವುದು. ತೀರ ಅನಾಗರಿಕವೆಂದು ತೋರುವ ಬುಡಕಟ್ಟುಗಳಿಂದ ಮೊದಲು ಮಾಡಿಕೊಂಡು ನಾಗರಿಕತೆಯ ಬೇರೆ ಬೇರೆ ಸ್ಥಿತ್ಯಂತರಗಳಲ್ಲಿರುವ ಜನಕುಲಗಳು ಆರ್ಯವೈದಿಕ ಸಂಸ್ಕೃತಿ ಪರಂಪರೆಗಿಂತ ತಾವು ಸ್ಪಷ್ಟವಾಗಿ ಭಿನ್ನವಿರುವುದನ್ನು ನಿರೂಪಿಸುತ್ತವೆ.

ಹೀಗೆ ಹೇಳಿದರೂ ದ್ರಾವಿಡ ಅಥವಾ ಕನ್ನಡ ಕುಲಗಳ ಕಾಲಾನುಕ್ರಮದ ಸಾಮಾಜಿಕಾರ್ಥಿಕ ಪ್ರಗತಿಯ ‘ಇಡೀ’ ಚರಿತ್ರೆಯನ್ನು ಸಮಗ್ರವಾಗಿ ಕಟ್ಟಿಕೊಳ್ಳಲು ಸಾಧ್ಯವೆಂದು ಅರ್ಥವಲ್ಲ. ಏಕೆಂದರೆ ಕನ್ನಡ ಕುಲಗಳಿಗೆ ಸಂಬಂಧವಿಲ್ಲದ ವಿಭಿನ್ನ ಕುಲಗಳು ಕಾಲಕಾಲಕ್ಕೆ ವಲಸೆ ಬಂದು ನೆಲೆಯೂರಿರುವ ಸಾಧ್ಯತೆಗಳಿವೆ. ಅವು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಿವೆ. ಇದಕ್ಕೆ ‘ಜಾತಿ’ ಪದ್ಧತಿಯೂ ವರವಾಗಿ ಪರಿಣಮಿಸಿದೆ. ಅದರೆ ಅವು ತಮ್ಮ ಮಾತೃಭಾಷೆಯನ್ನು ಕಳಕೊಳ್ಳುತ್ತ ‘ಕನ್ನಡ’ ವಾಗಿರುವ ಸಾಧ್ಯತೆಯಿದೆ. ಉದಾಹರಣೆಗೆ ಆಂದ್ರ ಮೂಲದ ಮಾದಿಗರು ಕನ್ನಡ ನಾಡಿಗೆ ವಲಸೆ ಬಂದು ನೆಲೆಗೊಂಡು ಕನ್ನಡ ಮಾದಿಗರಾದರು. ಆಂಧ್ರದ ಯಾನಾಡಿ, ಚಂಚ್, ಬೇಡ ಮತ್ತು ವೇಡನ್‌ರು ಒಂದೇ ಮೂಲದವರಾಗಿದ್ದು ದ್ರಾವಿಡರ ಆಗಮನದ ಮೊದಲೆ ಇಲ್ಲಿದ್‌ದ ಜನಕುಲಗಳಾಗಿರುವ ಸಾಧ್ಯತೆಯಿದೆ. ಓಡಿಸಾದ ಸವರರ (ಶಬರ) ಬಗ್ಗೆ ಸಿಗುವ ವಿವರಗಳೂ ಈ ಊಹೆಯನ್ನು ಬಲಪಡಿಸುತ್ತವೆ. (ಏಳು ಗಂಡಂದಿರನ್ನು ಹೊಂದಿರುವ ಯನಾಡಿ ಹೆಂಗಸು ಸಮುದಾಯದಲ್ಲಿ ಅತ್ಯಂತ ಗೌರವಾನ್ವಿತಳೆಂದು ಪರಿಗಣಿಸಲ್ಪಡುತ್ತಾಳೆ. ಇವರಲ್ಲಿ ಹೊನ್ನವರೆ ಗಿಡದ (ತಂಗಡಿ) ಹೂ ತಾಳಿಯ ಪರ್ಯಾಯವಾಗಿದೆ. ಇಂಥ ಹಲವಾರು ಕುತೂಹಲಕಾರಿ ಪ್ರಾಚ್ಯ ಸಂಗತಿಗಳು ಸಾಂಸ್ಕೃತಿಕ ಶೋಧನೆಗೆ ಅಕರಗಳಾಗಿವೆ.

ಸಾಮ್ಯವಿರುವ ದ್ರಾವಿಡ ನಾಗರಿಕ ಮತ್ತು ಅನಾಗರಿಕ ಕುಲಗಳ ಪಾರಸ್ಪರಿಕ ಸಂಬಂಧವನ್ನು ಒಮ್ಮೊಮ್ಮೆ ಇದಮಿತ್ಥಂ ಎಂದು ಪ್ರತಿಷ್ಠಾಪಿಸಲು ತೊಂದರೆಯಾಗುತ್ತದೆ. ಉದಾ : ಕಾಡು ಕುರುಬರು ಮತ್ತು ಊರು ಕುರುಬರು ಆಂತರಿಕ ಸಂಬಂಧದ ಎಳೆ ತೀರ ತೆಳುವಾಗಿದೆ. ಈ ಬಗೆಯ ಗ್ರಹಿಕೆಗೆ ಸಮಗ್ರವಾದ ಆಧ್ಯಯನದ ಕೊರತೆಯೂ ಇರಬಹುದು. ಇಷ್ಟಾಗಿಯೂ ಹಲವಾರು ಕುಲಗಳ ನಡುವೆ ಇರುವ ಸಾಮ್ಯತೆಗಳು ಅವುಗಳ ಒಂದು ಮೂಲದ ಬಗೆಗೆ ಸೂಚನೆ ನೀಡುತ್ತವೆ. ನೀಲಗಿರಿಯ ದ್ರಾವಿಡ ಪಶುಪಾಲಕ ಕುಲಗಳು. ಇಬ್ಬರ ಹೈನುಗಾರಿಕೆ ಮತ್ತು ಪಶುಪಾಲಕ ಸಂಸ್ಕೃತಿಯಲ್ಲಿ ಆಶ್ಚರ್ಯಕರವಾದ ಸಾಮ್ಯತೆಗಳಿವೆ. ಅವು, ಇವೆರಡೂ ಒಂದೇ ಮೂಲದವೆಂಬುದನ್ನು ನಿರ್ದೇಶಿಸುತ್ತದೆಯೇ ಎಂಬ ಸಂಗತಿ ಶೋಧಿತವಾಗಬೇಕಷ್ಟೇ. ಆದರೆ ವೇದಕಾಲೀನ ಪಶುಪಾಲಕ ಆರ್ಯವೈದಿಕದ ಸಂಸ್ಕೃತಿಗಿಂತ ಇವು ಪೂರ್ಣ ಭಿನ್ನವಾಗಿವೆ. ಇದು ಆರ್ಯವೈದಿಕರಿಗಿಂತ ಭಿನ್ನವಾದ ‘ದ್ರಾವಿಡತನ’ ವನ್ನು ಸಂಸ್ಥಾಪಿಸಲು ಸಹಾಯಕವಾಗುವ ಅಂಶ.

ದ್ರಾವಿಡ ಪರಂಪರೆ ತನ್ನ ಸಂಸ್ಕೃತಿ ಪರಂಪರೆಯ ಮೂಲಕ ಮೊದಲಿನಿಂದಲೂ ಆರ್ಯವೈದಿಕ ಪರಂಪರೆಯನ್ನು ವಿರೋದಿಸುತ್ತ ಬಂದಿದೆ. ಈ ವೈರುದ್ಧ್ಯ ದಕ್ಷಿಣ ಭಾರತದ ಚಾರಿತ್ರಿಕ ಬೆಳವಣಿಗೆಯ ಪ್ರಧಾನ ಸಂಗತಿಗಳಲ್ಲೊಂದು. ಇದು ಭಾರತದ ಚರಿರೆಯ ಗಮನಾರ್ಹ ವಿಷಯವೂ ಹೌದು. ಲಿಖಿತ ಪರಂಪರೆಯಲ್ಲಿ ಇದರ ಸ್ವರೂಪ ಬೇರೊಂದು ಬಗೆಯಲ್ಲಿ ಉದ್ದಕ್ಕೂ ಬೆಳೆದು ಬಂದಿದೆ. ಮೇಲ್‌ರಚನಾಂಗಗಳಲ್ಲಿರುವ ‘ಭಕ್ತಿ ಚಳುವಳಿ’ ಇಂಥ ಒಂದು ಉತ್ತಮ ನಿದರ್ಶನ.

ದಕ್ಷಿಣ ಭಾರತದ ನಾಲ್ಕು ದ್ರಾವಿಡ ರಾಜ್ಯಗಳ ನಾಲ್ಕು ಭಾಷೆಗಳ ಗಡಿಗಳನ್ನು ಮೀರಿ ವೃತ್ತಿಜನಕುಲಗಳು ತಮ್ಮ ಅನನ್ಯ ಸಂಸ್ಕೃತಿ ಪರಂಪರೆಯನ್ನು ಬದುಕಿರುವುದು ದ್ರಾವಿಡ ಜನಕುಲಗಳ ವಿರಾಟ್ ಸ್ವರೂಪಕ್ಕೆ ಅಡಿಪಾಯದಂತಿವೆ. ಭಾಷಿಕ ಮಿತಿಗಳನ್ನು ದಾಟಿ ತೌಲನಿಕವಾಗಿ ವೃತ್ತಿಕುಲಗಳನ್ನು ಅಧ್ಯಯನ ಮಾಡುವುದರ ಮೂಲಕ ಇದು ಖಚಿತಗೊಳಿಸಿಕೊಳ್ಳಬಹುದು.

ದ್ರಾವಿಡ ಕುಲಗಳನ್ನು ವೈದಿಕ ಮೂಲದ ವರ್ಣಜಾತಿಗಳ ಜತೆ ಹೋಲಿಸಿದಾಗ ಶೋಷಣೆಯನ್ನು ಆಧರಿಸಿ ಹುಟ್ಟಿದ ವೈದಿಕಾರ್ಯರ ‘ವರ್ಣ’ ಮತ್ತು ಹಿಂದೂ ಧರ್ಮೀಯ ಪರಂಪರೆಯ ಭಿನ್ನಚಿತ್ರ ಸಿಗುತ್ತದೆ. ದ್ರಾವಿಡ ಬುಡಕಟ್ಟು ಕುಲಗಳು ‘ಜಾತಿ’ಗಳಾಗಿ ಬೆಳೆದುದಕ್ಕೂ, ವೈದಿಕಾರ್ಯರ ‘ವರ್ಣ’ ವ್ಯವಸ್ಥೆಗೂ ಸಂಬಂಧವೇ ಇಲ್ಲ. ಆದರೆ ಶೋಷಣೆಗೆ ‘ವರ್ಣ’ ಪಧ್ಧತಿಯೇ ಆಧಾರವಾಗಿದ್ದುದರಿಂದ ಮೇಲ್ಪದರದಲ್ಲಾದರೂ ಅದನ್ನು ದ್ರಾವಿಡ ನಾಡುಗಳ ಮೇಲೆ ಹೇರಲಾಯಿತು, ಮತ್ತು ದ್ರಾವಿಡ ಕುಲಗಳನ್ನು ‘ಜಾತಿ’ಗಳೆಂದು ಶ್ರೇಣೀಕರಣಕ್ಕೆ ಅಳವಡಿಸಲಾಯಿತು. ವೈದಿಕರ ‘ಸ್ಮೃತಿ’ ಗ್ರಂಥಗಳಲ್ಲಿ ಕುರುಬ, ಬೇಡ, ಗೊಲ್ಲ, ಮಾದಿಗ, ಹೊಲೆಯ, ಉಪ್ಪಾರ, ಲಿಂಗಾಯಿತ, ಒಕ್ಕಲಿಗ ಮೊದಲಾದ ಕುಲಗಳ ಹೆಸರುಗಳೇ ಇಲ್ಲ ಎಂಬುದು ಮೇಲಿನ ವಿಚಾರಕ್ಕೆ ಒಂದು ಸಣ್ಣ ಸಾಕ್ಷಿ. ದ್ರಾವಿಡ ಮತ್ತು ವೈದಿಕ ಪರಿವರ್ತಿತ ತುಲನೆಯಿಂದ ವರ್ಗವರ್ಣ ಶೋಷಣೆಯ ಆಧಾರದ ಪರಿವರ್ತಿತ ಮೌಲ್ಯಗಳನ್ನು ಮತ್ತು ಶಿಷ್ಟ ಸಂಸ್ಕೃತಿ ನಿರ್ಮಾಣದ ಗೊಂದಲವನ್ನು ಎತ್ತಿ ತೋರಿಸಲು ಶಕ್ಯವಿದೆ. ಇದನ್ನು ಪ್ರತಿಭಟಿಸಿ ನಿಲ್ಲುವ ಛಾತಿಯನ್ನು ದ್ರಾವಿಡ ಕುಲಪರಂಪರೆ ತೋರಿಸುತ್ತದೆ. ಹೀಗೆ ಭಾರತದ ಪ್ರಧಾನ ಸಾಂಸ್ಕೃತಿಕ ಮುಖಾಮುಖಿ, ವೈರುಧ್ಧ್ಯ, ಸಂಘರ್ಷಗಳ ಚರಿತ್ರೆ ಉದ್ಘಾಟನೆಗೊಳ್ಳುತ್ತದೆ.

ಏಕರೂಪಿ, ಏಕಮುಖಿ, ಕೇಂದ್ರಿಕೃತ ಚಿಂತನಾ ವಿಧಾನದ ಸಾರ್ವಭೌಮತೆಯನ್ನು ಛಿದ್ರಗೊಳಿಸಿ ಹೊಸ ಮಾದರಿಗಳ (ಚಿಂತನಾ ಮಾದರಿ ಮತ್ತು ಜೀವನ ವಿಧಾನ ಮಾದರಿ) ಸ್ಥಾಪನೆಗೆ ಸಾಧ್ಯವಾಗುತ್ತದೆ. ಆಗಲೆ ಅಸ್ತಿತ್ವದಲ್ಲಿದ್ದು ಉಸಿರು ಹಿಡಿದಿರುವ ಜೀವನ ವಿಧಾನವನ್ನು ‘ಹೊಸತೆಂಬಂತೆ’ ಅರ್ಥೈಸುವುದು ‘ಚಿಂತನಾ ಮಾದರಿ’ ಯ ಪ್ರತಿಷ್ಠಾಪನೆಯೇ ಹೌದು! ಹಾಗಾಗಿ ಈ ಚಿಂತನೆ ಹೊಸ ಜೀವನ ವಿಧಾನವನ್ನು ಹುಟ್ಟುಹಾಕುವುದಿಲ್ಲ’ ಇರುವ ‘ಆಚಾರ’ಗಳನ್ನು ಮೊದಲು ಸರಿಯಾಗಿ ಅರ್ಥೈಸಲು ಮತ್ತು ಅದರಿಂದ ಇತ್ಯಾತ್ಮಕವಾದ ಹೊಸ ಜೀವದ್ರವ್ಯವನ್ನು ಚಿಂತನೆಗೆ ಎಳೆದು ತರುವುದು ಉದ್ದೇಶ.

ಆಚಾರ ಮತ್ತು ವಿಚಾರಗಳ ನಡುವೆ ಕೃತಕವಾದ ಉದ್ದೇಶಪೂರ್ವಕವಾದ ಮತ್ತು ವಿದ್ರೋಹದ ಒಡಕನ್ನು ಸಾಧಿಸಿ ಪ್ರತ್ಯೇಕಗೊಳಿಸಿದ್ದು ಆರ್ಯವೈದಿಕರ ವಿಜಯದ ಸಾಧನೆ. ಈ ವಿದ್ರೋಹದ ಒಡಕನ್ನು ಸಾಧಿಸಿ ಪ್ರತ್ಯೇಕಗೊಳಿಸಿದ್ದು ಆರ್ಯವೈದಿಕರ ವಿಜಯದ ಸಾಧನೆ. ಈ ವಿದ್ರೋಹಕ್ಕೆ ಮುಗ್ಧವಾಗಿ ಬಲಿಯಾಧ ದಡ್ಡತನ ನಿರ್ದಿಷ್ಟ ದ್ರಾವಿಡ ಕುಲಗಳ ಸೋಲು.

ಹೀಗೆ ಎರಡು ಸ್ತರಗಳು ವಿಜಯದ ಮತ್ತು ಸೋಲಿನ ಇತಿಹಾಸದುದ್ದಕ್ಕೂ ಉಳಿದುಕೊಂಡು ಬಂದವು. ಅವುಗಳ ಸಂಘರ್ಷಾತ್ಮಕ ತೀವ್ರತೆಯನ್ನು ಆಧರಿಸಿ ಚರಿತ್ರೆಯ ಚಲನಶೀಲತೆ ನಿರ್ಧಾರವಾಗುತ್ತ ಬಂದುದು ದಕ್ಷಿಣದ ಪ್ರಗತಿಯ ಲಕ್ಷಣಗಳಲ್ಲೊಂದಾಗಿದೆ. ನಿರಂತರವಾದ ದಾಳಿ, ದೌರ್ಜನ್ಯ, ದಬ್ಬಾಳಿಕೆ ಹೇರಿಕೆ, ಒಳತೂರುವಿಕೆಯ ಮೇಲ್‌ಸ್ತರ ಆರ್ಯವೈದಿಕರ ಕೊಡುಗೆ. ‘ಚಲನೆ’ಗೆ ಅನಿವಾರ್ಯವಾದ ದ್ವಂದ್ವದಲ್ಲಿ, ಒಂದು ಮೇಲು, ಇನ್ನೊಂದು ಕೀಳು ಎಂಬ ನೆಲೆಯಲ್ಲಿ ನಡೆಯುವ ಸಂಘರ್ಷದ ರೀತಿಯ ಪರಿಣಾಮ ವಿದಿತವೇ. ಮೇಲ್‌ಸ್ತರವನ್ನು ನಿರಂತರವಾಗಿ ಎರುರಿಸುತ್ತ ತನ್ನ ಅಸ್ತಿತ್ವದ ಉಳಿವಿಗೆ ಪ್ರಯತ್ನಿಸುತ್ತ, ಪ್ರತಿರೋಧವನ್ನೊಡ್ಡಿ ನಿಲ್ಲುವ ಕೆಳಸ್ತರದ ಸ್ಥಿತಿ ಚಿಂತಾಜನಕ. ಪ್ರತಿ ವಿರೋಧದ ಲಕ್ಷಣ ಪ್ರಾದೇಶಿಕವೂ ಮತ್ತು ಸಾಂದರ್ಭಿಕವೂ ಆಗಿರುತ್ತದೆ. ಹಾಗಾಗಿ ಸಮರೂಪದ ಚಲನಶೀಲತೆಯಲ್ಲ ಏರಿಳಿತದ ಅಸಮಾನ ಬೆಳವಣಿಗೆ ದಕ್ಷಿಣದ ಸಹಜ ಲಕ್ಷಣವಾಯಿತು.

ವೈರುದ್ಧ್ಯಗಳ ಸಂಘರ್ಷ ಪ್ರಗತಿಯ ಮೂಲದ್ರವ್ಯ ಎಂದಾದರೆ, ಸರಳರೇಖಾತ್ಮಕವಾಗಲ್ಲ. ತನ್ನ ಇಡೀ ಸಂಕೀರ್ಣ ಸಾಮಾಜಿಕಾರ್ಥಿಕಕ ಒಪ್ಪಂದದಲ್ಲಿ ಈ ಹೋರಾಟ ದಕ್ಷಿಣದಲ್ಲಿತ್ತು. ಭಾಷೆಯ ಆಧಾರದ ಪರಸ್ಪರ ಪ್ರತ್ಯೇಕತೆಯ ಕಾಲದಿಂದೀಚೆ ಕುಲಗಳಲ್ಲ ಭಾಷೆ ತಂದ ಒಡಕಿನ ಪರಿಣಾಮ ಅಗಾಧವಾದುದು. ದುರಂತವೆಂದರೆ ವಿಜ್ಞಾನಯುಗದಲ್ಲೂ ಈ ಪರಿಕಲ್ಪನೆಯ ಸುಳ್ಳನ್ನು ಒಡೆಯಲು ಸಾಧ್ಯವಾಗದೇ ಹೋದುದು.

ಕುಲಗಳು ಒಂದಾಗಿದ್ದು, ಭಾಷೆ ಬೇರೆಯಾದಾಗ ಕುಲಗಳ ನಡುವೆ ಒಡಕಾಗಿ, ಪ್ರತ್ಯೇಕ ಕುಲಗಳಾದುದು ಹಿಂದಿನಿಂದಲೂ ದ್ರಾವಿಡ ಪರಂಪರೆ ಕಂಡ ಲಕ್ಷಣವೇ. ಆದರೆ ಇದು ಸಾಮಾನ್ಯ ಲಕ್ಷಣವಾಗಿರಲಿಲ್ಲ. ಅಂದರೆ ರಾಷ್ಟ್ರೀಯ ವಿಮೋಚನಾ ಚಳುವಳಿಯ ಕಾಲದ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಎಚ್ಚರದ ಪ್ರಕ್ರಿಯೆಯಲ್ಲಿ ಹುಟ್ಟಿದ ಭಾಷೆಗಳ ಆಧಾರದ ಗಡಿ ಪ್ರತ್ಯೇಕತೆ ಜನಗಳ ನಡುವೆ ಭದ್ರವಾದ ಗೋಡೆಗಳನ್ನು ನಿರ್ಮಿಸಿ, ಪರಸ್ಪರ ಸಹಕಾರ, ಸಹಾಯ, ಅನಿವಾರ್ಯವಾಗಿ ಒಟ್ಟಾಗಿ ಬಾಳಬೇಕಿದ್ದ ಸಂದರ್ಭಗಳನ್ನು ಅನುಮಾನಿಸುತ್ತ ದ್ವೇಷಿಸುತ್ತ ಬರಲಾಗಿದೆ. ಪರಸ್ಪರರಿಂದ ಕಲಿಯಬೇಕಾದುದು ಬಹಳಷ್ಟಿದ್ದರೂ ದ್ವೇಷ, ಅಸಹನೆಗಳೆ ಹೆಚ್ಚಿ ಅನಗತ್ಯ ತಾಟಸ್ಥ್ಯ ವಾತಾವರಣ ಉಂಟಾಗಿದೆ.

ವೈದಿಕಾರ್ಯರ ಉತ್ತರದ ಮಾದರಿಯನ್ನೇ ಶ್ರೇಷ್ಟವೆಂದು ಅನುಕರಣೀಯವೆಂದು ಸತತವಾಗಿ ಪ್ರತಿಪಾದಿಸುತ್ತ ಬಂದುದರ ದುಷ್ಪರಿಣಾಮವೇ ದಕ್ಷಿಣದ ಸೋದರ ಸಂಸ್ಕೃತಿಗಳ ನಡುವೆ ದ್ವೇಷದ ವಾತಾವರಣ ನಿರ್ಮಾಣವಾದುದು. ದ್ರಾವಿಡ ಶಿಷ್ಟ ಸಂಸ್ಕೃತಿಗಳ ನಡುವಿನ ಕೊಳುಕೊಡೆ ಎಂದು ಬಿಂಬಿಸಲಾಯಿತು. ಸೋದರ ಸಂಸ್ಕೃತಿಗಳ ನಡುವಿನ ಸಂವಾದವೆ ಮುಖ್ಯವೆಂದು ಭಾವಿಸಿದ್ದು ಸ್ವಯಂಕೃತಾಪರಾಧವೂ, ಆತ್ಮಹತ್ಯಾಕಾರಿಯೇ ಆಗಿತ್ತು.

ಸೋದರ ಸಂಸ್ಕೃತಿ ಮತ್ತು ವೈರಿ ಸಂಸ್ಕೃತಿಗಳ ಬಗೆಗಿನ ನಮ್ಮ ಧೋರಣೆಯಲ್ಲಿ ಮೂಲಭೂತವಾದ ಬದಲಾವಣೆಯಾಗದೆ, ನಮ್ಮತನದ ಅರಿವು ಮತ್ತು ಏಳ್ಗೆ ಸಾಧ್ಯವಿಲ್ಲ. ಕೊಳುಕೊಡುಗೆ ಕಾರಣವಾಗುವ ಸಂದರ್ಭ ಮೇಲು – ಕೀಳು ಎಂಬ ನೆಲೆಯಲ್ಲಿ ಮುಖಾಮುಖಿಯಾಗುವ ಸಂಸ್ಕೃತಿಗಳ ನಡುವೆ ಮಾತ್ರ ಎನ್ನುವುದಾದರೆ ಈ ಪ್ರಕ್ರಿಯೆ ಬೇಕಾಗಲಿ ಬೇಡಾಗಲಿ ನಿರಂತರ ನಡೆದೇ ಇರುತ್ತದೆ. ಇಲ್ಲಿ ಪ್ರಜ್ಞಾಪೂರ್ವಕ ಆಯ್ಕೆಯ ಪ್ರಶ್ನೆಯಿರುವಂತಿಲ್ಲ. ಸಮಾನ ಮನೋಧರ್ಮ ಮತ್ತು ಸಂಸ್ಕೃತಿ ಪರಿಕಲ್ಪನೆಗಳ ಮತ್ತು ಜೀವನಕ್ರಮಗಳ ನಡುವಿನ ಕೊಳುಕೊಡುಗೆ ಚರಿತ್ರೆಯಲ್ಲಿ ಮಹತ್ವವೇ ಇಲ್ಲ ಎಂದಾದರೆ ಅದು ಆತ್ಮಘಾತುಕವೇ. ಸೋದರ ಸಂಸ್ಕೃತಿಗಳ ನಡುವಿನ ಸಮಾನಾಂಶಗಳ ಬಗೆಗೆ ಬೇರೆಬೇರೆ ಶಾಸ್ತ್ರ ಶಿಸ್ತುಗಳು ಗಮನಹರಿಸುತ್ತವೆ ನಿಜ. ಉದಾ: ಭಾಷಾಶಾಸ್ತ್ರ. ಅದು ಸಾಂಸ್ಕೃತಿಕ ಚಿಂತನೆಗೆ ಒಂದು ಮುಖ್ಯ ವಿಧಾನವಾಗಿ ಬಳಕೆಯಾಗಿಲ್ಲ. ಅದು ಇಂದು ನಡೆಯಬೇಕಾಗಿರುವ ಅಗತ್ಯ.

ವೈದಿಕ ಸಂಸ್ಕೃತಿ ಪರಂಪರೆಯ ಬಹು ವ್ಯಾಪಕವಾದ ಪೂರ್ವಗ್ರಹಿಕೆ ಆಧುನಿಕ ಶಿಕ್ಷಣ ಪದ್ಧತಿಯ ಒಳಗೆ ವಿಷದಂತೆ ಕೆಲಸ ಮಾಡುತ್ತಿದೆ. ಇದು ದ್ರಾವಿಡ ಸಂಸ್ಕೃತಿಯ ಭೂಮತೆಯನ್ನು, ಸತ್ತ್ವ ಸೌಂದರ್ಯವನ್ನು ಸಂಪೂರ್ಣವಾಗಿ ಮರೆಮಾಚಿದೆ. ಜಾತಿ ವಿಕೃತತೆಗೆ ಕಾರಣವಾಗಿರುವ ವೈದಿಕ ಗ್ರಹಿಕೆ ದೇಶದ ಏಳ್ಗೆಗೆ ಅಡ್ಡಿಯಾಗಿದೆ.

ವೈದಿಕತೆ ಶ್ರೇಷ್ಠವಾಗಿರದ್ದಿದ್ದರೆ ಅದು ದ್ರಾವಿಡ ಸಂಸ್ಕೃತಿಯ ರಕ್ತ ಹೀರಿದ್ದರಿಂದ. ತಾನು ಹೀನವಾಗಿರುವುದಾದರೆ ಅದು ವರ್ಗ ವರ್ಣಭೇದವನ್ನು ತನ್ನ ಸೈದ್ಧಾಂತಿಕ ಅಡಿಪಾಯವನ್ನಾಗಿ ಮಾಡಿಕೊಂಡಿದ್ದರಿಂದ, ಇದರ ಬೇರೆಬೇರೆ ರೂಪಗಳ ಕುರಿತು ಕೆಲಮಟ್ಟಿಗೆ ದೇವಿಪ್ರಸಾದ ಚಟೋಪಾಧ್ಯಾಯ ಚರ್ಚಿಸಿದ್ದಾರೆ.

ವೈದಿಕ ಜಾತಿ ಶ್ರೇಣಿಕರಣದಲ್ಲಿ ಯಾವುದು ಅತ್ಯಂತ ಕೀಳಾಗಿದೆಯೋ ಅದು ದ್ರಾವಿಡ ಕುಲಪದ್ಧತಿಯಲ್ಲಿಇ ಅತ್ಯಂತ ಶ್ರೇಷ್ಠವಾಗಿದೆ. ಹಾಗೆ ಮರೆತದ್ದರ ದುಷ್ಪರಿಣಾಮವೇ ಅಸ್ಪೃಶ್ಯತೆ ಇದಕ್ಕೆ ಸ್ಪಷ್ಟವಾದ ಸಾಕ್ಷ್ಯಾಧಾರ. ಹೊಲೆಯರು, ಮಾದಿಗರು, ನನ್ನ ಪ್ರಕಾರ ಅತ್ಯಂತ ಗೌರವಾರ್ಹರೂ, ಪೂಜ್ಯರೂ (‘ಪೂಜೆ’ – ದ್ರಾವಿಡ ಪದ) ಆಗಿದ್ದಾರೆ. ಇದು ವೈರುದ್ಧ್ಯದ ಗ್ರಹಿಕೆಯ ಪರಿಣಾಮವಲ್ಲ. ವಾಸ್ತವದ ಗ್ರಹಿಕೆಯ ಸ್ಥೂಲ ದರ್ಶನದಲ್ಲಿ ಸಿಕ್ಕ ಅನನ್ಯತೆ. ಸುಖ ಸಮೃದ್ಧಿಗೆ ವಿಧಿಬದ್ಧವಾಗಿ ಆಚರಿಸಲಾಗುತ್ತಿದ್ದ ಸಾಮೂಹಿಕ ಪರಿಕ್ರಮಗಳಲ್ಲಿ ಹೊಲೆಯ ಮಾದಿಗರ ಪಾತ್ರ ಅತ್ಯಂತ ಪವಿತ್ರವಾಗಿತ್ತು. ‘ಪೊಲಿ’ (‘ಹೊಲಿ’) ಪದದಿಂದ ವ್ಯುತ್ಪನ್ನವಾದ ಪೊಲೆಯ ಮತ್ತು ‘ಮಾದ’ ಮೂಲದ ಮಾದಿಗ ತಾಂತ್ರಿಕ ಆರಾಧನೆಯ ಕೇಂದ್ರತೆಗೂ, ಕೃಷಿಕಾರ್ಯದಿಂದ ಹೊಲೆಯ ಮಾದಿಗರನ್ನು ಸಂಪೂರ್ಣವಾಗಿ ಬೇರ್ಪಡಿಸಿರುವುದಕ್ಕೂ, ವೈದಿಕಾರ್ಯ ಜಾತಿ ವ್ಯವಸ್ಥೆಯ ಪ್ರತಿಷ್ಠಾಪನೆಗೂ ಇರುವ ಒಳಸಂಬಂಧದ ಗಂಟನ್ನು ಇಡಿಯಾಗಿ ಗ್ರಹಿಸದೆ ಇರುವಾಗ ಮಾತ್ರ ಅನೇಕ ಪ್ರಶ್ನೆಗಳು, ಗೊಂದಲಗಳು ಹುಟ್ಟಿಕೊಳ್ಳುತ್ತವೆ. ದ್ರಾವಿಡ ಸಂಸ್ಕೃತಿ ಪರಂಪರೆಯ ಮೇಲೆ ಅಂತಿಮ ಪ್ರಹಾರವಾದುದರ ಸ್ಪಷ್ಟ ಸಾಕ್ಷಿಯೇ ಹೊಲೆಯ ಮಾದಿಗ ಅಸ್ಪೃಶ್ಯತೆ.

ಅತ್ಯಂತ ಶ್ರೇಷ್ಠವಾದುದು ಸಂಭವಿಸಬೇಕಾದರೆ ಅತ್ಯಂತ ಕನಿಷ್ಠವಾದುದದರ ಇರವು ಅಗತ್ಯ. ವೈರುದ್ಧ್ಯತತ್ವದ ನೆಲೆ ಇದು. ಭಾರತದಲ್ಲಿ ಅತ್ಯಂತ ಶ್ರೇಷ್ಠವಾದುದು ಸ್ಥಾಪಿತವಾಗಲೇಬೇಕಾದ ಒಂದು ಚಾರಿತ್ರಿಕ ಹಂತ ಎದುರಾಯಿತು. ಹಾಗಾಗಿ ಅತ್ಯಂತ ಕನಿಷ್ಠವಾದುದು ಸಂಭವಿಸಲೇಬೇಕಾಯಿತು. ಬಲಿಪಶುವಾಗಲು ಸಾಧ್ಯವಿದ್ದ ದ್ರಾವಿಡ ಕುಲಗಳನ್ನು ‘ಆಯ್ಕೆ’ ಮಾಡಲಾಯಿತು. ಸಾಮಾಜಿಕ ಗತಿಶೀಲತೆಯ ಸ್ವಭಾವವೂ ಅನುಕೂಲವಾಗಿ ಒದಗಿಬಂದಿತು. ಎರಡೂ ತುದಿಗಳು ಒಂದೇ ಸಲಕ್ಕೆ ಸ್ಥಾಪಿತವಾದವು. ಒಂದು ಪಾತಾಳಕ್ಕಿಳಿಯಿತು, ಇನ್ನೊಂದು ಆಕಾಶಕ್ಕೆ ನೆಗೆಯಿತು. ಹೊಡೆತದ ಮೇಲೆ ಹೊಡೆತಗಳನ್ನು ನಿರಂತವಾದ ಪ್ರಕ್ರಿಯೆಯನ್ನಾಗಿ ಮಾಡಲಾಯಿತು. ಈ ವರ್ಗ ಶೋಷಣೆಯ ಪಾಪದಲ್ಲಿ ಭಾಗಿಯಾಗಲು ಮುಂಬಂದ ಎಲ್ಲರನ್ನೂ ಸೇರಿಸಿಕೊಳ್ಳಲಾಯಿತು.

ದ್ರಾವಿಡ ಸಂಸ್ಕೃತಿ ಅಧ್ಯಯನದಲ್ಲಿ ‘ವೃತ್ತಿ’ ಮೂಲದ ಕುಲಗಳು ಅಡಿಪಾಯವನ್ನು ನಿರ್ಮಿಸಿವೆ. ಹಾಗಾಗಿ ಮೊದಲ ಹಂತದಲ್ಲಿ ಬೇಟೆಗಾರಿಕೆ, ನಂತರ ಪಶುಪಾಲನೆ, ಕುಮ್ರಿ ಬೇಸಾಯದ ಬುಡಕಟ್ಟು ಕುಲಗಳನ್ನು ಅಧ್ಯಯನಿಸುವುದು ಸೂಕ್ತ.

ಕರ್ನಾಟಕದ ಜಾತಿ ವ್ಯವಸ್ಥೆಯನ್ನು ಕುರಿತು ಬರೆಯುವಾಗ ತಮಿಳು, ತೆಲುಗು, ಮಲಯಾಳ ಮೊದಲಾದ ದ್ರಾವಿಡ ಭಾಷಿಕ ಜಾತಿ ಬುಡಕಟ್ಟುಗಳ ಬಗೆಗೂ ಅಭ್ಯಾಸ ಮಾಡುವುದು ಅನಿವಾರ್ಯ. ಕನ್ನಡ ಭಾಷಿಕ ಬುಡಕಟ್ಟು ಮತ್ತು ಕುಲಗಳು ತಮ್ಮಷ್ಟಕ್ಕೆ ತಾವು ಸ್ವತಂತ್ರ್ಯವೂ, ಸ್ವಾಯುತ್ತವೂ ಅಲ್ಲ. ಭಾಷೆ ಗಡಿಗಳ ಮೇಲ್ಮೆಯನ್ನು ಸತತವಾಗಿ ಮೀರುತ್ತಿದ್ದ ಸ್ವಭಾವ ದ್ರಾವಿಡ ಕುಲಗಳಿಗಿತ್ತು. ನಿಜ, ಭಾಷೆಗಳಲ್ಲಿ ಪ್ರತ್ಯೇಕ ಅಸ್ತಿತ್ವ ಹುಟ್ಟುಕೊಂಡಿದ್ದೇ ಭೌಗೋಲಿಕ ಕಾರಣದಿಂದಾಗಿ. ಇಲ್ಲಿಯ ಪ್ರಶ್ನೆ ಎಂದರೆ ಭಾಷೆ, ಪ್ರಾಂತಗಳು ಪ್ರತ್ಯೇಕಗೊಳ್ಳುವ ಪೂರ್ವದಲ್ಲಿ ಹುಟ್ಟಿದ ಸಾಮಾಜಿಕ ಕುಲಗಳ ಸಂಸ್ಕೃತಿಯ ಪ್ರಬಲವಿಲ್ಲವೇ? ಹೊಲೆಯ – ಮಾದಿಗ ಮೊದಲಾದ ಅಸ್ಪೃಶ್ಯ ಕುಲದ ಕೃಷಿಕರಲ್ಲಿ ಇದು ಎದ್ದು ಕಾಣುವ ಅಂಶ. ಪಶುಪಾಲಕ ಕುಲಗಳ ಸಮಾನಾಂಶಗಳಿಗೂ ಈ ಮಾತು ಅನ್ವಯಿಸುತ್ತದೆ.

ಕನ್ನಡ ಕುರುಬ, ಬೇಡರನ್ನು ಕುರಿತು ಬರೆಯುವ ಸಂದರ್ಭದಲ್ಲಿ ತಮಿಳು, ತೆಲಗುನಾಡಿನ ಮರವನ್, ಕಲ್ಲನ್, ವೆಡ್ಡ, ಚಂಚು, ತಲಯಾರಿ, ಅಗಮುಡೈಯಾನರನ್ನು ಅಧ್ಯಯನಿಸದೆ ಮುಂದುವರೆಯಲು ಸಾಧ್ಯವಾಗಲಾರದು. ಕನ್ನಡಿಗರ ಮೂಲಕ ಪ್ರಶ್ನೆಗೆ ತಮಿಳುನಾಡಿನ ‘ಕಳ್ಳನ್’ ರಲ್ಲಿ ಹಲವಾರು ಉತ್ತರಗಳು ದೊರಕುವ ಸಾಧ್ಯತೆ ಇದೆ. ಈ ಪಟ್ಟಿಯನ್ನು ಹೀಗೆಯೇ ಬೆಳೆಸುತ್ತ ಹೋಗಬಹುದು. ಒಂದೆರಡು ನಿದರ್ಶನಗಳ ಮೂಲಕ ಇಲ್ಲಿಯ ತಾತ್ತ್ವಿಕತೆಯನ್ನು ಸ್ಪಷ್ಟಪಡಿಸಬಹುದು.

ತಮಿಳುನಾಡಿನ ಮೂಲ ಜನಾಂಗಗಳಲ್ಲಿ ಒಂದು ‘ಮರವನ್’ ಎಂಬ ಜಾತಿಯವರು. ಥರ್‌ಸ್ಟನ್‌ರ ಪ್ರಕಾರ ದಕ್ಷಿಣದ ದ್ರಾವಿಡ ದೇಶಕ್ಕೆ ಬಂದ ಮೊದಲ ಬುಡಕಟ್ಟುಗಳಲ್ಲಿ ಇವರೂ ಸೇರುತ್ತಾರೆ. (ಈ.ಥ.V – 22) ಮತ್ತು ಕಲ್ಲನ್‌ರಂತೆ ಬ್ರಾಹ್ಮಣ ಪರಂಪರೆಯಿಂದ ಕಡಿಮೆ ಪ್ರಭಾವಿತರಾಗಿದ್ದಾರೆ.

‘ಮರವನ್’ ಜಾತಿಯ ಹುಟ್ಟಿಗೆ ಹೇಳುವ ಕಾರಣಕತೆಗಳನ್ನು ಒಂದೆಡೆ ವೈದಿಕರು ಸೃಷ್ಟಿಸಿದ್ದು ಅವು ಎಷ್ಟು ಕೃತಕವಾಗಿರುತ್ತವೆ, ಸುಳ್ಳಾಗಿರುತ್ತವೆ, ಮೋಸದ್ದಿರುತ್ತವೆಂಬುದನ್ನು ಇಲ್ಲಿ ನೋಡಬಹುದು. ನಿಜವಾದ ಹುಟ್ಟಿನ ಕತೆ ದೇಸಿಯ ನೆಲೆಯಲ್ಲಿದ್ದು ತರ್ಕಬದ್ಧವಾಗಿದೆ, ವಾಸ್ತವವಾಗಿದೆ.

ಮೊದಲ ವೈದಿಕರ ಕತೆಗಳು ರಾವಣನ ವಿರುದ್ಧ ರಾಮನಿಗೆ ಸಹಾಯ ಮಾಡಿದ್ದಕ್ಕೆ ಅವನು ‘ಮರೆಯಲಾರೆ’ ಎಂದುದರಿಂದ ‘ಮರವನ್’ (ಅದೇ ಪು ೨೩) ಎಂಬ ಹೆಸರು ಬಂದಿತು.

ರಾಮಾಯಾಣದ ರಾಮನ ಜತೆ ಅಂದರೆ ವೈದಿಕ ಸಂಸ್ಕೃತಿಯ ಜತೆ ಮರವನ್ನರ ಸಂಬಂಧ ಕಲ್ಪಿಸುವ ಕಟ್ಟುಕತೆ ಇದು. ಇಂಥ ಹಲವಾರು ಕತೆಗಳು ಇದೇ ರೀತಿ ಇವೆ. ಅಗಮುಡೈಯಾನ್ ಮತ್ತು ಕಳ್ಳನ್ (ಕಲ್ಲನ್) ಈ ಜಾತಿಯ ಉಪವಿಭಾಗಗಳೆಂಬ ನಂಬಿಕೆ ಇದೆ. ಕೆಲಸಲ ಕಳ್ಳನ್‌ರ ಒಳಪಂಗಡವಾಗಿಯೂ ‘ಮರವನ್’ರು ಬರುತ್ತಾರೆ. ಈ ಮೂರು ಜಾತಿಗಳ ಮಧ್ಯೆ ನಿಕಟ ಸಂಬಂಧವಿದೆ. ಇದಕ್ಕ ಸಂಬಂಧಿಸಿದ ಐತಿಹ್ಯವೊಂದು ಹೀಗಿದೆ :

ಗೌತಮ ಋಷಿಯನ್ನು ವಂಚಿಸಿ ಅಹಲ್ಯೆಯನ್ನು ಸೇರಿದ ಇಂದ್ರನಿಗೆ ಹುಟ್ಟಿದ ಮೂರು ಮಕ್ಕಳು ಈ ಮೂರು ಜಾತಿಗಳ ಮೂಲ ಪುರುಷರು. ಗೌತಮ ತಿರುಗಿ ಬಂದಾಗ ಕದದ ಹಿಂದೆ ಅಡಗಿದವ ‘ಕಳ್ಳನ್’ ಮರವನ್ನೆರಿದವ ‘ಮರವನ್’ ಧೈರ್ಯದಿಂದ ಎದುರುನಿಂತವ ಅಗಮಡೈಯಾನ್. (ಅದೇ ಪು ೨೩) ವೈದಿಕ ಜಾತಿವ್ಯವಸ್ಥೆಯ ಸಂಪರ್ಕಕ್ಕೆ ಬಂದ ದ್ರಾವಿಡ ಬುಡಕಟ್ಟುಗಳನ್ನು ಪ್ರತ್ಯೇಕ ಜಾತಿಗಳನ್ನಾಗಿ ಒಡೆದು ಹಾಕುವುದಕ್ಕಾಗಿ ಏನಕೇನ ಪ್ರಕಾರೇಣ ವೈದಿಕ ಪುರಾಣ ಕತೆಗಳಿಗೆ ಗಂಟು ಹಾಕಲಾಗುತ್ತಿತ್ತು. ಅಹಲ್ಯೆಯ ಹಾದರದ ಮಕ್ಕಳು ಎಂಬ ಆಂಶ ಜಾತಿವ್ಯವಸ್ಥೆಯಲ್ಲಿ ಇವರನ್ನು ಕೀಳುಮಟ್ಟದಲ್ಲಿಡಲು ಮಾಡಿದ ತಂತ್ರ. ಋಷಿಯ ಸಂಬಂಧ ಬರುವುದರಿಂದ ಅವರು ಅಷ್ಟರಮಟ್ಟಿಗೆ ಆತ್ಮತೃಪ್ತಿ ಪಡೆಯಬಹುದಿತ್ತು.

ಇನ್ನೂ ಒಂದು ಕಥೆ : ರಾಮ ಲಂಕೆಗೆ ಸಮುದ್ರಮಾರ್ಗವಾಗಿ ಹೋಗುವಾಗ ಅವನನ್ನು ದೋಣಿಯಲ್ಲಿ ದಾಟಿಸಿದವ ಗುಹನೆಂಬ ನಾವಿಕ. ರಾಮ ನಿಗದಿತ ವೇಳೆಗೆ ಹಿಂದಿರುಗದಿರಲು ಆತ್ಮಹತ್ಯೆಗೆ ಯತ್ನಿಸಿದ. ಹನುಮಂತ ಅವನನ್ನು ತಡೆದ ನಂತರ ಬಂದ ರಾಮ ಅವನನ್ನು ‘ಮರವನ್’ (ಶೂರ) ಎಂದು ಕರೆದ.

ಈ ಎಲ್ಲ ಕಥೆಗಳು ಒಂದೇ ವಿಧದ ಆಶಯ ಹೊಂದಿರುವುದು ಸ್ಪಷ್ಟ. ಅದು ವೈದಿಕ ಜಾತಿವ್ಯವಸ್ಥೆಗೆ ಎಲ್ಲರನ್ನೂ ಒಳಗು ಮಾಡಿಕೊಳ್ಳುವುದು ಮತ್ತು ಅದರ ಸಾಮಾಜಿ ಸ್ಥಾನ ಕೀಳಾಗಿರುವಂತೆ ನೋಡಿಕೊಳ್ಳುವುದು ಇದೆಲ್ಲ ಸುಳ್ಳು, ಮೋಸ ಎಂಬುದನ್ನು ಕೊಂಡಯಂಕೊಟ್ಟೈ ಮರವನ್‌ರಲ್ಲಿರುವ ಆರು ಬುಡಕಟ್ಟುಗಳು ವಿಷಯ ಸ್ಪಷ್ಟಪಡಿಸುತ್ತದೆ. ಇವನ್ನು ಅವರು ಮರಗಳೆಂದು ಕರೆಯುತ್ತಾರೆ. (ಅದೇ ಪು.೩೩) ಪ್ರತಿ ಕೊಡುಗೆ (ಮರ) ಅನೇಕ ರಂಬೆಗಳು (ಕಿಳ್ಳೈ) ಇವೆ. (ಬೆಡಗಿಗೆ (ಗೋತ್ರ ಕಿಳ್ಳೈ ಎನ್ನಲಾಗುತ್ತದೆ) ಒಂದೇ ಗಿಡದ ವಿಭಿನ್ನ ಕಿಳ್ಳೈಯವರು ಮದುವೆ ಆಗುವುದಿಲ್ಲ. ಏಕೆಂದರೆ ಅವರು ಒಂದೇ ಬೆಡಗಿನವರಾಗಿ ಸೋದರ ಸೋದರಿ ಸಂಬಂಧದವರಾಗುತ್ತಾರೆ. ಹಾಗಾಗಿ ಕೆಲವು ಗಿಡಗಳ ಮಧ್ಯೆ ಮದುವೆ ಸಂಬಂಧ ಇದೆ. ಆ ಗಿಡಗಳು

೧. ಮಿಲುಕು (Pepper vine) ೨.ವೆಟ್ಟಿಲೆ (ವೀಳ್ಯ) ೩. ತೆಂಗು ೪. ಅಡಿಕೆ ೫.ಈಚಲು ೬.ತಾಳೆ.

ಒಟ್ಟಾರೆ ‘ಮರವನ್’ (ಕುಲದ) ಜಾತಿಯ ಹೆಸರು ಮರಗಳ ಆಧಾರದಲ್ಲಿ ಹುಟ್ಟಿದ ಬುಡಕಟ್ಟು ಹೆಸರು. ಮರವೇ ಇಲ್ಲಿ ‘ಟೊಟೆಂ’.

‘ಕೊಂಡ’ ಎಂಬ ಜನಾಂಗವೇ ದ್ರಾವಿಡನಾಡಿನ ಅನೇಕ ಜಾತಿಗಳಿಗೆ ಮೂಲವಾಗಿದೆ. ತೆಲಗಿನಲ್ಲಿ ಕೊಂಡ ಎಂದರೆ ಬೆಟ್ಟ ಎಂದರ್ಥ. ತೆಲಗು ನಾಡಿನ ಕಾಡುಗಳಲ್ಲೆ ಇವರು ವಾಸವಾಗಿದ್ದಾರೆ. ಕೊಂಡರೇ ಗೊಂಡರು. ಕನ್ನಡ ನಾಡಿನಲ್ಲಿ ಉತ್ತರ ಕನ್ನಡ ಜಿಲ್ಲಿಯಲ್ಲಿರುವ ಗೊಂಡರು ಆಂಧ್ರದಿಂದ ವಲಸೆ ಬಂದವರು. ಆದರೆ, ಅವರ ವಲಸೆ ಕುರುಬರಾಗಿ ರೂಪಗೊಂಡ ಗೊಂಡರ ಕಾಲಕ್ಕಿಂತ ತೀರ ಈಚಿನದು. ಕುರುಬರ ಮೂಲಪುರುಷನ ಹೆಸರು ಪದ್ಮಗೊಂಡ. ಇದು ಕುರುಬರು ಮೂಲಗೊಂಡರೆಂಬುದರ ಸ್ಪಷ್ಟ ಸೂಚೆನ. ಆಂಧ್ರದಿಂದ ವಲಸೆ ಬಂದ ಕುರುಬಗೊಂಡರು ಕಾಡಿನಲ್ಲಿ ಉಳಿದವರು ಕಾಡು ಕುರುಬರಾದರು, ಊರಲ್ಲಿ ನೆಲೆಗೊಂಡವರು ಊರ ಕುರುಬರಾದರು. ಕುರುಬರು, ಒಕ್ಕಲಿಗರು, ಗೊಲ್ಲರುಗಳಿಗೆ ಒಳಸಂಬಂಧವಿದೆ ಎಂದು ತೀ.ನ. ಶಂಕರನಾರಾಯನ ತಮ್ಮ ಸಂಪ್ರಬಂಧದಲ್ಲಿ ತಿಳಿಸುತ್ತಾರೆ. ಕುರುಬರಿಗೂ ಲಿಂಗಾಯಿತರಿಗೂ ಸಂಬಂಧವಿರುವುದನ್ನು ಇವೆರಡರ ಸಾಂಸ್ಕೃತಿಕ ಲೋಕಗಳು ಸೂಚಿಸುತ್ತವೆ. ಕೊಂಡ ಪದವೇ ‘ಗೌಡ’ ಎಂದಾಯಿತು. ಅದು ಬಹುಶಃ ಹೀಗೆ :

ಕೊಂಡ>ಗೊಂಡ>ಗವುಂಡ>ಗಾಮುಂಡ>ಗೌಂಡ>ಗೌಡ. ಕುರುಗಳಲಿದ್ದವರೇ ಕುರುಬ, ಗೊಂಡ, ಕೊಂಡ ಜನಾಂಗ.

ಕುರುಬರಿಗೆ ಗೊರವರೆಂಬ ಇನ್ನೊಂದು ಹೆಸರಿದೆ ಎಂದು ಥರ್‌ಸ್ಟನ್ ತಿಳಿಸುವುದು ಸ್ವಾರಸ್ಯದ್ದು. ಕೊರವ ಪದ ಗೊರವ ಆಗಿರಬೇಕು. ಕುರುಬರ ಪ್ರಖ್ಯಾತ ದೈವವಾದ ಮೈಲಾರಲಿಂಗವನ್ನು ಹೊರೆಹೊರುವವರು ‘ಗೊರವರು’. ಹಾವೇರಿ ಹತ್ತಿರ ‘ಕುರುಬ ಗೊಂಡ’ ಎಂಬ ಊರಿದೆ. ಆಂಧ್ರದಲ್ಲಿ ಹೀಗೆ ಕೊಂಡಘಟಿತ ಗ್ರಾಮನಾಮಗಳು ಬಹಳ. ಮಧ್ಯಪ್ರದೇಶ, ಬಂಗಾಲ, ಒಡಿಸಾ, ಆಂಧ್ರದಕೊಂಡರು ತಮ್ಮನ್ನು ‘ಕುಯಿ’, ‘ಕೊಯ’ ಎಂದು ಕರೆದುಕೊಳ್ಳುತ್ತಾರೆ. (ಈ.ಥ.IIIಪು ೩೫೬) ಕೆಲವು ಕಡೆ ಇವರ ವಸತಿಗಳಿಗೆ ‘ಮಠ’ ಎಂದು ಕರೆಯುತ್ತಾರೆ. ಇವರಲ್ಲಿರುವ ‘ಮಾನವ ಬಲಿ’ ಯು ಆದಿಮ ದ್ರಾವಿಡ ಸಂಸ್ಕೃತಿ ಅಧ್ಯಯನದ ದೃಷ್ಟಿಯಿಂದ ತುಂಬ ಮಹತ್ವದ ಸಂಗತಿಯಾಗಿದೆ.